ಸೊರಬ ತಾಲ್ಲೂಕಿನ ತವನಂದಿ ನಮ್ಮ ಊರು. ಕುಪ್ಪಗಡ್ಡೆ ಮರಿಯಪ್ಪನವರು ನಮ್ಮ ಭಾಗದ ದೊಡ್ಡ ಸಮಾಜವಾದಿಯಾಗಿದ್ದವರು. ನಾವೆಲ್ಲ, ಗೋಪಾಲಗೌಡರು ಮತ್ತು ಕುಪ್ಪಗಡ್ಡೆ ಮರಿಯಪ್ಪನವರ ಸಂರ್ಪಕದಿಂದಾಗಿ ಸಮಾಜವಾದಿ ಚಳವಳಿಯಲ್ಲಿ ಧುಮುಕಿದೆವು. ಗೋಪಾಲಗೌಡರು ಆರಂಭಿಸಿದ ಕಾನೂನುಭಂಗ ಚಳವಳಿಯಲ್ಲಿ ಭಾಗವಹಿಸಿ ನಾನು ಸೆರೆಮನೆಗೆ ಹೋಗಿದ್ದೆ. ಗೋಪಾಲಗೌಡರೊಂದಿಗೆ ದಸರಾ ಮೆರವಣಿಗೆ ವಿರೋಧಿಸಲು ಮೈಸೂರಿಗೆ ಹೋಗಿದ್ದೆ. ಕಾಗೋಡು ಸತ್ಯಾಗ್ರಹದಲ್ಲಿ ನಾನೂ ಜೈಲಿನಲ್ಲಿದ್ದೆ. ಲೋಹಿಯಾರವರ ಜೊತೆ ಮಾತನಾಡಿದ್ದೆ. ಲೋಹಿಯಾ ಸಾಹೇಬರನ್ನು ಸೊರಬಕ್ಕೂ ಕರೆಸಿದ್ದೆವು. ಅಲ್ಲಿ ಅವರು ನಮ್ಮ ಪಕ್ಷದ ಕಾರ್ಯಕರ್ತರನ್ನು ಕುರಿತು ಮಾತನಾಡಿದರು. ಗೋಪಾಲಗೌಡರು ನಮಗೆಲ್ಲ ರಾಜಕಾರಣವನ್ನು ಹೇಳಿಕೊಟ್ಟರು. ರಾಜ್ಯ ಮತ್ತು ರಾಷ್ಟ್ರರಾಜಕಾರಣದ ಬಗ್ಗೆ ಆಲೋಚಿಸುವುದನ್ನು ಕಲಿಸಿದರು.

ಗೌಡರು ಒಮ್ಮೆ ಸಮಾಜವಾದಿ ಪಾರ್ಟಿಯಿಂದ ರಾಜ್ಯದಲ್ಲಿ ಕಾನೂನುಭಂಗ ಚಳವಳಿಗೆ ಕರೆಕೊಟ್ಟರು. ಇದಕ್ಕಾಗಿ ರೈತರನ್ನು, ಕೂಲಿಕಾರರನ್ನು ಸಂಘಟಿಸಿದರು. ಈ ಚಳವಳಿಯಲ್ಲಿ ಸುಮಾರು ಆರೇಳು ಸಾವಿರ ರೈತರು, ಕೂಲಿಕಾರರು, ಪಕ್ಷದ ಕಾರ್ಯಕರ್ತರು ಸತ್ಯಾಗ್ರಹಿಗಳಾಗಿ ಸೆರೆಮನೆ ಸೇರಿದ್ದರು. ನಮ್ಮ ತಾಲ್ಲೂಕಿನಿಂದಲೂ ಪ್ರಥಮವಾಗಿ ಇಪ್ಪತ್ತೈದು ಜನಗಳ ತಂಡ ಸತ್ಯಾಗ್ರಹಿಗಳಾಗಿ ಜೈಲು ಸೇರಿದ್ದರು. ಇದರಲ್ಲಿ ನಾನೂ ಒಬ್ಬನಾಗಿದ್ದೆ. ನಮ್ಮನ್ನೆಲ್ಲಾ ಶಿವಮೊಗ್ಗ ಜೈಲಿನಲ್ಲಿ ಕೂಡಿದ್ದರು. ಅಲ್ಲಿ ಸತ್ಯಾಗ್ರಹಿಗಳಿಗೆ ಸರಿಯಾದ ಊಟ ಮತ್ತು ಸ್ನಾನದ ವ್ಯವಸ್ಥೆ ಇರಲಿಲ್ಲ. ನಾವು ಜೈಲು ವ್ಯವಸ್ಥೆಯನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಕುಳಿತೆವು. ಜೈಲು ಅಧಿಕಾರಿಗಳು ಏನೂ ಕ್ರಮಕೈಗೊಳ್ಳಲಿಲ್ಲ. ನಮ್ಮ ಉಪವಾಸ ಮುಂದುವರೆಯಿತು. ಒಂದು ವಾರವಾಯಿತು. ಇದರಿಂದಾಗಿ ಕೆಲವರ ಸ್ಥಿತಿ ಗಂಭೀರವಾಯಿತು. ಈ ವಿಷಯ ಪತ್ರಿಕೆಯಲ್ಲಿ ದೊಡ್ಡದಾಗಿ ಬಂತು. ಇದನ್ನು ತಿಳಿದು ಪ್ರವಾಸದಲ್ಲಿದ್ದ ಗೌಡರು ಜೈಲಿಗೆ ಧಾವಿಸಿ ಬಂದರು. ನನ್ನನ್ನು ಮತ್ತು ಒಂಟಿ ಧ್ವನಿ ರಾಮಚಂದ್ರ ಅವರನ್ನು ಜೈಲಿನ ಬಾಗಿಲಿಗೆ ಕರೆಸಿಕೊಂಡರು. ನಮ್ಮನ್ನು ನೋಡಿದ ಕೂಡಲೇ ಗೌಡರಿಗೆ ದುಃಖ ಮತ್ತು ಕೋಪ ಒಟ್ಟಿಗೇ ಬಂದಿತು. ನಮ್ಮ ಪಕ್ಕದಲ್ಲೇ ನಿಂತಿದ್ದ ಪೋಲೀಸ್ ಪೇದೆಗೆ, ‘ನಿಮ್ಮ ಸಾಹೇಬನನ್ನು ಕರೆ’ ಎಂದು ಹೇಳಿದರು. ಪೋಲೀಸಿನವನು ಕರೆಯಲು ಹೋದ. ಆದರೆ, ಎಷ್ಟೊತ್ತಾದರೂ ಸಾಹೇಬ ಬರಲಿಲ್ಲ. ಕರೆಯಲು ಹೋದವನೂ ಬರಲಿಲ್ಲ! ಗೌಡರ ಸಿಟ್ಟು ತಾರಕಕ್ಕೇರಿತ್ತು. ಅಲ್ಲಿ ಓಡಾಡುತ್ತಿದ್ದ ಇನ್ನೊಬ್ಬ ಪೋಲೀಸನನ್ನು ಕರೆದು ‘ಎಲ್ಲಿ ನಿಮ್ಮ ಸಾಹೇಬ’ ಎಂದು ಗದರಿಸಿ ಕೇಳಿದರು. ಇವರ ಮಾತಿನಿಂದ ಕಕ್ಕಾವಿಕ್ಕಿಯಾದ ಆತ ‘ಆಫೀಸಿನಲ್ಲಿ ಇದ್ದಾರೆ’ ಎಂದ. ‘ನಿಮ್ಮ ಸಾಹೇಬರಿಗೆ ನೌಕರಿ ಮಾಡುವ ಆಸೆ ಇಲ್ಲವೆಂದು ಕಾಣುತ್ತದೆ. ಬರುತ್ತಾರೋ ಇಲ್ಲವೋ ಕೇಳಿ ಬಾ!’ ಎಂದು ಗುಡುಗಿದರು. ಆ ಪೇದೆ ಹೋದನಂತರ ಜೈಲಿನ ಅಧಿಕಾರಿ ಬಂದರು. ಗೌಡರು ಅಧಿಕಾರಿಯನ್ನು ನೋಡಿದ್ದೇ ತಡ, ‘ಇವರ ಬೇಡಿಕೆ ಎಂಥದ್ದು ಎನ್ನುವುದು ನಿಮಗೆ ಗೋತ್ತೇನ್ರಿ? ಒಂದು ವಾರದಿಂದ ಉಪವಾಸ ಕೈಗೊಂಡ ಇವರ ಬಗ್ಗೆ, ಕರುಣೆಯಿಲ್ಲದೆ ಬೇಜವಾಬ್ದಾರಿ ಕೆಲಸ ಮಾಡುತ್ತೀರೇನ್ರಿ! ಈ ರೈತರು ನಿಮ್ಮ ಖಜಾನೆಯಲ್ಲಿ ಕಳ್ಳತನ ಮಾಡಿ ಜೈಲಿಗೆ ಬಂದಿಲ್ಲ! ನೀವು ಕೊಟ್ಟಿದ್ದನ್ನು ತಿಂದುಹೋಗಲಿಕ್ಕೆ ಇವರೇನು ಕ್ರಿಮಿನಲ್ ಕೈದಿಗಳೇ? ನಿಮ್ಮ ಗುಲಾಮಗಿರಿ ಪದ್ಧತಿ ಸಾಕುಮಾಡಿ’ ಎಂದು ತರಾಟೆಗೆ ತೆಗೆದುಕೊಂಡರು. ಆ ಅಧಿಕಾರಿ ಗೌಡರ ಮಾತಿಗೆ ಮರುಮಾತಾಡದೆ ವ್ಯವಸ್ಥೆ ಮಾಡುತ್ತೇನೆಂದು ಕೈಮುಗಿದು ಹೋದ. ಮರುದಿವಸ ಸತ್ಯಾಗ್ರಹಿಗಳಿಗೆ ನ್ಯಾಯವಾಗಿ ಬರಬೇಕಾಗಿದ್ದ ಎಲ್ಲ ಸೌಲಭ್ಯಗಳೂ ಬಂದವು.

ಗೋಪಾಲಗೌಡರು ಒಮ್ಮೆ ಕ್ಷೇತ್ರದ ಕಾರ್ಯಕರ್ತರ ಸಭೆಗೆ ಬಂದಿದ್ದರು. ಕಾರ್ಯಕರ್ತರನ್ನು ಕುರಿತು, ‘ಪ್ರತಿಯೊಬ್ಬ ಕಾರ್ಯಕರ್ತರೂ ವಾರಕ್ಕೆ ಒಂದು ಸಲವಾದರೂ, ಗೇಣಿರೈತರು ಕೃಷಿಕೂಲಿಕಾರರು ಮತ್ತು ದಲಿತರನ್ನು ಭೇಟಿಮಾಡಬೇಕು. ಅವರ ಸ್ಥಿತಿಗತಿಗಳನ್ನು ಅರಿತು ನೀವೆಲ್ಲರೂ ಹೊಣೆಗಾರರಾಗಬೇಕು. ಅವರಿಗೆಲ್ಲ ಸರ್ಕಾರದ ಸೌಲಭ್ಯಗಳು ಸಿಗುತ್ತಿವೆಯೋ, ಇಲ್ಲವೋ ಎಂಬುದನ್ನು ಕೇಳಿ ತಿಳಿಯಬೇಕು. ಹಾಗೂ ಯಾವುದೇ ಫಲಾಪೇಕ್ಷೆಯಿಲ್ಲದೆ ಅವರಿಗೆ ನೆರವಾಗಬೇಕು. ನಮ್ಮಲ್ಲಿ ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೆ, ಅವರ‍್ಯಾರೂ ಸರ್ಕಾರದ ಮಾಸಾಶನ ತೆಗೆದುಕೊಳ್ಳಬಾರದು. ನೀವು ಸಮಾಜವಾದಿಗಳು, ಮಾಸಾಶನ ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು. ಇದು ನನ್ನ ಅನಿಸಿಕೆ’ ಎಂದು ಹೇಳಿದರು. ಅದರಂತೆ ನಮ್ಮಲ್ಲಿ ಬಹಳ ಜನ ಮಾಸಾಶನ ಪಡೆಯುತ್ತಿಲ್ಲ.

ಒಂದು ಸಾರಿ ಗೋಪಾಲಗೌಡರು ತವನಂದಿಯ ನನ್ನ ಮನೆಗೆ ಬಂದರು; ನಮ್ಮ ತಾಯಿ ಬಂಗಾರಮ್ಮ ಗೌಡರಿಗೆ ಊಟ ಬಡಿಸುತ್ತಿದ್ದರು. ಆಗ ಗೌಡರು ನಮ್ಮ ತಾಯಿಗೆ, ‘ನಿನ್ನ ಮಗ ಗೇಣಿ ರೈತರ ಬಗ್ಗೆ, ಸರ್ಕಾರದ ವಿರುದ್ಧ ಹೋರಾಡಬೇಕಾಗುತ್ತೆ. ಆದ್ದರಿಂದ ಮನೆ ಜವಾಬ್ದಾರಿ ಎಲ್ಲ ನೀನೇ ವಹಿಸಿಕೊಳ್ಳಬೇಕಾಗುತ್ತೆ ಕಣಮ್ಮಾ’ ಎಂದು ಊಟ ಮಾಡುತ್ತಾ ಹೇಳಿದರು. ಊಟವಾದ ನಂತರ, ನಮ್ಮ ಮನೆಯ ಮುಂದೆ ರೈತರನ್ನೆಲ್ಲಾ ಕೂಡಿಸಿಕೊಂಡು ‘ಈ ಲಿಂಗಪ್ಪ ಮನೆ ಕಟ್ಟುವುದಿಲ್ಲ, ಕಟ್ಟುವ ಹಾಗೆಯೂ ಇಲ್ಲ. ಎಲ್ಲಿಯವರೆಗೆ ಭೂ ಒಡೆತನ ರೈತರಿಗೆ ಸಿಗುವುದಿಲ್ಲವೋ, ಅಲ್ಲಿಯವರೆಗೂ ಇವನು ನಿಮ್ಮ ಕೆಲಸ ಮಾಡಬೇಕಾಗುತ್ತೆ!’ ಎಂದು ಹೇಳಿದರು.

ಇವರು ವಿಧಾನಸಭಾ ಸದಸ್ಯರಾಗಿದ್ದಾಗ, ಒಮ್ಮೆ ನಾನು ಬೆಂಗಳೂರಿಗೆ ಹೋಗಿದ್ದೆ. ಶಾಸಕರ ಭವನದಲ್ಲಿದ್ದರು. ಹೋಗಿ ಕಂಡೆ. ಒಳಗೆ ಕರೆದು ಕುಳ್ಳಿರಿಸಿ ಕಾಫಿ ತರಿಸಿದರು. ಕಾಫಿ ಕುಡಿಯುತ್ತಾ, ‘ಏಕೆ ಬಂದೆ? ಏನು ಕೆಲಸ? ಕ್ಷೇತ್ರದ ಕಮಿಟಿ ಮೀಟಿಂಗ್ ನಡೆಯಿತಾ? ನೀನು ಹೋಗಿದ್ದಾ? ಮರಿಯಪ್ಪನವರು ಚೆನ್ನಾಗಿದ್ದಾರೆಯೇ?’ ಎಂದು ಕೇಳಿದರು. ನಾನು ಮರಿಯಪ್ಪನವರು ಚೆನ್ನಾಗಿದ್ದಾರೆ. ಮೀಟಿಂಗ್ ನಡೆಯಿತು ಎಂದು ಹೇಳಿದೆ. ಸರಿ, ‘ಏಕೆ ಬಂದದ್ದು?’ ಪುನಃ ಕೇಳಿದರು. ನಾನು ನನ್ನ ಜಮೀನು ಮಂಜೂರಾತಿ ಬಗ್ಗೆ ನನ್ನ ದಾಖಲೆ ಪತ್ರ ತೋರಿಸಿದೆ. ಅವರು ನಿಧಾನವಾಗಿ ದಾಖಲೆ ಪತ್ರವನ್ನು ತಿರುವಿ ಹಾಕಿದರು. ನಂತರ ನನ್ನ ಕಡೆ ನೋಡಿ ‘ನಾನು ಕೇವಲ ನಿನಗೆ ಮಾತ್ರ ಜಮೀನು ಮಂಜೂರು ಮಾಡಲು ಶಾಸಕನಾಗಿಲ್ಲ. ನಿನಗೂ ಹಾಗೂ ಎಲ್ಲ ಭೂಹೀನರಿಗೂ ಭೂಮಿ ಸಿಗುವ ಹಾಗೆ ಕಾನೂನು ಮಾಡಲು ಬಂದಿದ್ದೇನೆ. ನಾನು ಕಾನೂನು ಮಾಡುವವನು; ನೀನು ಮಾಡಿಸುವವನು. ಹೋಗು, ಹೋಗಿ ರೈತರ ಕಷ್ಟ ಮೊದಲು ನೋಡು. ನಾವು ಬಡಜನರಿಗಾಗಿ ದುಡಿಯುವವರು. ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳಬಾರದು. ನಾವು ಹೋರಾಟದಲ್ಲಿ ಗೊಬ್ಬರವಾಗಬೇಕು, ಆ ಗೊಬ್ಬರದ ಮೇಲೆ ಮೊಳಕೆಯೊಡೆದು, ಸಸಿಯಾಗಿ, ಮರವಾಗಿ ಫಲಸಿಗಬೇಕು. ಆ ಫಲವನ್ನು ಮುಂದಿನ ಜನರು ಪಡೆಯಬೇಕು’ ಎಂದು ಶಾಂತವಾಗಿ ಹೇಳಿದರು.

ನಾನು ನಮಸ್ಕಾರ ಮಾಡಿ, ಊರಿಗೆ ಹೊರಡುತ್ತೇನೆಂದು ಹೇಳಿ ಹೊರಟೆ.