ನಮ್ಮನ್ನಗಲಿ ಅನಂತದಲ್ಲಿ ಲೀನರಾದ ಸಮಾಜವಾದಿ ಗೆಳೆಯರನ್ನು ನೆನಪು ಮಾಡಿಕೊಳ್ಳುವುದೆಂದರೆ ಕರುಳೇ ಕಿತ್ತು ಬಂದಂತೆ ವೇದನೆಯಾಗುತ್ತದೆ. ಗೆಳಯರಾದ ಗೋಪಾಲ, ಕಣ್ಣನ್, ಅಣ್ಣಯ್ಯ, ಭರ್ಮಪ್ಪ, ಮರಿಯಪ್ಪ, ನೆನ್ನೆ ಮೊನ್ನೆ ಕಣ್ಣೆರೆಯಾದ ವೆಂಕಟರಾಮು ಎಲ್ಲಾ ಧೀಮಂತ ವ್ಯಕ್ತಿಗಳು. ಸಮಾಜವಾದಿ ಧ್ಯೇಯದ ಜೊತೆಗೆ ಮಾನವ ಮೌಲ್ಯಗಳನ್ನು ಎತ್ತಿ ಹಿಡಿದ ಇಪ್ಪತ್ತನೆಯ ಶತಮಾನದ ಮಹಾವಿಭೂತಿಪುರುಷ ಡಾ. ರಾಮಮನೋಹರ ಲೋಹಿಯಾರವರ ಈ ಶಿಷ್ಯವೃಂದ, ತಮ್ಮದೇ ಆದ ವ್ಯಕ್ತಿತ್ವದಿಂದ ಸುತ್ತಲ ಸಮಾಜಕ್ಕೆ ಬೆಳಕಾದವರು. ಇವರೆಲ್ಲ ಮಣ್ಣಿನಿಂದ ಮೇಲೆದ್ದು ಮೂರ್ತಿಗಳಂತೆ ಬೆಳೆದುನಿಂತ ಜನ; ಉನ್ನತ ಧ್ಯೇಯ ಮಾನವ ಮೌಲ್ಯಕ್ಕಾಗಿ ಹೋರಾಡಿ ಹುತಾತ್ಮರಾದವರು. ಇವರ ನಿಕಟ ಸಂಪರ್ಕ ಹೊಂದಿ ಇನ್ನೂ ಜೀವಂತ ಇರುವ ನಮಗೆ ಅವರುಗಳ ನೆನಪೇ ಮಧುರ ಕನಸಾದರೂ, ಅದನ್ನು ಬರಹಕ್ಕೆ ಇಳಿಸುವುದು ಅತಿ ಸಂಕಟದ ಕೆಲಸ. ಗೆಳೆಯ ಗೋಪಾಲಗೌಡರು ಬಾಲ್ಯದಲ್ಲಿ ಗೋಪಾನೇ ಆಗಿದ್ದು, ಎಂಟು ವರ್ಷದ ತನಕ ಶಾಲೆ ಕಂಡಿರಲಿಲ್ಲ. ಅಕ್ಷರ ಕಲಿತಿರಲಿಲ್ಲ. ಗೋಪಾಲ ಮಂಡಿಯೂರಿ ಮೇಲೆದ್ದು, ಭೂಮಾಲೀಕ ಪಾಳೇಗಾರಿಕೆ ಪರಿಸರದಲ್ಲಿ ಸೆಟೆದು ನಿಂತತ್ದೇ ಒಂದು ಧೀಮಂತ ಕಥೆಯಾದೀತು. ಪ್ರೌಢಶಾಲೆ ದಾಟಿ ಶಿವಮೊಗ್ಗೆಗೆ ಬರುವ ಹೊತ್ತಿಗೆ ಗೋಪಾಲ ಅನೇಕ ಅಡೆತಡೆಗಳ ಕಂದಕಗಳನ್ನು ದಾಟಿ, ಏರಿ ಇಳಿದು ಸಾಹಸ ಮಾಡಿರಬೇಕು. ಅಲ್ಲದೆ ಎಳೆಯ ವಯಸ್ಸಿನಲ್ಲಿಯೇ ದೇಶಪ್ರೇಮ ಸ್ವಾತಂತ್ರ್ಯ ಹೋರಾಟದ ಗಾಳಿ ಬಿರುಗಾಳಿಗೆ ಸಿಕ್ಕಿ ಪೋಲಿಸರೊಡನೆ ಸೆಣಸಾಟ.

ನಾನು ಗೋಪಾಲಗೌಡರನ್ನು ಕಂಡದ್ದು ೧೯೪೭ರಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಮೈಸೂರು ಕಾಂಗ್ರೆಸ್ ಹೂಡಿದ ಹೋರಾಟ ಕಾಲಕ್ಕೆ ಶಿವಮೊಗ್ಗ ರಾಮಣ್ಣ ಶೆಟ್ಟಿ ಪಾರ್ಕ್‌ನಲ್ಲಿ. ಕಾಲೇಜು ವಿದ್ಯಾರ್ಥಿ ಗೋಪಾಲಗೌಡರ ಉದ್ವೇಗ ಪೂರತ ವಿಚಾರಪೂರ್ಣ ಭಾಷಣ, ಬ್ರೂಕ್ ಬಾಂಡ್ ಟೀ ಕಂಪನಿಯಲ್ಲಿ ನೌಕರಿಯಲ್ಲಿದ್ದ ನಾನು ಈ ಯುವಕನ ಭಾಷಣ ಶೈಲಿ ಮಾತುಗಾರಿಕೆಗೆ ಮಾರುಹೋಗಿದ್ದೆ. ಸ್ವಾತಂತ್ರ್ಯ ಹೋರಾಟದ ನಂತರ ಈ ಜವಾಬ್ದಾರಿ ಸರಕಾರದ ಹೋರಾಟ ರಂಗಕ್ಕೂ ಇಳಿದಿದ್ದೆ.

ಯುವಕ ಗೋಪಾಲ ತನ್ನ ಭಾಷಣದಲ್ಲಿ “ಅರಸೊತ್ತಿಗೆ ಅಳಿಯಲಿ’’ ಎಂದು ಬಂಡಾಯದ ಕೂಗು, ಕ್ರಾಂತಿಯ ಕಹಳೆ ಊದಿದ. ಆಗ ಧಾರವಾಡದ ಯುವಕನೊಬ್ಬ ಶ್ರೀ ಗುಂಡಪ್ಪ ನರಬೋಳಿ ಎಂಬುವವ ಕಾಲುನಡಿಗೆಯಲ್ಲಿ ಬಂದು ಕಾಂಗ್ರೆಸ್ಸಿನ ಹೋರಾಟಕ್ಕೆ ಸಮಾಜವಾದಿ ಸ್ವರೂಪ ಕೊಟ್ಟು, ರಾಜತ್ವದ ಅವಸಾನಕ್ಕೆ ರಣವಾದ್ಯ ಬಾರಿಸಿದ್ದ. ಗೋಪಾಲ ಪೊಲೀಸರೊಡನೆ ಆಡುತ್ತಿದ್ದ ಕಣ್ಣುಮುಚ್ಚಾಲೆ, ಪ್ರತಿದಿನ ಮಾರುವೇಷದಲ್ಲಿ ವೇದಿಕೆ ಮೇಲೆ ಬಂದು ರಣಕಹಳೆ ಊದಿ ಕಣ್ಮರೆಯಾಗುತ್ತಿದ್ದುದು, ರೋಮಾಂಚನಕಾರಿ ನೆನಪು ಇನ್ನೂ ಉಳಿದಿದೆ.

ಶಿವಮೊಗ್ಗೆಯ ಕೆಲವೇ ಯುವಕರು ಶ್ರೀ ವೈ.ಆರ್. ಪರಮೇಶ್ವರಪ್ಪ, ಶ್ರೀ ಕಲ್ಪಪ್ಪ, ಶ್ರೀ ಎ.ವಿ. ಶ್ರೀನಿವಾಸ, ಶ್ರೀ ಡಿ. ರೇವಳಪ್ಪ, ಶ್ರೀ ಡಿ.ಪಿ. ರಂಗಪ್ಪ ಮತ್ತು ನಾನು, ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಮಾಜವಾದಿ ಮಹಾನೇತಾರರಾಗಿದ್ದ ಶ್ರೀ ಜಯಪ್ರಕಾಶ್, ಡಾ. ಲೋಹಿಯಾ, ಶ್ರೀ ರಾಮನಂದನ ಮಿಶ್ರ, ಶ್ರೀ ಅಶೋಕ ಮೆಹತಾ, ಜನಾಬ್ ಯೂಸೂಫ್ ಮೆಹರಾಲಿ, ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಇತರರೆಲ್ಲಾ ಸ್ವಾತಂತ್ರ್ಯ ಪಡೆದ ಮರುವರ್ಷದಲ್ಲಿಯೇ ಸಿಡಿದು ಹೊರಬಿದ್ದಾಗ, ನಾವು ಪುಟ್ಟ ಕಿಡಿಗಳಾಗಿ ಹೊರ ಸಿಡಿದಿದ್ದೆವು.

ಶ್ರೀ ಗೋಪಾಲಗೌಡರು ತಡವಾಗಿ ಸಮಾಜವಾದಿ ಪಕ್ಷಕ್ಕೆ ಬಂದರು. ಮಲೆನಾಡಿನಲ್ಲಿ ಕಾಂಗ್ರೆಸ್ಸಿನಿಂದ ಸಿಡಿದು ಬಂದವರಲ್ಲಿ ಗೌಡ ಜನಾಂಗದಿಂದ ಇವರೊಬ್ಬರೇ. ಯುವಕನಾಗಿದ್ದಾಗಲೇ ಗೋಪಾಲನಿಗೆ ಸತ್ವ ರಾಜಸ ಗುಣಗಳು ಪ್ರಧಾನವಾಗಿದ್ದುದು ಎದ್ದು ಕಾಣುತ್ತಿದ್ದಿತು.

ಆತನಲ್ಲಿ ನಾಯಕತ್ವದ ಠೀವಿ ನಿರ್ದೇಶನ ಕೊಡುವ ಸ್ವಬಾವ ಮೈಗೂಡಿದ್ದಿತು. ಗೋಪಾಲನು ಶಿವಮೊಗ್ಗ ಜಿಲ್ಲಾ ಸಮಾಜವಾದಿ ಪಕ್ಷಕ್ಕೆ ಗೆಳೆಯರಿಗೂ ಕೊಡುತ್ತಿದ್ದ ನಿರ್ದೇಶನದ ರೀತಿ ಕೆಲವು ಸ್ವಾರ್ಥಿಗಳಿಗೆ ಹಿಡಿಸದಾಗಿ ಬಂಡೇಳುವ ಪರಿಸ್ಥಿತಿಗೂ ಬಂದಿದ್ದಿತು. ಈಗಲೂ ನೆನಪಿದೆ ಗೆಳೆಯ ಅಣ್ಣಯ್ಯ ಮಧ್ಯೆ ಪ್ರವೇಶಮಾಡಿ, ಗೋಪಾಲನ ಬಗ್ಗೆ ಇದ್ದ ತಪ್ಪು ಕಲ್ಪನೆ ತೊಡೆದು ಹಾಕಿ, ಸಹೃದಯತೆ ಮೂಡಿಸಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹತ್ತಾರು ಜನ ಯುವಕರು ಸಮಾಜವಾದಿ ಪಕ್ಷವನ್ನು ಕಟ್ಟಿದ್ದರು. ಅಂದಿನ ಕಾಂಗ್ರೆಸ್ ಪಕ್ಷಕ್ಕೆ ಸಿಂಹಸ್ವಪ್ನವಾಗಿದ್ದೆವು. ಎರಡು ಮೂರು ವರ್ಷದಲ್ಲಿಯೇ ಸಮಾಜವಾದದ ಕೂಗು ಜಿಲ್ಲೆಯಾದ್ಯಂತ ಮೊಳಗಿಸಲು ಸಮರ್ಥರಾಗಿದ್ದೆವು.

ರಾಷ್ಟ್ರದ ರೈತರ ಹೋರಾಟದಲ್ಲಿಯೇ ಚಿರಸ್ಮರಣೀಯವಾದ “ಕಾಗೋಡು ಗೇಣಿದಾರ ರೈತರ ಹಕ್ಕಿನ ಹೋರಾಟ’’ ಸಮಾಜವಾದಿ ಯುವಕರ ನಾಯಕತ್ವದಲ್ಲಿ ನಡೆಯಿತು. ಪ್ರಾರಂಭದಲ್ಲಿ ರೈತಸಂಘದ ಶ್ರೀ ಹೆಚ್. ಗಣಪತಿಯಪ್ಪ ಹೂಡಿದ್ದ ಗೇಣಿ ವಿವಾದ ರಾಜಿಯಾಗದೆ ಸ್ಫೋಟಗೊಂಡಾಗ ಸಮಾಜವಾದಿ ಪಕ್ಷ, ರೈತ ಸಂಘರ್ಷದ ನಾಯಕತ್ವವನ್ನು ತನ್ನ ಕೈಗೆ ತೆಗೆದುಕೊಂಡಿತು.

ಆ ಸಂಘರ್ಷಕ್ಕೆ ಸೈದ್ದಾಂತಿಕೆ ಹಿನ್ನೆಲೆ ಕೊಟ್ಟ ಕೀರ್ತಿ ಗೋಪಾಲನಿಗೆ ಸಲ್ಲುತ್ತದೆ. ಶ್ರೀ ವೈ.ಆರ್. ಪರಮೇಶ್ವರಪ್ಪನವರ ಸಂಘಟನಾಶಕ್ತಿ, ಶ್ರೀ ಜಿ. ಸಾದಶಿವರಾಯರ ರಾಜಕೀಯ ತಂತ್ರ, ಇದರಿಂದ ಮಲೆನಾಡಿನ ತುಳಿದಿಟ್ಟ ಜನಾಂಗದ ದೀವರುಗಳು – ಧೀರರಾಗಿ ಭೂಮಾಲಿಕ ಪಾಳೇಗಾರಿಕೆ ಪ್ರಭುತ್ವದೆದುರು ಸೆಟೆದು ಸೆಣಸಿ ನಿಲ್ಲಲು ಸಾಧ್ಯವಾಯಿತು. ಗೇಣಿರೈತರು ಸತ್ಯಾಗ್ರಹಕ್ಕೆ ಇಳಿಯಲು ಮೀನಾಮೇಷ ಎಣಿಸಿದಾಗ, ಜಿ. ಸದಾಶಿವರಾಯರೇ ಕಾಗೋಡಿಗೆ ಹೋಗಿ ಉಪವಾಸ ಹೂಡಿ, ರೈತರನ್ನು ಸಮರಕ್ಕೆ ಇಳಿಸಿ, ಪ್ರಥಮ ಸತ್ಯಾಗ್ರಹಿಯಾಗಿ ಬಂಧಿತರಾದರು.

ಗೋಪಾಲ ಹಳ್ಳಿ-ಹಳ್ಳಿಗೆ ಕಾಲುನಡಿಗೆಯಲ್ಲಿ ಪ್ರವಾಸ ಮಾಡಿ ತನ್ನ ಸ್ಫೂರ್ತಿದಾಯಕ ಮಾತುಗಳಿಂದ ಗೇಣಿದಾರ ರೈತರನ್ನು ಶತ – ಶತಮಾನದ ಚಳಿಯ ಬೊಂತೆಯ ಕಂಬಳಿ ಕೊಡವಿ ಹೋರಾಟಕ್ಕೆ ಇಳಿಯುವಂತೆ ಮಾಡುತ್ತಿದ್ದ.

ಪೊಲೀಸರೊಡನೆ ಆತ ಕಣ್ಣಾ ಮುಚ್ಚಾಲೆ ಆಡುತ್ತಿದ್ದಾಗ, ಒಮ್ಮೆ ಗೋಪಾಲ ಇಳಿದುಕೊಂಡಿದ್ದ ಹುಲ್ಲಿನ ಮನೆಗೆ ಪೊಲೀಸರು ಮುತ್ತಿಗೆ ಹಾಕಿದರು. ಮನೆ ಶೋಧಿಸಿದರು. ಸಬ್‌ಇನ್ಸ್‌ಪೆಕ್ಟರ್ ಹೊರಕ್ಕೆ ಗೋಪಾನನ್ನು ಬರಹೇಳಿ “ಸಬರ ಮಾಡ್ತೀಯಾ… ಸಬರ’’ ಎಂದು ಆ ಮುಸ್ಲಿಮ್ ಅಧಿಕಾರಿ ಲಾಠಿ ಕೈಯಲ್ಲಿ ತಿರುವುತ್ತ ಹೇಳಿದಾಗ ಆತ “ಸಬರ ಅಲ್ಲವೋ…. ಮಹರಾಯ, ಅದು ಶಿಬಿರ. ಶಿಬಿರ. ಇಳಿತಿದ್ದೀನಿ ತಾಳು. ಯಾಕೆ ಅಷ್ಟು ಅವಸರ ಮಾಡ್ತಿಯಾ?’’ ಎಂದರು ಹಾಸ್ಯವಾಗಿ. ಹೀಗೆ ಆತ ಎಂದೂ ರಾಜಕೀಯ ಜೀವನದಲ್ಲಿ ಅಂಜಿ-ಅಳುಕಿದುದೇ ಇಲ್ಲ. ಅಂಥ ದೀಮಂತ ನಮ್ಮ ಗೋಪಾಲ.

ಗೋಪಾಲ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರೂ ಎಂದೂ ಮಾಸಲು ಸುಕ್ಕು ಬಟ್ಟೆ ಉಟ್ಟ “ದ್ರಾಬೆ’’ ಯಂತೆ ಕಂಡುದೇ ಇಲ್ಲ. ತಾನೇ ಜುಬ್ಬ ಪಂಚೆ ಒಗೆದು ಇಸ್ತ್ರೀ ಮಾಡಿಸಿಕಂಡೇ ಉಟ್ಟಾನು. ಪಂಚೆ ಉಡಲು ಕಚ್ಚೆ ತೀಡಲು ೧೦-೧೫ ನಿಮಿಷಗಳೇ ಬೇಕು ಆತನಿಗೆ.

ಕಾಗೋಡು ಸತ್ಯಾಗ್ರಹದ ಮಧ್ಯ ಹಂತದಲ್ಲಿ ಗೋಪಾಲ, ಬಾ.ಸು. ಕೃಷ್ಣ, ಜೈಲಿನ ಒಳಗೆ ಇದ್ದ ನೂರಾರು ಜನರಿಗೆ ಊಟದ ವ್ಯವಸ್ಥೆ ಸರಿ ಇಲ್ಲದೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಐದು ದಿನಗಳು ಕಳೆದಿದ್ದಿತು. ಶಿವಮೊಗ್ಗೆಯ ಶ್ರೀ ಎಸ್. ರಾಮಯ್ಯನವರು “ನೀರು ಮುಟ್ಟದೆಯೇ ನಿರಶನ ವ್ರತ’’ ಕೈಗೊಂಡು ಕಂಗಾಲು ಸ್ಥಿತಿ ಮುಟ್ಟಿ, ಆಸ್ಪತ್ರೆಗೆ ಸೇರಿಸಲಾಗಿದ್ದಿತು.

ಶಿವಮೊಗ್ಗದಲ್ಲಿ ಪ್ರತಿಭಟನಾ ಪ್ರದರ್ಶನ ಏರ್ಪಾಡು ಮಾಡಲಾಗಿತ್ತು. ಬೆಳಿಗ್ಗೆ ೯ ಗಂಟೆಗೆ ಶಿವಮೊಗ್ಗೆಯ ಕೆಳಪೇಟೆಯಲ್ಲಿದ್ದ ಸಮಾಜವಾದಿ ಪಕ್ಷದ ಕಛೇರಿಯಿಂದ ಪ್ರತಿಭಟನಾ ಮೆರವಣಿಗೆಗೆ ನಾನು ಭಿತ್ತಿ ಪತ್ರ ತಯಾರು ಮಾಡಿ ಸಿದ್ಧವಾಗಿದ್ದರೂ ಎಂಟು ಮುಕ್ಕಾಲು ಗಂಟೆಯಾದರೂ ಗೆಳೆಯರ ಸುಳಿವೇ ಇಲ್ಲ!

ಗೋಪಾಲ ಮತ್ತು ಇತರ ಗೆಳೆಯರೆಲ್ಲ ದುರ್ಗಿಗುಡಿ ಶ್ರೀ ಮಾರುತಿ ಪ್ರೆಸ್‌ನಲ್ಲಿ ಸ್ನಾನ-ಶೃಂಗಾರ ಸಿದ್ಧತೆಯಲ್ಲಿದ್ದರು. ನಾನು ಹೋಗಿ ಕಾಣಿಸಿಕೊಂಡು “ಏನ್ರೋ ಗೋಪಾಲ! ಜೈಲಿನಲ್ಲಿ ಗೆಳೆಯರೆಲ್ಲ ಉಪವಾಸ ಸಾಯುತ್ತಿದ್ದಾರೆ. ಇಲ್ಲಿ ನಿಮ್ಮ ಶೃಂಗಾರ ಲಹರಿ’’ ಎಂದು ಗುಡುಗಿದೆ.

ಗೋಪಾಲ “ಅಯ್ಯಂಗಾರಿ ಬಂದ್ರಪ್ಪೋ, ನಡೀರಪ್ಪೋ ಬೇಗ’’ ಎಂದು ಹೇಳಿದನೇ ಹೊರತು ತಾನು ಮಾತ್ರ ಕಚ್ಚೆ ತೀಡುವುದು ಬಿಟ್ಟಿರಲಿಲ್ಲ. ಆಗ ನಾನು ಜೋರಾಗಿ ನಕ್ಕುಬಿಟ್ಟೆ.

ಪಕ್ಷದ ಕಛೇರಿ ಹತ್ತಿರ ಬಂದರೆ ಇದ್ದವರೇ ಹತ್ತು ಜನ. ಗೋಪಾಲ, “ಭಿತ್ತಿ ಪತ್ರ ಬಿದಿರುತಟ್ಟೆಯೇ ಹೆಚ್ಚಿಗೆ ಇದೆಯಲ್ಲಾ ಅಯ್ಯಂಗಾರ್ರೆ’’ ಎಂದ. “ಹಿಂದೆ ಮುಂದೆ ಎಲ್ಲಾ ಪೋಸ್ಟರ್ ನೇತುಹಾಕ್ಕೊಳ್ಳಿ, ದಾರ ಕಟ್ಟಿದೆ’’ ಎಂದೆ ನಾನು. ಆತನೂ ಕೂಡ ಹಿಂದೆ ಮುಂದೆ ಬಿದಿರುತಟ್ಟೆ ಪೋಸ್ಟರ್ ನೇತು ಹಾಕಿಕೊಂಡು ನಾಯಕತ್ವಕ್ಕೆ ಸಿದ್ಧನಾದ.

ಘೋಷಣೆ ಕೂಗುವುದರಲ್ಲಿ ಬಾ.ಸು. ಶ್ರೀನಿವಾಸ ಮತ್ತು ನಾನು ಎತ್ತಿದ ಕೈ. ನಮ್ಮದು “ರಾಕ್ಷಸ’’ ಕೂಗು ಪ್ರಾರಂಭವಾಯಿತು. “ಕುಂಭಕರ್ಣ ಸರಕಾರಕ್ಕೆ ಧಿಕ್ಕಾರ’’ ಮುಂತಾದ ಘೋಷಣೆ. ಪೇಟೆ ಜನವೆಲ್ಲಾ ನೋಡುತ್ತಿದ್ದರು. ಜಿಲ್ಲಾಧಿಕಾರಿ ಮನೆಗೆ ಹೋಗಿ ಹತ್ತೇ ಜನ ಮುತ್ತಿಗೆ ಹಾಕಿ “ಕುಂಭಕರ್ಣ ಏಳು… ಏಳು’’ ಎಂಬ ಘೋಷಣೆಗೆ ಜಿಲ್ಲಾಧಿಕಾರಿ ಊಟ ಮಾಡುತ್ತಿದ್ದ ಕೈಯಲ್ಲೇ ಓಡಿ ಬಂದ. ಇದು ನನ್ನ ಮನೆ. ಊಟ ಮಾಡುತ್ತಿದ್ದೇನೆ. ಎಂದ ಡಿ.ಸಿ. ಆಗ ಗೋಪಾಲ, “ಏನಯ್ಯ! ಊಟ ಮಾಡುತ್ತಿದ್ದೀಯ? ನಾಚಿಕೆಯಾಗೊಲ್ವ… ನಿನಗೆ? ಹಾಗೆ ಹೊರಡುತ್ತೀಯೋ… ಇಲ್ಲವೋ? ನಾವು ಬಾಯಿ-ಬಾಯಿ ಬಡಿದುಕೊಂಡು ಇಲ್ಲಿಯೇ ಠಾಣ ಹಾಕೋದೋ? ಎಂದು ಗರ್ಜಿಸಿದ. ಡಿ.ಸಿ. ಬಾಲಮುದುರಿಕೊಂಡು ಜೈಲಿಗೆ ಬಂದು ಊಟದ ವ್ಯವಸ್ಥೆ ಸುಧಾರಿಸುವಂತೆ ಆಜ್ಞೆಮಾಡಿದ.

ಕಾಗೋಡು ಸತ್ಯಾಗ್ರಹದ ರೈತ ಜಾಗೃತಿಯ ಫಲವಾಗಿ ಸಾಗರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಶಾಸನ ಸಭೆಗೆ ಸ್ಪರ್ಧಿಸಿದ್ದ ಗೋಪಾಲ. ಗೆಲುವಿನ ಮೂಲಕ ಶ್ರೀ ಗೋಪಾಲಗೌಡರಾಗಿ ಹೊರಬಂದ. ಜನತೆಯ ಕೊರಗು ಸಮಾಜವಾದದ ಕೂಗನ್ನು ಶಾಸನ ಸಭೆಯಲ್ಲಿ ಪ್ರತಿಧ್ವನಿಸುವಂತೆ ಮಾಡಿ ಕೀರ್ತಿವಂತನಾಗಿ ಬಾಳಿದ.

ಕರ್ನಾಟಕದ ಏಕೀಕರಣದ ಬಗ್ಗೆ ಶಾಸನ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಪ್ರಾರಂಭದಲ್ಲಿ ಮೈಸೂರು, ಮೈಸೂರಾಗಿಯೇ ಉಳಿಯಬೇಕೆಂಬ ಸಂಕುಚಿತ ಸ್ವಾರ್ಥಿಗಳ ವಾದಕ್ಕೆ ಪುಷ್ಟಿದೊರೆಯುವದೇನೋ ಎಂಬ ಗಂಡಾಂತರ ಪರಿಸ್ಥಿತಿ. ಹಳೇ ಮೈಸೂರು ಗೌಡರುಗಳೆಲ್ಲಾ ಏಕೀಕರಣದ ವಿರೋಧಿಗಳಾಗಿದ್ದರು. ಶ್ರೀ ಕಡಿದಾಳ್‌ರವರೂ ಕೂಡ ವಿರೋಧವಾಗಿದ್ದರು. ಏಕೀಕರಣದ ಮಸೂದೆ ಬೆಳಕಿಗೆ ತಂದ ಮುಖ್ಯಮಂತ್ರಿ ಶ್ರೀ ಕೆಂಗಲ್ ಕಣ್ಣು ಕಣ್ಣು ಬಿಡುವ ಸ್ಥಿತಿ.

ಗೋಪಾಲಗೌಡರು ಏಕಾಂಗ ವೀರ. ಏಕೀಕರಣ ಮಸೂದೆ ಸಮರ್ಥನೆಗೆ ತನ್ನ ವಾಕ್ ಬಿಲ್ಲುಬಾಣಗಳಿಂದ ಸಿದ್ಧನಾಗಿ ಎದ್ದು ನಿಂತ. ಕನ್ನಡ ನಾಡಿನ ಇತಿಹಾಸ, ವಿಸ್ತೀರ್ಣ, ಕಲೆ, ಸಾಹಿತ್ಯ, ಸಂಗೀತ ಎಲ್ಲದರ ಸಮೃದ್ಧ ವಿವರಗಳನ್ನೊಳಗೊಂಡ ಗೋಪಾಲಗೌಡರ ಚರಿತ್ರಾರ್ಹ ಚಿರಸ್ಮರಣೀಯ ಭಾಷಣ. ಭಾಷಾವಾರು ಪ್ರಾಂತ ತತ್ವಗಳನ್ನು ಗಾಂಧೀಜಿಯವರೇ ಒಪ್ಪಿದ ರೆಂಬುದನ್ನು ನೆನಪಿಗೆ ತಂದು, ಒಂದೇ ತಾಯಿನುಡಿ ಆಡುವವರು ಒಟ್ಟಿಗೆ ಕೂಡಿ ಬದುಕಿದರೆ, ಜನಸಾಮಾನ್ಯರ ಬಾಳು ಹಸನಾದೀತು ಎಂದು ತಾತ್ವಿಕ ಸಮರ್ಥನೆ. ಅಂದು ಗೌಡರ ಭಾಷಣ ಕೇಳುತ್ತಿದ್ದವರಿಗೆ ನೃಪತುಂಗ, ಕೃಷ್ಣದೇವರಾಯರ ಕಾಲದ ಕಲೆ, ಸಾಹಿತ್ಯ, ಸಂಗೀತ ವೈಭವದ ಕನಸು ಚಿತ್ರವತ್ತಾಗಿ ಕಾಣುತ್ತಿದ್ದಂತೆ ಇತ್ತು. ಗೋಪಾಲಗೌಡರ ವಾದಸಮರ್ಥನೆಯಿಂದ ಅಂದಿನ ಶಾಸನ ಸಭೆಯ ವಾತಾವರಣವೇ ಬದಲಾಗಿ ಕನ್ನಡನಾಡು ಒಂದಾಯಿತೆಂದರೆ ಉತ್ಪ್ರೇಕ್ಷೆಯಾಗಲಾರದು. ಏಕೀಕರಣಕ್ಕಾಗಿ ಜೀವನವೆಲ್ಲ ಶ್ರಮಿಸಿದ ಶ್ರೀ ಎಸ್. ನಿಜಲಿಂಗಪ್ಪನವರು ಗೋಪಾಲನನ್ನು ಬಾಚಿತಬ್ಬಿ ಬೆನ್ನು ಚಪ್ಪರಿಸಿದ ದೃಶ್ಯ ಚಿರಸ್ಮರಣೀಯ. ಅವರ ಜೀವನದಲ್ಲಿಯೇ ಸಾಧಿಸಿದ ವಿಜಯದ ಮತ್ತೊಂದು ಮೈಲಿಗಲ್ಲು.

ಚದುರಿ ಹೋಗಿದ್ದ ಕನ್ನಡಮ್ಮನ ಕಂಠೀಹಾರವನ್ನು ತನ್ನ ಮಾತಿನ ಚಾತುರ್ಯದಿಂದ ಒಂದುಗೂಡಿಸಿ, ತೊಡಿಸಿದ ಕೀರ್ತಿ ಅಂದಿನ ಯುವಕ ನೇತಾರ ಶ್ರೀ ಗೋಪಾಲಗೌಡರಿಗೆ ಸಲ್ಲುತ್ತದೆ.

೧೯೫೪ರಲ್ಲಿರಬೇಕು: ಶಿಕಾರಿಪುರದ ತಾಳಗುಂದದಲ್ಲಿ ದಲಿತವರ್ಗದ ಹೆಣ್ಣು ಮಕ್ಕಳ ಮೇಲೆ ಪೋಲೀಸರ ಅತ್ಯಾಚಾರ ನಡೆಯಿತು. ಆಗ ಪಾನನಿರೋಧ ಜಾರಿಯಲ್ಲಿತ್ತು. ತಾಳಗುಂದದ ಬೋವಿ ಜನಾಂಗ “ಹಟ್ಟಿಹಬ್ಬ’’ದೊಂದು ಸಂಪ್ರದಾಯದಂತೆ ತಾವು ಕುಡಿದು ಹಬ್ಬ ಆಚರಿಸುವುದಾಗಿ ಸ್ಥಳೀಯ ಪೊಲೀಸರಿಗೆ ತಿಳಿಸಿ, ಅಂದು ರಾತ್ರಿ ಹಬ್ಬದ ಸಡಗರದಲ್ಲಿದ್ದರು. ಜಿಲ್ಲಾ ಪಾನನಿರೋಧ ದಳದ ಎಸ್.ಪಿ.ಗೆ ಸುದ್ದಿ ಹೋಗಿ ಅವರು ತಮ್ಮ ದಳದೊಡನೆ ತಾಳಗುಂದಕ್ಕೆ ಬಂದು ಹಬ್ಬದ ಮೋಜಿನಲ್ಲಿ ಕುಡಿದಿದ್ದ ಬೋವಿ ಜನಾಂಗದ ಹಟ್ಟಿಗೆ ನುಗ್ಗಿದರು. ಪೂರ್ವಭಾವಿ ಮಾಮೂಲಿ ಕೊಟ್ಟು ವ್ಯವಸ್ಥೆ ಮಡಿದ್ದರೂ ಪೊಲೀಸರು ಬಂದು ಹೆಂಗಸರ ಮೇಲೆ ಕೈ ಮಾಡಿದುದನ್ನು ಸಹಿಸದೆ ಪೋಲೀಸರನ್ನು ಬೋವಿಗಳು ಥಳಿಸಿದರು. ಎಸ್.ಪಿ.ಗೆ ಹೊಡೆದು, ಹೆಡೆಮುರಿಕಟ್ಟಿ, ಕೆರೆಯ ಹತ್ತಿರ ಹಾಕಿದರು.

ಸುದ್ದಿ ತಿಳಿದ ಜಿಲ್ಲಾ ರಕ್ಷಣಾಧಿಕಾರಿ ಮಾರನೆ ದಿನ ನೂರಾರು ಪೊಲೀಸ್ ಪಡೆಯೊಡನೆ ಬಂದು ತಾಳಗುಂದದ ಮೇಲೆ ದಾಳಿ ನಡೆಸಿದರು. ಗಂಡಸರೆಲ್ಲ ಹೆದರಿ ಗುಡ್ಡ ಬಿದ್ದಿದ್ದರು. ಪೊಲೀಸ್ ಪಡೆ ದಲಿತರ ಮನೆಗಳಿಗೆ ನುಗ್ಗಿ ಇದ್ದದ್ದನ್ನೆಲ್ಲಾ ದೋಚಿ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದರು. ಇಪ್ಪತ್ತೆರಡು ದಿನ ಆ ಗ್ರಾಮವಾಸಿಗಳ ಮೇಲೆ ಹಲ್ಲೆ ನಡೆಯಿತು.

ಈ ಸುದ್ದಿ ತಿಳಿದ ನಾನು ತಾಳಗುಂದಕ್ಕೆ ಬಹಳ ಪ್ರಯಾಸದಿಂದ ಭೇಟಿಕೊಟ್ಟೆ. ಆಗ ನಾನು “ಸತ್ಯ’’ ಪತ್ರಿಕೆಯ ಸುದ್ದಿಗಾರನಾಗಿದ್ದೆ. ಅಲ್ಲಿನ ಪ್ರತಿ ಮನೆಯಲ್ಲಿನ ದಾರುಣ ಕರುಣಕಥೆಯನ್ನು ತಿಳಿದೆ. ಹನ್ನೆರಡು ಜನ ಹೆಣ್ಣುಮಕ್ಕಳು ಪೋಲೀಸರು ತಮ್ಮ ಮೇಲೆ ಅತ್ಯಾಚಾರ ನಡೆಸಿದ ವಿವರ ಹೇಳಿದರು. ಇತರರ ತಮ್ಮ ಮನೆಯ ಕಾಳು-ಕೋಳಿ-ಕುರಿ ಹಾಗೂ ಚೂರುಪಾರು ಚಿನ್ನವನ್ನು ಪೊಲೀಸರು ದೋಚಿದುದನ್ನು ಹೇಳಿದರು.

ನಾನು ಈ ವಿಷಯ-ವಿವರಗಳನ್ನೆಲ್ಲ, ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳ ದಾರುಣ ಕತೆಯೊಡನೆ ರಾಜ್ಯ ಪತ್ರಿಕೆಗಳಿಗೆಲ್ಲಾ ಹೇಳಿಕೆಯಿಂದ ಸಾದರಪಡಿಸಿದೆ. ಆಗ ಶ್ರೀ ಶೇಷಪ್ಪನವರು ಜೀವಂತ ಇದ್ದರು. ನಾನು ಕಳುಹಿಸಿದ ಹೆಣ್ಣು ಮಕ್ಕಳ ಹೆಸರು, ಅತ್ಯಾಚಾರದ ವಿವರಗಳನ್ನು ಹಾಗೆಯೆ ‘ಕಿಡಿ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಸರಕಾರ ಈ ಬಗ್ಗೆ ವಿಚಾರಣೆ ಪ್ರಾರಂಭಿಸದಿದ್ದರೆ ಉಪವಾಸ ಪ್ರಾರಂಭಿಸುವುದಾಗಿ ಹೇಳಿಕೆ ನೀಡಿದೆ. ಸೋಷಲಿಸ್ಟ್ ಪಕ್ಷದ ಮುಖಂಡರಿಗೂ ಅಲ್ಲಿನ ಪರಿಸ್ಥಿತಿಯನ್ನೂ, ನನ್ನ ನಿಲುವನ್ನೂ ತಿಳಿಸಿದ್ದೆ.

ಆಗ ಶಾಸಕರಾಗಿದ್ದ ಶ್ರೀ ಗೋಪಾಲಗೌಡರು ವಿಚಾರದ ಗಂಭೀರತೆಯನ್ನು ಅರಿತು ತಾಳಗುಂದಕ್ಕೆ ಧಾವಿಸಿ ಬಂದರು. ಆ ವೇಳೆಗೆ ಡಿ.ಐ.ಜಿ. ಆಗಿದ್ದ ಚಾಂಡಿಯವರು ತಾಳಗುಂದಕ್ಕೆ ಬಂದು ವಿಚಾರಣೆ ನಡೆಸುತ್ತಿದ್ದು, ಶ್ರೀ ಗೌಡರಿಗೆ ನನ್ನ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಸೂಕ್ಷ್ಮ ತಿಳಿಸಿದರು.

ಗೋಪಾಲನನ್ನು ತಾಳಗುಂದದಲ್ಲಿ ಮನೆಮನೆಗೆ ಕರೆದುಕೊಂಡು ಹೋಗಿ, ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳನ್ನು ಕಂಡು ಅವರು ತಮ್ಮ ಮೇಲೆ ಪೊಲೀಸರು ಹಾಕಿದ ಬೆದರಿಕೆ ಬಲಾತ್ಕಾರ – ಅತ್ಯಾಚಾರದ ಅಮಾನುಷ ರೀತಿಯನ್ನು ವಿವರಿಸಿ ಹೇಳುತ್ತಿದ್ದಾಗ, ಎರಡೇ ಪ್ರಕರಣದಲ್ಲಿ ವಿರ ಕೇಳುವ ಹೊತ್ತಿಗೆ ಗೋಪಾಲಗೌಡರು “ಸೀತಾರಾಮ್! ನಾನು ಇನ್ನು ಕೇಳಲು ಸಾಧ್ಯವಿಲ್ಲ. ಎಂಥ ರಾಕ್ಷಸೀ ಕೃತ್ಯ’’ ಎಂದು ಮಗುವಿನಂತೆ ಕಣ್ಣೀರು ಸುರಿಸುತ್ತಾ ಅಳುವುದಕ್ಕೆ ಪ್ರಾರಂಭಿಸಿದರು. ಕೊನೆಗೆ ನಾನೇ ಅವರನ್ನು ಸಂತೈಸಬೇಕಾಯಿತು. ಕರುಣೆಯೇ ಮೈವೆತ್ತ ಗೋಪಾಲ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿಯಾಗಿದ್ದ : “ಅಯ್ಯಂಗಾರ್! ನಾವು ಪಕ್ಷದಿಂದ ಈ ಅಮಾನುಷ ಕೃತ್ಯದ ಬಗ್ಗೆ ಹೋರಾಡುತ್ತೇವೆ. ನಾನು ಶಾಸನಸಭೆಯಟಲ್ಲಿ ಈ ಬಗ್ಗೆ ಹಗರಣವನ್ನೇ ಮಾಡುತ್ತೇನೆ. ನೀವು ಉಪವಾಸ ನಿಲ್ಲಿಸಿ.’’ ನಾನು ಉಪವಾಸ ಪ್ರಾರಂಭಿಸಿ ಮೂರು ದಿನಗಳಾಗಿತ್ತು. ಅನಂತರ ಗೋಪಾಲಗೌಡರು ಶಾಸನ ಸಭೆಯಲ್ಲಿ ಈ ಅತ್ಯಾಚಾರದ ಬಗ್ಗೆ ದೊಡ್ಡ ಹಗರಣವನ್ನೇ ಮಾಡಿದರು.

ಆದರೆ, ಡಿ.ಐ.ಜಿ. ವರದಿಯನ್ನು ಅಂದಿನ ಗೃಹಮಂತ್ರಿ ಸಿದ್ಧವೀರಪ್ಪನವರು ಶಾಸನ ಸಭೆಯ ಮುಂದೆ ಇಡದೆ ತಾಳಗುಂದ ಅತ್ಯಾಚಾರ ಪ್ರಕರಣ ಕಟ್ಟು ಕತೆ, ರಾಜಕೀಯ ಉದ್ದೇಶದಿಂದ ಪ್ರೇರಿತ ಎಂದು ಸುಳ್ಳು ಹೇಳಿ, ಈ ಪ್ರಕರಣವನ್ನೇ ಮುಚ್ಚಿ ಹಾಕಿದರು. ಆದರೆ ಅದೇ ಸಿದ್ಧವೀರಪ್ಪನವರು ವಿರೋಧಪಕ್ಷದಲ್ಲಿದ್ದು ಬೆಲ್ಲದ ತಯಾರಿಕೆ ನಿಷೇಧ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದ ಪೊಲೀಸ್ ಅತ್ಯಾಚಾರಕ್ಕೆ ಬೊಬ್ಬೆ ಇಟ್ಟಾಗ ಅಂದಿನ ಗೃಹಮಂತ್ರಿ ರಾಮರಾಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಇತ್ತು ಮಾನವ ಮೌಲ್ಯ ಎತ್ತಿ ಹಿಡಿದಿದ್ದು ನೆನಪಿಗೆ ಬರುತ್ತದೆ.

ಮತ್ತೊಂದು ಪ್ರಕರಣ ಶಿವಮೊಗ್ಗೆಯ ಹತ್ತಿರದ ಜಯಂತಿ ಗ್ರಾಮದಲ್ಲಿ. ಹರಿಜನರು ಬಗರ್ ಹುಕ್ಕುಂ ಸಾಗುವಳಿ ಮಾಡಿದ ಸುಮಾರು ೬೦ ಎಕರೆ ಭೂಮಿಯ ಮೇಲೆ ಸವರ್ಣೀಯರು ನೂರಾರು ದನಗಳನ್ನು ಒಂದೇ ರಾತ್ರಿ ಬಿಟ್ಟು ಮೇಯಿಸಿದ ಪ್ರಕರಣದ ಬಗ್ಗೆ ಗಮನ ಸೆಳೆಯಲು, ನಾನು ಮತ್ತು ಬದರಿನಾರಾಯಣ್ ಆಗಿನ ಜಿಲ್ಲಾಧಿಕಾರಿಯಾಗಿದ್ದ ಆದಿರಾಜಯ್ಯನವರಲ್ಲಿ ದೂರಿತ್ತು. ರಕ್ಷಣೆ ಕೋರಲು ಅವರ ಕೋಣೆಗೆ ಹೋಗಿದ್ದೆವು. ಆಗ ಶಾಸಕರಾಗಿದ್ದ ಗೋಪಾಲ ಗೌಡರೂ ಅಲ್ಲಿಯೇ ಕುಳಿತಿದ್ದರು. ನಾನು ಆಗ ಸಮಾಜವಾದಿ ಪಕ್ಷ ತ್ಯಜಿಸಿ, ಕಾಂಗ್ರೆಸ್ ಪಾಳಯಕ್ಕೆ ಸೇರಿದ್ದೆ.

ಜಿಲ್ಲಾಧಿಕಾರಿಗಳು ರಕ್ಷಣೆ ಕೊಡುವ ಮಾತಿರಲಿ “ಹರಿಜನರಾದರೇನು ಬಗರ್ ಹುಕ್ಕುಂ ಸಾಗುವಳಿ ಮಾಡಿದರೆ ಏನು ಮಾಡಲು ಸಾಧ್ಯ? ಅಲ್ಲದೆ ಅವರು ವಾಸಿಸುವ ಜಾಗವೂ ಬಗರ್ ಹುಕ್ಕುಮಂ ಆಕ್ರಮಣ. ಅದನ್ನೂ ಬಿಡಿಸಬೇಕಾದೀತು. ಇಲ್ಲವೇ ಬೆಂಕಿ…’’ ಎನ್ನುವುದೇ ತಡ. ಕೇಳುತ್ತಾ ಕುಳಿತಿದ್ದ ಗೌಡರು ಕೈಯಲ್ಲಿದ್ದ ಕೋಲು ಎತ್ತಿ ಡಿ.ಸಿ. ಗಲ್ಲಕ್ಕೆ ತಿವಿದು “ಏನು ಹೇಳ್ದೆ! ಇನ್ನೊಂದು ಸಾರಿ ಹೇಳು. ಗುಡಿಸಲಿಗೆ ಬೆಂಕಿ ಹಚ್ಚುತ್ತೀಯಾ? ನಾವೇನು ಮಾಡುತ್ತೇವೆ ಗೊತ್ತೆ…? ನಿನ್ನನು ಆ ಬೆಂಕಿಯಲ್ಲಿ ಹಾಕುತ್ತೇವೆ. ಅಧಿಕಾರದ ಅಮಲಿನಲ್ಲಿ ಮಾತಾಡುತ್ತೀಯ ಎಚ್ಚರಿಕೆ’’ ಎಂದು ಗುಡುಗಿದರು. ಹೀಗೆ ಡಿ.ಸಿ.ಗೆ ದಂಡ ತೋರಿಸಿ ದಲಿತರ ರಕ್ಷಣೆಗೆ ಸಿದ್ಧನಾಗಿ ನಿಂತ ಧೀರ ಗೋಪಾಲ. ಆ ಸಮಸ್ಯೆ ದಲಿತರ ಪರವಾಗಿಯೇ ತೀರ್ಮಾನವಾಯಿತು.

ಗೆಳೆಯ ಗೋಪಾಲ ಪರಿಸರದಿಂದ ಕೆಲವು ವ್ಯಸನಗಳಿಗೆ ತುತ್ತಾಗಿ ಪಾರ್ಶ್ವವಾಯು ಹೊಡೆದು ಚೇತರಿಸಿಕೊಂಡರು. ಮತ್ತೊಂದು ಹೊಡೆತದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಹಳ ಆತಂಕ ಸ್ಥಿತಿಯಲ್ಲಿ ಇದ್ದಾಗ, ಆತನನ್ನು ನೋಡಲು ನಾನು ಬದರಿನಾರಾಯಣ್‌ರವರ ಜೊತೆಯಲ್ಲಿ ಹೋದೆ. ಆಸ್ಪತ್ರೆಯ ಸ್ಪೆಷಲ್ ವಾರ್ಡ್‌ನಲ್ಲಿ ಗೋಪಾಲ ಮಂಚದ ಮೇಲೆ ಚಲಿಸಲಾಗದೆಯೇ ಮಲಗಿದ್ದುದ ಕಂಡು ಕರುಳೇ ಕಿತ್ತು ಬರುವಂತಾಯಿತು.

ನಾವು ಹತ್ತಿರ ಹೋದಾಗ ಆತ ನಮ್ಮನ್ನು ದೃಷ್ಟಿಸಿ ನೋಡಿದರು. ಮಾತನಾಡಲು ಆಗುತ್ತಿರಲಿಲ್ಲ. ಗೋಪಾಲನ ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಸುರಿಯಲು ಪ್ರಾರಂಭವಾಯಿತು. ನಾನು ಅವರ ಬಲ ಅಂಗೈ ಹಿಡಿದೆ, ಗಟ್ಟಿಯಾಗಿ ಹಿಡಿದುಕೊಂಡರು. ನನಗೆ ದುಃಖ ತುಂಬಿ ಬಂದು ಕಣ್ಣಿನಲ್ಲಿ ನೀರು ತುಂಬಿತು. ಎಲ್ಲೆಲ್ಲೂ ನೀರವ ಎಲ್ಲಾ ಶೂನ್ಯ.

ಮಾತಿನ ಶಕ್ತಿಯಿಂದಲೇ ನೂತನ ಸಮಾಜವನ್ನು ಕಟ್ಟಲು ಹೋರಾಡಿದ ಗೆಳೆಯ ಗೋಪಾಲನಿಗೆ, ಮಾತಿನ ಮಂತ್ರಶಕ್ತಿಯೇ ಉಡುಗಿದ್ದಿತು. ಆತನ ಕಣ್ಣಿನ ಭಾವ ನೋಡಿದರೆ “ಅಯ್ಯೋ ಪಾಪ’’ ಎಂದೆನಿಸಿಕೊಳ್ಳುವ ಸ್ಥಿತಿಗೆ ಬಂದೆನಲ್ಲ ಎಂಬ ಕೊರಗು ಇರುವಂತೆ ತೋರುತ್ತಿತ್ತು.

ಗೋಪಾಲ ಎಂದೂ ಇನ್ನೊಬ್ಬರ ಕರುಣೆಅನುಕಂಪದಿಂದ ಬದುಕಿದವನೇ ಅಲ್ಲ. ಆತ ಹುಲಿಯಾಗಿ ಬಾಳಿದವ. ಅದೇ ಅವರ ಕಡೆಯ ಕಾಲಕ್ಕೆ ಇತರರ ಸಹಾಯವನ್ನೇ ಅವಲಂಬಿಸುವ ಗತಿ ಬಂದಿತಲ್ಲಾ ಎಂಬುದೇ ಅವರ ಕಡೆಯ ಕೊರಗಾಗಿದ್ದಿತೇನೋ? ಧೀರನಾಗಿ ನಾಡಿಗೆ ಸಮಾಜಕ್ಕೆ ಭವಿಷ್ಯ ತಿದ್ದಲು ಹೊರಟವನಿಗೆ, ದೀನನಾಗಿ ಹಾಸಿಗೆ ಹಿಡಿದುದು ದಾರುಣ ವ್ಯಥೆಯೇ ಆಗಿರಬೇಕು. ನನಗೆ ಅದೇ ಗೆಳೆಯ ಗೋಪಾಲನ ಕಡೆಯ ದರ್ಶನ.

ಗೋಪಾಲ ಸುತ್ತಲೂ ಬೆಳಕನ್ನು ಚೆಲ್ಲಿ ಸಾರ್ಥಕವಾಗಿ ಬದುಕಿ-ಬೆಳಗಿದ ದೊಡ್ಡ ಆದರ್ಶಜೀವಿ.