‘ಕಾಗೋಡು ಸತ್ಯಾಗ್ರಹ’, ‘ಉಳುವವನೇ ಭೂಮಿಯ ಒಡೆಯ’ ಎಂಬ ಶಬ್ದಗಳನ್ನು ಕೇಳುವಾಗ, ಭೂಸುಧಾರಣೆ ಶಾಸನದ ನೆನಪು ಸಹಜವಾಗಿ ಮೂಡುತ್ತದೆ. ಭೂಸುಧಾರಣೆಯ ಮಾತೆತ್ತಿದಾಗ ಕೀರ್ತಿಶೇಷ ಗೋಪಾಲಗೌಡರ ಹೆಸರು ಹಚ್ಚಹಸುರಾಗಿ ಕಣ್ಣುಮುಂದೆ ನಿಲ್ಲುತ್ತದೆ.

‘ಕಾಗೋಡು ರೈತ ಸತ್ಯಾಗ್ರಹ’ ನಾಡಿನ ಇತಿಹಾಸದಲ್ಲಿ ಒಂದು ಚಿರಸ್ಮರಣೀಯ ಅಧ್ಯಾಯ. ನಾಡಿನ ಬಹುಪಾಲು ರೈತಜನತೆಯ, ಜೀವನ ಪ್ರಶ್ನೆಯನ್ನು ಮೂಲಭೂತವಾಗಿ ಕೆದಕಿದ ಘಟನೆ. ಭೂಸುಧಾರಣೆ ಶಾಸನದ ಸ್ಫೂರ್ತಿಯ ನೆಲೆ. ಈ ಐತಿಹಾಸಿಕ ಸತ್ಯಾಗ್ರಹದ ನೇತಾರ ಶಾಂತವೇರಿ ಗೋಪಾಲಗೌಡರು. ಗೌಡರನ್ನು ಆದರ್ಶವ್ಯಕ್ತಿಯನ್ನಾಗಿ ಕಡೆದಿದ್ದು, ಜನನಾಯಕರಾಗಿ ಮಾಡಿದ್ದು ಕಾಗೋಡು ಚಳವಳಿಯೇ.

ಕಾಗೋಡು ಸತ್ಯಾಗ್ರಹ ಪ್ರಾರಂಭವಾದದ್ದು ಹೇಗೆ? ಅದರ ಹಿಂದೆ ಯಾವ ಮಹತ್ವದ ಘಟನೆಗಳು ಸಂಭವಿಸಿದವು. ಆಗಿನ ಪರಿಸ್ಥಿತಿ ಹೇಗಿತ್ತು? ಸತ್ಯಾಗ್ರಹದಲ್ಲಿ ಭಾಗವಹಿಸಿದವರು ಯಾರು ಯಾರು? ಅದರಿಂದ ಆದ ಪರಿಣಾಮಗಳೇನು ಎಂಬುದರ ವಿವರ ಮುಂದಿನ ಪೀಳಿಗೆಗೆ ತಿಳಿಯಲಿ ಎಂಬುದೇ ಆಗಿದೆ. ಚಳವಳಿ ಪ್ರಾರಂಭವಾಗುವ ಮೊದಲು ಮತ್ತು ನಂತರ ನನಗೆ ಸಂಬಂಧಪಟ್ಟಂತೆ, ನನ್ನ ಮನಸ್ಸಿನಲ್ಲಿ ಉಳಿದಿರುವ ಮುಖ್ಯ ಘಟನೆಗಳನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸಿದ್ದೇನೆ.

ಕಾಗೋಡು ಸತ್ಯಾಗ್ರಹ ಒಬ್ಬ ವ್ಯಕ್ತಿಗೆ ಅಥವಾ ಒಂದು ಹಳ್ಳಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಆ ಕಾಲದ ಜಮೀನ್ದಾರಿ ಪದ್ಧತಿಯಿಂದ, ರೈತವರ್ಗದವರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧವಾಗಿ ನಡೆ೯ದ ಹೋರಾಟವಾಗಿತ್ತು. ಆದ್ದರಿಂದ ಅದು ತನ್ನ ಹೋರಾಟದ ಮೂಲಕವೇ‘ಉಳುವವನೇ ಹೊಲದೊಡೆಯ’ ಎಂಬ ಸಿದ್ಧಾಂತವನ್ನು ಗುರುತಿಸಿಕೊಳ್ಳುವಂತಾಯಿತು.

ಜಮೀನ್ದಾರಿ ಪದ್ಧತಿಯ ಪ್ರಕರಾ, ಸಾಗುವಳಿ ಯೋಗ್ಯವಾಗಿರುವ ಸಾವಿರಾರು ಎಕರೆಯ ಭೂಮಿಯ ಒಡೆತನವನ್ನು ಒಬ್ಬನೇ ಹೊಂದಿರುತ್ತಿದ್ದ. ಅವನ ಭೂಮಿಯಲ್ಲಿ ದುಡಿಯುವ ಜನರನ್ನು ಒಕ್ಕಲುಗಳೆಂದು ಕರೆಯುತ್ತಿದ್ದರು. ಆದರೆ ಈ ಒಕ್ಕಲುಗಳನ್ನು ಭೂಮಾಲೀಕರು ತಮ್ಮ ಗುಲಾಮರಂತೆಯೇ ಕಾಣುತ್ತಿದ್ದರು.

ಆಗ ಜಾರಿಯಲ್ಲಿದ್ದ ಗೇಣಿಪದ್ದತಿಯ ಪ್ರಕಾರ, ಒಡೆಯ ಎಷ್ಟು ಗೇಣಿ ನಿರ್ಧರಿಸುತ್ತಾನೋ ಅಷ್ಟನ್ನು ತಕರಾರಿಲ್ಲದೆ ಕೊಡಬೇಕಾಗಿತ್ತು. ಗೇಣಿ ಕೊಟ್ಟಿದ್ದಕ್ಕೆ ರಶೀದಿ ಕೇಳುವಂತಿರಲಿಲ್ಲ. ಗೇಣಿದಾರರು ತಾವು ಸಾಗುವಳಿ ಮಾಡುವ ಭೂಮಿಗೆ, ಅದರ ಒಡೆಯನ ಅನುಮತಿ ಇಲ್ಲದೆ ಪ್ರವೇಶಿಸುವುದೇ ತಪ್ಪಾಗುತ್ತಿತ್ತು. ಭೂಮಿ ಯಾವ ಕಾರಣಕ್ಕೂ ಗೇಣಿದಾರನ ಅಧೀನದಲ್ಲಿರುತ್ತಿರಲಿಲ್ಲ. ಯಾಕೆಂದರೆ ಭೂಮಿಯ ಸಾಗುವಳಿದಾರನಿಗೆ, ಅದರ ಡೆಯರು ಯಾವ ಕಾರಣಕ್ಕೂ ಕರಾರು ಪತ್ರ ಬರೆದುಕೊಡುತ್ತಿರಲಿಲ್ಲ. ಒಡೆಯ ಮತ್ತು ಒಕ್ಕಲಿನ ನಡುವೆ ಯಾವುದಾದರೂ ಕಾರಣಕ್ಕೆ ಭಿನ್ನಭಿಪ್ರಾಯ ಬಂದಾಗ, ಆ ಗೇಣಿದಾರ ತಾನು ಬೆಳೆದ ಬೆಳೆ ಸಹಿತ ಬಿಟ್ಟು ಹೋಗು ಎಂದರೂ ಬಿಟ್ಟು ಹೋಗಬೇಕಾಗಿತ್ತು. ಆಗ ಈ ಗೇಣಿದಾರ ರೈತನಿಗೆ ರಕ್ಷಣೆ ಕೊಡುವ ಯಾವ ಕಾನೂನು ಇರಲಿಲ್ಲ. ಅಲ್ಲದೆ ಒಡೆಯನಾದವನು ಪ್ರತಿವರ್ಷವೂ ಗೇಣಿ ಪ್ರಮಾಣವನ್ನು ಹೆಚ್ಚಿಸಬಹುದಾಗಿತ್ತು.

ಈ ಒಕ್ಕಲುಗಳು ತಮ್ಮ ಒಡೆಯರಿಗೆ ಗೇಣಿಭತ್ತವನ್ನು ಅಳೆದುಕೊಡಲು, ಒಡೆಯರೇ ತರುವ ಮೂರೂವರೆ ಸೇರು, ಮೂರುಮುಕ್ಕಾಲು ಸೇರು ಅಥವಾ ನಾಲ್ಕುಸೇರಿನ ಕೊಳಗದಲ್ಲಿಯೇ ಗೇಣಿಯನ್ನು ಅಳದುಕೊಡಬೇಕಾಗಿತ್ತು. ಆದರೆ ಒಡೆಯರು ತಮ್ಮ ಒಕ್ಕಲುಗಳಿಗೆ ಭತ್ತವನ್ನು ಸಾಲಕೊಡುವಾಗ ಮೂರುಸೇರಿನ ಕೊಳಗದಲ್ಲಿಯೇ ಅಳೆದು ಕೊಡುತ್ತಿದ್ದರು. ಹೀಗೆ ಅಳತೆಯಲ್ಲಿಯೂ ಕೂಡ ಒಕ್ಕಲುಗಳನ್ನು ಪಾಲಿಸಬೇಕಾಗುತ್ತಿತ್ತು. ಹತ್ತು ಚೀಲ ಧಾನ್ಯ ಅಳೆದುಕೊಟ್ಟಮೇಲೆ ಅಷ್ಟೇ ಹೊರೆ ಹುಲ್ಲು, ಸಲಿಗೆ ಭತ್ತ, ಪೆಚ್ಚಿನ ಭತ್ತ ಎಂತಲೂ ಕೊಡಬೇಕಾಗಿತ್ತು. ಗೇಣಿ ಭತ್ತವನ್ನು ಒಡೆರ ಮನೆಗೆ ತಾನೆ ಒಯ್ದು, ಅವರ ಪಣತಕ್ಕೆ ಹಾಕಿ ಬರಬೇಕು. ವರ್ಷಕ್ಕೆ ಹತ್ತು ಹದಿನೈದು ಆಳು ಒಡೆಯರ ಮನೆಯಲ್ಲಿ ಬಿಟ್ಟಿ ದುಡಿಯಬೇಕಾಗಿತ್ತು. ಇವೆಲ್ಲವೂ ಅವನ ಕರ್ತವ್ಯವೆಂದೇ ಹೇಳಲಾಗಿತ್ತು. ಒಡೆಯರು ತಾವು ಮಾಡುವುದಕ್ಕೆ ಅವಮಾನ ಮತ್ತು ಅಸಹ್ಯವೆಂದು ತಿಳಿದಿರುವ ಎಲ್ಲಾ ಕೆಲಸಗಳನ್ನೂ ಈ ಗೇಣಿರೈತನೇ ಮಾಡಬೇಕಾಗಿತ್ತು.

ಒಡೆಯರ ಮಕ್ಕಳು ತೊಟ್ಟಿಲ ಶಿಶುವಾಗಿದ್ದರೂ ಕೂಡ, ಅವರನ್ನು ಅಣ್ಣಯ್ಯನವರು ಅಕ್ಕಮ್ಮನವರು ಎಂದು ಬಹುವಚನದಿಂದ ಸಂಬೋಧಿಸಬೇಕು. ಅವರಲ್ಲಿ ಊಟ ಮಾಡುವುದಾದರೆ ಕೊಟ್ಟಿಗೆಯಲ್ಲಿ ಇಲ್ಲವೇ ಅವರ ನಾಯಿಕಟ್ಟುವ ಜಾಗದಲ್ಲಿ ಕುಳಿತು ಉಣ್ಣಬೇಕು. ತಾನು ಉಂಡನೆಲಕ್ಕೆ ಸಗಣಿ ಸಾರಿಸಿ ತಂಬಿಗೆ ತೊಳೆದಿಟ್ಟು, ಒಡೆಯರಿಗೆ ಸೊಂಟಬಾಗಿಸಿ ನಮಸ್ಕಾರ ಹೇಳಬೇಕು. ಇವುಗಳನ್ನು ಮೀರಿದವನಿಗೆ ಕಂಬಕ್ಕೆ ಕಟ್ಟಿಹಾಕಿ ಶಿಕ್ಷಿಸುವ ಉದಾಹರಣೆಗಳೇನು ಕಡಿಮೆ ಇಲ್ಲ. ಇವೆಲ್ಲವನ್ನೂ ಪೊಲೀಸರಿಗಾಗಲಿ, ಸರ್ಕಾರಕ್ಕಾಗಲೀ ತಿಳಿಸುವ ಸ್ಥಿತಿಯೂ ಇರಲಿಲ್ಲ. ಯಾಕೆಂದರೆ, ಇವರೆಲ್ಲರೂ ಅವಿದ್ಯಾವಂತರಾಗಿದ್ದವರು. ಆದ್ದರಿಂದ ಸರ್ಕಾರವೆಂದರೆ ಅವರಿಗೆ ಒಡೆಯರೇ ಆಗಿದ್ದರು.

ಆಗ ಇವರಿಗೆ ವಿದ್ಯಾಭ್ಯಾಸದ ಅವಕಾಶವೇ ಇರಲಿಲ್ಲ. ಯಾರಾದರೂ ತಮ್ಮ ಮಕ್ಕಳನ್ನು ಓದಲು ಕಳಿಸುತ್ತಾರೆಂದರೆ, ಅವರಿಗೆ ಒಡೆಯರು ಇಲ್ಲಸಲ್ಲದ ಕಿರುಕುಳಕೊಟ್ಟು ಮಕ್ಕಳು ಓದದಂತೇ ಮಾಡುತ್ತಿದ್ದರು. ಒಳ್ಳೆಯ ಬಟ್ಟೇ ಧರಿಸಿದರೂ ಒಡೆಯರಿಂದ ಬಯ್ಯಿಸಿಕೊಳ್ಳಬೇಕಾಗುತ್ತಿತ್ತು. ಒಡೆಯರಿಗೆ ಸರಿಸಮಾನರಾಗಿಕೂಡುವುದೇ ದೊಡ್ಡ ಅಪರಾಧವಾಗುತ್ತಿತ್ತು. ಉದ್ದವಾಗಿ ಪಂಚೆ ಉಡುವುದು, ಹೆಂಗಸರು ಉದ್ದವಾಗಿಸೀರೆ ಉಡುವುದನ್ನೂ ಒಡೆಯರು ಸಹಿಸುತ್ತಿರಲಿಲ್ಲ. ಡೆಯರ ಮನೆಮುಂದಿನ ರಸ್ತೆಯಲ್ಲಿ, ಗೇಣಿರೈತರು ಹೋಗುವಾಗ ಕಾಲಲ್ಲಿ ಮೆಟ್ಟಿದ್ದ ಜೋಡುಗಳನ್ನು ಕಳಚಿ, ಕೈಯಲ್ಲಿ ಹಿಡಿದುಕೊಂಡು ಒಡೆಯರ ಮನೆದಾಟಿ ಮುಂದೆ ಹೋದ ಮೇಲೆ ಅವುಗಳನ್ನು ಹಾಕಿಕೊಳ್ಳಬೇಕಾಗಿತ್ತು. ಇವೆಲ್ಲವೂ ಆಗ ಸಾಮಾನ್ಯ ನಡವಳಿಕೆಗಳೇ ಆಗಿದ್ದವು.

ಗೇಣಿ ರೈತನಿಗೆ ಸ್ವಾಭಿಮಾನ ಸ್ವಾತಂತ್ರ್ಯ ಎಂಬುದೇ ಮರೆತುಹೋಗಿತ್ತು. ತಮ್ಮ ಇರುವಿಕೆ ಇದಕ್ಕಿಂತಲೂ ಬದಲಾಗಲು ಸಾಧ್ಯವಿಲ್ಲವೆಂದು ನಂಬಿದ್ದರು. ಆದ್ದರಿಂದ ಇದನ್ನು ಒಡೆಯ ಒಕ್ಕಲು ಅನ್ನುವುದಕ್ಕಿಂತ, ಗುಲಾಮಗಿರಿ ಪದ್ಧತಿ ಎಂದರೇ ಉಚಿತ.

ಕಾಗೋಡು, ಸಾಗರ ತಾಲ್ಲೂಕಿನ ಒಂದು ಸಣ್ಣಹಳ್ಳಿ ಜಮೀನ್ದಾರಿ ಪದ್ಧತಿಯ ನಡವಳಿಕೆ ಎಲ್ಲಾ ಕಡೆಗಳಲ್ಲಿ ಇದ್ದಂತೆಯೇ ಕಾಗೋಡು ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಜಾರಿಯಲ್ಲಿತ್ತು. ಕಾಗೋಡು ಹಿರೇನೆಲ್ಲೂರು ಗ್ರಾಮದ ಒಂದು ಮಜರೆ ಹಳ್ಳಿ. ಪ್ರಸಿದ್ಧ ಕಾಂಗ್ರೆಸ್ ನಾಯಕರಾಗಿದ್ದ ಕೆ.ಜಿ. ಒಡೆಯರ್ ಅವರ ವಾಸಸ್ಥಳ ಕಾಗೋಡು. ಅವರ ಮನೆಯ ಪಕ್ಕದಲ್ಲಿಯೇ ಮೂವತ್ತು ನಲವತ್ತು ಒಕ್ಕಲು ಮನೆಗಳಿದ್ದವು. ಒಡೆಯರ್‌ರವರಿಗೆ ಇಲ್ಲಿನ ಭೂಮಿಗಳಲ್ಲದೆ, ಹಿರೇನೆಲ್ಲೂರು, ಸಂಣಮನೆ, ಅತ್ತೀಸಾಲು, ಮಣ್ಣಗದ್ದೆ, ಹಾಗಲಾಪುರ, ಸೂರಗುಪ್ಪೆ, ಶುಂಠಿಕೊಪ್ಪ, ಯಲಕಂದಿಗಳಲ್ಲೂ ಒಡೆಯರ್ ಕುಟುಂಬಕ್ಕೆ ಸೇರಿದ ಸಾವಿರಾರು ಎಕರೆ ಭೂಮಿ ಇತ್ತು. ನೂರಾರು ರೈತ ಕುಟುಂಬಗಳು ಇವರ ಒಕ್ಕಲುಗಳಾಗಿದ್ದವು. ಹಾಗೂ ಬೇರೆ ಬೇರೆ ಒಡೆಯರ ಭೂಮಿಗಳನ್ನು ಸಾಗುವಳಿ ಮಾಡುತ್ತಿದ್ದ ಒಕ್ಕಲುಗಳೂ ಇದ್ದವು. ಹೆಚ್ಚುಕಡಿಮೆ ಇವರೆಲ್ಲರೂ ದೀವರೇ ಆಗಿದ್ದರು.

ಕೆ.ಜಿ. ಒಡೆಯರ್‌ರವರು ೧೯೪೨ರ ಕ್ವಿಟ್ ಇಂಡಿಯಾ ಚಳವಳಿ ಮತ್ತು ೧೯೪೭ರ ಮೈಸೂರಿನ ಜವಾಬ್ದಾರಿ ಸರ್ಕಾರದ ಚಳವಳಿಗಳಲ್ಲಿ ಭಾಗವಹಿಸಿದವರು; ಆಗಿನ ಮಲೆನಾಡು ಪ್ರಾಂತ್ಯಕ್ಕೆ ಹೆಸರುವಾಸಿಯಾದ ದೊಡ್ಡ ಕಾಂಗ್ರೆಸ್ ನಾಯಕರು.

ಕೆ.ಜಿ. ಒಡೆಯರ್ ಅವರುಕಾಗೋಡು ರೈತ ಸತ್ಯಾಗ್ರಹದ ನಂತರ ಡೆದ ಚುನಾವಣೆಗಳಲ್ಲಿ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಪ್ರಧಾನಮಂತ್ರಿ ನೆಹರೂ ಅವರಿಗೆ ನಿಕಟವರ್ತಿಗಳಾಗಿದ್ದವರು. ಆಧುನಿಕ ವಿದ್ಯಾಭ್ಯಾಸ, ಆಧುನಿಕ ವಿಚಾರ, ಕಲೆ ಸಾಹಿತ್ಯದ ಬಗ್ಗೆ ತಿಳುವಳಿಕೆ ಇದ್ದವರು. ಇಂಥ ವ್ಯಕ್ತಿಯ ಗ್ರಾಮದಲ್ಲಿಯೇ ಗೇಣಿರೈತರ ಸ್ಥಿತಿ ಹೀನಾಯವಾಗಿದ್ದಿದ್ದು ಮುಚ್ಚಿಡಲಾರದ ಸಂಗತಿಯಾಗಿತ್ತು. ಈ ಚಳವಳಿ ನಡೆಯುತ್ತಿದ್ದಾಗ, ಕೆ.ಜಿ. ಒಡೆಯರ್ ಅವರು ಪ್ರತಿನಿಧಿಸುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭೂಮಾಲೀಕರ ಮನೆಯ ಹೊಸಬೀಗರಂತೆ, ಅವರ ನಡುಮನೆಯಲ್ಲಿ, ಅವರ ಆಜ್ಞೆ ಸ್ವೀಕರಿಸುವ ನಂಬುಗೆಯ ಬಂಟನಾಗಿ, ಚಳವಳಿಯನ್ನು ದಮನ ಮಾಡಲು ಎಲ್ಲಾ ಪ್ರಯತ್ನಗಳನ್ನು ಲಜ್ಜೆಬಿಟ್ಟು ಮಾಡಿತು. ರೈತಸತ್ಯಾಗ್ರಹಿಗಳನ್ನು ದೇಶದ್ರೋಹಿಗಳಂತೆ ಕಂಡಿತು. ಆದ್ದರಿಂದ ಸುಸಂಸ್ಕೃತಿಯ ಮನೆತನದ ಕಾಂಗ್ರೆಸ್ ನಾಯಕರಾದ ಕೆ.ಜಿ. ಒಡೆಯರ್ ಅವರ ಊರಾದ ಕಾಗೋಡಿನಿಂದಲೇ ರೈತ ಚಳವಳಿ ಆರಂಭವಾಯಿತು.

೧೯೪೨ರ ಕ್ವಿಟ್ ಇಂಡಿಯಾ ಚಳವಳಿಗೆ ಮಹಾತ್ಮಾ ಗಾಂಧೀಜಿಯವರು ಕರೆ ನೀಡಿದಾಗ, ನಾನು ನೆರೆಯ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಗ್ರಾಮಪಂಚಾಯತಿಯ ಸೆಕ್ರಟರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೆ. ಸ್ವಾತಂತ್ರ್ಯ ಚಳವಳಿಯ ಪ್ರಖರತೆಯಲ್ಲಿ ನಾನೂ ಕರಗಿ ಚಳವಳಿಯೊಂದಿಗೆ ಸೇರಿಹೋದೆ. ಅದನ್ನು ಗುಪ್ತವರದಿಯಿಂದ ತಿಳಿದ ಸರ್ಕಾರ ನನ್ನನ್ನು ಕೆಲಸದಿಂದ ವಜಾಮಾಡಿ ಜೈಲಿಗೆ ಕಳಿಸಿತು.

ಜೈಲುವಾಸ ಅನುಭವಿಸಿ ತಿರುಗಿ ಬಂದಾಗ, ಉದ್ಯೋಗ ಕಳೆದುಕೊಂಡಿದ್ದು, ನಾನು ಮನೆಯಲ್ಲಿ ಇದ್ದವರಿಗೂ ಬೇಡವಾದೆ. ಉದ್ಯೋಗ ಸಿಗದೆ, ಕಾಗೋಡು ಪಕ್ಕದ ಹಿರೇನಲ್ಲೂರಿಗೆ ಬಂದು, ಒಂದು ಖಾಸಗಿ ಶಾಲೆಯನ್ನು ಆರಂಭಿಸಿದೆ. ಹಿರಕೇನಲ್ಲೂರಿನಲ್ಲಿ ಬರಸಿನ ದ್ಯಾವಪ್ಪ ಎಂಬುವರು ನನಗೆ ಆಶ್ರಯ ನೀಡಿ, ಮಕ್ಕಳಿಗೆ ವಿದ್ಯೆಕಲಿಸುವ ಉದ್ಯೋಗದಲ್ಲಿ ತೊಡಗಿಸಿದರು.

ಹಿರೇನಲ್ಲೂರಿನಲ್ಲಿ ಆಗ ಅರವತ್ತರಿಂದ ಎಪ್ಪತ್ತು ಒಕ್ಕಲು ಜಾತಿಯವರ ಮನೆಗಳೂ, ಹತ್ತು ಒಡೆಯರ ಜಾತಿಯ ಮನೆಗಳೂ ಇದ್ದವು. ಎಲ್ಲರ ಮಕ್ಕಳೂ ನನ್ನ ಶಾಲೆಗೆ ಬರುತ್ತಿದ್ದರು. ಎರಡು ವರ್ಷಕಾಲ ಯಾವ ತೊಂದರೆಯೂ ಇಲ್ಲದೆ ಶಾಲೆ ನಡೆದುಕೊಂಡು ಬಂತು. ಇಡೀ ಊರೇ ನನ್ನನ್ನು ಗೌರವದಿಂದ ಕಾಣುತ್ತಿತ್ತು. ಒಡೆಯರ ಜಾತಿಯ ಮನೆಯಲ್ಲೂ ನನಗೆ ಕೂತುಕೊಳ್ಳಲು ಒಂದು ಹೊಸ ಗೋಣಿಚೀಲ ಕೊಡುತ್ತಿದ್ದರು. (ಆಗ ಅವರ ಒಕ್ಕಲುಗಳಲ್ಲಿ ಯಾರಿಗೂ ಗೌರವ ದೊರೆಯುತ್ತಿರಲಿಲ್ಲ) ಆದರೂ ನಾನು ಅವರಲ್ಲಿ ಊಟಮಾಡುವ ಪ್ರಸಂಗ ಬಂದಾಗ, ಅವರ ಕೆಳ ಜಗುಲಿಯಲ್ಲೇ ಕುಳಿತು ಉಣ್ಣಬೇಕಾಗಿತ್ತು. ಉಂಡನಂತರ ಎಲೆತೆಗೆದು ದೂರದ ಗೊಬ್ಬರದ ಗುಂಡಿಗೆ ಹಾಕಿ ಬಂದು ನೆಲವನ್ನು ಸಗಣಿಯಿಂದ ಬಳಿದು, ಕೊಟ್ಟ ತಂಬಿಗೆಯನ್ನು ಚೆನ್ನಾಗಿ ತೊಳೆದು, ಕವಚಿ ಇಟ್ಟು ಬರಬೇಕಾಗಿತ್ತು. ಅದನ್ನೆಲ್ಲಾ ಸಹಿಸಿಕೊಳ್ಳುವುದು ಉದ್ಯೋಗದ ದೃಷ್ಟಿಯಿಂದ ಅನಿವಾರ್ಯವಾಗಿತ್ತು.

ಒಂದು ಸಾರಿ ಊರಿನಲ್ಲಿ ಜನರಿಗೆ ಜ್ವರ ಹೊಟ್ಟೆನೋವು ಮುಂತಾದ ಸಣ್ಣಪುಟ್ಟ ಕಾಯಿಲೆಗಳು ಬಂದಿತು. ಇದರ ಜೊತೆಗೆ ಒಂದೆರಡು ಜಾನುವಾರುಗಳು ಸತ್ತುಹೋದವು. ಇದೆಲ್ಲಾ ಏನೋ ದೇವರ ಕಾಟ ಎಂಬ ಸುದ್ದಿ ಎಲ್ಲೆಡೆ ಹಬ್ಬಿತು.

ಒಡೆಯರ ಮನೆ ಅಂಗಳದಲ್ಲಿ ರೈತರೆಲ್ಲಾ ಪಂಚಾಯಿತಿ ಸೇರಿದರು. ಎಲ್ಲಾ ದೇವರಿಗೂ ಹರಕೆ ಕಟ್ಟುವ ತೀರ್ಮಾನ ಮಾಡಿದರು. ಅಲ್ಲಿ ಈಶ್ವರ ದೇವಸ್ಥಾನವೂ ಒಂದು ಮುಖ್ಯವಾದದ್ದು. ಅಲ್ಲಿ ಈಶ್ವರ ಲಿಂಗ ಭಿನ್ನವಾಗಿದೆ. ಅದಕ್ಕೆ ಇಷ್ಟೆಲ್ಲಾ ತೊಂದರೆಗಳು ಬರುತ್ತಿವೆ ಎಂದು ಯಾರೋ ಒಬ್ಬರು ಅಂದರು. ಸರಿ ಎಲ್ಲರೂ ಸೇರಿ, ಆ ಭಿನ್ನವಾದ ಲಿಂಗವನ್ನು ಹೊಸದಾಗಿ ಮಾಡಿಸಿ ತಂದು ಪ್ರತಿಷ್ಠಾಪಿಸುವ ತೀರ್ಮಾನವೂ ಆಯಿತು. ಇದಕ್ಕಾಗಿ ಹುಬ್ಬಳ್ಳಿಯ ಮೂರುಸಾವಿರ ಮಠದ ಸ್ವಾಮಿಗಳೂ ಬರುವುದು ನಿಶ್ಚಯವಾಯಿತು. ಇದಕ್ಕೆ ಖರ್ಚಿನ ಅಂದಾಜು ಮಾಡಿ, ಅವರವರ ಯೋಗ್ಯತೆಗೆ ತಕ್ಕಂತೆ ವಂತಿಗೆ ನಿರ್ಧರಿಸಿ ವಸೂಲು ಮಾಡಿದ್ದಾಯಿತು. ಒಡೆಯರ ಜಾತಿಯವರಿಂದ ವಸೂಲಾದ ಹಣ ದಾನಕ್ಕಿಂತ, ಬಹುಸಂಖ್ಯಾತರಾದ ಒಕ್ಕಲುಗಳ ಗುಂಪಿನಿಂದ ವಸೂಲಾದ ಮೊತ್ತವೇ ಹೆಚ್ಚಾಗಿತ್ತು.

ಪರ ಊರಿನಲ್ಲಿರುವ ಬಂಧುಬಳಗದವರಿಗೆಲ್ಲಾ, ಆಮಂತ್ರಣ ಪತ್ರಿಕೆಗಳನ್ನು ಒಡೆಯರ ಜಾತಿಯವರು ಮುದ್ರಿಸಿಕೊಂಡು ಬಂದರು. ಅದರಲ್ಲಿ ಸಮಾರಂಭಕ್ಕೆ ಕರೆಯುವವರು ವೀರಶೈವ ಮಂಡಳಿ ಎಂದು ಪ್ರಿಂಟಾಗಿತ್ತು. ಆ ಪತ್ರಿಕೆಗಳನ್ನೆ ಎಲ್ಲಾ ಗೇಣಿದಾರರ ಮನೆಗಳಿಗೂ ವಿತರಣೆ ಮಾಡಲಾಯಿತು ಮತ್ತು ಅವರ ನೆಂಟರಿಷ್ಟರಿಗೂ ಅವುಗಳನ್ನೇ ಕಳಿಸಿಕೊಡುವಂತೆ ಒಡೆಯರಿಂದ ಆಜ್ಞೆ ಜಾರಿಯಾಯಿತು.

ನನಗೆ ಬೇಸರವಾಯಿತು. ತಡೆಯಲಾಗಲಿಲ್ಲ. ಆಗ ಊರಿನ ಹಿರಿಯರಾಗಿದ್ದ, ಬರಸಿನ ದ್ಯಾವಪ್ಪ, ಕಳ್ಳಕುಡಿ ದ್ಯಾವನಾಯ್ಕರು, ಸಿರೆನ್ ತಿಮ್ಮಾನಾಯಕ್ರು ಮತ್ತು ಗುತ್ತಿಕರಿಯಾನಾಯ್ಕರು ಇವರನ್ನೆಲ್ಲಾ ಭೇಟಿಯಾದೆ. ಆಹ್ವಾನ ಪತ್ರಿಕೆಯ ಪ್ರಕಾರ ಇದು ಕೇವಲ ಒಡೆಯರುಗಳು ಮಾತ್ರ ಮಾಡುತ್ತಿರುವ ಉತ್ಸವವಾಗಿದೆ. ಆದರೆ ವಂತಿಗೆ ಹಣ, ಧಾನ್ಯಗಳನ್ನು ಒಕ್ಕಲುಗಳಿಂದಲೇ ಹೆಚ್ಚಾಗಿ ಸಂಗ್ರಹಿಸಲಾಗಿದೆ. ಇದು ಅನ್ಯಾಯವಲ್ಲವೇ? ನಮ್ಮ ನೆಂಟರಿಸ್ಟರನ್ನೆಲ್ಲಾ ವೀರಶೈವ ಮಂಡಳಿಯ ಹೆಸರಿನಲ್ಲಿ ಸಮಾರಂಭಕ್ಕೆ ಕರೆಯುವುದು ಗೌರವದ ಕೆಲಸವೆ? ಎಂದು ಇವರನ್ನೆಲ್ಲಾ ಕೇಳಿದೆ. ನನ್ನ ಮಾತುಗಳಿಂದ ಅವರ ಸ್ವಾಭಿಮಾನವೂ ಕೆರಳಿತು. ಹೌದಲ್ಲಾ! ಹೀಗೆ ಮಾಡಿದ್ದು ಸರಿಯಿಲ್ಲ. ಆದರೂ ನಾವು ಏನು ಮಾಡುವುದು. ಅವರು ಒಡೆಯರು, ನಾವು ಒಕ್ಕಲು. ಅವರ ತಪ್ಪನ್ನು ಎಣಿಸಿ ಅವರಿಗೆ ನಾವೂ ಏನೂ ಹೇಳುವಂತಿಲ್ಲ ಎಂದರು. ಜೊತೆಗೆ ನನ್ನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಾ ನೀವೇ ಇದಕ್ಕೆ ಏನಾದರೂ ಉಪಾಯ ಹೇಳುತ್ತೀರಾ! ನೀವು ಹೇಳಿದಂತೆ ನಾವು ಕೇಳಲು ಸಿದ್ಧ ಎಂದರು. ನನಗೂ ಇದೇ ಮಾತು ಅವರಿಂದ ಬೇಕಾಗಿತ್ತು. ನಮ್ಮ ಜಾತಿಯ ಹೆಸರನ್ನು ಇದೇ ಆಹ್ವಾನ ಪತ್ರಿಕೆಗಳಿಗೆ ಅಚ್ಚುಹಾಕಿಸಿ, ನಮ್ಮ ನೆಂಟರಿಸ್ಟರಿಗೆ ಹಂಚಿಕೊಂಡರೆ ತಪ್ಪೇನು? ಎಂದು ಒಂದು ಬದಲಿ ಮಾರ್ಗವನ್ನು ಅವರಿಗೆ ಸೂಚಿಸಿದೆ. ನನ್ನ ಮಾತು ಅವರೆಲ್ಲರಿಗೂ ಸರಿ ಎನಿಸಿತು. ಹಾಗೆ ಮಾಡೋಣ ಎಂದು ಒಪ್ಪಿದರು. ಸಾಗರದ ಗಜಾನನ ಪ್ರೆಸ್ಸಿನಲ್ಲಿ ಇನ್ನೂ ಕಳಚದೇ ಇದ್ದ ಕಂಪೋಜ್‌ನಲ್ಲಿ, ‘ವೀರಶೈವ ಮಂಡಳಿ’ ಎಂದು ಇದ್ದದ್ದನ್ನು ‘ದೀವರ ಮಂಡಳಿ’ ಎಂದು ಬದಲಾಯಿಸಿ ಒಂದು ಸಾವಿರ ಪ್ರತಿಗಳನ್ನು ಮುದ್ರಿಸಿ ತಂದಿದ್ದಾಯಿತು. ಅದನ್ನೆ ಎಲ್ಲಾ ಹಳ್ಳಿಗಳಲ್ಲಿದ್ದ ನಮ್ಮ ನೆಂಟರಿಷ್ಟರಿಗೆ ಹಂಚಿದ್ದೂ ಆಯಿತು.

ಮಿಂಚಿನ ವೇಗದಲ್ಲಿ ನಡೆದು ಹೋದ ಈ ಘಟನೆಯಿಂದ ಇಡೀ ಊರಿನ ರೈತರೆಲ್ಲಾ ದಿಗ್ಭ್ರಾಂತರಾಗಿದ್ದರು. ಇದೇ ಕಾರಣಕ್ಕೆ ಊರಿನ ಮಧ್ಯಭಾಗದಲ್ಲಿದ್ದ ಮನೆಗೆ ಬೆಂಕಿಹಚ್ಚಿ ಒಂದು ಕುಟುಂಬವನ್ನು ಭಸ್ಮ ಮಾಡಲು ಮುಂದಾದ ಒಡೆಯರ ಗುಂಪನ್ನು ರೈತರೆಲ್ಲಾ ಒಗ್ಗಟ್ಟಿನಿಂದ ಓಡಿಸಿದರು. ಈ ರೀತಿ ಒಡೆಯರ ಎದುರು ಗೇಣಿರೈತರು ಒಟ್ಟಾಗಿ ಅವರನ್ನು ಎದುರಿಸಿದ್ದು ಅವರ ಜೀವನದಲ್ಲೇ ಪ್ರಥಮ. ಈ ಘಟನೆಯಿಂದಾಗಿಯೇ ನನಗೂ ಈವರ ಮೇಲೆ ವಿಶ್ವಾಸ ಮೂಡಿತು. ಇವರ ಸಂಘಟನೆ ಮಾಡಿದರೆ ದೊಡ್ಡದ್ದನ್ನೇ ಸಾಧಿಸಬಹುದೆಂದು ನಿಧಾರಕ್ಕೆ ಬರಲು ಕಾರಣವಾಯಿತು.

ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ನಮ್ಮವರಿಗೆ ಅದರ ಗಾಳಿಯೂ ಬೀಸುತ್ತಿಲ್ಲವಲ್ಲ ಏನು ಮಾಡುವುದು. ನಮ್ಮ ಜನರನ್ನೆಲ್ಲಾ ಸಂಘಟಿಸಿ, ಈ ಒಡೆಯರ ವಿರುದ್ಧ ಹೋರಾಡಿಯೇ ತೀರಬೇಕೆಂದು ದೃಢನಿಶ್ಚಯ ಮಾಡಿದೆ.

೪.೧.೧೯೪೮ರಲ್ಲಿ ಸಾಗರ ತಾಲ್ಲೂಕಿನ ಮುರತ್ತೂರು ಗ್ರಾಮದಲ್ಲಿ ಬೃಹತ್ ರೈತರ ಸಮಾವೇಶ ನಡೆಯಿತು. ಅಂದೇ ‘ಸಾಗರ ತಾಲ್ಲೂಕು ರೈತ ಸಂಘ’ ಅಸ್ತಿತ್ವಕ್ಕೆ ಬಂದಿತು. ರೈತ ಸಂಘಕ್ಕೆ ಡಿ. ಮೂಕಪ್ಪನವರು ಅಧ್ಯಕ್ಷರನ್ನಾಗಿಯೂ ನನ್ನನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿಯೂ ಉಳ್ಳ ಹದಿನೈದು ಜನ ಸದಸ್ಯರನ್ನು ಸಭೆ ಆಯ್ಕೆ ಮಾಡಿತು.

ರೈತ ಸಂಘದ ಬೇಡಿಕೆಗಳು

೧. ಭೂಮಿಯನ್ನು ಗೇಣಿಗೆ ಕೊಟ್ಟಿದ್ದೇವೆಂದೂ, ಅಥವಾ ಗೇಣಿ ಪಡೆದಿದ್ದೇವೆಂದೂ ಒಪ್ಪಂದದದ ಕರಾರಿನಂತೆ ಬರೆದುಕೊಟ್ಟು, ಗೇಣಿ ಪಡೆದಿದ್ದಕ್ಕೆ ರಶೀದಿ ಕೊಡಬೇಕು.

೨. ಮೂರು ಸೇರಿನ ಕೊಳಗದಲ್ಲಿಯೇ ಗೇಣಿಯನ್ನು ಪಡೆಯಬೇಕು. ಅಲ್ಲದೆ ಪೆಚ್ಚಿನ ಭತ್ತ, ಸಲಿಗೆ ಭತ್ತ ವಗೈರೆ ಎಂದು ಚೀಲಕ್ಕೆ ಎರಡು ಮೂರು ಸೇರಿ ಹೆಚ್ಚಾಗಿ ಪಡೆಯುವುದು ನಿಲ್ಲಬೇಕು.

೩. ವರ್ಷಕ್ಕೆ ನಾಲ್ಕರಿಂದ ಹತ್ತು ಆಳುಗಳು ಒಡೆಯರ ಬಿಟ್ಟಿ ಕೆಲಸದ ದುಡಿತವನ್ನು ರದ್ದುಪಡಿಸಬೇಕು.

೪. ಅತಿವೃಷ್ಟಿ, ಅನಾವೃಷ್ಟಿಗಳಿಂದ ಬೆಳೆ ನಷ್ಟವಾದಾಗ ಗೇಣಿಯನ್ನು ಪಡೆಯಬಾರದು. (ಅಂಥ ವರ್ಷಗಳಲ್ಲಿ ಗೇಣಿಯನ್ನು ಮುಂದಿನ ವರ್ಷದಲ್ಲಿ ಕೊಡಬೇಕಾಗುತ್ತಿತ್ತು.)

ಸರ್ಕಾರದ ಮುಂದಿಟ್ಟ ಬೇಡಿಕೆಗಳು

೧. ಗೇಣಿದಾರರ ಭೂಮಿಯನ್ನು ಭೂ ಒಡೆಯರು ಕೈತಪ್ಪಿಸದಂತೆ ತಕ್ಷಣ ಆರ್ಡಿನೆನ್ಸ್ ಹೊರಡಿಸಬೇಕು. ಅಲ್ಲದೇ ಗೇಣಿದಾರರಿಗೆ ರಕ್ಷಣೆ ನೀಡುವ ಟೆನನ್ಸಿ ಕಾನೂನು ಜಾರಿಗೆ ತರಬೇಕು.

೨. ಸರ್ಕಾರವು ರೈತರಿಗೆ ರಿಯಾಯ್ತಿಗಳನ್ನು ಘೋಷಿಸಿದಾಗಲೆಲ್ಲ ಕೇವಲ ಕಂದಾಯ ಕೊಡುವವರನ್ನೇ ರೈತರೆಂದು ಪರಿಗಣಿಸುತ್ತಿದೆ. ಇನ್ನು ಮುಂದೆ ಗೇಣಿದಾರರೂ ರೈತರೆಂದು ಪರಿಗಣಿಸಿ ಅವರಿಗೆ ಸರ್ಕಾರದ ರಿಯಾಯ್ತಿ ಸೌಲಭ್ಯಗಳನ್ನು ಒದಗಿಸಬೇಕು. ಉದಾಹರಣೆಗೆ, ಬೆಳೆ ರಕ್ಷಣೆಗೆ ಬಂದೂಕು ಲೈಸನ್ಸ್, ನಾಟಾ ರಿಯಾಯ್ತಿ ದರ, ಬೆಳೆಸಾಲ, ಅಭಿವೃದ್ದಿ ಸಾಲ ಇತ್ಯಾದಿ. (ಇವುಗಳನ್ನೆಲ್ಲಾ ಗೇಣಿಗೆ ಕೊಟ್ಟಿರುವ ಭೂಮಿಗಳ ಖಾತೆ ಹಕ್ಕಿನ ದಾಖಲೆಯನ್ನು ಮುಂದುಮಾಡಿ ಜಮೀನ್ದಾರರೇ ಪಡೆದುಕೊಳ್ಳುತ್ತಿದ್ದರು. ಗೇಣಿದಾರರ ಗಮನಕ್ಕೆ ಬರುತ್ತಿರಲಿಲ್ಲ).

ಇಂಥ ಬೇಡಿಕೆಗಳ ಪಟ್ಟಿಯನ್ನು ತಯಾರಿಸಿ, ಪ್ರತಿ ಗ್ರಾಮದಲ್ಲಿಯೂ ರೈತರ ಸಭೆಯನ್ನು ನಡೆಯಿಸಿ, ಅವರ ಮುಂದೆ ವಿವರಿಸಿ ಹೇಳುವುದೇ ರೈತಸಂಘದ ಮುಖ್ಯ ಕೆಲಸವಾಗಿತ್ತು.

ಈ ಸಭೆಗಳಲ್ಲಿ ಭಾಷಣ ಮಾಡಲು ಶಾಂತವೇರಿ ಗೋಪಾಲಗೌಡರು, ಕಾಂಗ್ರೆಸ್ಸಿನ ಕಡಿದಾಳು ಮಂಜಪ್ಪಗೌಡರು, ಬಸವಾನೀ ರಾಮಶರ್ಮೞು, ಹೆದ್ದೂರು ಮಂಜಪ್ಪಗೌಡರು, ಕಮ್ಯೂನಿಸ್ಟ್ ಪಕ್ಷದ ಕೋಲಾರದ ವೆಂಕಟಗಿರಿಯಪ್ಪನವರು, ಪ್ರಜಾಸಮಾಜವಾದಿ ಪಕ್ಷದ ದಿನಕರ ದೇಸಾಯಿಯವರು, ಶಿವಮೊಗ್ಗದ ವಕೀಲರಾದ ಎನ್.ಪಿ. ರಾಮಪ್ಪನವರು ಹೀಗೆ ಅನೇಕ ಬಂದು ರೈತರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಆದರೆ ಎಲ್ಲರಿಗಿಂತ ಹೆಚ್ಚಾಗಿ ಗೋಪಾಲಗೌಡರ ಭಾಷಣವನ್ನು ನಮ್ಮ ರೈತರು ಮೆಚ್ಚಿಕೊಳ್ಳುತ್ತಿದ್ದರು. ೧೯೪೮ರ ಜನವರಿಯಲ್ಲಿ ಆರಂಭವಾದ ಸಾಗರ ತಾಲೂಕು ರೈತ ಸಂಘ ೧೯೫೧ ಏಪ್ರಿಲ್ ತಿಂಗಳಲ್ಲಿ ಕಾಗೋಡು ಸತ್ಯಾಗ್ರಹವನ್ನು ಪ್ರಾರಂಭಿಸುವವರೆಗೂ ತನ್ನ ಸಬೆಗಳಿಗೆ ಅನೇಕ ಸಾರಿ ಗೋಪಾಲಗೌಡರನ್ನು ಆಹ್ವಾನಿಸಿತ್ತು.

ನಮ್ಮ ರೈತರ ಸಂಘದ ಚಟುವಟಿಕೆಗಳ ಮೇಲೆ ಆಗಿನ ಸರ್ಕಾರ ಪೂರ್ಣನಿಗಾ ಇಟ್ಟಿತ್ತು. ಇದೇ ವೇಳೆಯಲ್ಲಿ ಸಾಗರ ತಾಲ್ಲೂಕು ಹಿಡುವಳಿದಾರರ ಸಂಘ ಎಂಬ ಹೆಸರಿನಲ್ಲಿ ಭೂಮಾಲೀಕರ ಸಂಘ ರಚನೆಯಾಯಿತು. ಅದಕ್ಕೆ ಶಿರವಂತೆ ಎಚ್.ಎಲ್. ವೀರಭದ್ರಪ್ಪಗೌಡರು ಅಧ್ಯಕ್ಷರಾಗಿದ್ದರು. ರೈತ ಸಂಘಟನೆಯೇ ಆಗದಂತೆ ಹೇಗೆ ತಡೆಗಟ್ಟಬೇಕು ಮತ್ತು ರೈತ ಸಂಘಟನೆಯ ಮುಂದಾಳುಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂಬುದೇ ಸಂಘದ ಮುಖ್ಯ ಧ್ಯೇಯವಾಗಿತ್ತು. ರೈತ ಸಂಘಕ್ಕೆ ಸೇರುವ ತಮ್ಮ ಗೇಣೀ ರೈತರಿಗೆ ಅನೇಕ ರೀತಿಯ ಭೀತಿ ಹುಟ್ಟಿಸಲು ಪ್ರಾರಂಭಿಸಿದರು. ರೈತ ಸಂಘದ ಪದಾಧಿಕಾರಿಗಳ ಮೇಲೆ ಅವಕಾಶ ಸಿಕ್ಕಾಗಲೆಲ್ಲಾ ಸುಳ್ಳುಕೇಸು, ಪೊಲೀಸು ಕಂಪ್ಲೆಂಟ್ ದಾಖಲಾಗುವಂತೆ ಮಾಡುತ್ತಿದ್ದರು. ಇದರಿಂದ ಪರಿಸ್ಥಿತಿ ಗಂಭೀರವಾಯಿತು.

ರೈತರು ಗೇಣಿಕೊಡುವ ಸಂದರ್ಭದಲ್ಲಿ ಹೆಚ್ಚಿನ ಅಳೆತಯ ಕೊಳಗದಲ್ಲಿ ಗೇಣಿ ಭತ್ತ ಕೊಡುವುದಿಲ್ಲವೆಂದು, ಗೇಣಿ ಪಡೆದುದ್ದಕ್ಕೆ ರಶೀದಿ ಕೊಡಬೇಕೆಂದು, ಒತ್ತಾಯಿಸತೊಡಗಿದರು. ಆದರೆ ಭೂಮಾಲೀಕರು ಮೂರುವರೆ ಸೇರಿನ ಅಳತೆಯ ಕೊಳಗದಲ್ಲಿ ಗೇಣಿ ಕೊಡದಿದ್ದರೆ ಗೇಣಿ ತೆಗೆದುಕೊಳ್ಳುವುದಿಲ್ಲವೆಂದೂ ಹಠ ಮಾಡತೊಡಗಿದರು.

ರೈತ ಸಂಘದ ಸದಸ್ಯರಾದವರಿಗೆ ಗೇಣಿ ಭೂಮಿಯಲ್ಲಿ ಇಳಿದು ಕೆಲಸ ಮಾಡದಂತೆ ತಡೆಗಟ್ಟಬೇಕೆಂದು, ಭೂಮಾಲೀಕರ ಸಂಘದ ಆದೇಶ ಅವರ ಸಂಘದ ಸದಸ್ಯರಿಗೆ ಹೋಯಿತು. ತಡಗಳಲೆ ಗ್ರಾಮದ ಗೇಣಿ ರೈತರು ಜಮೀನಿಗೆ ಇಳಿದು ಕೆಲಸ ಮಾಡದಂತೆ, ಅಲ್ಲಿನ ಭೂಮಾಲೀಕರು ದಿನಾಂಕ ೧೬..೧೯೫೧ರಂದು ತಡೆದರು. ರೈತರು ಮುನ್ನುಗ್ಗಿ ಹೋಗಿ ನೇಗಿಲು ಕಟ್ಟಿ ಉಳಲು ಪ್ರಾರಂಭಿಸಿದರು. ಅಷ್ಟರಲ್ಲಿ ಬಿ. ಚನ್ನಪ್ಪ ಮೊದಲಾದ ಭೂಮಾಲೀಕರೆಲ್ಲಾ ಒಟ್ಟಾಗಿ, ಕತ್ತಿ ಕೊಡಲಿಗಳನ್ನು ತಂದು ರೈತರ ನೇಗಿಲು, ನೊಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದರು. ಎತ್ತುಗಳನ್ನು ಸಿಕ್ಕಾಪಟ್ಟೆ ದೊಣ್ಣೆಯಿಂದ ಹೊಡೆದು ಗ್ರಾಮದ ಹೊರಗೆ ಓಡಿಸಿದರು. ಹಿಂದೆಂದೂ ಕಂಡು ಕೇಳದ ಪರಿಸ್ಥಿತಿ ಉಂಟಾಗಿತ್ತು. ಇಂಥ ಪರಿಸ್ಥಿತಿಯಲ್ಲೂ ರೈತರು ಹಿಂಸೆಗೆ ಇಳಿಯಬಾರದೆಂದು ರೈತ ಸಂಘದಲ್ಲಿ ಕಟ್ಟುನಿಟ್ಟಿನ ತೀರ್ಮಾನವಾಗಿತ್ತು. ಇದರಂತೆ ಯಾವ ರೈತನೂ ಒಡೆಯರ ಮೇಲೆ ಕೈ ಎತ್ತಲಿಲ್ಲ.

ಈ ಘಟನೆಯನ್ನು ನೋಡಿದ ಇಡೀ ತಡಗಳಲೆ ಗ್ರಾಮದ ರೈತರು ಅಂದು ಅನ್ನ, ನೀರು, ತ್ಯಜಿಸಿ ದೇವರಿಗೆ ಹರಕೆ ಹೊತ್ತರು. ಮರುದಿನ ದಿನಾಂಕ ೧೭.೪.೧೯೫೧ರಂದು ಸಾಗರಕ್ಕೆ ತುಂಡಾದ ನೇಗಿಲು, ನೊಗ, ಮಿಣಿ, ಚೊತಕಗಳನ್ನು ಹೊತ್ತು ಎಲ್ಲಾ ರೈತರೂ ಒಟ್ಟಾಗಿ ಬಂದರು. ಈ ಸುದ್ದಿ ವಿದ್ಯುತ್‌ವೇಗದಲ್ಲಿ ತಾಲ್ಲೂಕಿನ ಬಹುಭಾಗದ ಹಳ್ಳಿಗಳಿಗೆ ಆಗಲೇ ತಿಳಿದು ಹೋಗಿತ್ತು. ಅಂದು ಸಾಗರ ಸಂತೆ. ಸಾವಿರಾರು ಜನ ರೈತರು ಜಮಾಯಿಸಿದ್ದರು. ಒಡೆಯರುಗಳ ಈ ಅಮಾನವೀಯ ಕೃತ್ಯದಿಂದಾಗಿ ಕ್ರಮೇಣ ಸಾರ್ವಜನಿಕರ ಸಹಾನುಭೂತಿ ನಮ್ಮ ರೈತ ಸಂಘಟನೆಯ ಪರ ವಾಲಲು ಕಾರಣವಾಯಿತು. ಒಡೆಯರುಗಳು ಈ ಕೃತ್ಯಕ್ಕಾಗಿ ಸಿಡಿಮಿಡಿಗೊಂಡರು. ರೈತಸಂಘದ ಪರವಾಗಿ ನಾನೇ ಮುಂದಿನ ತೀರ್ಮಾನ ಕೈಗೊಳ್ಳುವ ಹೊಣೆಹೊತ್ತವನಾಗಿದ್ದೆ.

ಕಡಿದು ತುಂಡುತುಂಡಾದ ವ್ಯವಸಾಯದ ಉಪಕರಣಗಳನ್ನು ಹಿಡಿದು ರೈತರೆಲ್ಲಾ ಸಾಗರದ ಬೀದಿಗಳಲ್ಲಿ ಮೆವರಣಿಗೆ ಹೊರಟೆವು. ರೈತರೆಲ್ಲಾ ಜಮೀನ್ದಾರರ ದೌರ್ಜನ್ಯಕ್ಕೆ ಧಿಕ್ಕಾರ ಎಂಬ ಒಂದೇ ಘೋಷಣೆಯನ್ನು ಕೂಗುತ್ತಿದ್ದರು. ಈ ದೃಶ್ಯವನ್ನು ನೋಡಿದ ಇಡೀ ಸಾಗರದ ಜನತೆ ಬೆರಗುಗೊಂಡಿತು. ಮೆರವಣಿಗೆಯು ಗಣಪತಿ ದೇವಸ್ಥಾನದ ಪಕ್ಕದಲ್ಲಿದ್ದ ಆಗಿನ ತಾಲ್ಲೂಕು ಕಛೇರಿಗೆ ಬಂದಿತು. ತಹಸೀಲ್ದಾರರಿಗೆ ಒಂದು ಮನವಿ ಪತ್ರ ಬರೆದುಕೊಟ್ಟೆವು. ಅದರಲ್ಲಿ ಬೂಒಡೆಯರ ದೌರ್ಜನ್ಯವನ್ನು ವಿವರಿಸಿದ್ದೆವು. ಅವರ ಮೇಲೆ ಕಾನೂನು ಕ್ರಮ ಕೈಗೊಂಡು, ನಮ್ಮ ಉಳುಮೆ ಕೆಲಸಕ್ಕೆ ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದೆವು. ತಹಸೀಲ್ದಾರರು ನಮ್ಮ ಮನವಿ ಪತ್ರ ಸ್ವೀಕರಿಸಿದರೂ ಜಮೀನ್ದಾರರ ಪರವಾಗಿಯೇ ಮಾತಾಡಿದರು. ಇದರಿಂದಾಗಿ ಸರ್ಕಾರವೂ ನಮ್ಮ ರಕ್ಷಎಗೆ ಬರುವುದಿಲ್ಲವೆಂದು ಗೊತ್ತಾಯಿತು. ಸಾಗರದಲ್ಲಿದ್ದ ಹಳ್ಳಿಯ ರೈತವರ್ಗವೇ ಗಾಂಧಿಮಂದಿರದಲ್ಲಿ ಬಂದು ಸೇರಿತು. ನಾನೇ ಆ ಸಭೆಯ ಅಧ್ಯಕ್ಷತೆ ವಹಿಸಿದ್ದೆ.

ನಾಳೆಯಿಂದ ರೈತರ ಮೊದಲ ತಂಡವು ಕಾಗೋಡಿನ ಒಡೆಯರ ಭೂಮಿಯಲ್ಲಿ ಸತ್ಯಾಗ್ರಹ ಆರಂಭಿಸಬೇಕು. ಅವರನ್ನು ಬಂಧಿಸಿದರೆ, ಮತ್ತೊಂದು ತಂಡ ಅದೇ ಸ್ಥಳಕ್ಕೆ ಹೋಗಿ ನೇಗಿಲು ಎತ್ತುಗಳೊಡನೆ ಉಳುಮೆ ಮಾಡಬೇಕು. ಎಲ್ಲ ರೀತಿಯ ಹಿಂಸೆ, ಅಪಮಾನ, ಬಂಧನಗಳನ್ನು ಸಹಿಸಿಕೊಳ್ಳುವ ಇಚ್ಛೆಯುಳ್ಳವರೇ ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದೆ. ಪ್ರತಿಯಾಗಿ ಯಾವ ಹಿಂಸೆಯನ್ನೂ ಮಾಡತಕ್ಕದಲ್ಲವೆಂದು ಹೇಳಿದೆ. ಸಭೆಯಲ್ಲಿ ಜೈಕಾರ ಮೊಳಗಿದವು. ಸತ್ಯಾಗ್ರಹ ಸಮರ ಪ್ರಾರಂಭವಾಯಿತು. ಇದರ ಮುಂದಿನ ಪರಿಣಾಮ ನನಗೆ ತಿಳಿದಿತ್ತು. ಕೂಡಲೇ ಅಲ್ಲಿಂದ ಅದೃಶ್ಯನಾಗಿ ಪೋಲೀಸರ ಕಣ್ಣಿಗೆ ಬೀಳದಂತೆ ಮಂಡಗಳಲೆ ಊರು ಸೇರಿದೆ.

೧೯೧೫ನೇ ಇಸ್ವಿ ಏಪ್ರಿಲ್ ಹದಿನೆಂಟರಂದು ಬೆಳಿಗ್ಗೆ, ಒಂಬತ್ತು ಗಂಟೆಗೆ ಕಾಗೋಡು ಒಡೆಯರ ಭೂಮಿಯಲ್ಲಿ, ತಾಲ್ಲೂಕು ರೈತಸಂಘದಿಂದ ಸತ್ಯಾಗ್ರಹ ಪ್ರಾರಂಭವಾಯಿತು. ಗೇಣೀರೈತರು ಭೂ ಒಡೆಯರಿಂದ ಕೇಳಿದ್ದ ಕೆಲವು ನ್ಯಾಯಯುತವಾದ ಬೇಡಿಕೆಗಳನ್ನು ತಿರಸ್ಕರಿಸಿ, ತಾಲ್ಲೂಕಿನ ಭೂ ಒಡೆಯರ ಸಂಘದ ಮುಖಂಡರಲ್ಲೊಬ್ಬರಾಗಿದ್ದ ಕಾಗೋಡು ಒಡೆಯರು ತಮ್ಮ ಜಮೀನಿಗೆ ಅದರ ಗೇಣೀರೈತರು ಉಳುಮೆಗಾಗಿ ಪ್ರವೇಶ ಮಾಡದಂತೆ ಪ್ರತಿಬಂಧಿಸಿದರು. ಸತ್ಯಾಗ್ರಹಿಗಳು ಭೂಮಿಯ ಸಮೀಪಕ್ಕೆ ಹೋಗುತ್ತಿದ್ದಂತೆಯೇ ಬಂಧನ, ಹೊಡೆತ, ಬೈಗಳಗಳು ಶುರುವಾದವು. ಒಂದು ತಂಡ ಬಂಧನಕ್ಕೆ ಒಳಗಾದರೆ, ಅದರ ಬೆನ್ನಹಿಂದೆಯೇ ಇನ್ನೊಂದು ತಂಡವೂ ಬಂಧನಕ್ಕೆ ಒಳಗಾಗುತ್ತಿತ್ತು. ಇದರಿಂದಾಗಿ ಸಹಸ್ರಾರು ರೈತರು ಜೈಲು ಸೇರಿದರು. ಲಾಠಿಚಾರ್ಜ್ ಮತ್ತು ಪೊಲೀಸರ ಬೂಟುಗಳ ತುಳಿತದಿಂದ ಗಾಯಗೊಂಡವರ ಗೋಳು ಮುಗಿಲು ಮುಟ್ಟಿತು. ಅವಮಾನ, ಹಿಂಸೆಗಳಿಂದ ಜರ್ಜರಿತರಾಗಿದ್ದ ರೈತ ಸಮೂಹ ಪ್ರಾಣದ ಹಂಗು ತೊರದು ರೊಚ್ಚಿನಿಂದ ಸತ್ಯಾಗ್ರಹಕ್ಕೆ ಧಾವಿಸುತ್ತಿದ್ದ ದೃಶ್ಯ ಅವರ್ಣನೀಯ. ನಾನು ಆಗ ಸತ್ಯಾಗ್ರಹ ಮುಂದುವರೆಸಲು ಹೊರಗೆ ಬಾರದಂತೆ ಭೂಗತನಾಗಿ ಉಳಿಯುವುದು ಅನಿವಾರ್ಯವಾಗಿತ್ತು.

ದಿನಾಂಕ ೧೯.೪.೧೯೫೧ರಂದು ಅದೇ ರೀತಿ ಸತ್ಯಾಗ್ರಹಕ್ಕೆ ಹೋದ ಇಪ್ಪತೈದು ಜನ ರೈತರನ್ನು ಬಂಧಿಸಲಾಯಿತು. ಅಂದು ಸಾಗರಕ್ಕೆ ಬಂದಿದ್ದ ರೈತಸಂಘದ ಅಧ್ಯಕ್ಷ ಡಿ. ಮೂಕಪ್ಪನವರನ್ನು ಪೊಲೀಸರು ಬಂಧಿಸಿದರು. ನನ್ನನ್ನು ಬಂಧಿಸಲು ಹುಡುಕುತ್ತಿದ್ದಾರೆಂದು ತಿಳಿಯಲು ನಾನು ಅವರ ಕೈಗೆ ಸಿಗದಂತೆ ತಪ್ಪಿಸಿಕೊಂಡೆ ಮತ್ತು ಸತ್ಯಾಗ್ರಹಕ್ಕೆ ಜನರನ್ನು ಸಿದ್ಧಗೊಳಿಸಿ ಕಳಿಸುತ್ತಿದ್ದೆ.

ದಿನಾಂಕ ೨೦.೪.೫೧ರಂದು ಇಪ್ಪತ್ತೊಂದು ಜನ ಸತ್ಯಾಗ್ರಹ ಮಾಡಿ ಬಂಧಿಸಲ್ಪಟ್ಟರು. ಮತ್ತು ಸತ್ಯಾಗ್ರಹ ನೋಡಲು ನೆರೆದಿದ್ದ ಸುಮಾರು ಐದುನೂರು ಜನ ರೈತರು, ಹೆಂಗಸರು ಮತ್ತು ಮಕ್ಕಳ ಮೇಲೆ ಲಾಠಿಛಾರ್ಜ್ ಮಾಡಿ ಓಡಿಸಲಾಯಿತು.

ದಿನಾಂಕ ೨೧.೪.೧೯೫೧ರಂದು ಸಾಗರದ ತಹಸೀಲ್ದಾರರಾಗಿದ್ದ ನಂದೀಶ್ವರರು ಜೈಲಿನಲ್ಲಿದ್ದ ಡಿ. ಮೂಕಪ್ಪನವರನ್ನೂ ಮತ್ತು ಮರತ್ತೂರಿನ ಕಗ್ಗೆ ರಾಮನಾಯ್ಕರನ್ನೂ ಕರೆದುಕೊಂಡು ಕಾಗೋಡಿಗೆ ಹೋಗಿ ಜಮೀನ್ದಾರರಿಗೂ, ರೈತರಿಗೂ ರಾಜೀ ಮಾಡಿಸುವ ಪ್ರಯತ್ನ ನಡೆಸಿದರು. ಆದರೆ ಸರ್ಕಾರದ ಪೂರ್ಣಬಲವನ್ನು ಪಡೆದುಕೊಂಡಿದ್ದ ಭೂ ಮಾಲೀಕರು ತಹಸೀಲ್ದಾರರಿಗೆ ಅವಮಾನವಾಗುವಂತೆ ಮಾತಾಡಿ ಹಿಂದಕ್ಕೆ ಕಳಿಸಿದರೆಂಬ ವರ್ತಮಾನ ತಿಳಿಯಿತು.

ನಂತರ ಪ್ರತಿದಿನವೂ, ರೈತರ ತಂಡ ಸತ್ಯಾಗ್ರಹ ಆಚರಿಸುವುದು, ಪೊಲೀಸರು ಬಂದಿಸುವುದು, ಲಾಠಿ ಛಾರ್ಜ್ ಮಾಡುವುದು ಸತತವಾಗಿ ನಡೆಯಿತು. ದಿನಾಂಕ ೩೦.೪.೫೧ರಂದು ಜೋಗ ಬಂಗಲೆಗೆ ಐ.ಜಿ.ಪಿ. ಬರುತ್ತಾರೆಂದು ತಿಳಿಯಿತು. ಅವರನ್ನು ಕಂಡು ಪರಿಸ್ಥಿತಿಯನ್ನೆಲ್ಲಾ ವಿವರಿಸಿದೆ. ಸಹಾನುಭೂತಿಯಿಂದ ಕೇಳಿದರೂ ಏನೂ ಬದಲಾವಣೆ ಆಗಲಿಲ್ಲ. ಆಗ ನನ್ನ ಮೇಲೆ ದಸ್ತಗಿರಿ ವಾರೆಂಟ್ ಇದ್ದರೂ, ನನ್ನನ್ನು ಬಂಧಿಸದೆ ಬಿಟ್ಟಿದ್ದು ಒಂದು ವಿಶೇಷ. ನಂತರ ನಾನು ಮಂಡಳಗಳೆಗೆ ಬಂದು ಇಡೀ ರಾತ್ರಿ ರೈತರ ಸಭೆ ನಡೆಯಿಸಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಿದೆವು. ರೈತರು ಸತ್ಯಾಗ್ರಹ ನಡೆಸುವ ಉತ್ಸಾಹ ತೋರಿದರು. ನಾನು ಹೊರಗಡೆಯೇ ಉಳಿದು ನಿರ್ದೇಶನ ಕೊಡಬೇಕೆಂದು ತೀರ್ಮಾನಿಸಿದರು.

‘ಮಂಡಗಳಲೆ’ ಕಾಗೋಡು ಚಳವಳಿಗೆ ಮುಖ್ಯ ಕೇಂದ್ರವಾಯಿತು. ಪೊಲೀಸರ ಬಿರುಸಿನ ಚಟುವಟಿಕೆ ಸುತ್ತಮುತ್ತಲ ಹಳ್ಳಿಗಳನ್ನು ವ್ಯಾಪಿಸಿತು. ಇದರಿಂದಾಗಿ ನಾನು ಸುರಕ್ಷಿತ ಸ್ಥಳವೊಂದಕ್ಕೆ ಹೋಗಲೇಬೇಕಾಯಿತು. ಇದರಿಂದಾಗಿ ನನ್ನನ್ನು ತಾಳಗುಪ್ಪದಿಂದ ಮುಂದೆ ಒಂದು ಕೊಂಪೆಯಾಗಿದ್ದ ಮಂಜಿನಕಾನು ಎಂಬಲ್ಲಿ ಇರಿಸಿದರು. ನಾನು ಅಲ್ಲಿಂದಲೇ ಸತ್ಯಾಗ್ರಹಕ್ಕೆ ನಿರ್ದೇಶನಗಳನ್ನು ಕೊಡುತ್ತಿದ್ದೆ.

ನಾನು ಅಲ್ಲಿದ್ದಾಗಲೇ ಜಿಲ್ಲಾಧಿಕಾರಿಗಳಿಂದ ಒಂದು ಪತ್ರವನ್ನು ತಂದುಕೊಟ್ಟರು. ೧೭.೫.೫೧ರಂದು ಶಿವಮೊಗ್ಗದ ಸರ್ಕೀಟ್ ಹೌಸ್‌ನಲ್ಲಿ ಜಮೀನ್ದಾರರ ಪ್ರತಿನಿಧಿಗಳು ಮತ್ತು ರೈತರ ಪ್ರತಿನಿಧಿಗಳನ್ನು ಕಂಡು ಸಂಧಾನ ಮೂಡಿಸಲು ಸರ್ಕಾರ ಉನ್ನತ ಅಧಿಕಾರಿಗಳನ್ನು ಕಳಿಸುತ್ತದೆಂದೂ, ನೀವೂ ಅಲ್ಲಿಗೆ ಬರಬೇಕೆಂತಲೂ ಪತ್ರದಲ್ಲಿ ತಿಳಿಸಲಾಗಿತ್ತು.

ಅದರಂತೆ ನೂ ಆ ಸಭೆಗೆ ಹೋದೆ. ಸಂಧಾನದ ಮಾತುಕತೆಗಳು ನಡೆದವು. ಆದರೆ ಸರ್ಕಾರದ ಪರವಾಗಿ ಬಂದ ಉನ್ನತ ಅಧಿಕಾರಿಗಳು ಕೊನೆಯದಾಗಿ ನಮಗೆ ತಿಳಿಸಿದ್ದು ಇಷ್ಟು; ೧) ಬಂಧನದಲ್ಲಿರುವ ಸತ್ಯಾಗ್ರಹಿಗಳನ್ನೆಲ್ಲಾ ಬಿಟ್ಟುಬಿಡುತ್ತೇವೆ. ೨) ಭೂಮಾಲೀಕರಿಗೆ ಅವರ ಭೂಮಿಯನ್ನು ಕೊಟ್ಟು, ರೈತರಿಗೆ ಪುನರ್ವಸತಿಯ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು.

ನಮ್ಮ ಪರವಾಗಿ ನಾಯಕತ್ವ ವಹಿಸಿದ್ದ ಕಡಿದಾಳ್ ಮಂಜಪ್ಪಗೌಡರೂ ಸಹ ಈ ಸಲಹೆಗೆ ಏನು ಹೇಳೋಣ ಎಂದು ನಮ್ಮನೇ ಕೇಳಿದರು. ಸದಾ ನಮ್ಮ ಹಿತವನ್ನೇ ಚಿಂತಿಸುತ್ತಿದ್ದ ಅವರ ಮನಸ್ಸಿಗೆ ನೋವು ಉಂಟು ಮಾಡುವುದು ಸಾಧ್ಯವಿರಲಿಲ್ಲ. ಅವರಿಗೂ ಬೇರೆ ಯಾವ ಬಾರಿಯೂ ತೋರದ ಪರಿಸ್ಥಿತಿ. ಯಾವ ತೀರ್ಮಾನಕ್ಕೂ ಬರುವುದು ಸಾಧ್ಯವಾಗಲಿಲ್ಲ. ಕೊನೆಯದಾಗಿ ಸರ್ಕಾರದ ಪ್ರತಿನಿಧಿಗಳಿಂದ ಬಂದ ಸಲಹೆಯೆಂದರೆ ಗೇಣಿದಾರರು ಮತ್ತು ಭೂಮಾಲೀಕರು ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಳ್ಳಬೇಕು. ಸರ್ಕಾರ ಅವರ ಮಧ್ಯೆ ಏನು ಮಾಡಲಾಗುವುದಿಲ್ಲ ಎಂದು ತಿಳಿಸಲಾಯಿತು.

ಇದರಿಂದ ಭೂಮಾಲೀಕರು ಇನ್ನಷ್ಟು ಬಿಗಿಯಾಗಿ ಕುಳಿತು; ದರ್ಪದ ಮಾತಾಡದರು. ಅವರ ದರ್ಪಕ್ಕೆ ಪ್ರತಿ ಉತ್ತರ ನೀಡುವ ಸಾಮರ್ಥ್ಯ ರೈತಸಂಘಕ್ಕೆ ಸಾಲದಾಯಿತು. ಸಂಕಟದಿಂದ ಕೂಡಿದ ನಮ್ಮ ಅಸಹಾಯಕ ಪರಿಸ್ಥಿತಿಯ ಮೌನವನ್ನು ಶರಣಾಗತಿಯ ಒಪ್ಪಿಗೆಯೆಂದೇ ಅವರು ತಿಳಿದಿರಬಹುದು.

ಮಲೆನಾಡು ರೈತಸಂಘದ ಅಧ್ಯಕ್ಷರಾಗಿದ್ದ ಕಡಿದಾಳು ಮಂಜಪ್ಪನವರು, ಆಸಂಘದ ಕಾರ್ಯದರ್ಶಿಗಳಾಗಿದ್ದ ಬಸವಾನಿ ರಾಮಶರ್ಮರು ನಮ್ಮ ಚಳವಳಿಯ ಪರವಾಗಿ ಬಹಳ ಶ್ರಮಪಡುತ್ತಿದ್ದರು. ಸರ್ಕಾರದೊಂದಿಗೆ ವ್ಯವಹರಿಸಿ ಏನಾದರೊಂದು ರಾಜೀ ತೀರ್ಮಾನಕ್ಕಾಗಿ ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನ ಫಲಿಸಲಿಲ್ಲ. ಆ ಸಂಘದಿಂದ ಸತ್ಯಾಗ್ರಹಕ್ಕೆ ಯಾರೂ ಬರಲಿಲ್ಲ.

ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಇದೇ ರೀತಿ ನಡೆಯಿತು. ಆದರೆ, ಸರ್ಕಾರ ಮತ್ತು ಒಡೆಯರ ಕೈಮೇಲಾಗಿತ್ತು. ಇದರಿಂದಾಗಿ ಚಳವಳಿ ಮುಂದುವರಿಸುವುದು ಅಸಾಧ್ಯವಾಯಿತು. ಸೋತು ಒಡೆಯರಿಗೆ ಶರಣಾಗುವುದು ಮಾತ್ರ ನಮಗೆ ಉಳಿದಿರುವ ಮಾರ್ಗವಾಗಿತ್ತು.

ಇಂಥ ಪರಿಸ್ಥಿತಿಯಲ್ಲಿ ರಾಜ್ಯದ ಸಮಾಜವಾದಿ ಪಕ್ಷದ ಮುಂದಾಳುಗಳಾಗಿದ್ದ ಶಾಂತವೇರಿ ಗೋಪಾಲಗೌಡರು ಮತ್ತು ವೈ.ಆರ್. ಪರಮೇಶ್ವರಪ್ಪನವರು, ದೇವದೂತರಂತೆ ಬಂದು ತಮ್ಮ ಪಕ್ಷವನ್ನು ಸತ್ಯಾಗ್ರಹಕ್ಕೆ ತರದೇ ಇದ್ದಿದ್ದರೆ, ತೆಂಲಗಾಣದಲ್ಲಿ ನಕ್ಸಲೀಯರನ್ನು ಧ್ವಂಸಮಾಡಿದ ರೀತಿಯಲ್ಲಿ ಸರ್ಕಾರವು ತನ್ನ ಬಲದಿಂದ ಗೇಣಿರೈತರನ್ನು ತಲೆಎತ್ತದಂತೆ ತುಳಿದುಬಿಡುತ್ತಿತ್ತು ಎಂಬುದನ್ನು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ.

ಇಂತಹ ಚಿಂತಾಜನಕವಾದಸೋಲುವ ಸ್ಥಿತಿಯಲ್ಲಿ ದೇವದೂತರಂತೆ ಬಂದು ನಮ್ಮ ಕೈಹಿಡಿದವರು ಎಸ್. ಗೋಪಾಲಗೌಡರು ಮತ್ತು ಅಣ್ಣಯ್ಯ (ವೈ.ಆರ್. ಪರಮೇಶ್ವರಪ್ಪ) ಸಮಾಜವಾದಿ ಪಕ್ಷ ಮತ್ತು ರೈತಸಂಘ ಸೇರಿಕೊಂಡು ಸತ್ಯಾಗ್ರಹವನ್ನು ಮುಂದುವರೆಸೋಣ ಎಂದು ಭಸವಸೆ ನೀಡಿದರು. ನಾವೂ ಒಪ್ಪಿದೆವು.

ಈ ರೀತಿ ನಮ್ಮಲ್ಲಿ ಒಪ್ಪಂದವಾದ ಮರುದಿನವೇ ದಿನಾಂಕ ೧೯.೫.೫೧ರಂದು, ಸಮಾಜವಾದಿ ಪಕ್ಷದ ಕಾರ್ಯದರ್ಶಿಗಳಾಗಿದ್ದ ಜಿ. ಸದಾಶಿವರಾಯರು ಕಾಗೋಡಿಗೆ ತೆರಳಿ, ಐದು ಜನ ರೈತರೊಂದಿಗೆ ಸತ್ಯಾಗ್ರಹ ಆಚರಿಸಿ ಬಂಧಿಸಲ್ಪಟ್ಟರು. ಅದರ ಮರುದಿನ, ೨೦.೫.೫೧ರಂದು ಶಿವಮೊಗ್ಗೆಯ ಪ್ರಸಿದ್ಧ ಸಮಾಜವಾದೀ ಎಸ್. ರಾಮಯ್ಯನವರೂ ಕಾಗೋಡಿಗೆ ತೆರಳಿ ಆರು ಜನ ರೈತರೊಡನೆ ಸತ್ಯಾಗ್ರಹ ಮಾಡಿ ಜೈಲು ಸೇರಿದರು.

ನಾನು ದಿನಾಂಕ ೨೧.೫.೧೯೫೧ರಂದು ಕಾಗೋಡಿನಲ್ಲಿ ರೈತರ ಸಭೆಯನ್ನು ಏರ್ಪಡಿಸಿದ್ದೆ. ಆ ಸಭೆಯಲ್ಲಿ ಗೋಪಾಲಗೌಡರು ಮತ್ತು ನಾನು ಭಾಷಣ ಮಾಡಿ ಇಲ್ಲಿಯವರೆಗೆ ನಡೆದ ಎಲ್ಲಾ ವಿದ್ಯಮಾನಗಳನ್ನೂ ರೈತರಿಗೆ ವಿವರಿಸಿದೆವು. ಮುಂದಿನ ಹೋರಾಟವನ್ನು ರೈತಸಂಘ ಮತ್ತು ಸಮಾಜವಾದಿ ಪಕ್ಷ ಒಟ್ಟು ಸೇರಿ ನಡೆಯಿಸಬೇಕೆಂಬ ನಮ್ಮ ಒಪ್ಪಂದಕ್ಕೆ ಸಭೆ ಅನುಮೋದನೆ ನೀಡಿತು; ಮತ್ತು ಈ ಒಪ್ಪಂದದ ಪ್ರಕಾರ ಮೊದಲನೇ ಸತ್ಯಾಗ್ರಹಿಗಳ ತಂಡದ ನಾಯಕತ್ವವನ್ನು ನಾನೇ ವಹಿಸಬೇಕೆಂದೂ ಸಹ ಸಭೆಯಲ್ಲಿ ನಿರ್ಣಯಿಸಲ್ಪಟ್ಟಿತ್ತು ಆ ನಿರ್ಣಯದ ಪ್ರಕಾರ ನಾನ ದಿನಾಂಕ ೨೨.೫.೫೧ರಂದು ದಾವಣಗೆರೆಯ ಸಮಾಜವಾದಿ ವಕೀಲ ಕೆ. ವೀರಭದ್ರಪ್ಪ ಮತ್ತು ಶಿವಮೊಗ್ಗೆಯ ವಕೀಲ ಎಸ್.ಜಿ. ಗೋವಿಂದಪ್ಪನವರೂ ಸೇರಿ ಮುವತ್ತೊಂದು ಜನ ರೈತರೊಡನೆ ಕಾಗೋಡು ಭೂಮಿಯಲ್ಲಿ ಸತ್ಯಾಗ್ರಹಕ್ಕೆ ಹೋಗಿ ಬಂಧಿಸಲ್ಪಟ್ಟು ಸೆರೆಮನೆ ಸೇರಿದೆವು.

ಇದರಿಂದಾಗಿ ಸತ್ಯಾಗ್ರಹಕ್ಕೆ ಹೊಸರೂಪ ಬಂದಿತು. ರೈತವರ್ಗದಲ್ಲಿ ಹೋರಾಟದ ಉತ್ಸಾಹ ಹೆಚ್ಚಿತು. ಪ್ರತಿಕೆಗಳಲ್ಲಿ ಪರ ವಿರೋಧ ಸುದ್ದಿಗಳೂ, ಹೇಳಿಕೆ ಪ್ರತಿಹೇಳಿಕೆಗಳೂ ಬಿರುಸಿನಿಂದ ಪ್ರಕಟವಾಗತೊಡಗಿದವು. ವರ್ಗಕಲಹದ ವಿರಾಟ್ ರೂಪದ ದರ್ಶನವಾಗತೊಡಗಿತು. ಪ್ರತಿದಿನವೂ ಬೇರೆ ಬೇರೆ ಊರುಗಳಿಂದ ಬರುವ ಸತ್ಯಾಗ್ರಹಿಗಳ ತಂಡ ವೀರಘೋಷಣೆಗಲೊಂದಿಗೆ ಕಾಗೋಡಿಗೆ ತೆರಳಿ ಬಂಧನಕ್ಕೊಳಗಾಗುತ್ತಿದ್ದರು. ಸರ್ಕಾರದ ನಿಲುವಿನಲ್ಲಿಯೂ ಮತ್ತಷ್ಟು ಬಿಗುವೂ ಹೆಚ್ಚಿತು. ಪೊಲೀಸರ ದೌರ್ಜನ್ಯ ಮಿತಿಮೀರಿತು.

ದಿನಾಂಕ ೫.೬.೫೧ರಂದು ಸಿದ್ಧಪಾರದ ತಾಲ್ಲೂಕಿನ ಕೋಲಸಿರ್ಸಿಯ ನೂರಾರು ರೈತರನ್ನು ಕೂಡಿಕೊಂಡು ಮಲೆನಾಡು ರೈತಸಂಘದ ಪ್ರಧಾನ ಕಾರ್ಯದರ್ಶಿ ಬಸವಾನಿ ರಾಮಶರ್ಮರೂ ಸತ್ಯಾಗ್ರಹಕ್ಕೆ ಇಳಿದರು. ಸತ್ಯಾಗ್ರಹಕ್ಕಾಗಿ ಸತ್ಯಾಗ್ರಹಿಗಳು ಒಯ್ಯುತ್ತಿದ್ದ ನೇಗಿಲು, ನೊಗ ಮುಂತಾದ ವ್ಯವಸಾಯದ ಉಪಕರಣಗಲು ಸತ್ಯಾಗ್ರಹಿಗಳೊಂದಿಗೇ ಕೋರ್ಟಿಗೆ ಒಯ್ಯಲ್ಪಡುತ್ತಿದ್ದವು. ಇದರಿಂದಾಗಿ ಕೋರ್ಟಿನ ಮುಂದುಗಡೆಯಲ್ಲಿ ಚಿಕ್ಕಗುಡ್ಡದಂತೆ ರಾಶಿಯಾಗಿ ಬಿದ್ದು ಅವೆಲ್ಲ ಸಾರ್ವಜನಿಕರ ಕುತೂಹಲವನ್ನು ಸೆಳೆದಿದ್ದವು.

ದಿನಾಂಕ ೧೨.೬.೧೯೫೧ರಂದು ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪಗೌಡರು ಸೊರಬ ತಾಲ್ಲೂಕಿನ ರೈತ ಮುಂದಾಳು ಚಿತ್ರಟ್ಟೆಹಳ್ಲಿ ಭೀಮಣ್ಣನವರನ್ನು ಜೊತೆಯಲ್ಲಿ ಕರೆದುಕೊಂಡು ಸಂಧಾನದ ಮಾತುಕತೆಗಾಗಿ ನಾನಿದ್ದ ಜೈಲಿಗೆ ಬಂದರು. ಆದರೆ ಯಾವ ತೀರ್ಮಾನಕ್ಕೂ ಬರಲಾಗಲಿಲ್ಲ.

ದಿನಾಂಕ ೧೩.೬.೧೯೫೧ರಂದು ಡಾ.ರಾಮಮನೋಹರ ಲೋಹಿಯಾರವರು ನಮ್ಮಜೈಲಿಗೆ ಭೇಟಿಕೊಟ್ಟರು. ನಮಗೆಲ್ಲಾ ಧೈರ್ಯ ಹೇಳಿದರು. ಅಂದೇ ಸಾಗರದ ಗಾಂಧಿ ಮೈದಾನದಲ್ಲಿ ಸೇರಿದ ಭಾರಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಿ, ಸರ್ಕಾರ ಮತ್ತು ಜಮೀನ್ದಾರರ ನಿಲುವನ್ನೂ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನೂ ಖಂಡಿಸಿದರು. ಸಹಸ್ರಾರು ರೈತಸಮೂಹದೊಡನೆ ಕಾಗೋಡಿಗೆ ತೆರಳಿ, ಸರ್ಕಾರದ ತಡೆಯನ್ನು ಮುರಿದು ಭೂಮಿಯಲ್ಲಿ ಪ್ರವೇಶ ಮಾಡಿದರು. ಇದರಿಂದ ಕೆರಳಿದ ಸರ್ಕಾರ ಲೋಹಿಯಾರವರನ್ನೂ, ಅವರ ಜೊತೆಗಿದ್ದವರನ್ನೂ ಬಂಧಿಸಿತು. ಮತ್ತು ಅಂದೇ ರಾತ್ರಿ ಹಿಂದೆ ನಡೆಸಿದ್ದ ಹಿಂಸೆ, ದೌರ್ಜನ್ಯಗಳ ಹತ್ತುಪಟ್ಟು ಕಾಗೋಡು ರೈತರ ಮೇಲೆ ಪೋಲಿಸರು ದೌರ್ಜನ್ಯಗಳನ್ನು ನಡೆಸಿದರು. ಇಡೀ ಊರಿನ ಜನ ತಮ್ಮ ಪ್ರಾಣರಕ್ಷಣೆಗಾಗಿ ಕಾಡು ಸೇರುವಂತಾಯಿತು.

ಶಾಂತವೇರಿ ಗೋಪಾಲಗೌಡರು ಮತ್ತು ಗರುಡಶರ್ಮರು ಬಂಧನದ ವಾರಂಟಿಗೆ ತಪ್ಪಿಸಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ರೈತರನ್ನು ಹುರಿದುಂಬಿಸುತ್ತಾ ಸತ್ಯಾಗ್ರಹದ ಚೇತನ ಶಕ್ತಿಯಾಗಿ, ಸೂತ್ರಧಾರಿಗಳಾಗಿ ಊಟ ನಿದ್ರೆಗಳ ಪರಿವೆಯಿಲ್ಲದೆ ಬಿರುಸಿನ ಸಂಘಟನೆಯಲ್ಲಿ ತೊಡಗಿದ್ದರು. ದಿನಾಂಕ ೨೦.೬.೧೯೫೨ರಂದು, ಬಿಹಾರದ ಪ್ರಸಿದ್ದ ಕಿಸಾನ್ ನಾಯಕ ರಾಮನಂದನ ಮಿಸ್ರ ಅವರು ಸಾಗರಕ್ಕೆ ಬಂದು ರೈತಹೋರಾಟವನ್ನು ಬೆಂಬಲಿಸಿ ಭಾಷಣ ಮಾಡಿದರು. ನಾವಿರುವ ಜೈಲಿಗೂ ಭೇಟಿನೀಡಿ ಸತ್ಯಾಗ್ರಹಕ್ಕೆ ಯಶಸ್ಸು ಕೋರಿದರು.

ದಿನಾಂಕ ೨೭.೬.೫೧ರಂದು ಆಗಿನ ಕಾಂಗ್ರೆಸ್ ಅಧ್ಯಕ್ಷ ಕೆಂಗಲ್ ಹನುಮಂತಯ್ಯನವರು ಕಾಗೋಡಿಗೆ ಭೇಟಿಕೊಟ್ಟು, ಕಾಗೋಡಿನ ಭೂಮಿ ರೈತರ ಸ್ವಾಧೀನದಲ್ಲಿ ಇದ್ದುದನ್ನು ಮನಗಂಡು ಸರ್ಕಾರವನ್ನು ಭೂಮಾಲೀಕರನ್ನೂ ಸಮರ್ಥಿಸಲಾರದೆ ಹೊರಟುಹೋದರು.

ದಿನಾಂಕ ೩.೭.೫೧ರಂದು ಗೋಪಾಲಗೌಡರು, ಗಂಡುಗಲಿ, ಬಾ.ಸು. ಕೃಷ್ಣಮೂರ್ತಿ ಅವರ ಜೊತೆಯಲ್ಲಿ ಕೆಲಸಮಾಡುತ್ತಿದ್ದ ಕಾರ್ಯಕರ್ತರೂ ಸೇರಿ ಒಟ್ಟು ಮೂವತ್ತೈದು ಜನರನ್ನು ಪೊಲೀಸರು ಬಂಧಿಸಿದರು.

ದಿನಾಂಕ ೪.೭.೫೧ರಂದು ಬರಸಿನ ದ್ಯಾವಪ್ಪ, ಮಂಡಗಳಲೆ ರಾಮನಾಯ್ಕ ಮೊದಲಾದ ರೈತ ಪ್ರಮುಖರನ್ನು ಬಂಧಿಸಿ ಸಾಗರಕ್ಕೆಕರೆದೊಯ್ಯುವಾಗ ಕಾನ್ಲೆ ಸ್ಟೇಷನ್ನಿನಲ್ಲಿ ಬುಡನ್‌ಶರೀಫ್ ಎಂಬ ಕ್ರೂರಿ ಸಬ್‌ಇನ್ಸ್‌ಪೆಕ್ಟರ್ ಸತ್ಯಾಗ್ರಹಿಗಳ ಮೇಲೆ ನಡೆಯಿದ ಅಮಾನುಷ ಚಿತ್ರಹಿಂಸೆ ಸತ್ಯಾಗ್ರಹ ಕಾಲದಲ್ಲಿ ನಡೆದ ಎಲ್ಲ ದೌರ್ಜನ್ಯಗಳನ್ನು ಮೀರಿಸಿದ ಉದಾಹರಣೆಯಾಯಿತು.

ದಿನಾಂಕ ೭.೭.೫೧ರಂದು ಸಂಧಾನ ಮಾತುಕತೆಗಾಗಿ ಕಡಿದಾಳ್ ಮಂಜಪ್ಪಗೌಡರು ಜೈಲಿನಲ್ಲಿದ್ದ ನನ್ನನ್ನು ಭೇಟಿಮಾಡಿದರು. ಸದಾ ರೈತರ ಪರವಾಗಿ ಚಿಂತಿಸುತ್ತಿದ್ದ ಅವರು ಯಾವುದಾದರೂ ರೀತಿಯಲ್ಲಿ ರೈತರಿಗೆ ಒದಗಿದ ಸಂಕಟ ನಿವಾರಣೆಯಾಗಲೆಂದು ಬಯಸುತ್ತಿದ್ದರು. ಆದರೆ ಸಂಧಾನದ ಮಾರ್ಗಕ್ಕೆ ಹೊರತಾಗಿ ರೈತವರ್ಗಕ್ಕೆ ಸಹಾಯಮಾಡಲು ಅವರಿಗೆ ಸಾಧ್ಯವಾಗಲೇ ಇಲ್ಲ.

ದಿನಾಂಕ ೧೧.೭.೫೧ರಂದು ಎನ್.ಕೆ. ಸೀತಾರಮಯ್ಯಂಗಾರ್‌ರವರು ಸಾಗರದಲ್ಲಿ ರೈತರ ಭಾರಿ ಮೆರವಣಿಗೆಯ ಮುಂದಾಳತ್ವವಹಿಸಿ, ಸಭೆ ನಡೆಯಿಸಿ, ಭಾಷಣ ಮಾಡಿ ಸರ್ಕಾರ ಮತ್ತು ಭೂಮಾಲೀಕರ ನಿಲುವು ಮತ್ತು ರೈತರ ಮೇಲೆ ನಡೆಯಿಸಿರುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು. ಪೊಲೀಸರು ಅವರನ್ನು ಬಂಧಿಸಲು ಮಾಡಿದ ಪ್ರಯತ್ನವನ್ನು ವ್ಯರ್ಥಗೊಳಿಸಿ ತಪ್ಪಿಸಿಕೊಂಡರು.

ದಿನಾಂಕ ೧೬.೭.೫೧ರಂದು ಸಾಗರದ ರೈತರು ಬೆಂಗಳೂರಿಗೆ ತೆರಳಿ, ಅಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಸೇರಿದ್ದ ಪ್ರಮುಖರ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದಿನಾಂಕ ೧೦.೮.೫೧ರಂದು ಸೊರಬ ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ರೈತರು ಬಂದು ಸಾಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಅಲ್ಲಿಂದ ಕಾಗೋಡಿಗೆ ಹೋಗಿ ಸತ್ಯಾಗ್ರಹ ಮಾಡಲು ಪ್ರಯತ್ನಿಸಿದಾಗ, ಅಲ್ಲಿದ್ದ ರಿಸರ್ವ್ ಪೊಲೀಸರು ಮತ್ತು ಜಮೀನ್ದಾರರೂ ಸೇರಿ ಅವರನ್ನು ಇಕ್ಕಟ್ಟಿನ ಸ್ಥಳದಲ್ಲಿ ಕೂಡಿಹಾಕಿದರು. ಮಧ್ಯರಾತ್ರಿ ಹೊತ್ತಿನಲ್ಲಿ ಸತ್ಯಾಗ್ರಹಿಗಳನ್ನು ದೂರದ ಕಾಡಿಗೆ ಒಯ್ದು ಬಿಟ್ಟು ಬಂದರು.

ದಿನಾಂಕ ೨೧..೫೧ರಂದು ಜಯಪ್ರಕಾಶ ನಾರಾಯಣರು ಸಾಗರಕ್ಕೆ ಬಂದರು. ಸಾಗರದಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ದೊರಯಿತು. ಸಾರ್ವಜನಿಕ ಸಭೆಯಲ್ಲಿ ಕಾಗೋಡು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು. ಆ ದಿನ ಸಂಜೆ ನಾವಿದ್ದ ಜೈಲಿಗೆ ಭೇಟಿಕೊಟ್ಟು. ‘ನಿಮ್ಮ ಸತ್ಯಾಗ್ರಹದ ವಿಷಯ ದೇಶಕ್ಕೇ ತಿಳಿದಿದೆ. ನೀವು ಹೆದರದೆ ಧೈರ್ಯವಾಗಿ ಹೋರಾಡಿರಿ. ಜಯ ನಿಮಗೆ ಸಿಕ್ಕೇಸಿಗುತ್ತದೆ’ ಎಂದು ಹೇಳಿದರು. ನನ್ನನ್ನು ಮಾತನಾಡಿಸಿ ಅಪ್ಪಿಕೊಂಮಡರು. ನನ್ನ ಡೈರಿಯಲ್ಲಿ ತಮ್ಮ ಹಸ್ತಾಕ್ಷರದಲ್ಲಿರುಜುಮಾಡಿದರು ಅದಿನ್ನೂ ನನ್ನ ಬಳಿ ಜೋಪಾನವಾಗಿದೆ.

ಈ ಪ್ರಮುಖ ರಾಷ್ಟ್ರನಾಯಕರುಗಳ ಭೇಟಿ ಮತ್ತು ಬೆಂಬಲದಿಂದಾಗಿ ಕಾಗೋಡು ಸತ್ಯಾಗ್ರಹ ದೇಶಾದ್ಯಂತ ಪ್ರಚಾರ ಪಡೆಯಿತು. ರೈತರ ಬೇಡಿಕೆಗಳ ಈಡೇರಿಕೆಗಾಗಿ ನಡೆಯಿಸಿದ ಅಹಿಂಸಾತ್ಮಕ ಹೋರಾಟದ ರೀತಿ ಸ್ವಾತಂತ್ರ್ಯ ಹೋರಾಟದ ಮಾದರಿಯನ್ನೇ ಅನುಸರಿಸಿದ ಕೀರ್ತಿಗೆ ಪಾತ್ರವಾಯಿತು.

ಇದಕ್ಕೆ ಸರಿಯಾಗಿ, ಸತ್ಯಾಗ್ರಹಿಗಳ ಮೇಲೆ ಹೊರಿಸಿದ ಅಕ್ರಮ ಪ್ರವೇಶದ ಆಪಾದನೆಯನ್ನು ನ್ಯಾಯಾಲಯ ತಿರಸ್ಕರಿಸಿ, ಪ್ರತಿದಿನವೂ ರೈತಸತ್ಯಾಗ್ರಹಿಗಳನ್ನು ಬಿಡುಗಡೆ ಮಾಡಲು ಪ್ರಾರಂಭವಾಯಿತು. ಇದರಿಂದ ಆಪಾದನೆ ಹೊರಿಸಿದ ಸರ್ಕಾರ ಮತ್ತು ಭೂಮಾಲೀಕರಿಗೆ ಮುಖಭಂಗವಾಯಿತು. ಸತ್ಯಕ್ಕಾಗಿ ಹೋರಾಡಿದ ಸತ್ಯಾಗ್ರಹಕ್ಕೆ ಗೆಲವು ಪ್ರಾರಂಭವಾಯಿತು. ಭೂಮಿಗೆ ಇಳಿಯುವ ರೈತರನ್ನು ತಡೆಗಟ್ಟುವ ಧೈರ್ಯ ಭೂಮಾಲಿಕರಿಗೆ ಇಲ್ಲವಾಯಿತು.

ಸಾಗರ ಸಬ್‌ಜೈಲಿನಲ್ಲಿದ್ದ ನಮ್ಮನ್ನೂ ಹೊರಬರುವಂತೆ ವರ್ತಮಾನ ಕಳಿಸಿದರು. ದಿನಾಂಕ ೧೬.೧೦.೫೧ರಂದು ಬೆಳಿಗ್ಗೆ ನಮ್ಮ ಜೈಲ್ ಅಧಿಕಾರಿಗಳು ಬಂದರು. ನೀವೆಲ್ಲ ಒಂದು ಮುಚ್ಚಳಿಕೆಗೆ ರುಜುಹಾಕಿ ಹೋಗಬಹುದು; ಕೇಸ್ ಇರುವರು ಕೋರ್ಟಿಗೆ ಹಾಜರಾದರೆ ಸಾಕು. ಸರ್ಕಾರದಿಂದ ಆಜ್ಞೆ ಬಂದಿದೆ ಎಂದು ತಿಳಿದರು. ಬಹಳಷ್ಟು ಕೇಸ್‌ಗಳು ವಜಾ ಆಗಿದ್ದವು. ಇನ್ನು ಕೇವಲ ಒಂಬತ್ತು ಜನರ ಮೇಲೆ ಮಾತ್ರಕೇಸುಗಳಿದ್ದವು. ಅದರಲ್ಲಿ ನನ್ನ ಮೇಲೆಯೇ ಏಳು ಕೇಸುಗಳಿದ್ದವು. ಒಟ್ಟು ನನ್ನ ಮೇಲೆ ೧೦೭ನೇ ಸೆಕ್ಷನ್ ಕೇಸೂ ಸೇರಿ ೧೪ ಕೇಸುಗಳನ್ನು ಪೊಲೀಸರು ಕೋರ್ಟಿಗೆ ಕೊಟ್ಟಿದ್ದರು. ಅಂದು ಎಲ್ಲರೂ ಬಿಡುಗಡೆ ಹೊಂದಿ ಊರು ಸೇರಿದೆವು.

ಅಲ್ಲಿಯವರೆಗೂ ಕೇವಲ ದೀವರ ಗೊಂದಲ ಎನ್ನಿಸಿಕೊಂಡಿದ್ದ ಕಾಗೋಡು ಚಳವಳಿ, ಗೋಪಾಲಗೌಡರ ಸಮಾಜವಾದಿ ಪಕ್ಷದ ಪ್ರವೇಶದಿಂದಾಗಿ ಸಮಾಜವಾದಿ ಚಳವಳಿಯಾಗಿ ಏರ್ಪಟ್ಟಿತು. ಈ ಚಾರಿತ್ರಿಕ ಹೋರಾಟಕ್ಕೆ ಪ್ರಸಿದ್ಧ ಸಮಾಜವಾದಿ ಚಿಂತಕ ಡಾ. ರಾಮಮನೋಹರ ಲೋಹಿಯಾ, ಸಿ.ಜಿ.ಕೆ. ರೆಡ್ಡಿ, ಖಾದ್ರಿ ಶಾಮಣ್ಣ ಮುಂತಾದ ಧುರೀಣರು ಬಂದು ಭಾಗವಹಿಸಿ ಬಂಧಿತರಾದರು. ಇದೆಲ್ಲ ಗೋಪಾಲಗೌಡರ ರಾಜಕೀಯ ಪ್ರಬುದ್ಧತೆಯಿಂದಾಗಿ ಎಲ್ಲ ಕಡೆ ವ್ಯಾಪಿಸಿತು ಮಾತ್ರವಲ್ಲ ಕರ್ನಾಟಕ ರಾಜ್ಯದಲ್ಲಿ ಸಮಾಜವಾದೀ ಸಂಘಟನೆ ಭದ್ರವಾಗಿ ತಳವೂರಿತು. ಇದರಿಂದಾಗಿ ಗೋಪಾಲಗೌಡರು ರಾಜ್ಯದ ಅಗ್ರಗಣ್ಯ ನಾಯಕರಾದರು. ಇವರೊಂದಿಗೆ ರೈತಸಂಘಟನೆಯನ್ನು ಅಂದಿನವರೆಗೆ ಬೆಲೆಸಿಕೊಂಡು ಬಂದವರೂ ಸಹಕರಿಸಿದರು. ಇದರಿಂದಾಗಿ ಇಡೀ ರಾಜ್ಯದ ಪ್ರಜ್ಞಾವಂತರೆಲ್ಲಾ ಕಾಗೋಡಿನ ಕಡೆಗೆ ಕಣ್ಣರಳಿಸಿ ನೋಡುವಂತಾಯಿತು. ಪ್ರಜಾವಾಣಿ ದಿನಪತ್ರಿಕೆ ‘ಸಿಡಿದೀತು’ ಎಂಬ ತಲೆಬರಹದಿಂದ ಸಂಪಾದಕೀಯವನ್ನೂ ಬರೆಯಿತು.

ಮುಂದೆ ಗೇಣಿಪದ್ಧತಿ ರದ್ದಾಗಲು, ಉಳುವವನೆ ನೆಲದೊಡೆಯ ಎಂದು ಆಳುವ ಸರ್ಕಾರಗಳು ಒಪ್ಪಿಕೊಳ್ಳಲು ಕಾರಣವಾದ ಈ ಸತ್ಯಾಗ್ರಹವನ್ನು ಸ್ಮರಿಸುವುದು, ರೈತ ಚಳವಳಿಗಳ ಇತಿಹಾಸಕ್ಕೆ ಸಲ್ಲಿಸುವ ಕೃತಜ್ಞತೆ ಎಂದು ಭಾವಿಸಿದ್ದೇನೆ.