ಹದಿಮೂರು ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯವು ಹೊರತಂದ “ಶಾಂತವೇರಿ ಗೋಪಾಲಗೌಡರ ನೆನಪಿನ ಸಂಪುಟ’’ ಗ್ರಂಥವು ಮತ್ತೆ ಕನ್ನಡ ಓದುಗರಿಗೆ ಈ ಸಂಬಂಧದ ಇನ್ನಷ್ಟು ಉಪಯುಕ್ತ ಮಾಹಿತಿಗಳ ಸಮೇತ ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಸಂಪುಟದ ಮೊದಲ ಮುದ್ರಣದ ಪ್ರತಿಗಳು ಮುಗಿದ ನಂತರ ನಾಡಿನ ನಾನಾ ಭಾಗಗಳಲ್ಲಿ ಭೇಟಿಯಾಗುತ್ತಿದ್ದ ಸಂವೇದನಾಶೀಲರಾದ ಗೆಳೆಯರು ಈ ಬಗ್ಗೆ ಪ್ರೀತಿಯಿಂದ ವಿಚಾರಿಸುತ್ತಾ ಮರುಮುದ್ರಣದ ಅವಶ್ಯಕತೆಯನ್ನು ಪದೇ ಪದೇ ನೆನಪಿಸುತ್ತಿದ್ದರು. ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿದ್ದ ಪ್ರಾಮಾಣಿಕ ವ್ಯಕ್ತಿತ್ವದ ಹಿರಿಯರೊಬ್ಬರು ಮೂರೂವರೆ ವರ್ಷಗಳ ಹಿಂದೆಯೇ ಈ ಗ್ರಂಥವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಕರ್ನಾಟಕದ ರಾಜ್ಯೋತ್ಸವದ ಉಡುಗೊರೆಯಾಗಿ ನೀಡುವ ಆಶಯವನ್ನು ನನ್ನೊಡನೆ ವ್ಯಕ್ತಪಡಿಸಿದ್ದರು. ಆದರೆ, ಆ ಕಾಲಕ್ಕಾಗಲೇ ಮೊದಲ ಮುದ್ರಣದ ಎಲ್ಲಾ ಪ್ರತಿಗಳು ಮಾರಾಟವಾಗಿದ್ದವು. ಮಲೆನಾಡಿನ ಪರಿಸರದಲ್ಲಿಲ್ಲೇಯ ಹುಟ್ಟಿ ಬೆಳೆದು ಗೋಪಾಲಗೌಡರ ನ್ಯಾಯದ ಪರವಾದ ಕಳಕಳಿ ಮತ್ತು ಹೋರಾಟದ ವಿವರಗಳನ್ನು ಅರಿತಿರುವ ಕುಲಪತಿಗಳಾದ ಡಾ. ಮುರಿಗೆಪ್ಪನವರು ಈ ಮಹತ್ವದ ಹೊತ್ತಿಗೆಯನ್ನು ಮತ್ತೆ ಮುದ್ರಿಸುವ ನಿರ್ಧಾರವನ್ನು ತೆಗೆದುಕೊಂಡು ತಮ್ಮ ಸದಭಿರುಚಿಯ ಪರವಾದ ನಿಲುವನ್ನು ಪ್ರಕಟಿಸಿದ್ದಾರೆ. ಹಾಗೆಯೇ ಈ ಬಗ್ಗೆ ಪ್ರೊ. ಹಿ.ಚಿ. ಬೋರಲಿಂಗಯ್ಯ ಮತ್ತು ಪ್ರಸಾರಾಂಗದ ಅಧಿಕಾರಿ ಮಿತ್ರರುಗಳಾದ ಡಾ. ಮೋಹನ ಕುಂಟಾರ್ ಹಾಗೂ ಶ್ರೀ ಬಿ. ಸುಜ್ಞಾನಮೂರ್ತಿ ಪ್ರೀತಿಯಿಂದ ಸಹಕರಿಸಿದ್ದಾರೆ. ಈ ಎಲ್ಲರಿಗೂ ನನ್ನ ಕೃತಜ್ಞೆತಗಳು ಸಲ್ಲುತ್ತವೆ.

ಪ್ರೊ. ಕಾಳೇಗೌಡ ನಾಗವಾರ
ಸಂಪಾದಕರ ಪರವಾಗಿ
೧.೧೧.೨೦೧೦