ಒಂದು

೧೯೫೭ರ ಎರಡನೇ ಮಹಾಚುನಾವಣೆಯಲ್ಲಿ ಗೋಪಾಲಗೌಡರು, ಕಾಂಗ್ರೆಸ್ಸಿನ ಎ.ಆರ್. ಬದರಿನಾರಾಯಣ ಅಯ್ಯಂಗಾರ್ ವಿರುದ್ಧ ಸೋತು ಬರಿಗೈ ಆಗಿ ಕುಳಿತಿದ್ದರು. ಆಗಿನ ಸರ್ಕಾರದಲ್ಲಿ ಕಡಿದಾಳು ಮಂಜಪ್ಪನವರು ಕಂದಾಯ ಮಂತ್ರಿಗಳು.

ಗೋಪಾಲಗೌಡರ ಈ ಬರಿಗೈ ಸ್ಥಿತಿ ಅವರ ಆಪ್ತರೊಬ್ಬರಿಗೆ ಚೆನ್ನಾಗಿ ತಿಳಿದಿತ್ತು. ಕಡಿದಾಳು ಮಂಜಪ್ಪನವರಿಗೂ ಆಪ್ತರಾಗಿದ್ದ ಅವರು ಕಡಿದಾಳರ ಹತ್ತಿರ ಹೋಗಿ, ಗೋಪಾಲಗೌಡರು ಕಷ್ಟದಲ್ಲಿದ್ದಾರೆ! ಹೇಗಾದರೂ ಸರಿಯೆ, ಅವರಿಗೆ ಸಹಾಯ ಮಾಡಿ ಎಂದರು.

ಕಡಿದಾಳರು ಆಯಿತು, ನಾಲೆ ಕೆಳಗೆ ೫-೬ ಎಕರೆ ಗದ್ದೆ ಕೊಡಬಹುದು. ಅದಕ್ಕೆ ಗೋಪಾಲಗೌಡರಿಂದ ಅರ್ಜಿ ಹಾಕಿಸಿ. ನಾನು ಜಮೀನು ಕೊಡಿಸ್ತೀನಿ ಅಂದರು.

ಗೋಪಾಲಗೌಡರ ಬಳಿಗೆ ಬಂದ ಅವರ ಆಪ್ತರು, ಕಡಿದಾಳರು ಹೇಳಿದ ವಿಷಯವನ್ನು ಗೋಪಾಲಗೌಡರ ಮುಂದೆ ಪ್ರಸ್ತಾಪಿಸಿದರು: ನಿಮ್ಮ ಕುಟುಂಬಕ್ಕಾದರೂ ಉಪಯೋಗವಾಗಲಿ, ಅರ್ಜಿ ಹಾಕಿ ಅಂತ ಗೌಡರಿಗೆ ದುಂಬಾಲುಬಿದ್ದರು.

ಬಹಳ ಹೊತ್ತಿನ ನಂತರ ಗೋಪಾಲಗೌಡರು ಹೇಳಿದರು : ನೋಡಿ, ನನ್ನೊಬ್ಬನಿಗೆ ನಾಲೆ ಕೆಳಗೆ ಆರು ಎಕರೆ ಕೊಡೋಬದಲು, ಅದೇ ಜಮೀನನ್ನ ಆರು ಜನ ಬಡವರಿಗೆ ಕೊಡೋಕೆ ನಿಮ್ಮ ಮಂತ್ರಿಗಳಿಗೆ ಹೇಳಿ. ಅದರಿಂದ ಆರು ಬಡ ಕುಟುಂಬಗಳಾದರೂ ಬದುಕುಳಿಯುತ್ತವೆ. ನಾನೇನೂ ಸ್ವಂತ ಸಾಗುವಳಿ ಮಾಡುವವನಲ್ಲ, ನನಗೇಕೆ ಜಮೀನು? ಉಳುವವನೆ ಹೊಲದೊಡೆಯನಾಗಬೇಕೆಂಬುದು ನನ್ನ ಹೋರಾಟ. ಹೀಗಿರುವಾಗ, ನಾನು ಉಳುಮೆ ಮಾಡದೆ ಹೊಲದ ಒಡೆಯನಾಗಲು ನನಗೆ ನೈತಿಕ ಹಕ್ಕಿಲ್ಲ.’’

ಎರಡು

ಗೋಪಾಲಗೌಡರು ಮಹಾ ಪುಸ್ತಕಪ್ರೇಮಿ : ಕಲೆ ಇತಿಹಾಸ, ಸಾಹಿತ್ಯಗಳನ್ನು ಕುರಿತಾದ ಅವರ ಓದು ಬಹು ವಿಸ್ತಾರವಾದದ್ದು. ಗೋಪಾಲಗೌಡರಿಗಿದ್ದ ಪುಸ್ತಕ ಪ್ರೀತಿಯನ್ನು ಕುರಿತು ಅವರ ಬಾಲ್ಯದ ಗೆಳೆಯರಬ್ಬರು ಈಘಟನೆಯನ್ನು ನೆನೆಪಿಸಿಕೊಟ್ಟರು.

ಗೋಪಾಲಗೌಡರು ಒಮ್ಮೆ ಮುಖ್ಯ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿತ್ತು. ಎಂದಿನಂತೆ ಅವರ ಜೇಬಿನಲ್ಲಿ ಒಂದು ಬಿಡಿಗಾಸೂ ಇರಲಿಲ್ಲ. ಇದೆಲ್ಲಾಗೊತ್ತಿದ್ದ ಅವರ ಬಾಲ್ಯದ ಗೆಳೆಯ ಗೋಪಾಲಗೌಡರಿಗೆ ಐವತ್ತು ರೂಪಾಯಿ ಕೊಟ್ಟು ಬೆಂಗಳೂರಿಗೆ ಹೋಗೆಂದರು.

22_367_SGNS

ಆ ಹಣ ಪಡೆದ ಗೋಪಾಲಗೌಡರು ಸೀದಾ ರೈಲ್ವೇಷ್ಟೇಷನ್ ಕಡೆಗೆ ಹೊರಟರು. ದಾರಿಯಲ್ಲೇ ಇದ್ದ ಪುಸ್ತಕದಂಗಡಿಯ ಕಡೆಗೆ ಇವರ ಗಮನ ಹೋಯಿತು. ಪುಸ್ತಕದಂಗಡಿಗೆ ಹೋಗಿ ತಮಗೆ ಬೇಕಾಗಿದ್ದ ಮೂರು ನಾಲ್ಕು ಪುಸ್ತಕಗಳನ್ನು ಗೆಳೆಯರು ಕೊಟ್ಟಿದ್ದ ದುಡ್ಡಿನಲ್ಲಿ ಕೊಂಡರು; ಜೇಬು ಖಾಲಿಯಾಯಿತು. ಖಾಲಿ ಜೇಬಿನಲ್ಲಿ ರೈಲ್ವೆ ಸ್ಟೇಷನ್‌ಗೆ ಬಂದು ಪುಸ್ತಕ ಓದುತ್ತಾ ಕುಳಿತರು. ಟಿಕೆಟ್‌ಕೊಳ್ಳದೆ ಪುಸ್ತಕ ಓದುತ್ತಾ ಕುಳಿತಿದ್ದ ಗೋಪಾಲಗೌಡರನ್ನು ಅವರ ಗೆಳೆಯರೊಬ್ಬರು ನೋಡಿದರ. ಗೋಪಾಲಗೌಡರ ಸ್ಥಿತಿಗತಿಗಳನ್ನು ಚೆನ್ನಾಗಿ ತಿಳಿದಿದ್ದ ಅವರು ಗೋಪಾಲಗೌಡರಿಗೆ ಬೆಂಗಳೂರಿಗೆ ಟಿಕೆಟ್ ಕೊಡಿಸಿ ರೈಲು ಹತ್ತಿಸಿದರು.

ಮೂರು

ತೀರ್ಥಹಳ್ಳಿ ತಾಲ್ಲೂಕಿಗೆ ಕಡುಭ್ರಷ್ಟನೊಬ್ಬ ತಹಸೀಲ್ದಾರ್ ಆಗಿ ಬಂದಿದ್ದ. ಲಂಚ ರುಷುವತ್ತುಗಳಿಲ್ಲದೆ ಜನಕ್ಕೆ ಯಾವ ಕೆಲಸವನ್ನೂ ಮಾಡಿಕೊಡುತ್ತಿರಲಿಲ್ಲ. ಇದರಿಂದಾಗಿ ಜನ ರೋಸಿ ಹೋಗಿದ್ದರು. ತಮ್ಮ ಕ್ಷೇತ್ರದ ಶಾಸಕರಾಗಿದ್ದ ಗೋಪಾಲಗೌಡರ ಹತ್ತಿರ ಜನ ಬಂದು ತಹಸೀಲ್ದಾರ್ ವಿರುದ್ಧ ದೂರು ಹೇಳಿದರ. ಅವನನ್ನು ಇಲ್ಲಿಂದ ಬೇರೆಡೆಗೆ ವರ್ಗ ಮಾಡಿಸಿ, ಇನ್ನೊಬ್ಬನನ್ನು ಹಾಕಿಸಿಕೊಡಬೇಕೆಂದು ಕೇಳಿಕೊಂಡರು.

ತಮ್ಮ ಕ್ಷೇತ್ರದ ಜನರಿಂದ ದೂರು ಕೇಳಿದ ಗೋಪಾಲಗೌಡರು ಸ್ವಲ್ಪ ಹೋತ್ತು ಸುಮ್ಮನಿದ್ದು, ನಿಟ್ಟುಸಿರು ಬಿಟ್ಟುಹೇಳಿದರು. ಈ ತಹಸೀಲ್ದಾರ್, ಮಿಡ್‌ವೈಫ್‌ಗಳನ್ನೆಲ್ಲಾ ವರ್ಗಮಾಡಿಸೋ ರಾಜಕಾರಣಿ ನಾನಲ್ಲ. ನೀವು ಹೇಳೋಹಾಗೆ, ಆ ಭ್ರಷ್ಟನನ್ನು ಇಲ್ಲಿಂದ ವರ್ಗಮಾಡಿಸಿ ಬೇರೆ ಕಡೆಗೆ ಕಳಿಸಿದರೆ, ಅವನು ಅಲ್ಲೂ ಜನಗಳಿಗೆ ತೊಂದರೆ ಕೊಡ್ತಾನೆ. ಇದರಿಂದಾಗಿ ಇನ್ನೊಂದು ಕ್ಷೇತ್ರದ ಜನತೆಗೆ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ನಮ್ಮ ಕರ್ತವ್ಯವೆಂದರೆ, ಅವನು ಪ್ರಾಮಾಣಿಕವಾಗಿ ಕೆಲಸ ಮಾಡೋಹಾಗೆ ಮಾಡಬೇಕು. ಇದು ನಮ್ಮೆಲ್ಲರ ಜವಾಬ್ದಾರಿ.

ನಾಲ್ಕು

ಆಗ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದರು. ಎಲ್ಲ ಶಾಸಕರುಗಳಿಗೂ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ನಿವೇಶನಗಳನ್ನು ನೀಡುತ್ತಿದ್ದರು. ಶಾಸಕರಾಗಿದ್ದ ಗೋಪಾಲಗೌಡರಿಗೂ ಕೆಂಗಲ್ ಹನುಮಂತಯ್ಯನವರು ನಿವೇಶನ ನೀಡಲು ಮುಂದೆ ಬಂದರು.

ಗೋಪಾಲಗೌಡರು ನಿಧಾನಕ್ಕೆ ಖಚಿತವಾಗಿ ಉತ್ತರಿಸಿದರು. “ಈ ರಾಜ್ಯದಲ್ಲಿ ಮೊದಲು ಎಲ್ಲರಿಗೂ ನಿವೇಶನ ಕೊಡಿ. ಎಲ್ಲರಿಗೂ ಕೊಟ್ಟು ಉಳಿದ ಮೇಲೆನನ್ನ ಪಾಲಿಗೆ ಬಂದ ನಿವೇಶನವನ್ನು ಅಲ್ಲಿಡಿ. ಯಾವಾಗಲಾದರೂ ತೆಗೆದುಕೊಳ್ತೇನೆ.’’

ಐದು

೧೯೬೭ರಲ್ಲಿ ಗೋಪಾಲಗೌಡರು ಎರಡನೇ ಬಾರಿಗೆ ವಿಧಾನಸಬೆ ಸದಸ್ಯರಾಗಿದ್ದರು. ಆಗಿನ ರಾಜ್ಯಪಾಲ ಜಯಚಾಮರಾಜ ಒಡೆಯರ್ ಅವರು ಶಾಸನ ಸಭೆಯಲ್ಲಿ ಇಂಗ್ಲೀಷ್‌ನಲ್ಲಿ ಭಾಷಣ ಮಾಡಿದರು.

ಸಭೆಯಲ್ಲಿದ್ದ ಗೋಪಾಲಗೌಡರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಕೈಯಲ್ಲಿ ಹಿಡಿದು “ಮಾನ್ಯ ಅಧ್ಯಕ್ಷರೇ, ಈ ಭಾಷಣಕ್ಕೆ ನನ್ನ ಪ್ರತಿಭಟನೆ ಇದೆ: ೨೫ ನಿಮಿಷ ಮಾತನಾಡಲು ಅವಕಾಶ ಕೊಡಿ!’’

ಇದೇ ರೀತಿ ಗೋಪಾಲಗೌಡರು ಮಾತನಾಡಲು ಅವಕಾಶ ಕೊಡಿ ಎಂದು ಹತ್ತು ಬಾರಿ ಕೇಳಿದರೂ ವಿಧಾನಸಭೆಯ ಅಧ್ಯಕ್ಷರು ಗೋಪಾಲಗೌಡರಿಗೆ ಅವಕಾಶ ಕೊಡಲಿಲ್ಲ. ‘ಗೌಡರಿಗೆ ಮಾತನಾಡಲು ಅವಕಾಶ ಕೊಡಿ, ಅವರು ಏನು ಹೇಳುತ್ತಾರೋ ಕೇಳೋಣ’ ಸಭೆಯ ಎಲ್ಲ ಸದಸ್ಯರೂ ಒಕ್ಕೊರಲಿನಿಂದ ಕೂಗಿದರು.

23_367_SGNS

ಸ್ವೀಕರ್ : ಎಲ್ಲರೂ ಕುಳಿತುಕೊಳ್ಳಿ, ಅದಕ್ಕೀಗ ಅವಕಾಶವಿಲ್ಲ.

ಗೋಪಾಲಗೌಡರು : ಅಧ್ಯಕ್ಷರೇ, ಮೂರು ನಿಮಿಷ ಮಾತನಾಡಲು ಅವಕಾಶ ಕೊಡಿ. ಇಲ್ಲದಿದ್ದರೆ, ಇಲ್ಲದಿದ್ದರೆ… ಎಂದು ಕುದಿದು, ಭಾಷಣದ ಪ್ರತಿಯನ್ನು ಹರಿದು ತುಳಿಯುತ್ತೇನೆ, ಎಂದು ಕನ್ನಡದವರೇ ರಾಜ್ಯಪಾಲರಾಗಿದ್ದು; ಕನ್ನಡದಲ್ಲಿ ಭಾಷಣ ಮಾಡದೆ ಇಂಗ್ಲೀಷಿನಲ್ಲಿ ಭಾಷಣ ಮಾಡಿದ ರಾಜ್ಯಪಾಲರ ಭಾಷಣದ ಪ್ರತಿಯನ್ನು ಹರಿದು ಬೂಟುಗಾಲಲ್ಲಿ ತುಳಿದರು.

ಆರು

ಶಾಸನ ಸಭೆಯ ಪ್ರಶ್ನೋತ್ತರ ಕಾಲ : ಗೇಣಿದಾರರ ಬಗ್ಗೆ ಒಬ್ಬ ಸದಸ್ಯರ ಪ್ರಶ್ನೆ ಇತ್ತು. ಸಭೆಯಲ್ಲಿದ್ದ ಗೋಪಾಲಗೌಡರು ಒಂದು ಉಪಪ್ರಶ್ನೆ ಕೇಳಲು ಎದ್ದು ನಿಂತರು: ಸಭಾಧ್ಯಕ್ಷ ಕೊಠಾವಳೆ ಗೋಪಾಲಗೌಡರಿಗೆ ಪ್ರಸ್ನೆ ಕೇಳಲು ಅವಕಾಶ ಕೊಡಲಿಲ್ಲ. ಗೌಡರು ಮತ್ತೆ ಮತ್ತೆ ಎದ್ದು ನಿಂತರು. ಕೂತರು; ಕಾದರು. ಸಭಾಧ್ಯಕ್ಷರು ಅವಕಾಶ ಕೊಡಲಿಲ್ಲ. ಗೌಡರು ಚಡಪಡಿಸುತ್ತಿದ್ದರು. ಅವರ ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು: ಅರಿವಿಲ್ಲದಂತೆಯೇ ಅವರ ಕೈ ತಮ್ಮ ಮುಂದಿದ್ದ ಧ್ವನಿವರ್ಧಕವನ್ನು ಬಿಗಿಯಾಗಿ ಹಿಡಿಯಿತು. ಪರಿಸ್ಥಿತಿಯನ್ನು ಅರಿತ ಇಡೀ ವಿರೋಧಪಕ್ಷವೇ ಒಕ್ಕೊರಲಿನಿಂದ ಗೌಡರಿಗೆ ಮಾತನಾಡಲು ಅವಕಾಶ ಕೊಡಬೇಕೆಂದು ಒತ್ತಾಯಿಸಿತು.

24_367_SGNS

ಆದರೆ, ಸಭಾಧ್ಯಕ್ಷ ಕೊಠಾವಳೆ ವಿರೋಧಪಕ್ಷದವರ ಒತ್ತಾಯಕ್ಕೆ ಮಣಿಯಲಿಲ್ಲ. ಇಡೀ ಸಭೆ ಪ್ರಕ್ಷುಬ್ಧಗೊಂಡಿತು. ಅಷ್ಟರಲ್ಲಿ ಗೋಪಾಲಗೌಡರು ತಮ್ಮ ಮುಂದಿದ್ದ ಧ್ವನಿವರ್ಧಕವನ್ನು ಕಿತ್ತು ಸಭಾಧ್ಯಕ್ಷರ ಮುಂದಿರುವ ಜಾಗಕ್ಕೆ ಎಸೆದರು.

ಇಡೀ ಸಭೆ ಗರಬಡಿದಂತೆ ಮೂಕವಾಗಿತ್ತು.

ಏಳು

ಸಾಗರ ತಾಲ್ಲೂಕು ಶಿರವಂತೆ ಗ್ರಾಮದಲ್ಲಿ ೮.೧೨.೧೯೫೦ರಂದು ಗೇಣಿರೈತರ ಸಭೆ. ಗೋಪಾಲಗೌಡರು, ತೀರ್ಥಹಳ್ಳಿಯ ಎಚ್.ಎಚ್. ಮಂಜಪ್ಪಗೌಡರು, ಎಚ್. ಗಣಪತಿಯಪ್ಪನವರು ಮತ್ತು ಅದೇ ಗ್ರಾಮದ ಬಹುದೊಡ್ಡ ಭೂಮಾಲೀಕರಾದ ಎಚ್.ಎಲ್. ವೀರಭದ್ರಪ್ಪಗೌಡರೊಂದಿಗೆ ಆ ಸಭೆಗೆ ಬಂದಿದ್ದರು. ಸುತ್ತುಮುತ್ತಿನ ರೈತರೆಲ್ಲ ಸೇರಿದ್ದ ಬಹುದೊಡ್ಡ ಸಭೆ. ರೈತರ ಹರ್ಷೋದ್ಗಾರ ಮತ್ತು ಭಾರೀ ಚಪ್ಪಾಳೆಗಳ ನಡುವೆ ಗೋಪಾಲಗೌಡರು ಭಾಷಣ ಮಾಡಲು ನಿಂತರು.

ಇಡೀ ಸಭೆ ನಿಶ್ಯಬ್ಧವಾಯಿತು: ಗೌಡರು ಮಾತು ಆರಂಭಿಸಿದರು; ಸನ್ಮಾನ್ಯ ಸಭಾಧ್ಯಕ್ಷರೆ ಶೋಷಣಗೆ ಒಳಗಾಗಿರುವ ಗೇಣಿ ರೈತರೇ; ಶೋಷಕರ ಪ್ರತೀಕವಾಗಿ ಸಭೆಯಲ್ಲಿ ಉಪಸ್ಥಿತರಿರುವ, ಭೂಮಾಲೀಕರ ಪ್ರತಿನಿಧಿ ಶ್ರೀ ಎಚ್.ಎಲ್. ವೀರಭದ್ರಗೌಡರೆ… ಇಡೀ ಸಭೆಗೆ ವಿದ್ಯುತ್ ಸಂಚಾರವಾಯಿತು.

25_367_SGNS

ರೈತರೆಲ್ಲ ಸಂತೋಷದಿಂದ ಚಪ್ಪಾಳೆಯ ಸುರಿಮಳೆಗರೆದರು. ಮರುಗಳಿಗೆಯಲ್ಲೇ ಸಭೆ ನಿಶ್ಶಬ್ದವಾಯಿತು. ಮುಂದೇನಾಗಬಹುದೋ ಎಂದು ಎಲ್ಲರೂ ಆತಂಕದಿಂದ ಗೋಪಾಲಗೌಡರನ್ನೂ, ಅವರಿಂದ ಅವಮಾನಿತರಾದ ವೀರಭದ್ರಪ್ಪಗೌಡರನ್ನು ನೋಡುತ್ತಾ ಕುಲಿತರು. ಕೂಡಲೇ ವೀರಭದ್ರಪ್ಪನವರು ಬುಸುಗುಡುತ್ತಾ ಮೇಲೆದ್ದು ನಿಂತು, ಠೇಂಕಾರದಿಂದ ಗೋಪಾಲಗೌಡರತ್ತ ತಿರುಗಿ, “ಏನ್ರಿ ಇದು! ನನ್ನ ಮನೆಯಲ್ಲಿಯೇ ಈಗ ಉಂಡುಬಂದು, ನನಗೆ ಅವಮಾನ ಮಾಡುವುದೇ?’’ ಇದನ್ನು ನಿರೀಕ್ಷಿಸಿದ್ದ ಗೋಪಾಲಗೌಡರು ಮುಗುಳ್ನಗುತ್ತಾ ಉತ್ತರಿಸಿದರು: “ಸ್ವಾಮಿ, ಬೇಸರಮಾಡಿಕೊಳ್ಳಬೇಡಿ, ನಾನು ಈ ಊರಿಗೆ ಬಂದದ್ದು; ನಿಮ್ಮ ಮನೆಯಲ್ಲಿ ಉಂಡು, ನಿಮ್ಮನ್ನು ಹೊಗಳಿ ಹೋಗುವುದಕ್ಕಲ್ಲ; ಗೇಣಿದಾರರ ಬೇಡಿಕೆಗಳನ್ನು ಹೇಳುವುದಕ್ಕೆ. ಅವರ ಬೇಡಿಕೆಯಲ್ಲಿ, ಮೂರು ಸೇರಿನ ಕೊಳಗದಲ್ಲಿಯೇ ಗೇಣಿ ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳಲಾಗಿದೆ. ನೀವು ಮೂರುವರೆ ಸೇರಿನ ಕೊಳಗದಲ್ಲಿ ಗೇಣಿ ಪಡೆದಿದ್ದೀರಿ. ನಮ್ಮ ರೈತರಿಂದ ಹೆಚ್ಚಾಗಿ ಅಳೆಯಿಸಿಕೊಂಡಿರುವ ಭತ್ತದಲ್ಲಿ, ಆ ಅಕ್ಕಿಯಲ್ಲಿ ಸ್ವಲ್ಪ ಭಾಗವನ್ನು ಮಾತ್ರ ನಾನು ಇಂದು ನಿಮ್ಮ ಮನೆಯಲ್ಲಿ ಉಂಡು ಬಂದಿದ್ದೇನೆ.’’

ಎಂಟು

ಆಗ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ. ವಿಧಾನಸಭೆಯ ಕಲಾಪಗಳು ನಡೆಯುತ್ತಿದ್ದವು. ಅಂದು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು, ಸರ್ಕಾರ ವಿಧಿಸಿದ್ದ ಹೆಚ್ಚಿನ ತೆರಿಗೆಯನ್ನು ಸಮರ್ಥಿಸಿಕೊಂಡರು; ರೈತರು ಸರ್ಕಾರದಿಂದ ಪಡೆದ ಸಾಲವನ್ನು ಸಕಲಾದಲ್ಲಿ ವಾಪಸ್ ಮಾಡದಿರುವುದನ್ನು ಕುರಿತು, ಕಟುಟೀಕೆ ಮಾಡುತ್ತಿದ್ದ ಅವರು ವ್ಯಂಗ್ಯದಿಂದ ‘ಸಾಲವನ್ನು ಕೊಂಬಾಗ ಹಾಲೋಗರುಂಡಂತೆ’ – ಸರ್ವಜ್ಞನ ತ್ರಿಪದಿಯನ್ನು ರಾಗವಾಗಿ ಉದಾಹರಿಸುತ್ತಾ ವಿರೋಧಪಕ್ಷದ ಸದಸ್ಯರನ್ನು ಮೂದಲಿಸಿದರು.

ಆಗ ಗೋಪಾಲಗೌಡರು ಕೂಡಲೆ ಎದ್ದುನಿಂತು, ವ್ಯಂಗ್ಯವಾಗಿ ಮುಖ್ಯಮುಂತ್ರಿಗಳ ಮಾತಿಗೆ ಪ್ರಕ್ರಿಯೆಯಾಗಿ –

ಅಟ್ಟ ಏರಿದ ಮೇಲೆ ಏಣಿಯ ಹಂಗೇನು?
ಗದ್ದುಗೆಯನೇರಿದ ಮೇಲೆ ಜನರ ಹಂಗೇನು?
ನಾನು ಸರಕಾರ, ನೀ ಪ್ರಜೆ
ಕೊಡು ತೆರಿಗೆ, ಇಲ್ಲದಿರೆ ನಡೆ ಸೆರೆಮನೆಗೆ
– ಎಂದನಾ ಮೈಸೂರು ಮುಖ್ಯಮಂತ್ರಿ.

– ಎಂದು ಉತ್ತರಿಸಿ, ಕಾಂಗ್ರೆಸ್ ಸರ್ಕಾೞದಲ್ಲಿನ ಜನತೆಯ ಬವಣೆಯನ್ನು ಕುರಿತು,

ಉಣಲಿಲ್ಲ, ಉಡಲಿಲ್ಲ
ದಂಡ ತೆರುವುದು ಮಾತ್ರ ಪ್ಪಲಿಲ್ಲ,
ಬಿಡಲಾರೆ, ಬಿಡದಿರಲಾರೆ
ಕಾಂಗ್ರೆಸ್ ಗಂಡನಾಎಂದು
ಮರುಗಿತು ಮೈಸೂರು ಜನತೆ.

ಎಂದು ಗುಡುಗಿದರು. ಗೌಡರ ಮಾತನ್ನು ಕೇಳಿ ಆಡಳಿತ ಪಕ್ಷದ ಸದಸ್ಯರು ಕಸಿವಿಸಿಗೊಂಡು ತಲೆತಗ್ಗಿಸಿ ಕುಳಿತರು.

ಒಂಬತ್ತು

೧೯೫೨ರ ಚುನಾವಣೆಯ ಸಮಯ. ಗೌಡರು ಅಂದಿನ ನ್ಯಾಷನಲ್ ಲಾಡ್ಜ್ (ಇಂದಿನ ಬೃಂದಾವನ ಹೋಟೆಲ್ ಆಗಿದೆ)ನಲ್ಲಿ ಬಂದು ಇಳಿದುಕೊಂಡಿದ್ದರು. ಬೆಳಿಗ್ಗೆ ಎಂಟು ಗಂಟೆಯಾಗಿತ್ತು. ಸೂರ್ಯವಂಶದ ಗೌಡರು ಆಗ ತಾನೇ ಎದ್ದು ಬೀಡಿ ಹಚ್ಚಿ ಕುಳಿತಿದ್ದರು. ಗೌಡರಿಗಾಗಿ ಹಿಂದಿನ ಚುನಾವಣೆಯಲ್ಲಿ ಕೆಲಸ ಮಾಡಿ, ಈಗಲೂ ಅವರ ಜೊತೆಗಿದ್ದ ಪ್ರಮುಖ ಕಾರ್ಯಕರ್ತರು ಮತ್ತು ಬದರಿಯವರಿಗೆ ತೀರ ಹತ್ತಿರದ ವ್ಯಕ್ತಿ ಹಾಗೂ ಬೆಂಬಲಿಗರು ಇಬ್ಬರೂ ಒಟ್ಟಿಗೇ ಗೌಡರ ರೂಮಿಗೆ ನುಗ್ಗಿದರು. ಗೌಡರಿಗೆ ಚುನಾವಣಾ ಸಮಯದ ಈ ‘ಕಾಂಬಿನೇಷನ್’ ಸ್ವಲ್ಪ ಆಶ್ಚರ್ಯ ತಂದಿತ್ತು. ಆದರೂ ತೋರಗೊಡದೆ, ಅದೂ ಇದೂ ಸುತ್ತಿ ಬಳಸಿ ಮಾತನಾಡುತ್ತಿದ್ದರು.

ಒಮ್ಮೆಗೇ ಕಾಂಗ್ರೆಸ್ ಕಾರ್ಯಕರ್ತ ಬಾಗಿಲು ಓರೆ ಮಾಡಲು ಹೋದರು.

‘ಹಾಗೇ ಇರಲಿ ಬಿಡಿ. ನನ್ನದು ತೆರೆದ ಬಾಗಿಲು!’
– ಅಂದರು ಗೌಡರು ತಮ್ಮ ಮಾಮೂಲು ದನಿಯಲ್ಲಿ.
‘ಪ್ರೈವೆಟ್ ವಿಷಯ ಹೇಳೋದಿತ್ತು. ಅದಕ್ಕೆ’
ಹೇಳಿ, ಹಾಗೇನೆ! ಗೋಪಾಲಗೌಡನ ಹತ್ರ ಏನ್ರೀ ಪ್ರೈವೇಟ್?’

ಅಲ್ಲ ಎಲೆಕ್ಷನ್ಗೆ ಏನಿಲ್ಲಂದ್ರೂ ಬದರಿಯವರಿಗೆ ಒಂದು ಮೂವತ್ತು ಖರ್ಚಾಗ್ತದೆ. ಜೊತೆಗೆ ಅವರು ಗೆದ್ದರೆ, ಮಂತ್ರಿಯಾಗುವ ಛಾನ್ಸ್ ಜಾಸ್ತಿ. ಅದಕ್ಕೇ ನೀವು ದೊಡ್ಡ ಮನಸ್ಸು ಮಾಡಿ ಉಮೇದುವಾರಿಕೆ ವಾಪಸ್ ತೆಗೆದುಕೊಂಡರೆ, ನಾವು ಬದರಿಯವರ ಹತ್ತಿರ ಮಾತನಾಡಿ, ಅವರನ್ನ ಕರಾರಿಗೆ ಒಪ್ಪಿಸ್ತೀವಿ.

ಸ್ವಾಮಿ ನನ್ನ ಬೂಟ್ಸ್ ಬಾಗಿಲಹತ್ತಿರ ಇದೆನಾನು ಎದ್ದು ಕೈಗೆ ತೆಗೆದುಕೊಳ್ಳೊದ್ರೊಳಗೆ ನೀವು ಹೊರಗೆ ಹೋಗೋದು ವಾಸಿ.

ಮರುಮಾತನಾಡದೆ ಅವರಿಬ್ಬರೂ ಅಲ್ಲಿಂದ ಕಾಲ್ಕಿತ್ತರು.

* ಈ ಘಟನೆಗಳನ್ನು ವಿವರಿಸಿದವರು.

೧. ಭೀಮನಕೋಣೆ ರಾಜಗೋಪಾಲ್ ೨. ಎನ್. ಕಿಟ್ಟಪ್ಪಗೌಡ, ೩. ಎಂ.ವಿ. ರಾಮಪ್ಪ ೪. ಎಂ.ಡಿ. ಶೇಷಪ್ಪ ಹೆಗಡೆ, ೫. ಎಸ್. ಬಂಗಾರಪ್ಪ, ೬. ಹೆಚ್. ಗಣಪತಿಯಪ್ಪ, ೭. ಡಾ. ಎಚ್.ಎಲ್. ತಿಮ್ಮೇಗೌಡ, ೮. ಡಾ.ಎಚ್.ಸಿ. ವಿಷ್ಣುಮೂರ್ತಿ.