೧೯೬೮ರಲ್ಲಿ ನಾನು ಸಮಾಜವಾದಿ ಪಕ್ಷ ಸೇರಿದೆ. ಗೋಪಾಲಗೌಡರಲ್ಲಿದ್ದ ಮಾನವೀಯತೆ, ಬಡವರ ಬಗ್ಗೆ ಅವರಿಗಿದ್ದ ಕಳಕಳಿ ಇವೆಲ್ಲವೂ ನನ್ನನ್ನು ಅವರ ಬಳಿಗೆ ಸೆಳೆದುಕೊಂಡವು. ಅಂತಹ ಮಾನವೀಯ ಅಂತಃಕರಣವಿರುವ ರಾಜಕಾರಣಿಯನ್ನು ನಾನಂತೂ ಈ ಶತಮಾನದಲ್ಲೇ ಕಂಡಿಲ್ಲ.

ಒಂದು ಸಾರಿ ಆಡಳಿತ ಪಕ್ಷದ ಸದಸ್ಯರೊಬ್ಬರು ನನ್ನನ್ನು ಹೀನಾಯವಾಗಿ ನಿಂದಿಸಿದ್ದರು. ಗೋಪಾಲಗೌಡರಿಗೆ ಇದು ಹೇಗೋ ಗೊತ್ತಾಯಿತು. ಅಂದು ವಿಧಾನಸಭೆಯ ಕಲಾಪಗಳು ನಡೆಯುತ್ತಿತ್ತು. ವಿರೋಧಪಕ್ಷಗಳ ಸಾಲಿನಲ್ಲಿ ಕುಳಿತಿದ್ದ ಗೌಡರು ಎದ್ದು ಸಿಟ್ಟಿನಿಂದ ಆಡಳಿತ ಪಕ್ಷದವರ ಸಾಲಿನೆಡೆಗೆ ಬಿರುಸಾಗಿ ಬಂದರು; ನನ್ನನ್ನು ನಿಂದಿಸಿದ್ದ ಸಚಿವರ ಮುಂದೆ ಉಗ್ರರೂಪದಲ್ಲಿ ನಿಂತು, “….ನೀವೇನ’’ ಅಂತ ಕೇಳಿದರು. ಗೌಡರ ಕೋಪ ಗೊತ್ತಿದ್ದ ಆ ಸಚಿವರು ಹೆದರುತ್ತಾ ಹೌದೆಂದರು. ಕೂಡಲೇ ಗೌಡರು, “ಸೇಠ್ ಸಾಹೇಬರ ಜೊತೆ ಯಾರು ಇಲ್ಲ ಅಂತ ತಿಳಿದಿದ್ದೀರಾ! ಇನ್ನೊಂದು ಸಾರಿ ಸೇಠರ ವಿಚಾರ ಮಾತಾಡಿದರೆ ನಿಮ್ಮ ಎಲ್ಲ ಹಲ್ಲುಕಿತ್ತು ಕೊಟ್ಟೇನು! ಹುಷಾರ್’’ ಎಂದು ಹೇಳಿ ಮತ್ತೆ ವಿರೋಧಪಕ್ಷದ ಸಾಲಿಗೆ ಬಂದು ಕುಳಿತರು.

೧೯೭೮ರ ಸುಮಾರಿಗೆ ಆಗ ನಾನು ಸಂಯುಕ್ತ ಸೋಷಲಿಸ್ಟ್ ಪಕ್ಷದ ರಾಜ್ಯಘಟಕದ ಅಧ್ಯಕ್ಷನಾಗಿದ್ದೆ. ಆ ಸಮಯದಲ್ಲಿ ಚಿಕ್ಕಮಗಳೂರಿನಲ್ಲಿ ಕೋಮವಾರು ಘರ್ಷಣೆ ನಡೆಯಿತು. ಅನೇಕ ಸಾವು-ನೋವುಗಳಾದವು. ಆಗ ನಾನು ಗೋಪಾಲಗೌಡರನ್ನು ಚಿಕ್ಕಮಗಳೂರಿಗೂ, ಜಾರ್ಜ್‌ಫರ್ನಾಂಡಿಸರನ್ನು ಮಂಗಳೂರಿಗೆ ಕಳಿಸಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಕೊಡಲು ತಿಳಿಸಿದೆ. ಗೌಡರು ಕೂಡಲೆ ಚಿಕ್ಕಮಗಳೂರಿಗೆ ಸ್ನೇಹಿತರೊಡನೆ ಹೋದರು. ಅಲ್ಲಿನ ಪರಿಸ್ಥಿಯನ್ನು ಅಧ್ಯಯನ ಮಾಡಿ ನಿಷ್ಪಕ್ಷಪಾತವಾದ ವರದಿಯನ್ನು ನನಗೆ ಸಲ್ಲಿಸಿದರು; ಕೋಮುಶಕ್ತಿಗಳನ್ನು ತೀವ್ರವಾಗಿ ಖಂಡಿಸಿದರು. ಇದರಿಂದ ಅವರಿಗೆ ನೂರಾರು ಬೆದರಿಕೆಗಳು ಬಂದವು. ಆದರೆ, ಬೆದರಿಕೆಗಳಿಗೆ ಗೌಡರು ಜಗ್ಗಲಿಲ್ಲ. ಅಲ್ಲದೆ ಅವರ ಜಾತ್ಯಾತೀತವಾದ ಮನೋಭಾವ ಇನ್ನಷ್ಟು ಕಂಗೊಳಿಸಲು ಇದು ಪೂರಕವಾಯಿತು.

ಒಮ್ಮೆ ರಾಯಚೂರಿನಲ್ಲಿ ಪ್ರವಾಸಿ ಮಂದಿರದಲ್ಲಿ ತಂಗಿದ್ದೆವು. ಗೌಡರ ಬಟ್ಟೆಗಳು ಕೊಳೆಯಾಗಿರುವುದನ್ನು ನೋಡಿ, ಅವರ ಬಟ್ಟೆಗಳನ್ನು ದೋಬಿಗೆ ಕೊಟ್ಟು ಸಂಜೆ ತರಲು ಹೇಳಿದೆ. ಮಾರನೆಯ ದಿನ ಗೌಡರು ನನ್ನನ್ನು ಕುರಿತು, “ಸೇಟ್‌ಜಿ, ನಿಮ್ಮ ಸಂಗಡ ಇರುವಾಗ ಶುಭ್ರವಾದ ಬಟ್ಟೆಯಲ್ಲಿರಬೇಕೆಂಬುದನ್ನು ನಾನು ಬಲ್ಲೆ. ಬಸ್ಸು, ರೈಲಿನಲ್ಲಿ ಪ್ರಯಾಣಮಾಡುವುದರಿಂದ ನನ್ನ ಬಟ್ಟೆ ಕೊಳಕಾಗುತ್ತಿವೆ ಅಂತ ಕಾಣುತ್ತೆ. ಆದರೆ, ನನ್ನ ಬಟ್ಟೆಯನ್ನು ನಾನೇ ಒಗೆದು, ತಲೆದಿಂಬಿನ ಕೆಳಗೆ ಮಡಿಸಿಟ್ಟುಕೊಂಡರೆ ಇಸ್ತಿರ ಆಗುತ್ತೆ. ಇನ್ನು ಮೇಲೆ ದೋಬಿಗೆ ನನ್ನ ಬಟ್ಟೆಗಳನ್ನು ಕೊಡಬೇಡಿ’’ ಎಂದು. ನಾನು, “ಯಾಕೆ ಗೌಡರೆ, ದೋಬಿಗೆ ಕೊಟ್ಟರೆ ನಿಮಗೇನು ಕಷ್ಟ’’ ಎಂದೆ. ಗೌಡರು, “ನೀವು ಈ ಪ್ರಶ್ನೆ ಕೇಳಬಾರದಿತ್ತು, ಕೇಳಿದ್ದೀರಿ, ಹೇಳುತ್ತೇನೆ. ನನ್ನ ಹತ್ತಿರ ಇರುವುದು ನಾಲ್ಕು ಜೊತೆ ಬಟ್ಟೆ ಮಾತ್ರ. ಅದು ಖಾದಿಯ ಬಟ್ಟೆ, ದೋಬಿಗೆ ಕೊಟ್ಟರೆ ಅದು ಬೇಗ ಹರಿಯುತ್ತದೆ. ಅದಕ್ಕಾಗಿ ನಾನು ದೋಬಿಗೆ ಕೊಡುವುದಿಲ್ಲ’’ ಅಂದರು. ಇದನ್ನು ಕೇಳಿ ನಾನು ಸಮ್ಮನಾದೆ.

ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದೆವು. ಅನಂತರ ಸಮಯ ನೋಡಿ, ಅವರಿಗೆ ಗೊತ್ತಾಗದ ರೀತಿಯಲ್ಲಿ ಅವರ ಜುಬ್ಬವನ್ನು ತೆಗೆದುಕೊಂಡು, ನನಗೆ ಬಟ್ಟೆ ಹೊಲಿಯುತ್ತಿದ್ದ ಟೈಲರ್ ಹತ್ತಿರ ಅಳತೆಗೆ ಕೊಟ್ಟು ಆರು ಜುಬ್ಬ ಹೊಲಿಸಿದೆ. ಅವರ ಜೊತೆಯಲ್ಲಿ ಆರು ಪಂಚೆಯನ್ನು ಕೊಂಡು ಅವೆಲ್ಲವನ್ನೂ ಗೌಡರ ಕೊಠಡಿಯಲ್ಲಿಟ್ಟೆ. ಆ ಬಟ್ಟೆಗಳು ಬಹಳ ದಿವಸಗಳವರೆಗೊ ಕೊಠಡಿಯ ಮೂಲೆಯಲ್ಲಿಯೇ ಇತ್ತು. ನೋಡಿ ನೋಡಿ ಸಾಕಾಗಿ ಒಂದು ದಿನ ಈ ವಿಷಯವನ್ನು ಅವರಿಗೆ ಹೇಳಲೇಬೇಕೆಂದು ನಿರ್ಧರಿಸಿ, ಗೌಡರನ್ನು ಕುರಿತು ಬಟ್ಟೆ ತೋರಿಸಿ “ಗೌಡರೆ, ಈ ಬಟ್ಟೆ ಯಾಕೆ ಇಲ್ಲಿದೆ, ಉಪಯೋಗಿಸದೆ ಇದೆಯಲ್ಲ’’ ಎಂದೆ. “ಯಾರೋ ಇಟ್ಟಿರಬಹುದು, ಬಂದು ತೆಗೆದುಕೊಂಡು ಹೋಗುತ್ತಾರೆ’’ ಎಂದುರು. ನಾನು ವಿಧಿ ಇಲ್ಲದೆ “ಗೌಡರೆ, ಇಲ್ಲ, ಈ ಜುಬ್ಬ ನಿಮ್ಮದೇ, ಬೇಕಾದರೆ ಜುಬ್ಬದ ಅಳತೆ ನೋಡಿ’’ ಎಂದರೂ ಅವರು ಒಪ್ಪಲಿಲ್ಲ. ಅನಂತರ ನಾನು ನಡೆದ ಸಂಗತಿ ತಿಳಿಸಿ “ನಿಮಗಾಗಿ ನಾನೇ ಹೊಲಿಸಿದೆ, ನೀವು ಇವುಗಳನ್ನು ಉಪಯೋಗಿಸಿ’’ ಎಂದು ಎಷ್ಟು ಹೇಳಿದರೂ ಒಪ್ಪಲಿಲ್ಲ. ಕೊನೆಗೆ ನಾನು “ತಪ್ಪಾಗಿದ್ದರೆ ಕ್ಷಮಿಸಿ, ನಿಮ್ಮ ಸಹೋದರನೆಂದು ಪರಿಗಣಿಸಿ ಈ ಬಟ್ಟೆ ಉಪಯೋಗಿಸಲೇಬೇಕು. ಇಂದೇ ಧರಿಸಬೇಕು’’ ಎಂದು ಒತ್ತಾಯ ಮಾಡಿದೆ. “ನೀವು ಧರಿಸದಿದ್ದರೆ ಇನ್ನು ಮೇಲೆ ನಿಮ್ಮ ಜತೆ ಮಾತಾ ಆಡುವುದಿಲ್ಲ’’ ಎಂದು ಹಠ ಹಿಡಿದೆ. ಇಷ್ಟು ಬಲವಂತವಾದ ಮೇಲೆ ಗೌಡರು ಆ ಬಟ್ಟೆ ಉಪಯೋಗಿಸಲು ಒಪ್ಪಿದರು. ಇದು ಗೌಡರ ಸರಳತೆ, ಸ್ವಾಭಿಮಾನ.

ಗೌಡರಿಗೆ ಸ್ವಂತವಾದ ಕಷ್ಟಗಳೇನೇ ಇದ್ದರೂ ಸಹ ಅದನ್ನು ಪರಿಹರಿಸಲು ತಾವಾಗಿಯೇ ಮುಂದೆ ಇರುತ್ತಿದ್ದವರೆಂದರೆ ಶ್ರೀಗಳಾದ ಚಿಕ್ಕಮಗಳೂರು ಜಿಲ್ಲೆಯ ಉರುವಿನಕಾನ್ ಲಕ್ಷ್ಮಣ ಗೌಡರು ಮತ್ತು ಬಾಗೇಪಲ್ಲಿ ಬಿ.ವಿ. ನಾರಾಯಣರೆಡ್ಡಿಯವರು. ಗೌಡರನ್ನು ನೆನೆಸಿಕೊಂಡಾಗಲೆಲ್ಲ ಈ ಮಹನೀಯರನ್ನು ನೆನೆಸಿಕೊಳ್ಳದಿರಲು ಸಾಧ್ಯವೇ ಇಲ್ಲ. ತೀರ್ಥಹಳ್ಳಿಯಿಂದ ಒಮ್ಮೊಮ್ಮೆ ಅವರ ತಾಯಿ ಬರುತ್ತಿದ್ದರು. ಅವರು ಬಂದಾಗಲೆಲ್ಲ ಗೌಡರು ನನಗೆ ಫೋನ್ ಮಾಡಿ “ಸೇಠ್‌ಜಿ, ಈ ದಿವಸ ಎರಡು ಪ್ಯಾಕೆಟ್ ಒಳ್ಳೆ ಬಿರಿಯಾನಿ ತರಿಸಿ’’ ಎನ್ನುವರು. ಬಿರಿಯಾನಿ ತರಿಸಿ ಅವರಲ್ಲಿಗೆ ನಾನು ತೆಗೆದುಕೊಂಡು ಹೋದರೆ, “ಸೇಟ್‌ಜಿ, ಈ ಬಿರಿಯಾನಿ ನಮ್ಮ ತಾಯಿಗೆ, ಅವರಿಗೆ ಏನೋ ಚಪಲ, ನಾನಂತೂ ಶುದ್ಧ ಶಾಖಾಹಾರಿ, ನನಗೆ ಒಳ್ಳೆ ಬಿರಿಯಾನಿ ಎಲ್ಲಿ ಸಿಗುತ್ತೆ ಅನ್ನೋದು ಕೂಡ ಗೊತ್ತಿಲ್ಲ. ಈಗ ನಾವೆಲ್ಲ ಸಸ್ಯಾಹಾರ ಉಪಯೋಗಿಸುವವರು ಊಟ ಮಾಡುತ್ತೇವೆ. ನೀವು ನನ್ನ ತಾಯಿ ಜತೆ ಕುಳಿತು ಊಟ ಮಾಡಿ’’ ಎನ್ನುತ್ತಿದ್ದರು.

ಗೌಡರು ಒಂದು ರೀತಿಯಲ್ಲಿ ನಿಷ್ಠುರ ವ್ಯಕ್ತಿ. ಏನಾದರೂ, ಯಾರಿಗಾದರೂ ಹೇಳಬೇಕೆಂದರೆ ಅದನ್ನು ನೇರವಾಗಿ ಅವರ ಮುಖಕ್ಕೆ ಹೇಳುವ ಸ್ವಭಾವ ಅವರದು. ಒಮ್ಮೆ ಒಬ್ಬ ಯುವಕ ಎಂ.ಬಿ.ಬಿ.ಎಸ್‌ನಲ್ಲಿ ತೇರ್ಗಡೆಹೊಂದಿದ್ದವನು, ಗೌಡರನ್ನು ನೋಡುವುದಕ್ಕೆ ಬಂದು, ಆಗ ಸರಕಾರದವರು ವೈದ್ಯರುಗಳನ್ನು ನೇಮಕ ಮಾಡುತ್ತಿದ್ದಾರೆ ಎಂದೂ, ಆದರೆ ಆ ನೇಮಕ ತನ್ನಲ್ಲಿ ದುಡ್ಡಿಲ್ಲದಿರುವುದರಿಂದ ಸಿಗುತ್ತಿಲ್ಲವೆಂದೂ, ಗೌಡರೇ ಸಹಾಯ ಮಾಡಬೇಕೆಂದು ಕೇಳಿಕೊಂಡ. ಕೂಡಲೇ ಗೌಡರು ಕನಲಿ ಕೆಂಡವಾಗಿ, ಅಂದಿನ ಆರೋಗ್ಯ ಸಚಿವರ ಮನೆಗೆ ಆ ಯುವಕನೊಡನೆ ಹೋಗಿ ಸಚಿವರನ್ನು ಭೇಟಿ ಮಾಡಿ, ಸಚಿವರ ಮುಂದೆ ಇದ್ದ ಅಧಿಕಾರಿಗಳ ಮತ್ತಿತರರೆಲ್ಲರ ಸಮ್ಮುಖದಲ್ಲಿ “ಸಚಿವರೇ, ನಿಮ್ಮ ಅವಧಿಯಲ್ಲಿ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಎಂದು ಕೇಳಿದೆ ಹಾಗೂ ಹಣ ಪಡೆದು ಕೆಲಸ ಮಾಡ್ತಾ ಇದ್ದೀರಾ ಅಂತಲೂ ಕೇಳಿದೆ. ಒಳ್ಳೆಯದು. ನಿಮಗೆ ತೋಚಿದ ಹಾಗೆ ಮಾಡಿ. ಆದರೆ, ನಾನು ಒಬ್ಬ ಹುಡುಗನನ್ನು ಕರೆದುಕೊಂಡು ಬಂದಿದ್ದೇನೆ. ಅವನು ಬಡವ, ಅವನ ಹತ್ತಿರ ದುಡ್ಡಿಲ್ಲ. ಆದರೂ ಪರವಾಗಿಲ್ಲ. ಇವನಿಗೂ ಕೆಲಸ ಕೊಡಿ’’ ಅಂದರು. ಸಚಿವರಿಗೆ ಮಾತನಾಡಲಾಗಲಿಲ್ಲ. ಅರ್ಜಿ ಕೊಡಿಸಿ ಅಂದರು. ಗೌಡರು ಅರ್ಜಿ ಕೊಡಿಸಿದರು. ಆ ಯುವಕನಿಗೆ ಕೆಲಸ ಸಿಕ್ಕಿತು. ಇದು ಗೌಡರ ರೀತಿ ಮತ್ತು ನೀತಿ.

ಸ್ವಲ್ಪ ಕಾಲದ ನಂತರ ೧೯೭೧ರಲ್ಲಿ ನಾನೂ ಸಹ ಪಕ್ಷಕ್ಕೆ ರಾಜೀನಾಮೆ ಇತ್ತೆ. ಶ್ರೀ ಬಸವಣ್ಣನವರ ಪ್ರಸಂಗವನ್ನು ನೆನೆದು ಎಲ್ಲರೂ ಬಹು ಕುತೂಹಲದಿಂದ ಇದ್ದರು. ನನಗೂ ಗೌಡರಿಗೂ ಬಹಳ ಮಾರಾಮಾರಿ ಆಗಬಹುದೆಂದು ನಿರೀಕ್ಷಿಸಿದ್ದರು. ಏನೋ ಆಗುತ್ತದೆ ಎಂದು ಯೋಚಿಸಿದ್ದರು. ಆತಂಕ ವ್ಯಕ್ತಪಡಿಸಿದ್ದರು. ಆದರೆ, ನಮ್ಮಿಬ್ಬರ ಭೇಟಿ ಆಕಸ್ಮಿಕವಾಗಿ ಆದಾಗ ಗೌಡರು “ಸೇಟ್‌ಜಿ, ನಿಮ್ಮ ತಪ್ಪಿಲ್ಲ ಬಿಡಿ. ನಮ್ಮವರು ಪಕ್ಷದಲ್ಲಿ ನಿಮಗೆ ಬಹಳವಾಗಿ, ನಿಮ್ಮ ಮನಸ್ಸನ್ನು ನೋಯಿಸಿಬಿಟ್ಟಿದ್ದಾರೆ. ಆದ್ದರಿಂದ ನಿಮಗೆ ಪಕ್ಷ ಬಿಡುವ ಹಾಗಾಯ್ತು. ನಿಮ್ಮಿಂದ ಪಕ್ಷದ ಸಂಘಟನೆ ಆಗಿತ್ತು. ನೀವು ಬಿಟ್ಟ ಕಾರಣದಿಂದ ಪಕ್ಷಕ್ಕೆ ಬಹಳಷ್ಟು ನಷ್ಟ ಆಗಿದೆ.’’ ಎಂದರು.

ಅಂತಹ ರಾಜಕಾರಣಿ ಈ ನಾಡಿನಲ್ಲಿ ಇನ್ನು ಬರೋಲ್ಲ!