ಗೆಳೆಯ ಗೋಪಾಲ್ ಇನ್ನಿಲ್ಲ; ನಂಬುವುದು ಕಷ್ಟ, ನಂಬದೆ ವಿಧಿಯಿಲ್ಲ. ವಿಧಿ ಅವನನ್ನು ನಿನ್ನೆ ಸೆಳೆದೊಯ್ದಿತು. ಸಾವಿನೊಡನೆ ಆತ ಹೂಡಿದ ಸೆಣಸು ಅವನ ಬದುಕಿನಂತೆಯೇ ನಿಖರ; ಅಷ್ಟೇ ಬಿಗಿಪಟ್ಟಿನದು.

ಗೆಳೆಯ ಗೋಪಾಲನನ್ನು ಬಣ್ಣಿಲು ಬಗೆ ಬಗೆಯ ಶಬ್ದಗಳಿವೆ. ಎಲ್ಲಕ್ಕಿಂತ ಮಿಗಿಲಾದುದು ಆತನ ಕೆಚ್ಚು, ಸಮಾಜಕ್ರಾಂತಿಯ ತಳಮಳವೇ ಮೈವೆತ್ತ ಚೇತನ. ಆಗಸ್ಟ್ ೪೨ರ ಚಲೇಜಾವ್ ಚಳವಳಿ. ಭಾರತದ ರಾಜಕೀಯ ರಂಗಕ್ಕೆ ಎಸೆದ ದಿಟ್ಟ ವ್ಯಕ್ತಿಗಳಲ್ಲಿ ಶಾಂತವೇರಿ ಗೋಪಾಲಗೌಡ ಇದೂ ಒಂದು ಮುಖ್ಯ ಹೆಸರು. ಕರ್ನಾಟಕದ ಮಟ್ಟಿಗಂತೂ ಕಳೆದ ಮೂರು ದಶಕಗಳಲ್ಲಿ ಜನಜನಿತವಾದ ಹೆಸರು.

ಸಮಾಜವಾದಕ್ಕೆ ಗೋಪಾಲ್ ಒಲಿದು ಬಂದುದು ಅಚ್ಚರಿಯೇನಲ್ಲ. ಹಳ್ಳಿ ಹಳ್ಳಿ ತಿರುಗುವ ಅಂಚೆಪೇದೆಯಾಗಿದ್ದ ಕೊಲ್ಲೂರಯ್ಯನವರ ಮಗನಾಗಿ ಹುಟ್ಟಿದ ಈತ ಕ್ರಾಂತಿ ಗರ್ಭದಿಂದಲೇ ಮೂಡಿಬಂದ ಸಿಡಿಲಮರಿ. ಮಲೆ ನಾಡಿನ ರಮ್ಯಸ್ಥಳವಾದ ತೀರ್ಥಹಳ್ಳಿಯ ಆರಗವೇ ಊರು. ಕಲಿತದ್ದು ತೀರ್ಥಹಳ್ಳಿ, ಶಿವಮೊಗ್ಗೆಗಳಲ್ಲಿ. ಇಂಟರ್ ಕಲಿಯುತ್ತಿದ್ದಾಗಲೇ ಸ್ವಾತಂತ್ರ್ಯ ಸಂಗ್ರಾಮ ಕೈ ಬೀಸಿ ಕರೆಯಿತು. ಇಟ್ಟ ಹೆಜ್ಜೆ ಹಿಂದೆ ಎಂದೂ ಸರಿಯಲೇ ಇಲ್ಲ. ಸೆರೆಮನೆಯೇ ದೀಕ್ಷಾಸ್ಥಳ. ಓದಿದ ಕ್ರಾಂತಿ ಸಾಹಿತ್ಯ – ಮಾರ್ಕ್ಸ್, ಗಾಂಧಿ, ನೆಹರೂ, ಜಯಪ್ರಕಾಶ್ ತನಕ ಅಚ್ಚೊತ್ತಿತ್ತು. ಸ್ವತಂತ್ರ ವಿಚಾರಶಕ್ತಿ ತೋರಿತು. ಜನತಾಂತ್ರಿಕ ಸಮಾಜವಾದವೇ ದಿವ್ಯ ಲಕ್ಷ್ಯವಾಯಿತು.

ಮೊದಲು ಹುಟ್ಟಿದ್ದು ವಿದ್ಯಾರ್ಥಿ ಕಾಂಗ್ರೆಸ್, ಅದರ ಬಹುಪಾಲು ಪರಿವರ್ತಿತವಾಯಿತು. ಕರ್ನಾಟಕದ ಸೋಷಲಿಸ್ಟ್ ಪಕ್ಷವಾಗಿ, ಎರಡರ ಮುಂಚೂಣಿಯಲ್ಲೂ ಇದ್ದವರು ಗೋಪಾಲ್, ಕನ್ನಡನಾಡಿನಲ್ಲಿ ಸಮಾಜವಾದೀ ಚಳವಳಿಯ ಆದ್ಯಪ್ರವರ್ತಕರಲ್ಲಿ ಒಬ್ಬರು. ಅನಂತರ ಅಗ್ರಗಣ್ಯ ಸಮಾಜವಾದಿ.

೧೯೪೫ರ ಅನಂತರದ ಸಮಯದಲ್ಲಿ ಸಮಾಜವಾದೀ ಪ್ರವೃತ್ತಿಯ ತರುಣರೆಲ್ಲ ಅಂತಿಮ ಸ್ವಾತಂತ್ರ್ಯಸಮರವೊಂದಕ್ಕಾಗಿ ಅಣಿಯಾಗುತ್ತಿದ್ದ ಕಾಲ. ಆಗ ಇನ್ನೂ ಜಯಪ್ರಕಾಶ್ ಲೋಹಿಯಾ ಸೆರೆಮನೆಯಲ್ಲೇ ಇದ್ದರು. ಅದಾದ ಒಂದು ವರ್ಷದ ಬಳಿಕ ಕಾನ್‌ಪುರದಲ್ಲಿ ಕಾಂಗ್ರೆಸ್ ಸಮಾಜವಾದೀ ಪಕ್ಷದ ಅಧಿವೇಶನ ನರೆಯಿತ್ತು. ಆ ವೇಳೆಗೆ ಬಹುಮಂದಿ ಸಮಾಜವಾದೀ ಧುರೀಣರೂ ಬಿಡುಗಡೆ ಹೊಂದಿದ್ದರು. ದೇಶಾದ್ಯಂತ ಸಮಾಜವಾದೀ ಆಂದೋಲನದ ಪ್ರಬಲವಾದ ಸಂಘಟನೆಗೆ ನಾಂದಿಯಾಯಿತು. ಕರ್ನಾಟಕದಲ್ಲಿ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರ ನೇತೃತ್ವದಲ್ಲಿ ಹಲವು ತರುಣರು ಒಂದೆಡೆ ಸೇರಿದೆವು. ಸೆರಮನೆಯಿಂದ ಅದೇ ತಾನೇ ಬಿಡುಗಡೆ ಹೊಂದಿದ್ದ ಆಗಸ್ಟ್ ಕ್ರಾಂತಿಯ ಅಗ್ರದೂತ ಜಯಪ್ರಕಾಶ ನಾರಾಯಣರ ಕರ್ನಾಟಕ ಪ್ರ್ರವಾಸವನ್ನು ಸಂಘಟಿಸಿದೆವು. ಆಗ ಗೋಪಾಲ ಗೌಡರು ಶಿವಮೊಗ್ಗೆಯಲ್ಲಿ ವಿದ್ಯಾರ್ಥಿ ಕಾಂಗ್ರೆಸ್‌ನ ಮುಂದಾಳುಗಳಲ್ಲಿ ಒಬ್ಬರು. ಅವರನ್ನು ಸಮಾಜವಾದೀ ಆಂದೋಲನ ತನ್ನ ಕಕ್ಷೆಗೆ ಸೇರಿಸಿಕೊಂಡಿತು.

೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯೋದಯ. ೧೯೪೮ರ ಜನವರಿ ೩೦ರಂದು ಗಾಂಧೀಜಿಯ ಕೊಲೆ. ಅದೇ ಮಾರ್ಚಿ ತಿಂಗಳಲ್ಲಿ ನಾಸಿಕದಲ್ಲಿ ಸಮಾಜವಾದಿ ಪಕ್ಷದ ಅಧಿವೇಶನ. ಕಾಂಗ್ರೆಸ್ಸನ್ನು ತೊರೆಯುವ ಐತಿಹಾಸಿಕ ನಿರ್ಧಾರ. ಏಪ್ರಿಲ್ ೧೫ ರಂದು ಸಾಮೂಹಿಕ ರಾಜೀನಾಮೆ. ಅಂದಿನಿಂದ ಕಡೆಯುಸಿರು ಎಳೆಯುವವರೆಗೆ ಗೋಪಾಲಗೌಡರು ಕಾಂಗ್ರೆಸ್ಸಿನ ವಿರುದ್ಧ ಸೋಲದ ಹೋರಾಟವನ್ನೇ ಹೂಡಿದರು; ಅದರಲ್ಲಿ ಹುಡಿಗೂಡಿದರೇ ಹೊರತಾಗಿ ಬಸವಳಿಯಲಿಲ್ಲ.

ಕರ್ನಾಟಕದ ಸಮಾಜವಾದೀ ಆಂದೋಲನ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯುವ ಒಂದು ಹೆಸರು ಕಾಗೋಡು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಮಲೆನಾಡಿನ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರೂ, ಅನೇಕ ಸಲ ಲೋಕಸಭೆ ಸದಸ್ಯರಾದವರೂ ಆಗಿದ್ದ ಶ್ರೀ ಕೆ.ಜಿ. ಒಡೆಯರರ ಊರು. ಅವರೇ ಆ ಊರಿನ ಒಡೆಯರು. ೧೯೫೧ರಲ್ಲಿ ಅಲ್ಲಿ ನಡೆಯಿತು ರೈತರ ಅನುಪಮ ಸತ್ಯಾಗ್ರಹ. ಡಾ. ರಾಮಮನೋಹರ ಲೋಹಿಯಾ ಅವರೂ ಸಹ ಅದರಲ್ಲಿ ಭಾಗವಹಿಸಿ ಬಂಧಿತರಾದವರು. ಉಳುಮೆ ಹಕ್ಕಿಗಾಗಿ ನಡೆದ ಈ ಹೋರಾಟದ ಸಂಘಟಕರಲ್ಲಿ ಮುಖ್ಯವಾದವರಲ್ಲಿ ಗೋಪಾಲಗೌಡರೂ ಒಬ್ಬರು. ಕೆಲ ತಿಂಗಳ ಕಾಲ ನಡೆದ ಈ ಹೋರಾಟ ಅವರ ಜೀವನದಲ್ಲಿ ಒಂದು ಮೈಲಿಗಲ್ಲು; ಅವರ ಬದುಕನ್ನೇ ತಿರುವಿದ ಒಂದು ಸಂದರ್ಭ.

ಕಾಗೋಡು ಸತ್ಯಾಗ್ರಹದ ಬೆನ್ನ ಹಿಂದೆಯೇ ಬಂತು ಪ್ರಥಮ ಸಾರ್ವತ್ರಿಕ ಚುನಾವಣೆ ೧೯೫೨ರಲ್ಲಿ. ಆಗ ಮೈಸೂರು ಇನ್ನೂ ಸಣ್ಣ ಬಿ. ರಾಜ್ಯ. ವಿಧಾನಸಭೆಯಲ್ಲಿ ೯೯ ಸ್ಥಾನ. ಸಮಾಜವಾದೀ ಪಕ್ಷ ೫೦ ಸ್ಥಾನಗಳಿಗೆ ಪೈಪೋಟಿ ಹೂಡಿತು. ಗೆದ್ದವರು ಇಬ್ಬರೇ ಇಬ್ಬರು. ಅವರಲ್ಲಿ ಸಾಗರ ಕ್ಷೇತ್ರದಿಂದ ಗೆದ್ದು ಬಂದವರು ಗೋಪಾಲಗೌಡರು. ಅವರ ಇದಿರಾಳಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಈಗಿನ ಶಿಕ್ಷಣ ಸಚಿವ ಶ್ರೀ ಎ.ಆರ್. ಬದರೀನಾರಾಯಣ್. ಮತ್ತೆ ೧೯೫೭ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಬದರಿಯವರ ಕೈಯಲ್ಲಿ ಸೋಲನ್ನು ಸವಿದರು. ಆದರೆ ೧೯೬೨, ೧೯೬೭ರಲ್ಲಿ ತೀರ್ಥಹಳ್ಳಿ ಕ್ಷೇತ್ರ ಅವರ ಭದ್ರಕೋಟೆ ಆಯಿತು. ೧೯೭೨ರಲ್ಲೂ ಸೋಷಲಿಸ್ಟ್ ಅಭ್ಯರ್ಥಿಯನ್ನೇ ಆರಿಸಿತು. ಗೋಪಾಲ್ ಮೊದಲಸಲ ವಿಧಾನಸಭೆಗೆ ಆರಿಸಿ ಬರದಿದ್ದರೆ ಕನ್ನಡನಾಡಿನ ರಾಜಕಾರಣ ಅದರಲ್ಲೂ ವಿಧಾನಸಭೆ ಅಷ್ಟರಮಟ್ಟಿಗೆ ಬಡವ ಆಗುತ್ತಿತ್ತು. ಪ್ರಶ್ನೆ ಕೇಳಲಿ, ಭಾಷಣ ಮಾಡಲಿ, ಪ್ರಕರಣಕ್ಕೆಕಾರಣವಾಗಲಿ ಗೋಪಾಲಗೌಡರು ಗೋಪಾಲಗೌಡರೇ ಸರಿ ಎಂಬುದು ಅರ್ಹ ಪ್ರತೀತಿ.

ಮಾತುಗಾರಿಕೆಯಲ್ಲಿ ತನ್ನದೇ ಆದ ಧೀರ ಗಂಭೀರ ರೀತಿ. ಚೊಕ್ಕವಾದ ಭಾಷೆ, ತಿಳಾಯದ ಹಾಸ್ಯ. ಚುಚ್ಚುವ ವ್ಯಂಗ್ಯ. ದಿಟ್ಟ ಪ್ರತಿಪಾದನೆ. ದಾಕ್ಷಿಣ್ಯವಿಲ್ಲ. ಸಂಕೋಚವೂ ಇಲ್ಲ. ಹೇಳುವುದನ್ನು ಹೇಳಿಯೇ ತೀರಬೇಕು ಎಂಬ ಹಟ. ಇಂಥ ವಾಚಾಳಿ ಅಪರೂಪ.

ಭಾರತದ ಸಮಾಜವಾದೀ ಆಂದೋಲನದ ಕಥೆ ಒಕ್ಕೂಟ-ಒಡಕುಗಳ ನೀಳ್ಗತೆ. ಆ ದಾರಿಯಲ್ಲಿ ಗೋಪಾಲ್ ಎಂದೂ ಆರಿಸಿಕೊಂಡದ್ದು ಉಗ್ರ ಪಂಥವನ್ನು. ಅಂತೆಯೇ ಲೋಹಿಯಾ ಅನುಯಾಯಿಗಳಲ್ಲಿ ಬೆನ್ನು ಬಾಗದೆ ಕೊನೆತನಕ ನಿಂತರು. ಏಳಲಿ ಬೀಳಲಿ ತದೇಕ ನಿಷ್ಠೆ ಅವರ ಹೋರಾಟದ ಬದುಕಿನ ಹೆಗ್ಗುರುತು. ಉಪವಾಸವಿದ್ದರೂ ಹಾದಿ ಬಿಟ್ಟು ಅತ್ತಿತ್ತ ಸರಿಯಲಿಲ್ಲ.ಆ ಛಲ ಇಂದಿನ ರಾಜಕಾರಣದಲ್ಲಿ ಬಹಳ ವಿರಳವಾದ ಲಕ್ಷಣ.

ರಾಮಮನೋಹರ ಲೋಹಿಯಾ ಅವರಿಗೂ ಗೆಳೆಯ ಗೋಪಾಲ್ ಅವರಿಗೂ ಇದ್ದ ಆತ್ಮೀಯ ಬಾಂಧವ್ಯವನ್ನು ಹತ್ತಿರದಿಂದ ಬಲ್ಲವರು ಕೆಲವೇ ಮಂದಿ. ಲೋಹಿಯಾ ನಿಧನ ಹೊಂದುವ ಮೂರು ವಾರ ಮುನ್ನ ಈ ಲೇಖಕ ದೆಹಲಿಯಲ್ಲಿ ಅವರೊಡನೆ ಒಂದು ಇಡೀ ದಿವಸ ಕಳೆದಾಗ ಪದೇ ಪದೇ ಗೋಪಾಲಗೌಡರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಕಡೆಗೆ ನಾನು ಅವರನ್ನು ಬೀಳ್ಕೊಡುವಾಗ ನನಗೆ ಅವರು ಕೊಟ್ಟ ಆದೇಶ; ಗೋಪಾಲನನ್ನು ಸರಿಪಡಿಸಿ ‘ಗೋಪಾಲ್ ಕೇ ಠೀಕ್ ಕರೋ’. ಈ ಮಾತು ಗೋಪಾಲಗೌಡರ ದೈಹಿಕ, ಮಾನಸಿಕ ಸ್ಥಿತಿಗತಿಗಳೆರಡಕ್ಕೂ ಅನ್ವಯಿಸುವಂಥಾಗಿತ್ತು. ಅನಾವಶ್ಯಕ ಉದ್ವೇಗದಿಂದ ಅವರನ್ನು ರಕ್ಷಿಸಬೇಕೆಂಬ ಕಾತರ ಅದರಲ್ಲಿ ಪಡಿಮೂಡಿತ್ತು.

ಸಾಮಾನ್ಯವಾಗಿ ರಾಜಕಾರಣಿಗಳಲ್ಲಿ ಕಾಣದ ಕೆಲ ಲಕ್ಷಣಗಳು ಗೌಡರಲ್ಲಿ ಇತ್ತು. ನಯ, ವಿನಯ, ಸತ್ಕಾರ ಪ್ರವೃತ್ತಿ ಮಲೆನಾಡಿನವರಿಗೆ ಹೇಳಿಕೊಡಬೇಕೆ? ತನ್ನ ಕಿಸೆಯಲ್ಲಿ ಒಂದೇ ರೂಪಾಯಿ ಇದ್ದರೂ ಇತರರಿಗಾಗಿ ಅದನ್ನೂ ವೆಚ್ಚ ಮಾಡಲು ಎಂದೂ ಹಿಂಜರಿಯಲಿಲ್ಲ. ಅಂತೆಯೇ ಜೀವನದ ಸೊಗಸೆಲ್ಲಕ್ಕೂ ಅವರಲ್ಲಿ ಸ್ವಾಗತವಿತ್ತು. ಅದಕ್ಕೆ ಬೇಕಾದ ಅಭಿರುಚಿಯಿತ್ತು. ಸಂಗೀತ, ಸಾಹಿತ್ಯ, ಉದಾತ್ತ ತತ್ವಚಿಂತನೆ, ಲಘುವಾದ ಹರಟೆ, ಪಾಪ್ ಸಂಗೀತ-ಎಲ್ಲಕ್ಕೂ ಅವರಲ್ಲಿ ಎಡೆ ಇತ್ತು.

ಅವರನ್ನು ನೋಡಿದವರಿಗೆಲ್ಲ ಎದ್ದು ಕಾಣುತ್ತಿದ್ದುದು ಅವರ ಶುಭ್ರ ಉಡಿಗೆ ತೊಡಿಗೆ; ನೀವಿದ ಕಚ್ಚೆ, ಸರಳವಾದರೂ ಸ್ವಚ್ಛವಾದ ಖಾದಿ ಅಂಗಿ, ಅವರ ಸ್ಪಟಿಕ ಮನಸ್ಸಿಗೆ ಸಾಕ್ಷಿ ಆಗಿದ್ದುವು. ಕಡೆ ಕಡೆಗೆ ರಕ್ತದ ಒತ್ತಡ ವ್ಯಾಧಿಗೆ ತುತ್ತಾದಾಗಲೂ ಹಾಸಿಗೆ ಹಿಡಿದು ಮನೆಯಲ್ಲೇ ಮಲಗಿದ್ದರೂ ಈ ಒಪ್ಪ-ಓರಣಗಳಿಗೆ ಕುಂದುಬರಲಿಲ್ಲ.

ಕ್ರಾಂತಿಯ ಕುದಿ. ತಳಮಟ್ಟದಲ್ಲಿದ್ದವರನ್ನು ಮೇಲೆತ್ತುವ ಅತೀವ ತಳಮಳ, ಪಟ್ಟ ಪ್ರಯಾಸ, ಫಲಕೊಡದ ನೋವು, ಅವರ ಬೇನೆಯನ್ನು ಬೆಲೆಸಿದವು. ಅಶಾಂತವಾಯಿತು ಅವರ ಇಡೀ ಅಸ್ತಿತ್ವ. ನುಂಗಿದ ಔಷಧಗಳಾವುವೂ ಅವರ ಮೂಲ ಒಳಗುದಿಯನ್ನು ಪರಿಹರಿಸಲಿಲ್ಲ. ಅರ್ಧಾಂಗವಾಯು ಬಡಿದರೂ ಜೀವಿಸುವ ಆದಮ್ಯ ಇಚ್ಛಾಶಕ್ತಿ ಹಲವು ತಿಂಗಳ ಕಾಲವೇ ಮೆರೆಯಿತು. ಕಡೆಗೆ ಕಾಲನಿಗಿಂತ ಅದು ಮಿಗಿಲೆನಿಸಲಿಲ್ಲ. ಗೋಪಾಲಗೌಡರ ದೇಹ ಬಿಡುಗಡೆ ಪಡೆಯಿತು. ಅವರ ನಂಬಿಕೆ ನಿಲುವುಗಳನ್ನೂ ಸವಾಲುಗಳಾಗಿಯೇ ಉಳಿದಿವೆ.