ನಾನು ಬಿ.ಎಸ್ಸಿ ಪದವಿಯನ್ನು ಮುಗಿಸಿ, ಎಂ.ಬಿ.ಬಿ.ಎಸ್. ಓದಲು ಅರ್ಜಿಯನ್ನು ಹಾಕಿದ್ದೆ. ಆ ವರ್ಷ ನನಗೆ, ಎಂ.ಬಿ.ಬಿ.ಎಸ್‌ಗೆ ಸೇರಲು ಎಲ್ಲಾ ಅರ್ಹತೆಗಳು ಇದ್ದವು. ಒಂದು ಪ್ರಮಾಣಪತ್ರವನ್ನು ಭರ್ತಿ ಮಾಡುವಾಗ ಆದ ಕೈತಪ್ಪಿನಿಂದಾಗಿ ಸೀಟು ಸಿಗಲು ಸಮಸ್ಯೆಯಾಯಿತು. ಇದು ಸಮಸ್ಯೆಯದಲ್ಲ ಸಮಸ್ಯೆ. ಆದರೆ, ಸರಿಯಾದ ಬೇರೊಂದು ಪ್ರಮಾಣಪತ್ರವನ್ನು ನನ್ನ ತಾಲ್ಲೂಕಿನ ತಹಸೀಲ್ದಾರರಿಂದ ಮಾಡಿಸಿದ್ದೆ. ಅದನ್ನು ಅರ್ಜಿಯೊಂದಿಗೆ ಲಗತ್ತಿಸಿದ್ದರೂ ನನಗೆ ಸೀಟು ಸಿಕ್ಕಿರಲಿಲ್ಲ. ಇದನ್ನು ಸರಿಪಡಿಸಿದರೆ ನನಗೆ ಸೀಟು ಸಿಗುತ್ತಿತ್ತು.

ಇದನ್ನು ಗೋಪಾಲಗೌಡರ ಮೂಲಕವೇ ಮಾಡಿಸಬೇಕೆಂದು ತೀರ್ಮಾನಿಸಿದೆ. ಗೋಪಾಲಗೌಡರು ನನ್ನೂರು ಕವಲೆದುರ್ಗಕ್ಕೆ ಹತ್ತಿದವರು. ನನ್ನ ಕ್ಷೇತ್ರದ ಶಾಸಕರು, ಅಷ್ಟೊತ್ತಿಗಾಗಲೇ ಗೌಡರ ಪ್ರಾಮಾಣಿಕತೆ, ಹೋರಾಟದ ಮನೋಭಾವ, ಬಡವರ ಬಗ್ಗೆ ಅವರ ಅನುಕಂಪ, ಅವರ ಸರಳತೆ ಎಲ್ಲವೂ ಮನೆಮಾತಾಗಿದ್ದವು.

ಬೆಂಗಳೂರಿಗೆ ಹೋಗಿ ಅವರ ಮನೆಯಲ್ಲಿಯೇ ಅವರನ್ನು ಕಂಡೆ. ಗೌಡರೊಂದಿಗೆ ನ್ನ ಮೊದಲ ಭೇಟಿ ಅದು. ನನ್ನನ್ನು ಪ್ರೀತಿಯಿಂದ ಕಂಡರು. ನನ್ನ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಂಡೆ. ಈ ಬಗ್ಗೆ ಸಹಾಯಮಾಡಬೇಕೆಂದು ಕೋರಿದೆ. ಗೌಡರು ನನ್ನ ಮಾತನ್ನು ಸಾವಧಾನವಾಗಿ ಕೇಳಿ ‘ವೈದ್ಯಕೀಯ ಇಲಾಖೆಯ ಮುಖ್ಯಸ್ಥರನ್ನು ಕಂಡು ಮಾತಾಡೋಣ’ ಎಂದರು. ‘ನನ್ನ ಹತ್ತಿರ ವಾಹನ ಇಲ್ಲ! ಅವರಲ್ಲಿಗೆ ಈಗ ಹೇಗೆ ಹೋಗುವುದು!’ ಎಂದರು. ನಾನು ‘ಆಟೋ ತರುತ್ತೇನೆ ಸಾರ್’ ಅಂದೆ. ನಂತರ ನಾವಿಬ್ಬರೂ ಆಟೋದಲ್ಲಿ ಕುಳಿತು ಶಿವಾಜಿನಗರದಲ್ಲಿದ್ದ ಇಲಾಖೆಯ ಮುಖ್ಯಸ್ಥರ ಕಛೇರಿಗೆ ಹೋದೆವು.

ಆ ಅಧಿಕಾರಿ, ತಮ್ಮ ಕೊಠಡಿಯ ಬಾಗಿಲ ಬಳಿಯಲ್ಲಿಯೇ ಗೋಪಾಲಗೌಡರನ್ನು ಗೌರವದಿಂದ ಕಂಡು, ಒಳಗಡೆ ಕರೆದುಕೊಂಡು ಹೋದರು. ಜೊತೆಯಲ್ಲಿ ನಾನೂ ಹೋದೆ. ಗೌಡರು ಅವರಿಗೆ, ‘ಇವರು ನನ್ನ ಕ್ಷೇತ್ರದಿಂದ ಬಂದವರು. ಅವರಿಗೆ ನಿಮ್ಮ ಸಹಾಯ ಬೇಕಾಗಿದೆ. ಸಹಾಯ ಮಾಡುವಹಾಗಿದ್ದರೆ ಮಾಡಿ’ ಎಂದು ಹೇಳಿದರು. ನಾನು, ನನಗೆ ಸಿಗದಿರುವ ಕಾರಣಗಳನ್ನು ಅವರಿಗೆ ತಿಳಿದೆ. ಮುಖ್ಯಸ್ಥರು, ‘ಗೌಡರೇ ಈಗ ಸೀಟುಗಳೆಲ್ಲಾ ಹಂಚಿಕೆಯಾಗಿದೆ. ಕೊನೆಯ ದಿನಾಂಕವೂ ಮುಗಿದಿದೆ. ಈಗೇನೂ ಮಾಡಲು ಸಾಧ್ಯವಿಲ್ಲ! ಕ್ಷಮಿಸಿ. ಇವರು ಮುಂದಿನ ವರ್ಷ ಅರ್ಜಿಯನ್ನು ಸರಿಯಾಗಿ ಭರ್ತಿಮಾಡಿ ಹಾಕಲಿ, ಕೋಡೋಣ’ ಎಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕಂಡರು. ‘ಸರಿ’ ಎಂದು ಗೌಡರು ಮತ್ತು ನಾನು ಅಲ್ಲಿಂದ ಹೊರಗಡೆಗೆ ಬಂದೆವು.

‘ನೀವು ಸರಿಯಾಗಿ ಅರ್ಜಿ ಭರ್ತಿಮಾಡಿದ್ದರೆ, ನಿಮಗೆ ಸೀಟು ಸಿಗುತ್ತಿತ್ತು. ಮುಂದಿನ ವರ್ಷವಾದರೂ ಸರಿಯಾಗಿ ಅರ್ಜಿಹಾಕಿ, ಬನ್ನಿ’ ಎಂದು ಗೌಡರು ನನಗೆ ಹೇಳಿದರು. ನಾನು ‘ಆಗಲೀ ಸಾರ್’ ಅಂದೆ. ಅಲ್ಲಿಂದ ವಿಧಾನಸೌಧಕ್ಕೆ ಆಟೋ ತರುವುದಾಗಿ ಹೇಳಿದೆ. ಆಗ ಅವರು, ‘ಬೇಡ, ನನ್ನ ಪಾಡಿಗೆ ನಾನು ಹೋಗುತ್ತೇನೆ. ನೀವು ನಿಮ್ಮೂರಿಗೆ ಹೋಗಿ’ ಎಂದು ಹೊರಟುಹೋದರು.

ಗೌಡರು ಹೇಳಿದಂತೆ ಮುಂದಿನ ವರ್ಷ ಎಂ.ಬಿ.ಬಿ.ಎಸ್. ಗೆ ಸರಿಯಾಗಿ ಅರ್ಜಿಹಾಕಲು ತೀರ್ಮಾನಿಸಿದೆ. ಈ ಮಧ್ಯದಲ್ಲಿ ಗೋಪಾಲಗೌಡರಿಂದ ನನಗೊಂದು ಪತ್ರ ಬಂದಿತು. ಅದರ ಒಕ್ಕಣೆ ಹೀಗಿತ್ತು. ‘… ಈ ವರ್ಷ ಎಂ.ಬಿ.ಬಿ.ಎಸ್.ಗೆ ಅರ್ಜಿಯನ್ನು ಸರಿಯಾಗಿ ಭರ್ತಿಮಾಡಿ ಹಾಕಿ, ನಮ್ಮಲ್ಲಿಗೆ ಬನ್ನಿ, ನಾನು ನನ್ನ ಮನೆಯನ್ನು ಬದಲಾಯಿಸಿದ್ದೇನೆ. ಅದರ ವಿಳಾಸ ಹೀಗಿದೆ… ಇದು ನಿಮಗೆ ಹುಡುಕಲು ಕಷ್ಟವಾಗಲಾರದು.’

ನನ್ನಂತಹವನ ಸಮಸ್ಯೆಯನ್ನೂ ಗೋಪಾಲಗೌಡರು ನೆನಪಿನಲ್ಲಿ ಇಟ್ಟುಕೊಂಡು ನನಗೆ ಪತ್ರಬರೆದಿದ್ದರು: ಇದು ನನ್ನ ಜೀವನದಲ್ಲಿ ಇಂದಿಗೂ ಉಳಿದಿರುವ ಚಿರನೆನಪು.

ಕೆ. ಮಹೊಮದ್ ಶರೀಫ್

 

ಫೆಬ್ರವರಿ ೧೯೬೨ ಒಂದು ಮಧ್ಯಾಹ್ನ: ಬ್ಯಾಡಗಿಯ ದರ್ಬಾರ್ ಹೋಟೆಲ್ ಹಾಯ್ದು ಎಂದಿನಂತೆ ಹೈಸ್ಕೂಲಿಗೆ ಹೊರಟಿದ್ದೆ. ನೀಲಿಬಣ್ಣದ ಅಂಬಾಸಿಡರ್ ಕಾರೊಂದು ನನ್ನ ಹತ್ತಿರವೇ ಬಂದು ನಿಂತಿತು. ‘ಕಾರು ನಿಂತಿತೇಕೆ?’ ಎಂದು ಅಚ್ಚರಿ ಪಡುತ್ತಾ ನಾನೂ ನಿಂತೆ. ಕಾರಿನೊಳಗೆನಿಂದ ಬೆವರಿನಿಂದ ಒದ್ದೆಯಾದ ಮುಖವೊಂದು ನನ್ನತ್ತ ಕೈಸನ್ನೆ ಮಾಡಿ ‘ತಮ್ಮಾ, ಈ ರಸ್ತೆ ಮೋಟೆಬೆನ್ನೂರಿಗೆ ಹೋಗುತ್ತೇನಪ್ಪ?’ ಅಂತ ಕೇಳಿತು. ‘ಹೂಂನ್ರೀ’ ಎಂದೆ. ಆ ಮುಖವನ್ನೇ ದಿಟ್ಟಿಸುತ್ತಾ ನೋಡಿದೆ: ಎಲ್ಲೋ ನೋಡಿದ್ದರ ನೆನಪು. ವ್ಯಕ್ತಿ ಮುಗಳ್ನಗೆ ಸೂಸಿ, ಕಾರಿನ ಬಾಗಿಲು ತೆರೆದು, ರಸ್ತೆಗಿಳಿದು ‘ಕುಡಿಯೋದಕ್ಕೆ ಇಲ್ಲೆಲ್ಲಿ ನೀರು, ಟೀ ಸಿಗುತ್ತೆ?’ ಅಂತ ಕೇಳಿ ದರ್ಬಾರ ಹೋಟಲಿನತ್ತ ಹೆಜ್ಜೆಹಾಕಿತು.

ದೊಗಳೆ ಪೈಜಾಮ, ಇಸ್ತ್ರಿ ಇಲ್ಲದ ಬಿಳಿ ದೊಗಳೆ ಅಂಗಿ, ತುಂಬಿಕೊಂಡ ಮೈ, ಪ್ರಭಾವಶಾಲಿ ಕಣ್ಣುಗಳು, ‘ನಾ ಯಾರಂತ ಕೇಳಬೇಕಾಗಿದೆಯೇನಪ್ಪ’ ಎಂದು ಕೇಳಿದಾಗ, ‘ಹೌದ್ರಿ’ ಅಂದೆ. ‘ಪೇಪರಿನಲ್ಲಿ ನನ್ನ ಹೆಸರು ಓದಿರತಿರಿ. ಗೋಪಾಲಗೌಡ ಅಂತ’ ಆಗಲೇ ಅವರ ಬಲಗೈ ನನ್ನ ಭುಜದ ಮೇಲಿತ್ತು. ‘ಶಾಂತವೇರಿ ಗೋಪಾಲಗೌಡ’ ನನ್ನ ಉದ್ಗಾರ! ‘ಹೌದಪ್ಪಾ’ ಅಂದರು. ನನಗೆ ಸಂಕೋಚ. ಇಂಥ ದೊಡ್ಡವರ ಎದುರು ಏನು ಮಾತಾಡುವುದು? ಕೆಲವು ದಿನಗಳ ಹಿಂದೆ ಗೋಪಾಲಗೌಡರು, ವಿಧಾನಸಭೆಯಲ್ಲಿ, ಗವರ್ನರರ ಭಾಷಣ ಹಾಳೆಯನ್ನು ಹರಿದು, ಕಾಲಡಿಗೆ ಹಾಕಿ ತುಳಿದಿದ್ದ ಸುದ್ದಿ ಓದಿದ್ದೆ. ಆ ವ್ಯಕ್ತಿ ಇವರೇನೆ? ಅದು ಇಷ್ಟು ಸಲೀಸಾಗಿ, ಸಲಿಗೆಯಿಂದ ನನ್ನೊಂದಿಗೆ ಮಾತಾಡುತ್ತಿರುವವರು ಅನಿಸಿತು. ‘ಈಗ್ಯಾವ ಕಡೆ ಹೊರಟೀರಿ? ಎಂದೆ. ‘ಎಲೆಕ್ಷನ್ ಪ್ರಚಾರ’’ ಎಂದು ಮೊಟಕಾಗಿ ಉತ್ತರಿಸಿ, ‘ಈಗ ಕಾರಿನಲ್ಲಿ ಯಾರು ಬಂದಿದ್ದಾರೆ ಗೊತ್ತ?’ ಎಂದು ಕೇಳಿದರು.

ಕಾರಿನಲ್ಲಿ ಹಿಂಭಾಗದಲ್ಲಿ ಮೂವರಿದ್ದರು. ನಟ್ಟನಡುವಿನ ವ್ಯಕ್ತಿಗೆ ಎದ್ದು ಕಾಣುವ ನಿಲುವು. ಸೋಡಾಗ್ಲಾಸಿನ ಕನ್ನಡಕ. ಉಕ್ಕಿನ ತಂತಿಯಂತೆ ನಿಂತ, ಕರಿ – ಬಿಳಿ ಕೂದಲಿನ ಕೆಂಬಣ್ಣದ ಗಡುಸು ಮುಖ. ಅಂಥ ರಣಬಿಸಿಲಿನಲ್ಲೂ ಕೋಟು ತೊಟ್ಟು ಕುಳಿತಿದ್ದ ಆ ಮುಖವನ್ನು ಎಲ್ಲೋ ನೋಡಿದಂತೆ ಇದೆ ಎಂದುಕೊಳ್ಳುತ್ತಿರುವಾಗಲೆ, ಇವರ‍್ಯಾರು ಗೊತ್ತೆ? ಗೋಪಾಲ ಗೌಡರು ನನ್ನತ್ತ ತಿರುಗಿ ಕೇಳಿದರು. ಇಲ್ರಿ ಎಂದೆ. ‘ಇವರೇ ರಾಮಮನೋಹರ ಲೋಹಿಯಾ! ಕೇಳಿಲ್ವೆ?’ ಎಂದರು. ‘ಅರೆ! ನೆಹರೂನ್ನ, ಕೃಷ್ಣಮಾಚಾರಿನ್ನ ಎಗ್ಗಿಲ್ಲದೆ ಟೀಕೆ ಮಾಡುವ ಲೋಹಿಯಾ!’ ಏನು ಹೇಳಬೇಕು ತಿಳಿಯಲಿಲ್ಲ. ದೊಡ್ಡವರೆಂದರೆ, ನೋಡಿದಾಕ್ಷಣ ನಮಸ್ಕರಿಸಬೇಕು. ಹಸ್ತಲಾಘವ ಮಾಡಬೇಕು – ಇದ್ಯಾವ ಶಿಷ್ಟಾಚಾರ ಗೊತ್ತಿರದ ವಯಸ್ಸು, ದಿಟ್ಟಿಸಿ ನೋಡುವಲ್ಲಿ ಸಂಭ್ರಮ ತುಂಬಿತ್ತು.

ಶಾಂತವೇರಿ ಮತ್ತು ಲೋಹಿಯಾರವರನ್ನು ಪ್ರತ್ಯಕ್ಷಕಂಡವನು ನಾನು. ಕೇವಲ ಆಕಸ್ಮಿಕವಾದ ಈ ಘಟನೆ ನನ್ನಲ್ಲಿ ಇಂದಿಗೂ ಸಮಾಜವಾದ ಉಳಿದು, ಬೆಳೆಯಲು ಪ್ರೇರಕವಾಗಿದೆ.

ಶಾಮಸುಂದರ ಬಿದರಕುಂದಿ

 

ಗೋಪಾಲಗೌಡರು ಡಾ. ರಾಮಮನೋಹರ ಲೋಹಿಯಾ ಅವರ ವಿಚಾರಗಳಿಂದ ಪ್ರಭಾವಿತರಾದವರು. ಸಮಾಜದಲ್ಲಿದ್ದ ಕಡು ಬಡತನ ಇವರನ್ನು ಹೋರಾಟಗಾರರನ್ನಾಗಿ ಮಾಡಿತು. ಗೇಣಿದಾರರ, ದೀನದಲಿತರ, ಬಡವರ ಹಿತಕಾಪಾಡುವುದೇ ಇವರ ಹೋರಾಟದ ಗುರಿಯಾಗಿತ್ತು. ಗಡರದು ತೆರೆದ ಜೀವನ. ರಾಜಕೀಯ ಕ್ಷೇತ್ರದಲ್ಲಿ ಅವರು ಪಾರದರ್ಶಕವಾಗಿದ್ದವರು; ಸಮಾಜಕ್ಕಾಗಿ, ಜನತೆಗಾಗಿ ಜೀವ ಸವೆಸಿದ ಸ್ಮರಣೀಯರು.

ಜಿ.ಆರ್.ಜಿ. ನಗರ್

 

ಕಾಗೋಡು ರೈತ ಸತ್ಯಾಗ್ರಹಕ್ಕೆ ರಾಷ್ಟ್ರಾದ್ಯಂತ ಅಷ್ಟೊಂದು ಹೆಗ್ಗಳಿಕೆ ತಂದುಕೊಟ್ಟವರೇ ಗೋಪಾಲಗೌಡರು. ಆಗ ಸಾಗರದ ಸುತ್ತಮುತ್ತೆಲ್ಲಾ ಕೆಂಬಾವುಟಗಳ ಹೋರಾಟ. ‘ಇಂಕಿಲಾಬ್ ಜಿಂದಾಬಾದ್’ ಘೋಷಣೆಗಳು. ‘ಉಳುವವನೆ ನೆಲದೊಡೆಯ’ ಎಂಬ ಕೂಗು ಪ್ರತಿಧ್ವನಿಸುತ್ತಿತ್ತು. ಪ್ರತಿ ಸೋಮವಾರ, ಮುಖ್ಯವಾಗಿ ಗುರುವಾರ ಸಂತೆಯಂದು ರೈತರ ಮೆರವಣಿಗೆ ಮಾಮೂಲಾಗಿತ್ತು. ಮೆರವಣಿಗೆಯ ಮುಂಚೂಣಿಯಲ್ಲಿ ಗೋಪಾಲಗೌಡರೇ ಇರುತ್ತಿದ್ದರು.

ಸಮಾಜವಾದಿ ತತ್ವಗಳನ್ನು, ಲೋಹಿಯಾ ನಿಲುವುಗಳನ್ನೂ ಜನಸಾಮಾನ್ಯರ ನೆಲಕ್ಕಿಳಿದು ಅನಕ್ಷರಸ್ಥ ಹಳ್ಳಿಗರಿಗೆ ಸರಳವಾಗಿ ಅವರು ತಿಳಿಸುತ್ತಿದ್ದರು. ಇವರ ಮಾತನ್ನು ಸಭೆ ಪ್ರೀತಿಯಿಂದ ಕೇಳುತ್ತಿತ್ತು. ಗೌಡರು ಇಡೀ ರಾಜ್ಯದ ನಾಯಕರಾಗಿದ್ದರೂ ಅವರ ಮನಸ್ಸು ಇದ್ದದ್ದು ತೀರ್ಥಹಳ್ಳಿ ಮತ್ತು ಸಾಗರದಲ್ಲಿಯೇ.

ವಿಲಿಯಂ

 

ಗೌಡರೆಂದರೆ ಅವರೆ,
– ಅವರೊಬ್ಬರೆ,
ಶಾಂತವೇರಿ ಗೋಪಾಲಗೌಡರು.
ಆರಗದವರು- ಸುಲಭಕ್ಕೆ ಅರಗದವರು
ಹೊಯ್ಸಳನ ನೆನಪಿನವರು
ತೀರ್ಥಹಳ್ಳಿಯವರು – ಹಳಿತಪ್ಪದವರು
ಶಾಸ್ತ್ರೀ ನರಸಿಂಹರ ಶಿಷ್ಯರು.

ಕಳ್ಳ-ಸುಳ್ಳರ ಹಿಂಡು,
ದುಡ್ಡಿನ- ಧಿಮಾಕಿನವರ ಕಂಡು,
ಶಾಂತವೇರಿ,
ಶಾಂತ -ವೈರಿಯಾದದ್ದುಂಟು.
ಗತ್ತು -ಗೈರತ್ತು -ಗಮ್ಮತ್ತು, ಎಲ್ಲ ಗೊತ್ತಿತ್ತು
ಅವರು ದೇವರಲ್ಲ, ತಾಜಾ ಮನುಷ್ಯ ಹೌದು.

ಬಡವರಿಗೆ ಹೃದಯ ಮೀಸಲಿತ್ತು
ನೇಗಿಲು ಲೇಖನಿ, ಅಕ್ಷರ, ನೆಲಉತ್ತಿ ಬರೆದಿದ್ದು
ಬಡವರೊಡಲಿನ ಅಗ್ನಿಗೆ ಅವರ ತಲೆ ಹೊತ್ತಿತ್ತು.
“ಉಳುವವನೇ ಹೊಲದೊಡೆಯ’’ “ಕರ್ನಾಟಕ’’
– ಅವರ ತಲೆ ಮುತ್ತಿತ್ತು.
– ಎದಯೂ ಹೊತ್ತಿತ್ತು.

ಅಭಿಮಾನ ಧನಿಕ, ಛಲದ ಚಾಲಕ
ಕೊನೆತನಕ ಚಿಂತಕ
ಪ್ರಾಮಾಣಿಕ, ಬುದ್ಧಿ ವೈಜ್ಞಾನಿಕ
ಬಡವರೊಡಲಿನ ಧ್ಯಾನದಲಿ ಮುನಿಯಾಗಿದ್ದು
ಆಗಾಗ ಶಿಖೆಯನುಗುಳುತ್ತಿದ್ದು
ಒಮ್ಮೆನೇ ಒತ್ತಡಕ್ಕೆ…ದ… ಎತ್ತರಕ್ಕೇರಿ
ಉರಿದೊಡೆದ ಜ್ವಾಲಾಮುಖಿ!
– ಸಾಗರದ ಅಲೆಗಳಪ್ಪಳದ ಸಪ್ಪಳ
– ಅಡಗಿ ಹೋಗಿತ್ತು.

ಸಿಡಿದ ಕಿಡಿಗಳು ಈಗಲೂ ಕೆಂಪಗಿವೆ
ಲೋಹದ ತಂತಿಯ…
ಶಾಖದ ಬೆಂಕಿ –
ಆರಿಲ್ಲ ಜೋಕೆ.
ಗೋಪಾಲ,
ಭೂಪಾಲನಾದಾಗ
ಭಂಡ-ತುಂಡು ಮಂಡಲಾಧಿಪರ
ಆರೋಪದಪಲಾಪ ವಿಶ್ವವ್ಯಾಪಿ.

ಅವರು,
ಕಡಿದು ನಗುವವರಲ್ಲ ಗಹಗಹಿಸಿ
ಅಳುವವರೂ ಅಲ್ಲ – ಬಿಕ್ಕಳಿಸಿ
ಇಡಿ ಹಿಡಿದು ಅಲ್ಲಾಡಿಸುವ ಹವ್ಯಾಸಿ.

ಸಂಗೀತ – ಸಾಹಿತ್ಯ – ಯಕ್ಷಗಾನ – ಜಾಗರ
ತತ್ವ – ಸಿದ್ಧಾಂತ – ಜಿಜ್ಞಾಸೆ- ಸಮಾಜವಾದ
ಸತ್ಯ-ಶಿವ- ಸುಂದರಕೆ ಅವರೆದೆಯು ಮಂದಾರ
ಇವಕಾಸರೆ ವೈದ್ಯ ಚಂದ್ರಶೇಖರ.
ಗುರಿ ತೋರಿದರು ಗಾಂಧಿ, ರಾಮಮನೋಹರ
ಧೀರತೆಯ ಎರೆದರುಕಾಳಿಂಗಯ್ಯನ ರಾಘವೇಂದ್ರರಾಯ
ನೀರೆರೆದು ಬೆಳೆಸಿದರು ಮಾರುತಿ ಮುದ್ರಣಾಲಯದ
ಉಡುಪಿ ರಾಜಗೋಪಾಲಾಚಾರ್ಯ

ಅನ್ಯಾಯಗಳೆದುರು ಪ್ರತಿಭಟನೆ,
ಉದ್ವೇಗ – ಉದ್ರೇಕ
ಬುಸುಗುಟ್ಟರೂ ಕಚ್ಚದಿರುವ ವಿವೇಕ
ಸತ್ಯದಾವೇಶಗೊಂಡಾಗ,
ವಿಧಾನಸೌಧ – ಗಡಗಡ

ಕೋಣಂದೂರು ಲಿಂಗಪ್ಪ

 

ಗೋಪಾಲಗೌಡರಂತೆ ಸ್ಫುಟವಾಗಿ ಕನ್ನಡ ಭಾಷೆ ಮಾತನಾಡುವವರನ್ನ ನಾನು ಇಂದಿಗೂ ನೋಡಿಲ್ಲ!

ಮತ್ತೀಕೊಪ್ಪ ಲಕ್ಷ್ಮೀನಾರಾಯಣಪ್ಪ

 

ಡಾ. ರಾಮಮನೋಹರ ಲೋಹಿಯಾರವರು ಒಂದು ಸಾರಿ, ‘ಸಮಾಜದಿಂದ ತೆಗೆದುಕೊಂಡು ಬದುಕುವವನು ತ್ಯಾಗಿಯಲ್ಲ; ಸಮಾಜಕ್ಕಾಗಿ, ಜನಹಿತಕ್ಕಾಗಿ ಎಲ್ಲವನ್ನೂ ಕೊಡುವವನೇ ಸೋಶಲಿಸ್ಟ್, ಅವನೇ ನಿಜವಾದ ಸಮಾಜವಾದಿ’ ಎಂದು ಹೇಳಿದ್ದರು. ಅಂತೆಯೇ ನಾನು ಗೋಪಾಲಗೌಡರನ್ನು ಕಂಡಾಗಲೆಲ್ಲಾ ಲೋಹಿಯಾ ಅವರ ಮಾತು ನೆನಪಾಗುತ್ತಿತ್ತು.

ಕಿಬ್ಬಳ್ಳಿ ಗಣಪತಿಶರ್ಮ

 

ನಾನು ೧೯೫೦ರಲ್ಲಿ ಜಯಪ್ರಕಾಶನಾರಾಯಣರ “ಸಮಾಜವಾದವೇ ಏಕೆ?’’ ಎಂಬ ಪುಸ್ತಕವನ್ನು ಓದಿ ಆಕರ್ಷಿತನಾಗಿ, ಸಮಾಜವಾದದೆಡೆಗೆ ಮುನ್ನಡೆಯಲು ನಿರ್ಧರಿಸಿದ್ದೆ. ಅಂತಹ ಒಂದು ಸಂದರ್ಭಕ್ಕಾಗಿ ಕಾಯುತ್ತಿದ್ದೆ. ಆ ಸನ್ನಿವೇಶ ೧೯೫೨ರಲ್ಲಿ ನನ್ನ ಪಾಲಿಗೆ ಒದಗಿ ಬಂತು. ಧಾರವಾಡ ಜಿಲ್ಲೆಯಲ್ಲಿ ಹೆಬ್ಬಳ್ಳಿ ಒಂದು ದೊಡ್ಡ ಗ್ರಾಮ. ಆ ಗ್ರಾಮದ ಜಮೀನುಗಳೆಲ್ಲ ಒಬ್ಬ ಜಹಗೀರದಾರರವು. ಈ ಜಮೀನುಗಳೆಲ್ಲವನ್ನು ಭೂವಿಹೀನರಿಗೆ ಸರಕಾರದಿಂದ ಕೊಡಿಸಲು ಒಂದು ದೊಡ್ಡ ಆಂದೋಲನವನ್ನೇ ವಕೀಲರಾದ ಪದಕಿ, ನೀಲಗಂಗಯ್ಯಪೂಜಾರ್ ಹಾಗೂ ದಿವಂಗತ ವೀರಪ್ಪಣ್ಣ ಸವದತ್ತಿಯವರ ನೇತೃತ್ವದಲ್ಲಿ ನಡೆಸಿದ್ದರು. ಈ ಚಳುವಳಿಯಲ್ಲಿ, ಅಂದು ನಾಡಿನಲ್ಲಿ ರೈತನಾಯಕರೆಂದು ಜನಪ್ರಿಯತೆ ಪಡೆದಿದ್ದ ಶಾಂತವೇರಿ ಗೋಪಾಲಗೌಡರು ಹೆಬ್ಬಳ್ಳಿಗೆ ಬಂದಿದ್ದರು. ಅವರು ಅಲ್ಲಿನ ಬಹಿರಂಗ ಸಭೆಯಲ್ಲಿ ಜನತೆಯನ್ನು ಹುರಿದುಂಬಿಸಿ, ಹೋರಾಟಕ್ಕೆ ಅಣಿಗೊಳಿಸಿ, ಆಂದೋಲನವನ್ನು ತೀವ್ರಗಳಿಸಲು ಮಾಡಿದ ಅವರ ವಿದ್ವತ್ಫೂರ್ಣವೂ, ಅರ್ಥಗರ್ಭಿತವೂ ಆದ ಭಾಷಣ ಅಪೂರ್ವವಾದುದು. ಭಾಷಣ ನನ್ನನ್ನು ದಿಙ್ಮೂಢನನ್ನಾಗಿ ಮಾಡಿತು. ಅಂದಿನಿಂದ ಇಂದಿನವರೆಗೂ ಅವರು ನನ್ನ ರಾಜಕೀಯ ಗುರು. ನಾನು ಪಕ್ಷಾಂತರದ ಎಂಥ ಎಳೆತ-ಸೆಳೆತಗಳಿಗೂ ಬಲಿಯಾಗದೆ ಪ್ರಾಮಾಣಿಕ ಸಮಾಜವಾದಿ ಕಾರ್ಯಕರ್ತನಾಗಿಯೇ ಉಳಿದೆ.

ಗೋಪಾಲಗೌಡರ ಬೆಂಬಲದಿಂದ ಪದಕಿ ಹಾಗೂ ಪೂಜಾರರ ನೇತೃತ್ವದಲ್ಲಿ ಹೆಬ್ಬಳ್ಳಿಯ ಭೂವಿಹೀನರ ಚಳುವಳಿ ಉಗ್ರರೂಪ ತಾಳಿತು. ಹೋರಾಟ ಎರಡು ವರ್ಷಗಳ ಕಾಲ ನಡೆಯಿತು. ನಿತ್ಯ ನೂರಾರು ಜನ ಜೈಲು ಕಂಡರು. ಬಡವರ ಕೂಗಿಗೆ ಸಮಾಜವಾದಿಗಳ ತೀವ್ರ ಹೋರಾಟಕ್ಕೆ ಸರಕಾರ ಮಣಿಯಿತು. ಎಲ್ಲ ಭೂಹೀನರಿಗೆ ತಲಾ ಹದಿನಾರು ಎಕರೆಯಂತೆ ಜಮೀನು ಕೊಡಲು ೧೯೬೧ರಲ್ಲಿ ಸರಕಾರ ಆದೇಶ ನೀಡಿತು. ಇಂದಿಗೂ ಈ ಬಡ ಕುಟುಂಬಗಳ ಜನರ ಹೃದಯದಲ್ಲಿ ಕೃತಜ್ಞತೆಯ ತೈಲದಿಂದ ಗೌಡರ ಆತ್ಮಜ್ಯೋತಿ ಬೆಳಗುತ್ತಿದೆ. ಹೆಬ್ಬಳ್ಳಿಯ ಸಮಸ್ತ ಜನಮನದಲ್ಲಿ ಅವರ ನೆನಪು ಹಚ್ಚಹಸಿರಾಗ ಉಲಿದಿದೆ.

ರಾಚಪ್ಪ ಬೆಟ್ಟಸೂರ

 

ಗೋಪಾಲಗೌಡರೆಂದರೆ ನಮಗೆಲ್ಲಾ ಅಪಾರ ಕುತೂಹಲ. ಅಷ್ಟೊತ್ತಿಗಾಗಲೇ ಅವರು ನಮ್ಮ ಭಾಗದಲ್ಲಿ ಪ್ರಸಿದ್ಧರಾಗಿದ್ದರು. ಅವರು ಯಾವಾಗಲೂ ಜೈಲಿಗೆ ಹೋಗ್ತಾರಂತೆ! ಸರ್ಕಾರ ಇವರನ್ನ ಯಾವಾಗಲೂ ಜೈಲಿಗೆ ಹಾಕುತ್ತದಂತೆ!, ಇವರ ಭಾಷಣ ಅಂದರೆ ಬೆಂಕಿ ಅಂತೆ! ಈ ತರಹದ ನಾನಾ ಬಗೆಯ ಸುದ್ದಿಗಳು ಎಲ್ಲ ಕಡೆಯೂ ಹರಡಿದ್ದವು. ಅವರು ಸಾಮಾನ್ಯವಾಗಿ ಶುಕ್ರವಾರ ಸಂಜೆ ಅಥವಾ ರಾತ್ರಿ ಹೊಸನಗರಕ್ಕೆ ಬರುತ್ತಿದ್ದರು. ಸಂತೆಯ ದಿನವಾದ ಶನಿವಾರದಂದು ದಿನವಿಡೀ ಹೊಸನಗರದಲ್ಲಿರುತ್ತಿದ್ದರು. ಯಾವುದಾದರೂ ಆಯ್ಕೆ ಮಾಡಿದ ಜಾಗದಲ್ಲಿ ಗೋಪಾಲಗೌಡರ ಭಾಷಣ ಇರುತ್ತಿತ್ತು. ಆಗ ಹುಡುಗರಾಗಿದ್ದ ನಮಗೆ, ಅವರು ಹೆದರಿಕೆ ಹುಟ್ಟಿಸುವ ವ್ಯಕ್ತಿಯಾಗೇನೂ ಕಾಣುತ್ತಿರಲಿಲ್ಲ. ಅಂದರೆ ತೀರ ಆತ್ಮೀಯವಾಗಿಯೂ ಇರುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟೇ ಮಾತು! ಯಾವಾಗಲೂ ಏನೋ ಯೋಚಿಸುತ್ತಿರುವವರಂತೆ ಕಾಣುತ್ತಿದ್ದರು.

ಒಂದು ಶನಿವಾರ, ಹೊಸನಗರಕ್ಕೆ ಮಧು ಲಿಮಯೆ ಅವರನ್ನು ಗೋಪಾಲಗೌಡರು ಕರೆತಂದಿದ್ದರು. ಅಂದು ಮಧು ಲಿಮಯೆ ಹಿಂದಿಯಲ್ಲೇ ಭಾಷಣ ಮಾಡಿದರು. ಕೊಯ್ನಾ ಭೂಕಂಪದಲ್ಲಿ ಸಾವಿಗೀಡಾದವರ ಬಗ್ಗೆ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯತನನು ಕುರಿತು ಕಟುವಾಗಿ ಮಾತಾಡಿದ್ದು ಇನ್ನೂ ನನ್ನ ನೆನಪಿನಲ್ಲಿದೆ. ಗೋಪಾಲಗೌಡರು ಇದೇ ರೀತಿ ಜನರ ಬಳಿಗೆ ಯಾವಾಗಲೂ ಬರುತ್ತಿದ್ದರಿಂದ, ಅವರ ಸಮಾಜವಾದಿ ಪಕ್ಷದ ಗುರುತು ಆಲದ ಮರ ಆಗ ಎಲ್ಲ ಜನರ ಮನಸ್ಸಿನಲ್ಲಿಯೂ ಉಳಿದಿತ್ತು. ಗೋಪಾಲಗೌಡರ ಒಂದು ಚುನಾವಣೆಯಲ್ಲಿ, ಕೆಲವರು ನನ್ನ ಬೆನ್ನುಬಿದ್ದು; ಕಾಂಗ್ರೆಸ್‌ಗೆ ಓಟು ಕೊಡು ಅಂತ ಕೇಳಿದರು. ನಾನು ನೇರವಾಗಿಯೇ ಅವರಿಗೆ “ನಾನು ಆಲದಮರಕ್ಕೇ ಓಟು ಕೊಡೋದು!’’ ಎಂದು ಹೇಳಿದೆ. ‘ಆಲದಮರಕ್ಕೇ ನೇಣು ಹಾಕಿಕೊಳ್ಳಿ!’ ಅಂತ ಕೆಲವರು ತಮಾಷೆ ಮಾಡಿದರೂ ಗೋಪಾಲಗೌಡರು ಮತ್ತು ಅವರ ಆಲದಮರದ ಗುರುತು ಜನತೆಯ ಹೃದಯ ಗೆದ್ದಿದ್ದುದನ್ನು ಯಾರು ಮರೆಯುವಂತಿಲ್ಲ!