೧೯೬೦

ಫೆಬ್ರವರಿ ೧೫

ಹಿಂದೆ ಕೆಲವು ವರ್ಷ ಡೈರಿಗಳನ್ನು ಬರೆದೇ ಇಲ್ಲ. ಬರೆದಿರುವ ಡೈರಿಗಳೂ ಯಾರು ಯಾರ ಮನೆಯಲ್ಲೋ ಬಿದ್ದಿವೆ. ಅವುಗಳನ್ನೆಲ್ಲಾ ಸಂಗ್ರಹಿಸುವುದು ಸಾಧ್ಯವಾದರೆ ಏನಾದರೂ ಪ್ರಯೋಜನವಾದೀತು.

ಏಪ್ರಿಲ್

ಕಲ್ಲುಗುಂಡಿ ಕೇಶವನಿಂದ ಪತ್ರ ಬಂದಿತು. ಸೆಂಟ್ರಲ್‌ ಆಫೀಸಿನಿಂದ ಕಳೆದ ರಾಷ್ಟ್ರೀಯ ಸಮಿತಿ ಸಭೆ ನಡವಳಿಕೆಗಳು ಬಂದಿವೆ.

ತಾಯಿಯವರಿಗೆ ಜ್ವರ ಬರುತ್ತಿದ್ದುದಾಗಿ ಕೇಶವನ ಪತ್ರದಿಂದ ತಿಳಿಯುತ್ತೆ. ಊರಿಗೆ ಹೋಗದೆ ಮೂರು ತಿಂಗಳ ಹತ್ತಿರವಾಯಿತು. ಕಳೆದ ಸಲ ನಾನು ಹೋಗಿದ್ದಾಗ ಅವರು ಮೊಮ್ಮಗಳ ಮನೆಗೆ ಹೋಗಿದ್ದರು.

ಏಪ್ರಿಲ್

ಮಧ್ಯಾಹ್ನ ಶ್ರೀ ಗರುಡಶರ್ಮರೊಡನೆ ಅವರ ವಿಶ್ವನೀಡಂಗೆ ಜೀಪಿನಲ್ಲಿ ಹೋಗಿ ಬಂದೆ. ಬೆಂಗಳೂರಿಗೆ ಎಂಟು ಮೈಲಿ ದೂರದಲ್ಲಿ ಮಾಗಡಿ ರಸ್ತೆಯಲ್ಲಿ ಮುನ್ನೂರು ಎಕರೆ ಪ್ರದೇಶವನ್ನು ಒಂದು ಲಕ್ಷ ಮೂವತ್ತು ಸಾವಿರ ರೂ. ಕೊಟ್ಟು, ಕೊಂಡು, ಶ್ರೀ ಕಮಲನಯನ ಬಜಾಜರು ಸೇವಾಸಂಘಕ್ಕೆ ಕೊಟ್ಟಿರುತ್ತಾರೆ. ವಿನೋಬಾ ಭಾವೆಯವರು ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಇಲ್ಲಿ ಒಂದು ಸರ್ವೋದಯ ವಿಚಾರ ಅಧ್ಯಯನಕ್ಕೆ ಆಶ್ರಮ ತೆರೆಯಬೇಕೆಂದು ತಿಳಿಸಿ ಹೋಗಿದ್ದರ ಪ್ರಕಾರ ಈ ತಾಣವನ್ನು ಗೊತ್ತುಮಾಡಿ ಕೆಲಸ ಆರಂಭವಾಗಿರುತ್ತೆ.

ರಾತ್ರಿಗೆ ಕಣ್ಣನ್‌ನೊಡನೆ ತಿರುಗಾಡಿ ಬಂದೆ. ಇಂದೂ ಮದುವೆಯ ವಿಷಯ ಪ್ರಸ್ತಾಪಿಸಿದೆವು.

ಏಪ್ರಿಲ್

ಬೆಂಗಳೂರಿಗೆ ನ್ಯಾಸರ್ ಭೇಟಿ.
೧-೧೦ನ. ಪೈ.ಜೀ ರಸಾಯನ

ಬೆಳಿಗ್ಗೆ ಹತ್ತು ಗಂಟೆಗೆ ಹೊರಟು ಗೆ|| ಕಣ್ಣನ್‌, ಬಾ. ಸು. ಕೃ., ಸುಬ್ರಹ್ಮಣ್ಯ, ಸಂಜೀವ ಇವರೊಡನೆ ವಿಧಾನ ಸೌಧಕ್ಕೆ ಹೋದೆವು. ಈಜಿಪ್ಟಿನ ಅಧ್ಯಕ್ಷ ಗ್ಯಾಮಲ್‌ಅಬ್ದುಲ್‌ನ್ಯಾಸೆರ್ ರವರಿಗೆ ಕಾರ್ಪೋರೇಶನ್‌ನಿಂದ ಬಿನ್ನವತ್ತಳೆ ಅರ್ಪಿಸುವ ಸಮಾರಂಭ. ಒಂದು ಗಂಟೆ ಅರಬ್‌ಗಣರಾಜ್ಯಗಳ ಬಾಂಧವ್ಯ ಹೆಚ್ಚು ದೃಢವಾಗಲಿ ಎಂದು ಆಶಿಸಿದರು. ಏಷ್ಯ ರಾಷ್ಟ್ರಗಳ ವಿಮುಕ್ತಿಗಾಗಿ ಒಗ್ಗಟ್ಟಾಗಿ ಪ್ರಯತ್ನಿಸೋಣ ಎಂದು ನುಡಿದರು.

ಶಿವಮೊಗ್ಗದಿಂದ ಗೆ|| ಕಾಗೋಡು ತಿಮ್ಮಪ್ಪ ಗೌಜಿಕಣ್ಣೂರಿನ ಮೂರು ಜನ ರೈತರನ್ನು ಕರೆದುಕೊಂಡು ಮಧ್ಯಾಹ್ನ ಬಂದ. ಅವರಿಗಾಗಿ ರಾತ್ರಿ ೯ಕ್ಕೆ ಕಂದಾಯ ಮಂತ್ರಿ ಕಡಿದಾಳರನ್ನು ಮನೆಯಲ್ಲಿ ಕಂಡೆವು.

ಗೆ|| ಪಟೇಲರಿಂದ ಕಾರ್ಡು ಬಂದಿದೆ. ಸಮ್ಮೇಳನವೇ ಈಗ ಬೇಡ ಎಂಬುದು ಅವರ ಅಭಿಮತ. ಆರೋಗ್ಯವು ಮತ್ತೆ ಕೆಟ್ಟಿದೆ, ವೆಲ್ಲೂರಿಗೆ ಹೋಗಲಿದ್ದೇನೆ ಎಂದು ಬರೆದಿದ್ದಾರೆ.

ಶ್ರೀ ಸೋಮಸುಂದರ್ ಲಂಕೇಶಪ್ಪನವರ ಜೊತೆ ನೀವು ಮೈಸೂರಿಗೆ ಹೋಗಿ ಬನ್ನಿ ಎಂದು ಬರೆದಿದ್ದಾರೆ. ಸಂಜೆ ಲಂಕೇಶ ಬಂದಿದ್ದರು.

ಪತ್ರದ ವಿಷಯ ತಿಳಿಸಿದೆ ಅವರಿಗೂ ಒಂದು ಅಂಥದೇ ಪತ್ರ ಬಂದಿದೆ ಎಂದರು.

ಸಂಜೆ ಖಾದ್ರಿಯವರು ಬಂದಿದ್ದರು. ಬಾ. ಸು. ‘ತಾಯಿನಾಡು’ಗೆ ಸೇರಿಕೊಳ್ಳಲು ಸಲಹೆ ನೀಡಿದರು. ಆಗ ಅವರಿದ್ದಿಲ್ಲ.

ಕಳೆದ ಮೂರು ದಿನಗಳಿಂದ ಪಿತ್ತಪ್ರಕೋಪ, ಅಜೀರ್ಣ, ಅರುಚಿ ತೊಂದರೆ, ಜೀರಿಕಾರಿ ರಸಾಯನ ತೆಗೆದುಕೊಂಡಿದ್ದೇನೆ.

ಏಪ್ರಿಲ್

ಸಂಜೆ ಬಾಸು, ಅವರ ತಂಗಿ ಸರೋಜ, ಇವರೊಡನೆ ಹುಚ್ಚಾಸ್ಪತ್ರೆಗೆ ಹೋಗಿ ಅವರ ತಂಗಿಯನ್ನು ನೋಡಿಕೊಂಡು ಬಂದೆವು. ಅವರ ದೇಹಸ್ಥಿತಿ ತುಂಬಾ ಕ್ಷೀಣಿಸಿದಂತೆ ಕಾಣುತ್ತೆ. ನಾಳೆ ಬೆಳಿಗ್ಗೆ ಬಂದು ಮನೆಗಾದರೂ ಕರೆದುಕೊಂಡು ಹೋಗಬೇಕೆಂದು ಯೋಚಿಸಲಾಗಿದೆ.

ಗೆಳೆಯ ಮುದ್ದಾಚಾರರಿಂದ ೨೫ ಕೈಗಡ ತೆಗೆದುಕೊಂಡು, ಪ್ರೆಸ್ಸಿನಲ್ಲಿದ್ದ ಮ್ಯಾಟರನ್ನು ತರಿಸಲಾಯಿತು. ಪೋಸ್ಟ್‌ಗೆ ಉಳಿದ ಪತ್ರಿಕೆ ಹಾಕಿಸಲಾಯ್ತು.

ಆಸ್ಪತ್ರೆಗೆ ಗೆ|| ಖಾದ್ರಿ ಶಾಮಣ್ಣನವರು ಬಂದಿದ್ದರು.

ಮಧ್ಯಾಹ್ನ ಗೆ|| ಸಂಜೀವಪ್ಪನವರಿಗೆ ತಮ್ಮ ವರ್ತನೆ ತಿದ್ದಿಕೊಳ್ಳಬೇಕೆಂದು ಕಟುವಾಗಿ ತಿಳಿಸಿದೆ.

ನಾನು ಕಣ್ಣನ್‌ಏನೋ ಮಾತನಾಡಿದೆವೆಂದು ತಪ್ಪು ಅರ್ಥ ಬರುವಂತೆ ಮಾಧವನ್‌ಗೆ ಹೇಳಿದ್ದ ಕಾರಣ ಹಾಗೆ ತಿಳಿಸಲಾಯಿತು. ಅದಕ್ಕೆ ಅವರು ಸುಗಟೂರು ವಿರುದ್ಧ ಕಣ್ಣನ್‌ಹತ್ತಿರ ದೂರು ಹೇಳಿ, ಅವರು ಸುಗಟೂರ್ ಮೇಲೆ ರೇಗಿದರು.

‘ಮಾರ್ಗದರ್ಶಿ’ಯ ಒಂದು ಪುಟ ಮುಗಿದಿದೆ. ಉಳಿದ ಪುಟ ನಾಳೆ ಮಾಡಿಸಬೇಕು. ವಿಧಾನ ಮಂಡಲದ ಈ ಅಧಿವೇಶನ ಹೇಗೆ ಅಸಫಲವಾಗಿದೆ ಎಂಬ ವಿಷಯ ಕುರಿತು ಮೊದಲನೆ ಪುಟಕ್ಕೆ ಒಂದು ಲೇಖನ ಬರೆದೆ. ಶರಾವತಿಯ ಮುಳುಗಡೆಯಿಂದ ಪರಿಹಾರ ಪುನರ್ವ್ಯವಸ್ಥೆ ಬಗ್ಗೆಯೂ ಒಂದು ಸಣ್ಣ ಲೇಖನ ಬರೆದಿದ್ದೇನೆ.

ಗೆ|| ಮುದ್ದಾಚಾರ್ರು ಊರಿನಲ್ಲಿಲ್ಲದ ಕಾರಣ ಅವರ ಇಪ್ಪತ್ತೈದು ರೂ. ಹಿಂತಿರುಗಿ ಕೊಡಲಿಲ್ಲ. ಬಸಪ್ಪನವರು ತಗಾದೆ ಮಾಡುತ್ತಿದ್ದಾರೆ.

ಕರಗಕ್ಕೆ ಹಳ್ಳಿ ಜನರ ಬರುವು ಆರಂಭವಾಗಿದೆ.

ಏಪ್ರಿಲ್‌ ‌೧೧

ರಾತ್ರಿ ಕಣ್ಣನ್‌ ಜೊತೆ ಕರಗ ನೋಡಲು ಹೋಗಿ ಬಂದೆ. ಅಸಂಖ್ಯಾತ ಹಳ್ಳಿ ಜನರು ಜಾತ್ರೆ ಸೇರಿದ್ದಾರೆ. ಅವರ ಮುಗ್ದತೆ ಹಾಗು ದಡ್ಡತನವನ್ನು ಚಾಲಾಕಿನ ಪೇಟೆಯ ಜನ ಎಷ್ಟು ರೀತಿಯಲ್ಲಿ ಸಾಧ್ಯವೋ ಅಷ್ಟು ರೀತಿಯಲ್ಲಿ ಶೋಷಣೆ ಮಾಡಿ ತಮ್ಮ ತೆವಲು ತೀರಿಸಿಕೊಳ್ಳುತ್ತಾರೆ. ರಾತ್ರಿಯೆಲ್ಲಾ ಜನರು ಅತ್ತಿಂದ ಇತ್ತ ಇತ್ತಿಂದ ಅತ್ತ ಗುಂಪು ಗುಂಪಾಗಿ ಬೆಂಗಳೂರು ತುಂಬಾ ದಿಕ್ಕೆಟ್ಟು ಅಲೆಯುತ್ತಾರೆ. ಕರಗ ಬರುವ ರಸ್ತೆಗಳ ಇಕ್ಕೆಲಗಳಲ್ಲಿ ಜನಸಂದಣಿ ದುರ್ಗಮವಾಗಿರುತ್ತೆ. ನೂಕುನುಗ್ಗಲು ಅಸಾಧ್ಯ. ಒಬ್ಬರನ್ನು ನೋಡಿ ಇನ್ನೊಬ್ಬರು ಸೇರುತ್ತಾರೆ. ಬೆಳಕು ಹರಿವತನಕ ಸಂತೆ ನಡೆದಿತ್ತು.

ಏಪ್ರಿಲ್೧೨

ರಾತ್ರಿ ಬಹಳ ತಡವಾಗಿ ಮಲಗಿದ್ದರ ಪ್ರಯುಕ್ತ ಏಳುವಾಗಲೇ ತಡವಾಯಿತು. ಅಷ್ಟರಲ್ಲಿ ಬಾಸು ಬಂದಿದ್ದರು. ಪತ್ರಿಕೆ ಕೆಲಸ ಇಂದೂ ನಿಂತುಹೋಯಿತು. ಪ್ರೆಸ್‌ಗೆ ರಜವಿದ್ದುದರಿಂದ ಅಚ್ಚು ಹಾಕಿಸುವ ಕೆಲಸ ಆಗಲಿಲ್ಲ.

ಮಧ್ಯಾಹ್ನ ಹೊಸಪೇಟೆ ಆಚಾರ್ ರನ್ನು ಕಂಡು ಮಾರ್ಗದರ್ಶಿಗೆ ನಿಧಿ ಕೊಡಬೇಕೆಂದು ಕೇಳಿದೆವು. ಅಲ್ಪಸ್ವಲ್ಪ ಸಹಾಯ ಮಾಡಲು ಭರವಸೆಯಿತ್ತರು.

ರಾತ್ರಿ ಮಿಲ್ಕ್‌ಬಾರಿನಲ್ಲಿ ಬ್ರೆಡ್ಡು ತೆಗೆದುಕೊಂಡೆವು. ಬಾಸು ಅತ್ತ ಮನೆಗೆ ಹೋದರು. ನಾನು ಕಾರ್ಯಾಲಯಕ್ಕೆ ಬಂದೆ.

ಸಂಜೆ ಬಾಟಾ ಹತ್ತಿರ ಗೆ|| ಖಾದ್ರಿ, ಚಂದ್ರಶೇಖರ್ ಇತ್ಯಾದಿ ಸಿಕ್ಕಿದ್ದರು. ಖಾದ್ರಿಯವರಿಗೆ ಮತ್ತೆ ವಿವಾಹವಾಗಬೇಕೆಂಬ ಇಚ್ಛೆಯಾಗಿದೆ. ಅವರಿಗೊಬ್ಬ ಜೊತೆಗಾರಳನ್ನೂ ಹುಡುಕಬೇಕೆಂದು ತಿಳಿಸಿದ್ದಾರೆ.

ಏಪ್ರಿಲ್೧೬

ಸಂಜೆ ಗೆ|| ವೆಂಕಟರಾಂ ೧೫ ರೂ. ಕಳಿಸಿದರು. ೫ ರೂ. ಪ್ರೆಸ್ಸಿಗೆ ಕೊಟ್ಟು, ಬ್ಲಾಕ್‌ತರಿಸಿ ಪ್ರೆಸ್ಸಿಗೆ ಕೊಟ್ಟು ಉಳಿದ ಹತ್ತು ರೂ. ಗಳನ್ನು ಜೇಬಿನಲ್ಲಿ ಹಾಕಿಕೊಂಡು ಗೆ|| ಸುಬ್ರಹ್ಮಣ್ಯ, ವೆಂಕಟರಾಂ, ಸಂಜೀವರಾವ್‌ ಇವರೊಡನೆ ರಾತ್ರಿ ಹತ್ತು ಗಂಟೆಗೆ ಅಲಸೂರಿನ ‘ಪೂಪಾಲಕಿ’ ಉತ್ಸವ ನೋಡಲು ಹೊರಟೆವು. ದಾರಿಯಲ್ಲಿ ಮೈಸೂರು ಬ್ಯಾಂಕ್‌ ಹತ್ತಿರ ಏನೋ ಇಷ್ಟು ಅನ್ನ ತಿಂದು ಯಾವುದೋ ಬಸ್ಸಿನಲ್ಲಿ ರಸೆಲ್‌ಮಾರ್ಕೆಟ್‌ ಹತ್ತಿರ ಹೋಗಿ ಇಳಿದೆವು. ಅಲ್ಲಿ ಬಸ್ಸು ಹತ್ತುತ್ತಿರುವಾಗ ಮೂರ್ತಿ ಎಂಬುವವನು ನನ್ನ ಜೇಬಿನಿಂದ ಹತ್ತು ರೂ. ಹೊಡೆದು ಹೋಗುತ್ತಿರುವಾಗ ಸಿಕ್ಕಿಬಿದ್ದ. ರೂಪಾಯನ್ನು ಮಾತ್ರ ಅಷ್ಟರಲ್ಲೇ ಅವನ ಮಿತ್ರನಿಗೆ ದಾಟಿಸಿದ್ದ. ಅವನನ್ನು ಎಳೆದುಕೊಂಡು ಹೋಗಿ ಕಮರ್ಶಿಯಲ್‌ಸ್ಟ್ರೀಟ್‌ ಪೋಲೀಸ್‌ ಠಾಣೆಗೆ ಕೊಟ್ಟು ಅಲಸೂರಿಗೆ ನಡೆದೆವು. ರಾತ್ರಿ ೨-೩೦ರ ತನಕ ಅಲ್ಲೇ ಅಲೆಯುತ್ತಾ ಇದ್ದು ಗೆ|| ಶ್ರೀರಾಮಯ್ಯನ ಕಾರಿನಲ್ಲಿ ಹಿಂದೆ ಬಂದೆವು. ನಿದ್ರೆ ಹತ್ತುವಾಗ ರಾತ್ರಿ-ಅಲ್ಲ-ಬೆಳಗಿನ ಝಾವ ನಾಲ್ಕು ಬಾರಿಸಿತು. ಇದು ಮತ್ತೊಂದು ಕರಗದಂತೆ. ಅತ್ತಿಂದಿತ್ತ, ಇತ್ತಿಂದತ್ತ ಜನ ಗುಂಪು ಗುಂಪಾಗಿ ಒಬ್ಬರ ಮೇಲೊಬ್ಬರು ಬೀಳುತ್ತಾ ಅಲೆದಾಡುವ ಜಾತ್ರೆ. ಶ್ರೀರಾಮಯ್ಯನವರ ಕ್ಷೆತ್ರವಾದ್ದರಿಂದ ನಾವೂ ಹೋಗಬೇಕಾಯಿತು. ನೂರಾರು ಮಣ ಹೂ ಕಟ್ಟಿ ನನಾ ದೇವರುಗಳು ಪಲ್ಲಕ್ಕಿಯಲ್ಲಿ ಉತ್ಸವ ಹೋಗುವುದು – ಅದೊಂದು ದೃಶ್ಯ! ದೇವರನ್ನು ಮೆಚ್ಚಿಸುವ ಬಗೆ!

ಏಪ್ರಿಲ್೧೮

ಏಳುವ ಹೊತ್ತಿಗೆ ಗೆ|| ಸತ್ಯನಾರಾಯಣ (ಕುಮಟಾ) ಸಾಗರದಿಂದ ಬಂದಿದ್ದರು. ಅವರ ಜಾಡಮಾಲಿ ಮುಷ್ಕರ ಅಂದೇ ಹಿಂತೆಗೆದುಕೊಂಡರೆಂದೂ, ಆ ಸಂಬಂಧ ಬಂದಿರುವುದಾಗಿಯೂ ತಿಳಿಸಿದರು. ಮತ್ತೆ ಅವರು ಸಂಜೆಯೇ ಕಾಣಿಸಿಕೊಂಡರು. ನಂತರ ಮಾಧವನ್‌ ಬಂದಿದ್ದರು. ಸ್ನಾನ ಮಾಡಿಕೊಂಡು ನಾನು ಒಮ್ಮೆಗೇ ಹೊರಗೆ ಹೋದವನು ಊಟ ಮುಗಿಸಿಯೇ ಬಂದೆ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಎದ್ದೆ.

ಅಷ್ಟರಲ್ಲಿ ಸಬ್‌ಇನ್‌ಸ್ಪೆಕ್ಟರ್ ಮಾದಪ್ಪ ಬಂದು ನನ್ನ ಹೇಳಿಕೆ ತೆಗೆದುಕೊಂಡು ಹೋದರು. ಮತ್ತೆ ಸಂಜೆ ಹೊರಗೆ ಹೋಗಿದ್ದೆ. ಬಾಟಾದ ಹತ್ತಿರ ಸುಬ್ರಹ್ಮಣ್ಯ ಮತ್ತು ಸಂಜೀವರಾವ್‌ ಸಿಕ್ಕಿದ್ದರು. ಅಲ್ಲಿಗೂ ಸಬ್‌ಇನ್‌ಸ್ಪೆಕ್ಟರು ಬಂದು ಅವರ ಹೇಳಿಕೆಗಳನ್ನು ತೆಗದುಕೊಂಡು ಹೋದುದಾಗಿ ತಿಳಿಯಿತು.

ಲೋಲಿತ ಓದಿ ಈಗ ತಾನೆ ಮುಗಿಸಿದೆ.

ಚೌ-ನೆಹ್ರೂ ಭೇಟಿ-ನೆಹರೂ ಚೌ ಹೆಬ್ಬಾವಿನೊಂದಿಗೆ ಸೆಣಸಾಡುತ್ತಿರುವ ಒಂದು ವ್ಯಂಗ್ಯ ಚಿತ್ರ ಬರೆದ.

ಗೆ|| ಕುಮುಟಾ ಊರಿಗೆ ಹೋದರು. ಬೆಳಿಗ್ಗೆ ಅವರನ್ನು ಹುಡುಕಿಕೊಂಡು ಮಾಧವನ್‌ಬಂದಿದ್ದರು.

“ಮಾರ್ಗದರ್ಶಿ” ಕಳೆದ ಸಂಚಿಕೆಯ ಪ್ರತಿಗಳನ್ನು ಬಹಳ ಕಡೆ ಕಳಿಸಲು ಇನ್ನೂ ಆಗಿಲ್ಲ. ಮುಂದಿನ ಸಂಚಿಕೆ ನಿಧಾನವಾಗಿ ಕಂಪೋಸಾಗುತ್ತಿದೆ. ಅತಿ ಕಷ್ಟದಿಂದ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.

ಇದೇ ೨೮ರಂದು ಬೆಂಗಳೂರಿನಲ್ಲಿ ರಾಜ್ಯ ಸಮಿತಿ ಸಭೆ ಕರೆಯಲಾಗಿದೆ. ಸದಸ್ಯರಿಗೆ ಸೂಚನಾಪತ್ರ ಇಂದು ಸಿದ್ದಪಡಿಸಲಾಯಿತು. ಹೊರಗಡೆ ಕಳಿಸಲು ಆಗಲಿಲ್ಲ. ನಾಳೆ ಕಳಿಸಬೇಕು.

ಇಂದೂ ಮೋಡವಿದ್ದು ಸಂಜೆ ಒಂದೆರಡು ಹನಿ ಮಳೆ ಬಿದ್ದಿತು. ಮಧ್ಯಾಹ್ನ ಉಷ್ಣಾಂಶ ಹೆಚ್ಚಿತು.

ನೆಹರೂ-ಚೌ ಭೇಟಿ ನಿನ್ನೆಯಿಂದ ಆರಂಭವಾಗಿದೆ. ಮಧ್ಯೆ ಕೃಷ್ಣಮೆನನ್ನರು ಪ್ರವೇಶಿಸುವಂತೆ ಚೌ ಅಪೇಕ್ಷೆಪಟ್ಟರು ಎಂದು ವರದಿಯಾಗಿದೆ.

ಏಪ್ರಿಲ್೨೮

ರಾಜ್ಯ ಸಮಿತಿ ಸಭೆ.

ಬೆಳಿಗ್ಗೆ ೧೦-೨೦ಕ್ಕೆ ರಾಜ್ಯ ಸಮಿತಿ ಸಭೆ ಆರಂಭವಾಯಿತು. ಶ್ರೀ ಹನುಮಂತಪ್ಪ, ಕೃಷ್ಣಗೋಪಾಲ್‌, ಮೂಗಿವೆಂಕಟರಮಣ, ವೆಂಕಟರಾಂ, ಮಾಧವನ್‌, ಶ್ರೀರಾಮಯ್ಯ, ಸುಬ್ಬಣ್ಣ, ವಿಶ್ವನಾಥ್‌, ಬಾಸು ಮತ್ತು ನಾನು ಹಾಜರಿದ್ದ ಸದಸ್ಯರು. ಗೆ|| ಜೆ. ಹೆಚ್‌. ಪಟೇಲರು ಅಸ್ವಸ್ಥರಾಗಿದ್ದರೆಂದೂ ಮೇ ೩ ರಂದು ಬರುತ್ತೇವೆಂದೂ ಗೆ|| ಸದಾಶಿವರಾಯರಿಂದ ಒಂದು ತಂತಿಯೂ, ನಿಮ್ಮ ತೀರ್ಮಾನಗಳಿಗೆ ನನ್ನ ಒಪ್ಪಿಗೆ ಎಂದು ಚೌಡಪ್ಪನವರಿಂದ ಮತ್ತೊಂದು ತಂತಿಯೂ ಬಂದಿವೆ.

ಕಳೆದ ಸಭಾ ನಡವಳಿಕೆ ಓದಿ ಒಪ್ಪಲಾಯಿತು. ಕಾಗದಪತ್ರಗಳನ್ನು ಓದಿ ಸೂಕ್ತ ತೀರ್ಮಾನಗಳಾದವು. ಸಮ್ಮೇಳನ ಮತ್ತು ಕಾನೂನುಭಂಗ ಚರ್ಚೆಯಾಗಿ ಮಧ್ಯಾಹ್ನ ಊಟಕ್ಕೆ ಎದ್ದು ಸಂಜೆ ೬-೩೦ ರಿಂದ ಮತ್ತೆ ಸೇರಿ ಚರ್ಚೆ ಮುಂದುವರಿಯಿತು ರಾತ್ರಿ ೧೦ ಗಂಟೆ ತನಕ. ಸಮ್ಮೇಳನ ಅನಿರ್ದಿಷ್ಟ ಕಾಲ ಮುಂದೆ ಹಾಕಬೇಕೆಂತಲೂ ಹೋರಾಟ ಜೂನ್‌ ೧ ರಿಂದ ಆರಂಭಿಸಬೇಕೆಂದು, ಮಧ್ಯೆ ಮೇ ೮ ರಂದು ಹೊಳಲ್ಕೆರೆಯಲ್ಲಿ ಕ್ರಿಯಾಶೀಲ ಕಾರ್ಯಕರ್ತರ ಒಂದು ಸಮಾವೇಶ ನಡೆಸಬೇಕೆಂದು ತೀರ್ಮಾನಿಸಲಾಯಿತು. ಉಳಿದ ವಿಷಯ ಮುಂದೆ ಹಾಕಲಾಯಿತು.

ಮಾಗದರ್ಶಿಯ ಎರಡು ಸಂಚಿಕೆಗಳನ್ನೂ ಇಂದು ಟಪ್ಪಾಲಿಗೆ ಹಾಕಿಸಲಾಯಿತು.

ಏಪ್ರಿಲ್೨೯

ಮಧ್ಯಾಹ್ನ ಗೆ|| ಗುರುಬಸಪ್ಪಸೆಟ್ಟರೊಡನೆ ಅವರ ಶ್ರೀರಾಮಪುರದ ಮನೆಗೆ ಹೋಗಿ ‘ಬಸವ ಜಯಂತಿ’ ಊಟ ಮುಗಿಸಿ ಬಂದೆ. ಅವರ ಮದುವೆಯಾದ ಮೇಲೆ ಇದೇ ಮೊದಲ ಬಾರಿ ಅವರ ಪತ್ನಿ ಪರಿಚಯವಾಯಿತು.

ಪಾರ್ಟಿ ಕಾರ್ಯಕರ್ತರಿಗೆ ಒಂದು ಪತ್ರ ಬರೆದು ೮ ರಂದು ನಡೆಯಲೇರ್ಪಡಿಸಿರುವ ಹೊಳಲ್ಕೆರೆ ಸಮಾವೇಶಕ್ಕೆ ಬರಲು ಕರೆಕೊಡುವ ಪತ್ರ ಅಚ್ಚು ಹಾಕಿಸಲಾಯಿತು. ನಾಳೆ ಅವುಗಳನ್ನು ಟಪ್ಪಾಲಿಗೆ ಹಾಕಬೇಕು ಗೆ|| ಹನುಮಂತಪ್ಪನವರು ಕೆಲವನ್ನು ತೆಗೆದುಕೊಂಡು ರಾತ್ರಿ ಊಟದ ನಂತರ ನಾಳೆ ಊರಿಗೆ ಹೊರಡುವುದಾಗಿ ಹೇಳಿ ಹೋದರು.

ಪತ್ರಿಕೆಗಳಿಗೆ ನಿನ್ನೆ ಸಭೆಯ ತೀರ್ಮಾನಗಳನ್ನು ಕಳಿಸಲಾಯಿತು. ಬ್ಯಾನರ್ ಬರೆಯಲು ಕೃಷ್ಣನಿಗೆ ಬಟ್ಟೆ ಕೊಂಡುಕೊಡಲಾಯಿತು. (೪ ಬ್ಯಾನರ್)

ಪಾರ್ಲಿಮೆಂಟ್‌ಅಧಿವೇಶನ ಮುಗಿಯುತು.

ಏಪ್ರಿಲ್೩೦

ಸಂಜೆಯ ತನಕ ಕಾರ್ಯಾಲಯದಲ್ಲೇ ಇದ್ದೆವು. ಸಂಜೆ ಗೆ|| ಖಾದ್ರಿ ಶಾಮಣ್ಣನವರು ಬಂದರು. ಅವರೊಡನೆ ಯಾವುದೋ ಹೋಟೆಲಿನಲ್ಲಿ ಪ್ಲೇಟ್‌ ಊಟ ಮಾಡಿ, ಅವರನ್ನು ಕಳಿಸಿ, ಕಾರ್ಯಾಲಯಕ್ಕೆ ಬಂದು ಮಲಗಿದೆವು.

ಕಾರ್ಯಕರ್ತರಿಗೆ ಬರೆದಿರುವ ವಿನಂತಿ ಪತ್ರ ಅಂಚೆಗೆ ಹಾಕಲು ಆಗಲಿಲ್ಲ, ಸ್ಟಾಂಪುಗಳಿರಲಿಲ್ಲ. ಕಾಮಲಾಪುರದ ಬಸವರಾಜ್‌ ಏನೇನೋ ಬರೆದಿದ್ದಾರೆ. ಆರೋಗ್ಯವಿಲ್ಲ: ಕೂಡ್ಲಿಗಿಯಲ್ಲಿದ್ದೇನೆ ಇತ್ಯಾದಿ.

ಮಧ್ಯಾಹ್ನ ತರುಣ ಕವಿಗಳಾದ ಲಂಕೇಶಪ್ಪ ಮತ್ತು ನಿಸಾರ್ ಅಹ್ಮದ್‌ ಬಂದಿದ್ದರು. ನಿಸಾರ್ ಅಹ್ಮದ್‌ರ ಕೆಲವು ಕವನಗಳನ್ನು ಓದಿದೆವು.

ಬಾಸು ಕಾರ್ಯಾಲಯದಲ್ಲೇ ಮಲಗಿದರು.

ಮಹಾರಾಷ್ಟ್ರ, ಗುಜರಾತು ರಾಜ್ಯಗಳು ಇಂದು ರಾತ್ರಿ ಕಳೆಯಲು ಅಸ್ತಿತ್ವಕ್ಕೆ ಬರುತ್ತವೆ. ರಾತ್ರಿ ೧೨ ಕಳೆಯಲು ಇಲ್ಲೂ ದೊಡ್ಡ ಗರ್ನಾಲು, ಕದಿ, ಹೊಡೆದು ಹೊಸ ರಾಜ್ಯಗಳ ಉದಯವನ್ನು ಕೆಲವರು ಘೋಷಿಸಿದರು.

ಮೇ

ಮಹಾರಾಷ್ಟ್ರ ಮತ್ತು ಗುಜರಾತುಗಳ ಜನನ.

ಕಾರ್ಯಾಲಯದಲ್ಲೇ ಸಂಜೆ ಐದರತನಕ ಇದ್ದೆವು. ಮಾಗಡಿ ರಸ್ತೆ ಚಂದ್ರಶೇಖರ್-ಇಂದುಶೇಖರ್ ಬಂದರು. ಸಹಾಯಾರ್ಥ ಪ್ರದರ್ಶನದ ವಿಷಯದಲ್ಲಿ ಹಣಕಾಸಿನ ವ್ಯವಸ್ಥೆಯ ಸಂಬಂಧ ಭಿನ್ನಾಭಿಪ್ರಾಯಗಳು ತಲೆದೋರಿ ರಾತ್ರಿ ಎಂಟು ಗಂಟೆ ತನಕವೂ ವಾದ ವಿವಾದಗಳಾದುವು. ಹಾಗೆ ಮಾತುಗಳನ್ನು ಕಟ್ಟಿಕೊಂಡಂತಾಯಿತೆಂದು ಕಾಣುತ್ತೆ. ಮರ್ಯಾದೆಯಿಂದ ಪಾರಾದರೆ ಸಾಕು.

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ. ಬಸಪ್ಪನವರಿಗೆ ವಾಯಿದೆ ಹೇಳಿ ಹೇಳಿ ಸಾಕಾಯಿತು. ಈ ವಾರ ಮಾರ್ಗದರ್ಶಿ ತರು ತಂಟೆಗೇ ಹೋಗಿಲ್ಲ. ಬಾಸೂ ಸ್ಥಿತಿಯಂತೂ ತೀರಾ ಕೆಟ್ಟಿದೆ. ಹೋರಾಟಕ್ಕೆ ಸಿದ್ಧತೆಗಳೂ ಆಗಬೇಕು.

ಇಂದು ಬೆಳಿಗ್ಗೆ ಮಹಾರಾಷ್ಟ್ರ ಮತ್ತು ಗುಜರಾತು ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ರಾಜ್ಯಗಳ ಪುನರ್ವಿಂಗಡಣೆಯ ಕಾಲಕ್ಕೆ ಈ ಎರಡು ರಾಜ್ಯಗಳನ್ನು ಒಟ್ಟಾಗಿಯೇ ಇಟ್ಟಿದ್ದರು. ಈಗ ಅದೇ ನೆಹರು ಜನಮತಕ್ಕೆ ಬಾಗಿ ಒಪ್ಪಿಕೊಂಡರು. ನೆಹರೂ ರಾತ್ರಿಯೇ ಮುಂಬಯಿಗೆ ಬಂದು ಬೆಳಿಗ್ಗೆ ೧ ಗಂ. ಲಂಡನ್‌ಗೆ ಹಾರಿದರು. ಅವರ ಕಾಮನ್‌ವೇಲ್ತ್‌ಸಭೆಗೆ.

ಮೇ

ಗೆ|| ಪಟೇಲರು, ಸದಾಶಿವರಾಯರು, ಬಾಸು ನಾನು ಕಾರ್ಯಾಲಯದಲ್ಲೇ ಕುಳಿತಿದ್ದಾಗ ಶ್ರೀ ಬಸಪ್ಪನವರು ಬಂದರು. ಅವರು ತಮ್ಮ ಕೆಲವು ಅನುಭವ ತಿಳಿಸಿದರು. ಮಧ್ಯಾಹ್ನ ಅಲ್ಲೇ ಆಯಿತು.

ಊಟ ಮಾಡಿ ಬಂದು ನಾನು ಮತ್ತೆ ಕೆಲವು ಕಾರ್ಯಕರ್ತರಿಗೆ ಹೊಳಲ್ಕೆರೆಗೆ ಬರಲೇಬೇಕೆಂದು ೨೦ ಪತ್ರ (ಕಾರ್ಡುಗಳನ್ನು) ಬರೆದೆ.

ಮೇ

ಉತ್ತರ ಪ್ರದೇಶ ಮುನ್ನೂರಕ್ಕೂ ಮೇಲ್ಪಟ್ಟು ೪ಕ್ಕೆ ಸತ್ಯಾಗ್ರಾಹಿಗಳು ಸೆರೆಮನೆ ಸೇರಿದ್ದರೆಂದು ಸುದ್ದಿ.

ಪ್ರದೇಶ ಕಾಂಗ್ರೇಸ್‌ ಅಧ್ಯಕ್ಷರ ಚುನಾವಣಾ ಬಿಸಿ ಬೆಂಗಳೂರೆಲ್ಲಾ ಆವರಿಸಿತ್ತು.

ಸಂಜೆ ಗೆ|| ಶ್ರೀರಾಮಯ್ಯನ ಮನೆಗೆ ಹೋಗಿ ಬಂದೆವು. ಗೆ|| ಮಾಧವನ್‌ಗೆ ನಾರಾಯಣ ಪಿಳ್ಳೆ ಸ್ಟ್ರೀಟ್‌ ಕಾರ್ಯಾಲಯದಲ್ಲಿ ಟಿಕೆಟ್‌ ಪುಸ್ತಕ ಕೊಟ್ಟು ಹೇಳಿ ಬಂದೆವು. ಹಮೀದ್‌ ಷಾ ಮನೆಯಲ್ಲಿರಲಿಲ್ಲ. ಮತ್ತೊಬ್ಬ ಕಾಪೋರೇಟರ್ ರಾಜಶೇಖರ್ ಪರಿಚಯವಾಯಿತು. ಬರುತ್ತಾ ದಾರಿಯಲ್ಲಿ ಗೆ|| ಜಾರ್ಜ್‌ ಫನಾಂಡೀಸರ ತಂದೆ, ತಾಯಿ ಮತ್ತು ತಮ್ಮಂದಿರು ಇರುವ ಮನೆಗೆ ಹೋಗಿ ಬಂದೆವು. ಅವರು ಈ ಊರಿನಲ್ಲಿದ್ದಾರೆಂದು ಇಂದೇ ನನಗೆ ಗೊತ್ತಾದುದು.

ರಾತ್ರಿ ಇಂದುಶೇಖರರು ತಮ್ಮ “ದರಿಯಾ ದೌಲತ್‌” ನಾಟಕದ ಪ್ರಮುಖ ದೃಶ್ಯಗಳನ್ನು ಓದಿದರು.

ಕೇಶವನಿಂದ ಬಂದ ಪತ್ರಕ್ಕೆ ಇಂದೇ ಉತ್ತರ ಬರೆದೆ. ಧರ್ಮಯ್ಯನಿಗೂ ಕಾಗದ ಬರೆದು ಗೌರವದಿಂದಿರಲು ತಿಳಿಸಿದ್ದೇನೆ.

ಮೇ

ಹೊಳಲ್ಕೆರೆಗೆ ಪ್ರಯಾಣ

ನಾವು ಬಾಸು, ಸದಾಶಿವರಾವ್‌, ವೆಂಕಟರಾಂ, ಮಾಧವನ್‌ ಹೃದಯಂ ರೈಲ್ವೇ ಸ್ಟೇಶನ್‌ಗೆ ಬಂದು ಸೇರಿ ಹೊಳಲ್ಕೆರೆಗೆ ಹೊರೆಟೆವು. ಅಸಾಧ್ಯ ನೂಕುನುಗ್ಗಲು, ಯಾವುದೋ ರಿಸರ್ವ್ ಕಂಪಾರ್ಟ್‌‌ಮೆಂಟಿನಲ್ಲಿ ನುಗ್ಗಿಕೊಂಡು ಜಗಳ ಆಡಿ ಹಾಗೂ ಪ್ರಯಾಣ ಮಾಡಿದೆವು. ಶ್ರೀ ರಾಮಯ್ಯ ಬರಲಿಲ್ಲ.

ಮೇ

ಹೊಳಲ್ಕೆರೆ ಸಮಾವೇಶ

ಹೊಳಲ್ಕೆರೆಯಲ್ಲಿ ರೈಲನ್ನಿಳಿದೆವು. ಅದೇ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದ ಗೆ|| ಕೆ. ಜಿ. ಮಹೇಶ್ವರಪ್ಪನವರು ಭೇಟಿಯಾಗಿ ದಾವಣಗೆರೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು, ಸಂಜೆ ಬಂದರು. ಕರಿಸಿದ್ದಪ್ಪನವರೊಡನೆ ಭಾಷಣವನ್ನು ಮಾಡಿದರು, ಬಹಿರಂಗ ಸಭೆಯಲ್ಲಿ.

ಬಸ್ಸಿನಲ್ಲಿ ಎಲ್ಲರೂ ಕುಳಿತು ಪ್ರವಾಸಿ ಮಂದಿರದ ಹತ್ತಿರ ಎಂದಿನಂತೆ ಕಾದು ನಿಂತಿದ್ದ ಹನುಮಂತಪ್ಪನವರನ್ನು ಕಂಡು ಇಳಿದೆವು. ಸ್ನಾನಾದಿಗಳನ್ನು ಮುಗಿಸಿ ಸ್ವಲ್ಪ ಕಾಲ ಮಲಗಿದ್ದು ನಂತರ ಊಟ ಮಾಡಿದೆವು. ಅಷ್ಟರಲ್ಲಿ ಸಾಗರದಿಂದ ಕುಮಟಾ, ಪ್ರಭು, ರಾಮಚಂದ್ರ, ಮತ್ತು ಚೌಡಪ್ಪ ಬಂದರು. ಗೆ|| ಪಟೇಲರು, ಶಿವಾನಂದಸ್ವಾಮಿ ಬಂದರು ಕಾರಿನಲ್ಲಿ ಮಧ್ಯಾಹ್ನ ೨ ಗಂಟೆಗೆ ಪುರಭವನದಲ್ಲಿ ಸಭೆ ಸೇರಿತು. ಬೇಡಿಕೆಗಳು, ಹೋರಾಟದ ಸ್ವರೂಪ ಮತ್ತು ನಿರ್ದೇಶನ ಕುರಿತು ಸಾಕಷ್ಟು ಚರ್ಚೆಯಾಗಿ ಪ್ರಾದೇಶಿಕವಾಗಿ ‘ಉಳುವವನಿಗೆ ಹೊಲ’ ಬೇಡಿಕೆ ಸೇರಿಸಬೇಕೆಂದೂ, ನಿರ್ದೇಶನ ಮಾಡಲು ಸಮಿತಿಯ ಬದಲು ಅಧ್ಯಕ್ಷರೇ ನಿರ್ದೇಶಕರಾಗಬೇಕೆಂದೂ, ತೀರ್ಮಾನಿಸಲಾಯಿತು. ಸಂಜೆ ಬಹಿರಂಗ ಸಭೆಯಲ್ಲಿ ಬಾ. ಸು. ಸದಾಶಿವರಾವ್‌, ವೆಂಕಟರಾಂ, ಮಹೇಶ್ವರಪ್ಪ, ಪಟೇಲರು, ನಾನು ಮತ್ತು ಹನುಮಂತಪ್ಪ ಮಾತನಾಡಿದೆವು. ಊಟ ಮಾಡಿ ರಾತ್ರಿಯೇ ರೈಲಿಗೆ ಮರಳಿದೆವು.

ಮೇ ೧೦

ಮಾರ್ಗದರ್ಶಿ ಇಂದು ಅಂಚೆಗೆ ಹಾಕಲು ಸಾಧ್ಯವಾಯಿತು. ಸಕಾಲದಲ್ಲಿ ಅಚ್ಚು ಮಾಡಿಸಿ ಕಳಿಸಲು ಇನ್ನೂ ಆಗುತ್ತಿಲ್ಲ. ಕ್ರಮವಾಗಿ ಬಾರದೆ ಹೋದರೆ ಓದುಗರಿಗೆ ಉತ್ಸಾಹ ಯಾ ವಿಶ್ವಾಸ ಹುಟ್ಟುವುದಿಲ್ಲ. ಪ್ರಾರಂಭ ಮಾಡಿದ ಮೇಲೆ ನಡೆಸಿಕೊಂಡು ಹೋಗಲು ಎಲ್ಲ ಪ್ರಯತ್ನ ಮಾಡಲು ತೀರ್ಮಾನಿಸಿದ್ದೇನೆ – ಇನ್ನೂ ಗೆಳೆಯರೆಲ್ಲರ ಪೂರ್ತಿ ಸಹಕಾರ ದೊರಕಿಲ್ಲ.

ಮೇ ೧೫

ಗೆಳೆಯ ಶ್ರೀ ರಾಮಯ್ಯನವರ ಕಾರಿನಲ್ಲಿ ಹೊರಟು ಬಹಳ ಕಡೆ ಸುತ್ತಿದೆವು. ಹಣ ಸಂಗ್ರದ ದೃಷ್ಟಿಯಿಂದ ಹೆಚ್ಚು ಪ್ರಯೋಜನವಾಗಲಿಲ್ಲ. ನಾಳೆ ಎರಡು ತಂಡಗಳೂ ಹೊರಡಲು ನಿಶ್ಚಯಿಸಿದೆವು. ಇನ್ನೂರು ರೂಪಾಯಿನಷ್ಟು ಕ್ಯಾಷ್‌ ಒಟ್ಟಾಗಿದೆ. ನಾಳೆ ಆದಷ್ಟು ಹೆಚ್ಚು ಸಂಗ್ರಿಹಿಸಿಕೊಂಡರೆ ಅಲ್ಪ ಸ್ವಲ್ಪವನ್ನಾದರೂ ಉಳಿಸಬಹುದು.

ಮಧ್ಯಾಹ್ನ ಬಿಸಿಲು ಬಹಳವಾಗಿತ್ತು. ಏನು ಕೆಲಸ ಆಗಲಿಲ್ಲ. ಕಾರಿನಲ್ಲಿ ಒಂದೇ ಸಮನೆ ಸುತ್ತಿದ್ದಾಯಿತು.

ಮೇ ೧೬

ಸಂಜೆಯ ಹೊತ್ತಿಗೆ ಸಾಕಷ್ಟು ಹಣ ಬರಲಿಲ್ಲವೆಂಬ ದುಃಖ ಜನರೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೋ ಇಲ್ಲವೋ ಎಂಬ ಚಿಂತೆ ನನ್ನನ್ನು ಕಾಡಹತ್ತಿದವು. ಆದರೆ ಜನರು ಸಾಕಷ್ಟು ಬಂದರು. ನಾಟಕ ಗೊತ್ತಾದಂತೆ ೭ ಗಂಟೆಗೆ ಆರಂಭವಾಯಿತು. ಸಾಮಾನ್ಯವಾಗಿ ಆಡಿದರು. ಅಧ್ಯಕ್ಷ ಭಾಷಣ ಮಾಡಿದೆ. ಎಲ್ಲಾ ಸುಸೂತ್ರವಾಗಿ ಮುಗಿಯಿತು. ನಾಟಕ ಮುಗಿದ ಮೇಲೆ ಅನ್ವರಿಯಲ್ಲಿ ಅವರಿಗೆಲ್ಲಾ ಸ್ವಲ್ಪ ಊಟ ಹಾಕಿಸಿ, ಅವರನ್ನು ಹೋಟೆಲಿಗೆ ಕಳಿಸಿ, ನಾವು ಕಾರ್ಯಾಲಯಕ್ಕೆ ಎರಡು ಗಂಟೆ ರಾತ್ರಿಗೆ ಬಂದು ಮಲಗಿದೆವು.

ಶೃಂಗಸಭೆ ತಡವಾಗಿ ಸೇರಿ, ಕೃಶ್ಚೇವರ ಕಟುವರ್ತನೆಯಿಂದಾಗಿ ಏನೂ ಚರ್ಚಿಸಲಾರದೆ ವಿಫಲವಾಯಿತು. ವಿಶ್ವಶಾಂತಿ ಬಿಸಿಲ್ಗುದುರೆಯಾಗೇ ಉಳಿಯಿತು.

ಮೇ ೧೭

ಇಂದು ಬೆಳಿಗ್ಗೆ ನಾಟಕದವರನ್ನು ಕಳಿಸಲು ಆಗಲಿಲ್ಲ. ಎಲ್ಲಾ ಲೆಖ್ಖಾಚಾರ ಮಾಡಿ ನೋಡುವಲ್ಲಿ ಇನ್ನೂ ನಾವು ನೂರು ರೂಪಾಯಿ ಕೊಡಬೇಕಾಗಿದೆ.

ರಾತ್ರಿ ೧೦ ರಿಂದ ಹನ್ನೆರಡರ ತನಕ ಭಾರೀ ಮಳೆ ಹೊಡೆದು, ಮೈಯೆಲ್ಲಾ ನೆನೆಸಿಕೊಂಡು, ಅನ್ವರಿಯಲ್ಲಿ ಊಟ ಮಾಡಿ ಮನೆಗೆ ಬಂದೆವು.

ಮೇ ೧೮

ನಾಟಕ ಮುಗಿದರೂ ಅದರ ಸಂಕೋಲೆಯಿಂದ ಪಾರಾಗಿಲ್ಲ. ಕೊಡುವವರೆಲ್ಲಾ ಕೊಟ್ಟರೆ, ತರುವವರಿಗೆಲ್ಲಾ ತೆತ್ತು ಮುಕ್ತನಾಗಬಹುದು. ಕೆಟ್ಟ ಅನುಭವ ಆಯಿತು.

ಸಂಜೆ ಗೆ|| ಜೆ. ಹೆಚ್‌. ಪಟೇಲರಿಗೆ ಪತ್ರ ಬರೆದು ನಾಟಕದಿಂದ ಏನೂ ಪ್ರಯೋಜನ ವಾಗಲಿಲ್ಲವೆಂದು ತಿಳಿಸಿದೆ. ರಾಜ್ಯ ಪ್ರವಾಸಕ್ಕೆ ಬರಲು ಸಾಧ್ಯವೇ ತಿಳಿಸಿ ಎಂದು ಬರೆದಿದ್ದೇನೆ.

ಸಂಜೆ ಇಂದುಶೇಖರ್ ಬಂದಿದ್ದರು. ಅವರಿಗೆ ಊರಿಗೆ ಹೊಗುವ ಯೋಚನೆ. ಅವರಿಗೂ ಈ ನಾಟಕದಿಂದ ಏನೂ ಪ್ರಯೋಜನವಾದಂತಿಲ್ಲ. ವೃಥಾ ಶ್ರಮವಾಯಿತು. ಕಾರು, ಹೋಟೇಲು ಇತ್ಯಾದಿಯವರಿಗೆ ಇದರಿಂದ ಲಾಭವಾಯಿತು.

ಮೇ ೨೬

ಸಂಜೆ ಸ್ಥಳೀಯ ಕಾರ್ಯಕರ್ತರ ಸಭೆ ಸೇರಿ ಮುಂಬರುವ ಕಾನೂನುಭಂಗಕ್ಕೆ ಸಿದ್ಧತೆ ಹಾಗೂ ಕಾರ್ಯಕ್ರಮ ಕುರಿತು ಚರ್ಚೆ ಮಾಡಿತು. ಕೆಲವು ಬಹಿರಂಗ ಸಭೆಗಳನ್ನೂ, ಪೋಸ್ಟರು, ಹಸ್ತಪತ್ರಿಕೆ, ಇತ್ಯಾದಿ ಪ್ರಚಾರಕಾರ್ಯಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಪ್ರವಾಸ ಹೊರಡುವ ವಿಷಯವಾಗಿ ಇನ್ನೂ ನಾನು ಯಾವ ತೀರ್ಮಾನಕ್ಕೂ ಬಂದಿಲ್ಲ. ಜೂನ್‌ಒಂದರ ತನಕ ಇದ್ದು ನಂತರ ಹೊರಡುವುದು ಅಥವಾ ನಾಡಿದ್ದು ಹೊರಡುವುದು ನಾಳೆ ತೀರ್ಮಾನ ಮಾಡಬೇಕು.

ಪತ್ರಿಕೆ ನಡೆಸಿಕೊಂಡು ಹೋಗುವ ಬಗ್ಗೆ ಮುಂದಿನ ವ್ಯವಸ್ಥೆ ಏನೆಂಬುದನ್ನೂ ನಿರ್ಧರಿಸಬೇಕು.

ಮೇ ೨೭

ಸಾಗರ, ಸೊರಬ, ಕ್ಷೇತ್ರದಲ್ಲಿ ಸತ್ಯಾಗ್ರಹಕ್ಕೆ ಸಿದ್ಧತೆಯಾಗುತ್ತಿದೆ, ಕೃಷ್ಣಗೋಪಾಲ, ಬರಲಿಲ್ಲ, ನಾಗಪ್ಪ ೫ರಂದು ಮಂಡ್ಯಕ್ಕೆ ಬನ್ನಿ ಎಂದು ಕರೆದಿದ್ದಾರೆ. ಇಂದೂ ಕಾರ್ಯಕ್ರಮ ಗೊತ್ತುಪಡಿಸಲಿಲ್ಲ.

ಹೊರಜಗತ್ತಿನಲ್ಲಿ ಏನೇನೋ ನಡೆಯುತ್ತಿದೆ. ಸಂ. ರಾ. ಮಂಡಲಿ ರಷ್ಯದ ಸೂಚನೆ ತಿರಸ್ಕರಿಸಿದೆ. ಚಿಲಿಯಲ್ಲಿ ನಡೆದ ಭೂಕಂಪ ಆರು ಸಾವಿರ ಜನರನ್ನು ಆಹುತಿ ತೆಗೆದುಕೊಂಡಿದೆ. ಜೊತೆಗೆ ಸಮುದ್ರದ ಅಲೆಗಳ ಒದೆತ-ಭೂಕಂಪ ಡಾಂಟೆ ವರ್ಣಿಸಿದ INFERN ಅಂತೆ ಕಾಣುತ್ತಿತ್ತೆಂದು ನೋಡಿದವರು ಹೇಳಿದ್ದಾರೆ. ೨೦ ಜನ ಡಕಾಯಿತರು ವಿನೋಬಾಗೆ ಶರಣು ಬಂದು ಸೆರೆಮನೆ ಸೇರಿದರು…. ಇತ್ಯಾದಿ ಇತ್ಯಾದಿ.

ಸತ್ಯಾಗ್ರಹ ನಡೆಯುತ್ತಿದೆ. ಬಾಲೇಶ್ವರ ದಯಾಳರು ಬಂಧಿಸಲ್ಪಟ್ಟರೆಂದು ಸುದ್ದಿ.

ರಾತ್ರಿ ರಘುರಾಮಶೆಟ್ಟಿ ಸಿಕ್ಕಿದ್ದರು. ನತದೃಷ್ಟ ತನ್ನ ತಮ್ಮನನ್ನು ಕಳೆದುಕೊಂಡು ದುಃಖಿಯಾಗಿದ್ದಾನೆ. ಬಿ. ಎ. ಕಲಿಯುತ್ತಿದ್ದವನಿಗೆ ಟೈಟಾನಸ್‌ ಆಗಿ ೧೨ ರಂದು ತೀರಿಹೋದನಂತೆ. ಊರಿಗೆ ಹೋಗಿ ಬಂದೆ ಎಂದು ಹೇಳಿದರು.

ಮೇ ೨೮

ಮೊನ್ನೆ ತಾನೆ ನೆಹರೂ ತುರ್ಕಿಯ ಮೆಂಡರೀಸ್‌ನೊಡನೆ ಮೆರವಣಿಗೆ ಹೋಗಿದ್ದರು. ಇಂದು ತುರ್ಕಿಯಲ್ಲಿ ಮಿಲಿಟರಿ ಆಡಳಿತ ಸಾರಿದ ಸುದ್ದಿ ಬಂದಿದೆ. ಅದೇ ಮೆಂಡರೀಸ್‌ ಇಂದು ಕೈದಿಯಾಗಿದ್ದಾರೆ. ಇಲ್ಲೂ ಹೀಗೆ ಆದರೆ ಆಶ್ಚರ್ಯಪಡೆಬೇಕಾಗಿಲ್ಲ! ಈಗೇನು, ಇನ್ನೊಂದು ಘಳಿಗೆಗೇನು ಎಂದು ಊಹಿಸಲು ಕೂಡಾ ಸಾಧ್ಯವಿಲ್ಲದಂತೆ ಕ್ಷಣ ಕ್ಷಣಕ್ಕೂ, ಬದಲಾವಣೆಗಳಾಗುತ್ತಿವೆ. ಮಾನವ ಇತಿಹಾಸದ ವೇಗ ಬರಬರುತ್ತಾ ಜೆಟ್‌ವೇಗ ತಾಳುತ್ತಿದೆ. ಈ ಪಂದ್ಯದಲ್ಲಿ ಹಿಂದುಳಿದ ರಾಷ್ಟ್ರಗಳ ತಾಳ-ಮೇಳವಿಲ್ಲದ ಓಟವೂ ವಿಚಿತ್ರ ಗತಿಯಲ್ಲಿ – ‘ನಾಳೆ ಬಪ್ಪುದು ಇಂದೇ ಬರಲಿ’ ಎಂದು ಸ್ವಾಗತಕ್ಕೆ ಸಿದ್ಧವಾಗಿರಬೇಕು.

ಇಂದೂ ನಿನ್ನೆಯಂತೆಯೇ ಅಖಂಡ ನಿರೀಕ್ಷೆಯಲ್ಲೇ ಕಳೆದು ಹೋಯಿತು. ಎಲ್ಲಿಂದಲೂ ಯಾವ ಸಹಾಯವೂ ಬರಲಿಲ್ಲ.

ಮೇ ೩೦

ಬೀದರಿನಿಂದ ಜೂನ್‌೧೦ ರಂದು ಸ್ವಾಮಿಯವರ ಮುಖಂಡತ್ವದಲ್ಲಿ ಒಂದು ತಂಡ ಕಾನೂನು ಭಂಗ ಮಾಡುವುದೆಂದು ಪತ್ರ ಬಂದಿದೆ.

ಸಂಜೆ ಆಂಧ್ರ ಖಾದೀ ಭಂಡಾರಕ್ಕೆ ಹೋಗಿದ್ದೆವು. ಬಟ್ಟೆಗಳೆಲ್ಲಾ ಹರಿದು ಹೋಗುತ್ತಾ ಬಂದಿವೆ. ಅಲ್ಲಿ ಸರಿಯಾದ ಪಂಚೆ ಸಿಕ್ಕಲಿಲ್ಲ. ಹಾಗೆ ಬಂದೆವು.

ಮೇ ೩೧

ಪ್ರಚಾರಕ್ಕಾಗಿ ಇಂದು ಒಂದು ಹಸ್ತಪತ್ರಿಕೆಯನ್ನು ಬರೆದು ೧೫೦೦ ಪ್ರತಿ ಅಚ್ಚು ಹಾಕಿಸಿದೆವು.

ನಾಳೆಯಿಂದ ರಾಜ್ಯದಲ್ಲಿ ಕಾನೂನು ಭಂಗ. ಬೀದರ್ ಸ್ವಾಮಿ ಮುಖಂಡತ್ವದಲ್ಲಿ ಒಂದು ತಂಡ ಕೋರ್ಟು ಪಿಕೆಟ್‌ ಮಾಡುವುದೆಂದು ಪತ್ರ ಬಂದಿದೆ. ಇಲ್ಲಿನ ತಂಡ ಚೈನ್‌ ಎಳೆದು ರೈಲನ್ನು ನಿಲ್ಲಿಸಲು ಐತಾಳರ ಮುಖಂಡತ್ವದಲ್ಲಿ ಸಿದ್ಧವಾಗಿದೆ. ಇತರ ಕಡೆಗಳಿಂದ ಸುದ್ದಿಯಿಲ್ಲ.