೧೯೪೨ರಲ್ಲಿ ‘ಕ್ವಿಟ್ ಇಂಡಿಯಾ’ ಹೋರಾಟ. ೧೯೪೯ರಲ್ಲಿ ಹಳೇ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡು ಬೆಳಕಿಗೆ ಬಂದವರು ಶಾಂತವೇರಿ ಗೋಪಾಲಗೌಡರು. ಸಾಗರ ತಾಲ್ಲೂಕು ಕಾಗೋಡು ಎಂಬಲ್ಲಿ ಜಮೀನ್ದಾರರಿಗೆ ಗೇಣಿ ಕೊಡುವ ಅಳತೆ ಮೂರುವರೆ ಸೇರಿನ ಕೊಳಗದಲ್ಲೋ, ಅಥವಾ ಮೂರು ಸೇರಿನ ಕೊಳಗದಲ್ಲೋ ಎಂಬ ವಿವಾದ ಎದ್ದಿತು. ಈ ವಿವಾದವು ಬಗೆಹರಿಯದೆ ೧೯೫೧ರಲ್ಲಿ ಸಾಗರ ತಾಲ್ಲೂಕು ರೈತ ಸಂಘದೊಡನೆ, ಸೋಷಿಯಲಿಸ್ಟ್ ಪಾರ್ಟಿಯ ನೇತೃತ್ವದಲ್ಲಿ ಕೊಳಗದ ವಿವಾದವು ‘ಉಳುವವನೆ ನೆಲದೊಡೆಯ’ ಎಂಬ ಘೋಷಣೆಯೊಂದಿಗೆ ಪರಿವರ್ತನೆಗೊಂಡು ಚಳವಳಿ ತೀವ್ರವಾಯಿತು. ಈ ಹೋರಾಟದ ಮುಂಚೂಣಿಯಲ್ಲಿದ್ದವರು ಗೋಪಾಲಗೌಡರು. ಇವರ ಪ್ರವೇಶದ ನಂತರ ರೈತರ ಚಳವಳಿ ಹೊಸರೂಪ ಪಡೆಯಿತು. ಈ ಹೋರಾಟದ ಬೆನ್ನಲ್ಲಿಯೇ ೧೯೫೨ರಲ್ಲಿ ನಡೆದ ಮೊದಲ ಮಹಾಚುನಾವಣೆಯಲ್ಲಿ ಗೋಪಾಲಗೌಡರು ಆಗಿನ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿ ಅತಿ ಕಿರಿಯ ವಯಸ್ಸಿನಲ್ಲಿಯೇ ವಿಧಾನ ಸಭಾ ಸದಸ್ಯರಾಗಿ ಕರ್ನಾಟಕದ ರಾಜಕಾರಣಕ್ಕೆ ಹೊಸದಿಕ್ಕು ತೋರಿಸಿದ್ದು ಅವಿಸ್ಮರಣೀಯ.

ನಾನು ಮೊದಲಿನಿಂದಲೂ ಗೋಪಾಲಗೌಡರ ಸಹವರ್ತಿಯಾಗಿದ್ದವನು. ಅವರ ಪ್ರಭಾವದಿಂದ ಸೋಷಲಿಸ್ಟ್ ಪಾರ್ಟಿಯ ಸದಸ್ಯನೂ ಆಗಿದ್ದವನು. ಐತಿಹಾಸಿಕ ಮಹತ್ವದ ಕಾಗೋಡು ರೈತರ ಹೋರಾಟದಲ್ಲೂ ಅವರೊಡನೆ ಕೆಲಸಮಾಡುವ ಅವಕಾಶವೂ ದೊರೆತ್ತಿತ್ತು. ೧೯೫೨ರ ಮಹಾಚುನಾವಣೆಯಲ್ಲಿ ಗೋಪಾಲಗೌಡರು ಸಾಗರ ಹೊಸನಗರ ಕ್ಷೇತ್ರದಿಂದ ಸ್ಪರ್ಧಿಸಿದಾಗ, ಆ ಚುನಾವಣೆಯಲ್ಲಿ ಎಲ್ಲ ಜವಾಬ್ದಾರಿಗಳನ್ನೂ ನಾನೇ ಹೊರಬೇಕಾಗಿ ಬಂತು. ಇದರಿಂದಾಗಿ ನಾನು ಇನ್ನೂ ಹೆಚ್ಚು ಅವರ ನಿಕಟವರ್ತಿಯಾಗಲು ಅವಕಾಶ ಮಾಡಿಕೊಟ್ಟಿತು. ಗೌಡರು ಎದುರಿಸಿದ ಮೊದಲನೆಯ ಚುನಾವಣೆಯ ನೆನಪುಗಳನ್ನು ಮಾತ್ರ ನಾನಿಲ್ಲಿ ದಾಖಲಿಸಿದ್ದೇನೆ. ಅವರ ವ್ಯಕ್ತಿತ್ವದ ಇನ್ನಿತರ ವಿವರಗಳನ್ನು ನಾಡಿನ ಇತರ ಮಹನೀಯರು ಬರೆದಿರಬಹುದು.

ಗೋಪಾಲಗೌಡರು ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಚುನಾವಣೆಗೆ ಗೌಡರ ಸ್ಪರ್ಧೆಯೇ ಒಂದು ಆಕಸ್ಮಿಕ. ಅದರ ಹಿನ್ನೆಲೆ ಹೀಗಿದೆ:

ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಪ್ರಮುಖ ತಾಲ್ಲೂಕುಗಳಾದ ಸಾಗರ ಹೊಸನಗರ ತೀರ್ಥಹಳ್ಳಿ ತಾಲ್ಲೂಕುಗಳಿಂದ ಆಯ್ದ ಕೆಲವು ಹೋಬಳಿಗಳಿಂದ ರಚನೆಗೊಂಡ ಕ್ಷೇತ್ರವೇ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರ. ಆನಂದಪುರ ತಾಳಗುಪ್ಪ ಹೋಬಳಿಗಳನ್ನು ಹೊರತುಪಡಿಸಿದ ಸಾಗರ ತಾಲ್ಲೂಕು, ಕೆರೆಹಳ್ಳಿ ಹೋಬಳಿ ಹೊರತು ಪಡಿಸಿದ ಹೊಸನಗರ ತಾಲ್ಲೂಕು, ತೀರ್ಥಹಳ್ಳಿ ತಾಲ್ಲೂಕಿನ ಅಗ್ರಹಾರ ಹೋಬಳಿಗಳನ್ನು ಸೇರಿಸಿದ ಕ್ಷೇತ್ರ ಇದಾಗಿತ್ತು. ಗೋಪಾಲಗೌಡರ ಹುಟ್ಟೂರಾದ ಆರಗ ಅಗ್ರಹಾರ ಹೋಬಳಿಗೆ ಸೇರಿತ್ತು. ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು. ರಾಜ್ಯ ಸಮಾಜವಾದಿ ಪಕ್ಷವು ಶಿವಮೊಗ್ಗ ಜಿಲ್ಲೆಯ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾಗಿತ್ತು.

ಸಾಗರ ಹೊಸನಗರ ಕ್ಷೇತ್ರಕ್ಕೆ ನಮ್ಮ ರಾಜ್ಯ ಪಾರ್ಟಿಯ ಮಹಾಕಾರ್ಯದರ್ಶಿ ಜಿ.ಸದಾಶಿವರಾಯನನ್ನು ಅಭ್ಯರ್ಥಿಯನ್ನಾಗಿ ಆರಿಸಲಾಗಿತ್ತು. ಇವರು ಹೊಸನಗರ ತಾಲ್ಲೂಕಿನ ಗುಬ್ಬಿಗ ಎಂಬ ಹಳ್ಳಿಯವರು. ಕಾಗೋಡು ರೈತ ಹೋರಾಟ ಪ್ರಾರಂಭವಾದದ್ದು ಇವರ ಮತ್ತು ಗೋಪಾಲಗೌಡರ ನೇತೃತ್ವದಲ್ಲಿ. ಕೊನೆಗಳಿಗೆಯಲ್ಲಾದ ಒಂದು ಅನಿರೀಕ್ಷಿತ ಬದಲಾವಣೆಯಿಂದ ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ತಪ್ಪಿಹೋಯಿತು.

ತೀರ್ಥಹಳ್ಳಿ ಕೊಪ್ಪ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಅಡ್ಟೋಕೇಟ್ ಮಾಳೂರು ಸುಬ್ಬರಾವ್ ಅವರು, ತಮಗೆ ಶಿವಮೊಗ್ಗ ಪಾರ್ಲಿಮೆಂಟ್ ಕ್ಷೇತ್ರಕ್ಕೆ ಸ್ಪರ್ಧಿಸಲು ಟಿಕೇಟು ಕೊಡಬೇಕೆಂದು ಕೇಳಿದರು. ಆದರೆ, ಅಷ್ಟೊತ್ತಿಗೆ ನಮ್ಮ ಪಾರ್ಟಿಯ ಅಡ್ವೋಕೇಟ್ ಟಿ. ಕಲ್ಲಯ್ಯನವರನ್ನು ಪಾರ್ಟಿ ಆಯ್ಕೆಮಾಡಿತ್ತು. ಈ ಕಾರಣವಾಗಿ ಮಾಳೂರು ಸುಬ್ಬರಾವ್ ಅವರ ಕೋರಿಕೆ ಈಡೇರಲಿಲ್ಲ. ಅವರು ನಮ್ಮ ಪಕ್ಷ ತೊರೆದು, ಜನಸಂಘದ ಅಭ್ಯರ್ಥಿಯಾಗಿ ಪಾರ್ಲಿಮೆಂಟಿಗೆ ಸ್ಪರ್ಧಿಸಿದರು. ಇದರಿಂದಾಗಿ ತೀರ್ಥಹಳ್ಳಿ ಕೊಪ್ಪ ಕ್ಷೇತ್ರ ಖಾಲಿ ಬಿತ್ತು. ಆದ್ದರಿಂದ ಪಾರ್ಟಿಯ ತೀರ್ಮಾನದಂತೆ, ಖಾಲಿಬಿದ್ದ ತೀರ್ಥಹಳ್ಳಿ ಕೊಪ್ಪಕ್ಷೇತ್ರಕ್ಕೆ ಜಿ. ಸದಾಶಿವರಾಯರನ್ನು ವರ್ಗಾಯಿಸಿ, ಸಾಗರ ಹೊಸನಗರ ಕ್ಷೇತ್ರಕ್ಕೆ ಗೋಪಾಲಗೌಡರು ಅಭ್ಯರ್ಥಿಯಾಗಬೇಕೆಂದು ತೀರ್ಮಾನಿಸಲಾಯಿತು. ಈ ಕಾರಣವಾಗಿ ಗೋಪಾಲಗೌಡರ ಸ್ಪರ್ಧೆ ಅನಿವಾರ್ಯವಾಯಿತು.

ಹೆಸರಿಗೆ ತಕ್ಕಂತೆ ಈ ಚುನಾವಣೆಯು ಸಮಾಜವಾದಿ ಪಕ್ಷಕ್ಕೆ ಮಹಾಚುನಾವಣೆಯೇ ಆಗಿತ್ತು. ಗೋಪಾಲಗೌಡರ ಪ್ರತಿಸ್ಪರ್ಧಿ ಕಾಂಗ್ರೆಸ್ ಬದರೀನಾರಾಯಣರವರು ನಮ್ಮ ತಾಲ್ಲೂಕಿನ ಅನಂದಪುರಂ ಹೋಬಳಿಯವರಾಗಿದ್ದರು. ಬಹುದೊಡ್ಡ ಜಮೀನ್ದಾರರಾಗಿದ್ದ ಅವರು, ಆಗಿನ ಡಿಸ್ಟ್ರಿಕ್ಟ್ ಬೋರ್ಡ್‌ನ ಅಧ್ಯಕ್ಷರಾಗಿದ್ದು, ಜಿಲ್ಲೆಯಲ್ಲಿಯೇ ಪರಿಚಯಸ್ಥರಾಗಿದ್ದರು. ಆದರೆ, ಅವರ ಸ್ವಂತ ಹೋಬಳಿ ಸಾಗರ ಹೊಸನಗರ ಕ್ಷೇತ್ರಕ್ಕೆ ಸೇರಿರಲಿಲ್ಲ. ಇದೇ ನಮಗೆ ದೊಡ್ಡ ವರವಾಗಿತ್ತು.

ಸ್ವಾತಂತ್ರ್ಯ ಬಂದ ತಾರುಣ್ಯದಲ್ಲೇ ಕಾಂಗ್ರೆಸ್‌ನ ಶಕ್ತಿ ಊಹಾತೀತವಾಗಿದ್ದಾಗ ಆ ಪಕ್ಷದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಎದುರಿಸುವುದು ಸಾಹಸದ ಕೆಲಸವಾಗಿತ್ತು. ಹೇಳಿ ಕೇಳಿ ನಾವು ಖಾಲಿ ಜೇಬಿನವರು. ಠೇವಣಿ ಕಟ್ಟಲೂ ನಮ್ಮಲ್ಲಿ ಹಣವಿರಲಿಲ್ಲ. ಬೊಂಬಾಯಿನಿಂದ ನಮ್ಮ ಸೆಂಟ್ರಲ್ ಪಾರ್ಟಿ ನಮಗೆ ಸ್ವಲ್ಪ ಹಣ ಕಳಿಸಿಕೊಟ್ಟಿತ್ತು. ಇದೆಲ್ಲಕ್ಕೂ ಮಿಗಿಲಾಗಿ ನಮ್ಮ ಪಾರ್ಟಿಯ ಕಾಗೋಡು ರೈತ ಹೋರಾಟದಿಂದಾಗಿ ಬಡವರು, ರೈತರು ಹಾಗೂ ಕೂಲಿಕಾರರಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದೇ ನಮಗೆ ದೊಡ್ಡ ಬಂಡವಾಳವಾಗಿತ್ತು. ಅಲ್ಲದೇ ಡಾ. ರಾಮಮನೋಹರ ಲೋಹಿಯಾರವರು ಕಾಗೋಡು ಹೋರಾಟದಲ್ಲಿ ಭಾಗವಹಿಸಿ ರೈತರೊಂದಿಗೆ ಜೈಲುವಾಸಿಯಾಗಿದ್ದರು. ಅಖಿಲ ಭಾರತ ಕಿಸಾನ್ ಸಭಾ ನಾಯಕ ರಮಾನಂದ ಮಿಶ್ರಾರವರು ಇಲ್ಲಿಗೆ ಬಂದು ರೈತರ ಹೋರಾಟ ಬೆಂಬಲಿಸಿದ್ದರು. ಅಲ್ಲದೆ ಈ ಹೋರಾಟದ ಪರಿಣಾಮವನ್ನು ಅಧ್ಯಯನ ಮಾಡಲು ಇಲ್ಲಿಗೆ ಬಂದಿದ್ದ ಪ್ರಭಾವತಿದೇವಿ ಮತ್ತು ಜಯಪ್ರಕಾಶ ನಾರಾಯಣರವರಿಗೆ ಸಾಗರದ ಜನತೆ ಭವ್ಯಸ್ವಾತ ಕೋರಿ ‘ಹಮ್ಮಿಣಿ’ ಅರ್ಪಿಸಿತ್ತು. ಅಂದು ಅವರು ಸಾಗರದ ಗಾಂಧಿ ಮೈದಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಸೋಶಿಯಲಿಸ್ಟ್ ಪಾರ್ಟಿಯ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಬೆಂಬಲಿಸಲು ಕೋರಿದ್ದರು. ಈ ಎಲ್ಲವೂ ನಮ್ಮ ಪಾಲಿಗಿದ್ದವು. ನೇರ ಸ್ಪರ್ಧೆ ಕೂಡ ಇದ್ದುದು ಅನುಕೂಲಕರವಾಗಿತ್ತು. ಚುನಾವಣೆಯ ಎಲ್ಲಾ ಕೆಲಸಗಳಿಗೆ ನಮಗೆ ಪ್ರೇರಕಶಕ್ತಿಯಾಗಿದ್ದವರು ನಮ್ಮ ಪಾರ್ಟಿಯ ಅಧ್ಯಕ್ಷರಾದ ಸಿ.ಜಿ.ಕೆ.ರೆಡ್ಡಿಯವರು. ಯಾವ ಪ್ರತಿಫಲವೂ ಇಲ್ಲದೇ, ಸ್ವ ಇಚ್ಫೆಯಿಂದ ಕೆಲಸ ಮಾಡುವ ಪಕ್ಷ ನಿಷ್ಠ ಕಾರ್ಯಕರ್ತರು, ಗೇಣಿರೈತರು ಹಾಗೂ ಅಭಿಮಾನಿಗಳ ದೊಡ್ಡ ಸಮುದಾಯವೇ ಇತ್ತು. ಆದರೆ ಪ್ರಚಾರಕ್ಕೆ, ಮೈಕಿಗೆ, ಕಾರು ಇತ್ಯಾದಿಗಳಿಗೆ ನಮ್ಮ ಬಳಿ ಹಣ ಮಾತ್ರ ಇರಲಿಲ್ಲ.

ಆಗ ನಾನು ಉದ್ಯೋಗಸ್ಥನಾಗಿದ್ದೆ. ಬೆಂಗಳೂರಿನ ಪ್ರಿಂಟರ್ಸ್ ಲಿಮಿಟೆಡ್ ಮಾಲೀಕರಲ್ಲಿ ಒಬ್ಬರಾದ ಅರಸೀಕರೆ ಕೆ.ವೆಂಕಟಸ್ವಾಮಿಯವರು ಸಾಗರದಲ್ಲಿ ನಡೆಸುತ್ತಿದ್ದ ಪೆಟ್ರೋಲ್ ಬಂಕ್ ಹಾಗೂ ಅವರ ಇತರ ಏಜೆನ್ಸಿ ವ್ಯವಹಾರಗಳ ಮ್ಯಾನೇಜರ್ ಆಗಿದ್ದೆ. ಆದ್ದರಿಂದ ಹೇಗಾದರೂ ಖರ್ಚುವೆಚ್ಚಗಳನ್ನು ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ನನಗಿತ್ತು.

ಸಾಗರ ಚುನಾವಣಾಧಿಕಾರಿಗಳಲ್ಲಿ, ನಾವು ನಾಮಿನೇಷನ್ ಫೈಲ್ ಮಾಡಿ ಬರುತ್ತಿದ್ದಾಗ, ಕೆಲವು ಕುಹಕಿಗಳು ‘ಡಿಪಾಜಿಟ್ ಉಳಿಸಿಕೊಳ್ಳಲಿ ನೋಡೋಣ’ ಎಂದು ಆಡುತ್ತಿದ್ದ ಕುಹಕದ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನೆ ಬಂದೆವು.

ನಾಮಿನೇಷನ್ ಮಾಡಿ ಬಂದದ್ದಾಯಿತು. ಗೌಡರ ಚುನಾವಣಾ ಏಜೆಂಟ್ ನಾನೇ ಆಗಿದ್ದರಿಂದ, ಕಾರೊಂದನ್ನು ಗೊತ್ತುಪಡಿಸಿ ಅವರನ್ನು ಚುನಾವಣಾ ಪ್ರಚಾರಕ್ಕೆ ಕಳಿಸಿದೆ. ಗೌಡರು ಆರಗದಿಂದಲೇ ಚುನಾವಣಾ ಪ್ರಚಾರ ಆರಂಭಿಸಿದರು. ರಿಪ್ಪನ್ ಪೇಟೆಯ ಸುಲೇಮಾನ್, ಸುಕುಮಾರ್, ಶಿವಪ್ಪ ಗೌಡರು ಹಾಗೂ ರೈತ ಮುಖಂಡ ಬಂಗಾರಪ್ಪ ಇವರು ಆ ಭಾಗದ ಪ್ರಚಾರ ಕಾರ್ಯದಲ್ಲಿ ಅವರೊಂದಿಗೆ ಇರುತ್ತಿದ್ದರು. ಗರ್ತಿಕೆರೆ ರಾಘವೇಂದ್ರನೆಂಬ ಹುಡುಗ ಗೋಪಾಲಗೌಡರ ಪಟ್ಟಶಿಷ್ಯನಾಗಿದ್ದು, ಲಾವಣಿಗಳನ್ನು ಕಟ್ಟಿ ಗೌಡರ ಪರವಾಗಿ ಪ್ರಚಾರ ಮಾಡುತ್ತಿದ್ದ. ಅಗ್ರಹಾರ ಹೋಬಳಿಯ ಪ್ರಚಾರದ ಜವಾಬ್ದಾರಿಯನ್ನು, ಆರಗದ ನಾರಾಯಣಮೂರ್ತಿ, ಬಸಪ್ಪ, ಸೂರಪ್ಪ, ಧರ್ಮಯ್ಯ, ಹೈದರ್, ಸೀಗೆಬಳ್ಳಿ ಮಂಜಪ್ಪ, ಹೂವಪ್ಪ, ಕಾಳಪ್ಪ, ವೆಂಕಟರಮಣ, ಕೋಣಂದೂರು ಈಶ್ವರಪ್ಪ, ಭಾವಿಕೈ ತಿಮ್ಮಣ್ಣಗೌಡ, ಕೋಣಂದೂರು ಲಿಂಗಪ್ಪ ಇವರುಗಳು ಆ ಜವಾಬ್ದಾರಿ ಹೊತ್ತರು. ಇದರಲ್ಲಿ ಆರಗದ ಕೆಲವರು ಕಾಗೋಡು ರೈತ ಹೋರಾಟದಲ್ಲಿ ಗೋಪಾಲಗೌಡರೊಂದಿಗೆ ಜೈಲುವಾಸ ಅನುಭವಿಸಿದ್ದರು. ತೀರ್ಥಹಳ್ಳಿಯ ಶಾಮೈತಾಳರು, ಬೆಟ್ಟಮಕ್ಕಿ ಗುರುಮೂರ್ತಿ, ಮೇಗರವಳ್ಳಿ ಶೇಷಪ್ಪ ಹೆಗಡೆ, ಎಂ.ವಿ. ರಾಮಪ್ಪ, ನಾಬಳದ ಹೆಗಡೆಯವರು, ಶಂಕರನಾರಾಯಣ ಭಟ್ಟ, ವಡ್ಡಿನಬೈಲು ರಾಮಕೃಷ್ಣ, ಯು.ಆರ್. ಅನಂತಮೂರ್ತಿ, ಕಿಮ್ಮನೆ ಮನೆತನದವರೂ ಇದರಲ್ಲಿ ಮುಖ್ಯವಾಗಿ ಭಾಗವಹಿಸಿದರು.

ಜೋಗಪ್ಪ ಭಂಡಾರಿ, ಕಾಗೋಡು ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದ ಕೊಲ್ಲೂರಯ್ಯ ದಂಪತಿಗಳು ಇನ್ನೂ ಮುಂತಾದವರು ನಗರ ಹೋಬಳಿಯ ಪ್ರಚಾರದ ವ್ಯವಸ್ಥೆಯನ್ನು ಹೊತ್ತಿದ್ದರು.

ಹೊಸನಗರ ಭಾಗದಲ್ಲಿ ನಮಗೊಂದು ವಿಶೇಷ ಶಕ್ತಿ ಬಂದಿದ್ದು, ನಗರದ ಸಿ.ರಘುನಾಥರಾಯರು ನಮ್ಮ ನೆರವಿಗೆ ಬಂದಿದ್ದು. ಇವರು ನಗರ ಹೋಬಳಿಯ ದೊಡ್ಡ ಜಮೀನ್ದಾರರಾಗಿದ್ದರು. ಶಿವಮೊಗ್ಗ ಜಿಲ್ಲೆಯ ಬಹುದೊಡ್ಡ ಸಾರಿಗೆ ಸಂಸ್ಥೆಯಾದ ‘ಸೆಂಟರ್ ಕರ್ನಾಟಕ ಮೋಟಾರ್ ಸರ್ವಿಸ್ ಲಿಮಿಟೆಡ್‘ನ ಸಂಸ್ಥಾಪಕ ಸದಸ್ಯರಾಗಿದ್ದವರು. ಬದರಿನಾರಾಯಣರು ಆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರಿಬ್ಬರ ಮಧ್ಯೆ ಬಂದ ವಿರಸವು ನಮಗೆ ಅನುಕೂಲಕರವಾಗಿ ಪರಿಣಮಿಸಿತು. ಇವರ ಬೆಂಬಲದಿಂದ ನಾವು ನಗರ ಹೋಬಳಿಯಲ್ಲಿ ಹೆಚ್ಚು ಮತಗಳಿಸಲು ಸಾಧ್ಯವಾಯಿತು.

ಸಾಗರ ತಾಲ್ಲೂಕು, ಕಾಗೋಡು ರೈತ ಹೋರಾಟ ನಡೆದ ಜಾಗವಾಗಿದ್ದು, ಸಾಕಷ್ಟು ಕಾರ್ಯಕರ್ತರ ಮತ್ತು ರೈತರ ಸಮುದಾಯವೇ ನಮ್ಮ ಪರವಾಗಿತ್ತು. ನಮ್ಮ ಕ್ಷೇತ್ರದ ಸೆಕ್ರೆಟರಿಯಾಗಿದ್ದ ಜಿ. ಆರ್. ಜಿ. ನಗರ್ ರವರು ಪ್ರಚಾರದ ಚುಕ್ಕಾಣಿ ಹಿಡಿದಿದ್ದರು. ಇವರೊಂದಿಗೆ ಎಸ್. ಎಸ್. ಕುಮಟಾ, ವಾಳದ ಹನುಮಂತ, ಪತ್ರಿಕಾ ಏಜೆಂಟ್ ಎಚ್. ವೆಂಕಟರಾವ್ ಯಾನೆ ಬಾಬು ಇದ್ದರು. ಆಗಿನ ‘ಉದಯ ಕಲಾವಿದರು’ ಹವ್ಯಾಸಿ ನಾಟಕ ಸಂಸ್ಥೆಯ ಎನ್. ಆರ್. ಮಾಸೂರ ಕೂಡ ಸೇರಿಕೊಂಡರು. ಗಜೇಂದ್ರ ವಿಲಾಸದ ಮಾಲೀಕರಾದ ಡಿ.ಸುಬ್ಬರಾವ್ ಹಾಗೂ ಸಾಗರ ಹೋಟೆಲ್ ಮಾಲೀಕರಾದ ಎ.ಪಿ.ಕಲ್ಕೂರ್ ಅವರುಗಳು ಗೋಪಾಲಗೌಡರ ಅಭಿಮಾನಿಗಳಾಗಿದ್ದರು. ಇವರುಗಳು ಕಾಗೋಡು ಸತ್ಯಾಗ್ರಹದ ಸಂದರ್ಭಗಳಲ್ಲಿ ಹೊರಗಿನಿಂದ ಬರುತ್ತಿದ್ದ ಸತ್ಯಾಗ್ರಹಿಗಳಿಗೆ ಆಶ್ರಯ ನೀಡಿದವರು. ಆಗ ಕಂಟ್ರೋಲ್ ಕಲಾವಾದ್ದರಿಂದ ಇಡ್ಲಿಯನ್ನು ಮಾಡಲು ಅಕ್ಕಿಯನ್ನು ಉಪಯೋಗಿಸುವಂತಿರಲಿಲ್ಲ. ಅಕ್ಕಿ ಇಡ್ಲಿ ಮಾಡಿದರೆಂಬ ಕಾರಣಕ್ಕಾಗಿ ಪೋಲಿಸರು ಇವರ ಮೇಲೆ ಕೇಸ್ ಹಾಕಿ ದಂಡವಿಧಿಸಿದ್ದರು. ಇಷ್ಟೆಲ್ಲ ಆದರೂ ಇವರು ಸಮಾಜವಾದಿ ಪಕ್ಷವನ್ನು ತೊರೆಯಲಿಲ್ಲ. ಗೌಡರು ಸಾಗರಕ್ಕೆ ಬಂದಾಗಲೆಲ್ಲ ಕಲ್ಕೂರ್‌ರವರ ಹೋಟಲಿನಲ್ಲೇ ತಂಗುತ್ತಿದ್ದರು. ಕಲ್ಕೂರ್ ಎಂದೂ ಗೌಡರಿಂದ ಹಣ ಪಡೆದವರಲ್ಲ. ನಾವುಗಳೂ ಕೂಡ ಅವರ ಹೋಟಲಿನಲ್ಲಿ ತಿಂದು ಬಿಲ್ಲನ್ನು ಟೇಬಲ್ ಮೇಲಿಟ್ಟು ಬರುತ್ತಿದ್ದೆವು. ಇವರ ನೆರವೂ ಕೂಡ ನಮಗೆ ದೊರೆಯಿತು.

ಇಲ್ಲಿನ ಸಾಗರ್ ಹೋಟೆಲ್ ನಲ್ಲೊಂದು ಸೋಶಿಯಲಿಸ್ಟ್ ಕಾರ್ನರ್ ಇತ್ತು. ಅಲ್ಲಿ ಬೇರೆ ಯಾರೂ ಕೂರುತ್ತಿರಲಿಲ್ಲ. ಕುಳಿತಿದ್ದರೂ ಕೂಡ ಗೌಡರು ಬಂದ ಕೂಡಲೇ ಜಾಗ ಖಾಲಿ ಮಾಡುತ್ತಿದ್ದರು. ಲೋಹಿಯಾರವರೂ ಸಹ ಇಲ್ಲೇ ಕೂತು ರೈತರೊಡನೆ ಟೀ ಕುಡಿಯುತ್ತಿದ್ದರು. ಈ ಎರಡೂ ಹೋಟೆಲ್‌ಗಳು ನಮ್ಮ ಪ್ರಚಾರದ ಕೇಂದ್ರವಾಗಿದ್ದವು.

ಸಾಗರದಲ್ಲಿ ಗೌಡರ ಸ್ನೇಹಿತರಾಗಿದ್ದ ತೀರ್ಥಹಳ್ಳಿ ಡಾ. ಮೋಹನದಾಸರು ವೈದ್ಯ ವೃತ್ತಿ ನಡೆಸುತ್ತಿದ್ದರು. ಇವರಿಬ್ಬರೂ ಪರಸ್ಪರ ಗೋಪಾಲ ಮೋಹನ ಎಂದು ಕರೆದುಕೊಳ್ಳುತ್ತಿದ್ದರು. ಇವರು ತಮ್ಮಲ್ಲಿಗೆ ಬರುತ್ತಿದ್ದ ರೋಗಿಗಳ ಹತ್ತಿರ ಗೌಡರ ಪರಿಚಯ ಹೇಳಿ ಮತಯಾಚನೆ ಮಾಡುತ್ತಿದ್ದರು.

ಇನ್ನೊಂದು ಕಡೆಯಂದ ಕಾಗೋಡು ರೈತ ಹೋರಾಟದಲ್ಲಿ ಪಾಲ್ಗೊಂಡ ರೈತ ಸಮುದಾಯವೇ ಈ ಚುನಾವಣೆಯಲ್ಲಿ ಗೌಡರ ಪರ ಟೊಂಕಕಟ್ಟಿ ನಿಂತಿತ್ತು. ಮನೆಘಟ್ಟದ ಚೌಡಪ್ಪನವರು ರೈತ ಸಮುದಾಯದ ನಡುವೆ ಪ್ರಚಾರ ಕಾರ್ಯದ ಜವಾಬ್ದಾರಿ ಹೊತ್ತಿದ್ದರು. ಇವರೊಂದಿಗೆಕಾಗೋಡು ಸವಾಜಿ ಬೀರನಾಯ್ಕರು, ಕಾಗೋಡು ಕಣಸೆ ಜಟ್ಯಪ್ಪ, ಕಾಗೋಡು ತಿಮ್ಮಪ್ಪ ಮಾಸೂರು ವೀರಭದ್ರಪ್ಪನವರು ಹಾಗೂ ಇನ್ನೂ ಹಲವಾರು ರೈತರು ಪಾಲ್ಗೊಂಡರು. ಹೆಗ್ಗೋಡಿನ ಕರಿಯ ಭಂಡಾರಿಯೂ ಪ್ರಚಾರ ಕಾರ್ಯ ನಡೆಸಿದ. ಕಾಗೋಡು ಹೋರಾಟದಿಂದ ಅರಿವು ಪಡೆದಿದ್ದ ಈ ರೈತರಿಗೆ ಗೌಡರ ಚುನಾವಣೆ ಒಂದು ಪ್ರತಿಷ್ಠಯ ವಿಷಯವಾಗಿತ್ತು. ತಮ್ಮ ವಿರೋಧಿಗಳಾಗಿದ್ದ ಜಮೀನ್ದಾರರುಗಳಿಗೆ ಈ ಚುನಾವಣೆಯ ಮೂಲಕ ಪಾಠ ಕಲಿಸಲು ಅವರೆಲ್ಲ ತೀವ್ರವಾಗಿ ದುಡಿದರು. ಇವರೊಂದಿಗೆ ‘ಮಹಾತ್ಮಾಗಾಂಧಿ ಹೈಡಲ್ ಪ್ರಾಜೆಕ್ ಕಾರ್ಮಿಕ ಸಂಘದ ಅಧ್ಯಕ್ಷರಾಗಿದ್ದ ವೇದಗಿರಿನಾಯಕರು, ಅವರೊಂದಿಗೆ ಹ.ಸಾ. ಹಸನ್ ರವರು ಜೊತೆಗೂಡಿದರು.

ಹೀಗೆ ಕ್ಷೇತ್ರದ ಎಲ್ಲ ಕಡೆಯೂ ಪ್ರಚಾರ ವ್ಯವಸ್ಥೆಯಾಯಿತು. ಇದಕ್ಕೆ ಪೂರಕವಾಗಿ ಬೇಕಾಗುವ ಪೋಸ್ಟರ್, ಕರಪತ್ರಗಳು, ಪಾರ್ಟಿಯ ಗುರುತಿನ ಚೀಟಿ ಬೇಕಾಗಿತ್ತು. ಪೋಸ್ಟರ್‌ಗಳು ರಾಜ್ಯಕಾರ್ಯಾಲಯದಿಂದ ಬಂದವು. ಇನ್ನು ಕರಪತ್ರ ವಗೈರೆಗಳನ್ನು ಸಿದ್ಧಫಡಿಸಿಕೊಟ್ಟವರು ಸಾಗರದ ಗಜಾನನ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ದತ್ತೋಬರಾವ್ ಬಾಪಟ್‌ರವರು. ಗೌಡರನ್ನು ಕಂಡರೆ ಇವರಿಗೆ ಅಪಾರವಾದ ಪ್ರೀತಿ. ನಮ್ಮಲ್ಲಿ ಬ್ಲಾಕ್‌ಗಳಿರಲಿಲ್ಲ. ಆದರೆ ಬಾಪಟ್‌ರವರೆ, ಗುಡಿಗಾರರನ್ನು ಕರೆಸಿ ಮರದಲ್ಲಿ ಬ್ಲಾಕ್ ಮಾಡಿಸಿ ಅಚ್ಚು ಹಾಕಿಸಿದರು.

ನಮ್ಮ ಅಂಗಡಿಯಲ್ಲಿ ಟಿಂಕರ್ ಆಗಿ ಕೆಲಸಮಾಡುತ್ತಿದ್ದ ಹಮೀದ್, ತಗಡಿನಲ್ಲಿ ಸೋಶಿಯಲಿಸ್ಟ್ ಪಾರ್ಟಿಯ ಹೆಸರು, ಚುನಾವಣಾ ಗುರಾತದ ಆಲದ ಮರವನ್ನು ಕೆತ್ತಿಸಿ ಊರಿನ ಗೋಡೆಗಳ ಮೇಲೆಲ್ಲ ಹುರಿಮಂಜಿನಿಂದ ಅಚ್ಚುಹಾಕಿದ. ಚುನಾವಣಾ ಪ್ರಚಾರ ನಿಧಾನವಾಗಿ ಕಾವೇರುತ್ತಿತ್ತು. ಎಲ್ಲ ಕಡೆಯಲ್ಲಿಯೂ ನಮ್ಮಪಾರ್ಟಿಯವರು ಕೆಂಪುಟೋಪಿ ಧರಿಸಿ ಪ್ರಚಾರ ನಡೆಸುತ್ತಿದ್ದರು. ಎಲ್ಲ ಕಡೆಯಲ್ಲೂ ಸೋಶಿಯಲಿಸ್ಟ್ ಪಾರ್ಟಿ ಬ್ಯಾನರ್‌ಗಳು, ನೇಗಿಲು ಚಕ್ರದ ಕೆಂಪುಬಾವುಟ ಹಾರಾಡತೊಡಗಿದವು.

ಈ ನಡುವೆ ಬದರಿನಾರಾಯಣರು ಹಾಗೂ ಇನ್ನಿತರರು ನಾನು ಚುನಾವಣೆಯ ಪ್ರಚಾರಕಾರ್ಯದಿಂದ ಹಿಂದೆ ಸರಿಯುವಂತೆ ಅನೇಕ ಬಗೆಯ ಒತ್ತಡ ತಂದರು. ಆಗ ‘ನಾನು ಸೋಶಿಯಲಿಸ್ಟ್ ತತ್ವಕ್ಕೆ ಕಟ್ಟುಬಿದ್ದವನು. ನನಗೆ ಜಾತಿ ಮುಖ್ಯವಲ್ಲ ಪಾರ್ಟಿ ಮುಖ್ಯ’ ಎಂದು ನಿರ್ಭೀತಿಯಿಂದ ಹೇಳಿದೆ. ನಾನು ಈ ಎಲ್ಲ ಅಡೆತಡೆಗಳನ್ನು ಹೇಗೋ ನಿವಾರಿಸಿಕೊಂಡೆ.

ಚುನಾವಣೆ ಹತ್ತಿರ ಬರುತ್ತಿತ್ತು. ಇದೇ ಹತ್ತಿನಲ್ಲಿ ಸಾಗರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಗಳಲ್ಲಿ ಗುತ್ತೇದಾರರಾಗಿದ್ದ ರಸೂಲ್ ಖಾನ್‌ರವರ ಸಲಹೆ ಮೇರೆಗೆ, ಮುಸ್ಲಿಂ ಮಹಿಳೆಯರು ಮತದಾನ ಮಾಡುವ ದಿನ ಮತದಾನ ಮಾಡಲು ಬರುವುದಕ್ಕೆ ಒಂದು ಜಟಕವನ್ನು ವ್ಯವಸ್ಥೆ ಮಾಡಿದೆವು. ಆಗ ನಮ್ಮೂರಿನಲ್ಲಿದ್ದುದು ಒಂದೇ ಜಟಕಾ. ಮುಸ್ಲಿಂ ಮಹಿಳೆಯರನ್ನು ಜಟಕಾದಲ್ಲಿ ಕರೆತಂದು ಮತದಾನ ಮಾಡಿಸುವ ಜವಾಬ್ದಾರಿಯನ್ನು ನಮ್ಮಲ್ಲಿ ಕೆಲಸಮಾಡುತ್ತಿದ್ದ ಅಬ್ದುಲ್ ಹಮೀದ್‌ಗೆ ವಹಿಸಿದೆವು. ಇದು ನಮಗೆ ತುಂಬಾ ಸಹಾಯವಾಯಿತು.

ಪ್ರಚಾರಕಾರ್ಯ ಮುಗಿದು ಚುನಾವಣೆಯ ಹಿಂದಿನ ದಿನಬಂತು. ಪೋಲಿಂಗ್ ಬೂತಿನಲ್ಲಿ ಪೋಲಿಂಗ್ ಏಜೆಂಟ್ ಆಗಿ ಕೆಲಸಮಾಡಲು ಕಾರ್ಯಕರ್ತರು ಬಂದಿದ್ದರು. ಅವರಲ್ಲಿ ಯು.ಆರ್. ಅನಂತಮೂರ್ತಿ, ವಡ್ಡಿನಬೈಲು ರಾಮಕೃಷ್ಣ, ಮಿಂಚು ಶ್ರೀನಿಸ, ಸೀತಾರಾಮೈಂಗಾರ್ ಮುಂತಾದವರಿದ್ದರು. ಅವರ ಕೈಗೆ ಎರಡೆರಡು ರೂಪಾಯಿಕೊಟ್ಟು, ಪೋಲಿಂಗ್ ಏಜೆಂಟ್ ಆಗಿ ಕೆಲಸ ಮಾಡಲು ನಾನು ಕಳಿಸಿದೆ.

ಚುನಾವಣೆ ಮುಗಿದ ಎರಡನೆ ದಿನಕ್ಕೆ ಮತ ಎಣಿಕೆ ನಡೆಯಿತು. ಆಗ ಈಗಿನಂತೆ ಮತಪತ್ರಗಳಲ್ಲಿ ಹೆಸರು ಮತ್ತು ಗುರುತಿನ ಮುಂದೆ ಸೀಲು ಹಾಕುವುದಿರಲಿಲ್ಲ. ಅಭ್ಯರ್ಥಿಗಳ ಗುರುತಿನ ಚೀಟಿ ಅಂಟಿಸಿದ ಮತಪೆಟ್ಟಿಗೆಗಳಿರುತ್ತಿದ್ದವು. ನಮ್ಮ ಕ್ಷೇತ್ರದಲ್ಲಿ ನೊಗಹೊತ್ತ ಜೋಡೆತ್ತಿನ ಪೆಟ್ಟಿಗೆ ಹಾಗೂ ಆಲದಮರದ ಗುರುತಿನ ಪೆಟ್ಟಿಗೆಗಳಿದ್ದವು. ಅಧಿಕಾರಿಗಳಿಂದ ಪಡೆದ ಮತಚೀಟಿಯನ್ನು ಒಳಗಡೆ ಹೋಗಿ ಅಭ್ಯರ್ಥಿಗಳ ಪೆಟ್ಟಿಗೆಗೆ ಹಾಕಬೇಕಾಗಿತ್ತು.

ಎಣಿಕೆ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಯಿತು. ಮೊದಲ ಎಣಿಕೆ ಬದರಿನಾರಾಯಣ ರದಾಗಿತ್ತು. ಅವರುಗಳಿಂದ ಮತ ಎಷ್ಟು ಎಂಬುದು ತಿಳಿದು ಬಂತು. ಎಣಿಕೆಯಲ್ಲಿ ನಮ್ಮ ಏಜೆಂಟರಾಗಿದ್ದ ಎನ್. ಆರ್. ಮಾಸೂರ್‌ರವರು, ಒಟ್ಟು ಚಲಾವಣೆಯಾದ ಮತಗಳಲ್ಲಿ ಬದರಿನಾರಾಯಣರವರು ಪಡೆದ ಮತಗಳನ್ನು ಕಳೆದು ಉಳಿದದ್ದನ್ನು ಲೆಕ್ಕಹಾಕಿ ಗೋಪಾಲಗೌಡರು ಗೆದ್ದರೆಂದು ಅಂಗಡಿಯಲ್ಲಿದ್ದ ನನಗೆ ಹೇಳಿಕಳಿಸಿದರು. ಅಷ್ಟೊತ್ತಿಗೆ ಮಿಂಚುಶ್ರೀನಿವಾಸ ಬಂದು ‘ಗೋಪಾಲ ಗೆದ್ದ’ ಎಂಬುದಾಗಿ ಸಂತಷವಾಗಿ ತಿಳಿಸಿದ. ಗೌಡರ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಬೇಕಿತ್ತು. ನಾನು ಅದನ್ನು ಕಾಯದೆ, ಉತ್ಸಾಹದಲ್ಲಿ ಬಾಪಟ್ ದತ್ತೋಬರಾಯರನ್ನು ಕಂಡು, ಸಿನಿಮಾ ಸ್ಪೈಡ್ಸ್ ತಯಾರಿಸಿ ಮತದಾರರಿಗೆ ಅಭಿನಂದನೆ ಸಲ್ಲಿಸಲು ಮುಂದಾದೆ.

ರಾತ್ರಿ ಸುಮಾರು ಹತ್ತುಗಂಟೆಯ ಹೊತ್ತಿಗೆ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಯಿತು. ಉಮೇದುವಾರರಿಬ್ಬರೂ ಅಲ್ಲಿದ್ದರು. ಬದರಿನಾರಾಯಣರವರು ಗೋಪಾಗೌಡರನ್ನು ಅಬಿನಂದಿಸಿ ಹೊರಬಂದು ಅಲ್ಲಿ ನಿಂತಿದ್ದ ನನ್ನನ್ನೂ ಅಬಿನಂದಿಸಿ ಹೊರಟುಹೋದರು. ಆ ರಾತ್ರಿಯಲ್ಲೂ ಕೂಡ ರಘುನಾಥರಾಯರ ಮಿಲ್ಲಿನ ಆವರಣದಲ್ಲಿ ಜನತೆ ಗೌಡರನ್ನು ಜಯಕಾರದೊಂದಿಗೆ ಸ್ವಾಗತಿಸಿತು. ಗೌಡರು ಅವರನ್ನೆಲ್ಲಾ ಅಭಿನಂದಿಸಿದರು.

ಈ ಚುನಾವಣೆಯ ಮೂಲಕ ನಮ್ಮ ಜನತೆ ಒಬ್ಬ ಶ್ರೇಷ್ಠ ಸಂಸದೀಯ ಪಟುವನ್ನು ಈ ನಾಡಿಗೆ ಕೊಟ್ಟಿತು. ಇದೇ ನಮ್ಮ ಕ್ಷೇತ್ರದ ಹಿರಿಮೆ. ಇದೇ ನಮ್ಮ ತೃಪ್ತಿ.

ಗೋಪಾಲಗೌಡರಿಗೆ ಚುನಾವಣೆಯಲ್ಲಿ ಮಾಡಿದ ಖರ್ಚಿನ ಅರಿವಿತ್ತು. ಅಧಿವೇಶನ ಮುಗಿಸಿ ಸಾಗರಕ್ಕೆಬಂದಿದ್ದರು. ಖರ್ಚು ಎಷ್ಟಾಗಿದೆ ಎಂದು ಕೇಳಿದರು. ನಾನು ಸುಮಾರು ಐದು ಸಾವಿರ ರೂಪಾಯಿ ಆಗಿದೆಯಂದು ತಿಳಿಸಿದೆ. ಈ ಬಗ್ಗೆ ಏನು ಮಾಡುವುದೆಂದು ನನ್ನನ್ನೇ ಕೇಳಿದರು. ಸಾಗರದ ಶ್ರೀಗಣಪತಿ ಕೋ. ಆಪರೇಟೀವ್ ಸೊಸೈಟಿಗೆ ಸದಸ್ಯರನ್ನಾಗಿ ಮಾಡಿ, ನನ್ನ ಅಸಿಸ್ಟೆಂಟ್ ಮೃತ್ಯುಂಜಯನನ್ನು ಜಾಮೀನುಕೊಟ್ಟು, ಬ್ಯಾಂಕಿನಲ್ಲಿ ಸಿಕ್ಕುವ ಎರಡು ಸಾವಿರ ರೂಪಾಯಿ ಸಾಲವನ್ನು ಪಡೆದು ತುರ್ತಾಗಿ ಕೊಡಬೇಕಾದವರಿಗೆ ಕೊಟ್ಟೆ. ನಂತರದಲ್ಲಿ ಅಧಿವೇಶನದಲ್ಲಿ ಬರುತ್ತಿದ್ದ ದಿನಭತ್ಯ ಹಾಗೂ ಪ್ರಯಾಣ ಭತ್ಯಗಳಲ್ಲಿ ಉಳಿಸಿದ್ದ ಹಣದಿಂದ ಸುಮಾರು ಎರಡು ಸಾವಿರ ರೂಪಾಯಿ ಕೊಟ್ಟು ಸಾಲ ತೀರಿಸಲು ಹೇಳಿದರು. ನಾನು ಮದ್ರಾಸಿನಲ್ಲಿ ‘ಹಿಂದೂ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಿ.ಜಿ.ಕೆ. ರೆಡ್ಡಿಯವರಿಗೂ ಬರೆದೆ. ಅವರುಕೂಡ ಹಣ ಕಳಿಸಿದರು. ಒಟ್ಟಿನಲ್ಲಿ ಚುನಾವಣಾ ಸಾಲ ತೀರಿದಂತಾಯಿತು.

ನನ್ನಂತೆಯೇ ನಮ್ಮ ತಾಯಿಯವರೂ ಗೌಡರ ಕಟ್ಟಾ ಅಭಿಮಾನಿ. ಗೌಡರ ಭಾಷಣವಿದೆ ಎಂದು ತಿಳಿದರೆ ಸಾಕು, ಎಲ್ಲಾ ಕೆಲಸಬಿಟ್ಟು ಅವರ ಭಾಷಣ ಕೇಳಿ ಬರುತ್ತಿದ್ದರು. ಕಾಗೋಡು ಸತ್ಯಾಗ್ರಹದಲ್ಲಿ ಭೂಗತರಾಗಿ ಚಳವಳಿ ಕೆಲಸ ಮಾಡುತ್ತಿದ್ದ ವೈ.ಆರ್. ಪರಮೇಶ್ವರಪ್ಪ ಹಾಗೂ ಸೀತಾರಾಮಯ್ಯಂಗಾರ್‌ರವರು ರಾತ್ರಿವೇಳೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಮ್ಮ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದರು. ನಮ್ಮ ತಾಯಿ ರಾತ್ರಿ ಅವರಿಗೆ ಊಟ ಬಡಿಸಿ, ಬೆಳಗಾಗುವುದರಲ್ಲಿ ಅವರಿಗೆ ಸ್ನಾನ ಹಾಗೂ ಗಂಜಿ ಊಟ ವ್ಯವಸ್ಥೆ ಮಾಡಿ ಕಳಿಸುತ್ತಿದ್ದರು. ಇದರಿಂದಾಗಿ ಗೋಪಾಲಗೌಡರಿಗೆ ನಮ್ಮ ತಾಯಿಯ ಮೇಲೆ ಅಪಾರವಾದ ಪ್ರೀತಿ. ನಮ್ಮ ತಾಯಿಯನ್ನು ಅಮ್ಮಾ ಎಂದೇ ಕರೆಯುತ್ತಿದ್ದರು. ಸಾಗರಕ್ಕೆ ಬಂದಾಗಲೆಲ್ಲ ಅಮ್ಮನಿಗೆ ಹಣ್ಣು ತಂದುಕೊಟ್ಟು, ವಿಚಾರಿಸಿ, ಅವರಿಂದ ಊಟ ಮಾಡಿ ಹೋಗುತ್ತಿದ್ದರು. ಗೋಪಾಲಗೌಡರಿಗೆ ಚುನಾವಣೆಯಲ್ಲಿ ನಾನು ಮಾಡಿದ್ದ ಕಾರ್ಯ ತೃಪ್ತಿ ತಂದಿತ್ತು. ಈ ಕಾರಣಗಳಿಗಾಗಿಯೇ ಗೌಡರಿಗೆ ನನ್ನ ಮೇಲೆ ತುಂಬಾ ವಿಶ್ವಾಸ. ನನ್ನನ್ನು ಬೇರೆಯವರಿಗೆ ಪರಿಚಯ ಮಾಡಿಕೊಡಬೇಕಾದರೆ, ‘ನಾನು ಉತ್ಸವ ಮೂರ್ತಿ, ಇವರು ಮೂಲಮೂರ್ತಿ’ ಎಂದು ಪರಿಚಯಿಸುತ್ತಿದ್ದರು.