೨ ಮೀನಾ ಬಾಗ್
ನವದೆಹಲಿ
ಮಧ್ಯಾಹ್ನ ಭಾನುವಾರ, ೩ ಜುಲೈ ೧೯೬೬

ಪ್ರಿಯ ಸೋನು,

೨೯ರಂದು ಸಂಜೆ ನನ್ನ ಪತ್ರ ಅಂಚೆಗೆ ಹೋದ ಸ್ವಲ್ಪ ಹೊತ್ತಿನಲ್ಲೇ ನಿನ್ನ ಪತ್ರ ಕೈ ಸೇರಿತು. ೨೯ರ ಸಂಜೆಯವರೆಗೂ ನಿನ್ನ ಪತ್ರ ಬಾರದುದನ್ನು ನೋಡಿ, ನಾನು ಹುಬ್ಬಳ್ಳಿಯಲ್ಲಿ ಅಂಚೆಗೆ ಹಾಕಲು ಕೊಟ್ಟಿದ್ದ ಪತ್ರ ಸೇರಿತೋ ಇಲ್ಲವೋ ಎಂಬ ಅನುಮಾನ ಬಂದು ಆ ಪತ್ರ ಬರೆದೆ. ಅದು ತಲ್ಪಿರಬಹುದು. ನಿನ್ನ ಮತ್ತೊಂದು ಪತ್ರ ನಿನ್ನೆ ಸಂಜೆ ಮುಟ್ಟಿತು.

ನಾವು ಇಂದು ಬೆಳಿಗ್ಗೆ ಫ್ರಾಂಟಿಯರ್ ಮೇಯಲ್‌ನಲ್ಲಿ ಮುಂಬಯಿಗೆ ಹೊರಡುವವರಿದ್ದೆವು. ನಿನ್ನೆ ಸಂಜೆ ಈ ಕಾರ್ಯಕ್ರಮ ಬದಲಾಯಿಸಿದೆವು. ಈಗ, ೫ರಂದು ಸಂಜೆ ಸದರನ್ ಎಕ್ಸ್‌ಪ್ರೆಸ್‌ನಲ್ಲಿ ಹೊರಟು ಮದರಾಸಿಗಾಗಿ ಬರಲು ತೀರ್ಮಾನಿಸಿದ್ದೇವೆ. ಇಂದು ಮತ್ತು ನಾಳೆ ಸಾಧ್ಯವಾದರೆ, ರಾಷ್ಟ್ರಪತಿಯವರನ್ನೂ, ಪ್ರಧಾನ ಮಂತ್ರಿಯವರನ್ನು ಕಂಡು ಕನ್ನಡನಾಡಿನ ಜನತೆಯ ಕಳವಳವನ್ನು ಅವರ ಮುಂದಿಟ್ಟು, ನ್ಯಾಯಕ್ಕಾಗಿ ಒತ್ತಾಯಪಡಿಸಬೇಕೆಂದಿದ್ದೇವೆ. ಅದಕ್ಕಾಗಿಯೇ ಇಂದು ಬೆಳಿಗ್ಗೆ ಹೊರಡುವುದನ್ನು ಮುಂದೆ ಹಾಕಲಾಯಿತು.

ಮೊದಲ ಎರಡು ದಿನ ರಾಷ್ಟ್ರೀಯ ಸಮಿತಿ ಸಭೆಯಿಂದಾಗಿ ಯಾರನ್ನೂ ಕಾಣುವುದಾಗಿರಲಿಲ್ಲ. ಮೊನ್ನೆ ಮತ್ತು ನಿನ್ನೆ ನಿನ್ನ ಗೆಳತಿ ಶುಭಾಳೊಡನೆ ಕೆಲಹೊತ್ತು ಕಳೆದೆವು. ನೀನು ಬರೆದ ಪತ್ರ ಅವಳಿಗೆ ಸಿಕ್ಕಿದೆ. ಅದರಂತೆ, ಒಂದು ಪೌಂಡು ಉಲನ್, ಒಂದು ಚಪಾತಿ ಕಲ್ಲು, ಕುಟ್ಟುವ ಕಲ್ಲು ಕೊಡಿಸಿದ್ದಾರೆ. ಬುಟ್ಟಿ ಹೆಣೆಯುವ ಪ್ಲಾಸ್ಟಿಕ್ ಸಿಕ್ಕಲಿಲ್ಲ. ಬೆಂಗಳೂರಿನಲ್ಲೇ ಸಿಕ್ಕಬಹುದೆಂದು ಬಿಟ್ಟೆವು. ಅವಳ ಭಾವೀ ಜೀವನ ಸಂಗಾತಿಯ ಬಗೆಗೂ ಮಾತನಾಡಿದೆವು. ಬಿಚ್ಚು ಮನಸ್ಸಿನ ಮಾತುಕತೆ ನಡೆದಿದೆ. ವಿವರ ಬಂದ ನಂತರ ನಿನಗೆ ವರದಿ ಮಾಡುತ್ತೇನೆ. ಅವರಿಗೂ ಬರೆಯುವಂತೆ ಹೇಳಿದ್ದೇನೆ. ಸಮಯ ಸಿಕ್ಕರೆ, ಮತ್ತೊಮ್ಮೆ ಹೊರಡುವ ಮುನ್ನ ಕಂಡು ಬರುತ್ತೇನೆ. ಅವಳ ಗೆಳತಿ ಕಮಲ ಊರಿಗೆ ಹೋಗಿದ್ದು ಈಗ ಈಕೆ ಏಕಾಕಿಯಾಗಿದ್ದಾಳೆ. ಶಾಸ್ತ್ರಿಯವರಲ್ಲಿಗೆ ಹೋಗುವುದಾಗಿಲ್ಲ.

ಶ್ರೀ ಕೊಂಡಾರೆಡ್ಡಿ, ಬೇಡವೆಂದರೂ ಆ ದಿನ ತನ್ನ ಕೇಸಿನ ಒಂದು ಜಜ್‌ಮೆಂಟ್ ಪ್ರತಿಯನ್ನು ತಂದು ನೀವೇ ಇಟ್ಟುಕೊಳ್ಳಬೇಕೆಂದು ಹೇಳಿದ. ನಾನು ಕ್ಷೌರಮಾಡಿಕೊಳ್ಳುತ್ತಾ ಹೊರಗಿನ ಸೋಪಾದಲ್ಲಿ ಕುಳಿತಿದ್ದೆ. ಎದುರು ಇದ್ದ ಕಾಲುಮಣೆಯ ಮೇಲೆ ಇಟ್ಟು ಹೋದ. ಕೋರ್ಟಿನ ಸ್ಟಾಂಪು ಕಾಗದದಲ್ಲಿ ಟೈಪ್ ಮಾಡಿದ ಪ್ರತಿ ಅದು. ಅಲ್ಲೇ ಇರಬಹುದು. ಅಥವಾ ನನ್ನ ಟೇಬಲ್ ಮೇಲೆ ಯಾ ಡ್ರಾಯರ್‌ನಲ್ಲಿ ಇರಬಹುದು. ಸ್ವಲ್ಪ ಶ್ರಮವಹಿಸಿ ಹುಡುಕಿದರೆ ಸಿಕ್ಕೀತು. ಹುಡುಕಿ ಅಗತ್ಯವಿದ್ದಲ್ಲಿ ಕೊಡು.

ಶ್ರೀ ರಾಮಚಂದ್ರ ಬಹುಶಃ ನಿರಾಶನಾಗಿ ಮರಳಿರಬಹುದು. ಏನೂ ಮಾಡುವಂತಿಲ್ಲ. ಗೆಳೆಯ ಮುಲ್ಕಾ ಸದ್ಯ ಇಲ್ಲೇ ಇದ್ದಾರೆ. ಅವರಿಂದ ತಿಳಿಯಿತು. ಅವರೂ ಯಾರಿಗೋ ಹೇಳಲು ಪ್ರಯತ್ನಿಸಿದರೆಂದೂ, ಏನಾಯಿತೋ ತಿಳಿಯದೆಂದೂ ಹೇಳಿದರು. ಬೇಸರಪಟ್ಟುಕೊಂಡು ಹೋಗಿದ್ದಲ್ಲಿ, ಮುಂದೆ ಮತ್ತೊಂದು ಅವಕಾಶ ಬಂದಾಗ ಖಂಡಿತ ಸಹಾಯ ಮಾಡುವುದಾಗಿ ತಿಳಿಸಿದ್ದಾರೆಂದು ಬರೆದು ಸಮಾಧಾನ ಹೇಳು. ಶ್ರೀ ತುಡ್ಕಿ ಚಂದ್ರಶೇಖರ್‌ರವರ ಮಗನಿಗೆ ಎಲ್ಲಿಯಾದರೂ ಸೀಟು ಸಿಕ್ಕಿರಬಹುದು. ನಾನು ೭ ರಂದು ಸಂಜೆ ಅಥವಾ ೮ರ ಬೆಳಿಗ್ಗೆ ಬರುತ್ತೇನೆಂದು, ಅವರು ವಿಚಾರಿಸಿದಲ್ಲಿ ತಿಳಿಸು. ಗೆಳೆಯ ಮುಲ್ಕಾ ನಾಳೆ ಸಂಜೆ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ. ನಿನಗೆ ಟೆಲಿಫೋನ್ ಮಾಡಲು ತಿಳಿಸುತ್ತೇನೆ.

ನಿನ್ನೆ ಮೊನ್ನೆ ಇಲ್ಲಿ ಭಾರಿ ಶೆಖೆಯಿತ್ತು. ಇಂದು ಮೋಡ ಕವಿದ ವಾತಾವರಣವಿದೆ. ಅಷ್ಟು ಶೆಖೆಯಿಲ್ಲ. ಮಳೆ ಬಂದಿಲ್ಲ. ಡಾ. ಲೋಹಿಯಾರವರು ದೆಹಲಿಯಲ್ಲೇ ಇದ್ದಾರೆ. ನಿನ್ನೆ ಸಂಜೆ ಭೇಟಿಮಾಡಿದ್ದೆವು. ಗೆ. ಮುರಹರಿಯವರೂ ಇದ್ದಾರೆ. ಅವರಲ್ಲಿಯೇ ಉಳಿದುಕೊಂಡಿದ್ದೇವೆಂದು ನನ್ನ ಹಿಂದಿನ ಪತ್ರದಲ್ಲೇ ತಿಳಿಸಿದ್ದೇನಷ್ಟೆ. ಮತ್ತೆಲ್ಲಾ ಯಥಾ ಪ್ರಕಾರ, ಹಣ ತರಿಸುವ ಬದಲು ಇಲ್ಲೇ ಗೆಳೆಯ ಮುಲ್ಕಾರಿಂದ ೩೦೦ ಕೈಗಡ ತೆಗೆದುಕೊಂಡಿದ್ದೇನೆ. ನಿನ್ನೆ ಸಂಜೆ ಡಾ. ಮಹಿಷಿಯವರ ಮನೆಗೆ ಹೋಗಿದ್ದೆವು. ಅಲ್ಲೇ ಅಣ್ಣಾ ಗುರೂಜಿ, ಅಪ್ಪಣ್ಣಾಗೌಡ ಪಾಟೀಲ (ಬೆಳಗಾವಿ) ಇತ್ಯಾದಿಯವರ ಭೇಟಿಯಾಯಿತು. ಮುಖ್ಯಮಂತ್ರಿಗಳು ಮತ್ತಿತರರು ಇಂದು ನಾಳೆ ಬರುವವರಿದ್ದಾರಂತೆ. ೫ ರಂದು ಕಾಂಗ್ರೆಸ್ ಕಾರ್ಯಕಾರೀ ಸಮಿತಿ ಏನು ತೀರ್ಮಾನ ಕೈಗೊಳ್ಳುವುದೆಂಬುದನ್ನು ಎಲ್ಲ ಆಸಕ್ತಿವಲಯಗಳೂ ಕುತೂಹಲದಿಂದ ಕಾದಿವೆ. ಬೆಂಗಳೂರು ಬಂದ್ ವರದಿ ಕೇಳಿದೆವು. ಇಂದು ಬೆಳಿಗ್ಗೆ ಹೆಚ್ಚು ವಿವರ ತಿಳಿಯಿತು. ಇನ್ನೂ ಅಲ್ಲಲ್ಲಿ ಚಳುವಳಿ ನಡೆದೇ ಇರುವುದನ್ನು ಕೇಳುತ್ತೇವೆ. ಗೆಳೆಯರಾದ ಲಿಂಗಪ್ಪ, ರಾವ್ ಇತ್ಯಾದಿಯವರಿಗೆ ನಾವು ೭ ಅಥವಾ ೮ ರಂದು ಬರುತ್ತೇವೆಂದು ತಿಳಿಸು. ಈ ಪತ್ರ ತಲ್ಪಿದ ನಂತರ ಬರೆದರೆ ಬಹುಶಃ ನನಗೆ ಇಲ್ಲಿ ಪ್ರಾಪ್ತಿಯಾಗಲಾರದು. ಕಾರಣ ಬರಯುವ ಅವಶ್ಯವಿಲ್ಲ. ಬಾಕಿ ಎಲ್ಲ ವಿಷಯ ಬಂದ ನಂತರ.

ಶುಭಾಶಯಗಳು.

ಎಂದು ನಿನ್ನವ
ಗೋಪಾಲಗೌಡ ಶಾಂತವೇರಿ

***

ಪ್ರಿಯ ಸೋನು,

ದೆಹಲಿಯವರೆಗಿನ ನಮ್ಮ ಪ್ರವಾಸ ಹೆಚ್ಚು ತೊಂದರೆಯಿಲ್ಲದೆ ನಡೆಯಿತು. ಇಂದು ಸಂಜೆ ಇಲ್ಲಿಂದ ಹೊರಟು ೬ ರಂದು ಸಂಜೆ ಬೃಂದಾವನ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿಗೆ ಬರುತ್ತೇನೆ.

ಕಲ್ಕತ್ತಾದಲ್ಲಿ ಶ್ರೀ ಯಶವಂತ್ ಮನೆಯಲ್ಲಿ ಒಂದು ದಿನ ಇದ್ದೆವು. ಎಲ್ಲರೂ ಆರೋಗ್ಯವಾಗಿದ್ದೇನೆ. ನೀನು ಪತ್ರ ಬರೆಯುತ್ತೇನೆಂದು ಹೇಳಿದ್ದೆ. ಆದರೆ, ಬರೆದಂತೆ ಕಾಣಲಿಲ್ಲ. ನಾನು ಮದ್ರಾಸಿನಿಂದ ತಂತಿ ಕಳಿಸಿದ್ದೆ. ಸ್ಟೇಶನ್‌ಗೆ ಬಂದಿದ್ದು, ಮನೆಗೆ ಕರೆದುಕೊಂಡು ಹೋದರು.

ನೀನು ಸುಖವಾಗಿ ಊರಿಗೆ ಹೋಗಿ ನಿನ್ನೆ ಬೆಂಗಳೂರಿಗೆ ಬಂದಿದ್ದೀ ಎಂದು ಭಾವಿಸುತ್ತೇನೆ. ಇಳಾ ಆರೋಗ್ಯವಾಗಿದ್ದಾಳಷ್ಟೆ? ಬರುವಾಗ ಸೀತಾ ಜೊತೆಗೇ ಬಂದಿದ್ದಾಳೆ. ಹಣವೆಲ್ಲಾ ಮುಗಿದು ಹೋಗಿದೆ. ಕಾರಣ, ನಿನಗಾಗಲೀ ಇಳಾಗಾಗಲೀ ನಾನು ಏನನ್ನೂ ತರುತ್ತಾ ಇಲ್ಲ.

ಗೆಳೆಯ ಪಟೇಲರ ಮನೆಯಲ್ಲಿ ಇಳಿದುಕೊಂಡಿದ್ದೇವೆ. ಅವರು ಪತ್ನಿ ಮತ್ತು ಮಗನೊಂದಿಗೆ ಊರಿಗೆ ಬರುತ್ತಿದ್ದಾರೆ. ಸಾಧ್ಯವಾದರೆ ಸ್ಟೇಶನ್‌ಗೆ ಬನ್ನಿ. ಬಾಕಿ ಬಂದ ನಂತರ.

ಶುಭಾಶಯಗಳು,

ಎಂದು ನಿನ್ನ
ಗೋಪಾಲಗೌಡ ಶಾಂತವೇರಿ
ದೆಹಲಿ
೪-೧-೬೭

***

ಲಖನೌ
೨೯-೧೧-೧೯೬೮

ಪ್ರಿಯ ಸೋನು,

೨೨ರಂದು ಸಂಜೆ ಹೈದ್ರಾಬಾದಿಗೆ ಬಂದೆ. ೨೪ರಂದು ವಾರಂಗಲ್ಲಿಗೆ ಹೋಗಿ ಶ್ರೀ ಅಪ್ಪಯ್ಯಣ್ಣನವರನ್ನು ಕಂಡು ಬಂದೆ. ಚಿ.ಸೌ. ಜಯಾಳಿಗೆ ಒಳ್ಳೆಯ ವರ, ಅವರು ಒಪ್ಪಿದರೆ ವರ ಆಗಬಹುದೆಂದು ಇಂದೇ ಅಣ್ಣನವರಿಗೆ ಬರೆದಿರುತ್ತೇನೆ. ವಧೂ-ವರರ ಭೇಟಿ ಡಿಸೆಂಬರಿನಲ್ಲಿ ಶ್ರೀ ಅಪ್ಪಯ್ಯಣ್ಣನವರು ರಜಾಕ್ಕೆ ಬೆಂಗಳೂರು-ಶಿವಮೊಗ್ಗ ಬಂದಾಗ ಆಮೇಲೆ ಮುಂದಿನ ಹೆಜ್ಜೆ.

ನಾನು ೨೫ ರಂದು ಹೈದ್ರಾಬಾದಿನಿಂದ ಹೊರಟು ೨೭ರಂದು ಇಲ್ಲಿಗೆ ಬಂದೆ. ಇಂದು ಪಾಟ್ನಾಕ್ಕೆ ಹೋಗಲಿದ್ದೇನೆ. ಅಲ್ಲಿ ನಾಳೆ ನಾಡಿದ್ದು ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಗೆ ಬಂದು ಸಾಧ್ಯವಿದ್ದಲ್ಲಿ ೨-೩ ರಂದು ಬೆಂಗಳೂರಿಗೆ ಬರುತ್ತೇನೆ. ಇಲ್ಲವಾದಲ್ಲಿ ತಿಳಿಸುತ್ತೇನೆ.

ಈಗ ಸೊಂಟ ನೋವು ಹೋಗಿದೆ. ಆದರೆ ೨೨ರ ರಾತ್ರಿಯಿಂದ ಹೊಟ್ಟೆನೋವು ಕಾಣಿಸಿಕೊಂಡಿತು. ಹೈದ್ರಾಬಾದಿನಲ್ಲಿ ಡಾಕ್ಟರಿಗೆ ತೋರಿಸಿ ಔಷಧಿ ತೆಗೆದುಕೊಂಡಿರುತ್ತೇನೆ. ೬೨ರಲ್ಲಿ ಬಂದಿದ್ದ ಇನ್‌ಸ್ಪೆಕ್ಷನ್‌ಗೆ ಮತ್ತೆ ಜೀವ ಬಂದಂತೆ ಕಾಣುತ್ತೆ. ರಕ್ತದ ಒತ್ತಡಕ್ಕೂ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ.

ಇಲ್ಲಿ ಛಳಿ ಆರಂಭವಾಗಿದೆ. ಮೊನ್ನೆ ೫೦ ರೂ ಕೊಟ್ಟು ಒಂದು ತುಂಬುತೋಳಿನ ಸ್ವೆಟರ್ ಕೊಂಡುಕೊಂಡಿರುತ್ತೇನೆ.

ಸಮಯವಿದ್ದಲ್ಲಿ ದೆಹಲಿಯಲ್ಲಿ ನಿನ್ನ ಗೆಳತಿಯನ್ನು ಕಾಣುತ್ತೇನೆ. ನಾನು ೨೫ರಂದು ಅಥವಾ ೩ರಂದು ಬರಲು ತೊಂದರೆಯಾದಲ್ಲಿ ದೆಹಲಿಯಲ್ಲಿದ್ದು ೭-೮ ರಂದು ರಾಯಚೂರು ಸಮ್ಮೇಳನ ಮುಗಿಸಿಕೊಂಡೇ ಬೆಂಗಳೂರಿಗೆ ಬರುತ್ತೇನೆ. ೭-೮ರಂದು ರಾಯಚೂರಿನಲ್ಲಿ ಸಮ್ಮೇಳನ ನಡೆಯುತ್ತದೆಯೋ ಇಲ್ಲವೋ ಎಂಬುದನ್ನು ತಿಳಿದು ಬರೆಯಲು ಲಿಂಗಪ್ಪನವರಿಗೆ ತಿಳಿಸಿರಿ.

ಚಿ|| ಇಳಾಗೀತಾ ಮತ್ತು ಚಿ|| ರಾಮಮನೋಹರರ ಆರೋಗ್ಯ ಸರಿಯಿರುತ ಎಂದು ನಂಬುತ್ತೇನೆ. ನೀನು ಆರೋಗ್ಯದ ಕಡೆ ನಿಗಾ ಕೊಡು. ಲಕ್ಷ್ಮೀದೇವಿಯವರೊಂದಿಗೆ ಪ್ರೀತಿಯಿಂದ ವರ್ತಿಸಬೇಕು.

ದೆಹಲಿ ವಿಳಾಸಕ್ಕೆ ಪತ್ರ ಬರಿ.

ಶುಭಾಶಯಗಳು.

ಎಂದು ನಿನ್ನವ
ಗೋಪಾಲಗೌಡ ಶಾಂತವೇರಿ

***

ಕೋಣಂದೂರು
೧೪-೫-೧೯೭೧

ಪ್ರಿಯ ಸೋನು,

ನಿನ್ನ ಪತ್ರ ತಲ್ಪಿತು. ಅಣ್ಣಪ್ಪನ ಪತ್ರವು ಬಂದಿವೆ. ಡಾ. ವಿಷ್ಣುಮೂರ್ತಿಯವರು ಬೆಂಗಳೂರಿನಲ್ಲಿ ನೋಡಿ ಬಂದರು. ಅನೇಕ ವಿಷಯಗಳು ತಿಳಿದವು. ನೀನು ನವಲಗುಂದಕ್ಕೆ ಹೋಗಿ ಬರುವೆ ಎಂದು ಭಾವಿಸುತ್ತೇನೆ. ನಾನು ಇಲ್ಲಿಂದ ಶುಭಾಶಯ ಕಳಿಸಿರುತ್ತೇನೆ. ಸಮಯಕ್ಕೆ ತಲ್ಪಿತೋ ಇಲ್ಲವೋ ಕಾಣೆ.

ನೀವು, ಮಕ್ಕಳು ೧೯-೫-೭೧ರಂದು ಧಾರವಾಡದಿಂದ ಇಲ್ಲಿಗೆ ಬರುವುದರ ಅಗತ್ಯವಿಲ್ಲದ ಕಾರಣ ನೀವು ನೇರವಾಗಿ ಬೆಂಗಳೂರಿಗೆ ಹೋದರೆ ಉತ್ತಮ. ಇಳಾಗೀತಾಳನ್ನು ಶಾಲೆಗೆ ಸೇರಿಸಬೇಕು. ರಾಮಮನೋಹರನನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಿದರಾಯಿತು.

ನನ್ನ ಆರೋಗ್ಯ ಸುಧಾರಿಸುತ್ತಿದೆಯಾದರೂ ನಾನು ಸದ್ಯ ಬೆಂಗಳೂರಿಗೆ ಬರಲಾರೆ. ಕೆಲಸದ ಹುಡುಗ ಸಿಕ್ಕಿರುವುದು ಸಮಾಧಾನಕರ. ಆತನನ್ನು ಚೆನ್ನಾಗಿ ನೋಡಿಕೋ.

ಧಾರವಾಡಕ್ಕೆ ಬಂದು ಪೂಜ್ಯ ಮಾವನವರನ್ನು, ಅತ್ತೆ ಮತ್ತು ಇತರ ಎಲ್ಲರನ್ನು ಕಂಡು ಬರುವ ಯೋಚನೆಯಲ್ಲಿದ್ದೆ. ಆದರೆ ಈಗ ಅದು ಸಾಧ್ಯವಿಲ್ಲ. ಎಲ್ಲರಿಗೂ ನನ್ನ ಸಪ್ರೇಮ ವಂದನೆಗಳನ್ನು ತಿಳಿಸು.

ನಿನ್ನ ಆರೋಗ್ಯದ ಕಡೆಗೆ ಗಮನವಿರಲಿ. ಮಕ್ಕಳು ನಕ್ಕು ನಲಿದಾಡುತ್ತಿರಲಿ. ಹೆಚ್ಚು ಪ್ರೀತಿಯಿಂದ ಸಾಕು. ನನ್ನ ಬಗೆಗೂ ಮಕ್ಕಳು ಹೆದರದಂತೆ ಬೆಳೆಯಲಿ. ಸ್ನೇಹಿತರಾದ ಸಂಜೀವರಾವ್, ಫಣಿರಾಜ್, ಅಪ್ಪಣ್ಣ ಇವರ ನೆರವಿಗಾಗಿ ನಾನು ಋಣಿ.

ಶ್ರೀ ನಾಗಪ್ಪನವರು ಸಿಕ್ಕಿದ್ದರೆ? ಅವರಿಗೆ ನನ್ನ ನಮಸ್ಕಾರ ತಿಳಿಸು. ಎಲ್ಲರಿಗೂ ನಮಸ್ಕಾರ ತಿಳಿಸು, ಧಾರವಾಡದಲ್ಲೂ ಬೆಂಗಳೂರಿನಲ್ಲೂ, ನೇರವಾಗಿ ಬೆಂಗಳೂರಿಗೆ ಹೋಗುವುದು ಒಳಿತೆಂದು ಬರೆದಿರುತ್ತೇನೆ. ಕಾರಣ, ಹೆಚ್ಚು ಸಮಯವಿಲ್ಲವೆನ್ನುವುದು.

ಕೆಲವು ದಿನಗಳ ಮುಂಚೆ ಬೆಂಗಳೂರು ಸೇರಿದರೆ ಮಕ್ಕಳ ಯೋಗಕ್ಷೇಮ, ಶಾಲೆ ಕೆಲಸದ ಹುಡುಗನ ತರಬೇತಿ ಮತ್ತು ನಿನ್ನ ಶಾಲಾ ಸಿದ್ಧತೆ ಇವುಗಳಿಗೆಲ್ಲಾ ಸಹಾಯಕ. ಇಲ್ಲಿಗೆ ಈಗ ನೀವು ಬರುವ ಅವಶ್ಯಕತೆ ಇಲ್ಲವೆಂದು ಬರೆದೆನೆಂದುಕೊಂಡು ಅನ್ಯಥಾ ಭಾವಿಸಬೇಡ. ಡಾ. ವಿಷ್ಣುಮೂರ್ತಿಯವರಿಗೂ, ಅವರ ಪತ್ನಿ ಚಿ.ಸೌ. ರೇಖಾರವರಿಗೂ ನಿನ್ನ ವಂದನೆಗಳನ್ನು ತಿಳಿಸಿರುತ್ತೇನೆ. ಹಾಗೆ ಅವರೀರ್ವರೂ ನಿನಗೆ ನಮಸ್ಕಾರ ತಿಳಿಸಿದ್ದಾರೆ. ಡಾ. ವಿಷ್ಣುಮೂರ್ತಿ ಮತ್ತು ಅವರ ಪತ್ನಿಯವರು ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನನಗೆ ಇನ್ನೂ ಮಾನಸಿಕ ದುಗುಡ. ರೆಸ್ಟ್‌ಲೆಸ್‌ನೆಸ್ ಹೋಗಿ, ಪೂರ್ಣ ವಿಶ್ರಾಂತಿ ಪಡೆಯುವ ಧೈರ್ಯಸ್ಥೈರ್ಯ ನೆಮ್ಮದಿ ದೊರೆತಿಲ್ಲ. ವೈದ್ಯರು ಮೊನ್ನೆ ಬಂದು ಧೈರ್ಯ ನೀಡಿ ಹೋಗಿರುತ್ತಾರೆ. ಇನ್ನೂ ಕೆಲವು ಕಾಲ ಇಲ್ಲಿಯೇ ಇರಬೇಕಾದೀತು. ಊರುಮನೆಯಾದುದರಿಂದ ಬಂದು ಹೋಗುವವರ ಒತ್ತಡ ಹೆಚ್ಚು. ಶ್ರೀ ಲಿಂಗಪ್ಪನವರು ಕಳೆದ ಮೂರು ದಿನಗಳಿಂದ ಇತ್ತ ಬಂದಿಲ್ಲ. ನಿನ್ನೆ ಗೆಳೆಯ ಭಟ್ಟರು ಬಂದು ಸ್ವಲ್ಪ ಸಮಾಧಾನದಿಂದ ಇರುವಂತೆ ಹೇಳಿ ಹೋಗಿರುತ್ತಾರೆ. ಇದೇ ೧೬ರಂದು ಬರುತ್ತಾರೆ. ಇಲ್ಲಿ ಎಲ್ಲರು ಆರೋಗ್ಯ. ಬಾಕಿ ವಿಷಯ ಹಿಂದಿನಂತೆ, ಶ್ರೀಕಂಠ ಹೆಗ್ಗಡೆಯವರು ನಿನ್ನೆ ಶಿವಮೊಗ್ಗಕ್ಕೆ ಬಂದಿದ್ದರೆಂದು ತಿಳಿಯಿತು. ನೀನು ಅವರಿಗೆ ಬರೆದು ತಿಳಿಸಿದರೆ (ಅವಶ್ಯಕತೆ ಕಂಡರೆ) ನೆರವು ನೀಡುತ್ತಾರೆ.

ಶುಭಾಶಯಗಳು.

ಎಂದು ನಿನ್ನ
ಗೋಪಾಲಗೌಡ ಶಾಂತವೇರಿ

***

ಮಧ್ಯಾಹ್ನ ೨ ಗಂಟೆ
೨-೧೦-೧೯೭೧

ಪ್ರಿಯ ಸೋನು,

ನಿನ್ನೆ ಸಂಜೆ ೫ ಗಂಟೆಯ ತನಕ ಮಾನಸಿಕವಾಗಿ ಸಾಗರಕ್ಕೆ ಹೋಗುವ ತವಕದಲ್ಲಿದ್ದೆ. ೫ ರಿಂದ ೭ರವರೆಗೂ ಮನಸ್ಸಿಗೆ ಕಿರಿಕಿರಿಯಾಯಿತು. ಹೊರಟಿದ್ದಾಯಿತು. ರೈಲಿಗೆ ಕಾಲಕ್ಕೆ ಸರಿಯಾಗಿ ಹೋಗಿ ಕುಳಿತೆ. ಗೆಳೆಯರಾದ ಕೆ.ಜಿ. ಮಹೇಶ್ವರಪ್ಪನವರು, ರಮೇಶ ಬಂದರು. ೧೧.೩೦ರವರೆಗೆ ಮಾತನಾಡುತ್ತಾ ಕಾಲಕಳೆದ ಪರಿಣಾಮವಾಗಿ ಕೂಡಲೆ ನಿದ್ರೆ ಬರಲಿಲ್ಲ. ಹಾಸಲು ಹೊದೆಯಲು ಸಾಕಷ್ಟು ಬಟ್ಟೆ ತರದೇ ಹೋದ ಕಾರಣ ಸ್ವಲ್ಪ ತ್ರಾಸವಾಯಿತು. ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳದೆ ಹೋದುದು ತಪ್ಪಾಯಿತು. ಬಾಯಾರಿಕೆಗೆ ಕುಡಿಯಲು ಏನೂಯಿಲ್ಲದೆ ಪರಿತಪಿಸಬೇಕಾಯಿತು. ಅಂತೂ ತಿಪಟೂರು ಬಿಟ್ಟ ನಂತರ ನಿದ್ರೆ ಬಂದಿತು. ಭದ್ರಾವತಿಯಲ್ಲಿ ಎಚ್ಚರವಾಯಿತು. ಅದೇ ರೈಲಿನಲ್ಲಿ ೧೦.೩೦ಕ್ಕೆ ಸಾಗರ ಸೇರಿದೆವು. ನಿಲ್ಲಾಣಕ್ಕೆ ಗೆಳೆಯರಾದ ತಿಮ್ಮಪ್ಪ, ಚಂದ್ರಶೇಖರ್ ಮತ್ತು ಇತರ ಸ್ನೇಹಿತರು ಬಂದಿದ್ದರು. ಅಲ್ಲಿಂದ ಪ್ರವಾಸಿ ಮಂದಿರಕ್ಕೆ ಹೋಗಿ ಸ್ನಾನಾದಿಗಳನ್ನು ಪೂರೈಸಿದೆ. ಊಟ ಬಂದು ಎದುರಿದೆ. ಮಧ್ಯಾಹ್ನ ೧ ಗಂಟೆಗೆ ಮೆರವಣಿಗೆ, ನಂತರ ಸಭೆ. ಶಿವಮೊಗ್ಗ ಗೆಳೆಯರು ಇನ್ನೂ ಬಂದಿಲ್ಲ. ಬರಬಹುದು. ನಾಳೆ ತೀರ್ಥಹಳ್ಳಿಗೆ ಹೋಗಿ ವಿವರವಾಗಿ ಬರೆಯುತ್ತೇನೆ.

ಇಂದು ನಿನಗೆ ರಜಾ, ಚಿ|| ಇಳಾಗೀತಾ, ರಾಮಮನೋಹರ ತಂಟೆ ಮಾಡದೆ ಚೆನ್ನಾಗಿದ್ದಾರೆಂದು ಭಾವಿಸುತ್ತೇನೆ. ಅವರಿಗೆ ನನ್ನ ಪ್ರೀತಿಯ ಆರ್ಶೀರ್ವಾದಗಳು. ಚೆನ್ನಾಗಿ ನೋಡಿಕೋ. ಹೊರಡುವ ಅವಸರದಲ್ಲಿ ಕಾರಿನ ವಿಷಯ ಮಾತನಾಡಲು ಆಗಲಿಲ್ಲ. ಗೆಳೆಯ ಸೇಟ್‌ರಿಗೆ ಪತ್ರ ಟಪ್ಪಾಲಿಗೆ ಹಾಕಿರಬಹುದು. ಸಭೆಗೆ ಹೋಗಬೇಕು. ಅವಸರ ವಿವರ ಬರೆಯಲಾರೆ. ಮನೆಕಡೆ ನೋಡಿಕೋ. ಚಿ|| ಕೃಷ್ಣಮೂರ್ತಿ, ಅಜ್ಜಿ ಇವರು ಆರೋಗ್ಯವೆಂದು ನಂಬುತ್ತೇನೆ. ನೀನು ಮಕ್ಕಳನ್ನು ನಿನ್ನ ಆರೋಗ್ಯವನ್ನು ನೋಡಿಕೊಂಡು ಸಾಕಷ್ಟು ಆರಾಮು ತೆಗೆದುಕೋ.

ಶುಭಾಶಯಗಳು,

ಎಂದು ನಿನ್ನ ಪ್ರೀತಿಯ
ಗೋಪಾಲಗೌಡ ಶಾಂತವೇರಿ

***

ತೀರ್ಥಹಳ್ಳಿ
೧೦-೧೦-೧೯೭೧

ಪ್ರಿಯ ಸೋನು,

ನಿನ್ನ ಪತ್ರ ಬರಲಿಲ್ಲ. ಅಲ್ಲಿನ ಎಲ್ಲಾ ವಿಷಯಗಳು ತಿಳಿಯಲಿಲ್ಲ. ನೀನು ಲಿಂಗಪ್ಪನವರ ಮೂಲಕ ಕಳಿಸಿದ ಕಾಗದಗಳು, ಬೇರುಗಳು ತಲ್ಪಿವೆ. ಹಿಂದೆ ನೀನು ಲಿಂಗಪ್ಪನವರ ಮೂಲಕ ತಿಳಿಸಿದ ವಿಷಯಗಳನ್ನು ತಿಳಿದೆ. ವಿವರವಾಗಿ ವಿಷಯ ತಿಳಿದುಕೊಂಡು ಬಂದು ತಿಳಿಸುತ್ತೇನೆಂದು ತಿಳಿಸಿ ಹೋದವರು ಇನ್ನೂ ಇಲ್ಲಿಗೆ ಬಂದಿಲ್ಲ. ಈ ಮಧ್ಯಾಹ್ನ ಅಥವಾ ನಾಳೆ ಬರಬಹುದು.

ಅಕ್ಟೋಬರ್ ೩ ರಂದು ಸಾಗರ ಸೇರಿದೆವು. ಮಧ್ಯಾಹ್ನ ಸಭೆ ನಡೆಯಿತು. ಪ್ರವಾಸಿ ಮಂದಿರದಲ್ಲಿ ಬೀಡಾರ. ೩ನೇ ತಾರೀಖು ಶ್ರೀ ಕೆ.ವಿ. ಸುಬ್ಬಣ್ಣನವರಲ್ಲಿಗೆ ಹೋಗಿ ಬಂದೆ. ಸಂಜೆ ಪಂಡಿತರನ್ನು ಅವರ ಮನೆಯಲ್ಲಿ ಕಂಡು ಬಂದೆ. (ಕೋಡದ ಕಟ್ಟೆ) ೪ ರಂದು ತೀರ್ಥಹಳ್ಳಿಗೆ ಬಂದೆ. ಪ್ರವಾಸಿ ಮಂದಿರದಲ್ಲಿ ಬಿಡಾರ. ೪, ೫, ೬, ೭ ರಾತ್ರಿ ಪ್ರವಾಸಿ ಮಂದಿರ. ೮ ರಂದು ಬೇರೆ ಮನೆಗೆ ಬದಲಾಯಿಸಿದೆ. ಈಗ ಅಲ್ಲೇ ಇದ್ದೇನೆ. ಚಿ.ರಾಮಪ್ಪನ ಮನೆಯಿಂದ ಅಡಿಗೆಮಾಡಿ ಕಳಿಸುತ್ತಾರೆ. ತಾಯಿಯವರನ್ನು ತೀರ್ಥಹಳ್ಳಿಗೆ ಬರುವಾಗ ದಾರಿಯಲ್ಲಿ ಮನೆಗೆ ಹೋಗಿ ನೋಡಿಕೊಂಡು ಮಾತನಾಡಿಸಿ ಬಂದೆ. ಆರೋಗ್ಯವಾಗಿರುತ್ತಾರೆ.

ದೊರೆತಿರುವ ವರದಿಯಂತೆ ನಿನಗೆ ರಜಾ ಬಂದಿದೆಯಾದರೂ ಪರೀಕ್ಷೆ ನಡೆಯುತ್ತಿರುವುದರಿಂದ ಶಾಲೆಗೆ ಹೋಗುತ್ತಿರುವೆ ಎಂದು ತಿಳಿದೆ. ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಿರುತ್ತೀ ಎಂದು ನಂಬುತ್ತೇನೆ. ನಿನ್ನ ಮುಂದಿನ ಕಾರ್ಯಕ್ರಮ ಏನು? ನನ್ನ ಕಾರ್ಯಕ್ರಮಗಳು ಇನ್ನೂ ಸ್ಪಷ್ಟವಾಗಿಲ್ಲ. ಆರೋಗ್ಯ ಸ್ವಲ್ಪ ಸುಧಾರಿಸಿದೆ. ದೂರಪ್ರಯಾಣ ಮಾಡುವ ಧೈರ್ಯ ಬಂದಿಲ್ಲ. ರಾತ್ರಿ ನಿದ್ರೆ ಬರುತ್ತಿದೆ. ಗೆಳೆಯ ಪುರುಷೋತ್ತಮಗೌಡರು ಸಹಾಯಕ್ಕೆ ಇದ್ದಾರೆ. ನಾನು ಈ ಕಡೆ ಬಂದು ಎಂಟು ಹತ್ತು ದಿನಗಳಾದವು. ನಿನಗೆ ಸಾಧ್ಯವಾದರೆ ಶ್ರೀ ನಾಗಪ್ಪನವರಲ್ಲಿಗೆ ಹೇಳಿ ಕಳಿಸಿ ಸಣ್ಣ ಕಾರನ್ನು ಪಡೆದು ನೇರವಾಗಿ ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಬಂದರೆ ಆರಗಕ್ಕೆ ಹೋಗಿ ತಾಯಿಯವರನ್ನು ನೋಡಿಕೊಂಡು ಹರಿಹರ, ಧಾರವಾಡಕ್ಕೂ ಹೋಗಿ ಬರಬಹುದು. ಎಂಟು ಹತ್ತು ದಿನ ಬೇಕಾಗಬಹುದೆಂದು ತಿಳಿಸಿ ನಮ್ಮೊಂದಿಗೆ ಸಹಕರಿಸುವ ಒಬ್ಬ ಡ್ರೈವರನ್ನು ಕಳಿಸಬೇಕೆಂದು ನಾನು ಬರೆದಿರುತ್ತೇನೆಂದು ತಿಳಿಸು. ಸದ್ಯ ನೀನು ಮತ್ತು ಮಕ್ಕಳು ಬೆಂಗಳೂರಿನಲ್ಲೇ ಕಳೆಯುವುದಾದಲ್ಲಿ ನನ್ನ ಅಭ್ಯಂತರವಿಲ್ಲ.

ಎಂದು ನಿನ್ನ ಪ್ರೀತಿಯ
ಗೋಪಾಲಗೌಡ ಶಾಂತವೇರಿ

***

ತೀರ್ಥಹಳ್ಳಿ
೧೧-೧೦-೭೧

ಪ್ರಿಯ ಸೋನು,

ರಾತ್ರಿ ನಿದ್ರೆ ಬಾರದ ಕಾರಣ ಆಯಾಸವಾಗಿದೆ. ನಿನ್ನೆಯೇ ಪತ್ರ ಬರೆಯಲು ಪ್ರಯತ್ನಿಸಿದೆ. ಆದರೆ ಪೂರಾ ಬರೆದು ಅಂಚೆಗೆ ಹಾಕಲಾಗಲಿಲ್ಲ. ಚಿ|| ರಾಮಪ್ಪ ಆರಗಕ್ಕೆ ನಿನ್ನೆ ಹೋಗಿ ಅಜ್ಜಿಯನ್ನು ಮಾತನಾಡಿಸಿಕೊಂಡು ಬಂದ. ಆರೋಗ್ಯವಾಗಿರುತ್ತಾರೆಂದು ತಿಳಿಸಿದ. ಕಾರನ್ನು ಕಳಿಸಿದರೆ ಇಲ್ಲಿಗೆ ಬಂದು ಹೋಗುತ್ತೇನೆಂದು ಹೇಳಿದ್ದಾರೆ.

ಚಿ|| ಗಳಾದ ಇಳಾ ಮತ್ತು ರಾಮು ಆರೋಗ್ಯವೆಂದು ನಂಬುತ್ತೇನೆ. ಮಕ್ಕಳಿಗೆ ನನ್ನ ಪ್ರೀತಿಕೊಡು, ನಿನ್ನ ಶಾಲಾ ಕೆಲಸ ಮುಗಿದಿರಬೇಕು. ಮುಂದಿನ ಕಾರ್ಯಕ್ರಮವನ್ನು ಕೂಡಲೇ ಬರೆದು ತಿಳಿಸು. ನನ್ನ ಸಾಗರ ಪತ್ರದಲ್ಲಿ ತೀರ್ಥಹಳ್ಳಿಯಿಂದ ವಿವರವಾಗಿ ಬರೆಯುತ್ತೇನೆಂದು ತಿಳಿಸಿ ಬರೆಯದಿದ್ದುದು ತಪ್ಪಾಯಿತು. ಮಧ್ಯೆ, ಲಿಂಗಪ್ಪನವರು ಬೆಂಗಳೂರಿಗೆ ಹೋಗಿ ನಿಮ್ಮ ಕಡೆ ಎಲ್ಲಾ ವಿಷಯ ಬಂದು ತಿಳಿಸುತ್ತೇನೆಂದು ಹೋದವರು ಇನ್ನೂ ಬಂದಿಲ್ಲ. ನೀನು ಕಳಿಸಿದ್ದ ಬೇರು, ಕಾಗದಗಳು ನಿನ್ನೆ ನನ್ನ ಕೈಸೇರಿವೆ ಅಷ್ಟೆ. ನೀನು ಎಲ್ಲಾ ವಿಚಾರ ಮಾಡಿ ಬರಿ. ನೇರವಾಗಿ ತೀರ್ಥಹಳ್ಳಿಗೆ ಬಂದರೆ ಆರಗ ಹೋಗಿ ಅಥವಾ ಇಲ್ಲಿಗೇ ಅವರನ್ನು ಬರಮಾಡಿಕೊಂಡು ತಾಯಿಯವರನ್ನು ಕಂಡು ಈ ಕಡೆ ಒಂದೆರಡು ದಿವಸಗಳಿದ್ದು, ಬೆಂಗಳೂರಿಗೆ ವಾಪಸ್ಸು ಹೋಗುವುದಾದೀತು. ಧಾರವಾಡಕ್ಕೆ ಹೋಗಿಬರುವುದು ಈಗ ಕಷ್ಟವಾದೀತೆಂದು ನನ್ನ ಅಭಿಪ್ರಾಯ. ಕಾರು ಸಿಕ್ಕುವ ಹಾಗಿದ್ದಲ್ಲಿ ಮಕ್ಕಳನ್ನು ಕರೆದುಕೊಂಡು ಬರಬಹುದು. ಬೆಂಗಳೂರಿಗೆ ಎಲ್ಲರೂ ಒಟ್ಟಾಗಿ ಹೋಗಬಹುದು. ವಿಚಾರಿಸಿ ನೋಡು, ನಿನ್ನ ಅನುಕೂಲ ಚಿ|| ಕೃಷ್ಣಮೂರ್ತಿ ಆರೋಗ್ಯವಾಗಿರುತ್ತಾನೆಂದು ನಂಬುತ್ತೇನೆ. ಅಜ್ಜಿಯೂ ಆರೋಗ್ಯ ತಾನೆ? ನಿನ್ನ ಡ್ರೈವಿಂಗ್ ಕಲಿಯುವುದು ಮುಗಿಯಿತೆ? ಸಾಕಷ್ಟು ಬಿಡುವು ಸಿಕ್ಕಿತೆ? ಅವಸರದಲ್ಲಿ ಕಲಿಯುವ ಹವ್ಯಾಸ ಬೇಡವೆಂದು ಕಾಣುತ್ತೆ. ಹೀಗೆ ಬರೆದೆನೆಂದು ನಿರಾಶಳಾಗಬೇಡ. ಉದ್ದವಾಗಿ ಬರೆಯಲಾರೆ. ಇಂದು ರಾತ್ರಿ ನಿದ್ರೆ ಬಂದರೆ ಚಿಂತೆಯಿಲ್ಲ. ಶ್ರೀಗಳಾದ ಫಣಿರಾಜ್, ಅಣ್ಣಪ್ಪ ಇವರು ಬಂದು ಹೋಗುತ್ತಿರಬಹುದು. ಶ್ರೀ ಫಣಿ ಫಲಿತಾಂಶ ಆಶಾದಾಯಕವಾಗಿ ಪ್ರಕಟವಾಗಬಹುದು. ನಂಬಿಕೆ ಗೆಳೆಯರಾದ ರಮೇಶ್, ಪುಟ್ಟಸ್ವಾಮಿ (ಪತ್ರ ಬಂದಿದೆ) ವಿಚಾರಿಸಿಕೊಂಡು ಹೋಗುತ್ತಿರಬಹುದು. ಎಲ್ಲರಿಗೂ ನನ್ನ ನೆನಪು ಕೊಡು. ಡಾ. ವಿಷ್ಣುಮೂರ್ತಿ ಕಂಡಿದ್ದರು. ಅವರ ಪತ್ನಿ ಚಿ|| ರೇಖಾರವರು ೬-೭ ತಿಂಗಳು ಗರ್ಭಿಣಿ ಎಂದು ತಿಳಿಯಿತು. ಆರೋಗ್ಯವಾಗಿರುತ್ತಾರೆ.

ಇಲ್ಲಿ ಸಣ್ಣ ಮಳೆ ಮುಗಿಸುತ್ತೇನೆ ಕೂಡಲೇ ಬರಿ.

ಶುಭಾಶಯಗಳು,

ಎಂದು ನಿನ್ನ ಪ್ರೀತಿಯ
ಗೋಪಾಲಗೌಡ ಶಾಂತವೇರಿ

***

 

ತೀರ್ಥಹಳ್ಳಿ
೧೨-೧೦-೭೧

ಪ್ರಿಯ ಸೋನು,

ರಾತ್ರಿ ನಿದ್ರೆ ಬಂದಿತು. ಸ್ವಲ್ಪ ಆರಾಮು. ಬೆಳಿಗ್ಗೆ ಡಾ. ವಿಷ್ಣುಮೂರ್ತಿಯವರು ಬಂದಿದ್ದರು. ಶಿವಮೊಗ್ಗಾದಲ್ಲಿ ಗೆ. ಲಿಂಗಪ್ಪನವರನ್ನು ಕಂಡಿದ್ದರಂತೆ. ನೀನು ಪತ್ರ ಬರೆಯುತ್ತೇನೆಂದು ಹೇಳಿರುವಿಯಂತೆ. ಇಂದು ಮಧ್ಯಾಹ್ನ ಯಾ ನಾಳೆ ನನಗೆ ಸಿಕ್ಕೀತು. ಚಿ|| ಇಳಾ ಮತ್ತು ರಾಮಮನೋಹರ ಆರೋಗ್ಯವಾಗಿದ್ದಾರೆಂದು ನಂಬುತ್ತೇನೆ. ಅವರಿಗೆ ನನ್ನ ಪ್ರೀತಿಯ ಸದಾಶೀರ್ವಾದಗಳು. ಚಿ|| ಕೃಷ್ಣಮೂರ್ತಿ ಮತ್ತು ಅಜ್ಜಿ ಆರೋಗ್ಯವೆಂದು ಭಾವಿಸುತ್ತೇನೆ. ಈ ಲಗ್ತು ಶ್ರೀ ನಾಗಪ್ಪನವರಿಗೆ ಒಂದು ಪತ್ರ ಇಟ್ಟಿದ್ದೇನೆ. ಅವರಿಗೆ ತಲ್ಪಿಸಿ, ಸೂಕ್ತ ಉತ್ತರ ಪಡೆದು ಹೊರಡುವ ಕಾರ್ಯಕ್ರಮ ನಿಗದಿಮಾಡಿ ತಿಳಿಸಿ, ಹೊರಡು. ನೀನು ಇಲ್ಲಿಗೆ ಬಂದ ನಂತರ ಮುಂದಿನ ಕಾರ್ಯಕ್ರಮ ಗೊತ್ತು ಮಾಡಿ ಮುಂದುವರಿಯಬಹುದು. ಮನೆಯಿಂದ ಬರುವಾಗ ಸಣ್ಣ ಎಲೆಕ್ಟ್ರಿಕ್ ಸ್ವೌವ್ ಹಿಡಿದುಕೊಂಡು ಬಂದರೆ ಅನುಕೂಲ. ಮಕ್ಕಳ ಬಟ್ಟೆ ಒಂದು ಹಾಸಿಗೆ, ಹೊದಕಲು ಮುಂತಾದ ಅವಶ್ಯಕತೆಗಳನ್ನು ತಂದರೆ ಕ್ಷೇಮ. ಈಗ ನಿನಗೆ ರಜಾ. ನಿನ್ನ ಶಾಲಾಕಾರ್ಯಕ್ರಮ ಖಚಿತವಾಗಿ ತಿಳಿಯಲಿಲ್ಲ. ಮನಸ್ಸು ಮಾಡಿದರೆ ದೀಪಾವಳಿಗೆ ಇಲ್ಲಿಗೆ ಬರಬಹುದು. ಸೂಕ್ತ ಕಂಡಂತೆ ಮಾಡು. ಧಾರವಾಡದ ಸಮಾಚಾರ ತಿಳಿಸು, ಹಿಂದಿನ ಪತ್ರಗಳನ್ನು ಇಟ್ಟಿರುತ್ತೇನೆ. ಅವುಗಳು ನಿರ್ದಿಷ್ಟವಿಲ್ಲ. ಗೊಂದಲದಲ್ಲಿ ಮುಗಿದಿವೆ. ಮನೋಸ್ಥಿತಿ ಹಾಗಿತ್ತು. ಮನೆಗೆ ಯಾರು ಯಾರು ಬಂದಿದ್ದರು? ನಂತರ ವಿವರವಾಗಿ ತಿಳಿಸಿದರೆ ಸಾಕು. ದಿನಾಂಕ ೮ ರಂದು ಸಂಜೆ ಪ್ರವಾಸಿ ಮಂದಿರ ಬಿಟ್ಟು ಇಲ್ಲಿಗೆ ಬಂದಿರುತ್ತೇನೆ. ರಾಮಪ್ಪ ಊಟ ತಿಂಡಿ ತರುತ್ತಿದ್ದಾನೆ. ಈ ಪತ್ರ ಬರೆಯುವಾಗ ತಲೆ ಬಿಸಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚು ವಿಷಯ ವಿಚಾರ ಮಾಡುವುದನ್ನು ಬದಿಗಿಟ್ಟು ಈ ಪತ್ರ ಮುಗಿಸುವುದು ಸರಿ ಎಂದು ತೋರುತ್ತೆ. ಉಳಿದ ಸಂಗತಿಗಳನ್ನು ಮುಖತಃ ಮಾತನಾಡುವ. ಸಮಯ ಆಗುತ್ತಿದೆ. ಅಂಚೆಗೆ ಈ ಪತ್ರ ಹಾಕಿಸಬೇಕು. ನನ್ನ ಆರೋಗ್ಯ ಸುಧಾರಿಸುತ್ತಿದೆ. ಈಗಿರುವ ಮನೆ ಶ್ರೀ ನಾಗೇಂದ್ರರಾಯರದ್ದು. ಅವರು ಇನ್ನೂ ಇಲ್ಲಿಗೆ ವಾಸಕ್ಕೆ ಬಾರದಿರುವ ಕಾರಣ ಖಾಲಿಯಾಗಿತ್ತು. ಸದ್ಯ ನನಗೆ ಇರಲು ಅವಕಾಶವಿತ್ತಿದ್ದಾರೆ. ಶಾಂತವಾಗಿದೆ, ಮನೆ ದೊಡ್ಡದಾಗಿ ಲಕ್ಷಣವಾಗಿದೆ. ಏನೂ ತೊಂದರೆಯಿಲ್ಲ. ನೀನು ಮತ್ತು ಮಕ್ಕಳು, ಎರಡು ದಿನ ಆರಾಮವಾಗಿ ಇಲ್ಲಿ ಇರಬಹುದೆಂದು ಆಶಿಸುತ್ತೇನೆ. ಏನೇನೋ ಬರೆಯುವುದಿದೆ. ಕ್ರಮೇಣ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು ಸರಿ.

ಶುಭಾಶಯಗಳು,

ಎಂದು ನಿನ್ನ ಪ್ರೀತಿಯ
ಗೋಪಾಲಗೌಡ ಶಾಂತವೇರಿ

***