ನಾನು ಚಿಕ್ಕವನಿದ್ದಾಗ ನನಗೆ ಗೋಪಾಲಗೌಡರ ಪರಿಚಯ ಆಗಿದ್ದು ವರ್ತಮಾನ ಪತ್ರಿಕೆಗಳ ಮೂಲಕ. ಪತ್ರಿಕೆಗಳಲ್ಲಿ ಗೋಪಾಲಗೌಡರ ಬಗ್ಗೆ ಬಂದದ್ದನ್ನು ಜನ ಓದಿ ಹೇಳುತ್ತಿದ್ದರು. ಗೌಡರು ಚಳವಳಿಯಲ್ಲಿ ಭಾಗವಹಿಸಿದ್ದು, ಅವರು ಬಂಧಿತರಾಗಿದ್ದು, ತಲೆಮರೆಸಿಕೊಂಡು ಹೋದದ್ದು, ಅವರ ಭಾಷಣ ಎಲ್ಲವನ್ನೂ ನಾನು ಕೇಳುತ್ತಿದ್ದೆ. ಆಗ ನನಗೆ ಒಂಬತ್ತು ವರ್ಷ. ಸ್ವಾತಂತ್ರ ಚಳವಳಿಯ ಮೆರವಣಿಗೆಗಳಲ್ಲಿ ನಾನೂ ಭಾಗವಹಿಸುತ್ತಿದ್ದೆ. ಶಾಲೆಯಿಂದ ಹೊರಗೆ ಬಾವುಟ ಹಿಡಿದು ಮೆರವಣಿಗೆಯಲ್ಲಿ ಇರುತ್ತಿದ್ದೆ. ಆಗ ನನಗೆ ಸ್ವಾತಂತ್ರ ಚಳವಳಿ ಅಂದರೆ ಏನು ಅನ್ನೋದು ಗೊತ್ತಾಗದ ವಯಸ್ಸು.

ಗೋಪಾಲಗೌಡರು ಗೇಣಿದಾರರ ಕುಟುಂಬದಲ್ಲೇ ಹುಟ್ಟಿದವರು. ರಾಮಮನೋಹರ ಲೋಹಿಯಾರವರ ಅಚ್ಚುಮೆಚ್ಚಿನ ಶಿಷ್ಯರಾದ ಇವರು, ಕಾಗೋಡು, ರೈತ ಹೋರಾಟದಲ್ಲಿ ಛಲದಿಂದ ಹೋರಾಟ ಮಾಡಿದ್ದನ್ನು ನೋಡಿ, ಜೊತೆಗೆ ನಾನೂ ಗೇಣಿರೈತರ ಸಂಕಷ್ಟಗಳನ್ನು ಕಂಡವನಾದ್ದರಿಂದ ಗೌಡರ ಹೋರಾಟದ ಬಗ್ಗೆ ಅಭಿಮಾನ ಬಂದಿತು. ಯಾಕೆಂದರೆ ಸಮಾಜವಾದಿ ಸಿದ್ಧಾಂತಗಳನ್ನು ಓದಿ ತಿಳಿದು, ಸಮಾಜವಾದಿ ಪಕ್ಷಕ್ಕೆ ಸೇರುವಂತಹ ತಿಳುವಳಿಕೆ ನನಗೆ ಆಗ ಇರಲಿಲ್ಲ.

ನಮ್ಮ ಕುಟುಂಬದ ಆಸ್ತಿಯಲ್ಲಿ ಸುಮಾರು ಎರಡುನೂರು ಎಕರೆ ಜಮೀನು ಗೇಣಿರೈತರ ಕೈನಲ್ಲಿತ್ತು. ಆಗ ನಾನು ಇನ್ನೂ ಹುಡುಗ. ನಮ್ಮ ಅಜ್ಜಯ್ಯನವರ ಜೊತೆ ಗೇಣಿ ಅಳೆಸಲಿಕ್ಕೆ ಒಂದೆರೆಡು ಸಾರಿ ಹೋಗಿದ್ದೆ. ಗೇಣಿ ರೈತರ ಮಕ್ಕಳ ಸ್ಥಿತಿ, ಅವರ ಬಡತನ, ಅನಕ್ಷರತೆ ಹಾಗೂ ಅವರು ವರ್ಷವೆಲ್ಲಾ ಬೆಳೆ ಬೆಳೆದು ಏನೂ ಮಾಡದ ನಮಗೆ ಕೊಡುತ್ತಿದ್ದುದು ಇವೆಲ್ಲ ನನಗೆ ಸರಿಕಾಣಲಿಲ್ಲ. ಹಾಗಾಗಿ ನಾನೂ ಕೂಡ ಸಮಾಜವಾದಿ ಪಕ್ಷದ ಕಾರ್ಯಕರ್ತನಾದೆ. ಅದೇ ವೇಳೆಯಲ್ಲಿ ನನಗೆ ಜಿ.ಸದಾಶಿವರಾಯರು, ಶಂಕರನಾರಾಯಣ ಭಟ್ಟರು, ಶಾಮಐತಾಳರು, ಬಿ.ಟಿ. ನಾರಾಯಣಗೌಡರು, ಕೋಣಂದೂರು ಲಿಂಗಪ್ಪನವರ ಪರಿಚಯವಾಯಿತು. ಸಮಾಜವಾದಿ ಪಕ್ಷ, ಗೇಣಿದಾರ ರೈತರು ಕಾಗೋಡು ಹೋರಾಟ ಇವುಗಳನ್ನೆಲ್ಲಾ ನಾನು ಜಿ.ಸದಾಶಿವರಾಯರು ಮತ್ತು ಶಂಕರನಾರಾಯಣ ಭಟ್ಟರಿಂದ ಅಲ್ಪಸ್ವಲ್ಪ ತಿಳಿದುಕೊಂಡೆ. ಆಗ ನನ್ನ ಜೊತೆಯಲ್ಲಿ ಸ್ನೇಹಿತರಾದ ಹುಗಲವಳ್ಳಿ ಭಾಸ್ಕರಭಟ್ಟರೂ ಇರುತ್ತಿದ್ದರು.

೧೯೫೨ರ ಮೊದಲ ಚುನಾವಣೆಯಲ್ಲಿ ಗೋಪಾಲಗೌಡರು ಬದರಿನಾರಾಯಣರ ವಿರುದ್ಧ ಸ್ಪರ್ಧಿಸಿ ಗೆದ್ದರು. ಗೌಡರು ವಿಧಾನಸಭೆಗೆ ಆರಿಸಿಹೋಗಿದ್ದರಿಂದ ಬಡವರಿಗೆ, ಭೂಹೀನರಿಗೆ ನಿರ್ಗತಿಕರಿಗೆ, ಗೇಣೀ ರೈತರಿಗೆ ದೊಡ್ಡ ಚೈತನ್ಯ ಬಂದಂತಾಯಿತು. ‘ಉಳುವವನೆ ನೆಲದೊಡೆಯ ನಾಗಬೇಕು, ಗೇಣಿ ಪದ್ಧತಿ ರದ್ದಾಗಬೇಕು’ ಎನ್ನುವ ಕೂಗು ಶಾಸನಸಭೆಯಲ್ಲಿ ಮೊಳಗಿತು.

೧೯೫೭ರ ಎರಡನೆ ಚುನಾವಣೆಯಲ್ಲಿ ಅದೇ ಬದರಿನಾರಾಯಣರ ವಿರುದ್ಧ ಗೌಡರು ಅಲ್ಪ ಅಂತರದಿಂದ ಸೋತರು. ಗೌಡರ ಈ ಸೋಲಿಗಾಗಿ. ಇಡೀ ಆಡಳಿತಪಕ್ಷ ಹಾಗೂ ತಾಲ್ಲೂಕಿನ ಶ್ರೀಮಂತರೆಲ್ಲರೂ ಒಟ್ಟಾಗಿದ್ದರು. ಆಗ ಗೋಪಾಲಗೌಡರು ಸೋತರೂ ಅವರ ಹೋರಾಟ ಸೋಲಲಿಲ್ಲ. ಹಳ್ಳಿ ಹಳ್ಳಿಗಳಿಗೆ ಹೋಗಿ ಗೌಡರು ಸಂಘಟನೆ ಮಾಡಲು ಮುಂದಾದರು. ಇದರ ಫಲವಾಗಿ ಗೌಡರು ೧೯೬೭ರ ಮೂರನೆ ಚುನಾವಣೆಯಲ್ಲಿ ಮತ್ತೆ ಆರಿಸಿಬಂದರು. ೧೯೬೮ರ ಹೊತ್ತಿಗೆ ಸಮಾಜವಾದಿ ಪಕ್ಷದ ಚಟುವಟಿಕೆಗಳು ತೀವ್ರವಾದವು. ಗೇಣೀದಾರರ ಪರವಾಗಿ ದೊಡ್ಡ ಚಳವಳಿ ಆರಂಭವಾಯಿತು. ಅಷ್ಟೊತ್ತಿಗೆ ನಾನು ತೀರ್ಥಹಳ್ಳಿ ಕ್ಷೇತ್ರದ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿದ್ದೆ. ಈ ಚಳವಳಿಯಲ್ಲಿ ಸುಮಾರು ಎರಡುನೂರು ಜನ ಕಾರ್ಯಕರ್ತರು ಜೈಲಿಗೆ ಹೋದರು. ಗೋಪಾಲಗೌಡರ ಜೊತೆ ನಾನು, ಶಂಕರನಾರಾಯಣ ಭಟ್ಟರು, ಕೋಣಂದೂರು ಲಿಂಗಪ್ಪನವರು, ನಾರಾಯಣಗೌಡರು, ಆರಗ ನಾರಾಯಣಮೂರ್ತಿಯವರು ಜೈಲಿನಲ್ಲಿದ್ದೆವು. ಆಗ ಜೈಲಿನಲ್ಲಿ ಅನೇಕ ವಿಚಾರಗಳನ್ನು ಇವರಿಂದ ತಿಳಿದುಕೊಳ್ಳುವ ಸುಯೋಗ ನನಗೆ ಒದಗಿತ್ತು. ಅದೇ ವರ್ಷ ಮತ್ತೊಮ್ಮೆ ಹತ್ತು ದಿನಗಳ ಕಾಲ ಚಳವಳಿ ಮಾಡಿ ಎರಡನೆ ಸಲ ನಾವು ಜೈಲಿಗೆ ಹೋದೆವು. ಇದರಿಂದಾಗಿ ನಾನು ಗೋಪಾಲಗೌಡರಿಗೆ ಹತ್ತಿರದವನಾದೆ. ಆ ಸಮಯದಲ್ಲಿ ಸಮಾಜವಾದಿ ಪಕ್ಷದಿಂದ ಆರು ಜನರ ಶಾಸಕರಾಗಿದ್ದರು. ಅಷ್ಟರಮಟ್ಟಿಗೆ ಪಕ್ಷ ಸಂಘಟನೆಯಾಗಿತ್ತು. ಕರ್ನಾಟಕದಲ್ಲಿ ಅಲ್ಲಿನವರೆಗೂ ಪಕ್ಷಾಂತರದ ಹೆಸರು ಕೇಳಿರಲಿಲ್ಲ. ಆಗ ಮೊದಲನೆ ಭಾರಿ ಸಮಾಜವಾದಿ ಪಕ್ಷದಿಂದ ಆಳುವ ಪಕ್ಷಕ್ಕೆ ಪಕ್ಷಾಂತರ ಆದವರು ಜಿ.ಬಸವಣ್ಣೆಪ್ಪನವರು. ಆಗ ಇಡೀ ಸೋಷಲಿಸ್ಟ್ ಪಕ್ಷದವರಿಗೆ, ಅದರಲ್ಲೂ ಮುಖ್ಯವಾಗಿ ಗೋಪಾಲಗೌಡರಿಗೆ ಬಹಳ ನೋವಾಯಿತು.

ಪ್ರೌಢಶಾಲೆಯಲ್ಲಿ ಓದುತ್ತಿದ್ದ ನನ್ನ ಚಿಕ್ಕಪ್ಪನ ಮಗನೊಬ್ಬನಿಗೆ ಸ್ಕಾಲರ್‌ಶಿಪ್ ಕೊಡಿಸಿಕೊಡಲು ಗೋಪಾಲಗೌಡರಿಗೆ ಹೇಳಿದೆ. ಆಗ ಗೌಡರು ಆ ಕಮಿಟಿಯಲ್ಲಿದ್ದರು. ಅವರ ಮಾತನ್ನು ಯಾರೂ ತೆಗೆದುಹಾಕುತ್ತಿರಲಿಲ್ಲ! ಗೋಪಾಲಗೌಡರಿಗೆ ನಾನು ಹೇಳಿದ ಕೂಡಲೆ ಕೋಪಬಂತು. ನೋಡಪ್ಪಾ, ಇವರಿಗೆ ಸ್ವಲ್ಪವಾದರೂ ಆಸ್ತಿ ಮನೆ ಇದೆ. ಬಹಳ ನಿರ್ಗತಿಕರು, ಆಸ್ತಿ ಮನೆಯಿಲ್ಲದೆ ಓದಲಾಗದವರು, ಒಂದೊತ್ತಿನ ಊಟಕ್ಕೂ ಗತಿ ಇಲ್ಲದೆ ಇರುವ ಹುಡುಗರು ಇದ್ದಾರೆ. ಅವರಿಗೆಲ್ಲಾ ಕೊಟ್ಟು ಉಳಿದರೆ ಇವರಿಗೆ ಕೊಡೋಣ. ಕಾರ್ಯಕರ್ತರು, ಅದರಲ್ಲೂ ನೀನು ಕಾರ್ಯದರ್ಶಿ ಇದ್ದೀಯಾ, ನೀನು ನನ್ನೊಂದಿಗೆ ಸಹಕರಿಸಬೇಕು, ಎಂದರು. ಗೌಡರ ಮಾತಿನಿಂದ ಆಗ ನನಗೆ ಮನಸ್ಸಿಗೆ ನೋವಾಗಲಿಲ್ಲ. ಅವರ ತತ್ವನಿಷ್ಠೆ, ಕರ್ತವ್ಯಪಾಲನೆ, ಬಡವರ ಬಗ್ಗೆ ಅವರ ಅನುಕಂಪ ನೋಡಿ, ಅವರ ಬಗ್ಗೆ ನನಗಿದ್ದ ಗೌರವ ಇಮ್ಮಡಿಯಾಯಿತು.

ಜನಸಾಮಾನ್ಯರ ಬಗ್ಗೆ ಅವರಿಗಿದ್ದ ಪ್ರೀತಿ, ವಿಶ್ವಾಸಕ್ಕೆ ಜನ ಮಾರುಹೋಗಿದ್ದರು. ಇಂತಹ ಗುಣಗಳಿಗಾಗಿಯೇ ಜನರು, ಗೌಡರ ಬಸ್ ಪ್ರಯಾಣ, ರೈಲ್ವೆ ಟಿಕೆಟ್ ಸಿಗರೇಟು, ಕಾಫಿ ಎಲ್ಲವನ್ನು ತಾವೇ ನೋಡಿಕೊಳ್ಳುತ್ತಿದ್ದರು. ಗೌಡರಲ್ಲಿ ಇದ್ದ ಪ್ರಾಮಾಣಿಕ ರಾಜಕಾರಣ ಎಲ್ಲ ಪಕ್ಷದ ನಾಯಕರನ್ನೂ, ಕಾರ್ಯಕರ್ತರನ್ನೂ ಅಭಿಮಾನದಿಂದ ಸೆಳೆಯುತ್ತಿತ್ತು. ಈ ಕಾರಣಕ್ಕಾಗಿಯೇ ಗೌಡರ ಚುನಾವಣೆಯಲ್ಲಿ ಮಾರ್ಕ್ಸಿಸ್ಟ್ ಕಮ್ಯೂನಿಸ್ಟ್ ಪಕ್ಷದವರು, ಗೌಡರಿಗೆ ಬೆಂಬಲ ಕೊಟ್ಟರು. ಬಿ.ಎನ್. ಅಪ್ಪಣ್ಣ ಹೆಗಡೆ, ಕೆ.ಎಂ. ಶ್ರೀನಿವಾಸ್, ಎಂ.ಪುರುಷೋತ್ತಮರಾವ್ ಮುಂತಾದವರು ಗೌಡರ ಜಯಕ್ಕೆ ಬಹಳ ದುಡಿಯುತ್ತಿದ್ದರು.

ಬಹಳ ಜನ ರಾಜಕಾರಣಿಗಳು ಪ್ರವಾಹದ ಜೊತೆಯಲ್ಲೇ ಈಜಿಕೊಂಡು ಹೋಗುವವರು. ಆದರೆ, ಪ್ರವಾಹದ ಎದುರಾಗಿ ನಿಂತು ಈಜಿ ಹೋರಾಟ ಮಾಡಿದವರು ಗೋಪಾಲಗೌಡರು ಮಾತ್ರ.