ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ – ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ : ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚರರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲು ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತ, ವಿವರಿಸುತ್ತ ಬಂದಿದೆ. ಅಂದರೆ : ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಜನಪರ ಕಾಳಜಿಯ ಮುಖಾಂತರವಾಗಿ ಶಾಂತವೇರಿ ಅವರು ವೈಯಕ್ತಿಕವಾಗಿ ಲೋಹಿಯಾ ಅವರಿಗೆ ತೀರ ಸಮೀಪರಾದದ್ದು, ಕರ್ನಾಟಕವನ್ನು ರಾಷ್ಟ್ರದಲ್ಲಿ ಪರಿಚಯಿಸಿದ್ದು ಇತಿಹಾಸ ಕೂಡ. ತಮ್ಮ ಸುತ್ತಲಿನ ಶೋಷಿತ ಜನರ ಬದುಕಿನ ಬವಣೆಯಿಂದ ಬೇಸರಗೊಂಡು ಶಾಂತವೇರಿ ಅವರು ಶಿವಮೊಗ್ಗ ಸುತ್ತಲಿನ ಯುವಕರನ್ನು ಸಂಘಟಿಸುವುದರ ಮೂಲಕ ಕರ್ನಾಟಕದಲ್ಲಿ ರೈತ ಚಳವಳಿಗೆ ನಾಂದಿ ಹಾಡಿದವರು. ಜಮೀನ್ದಾರರ ಮುಷ್ಟಿಯಿಂದ ಗೇಣಿದಾರರನ್ನು ಬಿಡುಗಡೆಗೊಳಿಸುವುದರ ಮೂಲಕ ಚಳವಳಿಯನ್ನು ಫಲಕಾರಿಯಾಗುವಂತೆ ಮಾಡಿದ್ದು ಅವರ ವೈಯಕ್ತಿಕ ಸಾಧನೆ ಕೂಡ. ಕೃಷಿ ಭೂಮಿಯಲ್ಲಿನ ರೈತ ಮೆರವಣಿಗೆಯಲ್ಲಿ ಬರುತ್ತಾನೊ ಇಲ್ಲವೊ ಗೊತ್ತಿಲ್ಲ, ತಾನು ಮಾತ್ರ ಅವರ ಪ್ರತಿನಿಧಿಯಾಗಿ ಸರಕಾರದೊಂದಿಗೆ ಸಂಘರ್ಷಿಸಿ ತಲತಲಾಂತರದಿಂದ ಬಂದ ಗೇಣಿದಾರಿ ಪದ್ಧತಿಯಿಂದ ಮುಕ್ತಗೊಳಿಸಿ ಕೃಷಿಕರಿಗೆ ಭೂಮಿಯನ್ನು ಒದಗಿಸಿಕೊಟ್ಟವರು ಶಾಂತವೇರಿ ಗೋಪಾಲಗೌಡರು. ಉಳುವವನೆ ಹೊಲದೊಡೆಯ ಎಂಬು ಘೋಷಣೆಯನ್ನು ಸಾಕಾರಗೊಳಿಸಿದರು ಕೂಡ. ವ್ಯಕ್ತಿಗತ ಅಭಿವೃದ್ಧಿಗೊಂಡ ಸಮುದಾಯದ ಒಳಿತನ್ನು ಗೌಡರು ಹೆಚ್ಚಾಗಿ ಗೌರವಿಸಿದರು. ಔಪಚಾರಿಕ ಸಂಪ್ರದಾಯಕ್ಕಿಂತ, ವಾಸ್ತವ ಬದುಕಿನ ಸತ್ಯದ ಬಗೆಗೆ ಅಪಾರ ಕಾಳಜಿಯನ್ನು ಗೌಡರು ಹೊಂದಿದ್ದರು. ಹದಿನೈದು ವರ್ಷಗಳ ಕಾಲ ಕರ್ನಾಟಕ ಸರಕಾರದಲ್ಲಿ ಶಾಸಕರಾಗಿ ಅಪೂರ್ವವಾದ ಕೆಲಸವನ್ನು ಅವರು ಮಾಡಿದ್ದಾರೆ. ಭ್ರಷ್ಟಾಚಾರವನ್ನು ವಿರೋಧಿಸುತ್ತಿದ್ದ ಶಾಂತವೇರಿ ಅವರಿಗೆ ಹಣಬಲ ಇರಲಿಲ್ಲ, ಆದರೆ ಜನಬಲ ಇತ್ತು. ನಲವತ್ತೊಂಬತ್ತು ವರ್ಷಗಳ ಅವರ ಜೀವಿತಾವಧಿಯಲ್ಲಿ ಜನ ಮರೆಯದಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆ ಇರಿಸಿಕೊಂಡವರಿಗೆ ಶಾಂತವೇರಿ ಅವರು ಸ್ಫೂರ್ತಿಯಾಗುತ್ತಾರೆ, ನೇತಾರರಾಗುತ್ತಾರೆ, ಮಾದರಿಯಾಗುತ್ತಾರೆ ಕೂಡ. ಶಾಂತವೇರಿ ಕುರಿತ ಈ ಪುಸ್ತಕ ಎರಡನೇ ಮುದ್ರಣಗೊಳ್ಳುತ್ತಿರುವುದಕ್ಕೆ ಶಾಂತವೇರಿ ಅವರ ವ್ಯಕ್ತಿತ್ವ ಹಾಗೂ ಸಾಧನೆಯೇ ಕಾರಣ. ಸಮುದಾಯದ ಸ್ವಾಸ್ತ್ಯದ ಬಗೆಗೆ ಅವರಧತೆ ಕಾರಣ. ಈ ಬದ್ಧತೆಯಿಂದಾಗಿಯೂ ಅವರು ಶಾಂತವೇರಿಯಲ್ಲಿ ತಮ್ಮದೇ ಆದ ಮನೆ ಮಠ ಕಟ್ಟಿ ಉಳಿಸಿ ಹೋಗಿಲ್ಲ. ಬದಲಾಗಿ ಆ ಪ್ರದೇಶದ ಜನರ ಬದುಕನ್ನು ಕಟ್ಟಿ ಹೋಗಿದ್ದಾರೆ.

‘ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ’ವನ್ನು ಅರ್ಥಪೂರ್ಣವಾಗಿ ಸಂಪಾದಿಸಿಕೊಟ್ಟ ಕನ್ನಡದ ಹಿರಿಯ ಚಿಂತಕ ಡಾ. ಕಾಳೇಗೌಡ ನಾಗವಾರ ಅವರಿಗೆ ಮತ್ತು ಡಾ. ಜಿ.ವಿ. ಆನಂದಮೂರ್ತಿ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಉಪಯುಕ್ತ ಲೇಖನಗಳನ್ನೊಳಗೊಂಡ ಈ ಸಂಪುಟವನ್ನು ಪ್ರಕಟಿಸಲು ಶ್ರಮಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಅಭಾರಿಯಾಗಿದ್ದೇನೆ.

ಡಾ. . ಮುರಿಗೆಪ್ಪ
ಕುಲಪತಿ