ಕಾಗೋಡು ಸತ್ಯಾಗ್ರಹದಿಂದಾಗಿ ರೈತರೆಲ್ಲ ಜೈಲು ಸೇರುವಂತಾಯಿತು. ಇದರಿಂದಾಗಿ ಕಾಗೋಡು ರೈತರಲ್ಲಿ ಮತ್ತೊಂದು ಚಿಂತಾಜನಕ ಸ್ಥಿತಿ ಉಂಟಾಯಿತು. ರೈತರೆಲ್ಲ ಜೈಲಿನಲ್ಲಿದ್ದುದರಿಂದ ಆ ವರ್ಷ ಕಾಗೋಡು ಗ್ರಾಮದಲ್ಲಿ ಬಿತ್ತನೆ ಕಾರ್ಯ ನಡೆಯದೆ ಜಮೀನು ಬೀಲು ಬಿದ್ದಿತು. ಜೈಲಿನಿಂದ ಹೊರಬಂದ ರೈತರು ಮತ್ತು ಅವರ ಸಂಸಾರಗಳೆಲ್ಲ ಉಪವಾಸ ಬೀಳುವಂತಾಯಿತು.

ಈ ಪರಿಸ್ಥಿತಿಯನ್ನು ಮನಗಂಡ ಗೋಪಾಲಗೌಡರು, ಆ ಪ್ರದೇಶದ ನಾಯಕರುಗಳಾದ ಕುಪ್ಪಗಡ್ಡೆ ಮರಿಯಪ್ಪ, ಮಂಚಿ ದ್ಯಾವಪ್ಪ, ಎಚ್. ಗಣಪತಿಯಪ್ಪ,ಡಿ. ಮೂಕಪ್ಪ, ಎಲೆಗಳಲೆ ಹುಚ್ಚಪ್ಪ, ಶಿಕಾರಿಪುರದ ಟಿ. ವೆಂಕಟಪ್ಪ, ಜಿ. ಸದಾಶಿವರಾಯರು ಮತ್ತು ಇತರರೊಡಗುಡಿ ಅಲ್ಲಿನ ಸುತ್ತಮುತ್ತಿನ ರೈತರುಗಳಿಂದ, ಉಪವಾಸ ಬಿದ್ದಿರುವ ಕಾಗೋಡು ರೈತರ ನೆರವಿಗಾಗಿ ಆಹಾರ ಧಾನ್ಯಗಳನ್ನ ಸಂಗ್ರಹಿಸಿ ವಿತರಿಸಿದರು. ಈ ಸಂಗ್ರಹಣೆಯ ಪ್ರವಾಸ ಕಾಲದಲ್ಲಿ ಗೇಣಿ ರೈತರ ಬಗ್ಗೆಸಮಾಜವಾದಿ ಪಕ್ಷಕ್ಕೂ, ಗೋಪಾಲಗೌಡರಿಗೂ ಇರುವ ನಿಷ್ಠೆ ರೈತರ ಸಮೂಹವನ್ನು ಆಕರ್ಷಿಸಿತು. ಎಂತಹ ಸಂದರ್ಭದಲ್ಲೂ ಸಮಾಜವಾದಿ ಪಕ್ಷ ಹಾಗೂ ಗೋಪಾಲಗೌಡರ ನೆರವು ನಮಗಿದೆ ಎಂಬ ಭರವಸೆ ಮೂಡಿ ಗೇಣಿ ರೈತರ ಸಂಘಟನೆಗೆ ನಾಂದಿಯಾಯಿತು. ಸಮಾಜವಾದಿ ಪಕ್ಷ ಮತ್ತು ಗೋಪಾಲಗೌಡರು ರೈತರ ನಡುವೆ ಬೆಳೆದದ್ದು ಹೀಗೆ.

ಗೋಪಾಲಗೌಡರು ಆಗ ಶಾಸಕರಾಗಿದ್ದರು. ಕಾರ್ಗಲ್‌ನಲ್ಲಿ ವಿದ್ಯುಚ್ಛಕ್ತಿ ಮಂಡಳಿಯವರ ಸತ್ಯಾಗ್ರಹ ನಡೆಯುತ್ತಿತ್ತು. ಗೌಡರು ಕಾರ್ಗಲ್‌ಗೆ ಭೇಟಿ ನೀಡಿ, ಸತ್ಯಾಗ್ರಹದಲ್ಲಿ ನಿರತರಾಗಿದ್ದ ಕಾರ್ಮಿಕರ ಸ್ಥಿತಿಗತಿಗಳನ್ನು ಕಂಡರು. ಅಲ್ಲಿಂದ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದರು. ಬಹಳ ಅಹಂಕಾರದ ವ್ಯಕ್ತಿ. ಜೊತೆಗೆ ಆಗಿನ ಮುಖ್ಯಮಂತ್ರಿ ವೀರೆಂದ್ರ ಪಾಟೀಲರ ಸಂಬಂಧಿಕನೂ ಆಗಿದ್ದರು. ಜಿಲ್ಲಾಧಿಕಾರಿಯವರ ಕೊಠಡಿಗೆ ಬಂದ ಗೋಪಾಲಗೌಡರು ಅವರ ಎದುರಿನ ಕುರ್ಚಿಯಲ್ಲಿ ಕುಳಿತರು, ನಾನೂ ಅವರ ಪಕ್ಕದಲ್ಲಿ ಕುಳಿತೆ. ಗೌಡರು ನೇರವಾಗಿ ಕಾರ್ಗಲ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ಆ ಜಿಲ್ಲಾಧಿಕಾರಿ ಗೌಡರ ಮಾತಿನತ್ತ ಗಮನವನ್ನೇ ಕೊಡದೆ ಕುರ್ಚಿಯಿಂದೆದ್ದು ಹೊರಟರು. ಇದರಿಂದ ಕೋಪಗೊಂಡ ಗೌಡರು ತಮ್ಮ ಕೈನಲ್ಲಿದ್ದ ವಾಕಿಂಗ್‌ಸ್ಟಿಕ್‌ನ್ನು ಅವರ ಕೊರಳ ಪಟ್ಟಿಗೆ ಹಾಕಿ ಎಳದು ನಿಲ್ಲಿಸದುರ. ಸಿಟ್ಟಿನಿಂದ, “ನನ್ನನ್ನು ಯಾರೆಂದು ತಿಳಿದಿರುವಿರಿ! ನಿನಗೆಷ್ಟು ದುರಹಂಕಾರ! ಒಬ್ಬ ಪ್ರಜಾಪ್ರತಿನಿಧಿಯೆ ಜನರ ಕಷ್ಟಗಳನ್ನು ತಿಳಿಸಲು ಬಂದಾಗ, ನನ್ನೊಡನೆ ಹೀಗೆ ವರ್ತಿಸಿದರೆ, ಇನ್ನು ಜನಸಾಮಾನ್ಯರ ಗತಿ ಏನು? ಸುಮ್ಮನೆ ಕೂತು ನಾನು ಹೇಳುವುದನ್ನು ಕೇಳು’’ ಎಂದು ಗದರಿದರು. ಗೌಡರ ಈ ಅನಿರೀPಕಿತ ವರ್ತನೆಯಿಂದ ವಾಲಿಯವರು ನಡುಗುತ್ತಿದ್ದರು. ಹೀಗೆ ಗೌಡರ ಪ್ರಾಮಾಣಿಕತೆ ಹಾಗೂ ಅವರ ನಿಷ್ಠೆಯ ಮುಂದೆ ಸರ್ಕಾರಿ ಯಂತ್ರ ಥರಥರ ನಡುಗುತ್ತಿತ್ತು.

ಪಂಡಿತರಿಂದ ಪಾಮರರವರೆಗೂ ಎಲ್ಲರೊಡನೆಯೂ ಆತ್ಮೀಯತೆಯಿಂದ ಇರುತ್ತಿದ್ದುದು ಗೌಡರ ಸ್ವಭಾವವಾಗಿತ್ತು. ಇದರೊಡನೆ ಕನ್ನಡದ ಬಗ್ಗೆ ಅವರಿಗಿದ್ದ ಅಭಿಮಾನ ಅದ್ವಿತೀಯವಾದದ್ದು. ಕನ್ನಡದ ಪರ ಯಾರೇ ಧ್ವನಿಯೆತ್ತಲಿ, ಹೋರಾಟ ಮಾಡಲಿ ಅವರ ಬಗ್ಗೆ ಗೌಡರಿಗೆ ಅಪಾರವಾದ ಗೌರವವಿರುತ್ತಿತ್ತು. ಒಮ್ಮೆ ವಾಟಾಳ್ ನಾಗಾರಾಜ್ ಅವರು, ಆದವಾನಿ ಮುಂತಾದ ಪ್ರದೇಶಗಳು ಆಂಧ್ರದಿಂದ ಕರ್ನಾಟಕಕ್ಕೆ ಸೇರಬೇಕೆಂದು; ಆದವಾನಿಗೇ ಹೋಗಿ ಸತ್ಯಾಗ್ರಹ ನಡೆಸಿ ಅಲ್ಲಿಂದ ನೇರವಾಗಿ ವಿಧಾನಸಭೆಗೆ ಬರುತ್ತಿದ್ದಾಗ, ವಿಧಾನಸೌಧದ ಮುಂಬಾಗಿಲಿನಲ್ಲಿಯೇ ಗೌಡರು ಕಾದಿದ್ದು ವಾಟಾಳ್ ನಾಗರಾಜ್‌ರಿಗೆ ಹಾರಹಾಕಿ ಗೌರವಿಸಿ ಕರೆತಂದ ದೃಶ್ಯ ಎಂದು ಮರೆಯಲಾಗದಂತಹದ್ದು.

ಒಮ್ಮೆ ಗೌಡರು ಆರಾಮವಾಗಿ ಹರಟೆಹೊಡೆಯುತ್ತಿದ್ದಾಗ, ಮನುಷ್ಯನ ಜೀವನ ಹೇಗಿರಬೇಕೆಂದರೆ, ಅವನ ಶತ್ರುವೂ ಕೂಡ ಅವನ ಅನುಪಸ್ಥಿತಿಯಲ್ಲಿ, ಅವನನ್ನು ಮೆಚ್ಚುವಂತಿರಬೇಕು ಎಂದು ಹೇಳಿದರು. ಹಾಗೆಯೇ ಗೌಡರು ಜಾತೀಯತೆಯ ಬಗ್ಗೆ ಮಾತಾಡುತ್ತಾ “’ಜಾತ್ಯಾತೀತ ರಾಷ್ಟ್ರಕಟ್ಟುವ ಬಗ್ಗೆ ಎಲ್ಲಾ ಪಕ್ಷಗಳೂ ಹೇಳುತ್ತವೆ. ಆದರೆ ನೈಜ ಪರಿಸ್ಥಿತಿ ಹೇಗಿದೆ ಎಂದರೆ, ನನ್ನನ್ನು ಸಹ ಒಬ್ಬ ಒಕ್ಕಲಿಗ ಶಾಸಕನೆಂದು ಗುರುತಿಸುತ್ತಾರೆ! ಇದಕ್ಕೆ ಏನು ಹೇಳಬೇಕೋ ತಿಳಿಯದು?’’ ಎಂದು ವಿಷಾದದಿಂದ ಹೇಳಿದರು.

ಗೌಡರ ಕೊನೆಯ ದಿನಗಳು : ಅವರು ಪಾರ್ಶ್ವವಾಯುವಿಗೆ ತುತ್ತಾಗಿ, ಸೊರಬ ತಾಲ್ಲೂಕು ಹೊಸಬಾಳೆಯಲ್ಲಿ ನಾಟಿ ಔಷಧಿ ತೆಗೆದುಕೊಳ್ಳಲು ಬಂದು ಸೊರಬ ಪ್ರವಾಸಿ ಮಂದಿರದಲ್ಲಿ ಉಳಿದಿದ್ದರು. ನಾನು ಅವರನ್ನು ನೋಡಲು ಹೋಗಿದ್ದೆ. ಅವರಿಗೆ ಮಾತನಾಡಲು ಆಗುತ್ತಿರಲಿಲ್ಲ. ಮಾತು ತೊದಲುತ್ತಿದ್ದವು. ನನಗೆ ಅವರನ್ನು ಕಂಡು ಕಣ್ಣಲ್ಲಿ ನೀರು ಬಂತು. ಅದನ್ನು ಕಂಡ ಗೌಡರು, ‘ವ್ಯಕ್ತಿಯ ಸಾವಿಗೆ ಅಳುತ್ತಾರೇನ್ರಿ… ಗೋಪಾಲಗೌಡನಂಥವರು ಎಷ್ಟೋ ಜನ ಹುಟ್ಟುತ್ತಾರೆ, ಸಾಯುತ್ತಾರೆ. ನಾವು ಅಳುವುದಾದರೆ, ನಾವು ನಂಬಿರುವ ಸಿದ್ಧಾಂತಕ್ಕೆ ಸಾವು ಬಂದಾಗ ಅಳಬೇಕಾಗುತ್ತದೆ’ ಎಂದು ಹೇಳಿದರು.