ರೈತ ನೇಗಿಲಯೋಗಿ, ತಾಳ್ಮೆಯ ಪ್ರತಿಮೂರ್ತಿ: ದಣಿ ಹೊರಿಸುವ ಶ್ರಮದ ನೊಗವನ್ನು ತನ್ನ ಎತ್ತುಗಳು ಹೊರುವಂತೆ ಹೊತ್ತು, ಆತ ಬಾರಿಸುವ ಕಿರುಕುಳದ ಚಾಟಿಏಟುಗಳನ್ನು ಸಹಿಸಿ ದುಡಿದು ದಣಿದ ಜೀತಗಾರ. ಆತನಿಗೆ ಸಾಮಾನ್ಯಕ್ಕೆ ಕೋಪಬಾರದು. ಹೊರಗಿನ ಪ್ರಪಂಚದಲ್ಲಿ ಎಷ್ಟೇ ಕಲ್ಲೋಲವಾಗಿದ್ದರೂ, ಇನ್ನೂ “ಮಾಲಿಕ ಹೆಚ್ಚು ಪುಣ್ಯ ಮಾಡಿದವನು; ಅದಕ್ಕೆ ಆತನಿಗೆ ಶ್ರೀ ಒಲಿದಿದ್ದಾಳೆ, ಗುಲಾಮನಂತೆ ದುಡಿದು ತೀರಿಸಬೇಕಾದ ಋಣದ ಬಾರ ತನ್ನ ಮೇಲೆ ಬೇಕಾದಷ್ಟಿದೆ’’ ಎಂದು ನಂಬುವ ಸ್ಥಿತಿಯಲ್ಲೇ ಇದ್ದಾನೆ.

ಆಧುನಿಕ ಬಾಳ್ವೆಯ ಕೇಂದ್ರಗಳಾದ ನಗರಗಳಲ್ಲಿ ವಾಸಿಸುವ ಕಾರ್ಖಾನೆಗಳ ಕಾರ್ಮಿಕನಿಗೆ ಬೀಳುವ ಹೊಸ ತತ್ವಗಳ ಚುರುಕು ರೈತನ ಮೇಲೆ ಏನೂ ಪರಿಣಾಮವನ್ನು ಉಂಟುಮಾಡದು. ಅಕ್ಷರ ಜ್ಞಾನ, ಪತ್ರಿಕಾ ಪ್ರಚಾರ, ವಿಶ್ವಾನುಭವ ಆತನಿಗಂತೂ ದೂರ. ಆದರೆ ಆ ಜಡಭರತನಂತಹ ರೈತ ವಿಶ್ವಾಮಿತ್ರ ಕೋಪ ತಾಳಿದನಾದರೆ, ಅದರಿಂದ ಕ್ರಾಂತಿಯ ಸಿಡಿಮದ್ದುಗಳು ಹಾರುವವು ಎಂಬುದರಲ್ಲಿ ಸಂಶಯವೇನು?

ಸಾಗರದ ಕಾಗೋಡಿನ ಸುತ್ತಮುತ್ತಲ ಗ್ರಾಮಗಳಿಂದ ಕಳೆದ ಎರಡು ತಿಂಗಳುಗಳಿಂದ ಬರುತ್ತಿರುವ ರೈತರ ಸತ್ಯಾಗ್ರಹ, ಬಂಧನಗಳ ಸುದ್ದಿಪರಂಪರೆಗಳನ್ನು ಈ ದೃಷ್ಟಿಯಿಂದ ವಿಶ್ಲೇಷಿಸಿದರೆ, ಮೇಲೆ ಕಾಣುವಷ್ಟು ಸಾಮಾನ್ಯದ ಪ್ರಕರಣವೆಂದು ಉಪೇಕ್ಷಿಸುವ ಸಂಗತಿಯಲ್ಲವೆಂದು ಅರ್ಥವಾದೀತು. ಈ ಗ್ರಾಮಾಂತರಗಳ ರೈತರು ಕೇವಲ ರೈತರಲ್ಲ; ಮಲೆನಾಡು ರೈತರು! ಹಬ್ಬಿದ ಮಲೆಗಳ ದಟ್ಟವಾದ ಕಾಡುಗಳ ಮಧ್ಯೆ, ಬಾಹ್ಯ ಜಗತ್ತಿಗೆ ದೂರವಾಗಿಯೋ ಎಂಬಂತೆ ಪ್ರತ್ಯೇಕವಾಗಿ ಬಾಳುತ್ತಿರುವುರು: ಜನ ಪೋಲೀಸರ ಲಾಠೀಛಾರ್ಜುಗಳನ್ನೂ, ಬಂಧನಗಳನ್ನೂ ಸಹಿಸಿಕೊಂಡು ಸತ್ಯಾಗ್ರಹ ನಡೆಸುತ್ತಿರಬೇಕಾದರೆ ಬಹಳ ಬಲವತ್ತರವಾದ ಕಾರಣಗಳಿರಬೇಕೆಂಬುದರಲ್ಲಿ ಸಂಶಯವಿಲ್ಲ.

ಈ ಸಂಬಂಧವಾಗಿ ನೆನ್ನೆಯ ಪತ್ರಿಕೆಯಲ್ಲಿ ಜಮೀನ್ದಾರರ ಪರವಾದ ಶ್ರೀ ಕೆ.ಜಿ. ಡೆಯರರ ಮತ್ತು ರೈತರ ಪರವಾದ ಶ್ರೀ ಮೂಕಪ್ಪನವರ ಹೇಳಿಕೆಗಳನ್ನು ಪ್ರಕಟಿಸಿದ್ದೇವೆ. ಕೃಷಿ ಕಲಹದ ಮೂಲ ಬೆಳವಣಿಗೆ ಮತ್ತು ಪ್ರಕೃತಿ ಪರಿಸ್ಥಿತಿಯನ್ನು ಉಭಯರೂ ತಮ್ಮ ತಮ್ಮ ದೃಷ್ಟಿಕೋನಗಳಿಂದ ವಿವರಿಸಿದ್ದಾರೆ. ಬಹುಮಟ್ಟಿಗೆ ಇಬ್ಬರ ವಾದಗಳೂ ಭಿನ್ನವಾಗಿದ್ದರೂ ಒಂದು ವಿಷಯ ಮಾತ್ರ ಎರಡರಲ್ಲೂ ಎದ್ದು ಕಾಣುತ್ತಿದೆ.

ತಲೆತಲಾಂತರಗಳಿಂದ ರೂಢಿಸಿಕೊಂಡು ಬಂದಿದ್ದ ರೈತರನ್ನು ತಮ್ಮ ಜಮೀನುಗಳಿಂದ ಉಚ್ಚಾಟನೆ ಮಾಡಲು ಹಿಡುವಳಿದಾರರು ಹೂಡಿರುವ ಸಂಚೇ ಇಂದಿನ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವೆಂಬುದು ನಿಸ್ಸಂಶಯ, ಕಾರಣವೇನೇ ಇರಲಿ ಕ್ರಮ ತೀವ್ರ ಖಂಡನೀಯ. ಅದರಲ್ಲೂ ವಿರಾಮಜೀವಿ ಜಮೀನುದಾರರನ್ನು ಪೋಷಣೆ ಮಾಡಿಕೊಂಡು ಬಂದ ಹಸು ಮಕ್ಕಳಂತಹ ರೈತರನ್ನು ಪೊಲೀಸರು ಲಾಠ ಬಂಧನ ಹಿಂಸೆಗಳಿಗೆ ಗುರಿ ಮಾಡಿರುವುದನ್ನಂತೂ ಕ್ರೌರ್ಯ ಎಂದೇ ಕರೆಯಲಾಗಿದೆ.

ಉಳುಮೆಗಾರ ಭೂಮಿಯೊಡಯನೋ ಅಲ್ಲವೋ ಎಂಬ ತತ್ವಗಳ ಚರ್ಚೆ ಅತ್ತ ಇರಲಿ. ಆದರೆ, ಹಿಡುವಳಿದಾರನ ಗುಲಾಮನಾಗಿ, ಜೀತದ ಆಳಾಗಿ, ನೇಗಿಲ ಎತ್ತಾಗಿ ದುಡಿದ ರೈತನಿಗೆ ಉಚ್ಛಾಟನೆಯ ಕೊಡುಗೆ ದ್ರೋಹವಲ್ಲವೇ? ಇಲ್ಲಿ ಮತ್ತೂ ಒಂದು ಮಾತಿದೆ. ಸಣ್ಣ ಹಿಡುವಳಿದಾರನ ಪ್ರಶ್ನೆ ಇಂದಿನ ಸಂದರ್ಭದಲ್ಲಿ ಏಳದು. ಆತ ಕೂಡ ರೈತನೆಂದೇ ಹೇಳಬೇಕು. ರೈತನಿಗೆ ಕಷ್ಟಕೊಡುವಷ್ಟು ಚೈತನ್ಯ ಆತನಲ್ಲಿಲ್ಲ. ಇಂದಿನಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಆತನಿಗೆ ದೊರಕುವುದು ಕಷ್ಟವೇ; ಕಾಡಬಲ್ಲವ ಭಾರೀ ಜಮೀನುದಾರ ಮಾತ್ರ.

ಗ್ರಾಮಾಭಿವೃದ್ಧಿಗೆ ಬದ್ಧವಾದ ಕಾಂಗ್ರೆಸ್ ಸರ್ಕಾರ ಇಷ್ಟು ದಿನದ ಮೌನದ ಜೊತೆಗೆ ಇನ್ನೂ ಮೊನವಾಗಿ ಕೂಡದೆ ಪೊಲೀಸರನ್ನು ವಾಪಸ್ ಕರೆಸಲಿ. ರೈತರ ಯೋಗಕ್ಷೇಮದ ರಕ್ಷಣೆಯ ಭರವಸೆ ನೀಡಲಿ. ಅಲ್ಲದೆ ಉದ್ವಿಗ್ನ ವಾತಾವರಣವನ್ನು ಹಾಗೇ ಉರಿಯಲು ಬಿಟ್ಟಲ್ಲಿ ಭಯಂಕರ ಆಸ್ಪೋಟನ ಸಂಭವಿಸುವುದರಲ್ಲಿ ಸಂಶಯವಿಲ್ಲ. ಪರಿಣಾಮವೇನಾದೀತೋ ಹೇಳಲಾಗುವುದಿಲ್ಲ. ಅಂತೇ ಮಹಾದಾರುಣ ಸ್ಥಿತಿಯಲ್ಲಿರುವ ರೈತನ ಜೀವನಾಡಿ ಕತ್ತರಿಸಿಬೀಳಲಿರುವ ಇಂದು, ರೈತಪೋಷಿತ ಸರಕಾರ ಮಧ್ಯೆ ಪ್ರವೇಶಿಸಿ ರೈತ ಹಿತ ಕಾಪಾಡಬೇಕು. ಸಾಗರ ತಾಲ್ಲೂಕಿನಲ್ಲೇನಾಗುತ್ತಿದೆ? ಪರಿಣಾಮವೇನಾದೀತು? ಎಂಬುದನ್ನರಿಯಲು ಸರ್ಕಾರದ ಉನ್ನತ ವಲಯಗಳಲ್ಲಿ ಕಾತುರವೇ ಕಾಣುತ್ತಿಲ್ಲದಿರುವುದು ವಿಷಾದಕರ. ಈವರೆಗೂ ಪರಿಸ್ಥಿತಿಯ ಪರಿಶೀಲನೆಗಾಗಿ ಭೇಟಿಕೊಡದಿದ್ದ ಮಂತ್ರಿಗಳಲ್ಲಿ ಒಬ್ಬರಾದರೂ ಕೂಡಲೇ ಮಲೆನಾಡಿನ ಈ ಮೂಲೆಗೆ ಭೇಟಿ ಕೊಟ್ಟು ಸ್ಥಿತಿಗತಿ ಅರಿಯಲೆತ್ನಿಸುವುದುಗತ್ಯ.