ನಮ್ಮ ಜಿಲ್ಲೆಯ ಇಬ್ಬರು ಕಿಂದರಿ ಜೋಗಿಗಳು ಪ್ರಸಿದ್ಧರು. ಒಬ್ಬ ಬೊಮ್ಮನ ಹಳ್ಳಿಯವ. ಅವನನ್ನು ಪರಿಚಯಿಸಿದವರು ಮಹಾಕವಿ ಕುವೆಂಪು. ಇನ್ನೊಬ್ಬ ಆ ಕಿಂದರಿ ಜೋಗಿಗಿಂತಲೂ ಸುಪ್ರಸಿದ್ಧ. ದೇಶವೇ ಬಲ್ಲ ಇವನು ಆರಗದ ಕಿಂದರಜೋಗಿ; ಶಾಂತವೇರಿ ಗೋಪಾಲಗೌಡ. ಜಿಲ್ಲೆಯ ಪ್ರಾಮಾಣಿಕ ರಾಜಕಾರಣಿ, ಶತಮಾನದ ಧೀಮಂತ ಡಾ. ರಾಮಮನೋಹರ ಲೋಹಿಯಾ ಕೊಡುಗೆ.

ಸತ್ತವರನ್ನು ಹೊಗಳುವುದು ನಮ್ಮ ಪರಂಪರೆ. ಇದ್ದಾಗ ನಾವು ಮಾಡಿದ ತಪ್ಪು ಮುಚ್ಚಿಕೊಳ್ಳುವುದಕ್ಕೆ ಈ ಪರಂಪರೆಯ ಹಾದಿ ಹಿಡಿಯುತ್ತೇವೆ. ಆದರೆ, ಗೌಡರ ಮಟ್ಟಿಗೆ ಇಂತಹ ಸಂಕೋಚಪಟ್ಟುಕೊಳ್ಳುವ ಅಗತ್ಯ ಇಲ್ಲ. ತೂಕಹಾಕಿದರೂ ಗೌಡರ ಬದುಕಿನಲ್ಲಿ ಒಳಿತೇ ಹೆಚ್ಚು ಕಂಡಿತು. ಸ್ವಾರ್ಥ ಅಸೂಯೆ ನೀಚತನ ತುಂಬಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ತಟ್ಟನೆ ನೆನಪಿಗೆ ಬರುವ ಹೆಸರು ಗೌಡರದು. ರಾಜಕಾರಣ, ಸಾಹಿತ್ಯ, ಕಲೆ, ಸಂಗೀತ ಎಲ್ಲವೂ ಅವರ ಆಸಕ್ತಿಯ ಆಗರಗಳು. ಮನುಷ್ಯತ್ವದ ಮೂಸೆಯಲ್ಲಿ ಅರಿವನ್ನೆಲ್ಲ ಕರಗಿಸಿ ಪ್ರೀತಿ ಅನುಕಂಪದ ಲೇಪದಿಂದ ರೂಪಗೊಂಡ ವ್ಯಕ್ತಿ ಇವರಾಗಿದ್ದರು.

೧೯೪೨ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟಿದ್ದ ಗೌಡರು, ೧೯೪೭ರ ಹೊತ್ತಿಗೆ ಜಿಲ್ಲೆಯ ರಾಬಿನ್‌ಹುಡ್ ಆಗಿದ್ದರು. ಎತ್ತರದ ಆಳು, ನುಣುಪಾದ ಮುಖ, ಹಿಂದಕ್ಕೆ ಬಾಚುವ ಹೇರಳವಾದ ಕೂದಲು, ಶುಭ್ರವಾದ ಬಂಗಾಲಿ ಶೈಲಿಯ ಖಾದಿ ಉಡುಗೆ, ಮಿಂಚುವ ಪಂಪ್‌ಷೂ, ಕೈಯ್ಯಲ್ಲೊಂದು ಸಿಗರೇಟು, ಸ್ವಾಭಾವಿಕವಾಗಿಯೇ ಆಕರ್ಷಿಸುವ ವ್ಯಕ್ತಿ. ಅವರಿಗಿಂತ ಕಿರಿಯರಾದ ನನ್ನ ಗೆಳೆಯರೆಲ್ಲ ಗೋಪಾಲಗೌಡರ ವ್ಯಕ್ತಿತ್ವಕ್ಕೆ ಮಾರುಹೋದವರು. ಗೌಡರ ಶಿಷ್ಯರು ಎಂದು ಜನ ನಮ್ಮನ್ನ ಗುರುತಿಸುವಷ್ಟು ನಮ್ಮ ಅವರ ಬಾಂಧವ್ಯ ಸಂಪರ್ಕ.

ಮಾತಿನ ಮೋಡಿಯ ಕಿನ್ನರಿ ಹಿಡಿದು ಆರಗದಿಂದ ಹೊರಬಿದ್ದ ಈ ಮಾಜಿ ಮಾಸ್ತರ, ಬದುಕಿನ ಶಾಲೆಯ ಹೊಣೆ ವಹಿಸಿಕೊಂಡಿದ್ದು ಶಿವಮೊಗ್ಗೆಯಲ್ಲಿ; ಕಾರ್ಯಕ್ಷೇತ್ರ ಪ್ರಾರಂಭವಾದದ್ದು ಸಾಗರದ ಕಾಗೋಡಿನಲ್ಲಿ. ರೈತರ ನಡುವೆ ಕರಗಿಹೋಗುತ್ತಿದ್ದ ಗೌಡರಿಗೆ, ಅವರ ಭಾವನೆಗಳು, ಬದುಕು, ಬಯಕೆಗಳೇ ಉಸಿರಾಗಿತ್ತು. ಬಡತನದ ಚಕ್ರಗಾಣಕ್ಕೆ ಸಿಕ್ಕು ನರಳುತ್ತಿದ್ದ ಈ ಜನಕೋಟಿ ಅವರ ಆಸ್ತಿ. ಅವರ ನೋವು ಇವರ ಭಾಷೆ. ಗೌಡರ ಬದುಕಿನಲ್ಲಿ ಹಚ್ಚಿಕೊಂಡ ಈ ಸಮಸ್ಯೆಗಳು ಮತ್ತು ಅದಕ್ಕಾಗಿ ಅವರ ಹೋರಾಟ ಪ್ರಾಮಾಣಿಕವಾದದ್ದು. ಹೀಗೆ ಹಿಡಿದ ದಾರಿಯಲ್ಲಿ ಬಂದ ಪ್ರಶಂಸೆ-ಟೀಕೆ ನಿಷ್ಠೂರಗಳು ಸಾಕಷ್ಟು, ಆದರೆ ಗೌಡರಿಗೆ ಅವೆಲ್ಲ ಗೌಣ.

೧೯೫೨ರ ಪ್ರಥಮ ಚುನಾವಣೆ : ಆಗಿನ ದಿನಗಳಲ್ಲಿ ನಮ್ಮಲ್ಲಿ ಯಾರಿಗೂ ಇದರಬಗ್ಗೆ ತಿಳುವಳಿಕೆ ಸಾಲದು ಎಂದರೂ ಆದೀತು. ಜಿಲ್ಲೆಯಲ್ಲಿ ಸಮಾಜವಾದಿಗಳೂ ಕಣಕ್ಕಿಳಿದರು. ಗೌಡರು ಅವರಿಗರಿವಿಲ್ಲದಂತೆ, ಸಾಗರ-ಹೊಸನಗರ ಕ್ಷೇತ್ರದ ಅಭ್ಯರ್ಥಿ, ಠೇವಣಿ ಹಣವೂ ಇಲ್ಲದ ಈ ನಮ್ಮ ಉಮೇದುವಾರ ಎದುರಿಸಿದ್ದು ಕಾಂಗ್ರೆಸ್ ಪ್ರತಿನಿಧಿ ಆಗರ್ಭ ಶ್ರೀಮಂತ ಎ.ಆರ್. ಬದರಿನಾರಾಯಣ್‌ರವರನ್ನು. ಸಾಕಷ್ಟು ಸವಲತ್ತುಗಳಿಲ್ಲದಿದ್ದರೂ ಗೌಡರ ಹಿಂದೆ ಹುಡುಗರ – ಯುವಕರ ಗುಂಪು. ಈ ವಾನರ ಸೇನೆಯು ಕಿಂದರಿ ಜೋಗಿಯ ಗೆಲುವಿಗೆ ಬೆನ್ನೆಲುಬು.

ಆ ಚುನಾವಣೆಯ ಕೆಲವು ಘಟನೆಗಳು ಈಗಲೂ ನೆನಪಿಗೆ ಬರುತ್ತೆ; ಹೊಸ ನಗರದಲ್ಲಿ ಲಕ್ಷ್ಮೀಪುರದ ಹೊಳೆ. ನಮ್ಮ ಹತ್ತಿರ ಒಂದು ಕಾರಿತ್ತು. ಅದಕ್ಕೆ ಬ್ರೇಕ್ ಇರಲಿಲ್ಲ. ಹೊರಡುವುದೂ ನಿಲ್ಲುವುದು ಅದರ ಇಷ್ಟ. ಅದಕ್ಕೆ ಸಿಟ್ಟು ಬರುತ್ತಿತ್ತು. ಆಗ ನಾವು ಕೆಳಗಿಳಿದು ದಬ್ಬಿ ಅದನ್ನು ರಮಿಸಿಬೇಕಾಗಿತ್ತು. ಆಗಲೂ ಖುಷಿಯಾದರೆ ಮಾತ್ರ ಗುಡು ಗುಡು ಓಡುತ್ತಿತ್ತು. ಇಲ್ಲದಿದ್ದರೆ ಇಲ್ಲವೇ ಇಲ್ಲ. ಆ ದಿನ ಮಾತ್ರ ನಮ್ಮ ಕಾರು ಸುಖವಾಗಿ ಹೋಗುತ್ತಿತ್ತು. ಹೊಳೆ ಇಳಿಯುವಲ್ಲಿ ಸ್ವಲ್ಪ ಇಳಿಜಾರು. ಅದನ್ನಿಳಿದು ಜಂಗಲ್ ಹತ್ತಬೇಕು. ನಮ್ಮ ಸಾರಥಿ ನನ್ನ ಗೆಳೆಯ ಶೇಖರ. ಏರಿನ ತಲೆಯ ಮೇಲಿನಿಂದಲೇ ಸ್ಪೀಡ್ ಕಡಿಮೆ ಮಾಡಲು ವಿಶ್ವಪ್ರಯತ್ನ ಮಾಡಿದರೂ ಆಗಲಿಲ್ಲ. ನಾಲ್ಕು ಮಾರಿನಲ್ಲಿ ಹೊಳೆ. ಅದೂ ಮುಳುಗಡೆ ಹೊಳೆ. ಕಾಲಿಟ್ಟಲ್ಲಿಯೇ ಆಳ ಕನಿಷ್ಠ ಇಪ್ಪತ್ತು ಇಪ್ಪತ್ತೈದು ಅಡಿ ಇರಬಹುದು. ಅವನಿಗೇನನಸಿತೋ ಏನೋ. ಹೇಗೋ ತಿರುಗಿಸಿದ, ಪುಣ್ಯಕ್ಕೆ ದೋಣಿ ಕಟ್ಟುವ ಗೂಟಕ್ಕೆ ಮುಂಭಾಗದ ಬಂಪರ್ ತಗುಲಿಹಾಕಿಕೊಂಡಿತ್ತು; ಇಡಿಯ ಕಾರಿಗೆ ಆ ಗಾಟ ಬಿರಿ (ಬ್ರೇಕ್) ಆಯಿತು. ಕೆಳಗಿಳಿದು ಗೌಡರು ‘ಇನ್ನೂ ಚೀಟಿ ಬಂದ್ರಿಲ್ರೊ’ ಅಂದು ಕಾರು, ಬ್ರೇಕು ಎಂಬ ವಿಷಯದ ಬಗ್ಗೆ ಒಂದು ಉಪನ್ಯಾಸ ಕೊಟ್ಟರು. ಶೇಖರ ತಾನೇ ತಪ್ಪು ಮಾಡಿದವನಂತೆ ಪೆಚ್ಚಾಗಿದ್ದ. ಇದೆಲ್ಲ ಐದು ನಿಮಿಷ. ಮತ್ತೆ ಎಲ್ಲಾ ಮರೆತು ಹೊಸಬರಾಗುತ್ತಿದ್ದೆವು. ಇಂತಹ ನಮ್ಮ ಕಾರು ಡಾನ್‌ಕ್ವಿಕ್ಸ್‌ಟನ ಕುದುರೆ ರೋಸಿನಾಂಟ ನೆನಪು ತರುತ್ತಿತ್ತು. ಚುನಾವಣೆ ಸಮೀಪರಿಸುತ್ತಿದ್ದಂತೆ ಗೌಡರಿಗೆ ಅನಾರೋಗ್ಯ ಪ್ರಾರಂಭವಾಯ್ತು. ಕುದಿಯುವ ಜ್ವರದಲ್ಲಿ ಕೆಲಸ ಮಾಡುತ್ತಿದ್ದರು. ಇದೆಲ್ಲದರ ಪರಿಣಾಮ, ನನಗೆ ಸಾರ್ವಜನಿಕ ವೇದಿಕೆಯ ಲಾಭ. ಅದಕ್ಕಿಂತ ಹೆಚ್ಚಾಗಿ ಶಾಲಾ ಮಾಸ್ತರಂತೆ ಗೌಡರು ಕುಳಿತಿರುವಾಗ ಮಾತು ಹೊರಡುವುದೂ ಕಷ್ಟವಾಗುತ್ತಿತ್ತು. ಆದರೆ, ಏನೇ ಮಾತನಾಡಿದರೂ ಗೌಡರು ನನ್ನನ್ನು ಪ್ರೀತಿಯಿಂದ ತಿದ್ದುತ್ತಿದ್ದರು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಅಭ್ಯಾಸಕ್ಕೆ ಅವರು ನನಗೆ ಗುರು.

ಇಷ್ಟೆಲ್ಲ ಅವ್ಯವಸ್ಥೆಗಳ ನಡುವೆ ನಮ್ಮ ಚುನಾವಣೆ ನಡೆದರೂ ಕೂಡ, ಗೌಡರ ಭಾಷಣ ಅಂದ್ರೆ ಜನ ಬೆಲ್ಲಕ್ಕೆ ಮುತ್ತುವ ನೊಣದ ಹಾಗೆ ಕಾದು ಕೂರುತ್ತಿದ್ದರು. ಒಂದು ಪ್ರಸಂಗ: ಹೊಸನಗರ ತಾಲ್ಲೂಕಿನ ಒಂದು ಕಡೆ ಸಭೆ. ಚುನಾವಣೆಯ ಕೊನೆಯ ಸಭೆ. ಮಧ್ಯಾಹ್ನ ಮೂರು ಗಂಟೆಗೆ. ಆದರೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಲಾಗಲಿಲ್ಲ. ಕಾದು ಕೂತ ರೈತರು ಹಿಂದಕ್ಕೆ ಹೋಗಲಿಲ್ಲ. ಅಲ್ಲಿಯೇ ಇದ್ದರು. ರಾತ್ರಿಯಾಯಿತು. ಛಳಿ ಕೊರೆಯುತ್ತಿತ್ತು. ಕಟ್ಟಿಗೆ ಒಟ್ಟು ಮಾಡಿದರು. ಮೂರು ನಾಲ್ಕು ಕಡೆ ಹೊಡಸಲು ಒಟ್ಟಿದರು; ಛಳಿ ಕಾಯಿಸುತ್ತಾ ಕಳಿತರು. ಗೌಡ್ರು ಅಲ್ಲಿಗೆ ತಲುಪಿದ್ದು ರಾತ್ರಿ ಹನ್ನೆರಡು ಗಂಟೆಗೆ. ಜನರ ಗಡಿಬಿಡಿ ಶುರು. ಮಲಗಿದ್ದವರು ಎದ್ದು ಕುಳಿತರು. ಸಭೆ ಪ್ರಾರಂಭವಾಯಿತು. ನಮ್ಮ ಹತ್ತಿರ ಯಾರೋ ಧರ್ಮಕ್ಕೆ ಕೊಟ್ಟ ಮೈಕ್. ಅದು ಮಾತಾಡಿದ್ದು ಇಲ್ಲವೇ ಇಲ್ಲ. ತೋರಿಸುವುದಕ್ಕೆ ಇದ್ದ ವ್ಯವಸ್ಥೆ. ಅಷ್ಟು ಹೊತ್ತಿಗೆ ಕೆಟ್ಟು ಹೋಯಿತು. ನನ್ನ ಸ್ನೇಹಿತ ವೆಂಕಟಪ್ಪ ಅದನ್ನು ಬಿಚ್ಚಿಕೊಂಡು ಕೂತ. ಗೌಡರು ಕಾದರು. ರಿಪೇರಿ ನಡದೇ ಇತ್ತು. ಇನ್ನು ಉಪಯೋಗವಿಲ್ಲ ಅಂತ ಭಾಷಣ ಪ್ರಾರಂಭಿಸಿದರು. ‘ಎಲ್ಲರೂ ಸುಮ್ಮನಿರಬೇಕು. ನನ್ನ ಮಾತು ಕೇಳೋದಿಲ್ಲ. ಗಟ್ಟಿ ಹೇಳೋಣ ಅಂದ್ರೆ ಇಲ್ನೋಡಿ ವೆಂಕಟಪ್ಪ ಮಾತಾಡೋ ಪೆಟ್ಟಿಗೆ ಕೊರಳು ಕಿತ್ತು ಕೂತಿದಾನೆ’ ಅಂದ್ರು. ಜನಗೊಳ್ ಅಂತ ನಕ್ಕರು. ವೆಂಕಟಪ್ಪ ಪೆಚ್ಚಾದ. ಸಭೆ ಬೆಳಗಿನ ಝಾವ ನಾಲ್ಕಕ್ಕೆ ಮುಗೀತು. ಹೀಗೆ ಅವರ ರಾತ್ರಿ ಸಭೆ ಅಂದ್ರೆ ಯಕ್ಷಗಾನ ನೋಡಿದ ಹಾಗೆ. ಸಮಯ ಸಂದರ್ಭ ಇವೆಲ್ಲಾ ಅವರಿಗೆ ಗೌಣ. ಹೇಳುವಾಗ ಏನು ಹೇಳಬೇಕು ಅದನ್ನು ವಿರಳವಾಗಿ ಹೇಳಲೇಬೇಕು.

ಕಾಂಗ್ರೆಸ್-ಗಾಂಧಿ-ನೆಹರು ಹುಚ್ಚು ಕಾಡುತ್ತಿದ್ದ ಆ ಕಾಲದ ಮೊದಲ ಚುನಾವಣೆಯ ಗೆಲವು ಗೌಡರಿಗೆ ಆಶ್ಚರ್ಯವಾಗಿರಬೇಕು. ಆದರೆ, ಆ ಗೆಲುವು ಮಲೆನಾಡಿನ ಗೇಣಿ ರೈತರ ಪಾಲಿಗೆ ವರವಾಗಿ ಬಂತು. ಭೂಮಿಯ ಹೋರಾಟದ ಕಹಳೆ ಪ್ರಥಮ ಬಾರಿಗೆ ಶಾಸನ ಸಭೆಯಲ್ಲಿ ಮೊಳಗಿತು.

ಈ ಅವಧಿ ಮತ್ತು ಗೌಡರ ನಂತರದ ‘ಶಾಸಕ’ ತನಗಳಲ್ಲಿ ವ್ಯತ್ಯಾಸವಿದೆ. ಆಗ ಗೌಡರು ಕಾಲ್ನಡಿಗೆಯಲ್ಲಾದರೂ ಸರಿ ತಮ್ಮ ಕ್ಷೇತ್ರದ ಮೂಲೆ, ಮೂಲೆಗೂ ಹೋಗುತ್ತಿದ್ದರು. ಇಂತಹ ಪ್ರವಸಾಗಳಲ್ಲಿ ನಾವು ಕೆಲವು ಶಿಷ್ಯರು ಗಂಟು ಹೊತ್ತು ಅವರ ಹಿಂದಿರುತ್ತಿದ್ದೆವು. ಮುಂದೆ ಕೆಂಪು ಎಲೆ-ವಸ್ತ್ರ ಮಲೆನಾಡ ರೈತರ ಅಮೂಲ್ಯ ಉಡುಗೆ ಹೊದ್ದು ಗೌಡರು, ಅವರ ಹಿಂದೆ ನಾವು ಮೂರು ಜನ; ನೋಡುವವರಿಗೆ ಮಠದ ಸಂಭಾವನೆ ವಸೂಲು ಮಾಡಲು ಬಂದವರಂತೆ ಕಾಣುತ್ತಿದ್ದೆವು. ಉರಿ ಬಿಸಿಲು, ಕಾಲಿಟ್ಟರೆ ಹಾರುತ್ತಿದ್ದ ನುಣ್ಣನೆಯ ಮಣ್ಣು, ಬೆವರು ಇಳಿಯುತ್ತಾ ಸಾಗುವಾಗ, ಗೌಡರಿಗೆ ಸಾಹಿತ್ಯ ಸ್ಫೂರ್ತಿ ಉಕ್ಕುತ್ತಿತ್ತು. ಕಾಡಿನ ನಡುವೆ ಎತ್ತರದ ದನಿಯಲ್ಲಿ, ‘ವನಸುಮದೊಳೆನ್ನ’ ಹಾಡಿದ್ದನ್ನು ಕೇಳಿದ್ದೇವೆ; ‘ಭೃಂಗದ ಬೆನ್ನೇರಿ’ ಬಂತು ಗುಣಗುಣಿಸುತ್ತಿದ್ದರು.

ಇಂತಹ ಪ್ರವಾಸಗಳಲ್ಲಿ ಗೌಡರ ಹಾಸ್ಯ ಪ್ರವೃತ್ತಿ ಮರೆಯುವಂತಿಲ್ಲ. ಒಮ್ಮೆ ದನ ಕಾಯುವ ಒಬ್ಬ ಮುದುಕ ಸಿಕ್ಕ. ನಮ್ಮನ್ನು ನೋಡಿದ ಕೂಡಲೇ ಯಾರೋ ದೊಡ್ಡವರು ಅಂದುಕೊಂಡ. ಡೊಗ್ಗಾಲು ಸಲಾಮು ಹೊಡೆದ. ಗೌಡರಿಗೆ ಅವಮಾನವಾಯಿತು. ಆ ಮುದುಕನಿಗೆ ಭಾಷಣ ಪ್ರಾರಂಭಿಸಿದರು. ಬಿಸಿಲು ನೆತ್ತಿ ಸುಡುತ್ತಿತ್ತು. ಭಾಷಣ ಮುಂದುವರಿದೇ ಇತ್ತು. ಗಂಟು ಹೊತ್ತು ನಾವು ಅಪರಾಧಿಗಳಂತೆ ನಿಂತೇ ಇದ್ದೆವು. ಯಾವಾಗಲೂ ಡೊಗ್ಗು ಸಲಾಮು ಹೊಡೆಯಬಾರದು ಅಂತ ಅವನಿಂದ ಮಾತು ತೆಗೆದುಕೊಂಡು ಮುಂದೆ ಹೊರಟೆವು. ಇದು ನಮಗೊಂದು ಹೊಸ ಅನುಭವ. ಅಂದಿನಿಂದ ದಾರಿಯಲ್ಲಿ ಒಂದು ಹೊಸ ಮುಖ ಕಂಡಕೂಡಲೇ ಮೊದಲು ಗಂಟು ಇಳಿಸುತ್ತಿದ್ದೆವು. ಹೇಗಿದ್ದರೂ ಯಾವುದೇ ಹೊಸ ಭೇಟಿ ಒಂದು ಗಂಟೆಯಾದರೂ ಆಗುತ್ತಿತ್ತು. ಗಂಟು ಹೊರುವುದಾದರೂ ತಪ್ಪುತ್ತಲ್ಲ ಅಂತ ನಮ್ಮ ಆಲೋಚನೆ. ಇದು ಹೊರ ನೋಟ. ವಾಸ್ತವದಲ್ಲಿ ಅವರು ಯಾವುದೇ ಗುಲಾಮಗಿರಿಯ ಸಂಕೇತವನ್ನು ಒಲ್ಲದವರು. ಮುದುಕನ ಡೊಗ್ಗು ಸಲಾಮಾಗಲಿ, ಮಹಾರಾಜರ ಜಂಬೂಸವಾರಿಯಾಗಲಿ ದಾಸ್ಯದ ಸಂಕೇತ. ಅದಕ್ಕಾಗಿ ರಾಜಮನೆತನವಾಗಲಿ, ಮಠಾಧಿಪತಿಯಾಗಲಿ, ಜಮೀನ್ದಾರನಾಗಲಿ, ಮಾಲೀಕನಾಗಲಿ, ಸರ್ಕಾರವಾಗಲಿ ಅದರ ವಿರುದ್ಧ ಅಹಿಂಸಾತ್ಮಕ ಸಂಗ್ರಾಮ, ಸಂಘರ್ಷ ನಡೆಯಬೇಕು. ಇದು ಗೌಡರ ಅಭಿಮತ.

ಗೋಪಾಲಗೌಡರನ್ನು ದೇಶಕ್ಕೆ ಪರಿಚಯಿಸುವುದರಲ್ಲಿ ಸಾಗರ-ಹೊಸನಗರ ಕ್ಷೇತ್ರದ ದೇಣಿಗೆ ಹೆಚ್ಚಿನದು. ಅವರ ಕಾರ್ಯಕ್ಷೇತ್ರಕ್ಕೆ ಅಂದು ಅನುವಾದವರಲ್ಲಿ ಸಾಗರ ಹೋಟೆಲ್ ಮಾಲೀಕ ಶ್ರೀ ಎ.ಪಿ. ಕಲ್ಕೂರರು, ನನ್ನ ತಂದೆ ಗಜೇಂದ್ರ ವಿಲಾಸದ ಮಾಲೀಕ ಡಿ.ಎಸ್. ಸುಬ್ಬರಾಯರು, ಕಾಗೋಡು ಬೀರನಾಯ್ಕರು, ಇನ್ನೂ ಹಲವು ಹತ್ತು ಜನ.

ಗೌಡರ ಠೀವಿ, ಗತ್ತು ಹುಟ್ಟಿನಿಂದ ಬಂದದ್ದು. ಅವರು ಶಾಸಕರಾದ ಮೇಲೆ ಬಂದಿದ್ದು ಎಂದುಕೊಂಡರೆ ತಪ್ಪಾದೀತು. ಯಾವಾಗಲೂ ಖಾಲಿ ಜೇಬಿನ ಗೌಡರು ಜೇಬಿಗೆ ಕೈ ಹಾಕಿ ಸಿಗರೇಟಿಲ್ವಲ್ಲಪ್ಪಾ ಅಂದ್ರೆ ಸಾಕು ಸಿಗರೇಟು ಪ್ಯಾಕು ಪ್ರತ್ಯಕ್ಷ. ಹಾಗೆಯೇ ಈಗ ಶಿವಮೊಗ್ಗಕ್ಕೆ ಹೋಗಬೇಕಲ್ಲಪ್ಪಾ ಅಂದ್ರೆಸಾಕು. ಕೂಡಲೇ ಬಸ್‌ಟಿಕೆಟ್, ಜೇಬಿಗೆ ಒಂದು ಹತ್ತು ರೂಪಾಯಿ, ಹೋಟೆಲಿಗೆ ಕೊಡಬೇಕಾದ ಹಣ ಎಲ್ಲಾ ತಯಾರು. ಆ ಕಾಲದಲ್ಲಿ ಗೌಡರ ವ್ಯವಹಾರಕ್ಕೆ ಅಲ್ಲರೂ ಪಾಲುದಾರರು; ನಮ್ಮದೊಂದು ಕುಟುಂಬ, ಯಜಮಾನ ಗೋಪಾಲ.

೧೯೫೭ರಲ್ಲಿ ಎರಡನೆಯ ಚುನಾವಣೆ, ಗೌಡರು ಸೋಲಿನ ಕಹಿ ಕಂಡರು. ಈ ಐದು ವರ್ಷಗಳಲ್ಲಿ ಜಾತಿಯ ವಿಷ ಮೊದಲ ಬಾರಿಗೆ ಹೆಡೆ ಎತ್ತಿತ್ತು. ಬಾಡು ಊಟ ಧರ್ಮಸ್ಥಳದ ದೇವರಾಣೆ ಪ್ರವೇಶವಾಗಿತ್ತು. ಇಂತಹ ಚುನಾವವಣೆ ನಮಗೆ ಹೊಸದು. ಆದರೂ ಸಾಕಷ್ಟು ಮತಗಳಿಸಿ, ಅತ್ಯಲ್ಪ ಮತಗಳಿಂದ ಸೋತೆವು. ಈ ಸೋಲು ಗೌಡರ ಜೀವನದಲ್ಲಿ ಹಲವಾರು ಘಟನೆಗಳಿಗೆ ಅವಕಾಶ ನೀಡಿತು. ದಿನಗಟ್ಟೆಲ ಉಪವಾಸ ವನವಾಸ ಅಭ್ಯಾಸವಾಯಿತು. ತೊಡಲು ಸಾಕಷ್ಟು ಬಟ್ಟೆಯೂ ಇಲ್ಲದ ಕಾಲ. ಸಮಾಜವಾದಿ ಪಕ್ಷದ ಸಂಘಟನೆಯಲ್ಲಿಯೂ ಬದಲಾವಣೆಗಳು. ಜಯಪ್ರಕಾಶರು ಸರ್ವೋದಯಕ್ಕೆ, ಆದರೆ ನಮ್ಮ ಗೌಡರು ಲೋಹಿಯಾ ತಂಡದಲ್ಲಿಯೇ ಉಳಿದರು. ಈ ಅನುಭವಗಲು ಅವರನ್ನು ಮತ್ತಷ್ಟು ಗಟ್ಟಿಮಾಡಿದುವು.

೧೯೬೨ರಲ್ಲಿ ಅವರು ಅನುಭವ ಅಧ್ಯಯನ ಮೈಗೂಡಿಸಿಕೊಂಡ ಹೊಸ ಶಾಂತವೇರಿ ಗೋಪಾಲಗೌಡ. ಸ್ವಕ್ಷೇತ್ರ ತೀರ್ಥಹಳ್ಳಿಗೆ ಮರಳಿದರು. ಹಣವಿದ್ದವರಿಂದ ಗೌಡರಿಗೆ ಸಿಗುತ್ತಿದ್ದುದು ವಂತಿಗೆ ಮಾತ್ರ. ಏನೂ ಇಲ್ಲದವರ ಓಟು ಅವರ ಬಂಡವಳ. ಡ್ರೈವರ್ ತಿಮ್ಮಣ್ಣ, ನಮ್ಮ ನರಸಿಂಹಣ್ಣ ಅವರ ನೆಚ್ಚಿನ ಸಾರಥಿಗಳು. ಅಂದಿನಿಂದ ಅವರು ಆ ಕ್ಷೇತ್ರದ ಅನಭಿಷಕ್ತ ಜನಪ್ರತಿನಿಧಿ. ಆ ಜನರ ಪ್ರೀತಿಯ ನೆಲೆ ಅಳೆಯುವುದು ಅಸಾಧ್ಯ. ಗೌಡರ ಮಫ್ಲರ್‌ಗೂ ಓಟು ಕೊಟ್ಟು ಎಂದರೆ ಎಂತಹ ಅಭಿಮಾನಿಗಳು ಅನಿಸುತ್ತದೆ. ಕಣ್ಣು ತೇವವಾಗುತ್ತದೆ.

ಗೌಡರಿಗೆ ಮಿತ್ರರೇ ಕುಟುಂಬ; ಪಕ್ಷವೇ ಆಸ್ತಿ. ಸಣ್ಣವರು ಎಂಬ ಅನಿಸಿಕೆ ಅವರಲ್ಲಿರಲಿಲ್ಲ. ನಮ್ಮಲ್ಲಿ ಮದುವೆ, ಸಾವು, ಹುಟ್ಟು ಇವುಗಳೆಲ್ಲೆಲ್ಲಾ ಗೌಡರ ಪಾಲುದಾರಿಕೆ ಪ್ರತಿಕ್ರಿಯೆ ಇರಲೇಬೇಕು. ನನ್ನ ಗೆಳೆಯನೊಬ್ಬ ಅರಳುವ ವಯಸ್ಸಿನಲ್ಲೇ ತೀರಿಕೊಂಡ. ಈ ಸುದ್ದಿ ಕೇಳಿದ ಗೌಡರು ಕಲ್ಲಿನಂತೆ ಕೂತು ಶೂನ್ಯವನ್ನೇ ನೋಡುತ್ತಾ ಬಹಳ ಹೊತ್ತು ಕೂತಿದ್ದರು. ಆಗಾಗ ‘ಜವರಾಯ ಬಂದರೆ’ ಗುಣುಗುವುದೂ ಇತ್ತು. ಕಿರಿಯರ ಸಾವು ಅವರಿಗೆ ಭಯ ಮೂಡಿಸುತ್ತಿತ್ತು.

ಹಾಗೆಯೇ ರಾಜಕಾರಣದಲ್ಲಿ ಕಿರಿಯರು ಬೆಳೆಯುವುದಕ್ಕೆ ಅವರು ಅಡ್ಡಿಯಾಗುತ್ತಿರಲಿಲ್ಲ. ಜೆ.ಹೆಚ್. ಪಟೇಲ್‌ರವರ ಬೆಳವಣಿಗೆಯಲ್ಲಿ ಆತ್ಮೀಯ ಸ್ನೇಹಿತರಾದ ಗೌಡರ ಪಾಲು ಇದೆ. ಗೆಳೆಯ ಜಾರ್ಜ್ ಫರ್ನಾಂಡೀಸ್‌ರವರನ್ನು ಅವರ ಕಾರ್ಯ ಕ್ಷೇತ್ರ, ಸಂಘಟನಾ ಚತುರತೆಗೆ ತಲೆದೂಗಿ ಕರ್ನಾಟಕದ ಕಾರ್ಯಕರ್ತರಿಗೆ, ಜನತೆಗೆ ಪರಿಚಯಿಸಿದವರು ಗೋಪಾಲಗೌಡರು. ದುಡಿದವರಿಗೆ ಗೌರವ ಕೊಡಬೇಕು ಇದು ಅವರ ನಿಲುವು. ಕಾರ್ಯಕರ್ತರು ಸೇರಿದಾಗ ಗೆಳೆಯ ಸೋಗಾಲ ನಾಗಭೂಷಣ, ಬಾ.ಸು ಮತ್ತಿತರರನ್ನು ಅವರು ನೆನೆಸುವುದು ಮಾಮೂಲು.

ನಮ್ರತೆ, ವಿನಯ ಗೋಪಾಲಗೌಡರು ಅಪೇಕ್ಷಿಸುತ್ತಿದ್ದರು. ಸ್ವತಃ ಅವರೇ ಲೋಹಿಯಾರವರ ಎದುರಿನಲ್ಲಿ ವಿನಯದಿಂದ ನಿಂತಿದ್ದು ನಾವು ನೋಡಿದ್ದೇವೆ. ವೈಯಕ್ತಿಕ ಅಭ್ಯಾಸಗಳ ಬಗ್ಗೆಲೋಹಿಯಾ ಸಿಟ್ಟಾಗಿ ಖಂಡಿಸಿದಾಗ ಗೌಡರು ವಿನೀತ ಭಯದಿಂದ ದಿನಗಟ್ಟಲೇ ಅವರನ್ನು ಕಾಣುತ್ತಿರಲಿಲ್ಲ. ಸಮಾಜವಾದಿ ಸಾಹಿತ್ಯಕ್ಕೆ ಸಾಕಾರ ನೀಡುತ್ತಿದ್ದ ಕಾಲ. ಲೋಹಿಯಾ ಕರ್ನಾಟಕಕ್ಕೆ ಭೆಟ್ಟಿ ನೀಡಿ ಜೋಗಕ್ಕೆ ಬಂದರು. ಜಲಪಾತದ ಎದುರು ಕುಳಿತು. ‘ಗೋಪಾಲ್ ಈ ನದಿ ಎಲ್ಲಿಂದ ಬರುತ್ತದೆ?’ ಎಂದರು. ಗೌಡರಿಗೆ ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ, ಜೊತೆಯಲ್ಲಿ ನಾನಿದ್ದೆ. ನನಗೆ ಅಲ್ಪ ಸ್ವಲ್ಪ ಹಿಂದಿ ಬರುತ್ತಿತ್ತು. ನಾನು ಅವರು ಕೇಳಿದ ನದಿ ಬಗ್ಗೆ ತಿಳಿಸಿದೆ. ಲೋಹಿಯಾ ಹೇಳಿದರು, ‘ಗೋಪಾಲ್ ನೀನು ಹಿಂದಿ ಕಲಿಯಲ್ವ?’ ‘ನಾನು… ಹಿಂದಿ… ಕಲೀಬೇಕು,’ ಅಂದರು ಗೌಡರು; ಲೋಹಿಯಾ ಶರಾವತಿಯ ವಿವರ ಕೇಳಿಕೊಂಡರು. ‘ಮಾತೃಹಂತಕ್ ಪರಶುರಾಮ್ ಸೆ ಲೇಕರ್ ಜನ ಹಂತಕ್ ನೆಹರೂ ತಕ್’ ಎಂಬ ವಿಖ್ಯಾತ ಸಾಲುಗಳನ್ನು ಅಂದರು. “ಗೋಪಾಲ್, ಈ ಮಾತು ನೆಹರೂರ ಮುಖಕ್ಕೆ ಹೇಳಬೇಕು ಅಲ್ವಾ?’’ ಅಂದರು. ‘ಹೌದು’ ಎಂದು ಗೌಡರು ಗೋಣಾಡಿಸಿದರು. ‘ಆದರೆ, ಯಾರು ಹೇಳಬೇಕು?’ ಎಂದರು ಲೋಹಿಯಾ. ಗೌಡರು ನಮ್ರತೆಯಿಂದ ‘ನಾನಲ್ಲ, ನೀವು’ ಅಂದರು.

ಗೌಡರಲ್ಲಿ ಎಲ್ಲರೂ ಕಂಡಿದ್ದು ತ್ರಿಕರಣಶುದ್ಧಿ, ಆಲೋಚನೆ, ಮಾತು ಕೃತಿ ಇವುಗಳಲ್ಲಿ ಸಾಮರಸ್ಯ ಸಾಧಿಸಿದ ಸಿದ್ಧಿ; ಆಶೆ – ಆಮಿಷಗಳ, ಅಧಿಕಾರಕಮೋಹ ಅವರ ಬಳಿ ಸುಳಿಯಲಿಲ್ಲ. ಗೆಳೆತನಕ್ಕೆ ಸಾರ್ಥಕ ಅನ್ವರ್ಥ ಗೋಪಾಲ. ಶಿವಮೊಗ್ಗೆಯಲ್ಲಿ ಮಂಡಕ್ಕಿ ಹೊತ್ತು ಮಾರುವ ರೆಡ್ಡಿ ಇಂದಿಗೂ ಗೌಡರ ಹೆಸರೆತ್ತಿದರೆ ಕಣ್ಣೀರಿಡುತ್ತಾನೆ. ಹತ್ತಾರು ಪೋಲೀಸಿನವರು ‘ಇಲ್ಲ ಸಾರ್, ಅಂತಹವರು ಮತ್ತೆ ಬರೋದಿಲ್ಲ’ ಅಂದವರಿದ್ದಾರೆ.

ನಮ್ಮ ಪಾಲಿಗೆ ಗೌಡರು ಇದ್ದು ನಡೆಸಿದ್ದು ರಾಯಚೂರಿನದೇ ಕೊನೆಯ ಸಮ್ಮೇಳನ. ಸುಮಾರು ೧೯೬೯ ಅಂತ ಕಾಣುತ್ತೆ. ಎರಡು ದಿನಗಳ ಕಾರ್ಯಕ್ರಮ. ಸಂಘಟನೆಯಲ್ಲಿ ಹೊಸ ಯುವಕರು ಹೆಚ್ಚಾಗಿದ್ದರು. ಸಮ್ಮೇಳನ ಪ್ರಾರಂಭ. ರಾಜ್ಯ ಅಧಿಕಾರದ ಮೇಲೆ ಆರೋಪ ಪ್ರತ್ಯಾರೋಪ. ಗೌಡರು ಅಧಿಕಾರ ವರ್ಗದಲ್ಲಿರಲಿಲ್ಲ. ಕೂಗಾಟ ಗದ್ದಲ, ಕೈ ಕೈ ಎತ್ತಿ ಆಕ್ರೋಶ ಎಲ್ಲ ಯಥಾವಿಧಿ. ಸಮಾಜವಾದಿಗಳ ಸಮ್ಮೇಳನದಲ್ಲಿ ಕಿರುಚಾಟ, ಬೊಬ್ಬೆ, ವಾದ ಪ್ರತಿವಾದ, ಬೈಗುಳ ವಿನಿಮಯವಾಗದಿದ್ದರೆ ಶೋಭೆ ಇಲ್ಲ. ಆದರೆ, ಇದೆಲ್ಲ ಸಮ್ಮೇಳನ ಮುಗಿಯುವವರೆಗೆ ಮಾತ್ರ. ನಂತರ ನಾವೆಲ್ಲ ಒಂದೇ. ಆಗಲೆ ರಕ್ತದ ಒತ್ತಡ ಗೌಡರನ್ನು ತನ್ನ ಬಲೆಗೆ ಸೆಳೆದುಕೊಂಡಿತ್ತು. ನಮ್ಮ ನಡವಳಿಕೆಯಿಂದ ಅವರಿಗೆ ನೋವಾಗಿರಬೇಕು. ನಮಗೆ ಯೌವನದ ಅಹಂಕಾರ. ನಾವಿದನ್ನು ಗಮನಿಸಿರಲಿಲ್ಲ. ಕೊನೆಗೆ ಹೊಸ ಅಧಿಕಾರ ವರ್ಗಕ್ಕೆ ನಾಲ್ಕು ಮಾತು ಹೇಳಬೇಕೆಂದು ವಿನಂತಿಸಿಕೊಂಡೆವು; ಮೊದಲು ಒಪ್ಪಲಿಲ್ಲ. ಹಠ ಮಾಡಿದೆವು, ವೇದಿಕೆಗೆ ಬಂದರು: “ಅವನನ್ನು ನೋಡಿ ಅವನು ಚಡ್ಡಿ ಹಾಕಿಕೊಂಡು ನಮ್ಮ ಜೊತೆ ಓಡಾಡಿದ್ದಾನೆ. ಈಗ ಅವನ ತಲೆ ಕೂದಲು ಉದುರಿ ಹೋಗಿದೆ. ಈ ಪಕ್ಷದಲ್ಲಿ ನಾವು ಅವನಿಗೆ ಏನು ಮಾಡೋಕಾಗಿಲ್ಲ. ಆದರೂ, ಏನೋ ಕಾಣಬೇಕು ಅಂತ ನಮ್ಮ ಜೊತೇಲಿದ್ದಾನೆ. ಇಂತಹವರು ಇನ್ನೆಷ್ಟೋ ಜನ ಇದ್ದಾರೆ. ನೀವು ಯುವಕರು ಅವರ ಆಶೋತ್ತರಕ್ಕೆ ಕನ್ನಡಿ ಆಗಬೇಕು’’ ಅಂದರು. ನನಗೆ ಗೊತ್ತಿಲ್ಲದ ಹಾಗೆ ಕಣ್ಣುಗಳು ತೇವಗೊಂಡಿದ್ದವು. ಕ್ಷಣ ಕಾಲ ಗುಂಪಿನಲ್ಲಿದ್ದರೂ ಏಕಾಂಗಿಯಾಗಿದ್ದೆ. ಬಹುಶಃ ಆ ದಿನವೆ ಅವರ ಪ್ರೀತಿಯ ಸೆಲೆಯನ್ನು ಕಂಡುಕೊಂಡಿದ್ದು. ಸಭೆಯ ನಂತರ ‘ಬಟ್ಟೆ ಹಾಕ್ಕೋಳ್ಳೊ’ ಅಂದ್ರು, ನಾನು ಬದಲಾಯಿಸಿದೆ. ಅಂದು ರಾಯಚೂರಿನಲ್ಲಿ ರಾತ್ರಿ ೯ರ ನಂತರ ಸಾರ್ವಜನಿಕ ಸಭೆ. ನನ್ನನ್ನು ಮಾತನಾಡು ಎಂದರು. ನಾನು ಮಾತನಾಡಿದೆ. ಅವರ ಭಾಷಣ ಮುಗಿದು, ಸಭೆ ಮುಗಿಯುವಾಗ ಒಂದು ಗಂಟೆ. ನನ್ನ ಪಾಲಿಗೆ, ನಾನು ಗೌಡರು ಮಾತನಾಡಿದ ಕೊನೆಯ ಸಭೆ ಸುಮಾರು ಇಪ್ಪತ್ತು ವರ್ಷಗಳ ನನ್ನ ಅವರ ವೇದಿಕೆಯ ಬಾಂಧವ್ಯ ಅಂದೇ ಮುಗಿದಿದ್ದು, ಈಗಲೂ ನೆನೆಸಿಕೊಂಡಾಗ ಅಂದಿನ ಅವರ ಮಾತುಗಳು ಕಿವಿಯಲ್ಲಿ ಗುಂಯ್ಯಗುಡುತ್ತದೆ. ನಾವೇನು ಕೊಟ್ಟಿಲ್ಲಎನ್ನುವ ಮಾತು ಅವರ ಹೃದಯದ ಶ್ರೀಮಂತಿಕೆಯನ್ನು ತೋರುತ್ತದೆ. ನನಗಷ್ಟೇ ಅಲ್ಲ, ಕನ್ನಡ ನಾಡಿಗೆ ಅವರು ಕೊಟ್ಟದ್ದು ಬಹಳ. ರಾಜಕೀಯಕ್ಕೆ ಅವರ ದೇಣಿಗೆ ಎಣಿಸಲಾರದಷ್ಟು. ನನ್ನಂತಹವರಿಗೆ ಬದುಕಿನ ಎಲ್ಲ ಸ್ಥರಗಳನ್ನು ಪರಿಚಯಿಸಿದ್ದು ಸಣ್ಣ ಕೆಲಸವೇ?

‘ಕುರುಡು ಕಾಂಚಾಣ’ ಗುಣಗುಣಿಸುವ, ‘ವನಸುಮದ ಸೌರಭ’ ಸೂಸುವ, ‘ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಕೈ ಎತ್ತಿ ಹಾರೈಸಿದ ಸಂಗೀತ ಸಾಹಿತ್ಯ ರಾಜಕಾರಣದ ನಿಷ್ಕಲ್ಮಷ, ಸ್ಪಟಿಕ ಸದೃಶ್ಯ ಈ ವ್ಯಕ್ತಿ ಮಾತಿನ ಮೋಡಿಯ ಕಿನ್ನರಿಯಂದಿಗೆ ಹಿಂಬಾಲಿಸುವ ಸೈನ್ಯದೊಂದಿಗೆ ಸಾಗಿದ್ದಾನೆ. ಬೆಟ್ಟದ ಬಾಗಿಲು ತೆರೆದಿದೆ. ಒಳಗೊಂದು ಸುಂದರ ಉದ್ಯಾನವನ. ನಾ ಬೇಗ, ಬೇಗ ಹೆಜ್ಜೆ ಹಾಕುತ್ತೇನೆ. ಆದರೆ ಬಾಗಿಲು, ಮುಚ್ಚೇಬಿಟ್ಟಿತು. ನನ್ನಂತಹ ಕುಂಟರು, ಹೆಳವರು ಮತ್ತೆ ಬಾಗಿಲು ತೆರೆಯುವುದನ್ನು ಕಾಯುತ್ತೇವೆ. ತಲೆಮಾರಿಗೊಬ್ಬನೀತ; ಆರಗದ ಕಿಂದರಿಜೋಗಿ ಗೋಪಾಲಗೌಡ.