ಗೋಪಾಲಗೌಡರದು ಎತ್ತರದ ನಿಲುವು, ಅದಕ್ಕೆ ತಕ್ಕ ಮೈಕಟ್ಟು, ಶ್ಯಾಮಲವರ್ಣ, ಗಂಭೀರ ಮುಖಭಾವ, ಸ್ನೇಹಪರತೆ, ಆತ್ಮೀಯತೆ, ಎಲ್ಲರನ್ನೂ ಗೌರವಿಸುವ ಸ್ವಭಾವ, ಸ್ವಲ್ಪ ಮುಂಗೋಪ. ಅವರದು ನೇರ ನಡೆನುಡಿಯ ವಿಶಿಷ್ಟ ವ್ಯಕ್ತಿತ್ವ, ಇವರ ಆಕರ್ಷಣೆಗೆ ಒಳಗಾಗದಿರುವವರು ಬಹಳ ವಿರಳ.

ನನ್ನ ಮತ್ತು ಗೋಪಾಲಗೌಡರ ಮೊದಲ ಸಂಪರ್ಕವಾದದ್ದು ೧೯೫೪ರಲ್ಲಿ, ಶಿಕಾರಿಪುರ, ಸೊರಬ ಮತ್ತು ಸಾಗರ ತಾಲ್ಲೂಕಿನ ಕೆಲವು ಭಾಗಗಳು ಸೇರಿದ್ದ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯ ಸಮಯ. ಆ ವೇಳೆಗಾಗಲೆ ನಾನು ಸೋಷಲಿಸ್ಟ್ ಪಾರ್ಟಿಯ ಪರಿಧಿಯೊಳಗೆ ಸೇರಿಹೋಗಿದ್ದೆ. ಅದಕ್ಕೆ ಸ್ನೇಹಿತ ಎಸ್.ಎಸ್. ಕುಮಟಾ ಕಾರಣರು.

ಗೋಪಾಲಗೌಡರು ಮತ್ತು ನಾನು ಒಂದೇ ಪಕ್ಷದಲ್ಲಿ ಕೆಲಸ ಮಾಡಿದವರು. ಅವರು ನೇತಾರರಾಗಿದ್ದರು. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಅಷ್ಟೆ, ಆದರೂ ಅವರು ಕಾರ್ಯಕರ್ತರಲ್ಲಿ ತೋರುತ್ತಿದ್ದ ವಿಶ್ವಾಸ, ಆತ್ಮೀಯತೆ ಅಸದಳ.

ಗೋಪಾಲಗೌಡರ ವ್ಯಕ್ತಿತ್ವ ನನ್ನ ಅಳವಿಗೆ ಮೀರಿದ್ದು. ನಾನು ಅವರೊಂದಿಗಿದ್ದಾಗ ಸಂಭವಿಸಿದ ಕೆಲ ಘಟನೆಗಳನ್ನು ಮಾತ್ರ ಹೇಳಬಯಸುತ್ತೇನೆ. ಅವರ ವ್ಯಕ್ತಿತ್ವವನ್ನು ಕೆಲವು ಮಟ್ಟಿಗೆ ಅವು ತೆರೆದಿಡಬಹುದೆಂದು ಭಾವಿಸುತ್ತೇನೆ.

ಹಾನಗಲ್ ಶಾಸಕರ ನಿಧನದಿಂದಾಗಿ ಆ ಕ್ಷೇತ್ರಕ್ಕೆ ಮರುಚುನಾವಣೆ ನಡೆದ ವೇಳೆ, ಕಾಂಗ್ರೆಸ್‌ನಿಂದ ಕಾಮಲಾಪುರ ದೇಸಾಯಿಯವರು, ಪಿ.ಎಸ್.ಪಿ.ಯಿಂದ ಪಿ.ಸಿ.ಶೆಟ್ಟರ್ ಮತ್ತು ಎಸ್. ಎಸ್. ಪಿ ಯಿಂದ (ಲೋಹಿಯಾ ಅವರ ಸಮಾಜವಾದಿ ಪಕ್ಷ) ಎಸ್. ಎಸ್. ಅಕ್ಕವಳ್ಳಿ ಅಭ್ಯರ್ಥಿಗಳಾಗಿದ್ದರು. ನಾವು ಕೆಲವರು ಇಲ್ಲಿಂದ ಎಸ್. ಎಸ್. ಪಿಯ ಅಭ್ಯರ್ಥಿ ಅಕ್ಕವಳ್ಳಿಯವರ ಪರವಾಗಿ ಪ್ರಚಾರಕ್ಕೆ ಹೋಗಿದ್ದೆವು.

ಅಂದು ಸಂಜೆ ಬೊಮ್ಮನಹಳ್ಳಿ ಎಂಬಲ್ಲಿ ಪ್ರಚಾರ ಸಭೆ. ನಾವು ಅಲ್ಲಿಗೆ ಹೋದಾಗ ಸಂಜೆ ಐದು ಗಂಟೆ. ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆ ನಡೆಯುತ್ತಿತ್ತು. ಇವರ ಸಭೆ ಮುಗಿದ ಮೇಲೆ ನಮ್ಮ ಪಕ್ಷದವರ ಸಭೆ ನಡೆಯಬೇಕಾಗಿತ್ತು. ಆದರೆ, ನಮ್ಮ ನಾಯಕರಾದ ಗೋಪಾಲಗೌಡರು ಇನ್ನೂ ಬಂದಿರಲಿಲ್ಲ. ಆದ್ದರಿಂದ ನಾವೆಲ್ಲ ಅವರನ್ನೇ ಕಾಯುತ್ತಿದ್ದೆವು. ರಾತ್ರಿ ಒಂಬತ್ತು ಗಂಟೆಗೆ ಬಂದರು. ಗೋಪಾಲಗೌಡರಿಗಾಗಿ ಕಾದಿದ್ದ ಜನ ರಾತ್ರಿಯಾದರೂ ಕದಲಿರಲಿಲ್ಲ. ಕಮ್ಯುನಿಸ್ಟ್ ಮುಖಂಡರಾದ ಎಂ.ಸಿ. ನರಸಿಂಹನ್, ಶಿರ್ಸಿಯ ಧಾರೇಶ್ವರ ವಕೀಲರು ಮೊದಲಾದವರ ಭಾಷಣದ ನಂತರ ಗೌಡರದು ಕೊನೆಯ ಭಾಷಣ.

ಗೋಪಾಲಗೌಡರ ಭಾಷಣದ ವೈಖರಿಯೆಂದರೆ, ಮೊದಲು ಕೆಲ ನಿಮಿಷ ನಿಧಾನಗತಿ. ಶಬ್ದಗಳನ್ನು ತೂಗಿ ತೂಗಿ ಬಳಸುತ್ತಿದ್ದರು. ನಂತರವೇ ಅವರ ಭಾಷಣಕ್ಕೆ ಮೆರಗು ಬರುತ್ತಿತ್ತು. ಕನ್ನಡದ ಆದಿಕವಿ ಪಂಪನ ಕಾವ್ಯದಲ್ಲಿನ ಬನವಾಸಿ ದೇಶದ ವರ್ಣನೆಯಿಂದ ಗೌಡರ ಭಾಷಣ ಪ್ರಾರಂಭ. ನಂತರ ಅಂದಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗಳನ್ನು ಹೋಲಿಸಿ ಸುಮಾರು ಒಂದು ಗಂಟೆ ಭಾಷಣ ಮಾಡಿದರು. ಗೌಡರ ಭಾಷಣ: ಮುಗಿದಾಗ ರಾತ್ರಿ ೧೨ ಗಂಟೆಯಾದರೂ ಜನ ಮಾತ್ರ ಅಲುಗಾಡಿರಲಿಲ್ಲ. ಇದು ಎಂದೂ ಮರೆಯದ ಭಾಷಣ. ‘ಚುನಾವಣೆಯ ಭಾಷಣಗಳಲ್ಲಿ, ಈ ತರಹದ್ದನ್ನು ನಾವು ಕೇಳಿರಲಿಲ್ಲ. ಬಿಡಿ!’ ಇದು ಮಾಮೂಲಿ ಚುನಾವಣಾ ಭಾಷಣ ಅಲ್ಲ ಬಿಡಿ!’ ಎಂದು ಜನ ಮಾತನಾಡುತ್ತಾ ಹೋಗುತ್ತಿದ್ದುದ್ದನ್ನು ನಾನು ಪ್ರತ್ಯಕ್ಷದರ್ಶಿಯಾಗಿ ಕಂಡಿದ್ದೇನೆ.

ಇದೇ ಚುನಾವಣೆಯ ಇನ್ನೊಂದು ಘಟನೆ ಹೀಗಿದೆ; ಅಂದು ಹಾನಗಲ್‌ನಲ್ಲಿ ಸಂತೆ. ಚುನಾವಣೆಗೆ ಕೇವಲ ಎರಡು ದಿನ ಮಾತ್ರ ಉಳಿದಿತ್ತು. ಅಂದೇ ಅಲ್ಲಿನ ನಮ್ಮ ಪಕ್ಷದ ಸಭೆ ಏರ್ಪಾಟಾಗಿತ್ತು. ಪಿ.ಎಸ್.ಪಿ.ಯವರದೂ ಕೂಡ ಅಲ್ಲಿ ಸಭೆ ಇತ್ತು. ಗೋಪಾಲಗೌಡರು ಮತ್ತಿತರ ಮುಖಂಡರು ಆ ದಿನ ಸಂಜೆ ಏಳರ ಹೊತ್ತಿಗೆ ಅಲ್ಲಿಗೆ ಬಂದರು. ಆಗ ನಮ್ಮ ವೇದಿಕೆಗೆ ಎದುರುಭಾಗದಲ್ಲಿ ಪಿ.ಎಸ್.ಪಿ.ಯವರ ಸಭೆ ನಡೆಯುತ್ತಿತ್ತು. ಗೌಡರು ಅವರ ಸಭೆ ಮುಗಿಯುವುದನ್ನೇ ನಿರೀಕ್ಷಿಸುತ್ತಾ ರಸ್ತೆ ಬದಿಯ ಲೈಟ್‌ಕಂಬಕ್ಕೆ ಒರಗಿ ನಿಂತು ಸಿಗರೇಟ್ ಸೇದುತ್ತಿದ್ದರು.

ಪಿ.ಎಸ್.ಪಿ.ಯವರ ವೇದಿಕೆ ಮೇಲೆ ಟಿ.ಕೆ. ಮೆಹಮೂದ್ ಎಂಬುವರು ಭಾಷಣ ಪ್ರಾರಂಭ ಮಾಡಿದ್ದರು. ಮೆಹಮೂದ್ ಉತ್ತರ ಕನ್ನಡ ಜಿಲ್ಲೆಯ ಪಿ.ಎಸ್.ಪಿ ಪದಾಧಿಕಾರಿ ಎಂದು ನೆನಪು ಅಕ್ಕಿವಳ್ಳಿ ಸಾಹೇಬರು ಮೊದಲಿಗೆ ನಮ್ಮ ಪಕ್ಷದ ಟಿಕೆಟ್ ಕೇಳಿದ್ದರು. ಅದು ಸಿಗದ ಕಾರಣಕ್ಕೆ ಎಸ್.ಎಸ್.ಪಿ.ಯಿಂದ ಸ್ಪರ್ಧಿಸಿದ್ದಾರೆ, ಎಂದು ಮೆಹಮೂದರು ಹೇಳುತ್ತಿದ್ದಂತೆ ಗೋಪಾಲಗೌಡರು ಸೇದುತ್ತಿದ್ದ ಸಿಗರೇಟನ್ನು ಬಿಸಾಡಿ, ಬಿರಬಿರನೆ ಅವರ ವೇದಿಕೆಗೆ ನುಗ್ಗಿ, ಅವರಿಂದ ಮೈಕ್ ಕಸಿದುಕೊಂಡು ‘ಹೇಳು, ಅಕ್ಕಿವಳ್ಳಿ ಸಾಹೇಬರು ನಿಮ್ಮ ಪಕ್ಷದ ಟಿಕೆಟ್ ಕೇಳಿದ್ದರೋ! ಇಲ್ಲ ನಿಮ್ಮ ಅಭ್ಯರ್ಥಿ ಪಿ.ಸಿ.ಶೆಟ್ಟರ್ ನಮ್ಮ ಪಕ್ಷದ ಟಿಕೆಟ್ ಕೇಳಿ ಕೊಡದ ಕಾರಣಕ್ಕೆ ನಿಮ್ಮ ಪಕ್ಷದಿಂದ ಸ್ಪರ್ಧಿಸಿದ್ದಾರೋ?’ ಎಂದು ಗುಡುಗಿದರು. ವೇದಿಕೆಯಲ್ಲಿದ್ದವರಿಗೂ ಸಭೀಕರಿಗೂ, ಎಲ್ಲರಿಗೂ ದಿಗ್ಭ್ರಾಂತಿ.

ಗೋಪಾಲಗೌಡರ ನಿರ್ಭೀತ ನಡೆಗೆ ಒತ್ತುಕೊಡುವ ಇನ್ನೊಂದು ಪ್ರಸಂಗ: ಅದು ನಡೆದದ್ದು ೧೯೬೭ರ ಚುನಾವಣೆಯ ಸಮಯದಲ್ಲಿ. ಆಗ ಗೌಡರು ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ ಬಿ.ಎಸ್.ವಿಶ್ವನಾಥ್ ಅವರ ಪ್ರತಿಸ್ಪರ್ಧಿಯಾಗಿದ್ದರು. ಹೊಸನಗರ ತಾಲ್ಲೂಕಿನ ನಗರ ಹೋಬಳಿಯು ಆಗ ತೀರ್ಥಹಳ್ಳಿ ಕ್ಷೇತ್ರಕ್ಕೆ ಸೇರಿತ್ತು.

ಸಾಗರ ಕ್ಷೇತ್ರದ ಚುನಾವಣೆ ನಡೆಯಬೇಕಿತ್ತು. ನಾವು ಸಾಗರ ಕ್ಷೇತ್ರದ ಚುನಾವಣೆ ಮುಗಿಸಿ, ತೀರ್ಥಹಳ್ಳಿ ಕ್ಷೇತ್ರಕ್ಕೆ ಗೌಡರ ಪರ ಪ್ರಚಾರ ಮಾಡಲು ಬಂದೆವು. ನನ್ನನ್ನೂ ಒಳಗೊಂಡು ಎಸ್.ಎಸ್. ಕುಮಟಾ, ಟಿ.ವೆಂಕಟಪ್ಪ ಮುಂತಾದವರನ್ನು ನಗರ ಹೋಬಳಿಗೆ ಪ್ರಚಾರಕ್ಕೆ ಕಳಿಸಿದರು.

ನಗರ ಹೋಬಳಿಯಲ್ಲಿ ನಮಗೆ ನೆಲೆ ಇರಲಿಲ್ಲ. ಆವರೆಗೂ ಅಲ್ಲಿ ನಮ್ಮ ಪಕ್ಷದ ಪರ ಪ್ರಚಾರ ಕಾರ್ಯ ಆರಂಭವಾಗಿರಲಿಲ್ಲ. ಇಡೀ ನಗರ ಹೋಬಳಿಯಲ್ಲಿ ನಮ್ಮ ಪಕ್ಷದ ಬ್ಯಾನರ್ ಆಗಲಿ, ಪೋಸ್ಟರ್ ಆಗಲಿ ಒಂದೂ ಕಾಣಲಿಲ್ಲ. ಅಲ್ಲಿನ ಸ್ಥಳೀಯ ಘಟಾನುಘಟಿಗಳೆಲ್ಲಾ ವಿಶ್ವನಾಥರ ಪರವಾಗಿ ಟೊಂಕಕಟ್ಟಿ ದುಡಿಯುತ್ತಿದ್ದರು. ನಮ್ಮ ಅಭ್ಯರ್ಥಿ ಗೋಪಾಲಗೌಡರೇ ಆ ಹೋಬಳಿಗೆ ಪ್ರಚಾರಕ್ಕೆಂದು ಹೋಗಿರಲಿಲ್ಲ.

ನಾವು ನಗರ ಸೇರಿದಾಗ ಬೆಳಗಿನ ಆರು ಗಂಟೆ. ಸ್ವಲ್ಪ ಕಾಫಿ ಕುಡಿದು ಪ್ರಚಾರಕಾರ್ಯ ಆರಂಭಿಸೋಣ ಎಂದು ಕೊಂಡು ಹೋಟೆಲ್‌ಗೆ ಹೋದೆವು. ಕಾಫಿ ಕುಡಿದು ಹೊರಬರುತ್ತಿದ್ದೆವು. ಅಲ್ಲಿ ಸುವರ್ಣ ಎಂಬುವರೊಬ್ಬರು ಪಿ.ಡಬ್ಲೂಡಿ. ಗುತ್ತಿಗೆದಾರರು. ನಮ್ಮ ಜೊತೆಯಲ್ಲೇ ಹೊರಬರುತ್ತಿದ್ದರು. ನಾವು ಒಂದೆರಡು ಮೆಟ್ಟಿಲು ಇಳಿದಿರಬಹುದು. ಅಷ್ಟರಲ್ಲಿ ಗೋಪಾಲಗೌಡರು ಕಾರಿನಿಂದ ಬಂದಿಳಿದು, ಹೋಟೆಲ್ ಮೆಟ್ಟಿಲು ಹತ್ತಿ ಬರುತ್ತಿದ್ದರು. ಗೌಡರು ಸುವರ್ಣರನ್ನು ಸಮೀಪಿಸುತ್ತಲೇ ಒಮ್ಮೆಲೆ ನಿಂತು, ಅವರ ಮುಖವನ್ನು ದಿಟ್ಟಿಸಿ ‘ಓ! ನೀನೋ ಸುವರ್ಣ ಎಂದರೆ!’ ಎಂದು ಪ್ರಶ್ನೆ ಎಸೆದು, ಆತನು ಉತ್ತರಿಸುವ ಮೊದಲೇ, ‘ನಾನು ಜನರಿಂದ ಹಣ ಹೊಡೆಯುತ್ತಿದ್ದೇನೆಂದು ಪ್ರಚಾರ ಮಾಡುತ್ತಿದ್ದೀರಂತೆ? ನೆನಪಿಡಿ. ನಾನು ಗೆದ್ದರೂ ಗೋಪಾಲಗೌಡ! ಸೋತರೂ ಗೋಪಾಲಗೌಡ!’ ಎಂದು ಸಿಡಿಲುಹೊಡೆದಂತೆ ಹೇಳಿ, ಎಂದಿನಂತೆ ತಮ್ಮ ಗತ್ತಿನ ನಡಿಗೆಯಿಂದಲೇ ಹೋಟಲಿನ ಒಳಗೆ ಹೋದರು. ಸುವರ್ಣರು ಗೌಡರ ಮಾತಿನಿಂದ ದಿಗ್ಭ್ರಾಂತರಾಗಿ ಕೆಲಕ್ಷಣ ನಿಂತುಬಿಟ್ಟರು.

ನಮಗೆ ಅಲ್ಲಿ ನಿಲ್ಲಲು ಸಹ ನೆಲೆ ಇರಲಿಲ್ಲ. ಪ್ರಚಾರಕ್ಕಾಗಿ ಮನೆಯ ಬಾಗಿಲಿಗೆ ಹೋದರೆ, ಜನ ಬಾಗಿಲು ಮುಚ್ಚಿಕೊಳ್ಳುತ್ತಿದ್ದರು. ಇಂತಹ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ನಗರ ಹೋಬಳಿಯ ಕೆಲವು ಕೇಂದ್ರಗಳನ್ನು ಬಿಟ್ಟರೆ, ಗೋಪಾಲಗೌಡರಿಗೆ ವಿಶ್ವನಾಥರಿಗಿಂತ ಹೆಚ್ಚಿನ ಮತ ಲಭಿಸಿತ್ತು. ಗೌಡರು ಆ ಚುನಾವಣೆಯಲ್ಲಿ ಗೆದ್ದರು. ನಮಗಂತೂ ಗೌಡರ ಈ ಗೆಲುವು ಅತೀವ ಸಂತೋಷವನ್ನು ತಂದಿತ್ತು. ದೇವರಾಜ ಅರಸು ಹೇಳುತ್ತಿದ್ದ ‘ಅದೃಶ್ಯ ಮತ’ ಎಂದರೆ ಇದೇ ಅಲ್ಲವೇ? ಆ ಸಮಯದಲ್ಲಿ ಸೋತ ವಿಶ್ವನಾಥರವರು ನಮ್ಮನ್ನೆಲ್ಲಾ ಅಭಿನಂದಿಸಿ, ‘ಇನ್ನು ಈ ಕ್ಷೇತ್ರದಲ್ಲಿ ಗೋಪಾಲಗೌಡರ ಎದುರು ಯಾರು ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಿಲ್ಲ!’ ಎಂದು ಹೇಳಿದ ಮಾತು ನನಗಿನ್ನೂ ನೆನಪಿದೆ.

ಗೋಪಾಲಗೌಡರ ವ್ಯಕ್ತಿತ್ವದಲ್ಲಿದ್ದ ಮಾನವೀಯ ಗುಣಗಳಿಗೆ ಮಾರುಹೋಗದವರ‍್ಯಾರು? ನಾವಂತೂ ಗೋಪಾಲಗೌಡರಿಗಾಗಿಯೇ ಅರ್ಪಿಸಿಕೊಂಡವರು.