ಕಾಗೋಡಿನಲ್ಲಿ ಭೂಮಾಲೀಕರ ವಿರುದ್ಧ ನಡೆದ ಗೇಣಿದಾರ ರೈತರ ಹೋರಾಟದಲ್ಲಿ ಭಾಗವಹಿಸುವುದರ ಮೂಲಕ, ಶಾಂತವೇರಿ ಗೋಪಾಲಗೌಡರು ಕರ್ನಾಟಕ ರಾಜ್ಯದ ನಾಯಕರಾಗಿ ರೂಪುಗೊಂಡರು. ಸಮಾಜವಾದಿ ಪಕ್ಷ ಪ್ರಬಲ ರಾಜಕೀಯ ಪಕ್ಷವಾಗಿ ಹೊಮ್ಮಿತು. ಪಕ್ಷದ ಚಿಹ್ನೆ ಆಲದಮರ, ಕೆಂಪುಟೋಪಿ, ಕ್ರಾಂತಿಕಾರಿ ಘೋಷಣೆಗಳು, ಗೋಪಾಲಗೌಡರ ಬಡವರ ಪರವಾದ ಹೋರಾಟ ಇವೆಲ್ಲವೂ ಮಲೆನಾಡಿನ ಜನರನ್ನು ರೋಮಾಂಚನಗೊಳಿಸಿದವು. ಅವರಲ್ಲೂ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನು ಹುಟ್ಟುಹಾಕಿದವು.

ಸುಮಾರು ಹದಿನೈದು ವರ್ಷಗಳ ಕಾಲ ಶಾಸಕರಾಗಿದ್ದ ಗೋಪಾಲಗೌಡರು, ಶಾಸನಸಭೆಯಲ್ಲಿ ಗೇಣಿದಾರರು, ಬಡವರು, ನಿಮ್ನವರ್ಗದವರು, ಕೃಷಿಕಾರ್ಮಿಕರ ಸಮಸ್ಯೆಗಳನ್ನು ಕೈಗೆತ್ತಿಕೊಂಡರು. ರಾಜಧನ ರದ್ದತಿ, ಭೂಸುಧಾರಣೆ ಇನಾಂ ಜಮೀನು ರದ್ಧತಿ ಕಾಯಿದೆ ಮುಂತಾದ ಜನಪರ ಸಮಸ್ಯೆಗಳ ಬಗ್ಗೆ ಅಭ್ಯಾಸಪೂರ್ಣವಾಗಿ ಮಾತಾಡಿ ಸರ್ಕಾರದ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾದರು.

ಗೋಪಾಲಗೌಡರು ಚುನಾವಣೆ ಎದುರಿಸುತ್ತಿದ್ದುದು ಬರಿಗೈಯಲ್ಲಿ. ಹಣ ಎಂದೂ ಅವರ ಬಳಿ ಶಾಶ್ವತವಾಗಿ ಇರಲೇ ಇಲ್ಲ. ಚುನಾವಣೆಯ ವೇಳೆಗೆ ಸರಿಯಾಗಿ ಪಕ್ಷಭೇದ ಮರೆತು ಅವರ ಗೆಳೆಯರು, ಅಭಿಮಾನಿಗಳು ಅವರಿಗೆ ಹಣಕಾಸಿನ ನೆರವನ್ನು ನೀಡುತ್ತಿದ್ದರು. ತೀರ್ಥಹಳ್ಳಿ ಕನ್ನಂಗಿಯ ಸುಬ್ಬೇಗೌಡರು ಕಾಂಗ್ರೆಸ್ಸಿಗರು. ತಾಲ್ಲೂಕಿನ ಪ್ರಸಿದ್ಧಿ ಪಡೆದ ನಾಯಕರು. ಇವರಿಗೆ ಗೌಡರ ಬಗ್ಗೆ ಅಪಾರವಾದ ಗೌರವ. ಚುನಾವಣೆಯ ಕಾಲದಲ್ಲಿ ಸುಬ್ಬೇಗೌಡರು ಗೋಪಾಲಗೌಡರಿಗೆ ಹಣಕಾಸು ನೆರವನ್ನೂ ನೀಡುತ್ತಿದ್ದರು. ಅವರಿಗೆ ಇಂತಹ ಗುಪ್ತ ಅಭಿಮಾನಿಗಳು ಸಾಕಷ್ಟು ಜನ ಇದ್ದರು.

ಸಂಯುಕ್ತ ಸಮಾಜವಾದಿ ಪಕ್ಷದ ನಾಯಕರು ಭೂಗ್ರಹಣ ಚಳವಳಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭಿಸಿದ್ದರು. ಸರ್ಕಾರಿ ಭೂಮಿಯನ್ನು ಭೂಹೀನರು ಅತಿಕ್ರಮಣ ಮಾಡಿ ಸ್ವಾಧೀನಪಡಿಸಿಕೊಳ್ಳುವುದು ಇದರ ಉದ್ದೇಶ. ಈ ಚಳವಳಿ ಸಾಕಷ್ಟು ತೀವ್ರವಾಗಿ ನಡೆಯಿತು. ಆಗ ಶಿವಮೊಗ್ಗದಲ್ಲಿ ಆದಿರಾಜಯ್ಯ ಎಂಬುವವರು ಜಿಲ್ಲಾಧಿಕಾರಿಗಳಾಗಿದ್ದರು. ಇವರು ಈ ಚಳವಳಿಯನ್ನು ಕುರಿತು, ‘ಈ ಚಳವಳಿ ಸೋಗಿನ ಚಳವಳಿ’ ಎಂದು ಕುತ್ಸಿತ ಬುದ್ದಿಯಿಂದ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟರು.

ಆಗ ಬೆಂಗಳೂರಿನಲ್ಲಿದ್ದ ಗೋಪಾಲಗೌಡರು, ಜಿಲ್ಲಾಧಿಕಾರಿಯ ಉದ್ಧಟತನದ ಹೇಳಿಕೆಯನ್ನು ನೋಡಿ ಕೆರಳಿಕೆಂಡವಾದರು. ಕೂಡಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು, ಆ ಜಿಲ್ಲಾಧಿಕಾರಿಯನ್ನು ಕಂಡರು. ಆಗ ಜಿಲ್ಲಾಧಿಕಾರಿಗಳು ಕಛೇರಿಯಲ್ಲಿ ಕುಳಿತಿದ್ದರು. ಜಿಲ್ಲಾಧಿಕಾರಿಯನ್ನು ನೋಡಿದ ಗೌಡರು, ‘ಏನಯ್ಯಾ ಆದಿರಾಜಯ್ಯ, ಭೂಗ್ರಹಣ ಚಳವಳಿಯನ್ನು ಸೋಗಿನ ಚಳವಳಿ ಎಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದೀಯೇ! ಬೆಂಗಳೂರು ಡೈರಿಯಲ್ಲಿದ್ದು, ನೀನು ಎಷ್ಟು ಕೇಜಿ ಬೆಣ್ಣೆತಿಂದು ಬಂದಿದ್ದೀಯಾ ಎನ್ನುವುದು ನನಗೆ ಗೊತ್ತು. ನಮ್ಮ ಪಕ್ಷದ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಹೇಳಿಕೆ ಕೊಡಲು ನಿನಗೆಷ್ಟು ಸೊಕ್ಕು? ನಿನ್ನನ್ನು ಜಿಲ್ಲಾಧಿಕಾರಿ ಕುರ್ಚಿಯಿಂದ ನಾನೇ ಇಳಿಸುತ್ತೇನೆ’ ಎಂದು ಗುಡುಗಿ ತಮ್ಮ ವಾಕಿಂಗ್ ಸ್ಟಿಕ್‌ನ ಕೊಕ್ಕೆಯನ್ನು ಅವರ ಕುತ್ತಿಗೆಗೆ ಹಾಕಿ ಎಳೆಯಲು ಮುಂದಾದರು. ಆಗ ಅಲ್ಲಿದ್ದ ಗೌಡರ ಗೆಳೆಯರು ತುಂಬಾ ಪ್ರಯಾಸದಿಂದ ಬಿಡಿಸಿಕೊಳ್ಳಬೇಕಾಯಿತು. ಅಂದೇ ಶಿವಮೊಗ್ಗದ ಸಾರ್ವಜನಿಕ ಸಭೆಯಲ್ಲಿ ಜಿಲ್ಲಾಧಿಕಾರಿಯನ್ನು ಖಂಡಿಸಿದರು.

ಗೌಡರ ಕಳಂಕರಹಿತ ಜೀವನ ಮತ್ತು ಪ್ರಾಮಾಣಿಕತೆಯ ಎದುರು ಮಂತ್ರಿಗಳು, ಅಧಿಕಾರಿಗಲು ಹೆದರಿ ನಡುಗುತ್ತಿದ್ದ ಘಟನೆಗಳು ನೂರಾರಿದೆ.

ಸಮಾಜವಾದಿ ಯುವಜನ ಸಭಾದವರು ಸಾಗರದ ಪಡುವಗೋಡಿನಲ್ಲಿ ಹದಿನೈದು ದಿನಗಳ ಕಾಲ ಅಧ್ಯಯನ ಶಿಬಿರವನ್ನು ನಡೆಸಿದರು. ಗೋಪಾಲಗೌಡರು ಶಿಬಿರದಲ್ಲಿ ಒಂದು ದಿವಸ ಭಾಗವಹಿಸಿ ಭಾಷಣ ಮಾಡಿದರು. ಆ ದಿವಸ ಜಾತಿಪದ್ಧತಿ ಬಗ್ಗೆ ಚರ್ಚೆ ನಡೆಯಿತು. ಶಿಬಿರದ ವ್ಯವಸ್ಥಾಪಕರೆಲ್ಲಾ ಬ್ರಾಹ್ಮಣರು! ಗೌಡರು ಚರ್ಚೆಯ ವಿದ್ಯಮಾನಗಳನ್ನು ಮೌನವಾಗಿಯೇ ಆಲಿಸುತ್ತಿದ್ದರು. ಆ ಚರ್ಚೆ ತೀರ ವಿಕೋಪಕ್ಕೆ ಹೋದಾಗ ಗೌಡರು ಎದ್ದುನಿಂತು, ‘ಹುತ್ತದಲ್ಲಿ ಯಾವ ಹಾವು ಇದೆ ಎಂದು ಕೈಹಾಕಿ ತಿಳಿಯಲು ಹೋಗಬಾರದು, ಕಚ್ಚೀತು!’ ಎಂದು ಮಾರ್ಮಿಕವಾಗಿ ನುಡಿದು ಕುಳಿತರು. ಚರ್ಚೆ ಅಲ್ಲಿಗೆ ಮುಗಿಯಿತು.

೧೯೫೭-೫೮ರಲ್ಲಿ ನಾನು ಒಮ್ಮೆ ಗೋಪಾಲಗೌಡರನ್ನು ನಮ್ಮೂರಿಗೆ ಬರಬೇಕೆಂದು ಕೇಳಿಕೊಂಡೆ. ಅದರಂತೆ ನಮ್ಮೂರು ‘ಕುಗ್ವೆ’ಗೆ ಬಂದರು. ಗ್ರಾಮದ ಜನರೆಲ್ಲ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡರು. ಗೌಡರು ಅಂದಿನ ಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದರು. ಸಮಾಜವಾದ ಎಂದರೆ ಏನು? ಲೋಹಿಯಾ ಏನು ಹೇಳುತ್ತಾರೆ? ಕಾಂಗ್ರೆಸ್ ಪಕ್ಷದ ದೋಷಗಳು, ಭೂಸುಧಾರಣಾ ಕಾಯಿದೆಯಾಗಿ ಉಳುವವರೆ ಒಡೆಯರಾಗಬೇಕು. ಹೀಗೆ ಅನೇಕ ವಿಷಯಗಳನ್ನು ಜನರ ಮುಂದಿಟ್ಟರು. ತಮ್ಮ ಭಾಷಣದುದ್ದಕ್ಕೂ ಗಾದೆ, ಒಗಟು, ಚಾಟುನುಡಿಗಳನ್ನೇ ಹೆಚ್ಚಾಗಿ ಬಳಸಿ ಜನರನ್ನು ಆಕರ್ಷಿಸಿದರು.

ಕುಗ್ವೆ ಸಾಗರಕ್ಕೆ ತುಂಬಾ ಹತ್ತಿರವಿರುವ ಹಳ್ಳಿ. ಆದರೂ ಅತ್ಯಂತ ಹಿಂದುಳಿದ ಹಳ್ಳಿ, ಗೌಡರು ತಮ್ಮ ಭಾಷಣದಲ್ಲಿ, ‘ಕುಗ್ವೆ’ ಗ್ರಾಮ ಸಾಗರ ಪಟ್ಟಣಕ್ಕೆ ತುಂಬಾ ಹತ್ತಿರವಿದ್ದರೂ ದಿನೇ ದಿನೇ ಕುಗ್ರಾಮವಾಗುತ್ತಿದೆ, ಎಂದು ಹೇಳಿದರು. ಇಂದೂ ಕೂಡ ಕುಗ್ವೆಗ್ರಾಮ ಕುಗ್ರಾಮವಾಗಿಯೇ ಉಳಿದಿದೆ.