ದೇಶದಲ್ಲಿ ಗಾಂಧಿ ಚಳವಳಿ ಬಿರುಸಾಗಿ ನಡೆಯುತ್ತಿದ್ದಾಗ, ನಮ್ಮ ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಯಾವ ರಾಜಕೀಯ ಪಕ್ಷಗಳೂ ಕ್ರಿಯಾಶೀಲವಾಗಿರಲಿಲ್ಲ. ಆ ವೇಳೆಗೆ ಇಲ್ಲಿ ಕನ್ನಡ ಪರಿಷತ್ತು, ಆಂಧ್ರಪರಿಷತ್ತು ಮತ್ತು ಮಹಾರಾಷ್ಟ್ರ ಪರಿಷತ್ತುಗಳು ಅಲ್ಪ ಸ್ವಲ್ಪ ಚಳವಳಿಯಲ್ಲಿ ಕೆಲಸ ಮಾಡುತ್ತಿದ್ದವು. ಅದೇ ಕಾಲಕ್ಕೆ ಕಲಬುರ್ಗಿಯಲ್ಲಿ ಕೆಲವು ಯುವಕರು ಕಲೆತು, ನಿಜಾಮನ ದಬ್ಬಾಳಿಕೆಯನ್ನು ಸಹಿಸಲಾರದೆ, ಇದಕ್ಕೆಲ್ಲಾ ಏನಾದರೊಂದು ಮಾಡಲೇಬೇಕೆಂದು ಯೋಚಿಸುತ್ತಿದ್ದೆವು. ನಾವೂ ಕೂಡ ಹೇಗಾದರೂ ಮಾಡಿ ನಮ್ಮ ನೆರೆಯ ಮಹಾರಾಷ್ಟ್ರದ ಸೋಲಾಪುರದವರ ಹಾಗೆ ಚಳವಳಿ ಆರಂಭಿಸಬೇಕೆಂದು ತೀರ್ಮಾನಿಸಿದೆವು. ಆಗ ಸೋಲಾಪುರದಲ್ಲಿ ಗಾಂಧಿ ಚಳವಳಿಯಲ್ಲಿದ್ದ ಮಲ್ಲಪ್ಪ ಧನಶೆಟ್ಟಿ, ಕುರಬಾನ ಹುಸೇನ್, ಜಗನ್ನಾಥ್ ಸಿಂಧೆ ಮತ್ತು ಬನ್ನೀಲಾಲ್ ಮುಂತಾದವರನ್ನು ಬ್ರಿಟಿಷ್ ಸರ್ಕಾರ ಫಾಸಿಗೆ ಹಾಕಿತ್ತು. ಇದು ನಮ್ಮ ಮನಸ್ಸಿನಲ್ಲಿ ಕೊರೆಯುತ್ತಿತ್ತು.

ಗಾಂಧಿಚಳವಳಿಯ ಕೋಲಾಹಲ ನಮ್ಮ ಹೈದರಾಬಾದ್ ಕರ್ನಾಟಕದ ಭಾಗದಲ್ಲೂ ಇತ್ತು. ಆಗ ನನ್ನಂತಹ ಕೆಲವರು ಯುವಕರು, ಸ್ವಾತಂತ್ರ ಚಳವಳಿಯಲ್ಲಿ ನಾನೂ ಭಾಗವಹಿಸಬೇಕು ಎಂದುಕೊಂಡು ಮೇಲಿಂದ ಮೇಲೆ ಸೋಲಾಪುರದ ಕಡೆಗೂ ಹೋಗಿಬರುತ್ತಾ ಅಲ್ಲಿನ ಸಂಬಂಧವನ್ನು ಇಟ್ಟುಕೊಂಡೆವು. ಅದೇ ಹೊತ್ತಿನಲ್ಲಿ ಮಹಾತ್ಮಾಗಾಂಧಿಯವರು ಈಚಲು ಮರ ಕಡಿಯಲು, ವಿದೇಶಿ ಬಟ್ಟೆಗಳನ್ನು ಸುಡಲು ಆದೇಶ ನೀಡಿದ್ದರು. ಗಾಂಧೀಜಿಯವರ ಕರೆಯ ಮೇರೆಗೆ ನಾವೆಲ್ಲ ಮನೆಮನೆ ತಿರುಗಿ ವಿದೇಶಿ ಬಟ್ಟೆಗಳನ್ನು ಸಂಗ್ರಹಿಸಿ ನಡುರಸ್ತೆಯಲ್ಲಿ ರಾಶಿ ಹಾಕಿ ಸುಟ್ಟು, ಜನಗಳಿಗೆ ತೋರಿಸುತ್ತಿದ್ದೆವು. ಮಹಾತ್ಮಾಜೀಯವರು ನಮಗೆಲ್ಲಾ ಕಲಿಸಿಕೊಟ್ಟಿದ್ದ –

ತಕಳಿ ಚಲಾ ಚಲಾಕೆ ಲೇಂಗೆ
ಸ್ವರಾಜ್ ಲೇಂಗೆ
ಕರೋಡು ರುಪಯಾ ಪರದೇಶ್ ಜಾರಹಾಹೈ
ಉನ್ ಕೊ ಬಚಾ ಬಚಾಕೆ ಲೇಂಗೆ
ಸ್ವರಾಜ್ ಲೇಂಗೆ.

ಎಂಬ ಹಾಡನ್ನು ಹಾಡುತ್ತಿದ್ದೆವು. ನಮ್ಮ ಕಡೆಯ ಗ್ರಾಮೀಣ ಭಾಗಗಳಿಗೂ ನಾವು ಹೋಗಿ, ಗಾಂಧಿ ಕಲಿಸಿಕೊಟ್ಟ ಹಾಡನ್ನು ಕನ್ನಡದಲ್ಲಿ ಮತ್ತು ಪ್ರಸಂಗ ಬಂದರೆ ಮರಾಠಿಯೊಳಗೂ ಹಾಡುತ್ತಿದ್ದೆವು. ಈ ರೀತಿಯಾಗಿ ನಾವು ಯುವಕರೆಲ್ಲಾ ಭಾಷಣ ಮಾಡುತ್ತಾ ‘ದೇಶ ಸ್ವತಂತ್ರ ಆದ ಮೇಲೆ ನಾವೆಲ್ಲ ಮನುಷ್ಯರಾಗಿ ಬಾಳುತ್ತೀವಿ. ಇಲ್ಲವಾದರೆ ನಿಜಾಮನ ಕೈಯೊಳಗೆ ಮ್ಯಾಕೇನ್‌ಪಲೆ ನಡಿಯಬೇಕಾಗುತ್ತದೆ ಎಂದು ಹೋದೆಡೆಯಲ್ಲೆಲ್ಲಾ ಹೇಳುತ್ತಿದ್ದೆವು. ಈ ರೀತಿಯಲ್ಲಿ ನಾವು ನಿಧಾನವಾಗಿ ಹೆಣ್ಣು ಮಕ್ಕಳನ್ನು, ಯುವಕರನ್ನು ಹಾಗೂ ವಯಸ್ಸಾದವರನ್ನೂ ವಿಶ್ವಾಸದಿಂದ ಮನವೊಲಿಸಿ ಚಳವಳಿ ಶುರುಮಾಡಿದೆವು. ಎಲ್ಲರೂ ಸೇರಿ ಈಚಲುಮರವನ್ನೂ ಕಡಿದೆವು. ಹೀಗೆ ನಾವೆಲ್ಲ ಚಳವಳಿಯಲ್ಲಿದ್ದಾಗ ನಮ್ಮನ್ನು ಹಿಡಿಯಲು ವಾರೆಂಟ್ ಹೊರಡಿಸಿದರು. ನಮ್ಮ ಮನೆಗೆ ಬಂದು ಮನೆಯನ್ನೆಲ್ಲಾ ತಪಾಸಣೆ ಮಾಡಿದರು. ನಾವ್ಯಾರೂ ಪೋಲೀಸರ ಕೈಗೆ ಸಿಗದೆ ರಾತ್ರೋರಾತ್ರಿ ಮಹಾರಾಷ್ಟ್ರ ಸೇರಿದೆವು.

ಮುಂದೆ ೧೯೩೭ರಲ್ಲಿ ಸ್ವಾಮಿ ರಮಾನಂದತೀರ್ಥರು ಜೈಲಿನಿಂದಲೇ, ಸರ್ಕಾರಿ ಕಛೇರಿಗಳ ಮೇಲೆ ರಾಷ್ಟ್ರ ಬಾವುಟ ಹಾರಿಸಬೇಕು ಎಂದು ಕರೆಕೊಟ್ಟರು. ನಾವು ಆ ಕರೆಯ ಮೇರೆಗೆ ಕಲಬುರ್ಗಿ ಬಜಾರದಲ್ಲಿ, ಕಿರಾಣಿ ಬಾಜಾರದಲ್ಲಿ, ಪೋರ್ಟ್ ರೋಡಿನಲ್ಲಿ ಒಂದು ಧ್ವಜಾ ಹಾಗೂ ಬಹ್ಮಪೂರ ಪೋಲೀಸ್ ಸ್ಪೇಷನ್ ಮೇಲೆ ಒಂದು ಧ್ವಜವನ್ನು ರಾತ್ರೋರಾತ್ರಿ ಯಾರಿಗೂ ಗೊತ್ತಾಗದ ಹಾಗೆ ಹಾರಿಸಿದೆವು.

ಮುಂದೆ ದೇಶ ಸ್ವಾತಂತ್ರ್ಯ ಆದ ಮೇಲೆ, ಕಾಂಗ್ರೆಸ್ ಪಕ್ಷ ನಮ್ಮ ದೇಶವನ್ನು ನೆಹರೂರವರ ಮೂಲಕ ಆಳುತ್ತಿತ್ತು. ಆ ಸರ್ಕಾರದಲ್ಲಿ ಬಂಡವಾಳಶಾಹಿಗಳೇ ಹೆಚ್ಚಾಗಿದ್ದರು. ಸ್ವಾತಂತ್ರ್ಯಾ ನಂತರ ನಮ್ಮ ರೈತರು, ದಲಿತರು ಹಾಗೂ ಕಾರ್ಮಿಕರ ಬದುಕು ಹಸನಾಗುತ್ತದೆ ಎಂದು ಕನಸುಕಂಡಿದ್ದೆವು. ಅದೆಲ್ಲವನ್ನೂ ಕಾಂಗ್ರೆಸ್ ಸರ್ಕಾರ ಸುಳ್ಳುಭರವಸೆಗಳನ್ನು ನೀಡುತ್ತಾ ಹುಸಿಗೊಳಿಸಿತು. ಇದು ಮಹಾತ್ಮಾ ಗಾಂಧಿಯವರಿಗೂ ಹಿಡಿಸಲಿಲ್ಲ. ಅವರು ಅನೇಕ ಸಾರಿ ಉಪ್ಪು ಸಕ್ಕರೆ ಮೇಲಿನ ತೆರಿಗೆಯನ್ನು ತೆಗೆಯಬೇಕು ಎಂದು ಸರಕಾರದ ಮುಂದೆ ಹೇಳುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿದ್ದ ಬಂಡವಾಳಶಾಹಿಗಳು ಎಂದೂ ಅದನ್ನು ಜಾರಿಗೆ ತರಲಿಲ್ಲ. ಅದಕ್ಕೆ ನಾವೆಲ್ಲರೂ, ಈ ಕಾಂಗ್ರೆಸ್ ಪಾರ್ಟಿ ಬಂಡವಾಳಗಾರರ ಬಗಲ್‌ಬಚ್ಚಾ ಆಗ್ಯಾದ, ಎಂದು ಹೇಳುತ್ತಿದ್ದೆವು.

ಇದೇ ಹೊತ್ತಿನಲ್ಲಿ ನಮ್ಮ ಭಾಗದಲ್ಲಿ ರಮಾನಂದ ಸ್ವಾಮಿಯವರು, ಸ್ಟೇಟ್ ಕಾಂಗ್ರೆಸ್ ಪಾರ್ಟಿ ಮಾಡಿದರು. ನಮ್ಮಲ್ಲಿ ಕೆಲವರು ಆ ಕಾಂಗ್ರೆಸ್ ಪಾರ್ಟಿ ಸೇರುವ ಬಗ್ಗೆ ವಿಚಾರ ಮಾಡುತ್ತಿದ್ದರು. ಅದರಲ್ಲೇ ಕೆಲವು ಕಮ್ಯೂನಿಸ್ಟ್ ಮತ್ತು ಸೋಶಲಿಸ್ಟ್ ವಿಚಾರದ ಯುವಕರ ಗುಂಪು, ದೇಶದಲ್ಲಿ ಅಸಮಾನತೆ ಹೆಚ್ಚಾಗಿದೆ, ಅದೇ ರೀತಿ ಸಮಾನತೆಗಾಗಿ ಹೋರಾಡುತ್ತಿರುವ ಸಮಾಜವಾದಿ ಚಳವಳಿಗೆ ಸೇರಿ ಅದನ್ನು ಕಟ್ಟಿ ಬೆಳೆಸಬೇಕು. ಅದರೊಡನೆ ಕೆಲಸ ಮಾಡಬೇಕು ಅಂತ ತಿಳಿದು ಸಮಾಜವಾದಿ ಚಳವಳಿಗೆ ಬಂದೆವು. ಡಾ. ರಾಮಮನೋಹರ ಲೋಹಿಯಾ ಅವರೊಡನೆ ಸಂಬಂಧ ಬೆಳೆಸಿಕೊಂಡೆವು.

ಮುಂದೆ ಅದೇ ಸಮಾಜವಾದಿ ಪಕ್ಷ ಒಡೆದು ಎರಡಾಯಿತು. ೧೯೫೫ರ ಡಿಸೆಂಬರ್ ಹೈದರಾಬಾದಿನಲ್ಲಿ ಡಾ.ರಾಮಮನೋಹರ ಲೋಹಿಯಾ ನೇತೃತ್ವದ ಸಮಾಜವಾದಿ ಪಕ್ಷದ ಮೊದಲನೆ ಸಮ್ಮೇಳನ ನಡೆಯಿತು. ಆ ಸಮ್ಮೇಳನದಲ್ಲಿ ಭಾಗವಹಿಸಲು ನಾನು ಕಲುಬುರ್ಗಿಯಿಂದ ಹೋಗಿದ್ದೆ. ಆ ಸಮ್ಮೇಳನ ಏಳು ದಿವಸಗಳ ಕಾಲ ನಡೆಯಿತು. ನಾನು ಆ ಏಳುದಿವಸವೂ ಅಲ್ಲೇ ಇದ್ದು ಲೋಹಿಯಾರವರ ಭಾಷಣವನ್ನು ಸಂಪೂರ್ಣವಾಗಿ ಕೇಳಿದೆ. ಅಲ್ಲಿಂದ ನನಗೆ ಸಮಾಜವಾದಿ ವಿಚಾರಧಾರೆಯ ತಿಳಿವು ಬಂದಿತು.

ಆ ನಂತರ ಕಲುಬುರ್ಗಿಗೆ ಬಂದು, ಸಮಾಜವಾದಿ ಪಕ್ಷದ ಜಿಲ್ಲಾ ಘಟಕವನ್ನು ಆರಂಭಿಸಿದೆವು. ಹಳ್ಳಿಗಳೆಲೆಲ್ಲಾ ಸುತ್ತಿ ಪಕ್ಷದ ಸದಸ್ಯರನ್ನು ಹೆಚ್ಚು ಮಾಡಿದೆವು. ಕೆಲವು ಕಡೆ ಪಕ್ಷದ ಘಟಕವನ್ನು ತೆರೆದೆವು.

ಮುಂದೆ ೧೯೫೬ರಲ್ಲಿ ಮದ್ರಾಸಿನಲ್ಲಿ ಪಕ್ಷದ ಒಂದು ಅಧ್ಯಯನ ಶಿಬಿರ ನಡೆಯಿತು. ಲೋಹಿಯಾರವರೇ ಆ ಶಿಬಿರದ ನೇತೃತ್ವ ವಹಿಸಿದ್ದರು. ನಾನೂ ಇಲ್ಲಿನ ಕಾರ್ಯಕರ್ತರ ಸಹಾಯದಿಂದ ಮದ್ರಾಸಿನ ಶಿಬಿರಕ್ಕೆ ಹೋದೆ. ಅಲ್ಲಿಂದ ನನಗೆ ಲೋಹಿಯಾರವರ ನಿಕಟ ಸಂಪರ್ಕ ಒದಗಿಬಂತು. ಶಿಬಿರದಲ್ಲಿ ಡಾ. ಲೋಹಿಯಾರವರು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಭಾಷಣ ಮಾಡುತ್ತಿದ್ದರು. ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಅದೇ ಶಿಬಿರಕ್ಕೆ ಬೆಂಗಳೂರಿನಿಂದ ಗೋಪಾಲಗೌಡರ ಗೆಳೆಯರಾದ ಎಸ್. ವೆಂಕಟರಾಂ ಬಂದಿದ್ದರು. ಅವರು ಪ್ರತಿದಿನ ಸಂಜೆ ಹೊತ್ತು ಬಿಡುವಾದಾಗ ಲೋಹಿಯಾರವರ ಭಾಷಣದ ಸತ್ವನ್ನೆಲ್ಲಾ ನನಗೆ ತಿಳಿಸುತ್ತಿದ್ದರು. ನಾನು ಅದನ್ನೆಲ್ಲಾ ಬರೆದುಕೊಂಡು ಬಂದಿದ್ದೆ.

ಮದ್ರಾಸಿನ ಶಿಬಿರದಿಂದ ಬಂದ ನಂತರ, ನಾವು ಸಮಾಜವಾದಿ ಚಟುವಟಿಕೆಗಳನ್ನು ತೀವ್ರಗೊಳಿಸಿದೆವು. ಆಗ ಕಲುಬುರ್ಗಿಯಲ್ಲಿ ಬಂದೇನವಾಜ್ ಮತ್ತು ಶರಣ ಬಸಪ್ಪ ಜಾತ್ರೆ ನಡೆಯುತ್ತಿತ್ತು. ಆ ಪ್ರಸಿದ್ಧ ಜಾತ್ರೆಗೆಂದು ಹೊರಗಿನಿಂದ ಬರುವ ಯಾತ್ರಿಗಳಲ್ಲಿ ದೊಡ್ಡವರಿಗೆ, ನಾಲ್ಕಾಣೆ, ಸಣ್ಣವರಿಗೆ ಎರಡಾಣೆ ಎಂಬುದಾಗಿ ತಲೆಗಂದಾಯ ವಸೂಲಿ ಮಾಡುತ್ತಿದ್ದರು. ಈ ತಲೆಗಂದಾಯವನ್ನು ಜನರಿಂದ ವಸೂಲಿ ಮಾಡುವುದು ಗುಲಾಮಗಿರಿ ಸಂಸ್ಕೃತಿಯದ್ದು. ಇದು ಅಪಮಾನಕರವಾದದ್ದು ಎಂದು ತಿಳಿದ ನಾವು ಸಮಾಜವಾದಿ ಗೆಳೆಯರೆಲ್ಲ ಕೂಡಿ, ತಲೆಗಂದಾಯ ವಸೂಲಿ ಮಾಡುವುದರ ವಿರುದ್ಧ ಪಿಕೆಟೆಂಗ್ ಮಾಡಲು ಮುಂದಾದೆವು. ತಲೆಗಂದಾಯ ವಸೂಲಿ ಮಾಡುವ ಹೊತ್ತಿನಲ್ಲಿ ಹೋಗಿ ಬಲಾತ್ಕಾರವಾಗಿ ತಡೆಯುತ್ತಿದ್ದೆವು. ತಲೆಗಂದಾಯ ಕೊಡುವುದು ಅಪಮಾನಕರ ಎಂದು ಜನರಿಗೆ ತಿಳಿಯ ಹೇಳುತ್ತಾ, ಅವರಿಗೂ ತಲೆಗಂದಾಯ ವಸೂಲಿ ಮಾಡಬೇಡಿ ಎಂದು ಹೇಳುತ್ತಿದ್ದೆವು. ಆದರೆ ಅವರು ನಮ್ಮ ಮೇಲೆ ಪೋಲೀಸರನ್ನು ಛೂ ಬಿಟ್ಟು ಹೊಡೆಸಿ ಬಂಧಿಸಿ ಎಂಟು ದಿವಸ ಜೈಲಿನಲ್ಲಿಟ್ಟು ಮತ್ತೆ ಜನರನ್ನು ಹೀನಾಯಕರ ಭಾಷೆಯಲ್ಲಿ ಮಾತಾಡಿ ಅಪಮಾನ ಮಾಡುತ್ತಿದ್ದರು. ಈ ಕಾರಣಕ್ಕಾಗಿ ನಾವು ಈ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದೆವು.

ಹೀಗೆ ಒಂಬತ್ತು ಸಲ ನಾವು ಪಿಕೆಂಟಿಂಗ್ ಮಾಡಿ ಜೈಲಿಗೆ ಹೋಗಿದ್ದೆವು. ಈ ತಲೆಗಂದಾಯ ವಸೂಲಿ ಮಾಡುವ ಪದ್ಧತಿ ೧೯೬೯ರ ತನಕ ಜಾರಿಯಲ್ಲಿತ್ತು. ೧೯೬೯ರಲ್ಲಿ ನಾನು, ಮುಸ್ಲಿಮರು ಬಹುಸಂಖ್ಯಾತರಾಗಿರುವ ರೋಜಾ ಓಣಿಯಿಂದ ಮುನಿಸಿಪಾಲಿಟಿಗೆ ಆರಿಸಿ ಬಂದೆ. ಮುನಿಸಿಪಾಲಿಟಿ ಸಭೆಯಲ್ಲಿ ಒಂದು ಪ್ರಸ್ತಾಪ ಇಟ್ಟು, ಅದನ್ನು ಪಾಸು ಮಾಡಿಸಿ ಜನರಿಂದ ವಸೂಲಿ ಮಾಡುತ್ತಿದ್ದ ತಲೆಗಂದಾಯವನ್ನು ರದ್ದುಪಡಿಸಿದೆ.

ಲೋಹಿಯಾ ಅವರು ಈ ದೇಶದ ಬಹುದೊಡ್ಡ ಚಿಂತಕರು. ಇದನ್ನು ನಮ್ಮ ಅನುಭವದ ಮೂಲಕವೇ ಕಂಡುಕೊಂಡೆವು. ಸಮಾಜವಾದ ಎಂದರೆ ಏನೆಂಬುದನ್ನು ಸಾಮಾನ್ಯರಿಗೂ ತಿಳಿಯುವ ಹಾಗೆ ಬಿಡಿಸಿ ಹೇಳುತ್ತಿದ್ದರು.

ಮದರಾಸಿನ ಅಧ್ಯಯನ ಶಿಬಿರದಲ್ಲಿ ‘ನೀವು ಒಮ್ಮೆ ಕಲುಬುರ್ಗಿಗೆ’ ಬರಬೇಕು ಎಂದು ಲೋಹಿಯಾರವರಲ್ಲಿ ಕೇಳಿಕೊಂಡಿದ್ದೆ. ಅದರಂತೆ ಲೋಹಿಯಾರವರು ೧೯೫೬ರಲ್ಲಿ ಕಲುಬುರ್ಗಿಗೆ ಬಂದರು. ಬಂದು ನನ್ನ ಮನೆಯಲ್ಲೇ ಉಳಿದುಕೊಂಡಿದ್ದರು. ನೆಹರೂಗಂಜಿನಲ್ಲಿ ನನ್ನ ಅಧ್ಯಕ್ಷತೆಯಲ್ಲೇ ಬಹಿರಂಗ ಸಭೆ ನಡೆಯಿತು. ಲೋಹಿಯಾರವರು ಅಲ್ಲಿ ಭಾಷಣ ಮಾಡಿದರು. ಮುಂದೆ ೧೯೬೧ರಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೆ. ಅದರ ಸಲುವಾಗಿಯೂ ಕಲುಬುರ್ಗಿಗೆ ಬಂದಿದ್ದರು. ಇಲ್ಲಿನ ಗಣೇಶ ಮಂದಿರದ ಎದುರು ಬಹಿರಂಗ ಪ್ರಚಾರ ಸಭೆಯನ್ನು ಏರ್ಪಡಿಸಿದ್ದೆವು. ಆ ಸಭೆಯಲ್ಲಿ ಲೋಹಿಯಾ, ‘ಧಐರ್ಯವಂತ ಮತ್ತು ಧನವಂತ ಇವರಿಬ್ಬರಲ್ಲಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಬೇಕಾದಾಗ, ನಾನು ಧೈರ್ಯವಂತನನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಇವತ್ತು ವೀರಣ್ಣ ತಿಮ್ಮಾಜಿಯಂತಹ ಮನುಷ್ಯ ಕಾಂಗ್ರೆಸ್‌ನ ಎದುರು ಚುನಾವಣೆಯಲ್ಲಿ ಸ್ಪರ್ಧಿಸಿರುವುದೇ ನನಗೆ ಬಹಳ ಮೆಚ್ಚುಗೆಯಾಗಿದೆ. ಅವರ ಸಲುವಾಗಿಯೇ ನಾನು ಇಲ್ಲಿನವರೆಗೂ ಬಂದಿದ್ದೇನೆ’ ಎಂದು ಹೇಳಿದರು.

ಮುಂದೆ ಕರ್ನಾಟಕ ಸಮಾಜವಾದಿ ಪಕ್ಷದಲ್ಲಿ ಗೋಪಾಲಗೌಡರ ನೇತೃತ್ವದಲ್ಲಿ ಸಮಾಜವಾದಿ ಚಟುವಟಿಕೆಗಳನ್ನು ಶುರು ಮಾಡಿದೆವು. ಮೊಟ್ಟಮೊದಲು ಗೋಪಾಲಗೌಡರೊಂದಿಗೆ ನನ್ನ ಭೇಟಿಯಾಗಿದ್ದು ಹಂಪಿಯಲ್ಲಿ. ಕರ್ನಾಟಕ ಏಕೀಕರಣ ಚಳವಳಿ ಇದ್ದಾಗ ಅವರು ಹಂಪಿಗೆ ಬಂದಿದ್ದರು. ಹಂಪಿಯಲ್ಲಿ ಏಕೀಕರಣ ಕುರಿತು ಬಹಳ ಪರಿಣಾಮಕಾರಿಯಾದ ಭಾಷಣ ಮಾಡಿದರು. ಅವರ ಭಾಷಣ ನನ್ನ ಮೇಲೆ ತುಂಬು ಪ್ರಭಾವ ಬೀರಿತು. ಅಲ್ಲಿಂದ ನಮ್ಮಿಬ್ಬರ ಸಂಪರ್ಕ ಬೆಳೆದು, ಮುಂದೆ ಸಮಾಜವಾದಿ ಪಕ್ಷದ ವರ್ಕಿಂಗ್ ಕಮಿಟಿಗೆ ನನ್ನನ್ನು ಸದಸ್ಯನನ್ನಾಗಿ ಮಾಡಿಕೊಂಡರು.

ಮುಂದೆ ಹತ್ತು ವರ್ಷಗಳ ತನಕ ನಾನು ಈ ಕಮಿಟಿಯ ಸದಸ್ಯನಾಗಿದ್ದೆ. ಗೋಪಾಲಗೌಡರ ಆದೇಶದಂತೆ ನಾವು ಇಲ್ಲಿ ಎಷ್ಟೋ ಸಲ ಚಳವಳಿಗಳನ್ನು ನಡೆಸಿದೆವು. ಕಲುಬುರ್ಗಿ ವಿಭಾಗದ ಹಳ್ಳಿ ಹಳ್ಳಿಗಳಲ್ಲೆಲ್ಲಾ ತಿರುಗಿ ಸಮಾಜವಾದಿ ಪಕ್ಷವನ್ನು ಕಟ್ಟಿದೆವು. ಹಳ್ಳಿ ಮಂದಿ ನಮ್ಮ ಪಕ್ಷವನ್ನು ಸೊಸಲಿಟಿ, ಸೊಸಲಿಟಿ ಅಂತ ಕರೆಯುತ್ತಿದ್ದರು. ಇನ್ನು ಕಲಿತ ಮಂದಿಯಂತೂ ನಮ್ಮ ಪಕ್ಷಕ್ಕೆ ಬರುತ್ತಿರಲಿಲ್ಲ. ಯಾಕೆಂದರೆ ಸಮಾಜವಾದಿ ಪಕ್ಷ ಎಂದರೆ ಬಡವರ ಪಕ್ಷ ಎಂಬ ತಿಳುವಳಿಕೆ ಉಳ್ಳವರಾಗಿದ್ದರು. ಇಲ್ಲಿನ ಮೇಲಿನ ವರ್ಗದ ಜನ ನಮಗೆ ಯಾವ ರೀತಿಯಿಂದಲೂ ಸಹಾಯ ಮಾಡುತ್ತಿರಲಿಲ್ಲ. ನಿಜಾಮನ ವಿರುದ್ಧ ಹೋರಾಟ, ಬ್ರಿಟಿಷರ ವಿರುದ್ಧ ಹೋರಾಟಗಳನ್ನೆಲ್ಲಾ ಮುಗಿಸಿಕೊಂಡು ಬರುವುದರಲ್ಲಿ ಈಗ ಸಮಾನತೆಗಾಗಿ ಹೋರಾಟಮಾಡಬೇಕಾಗಿ ಬಂದಿತು. ಇದಕ್ಕೋಸ್ಕರವೇ ಕೆಳವರ್ಗದ ಜನರಿಗೆ ಶೋಷಣೆಯ ಅರಿವು ಮೂಡಿಸಿ, ಅದರ ವಿರುದ್ಧ ಎಚ್ಚರಗೊಳ್ಳುವಂತೆ ಚಳವಳಿ ಕಟ್ಟಿದೆವು. ಲೋಹಿಯಾ, ಗೋಪಾಲಗೌಡರು, ಮಧುಲಿಮಯೆ, ರಾಜನಾರಾಯಣ್, ಜಾರ್ಜ್‌ಫರ್ನಾಂಡೀಸ್, ಎಸ್. ವೆಂಕಟರಾಂ, ಜೆ.ಎಚ್. ಪಟೇಲ್, ಬಂಗಾರಪ್ಪ ಇವರನ್ನೆಲ್ಲಾ ಇಲ್ಲಿಗೆ ಕರೆಸಿ, ಇಲ್ಲಿನ ಟಾಂಗಾ ಸ್ಟಾಂಡ್ ಮೈದಾನದಲ್ಲಿ ಭಾಷಣ, ಮೆರವಣಿಗೆ ಮಾಡಿಸುತ್ತಿದ್ದೆವು.

ಲೋಹಿಯಾ ಮತ್ತು ಗೋಪಾಲಗೌಡರು ಬಹಳ ಸರಳ ಜೀವಿಗಳು. ಅವರ ಭಾಷಣ ಕೇಳಿದ ಕೂಡಲೆ ನಮಗೆಲ್ಲಾ, ದೇಶದ ಬಗ್ಗೆ, ಸಮಾಜದ ಬಗ್ಗೆ ಅಭಿಮಾನ ಉಕ್ಕಿ ಬರುತ್ತಿತ್ತು.

ಲೋಹಿಯಾ ಅವರು ಯಾವಾಗಲೂ ಹೇಳುತ್ತಿದ್ದರು: ‘ನಮಗೆ ಈಗ ಬಂದಿರುವ ಸ್ವಾತಂತ್ರ್ಯ ಅರ್ಧ ಸ್ವಾತಂತ್ರ್ಯ ಮಾತ್ರ. ಉಳಿದರ್ಧ ಇನ್ನೂ ಬಂದಿಲ್ಲ. ನಮ್ಮದು ಪೂರ್ಣ ಸ್ವಾತಂತ್ರ್ಯದ ದೇಶ ಆಗಬೇಕಾದರೆ, ಎಲ್ಲರೂ ಸಮಾನರಾಗಿರಬೇಕು. ಜಾತೀಯತೆ, ಅಸ್ಪೃಶ್ಯತೆ, ಇರಬಾರದು. ದಲಿತರು ಮತ್ತು ಮಹಿಳೆಯರನ್ನು ಸಮಾನವಾಗಿ ಕಾಣಬೇಕು. ಲೋಹಿಯಾರವರ ಈ ಮಾತುಗಳು ನಮಗೆ ಬಹಳ ಹಿಡಿಸುತ್ತಿದ್ದವು ನಮ್ಮ ದೇಶದ ಕಾನೂನು ಕಾಯಿದೆಗಳು ಮೇಲಿನಿಂದಲ್ಲ! ಕೆಳಗಿನಿಂದಲೇ ಚೌಕಂಬಾ ರಾಜ್ ಆಗಬೇಕು ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಅವರ ಮಾತುಗಳು ಇವತ್ತಿನವರೆಗೂ ನಮ್ಮ ನೆನಪಿನಲ್ಲಿವೆ. ನಾವೂ ಅವರ ನೆನಪಿನಲ್ಲೇ ಬದುಕಿದ್ದೇವೆ. ಲೋಹಿಯಾ ಅವರು ‘ಚೌಕಂಬಾ’ ಎನ್ನುವ ಒಂದು ಪತ್ರಿಕೆಯನ್ನು ಹೊರಡಿಸುತ್ತಿದ್ದರು. ನಾನು ಆ ಪತ್ರಿಕೆಯ ಇಲ್ಲಿನ ಏಜೆಂಟ್ ಆಗಿದ್ದೆ. ನನ್ನದು ಎಲಿ ಅಂಗಡೀನೂ ಇತ್ತು; ಅದರೊಂದಿಗೆ ಪೇಪರನ್ನು ಮಾರುತ್ತಿದ್ದೆ.

ಶಾಂತವೇರಿ ಗೋಪಾಲಗೌಡರು ಕೇವಲ ಶಿವಮೊಗ್ಗ ಜಿಲ್ಲೆಯಲ್ಲಷ್ಟೇ ಅಲ್ಲ, ನಮ್ಮ ಕಲಬುರ್ಗಿ ಜಿಲ್ಲೆಯಲ್ಲೂ ಲೋಕಪ್ರಿಯರಾಗಿದ್ದರು. ಅವರ ನಡವಳಿಕೆ ಸಾಮಾನ್ಯ ಜನರಂತೆ. ಕೆಳವರ್ಗದ ಜನರೊಂದಿಗೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರು ಯಾವಾಗಲೂ, ‘ನಾವು ಜನರ ಜೊತೆ ಇರುಬಬರು. ಅವರ ಮಾತನ್ನು ಸಾವಧಾನದಿಂದ ಕೇಳಬೇಕು. ಅವರನ್ನು ತಡೆಯಬಾರದು’ ಎಂದು ಕಾರ್ಯಕರ್ತರಿಗೆ ಹೇಳುತ್ತಿದ್ದರು. ಇದರಿಂದಾಗಿಯೇ ಗೋಪಾಲಗೌಡರ ಬಗ್ಗೆ ನಮಗೆ ಎಲ್ಲಿಲ್ಲದ ಪ್ರೇಮ.

ಮೈಸೂರು ದಸರಾ ವಿರೋಧಿಸಲು ನಮಗೂ ಒಂದು ಸಾರಿ ಪಕ್ಷದಿಂದ ಆದೇಶ ಬಂದಿತ್ತು ಅದರಂತೆ ದಸರಾ ಮೆರವಣಿಗೆ ವಿರೋಧಿಸಲು ನಾವೆಲ್ಲ ಮೈಸೂರಿಗೆ ಬಂದು ಇಳಿದುಕೊಂಡೆವು. ಇದರ ಬಗ್ಗೆ ಸುಳಿವು ಗೊತ್ತಿದ್ದ ಪೋಲೀಸರು, ಅಂದು ರಾತ್ರಿ ನಾವೆಲ್ಲ ಮಲಗಿದ್ದಾಗಲೇ ಬಂದು ನಮ್ಮನ್ನೆಲ್ಲಾ ಬಂಧಿಸಿ, ಒಂಟಿಕೊಪ್ಪಲಿನ ಜೈಲಿಗೆ ಹಾಕಿದರು. ಇದೆಲ್ಲಾ ಗೊತ್ತಿದ್ದ ಗೋಪಾಲಗೌಡರು ಆ ರಾತ್ರಿ ಮೈಸೂರನ್ನೇ ಬಿಟ್ಟು ಯಾವುದೋ ಹಳ್ಳಿಯಲ್ಲಿ ತಂಗಿದ್ದರು. ಮಾರನೆಯ ದಿವಸ ರಾಜರ ಜಂಬೂಸವಾರಿ ಆರಂಭವಾಯಿತು. ಅಪಾರವಾದ ಜನಸ್ತೋಮ. ಗೋಪಾಲಗೌಡರು ಅದೆಲ್ಲಿದ್ದರೋ, ಮೆರವಣಿಗೆಯ ಮುಂದೆ ನಿಂತರು. ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು. ಕೂಡಲೇ ಪೋಲೀಸರು, ಗೌಡರನ್ನು ಬಂಧಿಸಿ ಪೋಲೀಸ್ ವ್ಯಾನಿನಲ್ಲಿ ಹಾಕಿದರು. ಮೈಸೂರಿನ ಜನರಿಗೆ ರಾಜರೆಂದರೆ ಅಪಾರವಾದ ಭಕ್ತಿ. ನಮ್ಮ ರಾಜರಿಗೆ ಕಪ್ಪು ಬಾವುಟ ತೋರಿಸಿ ಅಪಮಾನ ಮಾಡಿದರು ಎಂದು, ಆ ಜನ ವ್ಯಾನಿನತ್ತ ಕಲ್ಲುಗಳನ್ನು ಬೀಸಿದರು. ಆದರೆ ಆ ವ್ಯಾನಿಗೆ ಕಬ್ಬಿಣದ ಜಾಲರಿ ಇದ್ದುದರಿಂದ ಕಲ್ಲುಗಳು ತಾಗದೆ ಗೋಪಾಲಗೌಡರು ಬಜಾವಾದರು. ಆ ಗಳಿಗೆಯಲ್ಲಿ ಗೋಪಾಲಗೌಡರು ದಿಟ್ಟತನದಿಂದ ದಸರಾ ಮೆರವಣಿಗೆಯನ್ನು ಪ್ರತಿಭಟಿಸಿ ನಮಗೆಲ್ಲಾ ಸ್ಫೂರ್ತಿ ತುಂಬಿದರು.

ಅಲ್ಲಿಂದ ಬಂದ ಮೇಲೆ ನಾವು, ಕಲುಬುರ್ಗಿಯೊಳಗೆ ಸಮಾಜವಾದಿ ಪಕ್ಷದ ತತ್ವದಂತೆ, ‘ಲಾಭಹೀನ ಭೂಮಿ ಮೇಲಿನ ಮಾಲ್‌ಗುಜರಿ ತೆಗೆಯಬೇಕು’ ಎಂದು ಚಳವಳಿಯನ್ನು ಶುರುಮಾಡಿದೆವು. ‘ಮಾಲ್‌ಗುಜರಿ’ ಅಂದರೆ ಕಂದಾಯ ಅಂತ. ಎರಡೋ ಮೂರೋ ಎಕರೆ ಹೊಲ ಇದ್ದವರು, ಎರಡು ಅಥವಾ ಮೂರು ಚೀಲ ಬೆಳೆ ಬೆಳೆಯುತ್ತಿದ್ದರು. ಅದರೊಳಗೆ ಕಂದಾಯವನ್ನು ಕೊಡೋದರಿಂದ ಸಣ್ಣ ರೈತರಿಗೆ ಕಷ್ಟವಾಗುತ್ತಿತ್ತು. ಅದಕ್ಕೆ ಅದರ ಮೇಲೆ ಹಾಕಿರುವ ಮಾಲ್‌ಗುಜರಿ ಇರಬಾರದು ಎಂಬುದು ಗೋಪಾಲಗೌಡರ ವಾದವಾಗಿತ್ತು.

ಶಾಂತವೇರಿ ಗೋಪಾಲಗೌಡರ ಮಾರ್ಗದರ್ಶನದಲ್ಲಿ ನಾವು ಇಲ್ಲಿ ಇನ್ನೊಂದು ಹೋರಾಟ ಮಾಡಿದೆವು. ಕಲಬುರ್ಗಿಯಿಂದ ಹತ್ತು ಮೈಲಿ ದೂರದಲ್ಲಿ ಶ್ರೀನಿವಾಸ ಸರಡಗಿ ಎಂಬ ಒಂದು ಹಳ್ಳಿ. ಆ ಹಳ್ಳಿಯಲ್ಲಿದ್ದ ಸರ್ಕಾರಿ ಭೂಮಿ ಪಾಂಜರಪೋಳು ಭೂಮಿಯನ್ನೆಲ್ಲಾ ಆ ಹಳ್ಳಿಯ ಶ್ರೀಮಂತ ಮುಖಂಡರು ಸಾಗುವಳಿ ಮಾಡಿಕೊಳ್ಳುತ್ತಿದ್ದರು. ನಾವು ಸಮಾಜವಾದಿಗಳು ಆ ಭೂಮಿಯಲ್ಲಿ ಸತ್ಯಾಗ್ರಹ ಮಾಡಿ, ಅದನ್ನೇ ನಮ್ಮ ವಶಕ್ಕೆ ತೆಗೆದುಕೊಂಡೆವು. ಆ ಹಳ್ಳಿಯಲ್ಲಿದ್ದ ಭೂಹೀನರಾದ ಮುಸಲ್ಮಾನರು, ಲಮಾಣೀರು, ಕುರುಬರು, ಕಬ್ಬಲಗೇರು, ಹರಿಜನರು ಇಂಥವರಿಗೆಲ್ಲಾ ಸಮಾನವಾಗಿ ಹಂಚಿದೆವು. ಇದೀಗ ಆ ಭೂಮಿಯನ್ನು ಹಂಚಿಕೊಟ್ಟು ಮೂವತ್ತು ವರ್ಷಗಳಾಗಿವೆ. ಈಗಲೂ ಅಲ್ಲಿರುವ ಬಡಜನತೆ ಸಮಾಜವಾದಿ ಪಕ್ಷವನ್ನು, ಗೋಪಾಲಗೌಡರ ಹೆಸರನ್ನು ಮರೆತಿಲ್ಲ.

ಜಾರ್ಜ್ ಫರ್ನಾಂಡೀಸ್ ಆಗಿನ ನಮ್ಮ ಸಮಾಜವಾದಿ ಪಕ್ಷದ ರಾಷ್ಟ್ರಮಟ್ಟದ ಕಾರ್ಯದರ್ಶಿಗಳಾಗಿದ್ದರು. ಅವರು ಒಂದು ಸಭೆಯಲ್ಲಿ, ‘ಇಡೀ ಹಿಂದೂಸ್ಥಾನದಲ್ಲಿ ನಮ್ಮ ಸಮಾಜವಾದಿಗಳು ಸರ್ಕಾರಿ ಜಮೀನನ್ನು ಆಕ್ರಮಿಸಿಕೊಂಡು ಬಡವರಿಗೆ ಹಂಚಿಲ್ಲ! ಆದರೆ ಕಲುಬುರ್ಗಿ ಜಿಲ್ಲೆಯ ಸರಡಗಿಯಲ್ಲಿ ವೀರಣ್ಣ ತೀಮ್ಮಾಜಿ ನೇತೃತ್ವದಲ್ಲಿ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡು, ಭೂಹೀನರಿಗೆ ಹಂಚಿಕೊಡಲಾಗಿದೆ. ಅಂತ ಹೇಳಿದರು. ಶಾಂತವೇರಿ ಗೋಪಾಲಗೌಡರಂಥ ನಾಯಕರು ನಮ್ಮ ಬೆನ್ನ ಹಿಂದೆ ಇರಲಿಲ್ಲ ಅಂದ್ರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ.

ಹೈದರಾಬಾದ್ ಕರ್ನಾಟಕ ಭಾಗದೊಳಗೆ ಸಮಾಜವಾದಿ ಪಕ್ಷವನ್ನು ಬಲವಾಗಿ ಬೆಳೆಸಲು ಗೋಪಾಲಗೌಡರು ಆಗಿಂದಾಗ್ಗೆ ಕಲಬುರ್ಗಿಗೆ ಬರುತ್ತಿದ್ದರು. ಬಂದು ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇಲ್ಲಿಗೆ ಬಂದಾಗಲೆಲ್ಲ ಅವರು ನನ್ನನ್ನೂ ಕರೆದುಕೊಂಡು ಬೀದರ್ ಜಿಲ್ಲೆಗೆ ಹೋಗುತ್ತಿದ್ದರು. ಆಗ ಬೀದರ್‌ನಲ್ಲಿ ಸಮಾಜವಾದಿ ಪಕ್ಷ ಸಂಘಟನೆಯಾಗಿರಲಿಲ್ಲ. ಅಲ್ಲಿ ಪಿ.ಎಸ್.ಪಿ ಇತ್ತು. ಲೋಹಿಯಾ ಅದನ್ನು, ‘ಲಕ್ವಮಾರ್ ಪಾರ್ಟಿ’ ಅದು ಬಂಡವಾಳಶಾಹಿಗಳು ಹೇಳಿದ ಹಾಗೆ ಕೇಳುತ್ತದೆ ಎಂದು ಹೇಳುತ್ತಿದ್ದರು. ಗೋಪಾಲಗೌಡರು ಮತ್ತು ನಾನು ಅಲ್ಲಿಗೆ ಹೋಗಿ, ಕಾಶೀನಾಥರಾವ್ ಬೇಲೂರೆ, ದಯಾನಂದರಾವ್, ಕಿಶನ್‌ರಾವ್, ಈಶ್ವರಪ್ಪ ಚಾಕೋತೆ ಇಂಥವರನ್ನೆಲ್ಲಾ ಸಂಪರ್ಕಿಸಿ ಅಲ್ಲಿ ಸಮಾಜವಾದಿ ಪಕ್ಷವನ್ನು ಬೆಳೆಸಲು ಪ್ರಯತ್ನಿಸಿದೆವು. ಆಗ ಬೀದರ್‌ನಲ್ಲಿಯೂ ನಮ್ಮ ಪಕ್ಷ ಕೆಲಸ ಮಾಡುತ್ತಿತ್ತು. ಮಹಾರಾಷ್ಟ್ರದ ಗಡಿಯಲ್ಲಿದ್ದು ಭಾಷಾ ಚಳವಳಿ ಇದ್ದಾಗಲೂ ನಮ್ಮ ಪಕ್ಷ ಜನರ ಸಮೀಪಕ್ಕೆ ಹೋಯಿತು. ಅಲ್ಲಿಯ ಸಮಾಜವಾದಿ ಪಕ್ಷದವರಿಗೂ ಗೋಪಾಲಗೌಡರ ಮಾರ್ಗದರ್ಶನವಿತ್ತು.

ಗೋಪಾಲಗೌಡರು ನಾಯಕನ ದರ್ಪವನ್ನು ಎಂದೂ ತೋರಿದವರಲ್ಲ. ಮನಸ್ಸು ಕರಗುವ ಹಾಗೆ ನಮ್ಮ ಜೊತೆಯಲ್ಲಿ ಬೆರೆಯುತ್ತಿದ್ದರು. ಗೋಪಾಲಗೌಡರ ದೊಡ್ಡಗುಣ ಅಂದರೆ ಅವರು ಮಾತಾಡಿದಂತೆ ನಡೆಯುತ್ತಿದ್ದರು. ಜನರ ಮನಸ್ಸನ್ನು ಚೆನ್ನಾಗಿ ಅರಿತು, ಅದನ್ನೇ ಸರ್ಕಾರದ ಮುಂದೆ ಇಡುತ್ತಿದ್ದರು. ಧೈರ್ಯದಿಂದ, ನಿಷ್ಪಕ್ಷಪಾತವಾಗಿ ಅಸೆಂಬ್ಪಿಯಲ್ಲಿ ಮಾತನಾಡುತ್ತಿದ್ದರು. ಸಮಾನತೆಯನ್ನು ಕಾರ್ಯರೂಪಕ್ಕೆ ತಂದರೆ ಸಮಾಜವಾದ ಬರುತ್ತದೆ ಎನ್ನುವುದನ್ನು ಹೇಳುತ್ತಿದ್ದರು.