ಒಂದು ನಾಡಿನಲ್ಲಿ ನಡೆಯುವ ಕ್ರಾಂತಿ, ಹೋರಾಟ ಸರ್ವಾಂಗ ಸಿದ್ಧಿಯನ್ನು ತರುತ್ತದೆ ಎಂಬುದು ಭ್ರಮೆ. ಆದರೆ, ಜನತೆ ಇದರಲ್ಲಿ ಭಾಗಿಯಾಗಿರುವ ಕಾರಣ ಸಾಧನೆಯತ್ತ ಒಂದು ಮುನ್ನೆಗೆತ ಹಾಕಿದಂತೆ ಆಗುತ್ತದೆ.

ವಿಶ್ವದಲ್ಲಿ ಇದುವರೆವಿಗೆ ವಿವಿಧ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿಗಳು ತುಂಬಾ ಕಲ್ಯಾಣಕಾರಿ ಸಮಾಜ ನಿರ್ಮಿಸಿದೆ ಎಂದರೆ ತಪ್ಪಾಗುತ್ತದೆ. ರಷ್ಯಾದಲ್ಲಿ ಮಹಾಕ್ರಾಂತಿಯ ನಂತರ, ಇದು ಅಪೂರ್ಣ ಎಂದು ಟ್ರಾಟ್‌ಸ್ಕಿ ಹೇಳಿದ. ಚೀನಾದಲ್ಲಿ ಮಾವೋ ತಂದ ಕ್ರಾಂತಿಯ ನಂತರವೂ ಮತ್ತೊಂದು ಸಾಂಸ್ಕೃತಿಕ ಚಳವಳಿ ನಡೆಯಿತು.

ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನೇ ತೆಗೆದುಕೊಂಡಾಗ, ಗಾಂಧೀಜಿ ಐವತ್ತು ವರುಷಗಳ ಕಾಲ ಸತತವಾಗಿ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸುತ್ತಲೇ ಬಂದಿರುವುದನ್ನು ಕಾಣುತ್ತೇವೆ.

ಇಂತಹ ಹೋರಾಟ ಪ್ರತಿಭೆಯ ಇತಿಹಾಸದ ಮೂಸೆಯಲ್ಲಿ, ನಾವು ಕಾಗಡು ಸತ್ಯಾಗ್ರಹವನ್ನು ನೋಡಬೇಕು; ಕಾಗೋಡಿನ ಗೇಣಿದಾರ ವರ್ಗ, ಅದರಲ್ಲೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೋಷಣೆಗೆ ಒಳಗಾದ ದೀವರ ಜನಾಂಗವು ಕಾಗೋಡು ಹೋರಾಟದ ನಂತರವೂ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ಪ್ರದೇಶದಲ್ಲಿ ಹೋರಾಟಗಳನ್ನು ಮಾಡಿವೆ.

ಭೂಸುಧಾರಣೆ ಬಂದಿದ್ದರೂ, ಗೇಣಿದಾರ ಭೂಮಾಲೀಕನಾಗುತ್ತಿದ್ದರೂ ಕೂಡ ಇನ್ನೂ ಹಲವು ಹನ್ನೊಂದು ಸಮಸ್ಯೆಗಳು ಉಳುವವನಿಗೆ ಇದ್ದೇ ಇದೆ. ಅದಕ್ಕಾಗಿ ಅವನು ತನ್ನ ಅಸ್ತಿತ್ವದ ಭದ್ರತೆಗಾಗಿ ಇನ್ನು ಹೋರಾಡಲೇಬೇಕು.

ಕಾಗೋಡು ಚಳವಳಿ ಸ್ವಲ್ಪ ತಿಂಗಳು ನಡೆದು ನಿಂತುಹೋಯಿತು. ಇದು ಭೂಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಲ್ಲ ಎಂಬ ಟೀಕೆಗಳೂ ಬಂದಿವೆ. ಇದನ್ನು ವೈಜ್ಞಾನಿಕ ಚಳವಳಿ ಎಂದು ಹೇಳದವರೂ ಇದ್ದಾರೆ.

ಕಾಗೋಡು ಹೋರಾಟದ ಬಗ್ಗೆ ನನ್ನ ಅಭಿಪ್ರಾಯವೆಂದರೆ – ಗೇಣಿದಾರ ನೇಗಿಲು ಹಿಡಿದು ಭೂಮಿಗೆ ಬೆವರಿನ ಅಭಿಷೇಕವನ್ನು ಕೊಟ್ಟ. ಅವನ ಬೆವರಿನ ಫಲವನ್ನು ಮನೆಯಲ್ಲಿ ಆರಾಮವಾಗಿ ಕುಳಿತು ಅನುಭವಿಸುತ್ತಿದ್ದವರು ಭೂ ಒಡೆಯರು. ಇದರ ವಿರುದ್ಧ ಗೇಣಿದಾರ ಸಿಡಿದು ನಿಂತ.

ಸಾಮಾಜಿಕವಾಗಿ, ಆರ್ಥಿಕವಾಗಿ ಶೋಷಣೆಗೆ ಒಳಗಾದ ದೀವರ ಜನಾಂಗ, ಮೇಲುಜಾತಿಯ ದಬ್ಬಾಳಿಕೆಯನ್ನು “ಇನ್ನು ಸಹಿಸಲಾರೆ’’ ಎಂದು ಎದ್ದುನಿಂತಿತು. ಶೂದ್ರಶಕ್ತಿಯ ನಿರ್ಮಾಣವಾಯಿತು.

ಇವೆರಡೂ ಕ್ರಿಯೆಗಳು ಪುಟ್ಟ ಕಾಗೋಡಿನಲ್ಲಿ ಪರಿಣಾಮಕಾರಿಯಾಗಿ ನಡೆದವು. ಭೂಸುಧಾರಣೆ ಆಗಲೇಬೇಕು ಎಂದು ಘಂಟಾಘೋಷವಾಗಿ ಗೇಣಿದಾರ ಸಾರಿದ. ಇಂದು ಜಾರಿಗೆ ಬಂದಿರುವ ಭೂಸುಧಾರಣೆ ಕಾನೂನು ಜಾರಿಗೆ ಕಾಗೋಡು ಹೋರಾಟ ಒತ್ತಡ ಹಾಕಿತು. ಸ್ಥಗಿತಗೊಂಡಿದ್ದ ಸಮಸ್ಯೆಯನ್ನು ನೂಕಿ ಅದಕ್ಕೆ ಚಾಲನೆ ನೀಡಿತು.

ಮುವತ್ತು ವರುಷಗಳ ಹಳೇ ಮೈಸೂರು ಸಂಸ್ಥಾನದಲ್ಲಿ, ಸ್ವಾತಂತ್ರ್ಯಾನಂತರ ನಡೆದ ಪ್ರಥಮ ರೈತ ಹೋರಾಟ ಕಾಗೋಡು ಸತ್ಯಾಗ್ರಹ. ಆಗ ಕರ್ನಾಟಕದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ರೈತಚಳವಳಿ ನಡೆದಿರಬಹುದು. ಆದರೆ, ಅವೆಲ್ಲಾ ಬಿಡಿಬಿಡಿಯಾಗಿ ನಡೆದ ಚಳವಳಿಗಳು. ಕಾಗೋಡು ಹೋರಾಟ ಮಾತ್ರ ಸಂಘಟನಾತ್ಮಕವಾಗಿ ಇಡಿಯಾಗಿ ನಡೆಯಿತು.

ಆಗಿನ ಸೋಷಲಿಸ್ಟ್ ಪಾರ್ಟಿ ತನಗಿದ್ದ ಕಡಿಮೆ ಪ್ರಮಾಣದ ಸಂಪನ್ಮೂಲಗಳಲ್ಲೇ ಹೋರಾಟದ ನಾಯಕತ್ವವಹಿಸಿ ತುಂಬಾ ದುಡಿಯಿತು. ಆಗತಾನೆ ಬಂದಿದ್ದ ಕಾಂಗ್ರೆಸ್ ಸರಕಾರ ಇನ್ನೂ ಜನಪ್ರಿಯತೆ ಗಳಿಸಿದ್ದ ಕಾಲ. ಸಮಾಜದ ಪಟ್ಟಭದ್ರ ಹಿತಾಸಕ್ತಿಗಳೆಲ್ಲಾ ಸರಕಾರಕ್ಕೆ ಬೆಂಬಲ ಕೊಟ್ಟವು. ಹೋರಾಟಕ್ಕೆ ನೆರವು ಯಾವ ದಿಕ್ಕಿನಿಂದಲೂ ಬರಲಿಲ್ಲ.

ಅಂತಹ ಕಾಲದಲ್ಲಿ ಸೋಷಲಿಸ್ಟ್ ಪಾರ್ಟಿ ನಡೆಸಿದ ಹೋರಾಟ ಇಂದಿಗೆ ಸುಲಭವಾಗಿ ಚರ್ಚೆಗೆ ಸಿಲುಕುವ ವಸ್ತುವಾಗಿದ್ದರೂ, ಅಂದಿಗೆ ಗೇಣಿದಾರರ ಜೀವನ್ಮರಣ ಸಮಸ್ಯೆಯೇ ಆಗಿತ್ತು ಎಂಬುದು ಆಗ ಹೋರಾಟ ನಡೆಸಿ ಅದರ ಯಾತನೆ ಅನುಭವಿಸಿದವರಿಗೆ ಮಾತ್ರಗೊತ್ತು.

೧೯೫೨ರ ಚುನಾವಣೆಯಿಂದ ಪ್ರಾರಂಭವಾಗಿ, ನಾಲ್ಕಾರು ಚುನಾವಣೆಗಳಲ್ಲಿ ಗೇಣಿದಾರ ಸಂಪೂರ್ಣವಾಗಿ ಸೋಷಲಿಸ್ಟ್ ಪಾರ್ಟಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬೆಂಬಲಿಸಿದ. ಸೋಷಲಿಸ್ಟ್ ಪಾರ್ಟಿಗೆ ತನ್ನ ಮತಗಳನ್ನು ಮೀಸಲಾಗಿಟ್ಟ. ಇದು ಪಾರ್ಟಿಗೆ ಸಂದ ರಾಜಕೀಯ ಲಾಭ. ಕರ್ನಾಟಕ ರಾಜ್ಯದಲ್ಲಿ ತುಂಬಾ ಗೌರವ ಘನತೆಯನ್ನು ಹೊಂದಿತ್ತು. ಕಾಂಗ್ರೆಸ್ ಪಕ್ಷಕೂಡ ಈ ಪುಟ್ಟ ಪಕ್ಷಕ್ಕೆ ಬೆದರಿತು. ಇವೆಲ್ಲಾ ಆಗಿದ್ದು ಕಾಗೋಡು ಚಳವಳಿಯಿಂದ.

ಜಡ್ಡು ಹಿಡಿದು ಹೋಗಿದ್ದ ವ್ಯವಸ್ಥೆಗೆ ಕಾಗೋಡು ಗೇಣಿದಾರ ಚಾಲನೆ ಕೊಟ್ಟ: ಅದನ್ನು ಕೆಂಪಾಗಿಸಿದ; ಹೊಳೆಯುವಂತೆ ಮಾಡಿದ.

ಇದು ಸಾಧನೆಯಲ್ಲವೆ?