ಸೆಪ್ಟಂಬರ್

ರಿಪ್ಪನ್‌ಪೇಟೆಯಲ್ಲಿ ಸಭೆ. ಶಿವಮೊಗ್ಗ ಎನ್‌. ಎಲ್‌.

ಎದ್ದು ಕಾಫಿ ಕುಡಿದು ಗೆ|| ತಿಮ್ಮಪ್ಪ, ನಾನು ನದಿಗೆ ಹೋಗಿ ಬಂದೆವು. ಗೆ|| ತೇಲ್ಕರ್ ರಲ್ಲಿ ಕುಳಿತುಕೊಂಡು ಶ್ರೀ ನಾರಾಯಣನ ಜಮೀನು ವ್ಯವಹಾರ ಕೇಳಿ ಒಂದು ಅರ್ಜಿ ಬರೆದುಕೊಟ್ಟಿದ್ದಾಯಿತು. ಗೆ|| ಚಂದ್ರಶೇಖರ್ ಇತ್ಯಾದಿಯವರನ್ನು ಕಂಡು ಮಾತನಾಡಿ ಮತ್ತೆ ೫ ನೇ ತಾರೀಖು ಬರುವುದಾಗಿ ಹೇಳಿ ೧೧-೩೦ ರ ಬಸ್ಸಿಗೆ ಹೊರಟು ರಿಪ್ಪನ್‌ಪೇಟೆಗೆ ಬಂದೆವು.

ಸೆಪ್ಟಂಬರ್

ಆರಗ ಮನೆಯಲ್ಲಿ.

ಶ್ರೀ ಶಂಕರನಾರಾಯಣ ಭಟ್ಟರಿಂದ ಜಮಾ ೧೦/- ರೂ.

ಸ್ನಾನಾದಿಗಳನ್ನು ಪೂರೈಸಿದೆವು. ಅಲ್ಲೇ ತಿಂಡಿ ಕಾಫಿ ಮುಗಿಸಿದೆವು. ಗೆ|| ಸದಾಶಿವರಾಯರನ್ನು ಶಿಕಾರಿಪುರಕ್ಕೆ ಕಳಿಸಲಾಯಿತು. ನಾವು ಪೇಟೆಗೆ ಬಂದೆವು. ಗೆ|| ಐತಾಳರಲ್ಲಿ ಕುಳಿತೆವು. ಗೆ|| ಶಂಕರ್ ಮತ್ತು ಪಟೇಲರು ಕರಿಮನೆಗೆ ಹೋದರು. ಸಂಜೆ ಶಿವಮೊಗ್ಗೆಗೆ ಹೋಗುವುದಾಗಿ ಹೇಳಿದರು.

ಮಧ್ಯಾಹ್ನ ಕಿಟ್ಟಪ್ಪನ ಮನೆಯಲ್ಲಿ ಊಟ ಮಾಡಿ, ೩-೩೦ರ ಬಸ್ಸಿಗೆ ಆರಗಕ್ಕೆ ಬಂದೆ. ಗೆ|| ನಾರಾಯಣಮೂರ್ತಿಯವರಲ್ಲಿ ಸೇರಿ ತಾಲ್ಲೂಕು ಬೋರ್ಡು ಚುನಾವಣೆಗೆ ಉಮೇದುವಾರರನ್ನು ನಿಲ್ಲಿಸುವ ಬಗ್ಗೆ ಆಗಿರುವ ತೀರ್ಮಾನದ ಸಮರ್ಥನೆ ಮಾಡಿ ಆರಗ, ಪಾರ್ಟಿ ಘಟಕದ ಸಮಿತಿಯನ್ನು ಪುನರ್ರಚಿಸಿದೆ. ಗೆ|| ನಾರಾಯಣಮೂರ್ತಿ ಕಾರ್ಯದರ್ಶಿಯಾಗಿರುವಂತೆ ನೇಮಿಸಲಾಯಿತು.

ರಾತ್ರಿ ಮನೆಗೆ ಹೋದೆ. ತಾಯಿಯವರ ಆರೋಗ್ಯ ಹಾಗೇ ಇದೆ. ಅಷ್ಟೇನೂ ಉತ್ತಮವಾಗಿಲ್ಲ. ತಿಮ್ಮಯ್ಯಗೌಡರು ಚಿಕ್ಕ ಹುಡುಗಿಯೊಬ್ಬಳನ್ನು ಅವರ ನೆರವಿಗಾಗಿ ಬಿಟ್ಟಿದ್ದಾರೆ. ನರಳುತ್ತಾ ಎದ್ದು ಅನ್ನ ಬೇಯಿಸಿ ಬಡಿಸಿದರು. ಊಟ ಮಾಡಿ ಮಲಗಿದೆ.

ಸೆಪ್ಟಂಬರ್

೩-೦-೦+೧/೪-೦+೦.೧೩/೦+೧-೦

ಇಂದು ಸ್ವಲ್ಪ ಮಳೆಬಿತ್ತು.

ಎದ್ದು ಮುಖ ತೊಳೆದು ತಾಯಿ ಕೊಟ್ಟ ಕಾಫಿ ಕುಡಿದು, ಹನುಮಣ್ಣನ ಹತ್ತಿರ ಹಾಸಿಗೆ ಹೊರೆಸಿಕೊಂಡು ಕಳಸನಾಯ್ಕರ ಅಂಗಡಿಗೆ ಬಂದೆ. ಬರುತ್ತಾ ದಾರಿಯಲ್ಲಿ ಆಚಾರರನ್ನು ಕಂಡೆ ೭-೩೦ರ ಬಸ್ಸು ಬಂತು. ಅದರಲ್ಲಿ ಹತ್ತಿ ರಿಪ್ಪನ್‌ಪೇಟೆಗೆ ಬಂದು, ಅಲ್ಲಿ ಬಸ್ಸನ್ನು ಬದಲಾಯಿಸಿ, ಹೊಸನಗರಕ್ಕೆ ಬಂದೆ. ರಿಪ್ಪನ್‌ಪೇಟೆಯಲ್ಲಿ ಗೆ|| ಸುಕುಮಾರನ್‌ ಮತ್ತು ಮುದ್ದು ಭಂಡಾರಿ ಕಂಡಿದ್ದರು. ಹಾಸಿಗೆಯನ್ನು ಸ್ಟ್ಯಾಂಡಿನಲ್ಲೇ ಇಟ್ಟು ತೇಲ್ಕರ್ ರಲ್ಲಿಗೆ ಹೋದೆ. ಕೊಳಗಿ ಲೋಕಪ್ಪಗೌಡರು, ಇತ್ಯಾದಿ ಗೆಳೆಯರು ಬಂದಿದ್ದರು.

ಮಧ್ಯಾಹ್ನ ಗೆ|| ಶೀನಪ್ಪ (ರಿಜಿಸ್ಟಾರ್ ಆಫೀಸಿನಲ್ಲಿದ್ದಾರೆ) ನವರಲ್ಲಿ ಸ್ನಾನ ಊಟ ಮಾಡಿ ಬಂದು ತೇಲ್ಕರರ ಮಹಡಿಯಲ್ಲಿ ಸೇರಿ ತಾಲ್ಲೂಕು ಬೋರ್ಡಿನ ಉಮೇದುವಾರರನ್ನು ನಿಲ್ಲಿಸುವ ಬಗ್ಗೆ ವಿಚಾರ ಮಾಡಿದೆವು. ಗೆಳೆಯರಾದ ಶ್ರೀನಿವಾಸರಾವ್‌(ಹುಂಚ), ಕೊಳಗಿ ಲೋಕಪ್ಪ ಗೌಡರ, ಟೆಂಕಬೈಲು ಮಂಜಪ್ಪಗೌಡರು, ತೇಲ್ಕರ್ ಮತ್ತು ಚಂದ್ರಶೇಖರರ ಒಂದು ಸಮಿತಿ ರಚಿಸಿ, ಮುಂದಿನ ಕೆಲಸ ಅವರಿಗೆ ವಹಿಸಿದೆ.

ಸಂಜೆ ೬-೩೦ರ ಬಸ್ಸಿಗೆ ಹೊರಟು ಸಾಗರಕ್ಕೆ ಬಂದೆ. ರಾತ್ರಿ ಸಾಗರ ಹೋಟೆಲಿನಲ್ಲಿ ಉಳಿದೆ. ಗೆಳೆಯರು ಯಾರು ಸಿಕ್ಕಲಿಲ್ಲ.

ನಾಳೆ ಸೊರಬಕ್ಕೆ ಬೆಳಿಗ್ಗೆ ಹೋಗಬೇಕು.

ಸತ್ಯಾಗ್ರಹಿಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಧಾರವಾಡ ಜೈಲಿನಲ್ಲಿ ಉಪವಾಸ ಹೂಡಿದ ವಾರ್ತೆ ಪ್ರಜಾವಣಿಯಲ್ಲಿ ಓದಿದೆ. ಶ್ರೀ ಬಸವಲಿಂಗಪ್ಪನವರಿಗೂ (ಉಪ ಸಚಿವ), ಶ್ರೀ ಬಿ. ಕೆ. ಪುಟ್ಟರಾಮಯ್ಯನವರಿಗೂ ಪತ್ರ ಬರೆದು, ಸತ್ಯಾಗ್ರಹಿಗಳನ್ನು ಉಚಿತವಾಗಿ ಕಂಡುಕೊಳ್ಳಲು ಸಲಹೆ ನೀಡಬೇಕೆಂದು ತಿಳಿಸಿದೆ. ಗೆ|| ಭಕ್ತವತ್ಸಲಿನಗೆ ಮತ್ತೊಂದು ಪತ್ರ ಬರೆದು ಆರಗದಲ್ಲಿ ಪೋಸ್ಟ್‌ಮಾಡಿದೆ.

ಸೆಪ್ಟಂಬರ್

ತೀರ್ಥಹಳ್ಳಿಯಿಂದ ಶಿವಮೊಗ್ಗ ನ್ಯಾಶನಲ್‌ ಲಾಡ್ಜ್‌.

ಸ್ನಾನಾದಿಗಳನ್ನು ಮುಗಿಸಿ ಶ್ರೀ ಗುರುಮೂರ್ತಿಯವರೊಂದಿಗೆ ಪೇಟೆಗೆ ಬಂದೆ. ಪಂಜೆಗಳನ್ನು ಅಗಸರಿಗೆ ಹಾಕಿದ್ದೆ. ಗುರುಮೂರ್ತಿಯವರು ಒಂದು ಖಾದಿ ಪಂಚೆ ಕೊಟ್ಟರು. ಅದನ್ನೇ ಉಟ್ಟುಕೊಂಡೆ. ಹಿಂದೆ ಒಮ್ಮೆ ಗುರುಮೂರ್ತಿಯವರು ಒಂದು ಖಾದಿ, ಪಂಜೆ, ಜುಬ್ಬಾ ಕೊಟ್ಟಿದ್ದರು. ಅವನ್ನು ನಂತರ ನಾನು ಬಾ. ಸು. ಕೈಗೆ ಕೊಟ್ಟೆ.

ಡಾ|| ಚಂದ್ರಶೇಖರರಲ್ಲಿ ಮಧ್ಯಾಹ್ನ ಊಟ ಮಾಡಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡೆ. ಗೆ|| ಪುರುಷೋತ್ತಮ ಬಂದ. ಶ್ರೀ ವಿಶ್ವನಾಥ ಸಂಜೆ ಶಿವಮೊಗ್ಗಕ್ಕೆ ಕಾರಿನಲ್ಲಿ ಹೋಗುತ್ತಾನೆಂದು ತಿಳಿದು ಬಂತು. ಬಸ್ಸಿನಲ್ಲಿ ಹೊರಡುವುದನ್ನು ಬಿಟ್ಟು ಅವನ ಕಾರಿನಲ್ಲಿಯೇ ಸಂಜೆ ಹೊರಟು ಶಿವಮೊಗ್ಗೆಗೆ ಬಂದೆ.

ಶ್ರೀ ಕಾಳಿಂಗರಾಯರು ಬಂದಿದ್ದಾರೆಂದು ತಿಳಿಯಿತು. ಎರಡನೇ ತಾರೀಖು ಬಂದವರು ಅವರ ಜೊತೆಗಾರರಾಗಿದ್ದ ಸೋಹನಕುಮಾರಿಯ ತಮ್ಮ ತಿವಾರಿಯನ್ನು ಇಲ್ಲೇ ಬಿಟ್ಟು ಹೋಗಿದ್ದಾರಂತೆ. ಆತನಿಗೆ ಇದ್ದಕ್ಕಿದ್ದ ಹಾಗೇ ಗಂಟಲು ನೋವು ಪ್ರಾರಂಭವಾಗಿ ಆಸ್ಪತ್ರೆ ಸೇರಿ, ಬೆಳಿಗ್ಗೆಯೇ ಮೃತಪಟ್ಟನೆಂಬ ವಾರ್ತೆ ಕೇಳಿ ಅವರು ಬಂದಿದ್ದರು. ಕಾಳಿಂಗರಾರಿಗೂ ಮೃತನ ಸಹೋದರಿಗೂ ಸಂತಾಪ ಹೇಳಿಯಾಯಿತು. ಅವರೊಂದಿಗೆ ರಾತ್ರಿ ಗಣಪತಿ ಸಮಾರಂಭದಲ್ಲಿ ಶ್ರೀ ಬಿ. ಎಸ್‌. ರಾಮಾಚಾರ್ಯರ ಕವನ ವಾಚನ ಕೇಳಲೆಂದು ಹೋಗಿದ್ದೆ. ಅಲ್ಲೇ ಗೆ|| ಸಿಂಧುವಾಡಿ ರಾಘು ಸಿಕ್ಕಿದ್ದರು. ಎಲ್ಲಾ ಒಟ್ಟಾಗಿ ಕಾಲೇಜಿನ ಹತ್ತಿರ ಹೋಗಿ, ರಾತ್ರಿ ಒಂದರ ತನಕ ಸಣ್ಣದಾಗಿ ಗುಂಡು ಹಾಕಿ ಬಂದೆವು. ಆದರೆ ಯಾರೂ ಕಾಳಿಂಗರಾಯರನ್ನು ಹಾಡಿ ಎಂದು ಕೆಳಲು ಧೈರ್ಯ ಮಾಡಲಿಲ್ಲ. ದುಃಖ ಮರೆಸಲೆಂದೇ ಈ ಪಾರ್ಟಿಯಾಯಿತು.

ಸೆಪ್ಟಂಬರ್

ರಿಪ್ಪನ್‌ಪೇಟೆ-ಸಾಗರ ಗೆ|| ಚೌಡಪ್ಪನವರಲ್ಲಿ.

ಬೆಳಿಗ್ಗೆ ಗೆಳೆಯ ಶಂಕರ್ ಮತ್ತು ಸದಾಶಿವರಾಯರು ಬಂದರು. ಶ್ರಿ ವಿಶ್ವನಾಥನ ಕಾರಿನಲ್ಲಿ ಕಾಳಿಂಗರಾವ್‌ ಜೊತೆ ಆಸ್ಪತ್ರೆಗೆ ಹೋಗಿ, ಆಸ್ಪತ್ರೆಯಲ್ಲಿ ತೀರಿಕೊಂಡ ತಿವಾರಿಯವರ ಕಾಯಿಲೆಯ ನಿಜಸ್ಥಿತಿ ಕೇಳಿ ತಿಳಿದುಕೊಂಡು ಬಂದೆವು. ಟೈಟಾನಸ್‌ ಆಗಿರಬೇಕು ಎಂದರು. ಹೋದ ಜೀವ ಮರಳಿಬಾರದು. ಆದರೂ ಸಮಾಧಾನಕ್ಕೆಂದು ಕೇಳಿದ್ದಾಯಿತು. ಅವರನ್ನು ಬೀಳ್ಕೊಟ್ಟು ನಾನು ಮತ್ತೆ ಹೋಟೆಲಿಗೆ ತಿರುಗಿದೆ. ಗೆ|| ಬಾಬು ಸಾಹೇಬ ಎಲೆಗಾರ, ಮಹದೇವಪ್ಪ ಮುರುಗೋಡ, ಭಕ್ತವತ್ಸಲ ಮತ್ತು ಶಾರದ ಇವರಿಗೆ ಪತ್ರ ಬರೆದು, ಊಟ ಮಾಡಿ ೨ ಗಂಟೆಯ ಬಸ್ಸಿಗೆ ರಿಪ್ಪನ್‌ಪೇಟೆಗೆ ಹೊರಟೆ.

ಎರಡು ಮೂರು ಸಲ ಪೋನ್‌ ಮಾಡಿ ಗೆ|| ರೇವಳಪ್ಪ ಮತ್ತು ಈಶ್ವರಗೌಡರನ್ನು ಬರಲು ಹೇಳಿದೆ ಬರಲಿಲ್ಲ.

ಹೊಸನಗರಕ್ಕೆ ಹೊರಟವನು, ರಿಪ್ಪನ್‌ಪೇಟೆಯಲ್ಲಿ ಹೊಸನಗರದಿಂದ ಬಂದ ಗೆಳೆಯರಿಂದ ಅಲ್ಲಿನ ಸಂಗತಿ ತಿಳಿದುಕೊಂಡು ಸಾಗರಕ್ಕೆ ಹೋದೆ ಶ್ರೀ. ಬಿ. ಎಸ್‌. ಗುಂಡುರಾಯರ ಕೋಣೆಗೆ ಹೋಗಿ, ಅವನ ಜೊತೆಯೇ ಹೋಟೆಲಿನಲ್ಲಿ ಊಟ ಮಾಡಿ ಬಂದೆವು. ಗೆ|| ಪ್ರಭು, ಕಮಲಾಕ್ಷ, ಚಂದ್ರಶೇಖರ, ಸತ್ಯ ಇತ್ಯಾದಿಯವರನ್ನು ಕಂಡೆ, ತಿಮ್ಮಪ್ಪ ತಾಳಗುಪ್ಪಕ್ಕೆ ಹೋಗಿ ಬಂದ. ರಾತ್ರಿ ಗೆ|| ಚೌಡಪ್ಪನವರಲ್ಲಿಗೆ ಹೋಗಿ ಮಲಗಿದೆವು.

ಸೆಪ್ಟಂಬರ್ ೧೦

ಹೊಸನಗರ-ಶಿವಮೊಗ್ಗ. ನ್ಯಾ. ಲಾಡ್ಜ್‌.

ಎದ್ದು ಸ್ನಾನಾದಿಗಳನ್ನು ಮುಗಿಸಿ ಎಲ್ಲರೂ ಪೇಟೆಗೆ ಬಂದೆವು. ರಾಮಚಂದ್ರ ಭವನದಲ್ಲಿ ತಿಂಡಿ ತಿಂದು, ಆಸ್ಪತ್ರೆಗೆ ಹೋಗಿ ಡಾಕ್ಟರ್ ವೆಂಟರಾಯರನ್ನು ನೋಡಿ, ಆಸ್ಪತ್ರೆಗೆ ಬಂದಿದ್ದ ಕೈದಿಗಳನ್ನು ಮಾತನಾಡಿಸಿಕೊಂಡು ಬಸ್‌ಸ್ಟ್ಯಾಂಡಿಗೆ ಹೋದೆವು.

೧೧ ಗಂಟೆಯ ಬಸ್ಸಿಗೆ ಗೆ|| ಸತ್ಯನಾರಾಯಣ ಮತ್ತು ನಾನು ಹೊಸನಗರಕ್ಕೆ ಹೊರಟು ಬಂದೆವು. ಸಂಜೆ ನಾಲ್ಕು ಗಂಟೆಯ ತನಕ ಅಲ್ಲಿದ್ದು ಗೆಳೆಯರನ್ನೆಲ್ಲಾ ಕಂಡು ನಾಮಪತ್ರ ಸಲ್ಲಿಸುವ ಬಗ್ಗೆ ಸಲಹೆ ಕೊಟ್ಟು ಬಸ್ಸಿನಲ್ಲಿ ಶಿವಮೊಗ್ಗೆಗೆ ಬಂದೆವು.

ನಾಳಿನ ಸಭೆಗೆ ಹೊರಗಡೆಯಿಂದ ಯಾರೂ ಬಂದಂತೆ ಕಾಣಲಿಲ್ಲ. ನಾಳೆ ಎಲ್ಲರೂ ಬೆಳಿಗ್ಗೆ ಬರಬಹುದು.

ನಿನ್ನೆ ನಡೆದ ಒಲಂಪಿಕ್‌ ಹಾಕಿ ಪಂದ್ಯದಲ್ಲಿ ಭಾರತ ಪಾಕಿಸ್ತಾನಕ್ಕೆ ಒಂದು ಗೋಲಿನಿಂದ ಸೋತು ೧೯೨೮ರಿಂದ ಪ್ರಶಸ್ತಿಗಳಿಸುತ್ತಿದ್ದುದನ್ನು ಕಳೆದುಕೊಂಡು ಬೆಳ್ಳಿ ಪದಕ ಮಾತ್ರ ಪಡೆಯಿತು. ಹಿತ್ತಾಳೆ ಪದಕ ಬ್ರಿಟನ್ನಿಗೆ ಹೋಯಿತು.

ಗೆಳೆಯ ಪಟೇಲ್‌, ಶಂಕರ ಇತ್ಯಾದಿ ಗೆಳೆಯರು ತೀರ್ಥಹಳ್ಳಿಗೆ ಹೋಗಿದ್ದಾರೆಂದು ತಿಳಿಯಿತು. ನಾನು ರಾತ್ರಿ ತೀರ್ಥಹಳ್ಳಿಗೆ ಟ್ರಂಕ್‌ಕಾಲ್‌ ಮಾಡಿ ತುಡ್ಕಿ ದಿನಕರನಿಗೆ ಬಟ್ಟೆ ಕಳಿಸುವಂತೆ ಹೇಳಿದೆ. ಗೆ|| ಮಂಚಿ ದೇವಪ್ಪ ಮತ್ತು ಗೋಪಾಲಕೃಷ್ಣ ಉರಾಳರಿಗೆ ಪತ್ರ ಬರೆದು ಸಾಗರದಿಂದ ಬಸ್ಸಿನಲ್ಲಿ ಕಳಿಸುವಂತೆ ಗೆ|| ಪ್ರಭು ಹತ್ತಿರ ಕೊಟ್ಟೆ.

ಸೆಪ್ಟಂಬರ್ ೧೧

ರಾಜ್ಯ ಸಮಿತಿ ಸಭೆ.

ಬೆಳಿಗ್ಗೆ ನಾನು, ಸತ್ಯ ರೈಲ್ವೇ ಸ್ಟೇಶನ್‌ಗೆ ಹೋಗಿದ್ದೆವು. ಯಾರು ಬರಲಿಲ್ಲವೆಂದು ಹಿಂತಿರುಗಿದೆವು. ಗೆ|| ಕೃಷ್ಣಗೋಪಾಲ, ವೆಂಕಟಸ್ವಾಮಿ ಮತ್ತು ಭಕ್ತವತ್ಸಲ ಹಳೇ ನಿಲ್ದಾಣದಲ್ಲೇ ಇಳಿದು ಬಂದಿದ್ದರು. ಹನ್ನೊಂದರ ಹೊತ್ತಿಗೆ ಗೆ|| ಬಿ. ಕೆ. ಶ್ರೀ ರಾಮಯ್ಯ, ವೆಂಕಟರಾಂ, ವೆಂಕಟರಮಣ ಮತ್ತು ಮಾಧವನ್‌ ಕಾರಿನಲ್ಲಿ ಬಂದರು. ಗೆ|| ಹನುಮಂತಪ್ಪ, ಅಂಕಳಪ್ಪ ಬಸ್ಸಿನಲ್ಲಿ ಬಂದರು. ಗೆ|| ಪಟೇಲರು ಅವರ ತಂದೆಯವರೊಡನೆ ಚನ್ನಗಿರಿಗೆ ಹೋದವರು ಸಂಜೆ ನಾಲ್ಕು ಗಂಟೆಗೆ ಬಂದರು.

ಶಿವಮೊಗ್ಗದಲ್ಲೇ ಎಲ್ಲರೂ ಊಟ ಮಾಡಿ; ಕಾರು, ಬಸ್ಸುಗಳಲ್ಲಿ ಮಧ್ಯಾಹ್ನ ತುಂಗಾ ಪ್ರವಾಸಿ ಮಂದಿರಕ್ಕೆ ಹೋದೆವು. ಸಂಜೆ ನಾಲ್ಕರಿಂದ ಸಭೆ ಆರಂಭಿಸಿ ರಾತ್ರಿ ಒಂಬತ್ತಕ್ಕೆ ಮುಗಿಸಿದೆವು. ಕಾನೂನುಭಂಗ ಚಳುವಳಿಯನ್ನು ತೀವ್ರಗೊಳಿಸಲು ಮತ್ತು ನವೆಂಬರ್ ೧೫ ರೊಳಗಾಗಿ ಮುಖ್ಯ ಕಾರ್ಯಕರ್ತರೆಲ್ಲಾ ಬಂಧನಕ್ಕೊಳಗಾಗಬೇಕೆಂದೂ ತೀರ್ಮಾನಿಸಲಾಯಿತು. ಕ್ಷಾಮ, ಭೂ ಸುಧಾರಣೆ, ಬೆಲೆ ಏರಿಕೆ ಮತ್ತು ಕೇಂದ್ರ ನೌಕರರು ನಿರ್ಣಯಗಳನ್ನು ದಿ. ಮೊಹರೆ ಹನುಮಂತರಾವ್‌, ಗಂಗಾಧರ ದೇಶಪಾಂಡೆ ಮತ್ತು ಫಿರೋಜ್‌ ಗಾಂಧಿಯವರ ನಿಧನದ ಬಗ್ಗೆ ಸಂತಾಪ ಸೂಚಕ ನಿರ್ಣಯವನ್ನೂ ಅಂಗೀಕರಿಸಿ ಮುಕ್ತಾಯವಾಯಿತು.

ರಾತ್ರಿ ಅಲ್ಲೇ ಊಟ ಮಾಡಿದೆವು. ಕೆಲವರು ಅಲ್ಲೇ ಉಳಿದರು. ನಾವು ಹೋಟೆಲಿಗೆ ಬಂದು ಮಲಗಿದೆವು.

ಗೆಳೆಯ ಬಾ. ಸು. ಕೃ. ರಾಜಿನಾಮೆ ಅಂಗೀಕರಿಸಿ ಅವರ ಜಾಗಕ್ಕೆ ಗೆ|| ಟಿ. ಐ. ಮಾಧವನ್‌ರನ್ನು ನೇಮಿಸಲಾಯಿತು.

ಸೆಪ್ಟಂಬರ್ ೧೨

ಶಿವಮೊಗ್ಗ ನ್ಯಾಶನಲ್‌ ಲಾಡ್ಜ್‌.

ಇಂದು ತಾಲ್ಲೂಕು ಬೋರ್ಡುಗಳಿಗೆ ನಾಮಪತ್ರ ಸಲ್ಲಿಸಲು ಈ ಜಿಲ್ಲೆಯಲ್ಲಿ ಕಡೇ ದಿನವಾಗಿದ್ದುದರಿಂದ ಗೆ|| ಪಟೇಲರು ಬೆಳಿಗ್ಗೆ ಚನ್ನಗಿರಿಗೂ, ಚೌಡಪ್ಪ, ತಿಮ್ಮಪ್ಪ ಸಾಗರಕ್ಕೂ, ಸದಾಶಿವರಾಯರು ಶಿಕಾರಿಪುರಕ್ಕೂ ಹೋದರು. ನಾನು ಹೊಸನಗರಕ್ಕೆ ಹೋಗಬೇಕೆಂದಿದ್ದೆ. ಹತ್ತು ಗಂಟೆ ಬಸ್ಸು ತಪ್ಪಿದ್ದರಿಂದ ಹೋಗಲಿಲ್ಲ. ಗೆ|| ತೇಲ್ಕರ್ ರವರಿಗೊಂದು ತಂತಿ ಕಳಿಸಿ ಎಲ್ಲರಿಂದಲೂ ನಾಮಪತ್ರ ಸಲ್ಲಿಸಲು ತಿಳಿಸಿದೆ.

ಗೆ|| ರೇವಳಪ್ಪ ಅವರ ಮಗನ ಬೋನು ಒಂದರ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಮಧ್ಯಾಹ್ನ ಹೋದರು. ಅವರ ಜೊತೆ ಭಕ್ತವತ್ಸಲನನ್ನು ರವಾನೆ ಹಾಕಿದೆ. ಅವರೊಂದಿಗೆ ಕೃಷ್ಣಗೋಪಾಲರೂ ಹೋದರು. ಗೆ|| ಶ್ರೀ ರಾಮಯ್ಯ ಇತ್ಯಾದಿಯವರು ಜೋಗಕ್ಕೆ ಹೋಗಿ ಇಂದೇ ಬೆಂಗಳೂರಿಗೆ ಹೋಗುವುದಾಗಿ ಹೇಳಿದರು. ಗೆ|| ಹನುಮಂತಪ್ಪ ಇತ್ಯಾದಿಯವರೂ ತಂತಮ್ಮ ಊರುಗಳಿಗೆ ಹೋದರು.

ರಾಜ್ಯ ಸಮಿತಿ ತೀರ್ಮಾನಗಳನ್ನು ಬೆಂಗಳೂರಿನಲ್ಲೇ ಪತ್ರಿಕೆಗಳಿಗೆ ಬರೆದು ಕಳಿಸುವಂತೆ ಗೆ|| ಕೃಷ್ಣಗೋಪಾಲರಿಗೆ ತಿಳಿಸಲಾಯಿತು.

ಇಂದು ಗಣಪತಿ (ರಾಷ್ಟ್ರೀಯ) ವಿಸರ್ಜನೆ, ಕರಗಕ್ಕೆ ಸೇರಿದಂತೆ ಜನ ನೆರೆದಿದ್ದಾರೆ. ಕೀಲುಕುದುರೆ ಇತ್ಯಾದಿ ಮನರಂಜನೆ ಗೆ|| ಶಂಕರ ನಾರಾಯಣ ಭಟ್ಟರು, ಸದಾಶಿವರಾಯರೊಂದಿಗೆ ಹೋಗಿ ಒಂದು ಹತ್ತು ನಿಮಿಷವಿದ್ದು ಬಂದುಬಿಟ್ಟೆ.

ಬಳಲಿಕೆ ತುಂಬಾ ಆಗಿದೆ. ಓಡಾಟದ ಆಯಾಸದಿಂದ ಬಂದಿರಬಹುದು : ಬಿ೨ ಮಾತ್ರೆ ತೆಗೆದುಕೊಂಡೆ. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ.

ಸೆಪ್ಟಂಬರ್ ೧೩

ಶಿವಮೊಗ್ಗ.

ಬೆಳಿಗ್ಗೆ ಆಸ್ಪತ್ರೆಗೆ ಹೋಗಿ, ಡಿ.ಎಂ.ಓ.ರವರಿಂದ ಪರೀಕ್ಷೆ ಮಾಡಿಸಿದೆ. ಡೋರಿಡೆನ್‌ ಎಂಬ ಸೆಡೇಟೀವ್‌ ಮಾತ್ರೆ ಕೊಟ್ಟು, ಎರಡು ದಿನ ವಿಶ್ರಾಂತಿ ಪಡೆದು ನಂತರ ಬನ್ನಿ ಎಂದು ಕಳಿಸಿದರು.

ಡಾ|| ನಾಗರತ್ನಳನ್ನು ನೋಡಿದೆ. ಜೊತೆಯಲ್ಲೇ ಅವಳ ಮನೆಗೆ ಹೋಗಿ, ಅಲ್ಲೇ ಊಟಮಾಡಿ ಬಂದೆ ನಾಗರಾಜ ಮನೆಯಲ್ಲಿರಲಿಲ್ಲ. ಅವಳ ಮದುವೆ ವಿಷಯ ಪ್ರಸ್ತಾಪಿಸಲಿಲ್ಲ ಅವಳಾಗಿ ಏನೂ ಹೇಳಲೂ ಇಲ್ಲ.

ಸಂಜೆ ಗೆಳೆಯ ಶಂಕರರೊಡನೆ ಶ್ರೀ ದಿನಕರ್ ಅಂಗಡಿಗೆ ಹೋದೆ. ಗೆ|| ರಾಮಕೃಷ್ಣ ಮತ್ತು ಅಣ್ಣಯ್ಯ ಸಿಕ್ಕಿದರು. ಅವರೊಂದಿಗೆ ಪಾರ್ಕಿನಲ್ಲಿ ಕುಳಿತು ಬಂದೆ ಗೆ|| ಪಟೇಲರು ಬೆಳಿಗ್ಗೆಯೇ ಬಂದಿದ್ದರಂತೆ. ಬಂದಿಲ್ಲವೆಂದೇ ನಾವು ಬಾವಿಸಿದ್ದೆವು.

ರಾತ್ರಿ ಲಂಕೇಶಪ್ಪನವರನ್ನು ಅವರ ಮಾವನನ್ನು ಅವರ ಮನೆಯಲ್ಲಿ ಕಂಡು ಬಂದೆ ಬೇಳಿಗ್ಗೆಯೇ ಬರುತ್ತೇನೆಂದು ಹೇಳಿದ್ದೆ.

ಸೆಪ್ಟಂಬರ್ ೧೪

ತೀರ್ಥಹಳ್ಳಿ, ಬೆಟಮಕ್ಕಿ.

ಶಾರದಳಿಂದ ಪತ್ರ ಬರಬಹುದೆಂದು ನೀರಿಕ್ಷೆ ಮಾಡಿದ್ದೆ. ಬರಲಿಲ್ಲ. ನನ್ನ ಪತ್ರ ನೋಡಿ, ಕೋಪ ಬಂದಿರಬಹುದು. ಉತ್ತರ ಬರೆಯದಿರಲೂಬಹುದು.

ಮಧ್ಯಾಹ್ನ ಗೆ|| ಶಂಕರ್, ಅಣ್ಣಯ್ಯ, ಸದಾಶಿವರಾವ್‌, ಹಾಲಪ್ಪ ಇವರು ಬಂದರು. ಗೆ|| ಹಾಲಪ್ಪನೊಡನೆ ಸಂಜೆ ನಾಲ್ಕು ಗಂಟೆ ಬಸ್ಸಿಗೆ ಹೊರಟು, ತೀರ್ಥಹಳ್ಳಿಗೆ ಪ್ರಯಾಣ ಮಾಡಿದೆ.

ಮಧ್ಯಾಹ್ನ ಎಂ. ಪಿ. ಮಹೇಶ್ವರಪ್ಪನವರು ಬಂದಿದ್ದರು. ಅರಕೆರೆ ಹತ್ತಿರ ತರಕಾರಿ ಅಂಗಡಿ ಶೆಟ್ಟರ ತಮ್ಮನನ್ನು ಯಾರೋ ಕೊಲೆ ಮಾಡಿದ್ದಾರೆಂದು ಶವ ಮಹಜರಿಗೆ ಹೋಗುತ್ತಿರುವುದಾಗಿಯೂ ಹೇಳಿ ಹೋದರು. ಹೋಗುವಾಗ, ನಾವು ಜನ ಗುಂಪು ಸೇರಿದ್ದನ್ನು ನೋಡಿದೆವು.

ಭಾರತರತ್ನ ಡಾ|| ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ಪಾರ್ಟಿಯ ಮತ್ತು ನನ್ನ ಪರವಾಗಿ ಶುಭಾಶಯದ ತಂತಿ ಕಳಿಸಿದೆ. ಅದರ ನಕಲನ್ನು ಪಿ.ಟಿ.ಐ. ಗೂ ಕಳಿಸಿದೆ. ನಾಳೆಗೆ ನೂರು ತುಂಬುತ್ತೆ.

ರಾತ್ರಿ ಪಂಡಿತರೊಡನೆ ಬೆಟಮಕ್ಕಿಯ ಅವರ ಮನೆಗೆ ಹೋಗಿ ಅಲ್ಲೇ ಮೊಕ್ಕಾಂ ಮಾಡಿದೆ.

ಸೆಪ್ಟಂಬರ್ ೧೫

ಭಾರತರತ್ನ ವಿಶ್ವೇಶ್ವರಯ್ಯನವರಿಗೆ ನೂರು ವರ್ಷಗಳು ತುಂಬಿತು. ೧೮೬೦ ಜನನ.

ಶಿವಮೊಗ್ಗ ನ್ಯಾ. ಲ್ಯಾಡ್ಜ್‌ ಪಂಡಿತರಿಂದ ಜಮ ೨೦/-

ಎದ್ದು ಸ್ನಾನಾದಿಗಳನ್ನು ಮುಗಿಸಿಕೊಂಡು ಪಂಡಿತರ ಜೊತೆಯಲ್ಲಿ ಪೇಟೆಗೆ ಹೋದೆ. ಗೆಳೆಯ ಗುಂಡಪ್ಪ ಮೈಲಾರ, ಎನ್‌. ಎಲ್‌. ನಾಗಪ್ಪ, ಟಿ. ಐ. ಮಾಧವನ್‌, ಜಿ. ಮುರಹರಿ ಮತ್ತು ಶಾರದ ಇವರಿಗೆ ಪತ್ರ ಬರೆದೆ.

೧೧ ಗಂಟೆಯಿಂದ ಉಮೇದುವಾರರ ಅರ್ಜಿಗಳ ಪರಿಷ್ಕರಣ ಆರಂಭವಾಗಿ ಮಧ್ಯಾಹ್ನವೆಲ್ಲಾ ನಡೆಯಿತು. ಎರಡು ಅರ್ಜಿಗಳು ಮಾತ್ರ ತಿರಸ್ಕೃತವಾದವು.

ಮಧ್ಯಾಹ್ನ ಡಾ|| ಚಂದ್ರಶೇಖರರಲ್ಲಿ ಊಟ ಮಾಡಿದೆ. ಅಡ್ಡ ಮನೆ ಧರ್ಮಯ್ಯ, ಹಳಗದ ನರಸಿಂಹಯ್ಯ, ಬಿ.ಟಿ. ನಾರಾಯಣ ಇತ್ಯಾದಿಯವರು ಬಂದರು. ಅಗ್ರಹಾರ ಹೋಬಳಿಯಲ್ಲಿ ಕಾಂಗ್ರೆಸ್ಸಿಗರಲ್ಲದೆ ೭-೮ ಜನ ನಿಂತಿದ್ದಾರೆ. ವೈ. ಎಸ್‌. ಪುಟ್ಟಣ್ಣನವರ ಮನೆಗೆ ಹೋದೆವು. ಹೊಸ ಬೀಡು ಶ್ರೀನಿವಾಸನನ್ನು ಕಂಡೆವು.

ಸಂಜೆ ೬ ಗಂಟೆ ಬಸ್ಸಿಗೆ ಹೊರಟು ರಾತ್ರಿ ೯ಕ್ಕೆ ಶಿವಮೊಗ್ಗ ಸೇರಿದೆ. ಗೆ|| ಪಟೇಲರೂ ಆಗತಾನೆ ಬಂದಿದ್ದರು.

ಅವರ ಭೇಟಿಯಾಯಿತು.

ಗೆಳೆಯ ಮರಿಯಪ್ಪ ಮತ್ತು ಶಾರದ ಇವರಿಂದ ಪತ್ರಗಳು ಬಂದಿದ್ದವು.

ಸೆಪ್ಟಂಬರ್ ೧೬
ಶಿವಮೊಗ್ಗ, ನ್ಯಾ. ಲಾಡ್ಜ್‌.

ಬೆಳಿಗ್ಗೆ ಆಸ್ಪತ್ರೆಗೆ ಹೋಗಿ. ಡಿ. ಎಂ. ಓ ರವರನ್ನು ಕಂಡು ಬಂದೆ. ನ್ಯೂರೋನ ಬಿ. ಕಾಂಪ್ಲೆಕ್ಸ್‌ ಕ್ಯಾಪ್ಸೂಲ್‌ ದಿನಕ್ಕೊಂದು ತೆಗೆದುಕೊಳ್ಳುತ್ತಾ ಬರಬೇಕೆಂದು ಸಲಹೆ ಮಾಡಿ ಕೆಲವು ಮಾತ್ರೆ ಕೊಟ್ಟಿರುತ್ತಾರೆ. ರಾತ್ರಿ ಮಲಗುವ ಮುನ್ನ ಒಂದು ಕ್ಯಾಪ್ಸೂಲ್‌ ತೆಗೆದುಕೊಂಡಿರುತ್ತೇನೆ.

ಮಧ್ಯಾಹ್ನ ಹೊನ್ನಾಳಿಯ ಗೆ|| ಲಕ್ಷ್ಮಣ್‌ ಬಂದಿದ್ದರು. ಅಲ್ಲಿನ ತಾಲ್ಲೂಕು ಬೋರ್ಡ್‌ ಮತ್ತು ಇತರ ವಿಷಯ ತಿಳಿಸಿದರು.

ಸಂಜೆ ಗೆ|| ಈಶ್ವರಗೌಡ ಮತ್ತಿತರ ಸ್ನೇಹಿತರನ್ನು ಕಂಡಿದ್ದೆ. ರಾತ್ರಿ ಗೆ|| ಶಂಕರ್ ಜೊತೆ ಮಲ್ಲಿಕಾರ್ಜುನ ಧಿಯೇಟರಿನಲ್ಲಿ ಮೊಗಲ್‌-ಏ- ಅಜಮ್‌ ಚಿತ್ರ ನೋಡಿದೆ.

ಸೆಪ್ಟಂಬರ್ ೧೭

೧೦/- ರೂ. ಹೋಟೇಲಿಗೆ ಜಮಾ.

ಸ್ನಾನಾದಿಗಳನ್ನು ಮುಗಿಸಿ ಹತ್ತು ಗಂಟೆ ಬಸ್ಸಿಗೆ ಹೊರಟು ಹೊಸನಗರಕ್ಕೆ ಬಂದೆ.

ನಮ್ಮ ಪಾರ್ಟಿ ಉಮೇದುವಾರರುಗಳು ಯಾರು ಬಂದಿರಲಿಲ್ಲ. ರಿಪ್ಪನ್‌ಪೇಟೆ ಶಿವಪ್ಪಗೌಡರು ಬಂದು ನಾಳೆ ಅಲ್ಲಿಗೆ ಬರಬೇಕೆಂದು ಹೇಳಿ ಹೋದರು. ಮಧ್ಯಾಹ್ನ ಇಬ್ಬರೂ ಕೆಟ್ಟ ಹೋಟೆಲೊಂದರಲ್ಲಿ ಅನ್ನ ತಿಂದೆವು. ಸಂಜೆ ಶ್ರೀ ಮಂಜಪ್ಪಗೌಡರು ಬಂದರು. ಗೆ|| ತಿಮ್ಮಪ್ಪನು ಸಾಗರದಿಂದ ಬಂದ. ಈಗ ಉಳಿದಿರುವ ಅರ್ಜಿಗಳಲ್ಲಿ ಯೋಗ್ಯ ಸ್ಪರ್ಧಿಗಳು ಯಾರು ಯಾರು ಯಾವ ಕ್ಷೇತ್ರದಿಂದ ನಿಲ್ಲಬೇಕೆಂಬ ಬಗ್ಗೆ ವಿಚಾರ ಮಾಡಿದೆವು.

ಸೆಪ್ಟಂಬರ್ ೧೮

ಸ್ನಾನಾದಿಗಳನ್ನು ಲೋಕಪ್ಪಗೌಡರಲ್ಲೇ ಮುಗಿಸಿದೆ. ಗೆಳೆಯರನ್ನೆಲ್ಲಾ ಕಂಡು ಮುಂದಿನ ಕಾರ್ಯಕ್ರಮದ ಬಗ್ಗೆ ವಿಚಾರ ಮಾಡಿದೆ. ಗೆ|| ಬೈಸೆ ತಂದೆ ಆನಂದರಾಯರೊಂದಿಗೆ ಮಾತನಾಡಲು ಮಂಜಪ್ಪಗೌಡರಿಗೆ ತಿಳಿಸಿ ಒಂದು ಪತ್ರವನ್ನು ಬರೆದುಕೊಟ್ಟೆ. ಗೆ|| ತಿಮ್ಮಪ್ಪ ಅಲ್ಲೇ ಉಳಿದ ನಾನು ಶಿವಪ್ಪಗೌಡರೊಂದಿಗೆ ಮಧ್ಯಾಹ್ನ ಬಸ್ಸಿನಲ್ಲಿ ರಿಪ್ಪನ್‌ಪೇಟೆಗೆ ಬಂದು ಅಲ್ಲಿ ಗೆಳೆಯರೊಂದಿಗೆ ಮಾತನಾಡಿಕೊಂಡು ಸಂಜೆ ಬಸ್ಸಿನಲ್ಲಿ ತೀರ್ಥಹಳ್ಳಿಗೆ ಪ್ರಯಾಣ ಮಾಡಿದೆ.

ನಿನ್ನೆಯಿಂದ ಈ ಭಾಗದಲ್ಲಿ ಮಳೆ ಆರಂಭವಾಗಿದೆ. ಭತ್ತದ ಪೈರು ಒಣಗುವಂತಾಗಿತ್ತು ಈ ಮಳೆಯಿಂದ ಸ್ವಲ್ಪವಾದರೂ ಪೈರು ಉಳಿಯಬಹುದು.

ನಾಳೆ ಸಾಧ್ಯವಾದರೆ ಹೊಸನಗರಕ್ಕೆ ಬರುತ್ತೇನೆಂದು ಹೇಳಿದ್ದೇನೆ.

ಸೆಪ್ಟಂಬರ್ ೧೯

ಎದ್ದು ಬೆಟಮಕ್ಕಿಯಿಂದ ಡಾ|| ಚಂದ್ರಶೇಖರರ ಮನೆಗೆ ಬಂದು ಸ್ನಾನಾದಿಗಳನ್ನು ಪೂರೈಸಿದೆ. ಉಮೇದುವಾರರು ಮತ್ತು ಅವರ ಬೆಂಬಲಿಗರು ಒಬ್ಬೊಬ್ಬರಾಗಿ ಬಂದು ಸೇರಿದರು. ಲಕ್ಷ್ಮಣಗೌಡರ ಪರವಾಗಿ ಶೇಷಪ್ಪ ಹೆಗ್ಗೆಡೆಯವರ ಅರ್ಜಿ ಹಿಂತೆಗೆಸಲಾಯಿತು. ಮಂಡಗದ್ದೆಯ ಕ್ಷೇತ್ರದಿಂದ ಹಳಗರ ನರಸಿಂಹಯ್ಯ ಜೊತೆಗೆ ಯಾರೂ ಸರಿಯಾದವರು ದೊರೆಯಲಿಲ್ಲವೆಂದು ಹಿಂತೆಗೆದುಕೊಂಡರು.

ಮಧ್ಯಾಹ್ನ ಹೊಸನಗರಕ್ಕೆ ಬರುತ್ತೇನೆಂದು ಹೇಳಿದ್ದೆ. ಯಾವ ವಾಹನ ಸೌಕರ್ಯವೂ ಸಿಕ್ಕದೆ ಅಲ್ಲಿಗೆ ಹೋಗುವ ಯೋಚನೆ ಕೈಬಿಡಲಾಯಿತು. ಅಲ್ಲಿ ಏನಾಯಿತೆಂಬ ಬಗ್ಗೆ ಸುದ್ದಿ ಬಾರದೆ ಯೋಚನೆಯಾಗಿದೆ.

ಅಣ್ಣ ಊರಿಗೆ ಬಂದಿದ್ದಾರೆಂದು ತಿಳಿಯಿತು. ಸಾಧ್ಯವಾದರೆ ನಾಳೆ ಆರಗಕ್ಕೆ ಹೋಗಿ ನೋಡಿಕೊಂಡು ಶಿವಮೊಗ್ಗಕ್ಕೆ ಹೋಗಲು ಯೋಚಿಸಿದ್ದೇನೆ.

ಮಧ್ಯಾಹ್ನ ಬೆಟಮಕ್ಕಿಗೆ ಹೋಗಿ ಊಟ ಮಾಡಿ ಬಂದೆ. ರಾತ್ರಿ ಡಾಕ್ಟರಲ್ಲೇ ಊಟ ಮಾಡಿದೆ.

ರಾತ್ರಿ ಕಿಟ್ಟಪ್ಪನ ಹೆಂಡತಿಯನ್ನು ಅವರ ಮನೆಯಲ್ಲಿ ಕಂಡು ಪ್ರಚಾರಾದಿ ಕಾರ್ಯಕ್ರಮದ ವಿಷಯ ಮಾತನಾಡಿದೆವು. ಗೆಳೆಯ ಬಿ. ವಿ. ಮೂರ್ತಿಯವರೂ ರಾತ್ರಿ ಡಾಕ್ಟರಲ್ಲೇ ಉಳಿದಿದ್ದರು.

ಬೆಟಮಕ್ಕಿ ಗುರುಮೂರ್ತಿಗಳು ಎರಡು ಅಂಬರಖಾದಿ ಪಂಚೆಗಳನ್ನು ಕೊಂಡು ಕೊಟ್ಟು ಕಳಿಸಿದ್ದಾರೆ.

ಸೆಪ್ಟಂಬರ್ ೨೦

ಗೆ|| ತಿಮ್ಮಪ್ಪನಿಂದ ಜಮಾ ಹತ್ತು ರೂಪಾಯಿಗಳು.

ಸ್ನಾನಾದಿಗಳನ್ನು ಪೈರೈಸಿಕೊಂಡು ಹನ್ನೊಂದು ಗಂಟೆ ಬಸ್ಸಿನಲ್ಲಿ ಆರಗಕ್ಕೆ ಹೋದೆ. ಅಣ್ಣನವರ ಸವಾರಿ ಪೇಟೆಗೆ ಬಂದು ಮನೆಯತ್ತ ಹೊರಟಿತ್ತು. ಕಳಸನಾಯ್ಕರಲ್ಲಿ ಸಮಾಗಮವಾಯಿತು. ಇಂದು ಅವರು ಸಂಜೆ ತೀರ್ಥಹಳ್ಳಿಗೆ ಹೋಗಿ ಕಟ್ಟೆ ಡಾಕಪ್ಪನವರಲ್ಲಿ ‘ಪಿತೃಪಕ್ಷ’ ಮುಗಿಸಿಕೊಂಡು, ನಾಳೆ ಹಾಸನಕ್ಕೆ ಹೋಗುವುದಾಗಿ ಹೇಳಿದರು.

ಇಬ್ಬರೂ ಮನೆಗೆ ಹೋದೆವು. ನಾನು ಮಧ್ಯಾಹ್ನ ಶಿವಮೊಗ್ಗಕ್ಕೆ ಹೋಗಿ ರಾತ್ರಿ ರೈಲಿಗೆ ಬೆಂಗಳೂರಿಗೆ ಹೋಗಬೇಕಾಗಿದ್ದರಿಂದ ಮೊದಲೇ ಊಟ ಮಾಡಿದೆ. ತಾಯಿ ಬೆನ್ನು ಉಳುಕಿದೆ ಎಂದು ನರಳುತ್ತಲೇ ಓಡಾಡುತ್ತಿದ್ದರು. ತಿಮ್ಮಯ್ಯಗೌಡರ ಸಣ್ಣ ಹುಡುಗಿ ಅವರ ನೆರವಿಗೆ ಇದ್ದಾಳೆ.

ಮಧ್ಯಾಹ್ನ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಹೊರಟು ರಿಪ್ಪನ್‌ಪೇಟೆಯಲ್ಲಿ ಶಿವಪ್ಪಗೌಡರನ್ನು ಕಂಡು, ಸಂಜೆ ಶಿವಮೊಗ್ಗಕ್ಕೆ ಬಂದೆ. ಗೆಳೆಯ ತಿಮ್ಮಪ್ಪನೂ ಸಾಗರದಿಂದ ಅದೇ ತಾನೇ ಬಂದ. ಗೆ|| ಸದಾಶಿವರಾಯರು. ಶಂಕರಭಟ್ಟರು, ರಾಮಕೃಷ್ಣ ಇತ್ಯಾದಿ ಗೆಳೆಯರನ್ನು ಕಂಡು ಮಾತನಾಡಿಕೊಂಡು ರಾತ್ರಿ ರೈಲಿಗೆ ಪ್ರಯಾಣ ಮಾಡಿದೆ.

ಎರಡನೇ ದರ್ಜೆ ಗಾಡಿಯಲ್ಲಿ ಮಲಗಲು ಜಾಗ ಸಿಕ್ಕಿತು. ಬಹುಶಃ ಇಂದು ಅಮವಾಸ್ಯೆಯಾದ್ದರಿಂದ!

ಸೆಪ್ಟಂಬರ್ ೨೬

ಬೆಂಗಳೂರಿನಲ್ಲಿ ಕಾನೂನು ಭಂಗ. ಆರು ಜನರು ಬಂಧನ.

ಬೆಳಿಗ್ಗೆ ಕೃಷ್ಣಭವನದಲ್ಲಿ ಶ್ರೀ ಗುರಪ್ಪ (ಈಡಿಗರ ಪ್ರೇಮಿ) ಸಿಕ್ಕಿದ್ದರು. ಅಲ್ಲೇ ಜನ್ಮಭೂಮಿ ಶ್ರೀ ಬಸಪ್ಪನವರೂ ಸಿಕ್ಕಿ, ಸಂಜೆ ಬರಲೇಬೇಕೆಂದು ಕರೆಯಿತ್ತರು.

ಸಂಜೆಯವರೆಗೂ ಕಾರ್ಯಾಲಯದಲ್ಲೇ ಕಾಲ ಕಳೆದೆ.

ನಂತರ ಲಿಂಗಪ್ಪ ನಾನು ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಪ್ರಕಾಶನನ್ನು ನೋಡಿದೆ (ರೇವಳಪ್ಪನ ಮಗ), ಲಿಂಗಪ್ಪ ಅಲ್ಲೇ ನಿಂತರು. ನಾನು ಶ್ರೀ ಬಸಪ್ಪನವರನ್ನು ಕಾಣಲು ಜಯನಗರಕ್ಕೆ ಬಸ್ಸಿನಲ್ಲಿ ಹೋದೆ. ಅವರ ಮನೆಯನ್ನು ಹುಡುಕುವುದು ಸ್ವಲ್ಪ ಕಷ್ಟವಾಯಿತು. ಬಸಪ್ಪನವರು ನನಗಾಗಿ ಕಾದಿದ್ದರು. ಅವರ ಪ್ರೀತಿಯ ನಾಯಿಗೆ ಕಾಲು ಪೆಟ್ಟಾಗಿ ಕುಂಟುತ್ತಿತ್ತು. ನೋವಿಗೆ ಒಳ್ಳೆಯೆದೆಂದು ಬ್ರ್ಯಾಂಡಿಯಲ್ಲಿ ಬ್ರೆಡ್ಡಿನ ತುಂಡನ್ನು ಅದ್ದಿ ತಿನ್ನಲು ಹಾಕಿದ್ದು, ಮೆಲಷ್ಟು ಬ್ರ್ಯಾಂಡಿಯನ್ನು ಕಾಲಿಗೆ ಹಚ್ಚಿದ್ದು ಅವರ ದಯೆ, ಪ್ರೀತಿ ವಿಶ್ವಾಸಗಳನ್ನು ಎತ್ತಿ ಹಿಡಿದಿದ್ದವು. ರಾತ್ರಿ ೯ ಗಂಟೆ ತನಕ ಇದ್ದು ಬಂದೆ.

ಬೆಳಗ್ಗೆ ಕೆಲವು ಪೋಸ್ಟರ್ ಗಳನ್ನು ಬರೆದುಕೊಟ್ಟೆ. ಮಧ್ಯಾಹ್ನ ಮೂರು ಗಂಟೆಗೆ ಗೆಳೆಯ ಟಿ. ಐ. ಮಾಧವನ್‌, ಸುಗಟೂರು, ಮಾಣಿಕ್ಯಂ, ವೆಂಕಟಸ್ವಾಮಿ, ಹೃದಯಂ ಮತ್ತು ಗುರುರಾಜ ಇವರು ವಿಧಾನಸೌಧದತ್ತ ಪಿಕೆಟ್‌ ಮಾಡಲೆಂದು ಘೋಷಣೆ ಮಾಡುತ್ತಾ, ಭಿತ್ತಿ ಪತ್ರ ಹಿಡಿದು ಹೋಗುತ್ತಿದ್ದಾಗ ಪೋಲೀಸರು ಬಂಧಿಸಿದರು. ಗೆ|| ವೆಂಕಟರಮಣ ಮತ್ತು ಬಿ. ಕೆ. ಶ್ರೀರಾಮಯ್ಯ ಇವರು ವಿಧಾನ ಸಭೆಯೊಳಕ್ಕೆ ಹೋಗಿ ಸತ್ಯಾಗ್ರಹ ಮಾಡಲಾಗದೇ ಬಂದರಂತೆ.

ಸೆಪ್ಟಂಬರ್ ೨೭

ಬಂಧಿಸಿದವರ ಬಿಡುಗಡೆ.

ರೈಲಿನಲ್ಲಿ ಶಿವಮೊಗ್ಗೆಗೆ ಪ್ರಯಾಣ.

ಸ್ನಾನಾದಿಗಳನ್ನು ಪೂರೈಸಿಕೊಂಡು ತಿಂಡಿ ತಿಂದು, ಮಾರುತಿ ಲಿಥೋಪ್ರೆಸ್ಸಿಗೆ ಹೋಗಿ ಪೋಸ್ಟರುಗಳಿಗೆ ಆರ್ಡರು ಕೊಟ್ಟು ಬಂದೆವು. ನಾಗಪ್ಪ (ಮನೆಘಟ್ಟದ) ಅದಕ್ಕಾಗಿ ಬೆಂಗಳೂರಿಗೆ ಬೆಳಿಗ್ಗೆ ಬಂದ.

ನಿನ್ನೆ ಬಂಧಿಸಲ್ಪಟ್ಟಿದ್ದ ಆರು ಜನ ಗೆಳೆಯರು ಪೋಲಿಸರಿಂದ ಬಿಡುಗಡೆಯಾಗಿ ಬಂದರು. ಅವರ ಮೇಲೆ ಯಾವ ಕೇಸನ್ನೂ ಹಾಕಲಿಲ್ಲ.

ಸಂಜೆ ಗೆ|| ವೆಂಕಟಸ್ವಾಮಿಯೊಡನೆ ಮಲ್ಲೇಶ್ವರಕ್ಕೆ ಹೋಗಿ ಗೆ|| ಸುಬ್ರಹ್ಮಣ್ಯ (ಬಾಟಾ)ರನ್ನು ಕಂಡು ಬಂದೆ.

ಗೆ|| ಶಿವಣ್ಣ (ನೆಲವಾಗಿಲು)ಗೆ ಹುತ್ತನಳ್ಳಪ್ಪನವರು ೧೫೦ ಮತ ಕಡಿಮೆಯಾಗಿ ಬಂದು ಸೋತುಹೋದರೆಂದು ತಿಳಿಸಿದರು. ಇಬ್ಬರೂ ಕಾಂಗ್ರೆಸ್ಸಿಗರೇ ಬಂದರು. ಕಾಂಗ್ರೆಸ್ಸಿನವರು ಗೆಲ್ಲಲು ಸಹಾಯ ಮಾಡಿದಂತಾಯಿತು.

ಊಟ ಮುಗಿಸಿ ಮುಂಚಿತವಾಗಿಯೇ ರೈಲ್ವೆ ನಿಲ್ದಾಣಕ್ಕೆ ಬಂದೆವು. ಇಷ್ಟು ಮುಂದೆ ಎಂದೂ ನಾನು ಬಂದುದಿಲ್ಲ. ನಾನು ೨ನೇ ದರ್ಜೆ ಗಾಡಿಯಲ್ಲಿ ಯು. ಕೋ. ಲಿಂಗಪ್ಪ ಮತ್ತು ನಾಗಪ್ಪ ಮೂರನೇ ದರ್ಜೆಯಲ್ಲೂ ಪ್ರಯಾಣ ಮಾಡಿದೆವು. ನನಗೆ ಸಿದ್ದಪ್ಪ (ವಕೀಲರು) ಮತ್ತು ರಂಗರಾಯರ ಜೊತೆ ಸಿಕ್ಕಿತು.

ಶಾರದ ಬೆಳಿಗ್ಗೆ ಮತ್ತು ಸಂಜೆ ಬಂದಿದ್ದಳು. ಬರುವಾಗ ಈ ಸಲವೂ ಹೇಳಿ ಬರಲು ಆಗಲಿಲ್ಲ.

ಸೆಪ್ಟಂಬರ್ ೨೮

ಶಿವಮೊಗ್ಗ, ನ್ಯಾಶನಲ್‌ಲಾಡ್ಜ್‌.

ರೈಲು ಹೊತ್ತಿಗೆ ಸರಿಯಾಗಿ ಶಿವಮೊಗ್ಗ ಸೇರಿತು. ಇಳಿದು ಜಟ್ಕಾ ಮಾಡಿಕೊಂಡು ನ್ಯಾಶನಲ್‌ ಲಾಡ್ಜ್‌ಗೆ ಹೋದೆವು. ಸ್ನಾನಾದಿಗಳನ್ನು ಪೂರೈಸಿಕೊಂಡು ರೇವಳಪ್ಪನ ಅಂಗಡಿಗೆ ಹೋಗಿ, ನಂತರ ಮಹಾರುದ್ರಪ್ಪನ ಮನೆಗೆ ಹೋದೆವು.

ಛತ್ರದಲ್ಲಿ ರಂಭಾಪುರಿ ಸ್ವಾಮಿಗಳು ಅವರ ಪರಿವಾರ ಬೀಡುಬಿಟ್ಟಿರುವುದರಿಂದ ನ್ಯಾಶನಲ್‌ಲಾಡ್ಜ್‌ನಲ್ಲೇ ಸೇರಲು ತೀರ್ಮಾನಿಸಿದೆವು.

ಸರ್ವಶ್ರೀ ಲಕ್ಷ್ಮಣಗೌಡ, ಬೋರಯ್ಯ, ಬಿ.ಸಿ. ರಾಮಪ್ಪ, ಸುಕುಮಾರನ್‌, ಕೆ. ಹೆಚ್‌. ಮರಿಯಪ್ಪ, ದ್ಯಾವಪ್ಪ ಮಂಚಿ, ಕೋ. ಕೃಷ್ಣಪ್ಪ ಮುಂತಾದವರು ಬಂದು ಸೇರಿದರು. ಸಾಗರದಿಂದ ಯಾರು ಬರಲಿಲ್ಲ. ತೀರ್ಥಹಳ್ಳಿಯಿಂದ ಬಿ. ವಿ. ಮೂರ್ತಿಯವರು ಬಂದರು. ಚುನಾವಣಾ ಸಂಬಂಧ ಚರ್ಚಿಸಲಾಯಿತು.

ಸಂಜೆ ನಾನು ಮತ್ತು ಲಿಂಗಪ್ಪ ಆಸ್ಪತ್ರೆಗೆ ಹೋಗಿದ್ದೆವು. ಗೌರಿ ಎಂಬ ಸಾಗರದ ಒಂದು ಹೆಣ್ಣು ಮಗಳು ವಾರ್ಡಿನಲ್ಲಿ ಕಳೆದ ಇಪ್ಪತ್ತು ದಿವಸಗಳಿಂದ ದಾಖಲಾಗಿದ್ದು, ಅವಳ ತಂದೆ ಖಾಯಿಲೆ ಜಾಸ್ತಿಯಾಗುತ್ತಿರುವುದರಿಂದ ಊರಿಗೆ ಕಳಿಸಬೇಕೆಂದು ಕೇಳಿದ್ದರ ಮೇರೆಗೆ ಡಾಕ್ಟರನ್ನು ಕಂಡು ಮಾತನಾಡಿದೆ. ಸಮಂಜಸ ಉತ್ತರ ದೊರೆಯಿತು. ಈಗ ಕಳಿಸುವುದು ಆಗದು ಎಂದು ತಿಳಿಸಿದರು. ಆಸ್ಪತ್ರೆಯಲ್ಲೇ ಬಿಡಲು ಹೇಳಿ ಬಂದೆ.

ರಾತ್ರಿ ಶ್ರೀ ಗುರುನಾಥ ಕೃಷ್ಣ ನಾಡಿಗರು ಬಂದು ತಮ್ಮ ಕ್ಷೇತ್ರದಲ್ಲಿ ಪಾರ್ಟಿ ಉಮೇದುವಾರರು ನಿಂತಿರುವುದು ತಮಗೆ ಅನಾನುಕೂಲವಾಗಿ ಬಿಟ್ಟಿದೆ. ಏನಾದರೂ ಸಹಾಯವಾಗಬಹುದೇ ಎಂದು ಕೇಳಿದರು. ಸ್ಥಳೀಯ ಗೆಳೆಯರನ್ನು ಕೇಳದೆ ಏನೂ ಹೇಳುವಂತಿಲ್ಲವೆಂದು ತಿಳಿಸಿದೆ.

ನಾಗಪ್ಪ ನಾಳೆ ಬರುತ್ತೇನೆಂದು ಹೇಳಿ ಸಾಗರಕ್ಕೆ ಹೊದ. ಲಿಂಗಪ್ಪ ಜೊತೆಯಲ್ಲೇ ಇದ್ದಾರೆ.

ಸೆಪ್ಟಂಬರ್ ೨೯

ಶಿವಮೊಗ್ಗ – ತೀರ್ಥಹಳ್ಳಿ – ಬೆಟಮಕ್ಕಿ.

ಸ್ನಾನಾದಿಗಳನ್ನು ಪೂರೈಸುತ್ತಿದ್ದಂತೆಯೇ ಶಿಕಾರಿಪುರದ ಶ್ರೀ ಹೊಲೆ ಬಸಪ್ಪ. ಶಿವಪ್ಪ ಇತ್ಯಾದಿಯವರು ಬಂದು ತಮ್ಮ ಉಮೇದುವಾರಿಕೆಗೆ ಪಾರ್ಟಿ ಬೆಂಬಲ ಕೋರಿದರು. ಬಹಳ ಹೊತ್ತು ಅವರ ನಿಲುವಿನ ಬಗ್ಗೆ ವಾದವಿವಾದಗಳು ನಡೆದು, ಯಾವ ತೀರ್ಮಾನಗಳಿಗೂ ಬರಲಾಗದೇ ಹಾಗೇ ಹೋದರು. ಮತ್ತೆ ಬರಲಿಲ್ಲ.

ಮಧ್ಯಾಹ್ನ ಗೆ|| ಮೂರ್ತಿ ಮತ್ತು ಲಿಂಗಪ್ಪ ತಮ್ಮ ಓಡಾಟ ಮುಗಿಸಿ ಬಂದರು. ಗೆಳೆಯ ನಾಗಪ್ಪನವರಿಗೆ ಪತ್ರ ಬರೆದು, ಮೂರನೇ ತಾರೀಖು ಬೆಳಿಗ್ಗೆ ಮಂಡ್ಯಕ್ಕೆ ಬರುವುದಾಗಿಯೂ; ಗೆಳೆಯ ಪೂಜಾರರ ಪತ್ರದಲ್ಲಿ ಒಂದನೇ ತಾರೀಖು ಮಧ್ಯಾಹ್ನ ಹುಬ್ಬಳ್ಳಿಗೆ ಬಸ್ಸಿನಲ್ಲಿ ಬರುವುದಾಗಿಯೂ ಬರೆದು ತಿಳಿಸಿದೆ. ಪೂಜಾರರಿಗೆ ಎಕ್ಸ್‌ಪ್ರೆಸ್‌ಹಾಕಲಾಯಿತು. ಲಿಥೋ ಪ್ರೆಸ್ಸಿಗೆ ಹಣ ಕಳಿಸಲು ಆಗಲಿಲ್ಲ. ಅದೇ ಹಣದಲ್ಲಿ ೩೦ ರೂ. ಹೋಟೆಲಿಗೆ ಕೊಟ್ಟೆ.

ಸಂಜೆ ಬಸ್ಸಿನಲ್ಲಿ ಮೂವರೂ ತೀರ್ಥಹಳ್ಳಿಗೆ ಹೋದೆವು. ಐತಾಳರ ಅಂಗಡಿ ಬಾಗಿಲಿನಲ್ಲಿ ಇಳಿದು ಗೆಳೆಯರನ್ನು ಕಂಡು ಮಾತನಾಡಿದೆವು. ಶ್ರೀ ಲಕ್ಷ್ಮಣಗೌಡರು ಬಂದಿಲ್ಲವೆಂದು ತಿಳಿಯಿತು. ರಾಮಮಂದಿರದಲ್ಲಿ ಬೀchiಯವರ ಭಾಷಣ ನಡೆದಿತ್ತು. ಒಳಗಡೆ ನಾವು ಹೋಗಲಿಲ್ಲ. ಶ್ರೀ ಗುರುಮೂರ್ತಿಗಳಲ್ಲಿ ಹೋಗಿ, ನಂತರ ಗೆಳೆಯ ಕಿಟ್ಟಪ್ಪನ ಮನೆಗೆ ಹೋದೆವು. ಅವರ ನಿಲುವಿನ ಬಗ್ಗೆ ಚರ್ಚೆ ಮಾಡಿದೆವು. ಬೆಳಿಗ್ಗೆ ಆಖೈರು ತೀರ್ಮಾನ ಹೇಳುವುದಾಗಿ ತಿಳಿಸಿದೆ.

ರಾತ್ರಿ ಬೆಟಮಕ್ಕಿಗೆ ಹೋಗಿ ಊಟಮಾಡಿ ಮಲಗಿದೆ. ಅಗಸ ಬಟ್ಟೆ ಕೊಡಲಿಲ್ಲ. ಮಳೆ ಬೇರೆ ಬರುತ್ತಿದೆ.

ಸೆಪ್ಟಂಬರ್ ೩೦

ಶಿವಮೊಗ್ಗ, ನ್ಯಾಶನಲ್‌ ಲಾಡ್ಜ್‌.

ಗೆ|| ಶಂಕರ ನಾರಾಯಣ ಭಟ್ಟರ ಗೃಹಪ್ರೇಶ.

ಈ ವರ್ಷ ಜಂಬೂಸವಾರಿ ವಿರುದ್ಧ ಏನೂ ಹೇಳಲಿಲ್ಲ.

ಮುಂಚಿತವಾಗಿಯೇ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಂಡು ಶ್ರೀ ಕೃಷ್ಣಪ್ಪನವರಲ್ಲಿಗೆ ಹೋದೆ. ಕಿಟ್ಟಪ್ಪ ತನ್ನ ಪತ್ನಿಯನ್ನು ಸ್ಪರ್ಧೆಯಿಂದ ರಿಟೈರ್ ಆಗಲು ಹೇಳಿಬಿಡುತ್ತೇನೆಂದು ಹೆದರಿಸಿದ. ಕೊಳವಳ್ಳಿಗೆ ಹೋಗಿ ಬಂದು ಏನು ಮಾಡಬೇಕೆಂದು ಹೇಳುವುದಾಗಿ ಹೇಳಿದೆ.

ಕಾರಿನಲ್ಲಿ ಗೆ|| ಲಿಂಗಪ್ಪ, ಮೂರ್ತಿ ಮತ್ತು ಕೃಷ್ಣಪ್ಪನವರೊಡನೆ ಕೊಳವಳ್ಳಿಗೆ ಹೋದೆವು. ಶ್ರೀ ಲಕ್ಷ್ಮಣಗೌಡರು ಮನೆಯಲ್ಲೇ ಇದ್ದರು. ಅವರ ಮನೆಗೆ ಹೋಗದೆ ಎಷ್ಟೋ ವರ್ಷಗಳಾಗಿದ್ದವು.

ಅವರು ತಮಗೆ ಪಾರ್ಟಿಯ ಬೆಂಬಲ ಬೇಡವೆಂದು ಹೇಳಿಬಿಟ್ಟರು. ಬೆಂಬಲವನ್ನು ಒತ್ತಾಯವಾಗಿ ಹೇರುವಂತಿಲ್ಲ. ಒಳಿತು ಎಂದು ಹೊರಟು ಬಂದೆವು. ಅವರನ್ನು ನಂಬಿ ಪಕ್ಷದ ಹುರಿಯಾಳನ್ನು ನಿಲ್ಲಿಸದೆ ಮಾಡಿದ ಅಪರಾಧಕ್ಕೆ ತಕ್ಕ ಶಿಕ್ಷೆಯಾಯಿತು, ನಮಗೆ. ಆದರೆ ಪ್ರಚಾರ ಆರಂಭವಾಗುವ ಮುನ್ನವೇ ಹೀಗಾದುದು ಒಳ್ಳೆಯದಾಯಿತು.

ಅಲ್ಲಿಂದ ಬಂದು ಮತ್ತೊಂದು ಕಾರಿನಲ್ಲಿ ಶ್ರೀ ಗುರುಮೂರ್ತಿಗಳೂ, ಐತಾಳರು, ಪುರುಷೋತ್ತಮ ಮತ್ತು ಲಿಂಗಪ್ಪ ಇವರೊಡನೆ ಕೊಪ್ಪಲಿಗೆ ಹೋದೆವು. ಮಧ್ಯಾ‌ಹ್ನವಾಗಿತ್ತು. ಜನ ನೆರೆದಿದ್ದರು. ಪೂಜೆ ಪುನಸ್ಕಾರಗಳು ಸಾಗಿದ್ದುವು. ಊಟವಾಯಿತು.

ಪ್ರಚಾರ ಭಾಷಣ ಮಾಡಿ ಎರಡೂ ಓಟುಗಳನ್ನು ಪಾರ್ಟಿ ಉಮೇದುವಾರರಿಗೆ ಕೊಡಬೇಕೆಂದು ಕೇಳೀ, ಅಲ್ಲಿಂದ ಬೀಳ್ಕೊಂಡು, ಕಾಲುನಡಿಗೆಯಲ್ಲಿ ತೀರ್ಥಹಳ್ಳಿಗೆ ಬಂದು ಕೊನೆ ಬಸ್ಸಿನಲ್ಲಿ ಗೆ|| ಸದಾಶಿವರಾಯರೊಂದಿಗೆ ಶಿವಮೊಗ್ಗಕ್ಕೆ ಬಂದೆ. ಇಂದಿನ ಕೊನೇ ಜೋಕು – ಅಗಸ ಬಟ್ಟೆಗಂಟು ಹಾಗೆ ಇಟ್ಟಿದ್ದು.