ನಾವೆಲ್ಲ ಕಾಂಗ್ರೆಸ್‌ನಲ್ಲಿದ್ದವರು; ಗೋಪಾಲಗೌಡರ ವ್ಯಕ್ತಿತ್ವದಿಂದಾಗಿ ಸಮಾಜವಾದಿ ಪಕ್ಷ ಸೇರಿದೆವು. ಗೋಪಾಲಗೌಡರ ಚುನಾವಣೆ ಅಂದರೆ ಅದು ಭೂಮಾಲೀಕರು ಮತ್ತು ಗೇಣಿದಾರರ ನಡುವೆ ನಡೆಯುವ ಚುನಾವಣೆಯಾಗಿರುತ್ತಿತ್ತು. ನಮ್ಮ ಎದುರು ಪಕ್ಷದವರು ಕಾರುಗಳಲ್ಲಿ ಹಳ್ಳಿಗಳನ್ನು ಸುತ್ತಿ ಪ್ರಚಾರ ಮಾಡುತ್ತಿದ್ದರೆ, ನಾವೆಲ್ಲ ಸೈಕಲ್ ಮೇಲೆ, ಕೆಲವು ಸಲ ಕಾಲ್ನಡಿಗೆಯಲ್ಲೇ ಹಳ್ಳಿಗಳನ್ನು ಸುತ್ತಿ ಪ್ರಚಾರ ಮಾಡುತ್ತಿದ್ದೆವು.

ಗೌಡರ ಹತ್ತು ಸಭೆಗಳಲ್ಲಿ ನಾವು ಭಾಗವಹಿಸಿದರೆ ಅಲ್ಲೆಲ್ಲ ಬೇರೆ ಬೇರೆ ವಿಷಯಗಳನ್ನು ಕುರಿತು ಮಾತನಾಡುವ ವಿದ್ವತ್ತು ಅವರಲ್ಲಿತ್ತು. ಭೂಸುಧಾರಣೆಯ ಬಗ್ಗೆ ಖಚಿತವಾಗಿ ಮಾತನಾಡುತ್ತಿದ್ದರು. ಹೆಚ್ಚಿನದಾಗಿ ಗೇಣಿದಾರರ ಸಮಸ್ಯೆಗಳನ್ನು ತೆಗೆದುಕೊಂಡು ಅವರದೇ ಮಾತುಗಳ ಮೂಲಕ ಸೂಕ್ಷ್ಮವಾಗಿ ವಿವರಿಸುತ್ತಿದ್ದರು.

ಮತದಾರರು ಕೊಟ್ಟ ಓಟಿನ ಋಣ ಅನ್ನೋದು, ತಾಯಿಯ ಋಣಕ್ಕಿಂತ ದೊಡ್ಡದೆಂದು ನಮಗೆ ಹೇಳುತ್ತಿದ್ದರು.

ಮೂಡುಬಾಗಿಲು ರಾಮಪ್ಪ

 

ಇಂದಿನ ಸಂಕೀರ್ಣ ಸ್ವಾರ್ಥ ರಾಜಕಾರಣ ಪ್ರಪಂಚದಲ್ಲಿ ಅವರ ಮೌಲ್ಯಯುತ ಆದರ್ಶ ಬದುಕು ಮನನೀಯ, ಮಾರ್ಗದರ್ಶಕ, ಗೋಪಾಲಗೌಡರ ಸಂಪರ್ಕ ಎಷ್ಟೋ ಜನರ ಜೀವನ ವಿಧಾನಗಳನ್ನೇ ಬದಲಿಸಿದೆ… ನನ್ನ ವಿದ್ಯಾರ್ಥಿ ಜೀವನದಲ್ಲಿಯೇ ನಾನು ಗೌಡರ ಪ್ರಭಾವಕ್ಕೆ ಅರಿವಿಲ್ಲದೆ ಮಣಿದು ಹೊರಬಿದ್ದಿದ್ದೆ.

ಅವರ ಆಳವಾದ ಅನುಭವ, ವಿಚಾರ ಶ್ರೀಮಂತಿಕೆಯನ್ನು ಕಂಡಾಗಲೆಲ್ಲ ನನ್ನ ಕಣ್ಮುಂದೆ ನಿಲ್ಲುವ ಚಿತ್ರ. ವಿಶಾವಾದ ಸಮುದ್ರ. ಅವರ ಭಾಷಣ ಶಾಸನಸಭೆಯಲ್ಲಿ ಇದೆ ಎಂದರೆ ಆಳುವ ಮತ್ತು ವಿರೋಧಪಕ್ಕದ ಸದಸ್ಯರಿಗೆ ಹಬ್ಬ. ಸದನದ ಸದಸ್ಯರು ಅವರ ಭಾಷಣವನ್ನು ತದೇಕ ಚಿತ್ತದಿಂದ ವಿರೋಧಪಕ್ಷದ ಸದಸ್ಯರಿಗೆ ಹಬ್ಬ. ಸದನದ ಸದಸ್ಯರು ಅವರ ಭಾಷಣವನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದರು… ಗೌಡರ ಭಾಷಣ ಆದಮೇಲೆ ತತ್‌ಕ್ಷಣದಲ್ಲಿಯೇ ಶಾಸನಸಭೆಯ ಕುರ್ಚಿಗಳೆಲ್ಲ ಖಾಲಿಯಾಗಿ ಬಿಡುತ್ತಿದ್ದವು. ಸಭಾಧ್ಯಕ್ಷರಾದ ಶ್ರೀ ವೈಕುಂಠಬಾಳಿಗರೇ ನನ್ನ ಹತ್ತಿರ ಹೇಳಿದ ಒಂದು ಮಾತು ನೆನಪಿಗೆ ಬರುತ್ತದೆ: ಸಭೆಯಲ್ಲಿ ಕೋರಂ ಬೇಕು ಎಂದಾಗ ಗೌಡರ ಭಾಷಣವಿದೆಯೆಂದು ಹೇಳಿದರೆ ಸಾಕು ಕೋರಂ ಇರುತ್ತದೆ. ಎಂದಿದ್ದರು.

ಅನ್ಯಾಯದ ವಿರುದ್ಧ ಯಾವುದೇ ಕಾಲದಲ್ಲಿ, ಯಾವುದೇ ಪಕ್ಷ ಅಥವಾ ವ್ಯಕ್ತಿಯ ಮೇಲೆ ಬಂಡೇಳುವ ಪ್ರವೃತ್ತಿ ಅವರದು. ಆದುದರಿಂದಲೇ ಅವರು ಎಲ್ಲ ಪಕ್ಷಗಳ, ವ್ಯಕ್ತಿಗಳ ಆದರಣೀಯ ಗೌರವಕ್ಕೆ ಪಾತ್ರರಾಗಿದ್ದರು.

ಎಸ್. ಬಂಗಾರಪ್ಪ

 

ಶಾಂತವೇರಿ ಗೋಪಾಲಗೌಡರು ಸರಳಜೀವಿ. ವಾಗ್ಮಿ, ಆದರ್ಶ ಶಾಸಕ, ಚಿಂತನಶೀಲ ವ್ಯಕ್ತಿ.

ಬಡವರ ಮೇಲೆ ಅವರಿಗಿದ್ದಂತಹ ಅನುಕಂಪವನ್ನು, ಇನ್ನಾವ ರಾಜಕಾರಣಿಯಲ್ಲೂ ನಾನು ಕಾಣಲಿಲ್ಲ. ಅವರು ಈ ಬಡಜನತೆಯ ಉದ್ಧಾರಕ್ಕೆ ಸಮಾಜವಾದ ತಾರಕಮಂತ್ರವೆಂದು ನಂಬಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ದುಡಿದ ವ್ಯಕ್ತಿ. ಅವರು ಪ್ರತಿನಿಧಿಸಿ ಬಂದ ಸ್ಥಾನಕ್ಕೆ ಚ್ಯುತಿಬರದಂತೆ ನಡೆದುಕೊಂಡು ಆ ಸ್ಥಾನಕ್ಕೆ ಗೌರವ ತಂದುಕೊಟ್ಟರು. ಶಾಸಕ ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದರು.

ಅವರದು ಕುತಂತ್ರವಿಲ್ಲದ ಶುಭ್ರ ರಾಜಕೀಯ ಜೀವನ. ರಾಜಕೀಯ ಜೀವನದಲ್ಲಿ ತನಗಾಗಿ ಏನನ್ನೂ ಬಯಸದ ವಿರಾಗಿ ಅವರಾಗಿದ್ದರು.

ನಿಜವಾಗಿ ಅವರ ಮಾರ್ಗದರ್ಶನ ಬೇಕಾಗುವ ಕಾಲದಲ್ಲಿ, ಅವರು ಅಕಾಲ ಮರಣಕ್ಕೊಳಗಾದುದು ನಾಡಿನ ದೌರ್ಭಾಗ್ಯ.

ಡಿ. ದೇವರಾಜ ಅರಸು

 

ಗೋವಾ ವಿಮೋಚನಾ ಸರ್ವಪಕ್ಷೀಯ ಚಳವಳಿಗೆ’’ ಶ್ರೀ ಗೋಪಾಲಗೌಡರೇ ಮೂರ್ತಸ್ವರೂಪ ಕೊಟ್ಟವರು. ಆಗಲೇ ಭಾಗ್ಯಜ್ಯೋತಿಯನ್ನು ನಾನು ಮೊದಲು ಕಂಡದ್ದು. ಸಾವಿರಾರು ಸತ್ಯಾಗ್ರಹಿಗಳು ಪಾಲುಗೊಳ್ಳುವಂತೆ ಚಳುವಳಿಯನ್ನು ರೂಪಿಸಿದ್ದ ಅವರ ಸಂಘಟನಾ ಶಕ್ತಿಗೆ ದ್ಯೋತಕ.

ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಎಡ್ಮಂಡ್ ಬರ್ಕ್ ಎಂತೋ ಅಂತೆಯೇ ಕರ್ನಾಟಕದ ಶಾಸನಸಭೆಗೆ ಗೋಪಾಲಗೌಡರು. ಅವರು ಎಂದೂ ಮಾತಿಗಾಗಿ ಮಾತಾಡಿದವರಲ್ಲ.

ಅವರು ಇಡೀ ಮಾನವ ಕುಟುಂಬದ ಮಾನವೀಯತೆಯ ವಿಕಾಸವನ್ನು ಹಾರೈಸಿದರು. ಅವರ ನಂತರ ಅಂಥ ಮೋಹಕ ವ್ಯಕ್ತಿಯನ್ನಾಗಲಿ, ಮಾತಿನ ಗಾರುಡಿಗನನ್ನಾಗಲಿ, ಹಾಗೂ ಆದರ್ಶದ ಹೋರಾಟಗಾರರನ್ನಾಗಲಿ ಮತ್ತೊಬ್ಬನನ್ನು ಕಾಣಲಿಲ್ಲ.

ಎಸ್.ಆರ್. ಬೊಮ್ಮಾಯಿ

 

೧೯೫೮ರಲ್ಲಿ ನಾನು ಮಂತ್ರಿಯಾಗಿದ್ದೆ. ಶೋಷಿತ ವರ್ಗದ ಜನರ ಮನಸ್ಸಿನಲ್ಲಿ ವಿಚಾರವಾದದ ಬೀಜವನ್ನು ಬಿತ್ತುವುದರಿಂದ ಮಾತ್ರ ಸಾಮಾಜಿಕ ಕ್ರಾಂತಿ ಸಾಧ್ಯ ಎಂದು ಅರಿತಿದ್ದೆ. ಆ ದಿಸೆಯಲ್ಲಿ ಪ್ರಯತ್ನ ಮಾಡಿದೆ. ಸ್ಥಿರ ಆಚಾರ-ವಿಚಾರಗಳಿಂದ ಲಾಭವನ್ನು ಪಡೆಯುತ್ತಿದ್ದ, ಪಟ್ಟಭದ್ರ ಜಾತಿಶಕ್ತಿಗಳು ನನ್ನ ವಿರುದ್ಧ ಅಪಪ್ರಚಾರದ ಸಮರವನ್ನೇ ಸಾರಿದರು. ಆಗ ಕೆಲವು ಪ್ರಗತಿಶೀಲವಾದಿಗಳು ನನ್ನನ್ನು ಬೆಂಬಲಿಸಿದರು; ಅವರಲ್ಲಿ ಗೋಪಾಲಗೌಡರು ಅಗ್ರಗಣ್ಯರು.

ಬಡತನದಲ್ಲಿದ್ದು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದವರು ಗೋಪಾಲಗೌಡರು.

ನಾನು ಪ್ರಥಮಬಾರಿಗೆ ಅವರನ್ನು ಕಂಡಾಗ ಅದುವರೆಗೆ ನಾನು ಕೇಳಿದ ಓದಿದ ವಿಚಾರಗಳ ಎರಕವಾಗಿತ್ತು ಅವರ ವ್ಯಕ್ತಿತ್ವ. ಏನೋ ಉದ್ದೇಶಗಳಿಂದ ಪ್ರೇರಿತವಾದ ಮುಖಮುದ್ರೆ, ಅಸಾಧಾರಣವಾದ ಗಾಂಭೀರ್ಯದ ವರ್ತನೆಗಳು, ನನ್ನನ್ನು ಅವರ ಸ್ನೇಹಪರವಶನನ್ನಾಗಿ ಮಾಡಿದವು.ಸರಿ, ಅಂದಿನಿಂದ ಸೀಮಿತ ಕ್ಷೇತ್ರಗಳಲ್ಲಿ ನಾವಿಬ್ಬರೂ ನಡೆ-ನುಡಿಗಳಲ್ಲಿ ಭಾಗಿಯಾದೆವು. ವೈಯಕ್ತಿಕ ಅಥವಾ ಸಾಮಾಜಿಕ ಗುಟ್ಟುಗಳು ಅವರಿಗೆ ಇರಲಿಲ್ಲ. ಸ್ನೇಹಿತರೊಂದಿಗೆ ಸುಖದುಃಖಗಳಲ್ಲಿ ಸಮಭಾಗಿಯಾಗಿ ಬಾಳುವ ಸಹೃದಯತೆ ಅವರದು.

ನಾನು ಅವರ ಜನ್ಮಸ್ಥಳ ಶಾಂತವೇರಿಗೆ ಭೇಟಿಕೊಟ್ಟು, ಅವರ ತಾಯಿಯನ್ನು ಕಾಣಲು ಹೋದೆ. ಆಗ ನಾನು ಮಂತ್ರಿಯಾಗಿದ್ದೆ.ಹಳ್ಳಿಗೆ ಹೊಂದಿಕೊಂಡ ತಕ್ಕಮಟ್ಟಿಗೆ ವಿಶಾಲವಾದ ಹಳೆಯ ಗುಡಿಸಲು, ಗೋಡೆಗಳು ಸುಣ್ಣ ಕಂಡು ಬಹಳ ವರ್ಷಗಳಾಗಿದ್ದಂತೆ ಕಂಡಿತು. ಈಚಲು ಚಾಪೆಯ ಮೇಲೆ ಕುಳಿತಿದ್ದ ಹಣ್ಣು ಮುದುಕಿಯನ್ನು ಕಂಡು, ಇವರು ಗೋಪಾಲಗೌಡರ ತಾಯಿಯಲ್ಲವೆ? ಎಂದು ಅಲ್ಲಿದ್ದವರನ್ನು ಕೇಳಿದೆ. ಹೌದು ಎಂದು ಉತ್ತರಿಸಿದರು. ಗೌಡರು ತನ್ನ ಸಂಸಾರಕ್ಕಾಗಿ ಒಂದು ಸ್ವಂತ ಮನೆಯನ್ನೂ ಕಟ್ಟಿಕೊಳ್ಳುವ ಪ್ರಯತ್ನ ನಡೆಸದೆ ಬಡತನದಲ್ಲಿಯೇ ಕೊನೆಯುಸಿರೆಳದಿದ್ದು ಅವರ ಪ್ರಾಮಾಣಿಕತೆಗೆ ನಿದರ್ಶನ.

ಬದುಕಿದ್ದಾಗ ಗೌಡರು ಒಮ್ಮೆ ನಮ್ಮ ಮನೆಗೆ ಬಂದರು: ಆದರಿಸಿದೆ; ಅನಂತರ, “ಏನು ಬಸವಲಿಂಗಪ್ಪನವರೇ… ನಾನು ಪ್ರಯಾಣ ಮಾಡುವವನಿದ್ದೇನೆ…ಸ್ವಲ್ಪ ಹಣಬೇಕು… ಅದನ್ನು ವಾಪಸ್ ಮಾಡುವೆ’’ ಎಂದರು. “ಗೌಡರೆ, ಎಷ್ಟು ಹಣ ಬೇಕು ತೆಗೆದುಕೊಂಡು ಹೋಗಿ. ದೇಶದ ಕೆಲಸ ಮಾಡುವವರು ನೀವು ವಾಪಸ್ ಕೊಡುವ ಪದ್ಧತಿಯನ್ನು ಇಟ್ಟುಕೊಳ್ಳಬೇಡಿ’’ ಎಂದೆ. ಅಲ್ಲದೆ ಅವರ ಹತ್ತಿರ ಅಷ್ಟು ಇಷ್ಟು ಹಣವಿದ್ದಾಗ ತೆಗೆದು ಎಲ್ಲವನ್ನೂ ಸ್ನೇಹಿತರ ಮುಂದಿಟ್ಟು, ‘ಇಷ್ಟರಲ್ಲಿ ನೀವು ಖರ್ಚು ಮಾಡಿಕೊಳ್ಳಿರಿ’ ಎಂದು ಹೇಳುತ್ತಿದ್ದುದನ್ನು ಕಂಡಿದ್ದೇನೆ.

ನನಗೆ ರಾಜಕೀಯ ಕ್ಷೇತ್ರದಲ್ಲಿ ಪರಿಚಿತರಾದವರಲ್ಲಿ ಶಾಂತವೇರಿ ಗೋಪಾಲಗೌಡರು ವಿಶಿಷ್ಟ ವ್ಯಕ್ತಿ. ಸಮಾಜಹಿತದ ಬೆಳವಣಿಗೆಯ ವಿಷಯಗಳಲ್ಲಿ ಅವರಿಗೆ ಅಚಲ ನಂಬಿಕೆ. ಉತ್ತಮ ಭವಿಷ್ಯದ ಕನಸುಗಳು, ಗುರಿ, ನಿಷ್ಠೆ ಅವರ ಜೀವನದ ಅಡಿಪಾಯಗಳು. ನಿಷ್ಠಾವಂತ, ನಿಗರ್ವಿ, ಸತ್ಯವಂತ, ಸರಳಸ್ವಭಾವದವರಾದ ಮಹಾಮೇಧಾವಿ ಗೋಪಾಲಗೌಡರು ನನ್ನ ದೃಷ್ಟಿಯಲ್ಲಿ ಚೊಕ್ಕಚಿನ್ನ: ನಮ್ಮ ಜೀವಿತದ ಅವಧಿಯಲ್ಲಿ ಇಂಥವರನ್ನು ಮತ್ತೆ ಕಾಣಲಾರೆವೆಂದೇ ನನ್ನ ಭಾವನೆ.

ಬಿ. ಬಸವಲಿಂಗಪ್ಪ

 

ಸಮಾಜವಾದದ ಬಗ್ಗೆ ತತ್ವನಿಷ್ಟೆಯೊಡನೆ ಭಾವನಾತ್ಮಕವಾಗಿಯೂ ತಲ್ಲೀನನಾಗಿದ್ದು, ಜೊತೆಗೆ ಅತ್ಯಂತ ಮಾನವೀಯತೆಯನ್ನು ಉಳಿಸಿಕೊಂಡಿದ್ದ ಗೋಪಾಲಗೌಡರು ಅಪರೂಪದ ಸಮಾಜವಾದಿ ನಾಯಕರು.

ಸಿ.ಜಿ.ಕೆ. ರೆಡ್ಡಿ

 

ಗೌಡರು ಮಹಾಸ್ವಾಭಿಮಾನಿ. ತಮ್ಮ ಮನಸ್ಸಿಗೆ ಒಪ್ಪದಿದ್ದುದನ್ನು ಎಂದೂ ಮಾಡುತ್ತಿರಲಿಲ್ಲ. ಮುಂಗೋಪಿ, ಸ್ನೇಹಜೀವಿ ಮತ್ತು ನಿಸ್ವಾರ್ಥ ರಾಜಕಾರಣಿ. ಉಳುವವನೆ ಹೊಲದೊಡೆಯ ಎನ್ನುವ ಕ್ರಾಂತಿಕಾರಿ ಘೋಷಣೆಯನ್ನು ಆತ ಕಾಗೋಡು ಸತ್ಯಾಗ್ರಹದಲ್ಲಿ ತಂದವರು. ಗೇಣಿದಾರರ ಕಷ್ಟಗಳನ್ನು ಅವರ,ಟು ಆಳವಾಗಿ ಅರಿತವರು ಬಹಳ ವಿರಳ.

ಗೋಪಾಲಗೌಡರು, ಜಿ. ಸದಾಶಿವರಾಯರು ಮತ್ತು ಎನ್.ಕೆ. ಸೀತಾರಾಮಯ್ಯಂಗಾರರ ಮುಂದಾಲೋಚನೆಯ ಕಾರಣವಾಗಿ ಕಾಗೋಡು ಚಳವಳಿಗೆ ಹೊಸ ಸ್ವರೂಪವೇ ಒದಗಿತ್ತು. ಕಾಗೋಡಿನಲ್ಲಿ ಸ್ವತಃ ಲೋಹಿಯಾರವರೇ ಭೂಮಾಲಿಕರ ಬೇಲಿ ಕಿತ್ತು ಭೂಮಿ ಪ್ರವೇಶ ಮಾಡಿದರು.

ಕಾಗೋಡು ಚಳವಳಿಯಿಂದಾಗಿ ಮಲೆನಾಡಿನ ಭಾಗದ ರೈತರಿಗೆ ಆತ್ಮವಿಶ್ವಸ ಮೂಡಿ, ಅವರಲ್ಲಿ ಅರಿವು ಬಂದಿತು ಇದೇ ಕಾಗೋಡು ಚಳವಳಿ ಮಾಡಿದ ಬಹುದೊಡ್ಡ ಕೆಲಸ.

ಟಿ. ವೆಂಕಟಪ್ಪ

 

ಅವರದು ಯಾವುದೇ ವಿಷಯವನ್ನೆತ್ತಿಕೊಂಡರೂ ಅದರ ಆಳಕ್ಕೆ ಹೋಗಿ ವಿವೇಚಿಸುವ ಮನೋಭಾವ. ಇತಿಹಾಸದ ಬಗ್ಗೆ ಆಳವಾಗಿ ಅಭ್ಯಾಸಮಾಡಿದ್ದರು. ದೇಶದಲ್ಲಿ ಸಮಾಜವಾದ ಬರಬೇಕಾದರೆ ಭೂಸಮಸ್ಯೆ ಮುಖ್ಯವಾಗಿ ಪರಿಹಾರವಾಗಬೇಕು, ಉಳುವವನೇ ಹೊಲದೊಡೆಯನಾಗಬೇಕು ಎಂದು ತತ್ವದಲ್ಲಿ ಅಚಲವಾದ ನಂಬಿಕೆಯನ್ನಿಟ್ಟುಕೊಂಡಿದ್ದರು. ಸಂಗೀತ, ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರೂ ಕೂಡ, ಅವರು ಇಂಗ್ಲೀಷ್ ಬಳಕೆಯನ್ನು ಮಾಡುತ್ತಿರಲಿಲ್ಲ. ಆಡಳಿತ ಭಾಷೆ ಜನಭಾಷೆಯೇ ಆಗಿರಬೇಕೆಂದು ಪ್ರತಿಪಾದಿಸುತ್ತಿದ್ದರು.

ಎನ್.ಎನ್. ಕಲ್ಲಣ್ಣವರ್

 

ಗೋಪಾಲಗೌಡರಿಲ್ಲದ ಸಭೆ ವಿಧಾನಸಭೆಯಲ್ಲ.
ಇವರಂಥ ಸಮಾಜವಾದಿ ಇನ್ನು ಹುಟ್ಟೋದಿಲ್ಲ.

ವಾಟಾಳ್ ನಾಗರಾಜ್

 

ದಲಿತರು ಮತ್ತು ದುರ್ಬಲರಿಗಾಗಿ ಸದಾ ದುಡಿದ ಹೋರಾಟಗಾರ.
ಎಂಥ ಸಂದರ್ಭ ಬಂದರೂ ಈ ದಾರಿಯನ್ನು ಬಿಡದ ಪ್ರಾಮಾಣಿಕ ರಾಜಕಾರಣಿ

ಕೆ.ಎಚ್. ರಂಗನಾಥ

 

ಕಾಗೋಡು ರೈತಚಳವಳಿಯಿಂದ ಆರಂಭವಾದ ನಮ್ಮ ಹೋರಾಟ ಗುಲಾಮ ಸಂಸ್ಕೃತಿಯ ಸಂಕೇತವಾದ ಮೈಸೂರು ದಸರಾವನ್ನು ಪ್ರತಿಭಟಿಸುವವರೆಗೂ ಮುಂದುವರಿಯಿತು. ನಮ್ಮಲ್ಲಿ ಸ್ಫೂರ್ತಿ ಮತ್ತು ಹೋರಾಟದ ಕೆಚ್ಚನ್ನು ತುಂಬಿದವರು ಡಾ. ಲೋಹಿಯಾ ಮತ್ತು ಗೋಪಾಲಗೌಡರು.

ಇವರಿಬ್ಬರೂ ನಮ್ಮನ್ನು ಬಿಟ್ಟುಹೋದರು. ಆದರೆ ನಾವು ಮಾತ್ರ ಅವರನ್ನು ಬಿಟ್ಟುಹೋಗಲು ಆಗಿಲ್ಲ: ಈಗಲೂ ನಮಗೆ ಅವರೇ ನಾಯಕರು

ವೇದಾಂತ ಹೆಮ್ಮಿಗೆ

 

ಗೋಪಾಲಗೌಡರು ನಮಗೆ ಚಳವಳಿ ಮಾಡೋದನ್ನು ಕಲಿಸಿದರು. ನಾನು ಗೋಪಾಲಗೌಡರ ಸೋಷಲಿಸ್ಟ್ ಪಾರ್ಟಿಯಲ್ಲಿ ಇಪ್ಪತ್ತೈದು ವರ್ಷ ಕೆಲಸ ಮಾಡಿದ್ದೇನೆ. ನಾನು ‘ಉಳುವವನೆ ನೆಲದೊಡೆಯ’ ಚಳವಳಿಯಲ್ಲಿ ಭಾಗವಹಿಸಿ ನನ್ನ ಕೂಸಿನೊಂದಿಗೆ ಜೈಲಿನಲ್ಲಿದ್ದೆ. ನನ್ನ ಜೊತೆಯಲ್ಲಿ ನಾರಾಯಣಮೂರ್ತಿ, ಮಿಣಕಮ್ಮನೂ ಸೇರಿ ಒಟ್ಟು ಮೂವತ್ತೊಂದು ಜನ ಜೈಲಿನಲ್ಲಿದ್ದೆವು. ನಮ್ಮನೆಲ್ಲಾ ಬಳ್ಲಾರಿ ಜೈಲಿನಲ್ಲಿ ಒಂದು ತಿಂಗಳು ನಾಲ್ಕು ದಿವಸ ಇಟ್ಟಿದ್ದರು. ಗೋಪಾಲಗೌಡರು ಹೇಳಿದ್ದಂತೆ ನಾವೆಲ್ಲ ‘ಉಳುವವನೆ ಹೊಲದೊಡೆಯ’ ಅಂತ ಘೋಷಣೆ ಕೂಗುತ್ತಾ ಶಿವಮೊಗ್ಗ ಡಿ.ಸಿ. ಆಫೀಸಿಗೆ ಮೆರವಣಿಗೆ ಹೊರಟೆವು. ನಮ್ಮ ಮೆರವಣಿಗೆ ಮಧ್ಯೆ ಗೋಪಾಲಗೌಡರು ವೇಷಮರೆಸಿಕೊಂಡು ಬರುತ್ತಿದ್ದರು. ಅವರು ಮೆರವಣಿಗೆಯಲ್ಲಿ ಇದ್ದದ್ದು ನಮಗೂ ಗೊತ್ತಿರಲಿಲ್ಲ. ಅಲ್ಲಿ ನಮ್ಮನ್ನು ಬಂಧಿಸಿದರು. ಕೋರ್ಟ್‌ನ ತೀರ್ಪಿನಂತೆ ನಮ್ಮನ್ನು ಬಳ್ಳಾರಿ ಜೈಲಿಗೆ ಕಳಿಸಿದರು. ಮಿಣಕಮ್ಮ ತನ್ನ ನಾಲ್ಕು ತಿಂಗಳ ಹೆಣ್ಣು ಕೂಸಿನೊಂದಿಗೆ ಜೈಲಿನಲ್ಲಿದ್ದಳು. ಕೋರ್ಟ್‌ನಲ್ಲಿ ಧೈರ್ಯವಾಗಿ ಹೇಗೆ ಮಾತಾಡಬೇಕು ಅಂತ ಗೌಡರು ನಮಗೆಲ್ಲಾ ಕಲಿಸಿದ್ದರು. ಇವತ್ತಿಗೂ ಅವರೇ ನಮ್ಮ ನಾಯಕರು.

ಚಿನ್ನಮ್ಮ ಆರಗ

 

ನಾನು ಕನ್ನಡ ಜಿಲ್ಲೆಯವಳು. ಮದುವೆ ಆದ ಮೇಲೆ ಇಲ್ಲಿಗೆ ಬಂದೆ. ನಮ್ಮ ಯಜಮಾನರು ಬೀರಪ್ಪ. ನಾನು ಮೇನಕಾ. ಗೋಪಾಲಗೌಡರು ನ್ನನ್ನು ಮಿಣಕಮ್ಮ ಅಂತ ಕರೆಯೋರು.

ನಾವು ಕೂಲಿ ಮಾಡಿ ಬದುಕುವ ಜನ. ಗೌಡರು – ನಾನೂ ಒಂದೇ; ನಮ್ಮಂಗೆ ಅವರಿಗೂ ಏನೂ ಇರಲಿಲ್ಲ. ಅಂಥ ಮನುಷ್ಯಾ ಭೂಮಿ ಮೇಲೆ ಒಬ್ಬನೇ ಹುಟ್ಟಿದ್ದು; ಮತ್ಯಾರು ಹುಟ್ಟಿಲ್ಲ. ನಾವಿಬ್ಬರೂ ಬಡವರೆ. ಅವರು ಬೆಂಗಳೂರಿನಿಂದ ತೀರ್ಥಹಲ್ಳಿಗೆ ಬಂದಾಗಲೆಲ್ಲಾ ನಾವು ಅವರನ್ನು ನೋಡೋಕೆ ಓಡಿಹೋಗಿವೋ; ನಾನು, ವೆಂಕಟರಮಣ, ನಾರಾಯಣ ಮೂರ್ತಿಅಯ್ಯ, ಎಲ್ಲರೂ ಗೌಡರ ಹತ್ತಿರ ಓಡಿಹೋಗ್ದಿದ್ವಿ. ಗೌಡರು, ‘ಜೈಲಿಗೆ ಹೋಗೋಣ ಬಾ’ ಅಂತ ಕರೆಯೋರು, ನಾನು ಹೋಗ್ತಿದ್ದೆ. ನನ್ನ ಜೈಲಿಗೆ ಹಾಕಿದ್ರು, ಎಲ್ಲಿಗೆ ಹೋಗಬೇಕಾದರೂ ನನ್ನನ್ನು ಜೊತೇಲಿ ಕರಕೊಂಡು ಹೋಗೋರು ನಮ್ಮ ಗೌಡ್ರು. ಅವರೇ ನನ್ನ ಗುರು. ಅವರು ಬಂದ್ರೆ ನಮಗೆ ದೇವ್ರು ಬಂದಂಗೆ. ಬಡವರು: ಅಂದ್ರೆ ಬಡವರು. ಒಂದು ಸಿಗರೇಟು ಸೇದೋಕೆ ಕಾಸಿಲ್ಲದೆ, ನಮ್ಮ ಮುಖನೋಡಿ ನನಗೆ ಬಸ್‌ಛಾರ್ಜು ಕೊಡೋಕೆ ಜೇಬಿಗೆ ಕೈಹಾಕೋರು: ಆದರೆ, ಅವರು ಜೇಬಿನಲ್ಲಿ ದುಡ್ಡು ಇರ‍್ತಾ ಇರಲಿಲ್ಲ. ನನ್ನ ಹತ್ತಿರಾನು ದುಡ್ಡು ಇರ‍್ತಾ ಇರಲಿಲ್ಲ. ನಮ್ಮನ್ನೆಲ್ಲಾ ಕಾಡುಪಾಲು ಮಾಡಿಹೋದ್ರು!

ತುದಿಗದ್ದೆ ಮಿಣುಕಮ್ಮ

 

ಗೋಪಾಲಗೌಡರು ಆರಗದ ಎನ್.ಟಿ.ಎಂ.ಎಸ್. ಶಾಲೆಯಲ್ಲಿ ನನಗೆ ಮೇಸ್ಟ್ರರಾಗಿದ್ದರು. ನಾನಾಗ ಐದನೆಯ ತರಗತಿಯಲ್ಲಿದ್ದೆ. ನನ್ನ ರಾಜಕೀಯ ಗುರುಗಳೂ ಅವರೇ. ಕಾಗೋಡು ಚಳವಳಿಯಲ್ಲಿ ಭಾಗವಹಿಸಲು ನಾವೆಲ್ಲ ಇಲ್ಲಿಂದ ಹೋಗಿದ್ದೆವು. ನನಗಾಗ ಹದಿನೆಂಟು ವರ್ಷ. ನಾವೆಲ್ಲ ಕೆಂಬಾವುಟ ಹಿಡಿದು –

ಉಳುವವನೆ ನೆಲದೊಡೆಯ
ಚಲೋ ಚಲೋ ಜೈಲ್ ಚಲೋ
ಇಂಕಿಲಾಬ್ ಜಿಂದಾಬಾದ್
ಡಾ. ಲೋಹಿಯಾ ಜಿಂದಾಬಾದ್
ಗೋಪಾಲಗೌಡ ಜಿಂದಾಬಾದ್

ಎಂದು ಕೂಗುತ್ತಾ ಕಾಗೋಡಿಗೆ ಹೊರಟೆವು. ನನ್ನನ್ನು ಅಲ್ಲಿ ಬಂಧಿಸಿ, ಲೋಹಿಯಾ ಸಾಹೇಬರ ಜೊತೆ ಜೈಲಿನಲ್ಲಿಟ್ಟಿದ್ದರು.

ಈ ಕ್ಷೇತ್ರದಲ್ಲಿ ಜಿ. ಸದಾಶಿವರಾಯರು ಸಮಾಜವಾದಕ್ಕಾಗಿ ತ್ಯಾಗಮಾಡಿದ ಮಹಾನುಭಾವರು. ನಮ್ಮ ಗೋಪಾಲಗೌಡರು ಸದಾಶಿವರಾಯರ ಶಿಷ್ಯರು. ಇವರಿಬ್ಬರೂ ನನಗೆ ಗುರುಗಳು. ಗೋಪಾಲಗೌಡರು ಇಲ್ಲದ್ದರಿಂದ ನಾವೆಲ್ಲ ತಬ್ಬಲಿಗಳಾಗಿದ್ದೇವೆ.

ಕಾಳಮ್ಮನ ಗುಡಿ ವೆಂಕಟರಮಣ

 

ಅವರಂಥ ಜನ ಇನ್ಯಾರೂ ಬರೋದಿಲ್ಲ!

ಗೋಪಾಲಗೌಡರ ಪ್ರಾಮಾಣಿಕತೆ, ಅವರ ಪ್ರೀತಿ ವಿಶ್ವಾಸಕ್ಕೆ ನಾವೆಲ್ಲ ಸೋಷಲಿಸ್ಟ್ ಪಾರ್ಟಿ ಸೇರಿದೆವು. ಅವರಲ್ಲಿ ಜಾತಿಭೇದ ಇರಲಿಲ್ಲ. ಅವರ ಈ ಗುಣದಿಂದಲೇ ನಾವು ಅವರ ಹಿಂದೆ ಹೋದೆವು. ಬಡವರು ಅಂದರೆ ಕರಗಿ ಹೋಗುತ್ತಿದ್ದರು. ಯಾರಾದರೂ ಪರಿಚಿತರ ಮದುವೆಗೆ ಹೋದರೆ, ಅಲ್ಲಿ ಅವರಿಗೆ ಕುಳಿತುಕೊಳ್ಳುವುದಕ್ಕೆ ಕುರ್ಚಿ ಕೊಟ್ಟರೂ ಕುಳಿತುಕೊಳ್ಳುತ್ತಿರಲಿಲ್ಲ. ನಮ್ಮೊಟ್ಟಿಗೆ ಬಂದು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದರು. ಅವರ ಎಲ್ಲ ಚುನಾವಣೆಗಳಲ್ಲೂ ನಾನು ಅವರೊಡನೆ ಇದ್ದೆ. ಬದರಿಯವರು ಕಾಲದಲ್ಲಿ ನನಗೆ ಒಂದು ಸಾವಿರ ಕೊಡುತ್ತೇನೆ. ಗೋಪಾಲಗೌಡರ ಪರ ಪ್ರಚಾರ ಮಾಡುವುದನ್ನು ನಿಲ್ಲಿಸು ಅಂದರು : ನಾನು ಕಡೆ ತಿರುಗಿಯೂ ನೋಡಲಿಲ್ಲ. ನನಗೆ ಏಳುಜನ ಹೆಣ್ಣು ಮಕ್ಕಳು. ಅದಕ್ಕೆ ಗೋಪಾಲಗೌಡರು, ‘ಭಟ್ಟರೆ, ನೀವು ಜೈಲಿಗೆಲ್ಲಾ ಬರೋದು ಬೇಡ, ಮನೆಕಡೆ ನೋಡಿಕೊಳ್ಳಿಅಂತ ಹೇಳೋರು.

ಈ ಭಾಗದಲ್ಲಿ ಅವರಷ್ಟು ಪ್ರಬಾವ ಬೀರಿದ ಘನಗಂಭೀರ ವ್ಯಕ್ತಿಯನ್ನು ನಾನು ಕಾಣೆ. ಅವರು ನಮ್ಮ ಸಮಕಾಲೀನರಾಗಿ ಬಾಳಿ ಬದುಕಿದ್ದೇ ನಮ್ಮ ಸುಯೋಗ.

ಗೋಪಾಲಗೌಡರು ಹೋದರು.
ನಾವೆಲ್ಲ ರಾಜಕೀಯ ಬಿಟ್ಟೆವು.

ನೊಣಬೂರು ಪರಮೇಶ್ವರ ಭಟ್ಟ

 

ನನ್ನ ಮತ್ತು ಗೋಪಾಲಗೌಡರ ಸ್ನೇಹ ಒಡನಾಟ ಮೂರು ದಶಕಗಳಿಗಿಂತಲೂ ಮಿಗಿಲಾದದ್ದು. ಗೌಡರು ನನಗೆ ಮಾರ್ಗದರ್ಶಕರಾಗಿ, ರಾಜಕೀಯ ಗುರುವಾಗಿ ನನ್ನ ಒಡನಾಡಿಯಾಗಿ ಇದ್ದವರು.

ಅವರ ಪ್ರಭಾವದಿಂದಲೇ ನಾನು ಸಮಾಜವಾದಿ ಚಳನವಳಿಗೆ ಧುಮುಕಿದೆ. ನನ್ನ ಮತ್ತು ಗೋಪಾಲಗೌಡರ ಸ್ನೇಹದ ಘಟನೆಯೊಂದನ್ನು ನನ್ನ ಸ್ಮೃತಿಪಟಲದಲ್ಲಿ ಮೂಡಿದಂತೆ ಬರೆದಿದ್ದೇನೆ.

ಶಿವಮೊಗ್ಗ ಗಾಂಧಿಬಜಾರ್‌ನಲ್ಲಿ ನನ್ನದು “ಪ್ರಕಾಶ್ ಫ್ರೇಂ ವರ್ಕ್ಸ್’’ ಎನ್ನುವ ಅಂಗಡಿಯಿದೆ. ಒಮ್ಮೆ ಗೋಪಾಗೌಡರು ನನ್ನ ಅಂಗಡಿಗೆ ಬಂದರು. ಅವರು ಹಾಕಿದ್ದ ಬೂಟುಗಳ ತಳ ಹರಿದು ಚಿಂದಿಯಾಗಿತ್ತು. ಗೌಡರು ನನ್ನ ಅಂಗಡಿಯ ಹುಡುಗನನ್ನು ಕರೆದು, “ಇದನ್ನು ಹೇಗಾದರೂ ಮಾಡಿ ರಿಪೇರಿ ಮಾಡಿಸಿ ತಾ’’ ಎಂದು ಅವನಿಗೆ ಕೊಟ್ಟರು. ಹುಡುಗ ಗೌಡರ ತಳಹರಿದ ಬೂಟುಗಳನ್ನು ರಿಪೇರಿ ಮಾಡಿಸಲು ತೆಗೆದುಕಂಡು ಹೋದ. ಹೋದವನು ಕೆಲವೇ ನಿಮಿಷಗಳಲ್ಲಿ ವಾಪಸ್ ಬಂದ. “ಗೌಡರೆ, ಇದನ್ನು ಇನ್ನು ರೀಪೇರಿ ಮಾಡಲು ಆಗುವುದಿಲ್ಲವಂತೆ’’! ಎಂದು ಗೌಡರಿಗೆ ಹೇಳಿದ. ಗೌಡರ ಬೂಟುಗಳ ಸ್ಥಿತಿಯನ್ನು ನೋಡಲಾರದ ನಾನು ಶಿವಮೊಗ್ಗೆಯ ಬಾಟಾ ಅಂಗಡಿಯಲ್ಲಿ ಮೂವತ್ತು ರೂ. ಕೊಟ್ಟು ಅಂಬಾಸಿಡರ್ ಬೂಟುಗಳನ್ನು ಕೊಡಿಸಿದೆ.

ಆಶ್ಚರ್ಯವೆಂದರೆ ಗೋಪಾಲಗೌಡರು, ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ, ರಾಜ್ಯಪಾಲರ ಭಾಷಣವನ್ನು ಪ್ರತಿಭಟಿಸಿ, ಭಾಷಣದ ಪ್ರತಿಯನ್ನು ಹರಿದು, ನಾನು ಅಂದುಕೊಡಿಸಿದ್ದ ಅಂಬಾಸಿಡರ್ ಬೂಟಿನಿಂದಲೇ ತುಳಿದರು. ಇದರಿಂದ ನನಗೆ ನಾನು ಗೌಡರಿಗೆ ಕೊಡಿಸಿದ ಬೂಟುಗಳ ಪರಾಕ್ರಮ ಕೇಳಿ ಸಂತೋಷವಾಯಿತು.

ಅವರ ಸ್ನೇಹದ ಭಾಗ್ಯ ದೊರೆತ ನಾವೆಲ್ಲ ಅಕ್ಷರಶಃ ಭಾಗ್ಯಶಾಲಿಗಳು.

ಡಿ. ರವಳಪ್ಪ

 

ಆಗ ನಮ್ಮ ಸಮಾಜವಾದಿಗಳೆಲ್ಲ ಬಹಳ ಪ್ರಾಮಾಣಿಕರಾಗಿದ್ದರು; ನಾವೆಲ್ಲ ಒಂದೇ ಕುಟುಂಬದವರು ಎನ್ನುವಂತಹ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲಿ ಜಾತೀಯತೆ, ಅಸೂಯೆ, ಒಬ್ಬರನ್ನೊಬ್ಬರು ಕಾಲೆಳೆಯುವ ಪ್ರವೃತ್ತಿಗಳೇ ಇರಲಿಲ್ಲ. ಪಕ್ಷವನ್ನು ಹೀಗೆ ಕಟ್ಟಿ ಬೆಳೆಸಿದವರು ಜಿ. ಸದಾಶಿವರಾಯರು ಮತ್ತು ಗೋಪಾಲಗೌಡರು.

ಆಗ ಗೌಡರ ಸಭೆಗಳಿಗೆ ಜನರನ್ನು ಸೇರಿಸುವ ಅಗತ್ಯವಿರಲಿಲ್ಲ. ಅವರ ಭಾಷಣ ಇದೆ ಅಂದರೆ ಜನ ತಾವಾಗಿಯೇ ಸೇರುತ್ತಿದ್ದರು.

ಅವರು ಹಳ್ಳಿಗೆ ಬಂದಾಗ ಮೊದಲು ಊರಿನ ಯೋಗಕ್ಮ ವಿಚಾರಿಸೋರು. ಜಾತಿ ಭೇದಭಾವ ಕಿಂಚಿತ್ತೂ ಅವರಲ್ಲಿರಲಿಲ್ಲ. ಬಡ ಕಾರ್ಯಕರ್ತರ ಮನೆಯಲ್ಲೂ ಊಟ ಮಾಡುತ್ತಿದ್ದರು. ಗೌಡರ ಸಾವಿರ ನಂತರ ನಾವು ರಾಜಕೀಯದಿಂದ ದೂರ ಉಳಿದಿದ್ದೇವೆ.

ಎಂ.ಟಿ. ರಂಗಪ್ಪಗೌಡ

 

ಸ್ನೇಹಮಯಿ ಗೋಪಾಲಗೌಡರು ಬಡವರ ಬಗ್ಗೆ, ಗತಿಯಿಲ್ಲದವರ ಬಗ್ಗೆ ಅಪಾರವಾದ ಕಾಳಜಿ ಇಟ್ಟುಕೊಂಡಿದ್ದವರು ಗೋಪಾಲಗೌಡರು ಅಂದರೆ ಸಮಾಜವಾದ; ಸಮಾಜವಾದ ಅಂದರೆ ಗೋಪಾಲಗೌಡ ಅನ್ನೋಹಾಗೆ ಇದ್ದ ನ್ಯಾಯವಾದ ರಾಜಕಾರಣಿ ಅವರು. ಈವೊತ್ತಿನ ರಾಜಕೀಯ ಸ್ಥಿತಿ ನೋಡಿದರೆ ಗೋಪಾಲಗೌಡರ ಮಹತ್ವ ಗೊತ್ತಾಗುತ್ತೆ. ಈವೊತ್ತು ಅವರು ಇರಬೇಕಾಗಿತ್ತು.

ಒಂದು ಸಾರಿ ಒಕ್ಕಲಿಗರ ಹಾಸ್ಟಲ್ ಆರಂಭಕ್ಕೆ ಗೌಡರನ್ನು ಆಹ್ವಾನಿಸಲು ಕೆಲವು ಮುಖಂಡರು ಹೋಗಿದ್ದರು. ಗೌಡರನ್ನು ಕಂಡು, ಹಾಸ್ಟಲ್ ಉದ್ಘಾಟನೆಗೆ ಬರಬೇಕು ಎಂದು ಕೇಳಿಕೊಂಡರು. ಆಗ ಗೌಡರು ಹೇಳಿದರು: ‘ನಾನು ಬರಬೇಕು ಅಂದ್ರೆ, ಒಕ್ಕಲಿಗರ ಹಾಸ್ಟಲ್ ಅನ್ನೋದನ್ನು ಮೊದಲು ಬದಲಾಯಿಸಿ, ಅದಕ್ಕೆ ಸಾರ್ವಜನಿಕ ಹಾಸ್ಟಲ್ ಅಂತ ಮಾಡಿ, ಆಗ ಬರ್ತೀನಿ’ ಅಂತ ದಿಟ್ಟವಾಗಿ ಹೇಳಿಕಳಿಸಿದರು. ಅಂಥ ನಿರ್ಭಿತಿಯ ರಾಜಕಾರಣಿಯನ್ನು ನಾನು ಕಂಡಿಲ್ಲ.

ಪ್ರಕಾಶ್ ಶೆಟ್ಟಿ

 

ಗೋಪಾಲಗೌಡರಲ್ಲಿ ನಾವು ಕಂಡ ಬಹುದೊಡ್ಡ ಗುಣ ಅಂದರೆ ಅವರು ಎಲ್ಲರನ್ನೂ ಪ್ರೀತಿ ಗೌರವಗಳಿಂದ ಆದರಿಸುತ್ತಿದ್ದದು. ಯಾರನ್ನೂ ದ್ವೇಷ ಮಾಡಿದವರಲ್ಲ. ಅವರ ವಿರೋಧ ಏನಿದ್ದರೂ ಕೇವಲ ತತ್ವಕ್ಕಾಗಿ ಮಾತ್ರ.

ಗೌಡರ ಭಾಷಣ ಅಂದರೆ ಅದೊಂದು ಯಕ್ಷಗಾನದ ಹಾಗೆ: ವ್ಯಂಗ್ಯ, ತಮಾಷೆ, ಸಾಹಿತ್ಯ, ಕಲೆ, ರಾಜಕಾರಣ ಎಲ್ಲವೂ ಇರುತ್ತಿತ್ತು.

ಜವಳಿ ನಾಗೇಂದ್ರನಾಥ್

 

ಶ್ರೀ ಶಾಂತವೇರಿ ಹುಟ್ಟು ಹೋರಾಟಗಾರರು: ಕಟ್ಟಾ ಸಮಾಜವಾದಿ, ಆರ್ಥಿಕವಾಗಿ ಕಡುಬಡವರು. ಹೃದಯ ಶ್ರೀಮಂತಿಕೆ, ಬುದ್ಧಿಶ್ರೀಮಂತಿಕೆ ಎರಡನ್ನೂ ಬೆಳೆಸಿಕೊಂಡವರು. ಆದರೆ ತತ್ವನಿಷ್ಠೆ ವಿಚಾರದಲ್ಲಿ ಕಠೋರ.

ಇಂಟರ್‌ಮೀಡಿಯಟ್‌ವರೆಗೆ ಮಾತ್ರ ಅವರ ವಿದ್ಯೆ. ಆದರೂ ಯಾವ ಪ್ರಾಧ್ಯಾಪಕನೂ ಅಸೂಯೆ ಪಡುವಷ್ಟು ಆಧ್ಯಾತ್ಮ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಅಂತರರಾಷ್ಟ್ರೀಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ದೃಷ್ಟಿಯಿಂದ ಅಭ್ಯಸಿಸಿದವರು ಮಾತ್ರವಲ್ಲ. ಆ ಆಳವಾದ ಅಧ್ಯಯನದಿಂದ ಕಂಡುಕೊಂಡ ಮೌಲ್ಯಗಳನ್ನು ರಾಷ್ಟ್ರದ ನಿತ್ಯಜೀವನದಲ್ಲಿ ತರಲು ಹೃದಯಾಂತರಾಳದಿಂದ ಹಂಬಲಿಸಿದವರು; ಹೃತ್ಪೂರ್ವಕವಾಗಿ ಪ್ರಯತ್ನಪಟ್ಟವರು ಅವರು.

ಎಂದೂ ಅನೀತಿ – ಅಸತ್ಯಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ; ಸ್ನೇಹಿತರನ್ನು ಕೈಬಿಟ್ಟವರಲ್ಲ, ಶತ್ರುಗಳಿಗೆ ಅಂಜಿದವರಲ್ಲ. ಕಷ್ಟದಲ್ಲಿಯೂ ತಾಳ್ಮೆ ಗೆಟ್ಟವರಲ್ಲ; ಮನುಷ್ಯನ ಬದುಕನ್ನು ಕಲೆಯಂತೆ ಅಭ್ಯಸಿಸಿದರು. ಕಪಟ, ಸುಳ್ಳು, ಮೋಸ ತಿಳಿಯದ ಜೀವ ಅದು. ಮನುಷ್ಯ ಚೊಕ್ಕ ಚಿನ್ನ; ನಮ್ಮ ಸಮಾಜದ ದೌರ್ಬಲ್ಯಗಳಾದ ಅಸ್ಪೃಶ್ಯತೆ, ಜಾತೀಯತೆ ಮತ್ತು ಅಂಧಶ್ರದ್ದೆಗಳನ್ನು ಕಂಡು ಮಮ್ಮಲ ಮರುಗಿದ ಅಂತಃಕರಣ.

ಎನ್.ಡಿ. ವೆಂಕಟೇಶ್ 

 

ಅವರು ಸಮಾಜವಾದಿ ಪಕ್ಷದ ಪ್ರಗತಿಯೊಂದಿಗೆ ಹೆಜ್ಜೆಯಿಟ್ಟು ಬೆಳೆದು ಬಂದಿದ್ದ ವ್ಯಕ್ತಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿಯೇ ಕಾಲೇಜು ಬಿಟ್ಟಿದ್ದವರು ಮತ್ತೆ ಮರಳಲಿಲ್ಲ; ಸೋಷಲಿಸ್ಟ್ ಪಾರ್ಟಿಯೇ ಅವರ ಶಾಲೆ, ಮನೆ ಆಗಿತ್ತು. ಅವರು ಶ್ರಮಜೀವಿಗಳ ಪಾರ್ಟಿ ಕಟ್ಟಲು ತಮ್ಮನ್ನು ಅರ್ಪಿಸಿಕೊಂಡರು; ಸಮಾಜವಾದಿ ಚಳವಳಿಯ ಉದಯರಾಗ ಎನಿಸಬಹುದಾದ ಕಾಗೋಡು ಸತ್ಯಾಗ್ರಹ ಗೋಪಾಲಗೌಡರ ಮತ್ತು ಸಮಾಜವಾದಿ ಆಶ್ಯಗಳ ಗೆಳೆಯರ ಕೃಷಿ ಫಲ. ಅಲ್ಲಿಂದ ಅವರು ಇಡೀ ರಾಜ್ಯದ ಶೋಷಿತರ ಅಧಿಕೃತ ನೇತಾರರಾಗಿದ್ದರು.

ವೀರಣ್ಣ ತಿಮ್ಮಾಜಿ