ತೀರ್ಥಹಳ್ಳಿ
೨೭.೪.೬೩

ಪ್ರಿಯ ಶ್ರೀ ಯಜ್ಞೇಶ್ವರ ಐತಾಳರೆ,

ನಿಮ್ಮ ೨೪.೪.೬೩ರ ಪತ್ರ ತಲ್ಪಿತು. ಧನ್ಯವಾದಗಳು.

ಆ ದಿನ ಬೆಳಿಗ್ಗೆ ಬಂದು ನೀವು “ಸರ್ಟಿಫಿಕೇಟ್’’ ಕೇಳಿದಾಗ ನಿಜಕ್ಕೂ ನೀವು ಸೈನ್ಯ ಸೇರಲು ಹೊರಟಿದ್ದೀರಿ ಎನ್ನಿಸಲಿಲ್ಲ. ಮೇಲಾಗಿ, ನಿಮ್ಮನ್ನು ಅಂದೇ ಆಯ್ಕೆ ಮಾಡಿ ಕರೆದುಕೊಂಡೇ ಹೋಗುವರೆಂದು ಲೇಶವು ಭಾವಿಸರಿಲಿಲ್ಲ. ಪ್ರತಿಯಾಗಿ, ನೀವು ಸೇರಿದ್ದೂ ಆಯಿತು. ಹೊರಟೂ ಹೋಗಿಬಿಟ್ಟಿರಿ. ನಿಮ್ಮ ಧೈರ್ಯ, ಸಾಹಸ ಮತ್ತು ನಿರ್ಧಾರಕ್ಕೆ ಮೆಚ್ಚಿದೆ. ಹಾಗೇ ಇರಬೇಕು. ಬರೀ ಮಾತಿನಿಂದೇನು ಪ್ರಯೋಜನ. ಒಂದು ಕೃತಿಗೆ ಸಾವಿರ ಮಾತು ಸಲ್ಲವು.

ನಿಮ್ಮ ಪತ್ರ ಓದಿದೆ. ನಿಮ್ಮ ಕನ್ನಡ ಕಾಕದೃಷ್ಟಿಯನ್ನು ಅಲ್ಲೂ ಹರಿಸಿದ್ದೀರಿ. ವೈವಿಧ್ಯತೆಯಲ್ಲೇ ನಮ್ಮ ದೇಶದ ಐಕ್ಯತೆಯಿದೆ ಎಂಬ ಸತ್ಯ ಎಂದೆಂದಿಗೂ ಸತ್ಯವೇ. ಸಹಬಾಳ್ವೆ ಅನ್ಯಭಾಷೀಯರೊಂದಿಗೆ ಅಸಹನೀಯವಾದಲ್ಲಿ ಬಾಳು ತೀರ ಕಠಿಣವೇ ಆದೀತು. ಅಂದ ಮಾತ್ರಕ್ಕೆ ವ್ಯಕ್ತಿತ್ವದ ಪ್ರತ್ಯೇಕ ಜನರ ಜೀವನ ವಿಕಾಸಕ್ಕೆ ಮೂಲಭೂತವಾದಿ ಅಂಶಗಳ ವಿಕಾಸಕ್ಕೆ ಎಡೆಯಿರಬಾರದು ಎಂದು ಯಾರು ಹೇಳಲಾರರು. ಸಮಷ್ಟಿಯಲ್ಲಿ ವೃಷ್ಟಿಯನ್ನು ಕಂಡುಕೊಳ್ಳಬೇಕು. ವಾಸ್ತವಿಕ ದೈನಂದಿನ ಜೀವನದಲ್ಲಿ ತನ್ನ ತನದ ಮೇಲ್ಮೆಗೆ ಸಾಧಕವೂ, ಪರತನದ ಪತನಕ್ಕೆ ಕಾರಣವಲ್ಲದವೂ ಆದ ಮಾರ್ಗಗಳೇ ಹಿತ ಮತ್ತು ಸರ್ವವಿಧಿತ. ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ವೇದಾಂತದಂತೆ ನಿಮಗೆ ‘ಇಸ್ಸಿ’ ಎಂದಿನಿಸಿದರೂ ಆ ದೃಷ್ಟಿ ಬೆಳೆದರೆ ಹಿತವೇ ಆದೀತು.

ಮೇ ೩ ರಂದು ನಾನು ಬೆಂಗಳೂರಿನಿಂದ ಫರುಕಾಬಾದಿಗೆ ಹೊರಡಲಿದ್ದೇನೆ. ಡಾ. ಲೋಹಿಯಾರ ಉಪಚುನಾವಣಾ ಕ್ಷೇತ್ರಕ್ಕೆ. ಜೂನ್ ಹತ್ತರ ಹೊತ್ತಿಗೆ ಮರಳುತ್ತೇನೆ. ಅನಂತರವೇ ನೀವು ನನಗೇ ಉತ್ತರಿಸಿದರೂ ಸಾಕು. ಮತ್ತೆ ಇಲ್ಲಿ ಎಲ್ಲಾ ಎಲ್ಲರೂ ಕ್ಷೇಮ. ಯಥಾಸ್ಥಿತಿ ಜೀವನಚಕ್ರ ಸಾಗಿದೆ.

ನಿಮಗೆ ಒಳಿತಾಗಲಿ ಎಂದು ಹಾರೈಸುವೆ.

ಎಂದು ನಿಮ್ಮವ,

ಸಹಿ/-
ಗೋಪಾಲಗೌಡ ಶಾಂತವೇರಿ

Shri Yajneshwara Itala
C.Coy, 10 Section
3 MTR, 2 STC, Naval Camp
Margoa

***

Margoa
೧೮.೦೬.೧೯೬೩

ಶ್ರೀಮಾನ್ ಗೋಪಾಲಗೌಡರಿಗೆ, ಯಜ್ಞೇಶ್ವರ ಐತಾಳನ ನಮಸ್ಕಾರಗಳು.

ತಮ್ಮ ಹಿಂದಿನ ಪತ್ರದಲ್ಲಿ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ಬರೆದಿದ್ದೀರಿ. ಅದರಲ್ಲೂ ಈ ದೇಶದ ಅಖಂಡ ಐಕ್ಯತೆಯ ಬಗ್ಗೆ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದ್ದೀರಿ.

ನನಗೆ ಈ ದೇಶ ಒಡೆದು ಚೂರಾಗಬೇಕೆಂಬ ಆಸೆ ಇಲ್ಲ. ಅಥವಾ ನನ್ನೊಬ್ಬನ ಆಸೆ ಮಾತ್ರಕ್ಕೆ ಹಾಗಾಗೂವುದೂ ಇಲ್ಲವೆಂಬದು ತಿಳಿದಿದ್ದೇನೆ. ಅಷ್ಟೇ ಅಲ್ಲ, ಪ್ರಾಂತಗಳೆಲ್ಲ ಸ್ವಾತಂತ್ರ್ಯ ಹೊಂದಿದುವಾದರೆ ಕರ್ನಾಟಕೆ ಅನ್ಯಾಯವಾಗುವುದಲ್ಲದೆ, ಕರ್ನಾಟಕ ಅತ್ಯಂತ ದುರ್ಬಲ ಪ್ರಾಂತವಾಗುವುದೆಂಬುದನ್ನು ತಿಳಿದಿದ್ದೇನೆ. ಆದರೆ….

ಈ ದೇಶದ ಐಕ್ಯ ಕೊನೆಯವರೆಗೂ ಉಳಿಯುವುದೆಂಬ ವಿಶ್ವಾಸ ನಾನು ಸೈನ್ಯಕ್ಕೆ ಸೇರಿದ ಮೇಲೆ ಕ್ರಮೇಣ ಕಡಿಮೆಯಾಗುತ್ತಿದೆ. ನಾನೊಬ್ಬ ಸೈನಿಕನಾಗಿಯೂ ಈ ಮಾತು ಹೇಳಬೇಕಾದುದಕ್ಕೆ ವಿಷಾದಿಸುತ್ತೇನೆ. ಮಾತ್ರವಲ್ಲ, ಏನೇ ಇರಲಿ ನಾನು ಈ ಮಾತನ್ನು ವ್ಯಕ್ತಗೊಳಿಸಬಾರದೆಂಬ ಕಾನೂನು ಇದೆ. ಆದರೆ, ಇಲ್ಲಿಯ ವಾತಾವರಣ ಮಾತ್ರ ನನಗೆ ಆ ಭಾವನೆಯನ್ನು ತಂದುಕೊಡುತ್ತಿದೆ. ಏಕೆಂದರೆ ದಕ್ಷಿಣದವರನ್ನೆಲ್ಲರನ್ನೂ ಉತ್ತರದವರು, ಸಾಮಾನ್ಯವಾಗಿ ಯಾವಾಗಲೂ ‘ಸಾಲೆ ಮದ್ರಾಸಿಲೋಗ್’ ಎನ್ನುವುದೂ, ಇದೇ ರೀತಿ ತಮಿಳರು, ಕೇರಳೀಯರು, ಉತ್ತರದವರನ್ನು ತಿರಸ್ಕಾರಯುತವಾಗಿ ಹಳಿಯುವುದೂ; ಅಲ್ಲದೆ ಕೇರಳೀಯರು ತಮ್ಮಜನರ ಬಗ್ಗೆ ಪಕ್ಷಪಾತ ವಹಿಸುವುದೂ, ಪಂಜಾಬಿಗಲು ತಮ್ಮಜನರ ಬಗ್ಗೆ ಪಕ್ಷಪಾತ ತೋರ್ಪಡಿಸುವುದೂ ಸರ್ವೇ ಸಾಮಾನ್ಯವಾಗಿದೆ. ಇದರಿಂದ ಇದುವರೆಗೆ ಅನಾಹುತಗಲು ನಡೆದಿವೆ. ಪರಸ್ಪರ ಅವಿಶ್ವಾಸದಿಂದ, ತಿರಸ್ಕಾರಯುತವಾಗಿ ಕಾಣುವುದೂ ಮುಂತಾದ ಕಾರಣಗಳಿಂದ ವೈಯುಕ್ತಿಕವಾಗಿ ಹೇಳುದಾದರೆ ಐಕ್ಯತೆಯು ಉಳಿಯುವುದೆಂಬ ನಂಬಿಕೆ ನನಗಂತೂ ಕಾಣುವುದಿಲ್ಲ. ಆದರೆಸೈನ್ಯದ ಕಠಿಣ ಕಾಯಿದೆಯ ಮುಖಾಂತರ ಉಳಿದರೆ ಅದೃಷ್ಟವೆಂದೇ ಹೇಳಬೇಕು.

ಇದರ ಮೇಲೂ ಐಕ್ಯತೆ ಉಳಿದುಕೊಂಡು ಬಂದುದಾದರೆ ಅದಕ್ಕೆ ಕಾರಣ ಇಷ್ಟೆ. ಕೇರಳೀಯರು ಬೇರ್ಪಟ್ಟುದಾದರೆ ಆರ್ಥಿಕಸಂಕಟ ಎದುರಿಸಬೇಕೆಂಬ ಹೆದರಿಕೆ ಕಾರಣವಾಗಬೇಕಲ್ಲದೆ, ನಿಜವಾಗಿ ಪ್ರೀತಿ, ವಿಶ್ವಾಸ, ಸಹೋದರತನದಿಂದ ಅಲ್ಲವೆಂಬುದನ್ನು ಖಂಡಿತವಾಗಿ ಹೇಳಬಲ್ಲೆ. ಈ ಮಾತು ಎಲ್ಲ ಭಾಷಾ ದುರಭಿಮಾನವುಳ್ಳ ಪ್ರಾಂತಗಳವರಿಗೂ ಅನ್ವಯಿಸುತ್ತದೆ. ಭಾರತದಲ್ಲಿ ಭಾಷಾದುರಭಿಮಾನವುಳ್ಳ ಪ್ರಾಂತಗಳೆಂದರೆ ತಮಿಳುನಾಡು, ಬಂಗಾಲ, ಮಹಾರಾಷ್ಟ್ರ, ಇವುಗಳಿಗೂ ಈ ಮಾತಿದೆ ಅರಿವಿದೆಟ್‌ಟಿನಲ್ಲಿ ನನ್ನ ಅಭಿಪ್ರಾಯವಿಷ್ಠೆ, ಯಾವ ಪ್ರಾಂತಗಳವರಿಗೇ ಆಗಲಿ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಭಾರತದ ಐಕ್ಯ ಉಳಿಯಬೇಕೆಂಬ ಆಸೆ ಮನಸ್ಸಿನಲ್ಲಿ ಇಲ್ಲ. ಹಾಗಿದ್ದರೆ ಬಂಗಾಲಿಗಳು ಅಸಾಮಿಗಳ ಮೇಲೆ ಅಪಪ್ರಚಾರದ ಹೊನಲನ್ನೇ ಹರಿಸುತ್ತಿರಲಿಲ್ಲ. ಇದೇ ರೀತಿ ನಮ್ಮ ನಾಡಿನ ನೆರೆಹೊರೆಯಲ್ಲಿರುವ ಪ್ರಾಂತಗಳಿಂದ ನಮಗೆ ಮನದಟ್ಟೇ ಆಗಿದೆ.

ವಿಶ್ವಭ್ರಾತೃತ್ವದ ಕಲ್ಪನೆ ಸುಂದರವಾದದ್ದೇ. ಈ ಬಗ್ಗೆ ನೀವು ಡಿ.ವಿ. ಜಿಯವರ ಮಾತು ಉದಹರಿಸಿದ್ದು ನನಗೂ ಮನಸ್ಸಿಗೆ ಹಿಡಿಸಿದೆ.

ಈಗ ಇರುವ ಸಮಸ್ಯೆಯೊಂದೇ. “ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?’’ ಎನ್ನುವುದೇ ಆಗಿದೆ. ಅರ್ಥಾತ್ ಯಾವ ಕಡೆಯಿಂದ ಅಥವಾ ಯಾರಿಂದ ಭ್ರಾತೃತ್ವದ ಕಲ್ಪನೆಯನ್ನು ನಿಜ ಜೀವನದಲ್ಲಿ ಅಥವಾ ರಾಜಕೀಯವಾಗಿ ಅನುಸರಣೆ ಯಾಗಬೇಕೆಂಬುದೆ ಸಮಸ.

ಇದು ನನಗೆ ತೋಚಿದ ಅಭಿಪ್ರಾಯ. ಇದರಲ್ಲಿ ತಮ್ಮ ಮನಸ್ಸಿಗೆ ಬೇಸರ ತರುವಂಥ ವಿಷಯವಿದ್ದರೆ ಕ್ಷಮಿಸಿ.

ಇಲ್ಲಿ ನಮಗೆ ಬಂದೂಕಿನ ತರಬೇತಿ ನಡೆಯುತ್ತಿದೆ. ನಮ್ಮ ತರಬೇತಿ ಕಠಿಣವಾಗಿಯೇ ಇದೆ. ಹೇಳಬಾರದ ಮಾತೆಂದರೆ ಇಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುತ್ತಿಲ್ಲವೆಂಬುದೇ ನಮಗಿರುವ ಕೊರಗು. ಏನೇ ಇರಲಿ ಅನುಭವಿಸಲೇಬೇಕು.

ಇತಿ ತಮ್ಮವ,

ಸಹಿ/-
ಯಜ್ಞೇಶ್ವರ ಐತಾಳ

ಶ್ರೀ ಎಸ್. ಗೋಪಾಲಗೌಡ, ಎಂ.ಎಲ್.ಎ.
ವಿಧಾನಸೌಧ, ಬೆಂಗಳೂರು-೧

***

Kariganur
7.9.1963

Dear Sri Gopala Gowda,

Received a letter from Mr. Murahari Yesterday. Doctor sab is coming to our state on 10th of October from Madras by mail train. He will stay here on 10th and 11th and leave for Kerala. Please convene a meeting of all those concerned and finalise about the convention. I am coming there on or before 1st October. I have written to Mr. Venkatram giving him this information and requesting him to do the needful immediately. Awaiting your reply. My regards to Mr. Maheswarappa.

Yours,

Sd/-
J.H. Patel

Shri S. Gopala Gowda, MLA
Legislator’s Home, Bangalore -1

***

ಕ್ಯಾಂಪ್ : ಕಾರಿಗನೂರು
೧೬.೯.೬೩

ಪ್ರಿಯ ಗೋಪಾಲಗೌಡರೆ,

ನಿಮ್ಮ ಪತ್ರ ತಲುಪಿತು. ವಂದನೆಗಳು, ಕಾಲಿನ ನೋವು ಕಡಿಮೆಯಾಗಿದೆ. ಹಾಕಿರುವ ಪಟ್ಟು (Plaster) ಬಿಚ್ಚಲು ಇನ್ನೂ ಎರಡು ವಾರ ಬೇಕು. ಮುಂದಿನ ೧ನೇ ತಾರೀಖಿನ ಹೊತ್ತಿಗೆ ಬರುತ್ತೇನೆ.

ಹಿಂದೆ ಕತ್ತಲಗೆರೆ ಜಮೀನಿನ ಬಗ್ಗೆ ನೀವು ಕೃಷ್ಣಪ್ಪನವರನ್ನು ಕಂಡದ್ದು ಪ್ರಯೋಜನವಾಗಿದೆ. ಅಂದರೆ ಆ ಬಗ್ಗೆ ದಾಖಲೆಗಳನ್ನು ಅಲ್ಲಿಗೆ ತರಿಸಿಕೊಂಡಿದ್ದಾರೆ. ಈಗ ಮತ್ತೆ ಅದೇ ರೀತಿ ಮಗ್ಗಲಿನ ಸಣ್ಣ ಹಳ್ಳಿಯಾದ ಕಳೆಟ್ಟಿಹಲ್ಲಿ ಗೋಮಾಳದ ಬಗ್ಗೆ ಮಾಡಿರುತ್ತಾನೆ ನಮ್ಮ ತಾಲ್ಲೂಕಿನ ಯೋಗ್ಯ ಪ್ರತಿನಿಧಿ. ಆ ಹಳ್ಳಿಯಲ್ಲಿರುವ ಹಿಂದುಳಿದ ಲಂಬಾಣಿ, ಉಪ್ಪಾರ, ಮುಂತಾದ ಕೋಮಿನ ಜನಗಳಿಗೆ ಒಂದು ಎಕರೆ ಜಮೀನಿಲ್ಲದಿದ್ದರೂ ಆ ಊರಿನ ಗೋಮಾಳದಲ್ಲಿ ತಲಾ ಮೂರು, ಮೂರು ಎಕರೆಯಂತೆ, ಜಮೀನಿರುವ ಮನೆತನಗಳಿಗೆ ಸೇರಿರುವ ಕೆಂಡಯ್ಯ, ಮಲ್ಲಿಕಾರ್ಜುನಯ್ಯ ಮತ್ತು ಚಂದ್ರಪ್ಪ ಎಂಬುವವರಿಗೆ ಒಟ್ಟು ೯ ಎಕರೆ ಜಮೀನನ್ನು ಮಂಜೂರು ಮಾಡಿಸಿದ್ದಾನೆಂದು ಖಚಿತವಾದಿ ತಿಳಿದಿದ್ದೇನೆ. ಈ ಕಾಗದ ತಂದಿರುವ ದೇವಣ್ಣ ವಾರದ ಹಿಂದೆ ಬೆಂಗಳೂರಿಗೆ ಹೋಗಿ ಪಾಪ ಯಾರ‍್ಯಾರದೋ ಕಾಲು ಹಿಡಿದು ಕೆಲಸವಾಗದೆ ನಿರಾಶನಾಗಿ ನಮ್ಮ ಬಳಿ ಬಂದಿದ್ದಾನೆ. ಈ ಬಗ್ಗೆ ಅವನು ಮುಖ್ಯಮಂತ್ರಿಗಳಿಗೆ, ಕಂದಾಯ ಮಂತ್ರಿಗಳಿಗೆ ಅರ್ಜಿಯನ್ನು ಕೊಟ್ಟಿರುತ್ತಾನೆಂದು ತಿಳಿಸಿದ. ಈ ಬಗ್ಗೆ ನೀವು ಕಂದಾಯ ಮಂತ್ರಿಗಳಿಗೆ ಈಗಾಗಲೇ ಕೊಟ್ಟಿರುವ ಅರ್ಜಿಯು ಸರಿಯಾಗಿಲ್ಲವಾದಲ್ಲಿ ಸರಿಯಾದ ಅರ್ಜಿಯೊಂದನ್ನು ಕೊಡಿಸಿ ಹಾಲಿ ಆಗಿರುವ ಮಂಜೂರಾತಿಯನ್ನು ತಡೆಹಿಡಿಸಿರಿ. ಈಗ ಮಂಜೂರಾಗಿರುವ ಮೂವರಲ್ಲಿ ಇಬ್ಬರು ಅದೇ ಹಳ್ಳಿಯವರು. ಮೂರನೆಯವನು ಕತ್ತಲಗೆರೆಯವನು. ಮೂವರೂ ಜಮೀನಿರುವ ಕುಟುಂಬದವರೇ.

ಗೆ. ಮುರಹರಿಯವರಿಗೆ ಉತ್ತರ ಬರೆದಿದ್ದೇನೆ. ಶ್ರೀರಾಜನಾರಾಯಣರ ಸಂಕ್ಷಿಪ್ತ ಭೇಟಿ ಆಶ್ಚರ್ಯಕರ. ನಿಮ್ಮ ಆರೋಗ್ಯದ ಬಗ್ಗೆ ಮತ್ತು ಉಳಿದ ವಿಷಯಗಳ ಬಗ್ಗೆ ಬರೆಯಿರಿ.

ಇತಿ ನಿಮ್ಮ,

ಸಹಿ/-
ಜೆ.ಹೆಚ್. ಪಟೇಲ್

Shri S. Gopala Gowda, MLA
Legislator’s Home, Bangalore -1

***

ಹೆಗ್ಗೋಡು
೨೮.೯.೧೯೬೩

ಶ್ರೀಯುತ ಮಾನ್ಯ ಗೋಪಾಲಗೌಡರವರ ಸಮಕ್ಷಮಕ್ಕೆ ತಮ್ಮವನೇ ಆದ ವಿ. ಕರಿಯ ಭಂಡಾರಿ, ಹೆಗ್ಗೋಡು ಇವನ ಹೃತ್ಪೂರ್ವಕ ವಂದನೆಗಳು.

ಪರಂತು ಇದೇ ಕಳೆದ ಏಪ್ರಿಲ್ ೧ನೇ ತಾರೀಖು ನನ್ನ ಗ್ರಹಚಾರವಶಾತ್. ಆಕಸ್ಮಿಕ ಘಟನೆಯಿಂದಾಗಿ ನಾನೊಂದು ಕೊಲೆ ನಡೆದ ಸ್ಥಳಕ್ಕೆ ಹೋದದ್ದು. ಅದೇ ಸಂದರ್ಭದಲ್ಲಿ ಈ ಉಳ್ಳವರ ಸಮಾಜದಿಂದ ನಾನು ಸ್ವಲ್ಪ ತೊಂದ್ರೆಯಲ್ಲಿ ಸಿಲುಕಿದ್ದು ಈ ವಿಚಾರವಾಗಿ ಈ ಹಿಂದೆಯೇ ತಮಗೆ ಸವಿಸ್ತಾರವಾಗಿ ಬರೆದಿದ್ದೆ. ಅದನ್ನು ನೀವು ಮರೆತಿರಲಿಕ್ಕಿಲ್ಲ. ಮರೆಯುವವರೂ ನೀವಲ್ಲ. ಆ ಘಟನೆ ಮೊನ್ನೆ ತಾ. ೧೬ಕ್ಕೆ ಮುಕ್ತಾಯವಾದಂತಾಯ್ತು. ನಿರಪರಾಧಿಗಳು ನಿರಪರಾಧಿಗಳಾಗಿಯೇ ಉಳಿದರು. ಅಪರಾಧಿಗೆ ಶಿಕ್ಷೆ ವಿಧಿಸಲ್ಪಟ್ಟಿತು. ಇರಲಿ ಇದು ಕಾನೂನಿಗೆ ಒಳಪಟ್ಟ ವಿಚಾರ. ಇದರಲ್ಲಿ ತಮ್ಮ ಅಮೂಲ್ಯವಾದ ಉಪಕಾರ ಪರೋಕ್ಷವಾಗಿ ಮಾಡಿದ್ದೀರಿ ಎಂಬುದನ್ನು ನಾನು ಬಲ್ಲೆ. ಇಲ್ಲವಾಗಿದ್ರೆ ಸತ್ಯದ ಕಣ್ಣಲ್ಲಿ ನಾನು ನಿರಪರಾಧಿಯಾಗಿದ್ದರೂ ಸಹ ಈ ಹಿಂಸಾಕಾರಕ ಪವಾಡಪುರುಷರ ಕಾಣದ ಕೈವಾಡದಿಂದಾಗಿ ಈ ಕಾಂಗ್ರೆಸ್ಸು ಆಡಳಿತದ ಪೊಲೀಸರಿಂದ ಸಾಕಷ್ಟು ಹಿಂಸೆಯನ್ನು ಪಡಬೇಕಾಗಿತ್ತು. ಹಾಗಿದ್ದರೂ ತಮ್ಮಂತವರ ಸಾವಿರಕ್ಕೊಬ್ಬರ ದೃಷ್ಟಿ ಈ ಕಡೆಯಿದೆಯಂತಲೋ ಯಾರ ಆಟವೂ ನಡೆಯದೆ ಅಲ್ಪ ಸ್ವಲ್ಪ ತಿರುಗಾಟ ಇತ್ಯಾದಿ ಸಣ್ಣ ಪುಟ್ಟ ತೊಂದರೇಯಿಂದಲೇ ಎಲ್ಲವೂ ಮುಕ್ತಾಯವಾಗಿ ಸತ್ಯವು ಸತ್ಯವಾಗಿಯೇ ಪರಿಣಮಿಸಿತು. ನೀವಾದರೂ ಯಾರ ಪಕ್ಷವನ್ನು ವಹಿಸುವವರಲ್ಲ. ನ್ಯಾಯ ದೇವತೆಯ ಬೆಂಬಲಿಗರು. ನ್ಯಾಯ ರಕ್ಷಕರು. ನಮ್ಮಂತವರು ಹೊಗಳಿದ್ದಕ್ಕೆ ಹಿಗ್ಗುವವರೂ ಅಲ್ಲ, ತೆಗಳಿದ್ದಕ್ಕೆ ಕುಗ್ಗುವ ಪ್ರಕೃತಿಯವರೂ ನೀವಲ್ಲ. ಹೀಗೇಕೆ ಬರೆದೆನೆಂದರೆ ಮತ್ತೇನನ್ನು ನಿಮ್ಮಿಂದ ಬಯಸಿ ಹೀಗೆಲ್ಲಾ ಹೊಗಳಿ ಬರೆದಿದ್ದಲ್ಲ. ಆದರೆ ಒಂದೇ ಒಂದು ಅಪೇಕ್ಷೆಯಿದೆ. ಈಸ್ವಾರ್ಥಸಾಧಕರ, ಪರಪೀಡಕರ ಹಿಂಸೆಗೆ ತಲೆಬಾಗದೇ ಇವರೆದುರಿನಲ್ಲೇ ಇವರಿಗೆ ಸರಿಸಮಾನವಾಗಿ ತಲೆಯೆತ್ತಿ ಬಾಳಬೇಕೆಂಬ ಅಪೇಕ್ಷೆಯಿದೆ. ಇದಕ್ಕೆ ತಮ್ಮಂತವರ ಸಹಾಯ ಸಹಾನುಭೂತಿ ಅತಿ ಅಗತ್ಯವಿದೆ. ಬಹುದಿನಗಳಿಂದಲೂ ತಮ್ಮಲ್ಲಿ ಒಂದರ್ಧ ಗಂಟೆಯ ಕಾಲವಾದ್ರು ಭೇಟಿಯಾಗಿ ಕೆಲವು ವಿಚಾರ ಚರ್ಚಿಸಬೇಕು. ಕೆಲವು ಸಲಹೆ ಪಡೆಯಬೇಕೆಂಬ ಅಪೇಕ್ಷೆಯಿದೆ. ಇದಕ್ಕೆ ಅವಕಾಶವೇ ಸಿಕ್ಕಿಲ್ಲ. ಕಾರಣ ತಾವು ಒಬ್ಬರೇ ಇರುವವರಲ್ಲ. ಹತ್ತೆಂಟು ಜನ ತಮ್ಮ ಹಿಂದೆ ಸದಾಕಾಲ ಇದ್ದೇ ಇರುತ್ತಾರೆ. ಇನ್ನು ಮುಂದಾದರೂ ಅಂಥಹದೊಂದು ಅವಕಾಶ ಸಿಗಬಹುದೇ? ಸಿಗಬುದಾದಲ್ಲಿ, ಯಾವಾಗ ಎಲ್ಲಿ ಎಂಬುದನ್ನು ಪ್ರಮುಖೇನ ತಿಳ್ಸುವಿರಾಗಿ ನಂಬುತ್ತೇನೆ. ಮತ್ತು ನಮ್ಮ ಪಕ್ಷದ ಧ್ಯೇಯ ಉದ್ದೇಶ್ಯವನ್ನು ವಿವರಿಸುವಂತದೊಂದು ಪುಸ್ತಕವನ್ನು, ವಿಲೇಜ್ ಪಂಚಾಯ್ತಿಯ ಬೈಲಾ ಒಂದು, ಇವೆರಡು ಪುಸ್ತಕವನ್ನು ದಯವಿಟ್ಟು ಕಳ್ಸಿ ಕೊಡಬೇಕು. ಇನ್ನು ಕೆಲವು ವಿಚಾರ ಮುಕ್ತಾ ಕಂಡಾಗ.

ತಮ್ಮವನೇ ಆದ,

ಸಹಿ/-
ಕರಿಯ ಭಂಡಾರಿ

***

ಜಿ. ಸದಾಶಿವರಾವ್
ರಥ ಬೀದಿ, ತೀರ್ಥಹಳ್ಳಿ
೧೭.೧೦.೧೯೬೩

ಗೆಳೆಯರೇ,

ನೀವು ಈಗ ಬೆಂಗಳೂರಿನಲ್ಲಿರುವುದಾಗಿ ತಿಳಿಯಿತು. ನಾನು ಇನ್ನು ಕೆಲವು ದಿನ ತೀರ್ಥಹಳ್ಳಿಯಲ್ಲಿಯೇ ಇರಬೇಕಾಗಿದೆ. ನೀವು ಅಪಘಾತದಿಂದ ಪಾರಾಗಿ ಈಗ ಗುಣವಾಗಿರಬಹುದಲ್ಲವೇ?

ನಾನು ಕೈಗೊಂಡಿರವ ಅನುವಾದ ಕಾರ್ಯ ಸಾಗಿದೆ. ಯುದ್ಧದ ಸಂದರ್ಭದಲ್ಲಿ ಶ್ರೀ ಮಧುಲಿಮಯೆ ಮತ್ತು ಡಾ. ಲೋಹಿಯಾರ ಎರಡು ಕಿರುಹೊತ್ತಿಗೆಗಳ ಅನುವಾದ ಮುಗಿದಿದೆ. ‘Wheel of History’ ಅನುವಾದ ಮಾಡಿ ಹಸ್ತ ಪ್ರತಿಯನ್ನು ಶ್ರೀ ಗೋಪಾಲಕೃಷ್ಣ ಅಡಿಗರಿಗೆ ಕಳುಹಿಸಿದ್ದೇನೆ; ಅವರಿಂದ ಸದ್ಯದಲ್ಲಿಯೇ ಉತ್ತರ ಬರಬಹುದು. Guilty Men of India’s partition ಈಗ ಅನುವಾದಿಸುತ್ತಲಿದ್ದೇನೆ. ಇದು ಮುಗಿದ ಒಡನೆ ಬೆಂಗಳೂರಿಗೆ ಬಂದು ಪ್ರಕಾಶನದ ಬಗ್ಗೆ ಏರ್ಪಾಡು ಮಾಡಬೇಕೆಂದಿದೆ. ಆಗ ನಿಮ್ಮ ನೆರವು ಅಗತ್ಯ. ರಾಮಯ್ಯ, ಬಾಸು ಇವರ ನೆರವೂ ಬೇಕಾಗುವುದು. ನನಗೆ ಡಾ. ಲೋಹಿಯಾರವರ “Marx, Gandhi and Socialoism” ಪುಸ್ತಕ ಬೇಕು. ನೀವು ಕಳುಹಿಸುತ್ತೇನೆ ಎಂದಿದ್ದೀರಿ. ಆದಷ್ಟು ಜಾಗ್ರತೆ ಕಳುಹಿಸಲು ಆದೀತಾ?

ಪಕ್ಷದ ಸ್ಥಿತಿ ಹೇಗಿದೆ? ಸ್ವಲ್ಪ ಚಟುವಟಿಕೆ ಆರಂಭಿಸುವುದು ಸಮಯೋಚಿತ ವೆನ್ನಿಸಿದೆಯಲ್ಲವೆ? ಧಾರವಾಡದ ಉಪಚುನಾವಣೆಯಲ್ಲಿ ನಾವು ಪಾತ್ರವಹಿಸಲಿಕ್ಕಾಗುವುದಿಲ್ಲವೆ? ಬರೆಯಿರಿ.

ಶಿವಮೊಗ್ಗಕ್ಕೆ ಬರುವುದಾದರೆ, ಇಲ್ಲಿಯವರೆಗೂ ಬನ್ನಿರಿ. ಬರುವುದಾದರೆ ತಿಳಿಸಿರಿ.

ನಿಮ್ಮವ,

ಸಹಿ/-
ಜಿ.ಸ. ರಾವ್

J.H. Patel
C/o S. Gopala Gowda, MLA
227, Legislator’s Home, B’lore.

***

ಯು.ಆರ್. ಅನಂತಮೂರ್ತಿ
ಬರ್ಮಿಂಗಂ ೧೬
Osborne Hostel
೨೦ ಅಕ್ಟೋಬರ್, ೧೯೬೩
184, Hagley Road, Edgbaston

ಪ್ರಿಯ ಗೋಪಾಲ್,

ಬಂದವನೆ ಬರೆಯಬೇಕೆಂದಿದ್ದೆ. ಸೋಮಾರಿತನ ಆಗಲಿಲ್ಲ. ಜೊತೆಗೆ ಓಡಾಟ. ಹೊಸ ದೇಶಕ್ಕೆ ಬಂದ ಗಾಬರಿ, ಅಚ್ಚರಿ, ಮನೆ ಹುಡುಕುವ ತವಕ ಇತ್ಯಾದಿ. ಎಸ್ತರ್ ಮತ್ತು ಶರತ್ ಬಂದಿದ್ದಾರೆ. ಸದ್ಯಕ್ಕೆ ಒಂದು ಹೋಟೆಲಿನಲ್ಲಿ ಇದ್ದೇವೆ. ಈ ತಿಂಗಳ ಕೊನೆಯಲ್ಲಿ ಒಂದು ಹೊಸ ಕಟ್ಟಡದಲ್ಲಿ ನಮಗೊಂದು ಫ್ಲಾಟ್ ಗೊತ್ತಾಗಿದೆ. ಆ ತನಕ ಸ್ವಲ್ಪ ಹೆಚ್ಚು ವೆಚ್ಚವಾದರೂ ಈ ಹೋಟೆಲಲ್ಲೇ ಇರಬೇಕು.

ಲಂಡನ್ ಬಿಟ್ಟರೆ ಬರ್ಮಿಂಗಂ ದೊಡ್ಡ ಊರು ಇಂಗ್ಲೆಂಡಿನಲ್ಲಿ, ದುಡಿಯುವ ಜನರ ಊರು, ಕೂಲಿಗಾರರು ಎಲ್ಲ ದೇಶದಲ್ಲಿದಂತೆ ಇಲ್ಲೂ ಪ್ರೀತಿ, ದ್ವೇಷದ ವಿಪರೀತಗಳಲ್ಲಿ ಬದುಕುತ್ತಾರೆ. ಆದ್ದರಿಂದ ಶ್ರೀಮಂತ ಇಂಗ್ಲಿಷಿನವನ ಏಕಾಕಿತನ ಅವನಲ್ಲಿಲ್ಲ. ನಾನು ಒಂದು ಪಬ್‌ಗೆ ಹೋದಾಗ ಒಬ್ಬ ಪಕ್ಕದವನ ಕಡೆ ನೋಡಿ ಮಾತನಾಡಿಸಿದೆ, ಗಾರೆ ಕೆಲಸದವನು ಅವನು. ನನಗೆ ಬೀರ್ ಕುಡಿಸಿದ, ಮಾತನಾಡಿಸಿದ, ಗಟ್ಟಿಯಾಗಿ ನಕ್ಕ, ಪೋಲಿ ಮಾತಾಡಿದ. ಅವರ ಭಾಷೆ ಅರ್ಥವಾಗುವುದು ಕಷ್ಟ. ಆದರೆ ಅವರು ಮಾತಾಡಿದಾಗ ಮಾತ್ರ ನಮ್ಮ ಭಾಷೆ ಇಂಗ್ಲಿಷ್ ಆಗಲಾರದು ಎನ್ನುವುದು ಮನದಟ್ಟಾಗುತ್ತದೆ. ಜನರ ಮಾತಿನಲ್ಲಿರುವ ಕಾವು, ಕಾವ್ಯ ಪುಸ್ತಕದಿಂದ ಬರಲಾರದು. ನಿನ್ನೆ Timesನಲ್ಲಿ ಒಂದು ಸಂಪಾಕೀಯವಿತ್ತು. ಇಂಗ್ಲಿಷೇತರರು ಇಂಗ್ಲಿಷ್ ಕಲಿಯುವ ಬಗ್ಗೆ. ಒಬ್ಬ ಹುಡುಗ Wordsworthನ Daffodils ಪದ್ಯದ ಬಗ್ಗೆ ಬರೆದ ಪ್ರಬಂಧ ಚೆನ್ನಾಗಿತ್ತೆಂದು Scholarship ಪಡೆದು ಇಂಗ್ಲೆಂಡಿಗೆ ಬಂದನಂತೆ. ಬಂದವನು ಡ್ಯಾಂಡೆಲಿನ್ಸ್ ಹೂಗಳನ್ನು ನೋಡಿ Daffodils ಪದ್ಯದ ಸಾಲುಗಳನ್ನು ಮಾಡಿದನಂತೆ quote ಮಾಡಿದನಂತೆ…

ಇಲ್ಲಿ ಯಾವ ಪತ್ರಿಕೆಯಲ್ಲೂ ಭಾರತದ ಸುದ್ದಿಯಿಲ್ಲ. ನಮ್ಮ ದೇಶ ಬೇರೆ ದೇಶಗಳಲ್ಲೆಲ್ಲ ಕೀರ್ತಿಯ ಪತಾಕೆಯನ್ನು ಹಾರಿಸಿದೆ ಎಂಬ ನಮ್ಮ ಜನರ ಬಾಯಿಬಡಕತನದ ಒಣ ಜಂಬ ಕಂಡು ದುಃಖವಾಗುತ್ತದೆ. ನಮಗೊಂದು ಭಾಷೆ, ನಮ್ಮದೇ ಆದ ನುಡಿ ನಡೆ ಸಂಸ್ಕೃತಿ ಎಷ್ಟು ಅವಶ್ಯ, ಲೋಹಿಯಾ ಎಷ್ಟರಮಟ್ಟಿಗೆ ಸರಿ ಎನ್ನುವುದು ಇಲ್ಲಿ ಬಂದ ಮೇಲೆ ಗೊತ್ತಾಗುತ್ತದೆ. ಇಂಗ್ಲಿಷ್ ಜನರೆ ನನ್ನನ್ನು ಕಂಡು ಕೇಳುತ್ತಾರೆ; ನಿಮಗೆ ನಾಚಿಕೆಯಿಲ್ಲವೇ? ನಿಮ್ಮದೇ ಆದ ಒಂದು ಭಾಷೆಯಲ್ಲಿ ನೀವು ಬದುಕುವುದು ಬೇಡವೆ ಅಂತ. ನಮ್ಮ ಇಂಗ್ಲಿಷ್ಗೆ ವಿಪರೀತ ಪುಸ್ತಕದ ವಾಸನೆ. ಡಿಕ್ಶನರಿಯಿಂದ ನೇರವಾಗಿ ಎದ್ದುಬಂದಂತೆ ಕಾಣುತ್ತದೆ.

ಇಂಡಿಯಾ ಹೌಸ್‌ಗೆ ಹೋದರೆ ನಾಚಿಕೆಯಾಗುತ್ತದೆ. ನಮ್ಮನ್ನು ಲಂಡನ್ನಿನಲ್ಲಿ ಇದ್ದಾಗ ಕರೆದಿದ್ದರು. ಹೋದಮೇಲೆ ತಡವಾಗಿ ಮೀಟಿಂಗಿಗೆ ಏರ್ಪಾಡಾಯಿತು. ನಂತರ ಒಬ್ಬ ಮನುಷ್ಯ ನಾವು ಇಲ್ಲಿ ಹೇಗೆ ನಡೆದುಕೊಬೇಕು, ಹೇಗೆ ನಮ್ಮ ದೇಶವನ್ನು ಎತ್ತಿ ಹಿಡಿಯಬೇಕು ಇತ್ಯಾದಿ ಭಾರತೀಯ ಭಾಷಣ ಮಾಡಿದ.

ಒಂದು ಅನುಭವ: ದಾರಿ ತಪ್ಪಿ ಎಲ್ಲೋ ಹೋಗುತ್ತಿದ್ದೆ. ಒಬ್ಬ ಪಾಕಿಸ್ತಾನಿ ಸಿಕ್ಕಿದ. ದಾರಿ ಕೇಳಿದೆ. ನಾನು ಇಂಡಿಯನ್ ಎನ್ನುವುದು. ಅವನಿಗೆ ತಿಳಿಯಿತು. ದಾರಿ ತೋರಿಸಿ, ಬೇಕಾದರೆ ಸ್ವಲ್ಪ ದುಡ್ಡು ಕೊಡುತ್ತೇನೆ, ಕಷ್ಟದಲ್ಲಿದ್ದೀಯ ಎಂದ. ಇಲ್ಲವೆಂದು ಅವನಿಗೆ ನನ್ನ ಕೃತಜ್ಞತೆ ತಿಳಿಸಿದೆ. ನಾನು ನೀನು ಒಂದು ನಾಡಿನವರಲ್ಲವೆ ಎಂದ. ಇಲ್ಲಿ ನನ್ನ ಅವನ ಸಮಸ್ಯೆ ಒಂದೇ. ಒಟ್ಟಿನಲ್ಲಿ ಎಲ್ಲ ಏಷ್ಯದವನ ಸಮಸ್ಯೆಯೂ ಒಂದೆ. ಅದು ಎಂದು ತಿಳಿಯುವುದೊ ಅಂದು ನಿಜವಾದ ರಾಜಕೀಯ ಕ್ರಾಂತಿಯಾಗುತ್ತದೆ. ಆದರೆ ನಮ್ಮ ಸ್ಥಿತಿ ಹಾಗಿಲ್ಲ. ಉದಾಹರಣೆಗೆ ಇನ್ನೊಂದು ಅನುಭವ ಲಂಡನ್ನಿನಲ್ಲಿ ಕೇಳಿದೆ.

Hyde park ನಲ್ಲಿ ಒಬ್ಬ ಪಾಕಿಸ್ತಾನಿ ಇಂಡಿಯಾ ದೇಶವನ್ನು ಬೈದನಂತೆ. ಸಭೆಯಲ್ಲಿದ್ದ ಒಬ್ಬ ಹಿಂದು ಪ್ರತಿಭಟಿಸಿದನಂತೆ. ಅದಕ್ಕವನು ‘ನಾನು ನಿನ್ನ ಅಕ್ಕನ ಜೊತೆ ಮಲಗಿದ್ದೆ.’ ಎಂದನಂತೆ. ಹಿಂದು ‘ನಿನ್ನ ತಂಗಿಯನ್ನು ನಾನು ಬಿಟ್ಟಿದ್ದೇನೆ ಅಂತ ತಿಳಿದಿಯ’ ಎಂದನಂತೆ.

ಈಗ ಹವಾ ಇಲ್ಲಿ ಕೆಲವು ಸಾರಿ ಸೊಗಸಾಗಿರುತ್ತದೆ. ಬಿಸಿಲು, ಚಳಿ ಒಟ್ಟಿಗೆ, ಹೋದ ವಾರವೇ D.H. Lawrence ನ Women in love ಬಗ್ಗೆ ಒಂದು ಪ್ರಬಂಧ ಬರೆದೆ Tutorialಗೆಂದು. University ತುಂಬಾ ಸೊಗಸಾಗಿದೆ. ಇಂಗ್ಲಿಷ್ ಪ್ರೊಫೇಸರ್ ಒಬ್ಬ ದೊಡ್ಡ ವ್ಯಕ್ತಿ Richard Hoggart ಎಂದು ಹೆಸರು. ಆತ ಕೂಲಿಗಾರರ ಸಂಸಾರದಿಂದ ಬಂದವನು, Lawrence, Blake and Leavis ನ ಹಾಗೆ. ತನ್ನ ಅನುಭವದ ಬಗ್ಗೆ ‘Uses of Literacy’ ಎಂಬ ಪುಸ್ತಕ ಬರೆದಿದ್ದಾನೆ. (Penguinನಲ್ಲಿ ಸಿಗುತ್ತದೆ) ಚೆನ್ನಾಗಿದೆ. ನನ್ನ Tutor Malcolm Bradbury ಅಂತ ಒಬ್ಬ ಯುವಕ. Eating People is Wrong ಎನ್ನುವ ಕಾದಂಬರಿ ಬರೆದಿದ್ದಾನೆ. ತುಂಬ ಜಾಣ. ಆ ದೃಷ್ಟಿಯಿಂದ ಜೀವನ ಸುಖವಾಗಿದೆ.

ಈಗ ಇಲ್ಲಿ ಮಂತ್ರಿಮಂಡಲದ ನಿರ್ಮಾಣದ ಚರ್ಚೆ. ನಿಜಲಿಂಗಪ್ಪ ಜತ್ತಿಯ ವ್ಯಾಜ್ಯವೆ? ಆದರೆ ಗಾಂಭೀರ್ಯವಿದೆ ಇಡೀ ವಾತಾವರಣದಲ್ಲಿ. ಆದ್ದರಿಂದ ಪ್ರಜಾಸತ್ತೆಯ ಒಟ್ಟಿನಲ್ಲಿ ವಾಸಿ ಎನ್ನಿಸತ್ತೆ.

ಕೋ. ಲಿಂಗಪ್ಪ ಹೇಗಿದ್ದಾನೆ? ನನಗೆ Mankind ಕಳುಹಿಸಲು ಸಾಧ್ಯವೆ? ಲೋಹಿಯಾರವರ ಬಗ್ಗೆ ಈಚೆಗೆ ಏನೂ ತಿಳಿದಿಲ್ಲ. ಸ್ವಲ್ಪ ಬಿಡುವಾದಗಾ ಬರೆಯುತ್ತೇನೆಂದು ದಯಮಾಡಿ ಅವರಿಗೆ ತಿಳಿಸಿ. ಬರೆಯಲು ಚಳಿ ಬಿಡದು. ಬರೆಯುವುದೆಂದರೆ ಗಾಬರಿ. ಆದರೂ ಬರೆಯಬೇಕು ಬರೆಯುತ್ತೇನೆ. ಸೋಮಾರಿತನ ಗೊತ್ತಲ್ಲ?

ಶ್ರೀ ಲಿಂಗಪ್ಪನಿಗೆ ಬರೆಯಲು ಹೇಳಿ. ಶಂಕರ, ಪಟೇಲ ಹೇಗಿದ್ದಾರೆ? ಶಂಕರನಿಗೆ ಬರೆಯಲು ಹೇಳಿ ಫ್ಲಾಟ್‌ಗೆ ಹೋಗುವವರೆಗೆ British Council ಅಡ್ರೆಸ್‌ಗೆ ಬರೆಯಿರಿ. ಅವತ್ತಿನ ಚಿರಸ್ಮರಣೀಯ ಕೂಟಕ್ಕೆ ಬಂದ ಗೆಳೆಯರೆಲ್ಲರಿಗೂ ನಮಸ್ಕಾರ ಹೇಳಿ. ಶ್ರೀ ನಾರಾಯಣರೆಡ್ಡಿಯವರನ್ನು ಎಂದಿಗೂ ಮರೆಯಲಾರೆ. ಬಾಸು, ಶಾಮಣ್ಣ, ಹಳೆಯ ಗ್ಯಾಂಗ್ ಹೇಗಿದೆ? ಸದಾಶಿವರಾವ್ ಮಾಡಿದ ಭಾಷಾಂತರ ಏನಾಯಿತು?

ಮುಖ್ಯವಾಗಿ ಗೋಪಾಲ್ ನಿಮ್ಮ ಆರೋಗ್ಯದ ವಿಷಯ. ಜೀವನ ಸ್ವಲ್ಪ ವ್ಯವಸ್ಥಿತವಾಗುವುದು ಒಳ್ಳೆಯದು. ನನ್ನ ಅನುಭವದಲ್ಲಿ ನಿಮಗಿಂತ ದೊಡ್ಡ ರಾಜಕಾರಣಿಯನ್ನು, ಸಭ್ಯನಾದ ಸುಸಂಸ್ಕೃತನಾದ ಪ್ರತಿಭಾಶಾಲಿಯನ್ನು ನಾನು ಕಂಡಿಲ್ಲ. ವ್ಯವಸ್ಥಿತವಾದ ಜೀವನದಿಂದ ನೀವು ದೊಡ್ಡದನ್ನು ಸಾಧಿಸುತ್ತೀರೆಂದು ನನ್ನ ನಂಬಿಕೆ.

ಸಾಗರದ ಗೆಳೆಯರಿಗೆ ನಮಸ್ಕಾರ ತಿಳಿಸಿ.

ಪ್ರೀತಿಯಿಂದ,

ಸಹಿ/-
ಅನಂತು.

Sri S. Gopala Gowda, MLA
227, Legislator’s Home,
Bangalore -1, South India.

***

ಕಾರಿಗನೂರು
೨೭.೧೧.೬೩
J.H. Patel, B.A., L.L.B
Kariganur Post
Shimoga Dist.

ಪ್ರಿಯ ಶ್ರೀ ಗೌಡರೇ,

ನಿಮ್ಮ ಹಿಂದಿನ ಕಾಗದಕ್ಕೆ ಉತ್ತರ ಬರೆಯುವುದು ತಡವಾದ್ದಕ್ಕೆ ಕ್ಷಮಿಸಿ. ಕಳೆದ ೨೨ನೇ ತಾ. ಶಿವಮೊಗ್ಗಕ್ಕೆ ಹೋಗಿ ನಿನ್ನ ರಾತ್ರಿ ಇಲ್ಲಿಗೆ ಬಂದೆ. ಕೆನೆಡಿಯವರ ಮರಣ ವಾರ್ತೆಯಿಂದ ನನ್ನ ಮನಸ್ಸಿನಲ್ಲಾದ ಪ್ರತಿಕ್ರಿಯೆಯನ್ನು ವರ್ಣಿಸಲೂ ಆಗದು. ದುಃಖ, ಕೋಪ, ಜಿಗುಪ್ಸೆಗಳ ಮಿಶ್ರಿತ ಭಾವನೆಯ ಸೆಳೆತಕ್ಕೆ ಸಿಕ್ಕು ವಾಸ್ತವಿಕವಾಗಿ Blank ಆಗಿದೆ ಮನಸ್ಸು.

ಪೂಜಾರರ ಕಾಗದಕ್ಕೆ ನೀವು ಬರೆದಿರುವ ಉತ್ತರ ಅತಿ ಸಮರ್ಪಕ. ಅವರಿಗೆ ನಾನು ಏನೂ ಬರೆಯುವುದಿಲ್ಲ. ನಿಮ್ಮನ್ನು ಸಾಧ್ಯವಾದರೆ ೨೯ನೇ ತಾ. ಶಿವಮೊಗ್ಗದಲ್ಲಿ ಕಾಣುತ್ತೇನೆ. ಗೆ. ರಾಮಕೃಷ್ಣ ಇವರ ವಿವಾಹಕ್ಕೆ ಬರಲೇಬೇಕೆಂಬ ಆಗ್ರಹದ ಆಮಂತ್ರಣವಿದೆ. (೨.೧೨.೬೩ರಂದು) ಆದ್ದರಿಂದ ೨೯ನೇ ರಾತ್ರಿ ಅಲ್ಲಿ (ಶಿವಮೊಗ್ಗಕ್ಕೆ) ಹೋಗಿ ಮರುದಿನ ಮುಂದೆ ಪ್ರಯಾಣ ಮಾಡಬೇಕೆಂದಿದ್ದೇವೆ.

ನಿಮ್ಮ ಲಗ್ನದ ದಿನ ಇತ್ಯಾದಿಗಳ ಬಗ್ಗೆ ತೀರ್ಮಾನಿಸಿದ್ದರೆ ಕೊಡಲೇ ಬರೆಯಿರಿ. ಹೆಚ್ಚಿನ ವಿಷಯ ಮುಖತಃ ಗೆ. ಮಹೇಶ್ವರಪ್ಪನವರಿಗೂ, ಗೆ. ಬಾಸುರವರಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ.

ಇತಿ ನಿಮ್ಮ,

ಸಹಿ/-
ಜೆ.ಹೆಚ್. ಪಟೇಲ್

***