26_367_SGNS

ಶ್ರೀಮಾನ್ ಕೆ.ಎಂ. ರುದ್ರಪ್ಪನವರೇ,

ತಮ್ಮ ಆದರದ ಆಹ್ವಾನ ತಲ್ಪಿತು. ನಾನು ತುಂಬಾ ಆಭಾರಿ. ಆದರೆ ದಿನಾಂಕ ೧ ಮತ್ತು ೨ ಬೆಂಗಳೂರಿನಲ್ಲಿ ಕ|| ಪ್ರಾಂ|| ಹಿಂದ್ ಕಿಸಾನ್ ಪಂಚಾಯತದ ಕಾರ್ಯಕಾರಿ ಸಮಿತಿಯು ಕೂಡುವದಿದೆ. ಕಾರ್ಯದರ್ಶಿಯಾಗಿರುವುದರಿಂದ ನಾನು ಅಲ್ಲಿರಲೇಬೇಕಾಗಿದೆ. ಶಿಷ್ಟ ಮಂಡಳಿಯ ಕೂಡ ದೆಹಲಿಗೆ ಬರಲಾರೆ. ಅನಿವಾರ್ಯ : ದಯವಿಟ್ಟು ಕ್ಷಮಿಸಿ.

ತಮ್ಮ ಆದರ್ಶ ಮುಂದಾಳತ್ವದಲ್ಲಿ ತೆರಳಲಿರುವ ಶಿಷ್ಟ ಮಂಡಳಿಯು ಜಯಪ್ರದವಾಗಿ ಮರಳಲಿ; ಮೈಸೂರನ್ನೊಳಗೊಂಡ ಮಹಾರಾಜರಿಲ್ಲದ ಬೃಹತ್ಕರ್ಣಾಟಕ ಪ್ರಾಂತ ನಿರ್ಮಾಣವಾಗಿ ಎರಡು ಕೋಟಿ ಕನ್ನಡಿಗರೊಂದಾಗಲಿ ಎಂದು ಹಾರೈಸಿ, ಶಿಷ್ಟ ಮಂಡಳಿಗೆ ಪೂರ್ಣ ಯಶಸ್ಸನ್ನು ಕೋರಿ ಬೀಳ್ಕೊಡುತ್ತೇನೆ. ಹೋಗಿ ಬನ್ನಿ. ಕನ್ನಡಕ್ಕೆ ಕೈಲಾಸವ ತನ್ನಿ.

ಇತಿ ತಮ್ಮವ,
ಗೋಪಾಲಗೌಡ, ಶಾಂತವೇರಿ
೨೮.೯.೪೯
ಶಿವಮೊಗ್ಗ

***

ಶಿವಮೊಗ್ಗ
ದಿನಾಂಕ ೨೧.೯.೧೯೫೦

ಗೆಳೆಯ ಶ್ರೀ ಗಣಪತಿಯಪ್ಪನರೆ,

ತಮ್ಮ ೧೯.೯.೫೦ರ ಕರೆ ಓಲೆ ತಲ್ಪಿತು. ಅಭಿನಂದನೆಗಳು. ನಾನು ೨೫ರ ಬೆಳಿಗ್ಗೆ ರೈಲಿಗೆ ಹೊರಟು ಬರುತ್ತೇನೆ. ಜೊತೆಯಲ್ಲಿ ನನ್ನ ಗೆಳೆಯರು ಯಾರಾದರು ಬರಲು ಸಮ್ಮತಿಸಿದರೆ ಕರೆದುಕೊಂಡು ಬರುತ್ತೇನೆ. ಸಾಧ್ಯವಾದರೆ ಅಂದಿನ ಕಾರ್ಯಕ್ರಮದ ವಿವರ ಕಳಿಸಿಕೊಡಿ.

ಬಂಡವಾಳಶಾಹಿ ಹಿತರಕ್ಷಕರನ್ನು, ತಿರೋಗಾಮಿಗಳನ್ನೂ ಸಭೆಗೆ ಆಹ್ವಾನಿಸಲಾರಿರೆಂದು ನಂಬುತ್ತೇನೆ.

ಇತಿ ತಮ್ಮವ
ಗೋಪಾಲಗೌಡ ಶಾಂತವೇರಿ

***

ಲಕ್ನೋ
೩ ಏಪ್ರಿಲ್ ೧೯೫೭

ಗೆಳೆಯ ಶ್ರೀ ಗಣಪತಿಯಪ್ಪವರೆ,

ನಿಮ್ಮ ಪತ್ರ ಕೈ ಸೇರಿತು. ವಂದನೆಗಳು. ಕೂಡಲೆ ಉತ್ತರಿಸಲಾಗಲಿಲ್ಲ; ದಯವಿಟ್ಟು ಕ್ಷಮಿಸಿ.

ನೀವು ನಿಮ್ಮ ಪತ್ರದಲ್ಲಿ ಕೆಲವು ಉಪಯುಕ್ತ ಸಲಹೆ ಕೊಟ್ಟಿದ್ದೀರಿ. ಅದಕ್ಕಾಗಿ ತುಂಬಾ ಆಭಾರಿಯಾಗಿದ್ದೇನೆ. ಆ ಎಲ್ಲಾ ಸಲಹೆಗಳನ್ನೂ ಸರಕಾರದ ಮುಂದೆ ಇಡಲು ಆಗದೆ ಇದ್ದಾಗ್ಯೂ ನನ್ನ ಎರಡು ಭಾಷಣಗಳಲ್ಲಿ ಆ ಎಲ್ಲಾ ಅಂಶಗಳನ್ನೂ ಸರಕಾರದ ಗಮನಕ್ಕೆ ತಂದಿದ್ದೇನೆ.

ರೈತರ ಸಮ್ಮೇಳನ ಕರೆಯುವ ಬಗೆಗೆ ಸಿದ್ಧತೆ ಮಾಡಿಕೊಳ್ಳಲು ರಾಜ್ಯಸಮಿತಿ ಕಳೆದ ತಿಂಗಳು ಬೆಂಗಳೂರಿನಲ್ಲಿ ಸೇರಿದ್ದಾಗ ಒಂದು ಸಿದ್ಧತಾ ಸಮಿತಿ ನೇಮಿಸಿದೆ. ನಾನು ಬಂದೊಡನೆಯೇ ಕೆಲಸ ಪ್ರಾರಂಭ ಮಾಡುತ್ತೇನೆ.

ವಿಧಾನಸಭಾಧಿವೇಶನ ಮುಗಿಸಿಕೊಂಡು ೨೭ರ ರಾತ್ರಿ ಹೊರಟು ೩೦ರ ರಾತ್ರಿ ಲಕ್ನೋ ಸೇರಿದೆ. ಇಂದು ರಾತ್ರಿ ಸಭೆ ಮುಗಿಯಲಿದೆ. ನಾಳೆ ಮಧ್ಯಾಹ್ನ ಹೊರಟು, ಹೈದರಾಬಾದಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಹೋಗಿ, ಶಿವಮೊಗ್ಗೆಗೆ ಬರುತ್ತೇನೆ. ಅಥವಾ ೧೦ರ ಹೊತ್ತಿಗೆ ಬರುತ್ತೇನೆ. ಬಂದೊಡನೆಯೇ ನಿಮ್ಮ ಭೇಟಿ ಮಾಡಿ ಮುಂದಿನ ಕಾರ್ಯಕ್ರಮ ಗೊತ್ತು ಮಾಡುತ್ತೇನೆ. ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ.

ಇತಿ ನಿಮ್ಮವ
ಗೋಪಾಲಗೌಡ ಶಾಂತವೇರಿ

***

ಕುಂದಾಪುರ
೫.೧೨.೧೯೬೦

ಗೆಳೆಯ ಗೋಪಾಲಕೃಷ್ಣ ಉರಾಳರೆ,

ಪುರಸಬೆಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಿ ಚುನಾಯಿತರಾಗಿದ್ದೀರೆಂದು ಗೆಳೆಯ ಎಂ.ವಿ. ಪ್ರಭು ಪತ್ರದಿಂದ ತಿಳಿದು ಸಂತೋಷವಾಯಿತು. ನಿಮ್ಮ ಹಾಗೂ ಪಾರ್ಟಿಯ ಬಗ್ಗೆ ಮತದಾರರು ತೋರಿಸಿರುವ ವಿಶ್ವಾಸಕ್ಕಾಗಿ ಅವರನ್ನು ಈ ಮೂಲಕ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಕಳೆದ ತಿಂಗಳು ಮೊದಲವಾರದಲ್ಲಿ ಧಾರವಾಡ ಜಿಲ್ಲಾ ಪ್ರವಾಸದಲ್ಲಿದ್ದಾಗ ಒಮ್ಮೆಗೇ ನನ್ನ ಆರೋಗ್ಯ ಕೆಟ್ಟಿತು. ಗೆಳೆಯ ಪೂಜಾರರಲ್ಲಿ ಒಂದು ವಾರವಿದ್ದು, ಔಷಧೋಪಚಾರ ಪಡೆದು ತೀರ್ಥಹಳ್ಳಿಗೆ ಬಂದು ಚಿಕಿತ್ಸೆ ಮಾಡಿಕೊಂಡು, ಈಗ ಆರೋಗ್ಯ ಸ್ವಲ್ಪ ಉತ್ತಮವಾಗಿದೆ. ಆದಾಗ್ಯೂ ಬಹಳ ನಿತ್ರಾಣನಾಗಿದ್ದು, ನಾಲ್ಕು ದಿನದ ಹಿಂದೆ ಕುಂದಾಪುರಕ್ಕೆ ಬಂದಿರುತ್ತೇನೆ. ಇನ್ನು ಒಂದು ವಾರ ಇಲ್ಲಿದ್ದು ನಂತರ ಬೆಂಗಳೂರಿಗೆ ಹೋಗಲಿದ್ದೇನೆ.

ಈಚೆಗೆ ನಿಮ್ಮತ್ರ ಬರಲಾಗಲಿಲ್ಲ. ತಾಲ್ಲೂಕು ಬೋರ್ಡ್ ಚುನಾವಣೆಯಲ್ಲಿ ಬರುವ ಅವಕಾಶ ಸಿಗಲಿಲ್ಲ. ಮುಂದಿನ ತಿಂಗಳು ಸಾಧ್ಯವಾದರೆ ಆ ಕಡೆ ಬಂದು ಹೋಗುತ್ತೇನೆ. ಎಲ್ಲಾ ಗೆಳೆಯರಿಗೂ ನನ್ನ ನಮಸ್ಕಾರ ತಿಳಿಸಿ.

ಶುಭಾಶಯಗಳು,
ಎಂದು ನಿಮ್ಮವ
ಗೋಪಾಲಗೌಡ ಶಾಂತವೇರಿ
C/o ಎಂ.ಡಿ. ವೆಂಕಪ್ಪಶೆಟ್ಟಿ ಎಂಡ್ ಸನ್ಸ್
ಕುಂದಾಪುರ

***

ಗೋಪಾಲಗೌಡ ಶಾಂತವೇರಿ
ವಿಧಾನಸಭಾ ಸದಸ್ಯ
ತೀರ್ಥಹಳ್ಳಿ

ಮಾನ್ಯರೆ,

ಶಿವಮೊಗ್ಗಾ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ತೆರವಾಗಿರುವ ರಾಜ್ಯ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಇದೇ ಮೇ ೩ ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಸೋಷಲಿಸ್ಟ್ ಪಾರ್ಟಿಯು ತನ್ನ ರಾಜ್ಯ ಶಾಖೆಯ ಅಧ್ಯಕ್ಷರಾದ ಶ್ರೀ ಜೆ. ಹೆಚ್. ಪಟೇಲ್, ಬಿ.ಎ, ಎಲ್.ಎಲ್.ಬಿ., ಇವರನ್ನು ಉಮೇದುವಾರರನ್ನಾಗಿ ನಿಲ್ಲಿಸಿರುವುದು ಈಗಾಗಲೇ ತಮಗೆ ತಿಳಿದ ಸಂಗತಿಯಾಗಿದೆ.

ನಮಗೆ ಇಂದು ಆಡಳಿತ ಪಕ್ಷದ ವಿರುದ್ಧ ಪ್ರಗತಿಪರವೂ ಪ್ರಬಲವೂ ಆದ ಜನಾಭಿಪ್ರಾಯವನ್ನು ವಿಧಾನ ಮಂಡಳದಲ್ಲಿ ಪರಿಣಾಮಕಾರಿಯಾಗಿ ಪ್ರತಿಪಾದಿಸಬಲ್ಲ ಎದೆಗಾರಿಕೆಯ ದಕ್ಷ ಪ್ರತಿನಿಧಿಗಳ ಅಗತ್ಯತೆ ಎಷ್ಟೆಂಬುದನ್ನು ತಾವು ಮನಗಂಡಿದ್ದೀರಿ. ಅದರಲ್ಲೂ, ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ಸಿನ ನಿರಂಕುಶ ಆಡಳಿತವನ್ನು ಅಂಕೆಯಲ್ಲಿಟ್ಟು ಜನತಾಹಿತ ರಕ್ಷಿಸುವುದಕ್ಕಾಗಿ ನಿರ್ಭಯ ನಿಷ್ಪಕ್ಷಪಾತ ಮತ್ತು ನಿಷ್ಠುರ ಪ್ರವೃತ್ತಿಯ ಹೊಣೆಗಾರ ಪ್ರತಿನಿಧಿಗಳ ಕೊರತೆ ಬಹಳವಾಗಿದೆ ಎಂಬುದನ್ನು ನಾನು ಒತ್ತಿ ಹೇಳಬೇಕಾಗಿಲ್ಲ.

ಶ್ರೀ ಜೆ. ಹೆಚ್. ಪಟೇಲರು ಚನ್ನಗಿರಿ ತಾಲ್ಲೂಕಿನ ಕಾರಿಗನೂರಿನವರು. ದೊಡ್ಡ ರೈತ ಕುಟುಂಬದಲ್ಲಿ ಹುಟ್ಟಿ ಉಚ್ಫ ಶಿಕ್ಷಣ ಪಡೆದು, ಮನೆಗೆಲಸ ಹಾಗೂ ವಕೀಲ ವೃತ್ತಿಯನ್ನು ತ್ಯಜಿಸಿ, ತಮ್ಮ ಪೂರ್ಣಕಾಲವನ್ನು ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ವಿನಿಯೋಗಿಸುತ್ತಿರುವ ವಿದ್ಯಾವಂತ ತರುಣರು. ೧೯೪೭ರ ಸ್ವಾತಂತ್ರ್ಯ ಹೋರಾಟ ಮತ್ತು ೧೯೫೮ರ ರಾಜ್ಯ ಸೋಷಲಿಸ್ಟ್ ಪಾರ್ಟಿಯ ಕಾನೂನುಭಂಗ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸೆರೆಮನೆವಾಸ ಅನುಭವಿಸಿದ ಕೆಚ್ಚೆದೆಯ ಹೋರಾಟಗಾರರೂ ನಿಷ್ಠಾವಂತ ಸಮಾಜವಾದಿಗಳೂ ಆಗಿದ್ದಾರೆ. ಜಾತೀಯತೆಯು ತುಂಬಿ ತುಳುಕುತ್ತಿರುವ ನಮ್ಮ ಈ ಸಮಾಜದಲ್ಲಿ ಅದರ ಸೋಂಕು ಕೂಡಾ ತಗಲದಿರುವ ವಿಚಾರವಾದಿ ಶ್ರೀ ಜೆ.ಎಸ್. ಪಟೇಲರು. ಈ ವಿಶಿಷ್ಟ ಗುಣಗಳಿಂದಾಗಿ, ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಮಹತ್ವದ ಸ್ಥಾನಗಳಿಸಿರುತ್ತಾರೆ. ಪ್ರಸ್ತುತ ರಾಜ್ಯ ಸೋಷಲಿಸ್ಟ್ ಪಾರ್ಟಿಯ ಅಧ್ಯಕ್ಷರು, ಅಖಿಲ ಭಾರತ ಸೋಷಲಿಸ್ಟ್ ಪಾರ್ಟಿಯ ರಾಷ್ಟ್ರೀಯ ಸಮಿತಿಯ ಸದಸ್ಯರು ಮತ್ತು ಚನ್ನಗಿರಿ ತಾಲ್ಲೂಕ್ ಬೋರ್ಡಿನ ಸದಸ್ಯರು ಆಗಿದ್ದಾರೆ. ಸಮಾಜವಾದಿ ಯುವಜನಸಭಾವ ಕೇಂದ್ರ ಸಮಿತಿಯ ಸದಸ್ಯರೂ ಆಗಿದ್ದು, ಈಚೆಗೆ ಫಿನ್ಲೆಂಡಿನ ಹೆಲ್ಸಿಂಕಿಯಲ್ಲಿ ನಡೆದ ವಿಶ್ವಯುವಜನ ಮೇಳದಲ್ಲಿ ಭಾಗವಹಿಸಿ ರಷ್ಯಾ ಮುಂತಾದ ರಾಷ್ಟ್ರಗಳಿಗೆ ಭೇಟಿಯಿತ್ತಿದ್ದಾರೆ.

ಸಾರ್ವಜನಿಕ ಜೀವನವು ಎಲ್ಲ ರೀತಿಯ ಭ್ರಷ್ಟಾಚಾರಗಳಿಂದ ಕಲುಷಿತವಾಗಿರುವ ಈ ಸಮಯದಲ್ಲಿ ನೀತಿ, ನಿಯಮ ಮತ್ತು ಸಂಯಮಗಳನ್ನು ಜೀವನದಲ್ಲಿ ಆಚರಿಸುವ ವ್ಯಕ್ತಿಗಳನ್ನೇ ಪ್ರೋತ್ಸಾಹಿಸಿ ಬೆಂಬಲಿಸಬೇಕಾದುದು ಅಗತ್ಯವಾಗಿದೆ. ಆದುದರಿಂದ ಶ್ರೀ ಜೆ.ಹೆಚ್. ಪಟೇಲರು ಈ ಎಲ್ಲ ಗುಣಗಳನ್ನುಳ್ಳ ಆದರ್ಶ ವ್ಯಕ್ತಿಯಾಗಿದ್ದು, ತಾವೆಲ್ಲರೂ ತಮ್ಮ ಅಮೂಲ್ಯವಾದ ಮೊದಲನೇ ಪ್ರಾಶಸ್ತ್ಯದ ಮತವಿತ್ತು ಅವರಿಗೆ ಜಯಗಳಿಸಿಕೊಡಬೇಕೆಂದೂ, ಆರಿಸಿಬಂದಲ್ಲಿ ಅವರು ತಮ್ಮೆಲ್ಲರ ಹೆಮ್ಮೆಯ ಪ್ರತಿನಿಧಿಯಾಗಿ, ಕ್ಷೇತ್ರಕ್ಕೂ ರಾಜ್ಯಕ್ಕೂ ಸೇವೆ ಸಲ್ಲಿಸುವರೆಂದೂ ತಮ್ಮಲ್ಲಿ ಈ ಮೂಲಕ ನಿವೇದಿಸಿಕೊಳ್ಳುತ್ತೇನೆ.

ನಮಸ್ಕಾರಗಳು.

ಎಂದು ತಮ್ಮ ವಿಶ್ವಾಸಿ
ಗೋಪಾಲಗೌಡ ಶಾಂತವೇರಿ
೧೮-೪-೧೯೬೪
ಶಿವಮೊಗ್ಗ

***

ಬೆಂಗಳೂರು
೨೨-೧೦-೧೯೬೪

ಪ್ರಿಯ ಉರಾಳ,

ಶ್ರೀ ಮೈಲಪ್ಪ ಮತ್ತು ನೀವು ಬರೆದ ಕಾರ್ಡ್ ಮುಟ್ಟಿತು. ಮದಗಕೆರೆ ಏರಿಯನ್ನು ಇನ್ನೂ ೧೬ ಅಡಿ ಎತ್ತರಿಸುವುದರಿಂದ ಶಿಕಾರಿಪುರ ತಾಲ್ಲೂಕಿನ ೧೦,೦೦೦ ಎಕ್ರೆ ಜಮೀನು ಮುಳುಗುತ್ತೆ ಇತ್ಯಾದಿ ಬರೆದಿರುತ್ತೀರಿ. ಈ ವಿಷಯ ಸಂಬಂಧಪಟ್ಟವರಿಂದ ತಿಳಿದು ಅಧಿಕಾರಿಗಳನ್ನು ಕಂಡು ನಿಜಸ್ಥಿತಿ ಅರಿತುಕೊಳ್ಳಿ. ಈ ರಾತ್ರಿ ರೈಲಿಗೆ ಬಂದು, ನಾಳೆ ನಾನು ಶಿವಮೊಗ್ಗದಲ್ಲಿರುತ್ತೇನೆ. ರಾತ್ರಿಯೇ ಮತ್ತೆ ರೈಲಿಗೆ ಹೊರಟು ಬರಲಿದ್ದೇನೆ. ಕರ್ನಾಟಕ ಸಂಘದ ಆಹ್ವಾನ ಬಂದಿತ್ತು. ಬರಲು ಆಗಲಿಲ್ಲ, ಕ್ಷಮಿಸಿ.

ಇಲ್ಲಿ ಬೆಲೆ ಏರಿಕೆ ಮತ್ತು ಆಹಾರದ ಅಭಾವ ತೀರ ಕಳವಳಕಾರಿಯಾಗಿದೆ. ಸರ್ಕಾರ ಪರಿಸ್ಥಿತಿಯನ್ನು ಮತ್ತೂ ಹದಗೆಡಿಸುತ್ತಿದೆ; ಕೊಂಡು ತಿನ್ನುವವರ ಗೋಳು ಹೇಳತೀರದಾಗಿದೆ. ನಿಮ್ಮಲ್ಲಿ ಬಹುಶಃ ಸಾಕಷ್ಟು ಅಕ್ಕಿ ಗೋಧಿ ಸಿಕ್ಕುತ್ತಿರಬಹುದು. ಇಲ್ಲಿ ಒಂದು ಕಿಲೋ ಅಕ್ಕಿಗೆ ೧೫೦ ಪೈಸೆ ಆಗಿದೆ.

ಬಾಕಿ ವಿಷಯ ಹಿಂದಿನಿಂದ.

ನಮಸ್ಕಾರಗಳು
ಎಂದು ನಿಮ್ಮವ
ಗೋಪಾಲಗೌಡ ಶಾಂತವೇರಿ

***

  1. Gopala Gowda,
    227, Legislators Home,
    Bangalore -1
    15th Dec. 1965

My Dear Margo,

One full year has lapsed by now, since I got your warm Xmas greetings. Excuse me for this delay and send me your greetings. Its very kind of you that you remember us all. We do think of you now and then. We missed you badly. You are a Warm hearted lady. I very much wish you here amidst us.

I have a pleasent surprise for you. I am now a married man. I got married last March. My wife is a school teacher from Dharwar, a district place in our state. She is now working here in Bangalore. We have not set up any house. We stay in the legislators Home for the Present.

Things here have gone from bad to worse to shortage, this year, due to the failure of the monsoons, has become acute. The prices are spiralling ever high. The recent Indo-Pak conflict though cost us much, has strengthened us. The whole country stood by the Govt., like one man and Sri Lal Bahdur Shastry has emerged as a strong man. Most of the left communists are in fail. The P.S.P and S.P merged together and formed the S.S.P. But the merger was very short lived. The P.S. Pers chose to go back and revive the P.S.P. Though the merger helped the organisation, the split checkmated the further growth of the party Dr. Lohia’s frantic efforts to bring all the opposition parties nearer has not boome much fruits. The effort is still on. The leftist parties are presently meeting in Delhi. The Jan sangh and the P.S.P., are not for a united opposition. So to say, the opposition in this country has a long way to go.

How are you? What are you? What are your future programmes? Any likelyhood of your visiting this country? I don’t think, I would, in near future, be able to go to the States and see you.

Please accept my hearty greetings. I wish you a merry Chrismas, and a happy New Year.

With best wishes,

Your’s ever
S. Gopala Gowda

 

To
Miss Margo S. Kinner,
1408, Washington
Sanfrancesco, Calefornea, U.S.A.

***

ಗೋಪಾಲಗೌಡ ಶಾಂತವೇರಿ        
೨೨೭, ಶಾಸಕರ ಭವನ
ಬೆಂಗಳೂರು -೧
೩೦-೩-೧೯೬೪

ಪ್ರಿಯ ಸೋನು,

ನಿನ್ನ ಮೊದಲ ಪತ್ರ ಮುಟ್ಟಿತು. ಅಪಾರ ಆನಂದವಾಯಿತು. ನಾನು ಮೊದಲು ಬರೆಯಲಿ ಎಂದು ನೀನು, ನೀನು ಮೊದಲು ಬರೆಯಲಿ ಎಂದು ನಾನು (ಪಹಲೆ ಆಫ್) ಈ ಆಟದಲ್ಲಿ ನೀನು ಸೋತೆ. ಮದುವೆಗೆ ಮುಂಚೆಯೇ ನಾನು ಬರೆಯಬೇಕೆಂದಿದ್ದೆ. ಏನೋ ಸಂಕೋಚದಿಂದ ಬರೆಯಲಿಲ್ಲ. ಈಗ ನಮ್ಮಿಬ್ಬರ ಮಧ್ಯೆ ಅಂತಹ ಯಾವ ಆತಂಕಕ್ಕೂ ಎಡೆಯಿಲ್ಲ.

ನಿನ್ನೆ ಸಂಜೆ, ಜಯಪುರದ ಹಿಂದುಸ್ತಾನೀ ಪ್ರಖ್ಯಾತ (ದ್ರುಪದ್‌ನಲ್ಲಿ) ಗಾಯಕ ಸಹೋದರರಾದ ದಾಗರ್‌ರೊಂದಿಗೆ ಶ್ರೀ ಬಿ.ವಿ. ನಾರಾಯಣರೆಡ್ಡಿಯವರ ಮನೆಗೆ (ಬಾಲರೆಡ್ಡಿಪಲ್ಲಿ) ಹೋಗಿದ್ದು, ಇಂದು ಬೆಳಿಗ್ಗೆ ‘ನಾಷ್ಟ’ ಮಾಡಿ ಹೊರಟು, ಬರುವಾಗ ನಂದೀಬೆಟ್ಟಕ್ಕೆ ಹೋಗಿ ಮಧ್ಯಾಹ್ನ ೨.೩೦ಕ್ಕೆ ಇಲ್ಲಿಗೆ ಬಂದೆ. ಗೆಳೆಯ ಪಟೇಲರೇ ಕಾರನ್ನು ನಡೆಸಿದರು. ಬಂದು ಅಂಚೆ ನೋಡಿದಾಗ ನಿನ್ನ ಪತ್ರ ನೋಡಿದೆ. ಮೊದಲು ನೋಡಿದ್ದು ನಿನ್ನ ಸ್ನೇಹಿತರದ್ದು. ಸಂಜೆ ಮುಲ್ಕಾರಿಗೆ ನೀನು ಬರೆದ ಕಾರ್ಡು ಬಂದಿತ್ತು. ನೀವು ಡಿ.ಪಿ.ಐ.ರಿಗೆ ಕಳಿಸಿರುವ ವರ್ಗಾವಣೆ ಅರ್ಜಿಯ ಪ್ರತಿಯೂ ಬಂದಿದೆ. ವರ್ಗದ ಬಗೆಗೆ, ಅಧ್ಯಕ್ಷ ಬಾಳಿಗಾರಿಂದ ಹಿಡಿದು ಮಂತ್ರಿಮಂಡಳವೇ ಆಸಕ್ತಿವಹಿಸಿದಂತೆ ಕಾಣುತ್ತೆ! ನೀನು ಕೇಳಿರುವ ಶಾಲೆಗೆ ವರ್ಗವಾಗುವುದು ಕಷ್ಟವಾಗಲಾರದು. ನಾನು ಪ್ರಯತ್ನಿಸುತ್ತೇನೆ.

ಈ ಅಧಿವೇಶನ ಏಪ್ರಿಲ್ ೩ ರಂದು ಮುಗಿಯಲಿದೆ. ನಂತರದ ಕಾರ್ಯಕ್ರಮ ಗೊತ್ತು ಮಾಡಬೇಕು. ನಿನ್ನನ್ನು ಬಿಟ್ಟು ಊರಿಗೆ ಹೋಗುವುದು ಸರಿ ಕಾಣದು. ನೀನು ಪರೀಕ್ಷೆಗೆ ಕುಳಿತುಕೊಳ್ಳುವ ಪಕ್ಷದಲ್ಲಿ, ಬಹುಶಃ ಏಪ್ರಿಲ್ ೨೨ರ ತನಕವೂ ಊರಿಗೆ ಹೋಗುವುದು ಸಾಧ್ಯವಾಗಲಾರದು. ಅದುವರೆಗೂ ನಾನು ಎಲ್ಲಿರಬೇಕು. ಏನು ಮಾಡುತ್ತಿರಬೇಕು ಎಂಬ ಪ್ರಶ್ನೆ. ‘ಕೆಲವೇ ದಿನಗಳಲ್ಲಿಯಾದರೂ ಹೆಚ್ಚು ಗಮನ ಇಟ್ಟು ಒಂದೆರಡು ಪೇಪರು ಗಳಲ್ಲಿಯಾದರೂ ಪಾಸ್ ಮಾಡಬೇಕೆಂದು ಆಶಯ. ತಮ್ಮ ಕಡೆಯ ಯೋಚನೆ ಹೆಚ್ಚುತ್ತಲಿದೆ’. ಈ ಡೋಲಾಯಮಾನ ಮನಸ್ಸು ಪರೀಕ್ಷೆಗೆ ಗುರಿಯಾದರೆ ಏನು ಸಾಧಿಸೀತು? ಬೇಡವೆಂದು ಹೇಳುವುದಿಲ್ಲ ನಾನು. ನಿರ್ಧಾರಕ್ಕೆ ಬರಬೇಕಾದವಳು ಈಗ ನೀನು ಓದಿಯೇ ತೀರುವೆ. ಪರೀಕ್ಷೆಗೆ ಕುಳಿತು ಎರಡೋ ಮೂರೋ ಪತ್ರಿಕೆಗಳಲ್ಲಿಯಾದರೂ ಪಾಸ್ ಮಾಡುವೆ ಎಂಬ ಮನಸ್ಸಿನ ದೃಢತೆ ಇದ್ದಲ್ಲಿ ಹಾಗೇ ಮಾಡಬಹುದು. ನಂತರವೇ ನಮ್ಮ ಪ್ರವಾಸ ಇತ್ಯಾದಿ ಕಾರ್ಯಕ್ರಮ ಆರಂಭವಾಗಲಿ. ನಿರ್ಧಾರ ಮಾಡಿ ತಿಳಿಸು.

ಫೋಟೋಗಳು ಇನ್ನೂ ಕೈಗೆ ಬಂದಿಲ್ಲ. ಬಂದೊಡನೆಯೇ ಕಳಿಸುವೆ. ನೀನು ತಿಳಿಸಿದ ಎಲ್ಲರಿಗೂ ನಮಸ್ಕಾರ ತಿಳಿಸುವೆ. ಗೆಳೆಯ ಮುಲ್ಕಾರವರಿಗೆ ನಿನ್ನ ಪತ್ರ ಮುಟ್ಟಿಸುತ್ತೇನೆ. ನಿನ್ನ ಗೆಳತಿಯ ಪತ್ರ ಜೊತೆಯಲ್ಲಿ ಕಳಿಸಿದ್ದೇನೆ. ಇದುವರೆಗೂ, ಅವರಿಗೆ ಪತ್ರ ಬರೆದಿಲ್ಲ. ರೈಲಿನಲ್ಲಿ ಅಂದು ಮಾಡಬೇಕಾಗಿದ್ದ ಪ್ರಯಾಣ ರದ್ದು ಮಾಡಿ, ಬಸ್ಸಿನಲ್ಲಿ ಹೋದುದರಿಂದ ಭೇಟಿಮಾಡಲಾಗಲಿಲ್ಲವೆಂದು ಅವರ ಕ್ಷಮಾಷಣೆ ಕೇಳಿಲ್ಲದಲ್ಲಿ, ದೊಡ್ಡ ಅಪರಾಧವೇ ಸರಿ.

ಭಾಷೆ ಮೆಚ್ಚಿದೆ. ಅಕ್ಷರ ಉತ್ತಮವಾಗಬೇಕು. ಬಹುಶಃ ಭಯದಿಂದ ಕೈ ನಡುಗುತ್ತಿದ್ದಿರಬೇಕು!

ಟ್ರಂಕ್ ಕಾಲ್ ಮಾಡಿ ಪಕ್ಕದ ಮನೆಯವರಿಗೇಕೆ ಪದೇ ಪದೇ ತೊಂದರೆ ಕೊಡುವುದು ಎಂದು ಪತ್ರವನ್ನೆ ಬರೆದಿರುತ್ತೇನೆ. ಅವಸರದಲ್ಲಿಯೇ ಬರೆದೆ. ನೀನು ಎಂತಲೇ ಸಂಬೋಧಿಸಿದ್ದೇನೆ. ಸರಿಯಷ್ಟೆ? ಅತ್ತೆ ಮಾವಂದಿರಿಗೂ, ವೇಮಣ್ಣ ಮತ್ತು ಅವರ ಪತ್ನಿಯವರಿಗೂ ಮತ್ತು ನಿನ್ನ ತಂಗಿಯರಿಗೂ, ನಿನ್ನ ಸಹೋದ್ಯೋಗಿ ಮಿತ್ರರಿಗೂ ನನ್ನ ನಮಸ್ಕಾರ ತಿಳಿಸು. ಗೆಳೆಯ ಪೂಜಾರರ ಮತ್ತು ಡಾ. ಪಾಲ್ ಇವರ ಮನೆಗಳಿಗೆ ಹೋಗಿ ಬಾ.

ಎಂದು ನಿನ್ನ
ಗೋಪಾಲಗೌಡ ಶಾಂತವೇರಿ

***

ಪ್ರಿಯ ಸೋನು,

ಟೋಲ್ ನಾಕಾದಲ್ಲಿ ಬಸ್ ಸಿಕ್ಕಿತು. ಆದರೆ ಕುಳಿತುಕೊಳ್ಳಲು ಇಂಬಿರಲಿಲ್ಲ. ನಟರಾಜನಾಗಿ ನಿಂತೇ ಹುಬ್ಬಳ್ಳಿ ಮುಟ್ಟಿದೆ. ಇಳಿದು ಹಾಸಿಗೆ ತೆಗೆದುಕೋ, ಶಿವಮೊಗ್ಗ….. ಎನ್ನುತ್ತಿದ್ದಂತೆಯೇ, ಕೂಲಿ ಹುಡುಗ ಶಿವಮೊಗ್ಗ ಬಸ್ಸು ೬ ಕ್ಕೆ ಹೋಯಿತು ಎಂದಾಗ ನನ್ನ ಎದೆ ಧಸಕ್ ಎಂದಿತು. ೭.೩೦ರ ಹುಬ್ಬಳ್ಳಿ ಬೆಂಗಳೂರು ಎಕ್ಸ್ ಪ್ರೆಸ್‌ಗೆ ಕುಳಿತೆ. ಅದು ಹಾವೇರಿಯಲ್ಲಿ ಕೆಟ್ಟು ಒಂದೂವರೆ ಗಂಟೆ ತಡವಾಗಿ ಮುಂದೆ ಸಾಗಿತು. ೧೨.೩೦ ಕ್ಕೆ ಹರಿಹರ ಮುಟ್ಟಿದೆ. ಅಲ್ಲಿ ಒಂದು ಗಂಟೆ ತಡವಾಗಿ ಕಾದೆ. ೧.೩೦ಕ್ಕೆ ಹರಿಹರ ಬಿಟ್ಟು ೪ ಗಂಟೆಗೆ ಶಿವಮೊಗ್ಗ ಸೇರಿದೆ. ಅಷ್ಟರಲ್ಲಿ, ಗೆಳೆಯ ಪಟೇಲರು ಮತ್ತು ಇತರರು ನನಗಾಗಿ ಕಾದು ತೀರ್ಥಹಳ್ಳಿಗೆ ಕಾರಿನಲ್ಲಿ ಹೊರಟುಹೋಗಿದ್ದರು. ನಾನು ಕೂಡಲೇ ಬಸ್ಸಿನಲ್ಲಿ ತೀರ್ಥಹಳ್ಳಿಗೆ ಹೊರಟಿದ್ದೇನೆ. ಈ ಪತ್ರ ಬಸ್ಸು ಸ್ಟಾಂಡಿನಲ್ಲಿಯೇ ಬರೆದು ಹಾಕುತ್ತಿದ್ದೇನೆ. ಇಷ್ಟು ಸವಿಸ್ತಾರವಾಗಿ ಈ ಪ್ರಯಾಣದ ಪ್ರವರ ಏಕೆ ಬರೆದೆನೆಂದರೆ, ೨೨ಕ್ಕೆ ನಿಮಗೆ ಹೀಗೇ ಆಗಬಾರದು ಎಂದು ತಿಳಿಸಲು.

ನಾನು ಮತ್ತೆ ೧೮ಕ್ಕೆ ಶಿವಮೊಗ್ಗಕ್ಕೆ ಬರುತ್ತೇನೆ. ಅಂದು ಮತ್ತೊಂದು ಪತ್ರದಲ್ಲಿ ನೀವು ಹೇಗೆ ಹೊರಟುಬರಬೇಕು ಇತ್ಯಾದಿ ವಿವರ ತಿಳಿಸುತ್ತೇನೆ.

ಪ್ರಶ್ನೆ ಪತ್ರಿಕೆಗಳು ನಿಮ್ಮ ಸ್ಥಿತಿ ನೋಡಿ ನಗುತ್ತಿರಬಹುದೆ! ನಕ್ಕರೇನಂತೆ. ನಿಮ್ಮ ನಿಶ್ಚಯ ನಿಮ್ಮದು. ಎಲ್ಲಾ ದಿನಗಳು ಹಾಜರಾಗಿ, ನಂತರ ಪೂರ್ಣ ವಿಶ್ರಾಂತಿ. ನಂತರ ಶಿವಮೊಗ್ಗಕ್ಕೆ ಪ್ರಯಾಣ.

ಎಲ್ಲರಿಗೂ ನಮಸ್ಕಾರ ತಿಳಿಸಿ. ಶಿವಮೊಗ್ಗಕ್ಕೆ ಬರೆಯಿರಿ. ನಮಸ್ಕಾರಗಳು.

ಎಂದು ನಿಮ್ಮವ
ಗೋಪಾಲಗೌಡ ಶಾಂತವೇರಿ
೧೫-೪-೬೪
ಶಿವಮೊಗ್ಗ ಬಸ್ ಸ್ಟ್ಯಾಂಡ್

***

ಪ್ರವಾಸಿ ಮಂದಿರ
ತೀರ್ಥಹಳ್ಳಿ
೫-೧-೧೯೬೫

ಪ್ರಿಯ ಸೋನು,

ಹೊಸನಗರ, ಸಾಗರ ಪ್ರವಾಸ ಮುಗಿಸಿಕೊಂಡು ನಿನ್ನೆ ಸಂಜೆ ಇಲ್ಲಿಗೆ ಬಂದೆ. ಇಂದು ಸಂಜೆ ಪುರಸಭೆಯಲ್ಲಿ ಟೀಯಿದೆ. ರಾತ್ರಿ ನಾಟಕದವರ ಆಮಂತ್ರಣವಿದೆ. ನಾಳೆ ಎಡೂರು. ೭, ೮ ಮತ್ತು ೯ ಕ್ರಮವಾಗಿ ಗೌತಮಪುರ, ಸೊರಬ ಮತ್ತು ಶಿಕಾರಿಪುರ. ಈ ಪ್ರವಾಸ ಮುಗಿಸಿಕೊಂಡು ೧೦ ರಂದು ಮಧ್ಯಾಹ್ನ ಬಸ್ಸಿಗೆ ಶಿವಮೊಗ್ಗದಿಂದ ಹೊರಟು ರಾತ್ರಿ ಬೆಂಗಳೂರಿಗೆ ಬರುತ್ತೇನೆ. ತಪ್ಪಿದಲ್ಲಿ ೧೧ ರಂದು ಬೆಳಿಗ್ಗೆ ರೈಲಿದೆ. ಈ ವಿವರ ಶಿವಪ್ಪ ಇತ್ಯಾದಿ ಗೆಳೆಯರಿಗೆ ತಿಳಿಸು.

ಮತ್ತೆ ಮನೆಗೆ ಹೋಗಿಬರಲು ಅವಕಾಶವಾಗಿಲ್ಲ. ಸಾಧ್ಯವಾದರೆ ೭ ರಂದು ಗೌತಮಪುರಕ್ಕೆ ಹೋಗುವಾಗ ಆರಗದಲ್ಲಿಳಿದು ಮನೆಗೆ ಹೋಗಿ ಮುಂದೆ ಪ್ರಯಾಣ ಮಾಡುತ್ತೇನೆ.

ಸುಖವಾಗಿ ಬೆಂಗಳೂರು ಸೇರಿದೆಯಷ್ಟೆ? ಒಬ್ಬಳಿಗೆ ಬೇಸರವಾಗುತ್ತಿರಬಹುದು ಅನಿವಾರ್ಯ. ನಮ್ಮ ನಮ್ಮ ಕರ್ತವ್ಯಗಳನ್ನು ನಾವು ಮಾಡಬೇಕು.

ಶುಭಾಶಯಗಳೊಡನೆ,

ಎಂದು ನಿನ್ನ
ಗೋಪಾಲಗೌಡ ಶಾಂತವೇರಿ

***

ಹೋಟೇಲ್ ಬೃಂದಾವನ
ಶಿವಮೊಗ್ಗ
೧-೧೨-೧೯೬೫

ಪ್ರಿಯ ಸೋನು,

೨೯ರ ಬೆಳಿಗ್ಗೆ ಇಲ್ಲಿಗೆ ಬಂದೆ. ನಾಳೆ ತೀರ್ಥಹಳ್ಳಿ.

೩ ಮತ್ತು ೪ ರಂದು ರಿಪ್ಪನಪೇಟೆ ಮತ್ತು ಹೊಸನಗರಗಳಲ್ಲಿ ಬಹಿರಂಗ ಸಭೆಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ಮುಗಿಸಿಕೊಂಡು ೫-೧೨-೬೫ ರಂದು ನಡೆಯಲಿರುವ ರಾಜ್ಯ ಸಮಿತಿ ಸಭೆಗಾಗಿ ೪ರ ರಾತ್ರಿ ರೈಲಿಗೆ ಇಲ್ಲಿಂದ ಹೊರಟು, ಬೆಂಗಳೂರಿಗೆ ಬರುತ್ತೇನೆ.

ಇನ್ನೂ ಅಣ್ಣನವರ ಮನೆಯ ಕಡೆ ಹೋಗಿಲ್ಲ. ಸಂಜೆ ಹೋಗಿಬರುವೆ. ತಾಯಿಯವರ ಆರೋಗ್ಯ ಸುಧಾರಿಸಿದಂತೆ ಕಾಣುತ್ತೆ. ಊರಿಗೆ ಹೋಗಲು ತವಕಪಡುತ್ತಿದ್ದಾರೆ. ಈ ತಿಂಗಳೂ ತೀರ್ಥಹಳ್ಳಿಯಲ್ಲಿಯೇ ಕಳೆಯಬೇಕೆಂದು ತಿಳಿಸಿ ವೊಪ್ಪಿಸಿರುವೆ.

ಒಂದು ಸಂತಸದ ವಿಷಯ ನಿನಗೆ ತಿಳಿಸುತ್ತೇನೆ. ಈ ಕ್ರಿಸ್‌ಮಸ್‌ನಲ್ಲಿ ನಾವು ಗೋವೆಗೆ ಹೋಗಲು ನಿಶ್ಚಯವಾಗಿದೆ. ನಿನಗೆ ರಜೆ ಬಂದ ಕೂಡಲೇ ಇಲ್ಲಿಗೆ ಬಂದು, ನಂತರ ಇಲ್ಲಿಂದ ಗೆಳೆಯರೊಂದಿಗೆ ಕಾರಿನಲ್ಲಿ ಗೋವೆಗೆ ಹೋಗುವುದು. ಇತರ ವಿವರ ಮಾತನಾಡೋಣ.

ಪತ್ರ ಬರೆಯಲಿಲ್ಲವೆಂದು ಬೇಸರಿಸದಿರಲಿ ಎಂದು ಈ ಪತ್ರ ಬರೆದಿದ್ದೇನೆ. ೨೫-೨೬ ರಂದು ಕೆಮ್ಮು ನೆಗಡಿಯಿಂದ ಹಾಸಿಗೆ ಹಿಡಿದಿದ್ದೆ. ಆರಗದಲ್ಲಿ ತಾ.ಅ. ಮಂಡಳಿಯವರು ಪ್ರೌಢಶಾಲೆಯೊಂದನ್ನು ಮುಂದಿನ ವರ್ಷದಿಂದ ಆರಂಭಿಸುವ ನಿರ್ಣಯ ಸ್ವೀಕರಿಸಿದ್ದಾರೆ.

ಆ ಬಗೆಗೆ, ಆರಗದ ಗೆಳೆಯರು ರೂ. ೫೦೦೦ ಠೇವಣಿ ಕೊಟ್ಟಿರುತ್ತಾರೆ… ಅನಾರೋಗ್ಯದಿಂದ ಎಲ್ಲಾ ದಿನಗಳೂ ಈ ಹಣ ಸಂಗ್ರಹ ಕಾರ್ಯದಲ್ಲಿ ನಾನು ಭಾಗವಹಿಸಲಾಗಲಿಲ್ಲ. ಈ ವಿಷಯ ಗೆಳೆಯ ಲಿಂಗಪ್ಪನವರಿಗೆ ತಿಳಿಸು.

ಬಾಕಿ ವಿಷಯ ಮುಖತಃ ಶುಭಾಶಯಗಳು.

ಎಂದು ನಿನ್ನವ
ಗೋಪಾಲಗೌಡ ಶಾಂತವೇರಿ

***