ಒಂದು : ಭೂಮಾಲೀಕ ಕೆ.ಜಿ. ಒಡೆಯರ್ ಹೇಳಿಕೆ

(ಮೊದಲು ಕೆ.ಗುರುಬಸಪ್ಪಗೌಡ ಎಂದಿದ್ದ ಹೆಸರನ್ನು ಆ ವ್ಯಕ್ತಿ ಕೆ.ಜಿ. ಕಾಗೋಡು ಗುರುಬಸಪ್ಪಗೌಡ – ಒಡೆಯರ್ ಎಂದು ತಮ್ಮ ಧಣಿತನದ ಪ್ರದರ್ಶನಕ್ಕಾಗಿ – ತಾವೇ ಬದಲಾಯಿಸಿಕೊಂಡರೆಂದು ಕಾಗೋಡು ರೈತಸತ್ಯಾಗ್ರಹಿಯೊಬ್ಬರು ತಿಳಿಸಿದರು – ಸಂ.)

ಸಾಗರ ತಾಲ್ಲೂಕಿನ ಪ್ರಾಮುಖ್ಯವಾಗಿ ಕಾಗೋಡಿನ ಅಕ್ಕಪಕ್ಕದ ಕೆಲವು ಗ್ರಾಮಗಳಲ್ಲಿ, ಕಳೆದ ಸುಮಾರು ಎರಡು ವರ್ಷಗಳಿಂದ, ಕೆಲವು ಗೇಣೀದಾರರಿಂದ ಒಂದಲ್ಲ ಒಂದು ರೂಪದಲ್ಲಿ ಹಿಡುವಳಿದಾರರ ಮೇಲೆ ಚಳವಳಿ ನಡೆಯುತ್ತಿದೆಯಷ್ಟೇ. ಇದನ್ನು ಆಗಾಗ್ಗೆ ಸಾರ್ವಜನಿಕರ ಹಾಗೂ ಸರ್ಕಾರದವರ ಗಮನಕ್ಕೆ ತರಲಾಯಿತು. ಆದರೂ ಯಾವ ಕ್ರಮವನ್ನೂ ತೆಗೆದುಕೊಳ್ಳದೇ ಇದ್ದುದರಿಂದ ಪರಿಸ್ಥಿತಿ ವಿಕೋಪಕ್ಕೆ ಬಂದಿದೆ.

ಮಲೆನಾಡಿನಲ್ಲಿ ಜಮೀನಿನ ವಿಸ್ತೀರ್ಣ ಅಗಾಧವಾಗಿದೆ: ಆದರೆ, ರೈತರ ಸಂಖ್ಯೆ ಕಮ್ಮಿ. ಹೀಗಾಗಿ ಅನೇಕ ಕಡೆಗಳಲ್ಲಿ ಜಮೀನು ಪಾಳು ಬಿದ್ದಿವೆ. ಈಗ ರೋಗ ರುಜಿನಗಳ ದೆಸೆಯಿಂದ ಹಳ್ಳಿಗಳು ಕ್ಷೀಣಹೊಂದಿ, ಫಲವತ್ತಾದ ಜಮೀನುಗಳು ಅನೇಕ ಎಕರೆ ವಿಸ್ತೀರ್ಣ ಕಾಡುಪ್ರದೇಶಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಒಂದೇ ಶರೀರದಲ್ಲಿನ ಬೇರೆಬೇರೆ ಅವಯವಗಳಂತೆ ಹಿಡುವಳಾದರನೂ, ರೈತನೂ ಪ್ರಕೃತಿಯ ನಾನಾ ರೂಪದ ಕ್ರೌರ್ಯಗಳನ್ನು ಎದುರಿಸಿ ಸೌಂದರ್ಯ ಸೌಭಾಗ್ಯಗಳನ್ನು ಅನುಭವಿಸಿಕೊಂಡು ಅಣ್ಣತಮ್ಮಂದಿರಂತೆ, ಸಾಂಸಾರಿಕರಂತೆ ನಡೆದುಕೊಂಡುಬಂದು ತಮ್ಮ ಜೀವನಯಾತ್ರೆಯನ್ನು ಸಾಧಿಸಿಕೊಂಡು ಸುಖಸಂತೋಷಗಳಿಂದ ಜೀವಿಸುತ್ತಿದ್ದರು. ಇಬ್ಬರೂ ಹೊಂದಿಕೊಳ್ಳದೆ ಗತ್ಯಂತರವಿರಲಿಲ್ಲ. ಹಿಡುವಳಿದಾರನಿಗೆ ಜಮೀನಿನಲ್ಲಿ ಬೆಲೆಯಿಲ್ಲ; ರೈತನಲ್ಲಿ ಬೆಲೆಯಿದೆ ಅಂದಾಗ ಒಕ್ಕಲು ಒಡೆತನ ಮಧುವರವಾಗಿರಲೇಬೇಕು. ಹಿಡುವಳಿದಾರನು ರೈತನಿಗೆ ಸಕಲ ಕಾಲದಲ್ಲೂ ನೆರನು ನೀಡುತ್ತಾ ಬಂದಿದ್ದಾನೆ; ಕಂದಾಯ ಕಾಣಿಕೆ ಸಕಾಲಕ್ಕೆ ಕಟ್ಟುತ್ತಾ ಬಂದಿದ್ದಾನೆ. ಅನೇಕಸಾರಿ ಸಾಲಸೋಲಗಳಿಗೆ ತುತ್ತಾಗಿ ಮನೆಮಠ ಕೂಡ ಮಾರಿಕೊಂಡಿದ್ದಾನೆ. ಒಂದು ರೀತಿ ದಯಾಮಯ ಯಜಮಾನತನವಿತ್ತು.

ಇಂದು ಇಂತಹ ಸ್ಥಿತಿ ಬಿಗಡಯಾಸಿದೆ. ಇದರಿಂದ ಉಭಯತಾದಿ ಅನುಕೂಲವಿಲ್ಲ.

ಆದರೆ, ರೈತರಲ್ಲೇ ಕೆಲವರು ಏನೂ ತಿಳಿಯದ, ಹಿಂದುಳಿದ ಮತದ ಕಟ್ಟುನಿಟ್ಟುಗಳಿಗೆ ತಲೆಬಾಗುವ ವಿವೇಚನಾ ಶಕ್ತಿ ಇಲ್ಲದ, ಸತ್ಸಸಂಪ್ರದಾಯ ಅರಿಯದ ಈ ರೈತರಿಗೆ ಇಲ್ಲಸಲ್ಲದ ಭರವಸೆಗಳನ್ನೂ ಆಸೆಗಳನ್ನೂ ತೋರಿಸಿ; ತಮ್ಮ ನಾಯಕತ್ವದಲ್ಲಿ ಇಂದ್ರಲೋಕವನ್ನು ಭೂಲೋಕಕ್ಕೆ ಇಳಿಸುವಂತಹ ನಂಬಿಕೆಗಳನ್ನು ಬೋದಿಸಿ, ಇವರಲ್ಲಿ ಜನ್ಮಜಾತ ಇದ್ದಂತಹ ನಂಬಿಕೆಯನ್ನು ಕಲಕಿ, ಅವರನ್ನು ತಪ್ಪುದಾರಿಗೆ ಎಳೆದಿದ್ದಾರೆ. ತಪ್ಪು ಯಾರದ್ದು? ಇದನ್ನು ಹೇಗೆ ನಿವಾರಿಸಬೇಕು? ಎಲ್ಲಿ ನಿವಾರಿಸಬೇಕು? ಎಂಬ ಪ್ರಶ್ನೆ ಉದ್ಬವಿಸುತ್ತದೆ.

ಹಾಗೆ ರೈತರನ್ನು ಜಮೀನಿನಿಂದ ಓಡಿಸುವ ಪ್ರಶ್ನೆಯೇ ಇಲ್ಲ. ರೈತನನ್ನು ಬಿಡಿಸುವ ಗೋಜಿಗೆಹೋಗುವ ಪ್ರಯತ್ನ ನೂರಾರು ವರ್ಷಗಳಿಂದ ಯಾರೂ ಹೇಳಿಲ್ಲ, ಕೇಳಿಲ್ಲ. ರೈತರ ಆಬಾದು ಮಲೆನಾಡಿನಲ್ಲಿ ಕಡಿಮೆಯಾದಾಗ ಬಿಡಿಸುವ ಪ್ರಶ್ನೆಯೇ ಏಳುವುದಿಲ್ಲ. “ನಾನು ಕೊಟ್ಟಷ್ಟು ತೆಗೆದುಕೊಳ್ಳಬೇಕು; ಕೊಡುವ ನಾವು ಕೊಡುವುದು ಧರ್ಮದ ಹಾಗೆ; ಸಾಗುವಳಿದಾರನು ಜಮೀನಿನ ಯಜಮಾನ; ನಾವು ಜಮೀನು ಬಿಡುವಿದಿಲ್ಲ, ಸತ್ಯಾಗ್ರಹ ಮಾಡುತ್ತೇವೆ! ಸಾಮೂಹಿಕ ಸತ್ಯಾಗ್ರಹ ಮಾಡುವೆವು’’ ಎಂದು ಮುಂತಾಗಿ ಕಾನೂನಿಗೆ ವಿರೋಧವಾಗಿ ಚಳವಳಿ ಹೂಡಿ ಉದ್ರೇಕಪೂರಿತವಾದ ಭಾಷಣಗಳನ್ನು ಮಾಡಿ ಭಯೋತ್ಪಾದನೆ ಉಂಟು ಮಾಡುತ್ತಾ, ಈ ಎರಡು ವರ್ಷದ ಗೇಣಿಯನ್ನೂ, ಸಾಲವನ್ನೂ ಕೊಡದೆ ಮನಸ್ವಿಯಾಗಿ ನಡೆಯುತ್ತಿದ್ದರೆ. ಸರ್ಕಾರದ ಡಿಪೋವಿಗೂ ಅಲ್ಪಸ್ವಲ್ಪ ಕೊಡುತ್ತಾ ಜಮೀನನ್ನೂ ಅರೂಪ ಸ್ಥಿತಿಗೆ ತರುತ್ತಾ, ಹಿಡುವಳಿದಾರರ ಮೇಲೆ ಬಲಪ್ರಯೋಗ ಮಾಡುತ್ತಿರುವುದು ಧರ್ಮವೇ?

ಯಾವೊಂದು ವರ್ಗವನ್ನು ಬಡಿಯುವುದರಿಂದ ಮತ್ತೊಂದು ವರ್ಗದ ಹಿತವಾಗದು. ಉಭಯತ್ರ ಹಿತ ಒಮ್ಮತ ಸಮ್ಮತದಲ್ಲಿದ್ದೆ.

***

ಎರಡು : ರೈತಸಂಘದ ಅಧ್ಯಕ್ಷ ಡಿ. ಮೂಕಪ್ಪನವರ ಹೇಳಿಕೆ.

ಸಾಗರ ತಾಲ್ಲೂಕು ರೈತಸಂಘದ ಅಧ್ಯಕ್ಷರೂ ಜಿಲ್ಲಾ ಬೋರ್ಡ್ ಸದಸ್ಯರೂ ಆದ ಮೂಕಪ್ಪನವರು ಜಮೀನ್ದಾರರ ವಿವರಣೆಗೆ ಈ ರೀತಿ ಉತ್ತರವಿತ್ತಿದ್ದಾರೆ:

ರೈತರಿಗೂ ಜಮೀನುದಾರರಿಗೂ ಮಧುರಬಾಂಧವ್ಯ ಇದೆಯೆಂದೂ, ಪರಿಸ್ಥಿತಿ ಕೆಟ್ಟಿಲ್ಲವೆಂದೂ ಹೇಳುತ್ತಾ ಶ್ರೀ ಒಡೆಯರ್‌ರವರು ಅನೇಕ ವರ್ಷಗಳಿಂದ ನಡೆಯಿಸಿಕೊಂಡು ಬಂದು, ರೈತರನ್ನು ಈಗ ಹೋಗಿ ಎಂದರೆ, ಎಲ್ಲಿಗೆ ಹೋಗಬೇಕು? ಎಂಬುದಾಗಿ ಪ್ರಶ್ನಿಸಿದ್ದಾರೆ. ಅಕ್ರಮವಾಗಿ ಕಾನೂನಿಗೆ ವಿರುದ್ಧವಾಗಿ ಬಲಾತ್ಕಾರದಿಂದ ಈಗ ರೈತರನ್ನು ಬಿಡಿಸುತ್ತಿರವವರೇ ಈ ಪ್ರಶ್ನೆಗೆ ಉತ್ತರ ಹೇಳಬೇಕು, ಎಲ್ಲಿ ಹೋಗಬೇಕು? ಈಗ ಏಕೆ ರೈತರನ್ನು ಬಿಡಿಸಬೇಕು? ಎಂಬ ಪ್ರಶ್ನೆಯನ್ನೇ ರೈತರು ಕೇಳುತ್ತಿದ್ದಾರೆ. ಈವರೆಗೆ ಈ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲಾ. ಇದು ತುಂಬಾ ವಿಸ್ಮಯಕರವಾಗಿದೆ.

ದೊಡ್ಡ ತತ್ವಗಳನ್ನು ಇತರರಿಗೆ ಧಾರಾಳವಾಗಿ ಉಪದೇಶ ಮಾಡಬಹುದು. ತಾವು ಆಚರಿಸುವುದು ಮಾತ್ರ ಕಷ್ಟ. ಕೊಟ್ಟಿದ್ದು ತೆಗೆದುಕೊಳ್ಳಿ ಎಂದು ಗೇಣಿದಾರರು ಹೇಳಿದರೆ ತಪ್ಪು. ಆದರೆ ಕೇಳಿದಷ್ಟು ಕೊಡಬೇಕೆಂದು ಹಿಡುವಳಿದಾರನು ಬಲಾತ್ಕರಿಸಿದರೆ ತಪ್ಪಲ್ಲ!

ಕೆಲವು ಕಡೆ ಜಮೀನುದಾರರು ಕಡ್ಡಾಯವಾಗಿ ಮಾಡಿಸುತ್ತಿದ್ದ, ಮನುಷ್ಯತ್ವಕ್ಕೆ ಹೀನವಾದ ಬಿಟಿಕೆಲಸದ ಪದ್ಧತಿಯನ್ನೂ, ಜೀತದ ಪದ್ಧತಿಯನ್ನೂ ಅನೇಕ ಮಾಮೂಲುಗಳ ಹೆಸರಿನ ಸುಲಿಗೆಯನ್ನು ಅಕ್ರಮವಾದ ಅಳತೆ ತೂಕದ ಬಹಿರಂಗ ಮೋಸದ ಪದ್ಧತಿಯನ್ನೂ, ರೈತರು ಸಂಘಟಿತರಾಗಿ ಇನ್ನು ಸಹಿಸಬಾರದೆಂದು ನಿರ್ಧರಿಸಿರುವುದರಿಂದ, ಕೆಲವು ಜಮೀನುದಾರರು ರೈತರ ಮೇಲೆ ಅಪಪ್ರಚಾರಕ್ಕೆ ತೊಡಗಿರುವುದು ತೀರಾ ಖಂಡನೀಯ.

ರೈತ ಸಂಘ ಸ್ಥಾಪಿಸಿದರೂ ಕಾಂಗ್ರೆಸ್ಸಿಗರೇ ಗೇಣಿ ವಿಚಾರದಲ್ಲಿ ನ್ಯಾಯವಾದ ಬೇಡಿಕೆಗಲಿಗೆ ಸಮ್ಮತಿಸಿ ಎಷ್ಟೋ ಮಂದಿ ಜಮೀನ್ದಾರರು ಅದರಂತೆ ನಡೆದುಕೊಂಡಿದ್ದಾರೆ. ಕಾಗೋಡಿನ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ಮಾತ್ರ ಈ ಗೊಂದಲವಾಗಿದೆ.

ಅನೇಕ ವರುಷಗಳಿಂದ ಕೆಲವು ಜಮೀನುದಾರರ ಶೋಷಣೆಗೆ ಒಳಗಾಗಿದ್ದ ರೈತರು, ತಮಗೆ ನ್ಯಾಯ ದೊರಕಬೇಕೆಂದೂ, ಕಾನೂನಿನ ರಕ್ಷಣೆ ಬೇಕೆಂದೂ, ಕೇಳುತ್ತಿರುವುದನ್ನು ‘ಚಳವಳಿ’ ಎಂದು ಹೇಳಿ ಉತ್ಪ್ರೇಕ್ಷೆ ಮಾಡುವುದು, ಮಾನ್ಯ ಮಿತ್ರರೂ, ಹಿರಿಯರೂ ಮೇಲಾಗಿ ಮುಖಂಡರೂ ಆದ ಶ್ರೀ ಒಡೆಯರಂತಹವರಿಗೆ ಭೂಷಣವಲ್ಲ. ನ್ಯಾಯಬದ್ಧವಲ್ಲ.

ನ್ಯಾಯವಾಗಿ, ಧರ್ಮಕ್ಕೆ ಅನುಸಾರವಾಗಿ ಹಾಗೂ ಕಾನೂನಿಗೆ ಅನುಗುಣವಾಗಿ ಬೇಸಾಯ ಮಾಡುವ ರೈತರನ್ನು, ಬಿತ್ತನೆ ಕಾಲದಲ್ಲಿ ಬೇಸಾಯ ಮಾಡದಂತೆ ಜಮೀನುದಾರರುಗಳು ಅನ್ಯಥಾ ತೊಂದರೆಗೊಳಪಡಿಸಿ ತಡೆಯುತ್ತಿದ್ದಾರೆಯೇ ವಿನಃರೈತರ ಗೊಂದಲವೇನೂ ಇಲ್ಲಾ. ಜಮೀನುದಾರರುಗಳು ತಡೆಯುತ್ತಿರುವುದು ಮಾತ್ರ ಭಯಂಕರ ಅನ್ಯಾಯವಾಗಿದೆ. ಇದು ಕೇವಲ ತಾಲ್ಲೂಕಿನ ಪರಿಸ್ಥಿತಿಯಲ್ಲ. ಶ್ರೀ ಒಡೆಯರ ಊರಾದ ಕೇವಲ ಕಾಗೋಡುಗ್ರಾಮವಾದ ಒಂದು ಊರಿನ ಒಬ್ಬ ಜಮೀನುದಾರರಿಗೂ ನೂರಾರು ಬಡ ಮತ್ತು ಕಷ್ಟಸಹಿಷ್ಣುಗಳಾದ ರೈತರಿಗೂ ಸಂಬಂಧಪಟ್ಟ ಏಕಮಾತ್ರ ವಿಚಾರ ಅಷ್ಟೇ!

ರೈತರು ಇಂದಿನವರೆಗಿನ ಗೇಣಿಯನ್ನು ಪೂರ್ತಿ ಪಾವತಿ ಮಾಡಿರುತ್ತಾರೆ. ರೈತರು ಎಂದೂ ಸಾಗುವಳಿ ಮಾಡುವವರು; ಭೂಮಿಯ ಒಡೆಯರೆಂದು ಹೇಳಿಲ್ಲ. ಆದರೆ ಕಾನೂನಿಗನುಸಾರವಾಗಿ ಕ್ರಮವಾದ ಅಳತೆಯಲ್ಲಿ ತೆಗೆದುಕೊಳ್ಳಬೇಕೆಂದೂ ಕೇಳಿದ್ದಾರೆ. ತಮ್ಮ ಸಾಗುವಳಿ ಹಕ್ಕಿಗೆ ರಕ್ಷಣೆಕೊಡಬೇಕೆಂದೂ, ನ್ಯಾಯವಾಗಿ ಹಾಗೆ ಗೇಣಿಸಂದ ರಶೀತಿ ವಗೈರೆ ದಾಖಲಾತಿಗಳನ್ನು ಕೊಡಬೇಕೆಂದೂ ಕೇಳಿದ್ದಾರೆ. ತಮ್ಮ ಸಾಗುವಳಿ ಹಕ್ಕಿಗೆ ರಕ್ಷಣೆ ಕೊಡಬೇಕೆಂದೂ ಪ್ರಾರ್ಥಿಸಿದ್ದಾರೆ. ಸತ್ಯಾಂಶ ಹೀಗಿದ್ದರೂ ಕೆಲವರು ಜಮೀನುದಾರರು, ರೈತರು ಎಂದೂ ಎಷ್ಟು ಮಾತ್ರಕ್ಕೂ ಹೇಳದ, ಮನಸ್ಸಿನಲ್ಲಿಯೂ ಸಹ ಯೋಚಿಸದ ಮಾತನ್ನು ರೈತರುಗಳ ಅಭಿಪ್ರಾಯವೆಂದು ಹೇಳಿ ಅಪಪ್ರಚಾರ ಮಾಡುತ್ತಿರುವುದು ಜನರಿಗೂ, ಸರ್ಕಾರಕ್ಕೂ ಮಂಕುಬೂದಿ ಎರಚಲು ಯತ್ನಿಸುತ್ತಿರುವುದು ತೀರ ಖಂಡನೀಯವಾಗಿದೆ.

ಕಾಗೋಡು ಗ್ರಾಮದ ಜಮೀನುದಾರರು ತಮಗೆ ಸರ್ಕಾರದ ಬೆಂಬಲ ವಿರುವುದರಿಂದಲೂ, ತಾವು ಪ್ರಭಾವಶಾಲಿಯಾದ ಕಾಂಗ್ರೆಸ್ ಮುಖಂಡ ರೆನಿಸಿಕೊಂಡಿರುವುದರಿಂದಲೂ, ಸರ್ಕಾರಕ್ಕೆ ಉತ್ಪ್ರೇಕ್ಷೆಯಿಂದ ಕೂಡಿದ, ಸತ್ಯದೂರವಾದ ಸಂಗತಿಗಳನ್ನು ವರದಿ ಮಾಡಿ, ಅಕ್ರಮವಾಗಿ ಬಡ ಬೋರೇಗೌಡನ ಹಣದಿಂದ ತಮ್ಮ ಮನೆಗೆ ಸುಮಾರು ಮೂರು ತಿಂಗಳಿಂನಿದಂ, ಹದಿನೈದು ಇಪ್ಪತ್ತು ಜನ ಪೊಲೀಸಿನವರನ್ನೂ, ರಿಸರ್ವ್ ವಗೈರೆ ಚಾಲಕರನ್ನೂ ಸಕಾರದ ವೆಚ್ಚದಲ್ಲಿ ಪಡೆದುಕೊಂಡು ತಾವು ಬಡರೈತರ ಮೇಲೆ ಭಯಂಕರವಾಗಿ ಲಾಠಿ ಛಾರ್ಜ್ ನಡೆಸಿದ್ದಾರೆ. ಕರುಣೆಗೆ ಪಾತ್ರರಾದ ರೈತರಿಗೆ ಬೂಟ್ಸ್ ಮತ್ತು ಪಾದರಕ್ಷೆಗಳ ಪ್ರಯೋಗಗಳನ್ನು ಕೊಟಟು, ಆ ರುಚಿಗಳನ್ನು ರೈತವರ್ಗವಾದ ಸ್ತ್ರೀ, ಪುರುಷ ಆಬಾಲವೃದ್ಧರಾದ ರೈತಬಾಂಧವರು ಎಂದೆಂದಿಗೂ ಮರೆಯದ ಮಾತಾಗಿ ಉಳಿದಿರುವುದು ಸ್ಪಷ್ಟವಾದ ಸಂಗತಿಯಾಗಿದೆ. ಅಕ್ರಮವಾಗಿ ಸುಮಾರು ಇನ್ನೂರು ಜನ ಬಡರೈತರನ್ನು ಹಿಂಸಿಸಿ ದಸ್ತಗಿರಿ ವಗೈರೆ ಅಕ್ರಮ ಕಾನೂನು ಜಾರಿಮಾಡಿಸಿರುತ್ತಾರೆ; ಹಾಗೂ ಇದಕ್ಕೆಲ್ಲ ಮೂಲಕಾರಣರೂ, ಜಮೀನುದಾರರೂ ಆದ ನಿಮ್ಮಿಂದ ಮಾತ್ರವೇ ಹಲವು ಸುಳ್ಳು ಕೇಸುಗಳೂ, ನೂರಾರು ಜನ ರೈತರ ಮೇಲೆ ಸಾಗರ ಸನ್ನಿಧಿ ಕೋರ್ಟ್ ಕಚೇರಿಗಳಲ್ಲಿ ದಾಖಲಾಗಿರುತ್ತದೆ. ಇಷ್ಟೇ ಸಾಲದೆಂದು ಮಹಿಳೆಯರನ್ನು ದಸ್ತಗಿರಿ ಮಾಡಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನೂರಾರು ವರುಷಗಳಿಂದ ವಂಶಪಾರಂಪರ್ಯವಾಗಿ ಒಂದೇ ಸಮನೆ ಸಾಗುವಳಿ ಮಾಡುತ್ತಿರುವ ರೈತರ ನೂರಾರು ಬಡಕುಟುಂಬಗಳನ್ನು ಮಳೆಗಾಲ ಪ್ರಾರಂಭವಾಗಿರುವ ಬಿತ್ತನೆ ಕಾಲದಲ್ಲಿ ನಿರಾಶ್ರಿತರನ್ನಾಗಿಯೂ, ನಿರ್ಗತಿಕರನ್ನಾಗಿಯೂ ಮಾಡಿ, ದೇಶಾಂತರ ಓಡಿಸಲು ಯತ್ನಿಸುತ್ತಿದ್ದಾರೆ. ರೈತರ ಮೇಲೆ ಇಷ್ಟೆಲ್ಲಾ ಅತ್ಯಾಚಾರಗಳನ್ನು ನಡೆಯಿಸುತ್ತಲೇ ರೈತರಿಗೆ ವಿವೇಕ ಹೇಳಲು ಹೊರಟಿರುವುದು ಎಲ್ಲರಿಗೂ ತಿಳಿದಿದೆ. ಈ ಕಾಲದಲ್ಲಿ ಯಾರು ಯಾರನ್ನೂ ವಂಚಿಸಲು ಸಾಧ್ಯವಿಲ್ಲ.

ಕಾಂಗ್ರೆಸ್ಸಿನ ಮುಕಂಡರೆನಿಸಿಕೊಂಡು, ರೈತರ ಮೇಲೆ ನಿಷ್ಕರುಣೆಯಿಂದ ಲಾಠಿ ಪ್ರಹಾರ ಮಾಡಿಸುವುದಕ್ಕಿಂತ, ನೀವು ಗೌರವದಿಂದ ಕಾಂಗ್ರೆಸ್ಸಿಗೆ ರಾಜೀನಾಮೆಯಿತ್ತು, ನಿಜವಾದ ಜಮೀನುದಾರರಾಗಿಯೇ, ನಿಜವೇಷದಿಂದಲೇ ಹೊರಬಂದರೆ ರೈತರಿಗೂ ದೇಶಕ್ಕೂ ತುಂಬಾ ಉಪಕಾರವಾದೀತು. ಇಷ್ಟೆ ನನ್ನ ಸವಿನಯ ಪ್ರಾರ್ಥನೆ.

—-
( ಮೇಲಿನ ವಿವರಗಳು ಮೇ ೧೫ ಮಂಗಳವಾರ ೧೯೫೧ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕಾಂಗ್ರೆಸ್ ನಾಯಕ ಮತ್ತು ಭೂಮಾಲೀಕರಾದ ಕೆ.ಜಿ. ಒಡೆಯರ್ ಮತ್ತು ಸಾಗರ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಡಿ. ಮೂಕಪ್ಪನವರ ಪತ್ರಿಕಾ ಹೇಳಿಕೆಗಳು)