ನವೆಂಬರ್

ಮೋಟೇಬೆನ್ನೂರಿನಲ್ಲಿ ಬಹಿರಂಗ ಸಭೆ.

ಗೆಳೆಯ ಪ್ರಭುಗೆ ಒಂದು ಮುದ್ದಾಂ ಪತ್ರ ಎಸ್‌.ಟಿ. ಬಸ್ಸಿನಲ್ಲಿ ಕಳಿಸಿದೆ.

ಮೋಟೇಬೆನ್ನೂರು – ಪ್ರವಾಸಿ ಮಂದಿರ.

ರೈಲಿನಿಂದಿಳಿದು ಸುತ್ತಲೂ ನೋಡಿದೆ. ಗೆಳೆಯರು ಯಾರೂ ಕಾಣಲಿಲ್ಲ. ಜಟ್ಕಾ ಮಾಡಿಕೊಂಡು ಮೋಟೇಬೆನ್ನೂರಿಗೆ ಹೋದೆ. ಗೆಳೆಯ ಮೈಲಾರರು ದಾರಿಕಾಯುತ್ತಾ ಬಂಗಲೆ ಹತ್ತಿರ ನಿಂತಿದ್ದರು. ಅವರು ಕಳಿಸಿದ್ದ ಕಾರು ನಾನು ಹೋಗಿ ಇಳಿದ ನಂತರ ಬಂತು. ಗೆ|| ಸಂಗಪ್ಪ, ಬಸವನಗೌಡ, ರಾಮಣ್ಣ ಮತ್ತಿತರರು ಎಲ್ಲೋ ಹಳ್ಳಿಗೆ ಹೋಗಿ ಬರುವಾಗ ಸ್ಟೇಶನ್‌ಗೆ ತಡವಾಗಿ ಬಂದಿದ್ದರು.

ಇಂದು ಮೋಟೇಬೆನ್ನೂರಿನ ಒಂದು ಕಾರ್ಯಕ್ರಮ ಮಾತ್ರ ನೆರವೇರಿತ್ತು. ಕಲ್ಲೆದೇವರಕ್ಕೆ ಹೋಗಲು ಆಗಲಿಲ್ಲ.

ಸ್ನಾನಾದಿಗಳನ್ನು ಮುಗಿಸಿ ಊಟಮಾಡಿ, ರಾತ್ರಿಯೆಲ್ಲಾ ನಿದ್ರೆಯಿಲ್ಲದ ಕಾರಣ, ಒಂದೆರಡು ಗಂಟೆ ನಿದ್ರೆಮಾಡಿ ಎದ್ದೆ.

ಈ ಕ್ಷೇತ್ರದಿಂದ ಎರಡು ಸ್ಥಾನಗಳಿಗೆ ನಡೆಯಲಿರುವ ಸ್ಫರ್ಧೆಯಲ್ಲಿ ಇಬ್ಬರು ಕಾಂಗ್ರೆಸ್ಸಿಗರು ಇಬ್ಬರು ರೈತ ಸಂಘದವರು (ಅವಸರಕ್ಕಾಗಿ ಸೀಟು ಸಿಕ್ಕದೆ ಹೊರಬಂದಿರುವವರು ರಚಿಸಿದ ಕೂಟ) ಸ್ಪರ್ಧಿಸಿದ್ದಾರೆ. ನಮ್ಮ ಪಾಟಿಯವರು ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸಿದ್ದಾರೆ. ರೈತ ಸಂಘದವರ ಆರ್ಭಟ ಹೆಚ್ಚಾಗಿದೆ. ಶ್ರೀ ನಿಜಲಿಂಗಪ್ಪನವರು ಬರುತ್ತಾರೆ ಸಂಜೆ ಸಭೆಯಿದೆ ಎಂದು ಸಾರಿದ್ದರು. ನಂತರ, ಬರುವುದಾಗಲಿಲ್ಲ. ಸಭೆ ರದ್ದಾಗಿದೆ. ಎಂದರು.

ಬಸವಣ್ಣ ದೇವರ ದೇವಸ್ಥಾನದ ಎದುರು ನಮ್ಮ ಸಭೆ ನಡೆಯಿತು. ಭಾಷಣದ ನಂತರ ಪ್ರಶ್ನೋತ್ತರಗಳಾದವು. ಸಮಾಧಾನದಿಂದ ಕೇಳಿದರು. ಕಾರ್ಯಕ್ರಮ ಯಶಸ್ವಿಯಾಯಿತು.

ಗೆಳೆಯರಾದ ಬಿ. ವಿ. ಮೂರ್ತಿ ಎನ್‌. ಎಲ್‌. ಮುನಿವೆಂಕಟರಮಣ, ಕೋ ಲಿಂಗಪ್ಪ, ಸದಾಶಿವರಾವ್‌, ಮಂಚಿ ದೇವಪ್ಪ ಇವರಿಗೆ ಚಿತ್ರ ಬರೆದೆ.

ನವೆಂಬರ್

ಸಿಡೇನೂರು – ಕಲ್ಲೆದೇವರ – ಮಲ್ಲೂರು – ಬ್ಯಾಡಗಿ ಪ್ರವಾಸಿ ಮಂದಿರ.

ಸ್ನಾನಾದಿಗಳನ್ನು ಮುಗಿಸಿಕೊಂಡು ಸಿಡೇನೂರಿಗೆ ಹೋದೆವು. ಸಹಕಾರ ಸಂಘದಲ್ಲಿ ಸಭೆ ನಡೆಯಿತು. ಬೆಳಗಿನ ಹೊತ್ತಾದ್ದರಿಂದ ಹೆಚ್ಚು ಜನರು ಬಂದಿರಲಿಲ್ಲ. ಪ್ರಮುಖರು ಬಂದಿದ್ದರು. ಗೆಳೆಯ ಮಾಳಗಿಯವರ ಪ್ರಾರಂಭ ಭಾಷಣ, ಟೀಪೂ ಸಾಹೇಬರ ಮಾಲಾರ್ಪಣೆ, ಇಲ್ಲೂ ಮೂರು ಸ್ಥಾನಗಳ ಪೈಕಿ ಒಂದಕ್ಕೆ ಮಾತ್ರ ಪಾರ್ಟಿ ಸ್ಪರ್ಧಿಸಿದೆ.

ಸಭೆ ಮುಗಿಸಿಕೊಂಡು ಬ್ಯಾಡಗಿಗೆ ಹಿಂತಿರುಗಿ, ಗೆಳೆಯ ಶಂಕ್ರಪ್ಪ ಕಾಟೇನಹಳ್ಳಿಯವರಲ್ಲಿ ಊಟ ಮಾಡಿ ಕಲ್ಲೇದೇವರಕ್ಕಾಗಿ ಮೋಟೇಬೆನ್ನೂರಿಗೆ ಹೋಗಿ ಗೆ|| ಚಿಕ್ಕಪ್ಪನನ್ನು ಕರೆದುಕೊಂಡು ಹೋದೆವು. ದಾರಿ ಕೆಟ್ಟಿತು. ನಾವು ಹೋಗುವ ಹೊತ್ತಿಗೆ ಹೆಣ್ಣು ಮಗಳೊಬ್ಬಳು ಚೊಚ್ಚಲ ಹೆರಿಗೆಯಾಗಿ ಯೋಗ್ಯ ಚಿಕಿತ್ಸೆ ಅಭಾವದಿಂದ ಮೃತಳಾಗಿ ಅವಳನ್ನು ಮಣ್ಣು ಮಾಡಲು ಮಂದಿ ಹೊರಟು ನಿಂತಿದ್ದರು. ಅವರು ಹಿಂತಿರುಗಿ ಬರುವವರೆಗೂ ಕಾದಿದ್ದು, ಚಾವಡಿಯಲ್ಲಿ ಒಂದು ಸಭೆ ಕರೆದು ಸತ್ತವಳಿಗೆ ಸಂತಾಪ ವ್ಯಕ್ತಪಡಿಸಿ – ಚುನಾವಣಾ ಪ್ರಚಾರಮಾಡಿ ಹಿಂತಿರುಗಿದೆವು.

ನಂತರ ಮಲ್ಲೂರಿಗೆ ಹೋದೆವು. ಏಳು ಗಂಟೆಗೆ ಕಾರ್ಯಕ್ರಮವಿತ್ತು. ನಾವು ಹೋಗುವಾಗ ಎಂಟಾಗಿತ್ತು. ಜನರು ಸಾಕಷ್ಟು ಕುತೂಹಲದಿಂದ ನೆರೆದಿದ್ದರು. ಬಸವನ ಗೌಡರ ಊರು. ಅವರ ಅಣ್ಣ ಕಾಂಗ್ರೆಸ್ಸಿನಿಂದ ನಿಂತಿದ್ದಾರೆ. ಸಂಗಪ್ಪನವರಿಗೆ ಇವರ ಮೇಲೆ ಪ್ರಭಾವವಿದೆ. ಸಭೆ ಮುಗಿಸಿಕೊಂಡು ಸಂಗಪ್ಪನವರ ಮನೆಗೆ ಬಂದು ರಾತ್ರಿ ಊಟ ಮಾಡಿದೆವು ಬ್ಯಾಡಗಿಯಲ್ಲಿ ವಸತಿ.

ನವೆಂಬರ್

ಬ್ಯಾಡಗಿ -ಹಾವೇರಿ – ಹುಬ್ಬಳ್ಳಿ – ಗಿರೀಶ ಆಶ್ರಮ.

೧೫/- ಜಮಾ ಶಂಕರಪ್ಪ ಕಾಟೇನಹಳ್ಳಿಯವರಿಂದ.

ನಿನ್ನೆ ಮಧ್ಯಾಹ್ನ ಮತ್ತು ರಾತ್ರಿ ಊಟ ಜೀರ್ಣವಾಗಲಿಲ್ಲ. ತಡವಾಗಿ ರಾತ್ರಿ ಹೋಳಿಗೆ ತುಪ್ಪ ತಿಂದಿದ್ದು ಅಜೀರ್ಣವಾಗಿ ಮೈ ಎಲ್ಲಾ ಭಾರವಾಗಿತ್ತು. ತಡವಾಗಿ ಎದ್ದು ಕಾಫೀ ಕುಡಿದು ಸ್ನಾನ ಮುಗಿಸಿದೆ. ಗೆಳೆಯ ಮಾಳಗಿ, ಶಂಕ್ರಪ್ಪ ಇವರು ಬಂದು ಬೀಳ್ಕೊಟ್ಟರು. ಗೆಳೆಯ ಬಸವನಗೌಡರು ಬೆಳಿಗ್ಗೆ ಮೋಟೇಬೆನ್ನೂರಿಗೆ ಹೋಗಿ ಅಲ್ಲಿ ರಾಮಣ್ಣನಿಲ್ಲವೆಂದು ಹಿಂದಕ್ಕೆ ಬಂದರು. ಆ ಕಾರು ಹಾವೇರಿಗೆ ಹೋಗುವುದಿತ್ತು. ಅದರಲ್ಲೇ ನಾನು ಹಾವೇರಿಗೆ ಬಂದೆ. ಗೆಳೆಯ ರುದ್ರಪ್ಪ ಜಾಬೀನ ಅಂಗಡಿಯಲ್ಲಿದ್ದ. ಅವನನ್ನು ಕರೆದುಕೊಂಡು ಸೀದಾ ಸ್ಟೇಶನ್‌ಗೆ ಹೋದೆ. ರೈಲು ಒಂದೂವರೆ ತಾಸು ತಡವೆಂದು ತಿಳಿಯಿತು. ಅಷ್ಟರಲ್ಲಿ ರಾಮಣ್ಣನೂ ಬಂದ. ಅವನು ರಾತ್ರಿಯೇ ಊರಿಗೆ ಬಂದುಬಿಟ್ಟನಂತೆ. (ಈಚೆಗೆ ಮತ್ತೊಬ್ಬಾಕಿಯನ್ನು ಗಂಟು ಹಾಕಿಕೊಂಡಿದ್ದಾನಂತೆ)

ಏನೂ ತಿನ್ನಬಾರದೆಂದಿದ್ದೆ. ಗೆಳೆಯರ ಒತ್ತಾಯಕ್ಕಾಗಿ ಪೂರಿ ತಿಂದೆ. ರೈಲಿಗೆ ಕುಳಿತು ಹೊರಟೆ. ೨-೩೦ ಹೊತ್ತಿಗೆ ಹುಬ್ಬಳ್ಳಿ ಸೇರಿತು. ಜಟ್ಕಾ ಮಾಡಿಕೊಂಡು ನೇರವಾಗಿ ಗಿರೀಶ ಆಶ್ರಮಕ್ಕೆ ಹೋದೆ. ಡ್ರೈವರ್ ಕಲಪ್ಪ ಇದ್ದರು. ಊಟಮಾಡಿ ಮಲಗಿ ಎಂದರು. ಚೀನಿಕಾಯಿ ಪಾಯಸ, ಅನ್ನ ಮಜ್ಜಿಗೆ ತಿಂದು ಮಲಗಿದೆ. ಒಮ್ಮೆಗೇ ನಂಜೇರಿ ಮೈ ಕೈ ನೋವಾಗಿ, ಜ್ವರ ಬಂದಂತಾಯಿತು. ರಾತ್ರಿ ಕಾಫಿ-ಶುಂಠಿ ಕಷಾಯ ಕುಡಿದು ಮಲಗಿದೆ.

ರಾತ್ರಿ ನಾಯ್ಕಪ್ಪಮಾಸ್ತರು ಬಂದರು. ಅವರು ಕೇಸು ನಡೆಸಬೇಕಾಗಿರುವುದರಿಂದ ಈಗ ಸಧ್ಯ ಸತ್ಯಾಗ್ರಹ ಸಾಧ್ಯವಿಲ್ಲವೆಂದರು.

ನವೆಂಬರ್

ಧಾರವಾಡ, ಡಿ. ಎಲ್‌. ಬಿ. ಲಾಡ್ಜ್‌.

ಮೈ ಭಾರವಾಗಿತ್ತಾದರೂ ಸ್ನಾನಮಾಡಿ ಬರೀ ಚಹಾ ತೆಗೆದುಕೊಂಡು ಆಶ್ರಮದ ಕಾರಿನಲ್ಲಿ ಧಾರವಾಡಕ್ಕೆ ಬಂದೆ.

ಗೆಳೆಯ ಶಿವರಾಯನ ದುರ್ಗಾ (ಟ್ರೇಡರ್ಸ್‌) ಟೈರ್ಸ್‌‌ಗೆ ಹೋಗಿ ಅವನನ್ನು ಕಂಡು ಧಾರವಾಡಕ್ಕೆ ಹೋಗುವುದನ್ನು ತಿಳಿಸಿದೆ.

ದಾರಿಯಲ್ಲಿ ನವಲೂರಿಗೆ ಹೋದೆವು. ಪೋಲಿಂಗ್‌ ಬಿರುಸಾಗಿ ನಡೆಯುತ್ತಿತ್ತು. ಗೆಳೆಯ ಪೂಜಾರರು ಏಜೆಂಟ್‌ ಆಗಿ ಇಲ್ಲಿಯೇ ಇದ್ದರು. ಅವರೊಡನೆ ಮಾತನಾಡಿಕೊಂಡು ಧಾರವಾಡಕ್ಕೆ ಬಂದು ಡಿ. ಎಲ್‌. ಬಿ. ಗೆಸ್ಟ್‌ಹೌಸಿನಲ್ಲಿ ವಸತಿ ಮಾಡಿ ಮಲಗಿದೆ. ಮೈ ಭಾರವಾಯಿತು. ಕಾವೇರಿತು. ತಲೆ ಸಿಡಿಯತೊಡಗಿತು. ಸ್ವಲ್ಪ ನಿದ್ರೆಯೂ ಬಂದಿತು. ಎದ್ದು ಹತ್ತಿರದ ಹೋಟೇಲೊಂದಕ್ಕೆ ಹೋಗಿ ಊಟ ಮಾಡಲು ಕುಳಿತೆ. ಫುಲ್‌ಮೀಲ್‌ ಕೊಡುತ್ತೇನೆಂದು ಮಾಣಿ ಬಡಿಸಲು ಆರಂಭಿಸಿದ. ಏನು ತಂದರು ಬೇಡ ಬೇಡ ಎಂಬುದನ್ನು ಕೇಳಿ ಅವನಿಗೆ ಆಶ್ವರ್ಯವಾಯಿತು. ಸ್ವಲ್ಪ ಅನ್ನ ಸಾರುಮಜ್ಜಿಗೆ ತಿಂದು ಬಂದೆ. ಮತ್ತೆ ಮಲಗಿದೆ. ಸಂಜೆಯೂ ಏನೂ ಊಟ ಸೇರಲಿಲ್ಲ. ಅನಾಸಿನ್, ಕಾಫಿ ಇತ್ಯಾದಿ ತೆಗೆದುಕೊಂಡೆ. ರಾತ್ರಿ ಬಾಯರಿಕೆ – ಮೈನೋವು – ದಣಿವು ಕಾಣಿಸಿಕೊಂಡಿತು. ನಿದ್ರೆ ಸರಿಯಗಿ ಬರಲಿಲ್ಲ.

ಗೆಳೆಯರು ಯಾರೂ ಭೇಟಿಯಾಗಲಿಲ್ಲ.

ನವಂಬರ್

ಬೆಳಿಗ್ಗೆ ಎದ್ದು ಡಾ. ಗೋಪಾಲ್ ಇರಬಹುದೆಂದು ಬಸ್ಸುಹಿಡಿದು ಆಸ್ಪತ್ರೆಗೆ ಹೋದೆ. ಅವನು ಅಲ್ಲಿರಲಿಲ್ಲ. ಅಷ್ಟರಲ್ಲಿ ಅಂಕುಶ ಪತ್ರಿಕೆ ಸಂಪಾದಕ ಹುರಳಿಯವರಿಗೆ ಯಾರೋ ಗುಂಡಿನಿಂದ ಹೊಡೆದರೆಂದು, ಅವರನ್ನೂ ಆಸ್ಪತ್ರೆಗೆ ತಂದರು. ಎಲ್ಲರೂ ಅವರ ಉಪಚಾರಕ್ಕೆ ಧಾವಿಸಿದರು. ೧೧ ಗಂಟೆಯ ತನಕ ಅಲ್ಲೇ ಕಾದಿದ್ದು (ಔಟ್ ಪೇಶೆಂಟ್ಸ್ ಡಾಕ್ಟರು ಒಬ್ಬ ಹುಡುಗ) ಅವನ ಹತ್ತಿರ ನನ್ನ ಸ್ಥಿತಿ ಹೆಳಿಕೊಂಡೆ. ಅವ ನನ್ನ ಮೈಯನ್ನು ಕೂಡ ಮುಟ್ಟದೆ ಚೀಟಿ ಬರೆದು ಕೊಟ್ಟ. ಶೀಶೆಯಿರಲಿಲ್ಲ. ಪುಡಿ, ಮಾತ್ರೆ ತೆಗೆದುಕೊಂಡು ಮತ್ತೆ ಬಸ್ಸು ಹಿಡಿದು ಬಂದು ಹಾಸಿಗೆ ಹಿಡಿದೆ. ಅಷ್ಟರಲ್ಲಿ ಗೆಳೆಯ ಪೂಜಾರರು ಒಬ್ಬ ಹುಡುಗನನ್ನು ಕಳಿಸಿ ಮನೆಗೆ ಬರಬೇಕೆಂದು ಹೇಳಿದ್ದರು. ಮೈಗೆ ಚೆನ್ನಾಗಿಲ್ಲ. ಈಗ ಬರುವುದಿಲ್ಲ ಸಂಜೆ ಕಡೆಗೆ ಬರುತ್ತೇನೆಂದು ತಿಳಿಸಿದೆ. ಮತ್ತೆ ಆತ ಟಾಂಗ ತೆಗೆದು ಬರಲು ಹೇಳಿದ್ದಾರೆಂದು ಒತ್ತಾಯ ಮಾಡತೊಡಗಿದ. ಹೊರಟುಹೋದೆ. ಗೆಳೆಯ ಪೂಜಾರರು ಮನೆಯಲ್ಲಿದ್ದರು. ಹಾಸಿಗೆ ಸಿದ್ಧವಾಗಿತ್ತು. ಮಲಗಿಬಿಟ್ಟೆ.

ಇಂದು ಏನೂ ಆಹಾರ ತೆಗೆದುಕೊಳ್ಳಲಿಲ್ಲ. ಲಿಂಬೆ ಹಣ್ಣುಹಾಕಿದ ಟೀ ಕೊಟ್ಟರು ಕುಡಿದೆ. ತಲೆ ಸಿಡಿಯುವುದು ಮೈ ಎಲ್ಲಾ ನೋವು , ಉರಿ, ಜ್ವರ ನರಳುತ್ತಾ ಬಿದ್ದುಕೊಂಡೆ. ರಾತ್ರಿ ಎಲ್ಲಾ ಜ್ವರ ಏರುತ್ತಲೇಯಿತ್ತು. ಆಗಾಗ ಮೈ ಬೆವರುತ್ತಿತ್ತು.

ಇಂದು ಗರಗಕ್ಕೆ ಹೋಗಬೇಕಾಗಿತ್ತು. ನಾಳೆ ಅಲ್ಲಿ ಚುನಾವಣೆ.

ಆಸ್ಪತ್ರೆಗೆ ಹೋಗುವಾಗ ಗೆ|| ವೀರಪ್ಪ ಅಂಗಡಿ ಮತ್ತು ಸವದತ್ತಿ ಭೇಟಿಯಾಗಿದ್ದರು. ನನ್ನ ಸ್ಥಿತಿ ತಿಳಿಸಿದೆನಾದರೂ ಬರಲೇಬೇಕೆಂದು ಒತ್ತಾಯ ಮಾಡಿ ಹೋದರು. ನಾನೂ ಹೋಗಲಿಲ್ಲ. ಗೆಳೆಯ ಪೂಜಾರರು ಹೋಗಲಿಲ್ಲ.

ನವಂಬರ್

ಜ್ವರ ಇಳಿಯಲಿಲ್ಲ. ಒಬ್ಬರು ಡಾಕ್ಟರಲ್ಲಿಗೆ ಗಾಡಿ ಮಾಡಿಸಿ ಗೆಳೆಯ ಪೂಜಾರರು ಕರೆದೊಯ್ದರು. ಮೈ ಬೆವರುತ್ತಲ್ಲಿತ್ತು. ಪರೀಕ್ಷೆ ಮಾಡಿ, ನ್ಯೂಮೋನಿಯಾ ಆಗಿದೆ ಟೆರಾಮೆಸಿನ್ನೊ ಯಾವುದೋ ಮಾತ್ರೆ (೧-೧೪ ಗಂ. ಗೆ ಒಂದು) ಮೂರು ಮಾತ್ರೆ ಮಧ್ಯಾಹ್ನದಿಂದ ಮೂರು ಮೂರು ಘಂಟೆಗೆ ಒಮ್ಮೆ ತೆಗೆದುಕೊಳ್ಳಲು ಹೇಳಿ ಮೇಲೆ ಮತ್ತಷ್ಟು ಔಷಧಿ ಕೊಟ್ಟರು.

ಬೆಳಿಗ್ಗೆ ಕಾಫಿ ಕುಡಿದೆ. ಭೇದಿಯಾಗಿಲ್ಲ. ಊಟ ಮಾಡಲಿಲ್ಲ. ಬ್ರೆಡ್ಡು ಕಾಫಿ ತೆಗೆದುಕೊಂಡೆ ಜ್ವರ ತಲೆನೋವು, ಕಣ್ಣು ಬಿಡಲು ಸಾಧ್ಯವಿಲ್ಲ. ಸ್ವಲ್ಪ ಕೆಮ್ಮಿದರೂ ತಲೆ ಒಡೆದು ಹೋದಂತೆ ನೋವಾಗುತ್ತಿದೆ.

ಗೆಳೆಯ ಪೂಜಾರರು ಮನೆಯಲ್ಲೇ ಇದ್ದು ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಮಿತ್ರರು ಹುಬ್ಬಳ್ಳಿಯ ಬಾಬುಸಾಹೇಬ ಎಲಿಗಾರರು ನೆರವಾಗಿದ್ದಾರೆ.

ನವಂಬರ್

ತಲೆ ನೋವು ಕಡಿಮೆಯಾಗಿದೆ. ಜ್ವರ ಇಳಿದಿದೆ. ಸಂಕಟ ಹೆಚ್ಚಾಗಿದೆ. ಬೆಳಿಗ್ಗೆ ನೀರಾದ ಭೇದಿಯಾಯಿತು.

ಗೆಳೆಯ ಪೂಜಾರರು ಹನ್ನೊಂದರ ಹೊತ್ತಿಗೆ ಬೆಳಿಗ್ಗೆ ಓಟಿನ ಎಣಿಕೆಗೆಂದು ಹೋದವರು ಬರಲೇಯಿಲ್ಲ. ರಾತ್ರಿ ಬೆಳಕು ಹರಿಯುವ ಹೊತ್ತಿಗೆ ಬಂದರು. ನವಲೂರಿನವರು ಒಬ್ಬರು ನಮ್ಮ ಉಮೇದುವಾರರು ಗೆದ್ದಿದ್ದಾರೆ. ಗರಗದವರು ಮೂರು ಜನ ಸೋತಿದ್ದಾರೆ. ಗರಗದವರೇ ಸರಿಯಾಗಿ ಬೆಂಬಲ ನೀಡಿಲ್ಲ. ಬೆಳಕು ಹರಿಯುವ ಹೊತ್ತಿಗೆ ಈ ಗುಂಪು ಬಂದು ಪೂಜಾರರಲ್ಲಿ ಭಾರಿಯಾಗಿ ವಿಫಲ ಚರ್ಚೆ ನಡೆಸುತ್ತಿದ್ದರು.

ಸಂಜೆ ಮತ್ತು ರಾತ್ರಿ ಎರಡು ಬಾರಿ ಭೇದಿಯಾಯಿತು. ಮತ್ತೆ ಭೇದಿಯಾಗುತ್ತಲೇ ಹೋದರೆ ನಾಳೆ ಆಸ್ಪತ್ರೆಗಾದರೂ ಸೇರಬೇಕೆಂದು ನಿರ್ಧರಿಸಿದ್ದೇನೆ.

ನವಂಬರ್ ೨೪

ಎದ್ದು ಸ್ನಾನಾದಿಗಳನ್ನು ಮುಗಿಸಿದೆ. ಮಧ್ಯಾಹ್ನ ಮೂರುಗಂಟೆಗೆ ಗೆ|| ವಿಶ್ವನಾಥ ಒಂದು ಕಾರನ್ನು ಕಳಿಸುತ್ತಾನೆಂದು ಲಿಂಗಪ್ಪ ತಿಳಿದುಕೊಂಡು ಬಂದರು.

ಶ್ರೀ ಗುರುಮೂರ್ತಿಗಳು ಎಂಟು ಹತ್ತು ದಿವಸಗಳಿಗಾಗುವಷ್ಟು ಮಾತ್ರೆ ಔಷಧಿ ಸಿದ್ಧಮಾಡಿಟ್ಟರು.

ಹನ್ನೊಂದು ಗಂಟೆಗೇ ಊಟ ಸಿದ್ಧವಾಗಿತ್ತು. ಊಟ ಮಾಡಿ ನಾನು ವಿಶ್ರಾಂತಿ ತೆಗೆದುಕೊಂಡೆ. ಹೊರಡಲು ಮಾನಸಿಕವಾಗಿ ಪೂರ್ಣ ಸಿದ್ಧವಾದೆ. ಹಾಸಿಗೆಯನ್ನೂ ಕಟ್ಟಿಡಲಾಯಿತು.

ಮೂರಕ್ಕಿಂತ ತಡವಾಗಿಯೇ ಗೆ|| ಪುರುಷೋತ್ತಮ, ಬಿ. ವಿ. ಮೂರ್ತಿ ಬಂದರು. ಹೆಚ್ಚು ತಡಮಾಡದೆ ಹೊರಟೆವು. ಶ್ರೀ ಗುರುಮೂರ್ತಿಗಳು ನಂಜುಂಡಯ್ಯ, ಸಾವಿತ್ರಮ್ಮ ಇವರುಗಳು ಬೀಳ್ಕೊಟ್ಟರು.

ತೀರ್ಥಹಳ್ಳಿಯಿಂದ ಹೊರಟು ಹುಲಿಕಲ್ಲಿಗೆ ಬಂದೆವು. ಶ್ರೀ ವೆಂಕಪ್ಪ ಶೆಟ್ಟರು, ಅವರ ಮಕ್ಕಳು ನರಸಿಂಹ ಶೆಟ್ಟರು ಎಲ್ಲಾ ಡೀಸೆಲ್‌ಬಂಕಿನ ಅಧಿಕಾರಿಗಳ ಹತ್ತಿರ ಮಾತನಾಡುತ್ತಿದ್ದರು. ಹೊಸದಾಗಿ ನಿರ್ಮಾಣವಾಗುತ್ತಿರುವ ಹಂಚಿನ ಕಾರ್ಖಾನೆ ನೋಡಿ ಕಾಫೀ ಕುಡಿದು, ಗೆ|| ನರಸಿಂಹ ಶೆಟ್ಟರನ್ನು ಕರೆದುಕೊಂಡು ಘಾಟಿಯಿಳಿದೆವು. ೭-೩೦ರ ಹೊತ್ತಿಗೆ ಕೊಂಡ್ಲೂರಿಗೆ ಬಂದೆವು. ಗೆ|| ಬಿ. ವಿ. ಮೂರ್ತಿ ಅಲ್ಲಿಂದಲೇ ೫ ಅಥವಾ ೬ ರಂದು ಬರುತ್ತೇವೆಂದು ಕಾರಿನಲ್ಲಿ ಹಿಂದಕ್ಕೆ ಹೋದರು. ನಾವು ದೋಣಿಯಂದರಲ್ಲಿ ಬಸರೂರಿಗೆ ಬಂದು, ಅಲ್ಲಿಂದ ಕಾರಿನಲ್ಲಿ ಕುಂದಾಪುರದಲ್ಲಿರುವ ವೆಂಕಪ್ಪಶೆಟ್ಟರ ಮನೆಗೆ ಬಂದು ತಲ್ಪಿದೆವು.

ಡಿಸೆಂಬರ್

ಗೆಳೆಯ ಪುರುಷೋತ್ತಮ ಮಧ್ಯಾಹ್ನ ಬಂದ. ಬಸರೂರಲ್ಲಿ ರಾತ್ರಿ ಬಿಟ್ಟು ಬಂದ ಬಗ್ಗೆ ಜಗಳಮಾಡಲು ಬಂದೆ ಎಂದು ಆಗ್ರಹಪಟ್ಟ. ವಿಷಯ ವಿವರಿಸದೆ.

ಸಂಜೆ ಗೆ|| ಲಿಂಗಪ್ಪ ಪುರುಷ ಇವರೊಂದಿಗೆ ಗಂಗೊಳ್ಳಿ ಕಡುವಿಗೆ ಹೋಗಿ ಸುತ್ತಾಡಿಕೊಂಡು ಬಂದೆವು. ಪುರಷ ಬಂಗಲೆಯಲ್ಲೇ ಇರುವುದಾಗಿ ಹೆಳಿ ಹೋದ.

ಇಲ್ಲಿ ತರಕಾರಿಯದೊಂದು ಸಮಸ್ಯೆ. ಮೀನು ತಿನ್ನದವರು ಇಲ್ಲಿ ಒಳ್ಳೆ ಆಹಾರ ಹೊಂದುವುದು ಕಷ್ಟ ಸಾಧ್ಯ. ಇಷ್ಟು ವರ್ಷ ಮಾಂಸಾಹಾರ ಬಿಟ್ಟು ಈಗ ಮತ್ತೆ ತಿನ್ನಲು ಆರಂಭಿಸುವುದು ಅನುಚಿತವಾದೀತೆಂದು ಕಾಣುತ್ತೆ. ಮನೆಯವರಿಗೂ ಕಷ್ಟ. ಹೋಟೆಲಿನಿಂದ ಸಾರು ಹುಳಿ ತರಿಸುವುದು ಹೇಗೆ ಸಾಧ್ಯ?

ಹವಾ ಚೆನ್ನಾಗಿದೆ.

ಡಿಸೆಂಬರ್

ಬೆಳಿಗ್ಗೆ ಪೇಟೆ ತಿರುಗಾಡಿ ಬಂದು ಪುರುಷೋತ್ತಮನೊಡನೆ ಹೊಳೆಯಾಚೆಗೆ ಹೋಗಿ ಕಳ್ಳು ಕುಡಿದು ಬಂದೆವು. ನನಗೆ ಹೆಚ್ಚು ಕುಡಿಯಲು ಆಗಲಿಲ್ಲ.

ಸಂಜೆ ಕಡು ಹತ್ತಿರ ಹೋಗಿ ಬಂದೆವು. ಗೆ|| ಪುರುಷೋತ್ತಮ ಬೆಳಿಗ್ಗೆ ಬಸ್ಸಿಗೆ ಹೋಗುವುದಾಗಿ ಹೇಳಿ ರಾತ್ರಿ ಬಂಗಲೆಗೆ ಹೊರಟುಹೋದ.

ಡಿಸೆಂಬರ್

ಗೆಳೆಯ ಪುರುಷೋತ್ತಮ ಬೆಳಿಗ್ಗೆ ತೀರ್ಥಹಳ್ಳಿಗೆ ಹೋಗಿರಬೆಕು.

ಬೆಳಿಗ್ಗೆ ಕಾಫಿ ತಿಂಡಿ ಮುಗಿಸಿ ೧೦-೩೦ರ ತನಕ ರೂಮಿನಲ್ಲೇ ಇದ್ದೆವು. ನಂತರ ಕೃಷ್ಣಭವನಕ್ಕೆ ಹೋಗಿ ಕಾಫಿ ಕುಡಿದು ಹಾಗೇ ಹೊಳೆಯಾಚೆಗೆ ಹೋಗಿ ಬಂದೆವು.

ಮಧ್ಯಾಹ್ನ ಸ್ನಾನಮಾಡಿ ಊಟಮಾಡಿ ಬಹಳ ಹೊತ್ತು ಮಲಗಿದ್ದೆವು. ಸಂಜೆ ಗೆಳೆಯ ಭಾಸ್ಕರನೊಡನೆ ಕಡು ಹತ್ತಿರ ಸ್ಕೂಲಿನ ಹತ್ತಿರ ಹೋಗಿ ಬಂದೆವು.

ಇಂದೂ ಪತ್ರಗಳನ್ನು ಬರೆಯಲು ಆಗಲಿಲ್ಲ. ನಾಳೆ ಎಲ್ಲ ಬರೆಯಲೇಬೇಕು.

ಮೋಡದ ವಾತಾವರಣವಿದ್ದು. ಚಳಿ ಏನೂ ಇಲ್ಲ.

ನನ್ನ ಆರೋಗ್ಯ ಉತ್ತಮವಾಗುತ್ತಿದೆ.

* * *

ಲುಮುಂಬಾರನ್ನು ಮೊಬುಟು ಮನೆಯಲ್ಲೇ ಇರಿಸಲಾಗಿದೆ ಎಂದು ವರದಿಯಾಗಿದೆ.

ಪಾರ್ಟಿಯ ಸಮ್ಮೇಳನ ಮೇನಲ್ಲಿ ಬೀಹಾರಿನಲ್ಲಿ ನಡೆಯುವುದೆಂದು ರಾಷ್ಟ್ರೀಯ ಸಮಿತಿ ನಿರ್ಧರಿಸಿದೆ ಎಂದು ವರದಿ.

* * *

ರಾತ್ರಿ ಆಲಿ ಅಕ್ಬರ್ ಖಾನ್‌ರವರ ಸರೋದ್‌ ವಾದನ ಕೇಳಿದೆ. ‘ಚಂದನಂದನ್‌’ (ನಾಗಪುರದಿಂದ ಧ್ವನಿಮುದ್ರಿತ)

ಡಿಸೆಂಬರ್

ಇಂದು ದಿನವೆಲ್ಲಾ ಕೋಣೆಯಲ್ಲೇ ಕಳೆದೆ. ಹೊಟ್ಟೆನೋವು ಮತ್ತಷ್ಟು ಹೆಚ್ಚಾಗಬಹುದೆಂಬ ಭಯದಿಂದ ರಾತ್ರಿ ಗಂಜಿ ಊಟ ಮಾಡಿದೆ. ಇಂದು ಸಂಜೆ ಮತ್ತೆ ಭೇದಿಯಾಗಲಿಲ್ಲ. ಉಷ್ಣದಿಂದ ಹೀಗಾಗಿರಬೇಕು.

ಸಂಜೆ ಶಾರದಳಿಂದ ಎಕ್ಸ್‌ಪ್ರೆಸ್‌ ಡೆಲಿವರಿ ಕಾಗದ ಬಂದಿತು. ಪತ್ರ ವ್ಯವಹಾರ ಬೆಳೆಸಲು ಇಷ್ಟವಿಲ್ಲವೆಂದು ನಾನು ಬರೆದ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾಳೆ…..

ತಂದಿದ್ದ ಹಣವೆಲ್ಲಾ ಇಂದಿಗೆ ಮುಗಿಯಿತು.

ಗೆಳೆಯ ಬಿ. ವಿ. ಮೂರ್ತಿ ಇಂದೂ ಬರಲಿಲ್ಲ. ಇಂದು ಗೆಳೆಯ ಲಿಂಗಪ್ಪ ಅವರಿಗೊಂದು ಪತ್ರ ಬರೆದಿದ್ದಾರೆ.

ದಿನವೆಲ್ಲಾದೆ ಹಿಡನ್ಫ್ಲವರ್ಓದುತ್ತಾ ಕಳೆದೆ, ವಿಶ್ವದಲ್ಲಿ ಇಬ್ಬರು ಪ್ರೇಮಿಗಳು ತನ್ನ ಇಚ್ಚೆಯಂತೆ ಕೂಡಿ ಜೀವನ ನಡೆಸಲು ಸಮಾಜ ಎಷ್ಟು ಅಡ್ಡಿ ಬರುತ್ತದೆಂಬ ಸಮಸ್ಯೆಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಪರ್ಲ್ ಎಸ್‌. ಬಕ್‌. ಅಂತಹವರಿಗೆ ಹುಟ್ಟಿದ ಮಕ್ಕಳು?

ಡಿಸೆಂಬರ್

೮/- ಶ್ರೀ ಶಿನಪ್ಪ ಶೆಟ್ಟರಿಂದ ಜಮಾ.

ಗೆಳೆಯ ಶಿವರಾಯ ಶೆಟ್ಟರಿಗೂ ಶ್ರೀ ಬಿ. ಎಸ್‌. ಗುರುಮೂರ್ತಿಗಳಿಗೂ ಪತ್ರ ಬರೆದೆ.

ಹೊಟ್ಟೆನೋವು ಕಡಿಮೆಯಿದೆ. ಗಂಜಿ ಊಟವನ್ನೇ ಮಾಡುತ್ತಿದ್ದೇನೆ.

ಸಂಜೆ ಗೆಳೆಯ ಲಿಂಗಪ್ಪನವರೊಂದಿಗೆ ಹೊರಗಡೆ ಸುತ್ತಾಡಿ ಬಂದೆ. ಹಣವೆಲ್ಲಾ ಮುಗಿದು ಹೋಗಿತ್ತು. ಶ್ರೀ ಶೀನಪ್ಪ ಶೆಟ್ಟರ ಹತ್ತಿರ ಎಂಟು ರೂ. ಕೈಗಡ ತೆಗೆದುಕೊಂಡೆವು.

ಡಿಸೆಂಬರ್ ೧೦

೨೦/- ರೂ ಶ್ರಿ ಬಿ. ವಿ. ಮೀರ್ತಿಯವರಿಂದ ಜಮಾ.

ಗೆಳೆಯ ಸತ್ಯನಾರಾಯಣ ಸಾಗರದಿಂದ ಪತ್ರ ಬರೆದಿದ್ದಾರೆ. ಶಿವಮೊಗ್ಗಾ ಸಭೆಯ ತೀರ್ಮಾನಗಳು ಮತ್ತು ಕ್ಷೇಮ ಸಮಾಚಾರ. ಗೆಳೆಯ ಮಾಧವನ್‌ರಿಗೆ ಪತ್ರ ಬರೆದು ಚುನಾವಣಾ ಪ್ರಚಾರಕ್ಕೆ ನನ್ನ ಅಗತ್ಯವಿದ್ದಲ್ಲಿ ಬರೆಯಿರಿ ಎಂದು ತಿಳಿಸಿದ್ದೇನೆ. ಶಾರದಮ್ಮನ ಪತ್ರಕ್ಕೆ ಉತ್ತರ ಬರೆದೆ. ಎರಡು ಪತ್ರಗಳನ್ನು ಎಕ್ಸ್‌ಪ್ರೆಸ್‌ ಹಾಕಿದೆ.

ಸಂಜೆ ಗೆಳೆಯ ಲಿಂಗಪ್ಪನೊಡನೆ ಹೊರಗಡೆ ಹೋಗಿ ನರಿಬೇಣದಲ್ಲಿ ಕುಳಿತಿದ್ದು ಬಂದೆ. ಇಂದೂ ಸಂಜೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತಾದರೂ ಭೇದಿ ಏನು ಆಗಲಿಲ್ಲ. ಗಂಜಿ ಊಟವನ್ನೇ ಮುಂದುವರಿಸಿದ್ದೇನೆ.

ರಾತ್ರಿ ಗೆಳೆಯ ಶಿವರಾಯ ಮತ್ತು ನರಸಿಂಹಶೆಟ್ಟರು ಮಂಗಳುರಿನಿಂದ ಕಾರಿನಲ್ಲಿ ಬಂದರು. ಗೆಳೆಯ ಬಿ. ವಿ. ಮೂರ್ತಿಯವರು ಬಂದರು. ಊಟಮಾಡಿ ಹರಟೆ ಇತ್ಯಾದಿ ಮುಗಿಸಿ ಮಲಗಿದೆವು. ಗೆಳೆಯ ಮೂರ್ತಿಯವರು ಇಪ್ಪತ್ತು ರೂ. ಗಳನ್ನು ಕೊಟ್ಟಿರುತ್ತಾರೆ. ಗೆಳೆಯ ಕರಿಬಸಪ್ಪ ಗೌಡರು ಬಂದಿದ್ದಾರೆಂದು ಮೂರ್ತಿಯವರು ಹೇಳಿದರು. ಇನ್ನೂ ಅವರ ಭೇಟಿಯಾಗಿಲ್ಲ.

ಡಿಸೆಂಬರ್ ೧೨

ಬೆಳಿಗ್ಗೆ ಎದ್ದವನೇ ಗೆ. ಲಿಂಗಪ್ಪ ನಾನು ಉಡ್ಪಿಗೆ ಹೋಗುತ್ತೇನೆಎಂಬ ತನ್ನ ನಿರ್ಧಾರ ಹೇಳಿದ. ಬಹುಶಃ ನನ್ನ ಯಾವುದಾದರೂ ಟೀಕೆ ನಿರ್ಧಾರಕ್ಕೆ ಬರಲು ಒತ್ತಾಯಿಸಿತೋ ಏನೋ?

ಮಧ್ಯಾಹ್ನ ಮೂರು ಗಂಟೆ ಬಸ್ಸಿಗೆ ಹೋದರು. ನಾಲ್ಕು ಐದು ಗಂಟೆ ಹೊತ್ತಿಗೆ ಸೊರಬದಿಂದ ಗೆ|| ಮಂಚಿ ದ್ಯಾವಪ್ಪ ಮತ್ತು ರಾಮರಾವ್‌ ಬಾಪಟ್‌ ಬಂದಿಳಿದರು. ೧೭ ರಂದು ಸೊರಬ ತಾ. ಬೋ. ಗೆ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಪಾರ್ಟಿ ತನ್ನ ಉಮೇದುವಾರರನ್ನು ಆಯ್ಕೆ ಮಾಡುವ ಬಗ್ಗೆ ನೀವು ಬರಬೇಕೆಂದು ಕೇಳಲು ಬಂದಿದ್ದಾರೆ. ನಾಳೆಯೇ ಹೋಗುವುದು ನನ್ನಿಂದ ಸಾಧ್ಯವಿಲ್ಲ. ಮತ್ತು ನಾನು ನೇರವಾಗಿ ತೀರ್ಮಾನ ಹೇಳುವುದು ಸರಿಯಲ್ಲ ಎಂಬ ಕಾರಣ ಜಿಲ್ಲೆಯ ಹಾಗೂ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಸೂಕ್ತ ತೀರ್ಮಾನ ಕೈಗೊಳ್ಳಲು ಪ್ರಯತ್ನಪಡಲು ಹೇಳಿದೆ. ಒಂದು ವೇಳೆ ನನ್ನ ಅಗತ್ಯ ಬಿದ್ದಲ್ಲಿ ೧೬ ಬೆಳಿಗ್ಗೆ ಕಾರು ಕಳಿಸಿದರೆ ಬರುತ್ತೇನೆ ಎಂದು ತಿಳಿಸಿದೆ.

ಸಂಜೆ ಈ ಗೆಳೆಯರೊಡನೆ ಇಂದು ಗಂಗೊಳ್ಳಿಕಡು ದಾಟಿ ಗಂಗೊಳ್ಳಿಗೆ ಹೋಗಿ ಬಂದೆವು. ಗೆ|| ದೇವಪ್ಪ ತನ್ನ ವೈದ್ಯ ಮಾಡಲು ಹೇಳಿ ಎಳನೀರೊಂದನ್ನು ತಂದು ಅದಕ್ಕೆ ಕಲ್ಲು ಸಕ್ಕರೆ ಮತ್ತು ಕಲ್ನಾರು ಹಾಕಿಟ್ಟಿದ್ದಾರೆ. ಬೆಳಗಿನ ಝಾವ ಗಂ. ಕುಡಿಯಬೇಕೆಂತೆ ಹೊಟ್ಟೆನೋವು ಗುಣವಾಗುತ್ತದೆ ಎಂದಿದ್ದಾರೆ. ಸಂಜೆ ಮತ್ತೆ ಭೇದಿಯಾಯಿತು.

ಡಿಸೆಂಬರ್ ೧೩

೧೦/- ರೂ. ಜಮಾ. ಗೆ|| ಮಂಚಿ ದ್ಯಾವಪ್ಪನವರಿಂದ.

ಇಂದು ಬೆಳಿಗ್ಗೆ ಮೋಡ ಕವಿದ ವಾತಾವರಣವಿತ್ತು. ದಿನವೆಲ್ಲಾ ಶಾಖ ಹೆಚ್ಚಾಗಿತ್ತು.

ಗೆಳೆಯ ಮಂಚಿ ದ್ಯಾವಪ್ಪ ಮತ್ತು ರಾಮರಾವ್‌ ಬಾಪಟ್‌ರು ಹನ್ನೊಂದರ ಬಸ್ಸಿಗೆ ಹೊದರು.

ದಿನವೆಲ್ಲಾ ಕೋಣೆಯಲ್ಲೇ ಕಳೆದೆ. ಮಧ್ಯಾಹ್ನ ಶ್ರೀ ಶೀನಪ್ಪಶೆಟ್ಟರೊಂದಿಗೆ ಕಾಫಿ ಕುಡಿಯಲು ಹೊರಗೆ ಹೋಗಿದ್ದೆ. ಸಂಜೆ ಗಂಗೊಳ್ಳಿ ಕೋಡಿಗೆ ಹೋಗಿ, ಹಾಗೆ ನದಿಯ ಪಕ್ಕದಲ್ಲೇ ನಡೆದು ಹಿಂತಿರುಗಿ ನರಿಬೇಣದತ್ತ ಹೋಗಿ ಓಡಾಡಿಕೊಂಡು ಬಂದೆ.

ರಾತ್ರಿ ಮತ್ತೆ ಸ್ನಾನ ಮಾಡಿ ಗಂಜಿ ಊಟ ಮಾಡಿ. ಹರಟೆ ಹೊಡೆದು ಮಲಗಿದೆವು.

ಮಧ್ಯಾಹ್ನ ನಿದ್ದೆ ಬರಲಿಲ್ಲ. ಇಂದೂ ಎಳೆನೀರಿಗೆ ಕಲ್ಲು ಸಕ್ಕರೆ ಮತ್ತು ಕಲ್ನಾರು ಹಾಕಿಟ್ಟಿದ್ದೇನೆ.

ಗೆಳೆಯ ಲಿಂಗಪ್ಪ, ಸದಾಶಿವರಾವ್‌ ಮತ್ತು ಭಕ್ತವತ್ಸಲ ಇವರಿಗೆ ಕಾರ್ಡು ಬರೆದೆ.

ಆಲ್ಜೀರಿಯಾದಲ್ಲಿ ಮತ್ತೆ ಹತ್ಯಾಕಾಂಡ. ನೂರಾರು ಸಾವು ನೋವು.

ಬೆಂಗಳೂರಿನಲ್ಲಿ ಪೋಲಿಸರ ಕಸ್ಟಡಿಯಲ್ಲಿ ‘ಬಾಬಾ’ ಎಂಬುವವನು ಸತ್ತದಕ್ಕಾಗಿ ಪ್ರದರ್ಶನ – ಟಿಯರ್ ಗ್ಯಾಸ್‌- ಒಬ್ಬ ಹುಡುಗನ ಮರಣ – ೩೯ ಸೆಕ್ಷನ್‌.

ಡಿಸೆಂಬರ್ ೧೪

ಉಷ್ಣಾಂಶ ಹೆಚ್ಚಾಗಿದ್ದರೂ, ಮೋಡಗಳಿರಲಿಲ್ಲ. ಮಧ್ಯಾಹ್ನದಿಂದ ಗಾಳಿ ಬೀಸಲು ಆರಂಭಿಸಿತು.

ನ್ಯಾಮತಿಯಲ್ಲಿರುವ ಶ್ರೀ ಮೈಯ್ಯಾ ಎಂಬುವವರು, ಗೆಳೆಯ ಗೋಪಾಲಕೃಷ್ಣ ಊರಿಗೆ ಬಂದಿರುವನೆಂದು ನಾನು ಇಲ್ಲೇ ಇದ್ದರೆ ಬಂದು ನೋಡುವುದಾಗಿ ಹೇಳಿದ್ದಾನೆಂದೂ ತಿಳಿಸಿ ಹೋದರು. ಮಧ್ಯಾಹ್ನ ಅವನೇ ಬಂದ.

ಸಂಜೆ ಅವನ ನಾದಿನಿ ಮದುವೆಯಿದೆ ಎಂದು ಕರೆಯಲು ಬಂದಿದ್ದ. ನಾಳೆ ಬರುವುದಾಗಿ ತಿಳಿಸಿದ್ದಾನೆ.

೩-೩೦ ಸಂಜೆ ನಿತ್ಯದಂತೆ ಹವಾ ಕುಡಿಯಲು ಹೊರಗಡೆ ಹೋಗಿದ್ದೆ. ಶಾರದಮ್ಮನ ಎಕ್ಸ್‌ಪ್ರೆಸ್‌ಕಾಗದ ಸಂಜೆ ಬಂದಿತು. ನನ್ನ ಪತ್ರಕ್ಕೆ ಸಮಾಧಾನ ಉತ್ತರ ಕೊಟ್ಟು ಬೇಗ ಬನ್ನಿ ಎಂದಿದ್ದಾಳೆ. ‘ನೀವು’ ಎಂದು ಬರೆಯಬಾರದಂತೆ. ಆತ್ಮೀಯತೆ!

ಯಥಾಪ್ರಕಾರ ಗಂಜಿ ಊಟವೇ ಮುಂದುವರೆದಿದೆ. ಆಲ್ಜೀರಿಯಾದಲ್ಲಿ ಸತ್ತವರು ಒಂದು ಸಾವಿರವಿರಬಹುದೆಂದು ಪ್ರಪಂಚ ಸಂಸ್ಥೆಗೆ ವರದಿ ಬಂದಿದೆ. ಮುಸ್ಲಿಮರೇ ಹೆಚ್ಚು ಸತ್ತಿದ್ದಾರೆ. ಲಾವೋಸಿನಲ್ಲಿ ಕದನ ಮುಂದುವರೆದಿದೆ.

‘ಬೆರುಬಾರಿ’ ವರ್ಗಾವಣೆಗೆ ಪೂರ್ವ ಬಂಗಾಲ ಸಭೆ ಒಪ್ಪಿಗೆ ನೀಡಿದೆ. ನೆಹ್ರೂ ಸರ್ಕಾರದ ಮುಖ ಉಳಿಸುವುದು. ಗೊಂದಲದ ಮಧ್ಯೆ ಅಡಿ ಬಿದ್ದರೂ ಮೂಗು ಮೇಲೆ!

ಡಿಸೆಂಬರ್ ೧೫

ನೇಪಾಳದ ದೊರೆ ಕೊಯಿರಾಲ ಮಂತ್ರಿಮಂಡಳ ವಜಾಮಾಡಿ ಪಾರ್ಲಿಮೆಂಟನ್ನು ರದ್ದುಪಡಿಸಿದನೆಂದು ಸುದ್ದಿ. ಇಥಿಯೋಪಿಯಾದಲ್ಲಿ ಇದರ ವಿರುದ್ಧವಾದ ಕ್ರಾಂತಿ-ಲಾವೋಸ್ ನಲ್ಲಿ ಮತ್ತೊಂದು ರೀತಿ. ಕಾಂಗೋ, ಆಲ್ಜೀರಿಯಾ -ಇದ್ದೇ ಇವೆ- ನೆಹರು ಭಾಷಣಗಳೂ ನಡೆದೇಯಿವೆ. ಪಾಪ! ಮನೆಯಲ್ಲೇ ಒಬ್ಬ ಮುಖ ಕಳೆದುಕೊಳ್ಳುತ್ತಿರುವ ನೆಹರು ಹೊರಗೆ ಏನು ಸಾಧಿಸಿಯಾನು? ಅಂತೂ ಇವನೂ ಒಬ್ಬ ಶಾಂತಿದೂತ‘ , ‘ಪಂಚಶೀಲಸ್ಥಾಪಕ! ಪಶ್ಚಿಮ ಬಂಗಾಳ ಅಸಂಬ್ಲಿಯಲ್ಲಿ ಗೊಂದಲವೇ ಗೊಂದಲ! ನಮ್ಮ ರಾಷ್ಟ್ರಪತಿಗಳ ಪ್ರವಾಸ – ಮಹಾರಾಷ್ಟ್ರವಾಯಿತು. ಗುಜಾರಾತು ಮೈಸೂರು ‘ಖೆಡ್ಡಾ’ ಇತ್ಯಾದಿ-

ನಿನ್ನೆ ಬೆಳಿಗ್ಗೆ ಡೆಹಾರಾಡೂನ್ ತಮ್ಮ ಮನೆಯಲ್ಲಿ ದಿ. ಎಂ. ಎನ್. ರಾಯರ ಪತ್ನಿ (೫೨) ಎಲೆನ್ ಕೊಲೆಯಾಗಿದ್ದಾರೆಂದು ದುಃಖದ ಸುದ್ದಿಬಂದಿವೆ.

ಡಿಸೆಂಬರ್ ೧೬

ರಾತ್ರಿ ಭಾಸ್ಕರನೊಡನೆ ‘ಚೌದ್ ನೀಂಕ ಚಾಂದ್ ‘ ಚಿತ್ರ ನೋಡಿ ಬಂದೆ. ಈ ಹಿಂದೆ ಕೈಗಡ ತೆಗೆದುಕೊಂಡಿದ್ದ ಎಂಟು ರೂ. ಗಳನ್ನು ಶ್ರೀ ಶೀನಪ್ಪಶೆಟ್ಟರಿಗೆ ಹಿಂತಿರುಗಿಸಿದೆ.

ಡಿಸೆಂಬರ್ ೧೭

ಈಗ ಮಧ್ಯಾಹ್ನ ಒಂದು ಹೊತ್ತು ಅನ್ನ ಊಟ. ರಾತ್ರಿ ಗಂಜಿ.

ಆರೋಗ್ಯ ಉತ್ತಮವಾಗುತ್ತಿದೆ. ಆಹಾರ ಸರಿಹೋದರೆ ಎಲ್ಲವೂ ಸರಿಹೋದಂತೆ (ಹೊಟ್ಟೆನೋವು ಹೋದರೆ)
ಎಳನೀರು ಸಿಕ್ಕಲಿಲ್ಲ – ಅದರ ಪ್ರಯೋಗ ಈ ರಾತ್ರಿ ಮಾಡಲಿಲ್ಲ –

ಡಿಸೆಂಬರ್ ೧೮

ತೀರ್ಥಹಳ್ಳಿಯಲ್ಲಿ ಇಂದು ಎಳ್ಳಮಮಾಸ್ಯೆ ಸ್ನಾನ. ಹೊತ್ತಿಗಾದರೂ ತೀರ್ಥಹಳ್ಳಿಗೆ ಹೋಗಲು ಸಾಧ್ಯವಾದೀತೆಂದು ಭಾವಿಸಿದ್ದೆ. ಆಗಲಿಲ್ಲ. ಈ ತಿಂಗಳನ್ನೆಲ್ಲಾ ಇಲ್ಲೇ ಕಳೆಯಲೂಬಹುದು.

ಭಾನುವಾರವಾದ್ದರಿಂದ ಈ ದಿನ ಯಾವ ಪತ್ರಗಳೂ ಬರಲಿಲ್ಲ.

ಬೆಳಿಗ್ಗೆ ಗೆ|| ಆನಂದ ಹೆಗ್ಗಡೆ ಮತ್ತು ಭಾಸ್ಕರ ಇವರೊಡನೆ ಹೊರಗಡೆ ಹೋಗಿದ್ದೆ. ಡಾ|| ವೆಂಕಟರಮಣಯ್ಯ ನವರಲ್ಲಿಗೆ ಹೋಗಿ ಹೊಟ್ಟೆಹುಳಕ್ಕೆ ಔಷಧಿ ಬರೆಸಿಕೊಂಡು ಬಂದೆ. ಹೆಲ್ ಮಸಿಡ್ ಸಿರಪ್. ಎಲ್ಲಾ ಔಷಧಿ ಮಾರುವ ಅಂಗಡಿಗಳೂ ಭಾನುವಾರ ಪ್ರಯುಕ್ತ ಮುಚ್ಚಿದ್ದರಿಂದ ಇಂದು ಔಷಧಿ ಸಿಗಲಿಲ್ಲ.

ಸಂಜೆ ಗಂಗೊಳ್ಳಿ ಕಡು ಮತ್ತು ನರಿಬೇಣಕ್ಕೆ ಭೇಟಿಯಿತ್ತು ಬಂದೆ.

ಸತ್ಯನಾರಾಯಣರಾವ್ (ಸಾಗರ) ಮತ್ತು ಶಿವಣ್ಣ (ತುಮಕೂರು) ಹೋಟೆಲಿನಲ್ಲಿ ಭೇಟಿಯಾಗಿದ್ದರು. ಕಮರ್ಶಿಯಲ್ ಟ್ಯಾಕ್ಸ್ ಆಫೀಸಿನ ಗುಮಾಸ್ತರು – ಪೋಲಿಸು ದಳ.

ಶ್ರೀ ಆನಂದ ಹೆಗಡೆ ಶ್ರೀಮತಿ ವೆಂಕಪ್ಪಶೆಟ್ಟರು ಹುಲಿಕಲ್ಲಿಗೆ ಹೋದರು.

ಡಿಸೆಂಬರ್ ೧೯

ಬೆಳಿಗ್ಗೆ ಶಾರದಳ ಪತ್ರ ಬಂದಿತು. ಅಜ್ಜಿಗೆ ಆರೋಗ್ಯವಿಲ್ಲವಂತೆ. ನಾನು ಮುಂದಿನ ತಿಂಗಳು ೨-೩ ಹೊತ್ತಿಗೆ ಬಂದರೆ ಸಾಕಂತೆ. ಖರ್ಚು ಬಹಳವಾಗುತ್ತೆ. ಎಕ್ಸ್‌ಪ್ರೆಸ್ ಹಾಕುವುದು ಬೇಡ ಎಂದು ನನಗೆ ಬುದ್ದಿವಾದ ಹೇಳಿ – ತಾನು ಎಕ್ಸ್‌ಪ್ರೆಸ್‌ನ್ನೇ ಹಾಕಿದ್ದಾಳೆ.

ದಿ|| ಸುಭಾಸರ ಮಗಳು ಅನಿತಾ ಬೋಸ್ ದೆಹಲಿಗೆ ಬಂದಿದ್ದಾಳೆ. ಲಂಕಾದ ಮುಖ್ಯಮಂತ್ರಿ ಸಿರಿಮಾವೋ ಕೂಡಾ ಬೆಂಗಳೂರಿಗೆ ಬರುವರು. ರಷ್ಯಾಧಕ್ಷರು ‘ಖೆಡ್ಡಾ’ ನೋಡಿದರು.

ಡಿಸೆಂಬರ್ ೨೦

ಅಣ್ಣ, ಲಿಂಗಪ್ಪ ಮತ್ತು ಗುರುಮೂರ್ತಿಗಳಿಂದ ಪತ್ರಗಳು ಬಂದಿವೆ.

ಡಿಸೆಂಬರ್ ೨೧

ಡಾ. ಮೋದಿಯವರ ಕಣ್ಣು ಚಿಕಿತ್ಸೆ ಕ್ಯಾಂಪಿಗೆ ಸಂಜೆ ಭೇಟ್ಟಿಯಿತ್ತು ಬಂದೆವು. ಇನ್ನೂರಕ್ಕೂ ಮೇಲ್ಪಟ್ಟು ಶಸ್ತ್ರಚಿಕಿತ್ಸೆ ಇಂದು ನಡೆಸಿದ್ದಾರೆ.

ಜಮಾಬಂದಿ ಅಂಗವಾಗಿ ‘ವಸ್ತು ಪ್ರದರ್ಶನ’ ಸಂಜೆ ನಾಟಕ, ಮಂದಾರ್ತಿ ಮೇಳದವರಿಂದ ಆಟ ಇತ್ಯಾದಿ ಮನರಂಜನೆಯಿತ್ತು. ವಸ್ತು ಪ್ರದರ್ಶನಕ್ಕೆ ಸಂಜೆ ಹೋಗಿ ಬಂದೆವು. ನಾಟಕ ಮುಗಿಯುವುದೇ ಬಹಳ ತಡವಾಯಿತಾದ್ದರಿಂದ ಆಟಕ್ಕೆ ಕೂರಲಿಲ್ಲ.

ಡಿಸೆಂಬರ್ ೨೨

ಹುಳುವಿಗೆ ಔಷಧಿ ತೆಗೆದುಕೊಳ್ಳಿತ್ತಿದ್ದೇನೆ. ಆದರೆ ಜೀರ್ಣಶಕ್ತಿ ಮತ್ತಷ್ಟು ಕುಗ್ಗುತ್ತಿರುವಂತೆ ಕಾಣುತ್ತಿದೆ. ಅರುಚಿ, ತೇಕು – ಇತ್ಯಾದಿ.
ಸಂಜೆ ಭಾಸ್ಕರ, ಜಯ ಇವರನ್ನೂ ಕರೆದುಕೊಂಡು ವಸ್ತು ಪ್ರದರ್ಶನ, ಗಂಗೊಳ್ಳಿ ಕಡು ಹತ್ತಿರ ಹೋಗಿ ಬಂದೆ.

ಕಾರ್ಪೋರೇಶನ್‌ನಲ್ಲಿ ಕಾಂಗ್ರೆಸ್ಸು ಬಹುಮತ ಪಡೆದಿದೆ. ನಮ್ಮ ಪಾರ್ಟಿಯ ಎಲ್ಲರೂ (೬) ಸೋತಿದ್ದಾರೆ. ಒಬ್ಬರನ್ನುಳಿದು ಬಹುಶಃ ಎಲ್ಲಾ ಠೇವಣಿ ಕಳೆದುಕೊಂಡಿದ್ದಾರೆ. ಪಿ. ಎಸ್. ಪಿ. ಯಿಂದ ಕಣ್ಣನ್, ಅನಂತಕೃಷ್ಣ ಆರಿಸಿ ಬಂದಿದ್ದಾರೆ.

ಡಿಸೆಂಬರ್ ೨೩

ಡಾ. ಹಲಸನಾಡು ವೆಂಕಟರಮಣಯ್ಯನವರಲ್ಲಿ ಪರೀಕ್ಷೆ ಮಾಡಿಸಲಾಗಿ ಲಿವರ್ ಡಲ್ ಆಗಿದೆ ಎಂದು ತಿಳಿಸಿದರು. ಒಂದು ಕೋರ್ಸ್ ಲಿವರ್ ಎಕ್ಸ್ ಟ್ರಾಕ್ಟ್ ತೆಗೆದುಕೊಳ್ಳುವಂತೆ ಹೇಳಿ ಒಂದು ಇಂಜೆಕ್ಷನ್ ಕೊಟ್ಟಿರುತ್ತಾರೆ. ಇನ್ನು ನಾಲ್ಕನ್ನು ತೆಗೆದುಕೊಳ್ಳಬೇಕು. ಜೀರ್ಣಶಕ್ತಿ ಕಡಿಮೆಯಾಗಿದೆ.

ಗೆ|| ಲಿಂಗಪ್ಪ ಮತ್ತು ಶ್ರೀ ಗುರುಮೂರ್ತಿಗಳಿಗೆ ಪತ್ರ ಬರೆದೆ. ಗೆ|| ಪುಟ್ಟಪ್ಪನಿಂದ ಪತ್ರ ಬಂದಿತು. ಹಣವನ್ನು ಕೊಟ್ಟ ದಾನಿ ಶ್ರೀ ಬಿ. ಟಿ. ನಾರಾಯಣರೆಂದು ತಿಳಿಸಿದ್ದಾನೆ. ಮೊನ್ನೆ ಕೆಂಗೇರಿಯ ಹತ್ತಿರ ಆದ ಬಸ್ಸು ಆಕಸ್ಮಿಕದಲ್ಲಿ ತೀವ್ರ ಗಾಯಗೊಂಡಿದ್ದ ಶ್ರೀ ಚಂದ್ರಶೇಖರ ಪಾಟೀಲರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರೆಂದು ದುಃಖದ ಸುದ್ದಿ ಬಂದಿದೆ. ಕಾಂಗ್ರೆಸ್ಸು ಬಿಕ್ಕಟ್ಟಿನ ಬಗ್ಗೆ ಜತ್ತಿ – ನಿಜಲಿಂಗಪ್ಪನವರ ಹೇಳಿಕೆಗಳು – ನಿತ್ಯದ ಸುದ್ದಿಗಳು. ಪಂಚಾಯಿತಿ ರಾಜ್ಯ ಚಳವಳಿ! ಉದ್ಘಾಟನೆ ರಾಷ್ಟ್ಯಾಧ್ಯಕ್ಷರಿಂದ.

ಪಾರ್ಲಿಮೆಂಟ್ ತನ್ನ ಅಧಿವೇಶನ ಮುಗಿಸಿತು. ಬೆರುಬಾರಿ ವರ್ಗಾವಣೆಗೆ ಸಮ್ಮತಿ ಮುದ್ರೆ ಬಿದ್ದಿತು. ಡಿಟೆನ್‌ಶನ್ ಕಾಯಿದೆಗೆ ಮತ್ತೆ ಮೂರು ವರ್ಷ ಜೀವದಾನ. ದ್ವಿಸದಸ್ಯ ಕ್ಷೇತ್ರಗಳ ರದ್ದಿಯಾತಿಗೆ ಮಸೂದೆ ಮಂಡನೆ.

ಡಿಸೆಂಬರ್ ೨೪

ಈ ಹೊತ್ತು ಮತ್ತೊಂದು ಇಂಜಕ್ಷನ್ ತೆಗೆದುಕೊಂಡೆ. ಎರಡು ತೋಳುಗಳೂ ನೋಯುತ್ತಿವೆ. ಇನ್ನೂ ಮೂರು ಸೂಜಿ ಚುಚ್ಚಿಸಿಕೊಳ್ಳಬೇಕು.

ಸಂಜೆ ಕಿಬ್ಬೊಟ್ಟೆಯ ಎಡಗಡೆ ನೋವು ಕಾಣಿಸಿಕೊಂಡಿತು. ವಾಯುವಿನಿಂದ ಹಾಗಾಗಿರಬಹುದು; ಇಂದಿಗೆ ಹಲ್ಮಾಸಿಡ್ ೩ ಔಷಧಿ ಬಾಟ್ಲಿ ಮುಗಿಯಿತು. ಸದ್ಯ ಹುಳುಗಳ ಕಾಟ ತಪ್ಪಿತೆನ್ನಬಹುದೆಂದು ಕಾಣುತ್ತೆ.

ಸಂಜೆ ಗೆ|| ಪ್ರಭಾಕರರಾವ್ ಜೊತೆ ನರಿಬೇಣದಲ್ಲಿ ಕುಳಿತು ಬಹಳ ಹೊತ್ತು ದೇಶದ ಸಮಸ್ಯೆಗಳನ್ನು ಕುರಿತು ಮಾತನಾಡಿದೆವು.

ಡಿಸೆಂಬರ್ ೨೫

೩-೬-೦ ಇಂಜಕ್ಷನ್ ಮತ್ತು ಮಾತ್ರೆ

ಇಂದು ಮೂರನೇ ಇಂಜಕ್ಷನ್ ತೆಗೆದುಕೊಂಡೆ. ಹೊಟ್ಟೆನೋವು ವಾಯುದೋಷದಿಂದ ಬಂದಿರಬಹುದೆಂದು ಹೇಳಿ ಎರಡು ಮಾತ್ರೆ ಕೊಟ್ಟರು. ಮಧ್ಯಾಹ್ನ ಮತ್ತು ರಾತ್ರೆ ತೆಗೆದುಕೊಂಡೆ.

ಶ್ರೀ ನಿಜಲಿಂಗಪ್ಪನವರು ಮೊಮ್ಮಗ ಕಾಂಪೌಂಡ್ ನಿಂದ ಬಿದ್ದನೆಂದು ಅವನೊಂದಿಗೆ ತಾವು ಹಾರಿ ಮೊಳಕಾಲಿನ ಮೂಳೆ ಮುರಿದುಕೊಂಡಿದ್ದಾರೆಂದು (ಚಿತ್ರದುರ್ಗದಲ್ಲಿ) ಸುದ್ದಿ.

ಹಣವೆಲ್ಲಾ ಇಂದಿಗೆ ಮುಗಿಯಿತು.

ಡಿಸೆಂಬರ್ ೨೬

೩-೦೦ ಇಂಜಕ್ಷನ್ ೧-೪೦ ಮಾತ್ರೆ ೨-೦೦ ಸಿಗರೇಟು.

ಇಂದು ಮತ್ತೊಂದು ಇಂಜಕ್ಷನ್ ಕೊಟ್ಟರು. ಹತ್ತು ಎನ್‌ಟ್ರೊಜೈಮ್ ಮಾತ್ರೆಗಳನ್ನೂ ಕೊಟ್ಟಿರುತ್ತಾರೆ. ಇನ್ನೂ ಜೀರ್ಣಶಕ್ತಿ ಉತ್ತಮವಾಗಿಲ್ಲ. ಹೊಟ್ಟೆನೋವು ಕಡಿಮೆಯಾಗಿದೆ. ರಾತ್ರಿಯೂ ಅನ್ನ ಮಜ್ಜಿಗೆ ಊಟ ಮಾಡಲು ಹೇಳಿದ್ದರು. ಆದರೆ, ಇಂದು ಗಂಜಿಯನ್ನೇ ಊಟ ಮಾಡಿದೆ.

ಇಂದಿನಿಂದ ಮಣಿಪಾಲಿನಲ್ಲಿ (ಉಡುಪಿ) ಸಾಹಿತ್ಯದ ಸಮ್ಮೇಳನಾರಂಭ. ನಾನು ಹೋಗಬೇಕೆಂದಿದ್ದೇನೆ. ಗೆ|| ಲಿಂಗಪ್ಪ ಬರಲೂಯಿಲ್ಲ. ಪತ್ರವೂಯಿಲ್ಲ. ಯಾರಿಂದಲೂ ಪತ್ರ ಬರಲಿಲ್ಲ. ಹಣವೂ ಬರಲಿಲ್ಲ. ಇಂದು ಬೆಳಿಗ್ಗೆ ಶ್ರೀ ಮಂಜಯ್ಯ ಶೆಟ್ಟರಿಂದ ಹತ್ತು ರೂ. ಕೈಗಡ ಇಸಕೊಂಡೆ.

ಡಿಸೆಂಬರ್ ೨೭

ಪತ್ರಗಳಿಲ್ಲ.

ಉಡಪಿಗೆ ಹೋಗುವ ಯೋಚನೆ ಬಿಡಲಾಯ್ತು.

ಐದನೇ ಇಂಜಕ್ಷನ್ನೂ ಆಯಿತು. ಅಷ್ಟಾಗಿ ಪರಿಣಾಮವಾದಂತೆ ಈಗ ಕಾಣುತ್ತಿಲ್ಲ. ಕ್ರಮೇಣ ಒಳಿತಾಗಬಹುದು.

ಡಿಸೆಂಬರ್ ೨೮

ನಿತ್ಯದಂತೆ ಎಲ್ಲವೂ ನಡೆಯಿತು. . . ಕೃ. ರವರು ತಮ್ಮ ಸುದೀರ್ಘ ಭಾಷಣದಲ್ಲಿ ಕನ್ನಡ ನಾಡುನುಡಿಯು ಎದುರಿಸಿವ ಹಲವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ರಾಜಕಾರಣಿಗೆ ಸಲ್ಲದ ಗೌರವ ಕೊಡುವವರನ್ನು ಉಗ್ರವಾಗಿ ಟೀಕಿಸಿದ್ದಾರೆ. ಪರಿಷತ್ತನ್ನೂ ಅದರ ಕರ್ತವ್ಯ ಲೋಪಕ್ಕಾಗಿ ಎಚ್ಚರಿಸಿದ್ದಾರೆ. ಯಾರನ್ನೂ ಯಾವುದನ್ನೂ ಬಿಟ್ಟಿಲ್ಲ. ಪತ್ರಿಕಾವರದಿ ಪೂರ್ತಿಯಿಲ್ಲ. ಶೃಂಗೇರಿಯ ಶ್ರೀ ಮಹಾಬಲರಾಯರು ಅಲ್ಲಿಗೆ ಹೋಗಿ ಬಂದವರು ಹೇಳಿದ ಪ್ರಕಾರ ಭಾಷಣದಲ್ಲಿ ಕಟುಸತ್ಯ ಉದ್ದಕ್ಕೂ ಇತ್ತೆಂದು ಹೇಳಿದರು.

ಹೋಗಿದ್ದರೆ ನೋಡಿ – ಕೇಳಿ ತಿಳಿದುಕೊಳ್ಳಬಹುದಾಗಿತ್ತು. ಆಗಲಿಲ್ಲ. ವಿಷಾದವಾಗಿದೆ.

ಡಿಸೆಂಬರ್ ೨೯

ಅಜೀರ್ಣದಿಂದಾಗಿ ಇಂದು ಮತ್ತೆ ಭೇದಿಯಾಯಿತು. ಈ ಆಹಾರ ಒಗ್ಗುವಂತಿಲ್ಲವೆಂಬುದು ಖಚಿತಾವಾದಂತೆಯೇ ಇಲ್ಲಿ ಇನ್ನೂ ಇರುವುದರಿಂದ ಪ್ರಯೋಜನವಿಲ್ಲವೆಂತಲೂ ಅನಿಸಿದೆ. ಆದಷ್ಟು ಬೇಗ ಇಲ್ಲಿಂದ ಹೊರಡಲು ಯೋಚಿಸುತ್ತಿದ್ದೇನೆ. ಇಪ್ಪತ್ತು ರೂ. ಕೈಗಡ ಮಾಡಿದ್ದು, ಅಗಸ ಇತ್ಯಾದಿ ಖರ್ಚು ಇವಕ್ಕೆಲ್ಲಾ ಹಣ ಬೆಕು.

ಬೆಳಿಗ್ಗೆ ಗೆ|| ಶಂಕರನಾರಾಯಣ ಭಟ್ಟರಿಗೆ ಫೋನ್ ಮಾಡಿದ್ದೆ – ಅವರಿಲ್ಲವೆಂದು ತಿಳಿಯಿತು. ನಂತರ ಶ್ರೀ ಬಿ. ಎಸ್. ಗುರುಮೂರ್ತಿಗಳಿಗೆ ಮಾಡಿದೆ. ಅವರೂ ಇದ್ದಂತೆ ಕಾಣಲಿಲ್ಲ. ಶ್ರೀ ವೆಂಕಟಪ್ಪ ಗೌಡರು ಬಂದರು. ಅವರಿಗೆ ಮಾತನಾಡಲು ಬರಲಿಲ್ಲ.

ಸಂಜೆಯ ಹೊತ್ತಿಗೆ ಇಲ್ಲಿಂದ ಹೊರಡಲೇಬೇಕೆಂಬ ಯೋಚನೆ ಬಲಿಯಿತು. ಇಷ್ಟೊಂದು ದಿನ ಇಲ್ಲಿ ಇದ್ದುದ್ದೇ ತಪ್ಪಾಯಿತೇನೋ ಎಂಬಲ್ಲಿಯವರೆಗೂ ಯೋಚಿಸಿದೆ. ಸಂಜೆ ಊಟ ಕೂಡಾ ಮಾಡುವ ಮನಸ್ಸಿದ್ದಿಲ್ಲ. ಶ್ರೀ ಶೀನಪ್ಪಶೆಟ್ಟರ ಒತ್ತಾಯಕ್ಕೆ ಊಟ ಮಾಡಿದಂತಾಯಿತು.

ನಾಳೆ ಹೊರಡಲು ಯತ್ನಿಸಬೇಕು. ಶ್ರೀ ಗುರುಮೂರ್ತಿಗಳಿಗೆ ಬರೆದ ಕಾರ್ಡನ್ನು ಅಂಚೆಗೆ ಹಾಕಲಿಲ್ಲ. ಶಾರದಳಿಂದ ಸಂಜೆ ಎಕ್ಸಪ್ರೆಸ್‌ ಬಂದಿದೆ: ‘ಯಾವಾಗ ಬರುತ್ತೀರಿ ತಿಳಿಸಿ’. ಗೆ|| ರಾಮಕೃಷ್ಣನಿಂದ ಪತ್ರ ಬಂದಿತು. ತಾಯಿ ಸತ್ತರೂ ಊರಿಗೆ ಹೋಗಲಿಲ್ಲವಂತೆ!

ಡಿಸೆಂಬರ್ ೩೦

ಇಂದು ಮಧ್ಯಾಹ್ನ ಇಲ್ಲಿಂದ ತೀರ್ಥಹಳ್ಳಿಗೆ ಹೊರಡಬೇಕೆಂದು ಯೋಚಿಸಿದ್ದೆ. ಆದರೆ ಹೊರಡಲಿಲ್ಲ. ಹಣವಿಲ್ಲದ್ದೂ ಒಂದು ಕಾರಣ.

ಗೆ|| ರೇವಳಪ್ಪನಿಗೆ ಟ್ರಂಕಾಲ್ ಮಾಡಿದ್ದೆ. ಅವರು ಮಂಗಳೂರಿಗೆ ಹೋಗಿದ್ದಾರೆಂದು ತಿಳಿಯಿತು.

ಯಾರಿಗೂ ಪತ್ರ ಬರೆಯಲಿಲ್ಲ. ಯಾರಿಂದಲೂ ಪತ್ರಗಳೂ ಬರಲಿಲ್ಲ. ಶ್ರೀ ಎಂ. ಜಿ. ಚಿನ್ನಪ್ಪಗೌಡರು ಬಂದಿದ್ದರೆಂದೂ, ಇಂದು ಹೋರಟು ಹೋದರೆಂದೂ, ತಿಳಿಯಿತು. ಲಿಂಗಪ್ಪ ಬರಲೂಯಿಲ್ಲ. ಪತ್ರವನ್ನು ಬರೆದಿಲ್ಲ.

ಜೀರ್ಣಶಕ್ತಿ ಸರಿಯಾಗಿಲ್ಲ. ಇಂದು ಬಳಲಿಕೆ, ಮೈನೋವು ಕಂಡವು.

ಶ್ರೀ ನರಸಿಂಹಶೆಟ್ಟರು ಮಂಗಳೂರಿನಿಂದ ರಾತ್ರಿ ಬಂದರು ಶ್ರೀ ಶೀನಪ್ಪಶೆಟ್ಟರು ಹುಲಿಕಲ್ಲಿಗೆ ಹೋದರು.

ಡಿಸೆಂಬರ್ ೩೧

೧೯೬೦ ಇಂದಿಗೆ ಮುಗಿಯಿತು. ನಾಳೆಯಿಂದ ಮತ್ತೊಂದು ವರ್ಷ ಆರಂಭ.

ವರ್ಷವೆಲ್ಲಾ ತೊಡಕಿನಿಂದಲೇ ಕಳೆಯಿತು. ಪಾರ್ಟಿಯ ಕೆಲಸಗಳು ತೃಪ್ತಿಕರವಾಗಿ ನಡೆಯಲಿಲ್ಲ. ಕಾನೂನು ಭಂಗ ಚಳುವಳಿಯೂ ಸಫಲವಾಗಲಿಲ್ಲ. ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಬೋರ್ಡುಗಳಿಗೆ ನಡೆದ ಚುನಾವಣೆಗಳಲಿ ಪಾರ್ಟಿ ಹೆಳಿಕೊಳ್ಳುವಂತಹ ಪಾತ್ರ ವಹಿಸಲಿಲ್ಲ. ಸದಸ್ಯತ್ವವಂತೂ ನಡೆಯಲಿಲ್ಲ. ಸಂಘಟಣೆ ಮತ್ತಷ್ಟು ಬಲಹೀನ ವಾಯಿತೆಂದೇ ಹೇಳಬೇಕು. ಗೆ|| ಶಿವಪ್ಪ, ಕಣ್ಣನ್ ಇತ್ಯಾದಿಯವರು ಪಿ. ಎಸ್.ಪಿ. ಗೆ. ಹೊರಟುಹೋದರು.

‘ಮಾರ್ಗದರ್ಶಿ’ ಪತ್ರಿಕೆ ಆರಂಭವಾಗಿ ಹಾಗೆ ಮುಕ್ತಾಯವಾಯಿತು.

ಕಡೆಯ ಎರಡು ತಿಂಗಳುಗಳನ್ನು ಅನಾರೋಗ್ಯ ಮತ್ತು ವಿಶ್ರಾಂತಿಗೆಂದು ಕಳೆದೆ.

ಇಂದು ಸೊರಬದ ಗೆ|| ರಾಮಚಂದ್ರ ಮತ್ತು ಅವನ ಮಿತ್ರರೊಬ್ಬರು ಉಡಪಿ ಸಮ್ಮೇಳನ ಮುಗಿಸಿಕೊಂಡು ಇಲ್ಲಿಗೆ ಬಂದಿದ್ದರು – ಯಾರೂ ಪತ್ರ ಬರೆಯಲಿಲ್ಲ.

ದಿನವನ್ನು ಎಂದಿನಂತೆ ಕಳೆದೆ.