‘ಪ್ರತಿಸಲವೂ ಅವರೇ ಗೆಲ್ಲುತ್ತಾರಲ್ಲ? ಶ್ರೀಮಂತರಾಗಿದ್ದೂ ಆಡಳಿತ ಪಕ್ಷದ ಅಭ್ಯರ್ಥಿಯೂ ಆಗಿದ್ದ ನೀವು ಕೂಡ ಅವರನ್ನು ಸೋಲಿಸಲಾಗಲಿಲ್ಲ! ಇದಕ್ಕೆ ಏನು ಕಾರಣ?’ ಪ್ರಶ್ನೆಯನ್ನು ಆಗತಾನೇ ವಿಧಾನಸಭಾ ಚುನಾವಣೆಯಲ್ಲಿ (೧೯೬೭), ಶಾಂತವೇರಿ ಗೋಪಾಲಗೌಡರಿಂದ ಪರಾಭವಗೊಂಡಿದ್ದ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ವಿಶ್ವನಾಥ್ ಅವರಿಗೆ ಕೇಳಿದೆ.

ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಅವರು, ಚಿಕ್ಕಮಗಳೂರು ಜಿಲ್ಲೆಯ ಕ್ಷೇತ್ರದ ಮತದಾರರಲ್ಲಿ ಮನವಿಮಾಡಿಕೊಳ್ಳಲು ಕಡೂರಿಗೆ ಬಂದಿದ್ದರು. ಆಗ ಯಗಟಿಗೆ ಹೋಗುವ ಮಾರ್ಗದಲ್ಲಿ, ಅವರೊಡನೆ ಕಾರಿನಲ್ಲಿ ಕೂತಿದ್ದ ನಾನು ಈ ಪ್ರಶ್ನೆ ಕೇಳಿದ್ದೆ.

“ನೋಡಿ, ಗೋಪಾಲಗೌಡರು ತುಂಬಾ ಬಡತನದ ಕುಟುಂಬದಿಂದ ಬಂದವರು. ಅವರದೂ ಗೇಣಿದಾರರ ಕುಟುಂಬ. ಬಡತನದ ದಾರುಣ ಅನುಭವ; ಮುಖ್ಯವಾಗಿ ಗೇಣಿದಾರ ರೈತರು ಭೂಮಾಲೀಕರೆದುರು ದೀನರಾಗಿ ಕೈಚಾಚಿ ನಿಂತು, ಜೀವನಸಾಗಿಸಬೇಕಾಗಿದ್ದ ಸಂದರ್ಭಗಳೆಲ್ಲವನ್ನು ಕಣ್ಣಾರೆ ಕಂಡವರು, ಸಮಾಜದಲ್ಲಿರುವ ಬಹುಪಾಲು ಬಡವರಿಗಾಗಿ ಏನನ್ನಾದರೂ ಮಾಡಲೇಬೇಕೆಂದು, ವಿದ್ಯಾರ್ಥಿಯಾಗಿದ್ದಾಗಲೇ ತನ್ನ ಮಾರ್ಗವನ್ನು ಗುರುತಿಸಿಕೊಂಡಿದ್ದರು. ಆ ಹೊತ್ತಿಗಾಗಲೆ ಡಾ. ರಾಮಮನೋಹರ ಲೋಹಿಯಾ ಅವರ ಗುರಿ, ಆದರ್ಶ, ಮಾರ್ಗಗಳನ್ನು ಕುರಿತು ಚೆನ್ನಾಗಿ ಅಧ್ಯಯನ ಮಾಡಿದ್ದರು; ಕಾಗೋಡು ಸತ್ಯಾಗ್ರಹ ನಡೆದಿತ್ತು. ಚಳವಳಿ ಮಾರ್ಗ ತುಳಿಯದೇ, ಸರ್ಕಾರವನ್ನು ಮಣಿಸುವುದು ಸಾಧ್ಯವಾಗದು ಎಂಬುದನ್ನು ಗೋಪಾಲಗೌಡರು ಅರಿತಿದ್ದರು. ರೈತಸತ್ಯಾಗ್ರಹದಲ್ಲಿ ಧುಮುಕಿ ಇಳಿಮುಖವಾಗಿದ್ದ ಚಳವಳಿಗೆ ಹೋರಾಟದ ಕಸುವನ್ನು ತುಂಬಿ ಉತ್ತೇಜಿಸಿದರು.

ಕಾಗೋಡು ರೈತ ಸತ್ಯಾಗ್ರಹ ಕಾವೇರುತ್ತಿದ್ದಂತೆಯೇ ಗೋಪಾಲಗೌಡರ ಹುರುಪು, ಸಮರ್ಪಣಾ ಭಾವನೆ, ಹೋರಾಟದ ಛಲ – ಇವೆಲ್ಲವನ್ನೂ ಕಣ್ಣಾರೆ ಕಂಡಿದ್ದ ಬಡಗೇಣಿದಾರರು, ಕೃಷಿ ಕಾರ್ಮಿಕರು ಅವರ ಬೆಂಬಲಿಗರಾದರು. ಕಾಗೋಡು ರೈತ ಸತ್ಯಾಗ್ರಹದಿಂದಾಗಿ ಗೋಪಾಲಗೌಡರು ರೈತನಾಯಕರಾಗಿ ರೂಪುಗೊಂಡರು.

ಸತ್ಯಾಗ್ರಹ ಕಾಲದಲ್ಲಿ, ಗೌಡರು ಬಿತ್ತಿದ್ದ ಕ್ರಾಂತಿಯ ಬೀಜಗಳು ಮೊಳೆತು ಪೈರಾಗುವ ವೇಳೆಗೆ ವಿಧಾನಸಭೆಗೆ ಮೊದಲ ಸಾರ್ವತ್ರಿಕ ಚುನಾವಣೆಯೂ ಬಂದಿತು. ತಮ್ಮ ಹಿತರಕ್ಷಣೆ ಹಾಗೂ ಸಮಸ್ಯೆಗಳ ನಿವಾರಣೆ, ಗೋಪಾಲಗೌಡರಿಂದ ಮಾತ್ರ ಸಾಧ್ಯ ಎಂದು ಚೆನ್ನಾಗಿ ಮನಗಂಡಿದ್ದ ರೈತವರ್ಗವು ಅವರನ್ನೇ ತಮ್ಮ ಪ್ರತಿನಿಧಿಯನ್ನಾಗಿ ಆರಿಸಿಕೊಂಡಿತು. ಶಾಸಕರಾದ ಮೇಲೂ ಗೌಡರು ರೈತರನ್ನು ಮರೆಯಲಿಲ್ಲ. ವೈಧಾನಿಕ ವೇದಿಕ ಸಿಕ್ಕಮೇಲಂತೂ ಅವರು ಬೆಳೆಯುತ್ತಲೇ ಹೋದರು…

ಅತ್ಯಂತ ಪ್ರಾಮಾಣಿಕರಾಗಿ, ತತ್ವನಿಷ್ಠರಾಗಿ ಸಮಾಜವಾದಿ ಸಿದ್ಧಾಂತದ ಜಾರಿಯೊಂದೇ ದೇಶದ ಸಮಸ್ಯೆಯ ನಿವಾರಣೆಗೆ ಮಾರ್ಗೋಪಾಯ ಎಂಬುದನ್ನು ಅವರು ಪ್ರಬಲವಾಗಿ ನಂಬಿದ್ದರು. ಯಾವ ಆಮಿಷಗಳಿಗೂ ಬಲಿಯಾಗಲಿಲ್ಲ. ತತ್ವ ಸಿದ್ಧಾಂತ-ವಿಚಾರಗಳಲ್ಲಿ ಅವರೆಂದೂ ರಾಜಿಮಾಡಿಕೊಳ್ಳಲಿಲ್ಲ ತಪ್ಪೋ ಸರಿಯೋ ತಮ್ಮ ದೃಢನಿರ್ಧಾರವನ್ನು ಸಡಿಲಿಸುತ್ತಿರಲಿಲ್ಲ…

ಮುಚ್ಚುಮರೆಯಿಲ್ಲದೆ, ನೇರ ನಡೆ-ನುಡಿಯ ಗೋಪಾಲಗೌಡರ ಪಾರದರ್ಶಕ ಪ್ರಾಮಾಣಿಕತೆಯ ಮುಂದೆ, ರಾಜಕಾರಣದ ಕುತಂತ್ರಗಳು ಗೆಲ್ಲಲ್ಲು ಸಾಧ್ಯವೇ ಇರಲಿಲ್ಲ. ಹಾಗೆಯೇ ಅವರಾಗಿ ರಾಜಕೀಯದಿಂದ ನಿವೃತ್ತಿಯಾಗುವ ತನಕ, ಅವರನ್ನು ಚುನಾವಣೆಯ ಕಣದಲ್ಲಿ ಸೋಲಿಸುವುದು ಸುಲಭವಲ್ಲ!’’

ಇದೇ ಧಾಟಿಯಲ್ಲಿ ಬಿ.ಎಸ್. ವಿಶ್ವನಾಥ್ ಹೇಳುತ್ತಾ ಹೋದರು; ಗೌಡರ ಯಶೋಗಾಥೆಯನ್ನು ಗೌಡರಿಂದ ಸೋಲನ್ನು ಕಂಡಿದ್ದವರಿಂದಲೇ ವಿವರಿಸಲ್ಪಟ್ಟಾಗ, ಗೋಪಾಲಗೌಡರ ವ್ಯಕ್ತಿತ್ವದ ವಿರಾಟಸ್ವರೂಪ ಎಂಥವರಿಗೂ ಅರ್ಥವಾಗುತ್ತದೆ.

ಆಗೊಮ್ಮೆ ನಮ್ಮ ಕ್ಷೇತ್ರದ ಶಾಸಕರಾಗಿದ್ದ ಕೆ.ಎಂ. ತಮ್ಮಯ್ಯನವರು, ಹಳೆಯ ಶಾಸಕರ ಭವನದ ಕೈಸಾಲೆಯಲ್ಲಿ ಬರುತ್ತಿದ್ದ ಗೋಪಾಲಗೌಡರಿಗೆ ನನ್ನನ್ನು ಪರಿಚಯಿಸಿದರು. ಆಗ ಗೌಡರು ‘ಓ! ಇವರು ನನಗೆ ಚೆನ್ನಾಗಿ ಗೊತ್ತು! ಇವರ ಪರಿಚಯ, ಇವರ ಪ್ರಖರವಾದ ಪತ್ರಿಕಾ ವರದಿಗಳಿಂದಲೇ ಆಗಿದೆ. ಈಗ ವೈಯಕ್ತಿಕವಾಗಿ ಪರಿಚಯ ಆಯಿತಷ್ಟೆ’ ಎಂದಾಗ ನನಗೆ ಅಚ್ಚರಿಯೊಂದಿಗೆ ಆನಂದವೂ ಆಯಿತು.

೧೯೬೮ರ ಮೇ ತಿಂಗಳ ಒಂದು ದಿನ. ನಮ್ಮ ಕಡೂರು ಶಾಸಕರಾಗಿದ್ದ ಕೆ.ಎಂ. ತಮ್ಮಯ್ಯನವರೊಂದಿಗೆ ಅನಿರೀಕ್ಷಿತವಾಗಿ ಕೆಮ್ಮಣ್ಣುಗುಂಡಿಗೆ ಹೋಗಬೇಕಾಗಿ ಬಂತು. ಅಲ್ಲಿಗೆ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಎರಡು ದಿನಗಳ ವಿಶ್ರಾಂತಿಗಾಗಿ ಬಂದಿದ್ದರು. ನಾವು ಕಡೂರಿಗೆ ಮುನ್ಸಿಫ್ ಮ್ಯಾಜಿಟ್ ನ್ಯಾಯಾಲಯದ ಮಂಜೂರಾತಿಗಾಗಿ, ಮುಖ್ಯಮಂತ್ರಿಗಳ ಮನವೊಲಿಸಲು ಹೋಗಬೇಕಾಗಿತ್ತು. ನಾವು ಅಲ್ಲಿ ಅವರನ್ನು ಕಂಡು ವಿಷಯದ ಬಗ್ಗೆ ಮಾತಾಡಿದೆವು.

ನಮ್ಮ ಮಾತುಕತೆಯ ನಂತರ, ಮುಖ್ಯಮಂತ್ರಿಗಳು ತಿರುಗಾಡಲು ಹೊರಟರು. ನಾವೂ ಜೊತೆಯಲ್ಲಿದ್ದೆವು. ಕಲ್ಲತ್ತಿಗಿರಿ ಕಾಟೇಜ್ ಬಳಿಗೆ ನಾವು ಬಂದಾಗ, ಅಲ್ಲಿ ಹೊಂಬಿಸಿಲಿನಲ್ಲಿ ಗೋಪಾಲಗೌಡರು ನಿಂತಿದ್ದರು. ಅವರನ್ನು ಕಂಡು ನಿಜಲಿಂಗಪ್ಪನವರಿಗೆ ಅಚ್ಚರಿ ಎನಿಸಿತು.

“ಇದೇನು ಗೋಪಾಲಗೌಡ್ರೇ, ನೀವಿಲ್ಲಿ? ಯಾವಾಗ ಬಂದಿರಿ?’’ ಎಂದು ಪ್ರಶ್ನಿಸಿದರು.

ಅದಕ್ಕೆ ಗೌಡರು “ನಾನೀಗ ಸ್ವತಂತ್ರನಲ್ಲ ಸ್ವಾಮಿ! ಸಂಸಾರಿಯಾಗಿರುವುದರಿಂದ ನನ್ನಿಚ್ಛೆಯಂತೆ ವರ್ತಿಸುವಂತಿಲ್ಲ. ಹೆಂಡತಿಯ ಅಪೇಕ್ಷೆ ನಡೆಸಲು ಇಲ್ಲಿಗೆ ಬರಬೇಕಾಯಿತು’’ ಎಂದರು.

“ಹೌದೇನು? ಎಲ್ಲಿದ್ದಾರೆ ನಿಮ್ಮ ಹೆಂಡತಿ’’ ಎಂದು ನಿಜಲಿಂಗಪ್ಪನವರು ಕೇಳಿದಾಗ;

“ಒಳಗೆ ಕೂಸನ್ನಾಡಿಸುತ್ತಿದ್ದಾಳೆ!’’ ಎಂದರು ಗೌಡರು. ಆಗ ನಿಜಲಿಂಗಪ್ಪನವರು, ‘ಓ ನೀವೀಗ ತಂದೆ ಆಗಿದ್ದೀರಿ. ನಡೆಯಿರಿ ಮಗು ನೋಡೋಣ’ ಎಂದು ಒಳಗೆ ನಡೆದರು. ಇವರನ್ನು ನಿರೀಕ್ಷಿಸದಿದ್ದ ಗೌಡರ ಪತ್ನಿ ಶ್ರೀಮತಿ ಸೋನಕ್ಕನವರು ಗಡಬಡಿಸಿ ಎದ್ದು ನಿಂತರು.

“ಪರ‍್ವಾಗಿಲ್ಲ ಕುಳಿತುಕೊಳ್ಳಿ. ನೀವು ಬಂದಿರುವುದು ನನಗೆ ಗೊತ್ತಿರಲಿಲ್ಲ. ಅದಕ್ಕೆ ಬಂದೆ’’ ಎಂದು ಪ್ರೀತಿಯಿಂದ ಮಾತಾಡಿದ ಮುಖ್ಯಮಂತ್ರಿಗಳು ಮಗುವಿನ ತಲೆಯನ್ನು ನೇವರಿಸಿ ಹರಸಿದರು. ಗೌಡರ ತಾಯಿಯವರ ಯೋಗಕ್ಷೇಮ ವಿಚಾರಿಸಿದರು.

ಸಲಗನಂತಿರುವ ಗೌಡರನ್ನು ಅದ್ಹೇಗೆ ನಿಭಾಯಿಸುತ್ತಿಯೋ ಏನೋ ತಾಯಿ ನೀನು! ನಮಗಂತೂ ಸಾಧ್ಯವಾಗಿಲ್ಲ’’ ಎಂದು ನಿಜಲಿಂಗಪ್ಪನವರು ಹೇಳಿದಾಗ ಗೌಡರೂ ಸೇರಿ ಅಲ್ಲಿದ್ದ ನಾವೆಲ್ಲರೂ ನಕ್ಕೆವು. ಸೋನಕ್ಕನವರು ಮಾತ್ರ ನಾಚಿಕೆಯ ಮುದ್ದೆ ಆಗಿದ್ದರು.

“ನೀವು ಇಲ್ಲೇಕೆ ಉಳಿದಿರಿ! ನನ್ನೊಂದಿಗೆ ದತ್ತಾತ್ರಿ ಕಾಟೇಜಿಗೆ ಬರಬಹುದಿತ್ತಲ್ಲ ಗೋಪಾಲಗೌಡ್ರೆ?’’ ಎಂದು ನಿಜಲಿಂಗಪ್ಪನವರು ಹೇಳಿದಾಗ –

ಗೌಡರು, “ತಾವು ಮುಖ್ಯಮಂತ್ರಿಗಳು, ನಾನು ಸಾಮಾನ್ಯ ಶಾಸಕ, ಅದೂ ಅಲ್ಲದೆ ನಾನು ಖಾಸಗಿ ಭೇಟಿಗಾಗಿ ಬಂದಿದ್ದೇನೆ; ಸರ್ಕಾರದ ಆತಿಥ್ಯ ನನಗೇಕೆ ಸ್ವಾಮಿ?’’ ಎಂದರು.

ಗೋಪಾಲಗೌಡರಂಥವರು ರಾಜಕಾರಣಕ್ಕೆ ಬಂದಿದ್ದು ದೇಶದ, ರಾಜ್ಯದ ಪುಣ್ಯ; ರೈತರಭಾಗ್ಯ. ಅವರು ರಾಜಕಾರಣವನ್ನೇ ಒಂದು ವ್ರತವನ್ನಾಗಿ ಸ್ವೀಕರಿಸಿ, ಪಾರದರ್ಶಕ ಪ್ರಾಮಾಣಿಕ ಜೀವನವನ್ನು ಒಂದು ತಪಸ್ಸಿನಂತೆ ನಡೆಸಿದರು.