ದಿವಂಗತ ಶಾಂತವೇರಿ ಗೋಪಾಲಗೌಡರನ್ನು ನೆನಪಿಸಿಕೊಳ್ಳುತ್ತಿರುವ ಹಾಗೆ ಒಂದು ಪ್ರಸಂಗವು ಕಣ್ಣಿಗೆ ಕಟ್ಟುತ್ತಿದೆ. ಈ ಪ್ರಸಂಗವು ಆಗಿನಿಂದಲೂ ಜ್ಞಾಪಕದಲ್ಲುಳಿದು ಕೊಂಡಿದೆ. ಮತ್ತು ಈಚಿನ ವರ್ಷಗಳಲ್ಲಿ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ.

ಗೌಡರು ೧೯೫೨ರಲ್ಲಿ ನಮ್ಮ ಕ್ಷೇತ್ರದಿಂದ ಹಿರಿಯ ನಾಯಕ ಬದರಿನಾರಾಯಣ್ ಅವರ ಎದುರು ವಿಧಾನಸಭೆ ಚುನಾವಣೆಗೆ ನಿಂತು ಗೆದ್ದರ. ಆಮೇಲೆ ಇಲ್ಲೇ ೧೯೫೭ರ ಚುನಾವಣೆಯಲ್ಲಿ ಸೋತರು. ಪುನಃ ೧೯೬೨ರಲ್ಲಿ ಎರಡನೇ ಸಲಕ್ಕೆ ಗೆದ್ದರು. ಈ ಅವಧಿಯಲ್ಲಿ ಸುಮಾರು ೧೯೬೩-೬೪ರಲ್ಲಿ ನಡೆದ ಪ್ರಸಂಗ ಇದು. ವಿಧಾನಸಭಾ ಸದಸ್ಯರಾಗಿ ಅವರು ಕ್ಷೇತ್ರ ಸಂಚಾರ ನಡೆಸುತ್ತಿದ್ದಾಗ, ಒಂದು ದಿನ ಸಾಗರದಲ್ಲಿ ಸೋಷಲಿಸ್ಟ್ ಪಕ್ಷದ ಕಿರುಕೋಣೆಯಲ್ಲಿ ಕೆಲವು ಕಾರ್ಯಕರ್ತರು ಕೂಡಿಕೊಂಡಿದ್ದರು. ಅವತ್ತು ಗೌಡರನ್ನು ನೋಡಲಿಕ್ಕಾಗಿ ನಾನು ಅಲ್ಲಿ ಹೋಗಿದ್ದೆ. ಅದೇ ಸಂದರ್ಭದಲ್ಲಿ ಹೊಸನಗರ ಭಾಗದ ಮಿತ್ರರೊಬ್ಬರು ತಮ್ಮ ಹತ್ತಿರದ ಒಂದು ಊರಿಗೆ ಒಂದು ರಸ್ತೆಯೂ ಕೆಲವು ಮೋರಿಗಳೂ ತುರ್ತಾಗಿ ಆಗ ಬೇಕಿದೆ ಅಂತ ಆ ಬಗ್ಗೆ ಒಂದು ಮನವಿಯನ್ನು ಸಲ್ಲಿಸಿದ್ದರು. ಅದು ಯಾಕೆ ಅಷ್ಟು ಅಗತ್ಯ ಮತ್ತು ತುರ್ತು ಅನ್ನುವುದನ್ನು ವಿವರವಾಗಿ ತಿಳಿಸಿ ಹೇಳಿದರು. ಕೊನೆಯಲ್ಲಿ, ನೀವು ಸ್ವಂತ ಮುತುವರ್ಜಿ ವಹಿಸಿ, ಈ ಕೆಲಸವನ್ನು ಮಾಡಿಸಿ ಕೊಡಲೇಬೇಕು ಅಂತ ಒತ್ತಾಯಿಸಿದರು. ಅವರು ಗೌಡರಲ್ಲಿ ಭಾರೀ ಗೌರವವಿಟ್ಟುಕೊಂಡಿದ್ದವರು. ಸೋಶಲಿಸ್ಟ್ ಪಕ್ಷದ ಪ್ರಮುಖ ನಿಷ್ಠಾವಂತ ಕಾರ್ಯಕರ್ತರು ಮತ್ತು ಅದೇ ಕಳೆದ ಚುನಾವಣೆಯಲ್ಲಿ ಗೌಡರ ಗೆಲುವಿಗೆ ಹಗಲು ರಾತ್ರಿ ದುಡಿದವರಾಗಿದ್ದರು.

ಗೌಡರು ಅವರು ಹೇಳಿದ್ದೆಲ್ಲವನ್ನೂ ಕಿವಿಗೊಟ್ಟು ಕೇಳಿಸಿಕೊಂಡು ಮನವಿಯನ್ನು ತಾವೇ ಎಲ್ಲರಿಗೂ ಕೇಳಿಸುವ ಹಾಗೆ ದೊಡ್ಡದಾಗಿ ಓದಿದರು. ಆ ಮೇಲೆ ಆ ಮನವಿ ಪತ್ರವನ್ನು ವಾಪಸು ಆತನ ಕೈಗೇ ಹಿಡಿಸಿ ದೊಡ್ಡದಾಗಿ ನಕ್ಕುಬಿಟ್ಟರು. ಎಲ್ಲರೂ ಬೆರಗಾಗಿ ನೋಡುತ್ತಿದ್ದಂತೆ ಪ್ರಾರಂಭಿಸಿದರು:

ನಾನು ಈಗ ಯಾರು ಅಂತ ಗೊತ್ತೇನಯ್ಯ ನಿಂಗೆ? ನೀವೆಲ್ಲ ಶತದಡ್ಡರು ಕಣಯ್ಯ. ನಾನು ಈಗ ಇಡೀ ಕರ್ನಾಟಕದ ವಿಧಾನ ಸಭೆಯ ಸದಸ್ಯ ತಿಳಿದುಕೋ. ಇಡೀ ಕರ್ನಾಟಕದ ಜನಕ್ಕೆ ಒಳ್ಳೇದಾಗುವ ಉಪಾಯಗಳನ್ನು, ಮಾರ್ಗಗಳನ್ನು ನಾನು ಹುಡುಕಬೇಕು, ಹೇಳಬೇಕು, ಒತ್ತಾಯಿಸಬೇಕು. ಅದು ಆಗತಕ್ಕದ್ದು ಅಂತ ಹಟ ಹಿಡಿದು ಕೂರಬೇಕು. ಈ ನಿಮ್ಮ ರಸ್ತೆ, ಕಲ್‌ವರ್ಟು ಇವನ್ನೆಲ್ಲ ಮಾಡಿಸೋಕೆ ಒಂದು ಪ್ರತ್ಯೇಕ ಇಲಾಖೇನೇ ಇದೆ. ಅದಕ್ಕಾಗಿ ಸಂಬಳ ತಗೊಂಡು ಕೆಲಸ ಮಾಡೋ ಎಂಜಿನಿಯರ್‌ಗಳಿದ್ದಾರೆ. ಇದು ಅವರ ಕೆಲಸ. ಅವರಿಗೆ ಒತ್ತಾಯ ಮಾಡಿ, ಅವರು ನಿಮ್ಮ ಮಾತು ಕೇಳಲಿಲ್ಲ ಅಂದರೆ ಆಗ ಹೇಳಿ. ಈ ಇಲಾಖೆ ಜನರ ಅಭಿಪ್ರಾಯವನ್ನು ಗೌರವಿಸೋ ಹಾಗೆ ನಾನು ವಿಧಾನ ಸಭೇಲಿ ಒತ್ತಡ ತರುತ್ತೇನೆ…..

ಇತ್ಯಾದಿಯಾಗಿ ಅವರ ಸ್ವಭಾವಕ್ಕೆ ತಕ್ಕಂತೆ ದೊಡ್ಡ ಭಾಷಣ ಮಾಡಿದರು. ಪುನಃ ತಮ್ಮ ಸ್ವಭಾವದ ಅದೇ ಶೈಲಿಯಲ್ಲಿ ಹೇಳಿದರು: ಕುಮಾರವ್ಯಾಸ ಹೇಳ್ತಾನೆ ಕಣಯ್ಯ, “ಬೇರು ನೀರುಂಡಾಗ ತಣಿಯವೆ ಭೂರುಹದ ಶಾಖೋಪಶಾಖೆಗಳು’’ ಅಂತ. ನೀವೆಲ್ಲಾ ಅಂಥಾ ದೊಡ್ಡ ಕಾವ್ಯಗಳನ್ನು ಓದಬೇಕು ಕಣ್ರಯ್ಯ. ನಾವು ವಿಧಾನಸಭೆಯಲ್ಲಿ ಕೂರುವ ಪ್ರತಿನಿಧಿಗಳು. ಅಲ್ಲಿ ಕೂತು ಯಾವುದೋ ಊರಿನ ಯಾವುದೋ ರಸ್ತೆ, ಯಾವುದೋ ಕೆರೆ ಮಾಡಿಸೋದಲ್ಲ, ಅಥವಾ ಯಾರನ್ನೋ ಎಲ್ಲಿಗೋ ವರ್ಗ ಮಾಡಿಸೋದಲ್ಲ. ಕರ್ನಾಟಕ ಅಂತನ್ನೋ ದೊಡ್ಡ ಮರ ಇದೆಯಲ್ಲ.ಅದರ ಬೇರಿಗೆ ನೀರು ಹಣಿಸೋ ದಾರಿ ಹುಡುಕಬೇಕು. ಇದನ್ನು ಮಾಡಬೇಕು, ಹಾಗೆ ಮಾಡಿದ್ರೆ ಇಂಥಾ ದೊಡ್ಡ ಮರದ ಕೊಂಬೆ ರೆಂಬೆ ಚಿಗುರು ಎಲ್ ಎಲ್ಲಾ ಒಂದೇ ಸಲಕ್ಕೆ ನಳನಳಿಸಿ ಬೆಳೀತವೆ…

ಜನರನ್ನೇ ಪೂರ್ತಾ ಅಂದರೆ ಪೂರ್ತಾ ಅವಲಂಬಿಸಿಕೊಂಡು ಬದುಕುತ್ತಿದ್ದ ಒಬ್ಬ ರಾಜಕೀಯ ನಾಯಕನು ತನ್ನ ಪಕ್ಷದ ಕಾರ್ಯಕರ್ತರಿಗೆ ಹೀಗೆ ಎಗ್ಗಿಲ್ಲದೆ ಅನ್ನುವುದಕ್ಕೆ ಛಾತಿ ಬೇಕು. ಗೌಡರು ಆ ಛಾತಿಯನ್ನು ಪಡೆದುಕೊಂಡಿದ್ದರು. ಅಪಾರವಾದ ಜನಪ್ರೀತಿ ಯಾವತ್ತೂ ಸ್ಖಲಿತವಾಗದೆ ಪ್ರಾಮಾಣಿಕತೆ ಮತ್ತು ಧ್ಯೇಯನಿಷ್ಠೆ ಇವು ಅವರಿಗೆ ಆ ಛಾತಿಯನ್ನು ತಂದುಕೊಟ್ಟಿದ್ದವು.

ಈಗಿನ ನಮ್ಮ ರಾಜಕಾರಣವು ಪೂರ್ತಾ ಬದಲಾಗಿಬಿಟ್ಟಿದೆ. ಊರಿಗೆ ರಸ್ತೆ, ಮೋರಿ, ಶಾಲೆ, ಆಸ್ಪತ್ರೆಗಳೇನು ಆಗಬೇಕಿದ್ದರೂ ಶಾಸಕರನ್ನು ಹಿಡಿದೇ ಮಾಡಿಸಿಕೊಳ್ಳಬೇಕು. ಅದಿರಲಿ, ವೈಯಕ್ತಿಕವಾದ ವರ್ಗಾವಣೆಗಳು, ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್‌ರಿಂದ ಆಗುವ ದರಖಾಸ್ತು ಮಂಜೂರಿ ಮುಂತಾದವು ಕೂಡ ಅವರ ಮುಖಾಂತರವೇ ಆಗಬೇಕು. ಸ್ವತಃ ಶಾಸಕರೇ ಹೀಗೆ ಆಗತಕ್ಕದೆಂದು ಅಪೇಕ್ಷಿಸುತ್ತಾರೆ. ಮುಚ್ಚುಮರೆ ಇಲ್ಲದೆ ಬಾಯಿ ಬಿಟ್ಟು ಹೇಳುತ್ತಾರೆ ಮತ್ತು ನೇರವಾಗಿ ವ್ಯವಹಾರ ನಡೆಸಿಕೊಂಡರೆ ಕೋಪಗೊಳ್ಳುತ್ತಾರೆ. ತಮ್ಮ ಕ್ಷೇತ್ರದಲ್ಲಿ ಅದಾವುದೇ ಸಮಾರಂಭ, ಸಭೆ ನಡೆದರೂ ಅದಕ್ಕೆ ಅವರನ್ನು ಕರೆದಿರಬೇಕು, ಆಹ್ವಾನಪತ್ರಿಕೆಯಲ್ಲಿ ಹೆಸನ್ನು ಮುದ್ರಿಸಿ ವೇದಿಕೆಯ ಮೇಲೆ ಕೂರಿಸಿ ಗೌರವಿಸಬೇಕು. ಇದು ಅನುಲ್ಲಂಘನೀಯವಾದ ತಮ್ಮ ಹಕ್ಕು ಅಂತ ಅಪೇಕ್ಷಿಸುತ್ತಾರೆ, ಒತ್ತಾಯಿಸುತ್ತಾರೆ. ಕೊಂಚ ತಪ್ಪಿದರೆ ಕೋಪಗೊಳ್ಳುತ್ತಾರೆ. ಇದೀಗ ಒಂದು ಅಲಿಖಿತ ಕಾನೂನು ಅನ್ನುವಷ್ಟು ಬಲಿತುಬಿಟ್ಟಿದೆ

ನಮ್ಮಲ್ಲಿ ಮದುವೆ, ಮುಂಜಿ ಶುಭಕಾರ್ಯಗಳಲ್ಲಿ ಊರಿನ ದೇವರಿಗೂ, ಸಮಾಜ ಮುಖ್ಯರಿಗೂ, ಬಂಧು ಬಾಂಧವರಿಗೂ ಗೌರವೀಳ್ಯಕೊಡುವ ಪದ್ದತಿ ಇದೆ. ಜೊತೆಗೆ ಸರ್ಕಾರಿ ವೀಳ್ಯ ಎನ್ನುವುದೊಂದು ಅಲ್ಲಿನ ಪಟೇಲ ಶಾನುಭೋಗರಿಗೆ ಸಲ್ಲುತ್ತದೆ. ಇನ್ನು ನಮ್ಮ ಶಾಸಕರು ಆ ವೀಳ್ಯವು ತಮಗೇ ಸಲ್ಲತಕ್ಕದ್ದು ಅಂತ ಹಟ ಹಿಡಿದರೆ ಆಶ್ಚರ್ಯವಿಲ್ಲ.

ನಿಜವಾಗಿ ನಮ್ಮ ಶಾಸಕ ಪ್ರತಿನಿಧಿಗಳು ಮಾಡಬೇಕಾದ್ದೇನು? ಗೋಪಾಗೌಡರು ಕುಮಾರವ್ಯಾಸನ ಮಾತಿನಲ್ಲಿ ಹೇಳಿದಂತೆ ರಾಜ್ಯ ಅಥವಾ ರಾಷ್ಟ್ರದ ಬದುಕೆನ್ನುವ ಮರದ ಬೇರಿಗೆ ನೀರುಣಿಸುವ ದಾರಿ ಹುಡುಕಿ ಅದನ್ನು ಕಾರ್ಯಗತಮಾಡಬೇಕು. ದೇವರಾಜ ಅರಸರು ಹಟಿ ಹಿಡಿದು ಭೂಸುಧಾರಣೆಯ ಕಾನೂನನ್ನು ತಯಾರಿಸಿ ಜಾರಿಗೊಳಿಸಿದರು. ಅದೊಂದೇ ಮಸೂದೆಯಿಂದ ಇಡೀ ಕರ್ನಾಟಕದ ಬಹುಸಂಖ್ಯಾತವಾದ ಜನವರ್ಗಕ್ಕೆ ಅಪೂರ್ವವಾದ ಲಾಭ ದೊರಕಿತು. ಅಷ್ಟೇ ಅಲ್ಲ, ಅದೊಂದು ಮಸೂದೆಯು ಇಡೀ ರಾಜ್ಯದ ಬದುಕಿನ ವಿನ್ಯಾಸವನ್ನೇ, ಆಲೋಚನೆಯ ಕ್ರಮವನ್ನೇ ಪರಿವರ್ತಿಸಿ ಪಂಚಾಯಿತಿ ರಾಜ್ಯ ಕಾನೂನನ್ನು ಜಾರಿಗೆ ತಂದಾಗ ಅಥವಾ ನಜೀರ್ ಸಾಬ್ ಅವರು ಪ್ರತಿ ಊರಿಗೂ ಪ್ರತಿಯೊಬ್ಬ ಪ್ರಜೆಗೂ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಸಿಗತಕ್ಕದ್ದು ಅಂತ ನಿರ್ಣಯಿಸಿ ಅದನ್ನು ಕಾರ್ಯಗತಗೊಳಿಸಿದಾಗ ಇಡೀ ರಾಜ್ಯದ ಬದುಕಿನಲ್ಲಿ ಒಂದು ಮೌಲಿಕ ಪರಿವರ್ತನೆ ಉಂಟಾಯಿತು. ಇಂಥದು ನಿಜವಾಗಿ ಶಾಸಕರ ಕರ್ತವ್ಯ.

ಇಲ್ಲಿ ಶಾಸಕರನ್ನೂ ರಾಜಕಾರಣಿಗಳನ್ನೂ ದೂರಿ ಕೈತೊಳೆದುಕೊಳ್ಳುವುದು ದೊಡ್ಡ ವಂಚನೆ. ಪ್ರಜಾಪ್ರಭುತ್ವವೆನ್ನುವುದು ನಾವೇ ನಮ್ಮನ್ನು ಆಳಿಕೊಳ್ಳುವ ಜೀವನಕ್ರಮ. ಈ ಜೀವನಕ್ರಮದಲ್ಲಿ ನಿಜವಾದ ನಂಬಿಕೆ ಇಟ್ಟುಕೊಂಡಿದ್ದರೆ ನಡೆದಿರುವ ಎಲ್ಲ ವಿಕೃತಿಗಳ ಜವಾಬ್ದಾರಿಯನ್ನೂ ನಾವೇ, ಪ್ರಜೆಗಳೇ ಹೊರಬೇಕು, ನಾವೇನು ಕೊಂಚ ತೂಕಡಿಸಬಹುದು. ನಿದ್ದೆ ಮಾಡಬಹುದು. ನಾಯಕರು ಮಾತ್ರ ಎಚ್ಚರವಾಗಿರತಕ್ಕದ್ದು ಅಂತ ಹಾರೈಸಿಕೊಳ್ಳುವುದಾದರೆ ಅದು ಪ್ರಜಾಪ್ರಭುತ್ವವಾಗುವುದಿಲ್ಲ. ಆಗ, ನಮ್ಮ ನಾಯಕರು ರಾಜನಿಗೆ ಅಥವಾ ಪಾಳೇಗಾರನಿಗೆ ಬದಲಿಯಾಗುತ್ತಾರೆ. ಈಗ ಹಾಗೆ ಆಗಿದೆ.

ಆವತ್ತು ಗೌಡರು ಆ ನಿಷ್ಠಾವಂತ ಕಾರ್ಯಕರ್ತರಿಗೆ ನೀವೆಲ್ಲ ದಡ್ಡರು ಅಂತ ಛೇಡಿಸಿದ್ದರು. ಈಗ ನಾವು, ಮತದಾರರಾಗಿರುವ ಪ್ರಜೆಗಳು ದಿನದಿಂದ ದಿನಕ್ಕೆ ಮತ್ತೂ ದಡ್ಡರಾಗುತ್ತಾರ ನಡೆದಿದ್ದೇವೆ. ಪ್ರಾರಂಭದಲ್ಲಿ ನಮ್ಮ ನಮ್ಮ ಊರಿಗೆ ಅಥವಾ ನಮ್ಮ ಸ್ವಂತಕ್ಕೆ ಕೂಡಾ ಸರ್ಕಾರದಿಂದ ಆಗಬರುದಾದ ಕೆಲಗಳನ್ನು ನಮ್ಮ ಚುನಾಯಿತ ಪ್ರತಿನಿಧಿಗಳಿಂದ ಸುಲಭವಾಗಿ ಮಾಡಿಸಿಕೊಳ್ಳಬಹುದಲ್ಲ ಅಂತ ಯೋಚನೆ ಹುಟ್ಟಿತು. ಅಲ್ಲಿಂದ ಈ ದುರಂತ ವಿಷವರ್ತುಲವು ಪ್ರಾರಂಭವಾಯ್ತು. ನಮ್ಮ ಪ್ರತಿನಿಧಿಯು ನಮ್ಮ ಊರಿಗೆ, ಸ್ವಂತಕ್ಕೆ ಒಂದು ಕೆಲಸವನ್ನು ಹಟ ಹಿಡಿದು ಒತ್ತಾಯಿಸಿ ಮಾಡಿಕೊಡುವಾಗ ಅದೇ ಮುಖ್ಯವಾಗುತ್ತದಲ್ಲದೆ ಉಳಿದ ಊರುಗಳು, ಉಳಿದ ಜನಗಳು ಕಾಣಿಸದೆ ಹೋಗುತ್ತಾರೆ. ನಮ್ಮ ಪ್ರತಿನಿಧಿಯು ನಮಗೆ ಮಾಡಿಸಿಕೊಡುವ ವಿಶೇಷ ಕೆಲಸವೂ ಅನುಗ್ರಹವಾಗುತ್ತದೆ, ಪಕ್ಷ ಪಾತವಾಗುತ್ತದೆ. ಸದ್ಯ ಅನುಕೂಲ ಪಡೆದುಕೊಳ್ಳುವ ನಾವು, ಅದರ ಧ್ಯಾನದಲ್ಲಿ, ನಾಳೆ ಇನ್ನೊಂದು ಊರಿನ ಬಗ್ಗೆ ಇಂಥದೇ ಪಕ್ಷಪಾತ ನಡೆದು ನಮಗೂ ಅನ್ಯಾಯವಾಗಬಹುದು ಅಂತ ಯೋಚಿಸುವುದಿಲ್ಲ. ಈ ರೂಢಿಯಿಂದ ನಡೆಯುವ ಕೆಲಸಗಳೆಲ್ಲ ಪಕ್ಷಪಾತದ ಕೆಲಸಗಳೇ ಆಗಿ ಬಿಡುತ್ತವೆ. ಹೀಗೆ ಒಮ್ಮೆ ಪ್ರಾರಂಭಗೊಂಡಿತೆಂದರೆ, ವಶೀಲಿ, ಪಕ್ಷಪಾತ, ಲಂಚ, ಭ್ರಷ್ಟಾಚಾರಗಳಿಗೆ ಸುಗ್ಗಿಯುಂಟಾಗುತ್ತದೆ.

ನಾವು ಶಾಸಕರ ಮೇಲೆ ಇಂಥ ಅಪೇಕ್ಷೆ, ಒತ್ತಾಯಗಳನ್ನು ಹೇರಿದಾಗ ನಾಳೆ ನಮ್ಮಿಂದ ಮತ ಪಡೆದುಕೊಂಡು ತನ್ನ ಬಾಳ್ವೆಯನ್ನು ನಿಭಾಯಿಸಿಕೊಳ್ಳಬೇಕಾದ ಅವರು, ಈ ಸುಲಭದ ಒಳದಾರಿಯಿಂದ ನಮ್ಮನ್ನು ಸುಪ್ರೀತಗೊಳಿಸಿ ತಮ್ಮ ಸ್ಥಾನವನ್ನು ಸಾಧ್ಯವಾದರೆ ಜೀವನ ಪರ‍್ಯಂತ ಭದ್ರಪಡಿಸಿಕೊಳ್ಳಲು ಮುಂದಾಗುತ್ತಾರೆ. ಇದಕ್ಕಾಗಿ ಅಧಿಕಾರವರ್ಗದ ಜೊತೆಗೆ, ಅವರಿಗೆ ಬೆದರಿಸಿಯೋ ಅಥವಾ ಅವರಿಗೆ ಬೇರೆ ಪ್ರತಿಫಲಕೊಡಿಸಿಯೋ ಶಾಮೀಲು ಕೂಟವನ್ನು ರಚಿಸಿಕೊಳ್ಳುತ್ತಾರೆ. ಇದರ ಪರಿಣಾಮವೆಂದರೆ, ಶಾಸಕರೇ ಕೇಂದ್ರವಾಗಿರುವ ಲಂಚ, ಭ್ರಷ್ಟಾಚಾರಗಳ ವಿಷವರ್ತಲವು ನಿರ್ಮಾಣಗೊಂಡು ಸ್ಥಿರವಾಗಿ ನಿಲ್ಲುತ್ತದೆ. ಚುನಾವಣೆಯನ್ನುವುದು ಈ ವಿಷವರ್ತುಲದ ನಡುವೆ ನಡೆಯುವ ಅಣಕದ ಆಟವಾಗುತ್ತದೆ. ಇಂಥ ಶಾಸಕರುಗಳ ಕೂಟವಾದ ಲೋಕಸಭೆ, ವಿಧಾಸಭೆಗಳು ರಾಷ್ಟ್ರ ರಾಜ್ಯ ಮುಂತಾದ ಸಮಗ್ರತೆಯ ಸಮತ್ವದ ಕಲ್ಪನೆಗಳನ್ನು ಪೂರ್ತಾ ಕಳೆದುಕೊಂಡು ಬಿಡುತ್ತವೆ. ತಾನು-ತನ್ನ ಕ್ಷೇತ್ರ-ತನ್ನ ಅಧಿಕಾರ ಎನ್ನುವ ಕಿರು ಕೂಪದಲ್ಲಿ ಹೂತುಕೊಂಡು ಆ ಕೆಸರಲ್ಲಿ ಸಿಕ್ಕು ಅಲ್ಲೇ ಸೊಕ್ಕಿಕೊಳ್ಳುವ ಈ ಶಾಸಕರು ಪ್ರತಿನಿಧಿಗಳಾಗದೆ ಪಾಳೇಗಾರರಾಗುತ್ತಾರೆ.

ಈ ಬೆಳವಣಿಗೆಗಳ ಬಗ್ಗೆ ಮಾತಾಡುತ್ತಿರುವಾಗ ಒಮ್ಮೆ ಮಿತ್ರರೊಬ್ಬರು ಇದನ್ನು ಒಪ್ಪಿಕೊಳ್ಳಲಿಲ್ಲ ಪ್ರತಿಯೊಬ್ಬ ಶಾಸಕನೂ ತನ್ನ ಕ್ಷೇತ್ರಕ್ಕೆ ದುಡಿದರೆ ಸಾಕಲ್ವ, ಅದರಿಂದ ತಂತಾನೇ ರಾಜ್ಯದ ಒಟ್ಟಿನ ಕಲ್ಯಾಣವು ಸಾಧಿಸುತ್ತದಲ್ಲ ಅಂತ ಅವರು ವಾದಿಸಿದರು. ಆದರೆ ವಾಸ್ತವವಾಗಿ ಹಾಗಾಗುವುದಿಲ್ಲ. ಶಾಸಕಾಂಗ-ನ್ಯಾಯಾಂಗ-ಕಾರ‍್ಯಾಂಗಗಳೆಂಬ ಸ್ಪಷ್ಟವಾದ ವಿಭಜನೆಗಳಿಲ್ಲದಿದ್ದ ಪಕ್ಷದಲ್ಲಿ ಅಧಿಕಾರಕ್ಕಿರುವ ಕಡಿವಾಣವು ಹೊರಟುಹೋಗುತ್ತದೆ. ಅದು ಪ್ರಜಾಪ್ರಭುತ್ವದ ಸಂಯಮನಿಷ್ಠೆ ವಿನ್ಯಾಸವನ್ನು ಛಿದ್ರಗೊಳಿಸಿ ನಾಶಮಾಡಿಬಿಡುತ್ತದೆ. ಅದು ಪ್ರಜಾಪ್ರಭುತ್ವದ ಸಂಯಮನಿಷ್ಠೆ ವಿನ್ಯಾಸವನ್ನು ಛಿದ್ರಗೊಳಿಸಿ ನಾಶಮಾಡಿಬಿಡುತ್ತದೆ. ಶಾಸಕರು ನಿರಂಕುಶರಾಗುತ್ತಾರೆ. ರಾಷ್ಟ್ರರಾಜ್ಯಗಳೆಂಬ ಒಕ್ಕೂಟ ಕಲ್ಪನೆಗಳೂ ಸಮತ್ವದ ದೃಷ್ಟಿಯೂ ಕಳೆದು ಹೋಗುತ್ತದೆ. ಪಕ್ಷಪಾತ, ವಶೀಲಿ, ಲಂಚ, ಭ್ರಷ್ಟಾಚಾರಗಳು ಬೆಳೆದುಕೊಳ್ಳುತ್ತವೆ.

ಇವತ್ತು ಈ ಥರದ ಬೆಳವಣಿಗೆಗಳು ಉಂಟಾಗಿರುವುದಕ್ಕೆ ಇನ್ನೊಂದು ಮೂಲಕಾರಣವೂ ಇದೆ. ನಿಜವಾದ ಪ್ರಜಾಪ್ರಭುತ್ವಕ್ಕೆ ಮೂಲ ಆಸ್ತಿಭಾರವಾದ ವಿಕೇಂದ್ರೀಕರಣ ವಿನ್ಯಾಸವನ್ನು ನಾವು ಸಾಧಿಸಿಕೊಂಡಿಲ್ಲ. ಗ್ರಾಮ-ಜಿಲ್ಲೆಗಳ ಮಟ್ಟದಲ್ಲಿ ಆಗಬೇಕಾದ ನಿರ್ಧಾರಗಳು ಅಲ್ಲೇ, ಅಲ್ಲಿನ ಸ್ಥಳೀಯ ಸಂಸ್ಥೆಗಳಲ್ಲೇ ಆಗುವಂತಿದ್ದ ಪಕ್ಷದಲ್ಲಿ ಪ್ರಜೆಗಳು ಈಗಿನ ಹಾಗೆ ಎಲ್ಲಕ್ಕೂ ಶಾಸಕರಲ್ಲೇ ಹೋಗಿ ಮುಗಿಬೀಳುತ್ತಿರಲಿಲ್ಲ. ಕರ್ನಾಟಕದಲ್ಲಿ ಜನತಾ ಸರ್ಕಾರ ಬಂದಾಗ ಜಿಲ್ಲಾ ಪರಿಷತ್ತು ಮಂಡಲ ಪಂಚಾಯತಿಗಳು ಕೆಲಸಮಾಡಲು ತೊಡಗಿದವಲ್ಲ. ಆ ಅತ್ಯಲ್ಪ ಕಾಲದಲ್ಲೇಶಾಸಕರ ಮೇಲಿನ ಒತ್ತಡವು ಪೂರ್ತಾ ಇಳಿದುಬಿಟ್ಟಿತು. ಒಂದು ವೇಳೆ ಆ ವ್ಯವಸ್ಥೆಯು ಮುಂದುವರಿದಿದ್ದರೆ ಪ್ರಾಯಶಃ ಚುನಾವಣೆಯಿಂದ ಪ್ರಾರಂಭಿಸಿ, ಉದ್ದಕ್ಕೂ ಅಧಿಕಾರವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವ ಶಾಸಕ, ಅಧಿಕಾರಿ – ಶ್ರೀಮಂತ ದುಷ್ಟಕೂಟದ ಕಾಯಕವೂ ಕ್ರಮೇಣ ಹಿಂಜರಿದುಕೊಳ್ಳುತ್ತಿತ್ತು.

ವಿಧಾನ ಪರಿಷತ್ತಿನಲ್ಲಿ ನಾಮಕರಣ ಸದಸ್ಯರಾಗಿರುವ ನಮ್ಮ ಸಿದ್ಧಲಿಂಗಯ್ಯನವರ ಬಗ್ಗೆ ಮಿತ್ರರೆಲ್ಲರೂ ಮೆಚ್ಚುಗೆಯಿಂದ ಮಾತಾಡುತ್ತಾರೆ. ಅಧಿಕಾರಿಗಳೋ ಪುಢಾರಿಗಳೋ ಅವರ ಹತ್ತಿರ ಹೋಗಿ ಯಾವುದೋ ವರ್ಗಾವಣೆಗೆ ಒತ್ತಾಯಿಸುವಾಗ ಅವರು ತಮ್ಮದೇ ಧಾಟಿಯಲ್ಲಿ ವಿನಯವಾಗಿ ಹೇಳುತ್ತಾರಂತೆ: ಕ್ಷಮಿಸಿ ಸಾರ್, ನಮ್ಮದೇನಿದ್ರೂ ವರ್ಗಹೋರಾಟ ಸಾರ್, ವರ್ಗಾವಣೆ ಹೋರಾಟಕ್ಕೆ ಪುರುಸೊತ್ತು ಇಲ್ಲ ಸಾರ್, ಕ್ಷಮಿಸಿಬಿಡಿ ಸಾರ್ ಅಂತ. ಗೋಪಾಲಗೌಡರ ನೆನಪು ತರುವ ಸಿದ್ಧಲಿಂಗಯ್ಯ ಮುಂತಾದ ಛಾತಿಯುಳ್ಳ ಜಾಣರು ಅಪರೂಪ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಥವರೇ ಇರತಕ್ಕದ್ದು ಅಂತ ಹಾರೈಸಿಕೊಳ್ಳುವುದೂ ಸರಿಯಲ್ಲ. ಇಲ್ಲಿ ನಾವು ಬಹುಮಂದಿ ದಡ್ಡರೇ. ಬಹುಮಂದಿ ನಮ್ಮ ಶಾಸಕರೂ ದಡ್ಡರೇ. ನಾವೆಲ್ಲರೂ ಕೊಂಚ ಕೊಂಚವಾಗಿ ಜಾಣರಾಗುತ್ತ ಹೋಗಬೇಕು. ಪರಸ್ಪರ ಒಬ್ಬರನ್ನೊಬ್ಬರು ಜಾಣರನ್ನಾಗಿಸುತ್ತ ಹೋಗಲೇಬು. ವಿಳಂಬವಾದರೂ ಅನಿವಾರ್ಯವಾದ ಮಾರ್ಗ ಇದು.

ಗೋಪಾಲಗೌಡರ ಸ್ಮರಣೆಯ ಈ ಲೇಖನದಲ್ಲಿ ಅವರ ಬಗ್ಗೆ ಹೆಚ್ಚು ಹೇಳಲೇ ಇಲ್ಲ ಅನ್ನಿಸಬಹುದು. ಆದರೆ, ಇಲ್ಲಿ ಹೇಳಿರುವುದೆಲ್ಲ ನಿಜವಾಗಿ ಗೌಡರು ನಮಗೆ ಕಲಿಸಲೆತ್ನಿಸಿದ ಜಾಣತನವನ್ನೇ, ವಿವೇಕವನ್ನೇ. ಗೌಡರು ಯಾವುದನ್ನು ತಾವೇ ಬಾಳಿ ಕಾಣಿಸಿಕೊಟ್ಟರೋ ಅಂಥ ಒಂದೊಂದು ವಿವೇಕವನ್ನು ನಾವು ನಮ್ಮ ಸಮುದಾಯದಲ್ಲಿ ನಿಧಾನವಾಗಿ ನೆಟ್ಟುಕೊಂಡು ಬದುಕಿಸಿಕೊಂಡಂತೆ. ಅಂಥವರ ಸ್ಮಾರಕವು ಸ್ಥಾವರವಾದರೆ ಪ್ರಯೋಜನವಿಲ್ಲ, ಜಂಗಮವಾಗಬೇಕು.