ನನ್ನ ತಮ್ಮ ಗೋಪಾಲಗೌಡ ಮಲೆನಾಡು ಪ್ರಾಂತ್ಯದಲ್ಲಿ, ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಬೆಳಕಿಗೆ ಬಂದಿದ್ದು, ೧೯೪೨ರ ಸ್ವಾತಂತ್ರ್ಯ ಚಳವಳಿಯ ಮೂಲಕ.

ಗೋಪಾಲನ ಜೊತೆನೂ ಕೆಲವು ಹುಡುಗರು ಸೇರಿಕೊಂಡು, ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗಿದ್ದ ಟೆಲಿಗ್ರಾಫ್ ತಂತಿಗಳನ್ನು ಕಿತ್ತುಹಾಕಿದರು. ಸರ್ಕಾರವು ಇವರನ್ನೆಲ್ಲ ಜೈಲಿಗೆ ಹಾಕಿತು. ಆಗ ನಾನು ಶಿಕಾರಿಪುರದಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ವಿಷಯ ತಿಳಿದು, ಶಿವಮೊಗ್ಗ ಜೈಲಿಗೆ ಹೋಗಿ ಅವನನ್ನು ಕಂಡೆ. “ನಾನು ನಿನ್ನನ್ನು ಬಿಡಿಸಲು ಜಾಮೀನು ಮುಚ್ಚಳಿಕೆ ಬರೆದುಕೊಟ್ಟು ಜೈಲಿನಿಂದ ಬಿಡುಸ್ತೇನೆ. ನೀನು ಹೊರಬಂದು ನಿನ್ನ ವಿದ್ಯಾಭ್ಯಾಸವನ್ನು ಮುಂದುವರೆಸು’’ ಎಂದು ಹೇಳಿದೆ. ಆದರೆ, ಅವನು ಮಾತ್ರ ನನ್ನ ಮಾತಿಗೆ ಒಪ್ಪಲಿಲ್ಲ. “ನಾನು ಸ್ವಾತಂತ್ರ್ಯ ಚಳವಳಿಯಲ್ಲಿ ಇಳಿದಿದ್ದೇನೆ. ಅಲ್ಲಿಂದ ಹಿಂದಿರುಗಿ ಬರುವುದಿಲ್ಲ’’ ಎಂದು ಉತ್ತರಿಸಿಬಿಟ್ಟ. ನನ್ನ ಮಾತಿಗೆ ಬೆಲೆ ಕೊಡಲೇ ಇಲ್ಲ. ಆಗಿನ್ನೂ ಅವನಿಗೆ ಇಪ್ಪತ್ತು ವರ್ಷ ಕೂಡ ಆಗಿರಲಿಲ್ಲ.

ಮುಂದೆ ಹೇಗೋ ಜೈಲಿನಿಂದ ಬಿಡುಗಡೆಯಾಗಿ ಹೈಸ್ಕೂಲು ಸೇರಿದ. ಹಾಗೂ ಹೀಗೂ ಎಸ್.ಎಸ್.ಎಲ್.ಸಿ. ಮುಗಿಸಿದ. ಮುಂದಿನ ಓದಿಗಾಗಿ ಶಿವಮೊಗ್ಗಕ್ಕೆ ಬಂದ. ಆತನ ಓದಿಗೆ ಹಣದ ಸಹಾಯ ಮಾಡಲು ಆಗ ನನ್ನಿಂದಾಗಲಿಲ್ಲ. ಏಕೆಂದರೆ, ನಾನು ನನ್ನ ತಂದೆತಾಯಿ ಮತ್ತುನನ್ನ ಸಂಸಾರವನ್ನು ನನಗೆ ಬರುತ್ತಿದ್ದ ಅಲ್ಪ ಸಂಬಳದಲ್ಲೇ ನೋಡಿಕೊಳ್ಳಬೇಕಾಗಿತ್ತು.

೧೯೪೭ರಲ್ಲಿ ಸ್ವಾತಂತ್ರ್ಯ ಆಂದೋಲನ ಬಿರುಸಾಗಿ ನಡೆಯುತ್ತಿತ್ತು. ಆಗ ಇವನು ಎರಡನೆಯ ಇಂಟರ್‌ಮೀಡಿಯಟ್ ಓದುತ್ತಿದ್ದ. ಶಿವಮೊಗ್ಗದಲ್ಲಿ ಇವನು ಎಲ್ಲರ ಗಮನ ಸೆಳೆದ ಸ್ವಾತಂತ್ರ್ಯ ಹೋರಾಟಗಾರನ್‌ದ. ದಿವಸಕ್ಕೊಂದು ವೇಷ ಹಾಕಿಕೊಂಡು ಶಿವಮೊಗ್ಗದ ರಾಮಣ್ಣಶೆಟ್ಟಿ ಪಾರ್ಕಿನಲ್ಲಿ ಭಾಷಣ ಮಾಡುತ್ತಿದ್ದ. ಇವನ ಎಲ್ಲಾ ಭಾಷಣಗಳೂ ಆಳುವ ಸರ್ಕಾರದ ವಿರುದ್ಧವಾಗಿರುತ್ತಿದ್ದವು. ಆದ್ದರಿಂದ ಪೊಲೀಸರು ಇವನಿಗೋಸ್ಕರ ಎಲ್ಲಾ ಕಡೆ ಹುಡುಕುತ್ತಿದ್ದರು. ಆದರೂ ಸಿಕ್ಕಿರಲಿಲ್ಲ.

ನಮ್ಮ ತಂದೆ ಟಿ. ಕೊಲ್ಲೂರಯ್ಯಗೌಡ, ತಾಯಿ ಶೇಷಮ್ಮ. ನಮ್ಮ ತಂದೆಯವರಿದ್ದ ಅವಿಭಕ್ತ ಕುಟುಂಬ ಪಾಲಾದ ಮೇಲೆ, ನಮ್ಮ ತಂದೆಯ ಪಾಲಿಗೆ ಎಂಟು ಎಕರೆ ಜಮೀನು ಆರಗದ ಕೆರೆ ಹಿಂಭಾಗದಲ್ಲಿ ಬಂದಿತ್ತು. ಮತ್ತು ಅರ್ಧ ಎಕರೆ ಬಾಗಾಯ್ತನ್ನು ಕಡೆಗದ್ದೆಯಲ್ಲಿ ಕೊಟ್ಟಿದ್ದರು. ಈ ಬಾಗಾಯ್ತಿನಿಂದ ನನ್ನ ತಂದೆಯವರಿಗೆ ಯಾವ ಉತ್ಪತ್ತಿಯೂ ಇರಲಿಲ್ಲ. ಆಗ ವಿಲೇಜ್ ಪೋಸ್ಟ್ ಮ್ಯಾನ್ ಆಗಿದ್ದ ನಮ್ಮ ತಂದೆಗೆ, ಎಂಟೋ ಹತ್ತೋ ರೂಪಾಯಿ ಸಂಬಳ ಬರುತ್ತಿತ್ತು. ಈ ಕೆಲಸದಿಂದಾಗಿ ನಮ್ಮ ಜಮೀನನ್ನು ನೋಡಿಕೊಳ್ಳುವುದು ನಮ್ಮ ತಂದೆಗೆ ಸಾಧ್ಯವಿರಲಿಲ್ಲ. ನಮ್ಮ ಎಲ್ಲಾ ಆಸ್ತಿಯು ಶೀರ್ನಾಳಿ ಸಾಹುಕಾರರಿಗೆ ಕ್ರಯವಾಗಿ ಹೋಯಿತು; ಅಂದಿನಿಂದ ನಾವೂ ಗೇಣಿದಾರರಾದೆವು.

ಈ ಆಸ್ತಿಯೆಲ್ಲಾ ಕ್ರಯವಾದದ್ದು, ಕೇವಲ ಹನ್ನೆರಡು ಸಾವಿರ ರೂಪಾಯಿ ಸಾಲಕ್ಕಾಗಿ. ನಮ್ಮ ದೊಡ್ಡಪ್ಪನವರಾದ ಲೋಕಪ್ಪಗೌಡರು ಶೀರ್ನಾಲಿ ಸಾಹುಕಾರರಿಂದ ಸಾಲಪಡೆದಿದ್ದರು. ಸಾಲ ತೀರಿಸಲಿಲ್ಲವಾದ್ದರಿಂದ ನಮ್ಮ ಜಮೀನು ಅವರಿಗೆ ಕ್ರಯವಾಯಿತು. ನಮ್ಮ ದೊಡ್ಡಪ್ಪನವರು ಮಾಡಿದ್ದ ಸಾಲದಲ್ಲಿ, ನಮ್ಮ ತಂದೆಯವರು ಒಂದು ಪೈಸೆಯನ್ನೂ ಪಡೆದವರಲ್ಲ. ಈ ಕ್ರಯಪತ್ರವಾದ ನಂತರ, ಶೀರ್ನಾಳಿ ಸಾಹುಕಾರರ ಪರವಾಗಿದ್ದ ಸುಬ್ಬಾಶಾಸ್ತ್ರೀಯವರು iಮ ತಂದೆಗೆ ಸುಳ್ಲು ಹೇಳಿಕೊಟ್ಟು, ಅರ್ಧ ಬಾಗಾಯ್ತನ್ನು ನಮ್ಮ ಸಂಬಂಧಿ ಪುಟ್ಟಣ್ಣಗೌಡ ಎಂಬುವವರಿಗೆ ಕೊಡಿಸಿದರು. ನಮ್ಮ ಮನೆಯ ಕಥೆಯಂತೆಯೇ, ಮಲೆನಾಡಿನ ಬಹುಪಾಲಿ ರೈತರ ಕಥೆಯೂ ಆಗಿದೆ. ಆಗ ಗೋಪಾಲನಿಗೆ ಇನ್ನೂ ಒಂಬತ್ತು ವರ್ಷ, ಆ ವಯಸ್ಸಿನಿಂದಲೇ ಅವನು ಬಡತನವನ್ನು ಕಂಡವನು.

ಗೋಪಾಲನಿಗೆ ಬಾಲ್ಯದಿಂದಲೂ ಕಲೆ ಸಾಹಿತ್ಯವೆಂದರೆ ಅಪಾರ ಪ್ರೀತಿ. ಆಗ ಇವನು ಪ್ರೈಮರಿಶಾಲೆಯಲ್ಲಿ ಓದುತ್ತಿದ್ದ. ಆಗಿನ್ನೂ ಎಂಟು ವರ್ಷವೂ ಕಳೆದಿರಲಿಲ್ಲ. ಆರಗದ ಮಾಳಪ್ಪನ ಕಟ್ಟೆಯಲ್ಲಿ ಒಬ್ಬ ತಾಳಮದ್ದಲೆಯ ಕಲೆಗಾರ, ಪ್ರತಿ ಶನಿವಾರ ಕಛೇರಿ ನಡೆಸುತ್ತಿದ್ದ. ಆಗ ಗೋಪಾಲ ಆತನೊಂದಿಗೆ ರಾತ್ರಿಯೆಲ್ಲಾ ತಾಳಮದ್ದಲೆಯನ್ನು ಕೇಳಿ, ಮನೆಗೆ ತುಂಬಾ ತಡವಾಗಿ ಬರುತ್ತಿದ್ದ. ನಮ್ಮ ತಾಯಿಯವರು, ‘ಅದೇಕೆ ಇಷ್ಟೊತ್ತಿಗೆ ಬಂದೆ!’ ಎಂದು ಕೇಳಿದರೆ, ತಾನು ತಾಳಮದ್ದಲೆ ಕಛೇರಿಯಲ್ಲಿ ಸಂಗೀತ ಕೇಳುತ್ತಾ ಕುಳಿತಿದ್ದೆ. ಬರುವುದು ಹೊತ್ತಾಯಿತು ಎಂದು ತಾಯಿಗೆ ಸಮಜಾಯಿಸಿ ಹೇಳುತ್ತಿದ್ದ.

೧೯೫೦-೫೧ರಲ್ಲಿ ಸಾಗರ ತಾಲ್ಲೂಕು ಕಾಗೋಡಿನಲ್ಲಿ ರೈತಚಳವಳಿಯು, ಗೋಪಾಲನ ಪ್ರವೇಶದಿಂದಾಗಿ ಚೇತರಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ನಡೆದುಹೋಯಿತು. ಆಗ ನಾನು ಸಾಗರ ತಾಲ್ಲೂಕಿನಲ್ಲಿಯೇ, ಟ್ರಜರಿ ಶಿರಸ್ತೇದಾರ್ ಮತ್ತು ಆಹಾರ ಶೇಖರಣೆಯ ಶಿರಸ್ತೆದಾರನಾಗಿ ಕೆಲಸ ಮಾಡುತ್ತಿದ್ದೆ. ರೈತ ಚಳವಳಿಯ ವಿಷಯವೆಲ್ಲವೂ ನನ್ನ ಕಿವಿಗೆ ಬೀಳುತ್ತಿತ್ತು. ಚಳವಳಿಯ ಮುಂಚೂಣಿಯಲ್ಲಿದ್ದ ಗೋಪಾಲನನ್ನು ಬಂಧಿಸಲು ಪೊಲೀಸರು ಹುಡುಕಾಡುತ್ತಿದ್ದರು. ಆದರೆ, ಅವನು ತಲೆತಪ್ಪಿಸಿಕೊಂಡು ಹಿರೆನೆಲ್ಲೂರಿನಲ್ಲಿದ್ದುಕೊಂಡೇ ಸತ್ಯಾಗ್ರಹಿಗಳನ್ನು ಸಂಘಟಿಸುತ್ತಿದ್ದ. ಕೊನೆಗೆ ಅವನನ್ನೂ ಪೊಲೀಸರು ಬಂಧಿಸಿದರು.

ಸಾಗರದ ಟ್ರಜರಿ ಮುಂಭಾಗದಲ್ಲಿದ್ದ ಜೈಲಿನಲ್ಲಿ ತೀರ್ಥಹಳ್ಳಿಯ ಜಿ. ಸದಾಶಿವರಾಯರನ್ನು ಇಟ್ಟಿದ್ದರು. ಡಾ. ರಾಮಮನೋಹರ ಲೋಹಿಯಾ ಮತ್ತು ಇನ್ನೂ ಹತ್ತಿಪ್ಪತ್ತು ರೈತ ಮುಖಂಡರನ್ನು ಸಾಗರದಲ್ಲಿದ್ದ ಒಂದು ಖಾಸಗೀ ಮನೆಯನ್ನೇ ಜೈಲನ್ನಾಗಿ ಮಾಡಿ ಅವರನ್ನೆಲ್ಲಾ ಅಲ್ಲಿಟ್ಟಿದ್ದರು.

ಗೋಪಾಲನ ಚಟುವಟಿಕೆಗಳೆಲ್ಲಾ, ಯಾವಾಗಲೂ ಸರ್ಕಾರದ ವಿರುದ್ಧವೇ ಇರುತ್ತಿದ್ದುದರಿಂದ, ನಾನು ಸಾಧ್ಯವಾದಷ್ಟೂ ಆತನಿಂದ ದೂರವಾಗಿಯೇ ಇರುತ್ತಿದ್ದೆ. ಅವನ ರಾಜಕೀಯ ಜೀವನದ ಏರಿಳಿತಗಳನ್ನು ಸದಾ ಅವನ ಜೊತೆಯಲ್ಲಿರುತ್ತಿದ್ದ ಗೆಳೆಯರು ಬರೆದೇ ಇರುತ್ತಾರೆ ಎಂಬ ಅನಿಸಿಕೆ ನನ್ನದು.

ಗೋಪಾಲ ಬರಿಗೈ ಶಾಸಕನಾಗಿದ್ದ. ಅವನ ಚುನಾವಣೆಯ ಎಲ್ಲ ವೆಚ್ಚವನ್ನೂ ಜನರೇ ಭರಿಸುತ್ತಿದ್ದರು. ನಾನು ಸರ್ಕಾರಿ ಕೆಲಸದಲ್ಲಿದ್ದು, ತಹಸೀಲ್ದಾರ್ ಗ್ರೇಡಿನ ಹುದ್ದೆಯಲ್ಲಿದ್ದರೂ ನನ್ನ ತಮ್ಮ ನನ್ನಿಂದ ಯಾವಾಗಲೂ ಹಣದ ಸಹಾಯ ಕೇಳಲಿಲ್ಲ. ನಾನೂ ಸಹ ಏನನ್ನೂ ನೀಡಲಿಲ್ಲ. ವರ್ಗಾವಣೆಗಳು ನನಗೆ ಯಾವಾಗಲೂ ಇರುತ್ತಿದ್ದವು. ನಾನು ನನಗೆ ಎಷ್ಟೇ ತೊಂದರೆಯಿದ್ದಾಗಲೂ, ಅವನ ಬಳಿ ಹೋಗಿ ವರ್ಗಾವಣೆಗಳನ್ನು ರದ್ದುಪಡಿಸಿಕೊಡಬೇಕೆಂದು ಕೇಳಿಲ್ಲ.

ಅವನು ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಆರುತಿಂಗಳ ಕಾಲ ನರಳಿದ; ಆತ ಸಾಯುವ ಎಂಟುದಿನಗಳ ಮುಂಚೆ ಅವನನ್ನು ನೋಡಲು ಹೋದೆ. ಆಗ ಅವನು ನನ್ನ ಕೈಗಳನ್ನು ಹಿಡಿದುಕೊಂಡು ಅಳಲು ಮೊದಲುಮಾಡಿದ. ಅವನಿಗೆ ಮಾತನಾಡಲು ಬಾಯಿ ಇರಲಿಲ್ಲ. ಮಾತು ನಿಂತುಹೋಗಿತ್ತು. ನನ್ನನ್ನು ಇಲ್ಲೇ ಇರಬೇಕೆಂದು ಕೈಗಳಲ್ಲೇ ಸನ್ನೆಮಾಡಿ ತೋರಿಸಿದ. ಇನ್ನು ಎಂಟುದಿನಗಳ ಒಳಗಾಗಿ ಮತ್ತೆ ಬರುತ್ತೇನೆಂದು ಸನ್ನೆಮಾಡಿ ಹೇಳಿ ಹೊರಬಂದೆ. ನನಗೆ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಇನ್ನು ಹೆಚ್ಚು ದಿನ ಬದುಕಲಾರನೆಂದು ನನಗೆ ಮನದಟ್ಟಾಯಿತು. ನನಗಿದ್ದ ಸರ್ಕಾರಿ ಕೆಲಸಗಳ ಒತ್ತಡಗಳಿಂದಾಗಿ ಊರಿಗೆ ಬಂದೆ. ಅಲ್ಲಿಂದ ಮುಂದೆ ಎಂಟೇ ದಿನಗಳಲ್ಲಿ ನನ್ನ ತಮ್ಮನ ಸಾವಿನ ಸುದ್ದಿಯೂ ಬಂತು.