ಶಿವಮೊಗ್ಗ ನಗರದಲ್ಲಿ ೩೦ ವರ್ಷಗಳ ಹಿಂದೆ ದುರ್ಗಿಗುಡಿ ಬಡಾವಣೆಯಲ್ಲಿ ಮಾರುತಿ ಪ್ರೆಸ್ ಇತ್ತು. ಅದರ ಒಡೆಯರು ರಾಜಗೋಪಾಲಚಾರ್. ಅವರ ಮಗ ಡಾ. ಯು.ಆರ್. ಅನಂತಮೂರ್ತಿ.

ಕಾಗೋಡು ಹೋರಾಟ ಕಾಲದಲ್ಲಿ ಮಾರುತಿ ಪ್ರೆಸ್, ಬಂದು ಹೋಗುವ ಸತ್ಯಾಗ್ರಹಿಗಳಿಗೆ ಸೋಷಲಿಸ್ಟ್ ಪಾರ್ಟಿ ಗೆಳೆಯರಿಗೆ ತಂಗುಮನೆ. ರಾಜಗೋಪಾಲಾಚಾರ್ ತುಂಬಾ ಖಡಾಖಡಿ ಮನುಷ್ಯ. ಅಷ್ಟೇ ವಿಶ್ವಾಸ ಕೊಡುವ ವ್ಯಕ್ತಿ.

ಸೋಷಲಿಸ್ಟ್ ಪಾರ್ಟಿ ಆರಂಭಿಸಿದ ಕಾಗೋಡು ಸತ್ಯಾಗ್ರಹದ ಸಾಹಿತ್ಯ ಸಲಕರಣೆಗಳೆಲ್ಲಾ ಮಾರುತಿ ಪ್ರೆಸ್‌ನಲ್ಲೇ ಮುದ್ರಿತವಾಗುತ್ತಿತ್ತು. ಇದಕ್ಕೆಲ್ಲಾ ಹಣ ಕೊಟ್ಟ ನೆನಪೂ ಇಲ್ಲ. ಗೋಪಾಲಗೌಡರು ಸಾಮಾನ್ಯವಾಗಿ ರಾಜಗೋಪಾಲಾಚಾರ್ ಮನೆಯಲ್ಲೇ ಸ್ನಾನ ಇತ್ಯಾದಿ ಮಾಡಿ, ಅಟ್ಟ ಏರಿ ನೀಟಾಗಿ ಕ್ರಾಪು ತೀಡಿಕೊಳ್ಳುತ್ತಾ ಕನ್ನಡಿ ಮುಂದೆ ತಮ್ಮ ಸೌಂದರ್ಯ ಪ್ರದರ್ಶನ ಮಾಡಿಕೊಳ್ಳುತ್ತಿದ್ದರು.

ಅನಂತಮೂರ್ತಿ ಆಗ ಇಂಟರ್‌ಮೀಡಿಯಟ್ ವಿದ್ಯಾರ್ಥಿ ಅಂತ ಕಾಣುತ್ತೆ. ಆತ, ಸೋಷಲಿಸ್ಟ್‌ರ ಹುಚ್ಚಾಟ, ರಂಪಾಟ, ದಾಂಧಲೆಗಳನ್ನೆಲ್ಲಾ ಕುತೂಹಲ ಕಣ್ಣಿಂದ ನೋಡುತ್ತಿದ್ದ. ಸಿ.ಜಿ.ಕೆ. ರೆಡ್ಡಿ ಬರೆದ ಟೆಲಿಗ್ರಾಂ ಕೊಟ್ಟು ಬರುವುದು, ಹೋರಾಟದ ಬಗ್ಗೆ ಹ್ಯಾಂಡ್‌ಬಿಲ್ ಸಾಹಿತ್ಯ ಬರೆಯುವುದು ಅನಂತು ಕಾರ್ಯವಾಗಿತ್ತು.

ಶಂಕರು, ಅನಂತು, ರಾಮಕೃಷ್ಣ ಸೇರಿ ಈ ಹೋರಾಟದ ಧಗೆ ವಾತಾರವಣದಲ್ಲೂ ಸೋಷಲಿಸ್ಟ್ ಪಾರ್ಟಿಯನ್ನು ಕಿಚಾಯಿಸುತ್ತಾ, ಟೀಕಿಸುತ್ತಾ, ಪ್ರೀತಿಸುತ್ತಾ ಇದ್ದುದು ಆಗಿನ ಕಾರ್ಯಕ್ರಮ ಪಟ್ಟಿಯಲ್ಲಿ ಒಂದಾಗಿತ್ತು.

ರಾಜಗೋಪಾಲಚಾರ್ಯರ ಪತ್ನಿ, ಅನಂತಮೂರ್ತಿ ತಾಯಿ ಒಂದು ತರಹದಲ್ಲಿ ನಮಗೆಲ್ಲಾ ತಾಯಿಯಾಗಿದ್ದರು. ಅವರ ಮನೆಯಲ್ಲಿದ್ದ ಎಣ್ಣೆ ಸೋಪುಗಳು ಸೋಷಲಿಸ್ಟ್‌ರ ಪಾಲಾಗಿ ಆ ಕುಟುಂಬದವರಿಗೆ ಅವರದೇ ವಸ್ತುಗಳು ಅಭಾವವಾಗಿದ್ದು ಉಂಟು.

ಸೋಷಲಿಸ್ಟ್ರಿಗೂ ಬಡತನಕ್ಕೂ ಬಲು ಅನ್ಯೋನ್ಯ ಸಂಬಂಧ. ಒಂದು ತರಹದಲ್ಲಿ ಅನ್ನಕ್ಕಾಗಿ ಭಿಕ್ಷಾಂದೇಹಿಗಳಾಗಿದ್ದೆವು. ಆಗ ಅನಂತನ ತಾಯಿ ತಮ್ಮ ಮಕ್ಕಳಿಗೆ ಅನ್ನ ಹಾಕುವ ಮೊದಲು ಹಸಿದ ಸೋಷಲಿಸ್ಟರಿಗೆಲ್ಲಾ ಅನ್ನ ಕಾಣಿಸುತ್ತಿದ್ದರು. ಒಂದು ದಿನ ನಾನು, ಗೋಪಾಲಗೌಡ, ಅಣ್ಣಯ್ಯ ಹಾಗೂ ಇತರರು ಅನಿರೀಕ್ಷಿತವಾಗಿ ಊಟಕ್ಕೆ ಅತಿಥಿಗಳಾಗಿ ಕೂತೆವು. ತಪ್ಪಲೆಯಲ್ಲಿ ಅನ್ನ ಸಾರು ಸ್ವಲ್ಪ ಕಡಿಮೆ ಪ್ರಮಾಣದಲ್ಲಿತ್ತು. ಆಗ ಆ ತಾಯಿ ಅನ್ನ ಹುಳಿ ಕಲೆಸಿ ಎಲ್ಲರಿಗೂ ಕೈತುತ್ತು ಹಾಕಿದರು. ಅನಂತು ಬಕಬಕನೆ ತಿಂದು ಕೈ ಒಡ್ಡುತ್ತಿದ್ದ, ನಾನು ದುರುಗಣ್ಣಿನಿಂದ ನಡಿ “ತೆಗೆಯೋ ಕೈ’’ ಎಂದು ಹೇಳಿದಾಗ ತಾಯಿ “ತಿನ್ನಲಿ ಬಿಡೊ ಅವನು, ನಾಳೆ ಸಾಗರಕ್ಕೆ ಹೋಗ್ತಾನೆ. ಊಟ ಇರುತ್ತೋ ಇಲ್ಲವೋ?’’ ಎಂದು ಹೇಳಿ ಎರಡು ತುತ್ತು ಅನ್ನ ಜಾಸ್ತಿ ಹಾಕಿದಾಗ, ತೇಗು ಬಂದಾಗ, ನಾನು ಅನಂತುವನ್ನು ಹಂಗಿಸಿ ಅಟ್ಟ ಏರಿದ್ದು ನಡೆದು ಹೋಯಿತು.

ನಾವು ಇಷ್ಟೆಲ್ಲಾ ಮನೆಯಲ್ಲಿ ದಾಂಧಲೆ ಹಾಕುತ್ತಿದ್ದರೂ ರಾಜಗೋಪಾಲಚಾರ್ಯರು ಕಾನೂನುಗಳನ್ನು ತಿರುವಿಹಾಕುತ್ತಾ ಕೂತಿರುತ್ತಿದ್ದರು.

ಹೀಗೆ ಮಾರುತಿ ಪ್ರೆಸ್ ಕಾಗೋಡು ಸತ್ಯಾಗ್ರಹ ಕಾಲದಲ್ಲಿ, ಅನಂತರ ಸೋಷಲಿಸ್ಟ್‌ರ ಮನೆಯಾಗಿತ್ತು. ಮಾರುತಿ ಆರ್ಥಿಕವಾಗಿ ಸೊರಗಿ ಹೋಗಲು, ಅದಕ್ಕೆ ಸೋಷಲಿಸ್ಟ್‌ರ ಪಾಲು ಸ್ವಲ್ಪ ಇದೆ.

ಈಗ ರಾಜಗೋಪಾಲಚಾರ್ ಇಲ್ಲ. ಇವರ ಕುಟುಂಬ, ಅನಂತು ತಾಯಿ ತೀರ್ಥಹಳ್ಳಿ ಹತ್ತಿರ ಇದ್ದಾರೆ. ನನಗೆ ೫೮ ವರ್ಷ ವಯಸ್ಸಾದರೂ ಆ ತಾಯಿ ಆಗಿನ ಕಾಲದಲ್ಲಿ ಹಾಕಿದ ಕೈತುತ್ತನ್ನು ನೆನಪಿಸಿಕೊಳ್ಳುತ್ತಾ ಇರುತ್ತೇನೆ.