ಜುಲೈ

ನಿನ್ನೆ ಸಂಜೆ ಬ್ರಿಟಿಷ್‌ ಲೇಬರ್ ಪಕ್ಷದ ನಾಯಕ ಅನುರಿನ್‌ ಬೇವಾನ್‌ರು ನಿಧನರಾದ ವಿಷಾದ ವಾರ್ತೆ ಬಂದಿದೆ. ಕಳೆದ ಡಿಸೆಂಬರಿನಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆಯಾಗಿ ಗುಣ ಹೊಂದುತ್ತಿದ್ದ ಬೆವಾನ್‌ಕಳೆದ ವಾರ ತೀವ್ರ ಅಸ್ವಸ್ಥರಾಗಿ ತಮ್ಮ ಆಶ್‌ರಿಚ್‌ ಮನೆಯಲ್ಲಿ ನಿಧನ ಹೊಂದಿದರು.

ಅವರಿಗೆ ೬೨ ವರ್ಷ. ಅವರ ಪತ್ನಿ ಜೆನ್ನಿಲೀ ಹಾಸಿಗೆಯ ಪಕ್ಕದಲ್ಲಿದ್ದರು. ಚರ್ಚಿಲ್ಲರನ್ನು ಬಿಟ್ಟರೆ, ಬೆವಾನ್‌ರಂತಹ ವಾಗ್ಮಿ ಹುಟ್ಟಲಿಲ್ಲ.

೮-೩೦ ಕ್ಕೆ ನೆಹ್ರೂ ರೇಡಿಯೋ ಭಾಷಣವನ್ನು ಮುದ್ದಾಚಾರರಲ್ಲಿ ಕೇಳಿದೆವು. ಮುಷ್ಕರ ಅನ್ಯಾಯ ಹಾನಿಕರ ಎಂದಿದ್ದಾರೆ.

ಸಂಜೆ ಕಾರ್ಮಿಕರ ಸಭೆ ನಡೆಯಲಿಲ್ಲ. ಅವಕಾಶ ಕೊಡಲಿಲ್ಲ.

ಮಾರ್ಗದರ್ಶಿ ಅಚ್ಚಾಯಿತು.

ಮರಿಯಪ್ಪ ರಾತ್ರಿ ಊರಿಗೆ ಹೋದರು.

ಶಾರದ ಬೆಳಿಗ್ಗೆ ಬಂದಿದ್ದು, ಕೋಪದಿಂದ ಬಂದವಳು, ಶಾಂತವಾಗಿ ಹೋದಳು. ದುಡಿಯುವ ಸ್ತ್ರೀಯನ್ನು ವಿವಾಹವಾದರೆ ಅವಳು ಗೌರವಿಸುವುದಿಲ್ಲವೆಂದು ಅವಳ ಅಭಿಪ್ರಾಯ.

ಪಟೇಲರು ಇಂದು ಬರಲಿಲ್ಲ.

ಜುಲೈ

ಹಣದ ಅಡಚಣೆಯಿಂದ ಗೆ|| ಮಹೇಶ್ವರಪ್ಪನವರಿಂದ ೨೦ ರೂ. ತರಿಸಿದೆ. ‘ಮಾರ್ಗದರ್ಶಿ’ ಪತ್ರಿಕೆ ಕಳಿಸಲು ಸ್ಟ್ಯಾಂಪು ಮತ್ತು ಊಟ ತಿಂಡಿಗಾಗಿ – ಎಲ್ಲಾ ಖರ್ಚಾಯಿತು. ಗೆ|| ಪಟೇಲರು ಇಂದು ಬರಲಿಲ್ಲ.

ಶಾರದ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಹೊತ್ತು ಬಂದಿದ್ದಳು. ಮಧ್ಯಾಹ್ನ ಬಹಳ ಹೊತ್ತು ಇದ್ದಳು. ಸಿಗರೇಟು ಮಾವಿನಹಣ್ಣು ಕೊಟ್ಟು ಹೋದಳು.

ರಾಷ್ಟ್ರಾಧ್ಯಕ್ಷರು ಮುಷ್ಕರವನ್ನು ಬಹಿಷ್ಕರಿಸಲು ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಅದನ್ನು ವಿರೋಧಿಸಿ ನಾನು ಒಂದು ಪತ್ರಿಕಾ ಹೇಳಿಕೆಯನ್ನು ಕಳಸಿದೆ.

ಗೆ|| ಸವದತ್ತಿ ವೀರಪ್ಪನಿಂದ ಪತ್ರ ಬಂದಿದೆ. ಧಾರವಾಡಕ್ಕೆ ಬನ್ನಿ ಎಂದು ಬರೆದಿದ್ದಾರೆ. ಕಾರು ರಿಪೇರಿಯಾಗಿದೆ. ಪಟೇಲರು ಬಂದ ಮೇಲೆ ಕಾರ್ಯಕ್ರಮ ಗೊತ್ತು ಮಾಡಬೇಕು.

ಜುಲೈ

ನಿನ್ನೆ ಕೊಟ್ಟ ಹೇಳಿಕೆ ‘ಪ್ರಜಾವಾಣಿ’, ‘ತಾಯಿನಾಡು’ಗಳಲ್ಲಿ ಪೂರ್ತಿ ಬಂದಿದೆ. ಡೆಕ್ಕನ್‌ ಹೆರಾಲ್ಡ್‌ ಮತ್ತು ಎಕ್ಸ್‌ಪ್ರೆಸ್‌ ಸ್ವಲ್ಪ ಭಾಗ ಹಾಕಿವೆ. ನಾಥಪೈ, ಜೋಷಿ ಇತ್ಯಾದಿ ಮುಖಂಡರೂ ಸುಗ್ರೀವಾಜ್ಞೆ ಖಂಡಿಸಿದ್ದಾರೆ. ಮುಷ್ಕರ ಮುರಿಯಲು ಭಾರೀ ಸಿದ್ಧತೆಗಳಾಗುತ್ತಿವೆ.

ಪಿ. ಎಸ್‌. ಪಿ. ಯವರು ೧೧ ರಂದು ಹರತಾಳ ಆಚರಿಸಲು ಕರೆಯಿತ್ತು, ಪೋಷ್ಟರು ಹಚ್ಚಿ, ಹಸ್ತ ಪತ್ರಿಕೆ ಹೊರಡಿಸುತ್ತಿದ್ದಾರೆ. ಛೇಂಬರ್ ಆಫ್‌ ಕಾಮರ್ಸ್‌‌ನವರು ಹರತಾಳ ಅವಸರದ ಹೆಜ್ಜೆ ಆಗುವುದೆಂದು ಹೇಳಿ ಇವರಿಗೆ ಗಸ್ತುಕೊಟ್ಟಿದ್ದಾರೆ. ವ್ಯಾಪಾರಿಗಳು ಏನು ಮಾಡುತ್ತಾರೆ ನೋಡಬೇಕು. ಕಣ್ಣನ್‌, ಅನಂತಕೃಷ್ಣ, ರಾಮಕೃಷ್ಣರಾವ್‌ ಮತ್ತು ಮುನಿಯಪ್ಪ ಭಾರಿಯಾಗಿ ಓಡಾಡುತ್ತಿದ್ದಾರೆ. ಹೊಸದರಲ್ಲಿ ಅಗಸ ಗೋಣಿಚೀಲ ಒಗೆದಂತೆ!

ಉರಗಹಳ್ಳಿಯಿಂದ ವೆಂಕಟಪ್ಪ ಪತ್ರ ಬರೆದು, ರೈತರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

ಶಾರದ ಬೆಳಿಗ್ಗೆ ಬಂದು ಚಿಲ್ಲರೆ ಕಾಸು ಕೊಟ್ಟು ಹೋದಳು.

ಜುಲೈ ೧೦

ಎರಡು ಪುಟದ ಮಾರ್ಗದರ್ಶಿ ವಿಶೇಷ ಸಂಚಿಕೆ ತರಲು ನಿಶ್ಚಯಿಸಿದೆವು.

ಮುಷ್ಕರದ ಸಿದ್ಧತೆಗಳೂ, ಮುಷ್ಕರ ನಿರೋಧದ ಸಿದ್ಧತೆಗಳೂ ನಡೆಯುತ್ತಿವೆ. ನಾಳೆ ಸಂಧಾನಕ್ಕಾಗಿ ನಾಥ ಪೈ, ಆಳ್ವಾರೀಸ್‌ ಮತ್ತು ಜೋಷಿ ದೆಹಲಿಗೆ ಹೋಗುವರು. ಸಂಧಾನವಾಗುವಂತೆ ಕಾಣುತ್ತಿಲ್ಲ. ಮುಷ್ಕರ ನಡೆದೇ ತೀರುವುದು.

ಮಧ್ಯಾಹ್ನ ಪಟೇಲ್‌, ಬಾಸು, ವೆಂಕಟರಮಣ ಇವರೊಂದಿಗೆ ವಿಕ್ಟೋರಿಯಾಗೆ ಹೋಗಿ ಊಟ ಮಾಡಿ ಬಂದೆವು. ರಾತ್ರಿ ಹಾಲು ಕುಡಿದು ಶಾರದ ಕೊಟ್ಟಿದ್ದ ಮಾವಿನಹಣ್ಣು ತಿಂದು ಮಲಗಿದೆ. ಸೊಳ್ಳೆಕಾಟ ಜಾಸ್ತಿಯಿತ್ತು. ಲೈಟ್‌ ಬೇರೆ ಹಾಕಿತ್ತು. ಭಕ್ತವತ್ಸಲ ರಾತ್ರಿ ಎಲ್ಲಾ ಕಂಪೋಸಿಂಗ್‌ ಮಾಡುತ್ತಲೇಯಿದ್ದ. ನಿದ್ದೆ ಸರಿಯಾಗಿ ಬರಲಿಲ್ಲ.

ನಾಳೆ ಹರತಾಳ, ಅಷ್ಟು ಯಶಸ್ವಿಯಾಗುವಂತೆ ಕಾಣಲಿಲ್ಲ. ಶಿವರಾಮಕಾರಂತರ ‘ಅಳಿದ ಮೆಲೆ’ ಕಾದಂಬರಿ ಓದಲು ಪ್ರಾರಂಭ ಮಾಡಿದೆ.

ಸಿಂಧುವಾಡಿ ರಾಘು ಬಂದ. ಅವನ ತಂಗಿ ನಾಗರತ್ನ ಯಾರನ್ನೋ ಮದುವೆಯಾಗುವರೆಂದು ಮನೆಯವರಿಗೆ ಸಮಾಧಾನವಿಲ್ಲವೆಂದು ತಿಳಿಯಿತು. ಈಗ ಅವಳು ಪಾಪಕ್ಕ ಅಲ್ಲ. ಡಾ. ನಾಗರತ್ನ. ಸುಖವಾಗಿರಲಿ.

ಜುಲೈ ೧೩

ಮುಷ್ಕರದ ೨ನೇ ದಿನ

ಅಹಮ್ಮದಾಬಾದಿನ ಬಳಿ ಪಂಚಮಹಲ್‌ನ ದೋಹಾದ್‌ ಎಂಬಲ್ಲಿ ನಿನ್ನೆ ಮುಷ್ಕರಕಾರರಿಗೂ ಅವರಿಗೂ ನಡೆದ ಘರ್ಷಣೆಯಲ್ಲಿ ಪೋಲೀಸರು ಪ್ರವೇಶಿಸಿ ಮಾಡಿದ ಗೋಳೀಬಾರಿನಿಂದ ಸತ್ತವರ ಸಂಖ್ಯೆ ಐದು ಎಂದು ಇಂದಿನ ವರದಿ, ಪೀಟರ್ ಆಳ್ವಾರೀಸರೂ ಸೇರಿ ದೇಶದಲ್ಲಿ ೧೫೦೦ ಕ್ಕೂ ಹೆಚ್ಚು ಮಂದಿ ಬಂಧನವಾಗಿದೆ. ರೇಡಿಯೋ ಮತ್ತು ಪತ್ರಿಕೆಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದರಲ್ಲಿ ನಿರತವಾಗಿವೆ. ಇಂದು ಇಲ್ಲಿ ರೈಲ್ವೆಯಲ್ಲಿ ಸಂಪೂರ್ಣ ಮುಷ್ಕರ. ಇತರ ಕೇಂದ್ರ ಸರ್ಕಾರದ ನೌಕರರು ಮುಷ್ಕರ ಹೂಡಿರುತ್ತಾರೆ. ಅಲ್ಲಲ್ಲಿ ವಿಧ್ವಂಸಕ ಚಟುವಟಿಕೆಗಳು ನಡೆದಿವೆ. ಸಭೆ ಮೆರವಣಿಗೆಗಳನ್ನು ಪ್ರತಿಬಂಧಕ ೩೭ನೇ ವಿಧಿ ಹಾಕಿದ್ದಾರೆ. ನಾಳೆ ಇಲ್ಲಿ ಸಾರ್ವತ್ರಿಕ ಮುಷ್ಕರದ ಕರೆಯಿತ್ತಿದ್ದಾರೆ.

ಜುಲೈ ೧೪

ಮುಷ್ಕರದ ೩ನೇ ದಿನ

ಸಾರ್ವತ್ರಿಕ ಮುಷ್ಕರ ಅಷ್ಟಾಗಿ ಬೆಂಗಳೂರಿನಲ್ಲಿ ಯಶಸ್ವಿಯಾಗಲಿಲ್ಲ. ಟೊಬ್ಯಾಕೋ, ಅಗರಬತ್ತಿ, ಕಮ್ಯುನಿಸ್ಟರ ಕೆಲವು ಸಣ್ಣ ಸಂಘಗಳು ಮಾತ್ರ ಮುಷ್ಕರ ಆಚರಿಸಿದವು. ಮಿನರ್ವ ಬಿನ್ನಿ ಮಿಲ್ಲುಗಳು ಮುಷ್ಕರ ಹೂಡಲಿಲ್ಲ.

ಸಂಜೆ ಚಿಕ್ಕಲಾಲಬಾಗಿನಲ್ಲಿ ಗೆ|| ವೆಂಗಟರಾಂ, ಸೂರ್ಯನಾರಯಣರಾವ್‌(ಕಮ್ಯುನಿಸ್ಟ್‌) ಇವರು ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಬಂಧಿತರಾದರು. ಅವರೊಂದಿಗೆ ರಾಮಕೃಷ್ಣ ಮತ್ತು ಇತರ ಕೆಲವರು ಬಂಧಿತರಾದರು. ಸುಗುಟೂರು ಕೃಷ್ಣಮೂರ್ತಿಯೂ ಬಂಧಿಸಲ್ಪಟ್ಟರು.

ಪತ್ರಿಕೆಗಳು ಸುಳ್ಳು ಸುದ್ದಿ ಪ್ರಕಟಿಸುತ್ತಿವೆ. ಮುಷ್ಕರ ತೀವ್ರವೂ ವ್ಯಾಪಕವೂ ಆಗಿ ನಡೆಯುತ್ತಿದೆ. ಗುರುಸ್ವಾಮಿಯವರು ದೆಹಲಿಗೆ ಹೋಗಿದ್ದಾರೆ ಏನಾದರೂ ಸಂಧಾನ ನಡೆಸಲು. ಮುಂಬಯಿನಲ್ಲಿ ಜಾರ್ಜಫರ್ನಾಂಡಿಸ್‌ ಬಂಧಿಸಲ್ಪಟ್ಟಿದ್ದಾರೆ. ಹೈದರಾಬಾದಿನಲ್ಲಿ ಸಾಂಬಮೂರ್ತಿ ಬಂಧನವಾಗಿದೆ. ನಿನ್ನೆ ರಾತ್ರಿಯ ಹೊತ್ತಿಗೆ ದೇಶದಲ್ಲಿ ೩೫೦೦ಕ್ಕಿಂತ ಹೆಚ್ಚು ಬಂಧನಗಳಾಗಿವೆ.

ಜುಲೈ ೨೩

ಗೆ|| ಲಿಂಗಪ್ಪ ರಾತ್ರಿ ರೈಲಿಗೆ ಮೈಸೂರಿಗೆ ಹೋದ. ನನ್ನ ಸ್ಥಿತಿ ನೋಡಿ ಆತನೇ ಹತ್ತು ರೂ. ಕೊಟ್ಟ. ಅದನ್ನು ಸ್ವೀಕರಿಸುವುದು ನನಗೆ ತುಂಬಾ ಕಷ್ಟವಾಯಿತು. ಆದರೂ ತೆಗೆದುಕೊಂಡೆ ಆತ ವಿದ್ಯಾರ್ಥಿ. ನನಗಿಂತಲೂ ಅಸಹಾಯಕ, ಬಡವ. ನಾನು ಅವನಿಗೆ ಸಹಾಯ ಮಾಡುವುದು ಹೋಗಿ ನಾನು ಅವನಿಂದ ಹಣ ಪಡೆಯುವುದೆಂದರೆ ಅಭಾಸಕರ.

ಬಾಸು, ಪಟೇಲರನ್ನು ಬಿಟ್ಟು ಈಗ ರಾಘು ಹಿಡಿದಿದ್ದಾನೆ. ಆಫೀಸಿಗೆ ಬರುವುದೆಂದರೆ ಆಗುತ್ತಿಲ್ಲ. ಬಹುಶಃ ನಾನು ಇಲ್ಲಿರುವವರೆಗೂ ಆತ ಹಾಗೆ ಮಾಡಬಹುದು. ಇಂದೂ ಕಾರ್ಯಕ್ರಮ ಗೊತ್ತು ಮಾಡಲಾಗಲಿಲ್ಲ.

ಜುಲೈ ೨೪

ಸಂಜೆ ಗೆ|| ಶ್ರೀ ರಾಮಯ್ಯ ಬಂದಿದ್ದು ಹೋದರು.

೪ನೇ ತರಗತಿಗೆ ಪಠ್ಯ ಪುಸ್ತಕವಾಗಿಟ್ಟಿರುವ “ನಮ್ಮ ರಾಜ್ಯ ಮತ್ತು ಸಮುದಾಯ” ಎಂಬ ಪುಸ್ತಕ ಕುರಿತು ಒಂದು ಟೀಕೆಯನ್ನು ಬರೆಯುತ್ತಿದ್ದೇನೆ. ನಾಳೆ ಮುಗಿಸಿ ಪ್ರಜಾವಾಣಿಗೆ ಕಳಿಸಲು ಯೋಚಿಸಿದ್ದೇನೆ.

ಅಗಸ್ಟ

ಮೋಟೇಬೆನ್ನೂರಿನಲ್ಲಿ ಬಹಿರಂಗ ಸಭೆ.

ಬಂಗಲೆಯಲ್ಲಿ.

ಎಚ್ಚರವಾಗುವ ಹೊತ್ತಿಗೆ ರೈಲು ದಾವಣಗೆರೆಯನ್ನು ಸಮೀಪಿಸುತ್ತಿತ್ತು. ಎದ್ದು ಕೆಳಗಿಳಿದು ಮುಖ ತೊಳೆಯುವಷ್ಟರಲ್ಲಿ ದಾವಣಗೆರೆ ಬಂತು. ಗೆ|| ಪಟೇಲರಿಗಾಗಿ ಹುಡುಕಿದೆ. ಎಲ್ಲೂ ಕಾಣಲಿಲ್ಲ ಗೆ|| ಅ. ಹಿ. ಶಿವಾನಂದಸ್ವಾಮಿ ಕಂಡು ಮಾತನಾಡಿದರು. ಹರಿಹರಕ್ಕೆ ಬಂದು ಇಡ್ಲಿ ತಿಂದು, ಕಾಫಿ ಕುಡಿದು, ಪ್ರಯಾಣ ಮುಂದುವರಿಸಿದೆ. ಬ್ಯಾಡಗಿ ಬಂತು. ಗೆಳೆಯರು ಯಾರು ಕಾಣಲಿಲ್ಲ. ಜಟಕಾ ಹಿಡಿದು ಮೋಟೇಬೆನ್ನೂರಿಗೆ ಹೋದೆ. ಎಲ್ಲಪ್ಪ ರಸ್ತೆಯಲ್ಲೇ ನಿಂತಿದ್ದ. ಗೆ|| ಮೈಲಾರರು ಬಂಗಲೆ ಹತ್ತಿರ ಕಾಯುತ್ತಿದ್ದರು. ಬಂಗಲೆಗೆ ಗಾಡಿ ತಿರುತಿಸಿ, ಬಿಡಾರ ಮಾಡಿದೆ. ಸ್ನಾನಾದಿಗಳನ್ನು ಪೂರೈಸಿ, ಮೈಲಾರದಲ್ಲಿ ಊಟ ಮುಗಿಸಿ, ಗರಡಿ ಮಹಡಿಯಲ್ಲಿ ವಿಶ್ರಾಂತಿ ತೆಗೆದುಕೊಂಡೆ. ಕಾರ್ಯಕರ್ತರು ಸೇರಲಿಲ್ಲ. ಮತ್ತೆ ಬಂಗಲೆಗೆ ಹೋದೆವು. ಹಾವೇರಿಯಿಂದ ಗೆ|| ರಾಮಣ್ಣಕ್ಷೌರದ ಬಂದರು. ಸಂಜೆ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಮಳೆ ಹನಿಯೂ ಬಂದವು. ಜನ ಕರಗಿತು. ವೇಳೆ ರಾತ್ರಿ ೯ ಗಂಟೆಯಾಗಿತ್ತು ಸಭೆ ಮುಗಿಸಿ ಊಟ ಮಾಡಿ ಬಂಗಲೆಗೆ ಹೋಗಿ ಮಲಗಿದೆವು. ಬ್ಯಾಡಗಿ ಗೆಳೆಯರು ಗೆ|| ರುದ್ರಪ್ಪಜಾಬೀನ ಹೆಂಡತಿಯ ಮನೆಗೆ ಹೋಗಿದ್ದಾನೆಂದು ತಿಳಿಯಿತು.ಅದರಿಂದಾಗಿ ನಾಳೆ ನೇರವಾಗಿ ಧಾರವಾಡಕ್ಕೆ ಹೂಗುವುದೆಂದು ಯೋಚಿಸಿದ್ದೇನೆ. ಗೆ|| ಮೈಲಾರರು ಜೊತೆಗೆ ಬರಲು ಅನಾನುಕೂಲ ಎನ್ನುತ್ತಿದ್ದಾರೆ. ಗೆ|| ರಾಮಣ್ಣನಿಗೆ ಬರಲು ಒತ್ತಾಯ ಮಾಡುತ್ತಿದ್ದೇನೆ. ಅವನೂ ಮನೆಕಡೆ ತೊಂದರೆ ಎನ್ನುತ್ತಿದ್ದಾನೆ.

ಇಂದು ಯಾರಿಗೂ ಪತ್ರ ಬರೆಯಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ ರೊಟ್ಟಿ ತಿಂದೆ. ಸಂಜೆ ಪಂಚಮಿ ಉಂಡೆ ತಿಂದೆ. ಹೊಟ್ಟೆ ನೋವು ಕಡಿಮೆಯಾಗುತ್ತೋ – ಹೆಚ್ಚಾಗುತ್ತೋ? ನೋಡಬೆಕು.

ಅಗಸ್ಟ

ಹುಬ್ಬಳ್ಳಿ ಗೆ|| ಗೌರಿಶಂಕರರಲ್ಲಿ.

ಹಾವೇರಿಯಿಂದ ಬಾಸೂ, ಪಟೇಲ್‌, ಕುಮಟಾ ಮತ್ತು ಮಾಳಗಿ ಇವರಿಗೆ ಪತ್ರ ಬರೆದೆ. ಎದ್ದು ಸ್ನಾನಾದಿಗಳನ್ನು ಮುಗಿಸಿಕೊಂಡು ಗೆ|| ರಾಮಣ್ಣ ಮತ್ತು ಗುಡ್ಡಪ್ಪ ಮೈಲಾರರೊಂದಿಗೆ ಬ್ಯಾಡಗಿ ಸ್ಟೇಶನ್‌ಗೆ ಹೋದೆ. ಮೈಲಾರರು ಹೊರಡಲು ಒಪ್ಪಲಿಲ್ಲ. ರಾಮಣ್ಣನ ಜೊತೆ ಹಾವೇರಿಗೆ ಬಂದೆ. ಅವರಲ್ಲಿ ಮಧ್ಯಾಹ್ನ ಊಟ ಮಾಡಿ ಲೋಕಲ್‌ಗೆ ಧಾರವಾಡಕ್ಕೆ ಹೊರೆಟೆವು. ಸ್ವಲ್ಪ ಹೊತ್ತು ಮೇಲುಗಡೆ ಮಲಗಿದ್ದು, ಕುಂದಗೋಳದಲ್ಲಿ ಇಳಿದು, ಮುಖ ತೊಳೆದು ಬಂದೆ. ಅಷ್ಟರಲ್ಲಿ ಇಬ್ಬರು ಗಾಡಿಗೆ ಹತ್ತಿ ನನ್ನ ಪಕ್ಕದಲ್ಲೇ ಕುಳಿತರು. ನೋಡಿದರೆ ಗೌರಿಶಂಕರ! ೧೯೪೭ರಲ್ಲಿ ಶಿವಮೊಗ್ಗದಲ್ಲಿ ಇಬ್ಬರೂ ಭಾಷಣ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದೆವು ಚಳವಳಿಯಲ್ಲಿ. ಇಲ್ಲಿ ಈಗ ಒವರಸೀಯರ್ ಆಗಿದ್ದಾನೆ. ಹದಿಮೂರು ವರ್ಷದ ನಂತರ ಭೇಟಿಯಾದ. ಹುಬ್ಬಳ್ಳಿಯಲ್ಲಿ ಇಳಿಯಲೇಬೇಕೆಂದ. ಇಳಿದು ಸೀದಾ ಅವನ ಮನೆಗೆ ಹೋದೆವು. ಈತ ಈ ಅವಧಿಯಲ್ಲಿ ಮದುವೆಯಾಗಿ ಮೂರು-ನಾಲ್ಕು ಹೆಣ್ಣು ಮಕ್ಕಳು ಒಂದು ಗಂಡು ಮಗ ಇದ್ದು – ಹೆಂಡತಿ ತೀರಿಕೊಂಡಿದ್ದಾಳೆ – ವಿಧುರನಾಗಿದ್ದಾನೆ. ಅನಿರೀಕ್ಷಿತವಾಗಿ ಭೇಟಿಯಾದ ಸ್ನೇಹಿತನನ್ನು ಕೂಡಲೇ ಅಗಲುವುದು ನನ್ನಿಂದ ಆಗಲಿಲ್ಲ. ಅಲ್ಲೇ ಉಳಿದು ರಾತ್ರಿ ಊಟ ಮಾಡಿ ಮಲಗಿದೆ. ಸಂಜೆ ಗೆ|| ಶಿವರಾಯನ ಮನೆಗೆ ಹೋಗಿದ್ದೆವು. ಅವನು ಕಾರವಾರಕ್ಕೆ ಹೋಗಿದ್ದಾನೆಂದು, ಅವನ ಪತ್ನಿ ಹೇಳಿದರು. ಚಹಾ ಕುಡಿದು ದುರ್ಗಾಟೈರ್ಸ್‌‌ಗೆ ಹೋಗಿ ಬಂದೆವು “ಪ್ರಪಂಚ” ಕಾರ್ಯಾಲಯಕ್ಕೆ ಹೋಗಿದ್ದೆವು. ಪುಟ್ಟಪ್ಪನವರು ಇರಲಿಲ್ಲ.

ಮಳೆ ಬಂದು ಎಲ್ಲಿ ನೋಡಿದರೂ ಕೆಸರು, ಹೊಲಸ; ನಾವು ಸ್ವಲ್ಪ ಮಳೆಯಲ್ಲಿ ತೋಯ್ದು ಮನೆ ಸೇರಿದೆವು. ಇಬ್ಬರು ಬಾಯಲರ್ಸ್‌ಇನ್‌ಸ್ಪೆಕ್ಟರುಗಳ ಪರಿಚಯವಾಯಿತು. ಒಬ್ಬರು ಬೆಂಗಳೂರಿನವರು ಇನ್ನೊಬ್ಬರು ಗೋವಾದವರು.

ಅಗಸ್ಟ

ಧಾರವಾಡ, ಧಾರವಾಡ ಗೆಸ್ಟ್‌ಹೌಸ್‌.

ಸ್ನಾನಾದಿಗಳನ್ನು ಮುಗಿಸಿಕೊಂಡು ರೈಲಿನಲ್ಲಿ ಬೆಳಿಗ್ಗೆ ೧೦-೩೦ ಕ್ಕೆ ಹೊರಟು ಗೆ|| ರಾಮಣ್ಣನೊಡನೆ ಧಾರವಾಡಕ್ಕೆ ಬಂದೆ. ಸಣ್ಣ ಮಳೆ ಬರುತ್ತಿತ್ತು. ಯಾವಾಗಲೂ ನಾನು ಉಳಿದುಕೊಳ್ಳುತ್ತಿದ್ದ ಡಿ. ಎಲ್‌. ಬಿ ಲಾಡ್ಜ್‌ನಲ್ಲಿ ಸ್ಥಳವಿಲ್ಲದ್ದರಿಂದ ರಂಗಣ್ಣವರ ಧಾರವಾಡ ಗೆಸ್ಟ್‌ಹೌಸ್‌ಗೆ ಹೋದೆವು. ಗೆ|| ಪದಕಿ ಇನ್ನೂ ಕೋರ್ಟಿನಲ್ಲೇ ಇದ್ದರು. ರಾಮಣ್ಣ ಹೋಗಿ ಸುದ್ದಿ ಕೊಟ್ಟು ಬಂದ. ಅವರೂ ಬಂದರು. ಒಟ್ಟಾಗಿ ಗೆ|| ಪೂಜಾರರ ಮನೆಗೆ ಹೋದೆವು. ಇಂದು ಏನು ಕಾರ್ಯಕ್ರಮವಿಲ್ಲ. ನಾಳೆ ಗರಗದಲ್ಲಿ ಸಭೆಯಿದೆ ಎಂದು ತಿಳಿಸಿದರು. ಮತ್ತೆ ಹೋಟೆಲಿಗೆ ಬಂದು ಊಟ ಮಾಡಿ ವಿಶ್ರಾಂತಿ ತೆಗೆದುಕೊಂಡೆ. ರಾಮಣ್ಣ ಹುಬ್ಬಳ್ಳಿಗೆ ಹೋಗೆ ಬರುತ್ತೇನೆಂದು ಹೋದವ ಬರಲಿಲ್ಲ. ನಾವು ಸಂಜೆ ಪೇಟೆಯಲ್ಲಿ ಅಡ್ಡಾಡಿದೆವು. ಆಸ್ಪತ್ರೆಗೆ ಡಾ|| ಪಿ. ಗೋಪಾಲನನ್ನು ನೋಡಲು ಹೋಗಿದ್ದೆ. ಆತ ಎಲ್ಲೋ ಹೊರಗೆ ಹೋಗಿದ್ದ. ಧಾರವಾಡ ರೆಸ್ಟೋರೆಂಟ್‌ನಲ್ಲಿ ಚಹಾ ಕುಡಿದು ಪದಕಿಯವರೊಡನೆ ಪೂಜಾರರ ಮನೆಗೆ ಹೋಗಿ ಬಂದೆ. ಮಧ್ಯಾಹ್ನ ಮಳೆ ಸ್ವಲ್ಪ ಕಡಿಮೆಯಾಗಿದೆ. ಇಲ್ಲಿ ಎಲ್ಲಾ ಥಂಡಿರಾಜಕೀಯವೂ ಥಂಡಿ. ನಮ್ಮ ಗೆಳೆಯರಂತೂ ಉಸಿರಾಡಲು ಕೂಡ ಹಿಂದೆಗೆಯುತ್ತಿದ್ದಾರೆ. ನಿರಾಶೆ, ಅಸಹಾಯಕತೆ, ವಿಮುಖತೆ, ಜಿಗುಪ್ಸೆ ಎಲ್ಲಾ ಸೇರಿ ನಿಶ್ಚೇಷ್ಟಿತರಾಗಿದ್ದಾರೆ. ಜೀವ ನಡೆಸುವುದು ತೀರಾ ಕಷ್ಟವಾಗಿದೆ. ಜನಕ್ಕೆ ಹೋರಾಡಲು ಶಕ್ತಿಯಿಲ್ಲ.

ಅಗಸ್ಟ್

ಗರಗದಲ್ಲಿ ಸಭೆ, ಪಂಚಾಯಿತಿ ಅಧ್ಯಕ್ಷ ಅಂಗಡಿಯವರಲ್ಲಿ ಸ್ನಾನಾದಿಗಳನ್ನು ಮುಗಿಸಿ ಸಿಟಿ ಲೈಟ್‌ನಲ್ಲಿ ಉಪಹಾರ ಮಾಡಿ ಬರುತ್ತಿದ್ದೆ. ಡಾ|| ಗೋಪಾಲ ಮತ್ತು ಸಂಜೀವಪ್ಪ ಬಂದು ಬೇಟಿಯಾದರು. ಮತ್ತೆ ಅವರೊಂದಿಗೆ ಧಾರವಾಡ ರೆಸ್ಟೋರೆಂಟ್‌ಗೆ ಹೋಗಿ ಚಹಾ ಕುಡಿದು ಬಂದೆ ಅಷ್ಟರಲ್ಲಿ ಹುಬ್ಬಳ್ಳಿಯ ಬಾಬೂಸಾಹೇಬ ಎಲಿಗಾರರು ಬಂದು ಗೆ|| ಪೂಜಾರರನ್ನು ನೋಡಿಕೊಂಡು ಅವರಿಗೆ ಆರೋಗ್ಯ ಚೆನ್ನಾಗಿಲ್ಲವೆಂದು ಹೇಳಿದರು. ಪದಕಿ ಬರಲು ಸಾಧ್ಯವಿಲ್ಲವೆಂದು ಹೇಳಿದ್ದರು. ರಾಮಣ್ಣ ಬರಲೇಯಿಲ್ಲ. ನಾವೇ ಇಬ್ಬರು ನಾಲ್ಕು ಗಂಟೆ ಬಸ್ಸಿನಲ್ಲಿ ಗರಗಕ್ಕೆ ಹೋದೆವು. ಗೆ|| ವೀರಪ್ಪ ಸವದತ್ತಿ, ವೀರಪ್ಪ ಅಂಗಡಿ, ಬಸಪ್ಪ ಸೋಗಿ ಇತ್ಯಾದಿ ಎಲ್ಲ ಗೆಳೆಯರೂ ಸೇರಿದರು. ಮುಮ್ಮಿ ಗಟ್ಟಿಯಿಂದಲು ಗೆ|| ಕಲ್ಲಪ್ಪ ಬಾಳಪ್ಪ ಮತ್ತು ಹರಿಜನರು ಬಂದಿದ್ದರು. ಕಾರ್ಯಕರ್ತರ ಸಭೆ ಸೇರಿ ೧೬ ರಿಂದ ಬಸ್ಸು ತಡೆಯುವ ಮೂಲಕ ಸತ್ಯಾಗ್ರಹ ಆರಂಭಿಸುವುದೆಂದೂ, ನಂತರ ಗುಂಗರಗಟ್ಟಿ ಅರಣ್ಯದ ಆಕ್ರಮಣ ಮತ್ತು ಧಾರವಾಡದಲ್ಲಿ ಗ್ರಾಮಪಂಚಾಯಿತಿ ಸದಸ್ಯೆ ಶ್ರೀಮತಿ ಗಂಗವ್ವ ಮುಂದಾಳ್ತನದಲ್ಲಿ ಧಾರವಾಡದಲ್ಲಿ ಗೋಡೌನು ಸತ್ಯಾಗ್ರಹ ಮಾಡುವುದೆಂದು ತೀರ್ಮಾನವಾಯಿತು. ರಾತ್ರಿ ಬಹಿರಂಗ ಸಭೆ ಕರೆದು ಸತ್ಯಾಗ್ರಹದ ವಿಷಯವಾಗಿ ವಿವರಿಸಲಾಯಿತು. ಸಣ್ಣಕೆ ಮಳೆ ಬೀಳುತ್ತಿತ್ತು. ಸಾಕಷ್ಟು ಪ್ರಚಾರವು ಆಗಿರಲಿಲ್ಲ. ಜನರು ಅಷ್ಟಾಗಿ ಸೇರರಲಿಲ್ಲ.

ರಾತ್ರಿ ಗೆಳೆಯ ಅಂಗಡಿಯವರಲ್ಲಿ ಊಟ ಮಾಡಿ ಮಲಗಿದೆವು. ಮುಮ್ಮಿಗಟ್ಟಿಯ ಗೆಳೆಯರು ರಾತ್ರಿಯೇ ನಡೆದುಕೊಂಡು ಹೋದರು. ಬೆಳಿಗ್ಗೆ ಅಲ್ಲಿ ಸಭೆ ಸೇರುವುದಾಗಿಯೂ, ಬಂದೇ ಹೋಗಬೇಕೆಂದು ತಿಳಿಸಿದ್ದಾರೆ. ಸಭೆ ಮುಗಿಸಿಕೊಂಡು ಹೋಗಲು ತೀರ್ಮಾನಿಸಿದೆ.

ಅಗಸ್ಟ್

ಮುಮ್ಮಿಗಟ್ಟಿಯಲ್ಲಿ ಸಭೆ.

ಗುಲ್ಬರ್ಗಾಕ್ಕೆ ಪ್ರಯಾಣ ರೈಲಿನಲ್ಲಿ ೮-೨೦ ರೈ. ಫೇರ್.

ಚಹಾ ತೆಗೆದುಕೊಂಡು, ಗೆ|| ಬಾಬೂಸಾಹೇಬ್‌, ವೀರಪ್ಪ ಸವದತ್ತಿ, ವೀರಪ್ಪ ಅಂಗಡಿ, ಬಸಪ್ಪ ಸೋಗಿ ಇವರೊಂದಿಗೆ ಮುಮ್ಮಿಗಟ್ಟಿಗೆ ಬಸ್ಸಿನಲ್ಲಿ ಹೋದೆವು. ಶ್ರೀ ನಿಂಗಪ್ಪನವರ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆ ನಡೆಯಿತು. ವೀರಪ್ಪಸವದತ್ತಿ ಮತ್ತು ನಾನು ಮಾತನಾಡಿದೆವು. ಗೆಳೆಯ ಬಾಳಪ್ಪನವರಲ್ಲಿ ಚಹಾ ತೆಗೆದುಕೊಂಡು, ಬಾಬೂಸಾಹೇಬರೊಂದಿಗೆ ಬಸ್ಸಿನಲ್ಲಿ ಧಾರವಾಡಕ್ಕೆ ಬಂದು, ಸ್ವಲ್ಪ ಊಟ ಮಾಡಿ ಹುಬ್ಬಳ್ಳಿಗೆ ಬಂದೆ. ಟ್ರೈನ್‌ ಹೊರಡುವ ಹೊತ್ತಾಗಿತ್ತು. ನೇರವಾಗಿ ಸ್ಟೇಷನ್ನಿಗೆ ಹೋದೆ. ಗೆ|| ಶಿವರಾಯ, ಗೌರಿಶಂಕರ ಇವರನ್ನಾಗಲೀ ಪತ್ರಿಕೋದ್ಯಮಿಗಳನ್ನಾಗಲಿ ಕಾಣಲು ಆಗಲಿಲ್ಲ.

ಗರಗದವರು ೧೬ ರಿಂದ ಬಸ್ಸು ತಡೆಯುವ ಮೂಲಕ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ್ದಾರೆ. ನಂತರ ಗುಂಗರಗಟ್ಟಿ ಅರಣ್ಯಭೂಮಿಯನ್ನು ಆಕ್ರಮಿಸುವುದು. ಧಾರವಾಡದಲ್ಲಿ ಗೋಡೌನ್‌ ಸತ್ಯಾಗ್ರಹ ಮಾಡುವುದು. ಹುಬ್ಬಳ್ಳಿಯವರು ಭೂಮಿಗಾಗಿ ಸತ್ಯಾಗ್ರಹ ಮಾಡುವರು. ೩೦೦-೪೦೦ ಜನ ಜೈಲಿಗೆ ಹೋಗಬಹುದೆಂದು ಹೇಳಿದ್ದಾರೆ.

ಅಗಸ್ಟ್

ಗುಲ್ಬರ್ಗಾದಲ್ಲಿ ಬಹಿರಂಗ ಸಭೆ.

ಬೆಳಗಿನ ಝಾವ ‘ಹುಡುಗಿ’ ಸೇರಿತು ರೈಲು. ಅಲ್ಲಿ ಮುಖ ತೊಳೆದು ಕಾಫಿ ಕುಡಿದು ಪ್ಯಾಸೆಂಜರಿನಲ್ಲಿ ಗುಲ್ಬರ್ಗಾಕ್ಕೆ ಹೋದೆ. ಸ್ಟೇಶನ್‌ಗೆ ಗೆ|| ಶರಣಪ್ಪ ತೆಂಗಿ ಮತ್ತು ಭೂಸನೂರ ಬಂದಿದ್ದರು. ಕೃಷ್ಣಭವನದಲ್ಲಿ ಬಿಡಾರ ಮಾಡಿ, ಸ್ನಾನಾದಿಗಳನ್ನು ಪೂರೈಸಿ, ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆ. ಗೆ|| ಅಮರಸಿಂಗ ರಾಠೋಡ, ಟಿ. ಬಿ. ತಿವಾರಿ ಇವರು ಬಂದರು. ಗೆ|| ವೀರಣ್ಣ ತಿಮ್ಮಾಜಿಯವರ ಪತ್ನಿ ನಾಗಮ್ಮನೂ ಬಂದಿದ್ದರು. ಸಂಜೆ ಬಹಿರಂಗ ಸಭೆ ಕರೆಯಲು ಏರ್ಪಾಟು ಮಾಡಿದರು. ಸಂಜೆ ಗೆ|| ಶರಣಪ್ಪ ತೆಂಗಿಯವರ ಕೂಡಾ ಜೇಲು ಸೂಪರಿನ್‌ಡೆಂಟ್‌ ಶ್ರೀ ಮಲ್ಲಪ್ಪನವರನ್ನು, ಅವರ ತೋಟದಲ್ಲಿ ಕಂಡು ಮನೆಗೆ ಬಂದೆವು ಮತ್ತೆ ಅವರೊಂದಿಗೆ ಜೈಲಿಗೆ ಹೋಗೆ ಗೆ|| ವೀರಣ್ಣ ತಿಮ್ಮಾಜಿಯವರನ್ನು ಕಂಡು ಮಾತನಾಡಿದೆ. ಅವರ ಆರೋಗ್ಯ ಚೆನ್ನಾಗಿಲ್ಲ.

ರಾತ್ರಿ ಊಟ ಮಾಡಿ ಸಭೆಗೆ ಹೋದೆ. ೧೦ರ ತನಕ ಸಭೆ ನಡೆಯಿತು. ಸಾಕಷ್ಟು ಜನ ನೆರದಿದ್ದರು. ಪೋಲಿಸರು ಸತ್ಯಾಗ್ರಹಿಗಳ ಮೇಲೆ ೧೦೭ನೇ ವಿಧಿ ಹಾಕುವುದನ್ನು ಖಂಡಿಸಲಾಯಿತು. ಸತ್ಯಾಗ್ರಹದಂತಹ ನೇರ ಕಾರ್ಯಕ್ರಮದ ಔಚಿತ್ಯ ವಿವರಿಸಿ, ಎಲ್ಲರ ಸಹಕಾರ ಕೇಳಲಾಯಿತು. ಗೆ|| ಶರಣಪ್ಪ ತೆಂಗಿಯವರು ಅಧ್ಯಕ್ಷತೆ ವಹಿಸಿದ್ದರು. ಭೂಸನೂರು ಮತ್ತು ತಿವಾರಿಯವರು ಮಾತನಾಡಿದರು.

ಅಗಸ್ಟ್೧೦

ಗುಲ್ಬರ್ಗಾದಿಂದ – ಬೀದರ್ – ಹೈದರಾಬಾದ್‌ ರಾತ್ರಿ ಪ್ರಯಾಣ.

ಗುಲ್ಬರ್ಗಾ ಬೀದರ್ ದಾರಿಯಲ್ಲಿ ‘ಹುಡುಗಿ’ ಎಂಬ ಒಂದು ಊರಿದೆ.

ಬೆಳಿಗ್ಗೆ ಗೆ|| ತಿವಾರಿಯವರು ಬಂದು ಬೀದರಿಗೆ ಒಂದು ಟಿಕೆಟ್ಟನ್ನು ಕೊಂಡು ಕೊಟ್ಟು (೪-೫೦) ಬಸ್ಸಿಗೆ ಹತ್ತಿಸಿ ಹೋದರು. ಹೋಟೆಲು ಬಿಲ್ಲನ್ನು ಅವರೇ ಕೊಟ್ಟರು. ಅಷ್ಟರ ಮಟ್ಟಿಗೆ ಈಗ ಪಾರ್ಟಿ ಸುಧಾರಿಸಿದೆ. ೧೦-೩೦ ಹೊತ್ತಿಗೆ ಬೀದರ್ ಸೇರಿದೆ. ರಿಕ್ಷಾದಲ್ಲಿ ಗೆ|| ಆರ್. ಬಿ. ಸ್ವಾಮಿಯವರ ಮನೆಗೆ ಹೋದೆ. ಅವರು ಇರಲಿಲ್ಲ. ಎಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಪಿ. ಎಸ್‌. ಪಿ. ಸೆಕ್ರೆಟರಿಯೊಬ್ಬರು ಜೊತೆಗೆ ಬಂದು ಸಹಾಯ ಮಾಡಿದರು. ಕೋರ್ಟಿನ ಹತ್ತಿರ ಗೆ|| ಪಿ. ಆರ್. ಶೇಟ್ಕರ ಭೇಟ್ಟಿಯಾಗಿ ನನ್ನನ್ನು ಮನೆಗೆ ಕರೆದೊಯ್ದು ಊಟ ಹಾಕಿ, ಉಪಚರಿಸಿದರು. ಅವರಲ್ಲಿಯೆ ರಾತ್ರಿ ಎರಡು ಗಂಟೆಯ ತನಕ ಇದ್ದು ಮಾತುಕತೆ ನಡೆಸಿದೆವು. ಅವರಿಗೂ ಪಿ. ಎಸ್‌. ಪಿ. ನೀತಿ ಮತ್ತು ಮುಂದಾಳತ್ವದಲ್ಲಿ ವಿಶ್ವಾಸ ಉಳಿದಿಲ್ಲ. ಆದರೆ, ಈಗಲೇ ಬಿಟ್ಟು ಹೊರಬಂದು ನಮ್ಮ ಪಾರ್ಟಿಗೆ ಸೇರುವುದು ಸರಿಯೇ ಎಂಬುದನ್ನು ವಿಚಾರಿಸುತ್ತಿದ್ದಾರೆ. ಚರ್ಚೆ ಬಹಳವಾಗಿ ನಡೆಯಿತು. ಗೆ|| ರಾಮರಾವ್‌, ಮುರಳೀಧರರಾವ್‌ ದೇಶಮುಖ್‌, ಸ್ವಾಮಿ ವಕೀಲರು, ಆರ್. ಬಿ. ಸ್ವಾಮಿ (ಸಂಜೆ ಬಂದರು) ಎಲ್ಲ ಕಲೆತು ವಿಚಾರ ಮಾಡಿದೆವು. ಯಾವ ತೀರ್ಮಾನಕ್ಕೂ ಬರಲಿಲ್ಲ. ಅವರವರು ಅವರವರ ಪಾರ್ಟಿಯಲ್ಲೇ ಇದ್ದುಕೊಂಡು ತಮ್ಮ ತಮ್ಮ ಕಾರ್ಯಕ್ರಮ ನಡೆಸಿಕೊಂಡು ಹೋಗುವುದೇ ಉಳಿದ ಮಾರ್ಗವೆಂದುಕೊಂಡು ಸುಮ್ಮನಾದರು.

ರಾತ್ರಿ ರೈಲಿಗೆ ಹೊರಟು ಹೈದರಾಬಾದಿಗೆ ಪ್ರಯಾಣ ಮಾಡಿದೆ. ಗೆ|| ಆರ್. ಬಿ. ಸ್ವಾಮಿ ಪಿ. ಎಸ್‌. ಪಿ. ಗೆ ಸೇರಿಲ್ಲ. ಸೇರುವುದೂ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅವರುಗಳೆಲ್ಲಾ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಕೇಸನ್ನು ಹುಮ್ನಾಬಾದಿಗೆ ವರ್ಗಾಯಿಸಿದ್ದಾರಂತೆ.

ಎಲ್ಲಾ ಖರ್ಚನ್ನು ನಾನೇ ವಹಿಸಿಕೊಳ್ಳಬೇಕಾಯಿತು. ಶಾರದಮ್ಮನ ಸೋಪ್‌ಬಾಕ್ಸ್‌ ಗೆ|| ಶೇಟ್ಕರ್ ಮನೆಯಲ್ಲೇ ಉಳಿಯಿತು.

ಅಗಸ್ಟ್೧೧

ಹೈದರಾಬಾದು ಕಾರ್ಯಾಲಯದಲ್ಲಿ.

ಡಾ|| ಲೋಹಿಯಾ ಉ. ಪ್ರ. ತೆರಳಿದ್ದಾರೆ. ಗೆ|| ಬದ್ರಿವಿಶಾಲ ಪಿಟ್ಟಿ ಮುಂಬಯಿಗೆ ಹೋಗಿದ್ದಾರೆ. ಕಾರ್ಯದರ್ಶಿ ಧನಿಕಲಾಲರೂ ಬಿಹಾರಿಗೆ –

ರಾತ್ರಿಗೆ ೩-೩೦ ಕ್ಕೆ ಬೀದರನ್ನು ಬಿಟ್ಟು ರೈಲು ಮಧ್ಯಾಹ್ನ ೧೨-೧೫ ಕ್ಕೆ ಹರಹರ ಎಂದು ಹೈದರಬಾದು ಸೇರಿತು. ನೂರು ಮೈಲಿಗೆ ಒಂಬತ್ತು ಗಂಟೆ ತೆಗೆದುಕೊಂಡಿತು. ನಾನು ಗಾರ್ಡ್‌ ಗಾಡಿಯಲ್ಲಿ ಮೇಲುಗಡೆ ಮಲಗಿ ಬಿಟ್ಟೆ. ಇನ್ನೇನು ರಿಟೈರ್ ಆಗುವ ವಯಸ್ಸಿನ, ಬಿಳೀ ಗಡ್ಡದ ಗಾರ್ಡ್‌ಆ ರೈಲಿನಷ್ಟೇ ಆಸಕ್ತಿ ಕೆರಳಿಸುವನಿದ್ದ. ಪ್ರತಿಯೊಂದು ವಿಷಯದ ಮೇಲೂ ತನ್ನದೆ ಆದ ವಿಮರ್ಶೆ, ಟೀಕೆ, ಟಿಪ್ಪಣೆ ನೀಡುತ್ತಿದ್ದ. ‘ಮೊಗಲ್‌-ಎ- ಅಜಮ್‌’ ಚಿತ್ರ ಇಲ್ಲೇ ಇದ್ದವರು ಎಲ್ಲರೂ ಮೆಚ್ಚುತ್ತಾರೆ. ಅಂಬೇಡ್ಕರ್ ಬೌದ್ಧ ಮತಕ್ಕೆ ಸೇರಿದ್ದು – ಚೀಣಾ ಭಾರತದ ಬಾಧವ್ಯ – ಇರಾನ್‌ ಅರಸನ ಕತೆ – ಇತ್ಯಾದಿ ನಮಗೆ (ನಾವು ಮೂರು-ನಾಲ್ಕು ಜನ ಅಸಹಾಯಕ ಶೊತೃಗಳು ಅವರ ಕೈಗೆ ಸಿಕ್ಕಿದ್ದೆವು) ಮೇಲಿಂದ ಮೇಲೆ ಹೇಳುತ್ತಲೇ, ಅನ್ನ ಮಾಡಿ, ಅಲ್ಲೇ ಊಟವನ್ನೂ ಮುಗಿಸಿದರು. ಏಕೆ ಈ ರೈಲು ಸುಧಾರಣೆಯಾಗಿಲ್ಲವೆಂದು ಕೇಳಿದರೆ, ಅದು ಮೊಹರಂ ದಿನ ಹುಟ್ಟಿದ್ದು ಎಂದು ಹೇಳಿದರು.

ಸೀದಾ ಕಾರ್ಯಾಲಯಕ್ಕೆ ಹೋದೆ. ದುಂಡುಮೇಜಿನ ಸುತ್ತ ಗೆ|| ಮುರಹರಿ, ಆಧ್ಯಾತ್ಮ ತ್ರಿಪಾಠಿ, ಅಜನಾಲ್ವಿ ಉದಾಸರಾಗಿ ಕುಳಿತಿದ್ದರು. ಅಲ್ಲಲ್ಲಿ ಒಳಗೆ ಒಬ್ಬಿಬ್ಬರು ಇದ್ದರು. ಕುಶಲ ಸಮಾಚಾರಗಳಾದವು. ನಮ್ಮ ಕಾರ್ಯಾಲಯಕ್ಕಿಂತ ಕಳಾಹೀನ, ಜೀವನ್ಮರಣ ಸ್ಥಿತಿ; ಎಲ್ಲೆಲ್ಲೂ ಅದರ ಮುದ್ರೆ ಒತ್ತಿತ್ತು. ಕಸ ಕಡ್ಡಿಗಳ ರಾಶಿ, ನಗು ಸತ್ತ ಮುಖ, ಅನಾಥ ಅಸಹಾಯಕ ಕೆಲಸಗಾರರು ಅಯ್ಯೋ ಹೀಗಾಗಬಾರದಿತ್ತು ಎಂದು ಮನಸ್ಸಿಗೆ ಸಂಕಟವಾಯಿತು.

ಗೆ|| ಮುರಹರಿಯವರೊಂದಿಗೆ ಅವರ ರೂಮಿಗೆ ಹೋಗಿ ಸ್ನಾನ ಮಾಡಿ ದುರ್ಗಾ ವಿಲಾದಲ್ಲಿ ಊಟ ಮಾಡಿ ಬಂದೆವು. ಸಂಜೆಯೂ ಹಾಗೇ ಎಲ್ಲೋ ಏನೋ ತಿಂದು ಮಲಗಿದೆವು.

ಅಗಸ್ಟ್೧೨

ಹೈದರಾಬಾದು. ಕಾರ್ಯಾಲಯ.

ಎದ್ದು ಚಹಾ ತೆಗೆದುಕೊಂಡು ಶೇವ್‌ ಮಾಡಿಸಿಕೊಂಡು ಬಂದೆವು. ಗೆ|| ಮುರಹರಿಯವರ ರೂಮಿಗೆ ಹೋಗಿ ಸ್ನಾನ ಮಾಡಿಕೊಂಡು ಅವರೊಂದಿಗೆ ಕಾರ್ಯಾಲಯಕ್ಕೆ ಬಂದು ಮಧ್ಯಾಹ್ನದವರೆಗು ಅಲ್ಲೇ ಇದ್ದು ಊಟಕ್ಕೆ ಹೋಗಿ ಬಂದೆವು. ಸಂಜೆ ಲಿಬರ್ಟಿಯಲ್ಲಿ ಟೀ ಕುಡಿದೆವು. ಗೆ|| ಕಮಲೇಶ, ಹೊಸ ಪರಿಚಯ, ಒಳ್ಳೆ ಚುರುಕಿನ, ಆದರೆ ಮೃದು ಸ್ವಭಾವದ ತರುಣ, ಉತ್ತರ ಪ್ರದೇಶದವರು. “ಕಲ್ಪನಾ” ಮತ್ತು “ಮ್ಯಾನ್‌ಕೈಂಡ್‌”ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯ ಪ್ರೇಮಿ, ಹಿಂದೀ ಪಂಡಿತ, ರಾತ್ರಿ ಬಹಳ ಹೊತ್ತು ಸುತ್ತಾಡಿದೆವು. ರೈಲ್ವೇ ಸ್ಟೇಶನ್ನಿಗೆ ಹೋಗಿ ೧೦ ಗಂಟೆ ರೈಲಿಗೆ ಹೋದರೆ ವಾಡಿಯಲ್ಲಿ ಕನೆಕ್ಷನ್‌ ಸಿಕ್ಕುವುದಿಲ್ಲವೆಂದು ಕೇಳಿ, ನಾಳೆ ಹೊರಡಲು ನಿರ್ಧರಿಸಿ ಹಿಂತಿರುಗಿದೆವು. ಮಲಗುವಾಗ ರಾತ್ರಿ ಒಂದು ಗಂಟೆಯಾಗಿತ್ತು. ನವ್ಯ ಕಾವ್ಯ, ಕಲೆ ಬಗ್ಗೆ ಚರ್ಚೆ ನಡೆಯಿತು. ಬೆಳಿಗ್ಗೆ ಮುಂಚೆ ಏಳಿಸುವ ಹೊಣೆ ಗೆ|| ಅಜನಾಲ್ವಿಯವರಿಗೆ ಕೊಟ್ಟು ಮಲಗಿದೆ.

ಹೈದರಾಬಾದು ರಿಕ್ಷಾದ ಊರು. ಬಸ್ಸಿಗೆ ಹತ್ತುವುದೊಂದು ಭಂಡ ಸಾಹಸವೇ ಸರಿ. ಖಿಲವಾಗುತ್ತಿರುವ ನಿಜಾಮಶಾಹಿ; ತಲೆ ಎತ್ತುತ್ತಿರುವ ರೆಡ್ಡಿ – ಕಮ್ಮಾ ಆಂಧ್ರ ತೆಲಗುಶಾಹಿಗಳಿಗೆ ತಿಕ್ಕಾಟ ನಡೆದಿದೆ. ಮೊಗಲರ ಆಳ್ವಿಕೆಯು ಕ್ರಮೇಣ ಮಾಯವಾಗುತ್ತಿದೆ. ಗುಣಕ್ಕಿಂತ ಇಂದು ದೋಷಗಳೇ ಹೆಚ್ಚು ಉಳಿದಿವೆ. ಮಧ್ಯೆ ಹೊಸ ಚೇತನವೂ ಕಾಣುತ್ತಿದೆ. ಚಟುವಟಿಕೆ ಎದ್ದು ಕಾಣುತ್ತಿದೆ.

ಈಗ ತಾನೆ ಎರಡೂ ನಗರಗಳೂ ಒಂದೆ ಆಡಳಿತಕ್ಕೆ ಸೇರಿವೆ. ನಮ್ಮವರು ಎಲ್ಲಾ ಸರ್ಕಾರಿ ಇಂಗ್ಲೀಷ್ಬೋರ್ಡುಗಳಿಗೂ ಮಸಿ ಬಳಿದಿರುವುದು ಹಾಗೇ ಇದೆ.

ಅಗಸ್ಟ್೧೩

ರಾಯಚೂರು, ಗೆ|| ನಾಗಪ್ಪನವರಲ್ಲಿ.

ಮುಂಚೆ ಏಳುವುದು ಸಾಧ್ಯವಾಗಲಿಲ್ಲ. ಗೆ|| ಅಜನಾಲ್ವಿಯವರನ್ನೂ ನಾನೇ ಏಳಿಸಬೇಕಾಯಿತು. ಅವಸರದಿಂದಲೇ ಇಬ್ಬರು ರಿಕ್ಷಾ ಹಿಡಿದು ಕಾಚಿಗುಡ್ಡಕ್ಕೆ ಧಾವಿಸಿದೆವು. ನಾವು ಸಮೀಪಿಸುತ್ತಿದ್ದಂತೆ ರೈಲು ಸ್ಟೇಶನ್‌ನಿಂದ ದೂರ ಸರಿಯಿತು. ಅಲ್ಲಿಂದ ನಿರಾಶರಾಗಿ ನಾಂಪಲ್ಲಿಗೆ ಬಂದೆವು. ೧೦ ಕ್ಕೆ ಒಂದು ರೈಲು ಹೊರಡುವುದಿತ್ತು. ಅದರಲ್ಲೇ ಹೋಗಲು ನಿರ್ಧರಿಸಿ ಅಲ್ಲೇ ಚಹಾ ಕುಡಿಯುತ್ತಾ ಪಾನ್‌ ತಿನ್ನುತ್ತಾ ಅಲೆದಾಡಿದೆವು. ರೈಲು ಹೊರಟಿತು. ಗೆ|| ಅಜನಾಲ್ವಿ ತಾವು ಬರೆದ ಹಿಂದೀ ಕವನ ಹೇಳುತ್ತಲೇ ಇದ್ದರು. ಅಗಲಿದೆವು. ಮೇಲೆ ಹತ್ತಿ ಮಲಗಿದೆ. ವಿಕಾರಾಬಾದಿನಲ್ಲಿ ಊಟ ಮಾಡಿ ಮತ್ತೆ ಮಲಗಿದೆ. ವಾಡಿಯಲ್ಲಿ ಚಹಾ ಕುಡಿದು ಮತ್ತೆ ಮಲಗಿದೆ. ಸಂಜೆ ಏಳಕ್ಕೆ ರಾಯಚೂರು ಸೇರಿದೆ. ದಿನವೆಲ್ಲಾ ಪ್ರಯಾಣ ಮಾಡಿ ಬೇಸತ್ತು ಹೋಗಿದ್ದೆ. ಬೆಳಿಗ್ಗೆ ಗೆಳೆಯರು ನನ್ನ ನಿರೀಕ್ಷೆ ಮಾಡಿ ಬಾರದ್ದನ್ನು ನೋಡಿ, ಬರಲಾರರೆಂದು ಭಾವಿಸಿ, ಹೆಚ್ಚಿನ ಕಾರ್ಯಕ್ರಮವನ್ನೇನೂ ಇಟ್ಟುಕೊಂಡಿರಲಿಲ್ಲ. ಗೆ|| ನಾಗಪ್ಪನವರ ಮನೆಗೆ ಹೋಗಿ ಉಳಿದೆ. ಗೆ|| ಗೌಸ್‌ ಮೊಹಿದ್ದೀನ್‌, ಸೂಗಪ್ಪ ಮತ್ತಿತರರು ಸೇರಿದ್ದರು. ಪಾರ್ಟಿ ಕಾರ್ಯಕ್ರಮ ತಿಳಿಸಿದೆ. ಮುಂದೇನು ಮಾಡಬೇಕೆಂಬ ಬಗ್ಗೆ ಚರ್ಚಿಸಿದೆವು. ಊಟ ಮಾಡಿ, ಆಯಾಸವಾಗಿದ್ದರಿಂದ ಮೊದಲೇ ಮಲಗಿದೆ. ಮತ್ತೆ ಬೆಳಿಗ್ಗೆ ಮುಂಚೆ ಎದ್ದು ಗುಂತಕಲ್ಲು ರೈಲನ್ನು ಹಿಡಿಯಬೇಕು.

ಅಗಸ್ಟ್೧೪

ಹೊಸಪೇಟೆ. ಮುಸಾಫಿರ್ ಖಾನಾ.

ಏಳುವಷ್ಟರಲ್ಲಿ ಎಕ್ಸ್‌ಪ್ರೆಸ್‌ ಹೋಗಿತ್ತು. ಏಳೂ ಮೂವತ್ತರ ಲೋಕಲ್‌ಗೆ ಹೋಗಲು ನಿಶ್ಚಯಿಸಿ ಸ್ಟೇಶನ್‌ಗೆ ಹೊರಟೆ. ತುಂಗಭದ್ರಾಕ್ಕೆ ಹೋಗುವ ಯಾತ್ರಿಕರ ಸಂಖ್ಯೆ ಅಪಾರವಾಗಿತ್ತು. ಟಿಕೆಟ್ಟು ಕೊಳ್ಳುವುದು ಆಗಲಿಲ್ಲ. ಗಾರ್ಡ್‌‌ಗೆ ಹೇಳಿ ಒಂದು ಸಣ್ಣ ಡಬ್ಬದಲ್ಲಿ ಹಮಾಲಿಯ ಸಹಾಯದಿಂದ ಹಾಸಿಗೆ ಹಾಕಿ ಒಳನುಗ್ಗಿ ನಿಂತುಕೊಂಡಿದ್ದಾಯಿತು. ಅಲ್ಲೇ ಒಬ್ಬರು ಹಳೆಯ ಸಹೋದ್ಯೋಗಿಗಳೂ ಇದ್ದರು. ಇಬ್ಬರಿಗೂ ಅನುಮಾನ ಬಂದು, ನಂತರ ಪರಿಚಯ ಮಾಡಿಕೊಂಡೆವು. ಹಿಂದೆ ನನ್ನ ಹಾಗೆ ಎಂ. ಎಲ್‌. ಎ. ಆಗಿದ್ದ ಕುಷ್ಟಗಿಯ ಶ್ರೀ ಅಂದಾನಪ್ಪನವರೇ ಅವರು. ಅವರ ಸಲಹೆಯ ಮೇರೆಗೆ ಆದವಾನಿಯಲ್ಲಿಳಿದು, ಬಸ್ಸಿನಲ್ಲಿ ಬಳ್ಳಾರಿಗೆ ಪ್ರಯಾಣ ಬೆಳೆಸಿದೆ. ಅವರೂ ಆದವಾನಿಯಲ್ಲಿಳಿದರು.

ಬಳ್ಳಾರಿಯಲ್ಲಿಳಿದು ರಿಕ್ಷಾದಲ್ಲಿ ಸುತ್ತಾಡಿದೆ, ಗೆ|| ವಲಿಯನ್ನು ಹುಡುಕಲು ಆಗಲಿಲ್ಲ. ಗೆ|| ಖಾದರ್ (ಈಗ ಪಿ. ಎಸ್‌. ಪಿ. ಯಾಗಿದ್ದಾನೆ) ಸಿಕ್ಕಿದರು. ಸ್ನಾನಕ್ಕೆ ಯಾವ ಹೋಟೆಲಿನಲ್ಲೂ ನೀರು ಸಿಕ್ಕಲಿಲ್ಲ. ಮಳೆಯಿಲ್ಲದೆ ಬಾವಿಗಳೆಲ್ಲಾ ಬತ್ತಿಹೋಗಿದೆಯಂತೆ. ನಲ್ಲಿ ಕಟ್ಟೆಯಲ್ಲಿ ನುರಾರು ಕೊಡಗಳು ಚಾತಕಪಕ್ಷಿಯಂತೆ ಬಾಯಿಕಳೆಯುತ್ತಾ ಉರುಳಾಡುತ್ತಿದ್ದ ದೃಶ್ಯ: ನೀರಿನ ಕ್ಷಾಮಕ್ಕೆ ಉರು ಬಲಿಯಾಗಿತ್ತು. ಹಾಗೇ ಒಂದಿಷ್ಟು ಅನ್ನ ತಿಂದು ರಿಕ್ಷಾ ಕೆಲಸಗಾರರ ಸಂಘದಲ್ಲಿ ಮಲಗಿದ್ದು, ಸಂಜೆ ಬಸ್ಸು ಹಿಡಿದು ಹೊಸಪೇಟೆಗೆ ಬಂದೆ. ಪುರಸಭಾ ಬಂಗಲೆಯಲ್ಲಿ ವಸತಿ ಮಾಡಿದೆ. ಗೆಳೆಯ ದಾಸನ್‌ ಕಾಮಲಾಪುರದ ವೆಂಕಪ್ಪ ಇತರರು ಬಂದು ಭೇಟಿಯಾದರು.

ಊಟ ಮಾಡಿ, ಹಳೆ ಅಪರಾಧಕ್ಕೆ ತಪ್ಪು ಕಾಣಿಕೆ ಕೊಟ್ಟು, ಹಾಸಿಗೆ ಹಿಡಿದೆ. ಲಕ್ಷ್ಮಿ ತಕ್ಕ ಪಾಠ ಕಲಿಸಿದಳು.

ಅಗಸ್ಟ್೧೫

ಹೊಸಪೇಟೆಯಿಂದ ಬೆಂಗಳೂರಿಗೆ.

೧೫ ವರ್ಷ ಸ್ವಾತಂತ್ರ್ಯ ದಿನಾಚರಣೆ.

ಎದ್ದು ಸ್ನಾನ ಮಾಡಿದೆ. ಗೆಳೆಯ ದಾಸನ್‌, ಹೊನ್ನೂರಪ್ಪ, ದೇವಲಾಪುರದ ಗೋವಿಂದಪ್ಪ, ವೆಂಕಪ್ಪ ಇವರೊಂದಿಗೆ ತಿಂಡಿ ತಿಂದು ಸ್ವಾತಂತ್ರ್ಯ ದಿನಾಚರಣೆಯ ಶಾಲಾ ಮಕ್ಕಳು ಮತ್ತು ಉಪಾಧ್ಯಾಯರುಗಳ ಮೆರವಣಿಗೆ ನೋಡಿದೆ. ಶಿಸ್ತು ಮತ್ತು ನಿಷ್ಠೆಯಿಲ್ಲದ ಮೆರವಣಿಗೆ ಬೀದಿಯಲ್ಲಿ ಸಾಗಿತ್ತು. ಜನರು ನಿರ್ಲಿಪ್ತರಾಗಿ ವೀಕ್ಷಿಸುತ್ತಿದ್ದರು.

ಗೆ|| ದೇಸಾಯಿ, ಡಾ|| ದೇವಿದಾಸ್‌ ಇವರೊಂದಿಗೆ ಮತ್ತೆ ಸ್ಟ್ಯಾಂಡ್‌ ಹೋಟೆಲಿನಲ್ಲಿ ಕಾಫಿ ಕುಡಿದೆವು. ಗೆ|| ದೇಸಾಯಿಯವರಿಗೆ ಒಂದು ಪತ್ರಿಕಾ ಭೇಟಿಯ ಹೇಳಿಕೆಯನ್ನಿತ್ತೆ. ಮತ್ತೆ ಖೋಲಿಗೆ ಹೋಗಿ ಪಾರ್ಟಿ ವಿಷಯ ಚರ್ಚಿಸಿದೆ. ಗೆ|| ದಾಸನ್‌ ತಾನು ಪಿ. ಎಸ್‌. ಪಿ. ಗೆ ಸೇರಿಲ್ಲವೆಂದು ಹೇಳುತ್ತಾರೆ. ಕಾಮಲಾಪುರದ ಚುನಾವಣಾನಂತರ ಅಲ್ಲಿ ಭಿಕರ ಪರಿಸ್ಥಿತಿ ಉಂಟಾಗಿ ಬಹುಮಂದಿ ಊರನ್ನೇ ಬಿಟ್ಟಿದ್ದಾರೆ. ಬಸವರಾಜ ಕಾಯಿಲೆಯಾಗಿ ಹಾವೇರಿ ಆಸ್ಪತ್ರೆ ಸೇರಿದ್ದನಂತೆ. ಈಗ ಎಲ್ಲಿದ್ದಾನೋ ಗೊತ್ತಿಲ್ಲ; ಮಾತು ಕತೆ ಮುಗಿಸಿದೆ.

ರೈಲಿಗೆ ಹೊರಟು ೩-೧೫ಕ್ಕೆ ಬೆಂಗಳೂರು ದಾರಿ ಹಿಡಿದೆ. ಗುಂತಕಲ್ಲಿನಲ್ಲಿ ಸ್ವಲ್ಪ ಊಟ ಮಾಡಿದೆ. ಪ್ರಯಾಣ ಮುಂದುವರಿಯಿತು.

ಅಗಸ್ಟ್೨೩

ಸೊರಬ.

ಸ್ನಾನಾದಿಗಳನ್ನು ಪೂರೈಸಿಕೊಂಡು, ಗೆಳೆಯ ಚಂದ್ರಶೇಖರರ ಮನೆಗೆ ಹೋಗಿ ಅವರ ತಾಯಿಯವರನ್ನು ಮಾತನಾಡಿಸಿಕೊಂಡು ಪೇಟೆಗೆ ಬಂದೆವು. ಗಜೇಂದ್ರವಿಲಾಸದಲ್ಲಿ ಕಾಫಿ ತಿಂಡಿ ಮುಗಿಸಿ, ೧೧ ಗಂಟೆ ಬಸ್ಸಿಗೆ ಗೆ|| ಪಟೇಲ್‌, ಸದಾಶಿವರಾವು, ತಿಮ್ಮಪ್ಪ, ಚೌಡಪ್ಪ ಇವರೊಂದಿಗೆ ಸೊರಬಕ್ಕೆ ಹೊರಟೆವು.

ಗೆ|| ಮರಿಯಪ್ಪ, ದ್ಯಾವಪ್ಪ, ಬಸವಣ್ಣಪ್ಪ, ರಾಮಚಂದ್ರ ತವನಂದಿ ಲಿಂಗಪ್ಪ ಇತ್ಯಾದಿ ಗೆಳೆಯರು ಕಾರ್ಯಾಲಯದಲ್ಲಿ ಸೇರಿದ್ದರು. ಬಹಿರಂಗ ಸಭೆ ಏರ್ಪಡಿಸಿರಲಿಲ್ಲ. ಸಂತೆಗೆ ತುಂಬಾ ಜನರು ನೆರೆದಿದ್ದರು. ಪಾಣಿ ಬಸವಣ್ಯಪ್ಪನವರಲ್ಲಿ ಊಟ ಮಾಡಿ, ಕಾರ್ಯಕರ್ತರ ಸಭೆ ಸೇರಿ, ತಾಲ್ಲೂಕು ಬೋರ್ಡಿಗೆ ಪಾರ್ಟಿ ವತಿಯಿಂದ ಉಮೇದುವಾರರನ್ನು ಹಾಕುವ ಬಗ್ಗೆ….

ಅಗಸ್ಟ್೨೯

ಶಿವಮೊಗ್ಗಕ್ಕೆ ಪ್ರಯಾಣ. ರೈಲಿನಲ್ಲಿ. ಇಂದೂ ಗೆಳೆಯ ಮುರಹರಿಯವರು ಬರಲಿಲ್ಲ. ಅವರಿಗಾಗಿ ಇನ್ನು ಕಾಯವುದು ಸಾಧ್ಯವಿಲ್ಲ.

ಅಗಸ್ಟ್೩೦

ಬಸವಾನಿಯಲ್ಲಿ ಗಣಪತಿ ಸಮಾರಂಭದ ಅಧ್ಯಕ್ಷತೆ ಡಾ|| ಚಂದ್ರಶೇಖರ್.

ಬೀರೂರನ್ನು ಸಮೀಪಿಸುತ್ತಲೇ ಎಚ್ಚರವಾಯಿತು. ಎದ್ದು ಕಾಫಿ ಕುಡಿದು ಬಂದು ಮಲಗಿದೆ. ಮತ್ತೆ ನಿದ್ರೆ ಬೀಳಲಿಲ್ಲ. ಅಷ್ಟರಲ್ಲಿ ಗಾಡಿಯಲ್ಲಿದ್ದವರೂ ಒಬ್ಬೊಬ್ಬರಾಗಿ ಎದ್ದರು. ಶಿವಮೊಗ್ಗೆಯಲ್ಲಿಳಿದು ನ್ಯಾಶನಲ್‌ ಲಾಡ್ಜಿಗೆ ಹೋದೆ. ಸ್ನಾನ ಮಾಡಿ ತಿಂಡಿ ತಿಂದು ಗೆ|| ರೇವಳಪ್ಪನಲ್ಲಿಗೆ ಹೋಗಿ. ಗೆ|| ಈಶ್ವರಗೌಡರ ಭೇಟಿ ಮಾಡಿ ಶ್ರೀ ಎ. ಕೆ. ರಾಮಚಂದ್ರ ಇವರಿಗೆ ೧೫ ರೂ. ಎಂ.ಓ. ಕಳಿಸಲು ಹೇಳಿ ಐದು ರೂ. ಇಸಕೊಂಡು ಬಂದೆ ಗೆ|| ತಿಮ್ಮಪ್ಪ ಊಟ ಮಾಡುತ್ತಿದ್ದ. ಆನವಟ್ಟಿ, ಸೊರಬ, ಕರೂರುಗಳಿಗೆ ಹೋಗಿ ಬಂದ ವಿಷಯ ತಿಳಿಸಿದ. ನಾಳೆ ಇತರ ಎಲ್ಲಾ ಗೆಳೆಯರನ್ನು ಕರೆದುಕೊಂಡು ತೀರ್ಥಹಳ್ಳಿಗೆ ಬರಲು ಹೇಳಿ ಶ್ರೀ ಘಂಟೆಹಕ್ಕಲು ರಾಮಪ್ಪಗೌಡರ ಜೊತೆ ಹೊರಟು ಬಸ್‌ಸ್ಟ್ಯಾಂಡಿಗೆ ಬಂದು, ಒಂದು ಗಂಟೆ ಬಸ್ಸಿಗೆ ತೀರ್ಥಹಳ್ಳಿಗೆ ಬಂದೆ. ಡಾ|| ಚಂದ್ರುರವರಲ್ಲಿ ಸ್ನಾನಮಾಡಿ ಬಟ್ಟೆ ಬದಲಾಯಿಸಿಕೊಂಡು ಗೆ.|| ಕಿಟ್ಟಪ್ಪ, ರಾಮಸ್ವಾಮಿ ಕೆ. ಟಿ. ಬಿ. ವಿ. ಮೂರ್ತಿ, ಡಾ. ರಂಗೇಗೌಡ ಇವರೊಂದಿಗೆ ಕಾರಿನಲ್ಲಿ ಬಸವಾನಿಗೆ ಹೋದೆ. ಗೇರುಗಲ್ಲು ಕರಿಬಸಪ್ಪಗೌಡರು ಅಲ್ಲೇ ಇದ್ದರು.

೭ ರಿಂದ ೧೦ ಗಂಟೆ ತನಕ ಕಾರ್ಯಕ್ರಮದಲ್ಲಿದ್ದು ಭಾಗವಹಿಸಿ ಅಧ್ಯಕ್ಷತೆ ವಹಿಸಿ ತೀರ್ಥಹಳ್ಳಿಗೆ ಹಿಂತಿರುಗಿದೆವು. ೪೨ ರಲ್ಲಿ ಬಸವಾನಿ ಮೂಲಕ ತಂತಿ ಕತ್ತರಿಸಲು ಹೋಗಿದ್ದೆ. ಮತ್ತೆ ಒಮ್ಮೆ ಯಾವಗಲೋ ಹೋದಂತಿದೆ. ಶ್ರೀ ಬಸವಾನಿ ರಾಮಶರ್ಮರ ಪರಿಚಯ ಭಾಷಣ, ಬಾಲಕಿಯರಿಂದ ವಿವಿಧ ವಿನೋದಾವಳಿ, ಯಕ್ಷಗಾನ, ಭಾಷಣಗಳು, ಅಧ್ಯಕ್ಷ ಭಾಷಣ, ಮಂಗಳಾರತಿ –

ರಾತ್ರಿ ಪ್ರವಾಸಿ ಮಂದಿರದಲ್ಲಿ ಊಟ ಮಾಡಿ ಡಾ. ರಲ್ಲಿ ಮಲಗಿದೆ.