ತೀರ್ಥಹಳ್ಳಿ
೧೨-೧೦-೭೧

ಪ್ರೀತಿಯ ಸೋನು,

ನಿನಗೆ ಬರೆದ ಕಾಗದ ಅಂಚೆಗೆ ಕಳಿಸಿದ ತಕ್ಷಣ, ನೀನು ಬೆಂಗಳೂರಿನಿಂದ ಬರೆದ ಪತ್ರ ಮತ್ತು ರೀ-ಡೈರೆಕ್ಟ್ ಮಾಡಿದ ಶ್ರೀ ರೇವಳಪ್ಪನವರ ಪತ್ರ ತಲ್ಪಿದುವು. ಕೂಡಲೇ ಈ ಉತ್ತರ ಕಳುಹಿಸುತ್ತಿದ್ದೇನೆ. ಪ್ರವಾಸಿ ಮಂದಿರ ವಿಳಾಸಕ್ಕೆ ಬರೆದಿರುತ್ತಿ. ನಿನ್ನ ಬಂದ ಪತ್ರಗಳು ಒಂದು ದಿನ ಅಲ್ಲೇ ಕೊಳೆಯಬೇಕಾಯಿತು. ನಿನ್ನ ಕಾಗದ ಹರ್ಷ ತಂದಿದೆ. ದೀಪಾವಳಿ ಬೆಂಗಳೂರಿನಲ್ಲಿ ಕಳೆದು ನಂತರ ಈ ಕಡೆ ಬರಲು ತೀರ್ಮಾನಿಸಿರುತ್ತೀ. ಆಗಬಹುದು. ನಾನು, ದೀಪಾವಳಿಗೆ ಮುಂಚೆ ಬಂದರೆ ಒಳ್ಳೆಯದು ಎಂದು ಸಲಹೆ ಕೊಟ್ಟಿರುತ್ತೇನೆ. ಆದರೆ, ಅಕ್ಷರಶಃ ಈ ಸಲಹೆಯನ್ನು ಪರಿಪಾಲಿಸಬೇಕೆಂಬ ಆಗ್ರಹವೇನಿಲ್ಲ. ಕಾರು ಸಿಕ್ಕರೆ ಶ್ರೀ ಫಣಿ ಬರುವಂತಿದ್ದರೆ, ಕೃಷ್ಣಮೂರ್ತಿಗೆ ಎರಡು ಮೂರು ದಿನ ರಜವಿದ್ದರೆ ಅವನನ್ನೂ ಕರೆದುಕೊಂಡು ಬರುವುದು ಸೂಕ್ತ. ಶ್ರೀ ರೇವಳಪ್ಪನವರು ಕಳಿಸಿದ್ದು ೫೦ ಸೇರಿ ಅಕ್ಕಿ! ನೀನು ನಿರೀಕ್ಷೆ ಮಾಡಿದ್ದಲ್ಲ! ಏನಂತೆ? ಅಳಿಯ ಅಲ್ಲ ಮಗಳ ಗಂಡ. ನಿನ್ನೆಯ ಹಾಗೆ ಕಿಟ ಕಿಟ ಮಳೆಯಿಲ್ಲ. ಇಂದು ಮೋಡಕವಿದ ವಾತಾವರಣ. ಅಂತು ಕಾರಿನ ಮುಂಗಡಕೊಟ್ಟ ಹಣ ಬಹುಭಾಗ ಬಂದಿತಷ್ಟೆ. ಗೆಳೆಯ ಅಜೀಜ್‌ಸೇಟರಿಗೆ ಧನ್ಯವಾದಗಳು. ಗೆ. ಸಂಜೀವರಾಯರಿಗೆ ಸಮಾಧಾನವಾಗಿರಬೇಕು. ನಮಗೂ ಸಮಾಧಾನ. ಕಾರು ಡ್ರೈವಿಂಗ್ ಕಲಿಯುವ ಸ್ಥಳ ನಮ್ಮ ಮನೆಗಿಂತ ಬಹಳ ದೂರವೇ? ಮಕ್ಕಲು ಸಹಕರಿಸುತ್ತಿದ್ದಾರೆಯೆ? ಕಲಿತುಕೊಂಡು ಪರ‍್ಮನೆಂಟ್ ಲೈಸೈನ್ಸ್ ತೆಗೆದುಕೊಂಡು ಬರುವುದು ವಾಸಿ.

ಶ್ರೀ ಚಂದ್ರಣ್ಣ ಮನೆಗೆ ಬಂದಿದ್ದರೆಂದು ತಿಳಿಯಿತು. ಅವರ ಹತ್ತಿರವೇ ಯಾವ ಕಾರನ್ನು ಕಳಿಸಲು ಸಾಧ್ಯ? ಡ್ರೈವರ್ ಯಾರು? ಎಷ್ಟು ದಿನ ಹೋಗಿ ಬರಬಹುದು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಬಹುದು.

ಗೆಳೆಯರಿಗೆ ನಮಸ್ಕಾರ ತಿಳಿಸು. ಶ್ರೀಗಳಾದ ರಾಮಚಂದ್ರ ರೆಡ್ಡಿಯವರಿಗೆ, ಸಂಜೀವ ರಾಯರಿಗೆ ಸುಬ್ರಹ್ಮಣ್ಯರಿಗೆ ಮತ್ತು ಇತರ ಮಿತ್ರರಿಗೆ ನಮಸ್ಕಾರಗಳು.

ಮಕ್ಕಳಿಗೆ ಪ್ರೀತಿಯ ಮುತ್ತುಗಳು. ಪಾಪಯ್ಯ, ಇಳಾ ಸಹಿ ನೋಡಿ ಸಂತೋಷವಾಯಿತು. ನೇರವಾಗಿ ನನಗೆ ಬರೆಯುವಂತಾಗಲಿ!

ಶುಭಾಯಗಳು.

ಎಂದು ನಿನ್ನ ಪ್ರೀತಿಯ
ಗೋಪಾಲಗೌಡ ಶಾಂತವೇರಿ

***

ದೊಡ್ಡಮನೆ ಕೇರಿಬೀದಿ
ಶುಕ್ರವಾರ ೫, ನವೆಂಬರ್ ೧೯೭೧
ಬೆಳಿಗ್ಗೆ ೧೧ ಗಂಟೆ

ಪ್ರಿಯ ಸೋನು,

ನಿನ್ನ ಅಣ್ಣ ಆರಗಕ್ಕೆ ಬಂದಿದ್ದರು. ಇಂದು ಬೆಳಿಗ್ಗೆ ಅಲ್ಲಿಂದ ಬಂದವರು ಶಿವಮೊಗ್ಗಾ ಹೋದರು. ಅವ್ವ ಊಟ, ಉಪಚಾರಗಳಲ್ಲಿ ಸಹಕರಿಸುತ್ತಿಲ್ಲವೆಂದು ತಿಳಿಸಿದರು. ರಾತ್ರಿ ಸರಿಯಾಗಿ ನಿದ್ರೆ ಮಾಡುತ್ತಿಲ್ಲ. ಬೆಳಿಗ್ಗೆ ಸ್ವಲ್ಪ ಕಾಫಿ ಕುಡಿದರಂತೆ. ಮನೆಯಲ್ಲಿ (ಶಿವಮೊಗ್ಗ) ಅತ್ತಿಗೆಯವರಿಗೆ ಆರೋಗ್ಯವಿಲ್ಲವಂತೆ, ಮನೆಗೆ ಹೋಗಿಬರುತ್ತೇನೆಂದು ಹೇಳಿ ಹೋದರು.

ನಾನು ಅದೇ ಬಿಡಾರದಲ್ಲಿದ್ದೇನೆ. ರಾಮಪ್ಪನ ಮನೆಯಿಂದ ಕಾಫಿ, ಊಟ ಎಲ್ಲಾ ಬರುತ್ತಿದೆ. ನನ್ನ ಆರೋಗ್ಯ ಸುಧಾರಿಸುತ್ತಿದೆ. ತಲೆಯನ್ನು ಕಿತ್ತು ತಿನ್ನುವ ಹಲವಾರು ವಿಷಯಗಲು ಕಾಡುತ್ತಿವೆ. ಡಾ. ವಿಷ್ಣುಮೂರ್ತಿ ಬೆಂಗಳೂರಿನ ನಿಮ್ಮೆಲ್ಲರ ವಿಷಯ ಹೇಳಿದರು. ನೀನು ಮಕ್ಕಳನ್ನು ನೋಡಿಕೊಂಡು ಶಾಲೆಗೆ ಹೋಗಿಬರುವ ಕೆಲಸದಲ್ಲಿ ತೊಡಗಿರುತ್ತಿ. ಕಳೆದ ಪತ್ರದಲ್ಲಿ ರಾಮಮನೋಹರ ಹೇಗೆ ಕಾಲ ಕಳೆಯುತ್ತಾನೆಂದು ಕೇಳಿ ಬರೆದಿದ್ದೆ. ಈಗಲೂ ಅದೇ ಚಿಂತೆ. ನೀನು ಏನೇ ಆಗಲಿ ಪತ್ರ ಬರೆಯುತ್ತಿರು. ನಾನು ಖಚಿತವಾಗಿ ತಿಳಿಸುವವರೆಗೆ ನೀವೆಲ್ಲಾ ಬೆಂಗಳೂರಿನಿಂದ ಹೊರಡಬೇಡಿ ಎಂದು ಬರೆದಿದ್ದೆ. ನಿನಗೆ ರಜಾ ಇಲ್ಲದಿರುವುದು ಮತ್ತು ಸಾಗರದಿಂದ ಹೋಗಿ ಮತ್ತೇ ಬರುವುದು ಕಷ್ಟ ಎಂಬ ಕಾರಣ ಹಾಗೆ ಬರೆದೆ. ಹತ್ತಿರವಲ್ಲ! ಸಾಗರದಿಂದ ರೈಲು ಬಿಡುವಾಗ, ರಾಮು ಆಗ್ರಹವಾಗಿ ಬೆಂಗಳೂರಿಗೆ ಬಂದೇ ಬರಬೇಕು ಎಂದು ಹೇಳಿ ಹೋದ. ಬರುತ್ತೇನೆ. ಅಜ್ಜಿ ಆರೋಗ್ಯ ಉತ್ತಮವಾದ ಕೂಡಲೇ. “ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು’’ ಗಟ್ಟಿಯಾಗಿ ಹೇಳು. ಅಕ್ಕ ಶಾಲೆಗೆ ಹೋಗುತ್ತಿರಬಹುದು. ತಾಯಿಗೆ ತೊಂದರೆ ಕೊಡಬೇಡಿ ಮಕ್ಕಳೆ. ಇಲ್ಲಿ, ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಬೆಂಗಳೂರಿನ ನಾರಾಯಣ ಸನ್‌ ಆಫ್ ಗಿರಿಯಪ್ಪ ಮನೆ ನಂ. ೬೦, ೫ನೇ ಅಡ್ಡರಸ್ತೆ, ಶ್ರೀರಾಮಪುರ, ಬೆಂಗಳೂರು-೨೧. ಇವರ ಪತ್ರ ಸಾಗರಕ್ಕೆಹೋಗಿ ಇಲ್ಲಿಗೆ ಬಹಳ ತಡವಾಗಿ ಮುಟ್ಟಿತು. ೧ನೇ ತಾರೀಖು ಶಿವಮೊಗ್ಗ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಬೇಕಾಯಿತು. ಶ್ರೀ ಪುಟ್ಟಸ್ವಾಮಿಯವರಿಗೆ ಈಗ ಪತ್ರ ಬರೆದ ಸ್ನೇಹಿತರು ಗೊತ್ತು. ಅವರಿಗೆ ತಿಳಿಸಲು ಹೇಳು. ಇನ್ನೊಬ್ಬರು ಕೆ. ಲಕ್ಷ್ಮಣ ಶ್ರೀನಿವಾಸ ಸೈಕಲ್ ಮಾರ್ಟ್, ಗಾಯಿತ್ರಿ ನಗರ, ಶ್ರೀರಾಮಪುರ, ಬೆಂಗಳೂರು-೨೧. ೭ನೇ ತಾರೀಖು ಬೆಂಗಳೂರಿಗೆ ಬರಲಾರೆ.

ಈ ಪತ್ರ ಇಲ್ಲಿಗೆ ಮುಗಿಸುತ್ತೇನೆ. ನಿನ್ನ ಪತ್ರ ನೋಡಿ ಬರೆಯುತ್ತೇನೆ.

ಇಳಾಗೀತಾ, ರಾಮಮನೋಹರ್ ಇವರಿಬ್ಬರು ಅಜ್ಜಿ ಬದುಕಲೆಂದೂ ಪ್ರಾರ್ಥಿಸಲಿ. ನೀನೂ ಪ್ರಾರ್ಥಿಸು. ನೀವೆಲ್ಲಾ ಆರೋಗ್ಯವೆಂದು ಭಾವಿಸುತ್ತೇನೆ. ಗೆಳೆಯ ಲಿಂಗಪ್ಪ ಬೆಂಗಳೂರಿನಲ್ಲಿರಬಹುದು. ನವಂಬರ್ ೧ ರಂದು ಶಿವಮೊಗ್ಗದಲ್ಲಿರಲಿಲ್ಲ.

ಮತ್ತಿತರ ಎಲ್ಲಾ ವಿಷಯಗಳೂ ಎಂದಿನಂತೆ. ಅಜ್ಜಿ, ಕೃಷ್ಣಮೂರ್ತಿ ಚೆನ್ನಾಗಿದ್ದಾರೆಂದು ಆಶಿಸುತ್ತೇನೆ.

ಎಲ್ಲರಿಗೂ ನನ್ನ ಆಶೀರ್ವಾದಗಳು.

ಎಂದು ನಿನ್ನ ಪ್ರೀತಿಯ
ಗೋಪಾಲಗೌಡ ಶಾಂತವೇರಿ

***

ದೊಡ್ಡಮನೆ ಕೇರಿ ಬೀದಿ
೯-೧೦-೭೧

ಪ್ರಿಯ ಸೋನು,

ನಾನು ಕಾಯುತ್ತಿದ್ದ ನಿನ್ನ ಪತ್ರ ಮುಟ್ಟಿತು. ಮಗನ ಅನಾರೋಗ್ಯ ಕೇಳಿ ವ್ಯಥೆಯಾಯಿತು. ಇಳಾ ಚೆನ್ನಾಗಿರುವುದು ಸಂತೋಷದ ಸಂಗತಿ. ರಾಮಮನೋಹರ ಈಗ ಚೆನ್ನಾಗಿದ್ದಾನೆಂದು ಕೇಳಿ ಸಂತೋಷವಾಯಿತು. ತಾಯಿಯವರು ಇನ್ನೂ ಚೆನ್ನಾಗಿ ಆಗಿಲ್ಲ. ಈಗ ನಾನು ಬೆಂಗಳೂರಿಗೆ ಬರುವ ತೀರ್ಮಾನವಿಲ್ಲ. ಗೆಳೆಯ ಜಾರ್ಜರು ಬೆಂಗಳೂರಿಗೆ ಹೋಗು ಎಂದು ಬರೆದಿದ್ದಾರೆ.

ನಿನಗೆ ಕಾರಿನ ಚಿಂತೆ! ಸಾಗರದಲ್ಲಿದ್ದಾಗ ಹಣ ಸಹಾಯ ಮಾಡಬಹುದಾಗಿತ್ತು. ಈಗ ತಾಯಿಯವರ ಆರೋಗ್ಯ ಕೆಟ್ಟಿರುವಾಗ ಇಲ್ಲಿರುವ ಸ್ವಲ್ಪ ಹಣವನ್ನು ಡ್ರಾ ಮಾಡಲು ಧೈರ್ಯವಾಗುತ್ತಿಲ್ಲ. ಬೆಂಗಳೂರು ಚೆಕ್ ಪುಸ್ತಕ ಇಲ್ಲಿ ನನ್ನಲ್ಲಿಲ್ಲ. ಈ ವಿಷಯದಲ್ಲಿ ಗೆಳೆಯ ಸಂಜೀವ ರಾವ್ ಸಲಹೆ ತಿಳಿದು ಮುಂದುವರಿಯುವುದು ಒಳಿತು. ನೀನು ಕಾರು ತೆಗೆದುಕೊಳ್ಳಲೇ ಬೇಕೆಂದು ಅನಿಸುತ್ತಿದ್ದರೆ, ತೆಗೆದುಕೋ ನನ್ನ ಅಭ್ಯಂತರವಿಲ್ಲ.

ದೊಡ್ಡವರ ವಿಷಯ ಬರೆದಿರುತ್ತೀ, ಸದ್ಯ ಅವರ ನೆರಳಿನಿಂದ ಪಾರಾದರೆ ಸಾಕು. ಗೆಳೆಯ ಲಿಂಗಪ್ಪ ಬೆಂಗಳೂರಿಗೆ ಹೋಗಿಬರಬಹುದೆಂದು ಕೆಲವರ ಊಹೆ. ಗೆ. ಪುಟ್ಟಸ್ವಾಮಿಯವರಪತ್ರ ಬಂದಿದೆ. ನಾನು ಈಗ ಬೆಂಗಳೂರಿಗೆ ಬರುತ್ತೇನೆಂದು ಅವರ ನಿರೀಕ್ಷೆ. ಹಾಗೆ ಮಾಡಲಾರೆ.

ಇಲ್ಲಿ ನನಗೆ ಯಾರೂ ಸಹಾಯಕರಿಲ್ಲದೆ ಬರೆಯುವುದು ಕಷ್ಟ. ಅಣ್ಣಪ್ಪನ ಪತ್ರ ವಿವೇಕಯುತವಾಗಿದೆ. ಅವನ ಹೊಟ್ಟೆನೋವು ಗುಣವಾಗುವಂತೆ ಪ್ರಯತ್ನ ಮಾಡಬೇಕು. ಅವನ ಹೆಂಡತಿ ಮಕ್ಕಲು ಆರೋಗ್ಯ ತಾನೆ? ಅವನಿಗೂ ಕಾರಿನ ವಿಷಯ ತಿಳಿಸು. ಈ ಪತ್ರ ಸಾಕು. ಸಾಧ್ಯವಾದರೆ ಬೆಂಗಳೂರು ವಿಷಯ ತಿಳಿಸು. ಸ್ಟಾಂಪ್ ಖರ್ಚು ಉಳಿಸಲು ಹೋಗಿ ನನಗೆ ಕಾಯುವ ಕೆಲಸ ಹಾಕಬೇಡ.

ಪ್ರಿಯ ಚಿ. ಪಾಪಯ್ಯ, ಈ ಪತ್ರ ಮುಟ್ಟುವಷ್ಟರಲ್ಲಿ ನೀನು ಗುಣವಾಗಿರುತ್ತೀ. ನೀನು ಹೇಳಿದಂತೆ ನಿನ್ನ ಹತ್ತಿರ ಇರಲು ನಾನು ಬರುತ್ತೇನೆ. ಇಳಾ, ನಿನ್ನ ಸಲಹೆ ಚೆನ್ನಾಗಿದೆ. ಆದರೆ, ನಿಮ್ಮ ಆರೋಗ್ಯ ಕೆಟ್ಟರೆ? ತಾಯಿಯವರ ಶಾಲೆ ಕೆಲಸ? ಅಜ್ಜಿ ಆರೋಗ್ಯ ತೀರಾ ಕೆಟ್ಟರೆ ಬರೆಯುತ್ತೇನೆ. ಆಗ ಬನ್ನಿ. ನಿಮಗೆ ಪ್ರೀತಿಯ ಆಶೀರ್ವಾದಗಳು.

ಗೋಪಾಲಗೌಡ ಶಾಂತವೇರಿ

***

 1. coy. 10 Section
  3 H.T.R., 2 S.T.C
  Margoa
  ೦೨-೦೪.೧೯೬೩

ಶ್ರೀಮಾನ್ ಗೋಪಾಲಗೌಡರಿಗೆ, ಯಜ್ಞೇಶ್ವರ ಐತಾಳನ ನಮಸ್ಕಾರಗಳು.

ತಮ್ಮಲ್ಲಿ “ಕಂಡಕ್ಟ್ ಸರ್ಟಿಫಿಕೇಟ್’’ನ್ನು ತೆಗೆದುಕೊಂಡವನು ನೇರವಾಗಿ ಸೇನಾ ಭರ್ತಿ ಸ್ಥಳಕ್ಕೆ ಹೋದೆ. ಅಲ್ಲಿ ನನ್ನನ್ನು ಅಡಿಗೆಗೆ ಸೇರಿಸಿಕೊಂಡರು. ಬೇರೆ ಯಾವುದಾದರೂ ಕೊಡಿ ಎಂತ ಕೇಳಿದ್ದಕ್ಕೆ ಸದ್ಯಕ್ಕೆ ಈ ಕೆಲಸ ಮಾಡಿದರೆ ಮುಂದೆ ಕೆಲಸ ಬದಲಾಯಿಸಿಕೊಳ್ಳಲು ಬರುತ್ತೆ ಎಂದು ಹೇಳಿದರು. ಅಂದು ಸಂಜೆ ೫.೩೦ ಗಂಟೆಗೆ ನನ್ನನ್ನು ರಿಕ್ರೂಟಿಂಗ್ ಆಫೀಸ್‌ನಿಂದ ಹೊರಬಿಟ್ಟರು. ತಮ್ಮನ್ನು ಕಂಡು ಹೋಗಬೇಕೆಂಬ ಬಯಕೆ ಹಾಗೇ ಉಳಿಯಿತು. ತಮ್ಮನ್ನು ಕಾಣದೆ ಬಂದದ್ದಕ್ಕಾಗಿ ಕ್ಷಮಿಸುವಿರೆಂದು ನಂಬಿದ್ದೇನೆ.

ಈ ಕ್ಯಾಂಪಿನಲ್ಲಿ ಸುಮಾರು ನಾಲ್ಕು ಸಾವಿರದ ಹತ್ತಿರ ಜನರಿರಬಹುದು ಬಹಳ ದೊಡ್ಡದಾಗಿದೆ. ಎಲ್ಲ ಹೊಸದು. ಇನ್ನೂ ಗದ್ದೆಗಳಲ್ಲೇ ಟೆಂಟ್ ಹಾಕಲಾಗಿದೆ. ನಾವೆಲ್ಲ ಸದ್ಯಕ್ಕೆ ಗದ್ದೆಗಳಲ್ಲೇ ಇದ್ದೇವೆ. ಊಟ ತಿಂಡಿ ಚೆನ್ನಾಗಿರುತ್ತದೆ. ಕ್ಯಾಂಪ್ ಹೊಸದಾಗಿರುವ ಕಾರಣ ಸ್ವಲ್ಪ ಅವ್ಯವಸ್ಥೆ ಕಾಣಿಸುತ್ತದೆ. ಸುಮಾರು ನಾಲ್ಕು ಸಾವಿರ ಸಂಖ್ಯೆ ಸೈನಿಕರಲ್ಲಿ ಕೇವಲ ಇನ್ನೂರು ಜನ ಕನ್ನಡದವರು ಸಿಗಬಹುದು. ದ.ಕ. ಜಿಲ್ಲೆಯ ಜನ ಇವರಲ್ಲಿ ಹೆಚ್ಚು. ಬಾಕಿ ಬಿದರೆಯಿಂದ ಹಿಡಿದು ಕೋಲಾರದವರೆಗೆ ಇರುವ ಜನರು ಇದ್ದಾರೆ. ಇಲ್ಲಿಯ ಕನ್ನಡಿಗರ ಪಾಡು ದಯನೀಯ ಸ್ಥಿತಿಯಾಗಿದೆ. ಬಹು ಅಲ್ಪಸಂಖ್ಯಾತರಾಗಿದ್ದಾರೆ. ಸಮಸಮವಾಗಿ ಪಂಜಾಬಿ ಮತ್ತು ಮಲೆಯಾಳಿಗಳು ಇದ್ದಾರೆ.

ತಮಿಳರು ಇಲ್ಲಿ ಅಲ್ಪ ಸಂಖ್ಯಾತರೆ; ಅವರ ಪ್ರಬಾವ ನಿಸ್ಸತ್ವವಾಗಿದೆ. ಇಲ್ಲಿ ತಮಿಳರಿಗಿಂತ ಕನ್ನಡಿಗರ ಸ್ಥಿತಿಯೇ ಉತ್ತಮವೆಂದು ಹೇಳಬಹುದು.

ಯುದ್ಧ ಸಮಯದಲ್ಲಿ ಸಾಯುವುದು, ತರಬೇತಿಯ ಕಾಲದ ಕಷ್ಟ. ಇವರೆಡನ್ನು ಮರೆತರೆ ಸೇನೆ ಕೆಲಸ ಬಹಳ ಸುಲಭವೆಂದೇ ನನಗನ್ನಿಸುತ್ತದೆ. ನನಗೆ ಅಡಿಗೆಯಾದರೂ ರೈಫ್ಲ್, ಡ್ರಿಲ್ ಇತ್ಯಾದಿ ತರಬೇತಿ ಆರು ತಿಂಗಳು ಇದೆ.

ಇನ್ನೇನು ವಿಶೇಷವಿಲ್ಲ. ಮಹೇಶ್ವರಪ್ಪನವರಿಗೆ ನನ್ನ ನಮಸ್ಕಾರವನ್ನು ತಿಳಿಸುತ್ತೀರೆಂದು ನಂಬಿದ್ದೇನೆ.

ಸಿರಿಗನ್ನಡಂಗೆಲ್ಗೆ.

ಸಹಿ/-
ಯಜ್ಞೇಶ್ವರ ಐತಾಳ

Shri S. Gopala Gowda, MLA
Vidhana Soudha, Bangalore -1
Karnataka State

ಉತ್ತರಿಸಿದೆ ಗೋ.ಗೌ. ೨೭.೦೪.೬೩

***

ಹೆಗ್ಗೋಡು, ಹೊನ್ನೇಸರ
ಸಾಗರ, ಶಿವಮೊಗ್ಗ
೪.೪.೬೩

ಶ್ರೀಯುತ ಮಾನ್ಯ ಗೋಪಾಲಗೌಡರವರ ಸಮಕ್ಷಮಕ್ಕೆ ನಿಮ್ಮ ಸೇವಕ ಹೆಗ್ಗೋಡು ಕರಿಯ ಭಂಡಾರಿಯು ಮಾಡುವ ಅನಂತ ವಂದನೆಗಳು.

ಈ ಪತ್ರ ಬರೆಯುವವರೇಗೆ ನಾನು ಕ್ಷೇಮವೆಂತ ಪದ್ಧತಿಯ ಪ್ರಕಾರ ಬರೆಯಬೇಕಾದರೂ ವಾಸ್ತವಿಕವಾಗಿ ನಾನೊಂದು ಸಂಕಟದಲ್ಲಿ ಸಿಲುಕಿಕೊಂಡಿದ್ದೇನೆ. ದುರ್ದೈವವಷಾತ್ ನಮ್ಮ ಊರಿನಲ್ಲಿ ಅಂದ್ರೆ ಇದೇ ಹೆಗ್ಗೋಡಿನಲ್ಲಿ ಮೊನ್ನೆ ತಾ. ೧ನೇ ಸೋಮವಾರ ಆಗಬಾರದ ಒಂದು ಮಹಾ ಪ್ರಮಾದವಾದ ಒಂದು ಘಟನೆ ನಡೆದುಹೋಯ್ತು. ಆದ್ರೆ ಶ್ರೀಮಾನ್ ಮತ್ತಿಕೊಪ್ಪ ಲಕ್ಷ್ಮೀನಾರಾಯಣಪನವರ ಒಕ್ಕಲುಗಳಾದ ಕುಪ್ಪ ಎಂಬ ವ್ಯಕ್ತಿಯನ್ನು ಅವರ ಒಕ್ಕಲೇ ಆದ ಶುಕ್ರನೆಂಬುವನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡುವಾಗ ಆ ಜಾಗದಲ್ಲಿ ನಾಲ್ಕಾರು ವ್ಯಕ್ತಿಗಳಿದ್ದರು. ಆಪೈಕಿ ನಾನು ಒಬ್ಬನಿದ್ದೆ. ಅಂದ್ರೆ ಇದೆಲ್ಲಾ ಪೂರ್ವಸಿದ್ದತೆಯಿಂದಾಗಲಿ ಅಥವಾ ನಾಲ್ಕಾರು ಜನ ಸೇರಿ ಅವನನ್ನು ಕೊಲೆ ಮಾಡುವದೇ ಮುಖ್ಯ ಉದ್ದೇಶವಾಗಿಟ್ಟುಕೊಂಡಾಗಲಿ ಗುಂಪು ಸೇರಿದ್ದು ಅಲ್ಲ. ಗುಂಪು ಸೇರಿದ್ದು ಸ್ವಾಭಾವಿಕವಾಗಿ. ಜಗಳ ಹುಟ್ಟಿದ್ದು ಆಕಸ್ಮಿಕವಾಗಿ, ಕೊಲೆಯಾದದ್ದು ಅನಿರೀಕ್ಷಿತವಾಗಿ. ಇದು ವಾಸ್ತವಿಕ ವಿಷಯ. ನಂತರ ಇದನ್ನು ನಾನು ನೋಡಿದವನಾದ್ರಿಂದ ಮುಚ್ಚಿಟ್ಟರೆ ನಿರಪರಾಧಿಗಳು ಎಷ್ಟೋ ಜನ ಕಷ್ಟಪಡಬಾರದೆಂಬ ಉದ್ದೇಶದಿಂದ ಫಿರ್ಯಾದುಧಾರನೆ ನಾನಾಗಿ ಮೊದಲನೇ ಹೇಳಿಕೆಯೇ ನನ್ನದಾಗಿ ಶ್ರೀಪಟೇಲ್ ಭಾಗಿ ಶೇಷಗಿರಿಯಪ್ಪನವರಿಗೂ ನಮ್ಮ ಸಾಹುಕಾರರಾದ ಸಂಣಯ್ಯನವರಿಗೂ ತಿಳ್ಸಿ ಮುಂದಿನ ಕ್ರಮ ನಡೆಸಿದ್ದಾಯ್ತು. ಇಲ್ಲಿಯವರೇಗೂ ಅಪರಾಧಿ ಸಿಕ್ಕಲಿಲ್ಲ. ಕೊಲೆ ಮಾಡಿದ ಕೂಡಲೇ ಯಾರ ಕೈಗೂ ಸಿಕ್ಕದೆ ಕೊಲೆಗಾರ ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ. ಗುಂಪಿನಲ್ಲಿ ಸೇರಿದ ನಾಲ್ಕಾರು ಜನಗಳ ಪೈಕಿ ಅಪರಾಧಿಯನ್ನು ಬಿಟ್ಟು ಉಳಿದ ಮೂರು ಜನಗಳು ನನ್ನನ್ನು ಸೇರಿ ಹೇಳಿಕೆ ಕೊಟ್ಟಂತಾಗಿದೆ. ಮುಖ್ಯ ತಾತ್ಪರ್ಯವೇನೆಂದ್ರೆ ಪೊಲೀಸರ ಕರ್ತವ್ಯ ಅವರು ಮಾಡುತ್ತಿದ್ದಾರೆ. ಅಪರಾಧಿಗೆ ತಕ್ಕ ಶಿಕ್ಷೆಯಾಗಬೇಕು. ನಿರಪರಾಧಿಗಳು ಉಳಿಯಬೇಕು. ಇವೆಲ್ಲಾ ನ್ಯಾಯವು ಹೌದು, ಧರ್ಮವೂ ಹೌದು, ಕಾನೂನು ಸಹ ಹಾಗೆಯೇ. ಆದ್ರೆ ಈ ಊರಿನಲ್ಲಿ ಬಹುತೇಕ ಕೇವಲ ಕೆಲವೇ ಜನ ಅಂದ್ರೆ ನಾಲ್ಕಾರು ಜನರನ್ನು ಉಳಿದು ಮಿಕ್ಕುಲಿದವರೆಲ್ಲರೂ ಅಂತರಂಗದಲ್ಲಿ ಎಲ್ಲರಿಗೂ ನನ್ನನ್ನು ಕಂಡರೆ ಆಗದೆ, ಅಂತರಂಗದ ದ್ವೇಷಿಗಳೆಂದರೂ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಕಾರಣ ಹಲವಾರು: ಒಂದು ನಾನು ಯಾರಿಗೂ ತಲೆಬಾಗದೆ ನನ್ನ ಅನ್ನವನ್ನು ತಿಂದು ನಾಲ್ಕು ಮೆಟ್ಟಿನ ನನ್ನ ನೆಲದಲ್ಲಿ ಕುಳಿತಿರುವುದು. ಎರಡನೇ ನನ್ನ ಪಾರ್ಟಿ ಎಲೆಕ್ಷನ್‌ನಲ್ಲಿ ಬ್ರಾಹ್ಮಣ ಮತ್ತು ಉಳ್ಳವರ ಸಮಾಜಕ್ಕೆ ಎದುರಾಗಿ ಒಬ್ಬನೇ ಒಬ್ಬನಾಗಿ ಮತ್ತೊಂದು ಪಾರ್ಟಿಯಲ್ಲಿ ನಿಂತು ಕೆಲಸಮಾಡಿ ಆ ಪಾರ್ಟಿಗೆ ಜಯಗಳಿಸಿ ಕೊಟ್ಟಿದ್ದು. ಮೂರನೇ ಇದ್ದದ್ದನ್ನು ಕಂಡದ್ದನ್ನು ಸತ್ಯವಾದದ್ದನ್ನು ಯಾರ ಭಯವೂ ಇಲ್ಲದೆ ಯಾರ ಮುಖಸ್ತುತಿಯನ್ನೂ ಮಾಡದೆ ನನ್ನದೇ ದಾರಿಯಲ್ಲಿ ನಾನು ನಡೆಯುತ್ತಿರುವುದೇ ನನ್ನಲ್ಲಿ ಇವರು ಕಂಡ ದುರ್ಗುಣ. ಈ ಊರಿನಲ್ಲಿಯೂ ಮತ್ತು ಆಜುಬಾಜಿನಲ್ಲಿರುವ ವಲಕೋಡು, ಸೆಡ್ತಿಗೆರೆ, ಪುರಪ್ಪಿಮನೆ, ಗಡಿಕಟ್ಟೆ ಇನ್ನಿತರ ಎಲ್ಲಾ ಕಡೆಯಲ್ಲಿಯೂ ನನ್ನ ಹಿತಶತ್ರುಗಳೂ ಅಹಿತರೂ ತುಂಬಿಹೋಗಿದ್ದಾರೆ. ಶ್ರೀಯುತರುಗಳಾದ ಭಾಗಿಸುಬ್ರಾಯರು ಅಣ್ಣ ತಮ್ಮಂದಿರು ಮತ್ತು ಕಾಳಗದವರ ವಂಶದವರು ಇಷ್ಟು ಜನಮಾತ್ರ ನನ್ನ ಹಿತೈಷಿಗಳು. ಶ್ರೀಯುತ ಮತ್ತಿಕೊಪ್ಪ ಲಕ್ಷ್ಮಿನಾರಾಯಣ ಹೆಗ್ಡೆಯವರಿಂದಲೂ ನನಗೆ ಅನ್ಯಾಯವಾಗಲಾರದೆಂಬ ನಂಬಿಕೆ ಇದೆ. ಇಷ್ಟು ಜನರನ್ನು ಬಿಟ್ಟರೆ ಇನ್ನುಳಿದವರಿಂದ ಯಾರಿಂದ ಯಾವ ಕಾಲಕ್ಕೆ ನನಗೇನು ತೊಂದ್ರೆಯಿದೆಯೋ? ಯಾರು ಯಾವ ರೀತಿ ಸೇಡುತೀರಿಸಿಕೊಳ್ಳುವರೋ? ಯಾವುದೂ ಹೇಳುವುದೇ ಕಷ್ಟವಾಗಿದೆ. ಯಾಕೆಂದ್ರೆ ಇಲ್ಲಿ ಬಂದಿರುವ A.S.P.I.P. ಪೊಲೀಸ್ ಅಧಿಕಾರಿಗಳ ಹತ್ತಿರ ನನ್ನನ್ನು ನಾಲ್ಕು ದಿನವಾದ್ರು ರಿಮಾಂಡಿನಲ್ಲಿಡಬೇಕು. ನನಗೆ ಶಿಕ್ಷೆ ವಿಧಿಸಬೇಕು. ನನ್ನನ್ನು ಒಬ್ಬ ಅಪರಾಧಿಯನ್ನಾಗಿ ಮಾಡಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬುವವರೇ ಬಹಳ. ಈ ರೀತಿ ಪೋಲೀಸ್ ಅಧಿಕಾರಿಗಳಲ್ಲಿ ಗುಟ್ಟಾಗಿ ಹೇಳಿಕೊಂಡವರುಯಿದ್ದಾರೆ. ಇದಕ್ಕೆಲ್ಲಾ ಕಾರಣವಿಷ್ಟೆ. ನಾನು ಒಬ್ಬನೇ ಕೆಂಪುಟೊಪ್ಪಿಗೆಯವನಾದದ್ದೆ ಕಾರಣ. ನಿರಪರಾಧಿಗಳಿಗೆ ತೊಂದ್ರೆಯಾಗಬಾರದು. ಹಾದಿಹೋಕರು ಹೆಂಗಸರು ಮಕ್ಕಲು ಇದರಿಂದ ತೊಂದ್ರೆ ಅನುಭವಿಸಬಾರದು. ಸತ್ಯ ಸತ್ಯವೇ ಆಗಬೇಕು. ಅಪರಾಧಿಗೆ ಶಿಕ್ಷೆಯಾಗಬೇಕುಯೆಂಬ ಸದುದ್ದೇಶದಿಂದ ಮೊದಲಿಗನಾಗಿ ಹೇಳಿಕೆ ಕೊಟ್ಟಿದ್ದೆ ನನ್ನ ತಪ್ಪೆ? ನಾನು ತಪ್ಪುಮಾಡಿ ಇದರಿಂದ ನನ್ನ ಸಂಸಾರ ಹಾಳಾಗುವಂತಾಯ್ತೆಂಬ ಕೊರಗಿನಿಂದ ನರಳುತ್ತಿದ್ದೇನೆ. ಹಾಗೂಯಿರಲಿ. ಉಳ್ಳವರ ಕೈವಾಡದಿಂದ ನಾಳೆ ನನಗೆ ಪೊಲೀಸ್ ಇಲಾಖೆಯಿಂದ ಏನಾದ್ರು ತೊಂದ್ರೆ ಸಂಭವಿಸಿದಲ್ಲಿ ಅಥವಾ ನಿರಪರಾಧಿಯಾದ ನನ್ನ ಮೇಲೆ ಅತ್ಯಾಚಾರವೆಸಗಿದ ಪಕ್ಷದಲ್ಲಿ ನನ್ನವರು ಯಾರು ಇಲ್ಲದ ಇಲ್ಲಿ, ನನ್ನ ಸಂಸಾರದ ಹಾದಿ ಪಾಲಾಗುವಂತ ದುರ್ಭರ ಪ್ರಸಂಗವೇನಾದ್ರೂ ಒದಗಿದಲ್ಲಿ ತವು ನನ್ನ ನೆರವಿಗೆ ಧಾವಿಸಿಬರುವಿರೆಂಬ ಪೂರ್ಣಭರವಸೆಯಿಂದ ಈ ಪತ್ರ ಬರೆಯುವ ಮನಸ್ಸು ಮಾಡಿದ್ದೇನೆ. ಇದು ನಾನು ಹಿಂದೆ ಏನಾದ್ರು ತಮಗಾಗಿಯಾಗಲಿ ತಮ್ಮ ಪಾರ್ಟಿಗಾಗಿಯಾಗಲಿ ಅಲ್ಪ ಪರಿಶ್ರಮ ಪಟ್ಟದ್ದಕ್ಕೆ ತಮ್ಮಿಂದ ಬಯಸುವ ಪ್ರತಿ ಉಪಕಾರವೆಂತಾಗಲೀ ನಾನು ಮಾಡಿದ ಸಹಾಯಕ್ಕೆ ವಾಪಸು ಕೇಳುವ ಲಂಚವೆಂದಾಗಲಿ ಭಾವಿಸಬಾರದು. ಬಡವರ ಹಿತಕ್ಕಾಗಿ ದುಡಿಯುವ ನೀವು ಒಬ್ಬ ಬಡವನ ಅಥವಾ ಒಬ್ಬ ನಿರಪರಾಧಿಗೆ ಅನ್ಯಾಯವಾಗುವಾಗ ಸುಮ್ಮನೆ ಇರುವ ವ್ಯಕ್ತಿ ನೀವಲ್ಲ. ಅಂತಹ ಪ್ರಸಂಗ ಬಂದಾಗ ಸಮಾಜವನ್ನಾಗಲೀ ಸರ್ಕಾರವನ್ನಾಗಲೀ ಪ್ರತಿಭಟಿಸುವ ಅಧಿಕಾರ ಶಕ್ತಿ ವಾಕ್ಛರಣೆ ಎಲ್ಲದರಲ್ಲಿಯೂ ಸಮರ್ಥರಾದ ನೀವು ಸುಮ್ಮನೆ ಉಳಿಯುವವರಲ್ಲವೆಂಬುದು ನನಗೆ ಪೂರ್ಣ ಭರವಸೆ ಇದೆ. ಆದ್ದರಿಂದಲೇ ಇದ್ದ ವಿಚಾರ ಸತ್ಯಸಂಗತಿಯನ್ನು ಚಾಚು ತಪ್ಪದೆ ತಮ್ಮಲ್ಲಿ ತಿಳಿಸಿರುತ್ತೇನೆ. ಇನ್ನು ನಾನು ಮುಂದೆ ಮಾಡಬೇಕಾದ ಕರ್ತವ್ಯದ ಅರಿವನ್ನು ನನಗೆ ಕೊಟ್ಟು ನನಗೆ ಧೈರ್ಯ, ಭರವಸೆಗಳನ್ನಿತ್ತು ನನ್ನ ಮನಸ್ಸನ್ನು ಸ್ವಲ್ಪ ಶಾಂತಗೊಳಿಸುವಿರೆಂಬ ನಂಬಿಕೆಯಿಂದ ಈ ಪತ್ರವನ್ನು ಬರೆದಿರುತ್ತೆ. ಇನ್ನು ತಾವು ನನಗೆ ಬೇಗನೆ ನಾನು ಮುಂದೆ ಮಾಡಬೇಕಾದಕ್ಕೆ ತಕ್ಕ ಸಲಹೆ, ಸೂಚನೆಗಳನ್ನು ಕೊಟ್ಟು ನನಗೆ ಮಾರ್ಗದರ್ಶಕರಾಗಬೇಕಾಗಿ ಕೊನೆಯದಾಗಿ ಬೇಡಿಕೊಳ್ಳುತ್ತೇನೆ.

(ವಿ.ಸೂ. ಅಪರಾಧಿ ಸಿಕ್ಕಿದ್ದಾನೆ.)

ತಮ್ಮ ಯಶೋಭಿಲಾಷಿ
ವಿ. ಕರಿಯ ಭಂಡಾರಿ

***

ಮಾರ್ಗದರ್ಶಿ

ಪ್ರಕಾಶಕರು
ಸಮಾಜವಾದೀ ಪ್ರಕಾಶನ
೮೮೪, ಬಿ.ಹೆಚ್. ರಸ್ತೆ, ಶಿವಮೊಗ್ಗ
ಸಂಪಾದಕ ಜಿ. ಸದಾಶಿವರಾವ್

ಶಿವಮೊಗ್ಗ
೫.೪.೬೩

ಗೆಳೆಯ ಗೋಪಾಲ್,

ಕುಮಾರ ಏಜನ್ಸಿಯವರು ಬಹಳ ತಗಾದೆ ಮಾಡುತ್ತಲಿದ್ದಾರೆ. ಇತ್ತೀಚೆಗಿನ ಅವರ ಪತ್ರ ಲಗತ್ತು ಇದೆ. ಇಲ್ಲಿ ಯಾರೂ ಈ ಬಗ್ಗೆ ಗಮನಕೊಡುತ್ತಲಿಲ್ಲ. ನೀನೇ ಏನಾದರೂ ಮಾಡಬೇಕಾಗಿದೆ.

ನಾನು ಈ ದಿನ ತೀರ್ಥಹಳ್ಳಿಗೆ ಹೋಗುತ್ತಲಿದ್ದೇನೆ. ಅಲ್ಲಿ ಒಂದೆರಡು ದಿನಗಳಿರುತ್ತೇನೆ. ಬಾಲ, ನೀನು ಆ ಕಡೆ ಒಂದು ದಿನ ಬರಬೇಕೆಂದೂ, ಬರುವ ತಾರೀಖನ್ನು ಪೂರ್ವಭಾವಿಯಾಗಿ ತಿಳಿಸಬೇಕೆಂದೂ, ಒಂದು ಸಭೆ ನಡೆಸುವ ಏರ್ಪಾಡು ಮಾಡುವುದಾಗಿಯೂ ತಿಳಿಸಿದ್ದೇವೆ.

ಉಳಿದ ವಿಷಯಗಳಿಗಾಗಿ ಪತ್ರ ಬರೆಯುವುದು.

ಇತಿ

ಜಿ. ಸದಾಶಿವರಾವ್
ಶ್ರೀ ಗೋಪಾಲಗೌಡ
೨೪, ಪೂರ್ಣಯ್ಯ ಛತ್ರಂ ರೋಡ್
ಬೆಂಗಳೂರು – ೨

***

Madras
14.4.63

 1. Murahari
  C/o Smt. Snehalatha Reddy
  Valmiki Street, T. Nagar
  Madras

My Dear Gopal,

I am not likely to come to Bangalore because the Kerala Conference is off and moreover Doctor is contesting Farukhabad. The main thing is funds. By putting up Keshkar the Congress and Neharu want to take it as a prestige fight and the Congress Central Parliamentary Board is going to conduct the campaign on its own. A lot of money will be spent by the congress. Lakhs will be poured in and we should at least a few thousands to stand up to it. So please do something from Mysore and collect some good amount. The poll is on the 19th May. So there is urgency for the money. Do please do the needful in this connection. You send the money to me at 30, North Avenue, New Delhi. This is the best address, for someone or the other will be in regular contact. Please give my best to all the comrades there. I will be leaving Madras by the G.T. on 16th as per present plan. Give the letter appended below to Patel.

Yours Affectionately,
Sd/-
G. Murahari

***

My Dear Patel,

Dr. Lohia will be contesting the Farukhabad seat, It is a very good seat in spite of the fact that we are almost nil in the constituency.In the last election, Congress got 80,000 P.S.P. 60,000, Jan Sangh 45,000, Republicans 20,000, Socialists 16,000 and an Independent got 10,000. Except the P.S.P. all the other partis have supported Dr. Lohia’s Candidature. The PSP is threatening to set up the fellow who contested last time. Though ultimately he may also withdraw. Dr. Lohia associated with the district in as much as he had led the Canal Rate Sathyagraha and was arrested there. It is a good seat for him.The congress will however dump a lot of money and Nehru will.. mean interest in the fight. So please do some collection. You can send it at my address in Delhi. How are other things? I will be in Delhi by about 2th. How is everybody? Give my best to them all.

With the best of wishes

Yours affectionately
Sd/-
G. Murahari

Sri Gopal Gowda, MLA
Socialist Party (Mysore)
24, Poornaiah Chatram Road, Bangalore

***

ಬೆಂಗಳೂರು
೬.೪.೬೩

ಕೆ.ಜಿ. ಮಹೇಶ್ವರಪ್ಪ
ಅಡ್ವೋಕೇಟ್
ಎನ್.ಎಸ್. ಐಯ್ಯಂಗಾರ್ ಸಿಟ್
ಶೇಷಾದ್ರಿಪುರಂ

ಗೆಳೆಯ ಶ್ರೀ ಗೋಪಾಲಗೌಡರಿಗೆ ನಮಸ್ಕಾರಗಳು.

ನೀವು ತಿಳಿಸಿದ ಪ್ರಕಾರ ನಿನ್ನೆ ದಿವಸ ಮೆಂಟಲ್ ಹಾಸ್ಪಿಟಲ್ ಮತ್ತು ಸ್ಯಾನಿಟೋರಿಯಮ್‌ಗೆ, ಮೇಷ್ಟ್ರು ನಾನು ಹೋಗಿದ್ದೆವು. ಡಾಕ್ಟ್ರು ಯಾರು ಇಲ್ಲದೆ ಇದ್ದುದರಿಂದ ಪುನಹ ಈದಿನ ಹನ್ನೆರಡು ಘಂಟೆಗೆ ಹೋಗಿದ್ದೆ. ಸೂಪರಿಂಟೆಂಡೆಂಟ್‌ರವರನ್ನು ಕಂಡಿದ್ದೆ. ಅವರಿಗೆ ನಿನ್ನೆ ದಿವಸ ಕಡಿದಾಳರು ಸಹ ಫೋನ್ ಮಾಡಿದ್ದರಂತೆ. ಇನ್ನು ಒಂದು ವಾರ ಇಲ್ಲೇ ಇರಲಿ. ನಾನೇ ಖುದ್ದು ಪರೀಕ್ಷೆಮಾಡಿ ಮುಂದೆ ಏನು ಮಾಡಬೇಕೆಂಬುದನ್ನು ತಿಳಿಸುತ್ತೇನೆಂದು ಸುಪರಿಂಟೆಂಡೆಂಡ್ ಹೇಳಿದರು. ಆ ವಿಷಯವನ್ನು ರಂಗಪ್ಪನವರಿಗೆ ತಿಳಿಸಲಾಗಿ ಅವರು ಆಗಲಿ ಎಂದರು. ನಾನು ಮುಂದಿನ ಸೋಮವಾರ ಪುನಹ ಹೋಗಿ ವಿಚಾರಿಸಿ, ಡಿಸ್‌ಚಾರ್ಜ್ ಮಾಡುವುದಾದರೆ ಮಾಡಿಸಿ ಊರಿಗೆ ಕಳುಹಿಸಿಕೊಡುತ್ತೇನೆ. ನಾನು ೪ನೇ ತಾರೀಖು ಶಿವಮೊಗ್ಗಕ್ಕೆ ಬರುತ್ತೇನೆ. ಹೆಚ್ಚಿಗೆ ವಿಷಯವಿಲ್ಲ.

ಇತಿ ನಮಸ್ಕಾರಗಳು
ಕೆ. ಜಿ. ಮಹೇಶ್ವರಪ್ಪ

ಶ್ರೀ ಗೋಪಾಲಗೌಡ ಶಾಂತವೇರಿ
ಕೇರ್‌ಆಫ್ ಬಿ.ಎಸ್. ಗುರುಮೂರ್ತಿ
ಆಯುರ್ವೇದ ವೈದ್ಯ ಶಾಲೆ, ತೀರ್ಥಹಳ್ಳಿ

***

Bangalore – 2
19th April 1963

Smt. Gouramma is longing her best wishes to you. She thinks you are well doing by the grace of God. She thinks that you might have dropped a letter either to Minister or the Commissioner. The commissioner and the Chief Engineer had come to spot on 19th April 63. Mother told the whole story to the Commissioner and the Engineer. Engineer have suggested that he would demolish the wall. We do not know how far this is truth. Even our party Sri Papaiah was also there. He too told lies. We do not know which of the two they would consider and give a final decision. It is in the hands of God.

We also once again request you to drop them a letter so that, by your grace our dispute may be concluded. According to our documents, we ask the seize of the land.

If at least the upstairs portion which is built is removed, then we can go… work… be lessened of our paying the house rent. I am not in a position to pay the house rent, because our earnings are very little.

So, we request you once again to have contact with them either personally nor impersonally and try to argue with these people and lessen our trouble. Where is the value for the poor people? Consider me as your sister, similarly think me also as one of your family member. If any mistake please excuse me.

“Awaiting for the reply”

Yours faithfully

sd/-
Gowramma
Shri S. Gopala Gowda, MLA
Vidhana soudha, Bangalore-1

***