ಮುವತ್ತು ವರ್ಷಗಳ ಹಿಂದೆ ಹಳೇ ಮೈಸೂರಿನ ರೈತರು ಭೂಮಾಲಿಕರು ಹಾಗೂ ಸರ್ಕಾರದ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡಿದ ಕಾಗೋಡು ರೈತ ಸತ್ಯಾಗ್ರಹದ ನೆನಪು ಜನ ಮನದಲ್ಲಿ ಇಂದೂ ಹಸಿರಾಗಿಯೇ ಉಳಿದಿದೆ. ಈ ಹೋರಾಟದಲ್ಲಿ ಸಕ್ರಿಯ ಪಾತ್ರಧಾರಿಗಳಾದವರಿಗೆ ಸತ್ಯಾಗ್ರಹ ಕಾಲದ ಒಂದೊಂದು ಘಟನೆಗಳನ್ನು ನೆನದರೂ ಮೈ ನವಿರೇಳುತ್ತದೆ. ಪ್ರಾದೇಶಿಕ ವ್ಯಾಪ್ತಿಯುಳ್ಳದ್ದಾಗಿರದಿದ್ದರೂ, ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು ಎಂಬಂತೆ ಪರಿಣಾಮದಲ್ಲಿ ಜನತೆ ಹಾಗೂ ಸರ್ಕಾರದ ಮೇಲೆ ಈ ಸತ್ಯಾಗ್ರಹವು ತನ್ನ ಗಾಢ ಪ್ರಬಾವದ ಮುದ್ರೆಯೊತ್ತಿರುವ ಐತಿಹಾಸಿಕ ಹೋರಾಟವಾಗಿದೆ. ಈ ಸಂಘರ್ಷವು ಶತ ಶತಮಾನಗಳಿಂದ ಶೋಷಣೆಗೊಳಗಾದ ಗೇಣಿದಾರ ರೈತರು ಸಿಡಿಸಿದ ಮೊದಲ ಬಂಡಾಯವಾದುದರಿಂದಲೇ ಅತಿ ಶೀಘ್ರದಲ್ಲಿಯೇ ಎಲ್ಲರ ಗಮನ ಸೆಳೆದು ಪ್ರಸಿದ್ಧಿಯನ್ನು ಪಡೆಯಿತು. ಮೈಸೂರು ರಾಜ್ಯದ ಭಾರತದ ವೃತ್ತ ಪತ್ರಿಕೆಗಳಲ್ಲಿ ಮಾತ್ರವಲ್ಲದೆ ವಿದೇಶದ ಅಮೇರಿಕೆಯ ಪತ್ರಿಕೆಗಳ ಮುಖಪುಟದಲ್ಲಿಯೂ ಕಾಗೋಡು ಸತ್ಯಾಗ್ರಹದ ಸುದ್ದಿಯು ಪ್ರಕಟವಾದುದನ್ನು ತಿಳಿದರೆ ಯಾರಿಗಾದರೂ ಈ ಸತ್ಯಾಗ್ರಹದ ಮಹತ್ವ ಅರಿವಾಗುತ್ತದೆ. ಈ ಚರಿತ್ರಾರ್ಹ ರೈತ ಹೋರಾಟದ ಕಣಕ್ಕೆ ರಾಜ್ಯದ ಸಚಿವರೂ, ಪ್ರಮುಖ ಮುಖಂಡರೂ ಬಂದಿದ್ದೆನ್ನುವುದಲ್ಲದೇ, ರಾಷ್ಟ್ರ ನಾಯಕರಾದ ಪೂಜ್ಯ ಜಯಪ್ರಕಾಶ ನಾರಾಯಣ, ಡಾ. ಲೋಹಿಯಾರವರು ಸತ್ಯಾಗ್ರಹ ರಂಗಕ್ಕೆ ಆಗಮಿಸಿದ್ದರೆನ್ನುವುದನ್ನು ನೆನೆದರೆ ಈ ಸತ್ಯಾಗ್ರಹವು ರಾಜಕೀಯ ರಂಗದಲ್ಲಿ ಬೀರಿದ ಮಹತ್ ಪರಿಣಾಮವು ಅರ್ಥವಾದೀತು.

ಕಾಗೋಡು ರೈತ ಸತ್ಯಾಗ್ರಹದ ಅಪೂರ್ವ ಯಶಸ್ವಿಗೆ ಕಾರಣರಾದ ಸಾಗರ ತಾಲ್ಲೂಕು ರೈತರು ಮತ್ತು ಅಂದಿನ ಸಮಾಜವಾದೀ ಪಕ್ಷದ ತ್ಯಾಗ ನಿಷ್ಠೆ ಸೇವೆಯು ಚರಿತ್ರಾರ್ಹವಾಗಿದೆ. ಅಂದಿನ ಸೋಷಲಿಸ್ಟ್ ಪಕ್ಷದವರ ಸಕಾಲಿಕ ನಿರ್ಧಾರ ಮತ್ತು ಪ್ರಚಂಡ ಸಾಹಸವೂ ಚಿರಸ್ಮರಣೀಯವಾಗಿದೆ. ಈ ಸತ್ಯಾಗ್ರಹಕ್ಕೆ ಕಾರಣ ರಾದವರಲ್ಲೊಬ್ಬನಾಗಿ ಅಳಿಲ ಸೇವೆ ಸಲ್ಲಿಸಿದ ನಾನು ಮೂವತ್ತು ವರ್ಷಗಳ ಹಿಂದಿನ ನೆನಪಿನ ಆಧಾರದ ಮೇಲೆ ಇಂದು ನಾನು ಬರೆಯುವುದರಲ್ಲಿ ತಾರೀಖು ತಿಂಗಳುಗಳ ವ್ಯತ್ಯಾಸ ಬಂದರೂ ಬರಬಹುದು. ಅಕಸ್ಮಾತ್ ಘಟನೆಗಳು ಹಿಂದೆ ಮುಂದಾಗಿ ಬಂದರೂ ವಾಚಕರು ಕ್ಷಮಿಸಬೇಕಾಗಿ ಕೋರುತ್ತೇನೆ.

ರಾಜ್ಯಕ್ಕೆ ಮೊಟ್ಟ ಮೊದಲನೆಯದಾಗಿ ೧೯೪೫ನೇ ಇಸವಿಯಲ್ಲಿಯೇ ತೀರ್ಥಹಳ್ಳಿಯಲ್ಲಿ ಗೇಣಿದಾರರ ಕಷ್ಟನಿವಾರಣೆಗಾಗಿ ‘ಮಲೆನಾಡು ಗೇಣಿದಾರ ಸಂಘ’ವು ಸ್ಥಾಪಿತವಾಗಿತ್ತು. ಜಿ. ಕರಿಬಸವಪ್ಪನವರು ಮೊದಲ ಅಧ್ಯಕ್ಷರಾಗಿದ್ದರು. ನಾನು ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿಯೂ, ಎಂ. ರಾಮಕೃಷ್ಣ ಶಾಸ್ತ್ರಿಗಳು ಸಹಕಾರ್ಯದರ್ಶಿಗಳಾಗಿಯೂ, ರೈತ ಸಂಘಟನೆಯು ಯಶಸ್ವಿಯಾಗಿ ನಡೆಯತೊಡಗಿತು. ಶಿವಮೊಗ್ಗ-ಚಿಕ್ಕಮಗಳೂರು ಎರಡು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಸಂಘದ ಶಾಖೆಗಳು ತುಂಬಾ ಚಟುವಟಿಕೆಯಿಂದ ಕಾರ್ಯಕ್ರಮ ಕೈಗೊಂಡಿದ್ದವು. ಈಗ ತೀರ್ಥಹಳ್ಳಿ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿರುವ ಹೆಚ್.ಹೆಚ್. ಮಂಜಪ್ಪನವರು ಕೆಲವುಕಾಲ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದರು. ಈ ಸುಮಾರಿನಲ್ಲಿ ಸಾಗರದಲ್ಲಿ ರೈತ ಬಂಧುಗಳಾದ ನಮ್ಮ ಮಾನ್ಯ ಮಿತ್ರರು ಹೆಚ್. ಗಣಪತಿಯಪ್ಪನವರ ಸಮರ್ಥ ನಾಯಕತ್ವದಲ್ಲಿ ರೈತ ಸಂಘಟನೆಯು ಆರಂಭವಾಗಿ ಸಾಗರ ತಾಲೂಕು ರೈತ ಸಂಘವು ಸ್ಥಾಪಿಸಲ್ಪಟ್ಟು ವಿಧಾನ ಸಭೆಯ ಮಾಜಿ ಸದಸ್ಯ ಮಾನ್ಯ ಡಿ. ಮೂಕಪ್ಪನವರು ಅಧ್ಯಕ್ಷರಾಗಿ ಹೆಚ್. ಗಣಪತಿಯಪ್ಪನವರು ಕಾರ್ಯದರ್ಶಿಗಳಾಗಿ ಉತ್ತಮ ರೀತಿಯಲ್ಲಿ ರೈತ ಜಾಗೃತಿಯನ್ನು ಬೆಳೆಸುತ್ತಿದ್ದರು. ರೈತ ಸಂಘಟನೆಯನ್ನು ಬಲಗೊಳಿಸುವ ದೃಷ್ಟಿಯಿಂದ, ರೈತ ವೃಂದದ ಅಭಿಪ್ರಾಯದಂತೆ ಸಾಗರ ತಾಲೂಕು, ರೈತಸಂಘವನ್ನು ಮಲೆನಾಡು ಗೇಣಿದಾರ ಸಂಘದಲ್ಲಿ ವಿಲೀನಗೊಳಿಸಿ ಸಂಘದ ಹೆಸರನ್ನು ಮಲೆನಾಡು ರೈತ ಸಂಘವೆಂದು ಬದಾಯಿಸಲಾಯಿತು. ಈ ಸಂದರ್ಭದಲ್ಲಿಯೇ ರೈತ ಹಿತರಕ್ಷಣೆಯಲ್ಲಿ ತೀವ್ರ ಆಸಕ್ತಿಯುಳ್ಳವರಾದ ಕಡಿದಾಳ ಮಂಜಪ್ಪನವರು ಸಂಘದ ಅಧ್ಯಕ್ಷರಾಗಿ ಚುನಾಯಿತರಾದರು. ಹಿಂದಿದ್ದಂತೆ ನಾನು ಪ್ರಧಾನ ಕಾರ್ಯದರ್ಶಿಯಾಗಿಯೂ, ಹೆಚ್. ಗಣಪತಿಯಪ್ಪನುರು ಸಹ ಕಾರ್ಯದರ್ಶಿಗಳಾಗಿಯೂ ಆರಿಸಲ್ಪಟ್ಟು ಸಂಘದ ಕಾರ್ಯ, ಹೋರಾಟದ ಸಿದ್ಧತೆ ನಡೆಯತೊಡಗಿತು. ಹಳ್ಳಿ ಹಳ್ಳಿಗಳಲ್ಲಿ ನಮ್ಮ ಸಂಘದ ಸಭೆಗಳು ನಡೆದು ಎಲ್ಲೆಡೆಯಲ್ಲಿಯೂ ತೀವ್ರ ಹೋರಾಟಕ್ಕೆ ರೈತರು ಸಿದ್ಧರಾಗಿರುವುದು ವ್ಯಕ್ತವಾಯಿತು. ಸಾಗರ ತಾಲ್ಲೂಕಿನ ಗ್ರಾಮಾಂತರ ರೈತ ಬಾಂಧವರ ಉತ್ಸಾಹವು ಅಸದಳವಾಗಿತ್ತು. ಸಂದರ್ಭದಲ್ಲಿ ರೋಮಾಂಚನಕಾರಿಯಾದ ಹೋರಾಟಕ್ಕೆ ಬೆಂಬಲವಿತ್ತ ನೂರಾರು ಜನ ರೈತ ಬಾಂಧವರ ಹೆಸರು ನೆನಪಾಗುತ್ತಿದೆ. ವಯೋವೃದ್ಧ ರೈತ ಮುಂದಾಳು ಕಾಗೋಡು ಬೀರನಾಯಕರ ಕೆಚ್ಚು ನೆಚ್ಚು ಧೈರ್ಯವು ರೈತ ವೃಂದಕ್ಕೆ ಸ್ಫೂರ್ತಿದಾಯಕವಾಗಿತ್ತು. ಬರಸಿನ ದೇವಪ್ಪನವರು, ಚೌಡಪ್ಪ, ಹುಚ್ಚನಾಯಕರು ಮುಂತಾದವರನ್ನೆಂದಿಗೂ ಮರೆಯುವಂತಿಲ್ಲ.

ರೈತರ ಕ್ರಾಂತಿಯ ಕಹಳೆಯು ಬಹುಬೇಗ ಭೂಮಾಲೀಕರನ್ನ ತೀವ್ರವಾಗಿ ತಟ್ಟಿತು. ಭಾರಿ ಜಮೀನ್ದಾರರೆಲ್ಲರೂ ರೈತರ ಸಂಘಟನೆಗೆ ಭೀತರಾಗಿ ತಮ್ಮ ರಕ್ಷಣಾ ವ್ಯೂಹವನ್ನು ಬಲಪಡಿಸಿತೊಡಗಿದರು. ಭೂಮಾಲೀಕರೂ ಸಭೆಸಮ್ಮೇಳನ ನಡೆಸಲು ವ್ಯವಸ್ಥೆಗೊಳಿಸಿದರು. ಈ ಸಮಯದಲ್ಲಿ ಸಾಗರ ಪುರಭವನದಲ್ಲಿ ನಡೆದ ಒಂದು ಸಮ್ಮೇಳನಕ್ಕೆ ಮಾನ್ಯ ಹೆಚ್.ಎಂ. ಚನ್ನಬಸಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದಿವಂಗತ ಮಾನ್ಯ ಎಂ.ಸಿ. ಶಿವಾನಂದಶರ್ಮರು ಭೂಮಾಲೀಕರ ರಕ್ಷಣೆಗಾಗಿ ಪ್ರತಿಯೊಬ್ಬ ಭೂಮಾಲೀಕರಿಗೂ ಬಂದೂಕನ್ನು ಒದಗಿಸಬೇಕು’’ ಎಂದು ಹೇಳಿದ ಮಾತು ರೈತವಲಯದಲ್ಲಿ ತೀವ್ರ ಅಶಾಂತಿಗೆ ಕಾರಣವಾಯಿತು. ಪರಿಸ್ಥಿತಿ ಕೈಮೀರುವ ಮೊದಲೇ ಸೂಕ್ತ ಕ್ರಮ ಕೈಗೊಳ್ಳಲು ನಮ್ಮ ಸಂಘದ ಪರವಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.ರೈತರ ಮನವಿಯನ್ನು ಮನ್ನಿಸಿ, ಕಂದಾಯ ಮಂತ್ರಿಗಳು ಮಾನ್ಯ ಹೆಚ್. ಸಿದ್ಧಯ್ಯನವರು, ಅಂಡರ್ ಸೆಕ್ರಟರಿ ಜಿ.ವಿ. ಕೆ. ರಾವ್ ಮತ್ತು ಐ.ಜಿ.ಪಿ. ನಾಗರಾಜರಾವ್ ಸಾಗರಕ್ಕೆ ಬಂದು ಇಬ್ಬಣದೊಂದಿಗೂ ಮಾತುಕತೆ ನಡೆಸಿದರು. ಆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಸಂಭಾಷಣೆಯ ಅಂತ್ಯದಲ್ಲಿ ಸಂಬಂಧಿಸಿದ ವಿಷಯಗಳ ಕುರಿತು ಪೂರ್ಣ ವರದಿಯು ಬಂದನಂತರ ಶೀಘ್ರದಲ್ಲಿಯೇ ಸರ್ಕಾರವು ಕ್ರಮಕ್ಕೆಗೊಳ್ಳುವುದಾಗಿ ಭರವಸೆ ದೊರೆಯಿತು. ವೈಯಕ್ತಿಕವಾಗಿ ಮಾತನಾಡಿದಾಗ ರೈತರ ಬೇಡಿಕೆ ಸಾಮಾನ್ಯವಾಗಿಯೆ ಇದೆ. ಉಭಯ ಪಕ್ಷಗಳೂ ತಾಳ್ಮೆಯಿಂದ ಕುಳಿತು ಒಂದೆರಡು ಸುತ್ತು ಚರ್ಚಿಸಿದರೆ ಮಾತುಕತೆಯ ಮೂಲಕವೇ ಎಲ್ಲ ಇತ್ಯರ್ಥವಾಗುತ್ತದೆ ಎಂಬ ಭಾವನೆ ಸರ್ಕಾರೀ ವಲಯದಲ್ಲಿದ್ದಂತೆ ತೋರುತ್ತಿತ್ತು.

ಅನಂತರ ಉಭಯ ಪಕ್ಷಗಳ ಹಿತೈಷಿಗಳ ಪ್ರಯತ್ನದಿಂದ ಶಿವಮೊಗ್ಗ ಸರ್ಕ್ಯೂಟ್ ಹೌಸ್‌ನಲ್ಲಿ ರೈತರು ಹಾಗೂ ಭೂಮಾಲೀಕರ ಪ್ರತಿನಿಧಿಗಳ ಸಂಯುಕ್ತ ಸಭೆ ನಡೆಯಿತು. ನಮ್ಮ ಸಂಘದ ಪರವಾಗಿ ಸಂಘದ ಅಧ್ಯಕ್ಷರೂ ಮಾನ್ಯ ಕಡಿದಾಳ್ ಮಂಜಪ್ಪನವರೂ, ರೈತಸಂಘದ ಕಾರ್ಯಕರ್ತರೂ ಭಾಗವಹಿಸಿ ವಿಚಾರ ವಿನಿಮಯ ನಡೆಸಲಾಯಿತು. ರೈತರ ಕನಿಷ್ಠ ಬೇಡಿಕೆಯನ್ನೂ ಸಹಾ ಭೂಮಾಲೀಕರ ಪ್ರತಿನಿಧಿಗಳು ಒಪ್ಪದಿದ್ದುದರಿಂದ ಸಂಧಾನವು ವಿಫಲವಾಗಿ ಸತ್ಯಾಗ್ರಹವು ಅನಿವಾರ್ಯವಾಯಿತು.

ಸಾಗರದಲ್ಲಿ ರೈತರು ಪ್ರಚಂಡ ಸಭೆ ನಡೆಸಿ, ಸಂಘದ ತೀರ್ಮಾನದಂತೆ ಬಹಿರಂಗವಾಗಿ ಸತ್ಯಾಗ್ರಹದ ಕರೆಕೊಡಲಾಯಿತು. ಸಂಘದ ಅಧ್ಯಕ್ಷರು ಮಾನ್ಯ ಕಡಿದಾಳ್ ಮಂಜಪ್ಪನವರು ತೀವ್ರ ಅಸ್ವಸ್ಥರಾಗಿದ್ದರು. ೧೯೫೧ನೇ ಏಪ್ರಿಲ್ ತಿಂಗಳಲ್ಲಿ ೧೮ನೇ ತಾರೀಕು ಕಾಗೋಡು ರೈತರ ಸತ್ಯಾಗ್ರಹವು ಪ್ರಾಂರಭವಾಯಿತು. ಆರಂಭವಾದ ಸ್ವಲ್ಪ ಸಮಯ ಸತ್ಯಾಗ್ರಹವು ಶಾಂತ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು. ಆ ನಂತರ ಸ್ವಲ್ಪ ಕಾಲದಲ್ಲಿಯೇ ತಾತ್ಕಾಲಿಕವಾಗಿ ಸತ್ಯಾಗ್ರಹವು ನಿಲ್ಲಿಸಲಪ್ಟ್ಟಿತು. ಸತ್ಯಾಗ್ರಹದ ನಿಲುಗಡೆಯ ತೀರ್ಮಾನವು ರೈತರಿಗೆ ಸಮಾಧಾನ ಉಂಟುಮಾಡಲಿಲ್ಲ. ರೈತರಲ್ಲಿ ಅಶಾಂತಿಯು ಬೆಳಯುತ್ತಲೇ ಇತ್ತು. ಸಂಘಟನಾ ಚತುರ ಹೆಚ್. ಗಣಪತಿಯಪ್ಪನವರ ನೇತೃತ್ವದಲ್ಲಿ ಸಾಗರ ತಾಲೂಕಿನ ಸಮಸ್ತ ಗೇಣಿದಾರ ರೈತರೂ ಸತ್ಯಾಗ್ರಹ ಸಮರಾಂಗಣಕ್ಕೆ ಧುಮುಕಲು ಸಜ್ಜಾಗಿದ್ದರು. ಯಾವ ರೈತರೂ ಹಿಂದೆ ಸರಿಯಲು ಸಿದ್ಧರಿರಲಿಲ್ಲ “ಕಾವೇರಿದಾಗಲೇ ಕಬ್ಬಿಣ ಬಡಿಯಬೇಕು’’ ಎಂಬಂತೆ ಹೋರಾಟದ ಕಾವು ಅತಿ ತೀವ್ರವಾಗಿ ಏರುತ್ತಿರುವಾಗ ಹೋರಾಟವನ್ನು ಮುಂದುವರಿಸಲು ರೈತರು ಕಾತುರರಾಗಿದ್ದರು. ಇಂಥ ಅಪೂರ್ವ ಸಿದ್ಧತೆ ಸುಸಂಧಿಯನ್ನು ವ್ಯರ್ಥಗೊಳಿಸಲು ರೈತರಿಗೂ, ಮುಖಂಡರಾದ ಡಿ. ಮೂಕಪ್ಪನವರು, ಹೆಚ್. ಗಣಪತಿಯಪ್ಪನವರಿಗೂ ಸಮಾಧಾನವಿರಲಿಲ್ಲ. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸೋಷಲಿಸ್ಟ್ ಪಾರ್ಟಿಯ ನಾಯಕರು ಕಾಗೋಡು ರೈತ ಸತ್ಯಾಗ್ರಹ ರಂಗವನ್ನು ಪ್ರವೇಶಿಸುವ ಕುರಿತು ಸಾಧಕ ಬಾಧಕಗಳನ್ನು ಪರಿಶೀಲಿಸತೊಡಗಿದರು. ಸಜ್ಜಾಗಿದ್ದ ಸಮರರಂಗವನ್ನು ರೈತ ಹಿತದೃಷ್ಟಿಯಿಂದ ಸೋಷಲಿಸ್ಟ್ ಪಾರ್ಟಿಯವರು ರೈತ ಮುಖಂಡರಾದ ಡಿ. ಮೂಕಪ್ಪನವರು, ಎಚ್. ಗಣಪತಿಯಪ್ಪನವರ ಸಹಕಾರದೊಂದಿಗೆ, ರೈತರ ಅಖಂಡ ಬೆಂಬಲದೊಂದಿಗೆ ಕಾಗೋಡು ಸತ್ಯಾಗ್ರಹ ರಂಗವನ್ನು ಪ್ರವೇಶಿಸುವ ನಿರ್ಧಾರವನ್ನು ಕೈಗೊಂಡರು.

ಸಮಾಜವಾದಿ ಪಕ್ಷದವರು ಪ್ರವೇಶಿಸಿದೊಡನೆ ರೈತಚಳುವಳಿಯು ಹೊಸ ತಿರುವನ್ನು ಪಡೆಯಿತು. ವಿದ್ಯುದ್ವೇಗದಲ್ಲಿ ಆಂದೋಳನದ ವಾರ್ತೆಯು ದೇಶಾದ್ಯಂತ ಹರಡಿ ಜನಮನವನ್ನಾಕರ್ಷಿಸಿತು. ನಮ್ಮ ಸಂಘದವರೇ ಆದ ಎಚ್. ಗಣಪತಿಯಪ್ಪನವರ ಬಂಧನದಿಂದಲೇ ಬಂಧನ ಸತ್ಯದ ಗಣಪತಿ ಪೂಜೆಯಾದಂತಾಯಿತು. ಸೋಷಲಿಸ್ಟ್ ಪಾರ್ಟಿಯ ಹಿರಿಯ ಕಿರಿಯ ನಾಯಕರು, ಕಾರ್ಯಕರ್ತರು, ರೈತಬಂಧುಗಳೂ ಬಂಧಿತರಾದರು. ಈ ಸಮಯದಲ್ಲಿಯೇ ನಾನು ಕಾಗೋಡಿಗೆ ಹೋಗಿ ಸತ್ಯಾಗ್ರಹದಲ್ಲಿ ಭಾಗವಹಿಸಿದೆ. ಅಂದು ಭೂಮಾಲಿಕರಾದ ಗೌಡರ ಕಡೆಯವರು ಜಮೀನು ಉಳುಮೆಗಾಗಿ ಬಂದಿದ್ದರು. ನಾನು ಮತ್ತು ಇನನೂ ಒಬ್ಬಿಬ್ಬರು ಉಳುಮೆ ಮಾಡುತ್ತಿದ್ದವರನ್ನು ತಡೆದೆವು. ಅವರುಗಳು ನಮ್ಮನ್ನು ದಬ್ಬಿದರು. ಕೊಸರಾಟ ಜಗ್ಗಾಟದಲ್ಲಿ ನನಗೆ ಸ್ವಲ್ಪ ಪೆಟ್ಟಾಯಿತು. ಮಾರನೆಯ ದಿನ ನಾನು ಸತ್ಯಾಗ್ರಹದಲ್ಲಿ ಬಾಗವಹಿಸಿದಾಗ ಪೊಲೀಸರು ನನ್ನ ಜೊತೆಯವರೊಡನೆ ನನ್ನನ್ನೂ ಗದ್ದೆಯಿಂದ ಮೇಲಕ್ಕೆ ಎಳೆಯುತ್ತಾ ಬಂದು ಥಳಿಸಲಾರಂಭಿಸಿದರು. ಕೆಲ ಹೊತ್ತು ನಾನು ಅಸಹಾಯಕನಾಗಿ ಏಟಿನ ಮೇಲೆ ಏಟನ್ನು ಪಡೆಯಬೇಕಾಗಿಯಿತು. ಪೊಲೀಸರ ವರ್ತನೆಯಿಂದ ಮೈ ನೋಯುತ್ತಿದ್ದರೂ, ಶರೀರಕ್ಕೆ ಬಿದ್ದ ಏಟಿಗಿಂತಲೂ ನನ್ನ ಮನಸ್ಸಿನ ಮೇಲೆ ಬಿದ್ದ ಏಟೇ ವಿಷಮಯವಾಗಿತ್ತು. ಆಗ ನನ್ನ ಮನಸ್ಸಿನ ಮೇಲೆ ಹಲವಾರು ಭಾವನೆಗಳು ಉದಿಸತೊಡಗಿತು. ಸರ್ಕಾೞದವರು ತಕ್ಷಣದಲ್ಲಿಯೇ ಸಮಸ್ಯೆಯ ಇತ್ಯಾರ್ಥಕ್ಕೆ ಕ್ರಮಕ್ಕೆಕೈಗೊಳ್ಳಲಿಲ್ಲವೇಕೆ? ರೈತರು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಸತ್ಯಾಗ್ರಹಕ್ಕೆ ಬರಲಿಲ್ವೇಕೆ? ರೈತರು ಭೂಮಾಲೀಕರ ಶೋಷಣೆಯನ್ನೂ ಇನ್ನೂ ಎಷ್ಟು ಕಾಲಸಹಿಸಬೇಕು? ಉಳುವವನೇ ಹೊಲದೊಡೆಯನಾಗುವುದೆಂತು? ತಾನು ಬೆವರುಸುರಿಸಿ ಬೆಳೆದುದರಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಪ್ರತಿವರ್ಷವೂ ಭೂಮಾಲೀಕರಿಗೆ ಅರ್ಪಿಸುವುದು ಯಾವ ನ್ಯಾಯ? ಎಂದು ನನ್ನ ಮನಸ್ಸು ಸಂತಾಪದಿಂದ ಕುದಿಯತೊಡಗಿತು. ಏನೇ ಆಗಲೀ ನಾವು ರೈತರು ಸರ್ವತ್ಯಾಗಕ್ಕೂ ಸಿದ್ಧರಾಗಿ ಉಳುವವರೇ ಹೊಲದೊಡೆಯರಾಗಿ ರೈತರಾಜ್ಯ ಸ್ಥಾಪಿಸಬೇಕೆಂಬ ಸಂಕಲ್ಪ ನನ್ನ ಮನದಲ್ಲಿ ಧೃಡವಾಯಿತು.

ಪುನಃ ಮಾರನೆಯ ದಿನ ಸತ್ಯಾಗ್ರಹಕ್ಕೆ ಹೋದಾಗ ಅನೇಕ ಯುವಕರು ಬಂದಿದ್ದರು. ಎಲ್ಲರೂ ಹೊಸಬರು. ಅವರಿಗೆ ಪೂರ್ಣ ಖಾದೀಧಾರಿಯಾಗಿ ಖಾದೀ ಟೋಪಿ ಧರಿಸಿದ್ದ ನನ್ನ ಮೇಲೆ ತುಂಬ ಆಕ್ರೋಶ. ಮೊದಲು ಕಟುಭಾಷೆಗಳನ್ನಾಡಿ ಕೆಣಕಲು ನೋಡಿದರು. ಇನ್ನು ಕೆಲವರು ಮೌನವಾಗಿದ್ದ ನನ್ನ ಮೇಲೆ ಗುಂಪಾಗಿ ಬಂದೆರಗಿ ನನ್ನ ಟೋಪಿಯನ್ನು ಕಸಿದುಕೊಂಡು ಅಶ್ವತ್ಥಮರದ ಕಟ್ಟೆಯ ಬಳಿ ಟೋಪಿಯನ್ನು ಸುಟ್ಟು ಹಾಕಿದರು. ಇದನ್ನು ಕಂಡ ಪೊಲೀಸರು ಗಾಬರಿಯಾಗಿ ನನ್ನನ್ನು ಬಂಧಿಸಿ ಸಮೀಪದ ಒಂದು ಮನೆಯೋ ಅಥವಾ ಶಾಲೆಯಲ್ಲಿಯೋ ಕೂಡಿ ಹಾಕಿದರು. ಆಹಾರವೂ ಇಲ್ಲ. ನಿದ್ರೆಯ ಮಾತಂತೂ ದೂರವೇ ಉಳಿಯಿತು. ಈ ಸ್ಥಿತಿಯಲ್ಲಿ ನನ್ನ ಮನಸ್ಸಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಯಿತು; ಉಳುವ ರೈತನಿಗೇನು ಬಂತು? ಇನ್ನು ರೈತರ ಶೋಷಣೆಯನ್ನು ನಿಲ್ಲಿಸುವುದೇ ನಮ್ಮ ಮುಖ್ಯ ಕಾರ್ಯವಾಗಬೇಕು. ಇದೇ ನಮ್ಮ ಸರ್ಕಾರದ ನೀತಿಯಾಗಬೇಕು ಎಂಬ ಯೋಚನೆ ಮತ್ತೆ ಮತ್ತೆ ಮೂಡಿತು. ಮಾರನೆಯ ದಿನ ಉಪವಾಸದಿಂದ ಬಳಲಿದ್ದ ನಾನು, ಸಮೀಪದ ಹಳ್ಳಿಗೆ ಹೋಗಿ ಊಟ ಮಾಡಿ ಬಂದು, ಸತ್ಯಾಗ್ರಹದ ಕಣಕ್ಕೆ ಹೋದೆ. ಒಡನೆಯೇ ಪೋಲೀಸರು ಬಂದು ಬಂಧಿಸುವುದಾಗಿ ಹೇಳಿದರು. ಆಗ ಸಮಾಜವಾದಿ ನಾಯಕ ಮಿತ್ರರಾದ ವೈ.ಆರ್. ಪರಮೇಶ್ವರಪ್ಪನವರು ನನ್ನನ್ನು ಕಂಡು ಮಾತನಾಡಿ, “ನಿಮಗೆ ಹೊಡೆತ ಬಿದ್ದ ಮೇಲೆ ಇನ್ನು ಜಮೀನ್ದಾರಿ ಪದ್ಧತಿ ಉಳಿಯುವುದಿಲ್ಲ. ರೈತರಿಗೆ ಜಯವಾಗುತ್ತದೆ’’ ಎಂದು ಹೇಳಿ ಸತ್ಯಾಗ್ರಹದ ಅನೇಕ ವಿವರಗಳನ್ನು ತಿಳಿಸಿದರು. ಅಂದು ಸಂಜೆಯ ವೇಳೆಗೆ ಮತ್ತು ಬಂಧಿಸಿದರು. ಹೀಗೆ ನಾಲ್ಕೈದು ದಿನಗಳು ಬಂಧನ ಬಿಡುಗಡೆ ಎಳೆದಾಟ ಬೈಯ್ದಾಟ ನಡೆಯಿತು. ಅಷ್ಟರಲ್ಲಿ ತೀರ್ಥಹಳ್ಳಿಯ ನಮ್ಮ ಸಂಘದ ಕಾರ್ಯಕರ್ತರಿಬ್ಬರ ಭೂಮಿಯ ಮೇಲೆ ಭೂಮಾಲೀಕರು ಆಕ್ರಮಣ ಮಾಡಿರುವ ಸುದ್ದಿ ತಿಳಿದು ನಾನು ತೀರ್ಥಹಳ್ಳಿಗೆ ಬರಬೇಕಾಯಿತು.

ಅಂದು ನಾಂದಿ ಹಾಡಿದ ಕಾಗೋಡು ಸತ್ಯಾಗ್ರಹದ ಪ್ರಭಾವದಿಂದಲೇ ಇಂದು ರಾಜ್ಯದಲ್ಲಿ ಕೆಲಮಟ್ಟಿಗಾದರೂ ಭೂಸುಧಾರಣಾ ಕಾರ್ಯವು ಜಾರಿಗೆ ಬಂದಿತೆಂಬುದೇ ಸತ್ಯಾಗ್ರಹದ ಯಶಸ್ಸನ್ನು ಸಾರುತ್ತದೆ. ಈ ಹೋರಾಟವು ಸರ್ಕಾರದ ಕಣ್ಣು ತೆರೆಯಿಸಿದ ದಿಟ್ಟ ಹೋರಾಟವಾದ್ದರಿಂದ ಈ ಹೋರಾಟ ಮುಗಿದ ತರುಣದಲ್ಲಿ ರಿದ ರಾಜ್ಯ ವಿಧಾನ ಸಬೆಯ ಅಧಿವೇಶನದಲ್ಲಿಯೇ ಸರ್ಕಾರದಿಂದ “ಟೆನೆನ್ಸಿ ಬಿಲ್’’ ಮಂಡಿಸಲ್ಪಟ್ಟಿತು. ಅಂದಿನಿಂದ ಟೆನೆನ್ಸಿ ಕಾನೂವು ಜಾರಿಗೆ ಬಾರದೆ ಇದ್ದಿದ್ದರೆ, ಇಂದು ಗೇಣಿದಾರರು ಭೂಮಾಲಿಕರಾಗುವುದು ಕನಸಾಗಿಯೇ ಉಳಿಯುತ್ತಿತ್ತು.

ಈ ಶುಭ ಪರಿಣಾಮದ ದೃಷ್ಟಿಯಿಂದಲೂ ಕಾಗೋಡು ಸತ್ಯಾಗ್ರಹವು ಅತ್ಯಂತ ಜಯಪ್ರದ ಹೋರಾಟವೆನಿಸಿದೆ. ಸತ್ಯಾಗ್ರಹಕ್ಕೆ ಮಾರ್ಗದರ್ಶನ ನೀಡಿದ ತ್ರಿಮೂರ್ತಿಗಳಾದ ಜಯಪ್ರಕಾಶ ನಾರಾಯಣ್, ಡಾ. ಲೋಹಿಯಾ, ಗೆಳೆಯ ಗೋಪಾಲಗೌಡರನ್ನು ಹಾರ್ದಿಕವಾಗಿ ಸ್ಮರಿಸೋಣ. ಚಳುವಳಿಯಲ್ಲಿ ಪಾಲುಗೊಂಡ ರೈತ ವೃಂದ ಹಾಗೂ ಸಮಾಜವಾದಿ ಪಕ್ಷದ ಸಕಲ ಬಂಧುಗಳನ್ನು ಕೃತಜ್ಞತೆಯಿಂದ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ರೈತರ ಹೋರಾಟ ನಡೆಯುತ್ತಿದೆ. ನಡೆಯಲೇಬೇಕು. ರೈತರಿಗೆ ಜಯವಾಗಲೆಂದು ಹಾರೈಸೋಣ.