ಶಾಂತವೇರಿ ಗೋಪಾಲಗೌಡರು, ಅವರ ಸಮಕಾಲೀನರಲ್ಲಿ ಮತ್ತು ಅವರನ್ನು ಅಪಾರವಾಗಿ ಪ್ರೀತಿಸಿದ ಶಿಷ್ಯರಲ್ಲಿ, ಹೋರಾಟದ ಕೆಚ್ಚನ್ನು ತುಂಬಿದ ಬಂಡಾಯಗಾರ. ಅವರ ಮನಸ್ಸು ಮಗುವಿನಂತೆ: ಪ್ರೀತಿಗೆ, ವಿಶ್ವಾಸಕ್ಕೆ ಅರಳುತ್ತಿತ್ತು. ಅದೇ ಆಳುವವರ ಎದುರು! ಭ್ರಷ್ಟತೆ, ಶೋಷಣೆಯ ಎದುರು ಅವರ ಮನಸ್ಸು, ಮಾತು, ನಡೆ ಎಲ್ಲವೂ ವಜ್ರದಂತೆ ಕಠಿಣ.

ಅಧಿಕಾರಕ್ಕಾಗಿ ಸ್ವಾಭಿಮಾನ ಮತ್ತು ತಾವು ನಂಬಿದ ಸಿದ್ಧಾಂತಗಳನ್ನು ಮಾರಿಕೊಳ್ಳುವ ರಾಜಕಾರಣಿ ಅವರಾಗಿರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪನವರಿಂದ ಸಚಿವ ಸ್ಥಾನದ ಆಮಿಷ ಬಂದಾಗ ಅದನ್ನು ಧಿಕ್ಕರಿಸಿದ ಅಪರೂಪದ ತೇಜೋಮೂರ್ತಿ ಗೋಪಾಲಗೌಡರು.

ಅವರ ಕೊನೆಯ ದಿನಗಳು: ಅವರಿನ್ನೂ ಆಸ್ಪತ್ರೆಗೆ ಸೇರಿರಲಿಲ್ಲ. ಶಾಸಕರಾಗಿದ್ದ ಗೌಡರನ್ನು ನೋಡಲು ವಿಧಾನಸೌಧಕ್ಕೆ ಹೋಗಿದ್ದೆ. ಬೆಂಗಳೂರಿನ ಸಮಾಜವಾದಿ ಗೆಳೆಯರೊಬ್ಬರು ಅಂದು ನನ್ನೊಡನೆ ಬಂದಿದ್ದರು. ಚೀಟಿ ಬರೆದು ಕಳಿಸಿದೆ. ತಕ್ಷಣ ನಮ್ಮಿಬ್ಬರನ್ನೂ ಲೌಂಜ್‌ಗೆ ಕರೆಯಿಸಿಕೊಂಡರು. ಟೇಬಲ್ ಮುಂದಿನ ಕುರ್ಚಿಗಳಲ್ಲಿ ಕುಳಿತೆವು. ನನ್ನ ಪಕ್ಕದಲ್ಲಿ ಕುಳಿತ ಗೆಳೆಯನನ್ನು ನೋಡಿದ ಕೂಡಲೆ ಗೌಡರು ಸಿಟ್ಟಾದರು. ಸದಾಶಿವನಗರದ ಗುತ್ತಿಗೆದಾರರೊಬ್ಬರು, ಗೌಡರಿಗೆ ಭವ್ಯ ಬಂಗಲೆಯೊಂದನ್ನು ಕೊಡುಗೆಯಾಗಿ ಕೊಟ್ಟಿದ್ದಾರೆಂದು ಅವರು ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದರಂತೆ. ಗೌಡರಿಗೆ ಇದು ಗೊತ್ತಾಗಿತ್ತು. ಅವನನ್ನು ಕಂಡಕೂಡಲೆ ಗೌಡರ ಸ್ವಾಭಿಮಾನ ಕೆರಳಿತ್ತು. ಗೌಡರು ಅವನನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಅವನು ಲಜ್ಜೆಯಿಂದ ತಲೆತಗ್ಗಿಸಿದ.

ರಾಮನಗರ ಛತ್ರದ ಬೀದಿಯಲ್ಲಿ ಸಾಮಾಜವಾದಿ ಪಕ್ಷದ ಕಛೇರಿ ಇತ್ತು. ಗೌಡರು ಮೈಸೂರಿಗೆ ಹೋಗುತ್ತಿದ್ದಾಗ, ರಾಮನಗರದ ನಮ್ಮ ಪಕ್ಷದ ಕಛೇರಿಗೂ ಬಂದರು. ಒಳಗೆ ಬಂದು ಗೋಡೆಗೆ ನೇತುಹಾಕಿದ್ದ ಅಣ್ಣಾದೌರೈರವರ ಬಾವಚಿತ್ರವನ್ನು ದಿಟ್ಟಿಸಿ ನೋಡಿದರು. ಹಾಗೆಯೇ ಸುತ್ತಲೂ ಗಮನಿಸಿದರು : ನನ್ನ ಕಡೆ ನೋಡಿ, ವಾಕಿಂಗ್ ಸ್ಟಿಕ್‌ನಿಂದ ಪ್ರೀತಿಯ ಏಟು ಕೊಟ್ಟು, ‘ಲೋಹಿಯಾ ಪೋಟೋ ಎಲ್ಲಿ?’ ಎಂದು ಗದರಿ ಕೇಳಿದರು. ನಾನು ಅವಾಕ್ಕಾದೆ.

ಒಮ್ಮೆ ಡಾ. ರಾಮಮನೋಹರ ಲೋಹಿಯಾರವರು ಗೌಡರೊಡನೆ ಮೈಸೂರಿಗೆ ಹೋಗುವ ಕಾರ್ಯಕ್ರಮವಿತ್ತು. ಆ ಸಂಬಬೆಧವಾಗಿ ನನಗೂ ಸುತ್ತೋಲೆ ಬಂದಿತ್ತು. ಅದರಂತೆ ಬೆಳಿಗ್ಗೆ ಹತ್ತುಗಂಟೆ ಸಮಯದಲ್ಲಿ ಬಿಡದಿ ಬಳಿ ಏಕಾಂಗಿಯಾಗಿ, ಲೋಹಿಯಾ ಮತ್ತು ಗೌಡರನ್ನು ಕಾಯುತ್ತಾ ನಿಂತೆ. ಬೆಂಗಳೂರು ಕಡೆಯಿಂದ ಬಂಡ ಅಂಬಾಸಿಡರ್ ಕಾರು ನನ್ನ ಬಳಿ ನಿಂತಿತು. ಕಾರಿನೊಳಗೆ ಹಿಂಭಾಗದಲ್ಲಿ ಲೋಹಿಯಾ ಮತ್ತು ಗೌಡರು ಕುಳಿತಿದ್ದರು. ಗೌಡರು ನನಗೆ ಕಾರಿನ ಮುಂಭಾಗದಲ್ಲಿ ಕೂರುವಂತೆ ಸೂಚಿಸಿದರು. ನಾನು ಅತ್ಯಂತ ಭಯಭಕ್ತಿಯಿಂದ ಕುಳಿತೆ.

ಕಾರು ಚಲಿಸಿತು. ಗೌಡರು ಲೋಹಿಯಾರವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಲೋಹಿಯಾರವರು ನನ್ನನ್ನು ಅಭಿಮಾನದಿಂದ ಮಾತಾಡಿಸಿದರು. ನನ್ನ ಪಾಲಿಗೆ ಮಹಾನಾಯಕರಾಗಿದ್ದ ಲೋಹಿಯಾ ಮತ್ತು ಗೋಪಾಲಗೌಡರು ಜೊತೆಯಲ್ಲದ್ದ ನನಗೆ ಮಾತೇ ನಿಂತು ಹೋಗಿತ್ತು. ನಂತರ ಅವರಿಬ್ಬರಲ್ಲೂ ರಾಜಕಾರಣದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿತ್ತು. ನಾನು ಚನ್ನಪಟ್ಟಣ ಬಂದಾಗ ಕಾರಿನಿಂದಿಳಿದೆ.

ಲೋಹಿಯಾರವರನ್ನು ಸ್ವಾಗತಿಸಲು ಕಾರ್ಯಕರ್ತರನ್ನು ಸೇರಿಸಿರಲಿಲ್ಲವೆಂದು ಗೌಡರು ನ್ನನ ಮೇಲೆ ಅಸಮಾಧಾನಗೊಳ್ಳಲಿಲ್ಲ. ಏಕಾಂಗಿಯಾಗಿದ್ದರೂ ನಾನು ಅಲ್ಲಿ ಕಾದಿದ್ದಕ್ಕೆ ಅವರು ಹೆಮ್ಮೆ ಪಟ್ಟಿದ್ದರು. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ, ಬೆನ್ನುತಟ್ಟುವ ಅವರ ವಿಶೇಷಗುಣವನ್ನು ಎಂದಿಗೂ ಮರೆಯಲಾರೆ.

ಕಾಗೋಡು ಸತ್ಯಾಗ್ರಹ ಹಾಗೂ ಗೋಪಾಲಗೌಡರ ಪ್ರಭಾವದಿಂದಾಗಿ ನಾನು ರಾಮನಗರ ತಾಲ್ಲೂಕಿನ ಗ್ರಾಮಗ್ರಾಮಗಳಲ್ಲಿ ಭೂಹೀನರನ್ನು ಸಂಘಟಿಸುವ ಕಾರ್ಯಕ್ಕೆ ತೊಡಗಿದೆ. ಅರಣ್ಯ ಬಯಲನ್ನು ಕೃಷಿಕಾರ್ಮಿಕರಿಗೆ ಮಂಜೂರು ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟೆ. ನೂರಾರು ಜನ ಮಹಿಳೆಯರನ್ನೊಳಗೊಂಡ ಕೃಷಿ ಕಾರ್ಮಿಕರನ್ನು ಬೆಂಗಳೂರಿನವರೆಗೂ ಪಾದಯಾತ್ರೆಯಲ್ಲಿ ಕರೆದೊಯ್ದೆ. ಬೆಂಗಳೂರಿನ ಸುಭಾಷ್ ನಗರದಲ್ಲಿ ಗೋಪಾಲಗೌಡರು ನಮ್ಮನ್ನೇ ಕಾಯುತ್ತಿದ್ದರು. ಅಲ್ಲಿಂದ ಮೆರವಣಿಗೆಯು ಗೌಡರ ನಾಯಕತ್ವದಲ್ಲಿ ವಿಧಾನಸೌಧಕ್ಕೆ ಬಂದಿತು. ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ವಿಧಾನಸೌಧದಲ್ಲಿ ನಮಗಾಗಿ ಕಾಯುತ್ತಿದ್ದರು. ಮುಖ್ಯಮಂತ್ರಿಗಳ ಕೋಣೆಗೆ ಶಾಂತವೇರಿಯವರ ನಾಯಕತ್ವದಲ್ಲಿ ಭೂಹೀನರ ಹೋರಾಟ ಸಮಿತಿಯ ಪ್ರತಿನಿಧಿಗಳೊಡನೆ ಹೊರಟೆವು.

ಮುಖ್ಯಮಂತ್ರಿಗಳ ಛೇಂಬರಿನಲ್ಲಿ ಭೂಹೀನರ ಬೇಡಿಕೆಗಳನ್ನು ಚರ್ಚಿಸುವಾಗ ಮುಖ್ಯಮಂತ್ರಿ ನಿಜಲಿಂಗಪ್ಪನವರು ನನ್ನತ್ತ ನೋಡಿ ‘ನೀನು ಸೈನ್ಯಕ್ಕೆ ಏಕೆ ಸೇರಬಾರದು?’ ಎಂದು ಕೇಳಿದರು. (ಆಗ ಯುದ್ಧ ನಡೆಯುತ್ತಿತ್ತು) ನಾನು ತಕ್ಷಣ ‘ನಾನು ಸಿದ್ಧವಾಗಿದ್ದೇನೆ’ ಎಂದೆ. ಕೂಡಲೆ ಮಧ್ಯೆ ಪ್ರವೇಶಿಸಿದ ಗೌಡರು, ‘ಸೈನ್ಯಕ್ಕೆ ಸೇರುವುದೇನೋ ಸರಿ. ಆದರೆ ಇವನು ನರಪೇತಲ! ಆದ್ದರಿಂದ ಸೈನ್ಯಕ್ಕೆ ಸೇರಲು ಅನರ್ಹ. ದೇಶಸೇವೆಯಂತೆಯೇ ನೂರಾರು ಬಡವರ ದನಿಯಾಗಿದ್ದಾನೆ’ ಎಂದು ನಿಜಲಿಂಗಪ್ಪನವರತ್ತ ತಿರುಗಿ ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಗೇಣಿದಾರರ ಪರ ಹೋರಾಟದ ನಂತರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂಹೀನರ ಹೋರಾಟ ಶಾಂತವೇರಿಯವರನ್ನು ನಮ್ಮ ಕಡೆ ಸೆಳೆದಿತ್ತು. ಮುಂದೆ ರಾಮನಗರ ತಾಲ್ಲೂಕಿನಲ್ಲಿ ನಡೆದ ಹೋರಾಟದಲ್ಲಿ, ಕಾಗೋಡು ತಿಮ್ಮಪ್ಪ, ಕ.ಜಿ. ಮಹೇಶ್ವರಪ್ಪ ದಿವಂಗತ ಎಸ್. ವೆಂಕಟರಾಂ, ಕೋಣಂದೂರು ಲಿಂಗಪ್ಪನವರು ಪಾಲ್ಗೊಂಡಿದ್ದರು.

ಕುಂಭಾಪುರ ಕಾಲೋನಿಯ ಸಾಗುವಳಿ ಮಾಡುತ್ತಿದ್ದ, ಕೃಷಿ ಕಾರ್ಮಿಕರ ಜಮೀನು ಹಕ್ಕಿಗಾಗಿ ಹೋರಾಟ ಪ್ರಾರಂಭಿಸಿದ್ದೆವು. ಈ ಹೋರಾಟ ಹಲವಾರು ಮಗ್ಗುಲುಗಳಿಗೆ ಹರಡಿಕೊಂಡಿತ್ತು. ಒಂದು ದಿನ ನೂರಾರು ಹೋರಾಟಗಾರರೊಡನೆ, ರಾಮನಗರದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದೆವು. ಅಲ್ಲಿದ್ದ ನೌಕರರನ್ನು ಹೊರಗೆ ಕಳುಹಿಸಿ, ನಾವೇ ಕಛೇರಿಯನ್ನು ಆಕ್ರಮಿಸಿಕೊಂಡೆವು (ಇವೆಲ್ಲ ೧೯೬೦ ರ ನಂತರ ನಡೆದ ಘಟನೆಗಳು) ಇದರಿಂದಾಗಿ ನಮಗೆಲ್ಲಾ ಒಂದುವಾರ ಸಜೆಯಾಯಿತು. ರಾಮನಗರ ಕಾರಾಗೃಹದಲ್ಲಿದ್ದ ಅಸಮರ್ಪಕ ವ್ಯವಸ್ಥೆಯ ವಿರುದ್ಧ ನಾವೆಲ್ಲಾ ಉಪವಾಸ ಸತ್ಯಾಗ್ರಹ ಹೂಡಿದೆವು. ಇದರಿಂದಾಗಿ ಕಾರಾಗೃಹದ ಅಧಿಕಾರಿಗಳು ನಮಗೆ ಹೆದರಿ, ನಮ್ಮನ್ನೆಲ್ಲಾ ಬೆಂಗಳೂರಿನ ಕಾರಾಗೃಹಕ್ಕೆ ಕಳಿಸಿದರು.

ಗೋಪಾಲಗೌಡರಿಗೆ ಈ ಸುದ್ದಿ ತಲುಪಿತು. ಮೂರನೆಯ ದಿವಸವೇ ಅವರು ಎಸ್. ವೆಂಕಟರಾಂರವರೊಡನೆ ಸೆಂಟ್ರಲ್ ಜೈಲಿಗೆ ಬಂದರು. ಗೋಪಾಲಗೌಡರನ್ನು ಕಾಣುತ್ತಲೇ ಜೇಲಿನ ಅಧಿಕಾರಿ ಬೆದರಿ ಹೋದರು. ಗೌಡರು ನಮ್ಮೊಡನೆ ಪ್ರೀತಿಯಿಂದ ಮಾತಾಡಿ ಧೈರ್ಯ ತುಂಬಿದರು.

೧೯೬೦ರ ದಶಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಉರಗಹಳ್ಳಿ ಜಮೀನ್ದಾರರಾದ ಎನ್. ನರಸಿಂಹ ಅಯ್ಯಂಗಾರ್‌ರವರು ಮಾಡುತ್ತಿದ್ದ ರೈತರ ಶೋಷಣೆ ವಿರುದ್ಧ ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ನಡೆದ ಹೋರಾಟ ಚಿರಸ್ಮರಣೀಯ ಉರಗಹಳ್ಳಿ ರೈತರ ಹೋರಾಟದ ನೆನಪುಗಳು ಇಲ್ಲಿನ ಹತ್ತಾರು ಗ್ರಾದಮ ರೈತರಲ್ಲಿ ಹಚ್ಚಹಸಿರಾಗಿ ಈಗಲೂ ಉಳಿದಿದೆ. ಸುಮಾರು ಹದಿನೈದು ದಿನಗಳ ಕಾಲ ನಡೆದ ರೈತರ ಹೋರಾಟದಲ್ಲಿ ಸಾವಿರಾರು ರೈತರಿಗೆ ಭೂಮಿ ಹಕ್ಕನ್ನು ಉಳಿಸಿಕೊಟ್ಟ ಕೀರ್ತಿ ಗೋಪಾಲಗೌಡರಿಗೆ ಸಲ್ಲಬೇಕು.

ಇಂದು ಪಾರ್ಶ್ವವಾಯು ಪೀಡಿತರಾಗಿರುವ ಮಾಸ್ಟರ್ ವೆಂಕಟಪ್ಪನವರು, ಅಂದು ನಡೆದ ಉರುಗಹಳ್ಳಿಯ ರೈತಸಂಘಟನೆಯ ರೂವಾರಿಯಾಗಿದ್ದರು. ಇವರ ಬೆಂಬಲಿಗರಾಗಿ ಪುಟ್ಟೀರಮ್ಮನ ದೊಡ್ಡಿಯ ಸಿ. ಚೋಳೂರಯ್ಯ ಇದ್ದರು.

ಸುಮಾರು ಮೂರು ಸಾವಿರ ಎಕರೆಯಲ್ಲಿ ಐದುನೂರು ರೈತ ಕುಟುಂಬಗಳು ಹತ್ತಾರು ವರ್ಷಗಳಿಂದಲೂ ಅಲ್ಲಿ ಉಳುಮೆ ಮಾಡುತ್ತಿದ್ದವು. ಆ ಜಮೀನಿನ ನಿಜವಾದ ಹಕ್ಕುದಾರರು ಅವರೇ ಆಗಿದ್ದರು. ಜಾಗೀದಾರ್‌ದಾರರೇ ರೈತರಿಂದ ಕಂದಾಯ ವಸೂಲಿ ಮಾಡಿ, ಅದನ್ನು ತಾವೇ ನೇರವಾಗಿ ಸರ್ಕಾರಕ್ಕೆ ಪಾವತಿಮಾಡಿ, ತಾವೇ ಜಮೀನಿನ ಹಕ್ಕುದಾರರೆಂದು ಹೇಳಿಕೊಳ್ಳುತ್ತಿದ್ದರು. ಜಾಗೀರ್‌ದಾರ್ ನರಸಿಂಹ ಅಯ್ಯಂಗಾರ್ ಒಮ್ಮೆ ಎಲ್ಲ ರೈತರಿಗೂ ನೋಟೀಸ್ ಜಾರಿ ಮಾಡಿ, ಗಡುವಿನೊಳಗೆ ಹಣ ಪಾವತಿ ಮಾಡಿ ಜಮೀನಿನ ಹಕ್ಕು ಪಡೆಯುವಂತೆ ತಿಳಿಸಿದರು. ಈ ನೋಟೀಸಿನಿಂದ ಮಾಸ್ಟರ್ ವೆಂಕಟಪ್ಪನವರು ಜಾಗೃತಗೊಂಡರು. ಭೂಮಿಯನ್ನು ಉಳುತ್ತಿರುವವರು ರೈತರು; ಆದ್ದರಿಂದ ರೈತರೇ ಭೂಮಿಯ ಒಡೆಯರು. ಹೀಗಾಗಿ ರೈತರು ಜಾಗೀರ್‌ದಾರರಿಗೆ ಏಕೆ ಹಣ ಕೊಡಬೇಕು? ಎಂದು ರೈತರಲ್ಲಿ ತಿಳಿವಳಿಕೆ ಮೂಡಿಸಿದರು. ಜಾಗೀರ್‌ದಾರರ ವಿರುದ್ಧ ರೈತರ ಬಂಡಾಯದ ಧ್ವನಿಯನ್ನು ಎತ್ತಿಸಿದರು.

ಇದೆಲ್ಲವನ್ನು ನಾನು ವಿವರವಾಗಿ ಬರೆದು ಮಾಸ್ಟರ್ ವೆಂಕಟಪ್ಪನವರ ಮೂಲಕ ಶಾಂತವೇರಿ ಗೋಪಾಲಗೌಡರಿಗೆ ತಲುಪಿಸಿದೆ. ವಿಷಯ ತಿಳಿದ ಗೋಪಾಲಗೌಡರು ಉರಗಹಳ್ಳಿ ರೈತರ ಪರ ಹೋರಾಟಕ್ಕೆ ಪಕ್ಷದೊಡನೆ ಸಜ್ಜಾದರು.

ಉರಗಹಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ದಿನಾಂಕ ೧೮ ಜೂನ್ ೧೯೬೦ನೇ ಶನಿವಾರ ಮಧ್ಯಾಹ್ನ ಮೇಗಲದೊಡ್ಡಿ ಲಿಂಗೇಗೌಡರ ಅಧ್ಯಕ್ಷತೆಯಲ್ಲಿ ರೈತರ ಬೃಹತ್ ಸಭೆ ಜರುಗಿತು. ರಾಜ್ಯ ಸೋಷಲಿಸ್ಟ್ ಪಕ್ಷದ ಅಧ್ಯಕ್ಷರಾಗಿದ್ದ ಶಾಂತವೇರಿ ಗೋಪಾಲಗೌಡರು ಜಾಗೀರ್‌ದಾರರ ವಿರುದ್ಧ ಹೋರಾಟಕ್ಕೆ ನಿಂತರು. ವಕೀಲ ದಿವಂಗತ ಬಿ.ಕೆ. ಶ್ರೀರಾಮಯ್ಯ, ಎಚ್.ಎಂ. ವೆಂಕಟರಮಣರೂ ಸಹ ಈ ಹೋರಾಟದಲ್ಲಿ ಬಾಗವಹಿಸಿದರು.

ಗೌಡರ ಹೋರಾಟದ ಕಿಡಿ ಉರಗಹಳ್ಳಿ, ಪುಟ್ಟೀರಮ್ಮನ ದೊಡ್ಡಿ, ಮೇಗಲದೊಡ್ಡಿ, ಚಿಕ್ಕರಸನ ದೊಡ್ಡಿ, ಕರಡೀಗೌಡನ ದೊಡ್ಡಿ, ಭಕ್ತೀಪುರ, ಆಲದಮರದ ದೊಡ್ಡಿ, ಕೋಳಬಾಯಿ ದೊಡ್ಡಿ, ಚುಂಚಗ ಗ್ರಾಮಗಳಿಗೆ ಹಬ್ಬಿತು.

ಮೇಗಲದೊಡ್ಡಿಯ ಲಿಂಗೇಗೌಡರ ಅಧ್ಯಕ್ಷತೆಯಲ್ಲಿ ರೈತರ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತು. ಹೋರಾಟ ಆರಂಭವಾದ ದಿನ ನೂರಾರು ರೈತರು ರೈಲಿನಲ್ಲಿ ಬೆಂಗಳೂರಿಗೆ ಹೊರಟರು. ಮತ್ತೊಂದು ದಿನ ಉರಗಹಳ್ಳಿಯಿಂದ ಸಾವಿರಾರು ಜನ ರೈತರು ಬೆಂಗಳೂರಿಗೆ ಪಾದಯಾತ್ರೆ ಹೊರಟರು. ಇನಾಮ್‌ದಾರರ ವಿರುದ್ಧ ಘೋಷಣೆ ಮೊಳಗಿಸಿದರ. ಚಳವಳಿಗಾರರು ಚಿಕ್ಕಲಾಲ್‌ಬಾಗಿನಲ್ಲಿ ಸೇರಿ ಶಾಂತವೇಹಿಯವರ ನಾಯಕತ್ವದಲ್ಲಿ ವಿಧಾನಸೌಧದತ್ತ ತೆರಳಿದರು.

ಆಗಿನ ಕಂದಾಯ ಸಚಿವರಿಂದ ವಿಧಾನಸೌಧಕ್ಕೆ ಬರಲು ಶಾಂತವೇರಿಯವರಿಗೆ ಕರೆಬಂತು. ಹೋರಾಟ ಸಮಿತಿಯ ಮುಖಂಡರೊಡನೆ ಶಾಂತವೇರಿಯವರು ಕಂದಾಯ ಸಚಿವರನ್ನು ಭೇಟಿಮಾಡಿ ಉರಗಹಳ್ಳಿ ರೈತರ ಸಮಸಯೆಯನ್ನು ವಿವರವಾಗಿ ಸಚಿವರ ಮುಂದೆ ಬಿಡಿಸಿ ಹೇಳಿದರು. ರೈತರು ಉಳುಮೆ ಮಾಡುತ್ತಿರುವ ಜಮೀನು ಸರ್ಕಾರದ್ದೇ? ಅಥವಾ ರೈತರದ್ದೇ? ರೆಕಾರ್ಡ್ ಪರಿಶೀಲಿಸಿ ಕೂಡಲೇ ಉತ್ತರಿಸುವಂತೆ ಕಂದಾಯ ಸಚಿವರಿಂದ ಸರ್ವೇಸೆಟಲ್‌ಮೆಂಟ್ ಅಧಿಕಾರಿಗಳಿಗೆ ದೂರವಾಣಿಯಲ್ಲಿ ಆದೇಶ ಹೋಯಿತು. ಎರಡು ತಾಸುಗಳ ನಂತರ ಉಳುಮೆಯಾಗುತ್ತಿರುವ ಜಮೀನಿಗೆ ರೈತರೆ ಹಕ್ಕುದಾರರೆಂದು ಅಧಿಕಾರಿಗಳಿಂದ ಸಚಿವರಿಗೆ ಸ್ಪಷ್ಟನೆ ದೊರೆಯತು. ನೀವೇ ಜಮೀನಿನ ಹಕ್ಕುದಾರರು, ಇನಾಂದಾರರು ಹಕ್ಕುದಾರರಲ್ಲ! ಎಂದು ಸಚಿವರು ಅಲ್ಲೇ ತೀರ್ಮಾನವನ್ನು ನೀಡಿದರು.

ಜಾಗೀರ್‌ದಾರರ ವಿರುದ್ಧದ ಹೋರಾಟದಲ್ಲಿ ರೈತರು ಜಯಗಳಿಸಿದರು. ಈ ಮೂಲಕ ಸಮಾಜವಾದಿ ಪಕ್ಷ ಮತ್ತು ಶಾಂತವೇರಿ ಗೋಪಾಲಗೌಡರು ನಮ್ಮ ರೈತರ ಮನಸ್ಸಿನಲ್ಲಿ ನೆಲೆನಿಂತರು. ಕಾಗೋಡು ರೈತ ಸತ್ಯಾಗ್ರಹದ ನಂತರ ಉರಗಹಳ್ಳಿ ರೈತರ ಹೋರಾಟ ಮತ್ತೊಂದು ಚಾರಿತ್ರಿಕ ಘಟನೆಯನ್ನು ದಾಖಲಿಸಿತು.

ಒಮ್ಮೆ ರಾಮನಗರ ಬಂದ್‌ಗೆ ಕರೆ ನೀಡಿದ್ದೆ.ಇದರಿಂದಾಗಿ ಟೌನಿನಲ್ಲಿ ಪೊಲೀಸರು ೧೪೪ನೇ ಸೆಕ್ಷನ್ ಜಾರಿಮಾಡಿದ್ದರು. ನನ್ನನ್ನು ಬಂಧಿಸುವ ಸಲುವಾಗಿ ಪೊಲೀಸರು ಎಲ್ಲಾ ಕಡೆಯೂ ಹುಡುಕುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಪೊಲೀಸರ ಕಾವಲು. ಅಂದು ಸಂಜೆ ದಿಡೀರನೆ ಶಾಂತವೇರಿ ಗೋಪಾಲಗೌಡರು ರಾಮನಗರದ ಛತ್ರದ ಬೀದಿಯಲ್ಲಿ ಸೆಕ್ಷನ್ ಉಲ್ಲಂಘಿ ಹೊರಟರು. ಇದರಿಂದಾಗಿ ಪೊಲೀಸು ಗಲಿಬಿಲಿಗೊಂಡು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿ ಬಂದರು. ಗೌಡರ ಮನವೊಲಿಸಿ, ಅವರನ್ನು ಪೊಲೀಸ್ ವ್ಯಾನಿನಲ್ಲಿ ಕರೆದೊಯ್ದರು. ಗೌಡರಿಂದ ಸೆಕ್ಷನ್ ಉಲ್ಲಂಘನೆಯಾಗಿತ್ತು.

ಗೌಡರಿಗೆ ನಾನು ಆಹ್ವಾನ ನೀಡಿರಲಿಲ್ಲ. ಅವರು ಹಠಾತ್ ಕಾಣಿಸಿಕೊಂಡು ಸೆಕ್ಷನ್ ಉಲ್ಲಂಘಿಸಿ ನಮ್ಮ ಹೋರಾಟಗಾರರ ಮನೋಸ್ಥೈರ್ಯವನ್ನು ಗಟ್ಟಿಗೊಳಿಸಿದ್ದರು. ಈ ಕಾರಣಗಳಿಂದಲೇ ಅವರು ನನ್ನ ರಾಜಕೀಯ ಗುರುವಾಗಿದ್ದರು. ನನ್ನಂತಹ ನೂರಾರು ಜನ ಕಾರ್ಯಕರ್ತರ ನಾಯಕರಾಗಿದ್ದರು.

ಕರ್ನಾಟಕ ರಾಜ್ಯ ಸಮಾಜವಾದಿ ಪಕ್ಷವು ಕನ್ನಡ ಆಡಳಿತ ಭಾಷೆ ಆಗಬೇಕು, ನ್ಯಾಯಲಯದ ಹಾಗೂ ಶಿಕ್ಷಣದ ಭಾಷೆಯಾಗಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಕಾನೂನು ಭಂಗ ಚಳವಳಿಗೆ ಕರೆನೀಡಿತ್ತು. ನಾನು ಆ ಚಳವಳಿಗೆ ಇನ್ನೂ ಧುಮುಕಿರಲಿಲ್ಲ.

ಒಂದು ದಿನ ನಾನು ಬೆಂಗಳೂರಿನ ಸರ್ಕಾರಿ ಮುದ್ರಣಾಲಯದ ಮುಂದಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಅಕಸ್ಮಾತ್ ಅಲ್ಲಿ ಸಂಗಾತಿ ಮಹೇಶ್ವರಪ್ಪನವರು ನನಗೆ ಎದುರಾದರು. ನನ್ನನ್ನು ನೋಡಿ, ‘ನೀನಿನ್ನೂ ಚಳವಳಿ ಆರಂಭಿಸಿಲ್ಲವೇ? ಗೌಡರಿಗೆ ಹೇಳ್ತೆನೆ!’ ಎಂದರು. ನಾನು ನಡುಗಿದೆ. ಮಾರನೆಯ ದಿನವೇ ಕೋರ್ಟ್‌ಗೆ ಬರುತ್ತಿದ್ದ ನ್ಯಾಯಾಧೀಶರನ್ನು ತಡೆದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದೆ. ಪೊಲೀಸರಿಂದ ಬಂಧನಕ್ಕೆ ಒಳಗಾದೆ. ಗೌಡರ ಆದೇಶ ಇಲ್ಲವೇ ಅವರ ಹೆಸರು ಅದೇ ನಮಗೆ ಆದೇಶವಾಗಿತ್ತು. ಆಜ್ಞೆಯಾಗಿತ್ತು. ಈ ರೀತಿ ಗೌಡರು ನಮ್ಮೆಲ್ಲರ ಮನದಾಳದಲ್ಲಿ ಬೇರೂರಿದ್ದರು. ನಮ್ಮೆಲ್ಲರ ಅನಿವಾರ್ಯ ನಾಯಕರಾಗಿದ್ದರು.

ಜಿಲ್ಲೆಯಲ್ಲಿ ನಾವೆಲ್ಲ ಭೂಹೀನರ ಚಳವಳಿಯನ್ನು ಸಂಘಟಿಸುತ್ತಿದ್ದ ಸಂದರ್ಭದಲ್ಲಿ, ಗೌಡರು, ಜೆ.ಎಚ್. ಪಟೇಲ್ ಮತ್ತು ಕೆ.ಜಿ. ಮಹೇಶ್ವರಪ್ಪನವರೊಡನೆ, ಮಾಗಡಿ ತಾಲ್ಲೂಕು ಅಜ್ಜನಹಳ್ಳಿ ಮತ್ತಿತರ ಕಡೆ ಬರುತ್ತಿದ್ದರು. ಬಂದು ನನ್ನನ್ನು ಹಾಗೂ ಸತ್ಯಾಗ್ರಹಿಗಳನ್ನು ಹುರಿದುಂಬಿಸುತ್ತಿದ್ದರು.

ಕರ್ನಾಟಕ ಲಾಟರೀ ಯೋಜನೆಯನ್ನು ಗೌಡರು ತೀವ್ರವಾಗಿ ವಿರೋಧಿಸಿದ್ದರು. ಬಡಜನರನ್ನು ಜೂಜಿಗೆ ತಳ್ಳುವ ಅನಿಷ್ಠ ಲಾಟರಿ ಯೋಜನೆಯ ವಿರುದ್ಧ ಚಳವಳಿಯನ್ನೇ ಸಂಘಟಿಸಿದ್ದರು. ಒಮ್ಮೆ ಚನ್ನಪಟ್ಟಣದಲ್ಲಿ ಲಾಟರಿ ಎತ್ತುವ ಕಾರ್ಯಕ್ರಮವಿತ್ತು. ಅದನ್ನು ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸುವಂತೆ ನಮಗೆ ಶಾಂತವೇರಿಯವರಿಂದ ಆದೇಶಬಂದಿತು. ಅದರಂತೆ ನಾವು ಚನ್ನಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಲಾಟರಿ ಎತ್ತುವ ಸಮಯದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದೆವು. ನಮ್ಮನ್ನೆಲ್ಲಾ ಬಂಧಿಸಿದರು.

ಗೌಡರು ವರ್ಗಾವಣೆ ಮುಂತಾದ ಕೆಲಸಗಳಿಗೆ ಮಂತ್ರಿ ಅಥವಾ ಅಧಿಕಾರಿಗಳ ಬಳಿ ಎಂದೂ ಹೋದವರಲ್ಲ. ಈ ವಿಚಾರ ನಾನೇನು ಹೊಸದಾಗಿ ಹೇಳಬೇಕಿಲ್ಲ! ಆದರೂ ಗೌಡರ ಒಂದು ಮಾತನ್ನು ಇಡೀ ಅಧಿಕಾರಿ ವರ್ಗ ಹೇಗೆ ಆದೇಶದಂತೆ ಪಾಲಿಸುತ್ತಿತ್ತು ಎಂಬುದಕ್ಕೆ ಒಂದು ಘಟನೆ ನೆನಪಿದೆ:

ಭೂಹೀನ ಚಳವಳಿಯಲ್ಲಿ ಭಾಗವಹಿಸಿದ್ದ ಸತ್ಯಾಗ್ರಹಿಯೊಬ್ಬರ ಬಂಧುಗಳು ಸರ್ವೆ ಇಲಾಖೆಯಲ್ಲಿ ನೌಕರಿಯಲ್ಲಿದ್ದರು. ಸರ್ಕಾರ ಅವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿತು. ಅವರು ಕೂಡಲೆ ನನ್ನ ಬಳಿಗೆ ಬಂದು, ಗೋಪಾಲಗೌಡರ ಮೂಲಕ ವರ್ಗಾವಣೆಯನ್ನು ರದ್ದು ಮಾಡಿಸಿಕೊಡುವಂತೆ ನನಗೆ ದುಂಬಾಲುಬಿದ್ದರು. ನಾನು ಇದರಿಂದಾಗಿ ಧರ್ಮಸಂಕಟಕ್ಕೆ ಸಿಲುಕಿದೆ. ಗೌಡರ ಮನೋಭಾವ ನನಗೆ ಗೊತ್ತಿತ್ತು. ಆದರೂ ಧೈರ್ಯಮಾಡಿ ಸ್ನೇಹಿತರ ವರ್ಗಾವಣೆಯ ಬಗ್ಗೆ ವಿವರಿಸಿ ಪತ್ರ ಬರೆದು, ಅವರ ಕೈಯಲ್ಲೇ ಕಳಿಸಿಕೊಟ್ಟೆ.

ನನ್ನ ಸ್ನೇಹಿತರು ಗೋಪಾಲಗೌಡರನ್ನು ಕಂಡು ನಾನು ಬರೆದುಕೊಟ್ಟ ಪತ್ರವನ್ನು ಅವರಿಗೆ ಕೊಟ್ಟರಂತೆ. ಗೋಪಾಲಗೌಡರು ಆಗಲೇ ಆ ಇಲಾಖೆಯ ಕಮೀಷನರ್ ಅವರಿಗೆ ಫೋನ್ ಮಾಡಿ, ಕಮೀಷನರ್ ಬಳಿಗೆ ಅವನನ್ನು ಕಳಿಸಿಕೊಟ್ಟರು.

‘ಗೌಡರ ಬಳಿಗೆ ಏಕೆ ಹೋದಿರಿ! ನನ್ನ ಬಳಿಗೆ ನೇರವಾಗಿ ಬರಬಹುದಿತ್ತಲ್ಲ!’ ಎಂದು ಕಮೀಷನರ್ ಆ ನೌಕರನಿಗೆ ಕೇಳಿದರಂತೆ. ‘ಏನಾಯಿತು ಎಂಬುದಕ್ಕೆ ಮತ್ತೆ ಬಂದು ನನಗೆ ವಿಷಯ ತಿಳಿಸು, ಅಂತ ಗೌಡರು ಹೇಳಿದ್ದಾರೆ’ ಅಂದನಂತೆ ಆ ನೌಕರ, ಅದಕ್ಕೆ ಬೆದರಿದ ಕಮೀಷನರ್ ಅವರು “ಗೌಡರು ಹೇಳಿದಂತೆ ವರ್ಗಾವಣೆ ರದ್ದು ಮಾಡಿದ್ದೇನೆ. ಕೂಡಲೇ ಅವರಿಗೆ ತಿಳಿಸು’’ ಎಂದು ಹೇಳಿ ಕಳಿಸಿದರಂತೆ.

ಕಾಂಗ್ರೆಸ್ ಇಬ್ಭಾಗ, ರಾಜ್ಯದಲ್ಲಿ ದೇವರಾಜ ಅರಸರ ನಾಯಕತ್ವದಲ್ಲಿ ವೀರೇಂದ್ರ ಪಾಟೀಲರ ಸರ್ಕಾರವನ್ನು ಉರುಳಿಸುವ ಪಿತೂರಿ. ಇಂಥ ರಾಜಕೀಯ ಸಂಕ್ರಮಣ ಕಾಲದಲ್ಲಿ ಗೋಪಾಲಗೌಡರ ಆರೋಗ್ಯ ಕೆಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಾಟಾಳ್ ನಾಗರಾಜ್ ಶಾಂತವೇರಿಯವರ ವ್ಯಕ್ತಿತ್ವದಿಂದ ಆಕರ್ಷಿತರಾದವರು. ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆಸ್ಪತ್ರೆಯಲ್ಲಿದ್ದ ಗೋಪಾಲಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು, ಅತ್ಯಂತ ಉತ್ಸಾಹದಿಂದ ಅವರು ಓಡಾಡಿದ್ದನ್ನು ನಾನಾನು ಕಣ್ಣಾರೆ ಕಂಡಿದ್ದೇನೆ. ವಾಟಾಳ್ ಶ್ರದ್ಧೆಯಿಂದ ಪ್ರಯತ್ನ ಪಟ್ಟರೂ ಸಫಲವಾಗಲಿಲ್ಲ. ಈಗಿರುವ ಅನೇಕ ಜಾತಿವಾದಿ ರಾಜಕಾರಣಿಗಳು ತೆರೆಯಮರೆಯಲ್ಲಿ ಕೆಲಸಮಾಡಿ ಈ ಪ್ರಯತ್ನ ವಿಫಲವಾಗುವಂತೆ ಮಾಡಿದರು. ಇತಿಹಾಸ ಅವರನ್ನೆಂದೂ ಕ್ಷಮಿಸದು.

ಮುಂದೆ ಗೌಡರು ತೀರಿಕೊಂಡ ಮೇಲೆ, ಇದೇ ವಾಟಾಳ್ ನಾಗರಾಜ್ ಹೋರಾಟಮಾಡಿ ಗೋಪಾಲಗೌಡರ ಹೆಸರನ್ನು ವಿಧಾನಸೌಧದ ಮುಂದಿನ ಸರ್ಕಲ್‌ಗೆ ‘ಗೋಪಾಲಗೌಡ ವೃತ್ತ’ ಎಂದು ನಾಮಕರಣ ಮಾಡಲು ಕಾರಣರಾದರು. ಸರ್ಕಾರ ಅಲ್ಲಿ ಗೋಪಾಲಗೌಡರ ನಾಮಫಲಕವನ್ನು ಹಾಕುವ ಮುಂಚೆಯೇ ತಾವೇ ಹೋಗಿ ನಾಮಫಲಕ ಹಾಕಿದರು.

ರಾಮನಗರದ ಎಂ.ಜಿ. ರಸ್ತೆಯಲ್ಲಿ ಜನತಾ ಕ್ಲಬ್ ನಡೆಯುತ್ತಿತ್ತು. ಆಗ ನನಗೂ ಇಸ್ಪೀಟ್ ಆಡುವ ಹವ್ಯಾಸವಿತ್ತು. ಅಂದು ನನ್ನಲ್ಲಿ ಬಿಡಿಗಾಸೂ ಇರಲಿಲ್ಲ. ಕ್ಲಬ್ ಒಳಕ್ಕೆ ಹೋದೆ. ಆಟದಲ್ಲಿ ಮಗ್ನರಾಗಿದ್ದ ಕಾಂಗ್ರೆಸ್ ಮುಖಂಡ ಚಿಕ್ಕನರಸಿಂಹರೆಡ್ಡಿಯವರು ನನ್ನನ್ನು ನೋಡಿ, ‘ನಿಮ್ಮ ಗುರು ಗೋಪಾಲಗೌಡರು ತೀರಿಕೊಂಡರು’ ಎಂದರು. ಏನೂ ದಿಕ್ಕು ತೋರಲಿಲ್ಲ. ವರ್ಗಾವಣೆ ವಿಷಯದಲ್ಲಿ ಗೌಡರಿಂದ ಸಹಾಯ ಪಡೆದಿದ್ದ ಸರ್ವೆ ಇಲಾಖೆಯ ಮಹದೇವಪ್ಪನವರ ಬಳಿಗೆ ಬಂದೆ. ಅವನಿಗೂ ಸುದ್ದಿ ಮುಟ್ಟಿತ್ತು. ನನ್ನ ಅಸಹಾಯಕ ಸ್ಥಿತಿ ಅವನಿಗೆ ಅರಿವಾಯಿತು. ಅಲ್ಲಿಂದ ನನ್ನನ್ನೂ ಕರೆದುಕೊಂಡು ವಿಕ್ಟೋರಿಯಾ ಆಸ್ಪತ್ರೆಗೂ ಬಂದ. ಯಾಕೋ ಏನೋ, ಇಬ್ಬರೂ ಮೌನವಾಗಿದ್ದೆವು. ನಮ್ಮಿಬ್ಬರ ಕಣ್ಣಿನಲ್ಲಿಯೂ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು.

ವಿದ್ಯುತ್ ಚಿತಾಗಾರಕ್ಕೆ, ಮಾನವತಾವಾದಿಯ ಪವಿತ್ರ ದೇಹ ಹೋಯಿತು. ಗೌಡರ ದೇಹ ಬೂದಿಯಾಯಿತು. ಭಾಷಣ ಮಾಡಿದವರು, ಅಭಿಮಾನಿಗಳು ಚದುರಿಹೋದರು. ನಮ್ಮಿಬ್ಬರನ್ನು ಬಿಟ್ಟರೆ ಒಂದು ನರಪಿಳ್ಳೆಯೂ ಅಲ್ಲಿರಲಿಲ್ಲ. ಶಾಂತವೇರಿಯವರ ಅಣ್ಣನವರು ಬೂದಿ ತುಂಬಿದ ಮಡಿಕೆಯನ್ನು ಕಾರಿನಲ್ಲಿಟ್ಟುಕೊಂಡರು. ನಮ್ಮನ್ನೂ ಕಾರಿನಲ್ಲಿ ಕುಳ್ಳಿರಿಸಿಕೊಂಡು ಬಂದರು. ಕೊನೆಗೆ ಅವರುನಮ್ಮನ್ನು ಮೆಜೆಸ್ಟಿಕ್ ಬಳಿ ಇಳಿಸಿ ಹೊರಟುಹೋದರು.

ನಾವು ಬಹಳ ಹೊತ್ತು ಅಲ್ಲಿಯೆ ಇದ್ದು, ಕಾರು ಹೋದ ದಿಕ್ಕನ್ನೇ ನೋಡುತ್ತಾ ನಿಂತೆವು. ಬಡವರ, ರೈತರ, ಶ್ರಮಿಕರ, ದಲಿತರ, ತಬ್ಬಲಿ ಜಾತಿಗಳ ಕೈಹಿಡಿದಿದ್ದ ಅಪ್ರತಿಮ ಹೋರಾಟಗಾರ ಮಾನವತೆಯ ಮಹಾಮೂರ್ತಿ ಶಾಂತವೇರಿ ಗೋಪಾಲಗೌಡರು ಇನ್ನಿಲ್ಲವಾಗಿದ್ದರು. ಲೋಹಿಯಾ, ಗೋಪಾಲಗೌಡರಿಲ್ಲದ ಸಮಾಜವಾದಿ ಪಕ್ಷ ಕಾಲಗರ್ಭದಲ್ಲಿ ಮರೆಯಾಯಿತು.