ಶಾಂತವೇರಿ ಗೋಪಾಲಗೌಡರು ಡಾ. ರಾಮಮನೋಹರ ಲೋಹಿಯಾರವರ ತತ್ವಗಳಿಂದ ಪ್ರಭಾವಿತರಾಗಿದ್ದವರು. ಜಾತಿ ಮತ್ತು ವರ್ಗಗಳಿಂದ ದೂರವಾದ ನೂತನ ಸಮಾಜವನ್ನು ಕಟ್ಟಲು ಅವರು ಉತ್ಕಟಾಪೇಕ್ಷೆ ಹೊಂದಿದ್ದರೆಂಬುದನ್ನು ಎಲ್ಲರೂ ಬಲ್ಲರು. ಗೋಪಾಲಗೌಡರು ಮೂರು ಸಾರಿ ಕರ್ನಾಟಕ ರಾಜ್ಯದ ವಿಧಾನಸಭೆಯ ಸದಸ್ಯರಾಗಿ ರಾಜಧನ ರದ್ಧತಿ, ಭೂಸುಧಾರಣೆ, ವಿಧಾನ ಪರಿಷತ್ತನ್ನು ವಜಾಮಾಡುವುದು, ರೈತರ ಹಾಗೂ ಕೂಲಿಕಾರರ ಹಿತರಕ್ಷಣೆಯೇ ಮುಂತಾದ ಪ್ರಗತಿಪರ ಕಾರ್ಯಕ್ರಮಗಳಿಗೆ ಹೋರಾಡಿದ ಮಾದರಿ ಶಾಸಕರೆಂದು ಜನತೆ ತಿಳಿದಿದೆ.

ಇದರೊಂದಿಗೆ, ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ಒಂದು ಗೂಡಿಸಲು ಕಾಯಾ, ವಾಚಾ, ಮನಸಾ ದುಡಿದ ಮಹನೀಯರು ಗೋಪಾಲಗೌಡರು. ಅವರು, ‘ಮೈಸೂರು’ ಎಂಬುದರ ಬದಲು ‘ಕರ್ನಾಟಕ’ವೆಂದಾಗಲು, ಕರ್ನಾಟಕ ಏಕೀಕರಣದ ಅಧ್ವರ್ಯು ಅಂದಾನಪ್ಪ ದೊಡ್ಡ ಮೇಟಿಯವರು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದ ಖಾಸಗೀ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದವರು. ಇದೂ ಕೂಡ ಬಹುಜನರಿಗೆ ಗೊತ್ತಿರಬಹುದು. ಅದಕ್ಕೆ ಸಂಬಂಧಪಟ್ಟ ನನ್ನ ನೆನಪುಗಳನ್ನು ಇಲ್ಲಿ ಬರೆದಿದ್ದೇನೆ.

ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡಿಗರ ಮುಂದೆ ಎರಡು ಧ್ಯೇಯಗಳಿದ್ದವು. ಮೊದಲನೆಯದು ಭಾರತದ ದಾಸ್ಯವಿಮೋಚನೆಗೆ ಹೋರಾಡುವುದು; ಎರಡನೆಯದು ಹಲವಾರು ಆಡಳಿತಗಳ ಚೌಕಟ್ಟಿನಲ್ಲಿ ಹರಿದು ಹಂಚಿಹೋಗಿದ್ದ ಕನ್ನಡನಾಡಿನ ಏಕೀಕರಣವನ್ನು ಸಾಧಿಸುವುದು. ಇವೆರಡಕ್ಕೂ ಉತ್ತರ ಕರ್ನಾಟಕದ ಜನರು ಬದ್ಧ ಕಂಕಣತೊಟ್ಟು ಹೋರಾಡುತ್ತಿದ್ದರು.

ಹಳೇಮೈಸೂರಿನಲ್ಲಿ ಟಿ.ಸಿದ್ಧಲಿಂಗಯ್ಯನವರು ಪ್ರಥಮವಾಗಿ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಬ್ರಾಹ್ಮಣೇತರ ಪಕ್ಷವಾದ ಪ್ರಜಾಪಕ್ಷದಲ್ಲಿದ್ದವರೆಲ್ಲಾ ೧೯೩೭ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದು ಇತಿಹಾಸದ ಮಾತಾಗಿದೆ. ಸ್ವಾತಂತ್ರ್ಯ ಬಂದ ಮೇಲೆಯೂ ಸಹ ಹಳೇ ಮೈಸೂರಿನಲ್ಲಿ ಮಹಾರಾಜರಿಂದ ನೇಮಕವಾದ, ದಿವಾನರ ಆಡಳಿತಕ್ಕೆ ಒಳಪಟ್ಟ ಸರ್ಕಾರವೇ ಸ್ವಲ್ಪ ಕಾಲ ಮುಂದುವರೆದಿದ್ದು ಎಲ್ಲರ ನೆನಪಿನಲ್ಲಿದೆ. ‘ಮೈಸೂರು ಚಲೋ’ ಚಳವಳಿ ಯಶಸ್ವಿಯಾಗಿ ನಡೆದ ಮೇಲೆ ಕೆ. ಚಂಗಲರಾಯ ರೆಡ್ಡಿಯವರು ಕಾಂಗ್ರೆಸ್ ಮಂತ್ರಿಮಂಡಲ ರಚಿಸಿದರು. ಅಲ್ಲಿಯವರೆಗೂ ಕಾಂಗ್ರೆಸ್ ಮುಖಂಡರು ಮೈಸೂರನ್ನೊಳಗೊಂಡ ಕರ್ನಾಟಕ ಪ್ರಾಂತ್ಯ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದ್ದರು. ಕೊನೆಯ ದಿವಾನರಾದ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ ನಿರ್ಗಮಿಸಿ ಕೆ.ಸಿ. ರೆಡ್ಡಿಯವರ ಸಂಪೂರ್ಣ ಕಾಂಗ್ರೆಸ್ ಸರ್ಕಾರ ಸ್ಥಾಪಿತವಾದ ಮೇಲೆ, ಕ್ರಮೇಣ ಹಳೇ ಮೈಸೂರಿನಲ್ಲಿ ಕರ್ನಾಟಕ ಏಕೀಕರಣವಾದರೆ, ಮೈಸೂರಿನ ವೈಶಿಷ್ಟ್ಯವು ಹಾಳಾಗಿ ಮೈಸೂರು ರಾಜರ ಆಳ್ವಿಕೆ ಕೊನೆಗೊಳ್ಳುತ್ತದೆ. ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳು ಅತ್ಯಂತ ಹಿಂದುಳಿದ ಪ್ರದೇಶಗಳಾಗಿರುವುದರಿಂದ, ನಾವು ಅವರೊಡನೆ ಸೇರಿದರೆ ನಮ್ಮ ಪ್ರಗತಿಯೂ ಕುಂಠಿತವಾಗುತ್ತದೆ ಎಂಬುದಾಗಿ ಹಳೇ ಮೈಸೂರಿನ ರಾಜಕೀಯ ಮುಖಂಡರು ಪ್ರತಿಪಾದಿಸತೊಡಗಿದರು. ಆದರೆ, ಕೆ.ಪಿ,ಸಿ.ಸಿ. ಅಧ್ಯಕ್ಷರಾಗಿದ್ದ ಎಸ್.ನಿಜಲಿಂಗಪ್ಪ, ಟಿ.ಸಿದ್ಧಲಿಂಗಯ್ಯ, ಟಿ.ಸುಬ್ರಮಣ್ಣ, ಕೆ.ಪಟ್ಟಾಭಿರಾಮನ್, ಎಸ್.ರಂಗರಾಮಯ್ಯ ಮುಂತಾದ ಕಾಂಗ್ರೆಸ್ ಮುಖಂಡರು; ಜಗಳೂರು ಮಹಮದ್ ಇಮಾಮ್‌ರಂತಹ ಪ್ರಗತಿಪರ ಧೋರಣೆಯ ವಿರೋಧ ಪಕ್ಷದವರೂ ಹಾಗೂ ಎಲ್ಲಾ ಸಾಹಿತಿಗಳೂ ಮೈಸೂರು ಸಹಿತ ಕರ್ನಾಟಕ ಏಕೀಕರಣವಾಗಿ ಕನ್ನಡಿಗರೆಲ್ಲಾ ಒಂದೇ ಆಡಳಿತದಲ್ಲಿರಬೇಕೆಂದು ಬಯಸಿದರು.

ಆಗ ಕೇಂದ್ರದಲ್ಲಿ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಬಾಯಿಪಟೇಲರು, ಎಲ್ಲಾ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುತ್ತಿದ್ದರು. ಈ ಸಂಬಂಧದಲ್ಲಿ, ಭಾಷಾವಾರು ಪ್ರಾಂತ್ಯಗಳನ್ನು ರಚಿಸಬೇಕೇ ಅಥವಾ ಅದನ್ನು ಮುಂದೂಡಬೇಕೇ ಎಂಬುದನ್ನು ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರವು ‘ಧರ್’ ಆಯೋಗದ ರಚನೆ ಮಾಡಿತ್ತು. ಆ ಆಯೋಗದವರು ರಾಷ್ಟ್ರದಲ್ಲಿ ಕ್ಷಿಪ್ರವಾಗಿ ಪ್ರವಾಸ ಮಾಡಿ, ರಾಜಕೀಯ ಮುಖಂಡರ ಅಭಿಪ್ರಾಯ ಪಡೆದು, ಸಧ್ಯಕ್ಕೆ ಭಾಷಾವಾರು ಪ್ರಾಂತ್ಯ ರಚನೆ ಬೇಕಿಲ್ಲವೆಂದು ವರದಿ ನೀಡಿದ್ದರು. ಇದು ಕನ್ನಡಿಗರಿಗೆ ತೀವ್ರ ಅಸಮಾಧಾನ ನೀಡಿತ್ತು. ಈ ಪರಿಸ್ಥಿತಿಯಲ್ಲಿ ೧೯೪೮ರ ಡಿಸೆಂಬರ್‌ನಲ್ಲಿ ಜೈಪುರದ ಕಾಂಗ್ರೆಸ್ ಅಧಿವೇಶನಕ್ಕೆ, ಭಾಷಾವಾರು ಪ್ರಾಂತ್ಯಗಳನ್ನು ಪ್ರತಿಪಾದಿಸುತ್ತಿದ್ದ ಡಾ.ಪಟ್ಟಾಭಿ ಸೀತಾರಾಮಯ್ಯನವರು ಅಧ್ಯಕ್ಷರಾದರು. ಅವರು ರಚಿಸಿದ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮತ್ತು ಪಾರ್ಲಿಮೆಂಟರಿ ಬೋರ್ಡಿನಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಎಸ್. ನಿಜಲಿಂಗಪ್ಪನವರನ್ನು ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು, ಕನ್ನಡಿಗರಿಗೆ ಸ್ವಲ್ಪ ಸಮಾಧಾನ ತಂದಿತು.

ಭಾಷಾವಾರು ಪ್ರಾಂತ್ಯದ ಬಗ್ಗೆ ನೆಹರೂ, ಪಟೇಲ್ ಮತ್ತು ಪಟ್ಟಾಭಿಸೀತಾರಾಮಯ್ಯನವರು ಒಂದು ವರದಿಯನ್ನು ನೀಡುತ್ತಾ, ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾಗಿದ್ದರೆ, ದೇಶಿಯ ಸಂಸ್ಥಾನಗಳು ಯೂನಿಯನ್ ಪ್ರದೇಶಗಳಲ್ಲಿ ವಿಲೀನವಾಗತಕ್ಕದ್ದು. ದೇಶೀಯ ಸಂಸ್ಥಾನಗಳು ವಿಲೀನವಾಗದೆ ಭಾಷಾವಾರು ಪ್ರಾಂತ್ಯರಚನೆ ಸಾಧ್ಯವಿಲ್ಲ ಎಂಬ ವಿಚಾರವನ್ನು ಪ್ರತಿಪಾದಿಸಿದರು. ಮೈಸೂರು ಸಂಸ್ಥಾನವು ಕರ್ನಾಟಕದಲ್ಲಿ ದೊಡ್ಡ ದೇಶೀಐ ಸಂಸ್ಥಾನವಾಗಿ, ಪ್ರತ್ಯೇಕ ಆಡಳಿತ ಹೊಂದಿ ರಾಜರ ಅಂಕಿತದಲ್ಲಿದ್ದುದರಿಂದ, ಅದು ವಿಲೀನವಾಗದ ಹೊರತು ಕರ್ನಾಟಕ ಏಕೀಕರಣ ಸಾಧ್ಯವಿಲ್ಲ! ಎಂಬುದು ನಿಶ್ಚಿತವಾಯಿತು.

ಹಳೇ ಮೈಸೂರಿನಲ್ಲಿ ಕರ್ನಾಟಕ ಏಕೀಕರಣಕ್ಕೆ ಇದ್ದ ವಿರೋಧವನ್ನು ಕಡೆಗಣಿಸಿ, ಏಕೀಕರಣದ ಪರವಾಗಿ ಜನಜಾಗೃತಿ ಮಾಡುವುದು ಅನಿವಾರ್ಯವಾಯಿತು. ಏಕೀಕರಣದ ಪರವಾಗಿದ್ದ ಮುಖಂಡರೆಲ್ಲಾ ಎಸ್. ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಇದನ್ನು ಸಾಧಿಸಬೇಕಾದರೆ ಯುವಕರ ಬೆಂಬಲ ಅಗತ್ಯವೆಂದು ಮನಗಂಡರು. ಕರ್ನಾಟಕ ಯುವಕ ಪರಿಷತ್ತಿನ ಆಶ್ರಯದಲ್ಲಿ ಕರ್ನಾಟಕ ಏಕೀಕರಣ ಸಮಾವೇಶವನ್ನು ಏರ್ಪಡಿಸಬೇಕೆಂದು ತೀರ್ಮಾನಿಸಿದರು.

ಇದರ ಫಲವಾಗಿ ೧೯೪೯ರ ಜುಲೈ ೭ ಮತ್ತು ೮ ರಂದು ಕರ್ನಾಟಕ ಏಕೀಕರಣ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದರ ಉದ್ಘಾಟನೆಗೆ ನೇತಾಜಿ ಸುಭಾಸ್‌ಚಂದ್ರ ಬೋಸರ ಅಣ್ಣಂದಿರಾದ ಶರತ್‌ಚಂದ್ರ ಬೋಸರನ್ನು ಆಹ್ವಾನಿಸಬೇಕೆಂದು ತೀರ್ಮಾನವಾಯಿತು. ಸಭೆಯ ಅಧ್ಯಕ್ಷತೆ ವಹಿಸಲು ಕರ್ನಾಟಕ ಏಕೀಕರಣದ ಬಗ್ಗೆ ಕಳಕಳಿಹೊಂದಿ, ಎದೆಗಾರಿಕೆಯುಳ್ಳ ಯುವಕರನ್ನು ಆಯ್ಕೆಮಾಡಲು ಪ್ರಯತ್ನಿಸಿ, ಕೊನೆಗೆ ವರಿಷ್ಟರೂ, ಮುಂದಾಳುಗಳೂ ಸೇರಿ ಅಧ್ಯಕ್ಷತೆಗೆ ನನ್ನನ್ನು ಆಯ್ಕೆಮಾಡಿದರು. ಈ ವಿಷಯ ತಿಳಿದು ಎದೆ ಝಲ್ಲೆಂದಿತ್ತು. ಆ ಸಮಯದಲ್ಲಿ ಯುವ ಮುಂದಾಳುಗಳೂ, ದಾವಣಗೆರೆಯ ಪೌರಸಭಾ ಉಪಾಧ್ಯಕ್ಷರೂ ಆಗಿದ್ದ ಕೆ.ವೀರಭದ್ರಪ್ಪ, ಸಮಾಜವಾದಿ ಪಕ್ಷದ ಎ.ಎಚ್. ಶಿವನಂದಸ್ವಾಮಿ, ಶಾಂತವೇರಿ ಗೋಪಾಲಗೌಡ, ಕಾಂಗ್ರೆಸ್ ಯುವಮುಂದಾಳುಗಳಾದ ಹಾರನಹಳ್ಳಿ ರಾಮಸ್ವಾಮಿ, ಜಿ.ಎಂ.ಜವಳಿ, ಎಚ್. ಎಸ್. ದೊರೆಸ್ವಾಮಿ, ಪಾಟೀಲ್ ಪುಟ್ಟಪ್ಪ, ಆರ್. ಬಿ.ಮಾಮ್ಲೆ ದೇಸಾಯಿ, ಕೂಲಿ-ಕಾರ್ಮಿಕರ ಮುಖಂಡರಾದ ರಾಮಚಂದ್ರಶೆಟ್ಟಿ ಇವರ ಬೆಂಬಲ ನನಗಿರುವುದನ್ನು ತಿಳಿದು ಅಧ್ಯಕ್ಷತೆ ವಹಿಸಲು ನಿರ್ಧರಿಸಿದೆನು.

ಮುಖ್ಯವಾಗಿ ಶರತ್‌ಚಂದ್ರ ಬೋಸರು ಕರ್ನಾಟಕ ಪ್ರಾಂತ್ಯ ನಿರ್ಮಾಣದ ಚಳವಳಿಗೆ ಬಂಗಾಳದ ಯುವಕರ ಬೆಂಬಲವನ್ನೂ ದೊರಕಿಸಿಕೊಡುವ ಭರವಸೆ ನೀಡಿದರು. ಮೈಸೂರು ಸಹಿತ ಕರ್ನಾಟಕವಾಗಬೇಕೆಂಬುದರ ಬಗ್ಗೆ ಸಮಾವೇಶದಲ್ಲಿ ಭಾಷಣ ಮಾಡಿದವರಲ್ಲಿ ಒಮ್ಮತವಿದ್ದರೂ, ಮೈಸೂರು ರಾಜರು ತುಂಬಾ ಜನಪ್ರಿಯರು ಅವರ ಸ್ಥಾನಕ್ಕೆ ಚ್ಯುತಿ ಬಂದರೆ ಹಳೇ ಮೈಸೂರಿನಲ್ಲಿ ಜನರ ಪ್ರತಿಕ್ರಿಯೆ ಏನಾದೀತೆಂಬುದು ಕೆಲವರ ಆತಂಕಕ್ಕೆ ಕಾರಣವಾಯಿತು. ಖಾದ್ರಿ ಶಾಮಣ್ಣನವರು ಮೈಸೂರು ರಾಜರು ತಮ್ಮ ಅರಸತ್ವವನ್ನು ತ್ಯಜಿಸಿ, ಕರ್ನಾಟಕ ಏಕೀಕರಣಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು. ಅದಕ್ಕೆ ವಕೀಲರೂ ಮತ್ತು ಶಾಸಕರೂ ಆಗಿದ್ದ ಹೊಳಲ್ಕೆರೆ ಶಿವಲಿಂಗಪ್ಪನವರು ಗಲಾಟೆ ಮಾಡಿದರು. ಇದರಿಂದಾಗಿ ಸಭೆಯಲ್ಲಿ ಸ್ವಲ್ಪ ಕಾಲ ಗೊಂದಲ ಉಂಟಾಯಿತು. ಅನಂತರ ನಿಜಲಿಂಗಪ್ಪನವರು ಮಾತನಾಡಿದ ಮೇಲೆ ಸಭೆ ಶಾಂತವಾಯಿತು.

ಅದೇ ಸಭೆಯಲ್ಲಿ, ಮೈಸೂರು ಸಹಿತ ಕರ್ನಾಟಕ ಏಕೀಕರಣವನ್ನು ಸಾಧಿಸಬೇಕು. ಇದಕ್ಕಾಗಿ ಏಕೀಕರಣದ ಪರವಾಗಿ ಜನಾಭಿಪ್ರಾಯವನ್ನು ರೂಢಿಸಲು ಯುವಕರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡುವ ಅಧಿಕಾರವನ್ನು ಸಭೆಯು ಅಧ್ಯಕ್ಷನಾದ ನನಗೆ ವಹಿಸಿಕೊಟ್ಟಿತು. ಮಾರನೆ ದಿನದ ಸಭೆಯಲ್ಲಿ ಕನ್ನಡ ಸಂಸ್ಕೃತಿ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಭಾವೈಕ್ಯತೆಯ ಬಗ್ಗೆ ಸೂಕ್ತ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯ ತೀರ್ಮಾನದಂತೆ ನಾನು ಯುವಕ ಮುಂದಾಳುಗಳಲ್ಲಿ ಸಮಾಲೋಚಿಸಿ, ನನ್ನ ಅಧ್ಯಕ್ಷತೆಯಲ್ಲಿ ಒಂದು ಸ್ಥಾಯಿಸಮಿತಿಯನ್ನು ರಚಿಸಿದೆನು. ಅದಕ್ಕೆ ಕೆ.ವೀರಭದ್ರಪ್ಪನವರನ್ನು ಅಧ್ಯಕ್ಷರನ್ನಾಗಿಯೂ, ಹಾರ‍್ನಹಳ್ಳಿ ರಾಮಸ್ವಾಮಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿಯೂ ಮಾಡಲಾಯಿತು. ಜಿ.ಎಂ.ಜವಳಿಯವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಸೇರಿಸಲಾಯಿತು. ಇದರೊಂದಿಗೆ ಕರ್ನಾಟಕದ ಎಲ್ಲ ಭಾಗಗಳ ವರ್ಚಸ್ವೀ ಯುವಮುಂದಾಳುಗಳನ್ನು ಆ ಸಮಿತಿಗೆ ಆಯ್ಕೆ ಮಾಡಿದೆ. ಶಿವಮೊಗ್ಗದಿಂದ ಶಾಂತವೇರಿ ಗೋಪಾಲಗೌಡರನ್ನು ಆ ಸಮಿತಿಗೆ ಸೇರಿಸಿದ್ದಲ್ಲದೆ, ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆನು. ಅಂದಿನಿಂದ ಗೋಪಾಲಗೌಡರಿಗೂ ನನಗೂ ಗಾಢವಾದ ವಿಶ್ವಾಸ ಬೆಳೆಯಿತು.

ಕರ್ನಾಟಕ ಪ್ರಾಂತ್ಯ ನಿರ್ಮಾಣದ ಬೇಡಿಕೆಯನ್ನು ಕೇಂದ್ರದ ವರಿಷ್ಟರ ಮುಂದಿಟ್ಟು ಚರ್ಚಿಸಲು, ೧೯೪೯ರ ಅಕ್ಟೋಬರ್‌ನಲ್ಲಿ ಒಂದು ನಿಯೋಗವು ನನ್ನ ನೇತೃತ್ವದಲ್ಲಿ ದೆಹಲಿಗೆ ಹೋಗಿತ್ತು. ಆ ನಿಯೋಗದಲ್ಲಿ ಸೇರಿಕೊಳ್ಳಬೇಕೆಂದು ನಾನು ಗೋಪಾಲಗೌಡರಿಗೆ ಪತ್ರ ಬರೆದಿದ್ದೆ. ಅವರಿಗಾಗಿ ಬೆಂಗಳೂರಿನಿಂದ ದೆಹಲಿಗೆ ಹೊರಡಲು ರಿಸರ‍್ವೇಷನ್ ಕೂಡ ಮಾಡಿಸಿದ್ದೆ. ಆದರೆ ಅವರು ನನಗೆ ಪತ್ರ ಬರೆದು, ಬರಲು ಕೆಲವು ತೊಂದರೆಗಳಿರುವುದಾಗಿ ತಿಳಿಸಿದರು; ಮತ್ತು ನಮ್ಮ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲವಿರುವುದಾಗಿ ಪತ್ರ ಬರೆದರು. ಈ ನಿಯೋಗದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಇದ್ದರು.

ಅನಂತರ ನಾವು ದೆಹಲಿಗೆ ಹೋಗಿ ಎಲ್ಲ ವರಿಷ್ಟರನ್ನೂ ಕಂಡು ಮಾತುಕತೆ ನಡೆಸಿದೆವು. ಆದರೆ ಯಾರಿಂದಲೂ ಸ್ಪಷ್ಟ ಉತ್ತರ ದೊರೆಯಲಿಲ್ಲ. ಉಪ ಪ್ರಧಾನಿ ಸರ್ದಾರ್ ಪಟೇಲರು ಮಾತ್ರ, ಕರ್ನಾಟಕ ಪ್ರಾಂತ ನಿರ್ಮಾಣವಾಗಬೇಕಾದರೆ, ಮೈಸೂರು ಸಂಸ್ಥಾನ ವಿಲೀನವಾಗ ಬೇಕು. ಅದು ನಿಮ್ಮಿಂದ ಸಾಧ್ಯವೇ? ಎಂದು ನಮ್ಮ ಶಕ್ತಿಗೆ ಸವಾಲೆಸಿದರು. ನಾವು ಪ್ರಯತ್ನಿಸುವುದಾಗಿ ಹೇಳಿ ಬಂದೆವು.

ಮೈಸೂರಿಗೆ ಹಿಂತಿರುಗಿದ ಒಂದು ತಿಂಗಳೊಳಗೆ, ಅರಸೀಕೆರೆಯಲ್ಲಿ ಸರ್ವಪಕ್ಷಗಳ ಸಮ್ಮೇಳನವನ್ನು ಬಳ್ಳಾರಿ ಸಿದ್ದಮ್ಮನವರ ಅಧ್ಯಕ್ಷತೆಯಲ್ಲಿ ಕರೆದೆವು. ಮೈಸೂರು ಸಂಸ್ಥಾನವನ್ನು ವಿಲೀನಗೊಳಿಸಿ, ಕರ್ನಾಟಕ ಏಕೀಕರಣವಾಗಬೇಕೆಂಬ ಠರಾವನ್ನು ಅಂಗೀಕರಿಸಿದೆವು. ಈ ಸಂದರ್ಭದಲ್ಲಿ ನಮ್ಮ ಪ್ರಾರ್ಥನೆಯನ್ನು ಮುನ್ನಿಸಿ; ಕುವೆಂಪು ಅವರು ‘ಕರ್ನಾಟಕದ ಮಂತ್ರದೀಕ್ಷೆ’ ಎಂಬ ಕವಿತೆಯನ್ನು ರಚಿಸಿ ಕಳಿಸಿಕೊಟ್ಟಿದ್ದರು. ಅದಕ್ಕೂ ಮುಂಚೆ ಕುವೆಂಪು ಅವರು ರಚಿಸಿದ್ದ, ‘ಅಖಂಡ ಕರ್ನಾಟಕ’ ಎಂಬ ಕವನವನ್ನು ಹತ್ತಾರು ಸಾವಿರ ಪ್ರಿಂಟ್ ಮಾಡಿಸಿ ಹಂಚಿದ್ದೆವು. ಆಗಲೂ ಶಾಂತವೇರಿ ಗೋಪಾಲಗೌಡರು ನಮಗೆ ಬೆಂಬಲವಿತ್ತು ಸಹಕರಿಸಿದ್ದರು. ಅದಕ್ಕೂ ಮಿಗಿಲಾಗಿ ಕರ್ನಾಟಕ ಏಕೀಕರಣಕ್ಕೆ ವಿರೋಧವಿದ್ದ ಹಿತಾಸಕ್ತಿಗಳನ್ನು ಖಂಡಿಸಿದರು. ಇದನ್ನು ನಾನು ಎಂದಿಗೂ ಮರೆಯಲಾರೆ.

ಮುಂದೆ ಎಸ್.ನಿಜಲಿಂಗಪ್ಪನವರ ಒತ್ತಾಯದ ಮೇರೆಗೆ ಪ್ರಾಂತ್ಯಗಳನ್ನು ಭಾಷಾವಾರಾಗಿ ಪುನರ್ ವಿಂಗಡಿಸಲು, ಏರ್ಪಟ್ಟ ಫಸಲ್ ಆಲಿ ಅಯೋಗದವರು ಕರ್ನಾಟಕಕ್ಕೆ ಬಂದರು. ಆಗ ಕೆ.ಪಿ.ಸಿ.ಸಿ. ನಾಯಕರ ನೇತೃತ್ವದಲ್ಲಿ ಅನೇಕ ಸಂಘ ಸಂಸ್ಥೆಗಳು, ಕರ್ನಾಟಕ ಯುವಕರ ಪರಿಷತ್ತು, ಕರ್ನಾಟಕ ಏಕೀಕರಣ ಸಮಿತಿ, ಕರ್ನಾಟಕ ಪ್ರಾಂತ ರಚನಾ ಸಮಿತಿ ಮುಂತಾದವರೆಲ್ಲ ಆಯೋಗದ ಮುಂದೆ ಹಾಜರಾಗಿ ಸಾಕ್ಷಿನುಡಿದು, ಮನವಿ ಸಲ್ಲಿಸಿದರು. ಕರ್ನಾಟಕ ಯುವಕ ಪರಿಷತ್ತಿನ ಅಧ್ಯಕ್ಷನಾಗಿ ನಾನು ಮತ್ತು ಕರ್ನಾಟಕ ಶಾಖೆಯ ಸಮಾಜವಾದಿ ಶಾಖೆಯ ಪರವಾಗಿ ಶಾಂತವೇರಿ ಗೋಪಾಲಗೌಡರೂ ಸಹ, ಫಜಲ್ ಆಲಿ ಆಯೋಗದವರ ಮುಂದೆ ಮೈಸೂರು ನಜರಾಬಾದ್‌ನಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ಹಾಜರಾಗಿ ಸಾಕ್ಷಿ ನುಡಿದು, ವಿಳಂಬವಿಲ್ಲದೆ ಮೈಸೂರು ಸಂಸ್ಥಾನವನ್ನು ವಿಲೀನಗೊಳಿಸಿ, ಹೈದರಾಬಾದ್ ಸಂಸ್ಥಾನವನ್ನು ಭಾಷಾವಾರಾಗಿ ಒಡೆದು ಕರ್ನಾಟಕ ಪ್ರಾಂತ್ಯ ನಿರ್ಮಾಣ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಿದೆವು. ಅನಂತರ ನಾನು ಮೈಸೂರಿನ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸಂದರ್ಶಿಸಿ, ಅವರಿಗೂ ಮನವಿ ಪತ್ರ ಸಲ್ಲಿಸಿದೆ. ಆದರೆ, ಆಗ ಗೋಪಾಲಗೌಡರು ಮೈಸೂರು ರಾಜರಾದ ಜಯಚಾಮರಾಜೇಂದ್ರ ಒಡೆಯರನ್ನು ಭೇಟಿಮಾಡಲು ಅರಮನೆಗೆ ಬರಲಿಲ್ಲ. ದೇಶೀಯ ರಾಜರು ಬ್ರಿಟಿಷರ ಗುಲಾಮರಾಗಿದ್ದುದರಿಂದ, ಅವರು ದಾಸ್ಯದ ಸಂಕೇತವೆಂಬುದು ಗೌಡರ ಅಭಿಪ್ರಾಯವಾಗಿತ್ತು.

ರಾಜ್ಯಾಂಗವು ೧೯೫೦ನೇ ಜನವರಿ ೨೬ರಂದು ಜಾರಿಗೆ ಬಂದಮೇಲೆ, ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ರವರು ರಾಜಪ್ರಮುಖರೆಂಬ ನೂತನ ಹೆಸರಿನಿಂದ ರಾಜ್ಯದ ಅಧಿಪತಿಗಳಾದರು. ಅನಂತರ ೧೯೫೬ನೇ ನವಂಬರ್ ಒಂದರಂದು ಕನ್ನಡನಾಡು ಒಂದಾಗಿ ವಿಶಾಲ ಮೈಸೂರು ರಚನೆ ಆದಮೇಲೆ ಜಯಚಾಮರಾಜೇಂದ್ರ ಒಡೆಯರ್ ರವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಯಿತು. ಅವರು ೧೯೬೨ರವರೆಗೂ ಆ ಹುದ್ದೆಯಲ್ಲಿದ್ದರು. ನಿಜಲಿಂಗಪ್ಪನವರು ಎರಡನೇ ಭಾರಿ ಮುಖ್ಯಮಂತ್ರಿಗಳಾದ ಮೇಲೆ, ಅವರು ಪ್ರಧಾನಿ ನೆಹರೂ ಅವರಿಗೆ ವರದಿ ಸಲ್ಲಿಸಿದರು. ಅದರಂತೆ ಅವರನ್ನು ಮದ್ರಾಸಿನ ಗೌರ‍್ನರ್‌ರಾಗಿ ವರ್ಗಾಮಾಡಲಾಯಿತು. ಅವರು ಅಲ್ಲಿ ಸ್ವಲ್ಪ ಕಾಲವಿದ್ದು ಅನಂತರ ಗೌರ‍್ನರ್ ಪದವಿಗೆ ರಾಜೀನಾಮೆ ಇತ್ತರು. ಆದರೂ ಅವರಿಗೆ ರಾಜಧನ ಮತ್ತು ಅನೇಕ ಸವಲತ್ತುಗಳಿದ್ದವು. ಗೋಪಾಲಗೌಡರು ಶಾಸಕರಾದ ಮೇಲೆ ರಾಜಧನ ರದ್ಧತಿಗಾಗಿ ಹೋರಾಟಮಾಡಿ ಯಶಸ್ವಿಯಾದದ್ದು ಈಗ ಇತಿಹಾಸವಾಗಿದೆ.

ಮೈಸೂರಿನ ವಿಧಾನಮಂಡಲದಲ್ಲಿ ಕನ್ನಡನಾಡು ಒಂದಾಗಬೇಕೆಂಬ ಮಸೂದೆಯನ್ನು ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಮಂಡಿಸಿದರು. ಹರಿದು ಹಂಚಿಹೋಗಿರುವ ಕನ್ನಡನಾಡನ್ನು ಒಂದು ಆಡಳಿತದಲ್ಲಿ ತರುವ ಮಸೂದೆಗೆ ಬೆಂಬಲ ನೀಡಬೇಕೆಂಬ ವಿಚಾರವನ್ನು ಮಂಡಿಸಿದರು. ಆದರೆ ಕೆಲವು ಶಾಸಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಶಾಸನಸಭೆಯಲ್ಲಿದ್ದ ಗೋಪಾಲಗೌಡರು ಮತ್ತು ಆರ್. ಅನಂತರಾಮನ್‌ರಂತಹ ಪ್ರಗತಿಪರರು, ಮಸೂದೆಗೆ ಬೆಂಬಲವಿತ್ತು ಮಾತಾಡಿ ಕನ್ನಡದ ಬಗ್ಗೆ ಕನ್ನಡನಾಡಿನ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.

ದಿನಾಂಕ ೧-೧೧-೧೯೫೬ ರಂದು ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಅವರಿಂದ ನೂತನ ರಾಜ್ಯವು ‘ಮೈಸೂರು’ ಎಂದೇ ಹೆಸರು ಹೊತ್ತು ಮೂಡಿಬಂದಿತು. ಇದು ಕರ್ನಾಟಕವೆಂದಾಗಲೂ ಹಳೇ ಮೈಸೂರು ಭಾಗದ ಬಹುಮಂದಿ ಶಾಸಕರ ವಿರೋಧವು ದೊಡ್ಡದಾಗಿತ್ತು. ಹಾಗಾಗಿ ರಾಜ್ಯದ ಹೆಸರು ಕರ್ನಾಟಕವೆಂದಾಗಬೇಕೆಂಬ ಅಂದಾನಪ್ಪ ದೊಡ್ಡ ಮೇಟೆಯವರ ಖಾಸಗೀ ಮಸೂದೆಗೆ ಬೆಂಬಲ ಸಿಕ್ಕದೇ ಅದು ಮುಂದುವರಿಯುತ್ತಲೇ ಇತ್ತು. ಗೋಪಾಲಗೌರು ಇದರಿಂದಾಗಿ ತುಂಬಾ ವ್ಯಥೆಪಟ್ಟಿದ್ದರು.

ಮುಂದೆ ೧೯೭೩ರಲ್ಲಿ ಡಿ.ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ, ಕೆ.ಎಚ್. ಪಾಟೀಲ್, ಕೆ.ಎಫ್. ಪಾಟೀಲ್, ಶಂಕರ ಆಳ್ವ, ಎಚ್. ಸಿದ್ಧವೀರಪ್ಪ ಮುಂತಾದ ಮುಖಂಡರ ಪ್ರಯತ್ನವೂ ಕಾರಣವಾಗಿ ‘ಕರ್ನಾಟಕ’ ವೆಂದು ನಾಮಕರಣವಾಯಿತು. ಆದರೆ ಅದನ್ನು ನೋಡಿ ಸಂತೋಷಪಡಲು, ಅದಕ್ಕಾಗಿ ತೀವ್ರವಾಗಿ ಹೋರಾಟ ಮಾಡಿದ್ದ ಶಾಂತವೇರಿ ಗೋಪಾಲಗೌಡರು ನಮ್ಮಿಂದ ಕಣ್ಮರೆಯಾಗಿದ್ದರು.