ಶಾಂತವೇರಿ ಗೋಪಾಲಗೌಡರ ಬದುಕು, ನಿಷ್ಠೆಯಿಂದ ಕೂಡಿದ ಹೋರಾಟದ ಜೀವನ. ಜನತೆಯ ಸೇವೆಯೇ ತಮ್ಮ ಜೀವನದ ಧ್ಯೇಯವೆಂದು ತಿಳಿದ ವ್ಯಕ್ತಿ ಅವರು. ಸತ್ಯವನ್ನು ಬಿಟ್ಟು ಸ್ವಲ್ಪವೂ ಅಲುಗದೆ ಅವರು ಬಾಳಿದರು. ಬಡವರು, ದೀನರು, ಕೂಲಿಕಾರರ ಸೇವೆಯು ಅತಿ ಪವಿತ್ರವೆಂದು ತಿಳಿದು, ಅವರ ಸೇವೆಗಾಗಿ ದುಡಿದವರು; ಸಾರ್ವಜನಿಕ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಯಾರಿಗೂ ಕಡಿಮೆಯಿಲ್ಲದಂತೆ ಹೋರಾಟ ನಡೆಸಿದರು. ಕನ್ನಡಕ್ಕಾಗಿ ಅದ್ವಿತೀಯರಾಗಿ ದುಡಿದರು. ಸಾರ್ವಜನಿಕ ಸೇವೆಯಲ್ಲಿ ನಿರ್ಭೀತಿ, ಸೇವಾಕಾಂಕ್ಷೆ ಇವುಗಳನ್ನು ತಳಹದಿಯಾಗಿ ಇಟ್ಟುಕೊಂಡಿದ್ದರು.

ನನಗೆ ಕೆಲವೇ ವರ್ಷಗಳು, ಅಂದರೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ವಿಧಾನ ಸಭೆಯ ಸದಸ್ಯರಾಗಿ ಅವರನ್ನು ಕಂಡದ್ದು. ಅದಕ್ಕೆ ಮುಂಚೆ ಅವರ ಹೆಸರನ್ನು ಕೇಳಿದ್ದು ನೆನಪಿದೆ. ಶಿವಮೊಗ್ಗ ಜಿಲ್ಲೆಯ ಮಲೆನಾಡಿನಲ್ಲಿ ಅವರ ಹೆಸರು ಮನೆಮಾತು. ಸಮಾಜವಾದದ ಮುಖಂಡರಲ್ಲಿ ಅವರು ಅಗ್ರಗಣ್ಯರು. ಅವರ ಶಿಷ್ಯರು ಸಹಸ್ರಾರು ಮಂದಿ. ಶಾಂತವೇರಿ ಗೋಪಾಲಗೌಡರೆಂದರೆ, ಅವರನ್ನು ಒಪ್ಪಲಿ, ಬಿಡಲಿ; ಎಲ್ಲರಿಗೂ ಗೌರವ, ಪ್ರೀತಿ, ಮೆಚ್ಚುಗೆ, ಅಭಿಮಾನ. ನಾನು ಮುಖ್ಯಮಂತ್ರಿಯಾಗಿದ್ದಾಗ, ಗೌಡರು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ, ಸೊಗಸಾದ ಕನ್ನಡದಲ್ಲಿ ತಿಳಿಸುತ್ತಿದ್ದರು. ಅವರು ಹೇಳುವ ಮನಸ್ಸಿನ ನಿಷ್ಠೆಯ ಬಗ್ಗೆ, ವಿಷಯಗಳ ಹಿನ್ನೆಲೆಯ ಬಗ್ಗೆ, ಸತ್ಯಾಂಶದ ಬಗ್ಗೆ ಯಾವ ಅನುಮಾನವೂ ಇರುತ್ತಿರಲಿಲ್ಲ; ವಿಶ್ವಾಸವಿರುತ್ತಿತ್ತು. ಅವರು ಜನತೆಗಾಗಿ ಮಾಡಿದ ಸೇವೆ ಅಪಾರ. ಅವರ ಹೆಸರನ್ನು ಶಾಶ್ವತಗೊಳಿಸಲು ಬೆಂಗಳೂರು ಮಹಾನಗರದ ವಿಧಾನಸೌಧದ ಸಮೀಪ ಗೋಪಾಲಗೌಡ ಸರ್ಕಲ್ ಎಂದು ನಾವು ನಾಮಕರಣ ಮಾಡಿದ್ದು ಯಥೋಚಿತವಾಗಿತ್ತು. ಆ ಸ್ಥಳಕ್ಕೆ ಹೋದಾಗಲೆಲ್ಲ ಅವರ ನೆನಪು ಮಾಡಿಕೊಳ್ಳುತ್ತೇವೆ.

ಅವರ ಬಗ್ಗೆ ಒಂದು ವಿಚಾರ ನೆನಪಾಗುತ್ತದೆ. ಒಂದು ಸಲ ನಾನು ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಅವರೂ ಬಂದಿದ್ದರು. ಉಭಯಕುಶಲೋಪರಿಯ ನಂತರ ನಿಮಗೆ ಮಕ್ಕಳೆಷ್ಟು ಎಂದು ಕೇಳಿದೆ. ಆಗ ತಾನೇ ಅವರಿಗೆ ಒಂದು ಮಗು ಆಗಿತ್ತು. ಹೆಸರು ಏನೆಂದು ಕೇಳಿದರೆ ‘ಅಯೋನಿಜೆ’ ಎಂದರು. ನನಗೆ ಆಶ್ಚರ್ಯ. ಈ ಹೆಸರು ಏಕೆ ಎಂದು ಕೇಳಿದರೆ, ಅದರ ತಾಯಿಗೆ ಹೆರಿಗೆ ಕಷ್ಟವಾದ್ದರಿಂದ ಸಿಸೇರಿಯನ್ ಮಾಡಿದರು. ಆದ್ದರಿಂದ ಆ ಹೆಸರು ಎಂದು ತಮಾಷೆ ಮಾಡಿದರು. ಸತ್ಯಕ್ಕೆ ಅಂಟಿಕೊಳ್ಳುವುದು ಎಂದರೆ ಇದಲ್ಲ, ಹೆಸರು ಬದಲಾಯಿಸಿ ಎಂದು ಆಕ್ಷೇಪಿಸಿದೆ, ಆಗಲಿ ಎಂದರು, ಬದಲಾಯಿಸಿರಬೇಕು.