ಶಾಂತವೇರಿ ಗೋಪಾಲಗೌಡರು ಸಾರ್ವಜನಿಕವಾಗಿ ಮೊದಲು ಭಾಷಣಮಾಡಿ ಪ್ರಖ್ಯಾತರಾದದ್ದು, ಶಿವಮೊಗ್ಗೆಯ ಗಾಂಧೀಬಜಾರಿನ ರಾಮಣ್ಣ ಶೆಟ್ಟಿ ಪಾರ್ಕಿನಲ್ಲಿ. ಇವರು ಶಾಲಾಕಾಲೇಜಿನಲ್ಲೂ ತಮ್ಮ ಭಾಷಣದಿಂದ, ಶಿಕ್ಷಕ ವಿದ್ಯಾರ್ಥಿವೃಂದದಲ್ಲಿ ಹೆಸರಾಗಿದ್ದರು; ಭಾಷಣಕ್ಕೆ ನಿಂತರೆ, ಮೊದಲಿನಿಂದ ಕೊನೆತನಕ ಅತ್ಯಂತ ಗಾಂಭೀರ್ಯದಿಂದ, ಯಾವುದೇ ಅಡೆತಡೆ ಇಲ್ಲದೆ ಇಡೀ ಸಭೆ ಮಂತ್ರಮುಗ್ಧವಾಗುವಂತೆ ಮಾತಾಡುತ್ತಿದ್ದರು. ರಾಮಣ್ಣಶೆಟ್ಟಿ ಪಾರ್ಕಿನಲ್ಲಿ ಗೌಡರ ಭಾಷಣ ಕೇಳಿಸಿಕೊಳ್ಳುತ್ತಿದ್ದ ಪೋಲಿಸ್ ಅಧಿಕಾರಿಗಳು, ಗೌಡರನ್ನು ಬಂಧಿಸಲು ನೋಡಿದರು. ಗೌಡರು ಗುಡುಕ್ಕನೆ ವೇದಿಕೆಯಿಂದ ಕೆಳಕ್ಕೆ ಹಾರಿ, ಮಹಿಳೆಯೊಬ್ಬರು ಬಿಚ್ಚಿಕೊಟ್ಟ, ಸೀರೆ ಉಟ್ಟು, ಪೋಲಿಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾದರು. ಅನಂತರ ಇನ್ನೊಂದು ದಿನ, ಇವರು ಮತ್ತು ನನ್ನ ಸೋದರಮಾವ ಎಂ.ಆರ್. ಧರ್ಮಯ್ಯಗೌಡರು ಪೋಲಿಸರ ಕೈಗೆ ಸಿಕ್ಕಿಬಿದ್ದರು. ಇವಬ್ಬರೂ ಸ್ವಾತ್‌ರ ಚಳವಳಿಯಲ್ಲಿ ಹೋರಾಡುತ್ತಿದ್ದವರು. ಇಬ್ಬರಿಗೂ ಸೊಂಟದ ಕೆಳಗೆ ಗುಂಡಿಕ್ಕಬೇಕೆಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಆeಜೆ ಮಾಡಿದರು. ಈ ಇಬ್ಬರು ತರುಣರನ್ನು ಪೋಲಿಸು ವ್ಯಾನಿನಲ್ಲಿ ಮಧ್ಯರಾತ್ರಿಯಲ್ಲಿ ಮಂಡಗದ್ದೆ ಕಾಡಿಗೆ ಕರೆದುಕೊಂಡು ಹೋದ ಪೋಲೀಸರು, ಕರುಣೆತೋರಿ ಬಿಟ್ಟರು. ಆಗ ಮಂಡಗದ್ದೆ ಕಾಡು ದಟ್ಟವಾಗಿತ್ತು.ಹಗಲಿನಲ್ಲೇ ಜನ ಅಲ್ಲಿ ಓಡಾಡಲು ಹೆದರುತ್ತಿದ್ದರು. ಕೊಲೆ ಸುಲಿಗೆ, ದರೋಡೆ ಎಲ್ಲವೂ ಅಲ್ಲಿ ಮಾಮೂಲಾಗಿತ್ತು. ಹಗಲು ಹೊತ್ತಿನಲ್ಲಿಯೇ ಹುಲಿ, ಚಿರತೆಗಳು ರಸ್ತೆಯಲ್ಲಿ ಓಡಾಡುತ್ತಿದ್ದವು. ಆ ಕಗ್ಗತ್ತಲೆಯಲ್ಲಿಯೇ ರಾತ್ರಿ ಕಳೆದ ಈ ಎಳೆಹರೆಯದ ತರುಣರು ಬೆಳಿಗ್ಗೆ ಶಿವಮೊಗ್ಗೆಗೆ ಬೀಡಿ ಮಾರಲು ಹೋಗಿದ್ದ ತೀರ್ಥಹಳ್ಳಿಯ ಖಾದರ್‌ಸಾಹೇಬರ ಒಂಟೆತ್ತಿನ ಗಾಡಿ ಹಿಡಿದು ಊರು ಸೇರಿದರು.

ಬೆಳಗಾವಿಯನ್ನು ಮಹಾರಾಷ್ಟ್ರ ಕ್ಕೆ ಸೇರಿಸಬೇಕು; ಮಹಾಜನ್ ಆಯೋಗದ ವರದಿಯನ್ನು ಒಪ್ಪಲಿಕ್ಕಾಗುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ಧುರೀಣರು ಬೊಬ್ಬೆ ಇಟ್ಟಾಗ, ಅಂದಿನ ಪ್ರಧಾನಿ ಇಂದಿರಾಗಂಧಿಯವರಲ್ಲಿ, ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ಒಬ್ಬೊಬ್ಬ ವಿರೋಧಿನಾಯಕರ ಮುಖಂಡತ್ವದಲ್ಲಿ ದೆಹಲಿಗೆ ನಿಯೋಗ ಕಳಿಸಿತು. ಗೌಡರ ಮುಖಂಡತ್ವದಲ್ಲಿ ಒಂದು ನಿಯೋಗ ದೆಹಲಿಗೆ ಹೋಗಿತ್ತು. ಆ ಹೊತ್ತಿಗೆ ಗೌಡರ ಕಣ್ಣಿಗೆ ಕನ್ನಡಕವೂ, ಕೈಗೆ ಊರುಗೋಲು ಬಂದಿದ್ದವು; ಪಾರ್ಶ್ವವಾಯು ಬಡಿದು ಅವರು ಅದೇತಾನೇ ಚೇತರಿಸಿಕೊಂಡಿದ್ದರು. ದೆಹಲಿಗೆ ಹೋಗುವ ಮುಂಚೆ, ವಿಧಾನ ಸಭೆಯಲ್ಲಿ ವಿರೋಧಪಕ್ಷದ ಎಸ್. ಶಿವಪ್ಪನವರು ಮಾತನಾಡಬೇಕಿದ್ದಿತು. ಅವರ ಬದಲಿಗೆ ಗೌಡರು ಮಾತನಾಡಲಿ ಎಂದು ಆಡಳಿತಪಕ್ಷದವರಾದಿಯಾಗಿ ಎಲ್ಲ ಶಾಸಕರೂ ಹೇಳಿದರು. ಅಂದು ಗೌಡರು ಸುಮಾರು ಎರಡು ಗಂಟೆಕಾಲ ಮಾತನಾಡಿದರು. ಪ್ರಜಾವಾಣಿ ಪತ್ರಿಕೆ “ಗೌಡರ ಭಾಷಣವನ್ನು ಸಭೆ ಆನಂದದಿಂದ ಆಲಿಸಿತು’’ ಎಂದು ಮುಖಪುಟದಲ್ಲಿ ಬರೆಯಿತು.

ಗೌಡರ ಭಾಷಣ ತಿಳಿಹಾಸ್ಯ, ವ್ಯಂಗ್ಯದಿಂದ ತುಂಬಿರುತ್ತಿತ್ತು. ಒಮ್ಮೆ ಗೌಡರು ತೀರ್ಥಹಳ್ಳಿ ಕ್ಷೇತ್ರದಲ್ಲಿ ಚುನಾವಣಾ ಭಾಷಣ ಮಾಡುವಾಗ, ಕಾಂಗ್ರೆಸ್ ಪಕ್ಷದವರು ಗೌಡರ ಭಾಷಣಕ್ಕೆ ಅಡ್ಡಪಡಿಸಿ, ಗಲಾಟೆ ಮಾಡಿದರು. ಗೌಡರು, “ಒಂಟೆಗಳ ಮದುವೆಯಲ್ಲಿ ಕತ್ತೆಗಳೇ ಗಾಯಕರು’’ ಎಂದು ಲೇವಡಿ ಮಾಡಿ, ಸಭೆಯಲ್ಲಿ ನಗೆಯ ಅಲೆ ಎಬ್ಬಿಸಿದ್ದರು.

ಗೌಡರು ಮದುವೆಯಾದ ಹೊಸದರಲ್ಲಿ ನಾನು, ಕೋಣಂದೂರು ಲಿಂಗಪ್ಪನವರು, ಗೌಡರು, ಸೋನಕ್ಕನವರೊಂದಿಗೆ ಮಹಾತ್ಮಾಗಾಂಧಿ ರಸ್ತೆಕಡೆಗೆ ಒಮ್ಮೆ ನಡೆದುಕೊಂಡು ಹೋಗುತ್ತಿದ್ದೆವು. ಗೌಡರು ದಾರಿಯಲ್ಲಿ ಹೆಂಡತಿಗೆ, “ಹಣ ಇಲ್ಲದೆ ಈ ದೇಶದಲ್ಲಿ ನನ್ನಂತಹವರು ಚುನಾವಣೆಗೆ ನಿಲ್ಲೋದು ಕಷ್ಟ. ಅಮ್ಮಾವರು ಎರಡು ಎಮ್ಮೆ ತೆಗೆಸಿಕೊಟ್ಟರೆ, ರಾಜಕೀಯ ಬಿಟ್ಟು ಹಾಲುಮಾರಿಕೊಂಡು ಜೀವನ ಮಾಡುತ್ತೀನಿ’’ ಎಂದು ಹಾಸ್ಯಮಾಡಿದರು. ಮತ್ತೊಂದು ದಿನ ಸೋನಕ್ಕನವರಿಗೆ “ನನ್ನ ಜುಬ್ಬ ಹರಿದು ಹೋಗಿದೆ. ಎರಡು ಜೊತೆ ಜುಬ್ಬ ಮಂಜೂರು ಮಾಡುತ್ತಾರೇನೋ ಅಮ್ಮಾವರು ನೋಡಬೇಕು…’’ ಎಂದರು. ಗೌಡರು ತಡವಾಗಿ ಮದುವೆಯಾಗಿದ್ದರು. “ಮದುವೆಯಾದರೆ, ಮನೆಮಠ ಮಾಡಬೇಕು, ಆಸ್ತಿ ಮಾಡಬೇಕು ಅಂತ ಆಸೆ ಆಗುತ್ತೆ. ಆದ್ದರಿಂದ ಮದುವೆ ಬೇಡ’’ ಎನ್ನುತ್ತಿದ್ದರು.

ಗೌಡರ ಹೇಳಿಕೆಗಳು, ನಡೆನುಡಿ ಜನರಿಗೆ ಒಮ್ಮೊಮ್ಮೆ ವಿವಾದಾಸ್ಪದವಾಗಿ ಕಾಣುತ್ತಿದ್ದವು. ಆದರೆ ತಡವಾಗಿ ಗೌಡರ ನಡವಳಿಕೆ ಅರ್ಥವಾಗುತ್ತಿತ್ತು. ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ದಸರಾದಲ್ಲಿ ಅಂಬಾರಿ ಸವಾರಿ ಮಾಡುವಾಗ, ಗೌಡರು ಕಪ್ಪುಬಾವುಟ ತೋರಿಸಿ ಬಂಧನಕ್ಕೊಳಗಾಗಿದ್ದು. ರಾಜಾಳ್ವಿಕೆಯನ್ನು ಒಪ್ಪಿಕೊಂಡವರಿಗೆ ಗೌಡರ ನಡವಳಿಕೆ ಸರಿಕಂಡಿರಲಿಲ್ಲ. ೧೯೬೭ರಲ್ಲಿ ಚಿಕ್ಕಮಗಳೂರಿನಲ್ಲಿ ಹಿಂದೂ ಮುಸ್ಲಿಂ ಕೋಮುಗಲಭೆಯಾಯಿತು. ಗೌಡರು ಹಿಂದೂಗಳಿಂದ ಮುಸ್ಲಿಮಂರಿಗೆ ಅನ್ಯಾಯವಾಗಿದೆ ಅಂತ ಹೇಳಿಕೊಟ್ಟರು. ಇದರಿಂದ ಹಿಂದೂಗಳು ಗೌಡರ ಮೇಲೆ ಅಸಮಧಾನ ತಾಳಿದ್ದರು.

ಗೌಡರು ಸಾಹಿತ್ಯ ಸಂಗೀತದ ಪ್ರೇಮಿಗಳು. ಒಬ್ಬರೇ ಇದ್ದಾಗ ಪುಸ್ತಕವನ್ನೋದುವುದೋ ಯಾವುದಾದರೂ ಭಾವಗೀತೆಗಳನ್ನು ಗುನುಗುತ್ತಾ ಚಿಟಿಕೆ ಹಾಕುವುದೋ ಮಾಡುತ್ತಿದ್ದರು. ಒಂದು ಸಾರಿ ಅವರು ತೀರ್ಥಹಳ್ಳಿ ಪ್ರವಾಸಿ ಬಂಗಲೆಯಲ್ಲಿದ್ದರು. ನಾನು ಮತ್ತು ಅವರ ಸ್ನೇಹಿತರಾದ ಬಿ.ವಿ. ಮೂರ್ತಿಯವರು ಅವರನ್ನು ನೋಡಲು ಹೋದೆವು. ಆಗಲೇ ಗಂಟೆ ಒಂದಾಗಿತ್ತು. ಗೌಡರು ಬೀಚಿಯವರ ಪುಸ್ತಕ ಓದುತ್ತಾ ಮಲಗಿದ್ದರು. ಗೌಡರು ನಮ್ಮನ್ನು ನೋಡಿ “ಯಾರೋ ಬಡವರು ಈಗ ನನ್ನನ್ನು ಊಟಕ್ಕೆ ಕರೆದಿದ್ದಾರೆ. ನಾವು ಮೂರು ಜನ ಹೋದರೆ ಅವರಿಗೆ ತೊಂದರೆಯಾಗಬಹುದು. ನನ್ನ ಹತ್ತಿರ ಎರಡು ರೂಪಾಯಿ ಇದೆ. ನಿಮ್ಮ ಹತ್ತಿರ ಹಣ ಇದ್ದರೆ ಸೇರಿಸಿಕೊಂಡು ಹೋಟೆಲ್‌ನಲ್ಲಿ ಊಟಮಾಡಿ. ನಾನು ಊಟಮಾಡಿಕೊಂಡು ಬರುತ್ತೇನೆ’’ ಎಂದು ಹೊರಟರು ಆಗ ಊಟದ ಬೆಲೆ ಒಂದು ರೂಪಾಯಿ ಇದ್ದ ನೆನಪು. ಗೌಡರು ಊಟಮಾಡಿಕೊಂಡು ಬಂದವರೇ ಓದುತ್ತಾ ಮಲಗಿದರು.

ಆಗ ಒಂದು ಘಟನೆ ನಡೆಯಿತು. ಲೋಕೋಪಯೋಗಿ ಕಛೇರಿ ಅಧೀಕ್ಷಕರು ಬಂದು ಗೌಡರಿಗೆ, ನಾಳೆ ಇಲಾಖೆಯ ಸಚಿವರು ಬರುವರೆಂದು, ತಾವು ರೂಮು ಖಾಲಿ ಮಾಡಬೇಕೆಂದೂ ಹೇಳಿದರು. ಗೌಡರು, “ಸಚಿವರು ಬಂದರೆ ನಾನ್ಯಾಕೆ ರೂಮು ಖಾಲಿಮಾಡಬೇಕರಿ?’’ ಅವರಂತೆ ನಾನೂ ಸಾರ್ವಜನಿಕರಿಂದ ಆಯ್ಕೆ ಆದವನು. ನಾನೂ ಇಲ್ಲೇ ಇರುತೀನಿ ಎಂದರು. ಅವರು ಹೋದ ನಂತರ ಇಂಜನಿಯರೊಬ್ಬರು ಬಂದು ಅದೇ ಹಾಡು ಹಾಡಿದರು: ಗೌಡರು ರೇಗಿ, ಸಚಿವರು ಎಷ್ಟು ರೂಂನಲ್ಲಿ ಮಲಗತಾರ್ರಿ? ನಾನ್ಯಾಕೆ ರೂಮು ಖಾಲಿ ಮಾಡಬೇಕು? ನಿಮಗೇನು ಬುದ್ಧಿ ಇದೆಯೇನ್ರಿ? ಸುಮ್ಮನೇ ಹೋಗ್ತಿರೋ ಇಲ್ಲವೋ?’’ ಎಂದು ಗುಡುಗಿದರು. ಇಂಜಿನಿಯರ್ ಬಾಯಿ ಮುಚ್ಚಿಕೊಂಡು ಹೋದರು. ಮರುದಿನ ಬೆಳಿಗ್ಗೆ ಲೋಕೋಪಯೋಗಿ ಸಚಿವ ವೀರೇಂದ್ರ ಪಾಟೀಲರು ಗೌಡರನ್ನು ಕಾಣಲು ಅವರ ರೂಮಿಗೆ ಬಂದರು. ಗೌಡರು ಯಾರೇ ಮಂತ್ರಿ ಮುಖ್ಯಮಂತ್ರಿಗಳನ್ನು ನೋಡಲಿಕ್ಕೆ ಹೋಗುತ್ತಿರಲಿಲ್ಲ. ಏನಿದ್ದರೂ ಫೋನ್ ಮಾಡಿ ಮಾತನಾಡುತ್ತಿದ್ದರು. ಕೆಲಸ ಆಗದೆ ಇದ್ದರೆ ರೇಗಿ ಉಗಿದು ದಬಾಯಿಸುತ್ತಿದ್ದರು. ಪಾಟೀಲರಿಗೆ ಗೌಡರು, “ಏನ್ ಮಾರಾಯ್ರೆ ನೀವು ಅದೆಷ್ಟು ರೂಂನಲ್ಲಿ ಮಲಕ್ಕೊಳ್ಳುತ್ತೀರಿ? ನಿನ್ನೆಯಿಂದ ನಿಮ್ಮ ಇಲಾಖೆಯವರು ನನಗೆ ರೂಂ ಖಾಲಿಮಾಡಿ, ರೂಂ ಖಾಲಿ ಮಾಡಿ ಅಂತ ಹಿಂಸೆ ಕೊಡುತ್ತಿದ್ದಾರೆ. ಅವರೆಲ್ಲ ನನ್ನನ್ನು ಏನು ಅಂತ ತಿಳಿದುಕೊಂಡಿದ್ದಾರೆ?’’ ಎಂದರು. ಪಾಟೀಲರು ಆ ಇಂಜನಿಯರನ್ನು ಕರೆಸಿ ಛೀಮಾರಿ ಹಾಕಿದರು.

ಗೌಡರು, ಹೇಳಿದ ಕೆಲಸವನ್ನು ಮಾಡದಿದ್ದರೆ, ಸಂಬಂಧಿಸಿದ ಅಧಿಕಾರಿಗೆ ಫೋನ್ ಎತ್ತಿಕೊಂಡು ದಬಾಯಿಸುತ್ತಿದ್ದರು. ನನ್ನ ಸಂಬಂಧಿ ಸ್ನೇಹಿತರೊಬ್ಬರು ಬಿ.ಇ. ಪರೀಕ್ಷೆಯಲ್ಲಿ ಫೇಲಾಗಿದ್ದರು. ಮತ್ತೆ ಪರೀಕ್ಷೆ ಕಟ್ಟಿ ಪಾಸಾದ ಮೇಲೆ ಮುಂದಿನ ತರಗತಿಗೆ ಸೇರಲು ಐದಾರು ತಿಂಗಳು ಕಾಲಾವಕಾಶ ಇತ್ತು. ಬೆಂಗಳೂರಿನಲ್ಲಿ ವ್ಯರ್ಥ ಕಾಲಕಳೆಯುವ ಬದಲು ಎಲ್ಲಿಯಾದರೂ ಕೆಲಸಕ್ಕೆ ಸೇರೋಣ ಎಂದು ಗೌಡರನ್ನು ಕಂಡರು. ಬೆಂಗಳೂರಿನ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ ಎಂದೂ, ಅಲ್ಲಿನ ನಿರ್ದೇಶಕರಿಗೆ ಒಂದು ಮಾತು ಹೇಳಬೇಕೆಂದು ಕೇಳಿದರು. ಗೌಡರು, “ನಿಮ್ಮ ಮನೆಯವರೆಲ್ಲಾ ಚುನಾವಣೇಲಿ ನನಗೆ ವಿರೋಧವಾಗಿ ಕೆಲಸ ಮಾಡಿದ್ದಾರೆ. ಪರವಾಗಿಲ್ಲ ಬಿಡು. ನಿರ್ದೇಶಕರಿಗೆ ನಿನ್ನ ಪರವಾಗಿ ಹೇಳುತ್ತೀನಿ’’ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕರಿಗೆ ಫೋನ್ ಮಾಡಿ ಹೇಳಿದರು. ಹುಡುಗನನ್ನು ಕಳುಹಿಸಿ, ಕೆಲಸ ಕೊಡ್ತೇನೆ ಎಂದರು. ಆದರೆ ನನ್ನ ಸಂಬಂಧಿ ಹೋದಾಗ ನಿರ್ದೇಶಕರು, “ಬಿ.ಇ. ಮುಗಿಸು, ಈ ಗುಮಾಸ್ತೆ ಹುದ್ದೆಯಾಕೆ?’’ ಎಂದು ವಾಪಸ್ ಕಳಿಸಿದರು. ಸುದ್ದಿ ಕೇಳಿದ ಗೌಡರು ನಿರ್ದೇಶಕರಿಗೆ “ನಿಂದೇನು ನಾಲಿಗೇನೋ? ಚಪ್ಪಲೀನೋ? ಸುಳ್ಳು ಬೇರೆ ಹೇಳ್ತೀಯಾ?’’ ಎಂದು ಉಗಿದು ಉಪ್ಪು ಹಾಕಿದರು.

ಶಿವಮೊಗ್ಗೆಯ ಶಾಮರಾವ್ ಎಂಬುವರ ಮಗ ಪಿ.ಯು.ಸಿ. ಪರೀಕ್ಷೆಯಲ್ಲಿ ತೊಂಬತ್ತನಾಲ್ಕು ಪರ್ಸೆಂಟ್ ಅಂಕಗಳನ್ನು ತೆಗಿದಿದ್ದು, ಆತನಿಗೆ ಡಾಕ್ಟರ್ ಆಗುವ ಆಸೆಯಿತ್ತು. ಆದರೆ ಅವನಿಗೆ ಎಂ.ಬಿ.ಬಿ.ಎಸ್ ಗೆ ಸೀಟು ಸಿಗಲಿಲ್ಲ. ಆಗ ಈಗಿನಂತೆ ಸಿ.ಇ.ಟಿ. ಇರಲಿಲ್ಲ. ಪಿ.ಯು.ಸಿ. ಪರೀಕ್ಷೆಯ ನಂಬರಿನ ಮೇಲೆ ಮತ್ತು ಪ್ರಭಾವದ ಮೇಲೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಸಿಗುತ್ತಿತ್ತು. ತಮ್ಮ ಮಗನಿಗೆ ವೈದ್ಯಕೀಯ ಕಾಲೇಜಿಗೆ ಸೀಟು ಸಿಗದಿದ್ದರಿಂದ ಶಾಮರಾಯರು ಗೌಡರನ್ನುಕಂಡರು. ವಿಷಯ ತಿಳಿದ ಗೌಡರುಕೆಂಡಮಂಡಲವಾದರು. ಸಂಬಂಧಿಸಿದ ಡೈರೆಕ್ಟರಿಗೆ ಫೋನಿನಲ್ಲಿ, “ನೀವು ಈ ಹುಡುಗನಿಗೆ ಸೀಟು ಕೊಡದೆ ಇನ್ನು ಯಾರಿಗ್ರಿ ಕೊಡೋದು! ಈವೊತ್ತು ಸಾಯಂಕಾಲದೊಳಗೆ ಹುಡುಗನಿಗೆ ಸೀಟು ಕೊಡದೇ ಇದ್ದರೆ, ನಿಮ್ಮ ತಲೆ ಮೇಲೆ ನನ್ನ ವಾಕಿಂಗ್ ಸ್ಟಿಕ್ ಆಡತದೆ. ಹುಶಾರ್’’ ಎಂದರು. ಸಂಜೆ ಆ ಹುಡುಗನಿಗೆ ಸೀಟು ಸಿಕ್ಕಿದ ಬಗ್ಗೆ ನೋಟಿಸ್ ಬೋರ್ಡಿನಲ್ಲಿ ಪ್ರಕಟವಾಗಿತ್ತು. ಆ ಹುಡುಗ ಆಮೇಲೆ ವೈದ್ಯನಾದ.

ನಮ್ಮೂರಿನ ರಂಗಪ್ಪ ಹೆಗ್ಗಡೆ ಎಂಬುವವರು ಕಾಂಗ್ರೆಸ್ಸಿನ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಗೌಡರಿಗೂ ಅವರು ಬಹಳ ಪರಿಚಿತರು. ಗೌಡರು ಅವರಿಗೆ, “ರಂಗಪ್ಪ, ನೀನು ಬೇಕಾದರೆ, ಮುಸ್ಲಿಂಲೀಗ್ ಸೇರು. ಆದರೆ ಕಾಂಗ್ರೆಸ್ಸಿಗೆ ಮಾತ್ರ ಸೇರಬೇಡ’’ ಎಂದು ತಿಳಿವಳಿಕೆ ಹೇಳುತ್ತಿದ್ದರು. ಕಾಂಗ್ರೆಸ್ ಪಕ್ಷ ಎಂದರೆ ಗೌಡರು ಉರಿದು ಬೀಳುತ್ತಿದ್ದರು.