ನನ್ನ ದೃಷ್ಟಿಯಲ್ಲಿ ಅವರೊಬ್ಬರು ರಾಜಕೀಯ ಜೀವನದಲ್ಲಿ ಶ್ರದ್ಧಾಪೂರ್ಣ ತತ್ವನಿಷ್ಠ ಹೋರಾಟಗಾರರು. ಅವರೆಂದೂ ತಾವು ನಂಬಿದ ಧ್ಯೇಯ ಧೋರಣೆಗಳಿಂದ ವಿಮುಖರಾಗಲಿಲ್ಲ. ಆಶೆ ಆಮಿಷಗಳಿಗೆ ಬಲಿಯಾಗಲಿಲ್ಲ. ಅವರೊಬ್ಬರು ಹುತಾತ್ಮ ರೆಂದೂ ತಪ್ಪಾಗಲಾರದು. ರಾಜಕೀಯಕ್ಕಾಗಿ ಅವರು ತಮ್ಮ ಲೌಕಿಕವಾದವುಗಳನ್ನೆಲ್ಲ ಯಜ್ಞಮಾಡಿದ್ದಾರೆ. ಅವರು ಸ್ವಲ್ಪ ಸಂಯಮದಿಂದ ಬಾಳಿದ್ದರೆ, ಇನ್ನಷ್ಟು ಕಾಲ ನಾಡಿನ ಸೇವೆಗಾಗಿ ಬದುಕಬಹುದಾಗಿತ್ತು. ಅವರ ಅಕಾಲಮರಣ ನಾಡಿನ ರಾಜಕೀಯ ರಂಗಕ್ಕೆ ಭರಿಸಲಾಗದ ನಷ್ಟ. ಅವರ ಸತ್ಯನಿಷ್ಠುರತೆ ಮತ್ತು ಪ್ರಾಮಾಣಿಕತೆಯನ್ನಾದರೂ ನಮ್ಮ ತರುಣರು ಅನುಸರಿಸಿ ನಡೆದರೆ, ಈ ನಾಡಿನ ರಾಜಕೀಯ ಕ್ಷೇತ್ರ ಹೆಚ್ಚು ಪರಿಶುದ್ಧವಾದೀತು.

ಕುವೆಂಪು

 

ಏನೇನೋ ಚಿಂತಿಸುತ್ತಿದ್ದಂತೆ ಅದೇಕೋ ಗೋಪಾಲ್ ನೆನಪಾದರು… ಎತ್ತರವಾದ ಗಂಭೀರ ನಿಲುವಿನ ಅವರು ನಕ್ಕರೆ ಮುಖ ವಿಚಿತ್ರವಾಗಿ, ಸುಂದರವಾಗಿ ಅರಳಿ ಕೆನ್ನೆಯ ಮೇಲೆ ಗುಳಿ ಬೀಳುತ್ತಿತ್ತು; ಸಾಹಿತ್ಯ ಅವರ ನೆಚ್ಚಿನ ವಸ್ತು. ಮಲೆನಾಡು ಅವರ ಪ್ರೀತಿಯ ವಿಷಯ.

ಗೋಪಾಲ್ ಮಹಾದುಗುಡದ, ಸಿಟ್ಟಿನ, ಪ್ರೀತಿಯ, ಪೂರ್ವಗ್ರಹಗಳ ಮನುಷ್ಯ: ಅವರ ವ್ಯಕ್ತಿತ್ವ ಅನಿರೀಕ್ಷಿತ ವಿಚಾರ, ಆಳವಾದ ಚಿಂತನೆಗೆ ಹೇಳಿಮಾಡಿಸಿದಂತಿತ್ತು. ಒಂದೇ ಕಡೆ ಕೂತು ನಿಧಾನಕ್ಕೆ ಮಾತಾಡುತ್ತಿದ್ದ ಗೋಪಾಲ್ ಆಳದಲ್ಲಿ ಮಹಾ ಚಡಪಡಿಕೆಯ, ವಿಚಿತ್ರ ಸಿಡಿಮದ್ದುಗಳ ವ್ಯಕ್ತಿ…. ಗೋಪಾಲ್ ಮತ್ತು ನಾನು ಸಂಧಿಸಿದ ಹಲವೇ ಸಂದರ್ಭಗಳು ಈಗ ನೂರಾದಂತೆ ಕಾಣುತ್ತಿವೆ. ಗೋಪಾಲ್ ತಮ್ಮ ಸುತ್ತ ಕಂಡುಬಂದ ಅನ್ಯಾಯದ ವಿರುದ್ಧ ಸ್ಫೋಟಿಸುತ್ತಿದ್ದರು. ಅವರ ಪ್ರೀತಿಯೇ ಅವರನ್ನು ಸಮಾಜವಾದಿಯನ್ನಾಗಿಸಿತ್ತು: ಹಾಗೆಯೇ ಬಡತನ, ಅನ್ಯಾಯಕ್ಕೆ ಪರಿಹಾರವೇ ಕಾಣಿಸುತ್ತಿಲ್ಲವಲ್ಲ ಎಂದು ಹತಾಶರಾಗಿದ್ದರು.

ಗೋಪಾಲ್ ತೀರಿಕೊಂಡದ್ದು ೧೯೭೨ರ ಜೂನ್ ೯ ರಂದು ; ಕೇವಲ ನಲವತ್ತೊಂಬತ್ತು ವರ್ಷ ಬದುಕಿ ಕಣ್ಣು ಮುಚ್ಚಿದ ಈ ಮಹಾದಿಟ್ಟ, ವ್ಯಾಮೋಹದ, ಸಿಟ್ಟಿನ, ಸಜ್ಜನಿಕೆಯ ವರ್ಣರಂಜಿತ ಸಂಭಾವಿತನ ಬಗ್ಗೆ ಒಬ್ಬತ್ತರಂದೇ (೯.೬.೧೯೯೭) ಈ ಟಿಪ್ಪಣಿ ಬರೆದಿದ್ದೇನೆ.

ಇದನ್ನು ಬರೆಯುವಾಗ ಈ ಗೋಪಾಲ್ ಎಷ್ಟು ಸುಂದರ ವ್ಯಕ್ತಿ ಎನಿಸುತ್ತಿದೆ. ಮಹಾ ಘನತೆಯ ನಾಯಕನಿಗೆ ನಾನು ಕೊಡಬೇಕಾದಷ್ಟು ಪ್ರೀತಿ, ವಿಶ್ವಾಸ ಕೊಡಲಾಗಲಿಲ್ಲ ಎಂದು ಅಳುಕಾಗುತ್ತದೆ ಗೋಪಾಲ್ ರಾಜಕೀಯ ನಾಯಕರಾಗಿದ್ದುದರಿಂದ ಹಸಿವೆಯಿಂದ ಬಳಲುತ್ತಿರಬಹುದು ಎಂದು ನಾನು ಊಹಿಸಲಿಲ್ಲ ಕೂಡ. ಎಂದು ಯಾರನ್ನೂ ಬೇಡದ ಗೋಪಾಲ್ ಅನೇಕ ದಿನ ಉಪವಾಸವಿದ್ದುಬಿಡುತ್ತಿದ್ದರು.

ಸೌಂದರ್ಯ ವ್ಯಕ್ತಿತ್ವದಲ್ಲಿರುತ್ತದೆ, ಚರ್ಮದಲ್ಲಲ್ಲ; ಗೋಪಾಲ್ ರೀತಿಯಲ್ಲಿ ಸುಂದರ.

ಪಿ. ಲಂಕೇಶ್

 

ಗೋಪಾಲಗೌಡರ ಹೆಸರನ್ನು ಕೇಳಿದಾಗಲೆಲ್ಲ, ನನ್ನ ಕಣ್ಮುಂದೆ ನಿಲ್ಲುವುದು ಮುವ್ವತ್ತೊಂದು ವರ್ಷಗಳ ಕೆಳಗೆ ನಮ್ಮ ಜೊತೆ ಶಿವಮೊಗ್ಗ ಸಬ್ ಜೈಲಿನಲ್ಲಿದ್ದ ಹದಿನೇಳು-ಹದಿನೆಂಟು ವರ್ಷದ ಮುಗ್ಧ ಯುವಕ.

೧೯೪೨ನೆಯ ಇಸವಿ, ಆಗಸ್ಟ್ ತಿಂಗಳಿನಲ್ಲಿ ಬ್ರಿಟಿಷರೇ ಭಾರತದಿಂದ ತೊಲಗಿ ಚಳವಳಿಯ ಸಂದರ್ಭದಲ್ಲಿ ನಮ್ಮನ್ನೆಲ್ಲಾ ಬಂಧಿಸಿ ಶಿವಮೊಗ್ಗ ಸಬ್‌ಜೈಲಿನಲ್ಲಿ ಇಟ್ಟಿದ್ದರು. ನಾವು ಶಿವಮೊಗ್ಗ ಸೆರೆಮನೆ ಸೇರಿದ ಮೂರು ನಾಲ್ಕು ದಿನಗಳೊಳಗಾಗಿ ಗೋಪಾಲ ಎಂಬ ವಿದ್ಯಾರ್ಥಿ (ಬಹುಶಃ ಆಗ ಅವರು ಇಂಟರ್ ಮೀಡಿಯಟ್ ಓದುತ್ತಿದ್ದಿರಬೇಕು) ವಿದ್ಯಾರ್ಥಿಗಳ ಗುಂಪಿಗೆ ನಾಯಕನಾಗಿ, ಭೂಗತವಾಗಿ ಕೆಲಸಮಾಡುತ್ತಿದ್ದಾನೆಂದೂ, ಟೆಲಿಗ್ರಾಫ್ ತಂತಿ ಕಂಬಗಳನ್ನು ಎಲ್ಲೆಲ್ಲಿಯೂ ಕತ್ತರಿಸಿ ಹಾಕುತ್ತಿದ್ದಾನೆ ಎಂದೂ, ಆ ಗುಂಪು ರಾತ್ರಿ ಹೊತ್ತು ಕೆಲಸ ಮಾಡುತ್ತದೆಂದೂ, ಅವರನ್ನು ಹಿಡಿಯಲು ವಿಶೇಷ ಪೋಲೀಸ್‌ಪಡೆ ಪ್ರಯತ್ನ ನಡೆಸುತ್ತಿದೆ ಎಂದೂ ಗೊತ್ತಾಯಿತು.

ಒಂದು ವಾರ ಕಳೆಯುವುದರೊಳಗಾಗಿ, ಪೊಲೀಸರು ಗೋಪಾಲನನ್ನೂ, ಅವನ ತಂಡದ ಕೆಲವರು ಯುವಕರನ್ನೂ ತಂದು ನಾವಿದ್ದ ಸೆರೆಮನೆಗೆ ಹಾಕಿದರು.

ಗೋಪಾಲನ ಹೆಸರು ಪ್ರಸಿದ್ಧವಾಗಿದ್ದರಿಂದ, ಅವನು ಹೇಗೆ ಇದ್ದಿರಬಹುದೆಂದು ನಾವೆಲ್ಲ ಕುತೂಹಲಿಗಳಾಗಿದ್ದೆವು. ಆದರೆ, ಅವನೂ ಎಲ್ಲರಂತೆ ಸಾಮಾನ್ಯ ಹುಡುಗ. ನೋಡುವುದಕ್ಕೆ ಸ್ವಲ್ಪ, ಲಕ್ಷಣವಾಗಿದ್ದ. ಇತರ ಹುಡುಗರಿಗಿಂತ ಮುಖದಲ್ಲಿ ಹೆಚ್ಚು ಕಳೆ, ಕಣ್ಣು ತೀಕ್ಷ್ಣವಾಗಿತ್ತು. ಉಕ್ಕುತ್ತಿದ್ದಂತೆ ತೋರುತ್ತಿತ್ತು. ಆತನನ್ನು ನೋಡಿದರೆ ಹುಷಾರಿ ಹುಡುಗ ಎನ್ನಿಸುತ್ತಿತ್ತು. ಹಿರಿಯರ ವಿಷಯ ತಿಳಿದಿದ್ದುದರಿಂದ ವಿನೀತನಾದರೂ ಆತ್ಮೀಯತೆಯಿಂದ ಮಾತನಾಡುತ್ತಿದ್ದ. ನಿರ್ಭಂವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ. ನನ್ನ ಪುಸ್ತಕಗಳನ್ನು ಓದಿದ್ದರಿಂದ ನನ್ನಲ್ಲಿ ಆತನಿಗೆ ಪ್ರೀತಿಯೂ, ಗೌರವವೂ ಇತ್ತು. ಶಿವಮೊಗ್ಗ ಸೆರೆಮನೆಯಲ್ಲಿ ಆತ ಸ್ವಪ್ರೇರಣೆಯಿಂದ ವಹಿಸಿಕೊಂಡ ಜವಾಬ್ದಾರಿಯೆಂದರೆ, ಹಿರಿಯ ರಾಜಕಾರಣಿಗಳ ಉಪಚಾರ.

ಸೆರೆಮನೆಯಲ್ಲಿ ಭಾಷ್ಯಂರವರ ನೇತೃತ್ವದಲ್ಲಿ ಆಗಾಗ ಚರ್ಚಾಕೂಟಗಳು ನಡೆಯುತ್ತಿದ್ದವು. ಒಂದು ಚರ್ಚಾಕೂಟದಲ್ಲಿ ಎಲ್ಲರೂ ದೇಶದ ವಿಷಯದಲ್ಲಿ ನಮ್ಮ ನಮ್ಮ ಅಭಿಪ್ರಾಯಗಳನ್ನು ಹೇಳಿದೆವು. ಆಗ ಗೋಪಾಲನ ಸರದಿಯೂ ಬಂತು: ಆತ, “ದೇಶದಲ್ಲಿ ಎಲ್ಲರೂ ಸಮಾನರು, ಸಮಾನತೆ ಬೇಕು. ಧನಿಕ ಬಡವ ಎಂಬ ವ್ಯತ್ಯಾಸ ಹೋಗಬೇಕು’’ ಎಂದು ವಿಶ್ಲೇಷಿಸಿದ. ಮುಂದೆ, ಅದೇ ಗೋಪಾಲಗೌಡರ ಜೀವನವನ್ನು ಮುನ್ನಡೆಸುವ ತಾರಕಮಂತ್ರವಾಯಿತು.

ಗೋಪಾಲನ ನಾನು ಗಮನಿಸಿದ ಮತ್ತೊಂದು ಗುಣವೆಂದರೆ ಆತನ ಜ್ಞಾನಪಿಪಾಸೆ. ಸೆರೆಮನೆಯಲ್ಲಿ ಕೆಲವರಂತೂ ಹೆಚ್ಚುಕಾಲ ನಿದ್ರೆಯಲ್ಲಿಯೇ ಕಳೆಯುತ್ತಿದ್ದರು. ಗೋಪಾಲ ಮಾತ್ರ ಯಾವಾಗಲೂ ಯಾವುದಾದರೂ ಒಂದು ಪುಸ್ತಕವನ್ನು ಹಿಡಿದೇ ಇರುತ್ತಿದ್ದ. ಭಾಷ್ಯಂ, ಸಿದ್ಧಯ್ಯ, ಕುಮಾರನ್, ಕೆ.ಸಿ. ರೆಡ್ಡಿ ಇವರೊಡನೆ ಚರ್ಚಿಸುತ್ತಲೇ ಇದ್ದ. ಈ ಜ್ಞಾನಾರ್ಜನೆಯ ದಾಹ ಗೋಪಾಲನಲ್ಲಿ ಕೊನೆಯವರೆಗೂ ಇತ್ತು. ಆದುದರಂದಲೇ ಆತನ ಮುಂದಿನ ಮಾತುಗಳಲ್ಲಿ ನಾಡಿನ ಉತ್ಕರ್ಷದ ಕಳಕಳಿ ಇತ್ತು.

ಗೋಪಾಲಗೌಡರು ಚಿಕ್ಕವಯಸ್ಸಿನಲ್ಲಿಯೇ ಅಖಿಲಭಾರತ ಮಟ್ಟದ ಪಕ್ಷದ ಅಧ್ಯಕ್ಷರಾದುದು ಅವರ ಸೇವೆ, ಪ್ರಾಮಾಣಿಕತೆ, ಶಕ್ತಿ ಸಾಮರ್ಥ್ಯಗಳ ಗುರುತು. ಅವರಿಗೆ ಮದುವೆಯಾದಾಗ, ವಿಧಾನ ಮಂಡಲದ ಸದಸ್ಯರು ಸರಕಾರವೂ ಸಹ-ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಅವರಿಗೆ ಒಂದು ಅಬಿನಂದನಾ ಸಭೆಯನ್ನು ಏರ್ಪಡಿಸಿದ್ದರು. ವಿಧಾನಮಂಡಲದ ಇತಿಹಾಸದಲ್ಲಿಯೇ ಅದೊಂದು ಅಪೂರ್ವವಾದ ಘಟನೆ.

ಗೋಪಾಲನ ಶಕ್ತಿಯ ಮೂಲವೆಲ್ಲ ಆತನ ದೇಶಭಕ್ತಿಯೇ.

ಗೊರೂರು ರಾಮಸ್ವಾಮಿ ಅಯ್ಯಂಗಾರ್

 

ಎತ್ತರದ ನಿಲುವು, ಹಸನ್ಮುಖ, ಕಚ್ಚೆ-ಪಂಚೆಯನ್ನು ಮುಂದೆ ಕುಚ್ಚು ಬಿಟ್ಟು ಉಡುತ್ತಿದ್ದರು. ಇವರು ಕ್ರಾಂತಿ-ಪುರುಷರೆಂದು ಕೇಳಿದಾಗಲೆಲ್ಲ ನನಗೆ ಆಶ್ಚರ್ಯವಾಗುತ್ತಿತ್ತು. ಏಕೆಂದರೆ, ಅವರ ವ್ಯಕ್ತಿತ್ವದ ಆ ರುದ್ರಮುಖದ ಪರಿಚಯ ನನಗಿಲ್ಲವೇ ಇಲ್ಲ. ಈಗಲೂ ನನ್ನ ಕಣ್ಣ ಮುಂದಿರುವುದು ಅವರ ಸುಸಂಸ್ಕೃತವೂ, ವಿನಯಭೂಷಿತವೂ ಆದ ನಗುಮುಖ ಮತ್ತು ಮೃದು ಮಧುರ ಭಾಷೆ.

ಅವರ ಸಭೆಯಲ್ಲಿ ವೇಳೆಯನ್ನು ಕಾದು ಅಲ್ಲಿಗೆ ಹೋಗಿ ಕುಳಿತು ಕೇಳುತ್ತಿದ್ದೆ. ಸದಸ್ಯರ ಪೈಕಿ ಅವರ ಮಾತು ತುಂಬ ಸೊಗಸು. ಕೇಳುವುದಕ್ಕೆ ಒಳ್ಳೆಯ ಪ್ರೌಢ ಸಂಗೀತದಷ್ಟು ಹಿತ. ಗೋಪಾಲಗೌಡರು ಉತ್ತಮ ವಾಗ್ಮಿಗಳು. ನನ್ನ ಈ ಅಭಿರುಚಿ ಅವರನ್ನು ನನ್ನತ್ತ ಆಕರ್ಷಿಸಿರಬೇಕು. ನಾನು ಕನ್ನಡದ ಕೀಳ್ಮೆಯನ್ನು ಸಹಿಸದವ, ನನ್ನೆಣಿಕೆಯಲ್ಲಿ ಅದನ್ನು ತಮ್ಮ ವಾಗ್ಮೀಯತೆಯಿಂದ ಮೇಲ್ಪಡಿಸಿದ ಕೀರ್ತಿವಂತರಲ್ಲಿ ಗೋಪಾಲಗೌಡರೂ ಸೇರಿದ್ದಾರೆ.

– ಪು.ತಿ.ನ.

 

ಶಾಂತವೇರಿ ಗೋಪಾಲಗೌಡರು, ಮಲೆನಾಡಿನ ಸುತ್ತಲಿನ ಸ್ವಂತಭೂಮಿಯಿಲ್ಲದೆ ಪರರ ಭೂಮಿಯನ್ನು ಕೃಷಿಮಾಡಿ, ಕಷ್ಟಕಾರ್ಪಣ್ಯಗಳಿಂದ ಜೀವಿಸುತ್ತಿರುವ ಒಕ್ಕಲುಗಳನ್ನು ಒಂದುಗೂಡಿಸಿ, ಅವರಿಂದ ಚಳವಳಿ ನಡೆಯಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡುವಂತೆ, ದೀರ್ಘಕಾಲ ದುಡಿದ ಜನಪ್ರಿಯ ವ್ಯಕ್ತಿಯಾಗಿದ್ದರು. ಧೀರ ಹೋರಾಟಗಾರರಾದ ಅವರು ಮಲೆನಾಡಿನಲ್ಲಿ ಮರೆಯದಂಥ ಸ್ಥಾನವನ್ನು ಪಡೆದಿದ್ದಾರೆ.

ಈ ನಾಡಿನ ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿದ ಒಬ್ಬ ಅಪೂರ್ವ ಪ್ರಭಾವಶಾಲಿ ರಾಜಕಾರಣಿಯಾದ ಗೋಪಾಲಗೌಡರ ಆದರ್ಶಯುತವಾದ ನಡೆ ನುಡಿ ಸಾಧನೆಯನ್ನು ನಾಡಿನ ಜನರು ಎಂದೂ ಮರೆಯುವಂತಿಲ್ಲ. ಅವರ ತತ್ವನಿಷ್ಠೆ, ದಿಟ್ಟತನ, ಪ್ರಾಮಾಣಿಕ ಹೋರಾಟ ನಿರಂತರ ಮೆಚ್ಚುಗೆಗೆ ಪಾತ್ರವಾಗಿವೆ.

ಶಿವರಾಮ ಕಾರಂತ

 

ಈ ನಾಡಿನ ಸಮಾಜವಾದಿ ತತ್ವನಿಷ್ಠ ರಾಜಕಾರಣಿಗಳ ಪೈಕಿ ಗೋಪಾಲಗೌಡರದು ಮೊದಲ ಹೆಸರು. ಈತ ಒಟ್ಟು ಕರ್ನಾಟಕಕ್ಕಾಗಿ ಮಾಡಿ ಮಡಿದ ನಾಯಕ.

ಲೋಹಿಯಾ ಅವರು ಉತ್ತರಭಾರತದ ಒಂದು ಸಭೆಯಲ್ಲಿ ಮಾತಾಡಿದ್ದರ ವರದಿ ನನಗೆ ನೆನಪಾಗುತ್ತಿದೆ. “ಈ ದೇಶದ ವಿದ್ಯಮಾನಗಳನ್ನು ನೋಡಿದರೆ, ತೀವ್ರ ಹತಾಶ ಸ್ಥಿತಿಯಲ್ಲೇ ನಾನು ಮುಳುಗಿಹೋಗಿಬಿಡುತ್ತೇನೆ. ಆದರೆ, ಕರ್ನಾಟಕದ ಗೋಪಾಲ ಮತ್ತು ಬಂಗಾಳದ…(ಹೆಸರು ನೆನಪಾಗುತ್ತಿಲ್ಲ) ಇವರುಗಳನ್ನು ನೋಡಿದರೆ, ಮತ್ತೆ ನನ್ನೆಲ್ಲಾ ಚೈತನ್ಯವೂ ಬಂದಂತಾಗುತ್ತದೆ.’’ ಇದು ಗೋಪಾಲಗೌಡರು ಬದುಕಿದ್ದ ರೀತಿ.

ನನ್ನ ಗೋಪಾಲಗೌಡ ನಿರ್ಭೀತಿಯ ದಿಟ್ಟ ಹೋರಾಟಗಾರ. ಎಂದೂ ಯಾರ ಮುಂದೆಯೂ ಅಸಹಾಯಕತೆಯಿಂದ ನಿಂತವರಲ್ಲ. ಅವರದು ಗಾಂಧಿ, ಲೋಹಿಯಾ, ರೆಸಲ್, ಟಾಲ್ಸ್ಟಾಯ್ ಅವರುಗಳ ಪ್ರಭಾವದಿಂದ ರೂಪುಗೊಂಡ ವ್ಯಕ್ತಿತ್ವ. ಆಳುವ ಸರ್ಕಾರದ ಒಂದು ಸಣ್ಣ ಲೋಪವನ್ನೂ ಅವರು ಸಹಿಸುತ್ತಿರಲಿಲ್ಲ. ೧೯೬೭ರಲ್ಲಿ ನಡೆದ ಮಧುಗಿರಿ ಅತ್ಯಾಚಾರ ಪ್ರಕರಣದಲ್ಲಿ, ಸರ್ಕಾರ ಕೊಟ್ಟಿದ್ದ ಸುಳ್ಳುಹೇಳಿಕೆಯನ್ನು ತೀವ್ರವಾಗಿ ಖಂಡಿಸಿ; ಅಂದಿನ ಗೃಹಮಂತ್ರಿಗಳು ರಾಜೀನಾಮೆ ಕೊಡುವಂತೆ ಮಾಡಿದರು. ಅಂತಿಮವಾಗಿ ಗೋಪಾಲಗೌಡರು ಎಲ್ಲ ತತ್ವಸಿದ್ಧಾಂತಗಳನ್ನೂ ಮೀರಿದ ಮನುಷ್ಯತ್ವದ ಆರಾಧಕರಾಗಿದ್ದರು.

೧೯೭೨ ಜೂನ್ ೯ ಬೆಳಗಾಂ ಬಳಿ ನನ್ನ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತು. ನನ್ನ ಚಿತ್ರದ ನಾಯಕ ಹೋರಾಟದಲ್ಲಿ ಸಾಯುವ ದೃಶ್ಯದೊಂದಿಗೆ ಚಿತ್ರೀಕರಣ ಮುಗಿದಿತ್ತು. ಎಲ್ಲ ಮುಗಿಸಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಗೋಪಾಲಗೌಡರು ತೀರಿಕೊಂಡರು ಎನ್ನುವ ಸುದ್ದಿ ನನಗೆ ಅಲ್ಲೇ ತಿಳಿಯಿತು. ನನ್ನ ಚಲನಚಿತ್ರ ನಾಯಕನಂತೆ; ನನ್ನ ನಾಯಕ ಗೋಪಾಲಗೌಡರೂ ಮಾಡಿ ಮಡಿದರು.

ಕೆ.ಎಂ. ಶಂಕರಪ್ಪ

 

ಮೊದಲು ಗಾಯತ್ರಿ ಹೊತ್ತು ಹೆತ್ತ ವಿಶ್ವಾಮಿತ್ರರಿಗೆ, ಅನಂತರ ರೂಢಿ
ಚಿಪ್ಪೊಡೆದು ಚಿಮ್ಮಿದ ಚಿದಗ್ನಿ ದ್ವಿಜಾಗ್ನಿ ಸುಲಿ ಶಂಬೂಕ ಋಷಿಗಳಿಗೆ
ಅನಂತರ ನಮ್ಮ

ಶಾಂತವೇರಿಯ ಅಶಾಂತ ಸಂತ ಗೋಪಾಲಗೌಡರಿಗೆ
ನಮಸ್ಕಾರ: ತಪಸಿ ಶಪಿಸಿ, ಪರಿತಪಿಸಿ, ಬದುಕಿ, ಆಗಿ, ಮಾಗಿ ರುಜುವಾತುಪಡಿಸಿದಿರಿ
“ಜಾತಿ ಅಜ್ಞಾತಕ್ಕೆ ಕೊಟ್ಟ ಲೇಬಲ್ ಮಾತ್ರ, ಪ್ರಮಾಣ ಪತ್ರವಲ್ಲ.
ಪ್ರಚೋದಿತ ಧೀಗೆ ಸತ್ಯ ಲೋಕವೊಂದೇ ಸೀಮೆ:
ಚರಂಡಿ ಬಳಿ ಇರಲಿ, ಕೈದೋಚದಲ್ಲೇ ಇರಲಿ,
ಹುಳಿಮಾವು ಹುಳಿಯೆ, ಸಿಹಿಯಾದ್ದು ಸಿಹಿಯೇ’’

ರಾಶಿ ರಾಶಿ ಮರಳು ಕಲ್ಲು ಮುಳ್ಳು ಮಣ್ಣು ಹೊರಹೊರೆ ಕೆಳಗೆ
ಏರುತ್ತಲೇ ಇದ್ದ ಧೀಮಂತ ಮೊಳಕೆ
ಹಗಲಿರುಳ ವಾರ ತಿಂಗಳು ವರ್ಷವರ್ಷವೂ
ಕುದಿಯುತ್ತಲೇ ಇದ್ದ ಕರುಳ ಚರಿಗೆ
ನೀವು ಈಗ ಇರಬೇಕಿತ್ತಿಲ್ಲಿ ಕರ್ಮಾಂಗಕ್ಕೆ.

ಬ್ರಹ್ಮ ಕುಳಿತಿರೆ ನಾವು ಮೂಲೆ ಸೇರಿ,
ನೀವು ಕುಳಿತಿರಿ ಕುಂಡದಲ್ಲಿ ಸರ್ವಹುತಕ್ಕೆ ಅಧ್ವರ್ಯು
ಸಿದ್ಧಪಡಿಸುತ್ತ ಅಂಗಾಂಗ:
ಅಂಗುಲಂಗುಲ ಹವಿಸ್ಸಾಗಿ ಸುಟ್ಟಿರಿ ಇಲ್ಲಿ
ಜೀಮೂತವಾಹನ ದಧೀಚಿ ರೀತಿ.

ಬಂಗಾರವಾಗಿ ಬದುಕಿದಂಥ ಅಕಿಂಚನ ಚೇತ
ಧೀಮಂತರಲ್ಲಿ ಧೀಮಂತ, ರಸಿಕರಲ್ಲಿ ರಸಿಕ;
ಕಂಗಾಲರಲ್ಲಿ ಕಂಗಾಲ, ಮುಗ್ಧರೊಳಗೆ ಮುಗ್ಧ ವಿದಗ್ಧ.
ಅಂತರಂಗದಭಂಗ ದೀಪಾವಳಿಯ ರಂಗಕ್ಕೆ
ಹಣತೆ ಮಾಡಿದಿರಿ ನಿಮ್ಮೊಡಲ ಎರಿದಿರಿ ಅದಕ್ಕೆ
ಅಜ್ಯಧಾರೆಯ ಹಾಗೆ ಹರಣ.

ಧೀರೋದಾತ್ತ ನಾಯಕನ ಪಾತ್ರಕ್ಕಾಗಿ ಜನಿಸಿಯೂ ಕೂಡ
ಹುತಾತ್ಮ ಪಾತ್ರವನಾಯ್ದುಕೊಂಡ ವೀರ:
ಶತಕ್ಷತವಾದರು ಶರೀರ ತೆವಳುತ್ತಲೇ ಇತ್ತು
ಕಂಡಕಣಸಿನ ಗುರಿಗೆ ನೇರ ನೇರ.

ಹುಗಿದಿಟ್ಟು ಹತ್ತಾಳು ಕೆಳಗೆ ಕೈತೊಳೆದೂಕೊಂಡಿರಿ ನಿಮ್ಮ
ಇಂದ್ರಿಯಾರ್ಥಗಳ ಅವೇ ಕೂಗುಮಾರಿ
ಬೆನ್ನಟ್ಟಿ ಬದು ಕಾಡಿದ್ದು ಸೋಜಿಗವಲ್ಲ; ದಿಗ್ಭ್ರಾಂತರಾಗದೆ ನೀವು
ಅಭಿಮನ್ಯು ನಿಂತದ್ದು ಪವಾಡವೆ ಸರಿ.

ಸಂಕಲ್ಪ ಬಲದ ಬಾರು ಬಿಗಿದೆ ಬಿಗಿದಿರಿ, ಮೃದಂಗ
ಒಡೆದು ಹೋಯಿತು. ತಾಳಗೆಟ್ಟ ಮೇಳ
ದಿಕ್ಕಾಪಾಲು, ಸಮತ್ವಭ್ರಾತೃತ್ವಗಳ ಬಯಲಾಟ
ಬಟ್ಟಂಬಯಲು. ರಂಗ ಖಾಲಿ ಖಾಲಿ.

ಧರ್ಮಕ್ಷೇತ್ರ, ಕರ್ಮಕ್ಷೇತ್ರ, ಕುರುಕ್ಷೇತ್ರ ಯಾವುದಾದರೂ ಇರಲಿ
ಸೋಲುವುದು ಸೋಲೆ, ಗೆಲವು ಕೂಡ ಸೋಲೆ,
ಬರೀ ಚಿಗುರು ಪೊಗರು, ಮೊಗ್ಗುಗಳು ನೂರಾರು,
ಹೂವುಗಳು ಒಂದಿಷ್ಟು ಅಲ್ಲಿ ಇಲ್ಲ.

ಹೊಸಬದುಕು ತರುವ ಹಣ್ಣೆಲ್ಲ ಮುಂದಿನ ಮಾತು.
ಇದ್ದಾಗ ಒಳಗಿದ್ದುದೆಲ್ಲ ಮೊಳೆತು ಸಸಿಯಾಗಿ ಹೆಮ್ಮರವಾಗಿ ಚಾಚಿದ್ದು
ಹೂಬಿಟ್ಟು ನಿಂತಂಥ ಜೀವಲೀಲೆ
ನಿಮ್ಮದಾಗಿತ್ತು. ಕೃತಕೃತ್ಯರೆ ನೀವಯ್ಯ.
ಹಣ್ಣಿತ್ತು ಹಲವಾರು ಒಳಗೆ, ಒಳಗೆ;
ಅಂತರಂಗದ ಶ್ರೀಮಂತ ಬದುಕು ಅನಂತವಿರಬಹುದಯ್ಯ,
ಅತ್ತ ಕಡೆಗೇ ನಮ್ಮ ಹೆಜ್ಜೆ ಕೂಡ

ಗೋಪಾಲಕೃಷ್ಣ ಅಡಿಗ

 

ಕಾಗೋಡು ರೈತ ಸತ್ಯಾಗ್ರಹ ಆರಂಭವಾದಾಗ ನಾನು ಸಾಗರದಲ್ಲಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದೆ. ಜಮೀನ್ದಾರರು ಬಳಸುತ್ತಿದ್ದ ಅಳತೆ ಕೊಳಗದ ತಕರಾರು ಕಾಗೋಡು ಹೋರಾಟಕ್ಕೆ ಮೂಲ. ಆದರೆ ಆಳದಲ್ಲಿ ಈ ಹೋರಾಟ, ನಮ್ಮ ದೀವರು ಮತ್ತು ಇತರ ಬಡಜನತೆಯು ಅನೇಕ ವರ್ಷಗಳಿಂದ ಜಮೀನ್ದಾರ ಗೌಡರುಗಳಿಂದ ಅನುಭವಿಸುತ್ತಿದ್ದ ಅಪಮಾನದ ವಿರುದ್ಧ ನಡೆಸಿದ ಹೋರಾಟವೂ ಆಗಿತ್ತು. ಕಾಗೋಡು ಗ್ರಾಮದ ಕೆ.ಜಿ. ಒಡೆಯರ್ರವರ ಕುಟುಂಬವು ನಮ್ಮ ಗೇಣಿದಾರರ ಮೇಲೆ ನಡೆಸುತ್ತಿದ್ದ ಅನಾಗರಿಕ ದೌರ್ಜನ್ಯ ಮನುಷ್ಯ ಮಾತ್ರದವರು ಸಹಿಸಲಾರದ್ದು. ದೀವರು ಇವರ ವಿರುದ್ಧ ಸಂಘಟಿತರಾಗಿ ಧ್ವನಿಯತ್ತುವುದಕ್ಕೆ ಅಳತೆ ಕಳಗದ ತಕರಾರು ಒಂದು ನೆಪವಾಗಿತ್ತು. ಕಾಗೋಡು ಹೋರಾಟವನ್ನು ಆರಂಭಿಸುವಾಗ ಇಷ್ಟು ಮಹತ್ವಪೂರ್ಣವಾದ ಇತಿಹಾಸ ಈ ನೆಲದಲ್ಲಿ ನಿರ್ಮಾಣವಾಗುತ್ತಿದೆಯೆಂಬುದರ ಅರಿವು ನಮಗೆ ಇರಲಿಲ್ಲ. ಆಗ ಅನೇಕ ಪತ್ರಿಕೆಗಳವರು ಈ ಸತ್ಯಾಗ್ರಹದ ವಿರುದ್ಧವಾಗಿ ಬರೆದರು. ಆದರೂ ನಮಗೆ ಇರಲಿಲ್ಲ. ಆಗ ಅನೇಕ ಪತ್ರಿಕೆಗಳವರು ಈ ಸತ್ಯಾಗ್ರಹದ ವಿರುದ್ಧವಾಗಿ ಬರೆದರು. ಆದರೂ ನಮ್ಮ ಹೋರಾಟ ಹಿಂದೆ ಬೀಳಲಿಲ್ಲ!

ಕಾಗೋಡು ಚಳವಳಿಯ ಸಂದರ್ಭದಲ್ಲಿ ನಾನೂ ಪೋಲೀಸರಿಂದ ಹೊಡೆತ ತಿಂದಿದ್ದೆ. ಆದರೆ, ಪೊಲೀಸಿನವರು ನನ್ನನ್ನು ಅರೆಸ್ಟ್ ಮಾಡದೆ ಮೈನರ್ ಅಂತ ಬಿಟ್ಟುಬಿಡುತ್ತಿದ್ದರು. ಕಾಗೋಡು ಹೋರಾಟ ಬಹಳಷ್ಟು ಯುವಕರನ್ನು ತನ್ನಡೆಗೆ ಸೆಳೆದುಕೊಂಡಿತ್ತು. ಅದರಲ್ಲೂ ವಿದ್ಯಾವಂತ ಬ್ರಾಹ್ಮಣ ಯುಕರೆಲ್ಲ ಅತ್ಯಂತ ಪ್ರಾಮಾಣಿಕವಾಗಿ ನಮ್ಮ ಹೋರಾಟದೊಂದಿಗಿದ್ದರು. (ಜೆ.ಆರ್.ಜಿ.ನಗರ್, ಗುಂಡಪ್ಪ, ಕಾನ್ಲೆ ಮುದ್ದಪ್ಪ ಮುಂತಾದವರು)

ನನಗೆ ಗೋಪಾಲಗೌಡರ ಪರಚಿಯವಾಗಿದ್ದು, ಕಾಗೋಡು ಹೋರಾಟದ ಮೂಲಕ. ಹೋರಾಟ ನಡೆಯುತ್ತಿದ್ದಾಗ ಗೋಪಾಲಗೌಡರು ಕಾಗೋಡಿಗೆ ಬಂದಾಗಲೆಲ್ಲ ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಗೋಪಾಲಗೌಡರು ಮತ್ತು ನಮಗಿದ್ದ ಸಂಬಂಧ ಕೇವಲ ಪಕ್ಷ ಮತ್ತು ಸಿದ್ಧಾಂತಗಳ ಮೇಲೆ ನಿಂತಿರಲಿಲ್ಲ! ಅದು ಇವುಗಳನ್ನೆಲ್ಲಾ ಮೀರಿದ ಮನುಷ್ಯತ್ವದ ಮೇಲೆ ನಿಂತಿತ್ತು.

ಸತ್ಯಾಗ್ರಹದ ಸಂದರ್ಭದಲ್ಲಿ ಗೋಪಾಲಗೌಡರು ಕಾಗೋಡು ಸುತ್ತಮುತ್ತಲಿನ ಹಳ್ಳಿಗಳನ್ನೆಲ್ಲಾ ಬರಿ ಕಾಲ್ನಡಿಗೆಯಲ್ಲೇ ಸುತ್ತಾಡಿ ರೈತರನ್ನು ಸಂಘಟಿಸಿದರು. ಇದರಿಂದಾಗಿ ಆ ಭಾಗದಲ್ಲಿ ಗೋಪಾಲಗೌಡರು ಎಲ್ಲರಿಗೂ ಪರಿಚಿತರಾದರು. ಕಾಗೋಡು ಹೋರಾಟದ ನಂತರ ಸಮಾಜವಾದಿ ಪಕ್ಷ ನಮ್ಮ ಭಾಗದಲ್ಲಿ ಹೆಚ್ಚು ಬಲವಾಯಿತು. ಅಲ್ಲಿಂದಾಚೆಗೆ ಸಮಾಜವಾದಿ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಸಾಗರ ಸೊರಬ ಕೇಂದ್ರ ಸ್ಥಳವಾದವು. ಗೋಪಾಲಗೌಡರು ಮತ್ತು ಸಾಗರದ ಸಮಾಜವಾದಿಗಳ ಸಂಬಂಧ ಕೇವಲ ಪಕ್ಷದ ಸಂಬಂಧವಾಗಿರದೇ ತುಂಬು ಕುಟುಂಬವೊಂದರ ಸಂಬಂಧದಂತೆ ಇತ್ತು. ಕಾಗೋಡಿನಲ್ಲಿ ಸಮಾಜವಾದಿ ಪಕ್ಷ ಹೋರಾಟಮಾಡದೇ ಹೋಗಿದ್ದರೆ, ಇಲ್ಲಿ ಭೂಸುಧಾರಣಾ ಕಾನೂನು ಜಾರಿಗೆ ಬರುತ್ತಿರಲಿಲ್ಲ. ಇದೇ ಆಧಾರದ ಮೇಲೆ ಸಮಾಜವಾದಿ ಪಕ್ಷ ರಾಜ್ಯದಲ್ಲಿ ಅನೇಕ ಹೋರಾಟಗಳನ್ನು ನಡೆಸಿತು. ಆದರೆ ಪಕ್ಷಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ಲಾಭವಾಯಿತೇ ಹೊರತು, ರಾಜ್ಯದ ಇತರೆಡೆ ಅದಕ್ಕೆ ರಾಜಕೀಯ ಲಾಭವಾಗಲಿಲ್ಲ! ನಾನು ಕಾಗೋಡು ಹೋರಾಟದ ಅನುಭವವಿದ್ದುದರಿಂದಲೇ ೧೯೭೩-೭೪ರಲ್ಲಿ ಸೊಂಡೂರು ಹೋರಾಟದಲ್ಲಿ ಪಾಲ್ಗೊಂಡಿದ್ದೆ.

ಕಾಗೋಡು ಚಳವಳಿಯ ನಂತರ ಗೋಪಾಲಗೌಡರು ರಾಜ್ಯದ ಸಮಾಜವಾದಿ ನಾಯಕರಾಗಿ ಮೂಡಿಬಂದರು. ೧೯೫೨ರ ಗೌಡರ ಮೊದಲ ಚುನಾವಣೆಯ ಸಂದರ್ಭದಲ್ಲಿ ಇನ್ನೂ ಹದಿಹರೆಯದವನಾಗಿದ್ದ ನಾನು ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಆ ಚುನಾವಣೆಯಲ್ಲಿ ಕೆಂಪು ಬಾವುಟ, ಕೆಂಪು ಟೋಪಿ ಎಲ್ಲ ಕಡೆಯೂ ಜೋರಿತ್ತು!

ಕಾಗೋಡು ಸತ್ಯಾಗ್ರಹ ಪ್ರಭಾವದಿಂದಾಗಿ ರೈತರಲ್ಲಿ ಜಾಗೃತಿಮೂಡಿ ಅವರೆಲ್ಲ ಗೋಪಾಲಗೌಡರ ಕಡೆಗಿದ್ದರು. ಬಡವರ ಮತ್ತುರೈತರ ಅಪಾರ ಬೆಂಬಲದಿಂದಾಗಿ ಎದುರಾಳಿಯಾಗಿದ್ದ ಶ್ರೀಮಂತ ಜಮೀನ್ದಾರರಾದ ಬದರಿನಾರಾಯಣ ಅಯ್ಯಂಗಾರ್ ಸೋತು; ಗೋಪಾಲಗೌಡರು ಆ ಚುನಾವಣೆಯಲ್ಲಿ ಗೆದ್ದರು.

೧೯೫೦ರಲ್ಲಿ ನಾನು ಎಸ್.ಎಸ್.ಎಲ್.ಸಿ. ಪಾಸುಮಾಡಿದೆ. ಆಗ ಗೋಪಾಲಗೌಡರೇ ನನ್ನನ್ನು ಬೆಂಗಳೂರಿಗೆ ಕರೆತಂದು, ಗಾಂಧಿನಗರದಲ್ಲಿದ್ದ ಪಕ್ಷದ ಕಛೇರಿಯಲ್ಲಿ ಬಿಟ್ಟರು. ಅನಂತರ ಈಡಿಗರ ವಿದ್ಯಾರ್ಥಿನಿಲಯದಲ್ಲಿ ನನಗೆ ಸೀಟು ಕೊಡಿಸಿದರು. ಅಲ್ಲಿಂದ ನಾನು ನನ್ನ ಓದನ್ನು ಮುಂದುವರಿಸಿದೆ. ೧೯೬೨ರ ಚುನಾವಣೆಯಲ್ಲಿ ನಾನು ಮೊದಲಬಾರಿಗೆ ಸ್ಪರ್ಧಿಸಿದಾಗ ನನಗೆ ಇಪ್ಪತೈದು ವರ್ಷ ವಯಸ್ಸು. ಆಗ ನಾವು ಬೆಳಗಾದರೆ ಒಂದಲ್ಲ ಒಂದು ಹೋರಾಟದಲ್ಲಿ ತೊಡಗಿರುತ್ತಿದ್ದೆವು. ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲ ಕಡೆಯೂ ಚೆನ್ನಾಗಿ ಕೆಲಸ ಮಾಡಿದ್ದರು. ಆದರೂ ಕಾಂಗ್ರೆಸ್‌ನ ವಿರುದ್ಧ ನಾನು ಸೋತೆ. ೧೯೭೨ರಲ್ಲಿ ನಾನು ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಬಂದೆ. ಆದರೆ, ಆಗ ಗೋಪಾಲಗೌಡರು ನಮ್ಮೊಂದಿಗಿರಲಿಲ್ಲ.

ಅತ್ಯಂತ ಬಡಕುಟುಂಬದಿಂದ ಬಂದಿದ್ದ ಗೋಪಾಲಗೌಡರ ವ್ಯಕ್ತಿತ್ವ ತುಂಬಾ ಸುಂದರವಾದದ್ದು ಮತ್ತು ಸುಸಂಸ್ಕೃತವಾದದ್ದು: ಊಟ ಮಾಡುವುದಾಗಲಿ, ಬಟ್ಟೆ ತೊಡುವುದಾಗಲಿ, ಮಾತಾಡುವುದಾಗಲಿ, ಬರವಣಿಗೆ ಮಾಡುವುದಾಗಲಿ ಎಲ್ಲದರಲ್ಲೂ ಅಚ್ಚುಕಟ್ಟು ಇರುತ್ತಿತ್ತು. ಹೀಗಾಗಿ ಅವರ ಇಡೀ ಜೀವನವೇ ವಿಶಿಷ್ಟವಾಗಿತ್ತು. ಗೋಪಾಲಗೌಡರ ಅಭಿರುಚಿಗೆ ತಕ್ಕಂತೆ ನಾವೆಲ್ಲ ನಡೆದುಕೊಳ್ಳುತ್ತಿದ್ದೆವು.

ಗೋಪಾಲಗೌಡರು ಮತ್ತು ಸಮಾಜವಾದದ ಬಗ್ಗೆ ನಮಗೆಲ್ಲ ಇದ್ದದ್ದು ಭಾವನಾತ್ಮಕ ಸಂಬಂಧವೇ ಹೊರತು ಒಣ ಬೌದ್ಧಿಕರೀತಿಯದಲ್ಲ. ಜೆ.ಹೆಚ್. ಪಟೇಲರೂ ಕೂಡ ಆ ಕಾಲದಲ್ಲಿ ಪಕ್ಷಕ್ಕಾಗಿ ಸಾಕಷ್ಟು ಕಳಕೊಂಡವರು. ನಮ್ಮೆಲ್ಲರ ಒಟ್ಟು ಸಂಬಂಧವು ಪ್ರೀತಿ, ವಿಶ್ವಾಸ, ನಂಬಿಕೆಗಳ ಮೇಲಿತ್ತು. ಹೀಗಾಗಿ ನಾವೆಲ್ಲ, ಎಲ್ಲಾ ವಿಚಾರಗಳನ್ನು ಮೀರಿದ ತುಂಬು ಕುಟುಂಬದ ಸದಸ್ಯರಂತೆ ಇದ್ದೆವು.

ಕಾಗೋಡು ತಿಮಪ್ಪ

 

ಸಮಾಜವಾದಿ ಪಕ್ಷ ಗೋಪಾಲಗೌಡರ ಕೈಯಲ್ಲಿ ಕರ್ನಾಟಕ ರಾಜ್ಯದ ಈ ಮೂಲಕ ಇಡೀ ಭಾರತದ ಬಡವರ ಬದುಕನ್ನು ನೆಮ್ಮದಿಯ ಜಾಡಿನ ಕಡೆಗೆ ಕೊಯ್ಯುವ ಪಂಜಿನ ಬೆಳಕಾಗಿತ್ತು.

ಬೆಸಗರಹಳ್ಳಿ ರಾಮಣ್ಣ

 

ಡಾ. ಲೋಹಿಯಾ ನಂತರ ನಾನು ಕಂಡ ತತ್ವನಿಷ್ಠ, ನಿಷ್ಠುರ ನಡೆಯ ರಾಜಕಾರಣಗಳಲ್ಲಿ ಹಾಗೆಯೇ ಸಾಗರದ ಚಮ್ಮಾರ ಹನುಮಂತಪ್ಪ ವಾಲದ, ಬಿ.ಎಸ್. ಚಂದ್ರಶೇಖರ, ಎಸ್.ಎಸ್. ಕುಮಟಾ ನನ್ನ ಮನಸ್ಸಿನಲ್ಲಿ ಇಂದಿಗೂ ಉಳಿದಿರುವ ಸಮಾಜವಾದಿಗಳು.

ಗೋಪಾಲ ನನ್ನ ಬಗ್ಗೆ ಎಷ್ಟು ಶ್ರದ್ಧೆ, ಗೌರವ ತೋರಿಸುತ್ತಿದ್ದ ಅಂದರೆ, ನನ್ನ ಬಟ್ಟೆಗಲು ಕೊಳೆಯಾಗಿರುವುದನ್ನು ಕಂಡಕೂಡಲೇ, ಅವುಗಳನ್ನು ಒಗೆಸಲು ತಾನೇ ಮುಂದಾಗುತ್ತಿದ್ದ. ಅಂಥ ಮಗುವಿನ ಮನಸ್ಸಿನವನು ನಮ್ಮ ಗೋಪಾಲ.

ಜಿ. ಸದಾಶಿವರಾವ್

 

ಗೋಪಾಲಗೌಡರನ್ನು ನಾನು ಚಿಕ್ಕ ಹುಡುಗನಿಂದಲೂ ಬಲ್ಲೆ, ಅವರು ಬಡತನದಲ್ಲಿ ಹುಟ್ಟಿದರು, ಬಡತನದಲ್ಲಿ ಬೆಳೆದರು; ಬಡತನದಲ್ಲೇ ಕೊನೆಮುಟ್ಟಿದರು. ಐಶ್ವರ್ಯವನ್ನು ಸಂಪಾದಿಸಬೇಕೆಂದಿದ್ದರೆ, ಅವರಿಗೆ ಅನೇಕ ಅವಕಾಶಗಳಿದ್ದವು. ಪ್ರಲೋಭನೆಗಳಿಂದ ತುಂಬಿದ ರಾಜಕಾರಣದಲ್ಲಿ ಅವರು ಕೊನೆಯವರೆಗೂ ಪ್ರಾಮಾಣಿಕರಾಗಿ ಉಳಿದರು.

ನಾನು ಬೇರೊಂದು ರಾಜಕೀಯ ಪಕ್ಷದಲ್ಲಿದ್ದರೂ, ನಮ್ಮಿಬ್ಬರ ಪರಸ್ಪರ ಪ್ರೇಮ ಗೌರವಗಳಿಗೆ ಅದು ಅಡ್ಡಿಯಾಗಿರಲಿಲ್ಲ. ಸಮಾಜವಾದಿ ಪಕ್ಷಕ್ಕೆಸೇರುವಂತೆ ನನ್ನನ್ನು ಒತ್ತಾಯಿಸುತ್ತಿದ್ದರು. ಡಾ. ಲೋಹಿಯಾ ಅವರನ್ನು ಬಿಟ್ಟರೆ, ರಾಜಕೀಯ ಜೀವನದಲ್ಲಿ ನಾನು ನಿಮ್ಮನನೇ ಹೆಚ್ಚಾಗಿ ಗೌರವಿಸುವುದು ಎಂದು ಹೇಳುತ್ತಿದ್ದರು. ನನ್ನ ಮೇಲೆ ಅವರಿಗೆ ಅಪಾರ ಪ್ರೇಮವಿತ್ತು. ನನಗೂ ಅವರ ಮೇಲೆ ಅಷ್ಟೇ ಗೌರವವಿತ್ತು.

ಕಡಿದಾಳು ಮಂಜಪ್ಪ

 

ಕರ್ನಾಟಕದ ಸಮಾಜವಾದ ಆಂದೋಲನ, ಡಾ. ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡರ ಚಿಂತನೆ ಮತ್ತು ಹೋರಾಟಗಳ ಹಿನ್ನೆಲೆಯಲ್ಲಿ ಅತ್ಯಂತ ಪ್ರಭಾವಯುತವಾದ ಬೆಳವಣಿಗೆಯನ್ನು ಕಂಡಿತು.

ಗೌಡರು ಶಾಸನ ಸಭೆಯಲ್ಲಿ ತಾನು ನಂಬಿದ ಧ್ಯೇಯಗಳ ಬಗ್ಗೆ, ತನ್ನನ್ನು ನಂಬಿದ ಜನರ ಶೋಷಣೆಯ ಬಗ್ಗೆ ಯಾವತ್ತೂ ರಾಜಿಮಾಡಿಕೊಳ್ಳಲಿಲ್ಲ. ತಾನು ನಂಬಿದ್ದನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ, ನಿಷ್ಠೂರವಾ, ನಿರ್ಭಿಡೆಯಿಂದ ಪ್ರತಿಪಾದಿಸುತ್ತಿದ್ದರು.

ಗೋಪಾಲಗೌಡರು ಅತ್ಯಂತ ಹೆಂಗರುಳಿನವರೆಂದು ಗೊತ್ತು. ಬಡವರು, ಗೇಣಿದಾರರು ಮತ್ತು ನಿಸ್ಸಹಾಯಕರ ಬದುಕಿನ ಬವಣೆಗಳ ಬಗ್ಗೆ ಸಹಜವಾಗಿಯೇ ಅನುಕಂಪವುಳ್ಳವರಾಗಿದ್ದರು. ಈ ಅನುಕಂಪ ಹಲವಾರು ಹೋರಾಟಗಳ ರೂಪದಲ್ಲಿ ಪ್ರಕಟವಾಯಿತು.

ಗೋಪಾಲಗೌಡರು ಕಾಗೋಡು ರೈತರ ಚಳವಳಿಗೆ ಬರದೆ ಹೋಗಿದ್ದರೆ ನಾವ್ಯಾರೂ ಇರುತ್ತಿರಲಿಲ್ಲ. ಅವರು ಚಳವಳಿಗೆ ಬಂದು ಗೇಣಿದಾರರನ್ನು, ದೀವರನ್ನು, ಸಮಾಜವಾದವನ್ನು ಉಳಿಸಿದರು.

ತನಗಾಗಿ ಅಲ್ಲದಿದ್ದರೂ ತನ್ನ ಕುಟುಂಬದವರಿಗಾಗಿಯೂ ಮನೆ ಕೂಡ ಮಾಡಿಕೊಳ್ಳಲಾಗದಂತಹ ನಿಸ್ವಾರ್ಥಿ ನಾಯಕ ಶಾಂತವೇರಿ. ಆದ್ದರಿಂದ ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರೆ ಗಾಂಧಿ, ಲೋಹಿಯಾರವರ ನಿಜವಾದ ಅನುಯಾಯಿ.

ಎಚ್. ಗಣಪತಿಯಪ್ಪ