ಸ್ವಾತಂತ್ರ್ಯಾ ನಂತರದ ಕರ್ನಾಟಕದಲ್ಲಿ ಸಮಾಜವಾದದ ಮೂರ್ತಿವೆತ್ತ ರೂಪದಂತೆಯೇ ಕಂಗೊಳಿಸಿದ್ದ ಪಾರದರ್ಶಕ ರಾಜಕಾರಣಿ ಗೋಪಾಲಗೌಡ, ಈಗ ಕೇವಲ ನೆನಪಷ್ಟೇ.

ಮಲೆನಾಡಿನ ಗರ್ಭದ ತೀರ್ಥಹಳ್ಳಿ ಸಮೀಪದ ಆರಗ ಗ್ರಾಮದಲ್ಲಿನ ಹುಲ್ಲು ಜೋಪಡಿಯೊಂದರಲ್ಲಿ ಹುಟ್ಟಿದ ಮಗು, ಸ್ವಂತ ಪರಿಶ್ರಮ ಹಾಗೂ ಹೋರಾಟಗಳ ಪರಿಣಾಮವಾಗಿ ಸೋಷಲಿಸ್ಟ್ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದ್ದು (ಅದೇನೂ ಅಧಿಕಾರದ ಸ್ಥಾನವಲ್ಲ) ಅಸಾಮಾನ್ಯವಾದ ಮಹಾಯಾತ್ರೆಯೇ?

ಕರ್ನಾಟಕದಲ್ಲಿ ಸಮಾಜವಾದ ಗೋಪಾಲಗೌಡರ ಜತೆಯಲ್ಲೇ ಹುಟ್ಟಿತ್ತು ಎಂದೇನೂ ಅಲ್ಲ. ಅವರಿಗೂ ಮುಂಚೆ ಬೇಕಾದಷ್ಟು ಮಂದಿ ಸಮಾಜವಾದೀ ಚಿಂತಕರಿದ್ದರು. ಆದರೂ ಸಮಾಜವಾದ ಎಂದರೆ ಗೋಪಾಲಗೌಡರ ಹೆಸರೇ ನೆನಪಿಗೆ ಬರುವುದೇಕೆ?

ಅದಕ್ಕೆ ಕಾರಣ ಇಷ್ಟೇ:

ಕಾಲೇಜುಗಳಲ್ಲಿನ ಚರ್ಚಾಕೂಟಗಳಿಗೆ ವಸ್ತುವಾಗಿದ್ದ ಸಮಾಜವಾದೀ ಸಿದ್ಧಾಂತವನ್ನು ಪುಸ್ತಕಗಳ ಬಂಧನದಿಂದ ಬಿಡಿಸಿ, ನೆಲಕ್ಕೆ ತಂದ ಯುವಕರ ತಂಡದ ಪ್ರತಿನಿಧಿ ಗೋಪಾಲಗೌಡರು.

ಮೊದಲ ಮಹಾ ಚುನಾವಣೆಗೆ ಸ್ವಲ್ಪ ಮುಂಚೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡು ಸತ್ಯಾಗ್ರಹ (ಗೇಣಿ ಹಕ್ಕಿಗಾಗಿ ಹೋರಾಟ) ನಡಯದೇ ಹೋಗಿದ್ದರೆ, ಗೋಪಾಲಗೌಡರು ಅನಂತರ ಶಾಸಕರಾಗಿದ್ದರೂ ಅವರನ್ನು “ಸಮಾಜವಾದದ ಮೂರ್ತಿವೆತ್ತ ರೂಪು’’ ಎಂದು ಬಣ್ಣಿಸುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲವೇನೋ.

ಹಳೆಯ ಮೈಸೂರಿನ ಪ್ರದೇಶದಲ್ಲಿ, ಸಮಾಜವಾದೀ ಪಕ್ಷ ದೊಡ್ಡ ಗಂಟಲಿನ ಪಕ್ಷವಾಗಿದ್ದಾಗ ನಡೆದ ಕಾಗೋಡು ಸತ್ಯಾಗ್ರಹದ ನಾಯಕತ್ವವೇ ಗೋಪಾಲಗೌಡರ ಭವಿಷ್ಯ ರಾಜಕೀಯ ಸ್ವರೂಪವನ್ನು ರೂಪಿಸಿತ್ತು.

೧೯೫೨-೭೨ರ ದೀರ್ಘ ಕಾಲದ ಸರ್ವಜನಿಕ ಜೀವನದಲ್ಲಿ ಗೋಪಾಲಗೌಡರು ಬೇರೆ ಯಾವುದೇ ರಾಜ್ಯವ್ಯಾಪೀ ಅಥವಾ ರಾಷ್ಟ್ರವ್ಯಾಪ್ತಿಯ ಆಂದೋಲನದ ನಾಯಕತ್ವವನ್ನೂ ವಹಿಸಿರಲಿಲ್ಲ. ೧೯೫೨-೫೪ ಅವಧಿಯಲ್ಲಿ ಆಗಿನ ಸೋಷಲಿಸ್ಟ್ ಪಕ್ಷದ ಕಾರ್ಮಿಕ ಸಂಘಟನೆ ನಡೆಸಿದ ವಿದ್ಯುತ್ ನೌಕರರ ದೊಡ್ಡ ಹೋರಾಟದಲ್ಲೂ ಮುಂದೆ ಕಾಣಿಸಿಕೊಂಡಿದ್ದು ಗೋಪಾಲಗೌಡರಿಗಿಂತ ಹೆಚ್ಚಾಗಿ ದಿವಂಗತ ಕೆ.ಕಣ್ಣನ್ ಮತ್ತು ಇತರರು.

ವಿಧಾನ ಸಭೆಯಲ್ಲಿ ಅವಕಾಶ ಸಿಕ್ಕಾಗಲೆಲ್ಲ ಜನತಂತ್ರ ಸಮಾಜವಾದದ ಚಿಂತನೆಯನ್ನು ಆಯಾ ಸಮಯಕ್ಕೆ ಅರ್ಥಪೂರ್ಣ ಸ್ವರೂಪದಲ್ಲಿ ಪ್ರತಿಪಾದಿಸಿದ್ದರಿಂದಲೇ ಗೋಪಾಲಗೌಡರೇ ಸಮಾಜವಾದ ಹಾಗೂ ಸೋಷಲಿಸ್ಟ್ ಪಕ್ಷದ ಸಂಕೇತವಾಗಿದ್ದು ಐದು ವರ್ಷಗಳ ಕಾಲ ಅವರ ಅಂದಿನ ಮೈಸೂರು ವಿಧಾನಸಭೆಯ ಏಕೈಕ ಸೋಷಲಿಸ್ಟ್ ಸದಸ್ಯ.

ಬೆಂಗಳೂರಿನಲ್ಲಿ ವಿಧಾನಸೌಧದ ಮುಂದಿರುವ ವೃತ್ತಕ್ಕೆ ಗೋಪಾಲಗೌಡ ವೃತ್ತ ಎಂದೇ ಹೆಸರು. ಅಲ್ಲೇ ಕಬ್ಬನ್ ಪಾರ್ಕಿನ ಮೂಲೆಯಲ್ಲಿ ಅವರು ಕಾಲು ಶತಮಾನ (೧೯೫೨-೭೨) ಸಾವಿರಾರು ಕ್ರಾಂತಿಕಾರಿ ಭಾಷಣಗಳನ್ನು ಮಾಡಿದ್ದರು. ಸಭೆ, ಮೆರವಣಿಗೆ, ಪ್ರದರ್ಶನಗಳನ್ನು ನಡೆಸಿದ್ದರು.

ತೀರ್ಥಹಳ್ಳಿಯ ಬಳಿಯಲ್ಲೂ, ತೀರ್ಥಹಳ್ಳಿ – ಸಾಗರದ ಹಾದಿಯಲ್ಲಿ ಆರಗಕ್ಕೆ ತಿರುಗಬೇಕಾದ ವೃತ್ತದ ಹೆಸರೂ ಗೋಪಾಲಗೌಡ ವೃತ್ತ ಎಂದೇ. ಹಳೆಯ ಮೈಸೂರಿನ, ಅದರಲ್ಲೂ ಮಲೆನಾಡಿನ ಕೆಲವು ಕಡೆ ಅವರ ಹೆಸರನ್ನು ಹೊತ್ತ ಫಲಕಗಳು ಈಗಲೂ ಇರಬಹುದು.

ಇಂದಿನ ಯುವ ಜನಾಂಗದ ಪ್ರತಿನಿಧಿಗಳು, “ಯಾರು ಈ ಗೋಪಾಲಗೌಡ ವಿಧಾನಸೌಧದ ಮುಂದಿನ ವೃತ್ತಕ್ಕೆ ಅವರ ಹೆಸರನ್ನೇಕೆ ಇಟ್ಟಿದ್ದು?’’ ಎಂದು ಕೇಳಿದರೆ ಆಶ್ಚರ್ಯವೇನೂ ಇಲ್ಲ. ಗೋಪಾಲಗೌಡರ ನಿಧನದ ಅನಂತರ ಅವರ ಸಮಾಜವಾದೀ ಗೆಳೆಯರೆಲ್ಲ ಹಿಂದಿನ ಆದರ್ಶಗಳನ್ನು ಮರೆತಂತೆಯೇ ಆದರ್ಶ ಸಂಗಾತಿ ಗೆಳೆಯನನ್ನೂ ಮರೆತರು. ಸಂಗಾತಿಗಳೇ ಮರೆತ ಮೇಲೆ ಅನಂತರದ ಪೀಳಿಗೆಯ ಜನರಿಗೆ ಗೋಪಾಲಗೌಡರ ವ್ಯಕ್ತಿತ್ವವನ್ನು ಯಾರು ಪರಿಚಯಮಾಡಿಕೊಡಬೇಕು?

ಗೋಪಾಲಗೌಡ ಎಂದ ಕೂಡಲೇ ಈಗಲೂ ನೆನಪಿಗೆ ಬರುವುದು, ಅವರ ಎತ್ತರ ನಿಲುವಿನ ಗಂಭೀರ-ನಿಧಾನ ನಡೆಯ ವ್ಯಕ್ತಿತ್ವ, ಕೋಪ, ಠೀಕಾಗಿ ತೀಡಿದ ಕಚ್ಚೆ ಮತ್ತು ಪಾರದರ್ಶಕ ಪ್ರಾಮಾಣಿಕತೆ.

ಗೋಪಾಲಗೌಡರು ಕ್ರಾಂತಿಯ ಚಿಂತನೆಯಲ್ಲಿ ಕಳೆದಷ್ಟೇ ಸಮಯವನ್ನು ಅವರ ಕಚ್ಚೆಯನ್ನು ತೀಡಲು ಕಳೆಯುತ್ತಿದ್ದರೆನ್ನುವುದು ಆ ಕಾಲದ ಕ್ಲೀಷೆ. ಈಗ ಅವರಂತೆ ಕಚ್ಚೆ ಧೋತ್ರ ಉಡುವವರು ಕಾಣಲಿಕ್ಕೆ ಸಿಗುವುದೇ ಕಷ್ಟ. (ಗೋಪಾಲ್‌ರ ಒಡನಾಡಿ ಜೆ.ಹೆಚ್. ಪಟೇಲರ ತೀಡಿದ ಕಚ್ಚೆಯೂ ಅಷ್ಟೆ ಹೆಸರುವಾಸಿ).

೧೯೨೩ರ ಮಾರ್ಚ್ ೧೪ ರಂದು ಆರಗದಂತಹ ಒಂದು ಸಣ್ಣ ಹಳ್ಳಿಯಲ್ಲಿ ಬಡವರ ಮನೆಯಲ್ಲಿ ಹುಟ್ಟಿದ ಕೂಸು ಗೋಪಾಲಗೌಡ. ಆಗಿನ ಕಾಲದ ಲೋವರ್ ಸೆಕಂಡರಿ ಪರೀಕ್ಷೆಯನ್ನು ಮುಗಿಸಿದ್ದು ೧೯೪೧ರಲ್ಲಿ (ಆ ಪರೀಕ್ಷೆಯನ್ನು ಸಾಮಾನ್ಯ ಹುಡುಗರು ಹತ್ತು ಹನ್ನೊಂದು ವರ್ಷಗಳಿಗೆ ಮುಗಿಸುವ ಕಾಲ ಅದು) ಆ ಸಮಯದಲ್ಲೇ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯೂ ಕೇಳಿಬಂದಿತ್ತು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತ ಪಾತ್ರ.

೧೯೪೮ರಲ್ಲಿ ಸಮಾಜವಾದಿಗಳು ಕಾಂಗ್ರೆಸ್ಸನ್ನು ತ್ಯಜಿಸಿ ಬೇರೆ ಪಕ್ಷವನ್ನು ರಚಿಸಿಕೊಂಡಾಗ ಅದರಲ್ಲಿ ಗೋಪಾಲಗೌಡರೂ ಇದ್ದರು. ಹಳೆಯ ಮೈಸೂರು ಸಂಸ್ಥಾನದಲ್ಲಿ ಹಿಂದ್ ಕಿಸಾನ್ ಪಂಚಾಯತ್‌ನ ನೇತಾರ.

೧೯೫೧ ಕಾಗೋಡು ಸತ್ಯಾಗ್ರಹ. ಆಗಲೇ ರಾಜ್ಯದಲ್ಲಿ ಗೇಣಿದಾರರೇ (ಉಳುವವರೇ) ಭೂ ಒಡೆಯರಾಗಬೇಕೆನ್ನುವ ಭೂ ಸುಧಾರಣೆ ಚಳವಳಿಗೆ ಬೀಚಾಂಕುರವಾಗಿದ್ದು, ಗೋಪಾಲಗೌಡರು ಕಾಗೋಡು ಸತ್ಯಾಗ್ರಹದ ನಾಯಕರಾಗಿದ್ದು, ಅದರಲ್ಲಿ ಪಾಲುಗೊಳ್ಳಲು ಡಾ. ರಾಮ ಮನೋಹರ ಲೋಹಿಯಾ (ಅವರು ವಿದೇಶ ಪ್ರವಾಸಕ್ಕೆ ತೆರಳಲು ಎರಡೇ ದಿನಗಳಿವೆ ಎನ್ನುವಾಗ) ಬಂದಿದ್ದು ಅಖಿಲ ಭಾರತದ ಗಮನ ಸೆಳೆದಿತ್ತು.

ಮಾರನೆಯ ವರ್ಷದ ವಿಧಾನಸಭೆ ಮಹಾಚುನಾವಣೆಯಲ್ಲಿ ಸೋಷಲಿಷ್ಟ್ ಪಕ್ಷದ ಗೋಪಾಲಗೌಡರು ಸಾಗರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಶ್ರೀಮಂತ, ಸಂಭಾವಿತ, ಖ್ಯಾತನಾಮ ಕಾಂಗ್ರೆಸ್ಸಿಗ ಎ.ಆರ್. ಬದರೀನಾರಾಯಣ ಅಯ್ಯಂಗಾರ್ ಅವರನ್ನು ಸೋಲಿಸಿದಾಗ, ಅವರ ಹೆಸರು ಎಲ್ಲ ಕಡೆ ಕೇಳಿ ಬಂದಿತ್ತು.

ವಿಧಾನಸಭೆಯಲ್ಲಿ ಗೌಡರು ಅವರ ಸರಳವಾದ ಮಾತಿನ ಶೈಲಿ, ಗಂಭೀರ ಚಿಂತನೆಯಿಂದ ಗಮನ ಸೆಳೆದರು. ಕೋಲಾರದ ಚಿನ್ನದ ಗಣಿಗಳ ರಾಷ್ಟ್ರೀಕರಣದ ನಿರ್ಣಯನು ವಿಧಾನಸಭೆಯಲ್ಲಿ ಅವರೇ ಮಂಡಿಸಿದ್ದು.

ಅನಂತರ ೧೯೫೭ರಲ್ಲಿ ಗೋಪಾಲ್ ಸೋತರು. ೧೯೬೨, ೧೯೬೭ರಲ್ಲಿ ಗೆದ್ದರು. ಕರ್ನಾಟಕದಲ್ಲಿ ಲೋಹಿಯಾ ಸಿದ್ಧಾಂತದ ಪ್ರಮುಖ ವಕ್ತಾರರಾದರು. ವಿಧಾನ ಸಭೆಯಲ್ಲಿನ ಎಲ್ಲ ಕಾರ್ಯಕಲಾಪದಲ್ಲೂ ಅವರದ್ದೇ ಆದ ರೀತಿಯಲ್ಲಿ ವಿಶಿಷ್ಟವಾದ ಕಾಣಿಕೆ ನೀಡಿದ್ದರು.

ಏತನ್ಮಧ್ಯೇ ರೈತ ಕಾರ್ಮಿಕ ಹೋರಾಟಗಳಿಗೆಲ್ಲ ಒತ್ತಾಸೆ ನೀಡಿದರು; ಆ ವೇಳೆಗೆ ಗೋಪಾಲಗೌಡರ ರಾಜಕೀಯವೂ ಹಲವು ಮಜಲುಗಳನ್ನು ದಾಟಿತ್ತು. ಸೋಷಲಿಸ್ಟ್ ಪಾರ್ಟಿ ಹೋಗಿ ಪ್ರಜಾ ಸೋಷಲಿಸ್ಟ್ ಪಾರ್ಟಿ ಬಂತು, ಅದು ಒಡೆದು ಸಂಯುಕ್ತ ಸೋಷಲಿಸ್ಟ್ ಪಾರ್ಟಿ ಆಯಿತು. ೧೯೭೧ರಲ್ಲಿ ಇಂದಿರಾ ಗಾಂಧೀ ವಿರುದ್ಧ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಾರ್ಟಿ, ಜನಸಂಘ, ಸಂಯುಕ್ತ ಸೋಷಲಿಸ್ಟ್ ಪಾರ್ಟಿಗಳು ಮಹಾ ಮೈತ್ರಿಕೂಟ ರಚಿಸಿಕೊಂಡ ಸಮಯಕ್ಕೆ ಗೋಪಾಲ್ ಮೆತ್ತಗಾಗಿದ್ದರು. ಅನಂತರ ಹಾಗೂ ಹೀಗೂ ೧೯೭೨ರ ಜೂನ್ ೯ರವರ‍್ಗೆ ಜೀವ ಹಿಡಿದಿದ್ದರು.

ಗೋಪಾಲಗೌಡರು ವಿಧಾನಸಭೆಯ ವೇದಿಕೆಯಲ್ಲಿ ಅನೇಕ ಗಮನಾರ್ಹ ಭಾಷಣಗಳನ್ನು ಮಾಡಿದ್ದಾರೆ. ಆದರೂ ಅವರ ಹೆಸರು ಪ್ರಸ್ತಾಪವಾದಾಗಲೆಲ್ಲ ಸಾಮಾನ್ಯವಾಗಿ ಆಗಿನ ಕಾಲದ ಘಟನೆಗಳ ಪರಿಚಯವಿರುವವರು ಜ್ಞಾಪಿಸಿಕೊಳ್ಳುವುದು ಎರಡೇ ಪ್ರಕರಣಗಳನ್ನು:

ಮೊದಲನೆಯದು: ರಾಜ್ಯಪಾಲರ ಭಾಷಣವನ್ನು ಭಾಷಣದ ಪ್ರತಿಯನ್ನು ವಿಧಾನಸಭೆಯಲ್ಲಿ ನೆಲಕ್ಕೆ ಹಾಕಿ ಬೂಟುಗಾಲಿನಲ್ಲಿ ತುಳಿಯುವುದಾಗಿ ಹೇಳಿ, ಅದನ್ನು ತೋರಿಸಿದ್ದು,

ಅದೊಂದು ರಾಜಕೀಯ ಪ್ರತಿಭಟನೆ. ಆ ಕ್ರಿಯೆಗಾಗಿ ಗೋಪಾಲಗೌಡರನ್ನು ವಿಧಾನಸಭೆಯಿಂದ ಸಸ್ಪೆಂಡ್ ಮಾಡಲಾಗಿತ್ತು. ಅವರ ವರ್ತನೆಯನ್ನು ಸಮರ್ಥಿಸುವ ಒಂದು ಸುದೀರ್ಘ ಹೇಳಿಕೆಯನ್ನು ಸಂಯುಕ್ತ ಸೋಷಲಿಸ್ಟ್ ಪಕ್ಷದ ನಾಯಕರೇ ತಯಾರಿಸಿದ್ದರು.

ಕೋಪ, ಸಿಟ್ಟು ಪ್ರತಿಭಟನೆಯಾವ ಸ್ವರೂಪದಲ್ಲಿ ವ್ಯಕ್ತವಾಗಬೇಕು ಎನ್ನುವ ನಿಯಮವೇ ಇಲ್ಲದಿರುವಾಗ ರಾಜ್ಯಪಾಲರ ಭಾಷಣದ ಪ್ರತಿಯನ್ನು ತುಳಿಯುವುದೂ ಒಂದು ರಾಜಕೀಯ ಪ್ರತಿಭಟನೆಯ ಸಂಕೇತ ಎನ್ನುವುದೇ ಪಾರ್ಟಿಯ ನಿಲುವು.

ಇನ್ನೊಮ್ಮೆ: ಗೋಪಾಲಗೌಡರು ಸಿಟ್ಟಿನಿಂದ ಅವರ ಮುಂದಿದ್ದ ಮೈಕನ್ನು ಮುರಿದರು. ಒಬ್ಬ ಶೀಘ್ರಲಿಪಿಕಾರನ ಮೇಲೆ ಎರಗಿ, ಅವರ ಷರಟನ್ನೂ ಹರಿದರು.

ಈ ಪ್ರಕರಣದಲ್ಲಿ ರಾಜಕೀಯ ಪ್ರತಿಭಟನೆಯ ಅಂಶ ಬರಲಿಲ್ಲ. ಅದು ಕೋಪ ಹಾಗೂ ರಕ್ತದ ಒತ್ತಡದ ಪರಿಣಾಮವಾಗಿ ಘಟಿಸಿದ್ದು.

ಅದಕ್ಕಾಗಿ ಗೋಪಾಲಗೌಡರು ವಿಧಾನಸಭೆಯಲ್ಲೇ ಕ್ಷಮೆ ಕೇಳಿದರು. ಆಗ ಅವರು ಹೇಳಿದ್ದು, ನಾನು ಹೃದಯಪೂರ್ವಕವಾಗಿ, ಅಂತರಾತ್ಮ ಪ್ರೇರಣೆಯಿಂದ ಕ್ಷಮೆ ಕೇಳುತ್ತಿದ್ದೇನೆ. ನೀವು (ಸಭಾಧ್ಯಕ್ಷ ವೈಕುಂಠ ಬಾಳಿಗಾ) ಕೊಡಬಹುದಾದ ಶಿಕ್ಷೆಗೆ ಹೆದರಿ ಕ್ಷಮೆ ಕೇಳುತ್ತಿಲ್ಲ. ಶಿಕ್ಷೆ ಅನುಭವಿಸಲು ಸಿದ್ಧ. ಆ ಘಟನೆ ಅಲ್ಲಿಗೇ ನಿಂತಿತು. ಶೀಘ್ರಲಿಪಿಗಾರನಿಗೆ ಹೊಸ ಷರ್ಟೊಂದು ಸಿಕ್ಕಿತು.

ದೀರ್ಘಕಾಲ ಮದುವೆಯ ಯೋಚನೆಯನ್ನೇ ಮಾಡದಿದ್ದ ಗೋಪಾಲಗೌಡರು ನಲವತ್ತೊಂದನೇ ವರ್ಷದಲ್ಲಿ ಸೋನಕ್ಕ ಅವರನ್ನು ವಿವಾಹವಾದರು. ವಿವಾಹ ತುಂಬ ಸರಳವಾಗಿ ನೆಡದರೂ ಅನಂತರ ಶಾಸಕರೇ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲೇ ಒಂದು ದೊಡ್ಡ ಸತ್ಕಾರ ಸಮಾರಂಭವನ್ನೆ ನಡೆಸಿದರು. ಗೋಪಾಲಗೌಡರು ಆ ಸಮಾರಂಭದಲ್ಲಿ ಪಾಲುಗೊಂಡಿದ್ದರೂ, ಮುಂದೆ ಅನೇಕ ದಿನಗಳ ನಂತರ ಸರ್ಕಾರಿ ಕಾರ‍್ಯಾಲಯದ ಸಭಾಂಗಣದಲ್ಲಿ ಇಂತಹ ವೈಯಕ್ತಿಕ ಸಂಬಂಧ ಉತ್ಸವ ನಡೆದಿದ್ದು ಸರಿಯೇ ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು.

ಗೋಪಾಲರ ಗೆಳೆಯರೊಬ್ಬರು ಅವರನ್ನು “ಕಿಸೆಯಲ್ಲಿ ಕಾಸಿಲ್ಲದ, ಎದೆ ತುಂಬಾ ಶ್ರೀಮಂತಿಕೆಯನ್ನು ತುಂಬಿಕೊಂಡ ಧೀಮಂತ’’ ಎಂದು ಬಣ್ಣಸಿದ್ದಾರೆ. ಆ ಮಾತು ನಿಜ.

ಈಗಿನ ಚಿಕ್ಕಲಾಲ್‌ಬಾಗ್‌ನ ಒಂದು ಮೂಲೆಯ ಎದುರಿನ ಮಹಡಿ ಮೇಲಿದ್ದ ಸೋಷಲಿಸ್ಟ್ ಪಾರ್ಟಿ ಕಾರ‍್ಯಾಲಯದಲ್ಲಿ ಕೂಡಲಿಕ್ಕೂ ಒಂದು ಸರಿಯಾದ ಕುರ್ಚಿ ಇರಲಿಲ್ಲ. (ಮಲಗುವ ಮಾತು ಹಾಗಿರಲಿ), ಆಗ ಜೇಬಿನಲ್ಲಿ ಕಾಸಿಲ್ಲದೇ ಬ್ರೆಡ್ ತಿಂದು, ನೀರು ಕುಡಿದು ಮಲಗಿದ ರಾತ್ರಿಗಳೂ ಉಂಟು.

ಟಿಕೆಟ್ಟಿಗೆ ಕಾಸಿಲ್ಲದೇ ರೈಲ್ವೇ ಸ್ಟೇಷನ್‌ಗೆ ಹೋದ ಪ್ರಕರಣಗಳನ್ನೂ ಶಿವಮೊಗ್ಗದ ಸಂಗಾತಿಗಳು ವಿವರಿಸುತ್ತಾರೆ.

ಗೋಪಾಲಗೌಡರ ರಾಜಕೀಯ ಜೀವನದ ಕೊನೆಯ ದಿನಗಳಲ್ಲಿ (೧೯೭೧) ಕರ್ನಾಟಕದಲ್ಲಿ ವೀರೇಂದ್ರ ಪಾಟೀಲರ ಸರ್ಕಾರ ಪತನವಾದ ಅನಂತರ ಕಾಂಗ್ರೆಸ್ (ಇಂದಿರಾ) ವಿರೋಧೀ ಶಾಸಕರಲ್ಲಿ ಕೆಲವರು ಸರ್ಕಾರ ರಚಿಸಲು ನಡೆಸಿದ ಪ್ರಯತ್ನವನ್ನು ಪ್ರಸ್ತಾಪಿಸಲೇಬೇಕು. ರಕ್ತದ ಒತ್ತಡ ಹೆಚ್ಚಾಗಿದ್ದ ಗೋಪಾಲಗೌಡರು ಆ ದಿನಗಳಲ್ಲಿ ವಾಕಿಂಗಿ ಸ್ಟಿಕ್ ಹಿಡಿದಾಗ, ಅವರ ಸುತ್ತ ಮುತ್ತ ಶಾಸಕರ ಭವನದಲ್ಲಿ ಸುಳಿದಾಡುವುದೇ, ಅಪಾರ ಎನ್ನುವ ಸ್ಥಿತಿ ಇತ್ತು.

ಆ ಸರ್ಕಾರದ ರಚನೆ ಆಗಲಿಲ್ಲ. ಮುಂದೆ ಗೋಪಾಲಗೌಡರು ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರಕ್ಕೆ ಬರಲೇ ಇಲ್ಲ. ಅವರು ಕೊಟ್ಟ ಮಫ್ಲರ್ ಪ್ರದರ್ಶಿಸಿ ಕೋಣಂದೂರು ಲಿಂಗಪ್ಪ ೧೯೭೨ರ ಚುನಾವಣೆಯಲ್ಲಿ ಗೆದ್ದರು.

ನಿಜ. ಗೋಪಾಲಗೌಡರು ಗೋವಾ ವಿಮೋಚನಾ ಚಳವಳಿಯನ್ನು ಸಂಘಟಿಸಿದ್ದು, ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಕಾಳಿಂಗರಾವ್ ಕಿಡಿ ಶೇಷಪ್ಪ ಅವರ ಜತೆ ಮಾತುಕತೆ ನಡೆಸಿದ್ದು, ಕುಮಾರವ್ಯಾಸ ಭಾರತದ ಸಾಲುಗಳನ್ನು ಗುಣುಗುಣುಸಿದ್ದೆಲ್ಲಾ ಇಲ್ಲಿ ದೀರ್ಘವಾಗಿ ಪ್ರಸ್ತಾಪವಾಗಿಲ್ಲ. ಅವೆಲ್ಲವನ್ನು ಒಂದು ಮಹಾಪ್ರಗಾಥಕ್ಕೇ ಮೀಸಲಾಗಿಡಬೇಕು.

ಪ್ರಖ್ಯಾತ ಸಮಾಜವಾದಿ ಚಿಂತಕ, ಹೋರಾಟಗಾರ ಮಧುಲಿಮಯೆ ಒಮ್ಮೆ ಗೋಪಾಲಗೌಡರನ್ನು ಲೋಕಪ್ರಿಯ ಧುರೀಣಎಂದಿದ್ದರು. ಗೌಡರು ನಿಧನವಾಗಿ ೨೫ ವರ್ಷಗಳೇ ಕಳೆದರೂ ಮಾತು ನಿಜ ಎನಿಸುತ್ತಿದೆ.