ಎಲ್ಲಿ ರೈತರಿಗೆ ಕಿರುಕುಳ, ಕಾರ್ಮಿಕರಿಗೆ ತೊಂದರೆ, ವಿದ್ಯಾರ್ಥಿಗಳಿಗೆ ಆತಂಕ ಎಂದರೆ ಅಲ್ಲಿ ಗೌಡರು ಹಾಜರ್. ಅವರು ಹಿಂದೆ ನಿಂತು ಬೆಂಕಿಹಚ್ಚುವ ಮುಂದಾಳುಗಳಾಗಿರಲಿಲ್ಲ; ತಾವೇ ಮುಂದೆ ನಿಂತು ವಿರೋಧವನ್ನು ಎದುರಿಸುವ ಧೀಮಂತರು.

ಹಳೆಯ ಮೈಸೂರಿನ ರಾಜಕೀಯಸ್ಥರಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರಲ್ಲಿ ಗೌಡರು ಅಗ್ರಗಣ್ಯರು. ‘ದಸರಾ’ ಮೆರವಣಿಗೆಯನ್ನು ಮಾನವ ಘನತೆಯ ದೃಷ್ಟಿಯಿಂದ ವಿರೋಧಿಸಿದರು. ಹೀಗೆ ಗೌಡರು ತಮ್ಮ ಕಾಲಕ್ಕಿಂತ ಮುಂದೆ ಯೋಚಿಸಿ ಕೆಲಸ ಮಾಡುತ್ತಿದ್ದರು.

ರಾಜಕೀಯವು ಗೌಡರ ವ್ಯಕ್ತಿತ್ವದ ಒಂದು ಮುಖ ಮಾತ್ರ. ಅವರದು ವಿವಿಧ ಸಾಮರ್ಥ್ಯಗಳನ್ನೊಳಗೊಂಡ ವ್ಯಕ್ತಿತ್ವವಾಗಿತ್ತು. ಅವರ ಸ್ನೇಹಿತ ವರ್ಗದಲ್ಲಿ ಶ್ರೀಮಂತರು, ಬಡವರು ಮುಂತಾದ ಸಮಾಜದ ಎಲ್ಲ ವರ್ಗಗಳ, ಎಲ್ಲ ಧರ್ಮಗಳ ಜನರೂ ಇದ್ದರು.

– ಬಿ.ಎಸ್. ಗುಂಡೂರಾವ್

 

ಗೋಪಾಲಗೌಡರಂಥ ರಾಜಕಾರಣಿಗಳು ಐದು ಜನ ಸಿಕ್ಕರೆ ಸಾಕು: ನಾನು ಈ ರಾಜ್ಯವನ್ನು ರಾಮರಾರಜ್ಯವನ್ನಾಗಿ ಮಾಡುತ್ತೇನೆ.

ವೈಕುಂಟ ಬಾಳಿಗ

 

ಅವರು ಯಾವ ವ್ಯಕ್ತಿಯನ್ನಾದರೂ ವಿರೋಧಿಸಿದರೆ ಆ ವಿರೋಧಕ್ಕೆ ತಾತ್ವಿಕತೆಯ ಆಧಾರವಿರುತ್ತಿತ್ತೇ ಹೊರತು ವೈಮನಸ್ಸಲ್ಲ. ಇದರಿಂದಾಗಿ ಅವರ ಗೆಳೆಯರ ಬಳಗ ಅಗಾಧವಾಗಿದ್ದಿತು. ಭ್ರಷ್ಟಾಚಾರದಿಂದ ಕಲುಷಿತವಾದ ರಾಜಕಾರಣದಲ್ಲಿದ್ದರೂ ನೀರಿನಲ್ಲಿಯ ತಾವರೆ ಎಲೆಯಂತೆ, ಅದಕ್ಕೆ ಅಂಟಿಕೊಳ್ಳದೆ ಸ್ವಚ್ಛ ಜೀವನ ನಡೆಸಿ, ನೊಂದು ಬೆಂದು ಅಕಾಲ ಮೃತ್ಯುವಿಗೆ ತುತ್ತಾದ ಆದರ್ಶ ವ್ಯಕ್ತಿ ಗೋಪಾಲಗೌಡರು. ಇಂತಹ ರಾಜಕಾರಣಿಗಳು ಬಹು ವಿರಳ. ಇಂಥವರ ಕೊರತೆಯಿಂದಾಗಿಯೇ ಈ ರಾಷ್ಟ್ರದ ರಾಜಕಾರಣ ದಿನೇ ದಿನೇ ಅಧೋಗತಿಗೆ ಇಳಿಯುತ್ತಿರುವುದು.

ಕೆ. ವೆಂಕಟಗಿರಿಗೌಡ

 

ಅಧಿಕಾರಿಗಳನ್ನು ಮಣಿಸುವ ಎದೆಗಾರಿಕೆ ಗೋಪಾಲಗೌಡರಿಗಿತ್ತು; ಮಾತ್ರವಲ್ಲದೆ ಅರಸೊತ್ತಿಗೆಯ ವಿರುದ್ಧವೂ ಅವರು ಕೆರಳಿದ್ದರು. ಮೈಸೂರು ಅರಸರ ಜಂಬೂಸವಾರಿಯನ್ನು ಅವರು ವಿರೋಧಿಸಿ ತುಂಬಿದ ಜನಜಂಗುಳಿಯ ಮಧ್ಯೆ ಸತ್ಯಾಗ್ರಹ ಹೂಡಿದ್ದು, ಬಂಧನಕ್ಕೊಳಗಾಗಿದ್ದು, ಕಣ್ಣಿಗೆ ಕಟ್ಟಿದಂತಿದೆ. ಇದರಿಂದಾಗಿಯೇ ಆನೆಯ ಅಂಬಾರಿಯ ಮೇಲೆ ಅರಸರು ಸವಾರಿ ಮಾಡುವುದು ನಿಂತುಹೋಯಿತೆಂಬುದು ಇತಿಹಾಸ ಪ್ರಸಿದ್ಧ.

ಅಮ್ಮೆಂಬಳ ಆನಂದ

 

ಸುಮಾರು ೧೯೬೪-೬೫ರ ಕಾಲ. ಬೆಂಗಳೂರಿನಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಣ ಕ್ರಿಕೆಟ್‌ಮ್ಯಾಚ್ ಇತ್ತು. ನಾನು ಮತ್ತು ನನನ ಗೆಳೆಯ ಮ್ಯಾಚ್ ನೋಡಲು, ಶಿವಮೊಗ್ಗದಿಂದ ಬೆಂಗಳೂರಿಗೆ ರಾತ್ರಿ ರೈಲಿನಲ್ಲಿ ಹೊರಟಿದ್ದೆವು. ರೈಲು ಹತ್ತಿ ಕುಳಿತಮೇಲೆ, ನಾವು ಕುಳಿತಿದ್ದ ಜಾಗದೆಡೆಗೆ ಗೋಪಾಲಗೌಡರು ಮತ್ತು ಅವರ ಶಿಷ್ಯ ಕೋಣಂದೂರು ಲಿಂಗಪ್ಪನವರು ಬೆಂಗಳೂರಿಗೆ ಹೋಗುವ ಸಲುವಾಗಿ ಅದೇ ರೈಲಿಗೆ ಬಂದರು. ನಾನು ಮೇಲೆದ್ದು ಅವರಿಗೆ ನಮಸ್ಕರಿಸಿದೆ. ಗೌಡರೂ ನಮಸ್ಕರಿಸಿ ನಮ್ಮೊಡನೆ ಕುಳಿತರು.

ನಮ್ಮ ಜೊತೆಯಲ್ಲಿ ನನ್ನ ಗೆಳೆಯನ ನಾಲ್ಕು ವರ್ಷದ ಚಿಕ್ಕ ತಮ್ಮನೂ ಅಂದು ನಮ್ಮೊಡನೆ ಇದ್ದ. ನಾವು ಹೊರಡುವ ಅವರಸರದಲ್ಲಿ ಹಾಸಲು ಹೊದೆಯಲು ತಂದಿರಲಿಲ್ಲ. ರಾತ್ರಿ ಚಳಿ ಬಹಳವಿತ್ತು. ಆ ಚಿಕ್ಕಹುಡುಗ ಚಳಿಯಿಂದ ಮುದುರಿಕೊಂಡು ತೂಕಡಿಸುತ್ತಾ ವಾಲಾಡುತ್ತಿದ್ದ.

ಗೋಪಾಲಗೌಡರು ತೂಕಡಿಸುತ್ತಿದ್ದ ಹುಡುಗನನ್ನು ನೋಡಿ, ‘ಮಗು’ ಅಂತ ಹತ್ತಿರ ಕರೆದು, ‘ನಿದ್ದೆ ಮಾಡ್ತೀಯಾ ಮರಿ’! ಅಂತ ಕೇಳಿದರು. ಗೌಡರು ಪಕ್ಕಕ್ಕೆ ತಿರುಗಿ, ‘ಈ ಮಗು ಮಲಗ್ತಾನೆ, ನನ್ನ ಬೆಡ್‌ಶೀಟ್ ಇವನಿಗೆ ಕೊಡು!’ ಅಂತ ಲಿಂಗಪ್ಪನವರಿಗೆ ಹೇಳಿದರು. ಲಿಂಗಪ್ಪನವರು ಭಕ್ತಿಯಿಂದ ಆ ಕೆಲಸ ಮಾಡಿದರು. ಹಾಸಿದ ಬೆಡ್‌ಶೀಟ್ ಮೇಲೆ ಹುಡುಗ ಮಲಗಿದ್ದ ಮೇಲೂ ಅವನು ಚಳಿಯಿಂದ ಮುದುರಿಕೊಂಡಿದ್ದ.

ಮತ್ತೆ ಗೌಡರು, ‘ಲಿಂಗಪ್ಪ, ನನ್ನ ಶಾಲುಕೊಡು’ ಅಂದು ಶಾಲು ತೆಗೆದುಕೊಂಡು ಮಲಗಿದ್ದ ಹುಡುಗನಿಗೆ ಹೊದಿಸಲು ಹೋದರು. ಹುಡುಗ, ‘ಬೇಡ ಬೇಡ’ ಅಂದ. ಆದರೂ ಗೌಡರು, ‘ತಗೋ ಮರಿ, ಬೆಳಿಗ್ಗೆ ನಾನೇ ಕೇಳಿ ತಗೊಳ್ತೇನೆ’ ಎನ್ನುತ್ತಾ ಹುಡುಗನಿಗೆ ಪ್ರೀತಿಯಿಂದ ಒತ್ತಾಯಿಸಿ ಶಾಲುಹೊದಿಸಿ ಮಲಗಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಪ್ರತಿಯನ್ನು ಹರಿದು ಬೂಟುಕಾಲಿನಲ್ಲಿ ತುಳಿದು ಗರ್ಜಿಸಿದ್ದ ಗೋಪಾಲಗೌಡರ ಬಗ್ಗೆ ಕೇಳಿದ್ದೆ. ಮೈಸೂರು ದಸರಾದಲ್ಲಿ, ಜಂಬೂ ಸವಾರಿಯ ಮೇಲೆ ಮಹಾರಾಜರು ಮೆರವಣಿಗೆ ಹೊರಟಾಗ, ಅದನ್ನು ವಿರೋಧಿಸಿ ಧಿಕ್ಕಾರ ಹೇಳುತ್ತಾ ಗರ್ಜನೆ ಮಾಡಿದ್ದ ಗೌಡರ ಬಗ್ಗೆ ಓದಿ ತಿಳಿದಿದ್ದೆ.

ಅಂದು ರಾತ್ರಿ ರೈಲಿನಲ್ಲಿ ಅದೇ ಗುಡುಗುವ ಮನುಷ್ಯನ ಪ್ರೀತಿಯ ಹೃದಯವನ್ನು ಕಣ್ಣಾರೆ ಕಂಡೆ.

ಎಂ.ಎಸ್. ನಂಜುಂಡ

 

ಗೋಪಾಲಗೌಡರು ಮತ್ತು ನಾನು ಒಟ್ಟಿಗೆ ಜೈಲಿನಲ್ಲಿ ಇದ್ದೇವಾದ್ದರಿಂದ ನನ್ನೊಡನೆ ಅವರಿಗೆ ತುಂಬಾ ಸಲಿಗೆ. ಅವರು ಎಷ್ಟು ಮುಂಗೋಪಿಗಳೋ ಅಷ್ಟೇ ಹಾಸ್ಯಪ್ರಿಯರು.

ನಮಗೆ ಅವಳಿ ಜವಳಿ ಹೆಣ್ಣುಮಕ್ಕಳಿದ್ದವು. ಗೌಡರು ನಮ್ಮ ಮನೆಗೆ ಬಂದಿದ್ದಾಗ ನನ್ನೊಡನೆ ಮಾತಾಡುತ್ತಾ, ‘ಅಲ್ಪಶ್ರಮ, ಅಧಿಕಲಾಭ ಉರಾಳನಿಗೆ’ ಎಂದು ನಗುತ್ತಾ ಹೇಳಿದರು. ನಮ್ಮ ಅವಳಿ ಮಕ್ಕಲು ಒಂದೇ ತರಹ ಇದ್ದವಾದ್ದರಿಂದ ಅವರನ್ನು ಗುರುತು ಹಿಡಿಯಲು ಬೇರೆ ಬೇರೆ ಬಣ್ಣಗಳ ಓಲೆಗಳನ್ನು ಹಾಕುತ್ತಿದ್ದೆವು. ಗೌಡರಿಗೆ ನಾನು ಇದನ್ನು ಹೇಳಿದೆ. ಗೌಡರು, ‘ನಿನ್ನ ಮಕ್ಕಳ ಗುರುತು ನಿನಗೆ ಸಿಗಲ್ವ?’ ಎಂದು ನನ್ನನ್ನು ಛೇಡಿಸಿ ನಗೆಯಾಡಿದರು.

ಗೋಪಾಲಗೌಡರು ಜನತೆ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ತಿಳುವಳಿಕೆಯನ್ನು ಮೂಡಿಸುತ್ತಿದ್ದರು; ಅವರಲ್ಲೂ ನಾಯಕತ್ವದ ಗುಣಗಳನ್ನು ಬೆಳೆಸುತ್ತಿದ್ದರು.

ಒಮ್ಮೆ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ಸಭೆಯಲ್ಲಿದ್ದ ಒಬ್ಬರು ಎದ್ದುನಿಂತು

‘ನಮ್ಮೂರಿನಲ್ಲಿ ಒಂದು ಮೋರಿ ಮಾಡಿಸಲು ಹೇಳಿದ್ದೆವು. ಇದುವರೆಗೂ ಆಗಿಲ್ಲ! ಮಾಡಿಸಿಕೊಡಿ’ ಎಂದು ಕೇಳಿದರು.

ಗೋಪಾಲಗೌಡರು ಎದ್ದು ನಿಂತು, ‘ನಾನು ನಿಮಗೆ ಮೋರಿ ಮಾಡಿಸಲು ಬಂದವನಲ್ಲ.’

ನಾನು ಒಟ್ಟು ಕರ್ನಾಟಕದ ಒಬ್ಬ ಪ್ರತಿನಿಧಿ. ಇಡೀ ಕರ್ನಾಟಕದಲ್ಲಿ ಏನು ನಡೆಯುತ್ತೆ. ಎಲ್ಲಿ ಏನಾಗಬೇಕೆಂಬುದರ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿದೆ. ಆಯಿತು! ಇಲ್ಲಿ ಇನ್ನೂ ಮೋರಿ ಆಗದಿರುವ ಬಗ್ಗೆ ನೀವೇನು ಕ್ರಮ ಕೈಗೊಂಡಿದ್ದೀರಿ?

ಸಂಬಂಧಪಟ್ಟ ಇಲಾಖೆಯವರನ್ನು ವಿಚಾರಿಸಿದ್ದೀರಾ? ಎಂದು ಬಿರುಸಾಗಿ ಹೇಳಿ

‘ಆ ಇಲಾಖೆಯವರು ನೀವು ಹೇಳಿದ ಕೆಲಸವನ್ನು ಮಾಡದಿದ್ದಲ್ಲಿ, ನನಗೆ ಹೇಳಿ, ಆಗ ನಾನು ಹೇಳಿ ಮಾಡಿಸ್ತೀನಿ. ನಿಮ್ಮಿಂದಲೇ ಆಗುವ ಕೆಲಸಕ್ಕೆ ನನಗೆ ಹೇಳಬೇಡಿ,’ ಎಂದು ಅಲ್ಲಿದ್ದ ಕಾರ್ಯಕರ್ತರಲ್ಲಿ ಜವಾಬ್ದಾರಿಯನ್ನು ಮಾಡಿಸಿ, ಅವರನ್ನು ಬೆಳೆಸುತ್ತಿದ್ದರು. ನಾನೂ ಅವರ ಗರಡಿಯಲ್ಲೇ ಬೆಳೆದವನು. ಅವರಿಂದಾಗಿ ‘ಗೋವಾ ವಿಮೋಚನಾ ಚಳವಳಿ.’ ‘ಭೂ ಆಕ್ರಮಣ ಚಳವಳಿ‘ಯಲ್ಲಿ ಭಾಗವಹಿಸಿದವನು. ಅದು ನನ್ನ ಹೆಮ್ಮೆ

ಎಂ.ಎಸ್. ಗೋಪಾಲಕೃಷ್ಣ ಉರಾಳ

 

ಗೋಪಾಲಗೌಡರ ಆರೋಗ್ಯ ಸರಿಯಿರಲಿಲ್ಲ. ಅವರು ಕೋಣಂದೂರಿನಲ್ಲಿ ಡಾ. ವಿಷ್ಣುಮೂರ್ತಿಯವರ ಮನೆಯಲ್ಲಿ ಕೆಲವು ತಿಂಗಳಿದ್ದರು. ಆ ದಿನಗಳಲ್ಲಿ ನಾನು ಗೋಪಾಲಗೌಡರಿಗೆ ಕ್ಷೌರ ಮಾಡಿದವನು.

೧೯೭೦ರ ಸುಮಾರಿಗೆ ಅಂದು ಕೋಣಂದೂರು ಪೇಟೆಯಿಂದ ಎರಡು ಫರ್ಲಾಂಗ್ ದೂರದಲ್ಲಿದ್ದು, ಅರಣ್ಯ ಇಲಾಖೆಯ ಸರ್ವೇನಂಬರ್ ಹದಿನಾಲ್ಕು ಮತ್ತು ನಲವತ್ತರಲ್ಲಿ ಸುಮಾರು ಒಂದುನೂರಕ್ಕೂ ಹೆಚ್ಚು ನಿವೇಶನಗಳಿಗೆ ಗೋಪಾಲಗೌಡರ ಮಾರ್ಗದರ್ಶನದಲ್ಲಿ ಮೆರವಣಿಗೆ ಹೊರೆಟೆವು; ಅರಣ್ಯ ಇಲಾಖೆಯ ನಿವೇಶನಗಳನ್ನು ಆಕ್ರಮಿಸಿಕೊಂಡೆವು. ನಾವು ಆಕ್ರಮಿಸಿದ ನಿವೇಶನಗಳಲ್ಲಿ, ಮರದ ಕಂಬ ನೆಟ್ಟು ಚಪ್ಪರ ಹಾಕಲು ಗೋಪಾಲಗೌಡರು ತಿಳಿಸಿದರು. ಅವರು ಹೇಳಿದಂತೆ ನಾವೆಲ್ಲ ಅಲ್ಲಿ ಚಪ್ಪರದ ಮಾದರಿಯ ಗುಡಿಸಲು ನಿರ್ಮಿಸಿದೆವು.

ಆ ವೇಳೆಗಾಗಲೇ ಪೋಲಿಸರು ಬಂದಿದ್ದರು. ಪೋಲೀಸರು ಗೌಡಲಗೌಡರನ್ನು ಮತ್ತು ಅವರೊಂದಿಗಿದ್ದ ಮೂವತ್ತೊಂಬತ್ತು ಜನರನ್ನು ಬಂಧಿಸಿ ಕರೆದೊಯ್ದರು.

ಇರಲು ಮನೆಯೇ ಇಲ್ಲದಿದ್ದ ನಾವುಗಳು, ಗೋಪಾಲಗೌಡರಿಂದಾಗಿ ಮನೆಗಳ ಹಕ್ಕುಪತ್ರಗಳನ್ನು ಪಡೆದೆವು.

ಕೆ.ಎನ್.ಶೀನಪ್ಪ ಭಂಡಾರಿ

 

ಗೋಪಾಲಗೌಡರ ಸಮಾಜವಾದಿ. ನಾನು ಈಗಲೂ ಕಾಂಗ್ರೆಸ್ ಪಕ್ಷದಲ್ಲಿರುವವನು. ನಮ್ಮ ಪರಸ್ಪರ ಪ್ರೀತಿ ವಿಶ್ವಸಗಾಳಿಗೆ, ನಾವಿದ್ದ ಪಕ್ಷಗಳು ಎಂದೂ ಅಡ್ಡಬರಲಿಲ್ಲ.

ಒಮ್ಮೆ ಗೌಡರ ಬಳಿ ಸಿಗರೇಟು ಕೇಳಿದೆ. ಗೌಡರು, ‘ನಾನೇ ಸಮಾಜವಾದಿಯೆಂದು ತಿಳಿದಿದ್ದೆ. ಆದರೆ ನೀವು ನನಗಿಂತಲೂ ದೊಡ್ಡ ಸಮಾಜವಾದಿ’, ಎಂದು ನಗುತ್ತಾ ಸಿಗರೇಟು ಕೊಟ್ಟರು. ಹಲವಾರು ಸಾರಿ ಸಿಗರೇಟು ಸೇದಲು ಅವರ ಬಳಿಯಲ್ಲೂ ದುಡ್ಡಿರುತ್ತಿರಲಿಲ್ಲ. ಆಗ ತಮ್ಮ ಜುಬ್ಬದ ಜೇಬಿಗೆ ಕೈ ಹಾಕಿ ಚಡಪಡಿಸುತ್ತಿದ್ದರು. ಗೌಡರ ಸ್ಥಿತಿಯನ್ನು ಚೆನ್ನಾಗಿ ತಿಳಿದಿದ್ದ ನಾವು, ಅವರಿಗೆ ಸಿಗರೇಟು ತಂದು ಕೊಡುತ್ತಿದ್ದೆವು.

ಗೋಪಾಲಗೌಡರಿಗೆ ಅವಶ್ಯಕವಿರುವುದನ್ನು ಜನರೇ ಒದಗಿಸುತ್ತಿದ್ದರು. ಜನರೇ ಅವರ ಸಂಪತ್ತು. ಬಡವರ ಕೀಳರಿಮೆಯನ್ನು ಕಂಡು ಕಿಡಿಕಿಡಿಯಾಗುತ್ತಿದ್ದರು. ತೀರ್ಥಹಳ್ಳಿ ತಾಲ್ಲೂಕಿನ ಶ್ರೀಮಂತರ ಮನೆಯ ಮೆಟ್ಟಿಲನ್ನು ಅವರು ಎಂದೂ ಹತ್ತಿದವರಲ್ಲ.

ಎಂ. ಚನ್ನಪ್ಪ

 

ಗೋಪಾಲಗೌಡರು ಎರಡನೆಯ ಬಾರಿಗೆ ಶಾಸಕರಾಗಿದ್ದರು. ಸೋನಕ್ಕನವರೊಂದಿಗೆ ಮದುವೆಯೂ ಆಗಿತ್ತು. ಗೌಡರು ಸೋನಕ್ಕನವರ ಜೊತೆಗೆ ಶಾಂತವೇರಿಗೆಬಂದಿದ್ದಾರೆಂಬ ವಿಷಯ ತಿಳಿಯಿತು. ಅವರ ಅಬಿಮಾನಿಗಳಾಗಿದ್ದ ನಾವು, ಅವರನ್ನು ನೋಡಲು ಶಾಂತವೇರಿಗೆ ಹೋದೆವು.

ಹುಲ್ಲುಗುಡಿಸಲಿನ ಮನೆಯ ಚಿಕ್ಕಚೌಕಿಯಲ್ಲಿ ನಾವೆಲ್ಲ ಕುಳಿತೆವು. ಗೌಡರು ಏನನ್ನೋ ಬರೆಯುತ್ತಿದ್ದರು. ಬರೆದಿದ್ದನ್ನು ಲಿಂಗಪ್ಪನವರಿಗೆ ಓದಿ ಹೇಳುತ್ತಿದ್ದರು. ಗೌಡರು ನಮ್ಮನ್ನು ಮಾತಾಡಿಸುತ್ತಿದ್ದಾಗ, ಸೋನಕ್ಕನವರು ನಮಗೆಲ್ಲಾ ಆರು ಲೋಟಗಳಲ್ಲಿ ಕಾಫಿ ತಂದರು.

ಗೌಡರು ಲೋಟಗಳನ್ನೇ ತದೇಕಚಿತ್ತರಾಗಿ ನೋಡಿದರು. ಏಕೆಂದರೆ ಆರು ಲೋಟಗಳೂ ಒಂದೊಂದು ಆಕಾರದಲ್ಲಿದ್ದು, ಒಂದೊಂದು ಲೋಹದಿಂದ ಮಾಡಿದ್ದವಾಗಿದ್ದವು.

ಗೌಡರು ಅದರಲ್ಲಿ ಅಲ್ಯೂಮಿನಿಯಂ ಲೋಟವನ್ನು ತಾವು ತೆಗೆದುಕೊಂಡು, ಉಳಿದವುಗಳನ್ನು ನಮಗೆ ಕೊಟ್ಟರು. ಅವುಗಳಲ್ಲಿ ಒಂದೂ ಸ್ಟೀಲ್ ಲೋಟವಿರಲಿಲ್ಲ!

ಆಗ ಗೌಡರು ಕಾಫಿ ಕುಡಿಯುತ್ತಾ, ‘ನೋಡ್ರಪ್ಪಾ ಒಬ್ಬೊಬ್ಬರಿಗೂ ಒಂದೊಂದು ತರದ ಲೋಟವಿದ್ದರೂ, ಕಾಫಿ ಮಾತ್ರ ಒಂದೇ ಅಲ್ಲವಾ! ಸಮಾಜವಾದ ಅಂದರೆ ಇದೇ!’ ಎಂದರು. ಸೋನಕ್ಕನವರು ಸುಮ್ಮನೆ ನಕ್ಕರು.

ಎರಡನೆ ಭಾರಿಗೂ ಶಾಸಕರಾಗಿದ್ದು, ಕೈ ಶುದ್ಧವಿದ್ದ ಬರಿಗೈ ಗೌಡರ ಮನೆಯ ಸ್ಥಿತಿ ಹೀಗಿತ್ತು!

ಕೆ.ಕೆ. ಗೌಡ

 

ಸುಮಾರು ೧೯೫೦-೫೧ರ ಸಮಯ: ನಾನು ಕೋಣಂದೂರಿನಲ್ಲಿ ವಾಸವಿದ್ದೆ. ನಾಟಕದ ಸೀನ್ಸ್ ಬರೆಯುತ್ತಿದ್ದೆ. ಸೈಕಲ್‌ಷಾಪ್ ನಡೆಸಿ ಜೀವನ ಮಾಡುತ್ತಿದ್ದೆ. ಗೋಪಾಲಗೌಡರು ಚುನಾವಣೆಗೆ ನಿಂತಿದ್ದರು. ಆಗ ಗೋಪಾಲಗೌಡರಿಗಾಗಿ ಬಿಳಿಕಾಗದದಲ್ಲಿ ವಾಲ್‌ಪೋಸ್ಟರ್ ಬರೆಯುವುದೇ ನನ್ನ ಮುಖ್ಯ ಕೆಲಸವಾಗಿತ್ತು.

ಓಟು ಕೊಡಿ-ಗೋಪಾಲಗೌಡ-ಆಲದ ಮರದ ಚಿತ್ರ: ಇಷ್ಟನ್ನೇ ನಾನು ಬರೆಯುತ್ತಿದ್ದೆ. ಅಂದು ಗೋಪಾಲಗೌಡರು ನಾನು ಬರೆಯುವುದನನೇ ನೋಡುತ್ತಾ ಕುಳಿತಿದ್ದರು. “ಹಗಲು ರಾತ್ರಿ ಇಷ್ಟೊಂದು ವಾಲ್‌ಪೋಸ್ಟರ್ಸ್ ಪುಕ್ಕಟೆ ಬರೀತಿಯಲ್ಲಾ! ಜೀವನ ಹೇಗೆ ಮಾಡ್ತೀಯೋ ರಾಮಣ್ಣಾ?’’ ಎಂದರು.

“ರಾಮಣ್ಣಾ ನೀವೆಲ್ಲ ಸುಖೀಜೀವಿಗಳಾಗಿ ಬಾಳೋದು ಯಾವಾಗಲೋ?’’ ಎಂದು ನಿಟ್ಟುಸಿರುಬಿಡುತ್ತಿದ್ದರು.

“ಮೊದಲು ನೀವು ಗೆದ್ದುಬನ್ನಿರಿ, ಆಮೇಲೆ ಆ ಬಗ್ಗೆ ಯೋಚಿಸೋಣ’’ ಎನ್ನುತ್ತಿದ್ದೆ. ಅವರು ಸಾಯುವ ಮೂರು ತಿಂಗಳ ಮೊದಲು ನಮ್ಮೂರಿಗೆ ಬಂದಿದ್ದರು. ನನ್ನನ್ನು ನೋಡಿ, “ನನಗೆ ಸಹಾಯಕರಾಗಿ ದುಡಿದ ನೀವೆಲ್ಲಾ ಇಲ್ಲೇ ಉಳಿದುಬಿಟ್ರಿ. ಎದುರು ನಿಂತ ಹೋರಾಡಿದವರೇ ನನ್ನಲ್ಲಿ ಬಂದು ಕೆಲಸ ಮಾಡಿಸ್ಕೋತಾವರೆ!’’ ಎಂದು ನಿಟ್ಟುಸಿರುಬಿಟ್ಟರು. ಅಲ್ಲಿಂದ ಹೋದ ಗೌಡರು ಮತ್ತೆ ಎಂದೂ ನಮ್ಮೂರಿಗೆ ಬರಲಿಲ್ಲ.

ಎಚ್. ರಾಮಪ್ಪ

 

ನನ್ನ ಮತ್ತು ಗೋಪಾಲನ ಸ್ನೇಹ ವಿದ್ಯಾರ್ಥಿದೆಸೆಯಿಂದ ಬಂದದ್ದು. ಗೋಪಾಲ ನನ್ನ ಬಾಲ್ಯದ ಗೆಳೆಯ. ನಾವಿಬ್ಬರೂ ಶಿವಮೊಗ್ಗದಲ್ಲಿ ಇಂಟರ್‌ಮೀಡಿಯಟ್ ಓದುವಾಗ, ಅಲ್ಲಿನ ಒಕ್ಕಲಿಗರ ಹಾಸ್ಟಲಿನಲ್ಲಿ ಒಂದೇ ಕೊಠಡಿಯಲ್ಲಿದ್ದೆವು. ನಾನು ಆಗ ಹಾಸ್ಟಲ್‌ನ ಮ್ಯಾನೇಜರ್ ಆಗಿದ್ದೆ. ನಂತರ ಸ್ವಲ್ಪಕಾಲ ಅವನೂ ಹಾಸ್ಟಲ್‌ನ ಮ್ಯಾನೇಜರ್ ಆದ. ಅವನು ಮ್ಯಾನೇಜರ್ ಆಗುತ್ತಿದ್ದಂತೆಯೇ, ಒಕ್ಕಲಿಗ ಹಾಸ್ಟಲ್‌ಗೆ ಎಲ್ಲ ಜಾತಿಯ ಹುಡುಗರೂ ಬರತೊಡಗಿದರು. ಇದು ಗೋಪಾಲನ ನಡವಳಿಕೆ.

ಅವನಿಗಿದ್ದ ಬಡವರ ಬಗೆಗಿನ ಕಳಕಳಿ, ನಿರ್ಭೀತಿಯ ಎದೆಗಾರಿಕೆ, ಮಾನವೀಯ ಅಂತಃಕರಣದ ನಡವಳಿಕೆ, ಹೋರಾಟದ ಘಟನೆಗಳು ನೂರಾರಿವೆ. ಅವುಗಳಲ್ಲಿ ನನಗೇ ಸಂಬಂಧಪಟ್ಟ ಒಂದು ಘಟನೆ:

ನಾನು ಶಿಕ್ಷನಾಗಿದ್ದೆ. ಗೋಪಾಲನ ಚುನಾವಣೆಯಲ್ಲಿ ನಾನು ಹಣಸಂಗ್ರಹ ಮಾಡಿ, ಅವನಿಗೆ ನೆರವಾಗಿದ್ದೆನೆಂದು ತಿಳಿದು ಸರ್ಕಾರ ನನ್ನನ್ನು ಬೇರೆಡೆಗೆ ವರ್ಗಮಾಡಿತು. ಆಗ ಗೋಪಾಲ ಶಾಸಕನಾಗಿದ್ದ. ನನಗೆ ವರ್ಗಮಾಡಿದ ಸ್ಥಳಕ್ಕೆ ಹೋಗಲು ಇಷ್ಟವಿರಲಿಲ್ಲ. ಹೇಗೂ ಗೋಪಾನೆ ಶಾಸಕನಾಗಿರುವುದರಿಂದ, ನನಗೆ ಸಹಾಯ ಮಾಡುತ್ತಾನೆಂದುಕೊಂಡು, ನನ್ನ ವರ್ಗಾವಣೆಯನ್ನು ರದ್ದುಪಡಿಸಿಕೊಡುವಂತೆ ಕೋರಿ ಅವನಿಗೆ ಪತ್ರ ಬರೆದೆ.

ಮರು ಟಪಾಲಿನಲ್ಲಿಯೇ ನನಗೆ ಗೋಪಾಲನಿಂದ ಉತ್ತರ ಬಂದಿತು: “ನಾನು ಶಾಸಕನಾಗಿರುವುದು, ನೌಕರರ ವರ್ಗಾವಣೆ, ನೌಕರಿ ಕೊಡಿಸುವುದು, ಬಡ್ತಿ ಕೊಡಿಸುವುದಕ್ಕಲ್ಲ!’’ ಶಾಸಕನ ಹೊಣೆಗಾರಿಕೆಯೇ ಬೇರೆ ಇದೆ. ನಿನ್ನ ಕೆಲಸ ಮಾಡಿಕೊಡಲು, ನಿನ್ನ ಇಲಾಖೆಯಲ್ಲಿ ಅಧಿಕಾರಿಗಳಿದ್ದಾರೆ. ಅವರಲ್ಲಿ ಕೇಳಿಕೋ, ಮೇಲಾಗಿ, ನಿನಗೆ ಕೆಲಸ ಕೊಡುವಾಗ ನಿನ್ನನ್ನು ನೀನು ಹೇಳಿದ ಸ್ಥಳದಲ್ಲೇ ಇಡುತ್ತೇವೆ ಎಂದು, ನಿನ್ನ ಕೆಲಸದ ಆದೇಶ ಪತ್ರದಲ್ಲಿ ತಿಳಿಸಿದ್ದಾರೆಯೆ?

ಸರ್ಕಾರಿ ನೌಕರಿ ಅಂದರೆ, ಹೇಳಿದ ಸ್ಥಳಕ್ಕೆ ಹೋಗಬೇಕು. ಅದು ಸಾಧ್ಯವಿಲ್ಲದಿದ್ದರೆ, ಕೆಲಸ ಬಿಟ್ಟು ನನ್ನ ಜೊತೆ ಬಾ. ಎಂದು ಬರೆದಿದ್ದ.

ಇಂತಹ ನನ್ನ ಗೆಳೆಯ ಶಾಸಕನಾಗಿದ್ದ ಎಂಬುದೇ ನನಗಿರುವ ಹೆಮ್ಮೆ.

ಎನ್. ಕಿಟ್ಟಪ್ಪಗೌಡ

 

ಕಾಗೋಡು ಸತ್ಯಾಗ್ರಹ ನಡೆದಾಗ ಚಿಕ್ಕ ವಯಸ್ಸು. ಒಮ್ಮೆ ಪೋಲೀಸರು ನಮ್ಮ ಮನೆಗೆ ನುಗ್ಗಿ, ನನ್ನ ಅಪ್ಪ ಸವಾಜಿ ಕನ್ನಪ್ಪನನ್ನು ಎಳೆದುಕೊಂಡು ಹೋಗಿದ್ದರು. ಆದರೆ ಅಪ್ಪ, ಮರುದಿನ ಬೆಳಿಗ್ಗೆ ನಾನು ಏಳುವ ಹೊತ್ತಿಗಾಗಲೇ ಮನೆಯಲ್ಲಿಯೇ ಇದ್ದ. ಅವನು ತಪ್ಪಿಸಿಕೊಂಡು ಬಂದ ಸುದ್ದಿಯನ್ನು ಅಜ್ಜಿ ಮೆಲ್ಲಗೆ ಮನೆಯಲ್ಲಿ ಹೇಳುತ್ತಿದ್ದಳು.

ಆನಂತರದ ದಿನಗಳಲ್ಲಿ ಗೋಪಾಲಗೌಡರು ಕಾಗೋಡಿನ ನಮ್ಮ ಮನೆಗೆ ಬಂದಿದ್ದರು. ಅವರ ಜೊತೆಯಲ್ಲಿ ನನ್ನ ಚಿಕ್ಕಪ್ಪನವರಾದ ಕಾಗೋಡು ತಿಮ್ಮಪ್ಪನವರು ಮತ್ತು ಬಿ.ಎಸ್. ಚಂದ್ರಶೇಖರ್‌ರವರು ಬಂದಿದ್ದರು. ಆಗ ಅಜ್ಜಿ, ನಾಳವಾದ ಕಚ್ಚೆಪಂಚೆ, ಜುಬ್ಬದ ವ್ಯಕ್ತಿಯನ್ನು ತೋರಿಸಿ, ‘ಇವರೇ ನಮ್ಮ ಗೋಪಾಲಗೌಡರು’ ಎಂದರು (ಗೋಪಾಲಗೌಡರ ಹೆಸರು ಅಜ್ಜಿಯ ಬಾಯಲ್ಲಿ ಗೋಪಾಲೇಗೌಡರು ಎಂದಾಗಿತ್ತು) ಗೌಡರು ನನ್ನನ್ನು ನೋಡಿ, ‘ಇವನು ಯಾರು?’ ಎಂದು ಕೇಳಿದ್ದಕ್ಕೆ ಅಜ್ಜಿ, ‘ಇವನು ನನ್ನ ಮೊಮ್ಮಗ’ ಎಂದು ಬಾಯಿತುಂಬ ಹೇಳಿದ್ದಳು.

೧೯೭೦ರ ಸಮಯ: ಸಾಗರ ತಾಲ್ಲೂಕಿನ ಪಡವಗೋಡು ಗ್ರಾಮದಲ್ಲಿ ಸಮಾಜವಾದಿ ಯುವಜನ ಸಭಾವತಿಯಿಂದ ಯುವಜನ ಶಿಬಿರ ನಡೆಯುತ್ತಿತ್ತು. ಗೌಡರು ಭಾಗವಹಿಸಿದ ಕೊನೆಯ ಶಿಬಿರ ಇದು. ರಾಜ್ಯದ ನಾನಾ ಕಡೆಯಿಂದ ಪ್ರತಿನಿಧಿಗಳು ಬಂದಿದ್ದರು. ನಮ್ಮ ಕಾಲೇಜಿನಿಂದ ಒಂದು ದೊಡ್ಡ ತಂಡವನ್ನೇ ನಾನು ಕರೆದುಕೊಂಡು ಹೋಗಿದ್ದೆ. ಗೌಡರು ಆಗ ಎಂದಿನಂತೆಯೇ ನಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಪಡವಗೋಡಿನ ಮುಕ್ತಾಯ ಸಮಾರಂಭಕ್ಕೆ ಗೌಡರು ಹೋಗಬೇಕಿತ್ತು. ಗೌಡರ ಆರೋಗ್ಯ ಆಗಲೇ ಹದಗೆಟ್ಟಿತ್ತು; ಬಲಗೈಯಿಂದ ಶೇವಿಂಗ್ ಕೂಡ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆಗ ನನ್ನ ಚಿಕ್ಕಪ್ಪನವರಾದ ಕಾಗೋಡು ತಿಮ್ಮಪ್ಪನವರು ನನ್ನನ್ನು ಕರೆದು, ಗೌಡರ ಮುಖಕ್ಕೆ ಸೋಪುಹಚ್ಚಿ ನಿಧಾನವಾಗಿ ಶೇವಿಂಗ್ ಮಾಡಲು ಹೇಳಿದರು. ನಾನು ಅದೇ ರೀತಿ ಮಾಡಿದೆ. ಆದರೆ ನಾನು ಮಾಡಿದ ಶೇವಿಂಗ್‌ನಿಂದಾಗಿ ಗೌಡರಿಗೆ ಸಮಾಧಾನವಾಗಲಿಲ್ಲ. ಕೆನ್ನೆಯನ್ನೆಲ್ಲ ಸವರಿಕೊಂಡು, ‘ಕೊದಲೆಲ್ಲ ಹಾಗೇ ಇದೆ. ನಿನಗೆ ಸರಿಯಾಗಿ ಶೇವಿಂಗ್ ಮಾಡಲು ಬರುವುದಿಲ್ಲ. ಆ ಕೆಲಸ ನಿನ್ನದ್ದಲ್ಲವಲ್ಲ! ಹೋಗಲಿ ಬಿಡು, ಸ್ವಲ್ಪ ಒಳ್ಳೆ ಕಾಫಿಯನ್ನಾದರೂ ಮಾಡಿಕೊಂಡು ಬರ‍್ತೀಯಾ?’ ಎಂದರು. ನಾನು ಮರುಮಾತಾಡದೆ ಒಳಗೆ ಎದ್ದು ಹೋದೆ.

ಕಾಗೋಡು ಅಣ್ಣಾಜಿ

 

ಡಾ. ಲೋಹಿಯಾ ಸಿದ್ಧಾಂತದ ಮೂಲಕವೇ, ನಮ್ಮೆಲ್ಲ ಅಸಮಾನತೆಗಳಿಗೂ ರಾಜಕೀಯವಾಗಿಯೇ ಪರಿಹಾರ ಸಾಧ್ಯವೆಂದು ಮನಗಂಡೆ. ಆದ್ದರಿಂದ, ನನ್ನ ಕೆಲವು ಸಮಾಜವಾದಿ ಗೆಳೆಯರ ಸಹವಾಸದಿಂದ ಶಾಂತವೇರಿ ಗೋಪಾಲಗೌಡರ ಮುಖಂಡತ್ವದಲ್ಲಿ ಸಮಾಜವಾದಿ ಕಾರ್ಯಕರ್ತನಾಗಿ ಕೆಲಸ ಮಾಡಿದೆ.

ಗೋಪಾಲಗೌಡರು ಕರ್ನಾಟಕದಲ್ಲಿ ಸೈದ್ಧಾಂತಿಕ ಆಂದೋಲನಗಳ ಹೋರಾಟದ ಕೆಚ್ಚನ್ನು ಬೆಳೆಸಿದರು. ಗೋಪಾಲಗೌಡರ ಮುಖಂಡತ್ವದ ಶಿವಮೊಗ್ಗ ಜಿಲ್ಲೆಯ ಆಂದೋಲನಗಳು, ಅವರ ತತ್ವನಿಷ್ಠೆ, ಜನಪರ ಕಳಕಳಿ, ವೈಚಾರಿಕತೆಯ ಪ್ರಬಾವೀ ವಲಯ ಕರ್ನಾಟಕದಾದ್ಯಂತ ಹರಡಲು ಕಾರಣವಾಗಿದೆ.

ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಆಂದೋಲನಗಳಿಂದ ಸರ್ಕಾರಗಳು, ಆಂದೋಲನದ ಕಾರ್ಯಕ್ರಮಗಳನ್ನು ಜಾರಿಗೆ ತರಲೇಬೇಕಾದಂತಹ ಅನಿವಾರ್ಯತೆಗೆ ಬಂದವು:

– ಗೇಣಿದಾರರಿಗೆ ಭೂ ಒಡೆತನದ ಹಕ್ಕು
– ಕೃಷಿ ಕಾರ್ಮಿಕರಿಗೆ, ಬಗರ್ ಹುಕ್ಕುಂ ಸಾಗುವಳಿದಾರರಿಗೆ ಜಮೀನು ಹಕ್ಕು ಪತ್ರ.
– ಹಿಂದುಳಿದವರಿಗೆ ಮೀಸಲಾತಿ
– ಮಹಿಳೆಯರಿಗೆ ಮೀಸಲಾತಿ
– ಅಧಿಕಾರ ವಿಕೇಂದ್ರೀಕರಣ
– ಪಂಚಾಯತ್ ರಾಜ್ ವ್ಯವಸ್ಥೆ

ಇವೇ ಮೊದಲಾದವು ಸಮಾಜವಾದಿ ಪಕ್ಷದ ಹೋರಾಟಗಳ ಫಲವಾಗಿ ಜಾರಿಗೆ ಬಂದಿವೆ ಎಂಬುದು ಸತ್ಯ.

ಇದೇ ಸಮಾಜವಾದಿ ಪ್ರಭಾವದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿಕೊಂಡ ರೈತ ಚಳವಳಿ, ಭಾರತ, ಜಾಗತಿಕ ರೈತ ಸಮುದಾಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪ್ರಮುಖ ಪಾತ್ರವಹಿಸಿದೆ. ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ದಿ ಆಯೋಗ’ದ ಮುಂದೆ ಅಂತರರಾಷ್ಟ್ರೀಯ ರೈತ ಸಂಘಟನೆಯ ಪರವಾಗಿ ರೈತ ಸಮುದಾಯದ ದೇಶೀಯ ಜ್ಞಾನವನ್ನು ಉಳಿಸಿ ಬೆಳೆಸುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ತನ್ನ ನಿಲುವುನ್ನು ಸ್ಪಷ್ಟಪಡಿಸಿದೆ.

ಗೋಪಾಲಗೌಡರು ವಿಧಾನಸಭೆಗೆ ಪ್ರವೇಶಿಸಿದ ಮೇಲೆಯೇ ಅದಕ್ಕೊಂದು ಅರ್ಥ ಬಂದಿದ್ದು. ಶಾಸನ ಸಭೆಯಲ್ಲಿ ಏನು ನಡೆಯುತ್ತದೆ, ಶಾಸಕನ ಕರ್ತವ್ಯ ಏನೆಂದು ಜನಕ್ಕೆ ಗೊತ್ತಾಗಿದ್ದು ಗೋಲಪಾಲಗೌಡರ ಮೂಲಕವೇ.

ಶೋಷಿತರ ಪರವಾದ ಸೈದ್ದಾಂತಿಕ ಮಾನವೀಯ ಚಿಂತನೆಗಳು, ರಾಜಿಯಾಗದ ದೃಢನಿಲುವು, ಆರ್ಥಿಕ ರಾಜಕೀಯದ ವಿಕೇಂದ್ರೀಕರಣ, ಹೊಸ ಸಮಾಜವನ್ನು ಕಟ್ಟುವ ವಿಶ್ವಾಸ ಗೋಪಾಲಗೌಡರಲ್ಲಿತ್ತು.

.ಷಣ್ಮುಖಪ್ಪ 

 

೧೯೬೨ರ ಚುನಾವಣೆ: ಗೋಪಾಲಗೌಡರು ಸಮಾಜವಾದಿ ಪಾರ್ಟಿಯಿಂದ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಟಿ. ದಾನಮ್ಮ ಮತ್ತು ಪಕ್ಷೇತರರಾಗಿ ಜಿ.ಡಿ. ವೆಂಕಪ್ಪ ಹೆಗಡೆಯವರು ಸ್ಪರ್ಧಿಸಿದ್ದರು.

ಪಕ್ಷೇತರರಾದ ವೆಂಕಪ್ಪ ಹೆಗಡೆಯವರು ಮೇಗರವಳ್ಳಿಯಲ್ಲಿ ಚುನಾವಣಾ ಭಾಷಣ ಮಾಡುತ್ತಾ, ‘ನಾನೊಬ್ಬ ಶ್ರೀಮಂತ ರೈತನಾಗಿದ್ದೂ ಸ್ವತಃ ಹೂಟೆ ಮಾಡುತ್ತಿದ್ದೇನೆ. ಶಾಂತವೇರಿಯವರೂ ನನ್ನ ಜೊತೆ ಗದ್ದೆ ಹೂಟೆ ಮಾಡಲು ಬರಲಿ! ಅವರಿಂದ ಗದ್ದೆಯನ್ನು ಉಳಲು ಸಾಧ್ಯವೇ? ಅಂಥವರು ವಿಧಾನಸಭೆಗೆ ಹೋದರೆ ಏನು ಮಾಡುತ್ತಾರೆ? ಆದ್ದರಿಂದ ಎಲ್ಲರೂ ನನಗೇ ಮತಕೊಡಬೇಕು,’ ಎಂದು ಭಾಷಣ ಮಾಡಿದರು.

ಗೋಪಾಲಗೌಡರಿಗೆ ಇದೆಲ್ಲವನ್ನೂ ನಾನು ವರದಿಮಾಡಿದೆ. ಅನಂತರ ಅದೇ ಮೇಗರವಳ್ಳಿಯಲ್ಲಿ ಗೋಪಾಲಗೌಡರ ಚುನಾವಣಾ ಭಾಷಣವೂ ಏರ್ಪಾಟಾಯಿತು.

ಗೌಡರು ಭಾಷಣ ಮಾಡುತ್ತಾ, ‘ಪಾಪ, ವೆಂಕಪ್ಪ ಹೆಗಡೇರು ವಿಧಾನಸಭೆಯೆಂದರೆ, ಶಾಸಕರು ಅಲ್ಲಿ ಗದ್ದೆ ಹೂಟೆ ಮಾಡಲು ಹೋಗುತ್ತಾರೆಂದು ನಂಬಿದ್ದಾರೆ. ಶಾಸಕರಾದವರು ಅಲ್ಲಿ, ಗೇಣಿದಾರರಿಗೆ ಕಾನೂನುಗಳನ್ನು ತಂದು, ಉಳುವವನೆ ಭೂಮಿಯ ಒಡೆಯನಾಗಬೇಕೆಂದು, ಸರ್ಕಾರದಲ್ಲಿ ಹೋರಾಟ ಮಾಡಿ ಕಾನೂನನ್ನು ರಚಿಸುವಂತೆ ಮಾಡಬೇಕೆಂಬುದು, ಶ್ರೀ ಹೆಗಡೆಯವರಿಗೆ ತಿಳಿದಿಲ್ಲ. ಅವರ ಬಗ್ಗೆ ನನಗೆ ಮರುಕವಿದೆ’ ಎಂದು ಹೇಳಿದರು.

ಆ ಚುನಾವಣೆಯಲ್ಲಿ ಗೌಡರು ಗೆದ್ದು, ಉಳಿದಿಬ್ಬರೂ ಸೋತರು. ಹೀಗೆ ಗೋಪಾಲಗೌಡರು ಇಡೀ ತಮ್ಮ ರಾಜಕಾರಣವನ್ನೇ ಗೇಣಿದಾರರ, ಬಡವರ ಪರವಾಗಿ ಹೋರಾಟಮಾಡಲು ಮುಡಿಪಾಗಿಟ್ಟಿದ್ದರು.

ಗೌಡರ ಸಾಮರ್ಥ್ಯದ ಬಗ್ಗೆ ಆಡಳಿತ ಪಕ್ಷದ ಕೆಲವು ಸದಸ್ಯರೇ ಒಂದು ಬಾರಿ ನನ್ನ ಹತ್ತಿರ, ‘ನಿಮ್ಮ ಗೌಡರು, ಉಳಿದ ವಿರೋಧಪಕ್ಷದವರಂತೆ, ವಿರೋಧಮಾಡಲಿಕ್ಕೆಂದೇ ವಿರೋಧಿಸುವವರಲ್ಲ. ಸರಿಯಿದ್ದರೆ ಸರಿ ಎಂದೂ, ತಪ್ಪಿದ್ದರೆ ಅದು ಹೇಗೆ ತಪ್ಪು ಎಂದು ತಿಳಿಸಿ ಅದರಿಂದ ಉಂಟಾಗುವ ಹಾನಿಗಳನ್ನು ಆಡಳಿತ ಪಕ್ಷದವರಿಗೆ ಎಳೆಯೆಳೆಯಾಗಿ ಬಿಡಿಸಿ ಹೇಳುವರು. ಅದರ ಜೊತೆಗೆ ಪರ್ಯಾಯ ಮಾರ್ಗವನ್ನೂ ಸೂಚಿಸುತ್ತಿದ್ದರು. ಈ ರೀತಿ ಪರ್ಯಾಯ ಮಾರ್ಗವನ್ನು ಹೇಳುವ ಒಬ್ಬನೇ ಒಬ್ಬ ಶಾಸಕರೆಂದರೆ ನಿಮ್ಮ ಗೋಪಾಲಗೌಡರೇ,’ ಎಂದು ಹೇಳಿದಾಗ ನನಗಂತೂ ಗೌಡರ ಬಗ್ಗೆ ಹೆಮ್ಮೆಯೆನಿಸಿತು.

ಗೋಪಾಲಗೌಡರ ಸಿಟ್ಟು, ಮುಂಗೋಪ ಈಗಾಗಲೇ ಜನಜನಿತವಾಗಿದೆ. ಆದರೆ ಗೌಡರು ಎಂದೂ ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಎಂದೂ ಯಾರನ್ನೂ ದ್ವೇಷಿಸಿದವರೂ ಅಲ್ಲ. ಇದನ್ನು ಅವರ ನಿಕಟವರ್ತಿಯಾದ ನಾನು ಚೆನ್ನಾಗಿ ಬಲ್ಲೆ.

ಸಮಾಜವಾದಿ ಪಕ್ಷದಿಂದ ಗೆದ್ದು ಶಾಸಕರಾದ ಬಸವಣ್ಣೆಪ್ಪನವರು, ನಂತರದಲ್ಲಿ ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ಮಂತ್ರಿಯಾಗಿದ್ದರು. ಅಂದು ವಿಧಾನಸಭೆಯ ಕಲಾಪಗಳು ನಡೆಯುತ್ತಿದ್ದವು. ಶಾಂತವೇರಿಯವರ ತಮ್ಮ ಸೀಟಿನಿಂದ ಎದ್ದು, ಸಿಟ್ಟಿನಿಂದಲೇ ಬಸವಣ್ಣೆಪ್ಪನವರು ಕುಳಿತಿದ್ದ ಜಾಗಕ್ಕೆ ಬಂದರು. ‘ಯಾರನ್ನು ಕೇಳಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದೆ? ನೀನು ರಾಜಿನಾಮೆ ಕೊಡಬೇಕಾದದ್ದು ಪಕ್ಷಕ್ಕಲ್ಲ! ನಿನ್ನ ಶಾಸಕನ ಸದಸ್ಯ ಸ್ಥಾನಕ್ಕೆ. ರಾಜೀನಾಮೆ ಕೊಟ್ಟು ಮತ್ತೆ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಗೆದ್ದು ಬಾ ನೋಡೋಣ!’ ಎಂದು ಹರಿಹಾಯ್ದು ಬಿದ್ದರು. ಗೌಡರ ಸಿಟ್ಟುಗೊತ್ತಿದ್ದ ಅವರು ಮಾತಾಡಲಿಲ್ಲ.

ನಾವು ಎರಡು-ಮೂರು ಜನ ಅದೇ ದಿನ ಗೌಡರಿಂದ ಪಾಸ್ ಪಡೆದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಇದೆಲ್ಲವನ್ನು ನೋಡುತ್ತಿದ್ದೆವು.

ಶಾಂತವೇರಿಯವರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಪ್ರತಿಯನ್ನು ಹರಿದು ತುಳಿದಿದ್ದರಿಂದ, ಅವರನ್ನು ಮುಂದಿನ ಕಲಾಪಗಳಿಗೆ ಸಸ್ಪೆಂಡ್ ಮಾಡಲಾಗಿತ್ತು. ಆ ಅವಧಿಯಲ್ಲಿ ಅವರು ತೀರ್ಥಹಳ್ಳಿಯ ಟಿ.ಬಿ.ಯಲ್ಲಿ ಬಂದು ಮೊಕ್ಕಾಂಮಾಡಿದ್ದರು. ಗೌಡರು ತೀರ್ಥಹಳ್ಳಿಗೆ ಬಂದಿರುವ ವಿಚಾರ ತಿಳಿದು, ನಾವು ನಾಲ್ಕಾರು ಜನ ಅವರನ್ನು ನೋಡಲು ಹೋದೆವು.

ನಾನು ಗೌಡರಿಗೆ, ‘ಹೀಗೇಕೆ ಮಾಡಿದಿರಿ?’ ಎಂದು ಕೇಳಿದೆ. ಅದಕ್ಕೆ ಗೋಪಾಲಗೌಡರು, ‘ನೋಡಿ ಜನ ನನ್ನನ್ನು ಚುನಾಯಿಸಿ ಕಳಿಸಿರುವುದು, ಶಾಸಕರ ಭತ್ಯೆ ಪಡೆದು ಬೆಂಗಳೂರಿನಲ್ಲಿ ಮೋಜುಮಾಡಲು ಅಲ್ಲ! ಅಂದು ನಾನು ಅಸೆಂಬ್ಲಿಯಲ್ಲಿ, ರಾಜ್ಯಪಾಲರ ಭಾಷಣದ ಬಗ್ಗೆ, ಗೇಣಿದಾರರ ಬಗ್ಗೆ ತರಬೇಕಾಗಿದ್ದ ಕಾನೂನುಗಳ ಬಗ್ಗೆ, ಬಿ.ಡಿ. ಜತ್ತಿ ಸಮಿತಿಯ ವರದಿಯ ಬಗ್ಗೆ ಮಾತನಾಡಬೇಕಿತ್ತು. ಅಲ್ಲಿ ಕಾಂಗ್ರೆಸ್ ಶಾಸಕರಿಗೆ ಮಾತಾಡಲು ಹೆಚ್ಚು ಅವಕಾಶ ಕೊಡುತ್ತಿದ್ದರು. ನಾನು ಎಷ್ಟು ಸಾರಿ ಪ್ರಯತ್ನಿಸಿದರೂ ಅವಕಾಶ ಕೊಡಲಿಲ್ಲ. ಅದಕ್ಕೆ ಅನಿವಾರ್ಯವಾಗಿ ನಮ್ಮ ಜನಗಳ ಭಾಷೆಯಲ್ಲಿ ಇಲ್ಲದ ಭಾಷಣದ ಪ್ರತಿಯನ್ನು ಚೂರು ಚೂರು ಮಾಡಿ ಬೂಟುಗಾಲಿನಲ್ಲಿ ತುಳಿದೆಎಂದರು.

ಇಂಥ ಗೋಪಾಲಗೌಡರು ನಮ್ಮ ಕ್ಷೇತ್ರದವರಾಗಿದ್ದರು; ನಮಗೆಲ್ಲಾ ಹತ್ತಿರದವರಾಗಿದ್ದರು. ಇದೇ ನಮ್ಮ ಹೆಮ್ಮೆ.

ಎಂ.ಡಿ. ಶೇಷಪ್ಪ ಹೆಗ್ಗಡೆ