ಜೂನ್

ಗೊತ್ತಾದ ಪ್ರಕಾರ ಇಂದು ಕಾನೂನು ಭಂಗ ಆರಂಭವಾಯಿತು. ಬೆಂಗಳೂರಿನಲ್ಲಿ ಗೆ|| ಯಜ್ಞೇಶ್ವರ ಐತಾಳರು, ಭಕ್ತವತ್ಸಲ ಮತ್ತು ಮಾಣಿಕ್ಯಂ ತಂಡ ಕೆಂಗೇರಿಯಿಂದ ಬರುತ್ತಿದ್ದ ರೈಲಿನ ಚೈನನ್ನು ಎಳೆದು ನಿಲ್ಲಿಸಿ ಬಂಧಿಸಲ್ಪಟ್ಟರು. ಗೆ|| ಜಿ. ಎಲ್‌. ರಾಮಕೃಷ್ಣ ಒಬ್ಬನೇ ಪೂನಾ ಗಾಡಿಯ ಚೈನ್‌ ಎಳೆದು ಬಂಧನಕ್ಕೊಳಗಾದ. ಹೊಳಲ್ಕೆರೆ ಎಸ್‌. ಹನುಮಂತಪ್ಪನವರು ಕಾನೂನು ಭಂಗ ಮಾಡಿ ಬಂಧನಕ್ಕೊಳಗಾದರೆಂದು ಸುದ್ದಿ ಬಂದಿದೆ. ಬೀದರಿನಲ್ಲಿ ಗೆ|| ಆರ್. ಬಿ. ಸ್ವಾಮಿ ಮತ್ತು ತಂಡ ಕಾನೂನು ಭಂಗ ಮಾಡಿರಬೇಕು. ಇತರ ಕಡೆಗಳಿಂದ ಸುದ್ದಿ ಬಂದಿಲ್ಲ.

ಹಸ್ತ ಪತ್ರಿಕೆಗಳನ್ನು ಎಲ್ಲಾ ಕಡೆ ಕಳಿಸಿದೆವು.

ಡಾ|| ಜಿವ್ಯಾಗೋ ಕಾದಂಬರಿಯನ್ನು ಬರೆದು, ನೊಬೆಲ್‌ ಪಾರಿತೋಷಕ ಪಡೆದು, ಅದನ್ನು ತಿರಸ್ಕರಿಸಬೇಕಾಗಿ ಬಂದು ವಿಶ್ವಕವಿ, ಲೇಖಕ ಬೋರಿಸ್‌ ೩೦ರಂದು ರಾತ್ರಿ ನಿಧನರಾದರೆಂದು ಮಾಸ್ಕೋ ವಾರ್ತೆ ತಿಳಿಸಿದೆ. ಅವರಿಗೆ ೭೦ ವರ್ಷ ವಯಸ್ಸಾಗಿತ್ತು.

“ರಾಶಿಚಕ್ರದ ಗ್ರಹಗತಿ ಬದಲಾಗಬಹುದು. ಆದರೆ ಪಾಸ್ಟ್‌ರನಾಕ್‌ ಉಳಿಯುವನು ಪಾಸ್ಟ್‌ರನಾಕ್‌ ಆಗಿ”

ಜೂನ್

ಬಟ್ಟೆ ೮೦-೧೦
ಹೊಲಿಗೆ ೨-೦೦
೧೦-೧೦

ರಾಮನಗರದಲ್ಲಿ ಬಂಧನ
೨ನೇ ದಿನ.

ಇಂದು ಎರಡು ಜುಬ್ಬ ಹೊಲಿಸಿದೆ. ಬಾಸು ಒಂದು ಜುಬ್ಬ, ಪೈಜಾಮ ತೆಗೆದುಕೊಂಡರು.

ಬೆಂಗಳೂರಿನಲ್ಲಿ ಇಂದು ಸತ್ಯಾಗ್ರಹ ನಡೆಯಲಿಲ್ಲ. ಪೋಲಿಸರು ಬಹಳ ಜಾಗೃತರಾಗಿದ್ದರು. ಪ್ರೆಸ್ಸಿನವರೂ ಕುತೂಹಲದಿಂದಿದ್ದರು. ಅವರಿಗೆಲ್ಲಾ ಏನೂ ಆಗದುದು ನಿರಾಶೆ ತಂದಿರಬೇಕು.

೪ ರಂದು ಮಾಗಡಿ ರೋಡಿನಲ್ಲಿ ಬಹಿರಂಗ ಸಭೆ ಏರ್ಪಡಿಸುವುದಾಗಿ ಗೆ|| ವೆಂಕಟರಮಣ ಒಪ್ಪಿಕೊಂಡಿರುತ್ತಾರೆ. ಅಂದು ಸಾಧ್ಯವಾದರೆ ಅಲ್ಲಿನ ಒಂದು ತಂಡ ಗೋಡೌನ್‌ ಮುತ್ತಿಗೆ ಹಾಕಲು ಪ್ರಯತ್ನಿಸಬೇಕೆಂದು ವಿಚಾರ ಮಾಡಲಾಯಿತು.

ಐದರಂದು ನಾನು ಮಂಡ್ಯಕ್ಕೆ ಹೋಗಬೇಕು. ವೆಂಕಟರಾಂ. ಇಂದು ಸಿಕ್ಕಿದ್ದರು. ರಾಮನಗರದಲ್ಲಿ ಇಂದು ಜನ ಸತ್ಯಾಗ್ರಹ ಮಾಡುವರೆಂದು ಹೇಳಿದರು. ನಂತರ ಪೋಲಿಸರ ಸುದ್ದಿ ಪ್ರಾಕಾರ ಮಧ್ಯಾಹ್ನದ ಹೊತ್ತಿಗೆ, ಸತ್ಯಾಗ್ರಹ ಮಾಡಿದ್ದಾರೆಂದು ತಿಳಿಸಿದರು. ಬೀದರಿನಿಂದ ಸುದ್ದಿ ಇನ್ನೂ ಬಂದಿಲ್ಲ.

ಹೈದರಾಬಾದಿನಿಂದ ಗೆ|| ಪಿಟ್ಟಿ ಮತ್ತು ಇತರರು ಬಂಧಿಸಲ್ಪಟ್ಟರೆಂದು ಸುದ್ದಿ ಬಂದಿದೆ. ಡಾ. ಲೋಹಿಯಾರವರ ಹೇಳಿಕೆಯೂ ಇದೆ. ೧೦೭ ನೇ ಕಲಂ ಅನ್ವಯಿಸಬಾರದೆಂದು ಹೇಳಿದ್ದಾರೆ. ಆಂಧ್ರದಲ್ಲಿ ೩೫೦ಕ್ಕೂ ಮೇಲೆ ಇದುವರೆಗೂ ಬಂಧನ ಆಗಿದೆ ಎಂದು ನಮ್ಮ ವಕ್ತಾರರು ಹೇಳಿದ್ದಾರೆ.

ಸಂಜೆ ಶ್ರೀ ಜಯಶೀಲರಾವ್‌, ಸತ್ಯನಾರಾಯಣ, ತಾಯಿನಾಡು ಪ್ರತಿನಿಧಿ ಬಂದಿದ್ದರು.

ಜೂನ್

ಇಂದೂ ಬೆಂಗಳೂರಿನ ಗೆಳೆಯರು ಕಾನೂನಭಂಗ ಮಾಡಲಿಲ್ಲ. ಹೊರಗಡೆಯೂ ಎಲ್ಲೂ ರಾಜ್ಯದಲ್ಲಿ ಕಾನೂನಭಂಗ ಮಾಡಿದ್ದ ಸುದ್ದಿ ಬಂದಿಲ್ಲ.

ಒಂದನೇ ತಾರೀಖೇ ಬೀದರಿನಲ್ಲಿ ೧೪ ಜನರು ಸತ್ಯಾಗ್ರಹ ಮಾಡಿ ಬಂಧಿಸಲ್ಪಟ್ಟರೆಂದು ಇಂದು ಪತ್ರಿಕಾ ವರದಿಗಳು ಬಂದಿವೆ.

ಮಂಡ್ಯದಿಂದ ನಾಗಪ್ಪನವರು ಹತ್ರು ರೂ ಎಂ.ಒ. ಕಳಹಿಸಿದ್ದಾರೆ. ಐದರಂದು ಮಂಡ್ಯಕ್ಕೆ ಹೋಗುವುದು ಖಚಿತವಾದಂತಾಯಿತು.

ದಿನವೆಲ್ಲಾ ಕಾರ್ಯಾಲಯದಲ್ಲೇ ಕಳೆದೆ. ಬಾಸು ಮಧ್ಯಾಹ್ನ ಜ್ವಾಲಾಮುಖಿಯಲ್ಲಿ ಕಳೆದರು.

ಮಧ್ಯಾಹ್ನ ಒಂದು ಅವಮಾನಕರ ಪ್ರಸಂಗವನ್ನು ಹೇಗೋ ಪರಿಹರಿಸಿಕೊಂಡುದಾಯಿತು.

ಪೋಲಿಸರು – ಪ್ರೆಸ್ಸು ಅವರ ಕತೂಹಲ ಇಂದೂ ಹೆಚ್ಚಾಗಿತ್ತು. ನಾಳೆ ಮಾಗಡಿ ರೋಡಿನಲ್ಲಿ ಸಭೆಯಾಗಲೀ, ಸತ್ಯಾಗ್ರಹವಾಗಲೀ ನಡೆಯುವಂತೆ ಕಾಣಲಿಲ್ಲ. ಅವರು ಯಾರೂ ಇಂದು ಸಿಕ್ಕಲೇ ಇಲ್ಲ. ಗೆ|| ವೆಂಕಟರಾಂ, ಶ್ರೀರಾಮಯ್ಯ, ಮಾಧವನ್‌ ಇವರೂ ಸಿಕ್ಕಲಿಲ್ಲ. ಬೆಂಗಳೂರಿನಲ್ಲಿ ಆರಂಭದ ನಂತರ ಏನೂ ನಡೆಯದಿರುವುದು ಅಸಮಾಧಾನಕರ.

ಸಂಜೆಗೆ ಗೆಳೆಯ ಶಿವಣ್ಣ ಮತ್ತು ಮುನಿವೆಂಕಟರಮಣ ಬಂದಿದ್ದರು.

ಅವರೊಡನೆ ರಾತ್ರಿ ಊಟ ಮಾಡಿ ಮಾತನಾಡಿದೆ.

ಜೂನ್

ರಾಮನಗರದಲ್ಲಿ ಸತ್ಯಾಗ್ರಹ

ನಾಲ್ಕನೆಯ ದಿನವಾದ ಇಂದೂ ಸತ್ಯಾಗ್ರಹ ನಡೆಯಲಿಲ್ಲ. ಮಂಡ್ಯದಿಂದ ಪತ್ರ ಬಂದಿದೆ. ನಾಳೆ ಸಭೆಯಿರುವುದಾಗಿಯೂ ಬಾಸು ಮತ್ತು ನಾನು ಬರಲೇಬೇಕೆಂದು ಬರೆದಿದ್ದಾರೆ. ನಾಳೆ ೧೦ ಗಂಟೆಯ ಬಸ್ಸಿಗೆ ಹೋಗಲು ನಿಶ್ಚಯಿಸಲಾಗಿದೆ.

ಬೀದರಿನಿಂದ ಒಂದು ಪತ್ರ ಬಂದಿದೆ. ೧೯ ಜನರು ಒಂದನೇ ತಾರೀಖು ಬಂಧಿಸಲ್ಪಟ್ಟ ಬಗ್ಗೆ ವಿವರ ಹಿಂದಿಯಲ್ಲಿ ನೀಡಿರುತ್ತಾರೆ. ಮತ್ರೊಂದು ಪತ್ರ ಕುಶಾಲನಗರದಿಂದ ಗೆ|| ಕೆ. ಸಿ. ಹುಸೇನ್‌ ಬರೆದಿರುತ್ತಾರೆ. ಪುಸ್ತಕ ಕಳಿಸಿ, ಸದಸ್ಯರನ್ನು ಮಾಡಿ ಪಾರ್ಟಿ ಯೂನಿಟ್ಟು ತೆರೆಯುತ್ತೇವೆ ಎಂದು ಮಲೆಯಾಳಿಯಲ್ಲಿ ಬರೆದಿರುತ್ತಾರೆ. ಗೆ|| ಶಿವಾನಂದನಿಂದ ಪೋಸ್ಟರು ಮಾಡಿ ಕಳಿಸಿ ಎಂದು ಪತ್ರ ಬಂದಿದೆ. ದಿನವೆಲ್ಲಾ ಕಾರ್ಯಾಲಯದಲ್ಲೇ ಕಳೆಯಿತು.

ಸಂಜೆ ಶ್ರೀ ಕಾರಿಗನೂರು ಪಟೇಲರು ಬಂದರು. ಜಯಣ್ಣ ಬರುವ ಸಂಭವವಿಲ್ಲವೆಂದು ತಿಳಿಸಿದ್ದರು.

ಈ ವಾರದ “ಪ್ರಪಂಚ” ಪತ್ರಿಕೆಯಲ್ಲಿ ಡಾ|| ಲೋಹಿಯಾರವರ ಸ್ಟಂಟ್‌ಎಂಬ ಲೇಖನ ಕೆಟ್ಟ ರೀತಿಯಲ್ಲಿ ಬರೆದಿದ್ದಾರೆ.

“ಜ್ವಾಲಾಮುಖಿ”ಯಲ್ಲಿ ನನ್ನ ಹೇಳಿಕೆ ಬಂದಿದೆ. ಕಾನೂನುಭಂಗ ಮಾಡಿ ಸೆರೆಮನೆ ಸೇರಿ ಎಂದು ಕೃಶ್ವೇವ್‌ ಐಕ್‌ರನ್ನು ತುಂಬಾ ಹೀಗಳೆದಿದ್ದಾರೆ. ಹಿಟ್ಲರನು ಪುನರಾವತಾರವೋ ಎಂಬಂತೆ ಅವರ ಮಾತನ್ನು ಕೇಳಿದರೆ ಭಯವಾಗುತ್ತೆ. ಯುದ್ಧವೋ ಶಾಂತಿಯೋ?

ಜೂನ್

ರಾತ್ರಿ ಮುಂಚೆ ಮಲಗಿದ್ದರಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಎಚ್ಚರಾಯಿತು. ಕೆಲ ಹೊತ್ತು ಹಾಗೇ ಹೊರಳಾಡುತ್ತಿದ್ದು ಐದಕ್ಕೆ ಎದ್ದೆ. ಮಾಡಲು ಏನೂ ತೋಚಲಿಲ್ಲ. ಅದೂ ಇದೂ ಓದುತ್ತಾ ಕಳೆದೆ. ಸುಬ್ಬಣ್ಣನವರಿಗೆ ೧೫ರೂ. ತಂದುಕೊಡಲು ಹೇಳಿದೆ. ನಂತರ ಕ್ರಾಪ್‌ ಕಟ್‌ ಮಾಡಿಸಲು ಹೋದೆ. ಬಾನವಾರವಾದ್ದರಿಂದ ಬಹಳ ಜನರಿದ್ದರು. ಅಂತೂ ಕಾದು ೧೦=೨೦ಕ್ಕೆ ಮುಗಿಸಿಕೊಂಡು ಬಂದೆ. ಬಾಸು ಮನೆಗೆ ಹೋಗಿ ಬಂದರು. ೧೨ರ ಹೊತ್ತಿಗೆ ಹೊರಟು, ಚಾಮುಂಡೇಶ್ವರಿ ಭವನದಲ್ಲಿ ಸ್ವಲ್ಪ ಅನ್ನ ತಿಂದು ಆಟೋರಿಕ್ಷಾದಲ್ಲಿ ಕಲಾಸಿಪಾಳ್ಯಂಗೆ ಹೋಗಿ ಒಂದು ಗಂಟೆ ಬಸ್ಸಿಗೆ ಹೊರಟು ಮಂಡ್ಯಕ್ಕೆ ಹೋದೆವು.

ಗೆಳೆಯ ನಾಗಪ್ಪನವರು ಕಾರ್ಯಾಲಯದಲ್ಲಿದ್ದರು. ಅಲ್ಲಿಂದ ಬಂಗಲೆಗೆ ಹೋದೆವು. ಸ್ವಲ್ಪಕಾಲ ವಿಶ್ರಾಂತಿ ತೆಗೆದುಕೊಂಡು ಸ್ನಾನ ಮಾಡಿ ಕಾಫಿ, ತಿಂಡಿ ಮುಗಿಸಿದೆವು.

೬-೨೦ರಿಂದ ೯-೩೦ರ ತನಕ ಸಭೆ ನಡೆಯಿತು. ಜನ ಸೇರಿದ್ದರು. ಗೆ|| ಬೆಟ್ಟ ಶೆಟ್ಟರು ಅಧ್ಯಕ್ಷತೆ ವಹಿಸಿದ್ದರು. ಲಿಂಗಯ್ಯನ ಸ್ವಾಗತ ಭಾಷಣ. ನಾಗಪ್ಪನವರ ಪ್ರಾಸ್ತಾವಿಕ ಭಾಷಣ. ಬಾಸುರವರ ಭಾಷಣ ಆದ ಮೇಲೆ ನಾನು ಮಾತನಾಡಿದೆ. ಹೋರಾಟದ ಉದ್ದೇಶ ಸ್ವರೂಪ, ಬೇಡಿಕೆಗಳು ಇತ್ಯಾದಿ ವಿಷಯಗಳನ್ನೆಲ್ಲಾ ಸವಿಸ್ತಾರವಾಗಿ ತಿಳಿಸಲಾಯಿತು.

ಊಟ ಮಾಡಿ ಬಂಗಲೆಗೆ ಹೋದೆವು. ಶ್ರೀ ಲಕ್ಕಪ್ಪನವರು ಸಿಂಗಾರಿಗೌಡರು ಸಿಕ್ಕಿ ಕ್ಷೇಮ ಸಮಚಾರ ಮಾತನಾಡಿದೆವೆ.

ಜೂನ್

ಮಂಡ್ಯ ಗೆಳೆಯರಿಂದ ಜಮಾ ೮೦ ರೂ.

ಮೈಸೂರಿನಿಂದ ರೆವಿನ್ಯೂ ಶ್ರೀ ಕಡಿದಾಳರು ಕೆರೆ ಅಂಗಳದಲ್ಲಿ ಮನೆ ಸೈಟು ಕೊಡುವ ಬಗ್ಗೆ ಇದ್ದ ತಕರಾರು ಕೇಳಲು ೯ ಗಂಟೆ ಹೊತ್ತಿಗೆ ಬಂದರು. ಡಿ.ಸಿ. ಇತ್ಯಾದಿ ದೊಡ್ಡ ಗುಂಪು ಸೇರಿತ್ತು. ನಾವು ಎಲ್ಲರು ನಾಟಾಯಾರ್ಡ್‌ ಕೇಳುವ ಸಲುವಾಗಿ ಹೋದೆವು. ಅನ್‌ ಆಥರೈಸ್ಡ್‌ ಆಕ್ಯೂಪೇಶನ್‌ ಬಗ್ಗೆ ಸರಕಾರ ನಿಷ್ಠುರವಾಗಿರುವುದಾಗಿ ತಿಳಿಸಿದರು. ಬಿಸಿ ಬಿಸಿ ಮಾತುಗಳಾದವು. ಅಹವಾಲು ಕೇಳಿಕೊಂಡು ಹೋದರು.

ಗೆ|| ಪಟೇಲರಿಂದ ಪತ್ರ ಬಂದಿತ್ತು. ಅದಕ್ಕೆ ಉತ್ತರವಾಗಿ ಬನ್ನಿ ಎಂದು ಬರೆದೆ. ಗುಲ್ಬರ್ಗದಿಂದ ವೀರಣ್ಣ ಪತ್ರ ಬರೆದು, ಅಮರಸಿಂಹ ರಾಠೋಡರು, ಭೂಸನೂರ ಇವರು ೩ ರಂದು ಸಂಜೆ ಗೊಡೌನು ಸತ್ಯಾಗ್ರಹ ಮಾಡಿದರೆಂದೂ, ರಾಮನಗರದವರು ಸತ್ಯಾಗ್ರಹ ಮಾಡಿದರೆಂದೂ ಅರೆಸ್ಟ್‌ಮಾಡಲಿಲ್ಲವೆಂದು – ಇತ್ಯಾದಿ ಪತ್ರ ಬಂದಿವೆ.

ಜೂನ್

ರಾತ್ರಿ ಸಾಗರದಿಂದ ತಿಮ್ಮಪ್ಪ ಕಾರು ಕಳಿಸಿ ಸತ್ಯಾಗ್ರಹಿಗಳು ಉಪವಾಸ ಆರಂಭಿಸಿದ್ದಾರೆಂದು ತಿಳಿಸಿದ್ದಾನೆ. ಬೇರೆಲ್ಲೂ ಸತ್ಯಾಗ್ರಹ ಆದ ಸುದ್ದಿ ಬಂದಿಲ್ಲ. ತಿಮ್ಮಪ್ಪನ ಕಾರ್ಡು ಪ್ರಕಾರ ೪ರಂದು ೮ ಜನ ಸಾಗರದಲ್ಲಿ ಬಂಧಿಸಲ್ಪಟ್ಟರೆಂದು ತಿಳಿಯುತ್ತೆ, ಬೀದರಿನಿಂದ ಎರಡು ಕಾಗದ ಬಂದಿವೆ. ಧನಿಕಲಾಲ್‌ಮಂಡಲರು ಗುಲ್ಬರ್ಗಕ್ಕೆ ಹೋಗಿ ಬಂದ ವಿಷಯ ಬರೆದಿರುತ್ತಾರೆ.

ಸಂಜೆ ಆಫೀಸು ಎದರು ಪಿ. ಎಸ್‌. ಪಿ. ಸಭೆಯಿತ್ತು. ಎಸ್‌. ಎಂ. ಜೋಷಿ ಇತ್ಯಾದಿ ಮುಖಂಡರು ಭಾಷಣ ಮಾಡಿದರು. ಜನರು ಹೆಚ್ಚು ಸೇರಿರಲಿಲ್ಲ.

ಜೂನ್

ಬೆಳಿಗ್ಗೆ ಎದ್ದು ಕುಳಿತಿದ್ದೆನೆಷ್ಟೆ. ಒಮ್ಮೆಗೇ ಗೆ|| ಸಿ. ಜಿ. ಕೆ. ಯವರು ಬಂದರು. ಹರ್ಷ ಆಶ್ಚರ್ಯಗಳಿಂದ ಅವರನ್ನು ಬರಮಾಡಿಕೊಂಡು ಕಾಫಿ ಕುಡಿದು ಕ್ಷೇಮ ಸಮಾಚಾರ ವಿಚಾರಿಸಿದೆ. ಮಧ್ಯಾಹ್ನ ಎಲ್ಲಿಯಾದರೂ ಊಟ ಮಾಡೋಣವೆಂದಿದ್ದರು. ವಿಕ್ಟೋರಿಯಾಕ್ಕೆ ಹೋಗಿ ಊಟ ಮಾಡಿ ಬಂದೆವು. ಅವರ ಬೇಟಿ ೫೯ ರ ಜನವರಿಯಲ್ಲಿ ಮದರಾಸಿನಲ್ಲಾಗಿತ್ತು.

ಜೈಲಿನಿಂದ ಬಿಡುಗಡೆಯಾಗಿ ಗೆ|| ಐತಾಳ, ಭಕ್ತವತ್ಸಲ ಮತ್ತು ಮಾಣಿಕ್ಯಂ ಸಂಜೆ ಬಂದರು. ಒಂದೆರಡು ದಿನ ಉಪವಾಸ ಬೀಳಬೇಕಾಯಿತೆಂದೂ ನಂತರ ಉತ್ತಮ ಆಹಾರ ವ್ಯವಸ್ಥೆ ಮಾಡಿದರೆಂದೂ ತಿಳಿಸಿದರು.

ಗೆ|| ರಾಮಕೃಷ್ಣನ ಕೇಸು ೧೩ ಕ್ಕೆ ಹೋಯಿತೆಂದು ತಿಳಿಯಿತು.

ಮೋಟೇಬೆನ್ನೂರು ಗುಡ್ಡಪ್ಪನವರು ಧಾರವಾಡ ಜಿಲ್ಲಾ ಸಿದ್ಧತೆ ತಿಳಿಸಿದ್ದಾರೆ. ಗರಗ, ಉಪ್ಪನಬೆಟಗೇರಿ, ಹುಬ್ಬಳ್ಳಿ ಇತ್ಯಾದಿ ಕಡೆ ಸಭೆಗಳಾದವೆಂದು ತಿಳಿದು ಬಹಳ ಸಂತೋಷವಾಯಿತು.

ಜೂನ್

ಸಾಕ್ಷಿ ಹೇಳಿದೆ.

ಶ್ರೀ ಹೇಮಣ್ಣನವರು – ಜಮಾ (ನಾಟಕದ ಬಾಬ್ತು) ೧೫.

ಬೆಳಗ್ಗೆ ಎದ್ದು ಪತ್ರಿಕೆ ನೋಡಿದರೆ ಡಾ. ಲೋಹಿಯಾಗೆ ಕಲ್ಲಿನೇಟು ಎಂದು ಇತ್ತು. ಕೊಯಂಬತ್ತೂರಿನಲ್ಲಿ ಸಭೆಯಲ್ಲಿ ಮಾತನಾಡುತ್ತಿದ್ದಾಗ ತಮಿಳಿನಲ್ಲಿ ಮಾತನಾಡಲು ಹೇಳಿ – ಹಿಂದಿ ವಿರುದ್ಧ ಕಲ್ಲು ಹೊಡೆದಿದ್ದಾರೆ. ಈ ಪ್ರಸಂಗ ವಿಷಾದಕರ ಮಾತ್ರವಲ್ಲ ಖಂಡನೀಯ. ಪತ್ರಿಕೆಗೂ ಇಂದು ಹೇಳಿಕೆಯಿತ್ತು, ಶ್ರೀ ರಾಜಾಜಿಯನ್ನು ಹಿಂದಿಯಲ್ಲಿ ಮಾತನಾಡಲು ಪಾಟ್ನಾ ಜನತೆ ಕೇಳುವುದು ಎಷ್ಟು ಅನುಜಚಿತವೋ, ಡಾ|| ಲೋಹಿಯಾರನ್ನು ತಮಿಳಿನಲ್ಲಿ ಮಾತನಾಡಿ ಎನ್ನುವುದು ಅಷ್ಟೇ ಅನುಚಿತ. ಈ ಮನೋಭಾವ ದೇಶವನ್ನು ಇಬ್ಭಾಗವಾಗಿಸಲು ನಾಂದಿಯಾಗುತ್ತೆ. ಇದು ಖಂಡನೀಯ.

ಜೂನ್೧೨

ಮಧ್ಯಾಹ್ನ ಗೆಳೆಯರಾದ ಶ್ರೀರಾಮಯ್ಯ, ವೆಂಕಟರಾಂ, ಮಾಧವನ್‌, ಅಂಜನಿ, ಲತೀಫ್‌ಸಾಹೇಬ್‌ಯಲಹಂಕ ಇತ್ಯಾದಿ ಗೆಳೆಯರೆಲ್ಲಾ ಸೇರಿ ಬೆಂಗಳೂರಿನಲ್ಲಿ ೧೬ ರಿಂದ ೨೪ ರ ತನಕ ಬಹಿರಂಗ ಸಭೆಗಳನ್ನು ಏರ್ಪಡಿಸಿರುವ ವಿಷಯ ಚರ್ಚಿಸಿ ಸ್ಥಳ, ತಾರೀಖು, ಅಧ್ಯಕ್ಷತೆ ವಹಿಸುವವರು ಮುಂತಾದ ವಿವರಗಳನ್ನೆಲ್ಲಾ ತೀರ್ಮಾನಿಸಲಾಯಿತು.

ಮಂಡ್ಯದವರು ಕೊಟ್ಟಿದ್ದ ೪೦ ರೂ. ಗಳಲ್ಲಿ ಕಳೆದ ಒಂದು ವಾರದಿಂದ ಕಾಲ ಹಾಕಿದ್ದಾಯಿತು. ಇಂದು ಯಾವ ಹಣವು ಬರಲಿಲ್ಲ.

ಮಾರ್ಗದರ್ಶಿ ಎರಡನೇ ಪುಟ ಕಂಪೋಸಾಗಿದೆ. ಇನ್ನು ಎರಡು ಪುಟ ಆಗಬೇಕು.

ಡಾ|| ಲೋಹಿಯಾರವರು ಭಾಷಣ ಮಾಡದಂತೆ (ಹಿಂದಿಯಲ್ಲಿ) ಮದರಾಸಿನಲ್ಲಿ ತಮಿಳರು ಅಡ್ಡಿಪಡಿಸಿದ್ದಾರೆ. ಮತ್ತೆ ಭಾಷಣ ಮುಂದುವರಿಸಲು ಬಿಟ್ಟಿಲ್ಲ.

ಜೂನ್೧೩

ಬರುವಷ್ಟರಲ್ಲಿ ಜೋಡಿ ಉರಗಹಳ್ಳಿಯ (ಬಿಡದಿ) ರೈತರು ತಮ್ಮ ಇನಾಂದಾರರಿಂದ ತಮಗಾಗಿರುವ ಅನ್ಯಾಯದ ವಿಷಯ ತಿಳಿಸಲು ಬಂದಿದ್ದರು. ಅವರೊಡನೆ ವಿಷಯವನ್ನೆಲ್ಲಾ ಮಾತನಾಡಿಕೊಂಡು ರೆವಿನ್ಯೂ ಮಂತ್ರಿ ಕಡಿದಾಳರಲ್ಲಿ ಹೋಗಿ ಮನೆಯಲ್ಲಿ ಕಂಡೆವು ಮಲೆನಾಡಿನ ಪ್ರವಾಸದಿಂದ ಹಿಂತಿರುಗಿದ್ದು ಆಯಾಸವಾಗಿರುವುದರಿಂದ ನಾಳೆ ಬಂದರೆ ಯಾವುದೂ ಮಾತನಾಡೋಣ ಎಂದಿದ್ದರಿಂದ ಹಾಗೆ ಬಂದೆವು.

ಜೂನ್೧೪

ಉರಗಹಳ್ಳಿ ರೈತರಿಂದ ಜಮಾ ೩೦ ರೂ. ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಂಡು ಉರಗಹಳ್ಳಿ ರೈತರನ್ನು ಕರೆದುಕೊಂಡು ಗೆ|| ಮುನಿವೆಂಕಟರಮಣರವರ ಆಫೀಸಿಗೆ ಹೋದೆ. ಇನಾಂ ಕೇಸಿನ ವಿಷಯ ಮಾತನಾಡಿ ಅವರಿಂದ ಒಂದು ಅರ್ಜಿ ಡ್ರಾಫ್ಟ್‌ ಮಾಡಿಸಿಕೊಂಡು ಅದನ್ನು ಟೈಪ್‌ ಮಾಡಿಸಿಕೊಂಡು ಎಲ್ಲರೂ ರೆವಿನ್ಯೂ ಮಂತ್ರಿಗಳ ಮನೆಗೆ ಹೋದೆವು. ರೆವಿನ್ಯೂ ಮಂತ್ರಿಗಳು ಮನೆಯಲ್ಲಿರಲಿಲ್ಲ. ಮಧ್ಯಾಹ್ನ ಬರುತ್ತಾರೆಂದು ತಿಳಿಯಿತು. ಮಧ್ಯಾಹ್ನ ಮತ್ತೆ ಹೋಗುವಷ್ಟರಲ್ಲಿ ಅವರು ಆಫೀಸಿಗೆ ಹೊರಟಿದ್ದರು. ಮತ್ತೆ ರಾತ್ರಿ ಹೋಗಿ ಕೇಸಿನ ವಿಷಯ ಚರ್ಚಿಸಿದೆವು. ಅವರು ಏನೂ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲವೆಂದು ತಿಳಿಸಿದರು. ಹೋಗುವಾಗ ಗೆ|| ಮುನಿವೆಂಕಟರಮಣರನ್ನು ಕರೆದುಕೊಂಡು ಹೋಗಿದ್ದೆ. ಬರುತ್ತಾ ಅವರೊಡನೆ ಕಲಾ ಕೆಫೆಯಲ್ಲಿ ಊಟಮಾಡಿ ಬಂದೆ.

ಬೆಂಗಳೂರು ಗೆಳೆಯರು ಕಣ್ಣನ್‌ ಸಮಾವೇಶದ ಬಗೆಗೆ ಕೊಟ್ಟ ಹೇಳಿಕೆ ಜನವಾಣಿಯಲ್ಲಿ ಬಂದಿದೆ.

‘ಮಾರ್ಗದರ್ಶಿ’ ಎರಡು ಪೇಜು ಅಚ್ಚಾಗಿದೆ. ಉಳಿದ ಎರಡು ಪೇಜು ನಾಳೆ ಅಚ್ಚು ಹಾಕಿಸಬೇಕು. ಕಂಪೋಸಾಗುತ್ತಿದೆ.

ಜೂನ್೧೫

ಮಾಗಡಿ ರಸ್ತೆಯಲ್ಲಿ ಸಭೆ. ಮಾಧವನ್‌ರಿಂದ ಜಮಾ (ನಾಟಕ) ಹತ್ತು ರೂ.

ಉರಗಹಳ್ಳಿ ರೈತರಿಂದ ಹಸ್ತಪತ್ರಿಕೆಗಾಗಿ ಜಮಾ ೫ ರೂ.

ಉರಗಹಳ್ಳಿ ರೈತರು ತಮ್ಮ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ೧ ಗಂಟೆಗೆ ಬಹಿರಂಗ ಸಭೆ ಕರೆಯುವುದಾಗಿಯೂ, ನಾನು ಮತ್ತು ಇತರ ಗೆಳೆಯರು ಇಲ್ಲಿಂದ ಬರಬೇಕೆಂದು ತಿಳಿಸಿ, ಹಸ್ತಪತ್ರಿಕೆ ಅಚ್ಚು ಹಾಕಿಸಲು ಐದು ರೂ. ಮುಂಗಡ ಹಣ ಕೊಟ್ಟು ಊರಿಗೆ ಹನ್ನೊಂದರ ರೈಲಿಗೆ ಹೋದರು. ಮೇಸ್ಟ್ರು ಇಲ್ಲೇ ಉಳಿದುಕೊಂಡಿದ್ದಾರೆ. ಉರಗಹಳ್ಳಿ ಇನಾಂದಾರರು ಈ ರೈತರಿಗೆ ವಿಶ್ವಾಸಘಾತ ಮಾಡಿರುತ್ತಾರೆಂಬ ಬಗೆಗೆ ಇತ್ತ ಸುದ್ದಿ ಇಂದು ‘ಜನಪ್ರಿಯ’, ‘ಜನವಾಣಿ’ಗಳಲ್ಲಿ ಪ್ರಕಟವಾಗಿದೆ.

ಸಂಜೆ ಮಾಗಡಿ ರಸ್ತೆಯಲ್ಲಿ ವೆಂಕಟರಾಂರವರ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆ ಸೇರಿತ್ತು. ಗೆ|| ಮಾಧವನ್‌ ಮತ್ತು ಬಾಸು ಕೃಷ್ಣಮೂರ್ತಿಯವರ ಭಾಷಣಗಳ ನಂತರ ನಾನು ಮಾತನಾಡಿದೆ. ನಂತರ ಗೆ|| ಬಿ. ಕೆ. ಶ್ರೀರಾಮಯ್ಯನವರು ಮಾತನಾಡಿದರು. ಸಾಕಷ್ಟು ಜನರು ಸೇರಿದ್ದರು. ಕಾನೂನುಭಂಗ ಚಳವಳಿಯ ಪ್ರಗತಿಯನ್ನು ತಿಳಿಸಿ ಎಲ್ಲರೂ ತಮ್ಮ ಬೆಂಬಲ ನೀಡಬೆಕೆಂದು ಕೇಳಿಕೊಳ್ಳಲಾಯಿತು. ನಾಳೆ ಶ್ರೀರಾಮಪುರದಲ್ಲಿ ಸಭೆ ಕರೆಯಲಾಗಿದೆ.

ಬೀದರಿನಿಂದ ಒಂದು, ಗುಲ್ಬರ್ಗದಿಂದ ಒಂದು ಪತ್ರ ಬಂದಿವೆ. ಕಾನೂನುಭಂಗ ಮಾಡಿದ ವಿಷಯ ಎಲ್ಲಿಂದಲೂ ಬಂದಿರುವುದಿಲ್ಲ.

ಜೂನ್೧೯

ಚಿಕ್ಕಲಾಲ್‌ಬಾಗಿನಲ್ಲಿ ಸಭೆ.

ನಿನ್ನೆ ರಾತ್ರಿ ೧೨ ಗಂಟೆಯ ನಂತರ ಗೆ|| ಪಟೇಲರು ಬಂದರು. ಎಲ್ಲೂ ಹೋಟೆಲಿನಲ್ಲಿ ರೂಂ ಸಿಕ್ಕದೆ ಊರೆಲ್ಲಾ ಕಾರಿನಲ್ಲಿ ಸುತ್ತಿ ಬಂದರೆಂದು ತಿಳಿದೆ. ರಾತ್ರಿ ಎಲ್ಲಾ ಇಲ್ಲೇ ಮಲಗಿದ್ದು, ಬೆಳಿಗ್ಗೆ ಎದ್ದು ಅವರ ತಂಗಿಯ ಮನೆಗೆ ಹೋಗಿ ಸ್ನಾನಾದಿಗಳನ್ನು ಪೂರೈಸಿಕೊಂಡು ಬಂದರು.

ಮಧ್ಯಾಹ್ನದವರೆಗೂ ಮಲಗಿಯೇಯಿದ್ದೆ : ಆಮಶಂಕೆ ತೀವ್ರವಾಗಿದ್ದು, ನಿಶ್ಯಕ್ತಿ ಬಹಳವಿತ್ತು. ಆದರೂ ಮಧ್ಯಾಹ್ನ ಗೆಳೆಯ ಪಟೇಲ್‌, ಬಾಸು, ಸುಗಟೂರು ಇವರೊಂದಿಗೆ ವಿಕ್ಟೋರಿಯಾಕ್ಕೆ ಹೋಗಿದ್ದು ಅಲ್ಲೇ ಬ್ರೆಡ್‌ಇತ್ಯಾದಿ ತಿಂದು ಬಂದೆವು. ಸಂಜೆ ಸಭೆಯಿದ್ದುದರಿಂದ ವಿಶ್ರಾಂತಿ ಸಾಧ್ಯವಾಗಲಿಲ್ಲ. ಕ್ಷೌರ ಸ್ನಾನ ಮಾಡಿಕೊಂಡು ಸಭೆಗೆ ಸಿದ್ಧವಾದೆ.

ಜನರು ಅಷ್ಟಾಗಿ ಸೇರಿರಲಿಲ್ಲ. ಕಾರಣ ಸಾಕಷ್ಟು ಪ್ರಚಾರವಿಲ್ಲದುದು. ಪತ್ರಿಕೆಗಳಲ್ಲಿ ಪ್ರಕಟಣೆ ಕೂಡ ಕೊಡಲು ಆಗಲಿಲ್ಲ. ಗೆ|| ವೆಂಕಟರಾಂ, ಬಾಸು, ಶ್ರೀರಾಮಯ್ಯ, ಹೆ. ಹೆಚ್‌. ಪಟೇಲ್‌ ಮತ್ತು ನಾನು ಮಾತನಾಡಿ ಬೇಡಿಕೆಗಳು ಮತ್ತು ಹೋರಾಟದ ಮಹತ್ವ ವಿವರಿಸಿದೆವು. ಸಂಜೆ ೬-೩೦ರಿಂದ ಸಭೆ ೮-೪೦ರ ತನಕ ನಡೆಯಿತು.

ಜೂನ್೨೦

ಉರಗಹಳ್ಳಿಯಿಂದ ಶ್ರೀ ಲಿಂಗೇಗೌಡರು ಮತ್ತಿತರರು ಬೆಳಿಗ್ಗೆ ರೈಲಿಗೆ ಬಂದು, ಸಂಜೆ ಗೆಳೆಯ ಮುನಿವೆಂಕಟರಮಣರೊಡನೆ ಮಾತನಾಡಿಕೊಂಡು ಊರಿಗೆ ಹೋಗಿದ್ದಾರೆ. ಗುರುವಾರ ಬೆಳಗ್ಗೆ ಎಲ್ಲರೂ ಬರುವುದಾಗಿಯೂ ಅಂದೇ ಸಾಮೂಹಿಕವಾಗಿ ಮುಖ್ಯ ಮಂತ್ರಿಗಳಿಗೆ ಒಂದು ಮನವಿಪತ್ರ ಸಲ್ಲಿಸಬೇಕೆಂದೂ ತೀರ್ಮಾನಿಸಿದೆವೆ. ಅವಶ್ಯಕವಿದ್ದಲ್ಲಿ ಎಲ್ಲರಿಂದಲೂ ಅಪೀಲು ಹಾಕಿಸುವುದೆಂತಲೂ ತೀರ್ಮಾನಿಸಿಲಾಯಿತು.

ಈ ಸಂಬಂಧ ನಾನು ಬೆಳಿಗ್ಗೆ ರೆವಿನ್ಯೂ ಮಂತ್ರಿ ಶ್ರೀ ಕಡಿದಾಳರನ್ನು ಅವರ ಛೇಂಬರಿನಲ್ಲಿ ಕಂಡು ಸಭೆಯ ತೀರ್ಮಾನಗಳನ್ನು ಅಲ್ಲಿನ ನಿಜಸ್ಥಿತಿಯನ್ನು ವಿವರಿಸಿದೆ. ಸರಕಾರ ಏನೂ ಮಧ್ಯಪ್ರವೇಶ ಮಾಡುವುದು ಸಾಧ್ಯವಿಲ್ಲವೆಂಬುದು ಅವರ ನಿಲುವಾಗಿದೆ. ಕೋರ್ಟು ಮೂಲಕವೇ ಪರಿಹಾರ.

ಗೆ|| ಲಂಕೇಶಪ್ಪನವರು ಈಶ್ವರಪ್ಪ ಎಂಬ ಉಪಾಧ್ಯಾರನ್ನು ಕರೆದುಕೊಂಡು ಬೆಳಿಗ್ಗೆ ಬಂದಿದ್ದರು. ಪಬ್ಲಿಕ್‌ ಸರ್ವಿಸ್‌ ಕಮಿಶನ್‌ ಮುಂದೆ ಭೇಟಿಗೆ ಕರೆದಿರುತ್ತಾರೆ. ಅವರಿಗೆ ರೆಕಮಂಡೇಶನ್‌ ಕಡಿದಾಳರು ಒಲ್ಲೆ ಎಂದರು. ಸಂಜೆಯೂ ಬಂದು ಹಾಗೇ ಹೋದರು.

ಸಂಜೆ ಗೆಳೆಯರೆಲ್ಲ ಕಾರ್ಯಾಲಯದಲ್ಲಿ ಸೇರಿದ್ದರು : ಮಂಡ್ಯ ನಾಗಪ್ಪ ಗೆದ್ದಿರುವ ಸುದ್ದಿ ಬಂದಿದೆ. ಬೆಟ್ಟಶೆಟ್ಟಿ ಸೋತುಹೋಗಿದ್ದಾರೆ. ದಾವಣಗೆರೆ ಶಿವಾನಂದಸ್ವಾಮಿ ಸೋತ ಸುದ್ದಿ ತಿಳಿಯಿತು ಪಟೇಲರಿಂದ.

ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಮಾಡಿದ್ದೆಲ್ಲಾ ಸರಿ. ಆದರೆ ನತ್ಯ ವಿಶ್ರಾಂತಿಯನ್ನು ಇಂದು ತೆಗೆದುಕೊಳ್ಳಲಾಗಲಿಲ್ಲ. ಆಮಶಂಕೆ ನಿಂತಿಲ್ಲ. ನಿತ್ರಾಣ; ಇಂದು ಸ್ನಾನ ಮಾಡಲಿಲ್ಲ. ಎಂಟ್ರೋ ಥನಾಜೋಲ್‌ ತೆಗೆದುಕೊಂಡಿದ್ದೇನೆ ನಾಳೆಯೂ ವಿಶ್ರಾಂತಿಬೇಕು.

ಜೂನ್೨೩

ಉರಗಹಳ್ಳಿ ರೈತರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

೧೦-೩೦ ರ ರೈಲಿಗೆ ಬರಬೇಕಾದ ರೈತರು ಬರಲಿಲ್ಲ. ಬಿಡದಿ ಸ್ಟೇಶನ್‌ನಲ್ಲೇ ಪೋಲಿಸರು ತಡೆದಿದ್ದಾರೆಂದು ಕೇಳಿ ಗೆ|| ಶ್ರೀರಾಮಯ್ಯನವರ ಕಾರಿನಲ್ಲಿ ಮುನಿವೆಂಕಟರಮಣ, ಪಟೇಲ್‌ ಮತ್ತು ನಾನು ಬಿಡದಿಗೆ ಹೋದೆವು. ಎಲ್ಲಾ ಸ್ಟೇಶನ್‌ನಲ್ಲೇ ಕುಳಿತಿದ್ದರು. ಅವರನ್ನೆಲ್ಲಾ ೧ ಗಂಟೆಯ ರೈಲಿಗೆ ಹತ್ತಿಸಿ ಬಂದೆವು. ಸಂಜೆ ೪-೩೦ ಕ್ಕೆ ಚಿಕ್ಕ ಲಾಲಬಾಗಿನಿಂದ ಹೊರಟು ಮೆರವಣಿಗೆಯಲ್ಲಿ ವಿಧಾನ ಸೌಧಕ್ಕೆ ಹೋದೆವು. ದಾರಿಯಲ್ಲಿ ಪೋಲೀಸರು ತಡೆದರು. ನಾವು ಕೆಲವರು ವಿಧಾನಸೌಧಕ್ಕೆ ಹೋಗಿ ಮುಖ್ಯಮಂತ್ರಿಗಳಿಗೆ ಒಂದು ಮನವಿ ಪತ್ರ ಸಲ್ಲಿಸಿ ಉರಗಹಳ್ಳಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಕಾರ ಪರಿಹರಿಸಬೇಕೆಂದು ಕೇಳಿಕೊಂಡು ಹಿಂತಿರುಗಿ ಮೆರವಣಿಗೆಯಲ್ಲಿ ಬಂದು ಚಿಕ್ಕಲಾಲಬಾಗಿನಲ್ಲಿ ಸಣ್ಣ ಸಭೆಮಾಡಿ ರೈತರಿಗೆಲ್ಲಾ ವಿಷಯ ತಿಳಿಸಲಾಯಿತು. ರಾತ್ರಿಯೇ ಬಹಳ ಜನ ತಮ್ಮ ಊರಿಗೆ ಹೋದರು. ಲಿಂಗೇಗೌಡರು ಮತ್ತಿತರ ಕೆಲವು ಮುಖಂಡರು ಉಳಿದುಕೊಂಡರು.

ಆಮಶಂಕೆ ಸ್ವಲ್ಪ ಗುಣವಿದೆ. ಆದರೆ ಬಹಳ ನಿಶ್ಯಕ್ತಿ, ಇಂದು ಮಾತ್ರೆ ಸರಿಯಾಗಿ ತೆಗೆದುಕೊಳ್ಳಲಾಗಲಿಲ್ಲ. ಎರಡೂ ಹೊತ್ತು ಅನ್ನವನ್ನೇ ಊಟ ಮಾಡಿದೆ.

ಜೂನ್೨೪
ಲಾವಣಿ ನಾರಾಯಣಗೌಡರಿಗೆ : ೨-೦೦
ಭಕ್ತವತ್ಸಲ: ೧-೫೦
(ಹಸ್ತ ಪತ್ರಿಕೆ): ೨-೦೦
ಸ್ಟಾಂಪು: ೫-೫೦
ಊಟ ತಿಂಡಿ: ೯-೦೦
ಮೇಗಳದೊಡ್ಡಿ ಲಿಂಗೇಗೌಡರಿಂದ ಜಮಾ: ೫೦/-

ಉರಗಹಳ್ಳಿ ಶ್ರೀ ಮೇ|| ಲಿಂಗೇಗೌಡರು ಮತ್ತಿತರರು ಬೆಳಿಗ್ಗೆ ಮಾತನಾಡಿಕೊಂಡು ಊರಿಗೆ ಹೊರಟುಹೋದರು. ಶ್ರೀ ಕರಡಪ್ಪ ತನ್ನ ಕೇಸಿನ ನಕಲು ತಂದುಕೊಟ್ಟು ಸಂಜೆ ರೈಲಿಗೆ ಊರಿಗೆ ಹೋದರು. ಕೇಸು ಅಪೀಲುಗಳನ್ನು ಹಾಕಬೇಕೆ ಬೇಡವೇ ಎಂಬ ವಿಷಯದಲ್ಲಿ ಅಖೈರು ತೀರ್ಮಾನವನ್ನು ಇಂದು ತೆಗೆದುಕೊಳ್ಳಲು ಆಗಲಿಲ್ಲ. ಗೆ|| ಪಟೇಲರು ಹೋಗಿದ್ದಾಗ ಕಡಿದಾಲರು ಅಪೀಲು ಹಾಕುವುದು ಸೂಕ್ತವೆಂದು ಹೇಳಿದರೆಂದು ತಿಳಿಯಿತು. ರೈತರು ಸಿದ್ಧವಾಗಿಲ್ಲ. ನಾಳೆ ಲಿಂಗೇಗೌಡರನ್ನು ಕಳಿಸಕೊಡಲು ಹೇಳಿದ್ದೇನೆ.

ಸಂಜೆ ಶಿವಣ್ಣ ಚೆಟ್ಟಿ ಗಾರ್ಡನ್‌ನಲ್ಲಿ ಬಹಿರಂಗ ಸಭೆ ನಡೆಯಿತು.

ಶ್ರೀ ಎನ್‌. ಬಿ. ಆಂಜನೇಯ ಅಧ್ಯಕ್ಷತೆ ಗೆ|| ಬಾಸು, ಶ್ರೀರಾಮಯ್ಯ, ಮಾಧವನ್‌, ತಂಗರಾಜ್‌ಮತ್ತು ವೆಂಕಟರಾಂ – ನಾನು ಮಾತನಾಡಿದೆವು. ತಮಿಳು ಜನ ಹೆಚ್ಚಿರುವ ಜಾಗ, ಕನ್ನಡ ಕೇಳುವುದೂ ಅವರಿಗೆ ಅಹಿತ.

ಗೆ|| ಪಟೇಲರೂ ಪ್ಲೂ ಬಂದು ಮಧ್ಯಾಹ್ನದಿಂದ ಹಾಸಿಗೆ ಹಿಡಿದಿರುತ್ತಾರೆ.

ನನಗೆ ಆಮಶಂಕೆ ಸ್ವಲ್ಪ ಗುಣವಾಗಿದೆ; ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಬೆಳಗಿನ ಝಾವ ತಲೆನೂವು ಆರಂಭವಾಗಿದ್ದು, ಹತ್ತು ಗಂಟೆಯ ತನಕ ತುಂಬ ಹಿಂಸೆ ಕೊಟ್ಟಿತು.

ಜೂನ್೨೭

ಇದ್ದಕ್ಕಿದಂತೆಯೇ ಉರಗಹಳ್ಳಿ ಇನಾಂದಾರ್ ಶ್ರೀ ನರಸಿಂಹ ಅಯ್ಯಂಗಾರರನ್ನು ಕರೆದುಕೊಂಡು ಬೆಳಿಗ್ಗೆ ಶ್ರೀ ಲಿಂಗೇಗೌಡರು ಬಂದುಬಿಟ್ಟರು. ತಮ್ಮ ರೈತರಿಗೆ ಕೇಡು ಮಾಡುವ ಉದ್ದೇಶವಿರಲಿಲ್ಲ. ತಾನು ಏನಾದರೂ ಮಾಡಿ ಅನ್ಯೋನ್ಯವಾಗಿರಲು ಪ್ರಯತ್ನಿಸುತ್ತೇನೆ. ನೀವು ಸಹಾಯ ಮಾಡಬೇಕೆಂದು ಕೇಳಿಕೊಂಡರು. ಇತರ ಗೆಳೆಯರೊಂದಿಗೆ ಮಾತನಾಡಿ ಹೇಳುತ್ತೇನೆ. ಸಂಜೆ ಬನ್ನಿ ಎಂದು ತಿಳಿಸಿದೆ. ಸಂಜೆ ಶ್ರೀ ಕರುಣಾಳು ಕರೆದುಕೊಂಡು ಬಂದಿದ್ದರು. ಗೆ|| ಪಟೇಲರು, ಬಾಸು, ಶ್ರೀರಾಮಯ್ಯ, ವೆಂಟರಾಮ ಇತ್ಯಾದಿ ಗೆಳೆಯರೂ ಇದ್ದರು. ಕಾನೂನುಬದ್ಧವಾಗಿ ನ್ಯಾಯಸಮ್ಮತವಾದ ರಾಜಿ ಸಾಧ್ಯವಿದ್ದಲ್ಲಿ, ಅದಕ್ಕೆ ಪ್ರಯತ್ನಿಸಲು ಅಭ್ಯಂತರವೇನೂ ಇಲ್ಲವೆಂದು ಹೇಳಿದೆವು. ಮತ್ತು ಅದಕ್ಕಾಗಿ ನಾಳೆ ಉರಗಹಳ್ಳಿಗೆ ಬರುವುದಾಗಿಯೂ, ರೈತರನ್ನೂ ಭೇಟಿ ಮಾಡಿ ಅವರ ಅಭಿಮತದಂತೆ ರಾಜಿಗೆ ಪ್ರಯತ್ನಿಸುವುದಾಗಿಯೂ ಹೇಳಿಕಳಿಸಿದೆವು.

ಸಂಜೆ ಗೆಳೆಯ ಮುನಿವೆಂಕಟರಮಣ ಇವರ ಆಫೀಸಿನಲ್ಲಿ ಸೇರಿ ಕಾನೂನು ಭಾಗವನ್ನು ಚರ್ಚಿಸಿದ್ದಾಯಿತು. ಎಲ್ಲರೂ ಅಪೀಲು ಹಾಕುವುದು ಕ್ಷೇಮಕರ ಎಂಬ ಅಭಿಪ್ರಾಯ ಬಹುಮತವಿದ್ದಾಗಿದೆ. ರೈತರು ಇದಕ್ಕೆ ಒಪ್ಪುತ್ತಾರೋ ಇಲ್ಲವೋ ತಿಳಿಯಬೇಕು. ಆರು ಏಳು ಸಾವಿರ ರೂ. ಖರ್ಚಾಗುತ್ತೆ. ಇನಾಂದರರಿಗೂ ಅಪೀಲು ಹೋಗುವುದು ಇಷ್ಟವಿಲ್ಲ. ಬರೇ ಹೋರಾಟಮಾರ್ಗ ರೈತರು ಆರಿಸಿಕೊಂಡರೆ, ಸಹಕರಿಸುವುದಾದರೂ ಹೇಗೆ! ಇನಾಂದಾರರು ಅಧಿಕಾರಿಗಳೂ ಅನ್ಯಾಯ ಮಾಡಿದ್ದಾರೆ ಎಂಬುದು ನಮ್ಮ ನಿಲುವಾಗಿದೆ.

ಜೂನ್೨೮

ಉರಗಹಳ್ಳಿ ಭೇಟಿ. ಸಂಧಾನ ವಿಫಲ.

ಗೆ|| ಶ್ರೀ ರಾಮಯ್ಯ ಬರಲು ಸಾಧ್ಯವಿಲ್ಲವೆಂದರು. ಗೆ|| ಪಟೇಲರು ಕಾರಿನಲ್ಲಿ ಬಾಸು. ಮುನಿವೆಂಕಟರಮಣ, ಲಿಂಗೇಗೌಡರು ಮತ್ತು ನಾನು ೧೨ರ ಹೊತ್ತಿಗೆ ಹೊರಟು ಉರಗಹಳ್ಳಿ ಹೋದೆವು. ಇನಾಂದಾರರು ನಾವು ತಮ್ಮ ಮನೆಗೇ ಬರಬಹುದೆಂದು, ಗೇಟು ತೆಗೆದುಕೊಂಡು ಕಾಯುತ್ತಿದ್ದರು. ನಾವು ಕರಡಪ್ಪನವರ ಮನೆಗೆ ಹೋದೆವು. ಅಲ್ಲೇ ಊಟ ಮಾಡಿ, ಪ್ರತ್ಯೇಕ ರೈತರ ಸಭೆಯನ್ನು ಮಾರಿಕಾಂಬ ದೇವಾಲಯದ ಹತ್ತಿರ ಸೇರಿಸಿ ಸಮಸ್ಯೆಯನ್ನು ಚರ್ಚಿಸಿದೆವು. ಯಾವ ತೀರ್ಮಾನಕ್ಕೂ ಬರಲು ಆಗಲಿಲ್ಲ ಅಷ್ಟರಲ್ಲಿ ಸಂಜೆಯಾಯಿತು. ಇನಾಂದಾರರ ಮನೆಯ ಹತ್ತಿರ ಜನ ನೆರೆದಿದ್ದರು. ನಾವು ಅವರಲ್ಲಿಗೆ ಹೋದೆವು. ಅವರು ಇದ್ದಕ್ಕಿಂದ್ದಂತೆ. ನಾನು ಪ್ರೀಮಿಯಂ ಹಣ ಕಟ್ಟಿಕೊಳ್ಳುತ್ತೇನೆ. ಬದಲಾಗಿ ನೀವು ನನಗೆ ಕೊಟ್ಟಿರುವ ಹಣವೇನಿದೆ ಅದನ್ನು ಬಿಡಬೇಕು ಎಂದರು. ಇಂದು ದುಡ್ಡು ಕೊಡುತ್ತಾರೆಂದು ಸೇರಿದ್ದವರಿಗೆ ನಿರಾಸೆಯಾಯಿತು. ಭಿನ್ನಾಭಿಪ್ರಾಯಗಳು ಬಂದವು; ಏನೂ ತೀರ್ಮಾನ ಮಾಡಲು ಆಗಲಿಲ್ಲ. ಕಾಫಿ ಕೊಟ್ಟರು, ನಂತರ ಉಪ್ಪಿಟ್ಟು ಕಾಫಿ ಕೊಟ್ಟು ಕಳಿಸಿದರು ಇನಾಂದಾರರು. ಇದೂ ಕೆಲವರಿಗೆ ಅನುಮಾನ ಪಡಲು ಆಶ್ಪದವಾಯಿತು. ದುಡ್ಡು ಬರುವುದಕ್ಕೆ ಕಲ್ಲು ಹಾಕಿದರಲ್ಲಾ ಎಂಬುದು ಕೆಲವರ ಮತವಾಗಿತ್ತು. ಅಂತೂ ನಾವು ಇಂದು ಹೋದದು ಮತ್ತು ಸರಿಯಾಗಿ ಜಾಣ್ಮೆಯಿಂದ ವರ್ತಿಸದೆಯಿದ್ದದ್ದು ನಮ್ಮ ಪ್ರಮಾಣಿಕತೆಯನ್ನೇ ಕೆಲವರು ಪ್ರಶ್ನಿಸುವುದಕ್ಕೆ ಎಡೆಕೊಟ್ಟಿತು. ನಮ್ಮ ಗೆಳೆಯರೂ ನನ್ನ ಬಗ್ಗೆ ಅಸಮಾಧಾನ ಪಟ್ಟರು. ಆದರೆ, ನನ್ನ ತಪ್ಪು ಏನೂ ಇರಲಿಲ್ಲ. ವೃಥಾ ಆಪಾದನೆಗೆ ಒಳಗಾದೆ ಎನ್ನಬಹುದು. ಕ್ರಮೇಣ ನನ್ನ ನಿಲುವು ಸಹಜ, ಸರಳ ಎಂಬುದು ಸ್ಪಷ್ಟವಾದೀತು. ರಾತ್ರಿಯೇ ಎಲ್ಲಾ ಬೆಂಗಳೂರಿಗೆ ಬಂದೆವು. ಅಲ್ಲಿಗೇ ಬಂದಿದ್ದ ನೆಲವಾಗಿಲು ಶಿವಣ್ಣ ಮತ್ತು ಕೆಂಚೇಗೌಡ ಇವರೊಡನೆ ರಾತ್ರಿಯೇ ಇಂಡಿಗನಾಳಿಗೆ ಹೋಗಿ ಮುನಿಕೆಂಚೇಗೌಡರಲ್ಲಿ ಮಲಗಿದೆವು.