ಧಾರವಾಡ
ಸಾಥಿ ಶ್ರೀ ಗೋಪಾಲಗೌಡರಲ್ಲಿ ಅಭಿವಂದನೆಗಳು.

೧. ನಾನು ಅನವಶ್ಯಕವಾಗಿ ನಿಮಗೆ ಹೊರೆಯಾದೆನೇನೋ ಎನಿಸಹತ್ತಿದೆ. ಚುನಾವಣೆಯ ವೆಚ್ಚವನ್ನು ತೂಗಿಸಬಲ್ಲ ಸಾಮರ್ಥ್ಯ ನನಗಿಲ್ಲದಾಗ ಚುನಾವಣೆಗಳಲ್ಲಿ ಸ್ಪರ್ಧಿಸುವ ಹವ್ಯಾಸವನ್ನು ನಾನು ಇಟ್ಟುಕೊಳ್ಳಬಾರದಾಗಿತ್ತು. ನೀವು ನನ್ನನ್ನು ಪುಸಲಾಯಿಸಿ, ಪ್ರೋತ್ಸಾಹಿಸಿದಿರೆಂದು ನಾನು ಎಷ್ಟೂ ನಿಮ್ಮನ್ನು ಆರೋಪಿಸುವುದಿಲ್ಲ. ಪಕ್ಷದ ಹಿತಸಂಬಂಧಗಳ ವಿಶ್ವಸ್ತನಾದವನು ಹೇಗೆ ವರ್ತಿಸಬೇಕೋ ಹಾಗೆ ನೀವು ವರ್ತಿಸಿದ್ದೀರಿ.

೨. ನಾವು ಚುನಾವಣೆಗೆ ಇಳಿಯುವ ಪೂರ್ವದಲ್ಲಿ ಪಕ್ಷದ ವೈಧಾನಿಕ ಅಗತ್ಯಗಳನ್ನು ಪೂರೈಸಲಿಲ್ಲವೆಂಬುದು ನಿಜ. ಆ ವೈಧಾನಿಕ ಕ್ರಮಗಳ ಲೋಪದಿಂದಾಗಿ ನಾವು ಅಧಿಕೃತವಾಗಿ ಪಕ್ಷದ ನಿಧಿಯಿಂದ ಹಣವನ್ನು ಅಪೇಕ್ಷಿಸಲಾರೆವೆಂಬುದು ನಿಜ. ಆದರೆ ಅಸಾಂಪ್ರದಾಯಿಕ ರೀತಿಯಿಂದ ಪಕ್ಷದ ಸ್ನೇಹಿತರು ಸಹಾಯ ನೀಡಲಾರರೆ? ಡಾಕ್ಟರ್ ಲೋಹಿಯಾರವರಲ್ಲಿ ಅಸಾಂಪ್ರದಾಯಕ ರೀತಿಯಲ್ಲಿ ಒಂದು ಬೇಡಿಕೆಯನ್ನು ಇಟ್ಟಿದ್ದರೆ ಏನು ತಪ್ಪಾಗುತ್ತಿರಲಿಲ್ಲ. ಸ್ನೇಹಿತರು ಸ್ನೇಹಿತರಿಗೆ ನೆರವಾಗುವ ರೀತಿಯಲ್ಲಿ ಅದೂ ಪಕ್ಷದ ಬಲದ ಉತ್ಕರ್ಷವಾಗುವಂತಿದ್ದರೆ ಡಾಕ್ಟರರು ನೆರವು ನೀಡುತ್ತಿರಲಿಲ್ಲವೆ? ನೀವು ಅವರನ್ನು ಆ ಬಗೆಗೆ ಕೇಳುವುದನ್ನು ಬಿಡಬಾರದಿತ್ತೆಂದೂ ಈಗಲೂ ನನ್ನ ಭಾವನೆಯಿದೆ. ಪಕ್ಷದಲ್ಲಿ ಜಿಗುಟುತನವಿದೆ, ಹುಮ್ಮಸ್ಸಿದೆ. ಧ್ಯೇಯನಿಷ್ಠ ಕಾರ್ಯಕರ್ತರ ಪಡೆಯಿದೆ, ಪ್ರಸಂಗ ಬಂದಾಗ ಒಟ್ಟಾಗಿ ಬಲ ಪ್ರದರ್ಶಿಸುವ ಸಾಮರ್ಥ್ಯವಿದೆಯೆಂದು ನಾವು ಜನಕ್ಕೆ ತೋರಿಸಬೇಕಾಗಿತ್ತು. ಇದಕ್ಕೆ ಜನ ಮೆಚ್ಚುತ್ತಾರೆ. ಉತ್ತಮ ಭವಿಷ್ಯತ್ತು ಉಳ್ಳ ಪಕ್ಷವೆಂದು ಜನರು ಪಕ್ಷದಲ್ಲಿ ಆಸ್ಥೆ ತೋರಿಸಹತ್ತುತ್ತಾರೆ. ಇಷ್ಟನ್ನೂ ನಮಗೆ ಮಾಡಿ ತೋರಿಸಲಾಗದಿದ್ದರೆ ನಾವು ನಿರ್ವೀರ್ಯರು, ದುರ್ಬಲರೆಂದು ಜನ ತಿಳಿಯುತ್ತಾರೆ. ಮಹಾಚುನಾವಣೆಗಳಾಗಿದ್ದರೆ ಆ ಮಾತು ಬೇರೆ ಇತ್ತು. ಉಪಚುನಾವಣೆಗಳಲ್ಲಿಯೇ ರಾಜಕೀಯ ಪಕ್ಷಗಲು ತಮ್ಮಲ್ಲಿರುವ ಉತ್ತಮ ಅಂಶಗಳನ್ನು ಪ್ರದರ್ಶಿಸಲಿಕ್ಕೆ ಸಾಧ್ಯವಿರುತ್ತದೆ.

೩. ನಿಮ್ಮ ಹಣಕಾಸು, ನಿಮ್ಮ ಕಾರು ಮತ್ತು ಸಾಹಿತ್ಯಗಳೆಲ್ಲ ಧಾರವಾಡದಲ್ಲಿ ನಮ್ಮ ಕೈಸೇರುವ ದಿನವಾವುದೆಂಬದನ್ನು ತಿಳಿಯಬಹುದೆ? ಯೋಗ್ಯ ಕಾಲದಲ್ಲಿ ಅವೆಲ್ಲ ನಮಗೆ ಲಭ್ಯವಾಗಬೇಕು. ಮೊದಲಿನ ವೇಳಾಪತ್ರಿಕೆಯನ್ವಯ ಚುನಾವಣೆಗಳು ಜರುಗಿದ್ದರೆ ಇಷ್ಟರಲ್ಲಿ ಎಲ್ಲ ಮುಗಿದು ಹೋಗಬಹುದಿತ್ತು. ಇನ್ನೂ ನೀವು ನಮ್ಮನ್ನು ನಿರೀಕ್ಷೆಯಲ್ಲಿ ಇಡುತ್ತಿದ್ದೀರಿ. ನಮಗೆ ಇದೊಂದೂ ಅರ್ಥವಾಗುತ್ತಿಲ್ಲ. ತೀವ್ರ ಎಲ್ಲ ಸಾಧನೆ ಸಾಮಗ್ರಿಗಳನ್ನು ಕಳಿಸಿದಲ್ಲಿ ಭರವಸೆಯ ಎದೆಯಿಂದ ಕಾರ್ಯ ಮಾಡಬಹುದು. ನಮ್ಮ ಕಾರ್ಯಕರ್ತರೆಲ್ಲ ದಿನಾಂಕ ೧೦.೧೨.೬೩ರ ಸಂಜೆಯೊಳಗಾಗಿ ಧಾರವಾಡಕ್ಕೆ ತಲುಪಬೇಕು. ಸಾಧನ ಸಾಮಗ್ರಿಗಳು ಮೊದಲೇ ನಮ್ಮ ಕೈಸೇರಬೇಕು. ಇಷ್ಟನ್ನು ಮಾಡುವಿರಾಗಿ ನಂಬಿ ನಾನುನಾಳೆಯ ದಿನ ನಾಮಪತ್ರ ಸಲ್ಲಿಸುತ್ತೇನೆ.

ನಿಮ್ಮ ಸ್ನೇಹಾಕಾಂಕ್ಷಿ

ಸಹಿ/-
ನೀಲಗಂಗಯ್ಯ ಪೂಜಾರಿ

***

ಹೆಗ್ಗೋಡು
ತಾ. ೧೧.೫.೬೭

ಶ್ರೀಯುತ ಎಸ್. ಗೋಪಾಲಗೌಡರಿಗೆ ಎಂ.ಎಲ್.ಎ. ಮೈಸೂರು ವಿಧಾನಸಭಾ ಬೆಂಗಳೂರು ಇವರ ಸನ್ನಿಧಾನಕ್ಕೆ…

ಹೆಗ್ಗೋಡಿನಿಂದ ವಿ. ಕರಿಯ ಭಂಡಾರಿಯ ಅನೇಕ ನಮಸ್ಕಾರಗಳು.

ಈ ಪತ್ರಬರೆಯಲು ಕಾರಣ. ನನ್ನ ಮಗಳ ವಿವಾಹದ ಸಂದರ್ಭದಲ್ಲಿ ಇದೇ ಊರಿನಲ್ಲಿ ವಾಸವಾಗಿರುವ ಸ್ವಜಾತಿಯವನೊಬ್ಬ ಮೊದಲಿನಿಂದಲೂ ನನಗೆ ವಿರೋಧಿ, ಹಿತಶತ್ರುವಾಗಿದ್ದ. ಅವನು ಈ ಲಗ್ನಕಾರ್ಯಕ್ಕೆ ಹಲವು ರೀತಿಯ ತೊಂದ್ರೆ ಮಾಡಬೇಕಾಗಿ ಒಳಗಿಂದೊಳಗೆ ಹಲವು ತರಹದ ಕಿರುಕುಳ ಕೊಟ್ಟು ಬಹಳವಾಗಿ ಸುಧಾರಿಸಿಕೊಂಡು ಕಾರಣಾಂತರದಿಂದ ಇದೇ ಲಗ್ನಕಾರ್ಯದ ಅಂಗವಾದ ಮತ್ತೊಂದು ಸಮಯ ಅಂದ್ರೆ ೧.೬.೬೭ರಲ್ಲಿ ನನಗೂ ಅವನಿಗೂ ಘರ್ಷಣೆಯಾಯ್ತು. ಇದೇ ಸಮಯವನ್ನು ಕಾಯುತ್ತಿದ್ದ ಇಲ್ಲಿಯ ನಮ್ಮ ಶತ್ರುಗಳು ಅಂದ್ರೆ ಕಾಂಗ್ರೆಸ್ಸು ಕಾರ್ಯಕರ್ತರು ಮತ್ತು ಬ್ರಾಹ್ಮಣ ಸಮಾಜದವರು ಎಲ್ಲರೂ ಒಟ್ಟಾಗಿ ಗಡಿಕಟ್ಟೆ ಪಟೇಲ್ ಸುಬ್ರಾಯರ ಮುಖಂಡತ್ವದಲ್ಲಿ ಸಮಾಜದ ಪ್ರತಿಯೊಬ್ಬರೂ ಅಂದ್ರೆ ಕೆ.ವಿ. ಸುಬ್ಬಣ್ಣನವರು, ಎಂ.ಆರ ಮಂಜಪ್ಪನವರು ಮತ್ತು ಮೆಳವರಿಗೆ ಲಕ್ಷ್ಮೀನಾರಾಯನಪ್ಪನವರು ಹೀಗೆ, ಇವರು ಮೂರು ಜನ ಮಾತ್ರ ತಟಸ್ಥ ಪಕ್ಷವಾಗಿದ್ದಾರೆ. ಇನ್ನುಳಿದವರಲ್ಲದೆ ನಮ್ಮ ಪಂಚಾಯ್ತಿ ಛೇರಮೇನರಾದಿಯಾಗಿ ತಲಾ ೨೫/- ರೂಪಾಯಿ ವಂತಿಗೆ ಹಾಕಿಕೊಂಡು ಅದೇ ದಿನವೇ ನನ್ನ ಮೇಲೆ ವಾದಿಯ ಕಡೆಯಿಂದ ಕಂಪ್ಲೈಂಟು ಕೊಡಿಸಿ, ಇವನಪ್ಪ ಗೋಪಾಲಗೌಡ ಇವನನ್ನು ಉಳಿಸಲಿ ನೋಡುವ. ಇವನನ್ನು ಊರು ಬಿಡಿಸಿಯೇ ತೀರುತ್ತೇವೆ ಎಂತ ಪಣ ತೊಟ್ಟು ಗಡಿಕಟ್ಟೆ ಪಟೇಲರೆ ಮುಂದಾಗಿ ಆ ನನ್ನ ಸ್ವಜಾತಿಯವನಿಂದ ಫಿರ್ಯಾದಿ ಕೊಡಿಸಿ ಡಾಕ್ಟರ್ ಸರ್ಟಿಫಿಕೇಟು ಮಾಡಿಸಿದ್ದಾರೆ. ನಾನು ಆ ದಿನವೇ ಇಲ್ಲಿಂದ ಹೊರಟು ತಾ. ೨.೧.೬೭ಕ್ಕೆ ಸರಿಯಾಗಿ ಕೊಪ್ಪದಲ್ಲಿ ನಡೆಯುವ ನಮ್ಮ ಸ್ನೇಹಿತರ ಲಗ್ನಕ್ಕಾಗಿ ಹೋದೆ. ಕಾರಣ ಮುಂದಿನ ಡಿಫೆನ್ಸಿಗಾಗಿ ನಾನು ಆ ರೀತಿ ಮಾಡಬೇಕಾಗಿ ಬಂತು. ಕಾರಣ ೧.೬.೬೭ರ ಸಂಜೆ ೩ ಗಂಟೆಗೆ ಈ ಗಲಾಟೆ ನಡೆದದ್ದು. ೨ನೇ ತಾರೀಕು ನಾನು ಕೊಪ್ಪದಲ್ಲಿದ್ದೆ. ಇದು ನನಗೆ ಮುಂದೆ ಅನುಕೂಲವಾಗಬಹುದೆಂತ ನಾನು ಹಾಗೆ ಮಾಡಿದೆ. ಅಲ್ಲಿ ಬಂದವನು ತೀರ್ಥಹಳ್ಳಿ ಅಲ್ಲಿ ಇಲ್ಲಿ ವಿಚಾರಿಸಲಾಗಿ ತಮ್ಮ ಇರುವಿಕೆಯ ಸರಿಯಾದ ಸ್ಥಳ ವಿಚಾರ ನನಗೆ ತಿಳಿಯದ್ದರಿಂದ ನನಗೆ ತಮ್ಮನ್ನು ಕಾಣಲಾಗಲಿಲ್ಲ. ಹೀಗೆ ಕೆಲವು ದಿನಗಳು ನಾನು ಅಲ್ಲಿ ಇಲ್ಲಿ ದಿನಕಳೆದೆ. ಇತ್ತಲಾಗಿ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರು ಮತ್ತು ಕಾನಸ್ಟೇಬಲ್ಲು ಬಂದು ನಮ್ಮ ಮನೆಯೆಲ್ಲಾ ಸರ್ಚು ಮಾಡಿ, ನಾನಿಲ್ಲದಿರುವುದರಿಂದ ಹಾಗೆ ಹೋಗಿದ್ದಾರೆ. ನನ್ನ ಜೊತಗೆ ಬೋವೆರ ಜನಾಂಗದ ಇನ್ನೊಬ್ಬನನ್ನೂ ಮತ್ತು ಅವನನ್ನು ಹೊಂದಿದ ಹೆಂಗಸೊಬ್ಬಳನ್ನು ಹೀಗೆ ಮೂರು ಜನರ ಮೇಲೆ ಫಿರ್ಯಾದು ದಾಖಲಾಮಾಡಿರುತ್ತಾರೆ. ಇತ್ತ ನನ್ನ ಮಗ, ಶ್ರೀಯುತ ಕಾಗೋಡು ತಿಮ್ಮಪ್ಪನವರಿಗೆ ವಿಚಾರವೆಲ್ಲವನ್ನು ತಿಳಿಸಿ ಪತ್ರ ಬರೆದಿರುತ್ತಾನೆ. ಅವರು ವಿಷಯ ತಮಗೆ ತಿಳ್ಸಿದ್ದಾರೊ ಇಲ್ಲವೊ ತಿಳಿಯಲಿಲ್ಲ. ನಮ್ಮವರೇ ಒಬ್ಬ ರಿಟೈರು ದಫೇದಾರರ ಸ್ವಲ್ಪ ಪ್ರಯತ್ನದಿಂದಾಗಿ ನಾನು ಪುನಹ ಮನೆಗೆ ಬಂದು ಊರಲ್ಲೆ ತಿರುಗಾಡುತ್ತಿದ್ದೇನೆ. ಆದರೂ ನನಗೆ ಯಾವ ರೀತಿಯ ತೊಂದ್ರೆ ಕೊಡಬೇಕೊ ಎಲ್ಲಾ ರೀತಿಯಿಂದಲೂ ತೊಂದ್ರೆ ಕೊಡುತ್ತಿದ್ದಾರೆ. ಕೆಲಸ ಸಿಗದಂತೆಯೂ, ಬರುವ ಹಣಕಾಸು ಬಾರದಂತೆಯೂ, ನನ್ನ ಯಾವ ಕೆಲಸ ಕಾರ್ಯಗಳೂ ಸುಸೂತ್ರ ನಡೆಯದಂತೆಯೂ ಹಿಂಸೆ ಕೊಡುತ್ತಿದ್ದಾರೆ. ಈ ಎಲ್ಲಿಂದಲೋ ಬಂದ ಒಬ್ಬ ತಲೆ ಕೆತ್ತುವವನಿಗೆ ರಾಜಕೀಯ ಏಕೆ? ನಾವು ಹೇಳಿದಂತೆ ಕೇಳುವುದಿಲ್ಲ – ಎಂಬ ಒಂದೇ ಒಂದು ಕಾರಣಕ್ಕಾಗಿ ಇವನ ಪಕ್ಷಪಾರ್ಟಿಗಳು, ಇವನ ಪಾರ್ಟಿಯ ಲೀಡರುಗಳು, ಯಾರು ಈತನನ್ನು ಉಳಿಸುತ್ತಾರೊ ನೋಡಬೇಕೆಂಬಛಲ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಡಿಪಾರ್ಟ್‌ಮೆಂಟಿಗೂ ಪ್ರತಿ ದಿನ ಕಾರಿನಲ್ಲಿ ಹೋಗಿ ಬೆದರಿಕೆ ಹಾಕುತ್ತಿದ್ದಾರೆ. ನೀವು ಹೇಗಾದ್ರೂ ಮಾಡಿ ಅವನನ್ನು ಊರು ಬಿಡಿಸದಿದ್ದಲ್ಲಿ ನಾವು ಮೇಲೆ ಎಲ್ಲಿಯವರೇಗಾದರು ಬಿಡುವುದಿಲ್ಲ; ಹಿಂದೆ ಮರ್ಡರು ಮಾಡಿ, ಮತ್ತೊಬ್ಬನನ್ನು ಜೈಲಿಗೆ ಕಳಿಸಿ, ಈಗ ಮತ್ತೊಬ್ಬನನ್ನು ಮಾಡಲು ಹೊರಟಿದ್ದಾನೆ. ಇವನನ್ನು ಹೀಗೆ ಬಿಡುವುದಿಲ್ಲವೆಂಬ ಪರಾಕ್ರಮವನ್ನು ಸಾರುತ್ತ ಪಕ್ಷಪಾರ್ಟಿಯ ಹೆಸರೆತ್ತಿಕೊಂಡು ಅಪಹಾಸ್ಯ ಮಾಡುತ್ತಿದ್ದಾರೆ. ಸದ್ಯ ನಮ್ಮ ರಿಟೈರ್ಡ್ ಧಪೇದಾರರ ಸ್ವಲ್ಪ ಪ್ರಯತ್ನದಿಂದಾಗಿ ಇಲ್ಲಿಯವರೆಗೆ ಏನೊಂದು ಆಗಲಿಲ್ಲ. ಮುಂದೆ ಜಾಮೀನು ವಗೈರೆ ಬೇಕಾದಲ್ಲಿ ನಮ್ಮ ಸಾಹುಕಾರ ನಾಗಪ್ಪನವರು ತಾನು ಹೇಳುತ್ತೇನೆ ಎನ್ನುತ್ತಿದ್ದಾರೆ. ಆದರೂ ನನಗೆ ಧೈರ್ಯವಾಗುವುದಿಲ್ಲ. ಕಾರಣ ಈ ಪ್ರಬಲ ಸಮಾಜದ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಹೇಳದೆಯೂ ಇರಬಹುದು. ನನ್ನ ಜೊತೆ ಸೇರಿಸಿರುವ ಇನ್ನೆರಡೂ ಜನ ಅಪರಾಧಿಗಳು ಒಬ್ಬ ಸೆರೆಗಾರ ಪೈಕಿ ಜನಗಳು. ಅವರು ಆ ದಿನ ಕೆಲಸಕ್ಕೆ ಹೋಗಿದ್ದಾರೆ. ಆದರ ಸೆರೆಗಾರರ ಹತ್ತಿರ ಅವರಿಬ್ಬರದ್ದು ಆ ದಿನ ಉಳಿ ಬರೆಯಬೇಕು ಎಂತ ಬೆದರಿಸಿ ಉಳಿ ಅಂದ್ರೆ ಆ ದಿನ ರಜೆ ಬರೆದಿದ್ದಾರೆ. ಒಟ್ಟಾರೆ ಹೇಗಾದ್ರು ಮಾಡಿ ಎಷ್ಟು ಹಣ ಖರ್ಚಾಗುವುದಾದರು ಸರಿಯೇ ಎಂದ ಈಗ ೫೦೦/- ರೂ. ಮೇಲ್ಪಟ್ಟು ಶೇಖರವಾದ ಹಣವೇ ಇದೆ. ಇನ್ನು ಬೇಕಾದ್ರು ಅವರೇ ವಂತಿಗೆಯಿಂದ ಎಷ್ಟಾದ್ರು ಖರ್ಚು ಮಾಡಲಿಕ್ಕೂ ತಯಾರಾಗಿದ್ದಾರೆ. ವಾದಿಗೆ ತುಂಬಾ ಗಾಯವಾಗಿದೆ ಅಂತ ಡಾಕ್ಟರ ಸರ್ಟಿಫಿಕೇಟು ಮಾಡಿಸಿದ್ದಾರೆ. ಆದರೆ ಅವನು ಒಂದು ದಿನವೂ ಮಲಗದೇ ತನ್ನ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅವನು ಒಂದು ದಿನವೂ ಮಲಗದೇ ತನ್ನ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಸೊಸೈಟಿಯಲ್ಲಿ ೧೦೦ ರೂಪೈ ಕೊಡಬೇಕಾದಲ್ಲಿ ೫೦/- ರೂಪೈ ಗೊಬ್ಬರ ೫೦/- ರೂಪೈ ನಗದು ಕೊಡುತತಾರೆ. ಜನಗಳು ಈ ಬಗ್ಗೆ ಆಕ್ಷೇಪವೆತ್ತಿದಲ್ಲಿ ನಾವು ಹೀಗೆ ನಮ್ಮ ಸರ್ಕಾರ ಹೀಗೆ. ಇನ್ ಸುಧಾರಣೆ ಬೇಕಾದಲ್ಲಿ ನಿಮ್ಮಪ್ಪ ಸ್ವಾಮಿರಾಯ, ತಿಮ್ಮಪ್ಪ, ಕರಿಯ ಭಂಡಾರಿ, ಇವರನ್ನು ಕೇಳಿ ಗೋಪಾಲಗೌಡರಿಗೆ ತಿಳಿಸಿ. ನಿಮ್ಮ ಸೋಷಲಿಸ್ಟ್ ಪಾರ್ಟಿಯನ್ನು ಕೇಳಿ, ಅವರು ಸರಿಮಾಡುತ್ತಾರೆ. ಎಂತ ಹೇಳುತ್ತಾರೆ. ಹಿಂದಿನ ವರ್ಷ ಬಲಗೋಡಿ ಗ್ರಾಮದ ಒಬ್ಬನಲ್ಲಿ ಸೈನು ಪಡೆದುಕೊಂಡು ಮತ್ತೊಬ್ಬನಿಗೆ ಹಣ ಕೊಟ್ಟರು. ಆತ ಯಾಕೆ ಎಂತ ಕೇಳಿದ್ದಕ್ಕೆ ಸೆಕ್ರೆಟರಿಗಳು ಅವನನ್ನು ಹೊಡೆದರು. ಆತ ಬಂದು ನನ್ನಲ್ಲಿ ಹೇಳಿದ. ನಾನೇನು ಮಾಡಲಿ ಬ್ರಾಹ್ಮಣ ಸಮಾಜದವರೆಲ್ಲ ನೋಡಿದ್ದಾರೆ. ನ್ಯಾಯ ನಿರ್ಣಂ ಮಾಡಿಯಾರು ಎಂತ ಹೇಳಿದೆ. ಆದ್ರೆ ಅವರೆಲ್ಲ ಒಂದೇ ಪಾರ್ಟಿಯಾದ್ರಿಂದ ಯಾರೇನು ಮಾಡಲಿಲ್ಲ. ಇರಲಿ ಇಂತಹುದೆ ಎಷ್ಟೋ ಉದಾಹರಣೆ ಕೊಡಬಹುದು. ಆದ್ರೆ ಈ ಪತ್ರ ಸಾಕಾಗಲಿಕ್ಕಿಲ್ಲ, ಹಾಗೂ ಇರಲಿ. ನನ್ನ ಹುಡುಗನದ್ದು ಎಸ್.ಎಸ್.ಎಲ್.ಸಿ. ಒಂದು ಪಾರ್ಟು ಹೋಗಿದೆ. ಅದನ್ನು ಕೂಡ ಈ ಎಲ್ಲ ಬೇಸರದಿಂದಾಗಿ ಪುನಹ ಕಟ್ಟಿಸಲಿಲ್ಲ. ಈ ಎಲ್ಲ ವಿಚಾರಗಳು ತಮಗೆ ತಿಳಿಸಲು ಕಾರಣವೇನೇಂದ್ರೆ ಊರವರೆಲ್ಲ ಊರು ಬಿಡಿಸಬೇಕೆಂಬ ಛಲದಲ್ಲಿದ್ದರೆ ನಾನು ಇದೇ ಊರಿನಲ್ಲಿ ಮಣ್ಣಾಗಬೇಕೆಬ ಛಲದಲ್ಲಿದ್ದೇನೆ. ಇದರಲ್ಲಿ ಯಾರದ್ದು ಗೆಲವುದೋ ತಿಳಿಯದು. ನಾಳೆ ಇವನು ನನಗೊಂದು ವಿಚಾರವನ್ನು ತಿಳಿಸಲೇ ಇಲ್ಲವೆಂತ ಹೇಳಬಾರದು. ಅದಕ್ಕಾಗಿ ಎಲ್ಲಾನು ವಿಸ್ತಾರವಾಗಿ ಬರೆದಿದ್ದೇನೆ. ನೀವೇನೂ ಮಾಡಬೇಕು ಎಂತಲೂ ಅಲ್ಲ. ಇಂತಹ ಸಣ್ಣಪುಟ್ಟ ವ್ಯವಹಾರಕ್ಕೆ ನೀವು ಬರಬೇಕೆಂಬ ಅಪೇಕ್ಷೆಯೂ ಅಲ್ಲ. ಒಟ್ಟಾರೆ ವಿಚಾರಗಳೆಲ್ಲ ನಿಮ್ಮ ಗಮನಕ್ಕೆ ಬರಲೇಬೇಕಾದ್ದರಿಂದ ತಿಳಿಸಿದ್ದೇನೆ. ಸಂಸಾರವೊಂದಿಗನಾದ ನನಗೆ ನಾಲ್ಕು ಮಕ್ಕಳು ಮರಿ ಇರುವುದರಿಂದ ಒಂದು ಊರಿನಲ್ಲಿ ನನ್ನ ಕೆಲಸ ಮಾಡಿಕೊಂಡು ನನ್ನಷ್ಟಕ್ಕೆ ಜೀವನ ನಿರ್ವಹಣೆ ಮಾಡುವುದು ತೀರ ದುಸ್ತರವಾಗಿ ಪರಿಣಮಿಸಿದಲ್ಲಿ ಶಿಕಾರಿಪುರದ ಬಸವಣ್ಣೆಪ್ಪನಂತೆ ಪಕ್ಷಕ್ಕೆ ತಿಲಾಂಜಲಿಯನ್ನು ಕೊಟ್ಟು ಪ್ರತಿಪಕ್ಷಕ್ಕೆ ಸೇರಿಕೊಂಡು ಲಜ್ಜೆಗೇಡಿತನದ ಬಾಳ್ವೆಯನ್ನು ಮಾಡಬೇಕಾದೀತು. ಇದಕ್ಕೆ ತಮ್ಮ ಸಮ್ಮತಿಯನ್ನು ಕೇಳಿಕೊಂಡು ಪತ್ರವನ್ನು ಮುಗಿಸುತ್ತೇನೆ.

ಇತಿ ತಮ್ಮವನಾದ,

ಸಹಿ/-
ವಿ. ಕರಿಯಬಂಡಾರಿ

ಶ್ರೀ ಎಸ್. ಗೋಪಾಲಗೌಡ, ಎಂ.ಎಲ್.ಎ.
ಲೆಜಿಸ್ಲೇಟಿವ್ ಅಸೆಂಬ್ಲಿ ಹಾಲ್
ವಿಧಾನಸೌಧ, ಬೆಂಗಳೂರು-೧

***

೧೨.೭.೧೯೬೭
ಸಂಯುಕ್ತ ಸೋಷಲಿಸ್ಟ್ ಪಾರ್ಟಿ
H.P.G. ಈಶ್ವರ್ C/o T.S. ಕಾಜಾಫೀರ್
ಮುಲ್ಲಾರ್ ಓಣಿ, ಕಾಮಲಾಪುರ ಪೋಸ್ಟ್
ಹೊಸಪೇಟೇ, ತಾ. ಬಳ್ಳಾರಿ ಜಿಲ್ಲೆ

ಮಾನ್ಯ ಶ್ರೀ ಶಾಂತವೇರಿ ಗೋಪಾಲಗೌಡರ ಸನ್ನಿಧಾನಂಗಳಿಗೆ ಕಾಮಲಾಪುರದ ಈಶ್ವರ್ ಮಾಡುವ ಪ್ರೇಮ ನಮಸ್ಕಾರಗಳು.

ಆದಾಗಿ ಉ.ಕು.ಸಾಂ. ಈಗ ನಾವುಗಳು ಕಳುಹಿಸಿ ಕೊಟ್ಟಿರುವ ಮನವಿಯು ಮತ್ತು ಈ ಮನವಿಯಲ್ಲಿ ತಿಳಿಯಪಡಿಸಿರುವಂತ ವಿಷಯಗಳು ಎಲ್ಲಕ್ಕೂ ಮಾನ್ಯ ಮಂತ್ರಿಗಲು ಕೂಡ ಸಹಕರಿಸಿರುತ್ತಾರೆಂದು ತಿಳಿದುಬಂದಿದೆ.

ಇದರ ವಿಷಯಕ್ಕೂ ಕಾರ್ಯಗಳಿಗೂ ತಾಲೂಕು ಬೋರ್ಡು ಉಪಾಧ್ಯಕ್ಷ ಮೇಟಿ ಹನುಮಂತಗೌಡ ಮತ್ತು ಗ್ರಾಮಾಧಿಕಾರಿಗಳು ಗ್ರಾಮದ ಕೆಲವು ಪ್ರಮುಖ ರೈತರುಗಳೆಲ್ಲರು ಮಂತ್ರಿಗಳ ಅನುಮತಿಯನ್ನು ಹೊಂದಿರುತ್ತಾರೆಂದು ಇವರ ಅಪ್ಪಣೆ ಮೇರೆಗೆ ಗ್ರಾಮದಲ್ಲಿ ರಿಜರ್ ಭೂಮಿಗಳನ್ನು ತಮ್ಮಗಳ ಮತ್ತು ತಮಗೆ ಅನುಕೂಲವಾದವರಿಗೆ ಅನುಭವ ಸಾಗೂ ಮಾಡಿಕೊಡುತ್ತಿರುತ್ತಾರೆ.

ತಾವುಗಳೂ ಮತ್ತು ಮಾನ್ಯ ಶಾಸನಸಭಾ ಎಸ್.ಎಸ್.ಪಿ. ಸದಸ್ಯರೆಲ್ಲರೂ ತೀವ್ರ ಕ್ರಮವನ್ನು ಕೈಗೊಳ್ಳುತ್ತೀರೆಂದು ತಮ್ಮಗಳಲ್ಲಿ ನನ್ನ ವಿನಯಪೂರ್ವಕ ವಿನಂತಿ.

ಇತಿ ನನ್ನ ಪ್ರೇಮ ನಮಸ್ಕಾರಗಳು,

ಸಹಿ/-
ಹೆಚ್.ಪಿ.ಜಿ. ಈಶ್ವರ್

***

೧೯.೭.೧೯೬೭

ಶ್ರೀ ಎಸ್. ಗೋಪಾಲಗೌಡರು ಎಂ.ಎಲ್.ಎ. ಯವರ ಸ.ಕ್ಕೆ ಗೇರಗಲ್ಲು ಜಿ. ಕರಿಬಸಪ್ಪನ ನಮಸ್ಕಾರಗಳು.

ನಮ್ಮ ಬಹುದಿನದ ಬೇಡಿಕೆಯಾದ, ತೀರ್ಥಮುತ್ತೂರು ಬಳಿ ತುಂಗಾ ನದಿಗೆ ಮಂಜೂರಾಗಿರತಕ್ಕ ಸೇತುವೆಯನ್ನು ಹೊಳೇಕೊಪ್ಪ ಅಥವಾ ಭಂಡಿಗಡಿ ಬಳಿ ಹಾಕಿದರೆ ಮಧ್ಯ ಸ್ಥಳವಾಗುವುದೆಂಬುದು ತಮಗೆ ಗೊತ್ತೇಯಿದೆ. ಈಗ ಪುನಃ ಕಡಿದಾಳ್ ಬಳಿ ತೋರಳಿ ಹತ್ತಿರ ಸೇತುವೆ ಮಾಡುವ ಬಗ್ಗೆ ಸರ್ವೆ ನಡೆಸುತ್ತಿದ್ದಾರೆ. ಈ ಕಡೆ ಜನರ ಬಾರಿ ವಿರೋಧವಿದ್ದರೂ ಕಡಿದಾಳ್ ಮುಖಂಡರ ರಾಜಕೀಯದಲ್ಲಿ ಪುನಃ ಸರ್ವೆ ಮಾಡಿ ಬಾವುಟ ಹಾರಿಸಿದ್ದಾರೆ. ದೇವಂಗಿ, ಬಸವಾನಿ, ಹಾರೋಗೊಳಿಗೆ ಈ ಮೂರು ಪಂಚಾಯ್ತಿಗಳಿಗೂ ಬಸವಾನಿ ಮಧ್ಯ ಸ್ಥಳವೆಂದು ಮೂರು ವಿ.ಪಿ.ಯವರೂ ಒಪ್ಪಿ ಹೈಸ್ಕೂಲ್‌ನ್ನು ಇಲ್ಲಿ ಹಾಕಿರುತ್ತಾರೆ. ಆದರೆ ಸೇತುವೆಗೆ ಮಾತ್ರ ಅದು ಹೇಗೆ ಕೇಂದ್ರ ಸ್ಥಳವಾಗುತ್ತೋ ತಿಳಿಯುವುದಿಲ್ಲ. ಹೊಳೇಕೊಪ್ಪದಲ್ಲಿ ಹಾಕಿದರೆ ಮಾತ್ರ ಕೇಂದ್ರ ಸ್ಥಳವಾಗುತ್ತೆ. ಆ ಕಡೆ ಹರಿಹರಪುರ ಕಮ್ಮರಡಿ ಸ್ಟೇಟ್ ಫಂಡ್ ರೋಡು ಈ ಎಲ್ಲ ವಿಚಾರಗಳನ್ನು ಪರಿಶೀಲಿಸದೆ ಒಬ್ಬರ ಹಿತದೃಷ್ಟಿಯಿಂದ ಸಾವಿರಾರು ರೂಪಾಯಿ ವ್ಯಯವಾಗುವುದನ್ನು ತಪ್ಪಿಸಬೇಕಾಗಿ ಪ್ರಾರ್ಥನೆ. ಈ ಬಗ್ಗೆ ಈ ಕ್ಷೇತ್ರದ ಪ್ರತಿನಿಧಿಗಳಾದ ತಾವು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಈ ಭಾಗದ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ಪ್ರಾರ್ಥನೆ.

ಇತಿ ತಮ್ಮ ವಿಶ್ವಾಸಿ,

ಸಹಿ/-
ಜಿ. ಕರಿಬಸಪ್ಪ

***

ಎನ್.ಡಿ. ಸುಂದರೇಶ
ಹಾಸ್ಟೆಲ್ ವಿಶ್ವಪ್ರಕಾಶ್
೬೪೭, ನೂರಡಿ ರಸ್ತೆ, ಮೈಸೂರು-೪
೨೩.೭.೧೯೬೭

ಮಾನ್ಯ ಶ್ರೀ ಎಸ್. ಗೋಪಾಲಗೌಡರಿಗೆ,

ನೀವು ಮತ್ತು ನಿಮ್ಮ ಮನೆಯವರು ಎಲ್ಲರೂ ಆರೋಗ್ಯವೆಂದು ನಂಬಿರುವೆನು.

ಈ ಕಾಗದವನ್ನು ಒಂದು ಮುಖ್ಯ ಕಾರಣದಿಂದ ಬರೆಯುತ್ತಿರುವೆನು.

ಸರ್ಕಾರದ ಪ್ರಕಟಣೆ “ಈ ಸಾರಿ ವಿಜಯದಶಮಿ ಮೆರವಣಿಗೆ ಉಂಟು’’ ಎಂಬುದನ್ನು ನೋಡಿಯೂ ನೀವೆಲ್ಲಾ ಈವರೆಗೂ ಸುಮ್ಮನೆ ಕುಳಿತಿರುವುದು ನಮಗೆ ತುಂಬಾ ಆಶ್ಚರ್ಯವಾಗಿದೆ. ಅನೇಕರಿಗೆ ನೀವನುಗಳು ಮೇಲಿನ ಸುದ್ದಿಯನ್ನು ಸ್ವಾಗತಿಸಿರುವಿರೋ ಏನೋ ಎಂಬ ಸಂಶಯವೂ ಬಂದಿದೆ. ಏಕೆ ನೀವು ಅಥವಾ ಪಕ್ಷದವರು ಈ ಬಗ್ಗೆ ಅಸೆಂಬ್ಲಿಯಲ್ಲಿ ಗಲಾಟ್ ಮಾಡಿಲ್ಲ, ಪತ್ರಿಕೆಯಲ್ಲಿ ಯಾವ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ ಎಂಬುದು ತೋರುತ್ತಿಲ್ಲ. ನಿಮ್ಮಲ್ಲಿ ಈ ಹಿಂದೆಯಿದ್ದ ಕೆಚ್ಚು, ರೋಶ ಈಗ ಏಕೆ ತಾಮಸವಾಗಿದೆ ತಿಳಿಯಲಿಲ್ಲ. ಪಕ್ಷದ ಮಿತ್ರರು ಏಕೆ ಕೈಕಟ್ಟಿ ಕುಳಿತಿರುವರು ಎಂಬುದು ತಿಳಿಯದು. ಈ ಊರಿನಲ್ಲಿಯಂತೂ ಪಕ್ಷ ನಿರ್ವೀರ್ಯವಾಗಿದೆ ಎಂಬುದು ತಮಗೆ ತಿಳಿದ ವಿಷಯವೆ.

ಈ ಮೇಲಿನ ಸುದ್ದಿಯ ಬಗ್ಗೆ ನಾನು ವಾಚಕರವಾಣಿಗೆ ಬರೆದಿರುವೆನು. ನಮ್ಮ ಸ್ನೇಹಿತರಾದ, ಕೆ. ರಾಮದಾಸರು ಬರೆದದ್ದು ಪ್ರಕಟವಾಗಿದೆ. ಈ ಬರೆಯುವುದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ.

ಈ ಮೇಲಿನ ಕಾರ್ಯಕ್ರಮ ನಡೆಯದ ಹಾಗೆ ನಾವು ಚಳುವಳಿ ಸಂಘಟನೆ ಮಾಡುತ್ತೇವೆ ಎಂಬಪತ್ರಿಕಾ ಹೇಳಿಕೆಯನ್ನು ನೀವು ಈಗಾಗಲೇ ಕೊಡಬೇಕಾಗಿತ್ತು ಅಲ್ಲವೆ?

ಈ ರಾಜ್ಯಾಂಗ ವಿರೋಧಿ ವ್ಯಕ್ತಿ ಪೂಜೆಯಂತಹ ಕಾರ್ಯಕ್ರಮದ ವಿರುದ್ಧ ಪಾರ‍್ಲಿಮೆಂಟಿನಲ್ಲಿ ಡಾ. ಲೋಹಿಯ, ಲಿಮಯೆ ಮೊದಲಾದವರು ಪ್ರಸ್ತಾಪಿಸುವಂತೆ ಏಕೆ ನೀವು ಬರೆಯಬಾರದು. ನಮ್ಮ ಜೆ.ಹೆಚ್. ಪಟೇಲರಿಗೆ ನೀವು ದಯಮಾಡಿ ಬರೆಯಿಸಿ. ಸುಮ್ಮನೆ ಮೆರವಣಿಗೆಯ ದಿನ ಕಪ್ಪುಬಾವುಟ ತೋರಿಸಿ ಬಂಧಿಸಲ್ಪಡುವುದರಿಂದ ಏನೂ ಉಪಯೋಗವಿಲ್ಲ. ನಮ್ಮನ್ನು ಬಂಧಿಸಿ ಅವರು ತಮ್ಮ ಕೆಲಸ ತಾವು ಮಾಡಿಕೊಳ್ಳುತ್ತಾರೆ. ಈ ವಿಷಯವನ್ನು ನಮ್ಮ ಬೆಂಗಳೂರು ಅಸೆಂಬ್ಲಿ ಎಸ್.ಎಸ್.ಪಿ. ಪಕ್ಷದ ಪ್ರತಿನಿಧಿಗಳು ನಮಗೆ ಹೇಳಲಾರದ ನಿರಾಶೆಯನ್ನು, ಬೇಜಾರನ್ನೂ ತಂದಿದ್ದಾರೆ ಎಂದು ತಿಳಿಸಲು ವಿಷಾದವಾಗುತ್ತಿದೆ. ನೀವು ದಯವಿಟ್ಟು ಜರೂರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಿರಾಗಿ ನಂಬಿ ಬರೆಯುತ್ತಿರುವೆನು. ಆ ಕೊಣಂದೂರು ಲಿಂಗಪ್ಪ ಏನು ಮಾಡುತ್ತಿರುವರು? ಅವರಿಗೂ ತಿಳಿಸಿರಿ. ಮತ್ತೇನೂಯಿಲ್ಲ.

ಇಂತಿ ನಿಮ್ಮ

ಸಹಿ/-
ಎನ್.ಡಿ. ಸುಂದರೇಶ

ಶ್ರೀ ಎಸ್. ಗೋಪಾಲಗೌಡ
ವಿಧಾನಸಭಾ ಸದಸ್ಯರು,
ಮೈಸೂರು ವಿಧಾನಸಭಾ, ಶಾಸಕರ ಭವನ, ಬೆಂಗಳೂರು-೧

***

J.H. Patel
Member of Parliament
(Lok Sabha)

C1/35, Pandara Road,
New Delhi – 11
27th July 1967

Dear Comrade,

The National Committee met here on 22nd 23rd of this month and passed many resolutions regarding matters of National and State problems. Most of the time was taken by the representatives state ministries where we are partners. Without going into and its details of all those discussions, I shall confine to our state and its problems. I placed the requests of our Mysore comrades and two other issues before the committee. So far as holding of the conference in Mysore State, they have not yet decided either way, because of financial condition laid be the state executive. Kerala comrades have come forward to give a helping hand (financially) in case we hold the conference in Mysore. So I cannot write definitely about the centre’s view on this matter.

It was made very clear that postponement of enrolment date is impossible. Only that membership made within the time will be taken into account.

Regarding Basavannappa, we have been given full permission to proceed against him in any manner we think fit. A letter of authority will be sent soon.

Please contact the Mysore friends and find out if they can take this responsibility without depending upon centre for money. Kerala may give some 5000/- Rs. as they were telling.

Let me know the position of Mysore friends as early as possible so that I can move the Central Office to take a final decision about it.

Hope you are doing well. My regards to all other comrades.

Yours,

Sd/-
J.H. Patel

The Chairman,
State Unit of S.S.P. Bangalore -1

***

ಕೆ. ಬೋರಪ್ಪ ಬಿನ್ ಕುಪ್ಪನಾಯ್ಕ
ಮೈಸೂರು ಮೆಡಿಕಲ್ ಕಾಲೇಜು,
ಮೈಸೂರು

ಮೈಸೂರಿನಿಂದ
೧.೮.೧೯೬೭

ಪೂಜ್ಯ ಗೋಪಾಲಗೌಡರಿಗೆ ನಮಸ್ಕಾರಗಳು,

ತಮ್ಮ ಆಶೀರ್ವಾದ ಮತ್ತು ಪ್ರಯತ್ನದಿಂದ ನನಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ತಮ್ಮ ಸಹಾಯವನ್ನು ಎಂದೆಂದಿಗೂ ಮರೆಯಲಾರೆ. ಇದಕ್ಕೆ ನಾನು ನಿಮಗೆ ಚಿರಋಣಿ.

ಇಂತಿ ಬೇಡುವ ಆಶೀರ್ವಾದಗಳು,

ಸಹಿ/-
ಕೆ. ಬೋರಪ್ಪ

***

ಸಂಯುಕ್ತ ಸಮಾಜವಾದಿ ಪಕ್ಷ
ಕಾಮಲಾಪುರ
೧.೮.೧೯೬೭

ಮಾನ್ಯ ಸಂಯುಕ್ತ ಸಮಾಜವಾದಿ ಪಕ್ಷದ ರಾಜ್ಯ ಶಾಖೆ ಅಧ್ಯಕ್ಷರಾದ ಶ್ರೀ ಗೋಪಾಲಗೌಡ ಶಾಂತವೇರಿ ಇವರುಗಳಿಗೆ ಬಳ್ಳಾರಿ ಜಿಲ್ಲೆ ಕಾರ್ಯಕರ್ತ ಈಶ್ವರ್ ಬರೆದುಕೊಂಡ ಪ್ರೇಮ ಪೂರಿತ ಮನವಿ.

ಇಲ್ಲಿ ಸಾರ್ವಜನಿಕರ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸೇತರ ಯಾವ ಪಕ್ಷದಲ್ಲಿಯೂ ಇಲ್ಲದವರುಗಳಿಂದ ಬಹಳ ಅಡಚನೆ, ಆತಂಕ, ವಿರೋಧಗಳು, ತಾಲ್ಲೂಕು ಮತ್ತು ಜಿಲ್ಲೆಯಾದ್ಯಂತವಾಗಿರುತ್ತದೆ.

ಈಗ ಈ ನನ್ನ ಬೈಲುವದ್ದಗೇರಿ, ಕಾಮಲಾಪುರ ಗ್ರಾಮಗಳ ಹರಿಜನರು ಮತ್ತು ಗ್ರಾಮಸ್ಥರುಗಳ ಡಿ.ಸಿ.ರಿಜರ್ ಶಿವಾಯಿ ಜಮಾ ಭೂಮಿಗೆ ಮನವಿಯನ್ನು ಕಳುಹಿಸಿ ಕೊಟ್ಟಿರುತ್ತೇನೆ.

ದಿನಾಂಕ ೨೧.೭.೧೯೬೭ರಲ್ಲಿ ಬೆಂಗಳೂರಿಗೆ ಇಬ್ಬರು ಇದೇ ರೀತಿಯ ಮನವಿಗಳನ್ನು ಕಾಮಲಾಪುರದ ಹರಿಜನರ ಪರವಾಗಿ ಬಂದು ಶಾಸನ ಸಭಾ ಸದಸ್ಯರಾದ ದುಗ್ಗಪ್ಪ ಮತ್ತು ನಾಗನಗೌಡರನ್ನು ಕಂಡು ಬಂದಿರುತ್ತಾರೆ.

ಇವರ ವಿವರಗಳು ಬಹಳ ರೀತಿಯದಾಗಿರುತ್ತದೆ. ಈ ವೇಳೆಯಲ್ಲಿ ಈ ವಿಷಯಗಳು ನಮಗೆ ಬೇಡ.

ತಾವುಗಳು ಈಗ ನಾನು ಕಳುಹಿಸಿ ಕೊಟ್ಟಿರುವ ಮನವಿಯನ್ನು ಇದರ ಬಗ್ಗೆ ಮಂತ್ರಿಗಳಿಂದ ಅವರ ಅಭಿಪ್ರಾಯದ ವಿವರವನ್ನು ನಮ್ಮಗಳಿಗೆ ಕೂಡಲೇ ತಿಳಿಸಬೇಕೆಂದು ನನ್ನ ವಿನಂತಿ.

ಇಂತಿ ತಮ್ಮ ಮೆಚ್ಚಿನ ಗೆಳೆಯ ಕಾರ್ಯಕರ್ತನ ಪ್ರೇಮ ನಮಸ್ಕಾರಗಳು. ವಿಷಯಕ್ಕೆ ಕೂಡಲೇ ತಿಳಿಸಿರಿ.

ಇಂತಿ ತಮ್ಮ ವಿಶ್ವಾಸಿ

ಸಹಿ/-
ಹೆಚ್.ಪಿ.ಜಿ. ಈಶ್ವರ್

To,
The Chairman,
State Unit of S.S.P. Bangalore -1

***

 

  1. Pattabhi Rama Reddy 7
    Rutlandgate, 1st Street

Madras 6
15.8.1967

My dear Gopal,

Ever since you told me about your friend Anantamoorthy’s novel “Samskara” I have been excited about the possibility of making it into a film. It may not be a commercial success, but I intend to make it into a good picture, without any compromise. I have asked Girish Karnad, when you met at my place, to write the screen play and he is all excited about it.

I have written to Anantamoorthy for permission to film his story. I and Sneha don’t know Anantamoorthy. Hence I request you to kindly phone or write to Anantamoorthy at Mysore, to put in a word about me and Sneha. This is very important and hence please do it immediately.

Mr. Y.N. Krishnamoorthy of Prajavani was here for a couple of days and he was very enthusiastic about our doing the film. C.G.K. told me that he met you in Bangalore recently. He remembers to have met Anantamoorthy during Kagodu Satyagrha. I have given him the book ‘Samskara’ to read.

I hope your health is O.K. now. Our best wishes to you and your wife and to the little one.

Your’s

Sd/-
Pattabhi

Sri S. Gopala Gowda, MLA
227, Legislator’s Home, Behind Vidhadana Soudha
Bangalore -1

***

ಶ್ರೀ ಕೃಷ್ಣ ಆಲನಹಳ್ಳಿ
೧೦೩೨, ಗೀತಾ ರಸ್ತೆ,
ಚಾಮರಾಜಪುರ, ಮೈಸೂರು

೨೩.೮.೬೭

ಪೂಜ್ಯ ಗೋಪಾಲಗೌಡರಿಗೆ,

ನನ್ನ ಆರೋಗ್ಯದ ನಿಮಿತ್ತ ನನಗೆ ಸೋಗಾಲ ನಾಗಭೂಷಣ ಸ್ಮಾರಕದ ಕವಿ ಸಮ್ಮೇಳನವನ್ನು ಮತ್ತು ಅದಕ್ಕಾಗಿ ನಿಧಿಸಂಗ್ರಹ ಮಾಡುವುದನ್ನು ೨೭ನೇ ತಾರೀಖು ಮಾಡಲಾಗುತ್ತಿಲ್ಲ. ಮಾಡಿದರೂ ನಿರೀಕ್ಷಿಸಿದಷ್ಟು ಹಣ ಸಿಕ್ಕಲಾರದು. ಪ್ರೆಸ್ಸಿನವರು ಬೇಗ ಅಚ್ಚು ಮಾಡಿ ಕೊಡಲು (ಟಿಕೆಟ್ ಹಾಗೂ ಪ್ರಕಟಣೆಯ ಚೀಟಿಗಳನ್ನು) ನಾಲ್ಕು ದಿನಬೇಕು ಅಂದರು. ಇದರಿಂದಾಗಿ ನಾನು ಒಪ್ಪಿಗೆಯಿಲ್ಲದೆ, ಅನಂತಮೂರ್ತಿಯವರಿಗೆ ಹೇಳಿ ಕಾರ್ಯಕ್ರಮವನ್ನು ಸೆಪ್ಟೆಂಬರ್ ೩ನೇ ತಾರೀಖಿಗೆ ಮುಂದೂಡಿದೆ. ಆ ತಾರೀಖಿಗೆ ಟಿಕೆಟ್ ಹಾಗೂ ಪ್ರಕಟಣ ಪತ್ರಿಕೆಯನ್ನು ಮಾಡಿಸಿಯಾಯಿತು. ಹೇಗಾದರೂ ಅವತ್ತು ನೀವು ಬಿಡುವು ಮಾಡಿಕೊಂಡು ಬನ್ನಿ.

ನಿಮ್ಮ ಒಪ್ಪಿಗೆಯಿಲ್ಲದೆ ಹೀಗೆ ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ.

ಇತಿ,

ಸಹಿ/-
ಶ್ರೀಕೃಷ್ಣ ಆಲನಹಳ್ಳಿ

P.S.: ನಾಳೆ ಅಚ್ಚಾದ ಕರಪತ್ರ ಕಳಿಸುತ್ತೇನೆ. ಕಾಗದ ಬರೆಯಿರಿ

ಶ್ರೀ ಗೋಪಾಲಗೌಡ ಶಾಂತವೇರಿ, ಎಂ.ಎಲ್.ಎ.
ಶಾಸಕರ ಭವನ, ಬೆಂಗಳೂರು-೧
Received and replied on 25th August, 1967

***

೨.೧೦.೭೧
ಮಧ್ಯಾಹ್ನ ೨ ಗಂಟೆ

ಪ್ರಿಯ ಸೋನು,

ನಿನ್ನೆ ಸಂಜೆ ೫ ಗಂ. ತನಕ ಮಾನಸಿಕವಾಗಿ ಸಾಗರಕ್ಕೆ ಹೋಗುವ ತವಕದಲ್ಲಿದ್ದೆ. ೫ ರಿಂದ ೯ ರವರೆಗೂ ಮನಸ್ಸಿಗೆ ಕಿರಿಕಿರಿಯಾಯಿತು. ಹೊರಟಿದ್ದಾಯಿತು. ರೈಲಿಗೆ ಕಾಲಕ್ಕೆ ಸರಿಯಾಗಿ ಹೋಗಿ ಕುಳಿತೆ. ಗೆಳೆಯರಾದ ಕೆ.ಜಿ. ಮಹೇಶ್ವರಪ್ಪನವರು, ರಮೇಶ್ ಬಂದರು. ೧೧ ೧/೨ರವರೆಗೆ ಮಾತನಾಡುತ್ತಾ ಕಾಲ ಕಳೆದ ಪರಿಣಾಮವಾಗಿ ಕೂಡಲೆ ನಿದ್ರೆ ಬರಲಿಲ್ಲ. ಹಾಸಲು ಹೊದೆಯಲು ಸಾಕಷ್ಟು ಬಟ್ಟೆ ತರದೇ ಹೋದ ಕಾರಣ ಸ್ವಲ್ಪ ತ್ರಾಸಾಯಿತು. ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳದೆ ಹೋದುದು ತಪ್ಪಾಯಿತು. ಬಾಯಾರಿಕೆಗೆ ಕುಡಿಯಲು ಏನೂಯಿಲ್ಲದೆ ಪರಿತಪಿಸಬೇಕಾಯಿತು. ಅಂತು ತಿಪಟೂರು ಬಿಟ್ಟನಂತರ ನಿದ್ರೆ ಬಂದಿತು. ಭದ್ರಾವತಿಯಲ್ಲಿ ಎಚ್ಚರವಾಯಿತು. ಅದೇ ರೈಲಿನಲ್ಲಿ ಹತ್ತೂವರೆಗೆ ಸಾಗರ ಸೇರಿದೆವು. ನಿಲ್ದಾಣಕ್ಕೆ ಗೆಲೆಯರಾದ ತಿಮ್ಮಪ್ಪ, ಚಂದ್ರಶೇಖರ್ ಮತ್ತು ಇತರ ಸ್ನೇಹಿತರು ಬಂದಿದ್ದರು. ಅಲ್ಲಿಂದ ಪ್ರವಾಸಿ ಮಂದಿರಕ್ಕೆ ಹೋಗಿ ಸ್ನಾನಾದಿಗಳನ್ನು ಪೂರೈಯಿಸಿದೆ. ಊಟ ಬಂದು ಎದುರಿಗಿದೆ. ಮಧ್ಯಾಹ್ನ ೧ ಗಂ. ಮೆರವಣಿಗೆ. ನಂತರ ಸಭೆ. ಶಿವಮೊಗ್ಗಾ ಗೆಳೆಯರು ಇನ್ನೂ ಬಂದಿಲ್ಲ. ಬರಬಹುದು. ನಾಳೆ ತೀರ್ಥಹಳ್ಳಿಗೆ ಹೋಗಿ ವಿವರವಾಗಿ ಬರೆಯುತ್ತೇನೆ.

ಇಂದು ನಿನಗೆ ರಜಾ. ಚಿ. ಇಳಾಗೀತಾ, ರಾಮಮನೋಹರ ತಂಟೆ ಮಾಡದೆ ಚೆನ್ನಾಗಿದ್ದಾರೆಂದು ಭಾವಿಸುತ್ತೇನೆ. ಅವರಿಗೆ ನನ್ನ ಪ್ರೀತಿಯ ಆಶೀರ್ವಾದಗಳು. ಚೆನ್ನಾಗಿ ನೋಡಿಕೋ ಹೊರಡುವ ಅವಸರದಲ್ಲಿ ಕಾರಿನ ವಿಷಯ ಮಾತನಾಡಲು ಆಗಲಿಲ್ಲ. ಗೆಳೆಯ ಸೇಟ್‌ರಿಗೆ ಪತ್ರ ಟಪ್ಪಾಲಿಗೆ ಹಾಕಿರಬಹುದು. ಸಭೆಗೆ ಹೋಗಬೇಕು. ಅವಸರ. ವಿವರ ಬರೆಯಲಾರೆ. ಮನೆ ಕಡೆ ನೋಡಿಕೋ ಚಿ. ಕೃಷ್ಣಮೂರ್ತಿ, ಅಜ್ಜಿ ಇವರು ಆರೋಗ್ಯವೆಂದು ನಂಬುತ್ತೇನೆ. ನೀನು ಮಕ್ಕಳನ್ನು ನಿನ್ನ ಆರೋಗ್ಯವನ್ನು ನೋಡಿಕೊಂಡು ಸಾಕಷ್ಟು ಆರಾಯು ತೆಗೆದುಕೋ.

ಆಶೀರ್ವಾದಗಳು.

ಎಂದು ನಿನ್ನ ಪ್ರೀತಿಯ,
ಸಹಿ/-
ಗೋಪಾಲಗೌಡ ಶಾಂತವೇರಿ.

Smt. Sonu Gopala Gowda
337, Sadashiva Nagar
Bangalore -6

***

೧೯೫೨ರ ಶಾಸನಸಭೆ ಚುನಾವಣೆ. ಎಸ್. ನಿಜಲಿಂಗಪ್ಪನವರ ಭಾಷಣ. ಹೊಸನಗರದ ಬಳಿಯ ‘ಸುತ್ತಾ’ ಗ್ರಾಮದಲ್ಲಿ ಗೌಡರು ನರಸಿಂಹನ ಕಾರಿನಲ್ಲಿ ಪ್ರಚಾರಕ್ಕೆ ಬಂದರು. ಸ್ವಲ್ಪ ದೂರದಲ್ಲಿ ಕಾರು ಕೆಟ್ಟು ನಿಂತಿತು. ನಿಜಲಿಂಗಪ್ಪನವರು ಗೌಡರ ಕಾರಿನ ದುರವಸ್ಥೆ ಬಗೆಗೆ ಬಹಿರಂಗವಾಗಿ ಗೇಲಿ ಮಾಡಿದರು. ನಂತರ ತಮ್ಮ ಸಭೆ ನಡೆಸಿದ ಗೌಡರು “ನೀವು ಕಾಂಗ್ರೆಸ್ಸಿನವರು; ನನ್ನ ಕೆಟ್ಟುಹೋದ ಕಾರಿನಂಥವರು. ಒಳ್ಳೆಯದನ್ನು ಮಾಡುತ್ತೇನೆಂದು ಹೇಳಿ ಜನರನ್ನು ಆ ಕಾರಿನ ಹಾಗೆ ನಡುರಸ್ತೆಯಲ್ಲಿ ಕೈ ಬಿಡುತ್ತೀರಿ’’ ಎಂದು ಛೇಡಿಸಿದರು.

ಹೇಮೋಜಿರಾವ್ ತೇಲ್ಕರ್
ಜವಳಿ ವ್ಯಾಪಾರಿ, ಹೊಸನಗರ

***

ಸಾಗರದ ತಹಶೀಲ್ದಾರರ ಹತ್ತಿರ ಒಮ್ಮೆ ಗೌಡರು, ನಾನು ಗೇಣಿದಾರರ ಕೆಲವು ಅಹವಾಲುಗಳನ್ನು ಕುರಿತು ಹೇಳಲು ಹೋಗಿದ್ದೆವು. ಗೌಡರ ಪರಿಚಯ ಆತನಿಗಿರಲಿಲ್ಲ. ಇವರೂ ಕೂಡ ತಮ್ಮನ್ನು ಪರಿಚಯಿಸಿಕೊಂಡಿರಲಿಲ್ಲ. ತಹಶೀಲ್ದಾರ್ ಉಡಾಫೆ ಉತ್ತರ ನೀಡಿ ‘ಹೋಗ್ರಿ ಸಾಕು’ ಎಂದು ಹೇಳಿದ. “ಹೋಗ್ತೀನಿ, ಆದ್ರೆ ನೆನಪಿಡಿ, ನೀವೇ ನನ್ನನ್ನು ಹುಡುಕಿಕೊಂಡು ಬರ‍್ತೀರಿ’’ ಅಂದು ಹೊರನಡೆದರು. ಇಬ್ಬರೂ ನಡೆದುಕೊಂಡು ಹೊರಟೆವು. ಸ್ವಲ್ಪ ದೂರ ಹೋಗುವುದರೊಳಗಾಗಿ ತಹಶೀಲ್ದಾರರ ಜೀಪು ನಮ್ಮ ಬೆನ್ನಟ್ಟಿ ಬಂತು. “ನೀವೇ ಗೋಪಾಲಗೌಡರೆಂದು ಹೇಳಿದ್ದರೆ ಈ ಪ್ರಮಾದವಾಗುತ್ತಿರಲಿಲ್ಲ. ಕ್ಷಮಿಸಿ ಸಾರ್. ಬನ್ನಿ ಕಚೇರಿಗೆ ಹೋಗೋಣ’’ ಎಂದು ಅಂಗಲಾಚಿದರು. ಗೌಡರು ತಹಶೀಲ್ದಾರರ ಕಛೇರಿಗೆ ನಡೆದೇ ಹೋಗಿ, ಗೇಣಿದಾರರ ಸಂಕಷ್ಟಗಳನ್ನು ಹೇಳಿ, ಪರಿಹಾರ ತೋರಿಸಲು ಹೇಳಿ ಬಂದರು.

ಹೇಮೋಜಿರಾವ್ ತೇಲ್ಕರ್,
ಜವಳಿ ವ್ಯಾಪಾರಿ, ಹೊಸನಗರ

***

ಹಳ್ಳಿಯವರು ತಮ್ಮ ಗೋಳು, ಕುಂದು ಕೊರತೆಗಳನ್ನು ಹೇಳಿದಾಗ ಗೌಡರು ಸಮಾಧಾನದಿಂದ ಆಲಿಸುತ್ತಿದ್ದರು. ನಂತರ ಅವರು ಅವರ ಆಡು ಮಾತಿನಲ್ಲೇ ಸಮಾಧಾನದ ಉತ್ತರ ನೀಡುತ್ತಿದ್ದರು. ‘ನೀವು ಹೇಳಿದ ಎಲ್ಲಾ ಕೆಲಸ ಮಾಡೋದಾದ್ರೆ ಸರ್ಕಾರದ ಹತ್ತಿರ ಇರೋ ದುಡ್ಡು ಪೂರ್ತಿ ಇಲ್ಲಿಗೇ ಬೇಕು. ಉಳಿದೋರ ಗತಿ ಏನು?’ ಎಂದು ವಿನೋದವಾಗಿ ನುಡಿದು ಜನರನ್ನು ಸಮಾಧಾನಿಸುತ್ತಿದ್ದರು.

ಧರ್ಮರಾವ್,
ವ್ಯವಸಾಯಗಾರರು ಮತ್ತು ವ್ಯಾಪಾರಿಗಳು, ನಗರ

***

ಒಮ್ಮೆ ನಗರದ ಊರ ಹೊರಗಿರುವ ಕೋಟೆಯ ಪಕ್ಕದ ಜೋಪಡಿಗಳಲ್ಲಿ ವಾಸಿಸುತ್ತಿದ್ದ ‘ಕೊರಗ’ ಜನಾಂಗದವರ ಬಿಡಾರದೆದುರು, ಊರವರನ್ನು ಕರೆದುಕೊಂಡು ಹೋಗಿ ‘ಈ ಕೊರಗರು ನಾಯಿಗಳ ಜೊತೆ ಅನ್ನ ತಿಂತಾರಲ್ಲ. ಇವರನ್ನು ಏಕೆ ನೀವಾಗಲೀ, ಸರ್ಕಾರವಾಗಲೀ ಸರೀಕರಂತೆ ನಡೆಸಿಕೊಳ್ಳುತ್ತಿಲ್ಲ’ ಎಂದು ಕೋಪಮಿಶ್ರಿತ ನೋವಿನಿಂದ ನುಡಿದರು.

ಅಂಬಳಿಕೆ ಗುಂಡಪ್ಪಗೌಡ
ವ್ಯವಸಾಯಗಾರ, ಯಡೂರು

***

ಜೀವ-ಬಾಯಿ ಕೊಟ್ಟವರು

ನಾವು ಐದು ಜನರನ್ನು ಕೇವಲ ಗೌಡರಿಗೆ ಹೆದರಿ ಪ್ರಾಣವನ್ನು ಉಳಿಸಿದ್ದರು. ಇಲ್ಲದಿದ್ದಲ್ಲಿ ಕಾಂಗ್ರೆಸ್ಸಿಗರು ಎಂದೋ ನಮ್ಮನ್ನು ಮುಗಿಸಿರುತ್ತಿದ್ದರು. ಗೌಡರ ನೆರಳಿನಲ್ಲಿ ಬದುಕುತ್ತಿದ್ದ ನಮಗೆ ಬಾಯಿ ಕೊಟ್ಟವರೇ ಗೌಡರು. ಅಲ್ಲಿಯವರೆಗೆ ನಾವು ಬಾಯಿದ್ದೂ ಮೂಗರಾಗಿದ್ದೆವು. ಸೋಷಲಿಸ್ಟರು ಪಾಂಡವರು, ಕಾಂಗ್ರೆಸ್ಸಿಗರು ಕೌರವರು ಎಂದು ಹೋಲಿಕೆ ಕೊಡುತ್ತಿದ್ದರು. ಜನಸಾಮಾನ್ಯರಾದ ನಾವು ಗೌಡರ ಒಡನಾಟದಲ್ಲಿ ಮನುಷ್ಯರಾದೆವು.

ಕುಂಜಿ ಕೃಷ್ಣ-ಕೂಲಿ ಕಾರ್ಮಿಕ, ಮಂಜಪ್ಪ-ದರ್ಜಿ,
ಮುದ್ದುಭಂಡಾರಿ- ಕ್ಷೌರಿಕ, ಸುಕುಮಾರ್ – ವ್ಯಾಪಾರಿ,
ಸೋಮಶೇಖರ್ – ಖಾಸಗಿ ಬಸ್ ಏಜಂಟ್, ರಿಪ್ಪನ್ ಪೇಟೆ

***

ಬಿ. ಸ್ವಾಮಿರಾವ್ ಗೌಡರ ವಿರುದ್ಧ ೧೯೬೨ರಲ್ಲಿ ಸ್ಪರ್ಧಿಸಿದಾಗಿ ‘ಏನ್ಸಾಮಿ ಹೀಗಾಯಿತಲ್ಲ’ ಎಂದರೆ, ನನ್ನೆದುರು ಸ್ಪರ್ಧಿಸುವ ನನ್ನ ಹುಡುಗನ ಧೈರ್ಯ ಮೆಚ್ಚುತ್ತೇನೆ’’ ಎಂದು ಅಭಿಮಾನದಿಂದಹೇಳಿದ್ದರು.

ಮುದ್ದು ಭಂಡಾರಿ, ಕ್ಷೌರಿಕ
ರಿಪ್ಪನ್ ಪೇಟೆ

***

ಪೋಸ್ಟ್ ಕಾರ್ಡಿನಲ್ಲಿ ಜನರ ಕುಂದುಕೊರತೆ ಬಗೆಗೆ ಗೌಡರಿಗೆ ಪತ್ರ ಬರೆದಿದ್ದೆ. ಶಾಸನಸಬೆಯಲ್ಲಿ ಕಾರ್ಡನ್ನು ತೋರಿಸಿ ಓದಿ ಹೇಳಿ ಸರ್ಕಾರದಿಂದ ಸಮಜಾಯಿಸಿ ಕೇಳಿದರು. ಮಾರನೇ ದಿನ ಪತ್ರಿಕೆಯಲ್ಲಿ ಸುದ್ದಿ ಬಂದದ್ದನ್ನು ಓದಿ ನಲಿದಾಡಿದೆ. ಇಂದೂ ಗೌಡರ ಆಲದ ಮರದ ಕೆಳಗೆ ನಿಂತಿದ್ದೇನೆ.

ಬಲೆಗೋಡು ರಾಮಪ್ಪ
ಉಳ್ತಿಗ, ನಗರ ಹೋಬಳಿ

***

ನನ್ನ ೧೫ನೆಯ ವಯಸ್ಸಿನಿಂದ ೨೨ನೆಯ ವಯಸ್ಸಿನವರೆಗೆ ಗೌಡರೊಂದಿಗೆ ಹೆಚ್ಚು ಇರುತ್ತಿದ್ದೆ. ಚುನಾವಣೆಯ ಸಮಯದಲ್ಲಿ ಮಾತ್ರ ಹೆಚ್ಚು ನಮ್ಮೂರಿನ ಮಾರ್ಗದಲ್ಲಿ ಬಂದಾಗ ನನ್ನನ್ನು ಮಾತನಾಡಿಸದೇ ಹೋಗುತ್ತಿರಲಿಲ್ಲ. ಡಾ. ಲೋಹಿಯಾರೊಂದಿಗೆ ತೀರ್ಥಹಳ್ಳಿಯಿಂದ ನಮ್ಮೂರ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗುವಾಗ, ರಾತ್ರಿ ೧೨ರ ಸಮಯದಲ್ಲಿ ಕಾರನ್ನು ನಮ್ಮ ಮನೆ ಬಾಗಿಲಲ್ಲಿ ನಿಲ್ಲಿಸಿ ನನ್ನ ಕರೆದಾಗ, ನನ್ನ ಅಪೇಕ್ಷೆ ಮೇರೆಗೆ ನನ್ನ ಗುಡಿಸಲಿಗೆ ಲೋಹಿಯಾರವರನ್ನು ಕರೆದುಕೊಂಡು ಬಂದು ಚಹಾ ಸ್ವೀಕರಿಸಿ ನಂತರ ನಾನು ಅವರೊಂದಿಗೆ ಶಿವಮೊಗ್ಗಕ್ಕೆ ಹೋಗಿ ಮಾರನೇ ದಿನ ಶಿವಮೊಗ್ಗ ಗಾಂಧೀ ಪಾರ್ಕಿನ ವಿಶೇಷ ಸಭೆಯಲ್ಲಿ ನಾನು ಪ್ರಾರ್ಥನೆ ಆಡಿದ ಆ ಸಂದರ್ಭ ನನ್ನ ಜೀವನದ ಅತ್ಯಂತ ಮೌಲ್ಯದ ಘಟನೆಯೆಂದು ಭಾವಿಸಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಬೇಕಾದ ರಸ್ತೆ ಬ್ಯಾನರ್‌ಗಳನ್ನು ಸಾಮಾನ್ಯ ನಾನೇ ಬರೆಯುತ್ತಿದ್ದೆ. ಚುನಾವಣಾ ಭಾಷಣ ಪ್ರಾರಂಭಕ್ಕೆ ನನ್ನ ಲಾವಣಿ, ಹಾಡು ಇದ್ದೇ ಇರುತ್ತಿತ್ತು. ಅಷ್ಟು ಎತ್ತರದ ಧೀಮಂತ ಗೌಡರು ನನ್ನಂಥ ಚಿಕ್ಕ ಬಾಲಕನಲ್ಲಿ ಅಷ್ಟು ತೀರಾ ಸಲಿಗೆಯಿಂದ ಇರುತ್ತಿದ್ದ ಆ ಸಂದರ್ಭಗಳು ಈಗ ಬಹಳ ಆಶ್ಚರ್ಯವಾಗಿ ಕಾಣಿಸುತ್ತಿದೆ. ಅವರ ಯಾವ ಕಾಗದ ಪತ್ರಗಳನ್ನು ನಾನು ದಾಖಲಿಸಿಕೊಳ್ಳಲಿಲ್ಲ. ಅವುಗಳನ್ನು ಕಾಪಾಡಿಕೊಳ್ಳಬೇಕೆಂಬ ತಿಳುವಳಿಕೆಯೇ ನನಗಾಗ ಇರಲಿಲ್ಲ. ಗೌಡರೊಂದಿಗೆ ಕಳೆದ ಆ ದಿನಗಳು ನನ್ನ ಪಾಲಿನ ಸುವರ್ಣಮಯ ಕಾಲ.

ಗರ್ತಿಕೆರೆ, ಕಮ್ಮಚ್ಚಿ
ಹೊ.ನಾ. ರಾಘವೇಂದ್ರ
ಕಲಾವಿದ

***