ಪೂಜ್ಯ ಗೋಪಾಲಗೌಡ ಶಾಂತವೇರಿಯವರು ದಿವಂಗತರಾಗಿ ಇಪ್ಪತ್ತೈದು ವರ್ಷಗಳಾದವು. ಅದಕ್ಕೂ ಹಿಂದಿನ ಇಪ್ಪತ್ತೈದು ವರ್ಷಗಳ ನಿಕಟ ಸಂಪರ್ಕದ ನೆನಪು ಮಾಡಿಕೊಂಡರೆ ಏನನ್ನು, ಯಾವುದನ್ನು ಉಲ್ಲೇಖಿಸುವುದೆಂಬುದೇ ತೋಚುತ್ತಿಲ್ಲ. ಇದು ಕೇವಲ ನೂರರಲ್ಲಿ ಒಂದು ತುಣುಕು ಅಷ್ಟೆ.

‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ’ ಎಂಬ ಕುವೆಂಪುರವರ ಕವನವನ್ನು ಅವರು ಆಗಾಗ ಗುನುಗುಡುತ್ತಿದ್ದರು. ‘ಇದು ಕೇವಲ ಸೋಮನಾಥ ದೇವಾಲಯದ ಬಗ್ಗೆ ಮಾತ್ರವಲ್ಲ. ಇಡೀ ಕರ್ನಾಟಕದ ಬಗ್ಗೆಯೇ ಅವರು ಹೇಳುತ್ತಿದ್ದಾರೆ’ ಎಂದು ಸಂತೋಷ ಪಡುತ್ತಿದ್ದರು. ಆಗಾಗ ಕನ್ನಡ ಕೋಗಿಲೆ ದಿವಂಗತ ಪಿ. ಕಾಳಿಂಗರಾಯರು ಸಿಗುತ್ತಿದ್ದು. ಅವರನ್ನು ಕಂಡೊಡನೆ ಗೌಡರು ಒಳ್ಳೆಯ ‘ಮೂಡ್’ಗೆ ಬರುತ್ತಿದ್ದರು. ಕಾಳಿಂಗರಾಯರಿಂದ ಕುವೆಂಪು, ಬೇಂದ್ರೆ, ಅಡಿಗ, ನರಸಿಂಹಸ್ವಾಮಿ ಇವರ ಕವನಗಳನ್ನು ಹಾಡಿಸಿ ಕೇಳುವುದೆಂದರೆ, ಎಲ್ಲವನ್ನು ಬದಿಗೊತ್ತಿ ಕೂರುತಿತ್ದದು. ಹೀಗೆ ನೂರಾರು ರಾತ್ರಿಗಳು ಕಳೆದಿದ್ದಾವೆ. ಸ್ವತಃ ಗೋಪಾಲಗೌಡರು ಕುಮಾರವ್ಯಾಸ ಬಾರತದ ಅನೇಕ ಭಾಮಿನಿ ಷಟ್ಪದಿಗಳನ್ನು ಹಾಡುತ್ತಿದ್ದರು. ಹಾಗೆಯೇ ಬೇಂದ್ರೆಯವರ ‘ಕುರುಡು ಕಾಂಚಾಣ’ ವನ್ನು ಭಾವಪೂರ್ಣವಾಗಿ ಹಾಡುತ್ತಿದ್ದರು. ಒಮ್ಮೊಮ್ಮೆ ತಾವೇ ಕೆಲವು ಸಾಲು ಕವನಗಳನ್ನು ಬರೆದು, ಒಂದು ಸಿಗರೇಟು ಸೇದಿ, ಓದಿ, ನಕ್ಕು ಹರಿದು ಹಾಕುತ್ತಿದ್ದರು. ‘ಅಯ್ಯೋ ಹಾಗೇಹರಿಯಬೇಡಿ’ ಎಂದು ಕೇಳಿಕೊಂಡರೆ, ಅದೇನದು ಅದು ಕೇವಲ ಬರವಣಿಗೆ ಅಷ್ಟೆ ಅದು ಕವನವೂ ಅಲ್ಲ, ಸಾಹಿತ್ಯವೂ ಅಲ್ಲ. ಅದಕ್ಕೆಲ್ಲ ಬಹಳ ಪರಿಶ್ರಮ, ತಪಸ್ಸುಬೇಕು ಎನ್ನುತ್ತಿದ್ದರು. ನಾನಮ್ಮೆ ಅಮೇರಿಕದ ಅಧ್ಯಕ್ಷ ಜಾನ್ ಕೆನಡಿಯವರ ಕೊಲೆಯಾದಾಗ ಒಂದು ಕವನ ಬರೆದು ಗೌಡರಿಗೆ ಓದಲು ಕೊಟ್ಟೆ. ಅವರು ಅದನ್ನು ಓದಿ, ಸುಮ್ಮನೆ ನಕ್ಕು ಹಿಂದಕ್ಕೆ ಕೊಟ್ಟರು. ನಾನು ಅಲ್ಲೇ ಹರಿದುಹಾಕಿದೆ. ‘ಯಕ್ಷಗಾನ’ ಚೆನ್ನಾಗಿರುತ್ತದೆ. ಆಗಾಗ ನೋಡುತ್ತಿರಬೇಕು ಎಂದು ಹೇಳಿ, ಅದರ ಯಾವುದಾದರೂ ಒಂದು ಹಾಡನ್ನು ಗುನುಗುಡುತ್ತಿದ್ದರು.

ಗೋಪಾಲಗೌಡರಿಗೆ ಸಾಹಿತಿಗಳು, ಕವಿಗಳು, ಕಲಾವಿದರೆಂದರೆ ತುಂಬಾ ಪ್ರೀತಿ ಗೌರವ. ಶ್ರೀ ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಂದು ಕಾರಂತರನ್ನು ಕಂಡು ‘ಸ್ವಾಮಿ, ನಿಮ್ಮ ಸ್ಥಾನವೇ ಭದ್ರ. ನಮ್ಮ ರಾಜಕಾರಣದಲ್ಲಿರುವವರದ್ದು ಹಾಗಲ್ಲ’ ಎಂದಾಗ, ಕಾರಂತರು ನಿಮ್ಮಂಥವರು ಎಂದೂ ಭದ್ರವೇ ಎಂದು ಉತ್ತರಿಸಿದರು.

ಈ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದವರು ಕುವೆಂಪುರವರು.

ಗೌಡರಿಗೆ ಸಾಹಿತಿಗಳಲ್ಲೆಲ್ಲ ಅತಿ ಪ್ರೀತಿಯ ವ್ಯಕ್ತಿ ಯು.ಆರ್. ಅನಂತಮೂರ್ತಿಯವರು. ಕಾಗೋಡು ಹೋರಾಟದಲ್ಲಿ ಕಾಲದಿಂದ ಅನಂತಮೂರ್ತಿಯವರ ತಂದೆ ದಿ. ರಾಜಗೋಪಾಲಾಚಾರ್ಯರ ಗೌರವಯುತ ಸಂಪರ್ಕ, ಸ್ನೇಹ, ಶಿವಮೊಗ್ಗದಲ್ಲಿದ್ದಾಗ ಅವರ ಮಾರುತಿ ಮುದ್ರಣಾಲಯದಲ್ಲೇ ಕಾಗೋಡು ಹೋರಾಟದ ಕರಪತ್ರಗಳ ಮುದ್ರಣವಾಗುತ್ತಿತ್ತು. ಅದನ್ನು ಆಗ ಹೆಚ್ಚಾಗಿ ಬರೆಯುತ್ತಿದ್ದವರು ಅವರೇ. ಅಲ್ಲದೆ ಅದನ್ನು ‘ಕಂಪೋಸ್’ ಮಾಡಿ, ಮುದ್ರಿಸಿ ಕೊಡುತ್ತಿದ್ದವರು ಅನಂತಮೂರ್ತಿಯವರು. ಅದರ ವಿತರಣೆ ಅಪ್ರತಿಮ ಸಂಘಟನಕಾರ ದಿ.ವೈ.ಆರ್. ಪರಮೇಶ್ವರಪ್ಪನವರು. ಗೋಪಾಲಗೌಡರು ಎಷ್ಟೋ ಸಾರಿ ಮುದ್ರಣಾಲಯದ ಮನೆಯಲ್ಲೇ ತಂಗುತ್ತಿದ್ದರು. ಆಗಿನಿಂದಲೂ ಅನಂತಮೂರ್ತಿಯವರ ಬಗ್ಗೆ ಗೌಡರಿಗೆ ಪ್ರೀತಿ ವಿಶ್ವಾಸ.

ಅನಂತಮೂರ್ತಿಯವರು ಕಾಲೇಜು ಉಪನ್ಯಾಸಕರಾದ ನಂತರ, ಅವರು ಬರೆದ ಕಥೆಗಳನ್ನು ಓದಿ ಸಂತೋಷಪಡುತ್ತಿದ್ದರು. ಅಷ್ಟೇ ಅಲ್ಲದೆ ಆ ಬಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದರು. ಆಗ ನವ್ಯಕಾವ್ಯದ ಆರಂಭದ ಕಾಲ. ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’ಕ್ಕೆ ತಾವು ಬರೆದ ಮುನ್ನುಡಿಯನ್ನು ಅನಂತಮೂರ್ತಿಯವರು, ಹಾಸನಕ್ಕೆ ಬಂದು ಅವರ ಮನೆಯಲ್ಲಿ ತಂಗಿದ್ದ ಗೌಡರೊಂದಿಗೆ ಚರ್ಚಿಸಿದ್ದು ನನಗೆ ಈಗಲೂ ನೆನಪಿದೆ. ಅನಂತಮೂರ್ತಿಯವರೊಂದಿಗೆ ಮೈಸೂರಿನ ‘ಕಾಫಿ ಹೌಸ್‌’ನಲ್ಲಿ ಅನೇಕ ಸಂಜೆಗಳಲ್ಲಿ ಗೋಪಾಲಕೃಷ್ಣ ಅಡಿಗರೊಂದಿಗೆ ಸಾಹಿತ್ಯ ಸಂಬಂಧ, ಅದರಲ್ಲೂ ಕಾವ್ಯಗಳಿಗೆ ಸಂಬಂಧಿಸಿದಂತೆ ನವ್ಯವೂ ಸೇರಿ ಚರ್ಚಿಸುತ್ತಿದ್ದರು. ಅಡಿಗರಿಗೆ ಗೋಪಾಲಗೌಡರ ಸಾಹಿತ್ಯದ ಪರಮ ಸೂಕ್ಷ್ಮ ಪ್ರಜ್ಞೆ ಬಗ್ಗೆ ಅಪಾರ ಗೌರವ ಮೆಚ್ಚುಗೆ ಇದ್ದುದನ್ನು ಅನಂತಮೂರ್ತಿಯವರ ಹತ್ತಿರ ಹೇಳುತ್ತಿದ್ದರು.

ಗೋಪಾಲಗೌಡರು ಅನಂತಮೂರ್ತಿಯವರನ್ನು ಚಿಕ್ಕಂದಿನಿಂದಲೂ ಪ್ರೀತಿಯಿಂದ ಅನಂತು ಎಂದು ಸಂಬೋಧಿಸುತ್ತಿದ್ದರು. ಒಮ್ಮೆ ನಾವು ಎರಡನೇ ಮಹಾಚುನವಣೆಯಲ್ಲಿ ಸೋತಾಗ ಬೆಂಗಳೂರಿನ ಪೂರ್ಣಯ್ಯ ಛತ್ರ ರಸ್ತೆಯಲ್ಲಿದ್ದ ಸೋಷಲಿಸ್ಟ್ ಪಕ್ಷದ ಕಛೇರಿಯಲ್ಲಿ ಮಹಡಿಯಲ್ಲಿ ಇದ್ದೆವು. ಗೌಡರು ನಾವು ಎಲ್ಲ ಉಳಿದುಕೊಳ್ಳುವ ಸ್ಥಳ. ಒಂದು ದಿನ ಬೆಳಿಗ್ಗೆ ಸುಮಾರು ೮-೯ಗಂಟೆ ಸಮಯ; ಗೌಡರು ನಾನು ಕಾಫಿಕುಡಿಯುತ್ತಿದ್ದೆವು. ಕೆಳಗೆ ಮಹಡಿಯ ಮೆಟ್ಟಿಲನ್ನು ಹತ್ತುತ್ತಿದ್ದ ಬೂಟು ಕಾಲಿನ ಸದ್ದು ಕೇಳಿಸಿತು. ನಾನು ಅದು ಯಾರೆಂದು ನೋಡಲು ಎದ್ದೆ. ಆಗ ಗೌಡರು “ಕುಳಿತುಕೋ ನೋಡೋದು ಬೇಡ. ಅದು ನಮ್ಮ ಅನಂತು ಮೆಜರ್ಡ್ ಸ್ಟೆಪ್ಸ್’’ ಎಂದರು. ಹಾಗೇ ಕುಳಿತೆ. ಒಂದೆರಡು ನಿಮಿಷದಲ್ಲಿ ನೋಡಿದಾಗ, ಹೌದು ನಿಜಕ್ಕೂ ಅನಂತಮೂರ್ತಿಯವರೇ ಆಗಿದ್ದರು. ನಾವು ಚುನಾವಣೆಯಲ್ಲಿ ಸೋತಿದ್ದ ಕಾಲದಲ್ಲಿ ಗೌಡರನ್ನು ಆಗಾಗ ಕಾಣಲು ಬರುತ್ತಿದ್ದ ಒಬ್ಬರೇ ಸಾಹಿತಿ ಎಂದರೆ ಅದು ಅನಂತಮೂರ್ತಿಯವರು.

ಒಂದು ದಿನ ಗೌಡರು ಸ್ನಾನಾದಿಗಳನ್ನು ಮುಗಿಸಿ, ಎಂದಿನಂತೆ ತಮ್ಮ ಕಚ್ಚೆ ಪಂಚೆಯನ್ನು ಬಹಳ ನೀಟಾಗಿ ನೆರಿಗೆಗಳನ್ನೆಲ್ಲ ನೇರವಾಗಿ ತೀಡಿ, ಸರಿಮಾಡಿಕೊಂಡು ಜುಬ್ಬ ಹಾಕಿ ತೋಳನ್ನು ಸರಿಯಾಗಿ ಮಡಿಚಿ, ಇದ್ದ ಕೆಲವೇ ತಲೆ ಕೂದಲನ್ನು ಚೆನ್ನಾಗಿ ಬಾಚಿಕೊಂಡು, ಬೂಟುಗಳನ್ನು ಹಾಕಿಕೊಂಡು ‘ಆಮೇಲೆ ಬರುತ್ತೇನೆ’ ಎಂದು ಹೇಳಿ ಹೊರಟು ಹೋದರು. ಸಂಜೆ ಅವರನ್ನು ಕೇಳದಾಗ “ನಾನು ಲಂಕೇಶಪ್ಪನವರನ್ನು ನೋಡಲು ಹೋಗಿದ್ದೆ’’ ಎಂದರು. ಅವರು ಖಾದಿಯನ್ನಲ್ಲದೆ ಎಂದೂ ಬೇರೆ ಬಟ್ಟೆ ತೊಡುತ್ತಿರಲಿಲ್ಲ. ಅದು ಚೆನ್ನಾಗಿ ಇಸ್ತ್ರಿಮಾಡಿದ್ದೇ ಆಗಿರಬೇಕಿತ್ತು. ಬಟ್ಟೆ, ಬೂಟುಗಳ ಬಗ್ಗೆ ಮಾತ್ರವಲ್ಲದೆ, ಊಟೋಪಚಾರಗಳ ಬಗ್ಗೆಯೂ ತುಂಬಾ ಪ್ರೀತಿ ಅಭಿಮಾನಗಳಿಂದ ಆ ಕಾಲದಲ್ಲಿ ನೋಡಿಕೊಳ್ಳುತ್ತಿದ್ದವರು ಬಾಟಾ ಕಂಪೆನಿಯ ಮ್ಯಾನೇಜರ್ ಆಗಿದ್ದ ಸಮಾಜವಾದಿ ಸುಬ್ರಹ್ಮಣ್ಯರವರು. ಇವರ ಆತ್ಮೀಯತೆ, ಔದಾರ್ಯ ಚಿರಸ್ಮರಣೀಯವಾದದು. ಇವರಿಗೆ ಸ್ವಂತಕ್ಕೆ ಏನೂ ಬೇಕಾಗಿರಲಿಲ್ಲ.

ಎರಡನೇ ಮಹಾಚುನಾವಣೆಯಲ್ಲಿ ಗೌಡರು – ಸೋತಾಗ, ಒಂದು ಪತ್ರ ಗೌಡರಿಗೆ ಬಂತು. ಅದನ್ನು ಓದಿ, ಕಣ್ಣಲ್ಲಿ ನೀರು ತುಂಬಿಕೊಂಡು, ‘ಇದನ್ನು ಓದು’ ಎಂದು ನನ್ನ ಕೈಗೆ ಕೊಟ್ಟರು. ನಾನು ಓದಿದೆ. ಅದರಲ್ಲಿ ಈಗಲೂ ನನಗೆ ನೆನಪಿರುವ ಒಂದು ಮಾತು: “ನಿಮ್ಮಂಥ ಸ್ವಚ್ಛ ಹೃದಯದ, ವಿಶಾಲ ಮನಸ್ಸಿನ ಅಷ್ಟೇ ಅಚ್ಚ ಕನ್ನಡದಲ್ಲಿ ಮನೋಹರವಾಗಿ ವೈಚಾರಿಕ ಭಾಷಣ ಮಾಡೋ ಇನ್ನೊಬ್ಬರನ್ನು ನಾನು ಈವರೆಗೆ ಕಂಡಿಲ್ಲ, ಕೇಳಿಲ್ಲ. ನೀವು ಮತ್ತೊಮ್ಮೆ ಶಾಸಕರಾಗಿ ಬರಬೇಕೆಂದು ನನ್ನ ಬಯಕೆ’’ ಎಂದು ಬರೆದು ಕಳಿಸಿ ಪಿ.ಟಿ. ನರಸಿಂಹಾಚಾರ ಎಂದು ಸಹಿ ಇತ್ತು. ‘ಇದು ಯಾರು’ ಎಂದು ಕೇಳಿದಾಗ ಗೌಡರು “ಅವರು ನಮ್ಮ ವಿಧಾನಸಭೆಯಲ್ಲಿರುವ ಶೀಘ್ರಲಿಪಿಕಾರರು. ಉದ್ಯೋಗ ಅದು. ಅವರು ದೊಡ್ಡವರು. ನಮ್ಮ ಕನ್ನಡದ ದೊಡ್ಡ ಕವಿಗಳಲ್ಲಿ ಒಬ್ಬರು. ಅವರೇ ಪು.ತಿ. ನರಸಿಂಹಾಚಾರ್ಯರು’’ ಎಂದರು. ಈ ಜನಪ್ರಿಯ ಹೆಸರು ಕೇಳಿ ಮತ್ತೊಮ್ಮೆ ಪತ್ರ ಓದಿ ನನ್ನ ಹೃದಯ ತುಂಬಿ ಬಂತು.

ಗೋಪಾಲಗೌಡರು ಸಾಗರ, ತೀರ್ಥಹಳ್ಳಿ ಕ್ಷೇತ್ರಗಳಿಂದ ಒಟ್ಟು ಮೂರು ಸಾರಿ ವಿಧಾನಸಭಾ ಸದಸ್ಯರಾಗಿದ್ದರು. ನಾನೊಮ್ಮೆ ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣಗಳೆಲ್ಲವನ್ನೂ ವಿಧಾನ ಮಂಡಲದ ಗ್ರಂಥಾಲಯದಿಂದ ಸಂಗ್ರಹಿಸಿ, ಸುಮಾರು ಮೂರು ನೂರು ಭಾಷಣಗಳನ್ನು ನಾನೇ ಆಯ್ಕೆ ಮಾಡಿ, ಅವುಗಳನ್ನು ‘ಶಾಸನಸಭೆಯಲ್ಲಿ ಶಾಂತವೇರಿ’ ಎಂಬ ಹೆಸರಿನಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ. ನಾನು ಆಯ್ಕೆ ಮಾಡಿದ್ದ ಭಾಷಣಗಳೆಲ್ಲವನ್ನು ಅವರು ಓದಿ ನೋಡಿ ಕೊನೆಗೆ ಕೇವಲ ಮೂವತ್ತೆರಡು ಭಾಷಣಗಳನ್ನು ಮಾತ್ರ ಆರಿಸಿಕಟ್ಟು ‘ಇಷ್ಟೇ ಸಾಕು’ ಎಂದರು. ಇನ್ನುಳಿದ ಭಾಷಣಗಳ ಬಗ್ಗೆ ಕೇಳಿದಾಗ ಅವರು ‘ಇದಿಷ್ಟರಲ್ಲಿ ಹೇಳಿರೋದೇ ಅದಷ್ಟರಲ್ಲೂ ಇರೋದು ಎಂದರು. ಹಾಗಾಗಿ ಅವರು ಆರಿಸಿಕೊಟ್ಟ ಭಾಷಣಗಳನ್ನೇ ‘ಶಾಸನಸಭೆಯಲ್ಲಿ ಶಾಂತವೇರಿ’ ಎಂಬ ಹೆಸರಿನಲ್ಲಿ ಸಮಾಜವಾದಿ ಯುವಜನ ಸಭಾದ ವತಿಯಿಂದ ಪ್ರಕಟಿಸಲಾಯಿತು.

ಮೈಸೂರಿಗೆ ಬಂದರೆ ನಮ್ಮ ಅಂದಿನ ಸೋಷಲಿಸ್ಟ್ ಪಕ್ಷದ ಗೆಳೆಯರೊಂದಿಗೆ ಸಭೆ, ಚಳವಳಿಗಳಲ್ಲಿ ಭಾಗವಹಿಸಿದ್ದರು. ನನಗೆ ನೆನಪಿರುವ ಒಂದು ಮುಖ್ಯ ಪ್ರತಿಭಟನೆ; ದಸರಾ ಸಮಯದಲ್ಲಿ ನಡೆಯುತ್ತಿದ್ದ ಅಂದಿನ ಮಹಾರಾಜರ ಜಂಬೂಸವಾರಿ ವಿರುದ್ಧ ಕಪ್ಪು ಬಾವುಟ ಪ್ರದರ್ಶನ. ಅವರ ನಾಯಕತ್ವದಲ್ಲಿ ನಾವು ಹಲವರು ಇದ್ದೆವು. ಅಂದು ನಮ್ಮೆಲ್ಲರ ಜೀವ ರಕ್ಷಣೆ ಮಾಡಿದವರು ಪೊಲೀಸರು. ಹೀಗೆ ಜೀವದ ಹಂಗು ತೊರೆದು ಜನಪರವಾದ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಉಳುವವನೇ ಹೊಲದೊಡೆಯ ಎಂಬ ಘೋಷಣೆಯ ಕಾಗೋಡು ಚಳವಳಿ – ಸತ್ಯಾಗ್ರಹಗಳ ನೇತೃತ್ವ ವಹಿಸಿದ್ದ ಗೋಪಾಲಗೌಡರು, ಇಡೀ ದೇಶದಲ್ಲೇ ಪ್ರಪ್ರಥಮವಾಗಿ ಮನೆಯಿಲ್ಲದವರಿಗೆ ಮನೆ ಎಂಬ ಸಣ್ಣ ಪ್ರಮಾಣದ ಚಳವಳಿಯನ್ನು ನಮ್ಮ ಕೋಣಂದೂರಿನಲ್ಲಿ ನಡೆಸಿ ಬಂಧನಕ್ಕೆ ಒಳಗಾಗಿದ್ದರು. ಇದಕ್ಕೆ ಸಾಕ್ಷಿಯಾಗಿ ಈಗಲೂ ಆ ಬಡಾವಣೆಗೆ ‘ಗೋಪಾಲಗೌಡ ಬಡಾವಣೆ’ ಎಂದು ಕರೆಯಲಾಗುತ್ತಿದೆ.

ಡಾ. ಲೋಹಿಯಾ ಅವರು ಗೋಪಾಲಗೌಡರ ರಾಜಕೀಯ ಗುರುಗಳು. ನನಗೆ ಗೋಪಾಲಗೌಡರು ಗುರುಗಳು. ನಾನು ಮೊದಲು ಗೌಡರನ್ನು ನೋಡಿದ್ದು ಮೊದಲ ಮಹಾ ಚುನಾವಣೆಯ ಸಮಯ. ನಮ್ಮ ಕೋಣಂದೂರಿನಲ್ಲಿ ಮೊಟ್ಟ ಮೊದಲು ಅವರನ್ನು ನೋಡಿ ಕಿಂದರಿಜೋಗಿಯ ಹಿಂದೆ ಹೋಗುವ ಪ್ರಾಣಿಯಂತೆ ನಾನು ಅವರ ಹಿಂದೆ ಹೋದೆ. ಅನಂತರ ಅವರೇ ಜೆ.ಎಚ್. ಪಟೇಲರನ್ನು ನಮ್ಮಲ್ಲಿಗೆ ಕರೆತಂದು ಪರಿಚಯ ಮಾಡಿಸಿದ್ದು. ಇದಾದ ನಂತರ ನಮಗೆ ಸೋಷಲಿಸ್ಟ್ ಪಾರ್ಟಿ, ಡಾ. ಲೋಹಿಯಾ, ಜಾರ್ಜ್ ಫರ್ನಾಂಡೀಸ್, ಮಧುಲಿಮಯೆ ಮುಂತಾದವರನ್ನು ನೋಡಿದ್ದು, ಕೇಳಿದ್ದು, ತಿಳಿದಿದ್ದು.

ನಾನು ಮೊದಲು ಅವರಿಂದ ಆಕರ್ಷಿತನಾದದ್ದು, ಅವರ ಮುಖ ಚರ್ಯೆ ಮತ್ತು ಅವರು ಧರಿಸುತ್ತಿದ್ದ ನೀಳವಾದ ಬಿಳಿ ಖಾದಿ ಜುಬ್ಬಾ, ತುಂಬಾ ಅಚ್ಚುಕಟ್ಟಾಗಿ ಉಡುತ್ತಿದ್ದ ಖಾದಿಯ ಕಚ್ಚೆ ಪಂಚೆ, ಕುಳಿತಾಗ ಅವರು ಸಿಗರೇಟು ಸೇದುತ್ತಿದ್ದ ವೈಖರಿ, ಬೂಟು ಧರಿಸಿ ಅವರು ನಡೆಯುತ್ತಿದ್ದ ನಿಧಾನವಾದ ಗತ್ತಿನ ನಡಿಗೆ. ಅವರು ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡುತ್ತಿದ್ದರು. ಕಪಟತನ ಎಲ್ಲೂ ಇರಲಿಲ್ಲ. ಭಾಷಣಗಳ ಹಾಸ್ಯ, ವ್ಯಂಗ್ಯ ಮಿಶ್ರಿತವಾದ ಗ್ರಾಮ್ಯ ಶೈಲಿಯಲ್ಲಿ ನಿಧಾನವಾಗಿ ಎದರು ಪಕ್ಷಗಳನ್ನು ಟೀಕಿಸುತ್ತಿದ್ದರು. ಅವರು ಎಂದೂ ವೈಯಕ್ತಿಕವಾಗಿ ಯಾರನ್ನೂ, ಎದುರಾಳಿಗಳನ್ನೂ ಟೀಕಿಸುತ್ತಿರಲಿಲ್ಲ. ಅವರ ಸತ್ಯದ ಶಕ್ತಿಯ ಮಾತುಗಳು ನೇರವಾಗಿ ಜನರ ಹೃದಯಕ್ಕೆ ತಲುಪುತ್ತಿತ್ತು.

ಸಾರ್ವಜನಿಕ ಜೀವನ ಪಾರದರ್ಶಕ ಆಗಿರಬೇಕು ಎನ್ನುವುದಕ್ಕೆ ಗೋಪಾಲಗೌಡರು ಜೀವಂತ ಪ್ರತೀಕವಾಗಿದ್ದರು. ಅವರು ಶಿವಮೊಗ್ಗಕ್ಕೆ ಬಂದರೆ ತಂಗುತ್ತಿದ್ದ ಹೋಟೆಲ್ ಕೊಠಡಿಯ ಬಾಡಿಗೆ, ಊಟೋಪಚಾರಗಳ ಖರ್ಚುಗಳನ್ನಲ್ಲದೆ, ಮುಂದೆ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ರೈಲು ಅಥವಾ ಬಸ್ಸುಗಳಲ್ಲಿ ಟಿಕೆಟ್ ಕೊಡಿಸಿ ಕೈಯಲ್ಲಿ ಸ್ವಲ್ಪ ಹಣವನ್ನು ಜೊತೆಗೆ ಒಂದು ಪ್ಯಾಕ್ ‘ಪ್ಲೇಯರ್’ ಸಿಗರೇಟುಕೊಟ್ಟು ಕಳುಹಿಸುತ್ತಿದ್ದವರು ಪಕ್ಷದ ಗೆಳೆಯರಾದ ರವಳಪ್ಪ, ದಿವಂಗತರಾದ ವೊಡ್ಡಿನಬಯಲು ರಾಮಕೃಷ್ಣರಾಯರು, ಶಂಕರನಾರಾಯಣ ಭಟ್ಟರು ಮುಂತಾದವರು. ಮೈಸೂರಿನಲ್ಲಿ ಸೆಂಟ್ರಲ್ ಕೆಫೆಯ ಗೆಳೆಯ ವಿಶ್ವನಾಥ್, ಟಿ.ವಿ. ಶ್ರೀನಿವಾಸರಾವ್, ದಿವಂಗತರಾದ ಟಿ.ಎನ್. ನಾಗರಾಜ್, ಶ್ರೀಕಂಠಶರ್ಮಾ; ಬೆಂಗಳೂರಿನಲ್ಲಿ ಬಾಟಾ ಕಂಪನಿಯ ಮ್ಯಾನೇಜರ್ ಆಗಿದ್ದ ಸುಬ್ರಮಣ್ಯ ಮುಂತಾದವರು. ಚುನಾವಣೆಗೆ ತಗಲುತ್ತಿದ್ದ ಒಟ್ಟು ಖರ್ಚು ಎರಡರಿಂದ ನಾಲ್ಕು ಸಾವಿರ ರೂಪಾಯಿ. ಬಹಳ ಹೆಚ್ಚೆಂದರೆ, ಐದು ಸಾವಿರ ರೂಪಾಯಿಗಳು ಮಾತ್ರ. ಎದುರು ಸ್ಪರ್ಧಿಗಳು ಲಕ್ಷಾಧೀಶರುಗಳು! ಇದನ್ನು ಯಾರೂ ಈಗ ನಂಬಲು ಸಾಧ್ಯವಿಲ್ಲ ನಿಜ. ಆದರೆ ಇದು ಸತ್ಯ. ಈ ಚುನಾವಣೆಗಳನ್ನು ನಡೆಸುತ್ತಿದ್ದ ಮ್ಯಾನೇಜರ್‌ಗಳಾದ ಸಾಗರದ ಬಿ.ಎಸ್. ಚಂದ್ರಶೇಖರ್, ಗೆಳೆಯ ಕಾಗೋಡು ತಿಮ್ಮಪ್ಪ ಮುಂತಾದವರು ಈಗಲೂ ಇದ್ದಾರೆ. ಈಗಿನ ಮುಖ್ಯಮತ್ರಿ ಗೆಳೆಯ ಜೆ.ಹೆಚ್. ಪಟೇಲರು ತಮ್ಮ ಊರಿಂದ ಅಲ್ಪಸ್ವಲ್ಪ ಹಣ ಕಳಿಸಿಕೊಡುತ್ತಿದ್ದರು. ನಮ್ಮ ಬಡವರ ಪಕ್ಷದಲ್ಲಿ ಅವರೊಬ್ಬರೇ ಆ ಕಾಲದಿಂದಲೂ ಶ್ರೀಮಂತರಾಗಿದ್ದವರು. ಗೋಪಾಲಗೌಡರು ಎಂದೂ ಸರ್ಕಾರಿ ಶಿಫಾರಸು ಮಾಡಿದವರಲ್ಲ: ಮಂತ್ರಿಗಳ ಮಾತಿರಲಿ, ಮುಖ್ಯಮಂತ್ರಿಗಳ ಕಚೇರಿಗೂ ಕಾಲಿಟ್ಟವರಲ್ಲ.

ಎರಡನೇ ಚುನಾವಣೆಯಲ್ಲಿ ಸೋತಾಗ ಒಮ್ಮೆ ಅವರಿಗೆ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳು ನೋಡಲು ಸಿಕ್ಕವು. ಅವುಗಳಲ್ಲಿ ಒಂದು ಕನ್ನಡ ಗೊತ್ತಿಲ್ಲದ ತಮಿಳಿನಲ್ಲಿ ಬರೆದ ಪುಸ್ತಕ! ಅದನ್ನು ಅವರು ಓದಿ, ಇಡೀ ಪುಸ್ತಕದ ಪ್ರತಿ ಸಾಲಿನಲ್ಲೂ ಇರುವ ತಪ್ಪುಗಳನ್ನು ಪಟ್ಟಿ ಮಾಡಿ ಪ್ರಜಾವಾಣಿ ಪತ್ರಿಕೆಗೆ ತಮ್ಮ ಟೀಕೆ ಸಹಿತ ಕಳುಹಿಸಿದ್ದರು. ಅವರ ಲೇಖನ ಎರಡು ದಿನ ಪ್ರಜಾವಾಣಿಯ ಮಧ್ಯಪುಟದಲ್ಲಿ ಪ್ರಕಟವಾಯಿತು. ಇದನ್ನು ಅಂದಿನ ಮುಖ್ಯಮಂತ್ರಿಗಳಾದ ಬಿ.ಡಿ. ಜತ್ತಿಯವರು ಓದಿನೋಡಿ ಕೂಡಲೇ ಆ ಪುಸ್ತಕವನ್ನು ರದ್ದು ಮಾಡಿದ್ದಲ್ಲದೆ, ಮಿತ್ರರೊಡನೆ ಮಾತನಾಡುತ್ತಾ ‘ಗೋಪಾಲಗೌಡರಿಗೆ ಪ್ರಾಥಮಿಕ ಶಾಲೆಯ ಮಕ್ಕಳ ಪುಸ್ತಕ ಓದಲು ಪುರುಸೊತ್ತು ಹೇಗೆ ಸಿಕ್ಕಿತು?’ ಎಂದು ಕೇಳಿದ್ದನ್ನು ಗೌಡರು ತಿಳಿದು, ಬುನಾದಿಯೇ ಭದ್ರ ಇಲ್ಲದಿದ್ದರೆ ಅವರು ಹೇಗೆ ವಿಧಾನಸೌಧದಲ್ಲಿ ಕೂರುತ್ತಾರಂತೆ! ಎಂದಿದ್ದರು.

೧೯೫೭-೫೮ರಲ್ಲಿ ನಾನು ಕನ್ನಡ ಯುವಜನ ಸಭಾದ ಮೂಲಕ ಕನ್ನಡ ಚಳವಳಿ ಪ್ರಾರಂಭಮಾಡಿದಾಗ, ಬೆಂಗಳೂರಿನಲ್ಲಿ ತಮಿಳರ ವಿರುದ್ಧದ ಹೋರಾಟವೇ ಆಗಿತ್ತು. ಇಂದಿಗೂ ಅದೇ ಸ್ಥಿತಿಗತಿ ಇರುವುದು ಗೊತ್ತೇ ಇದೆ. ತಮಿಳರ ವಿರುದ್ಧ ಮಾತನಾಡುತ್ತಿದ್ದ ನನಗೆ ಅವರು ಸಾಕಷ್ಟು ಸಾರಿ, ಅವರೂ ಬಡವರು, ಮನುಷ್ಯರು, ಎಂದು ಹೇಳಿ, ನನ್ನ ರೋಷಾಗ್ನಿಗೆ ಸಾಕಷ್ಟು ನಿರೇರಚಿದ್ದರು. ಆದರೂ ಕನ್ನಡಿಗರಲ್ಲಿ ಸ್ವಾಭಿಮಾನ ಬರಬೇಕು ಎಂದು ನಮ್ಮ ಕನ್ನಡ ಚಳವಳಿಯ ಬೆಂಗಳೂರಿನ ಅನೇಕ ಬಹಿರಂಗ ಸಭೆಗಳಲ್ಲಿ ಭಾಗವಹಿಸುತ್ತಿದ್ದರು.

ನಮ್ಮ ಸೋಷಲಿಸ್ಟ್ ಪಕ್ಷ ನಂತರ ಸಂಯುಕ್ತ ಸೋಷಲಿಸ್ಟ್ ಪಕ್ಷಗಳ ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿಗಳು ಯಾರಾಗಬೇಕೆಂಬ ಬಗ್ಗೆ ಜಿಜ್ಞಾಸೆ, ನಮಗೆ ಇದ್ದವರೇ ಇಬ್ಬರು, ಗೌಡರು ಮತ್ತು ಪಟೇಲರು. ಅಧ್ಯಕ್ಷರು ಗೌಡರಾಗಲಿ ಎನ್ನುವುದು ಪಟೇಲರು; ಗೌಡರು, ಪಟೇಲರಾಗಲಿ ಎನ್ನುವುದು. ಈ ಸಮಸ್ಯೆಯ ಪರಿಹಾರಕ್ಕೆ ಹಲವಾರು ಮಧ್ಯಾಹ್ನಗಳು, ದಿನಗಳು ಕಳೆದಿದ್ದಿದೆ. ಸಮ್ಮೇಳನಕ್ಕೆ ಬಂದ ಪ್ರತಿನಿಧಿಗಳೆಲ್ಲ ಸೇರಿ ಒಬ್ಬೊಬ್ಬರನ್ನು ಒಂದೊಂದು ಹುದ್ದೆಗೆ ಒಪ್ಪಿಸಬೇಕಾಗಿತ್ತು. ಹೀಗೆ ಒಂದೆರಡು ವರ್ಷ ಹುದ್ದೆಗಳು ಅದಲು ಬದಲಾಗಿ ಕಡೆಗೆ ಇಬ್ಬರೂ ತಮಗೆ ಯಾವ ಹುದ್ದೆಯೂ ಬೇಡವೆಂದು ಕಡೆಯವರೆಗೂ ಹಟ ಸಾಧಿಸಿ, ಬೇರೆಯವರನ್ನು ಅಲ್ಲಿಗೆ ಕೂರಿಸಿದ್ದೂ ಆಗಿದೆ. ಇನ್ನು ಪಕ್ಷದ ನಿರ್ಣಯಗಳ ಮಂಡನೆ ವಿಷಯಕ್ಕೆ ಬಂದರೆ, ನಮ್ಮದು ಸಣ್ಣ ಪಕ್ಷವಾದರೂ ರಾಷ್ಟ್ರೀಯ, ಅಂತರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಬಹಳ ಜವಾಬ್ದಾರಿ ಇದ್ದ ಪಕ್ಷವಾಗಿತ್ತು. ಆದ್ದರಿಂದ ನಿರ್ಣಯಗಳಲ್ಲಿನ ಪ್ರತಿ ಶಬ್ದ, ಅರ್ಧವಿರಾಮ, ಪೂರ್ಣ ವಿರಾಮಗಳ ಬಗ್ಗೆಯೂ ಕೂಡಾ ಬಹಳ ಗಂಭೀರ ಚರ್ಚೆಯಾಗುತ್ತಿತ್ತು. ಈ ಸಂಬಂಧದಲ್ಲಿ ಗೌಡರಿಗೂ ಪಟೇಲರಿಗೂ ಚರ್ಚೆ, ವಿವಾದವಾಗಿ, ವಾಗ್ಯುದ್ಧದವರೆಗೂ ಸಾಗುತ್ತಿತ್ತು. ಈ ಯುದ್ಧದ ಶಾಂತಿಗೆ ಗೆಳೆಯ ದಿವಂಗತ ಶಂಕರನಾರಾಯಣ ಭಟ್ಟರ ಯಾವುದೋ ಒಂದು ಚುಟುಕ ನಗೆಯ ಅಲೆ ಪರಿಹಾರ ಒದಗಿಸುತ್ತಿತ್ತು. ಇವರಿಬ್ಬರ ಚರ್ಚೆಯಲ್ಲಿ ದಿವಂಗತರಾದ ಖಾದ್ರಿ ಶಾಮಣ್ಣ, ಬಾ.ಸು. ಕೃಷ್ಣಮೂರ್ತಿ, ಎಸ್.ವೆಂಕಟರಾಂ, ಅಣ್ಣಯ್ಯ, ಸೀತಾರಾಮ ಅಯ್ಯಂಗಾರ್ ಹಾಗೂ ಈಗ ಇರುವ ಶ್ರೀನಿವಾಸ್, ರಾಮಸ್ವಾಮಿ, ಕೆ.ಜಿ. ಮಹೇಶ್ವರಪ್ಪ ಮುಂತಾದವರು ಎಲ್ಲರೂ ಭಾಗವಹಿಸಿದರೆ ಹಗಲೂ ರಾತ್ರಿ ಚರ್ಚೆ ಕೊನೆಗೊಳ್ಳುತ್ತಿರಲಿಲ್ಲ. ಅಂದ ಹಾಗೆ ಚರ್ಚೆ ಏನೇ ಆದರೂ ಕೇವಲ ತಾತ್ವಿಕವಾದ, ವಸ್ತುನಿಷ್ಟ ಚರ್ಚೆಯಾಗಿರುತ್ತಿತ್ತೇ ವಿನಹ, ಎಂದೂ ವೈಯಕ್ತಿಕವಾಗಿರುತ್ತಿರಲಿಲ್ಲ.

ಹಿರಿಯರಾದ ದಿವಂಗತ ಕಡಿದಾಳ್ ಮಂಜಪ್ಪನವರ ಮತ್ತು ಡಾ. ನಾಗನಗೌಡರ ಒತ್ತಡಕ್ಕೆ ಮಣಿದು ಗೌಡರು ಧಾರವಾಡದಲ್ಲಿ ಮದುವೆಯಾಗಲು ಒಪ್ಪಿಕೊಂಡರು. ನಾನು ಇವರ ಮಧ್ಯೆ ಪೋಸ್ಟ್‌ಮ್ಯಾನ್ ಆಗಿದ್ದೆ. ರಿಜಿಸ್ಟರ್ಡ್ ಮದುವೆ ನಾಳೆ ಎಂದರೆ ಇಂದು ಸಂಜೆಯವರೆಗೂ ಪಟೇಲರು ಬಂದಿರಲಿಲ್ಲ. ಕಡೆಯಲ್ಲಿ ಬಂದಿರುವುದು ತಿಳಿಯಿತು. ಕೂಡಲೇ ಧಾರವಾಡದ ಪ್ರವಾಸಿ ಮಂದಿರದಲ್ಲಿದ್ದ ಗೌಡರು ‘’ಲಿಂಗಪ್ಪ ಬಾ, ಬೀಗರು ಬಂದು ನೀಲಗಂಗಯ್ಯ ಪೂಜಾರರ ಮನೆಯಲ್ಲಿ ಇಳಿದುಕೊಂಡಿದ್ದಾರಂತೆ, ಹೋಗೋಣ’ ಎಂದು ನನ್ನನ್ನು ಕರೆದುಕೊಂಡು ಹೊರಟರು. ದಾರಿಯಲ್ಲಿ ನಾನು ಗೌಡರಿಗೆ ‘ಬೀಗರು ಎಂದರೆ ಯಾರು?’ ಎಂದು ಕೇಳಿದೆ. ಅದಕ್ಕೆ ಅವರು ‘ಇನ್ಯಾರು ನಮ್ಮ ಪಟೇಲರು’ ಎಂದರು. ವಧು, ವರರ ತಂದೆ ತಾಯಂದಿರು ಬೀಗರಾಗುತ್ತಾರೆ. ಈಗ ಇಲ್ಲಿ ವರನ ಕಡೆಯ ಬೀಗರು ಪಟೇಲರಾಗಿದ್ದರು. ಇದು ಅವರಿಬ್ಬರಲ್ಲಿದ್ದ ಬಾಂಧವ್ಯ.

ಇನ್ನು ಗೌಡರು, ಪಟೇಲರು ಇಬ್ಬರೂ ಚುನಾವಣಾ ಪ್ರಚಾರಕ್ಕೆ ಹೊರಟರೆಂದರೆ, ಕೃಷ್ಣಾರ್ಜುನರು ಹೊರಟಂತೆ. ಎದುರು ಪಕ್ಷದವರು ಪರಾಜಯ ಮಾತ್ರವಲ್ಲದೆ ಪಲಾಯನವಾದದ್ದೂ ಉಂಟು. ಇವರ ಸಭೆಗಳಿಗೆ ಜನ ಸೇರದಂತೆ ಕೆಲವರು ಅಪಪ್ರಚಾರ ಮಾಡಿದ್ದೂ ಇದೆ.

ಜೆ.ಎಚ್. ಪಟೇಲರು ಕಣ್ಣೀರು ಹಾಕಿದ್ದನ್ನು ಎಂದು ನೋಡಿರಲಿಲ್ಲ. ಗೋಪಾಲಗೌಡರು ದಿವಂಗತರಾದಾಗ ಅವರ ಶವವನ್ನು ಬೆಂಗಳೂರಿನ ಲಾಲ್‌ಬಾಗ್ ಬಳಿಯ ರುದ್ರಭೂಮಿಯ ವಿದ್ಯುತ್ ಚಿತಾಗಾರದ ಮೇಲಿರಿಸಿದಾಗ, ಅಳುತ್ತಾ ನಿಂತಿದ್ದ ನನ್ನ ಹೆಗಲ ಮೇಲೆ ಪಕ್ಕದಲ್ಲೇ ನಿಂತಿದ್ದ ಪಟೇಲರು ತಮ್ಮ ತಲೆ ಇರಿಸಿಕೊಂಡು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ಗೌಡರು, ಪಟೇಲರು ಇಬ್ಬರೂ, ಡಾ. ಲೋಹಿಯಾ ಅವರ ಅಂತಿಮ ಸಂಸ್ಕಾರ ಮುಗಿಸಿಕೊಂಡು ದೆಹಲಿಯಿಂದ ಬೆಂಗಳೂರಿಗೆ ಬಂದಾಗ ರೈಲ್ವೆ ನಿಲ್ದಾಣದಲ್ಲಿದ್ದ ನಮ್ಮೆಲ್ಲರನ್ನೂ ನೋಡಿ ಇಬ್ಬರೂ ಕಣ್ಣೀರು ಸುರಿಸಿದ್ದನ್ನು ಕೂಡಾ ಮರೆಯುವಂತಿಲ್ಲ. ಮೊನ್ನೆ ಮಧುಲಿಮಯೆ ಅವರು ತೀರಿ ಹೋದಾಗ ಪಟೇಲರು ಅವರ ಅಂತಿಮ ಸಂಸ್ಕಾರ ಮುಗಿಸಿಕೊಂಡು ಬೆಂಗಲೂರಿಗೆ ಬಂದಾಗ, ಹಿಂದಿನ ನೆನಪು ನನಗಾಯಿತು.

ಮೈಸೂರಿನಲ್ಲಿ ಕುವೆಂಪು ಅವರನ್ನು ಪ್ರಥಮ ಬಾರಿ ಗೋಪಾಲಗೌಡರು ಭೇಟಿಯಾಗಿ ಅವರ ಮನೆಯಿಂದ ಹಿಂತಿರುಗಿ ಜಟಕಾದಲ್ಲಿ ಬರುತ್ತಿದ್ದಾಗ, ಗೌಡರು ‘ಲಿಂಗಪ್ಪ, ನಿನ್ನ ಮತ್ತು ತೇಜಸ್ವಿಯವರ ದೆಸೆಯಿಂದ ಈ ದಿನ ಕುವೆಂಪು ಗುರುದರ್ಶನವೇನೋ ಆಯಿತು. ಆದರೆ ಇನ್ನೊಂದು ಕೊರಗು ನನಗೆ ಕಡೆಯವರೆಗೂ ಉಳಿದೇ ಬಿಟ್ಟಿದೆ. ಅದು ಗಾಂಧೀಜಿ ಮತ್ತು ನೇತಾಜಿ, ಈ ಇಬ್ಬರ ಪ್ರತ್ಯಕ್ಷ ದರ್ಶನ ಮಾಡಲಿಕ್ಕೆ ಆಗಲಿಲ್ಲವಲ್ಲ ಅನ್ನುವ ಕೊರಗು. ಇದು ನನ್ನ ಕೊನೆ ಉಸಿರಿರುವವರೆಗೂ ಇರುತ್ತೆ’ ಎಂದಿದ್ದರು. ಗೌಡರು ಪರಮ ಅಹಿಂಸಾವಾದಿಯಾಗಿದ್ದರು. ಕಡೆಯವರೆಗೂ ಎಂದೂ ಮಾಂಸಾಹಾರ ಮಾಡಿದವರಲ್ಲ. ಅಂತರಂಗ ಬಹಿರಂಗ ಶುದ್ಧವಾಗಿ, ಸಾಮಾಜವಾದಿಯಾಗಿ, ಪಾರದರ್ಶಕ ಪ್ರಾಮಾಣಿಕರಾಗಿ ಇಂದಿಗೂ ನಮಗೆ ಆದರ್ಶವಾದಿಯಾಗಿ ದಾರಿ ದೀಪವಾಗಿದ್ದಾರೆ. ಈ ನೆನಪುಗಳೆಲ್ಲ ನೂರರಲ್ಲಿ ಒಂದು ತುಣಕು ಮಾತ್ರ.