ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆಯೇ ಹೊರತು, ಅದು ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ. ಒಂದು ದೃಷ್ಟಿಯಿಂದ ಇದು ವಿದ್ಯೆಯನ್ನು ನಿರ್ಮಿಸುವ ಸಂಸ್ಥೆಯಾಗಿದೆ. ನಮ್ಮ ದೇಶದಲ್ಲಿ ಹಳೆಯ ಕಾಲದ ತಿಳುವಳಿಕೆಯೊಂದಿದೆ. ಅಲ್ಲದೆ, ಪಶ್ಚಿಮದಿಂದ ಹರಿದು ಬರುತ್ತಿರುವ ಜ್ಞಾನಪ್ರವಾಹವೂ ಇದೆ. ಈ ಎರಡೂ ತಿಳುವಳಿಕೆಗಳು ಒಂದಕ್ಕೊಂದು ಸಂಧಿಸಿ, ಬೆಳಕನ್ನು ಉಂಟುಮಾಡಿವೆ; ಜೊತೆಗೆ ದಿಗ್ಭ್ರಮೆಯನ್ನೂ ತಂದಿವೆ. ಈ ಬಗೆಯ ತೆರೆದ ಮನಸ್ಸಿನ ವಿವೇಕದ ವಿನಿಯೋಗ ಇಂದು ಅಗತ್ಯವಾಗಿದೆ. ಇಂಥ ವಿಯೋಗಕ್ಕಾಗಿ ಹೊಸಬಗೆಯ ಶಾಸ್ತ್ರ ವಿಧಾನಗಳು ನಮಗಿಂದು ಬೇಕಾಗಿವೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಯ ಗುರಿಯೆಂದರೆ ಈ ಶಾಸ್ತ್ರವಿಧಾನಗಳ ನಿರ್ಮಾಣ ಲೋಕದಲ್ಲಿಯ ತಿಳುವಳಿಕೆಯನ್ನು ಸಂಗ್ರಹಿಸಿ ತಿರುಗಿ ಲೋಕಕ್ಕೆ ದಾನಮಾಡುವ ಪ್ರಕ್ರಿಯೆ ಪ್ರಸಾರಾಂಗದಲ್ಲಿ ನಡೆಯುತ್ತಿದೆ.

ಡಾ. ರಾಮಮನೋಹರ ಲೋಹಿಯಾ ಅವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ತರುವ ಒಂದು ಮಹತ್ವದ ಐತಿಹಾಸಿಕ ಪ್ರಯತ್ನ ಈಗ ನಡೆಯುತ್ತಿರುವುದು ತುಂಬ ಸಂತೋಷದ ಸಂಗತಿಯಾಗಿದೆ. ಲೋಹಿಯಾರವರ ಚಿಂತನೆ ವಿಚಾರಗಳಿಂದ ಪ್ರಭಾವಿತರಾದ ಧೀಮಂತರ ಒಂದು ಬಳಗವೇ ಕರ್ನಾಟಕದಲ್ಲಿದೆ. ಆದರೂ ಅವರ ಎಲ್ಲ ಕೃತಿಗಳೂ ಕನ್ನಡದಲ್ಲಿ ದೊರೆಯುವುದಿಲ್ಲ. ಡಾ. ಲೋಹಿಯಾ ಸಮಗ್ರ ಕೃತಿ ಪ್ರಕಟಣಾ ಸಮಿತಿಯು ಡಾ. ಕಾಳೇಗೌಡ ನಾಗವಾರ ಅವರ ನೇತೃತ್ವದಲ್ಲಿ ಅಂಥ ಒಂದು ಪ್ರಯತ್ನ ಮಾಡುತ್ತಿರುವುದು ಅಭಿನಂದನೆಗೆ ಅರ್ಹವಾದ ಸಂಗತಿಯಾಗಿದೆ.

ಡಾ. ಲೋಹಿಯಾ ಅವರು ಈ ಯುಗ ಕಂಡ ಅತ್ಯಂತ ಉಜ್ವಲವಾದ ವ್ಯಕ್ತಿತ್ವವೆಂಬುದರಲ್ಲಿ ಸಂದೇಹವಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಈ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಧೀಮಂತ ವ್ಯಕ್ತಿಯೂ ರಾಜಕೀಯಕ್ಕೆ ತನ್ನನ್ನು ಅರ್ಪಿಸಿಕೊಳ್ಳುವ ಅಗತ್ಯವಿತ್ತು. ಕಾರಣವೆಂದರೆ, ಯಾವ ಧೀಮಂತ ವ್ಯಕ್ತಿಯೂ ನಾಚಿಕೆಪಡಬೇಕಾದ ನಾಡಿನ ಪಾರತಂತ್ರ್ಯ. ಅಲ್ಲದೆ ಥಾಮಸ್‌ಮನ್ ಹೇಳುವಂತೆ ಇಪ್ಪತ್ತನೆಯ ಶತಮಾನದಲ್ಲಿ ವ್ಯಕ್ತಿಯ ದೈವ ರಾಜಕೀಯದಲ್ಲಿ ಮಾತ್ರ ವ್ಯಕ್ತವಾಗಬೇಕು. ಡಾ. ಲೋಹಿಯಾರಂಥವರ ವಿಷಯದಲ್ಲಂತೂ ಈ ಮಾತು ಅಕ್ಷರಶಃ ಸತ್ಯವಾಗಿದೆ. ರಾಹುಲ ಸಾಂಕೃತ್ಯಾಯನ, ಪಂಡಿತ ಜವಾಹರಲಾಲ್ ನೆಹರು, ಡಾ. ರಾಮಮನೋಹರ ಲೋಹಿಯಾರಂಥ ಪ್ರಖರ ಚಿಂತಕರು ಬೇರೆ ಸಮಯಗಳಲ್ಲಾಗಿದ್ದರೆ ಬಹುಶಃ ರಾಜಕೀಯವನ್ನು ಬಿಟ್ಟು ಸಾಹಿತ್ಯ ಚಿಂತನೆಗೆ ತೊಡಗುತ್ತಿದ್ದರು. ಇಲ್ಲಿ ನಾನು ಬೇಕೆಂದೇ ಮಹಾತ್ಮಾಗಾಂಧಿ ಮತ್ತು ರವೀಂದ್ರನಾಥ ಟಾಗೋರರ ಹೆಸರನ್ನು ಹೇಳಿಲ್ಲ. ಗಾಂಧಿಯವರ ಚಿಂತನೆ ಸಮಗ್ರವಾದದ್ದು. ಅದರಲ್ಲಿ ಆಂಶಿಕತೆ ಇಲ್ಲವೇ ಇಲ್ಲ. ಅಹಿಂಸೆಯಂಥ ಪರಮಧರ್ಮದಿಂದ ಹಿಡಿದು ಹಲ್ಲುತಿಕ್ಕುವವರೆಗೆ ಎಲ್ಲದರ ಬಗ್ಗೆಯೂ ಅವರು ಯೋಚಿಸಿದರು. ಗಾಂಧಿಯವರ ಚಿಂತನದ ವಿಸ್ತಾರವೇ ಟಾಗೋರರ ಕಾವ್ಯಕ್ಕೂ ಇದೆ. ಆ ಕಾಲದ ಉಳಿದ ಚಿಂತಕರು, ರಾಜಕಾರಣಿಗಳು ಮತ್ತು ತತ್ವಜ್ಞರಲ್ಲಿ ಇವರಿಬ್ಬರ ಗುಣಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಹಂಚಿಹೋಗಿವೆ.

ಡಾ. ಲೋಹಿಯಾ ಈ ದೇಶದಲ್ಲಿ ಮತ್ತು ಉಳಿದ ದೇಶಗಳಲ್ಲಿ ಅದರಂತೆ, ಸ್ವಾತಂತ್ರ್ಯಕ್ಕಿಂತ ಮೊದಲು ಮತ್ತು ನಂತರ ಅನೇಕ ಸಾರಿ ಜೇಲುವಾಸವನ್ನು ಅನುಭವಿಸಿದರು. ಅವರು ಮಾಮಾವರೇರಕರರ ಮರಾಠಿ ನಾಟಕ ‘ಭೂಮಿಕನ್ಯಾ ಸೀತಾ’ ಓದಿದ್ದು ಜೇಲಿನಲ್ಲಿ. ಅದರಂತೆ ಲಾಹೋರದ ಕೋಟೆಯಲ್ಲಿನ ಜೇಲಿನಲ್ಲಿ ಅಮಾನುಷವಾದ ಹಿಂಸೆಯನ್ನು ಅನುಭವಿಸುವಾಗ ಯೋಗದ ಅರ್ಥವನ್ನು ತಿಳಿದುಕೊಂಡವರು… ಅನುಭವ ತನ್ನ ಜೀವಂತಿಕೆಯನ್ನು ಕಳೆದುಕೊಳ್ಳದೇ ಒಂದು ತತ್ವಕ್ಕೆ, ತತ್ವದಿಂದ ತಾತ್ವಿಕತೆಗೆ ಹೇಗೆ ದಾರಿಮಾಡಿಕೊಡುತ್ತದೆಂಬುದನ್ನು ಇದರಿಂದ ತಿಳಿಯಬಹುದು. ವರೇರಕರರ ಮರಾಠಿ ನಾಟಕದ ಓದಿಗೆ ಅವರ ಚಿಂತನೆ ನಿಲ್ಲುವುದಿಲ್ಲ. ಆ ನಾಟಕದ ಪಾತ್ರಗಳು ಅವರಿಗೆ ವಸಿಷ್ಠ ಮತ್ತು ವಾಲ್ಮೀಕಿಯಂಥ ಎರಡು ಕಾರಣ ಪಾತ್ರಗಳನ್ನು ಕಣ್ಣೆದುರು ನಿಲ್ಲಿಸುತ್ತದೆ. ಅವರ ಪ್ರಕಾರ ನಮ್ಮ ಸಾಮಾಜಿಕ ಚಿಂತಕರೆಲ್ಲ ಈ ಎರಡು ಗುಂಪುಗಳಲ್ಲಿ ಹಂಚಿಹೋಗುತ್ತಾರೆ. ಇಂಥ ತಾತ್ವಿಕತೆ ಅವರ ಎಲ್ಲ ಬರವಣಿಗೆಯ ಲಕ್ಷಣವಾಗಿದೆ.

ಡಾ. ಲೋಹಿಯರವರ ತಾತ್ವಿಕತೆಗೆ ಮೂಲವಾಗಿರುವುದು ಅವರ ವೈಯಕ್ತಿಕ ಅನುಭವ. ಅವರ ಯೋಗದಲ್ಲಿ ಒಂದು ಅಧ್ಯಾಯ ಎಂಬ ಪ್ರಬಂಧವನ್ನು ಈ ಮಾತಿನ ಸತ್ಯತೆಗಾಗಿಯೇ ಓದಬೇಕು. ಲಾಹೋರಿನ ಕೋಟೆಯ ಸೆರೆಮನೆಯಲ್ಲಿ ಅವರು ಒಂಟಿಯಾಗಿದ್ದಾಗ ಅಪಾರವಾದ ಹಿಂಸೆಯನ್ನು ಅನುಭವಿಸಿದರು. ವಾರಗಟ್ಟಲೆ ನಿದ್ದೆ ಇಲ್ಲದೆ ಕಳೆದರು, ಹಸಿವೆ ನೀರಡಿಕೆಗಳನ್ನು ಮರೆತರು. ಆಗ ಅವರಿಗೆ ಚಿತ್ತವೃತ್ತಿ ನಿರೋಧವೆಂದರೆ ಯೋಗ ಎಂಬ ಮಾತಿನ ಅನುಭವವವಾಯಿತು. ಇದನ್ನು ಧಾರ್ಮಿಕ ಅನುಭವವೆಂದು ಕರೆಯಲಾಗುವುದಿಲ್ಲ. ಆದರೆ, ನಮ್ಮ ಅನುಭಾವಕ್ಕೆ ತೀರಾ ಸಮೀಪವಾಗಿರುವ ಅನುಭವ ಇದಾಗಿದೆ. ಈ ಅನುಭವಕ್ಕೆ ಒಂದು ರಾಜಕೀಯ ಆಯಾಮವು ಇದೆ. ಯುದ್ಧದ ಹಿಂಸೆಗಿಂತ ಹೆಚ್ಚು, ನಿರ್ದಯವಾದ ಈ ನಾಗರಿಕ ಹಿಂಸೆ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳುಮಾಡಬಲ್ಲದು. ಒಂದು ಕಾಲಕ್ಕೆ ಭಗತ್‌ಸಿಂಗನನ್ನು ಕಾಯುತ್ತಿದ್ದ ಪೋಲೀಸನೇ ಇವರ ಪಹರೆಯವರಲ್ಲಿ ಒಬ್ಬನಾಗಿದ್ದನಂತೆ. ಲೋಹಿಯಾ ತಮ್ಮ ದೇಹದ ದುರ್ಬಲತೆಯಲ್ಲಿಯೂ ಆತ್ಮಬಲವನ್ನು, ಮನೋಬಲವನ್ನು ಕಾಯ್ದುಕೊಂಡದ್ದೇ ದೊಡ್ಡ ಪವಾಡವಾಗಿದೆ. ಲೋಕಮಾನ್ಯ ತಿಲಕರು ಸೆರೆಮೆಯಲ್ಲಿ ಭಗವದ್ಗೀತೆಯ ಬಗ್ಗೆ ಒಂದು ಗ್ರಂಥವನ್ನು ಬರೆದರು. ಆದರೆ ಆ ಗ್ರಂಥಕ್ಕೂ ಅವರ ಸೆರೆಮನೆಯ ಅನುಭವಕ್ಕೂ ಸಂಬಂಧವಿಲ್ಲ. ಆದರೆ ಲೋಹಿಯಾ ಅವರು ಅನುಭವಿಸಿದ ಹಿಂಸೆಯ ದಾರುಣವಾದ ಅನುಭವದಲ್ಲಿ ಅವರ ನೈತಿಕತೆ.ಯ ಕೇಂದ್ರವಿದೆ. ಈ ನೈತಿಕತೆಯೇ ಅವರ ಕಲೆಯ ಮೀಮಾಂಸೆಯನ್ನೂ ರೂಪಿಸಿದೆ. ಅವರು ನಮ್ಮ ದೇವತೆಗಳ ಬಗ್ಗೆ ಬರೆದಿದ್ದಾರೆ. ಜನಪದ ಕಲೆಗಳ ಬಗ್ಗೆ ಬರೆದಿದ್ದಾರೆ. ಅದರಂತೆ ನಮ್ಮ ಭಾಷೆ, ಲಿಪಿ, ವರ್ಣಮಾಲೆಗಳ ಬಗ್ಗೆಯೂ ಬರೆದಿದ್ದಾರೆ. ಇವೆಲ್ಲವುಗಳ ಹಿಂದೆ, ಹಿಂಸೆಯ ಅನುಭವದಲ್ಲಿ ಹುಟ್ಟಿಬಂದ ನೈತಿಕತೆಯ ಬೆಂಬಲವಿದೆ. ಗಾಂಧಿಯವರ ವಿಚಾರಗಳಿಗೂ ಲೋಹಿಯಾರವರ ವಿಚಾರಗಳಿಗೂ ಇರುವ ಸಾಮ್ಯಕ್ಕೆ ಕಾರಣ ಇದೇ ಎಂದು ತೋರುತ್ತದೆ.

ಡಾ. ಲೋಹಿಯಾರವರ ಮುಂದೆ ಇದ್ದದ್ದು ನಮ್ಮ ದೇಶದ ವಿಸ್ತೃತವಾದ, ಗಹನವಾದ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಪಂಚ; ಸಾವಿರಾರು ವರ್ಷಗಳಿಂದ ಬೆಳೆದು ವಿಸ್ತಾರವಾಗಿ, ತೊಡಕು ತೊಡಕಾಗಿ, ಕೆಲಭಾಗದಲ್ಲಿ ಸಾಯುತ್ತ ಇನ್ನು ಕೆಲವು ಭಾಗಗಳಲ್ಲಿ ಚಿಗುರುತ್ತ ಬಂದಿರುವ ಸಾಂಸ್ಕೃತಿಕ ವೃಕ್ಷ ಇದಾಗಿದೆ. ಅವರು ಇದನ್ನು ತಮ್ಮ ಬರವಣಿಗೆಯ ಮೂಲಕವಾಗಿ ಅರ್ಥವಿಸುತ್ತಲೇ ಹೋದರು. ನಮ್ಮ ಇಂದಿನ ತಿಳುವಳಿಕೆಯ ಶಾಸ್ತ್ರದಲ್ಲಿ ಅವರದು ದೊಡ್ಡಪಾಲು.

ಅವರ ಬರವಣಿಗೆಯಲ್ಲಿ ನನಗೆ ತೀರಾ ಆಸಕ್ತಿ ಕೆರಳಿಸಿದ ಪ್ರಬಂಧವೆಂದರೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಬಗ್ಗೆ ಅವರು ಬರೆದದ್ದು. ನಮ್ಮ ವಿಶ್ವವಿದ್ಯಾಲಯಗಳು ಕೇವಲ ಮಾಹಿತಿಯ ಸಂಗ್ರಹಕ್ಕಾಗಿ ಇವೆ ಎಂದು ಅವರು ಹೇಳಿದ್ದು ಬಹುಮಟ್ಟಿಗೆ ಸತ್ಯವಾಗಿದೆ. ಸಂಗ್ರಹಗೊಂಡ ಮಾಹಿತಿ ಮುಂದೆ ತಾತ್ವಿಕತೆಗೆ ದಾರಿ ಮಾಡಿಕೊಡಬೇಕೆಂದು ಹೇಳಿದ್ದು ಮಹತ್ವದ ಸಂಗತಿಯಾಗಿದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯವಿರಲಿಲ್ಲ. ಕಾರಣವೆಂದರೆ ಆಗ ವಿಶ್ವವಿದ್ಯಾಲಯಗಳು ಕೇವಲ ವಿದ್ಯೆಯ ವಿತರಣಕ್ಕೆಂದೇ ಹುಟ್ಟಿದವು. ಸ್ವಾತಂತ್ರ್ಯ ದೊರೆತ ಮೇಲೆ ವಿಶ್ವವಿದ್ಯಾಲಯಗಳ ರಚನೆಯಲ್ಲಿಯೇ ರಾಜಕೀಯ ಹುಟ್ಟಿಕೊಂಡಿತು. ಇದೂ ಒಂದು ಸಾಮಾಜಿಕ ಬೆಳವಣಿಗೆಯಾಗಿದ್ದ ಇನ್ನು ಮುಂದೆ ವಿಶ್ವವಿದ್ಯಾಲಯಗಳು ರಾಜಕೀಯಕ್ಕೆ ಕೂಡ ಮಾದರಿಯಾಗಬೇಕಾದ ಸಂಸ್ಥೆಗಳಾಗಬೇಕಾಗಿದೆ. ಇಂದಿನ ರಾಜಕಾರಣ ವಿಶ್ವವಿದ್ಯಾಲಯಗಳಿಂದ ಏನೂ ಕಲಿಯಲಾಗದು. ವಿಶ್ವವಿದ್ಯಾಲಯದ ತಾತ್ವಿಕವಾದ ಸ್ವಾಯತತ್ತೆ ನಿಜವಾದ ಸ್ವಾಯತತ್ತೆಯಾಗಬೇಕಾದರೆ ಲೋಹಿಯಾರಂಥ ಚಿಂತಕರಿಂದ ಪಾಠ ಕಲಿಯಬೇಕಾಗಿದೆ.

ಡಾ. ಲೋಹಿಯಾರ ವ್ಯಕ್ತಿತ್ವದ ಸ್ಮರಣೆ ಅವರ ಬರವಣಿಗೆಯ ಮೂಲಕ ಆಗಬೇಕಾದದ್ದು ಇಂದು ಅನಿವಾರ್ಯವಾಗಿದೆ. ನಮ್ಮ ಪುಣ್ಯಕ್ಕೆ ಅವರ ಬರವಣಿಗೆ ಮತ್ತು ವ್ಯಕ್ತಿತ್ವಗಳ ನಡುವೆ ಯಾವ ವಿರೋಧವು ಇಲ್ಲ. ಈ ಬರವಣಿಗೆಯ ಕಾವ್ಯಶಾಸ್ತ್ರ ಇನ್ನೂ ಹುಟ್ಟಬೇಕಾಗಿದೆ. ಲೋಹಿಯಾರ ಬರವಣಿಗೆಯಲ್ಲಿ ವಿಚಾರಗಳೆಲ್ಲ ಪ್ರತಿಮೆಗಳಾಗುತ್ತದೆ. ಅವರು ಕಾಲದ ಬಗ್ಗೆ, ಇತಿಹಾಸದ ಬಗ್ಗೆ, ಮನುಷ್ಯ ಮತ್ತು ಜಗತ್ತುಗಳ ಸಂಬಂಧದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಲೋಹಿಯಾರಂಥವರ ಸಾಹಿತ್ಯದ ಆಳವಾದ ಅಭ್ಯಾಸದಿಂದ ಮಾತ್ರ ಭಾರತೀಯ ನವೋದಯದ ನಿಜವಾದ ಅರ್ಥ ನಮಗಾಗಬಹುದು. ಯುರೋಪಿನ ನವೋದಯಕ್ಕೂ ನಮ್ಮ ದೇಶದ ನವೋದಯಕ್ಕೂ ಏನಾದರೂ ಅಂತರವಿದ್ದರೆ ಅದು ಗುಲಾಮಗಿರಿಯ ಹೃದಯದಲ್ಲಿ ಮನುಷ್ಯ ಗೌರವ ಅನ್ಯಾದೃಶವಾಗಿ ಕಾಣುತ್ತದೆ.ಅದಕ್ಕಾಗಿ ಲೋಹಿಯಾರ ಸಮಗ್ರ ಕೃತಿಗಳು ಈ ಮನುಷ್ಯ ಗೌರವದ ಸ್ಮರಾಕವಾಗಿ ನಿಲ್ಲುತ್ತವೆ. ಈ ಐತಿಹಾಸಿಕ ಚಿಂತಕರು ಭಾರತದ ಶೋಧಕ್ಕೆ ತೊಡಗಿದವರು. ಅದಕ್ಕಾಗಿ ಲೋಹಿಯಾ ಅವರ ಬರವಣಿಗೆಯು ಸಮಗ್ರವಾಗಿ ನಮ್ಮ ಕೈಗೆ ದೊರಕಬೇಕಾಗಿದೆ. ಹಾಗೆಯೇ ಮಹಾತ್ಮಾಗಾಂಧಿ ಮತ್ತು ರಾಮಮನೋಹರ ಲೋಹಿಯಾ ಅವರ ಮಾರ್ಗದಲ್ಲಿ ಬೆಳೆದು ಬಂದ ಮಹತ್ವಪೂರ್ಣ ವ್ಯಕ್ತಿಗಳ ಬದುಕು ಮತ್ತು ಬರಹವನ್ನು ಕುರಿತ ಅಧ್ಯಯನ ಅವಶ್ಯವಾಗಿ ನಡೆಯಬೇಕಾದಿದೆ.

ಡಾ. ರಾಮಮನೋಹರ ಲೋಹಿಯಾ ಪೀಠದ ಮೊದಲ ಹೊತ್ತಿಗೆಯಾಗಿ “ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ’’ವು ಈ ದಿಕ್ಕಿನಲ್ಲಿ ಹೊರಬರುತ್ತಿದೆ. ನಮ್ಮ ವಿಶ್ವವಿದ್ಯಾಲಯದ ಅಧ್ಯಯನಾಂಗದ ಬಾಹ್ಯ ಯೋಜನೆಯಡಿಯಲ್ಲಿ ಡಾ. ಕಾಳೇಗೌಡ ನಾಗವಾರ ಮತ್ತು ಶ್ರೀ ಜಿ.ವಿ ಆನಂದಮೂರ್ತಿಯವರು ಸಂಪಾದಿಸಿಕೊಟ್ಟಿರುವ ಈ ಗ್ರಂಥವನ್ನು ಸಂತೋಷದಿಂದ ನಾಡಿಗೆ ಅರ್ಪಿಸುತ್ತಿದ್ದೇವೆ.

ಶಾಂತವೇರಿ ಗೋಪಾಲಗೌಡರು ಕರ್ನಾಠಕದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿದವರು. ಪ್ರಾಮಾಣಿಕತೆ, ಸರಳಜೀವನ, ತತ್ವನಿಷ್ಠೆಗಳಿಂದ ಹುರಿಗೊಂಡು ಅವರ ವ್ಯಕ್ತಿತ್ವ ಮೇರುಸದೃಶ್ಯವಾದದ್ದು. ಬಡವರು, ನಿರ್ಗತಿಕರು ಮತ್ತು ಅಪಮಾನಿತ ಜನಾಂಗಗಳ ಬಗ್ಗೆ ಅಪಾರ ಪ್ರೇಮವನ್ನಿಟ್ಟುಕೊಂಡಿದ್ದ ಕರುಣಾಮೂರ್ತಿಗಳಾದ ಅವರು ಆಳುವ ವರ್ಗದ ನಿಷ್ಟ್ರಿಯತೆ, ಸಿರಿಗರ ಹೊಡೆದವರ ಕ್ರೌರ್ಯ ಹಾಗೂ ಅಧಿಕಾರಶಾಹಿಯ ಭ್ರಷ್ಟತೆಯ ವಿರುದ್ಧ ಜ್ವಾಲಾಮುಖಿಯಂತೆ ಸ್ಫೋಟಿಸಿದವರು. ಮನುಷ್ಯನ ಘನತೆಗಾಗಿ, ಸುಖೀ ಸಮಾಜದ ನಿರ್ಮಾಣಕ್ಕಾಗಿ ನಿರಂತರವಾಗಿ ದುಡಿದ ಅವರು, ಹೊಸ ಸಾಂಸ್ಕೃತಿಕ ಬದುಕಿನ ಕನಸುಗಳನ್ನು ಕಂಡ ದಿಟ್ಟ ಹೋರಾಟಗಾರರು.

ಈ ನೆನಪಿನ ಸಂಪುಟದ ಬರಹಗಳು ಶಾಂತವೇರಿಯವರ ಬಾಲ್ಯದ ಹಿನ್ನೆಲೆ, ವಿಶಾಲವಾದ ಅಧ್ಯಯನ, ಮಾನವೀಯ ಗುಣ, ಹೋರಾಟ, ಚುನಾವಣೆ, ಪ್ರತಿಭಟನೆಯ ಶೈಲಿ, ನವಿರಾದ ಹಾಸ್ಯ, ನೈತಿಕಸಿಟ್ಟು ಮುಂತಾದವುಗಳನ್ನು ತೆರೆದಿಡುತ್ತವೆ. ಅವರನ್ನು ತೀರಾಹತ್ತಿರದಿಂದ ಬಲ್ಲ ನಾಡಿನ ಹಲವಾರು ಮಹನೀಯರು ಶಾಂತವೇರಿಯವರ ಬಹುಮುಖ ವ್ಯಕ್ತಿತ್ವವನ್ನು ತಾವು ಕಂಡಂತೆ ಇಲ್ಲಿ ಬಿಡಿಸಿದ್ದಾರೆ. ಈ ಗ್ರಂಥದ ಹಲವಾರು ವಿವರಗಳು ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸವನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತವೆ; ಇವು ನಮ್ಮ ಇತಿಹಾಸಕಾರರಿಗೆ ಸೂಕ್ಷ್ಮ ಒಳನೋಟಗಳನ್ನು ನೀಡುತ್ತವೆ. ನಾಡಿನ ಉದ್ದಗಲಕ್ಕೂ ಅವಿರತವಾಗಿ ಸಂಚರಿಸಿ ರಾಜಕೀಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯರನ್ನು ಸಂದರ್ಶಿಸಿ, ಅಪಾರ ಮಾಹಿತಿಯನ್ನು ಕಲೆಹಾಕಿ ಈ ಮಹತ್ವದ ಗ್ರಂಥವನ್ನು ಸಿದ್ಧಪಡಿಸಲಾಗಿದೆ. ತುಂಬುಶ್ರದ್ಧೆ ಮತ್ತು ಶ್ರಮಪೂರ್ಣ ಕ್ಷೇತ್ರಕಾರ್ಯದ ಮೂಲಕ ರೂಪುಗೊಂಡ ಈ ಅನನ್ಯ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಿರುವ ಡಾ. ಕಾಳೇಗೌಡ ನಾಗವಾರ ಮತ್ತು ಶ್ರೀ ಜಿ.ವಿ. ಆನಂದಮೂರ್ತಿ ಅವರನ್ನು ಅಭಿನಂದಿಸುತ್ತೇನೆ.

ಚಂದ್ರಶೇಖರ ಕಂಬಾರ
ಕುಲಪತಿಗಳು