೧೯೬೧

ಜನವರಿ ೨೬

ಭಾರತ ಗಣರಾಜ್ಯದ ಹನ್ನೊಂದನೆ ವಾರ್ಷಿಕೋತ್ಸವ. ಮತ್ತೊಂದು ಗಣರಾಜ್ಯ ದಿನೋತ್ಸವ ಆಚರಿಸಲ್ಪಟ್ಟಿತು.

ಇಂಗ್ಲೆಂಡಿನ ರಾಣಿಯ ಎದುರು ಆಚರಿಸುತ್ತಿರುವುದೇ ವಿಶೇಷ! ಒಂದು ಮತ್ತು ಎರಡನೇ ಪಂಚವಾರ್ಷಿಕ ಯೋಜನೆಗಳು ಮುಗಿದು ಮೂರನೆಯದರ ಬಗ್ಗೆ ಸಿದ್ಧತೆಗಳಾಗುತ್ತಿರುವ ಕಾಲ.

* * *

ಬೆಳಕು ಹರಿಯುತ್ತಲೇ ಶಾರದ ಬಂದು ವಿಚಾರಿಸಿಕೊಂಡಳು. ಸ್ನಾನಾದಿಗಳನ್ನು ಪೂರೈಸಿದೆ. ಶಾರದ ಕಾದ ಹಾಲ್ಲನ್ನು ತಂದುಕೊಟ್ಟಳು. ನಂತರ ಗೆಳೆಯ ವೆಂಕಟರಾಂ, ವೆಂಕಟರಮಣ ಮತ್ತು ಮಿನರ್ವಾ ಮಿಲ್ ಕೆಲಸಗಾರರ ಸಂಘದ ಕಾರ್ಮಿಕ ಮುಖಂಡರುಗಳು ಬಂದರು. ಈಚೆಗೆ ಅಲ್ಲಿ ನಡೆದಿರುವ ಸಂಘಕ್ಕೆ ಸಂಬಂಧಪಟ್ಟ ಬೆಳವಣಿಗೆ ಕುರಿತು ವಿಚಾರ ಮಾಡಲಾಯಿತು. ಗೆಳೆಯ ವೆಂಕಟರಾಂ, ಮತ್ತು ವೆಂಕಟರಮಣರ ಮಧ್ಯೆ ತಲೆದೋರಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಗೆ|| ವೆಂಕಟರಾಂ ಅಧ್ಯಕ್ಷರಾಗಬೇಕೆಂಬ ಅಭಿಪ್ರಾಯಕ್ಕೆ ಬಂದು ಅದಕ್ಕೆ ಅವರನ್ನು ಒಪ್ಪಿಸಿದ್ದಾಯಿತು.

ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿ ತೆಗೆದುಕೊಂಡು ಎದ್ದೆ. ಗೆ|| ವೆಂಕಟರಮಣ ಬಂದರು. ಅವರೊಂದಿಗೆ ಕೃಷ್ಣಭವನದಲ್ಲಿ ಕಾಫಿ ಕುಡಿದು ಬಂದೆ. ಸಂಜೆ ಗೆ|| ವೆಂಕಟರಾಂ ಮತ್ತು ಶ್ರೀರಾಮಯ್ಯ ಬಂದಿದ್ದರು. ನಾಳೆ ಕಾರಿನಲ್ಲಿ ಹೈದರಾಬಾದಿಗೆ ಹೋಗುವ ವಿಷಯ ಮಾತನಾಡಿದೆ. ಶ್ರೀ ನಾಗಪ್ಪನವರ ಕಾರನ್ನು ಕೇಳಲು ಹೋದರು. ಗೆ|| ಪಟೇಲರು ಇಂದು ಬರಲಿಲ್ಲ. ಗೆ|| ಮಹೇಶ್ವರಪ್ಪನವರು ಶಿವಮೊಗ್ಗಕ್ಕೆ ರಾತ್ರಿ ಹೊರಟರು.

ಜನವರಿ ೨೭

ಹೈದರಾಬಾದಿಗೆ ಪ್ರಯಾಣ ಟ್ರೇನ್ ನಲ್ಲಿ. ೧೩.೦೫. ಹೈದರಾಬಾದ್.

ಗೆ|| ಪಟೇಲರು ಟ್ರೇನ್‌ನಿಂದಿಳಿದು ನೇರವಾಗಿ ಕಾರ್ಯಾಲಯಕ್ಕೆ ಬಂದರು. ಕಾರಿನ ವಿಷಯ ತಿಳಿಸಿದೆ. ನೀವು ಟ್ರೇನ್‌ನಲ್ಲಿ ಹೋಗುವುದು ಕ್ಷೇಮ, ನಾವು ಹಿಂದಿನಿಂದ ಬರುತ್ತೇವೆ ಎಂದು ತಿಳಿಸಿದ ಪ್ರಕಾರ ಸ್ನಾನಾದಿಗಳನ್ನು ಪೂರೈಸಿ ನಾನು ಟ್ರೇನ್‌ಗೆ ಹೊರಟೆ. ೧೦:೧೫ ಕ್ಕೆ ಗಾಡಿ ಹೊರಡುವುದಿತ್ತು. ನಾನು ಒಂದು ಗಂಟೆ ಮುಂಚಿತವಾಗೇ ಬಂದು ಹಾಸಿಗೆ ಹಾಕಿ, ಟಿಫ್‌ನ್‌ ತೆಗೆದುಕೊಂಡು ಇದ್ದಾಗ ಗೆ|| ಬಾಸುಕೃ ಬಂದರು. ವಿಷಯ ತಿಳಿಸಿದೆ. ಅವರು ಕಾರ್ಯಾಲಯಕ್ಕೆ ಅತ್ತ ಹೋದರು. ಇತ್ತ ರೈಲು ಹೊರಟಿತು.

ಅಲಿ ಎಂಬ ಒಬ್ಬರು ಜೊತೆಗೆ ಗುಂತುಕಲ್ಲಿನವರೆಗೆ ಬಂದರು, ಬೆಂಗಳೂರಿನವರೆ. ಬಾಂಬೆಯ ಒಂದು ದೊಡ್ಡ ಆಮದು ರಫ್ತು ಕಂಪನಿಯಲ್ಲಿ ಕೆಲಸ ಮಾಡುವವರಂತೆ. ಬಹಳ ಹೊತ್ತು ರಾಜಕೀಯವಾಗಿ ಚರ್ಚೆ ನಡೆಯಿತು.

ಗುಂತುಕಲ್ಲಿನಲ್ಲೇ ಊಟ ಮಾಡಿದೆ. ೭ ಕ್ಕೆ ರೈಲು ಹೊರಟಿತು. ದ್ರೋಣಾಚಲಂನಲ್ಲಿ ಊಟ ಮಾಡಬಹುದಾಗಿತ್ತು. ಮಧ್ಯಾಹ್ನ ಹಿಂದೂಪುರದಲ್ಲಿ ಅರ್ಧ ಊಟ ಮಾಡಿದ್ದೆ.

ಜನವರಿ ೨೮

ಹೈದ್ರಬಾದ್‌  ಉಸ್ಮಾನ್‌ ಸಾಗರದ ಬಂಗಲೆ. ಮತ್ತೊಮ್ಮೆ ಉಸ್ಮಾನ್‌ ಸಾಗರದ ಬಂಗಲೆಯಲ್ಲಿ.

ಬೆಳಕು ಹರಿಯುವ ಮುಂಚೆಯೇ ರೈಲು ಕಾಚೀಗುಡ ತಲ್ಪಿತು. ಚಹಾ ಕುಡಿದು ರಿಕ್ಷಾದಲ್ಲಿ ಹಿಮಾಯತ್ ನಗರಕ್ಕೆ ಹೋಗಿ ಗೆ|| ಮುರಹರಿ ಇದ್ದ ಸ್ಥಳ ಮತ್ತು ಹಿಂದಿನ ಕಾರ್ಯಾಲಯದಲ್ಲಿ ವಿಚಾರಿಸಲಾಗಿ ಯಾರೂ ಇಲ್ಲವೆಂದು ತಿಳಿದು, ಅಲ್ಲಿಂದ ಸೀತಾರಾಮ ಪೇಟೆಗೆ ಬಂದೆ. ಕಾರ್ಯಾಲಯ ಈಚೆಗೆ ಇಲ್ಲಿಗೆ ವರ್ಗಾಯಿಸಲಾಗಿದೆ. ಇನ್ನೂ ಗೆಳೆಯರು ಮಲಗಿದ್ದರು. ಗೆ|| ಧನಿಕಲಾಲ ಮಂಡಲ್ ಬಾಗಿಲು ತೆಗೆದರು. ಗೆ|| ದೀಪಕ್, ಅಜನಲ್ವಿ ಇತ್ಯಾದಿಯವರೊಂದಿಗೆ ಹತ್ತಿರದ ಹೋಟೇಲಿಗೆ ಹೋಗಿ, ಚಹಾ ಕುಡಿದು ಬಂದೆವು. ಅಲ್ಲಿಂದ ಗೆ|| ಮುರಹರಿ ಮತ್ತು. ಕಮಲೇಶ್‌ ಇದ್ದಲ್ಲಿಗೆ ಹೋಗಿ, ಸ್ನಾನ, ಊಟ ಮಾಡೀ ಕಾರ್ಯಾಲಯಕ್ಕೆ ಬಂದೆವು. ಸಂಜೆ ೬ ಗಂ. ಬಸ್ಸಿನಲ್ಲಿ ಹೊರಟು ಉಸ್ಮಾನ್ ನಗರಕ್ಕೆ ಬಂದೆವು. ಹಿಂದೆ ಇಲ್ಲಿ ಒಂದು ಕ್ಯಾಂಪ್ ನಡೆದಿತ್ತು. ಡಾ. ಲೋಹಿಯಾರನ್ನು ಭೇಟಿ ಮಾಡಿದೆ. ಕಳೆದ ಡಿಸೆಂಬರ್ ನಲ್ಲಿ ಚೆನ್ನಿಮಲೈಯಲ್ಲಿ ನೋಡಿದ್ದೆ. ಆಗ ನನ್ನ ಬಗ್ಗೆ ಆಗ್ರಹವಿತ್ತು. ಕರ್ನಾಟಕ ಪಾರ್ಟಿ ಬಗ್ಗೆ ವಿಚಾರಿಸಿದರು. ಗೆ|| ಲಾಡ್ಲಿ ಮೋಹನ್ ನಿಗಾಮ್, ಮುರಲಿ ಅಲ್ಲೇ ಇದ್ದರು.

ಇಂದು ‘ಮ್ಯಾನ್ ಕೈಂಡ್’ ನ ಎಡಿಟೋರಿಯಲ್ ಬೋರ್ಡ್ ಸಭೆ ಸೇರಲಿಲ್ಲ. ಹೊರಗಡೆಯಿಂದ ಯಾರೂ ಸದ್ಯರು ಬಂದಿಲ್ಲ.
ಗೆ|| ಪಟೇಲರು ಮತ್ತು ಇತರ ಗೆಳೆಯರು ಇನ್ನೂ ಹೈದರಾಬಾದನ್ನು ತಲ್ಪಿದಂತೆ ಕಾಣಲಿಲ್ಲ. ತಂತಿಯೂ ಬಂದಿಲ್ಲ.

ರಾತ್ರಿ ಊಟ ಮಾಡಿ, ಉಸ್ಮಾನ್ ಸಾಗರದ ಕಟ್ಟೆಯಲ್ಲಿ ಕುಳಿತು ಡಾಕ್ಟರೊಡನೆ ಸ್ವಲ್ಪ ಹೊತ್ತು ಕಳೆದು ಬಂದು ಮಲಗಿದೆವು.

ಜನವರಿ ೨೯

ಹೈದರಾಬಾದ್, ಉಸ್ಮಾನ್ ಸಾಗರ.

ಬೆಳಿಗ್ಗೆ ಮತ್ತು ಸಂಜೆ ಸಭೆ ನಡೆಯಿತು. ಮ್ಯಾನ್ ಕೈಂಡ್ ಪತ್ರಿಕೆಯನ್ನು ನಷ್ಟವಿಲ್ಲದಂತೆ ನಡೆಸಿಕೊಂಡು ಹೋಗುವ ಬಗ್ಗೆ ಚರ್ಚಿಸಲಾಯಿತು. ಎಲ್ಲ ಕಡೆಗಳಲ್ಲೂ ‘Mankind Club’ ತೆರೆಯಲು ಪ್ರಯತ್ನಿಸಬೇಕೆಂದು ತೀರ್ಮಾನಿಸಲಾಯಿತು.

ಗೆಳೆಯರು ಪಟೇಲರು ಮತ್ತು ಮಿತ್ರರು ಇಂದೂ ಬರಲಿಲ್ಲ. ಹೊರಟು ದಾರಿಯಲ್ಲಿ ತೊಂದರೆಗೊಳಗಾದರೋ, ಹೊರಡಲೇ ಇಲ್ಲವೋ ಒಂದೂ ತಿಳಿಯಲಿಲ್ಲ.

ರಾತ್ರಿ ಊಟವಾದ ನಂತರವೂ ಬಹಳ ಹೊತ್ತು ಮಾತನಾಡುತ್ತಾ ಕುಳಿತಿದ್ದೇವು.

ಉರ್ದು ಎಂದಿನಿಂದ ಈ ದೇಶದಲ್ಲಿ ಆರಂಭವಾಯಿತು. ಅಮಿರ್ ಖುಸ್ರು, ಔರಂಗಜೇಬ್, ಷಹಜಹಾನ್ (ದಖ್ಖನಿ) ಭಾರತದಲ್ಲಿ ಆಳಿದ ರಾಣಿಯರು ರಸಿಯಾ, ಚಾಂದ್ ಬೀಬಿ; ನೆಹರೂ ಫಿಲಾಸಫಿ ಎಂಬುದೊಂದಿದೆಯೇ? ಹೀಗೆ ಇತ್ಯಾದಿ.

ಜನವರಿ ೩೦

ಹೈದ್ರಾಬಾದ್

ಮಹಾತ್ಮಾ ಗಾಂಧಿಯವರು ಮರಣ ಹೊಂದಿದ ದಿನ.

ಬೆಳಿಗ್ಗೆ ೯ ಗಂಟೆಯ ಬಸ್ಸಿಗೆ ಗಂಡಿಪೇಟೆಯಿಂದ ಬಸ್ಸಿನಲ್ಲಿ ಗೆ|| ಮುರಹರಿ ಮತ್ತು ಕಮಲೇಶ್ ಜೊತೆಯಲ್ಲಿ ಹೈದರಾಬಾದಿಗೆ ಹಿಂತಿರುಗಿದೆವು. ಡಕ್ಟಾರ್ ಮತ್ತು ನಿಗಾಮ್ ಅಲ್ಲೇ ಉಳಿದರು.

ಸ್ನಾನಾದಿಗಳನ್ನು ಪೂರೈಸಿ ಕಾರ್ಯಾಲಯಕ್ಕೆ ಹೋದೆ. ಗೆ|| ಸಾಂಬಮೂರ್ತಿ ಬಂದಿದ್ದರು. ಅವರೊಂದಿಗೆ ‘ದುರ್ಗಾ ವಿಲಾಸ ‘ಕ್ಕೆ ಹೋಗಿ ಗೆ|| ಮುರಹರಿ ಮತ್ತು ಕಮಲೇಶ್ ಇವರೊಂದಿಗೆ ಊಟ ಮಾಡಿ, ಸಿಕಂದರಾಬಾದ್‌ಗೆ ಹೋಗಿ ಸಾಂಬಮೂರ್ತಿಯವರ ಪತ್ನಿ ಮತ್ತು ಗಂಡು ಶಿಶುವನ್ನು ಹೆರಿಗೆ ಆಸ್ಪತ್ರೆಯಲ್ಲಿ ನೋಡಿಕೊಂಡು, ನಿಯೋಗೋಪೀ ಹೊಟೇಲ್‌ಗೆ ಹೋದೆವು. ಹದಿನೈದು ಇಪ್ಪತ್ತು ದಿವಸಗಳಿಂದ ಮುಚ್ಚಿದೆ ಎಂದೂ ಸಾಹುಕಾರ ಪತ್ತೆಯಿಲ್ಲವೆಂದೂ ಸುತ್ತಮುತ್ತಲ ಜನರಿಂದ ತಿಳಿಯಿತು. ಎಲ್ಲಿಗೆ ಹೋಗಿರಬಹುದು? ಏಕೆ ಇವು ತಿಳಿಯಲಿಲ್ಲ.

ಕಾಫಿ ಕುಡಿದು, ಪಾರ್ಟೀ ಆಫೀಸಿಗೆ ಹೋಗಿ ಹೈದರಾಬಾದಿಗೆ ಸಾಂಬಮೂರ್ತಿಯವರ ಮೋಟಾರ್ ಸೈಕಲ್ಲಿನಲ್ಲೇ ಹಿಂತಿರುಗಿದೆ.

ಬಾಸು ತಂತಿ ಕಳಿಸಿ ‘ಕಾರು ಕಾರ್ಯಕ್ರಮ ರದ್ದು , ಪಟೇಲರು ಶಿವಮೊಗ್ಗಕ್ಕೆ ಬಿಟ್ಟರು’ ಎಂದು ತಿಳಿಸಿದ್ದಾರೆ.

ಗೆ || ಶಂಕರನಾರಾಯಣ ಭಟ್ಟರಿಗೂ, ವೆಂಕಟರಮಣ ಇವರಿಗೂ ತಂತಿ ಕಳಿಸಿ ತಲಾ ಮೂವತ್ತು ರೂ. ತಂತಿ ಎಂ. . ಕಳಿಸಲು ತಿಳಿಸಿದೆ. ಹಣಪೂರ್ತಿ ಮುಗಿದು ಹೋಗಿದೆ.

ರಾತ್ರಿ ಗೆ|| ಗೋಸ್ವಾಮಿಯೊಂದಿಗೆ ನಾಂಪಳ್ಳಿಗೆ ಹೋಗಿ ತಿಂಡಿ, ಚಹಾ ಕುಡಿದು ಬಂದು ಮಲಗಿದೆವು.

ಫೆಬ್ರವರಿ

ಎದ್ದು ಮುಖ ತೊಳೆದೆ. ಅಡಿಗೆಯವಳು ಬರಲಿಲ್ಲ. ಚಹಾ ಕಾಯಿಸುವವರು ಕಾಣಲಿಲ್ಲ. ಗೆ|| ಮುರಹರಿ ಪ್ರೆಸ್ಸಿನಿಂದ ರಾತ್ರಿ ಬಹಳ ತಡವಾಗಿ ಬಂದಿದ್ದರು. ಗೆ|| ಕಮಲೇಶ್‌ ಕೂಡಾ ಏಳಲಿಲ್ಲ. ಎಂಟು ಗಂಟೆಯಾಗಿರಬಹುದು. ಮನೆಯಿಂದ ಹೊರಟು ರಿಕ್ಷಾದಲ್ಲಿ ನಿಯೋಮೈಸೂರು ಕೆಫೆಗೆ ಹೋದೆ. ದುರದೃಷ್ಟಕ್ಕೆ, ಅಷ್ಟರಲ್ಲಿಯೇ ಗೆ|| ಬಿ. ವಿ. ನಾ. ರೆಡ್ಡಿಯವರು ಹೊರಗೆ ಹೋಗಿದ್ದರು. ಬಹಳ ಹೊತ್ತು ಕಾದು ನಿರಾಶನಾಗಿ ಮನೆಗೆ ಅದೇ ರಿಕ್ಷಾದಲ್ಲಿ ಹಿಂತಿರುಗಿದೆ. ಗೆ|| ಮುರಹರಿಯೊಂದಿಗೆ ಕಮರ್ಷಿಯಲ್‌ ಪ್ರೆಸ್ಸಿಗೆ ಹೋಗಿ ರಿಕ್ಷಾದವನಿಗೆ ಎರಡು ರೂ. ತೆತ್ತು ಕಳಿಸಿದೆ. ಅಷ್ಟರಲ್ಲಿ ಗೆ|| ವೆಂಟರಾಂರಿಂದ ೩೦/- ರೂ ಮತ್ತು ಗೆ. ಶಂಕರನಾರಾಯಣ ಭಟ್ಟರಿಂದ ೨೦/- ರೂ. ಎರಡು TMOಗಳು ಬಂದು ಹಣ ಕೈ ಸೇರಿತು. ತೊಂದರೆ ಕಳೆಯಿತು. ಗೆ|| ಮುರಹರಿಯೊಂದಿಗೆ ‘ದುರ್ಗಾವಿಲಾಸ’ ಕ್ಕೆ ಹೋಗಿ ಊಟ ಮಾಡಿ ಮನೆಗೆ ಬಂದೆ. ಸಂಜೆ ನೀರು ಬಂದೊಡನೆ ಸ್ನಾನ ಮಾಡಿ ಕಾರ್ಯಾಲಯಕ್ಕೆ ಹೋದೆ. ಡಾಕ್ಟರೊಡನೆ ಭೇಟೆಯಾಯಿತು. ನಿಯೋ ಮೈಸೂರು ಕೆಫೆಗೆ ಪೋನ್‌ಮಾಡಿದೆ. ಗೆ|| ಮಲ್ಕಾ ಇದ್ದರು. ರೆಡ್ಡಿಯವರು ಹೊರಗೆ ಹೋಗಿದ್ದಾರೆಂದು ತಿಳಿಯಿತು. ಕೊನೆಗೂ ಇಂದು ಅವರನ್ನು ಕಾಣಲು ಆಗಲಿಲ್ಲ. ಡಾಕ್ಟರೊಂದಿಗೆ ‘ಕ್ವಾಲಿಟಿ’ಗೆ ಹೋಗಿ ಕಾಫಿ ಕುಡಿದೆವು. ಅವರು ಮನೆಗೆ ಕಾರಿನಲ್ಲಿ ಹೋದರು. ಗೆ|| ಮುರಹರಿ ಮತ್ತು ಕಮಲೇಶ ಇವರೊಂದಿಗೆ ರಾಜ್‌ನಲ್ಲಿ ಊಟ ಮಾಡಿ ಮನೆಗೆ ಬಂದೆವು. ಮುರಹರಿಯವರು ಪ್ರೆಸ್ಸಿಗೆ ಹೋದರು.

ಪ್ರಬ್ರವರಿ

ಸ್ನಾನಾದಿಗಳನ್ನು ಪೂರೈಸಿ ಕಾರ್ಯಾಲಯಕ್ಕೆ ಹೋಗಿ ಅಲ್ಲಿಂದ ಹೋಟೆಲಿಗೆ ಪೋನ್‌ ಮಾಡಿದೆ. ರೂಂ ಬೀಗ ಹಾಕಿದೆ ಎಂದು ತಿಳಿಯಿತು. ಮತ್ತೆ ಮನೆಗೆ ಬಂದೆ. ಅಷ್ಟರಲ್ಲಿ ಅಡಿಗೆ ಆಗಿತ್ತು. ಊಟ ಮಾಡಿಕೊಂಡು ಕಾರ್ಯಾಲಯಕ್ಕೆ ಹೋಗಿ ಬರುವಾಗ ಕವರು ಕಾರ್ಡುಗಳನ್ನು ತಂದೆ. ಶ್ರೀ ನರಸಿಂಹಶೆಟ್ಟರು, ಶಿವರಾಯ, ಬಿ. ಟಿ. ನಾರಾಯಣ ಮತ್ತು ಅನಂತಮೂರ್ತಿಯವರಿಗೆ ಪತ್ರ ಬರೆದೆ. ಗೆ|| ಮುರಹರಿ ಸಂಜೆ ಬಂದು ಸ್ನಾನ ಊಟ ಮಾಡಿದರು. ಅವರೊಂದಿಗೆ ಕಾರ್ಯಾಲಯಕ್ಕೆ ಹೋದೆ. ಅಷ್ಟರಲ್ಲಿ ‘ಚೌಖಂಭ’ ಪತ್ರಿಕೆಯ ಸಂಪಾದಕ ಮಂಡಲಿ ಸಭೆ ನಡೆಯುತ್ತಿತ್ತು. ನಾನು ರಿಕ್ಷಾ ಮಾಡಿಕೊಂಡು ಹೋಟೇಲಿಗೆ ಹೋಗಿ ವಿಚಾರಿಸುವಲ್ಲಿ ಶ್ರೀ ರೆಡ್ಡಿಯವರು ಬೆಳಗಿನ ರೈಲಿಗೆ ಮದ್ರಾಸಿಗೆ ಹೋದರೆಂದು ತಿಳಿಯಿತು ಹಾಗೇ ಹಿಂತಿರುಗಿದೆ.

ಸಭೆ ಮುಗಿಯಿತು. ಗೆ|| ಪಿಟ್ಟಿಯವರ ಕಾರಿನಲ್ಲಿ ಡಾಕ್ಟರರೊಂದಿಗೆ ‘ಕ್ವಾಲಿಟಿ’ಗೆ ಹೋಗಿ ಕಾಫಿ ಕುಡಿದು ಬಂದೆವು. ನಾಳೆ ಬೆಳಿಗ್ಗೆ ರೈಲಿಗೆ ಬೆಂಗಳೂರಿಗೆ ಹೊರಡಲು ನಿಶ್ಚಯಿಸಿ, ೫ ಗಂಟೆಗೆ ಬರುವಂತೆ ರಿಕ್ಷಾದವನಿಗೆ ಹೇಳಿದೆ. ಕವಲೇಶ್‌ನಾವು ಬಂದರೆ ಸಿನಿಮಾ ಹೋಗಬೇಕೆಂದು ಆಶಿಸಿದ್ದರಂತೆ.

ಫೆಬ್ರವರಿ

ಹೈದ್ರಾಬಾದ್‌ನಿಂದ ಪ್ರಯಾಣ – ರೈಲಿನಲ್ಲಿ.

ರಾತ್ರಿ ತಡವಾಗಿತ್ತು ಮಲಗುವುದು. ಬೆಳಗಿನ ಝಾವ ಹೊರಡಬೇಕು. ರಿಕ್ಷಾದವನು ಬರುತ್ತೇನೆಂದು ಹೇಳಿದ ಪ್ರಕಾರ ಬಂದ. ಅಷ್ಟರಲ್ಲೇ ನಾನು ಎದ್ದು ಮುಖ ತೊಳೆದು ಹಾಸಿಗೆ ಕಟ್ಟಿದ್ದೆ. ಗೆ|| ಮುರಹರಿಯವರನ್ನು ಎಬ್ಬಿಸಿ, ಹೇಳಿ ಹೊರಟೆ. ಕಮಲೇಶ್‌ ಮಲಗಿಯೇಯಿದ್ದರು.

೬.೩೦ಕ್ಕೆ ರೈಲು ಹೊರಟಿತು. ಅಷ್ಟೊಂದು ನೂಕುನುಗ್ಗಲು ಇರಲಿಲ್ಲ. ಮೇಲೆ ಹಾಸಿಗೆ ಹಾಕಿ ಕೆಳಗೆ ಕುಳಿತುಕೊಂಡೆ. ಕರ್ನೂಲಿನಲ್ಲಿ ಅವಸರದ ಊಟ ಮಾಡಿದೆ. ಸಂಜೆ ಗುಂತಕಲ್ಲಿನಲ್ಲಿ ಪೂರಿ ತಿಂದೆ. ಹೆಚ್ಚು ಕಾಲ ನಿದ್ರೆಯಲ್ಲೇ ಕಳೆದೆ.

ಮಾರ್ಚ್೧೦

ಆವಿನಹಳ್ಳಿ – ಮೂರಕ್ಕೆ ಕಾರ್ಯಕ್ರಮ ಮುಂದಕ್ಕೆ. ಸಾಗರ.

ಎದ್ದು ಸ್ನಾನಾದಿಗಳನ್ನು ಮುಗಿಸಿದೆ. ಗೆಳೆಯ ಸದಾಶಿವರಾವ್‌ ಮತ್ತು ಚಂದ್ರಶೇಕರ್ ಬಂದರು. ಗೆ|| ಚೌಡಪ್ಪನವರೂ ಬಂದರು. ರಾಮಚಂದ್ರಭವನಕ್ಕೆ ಹೋಗಿ ತಿಂಡಿ ತಿಂದು ಬರುವಷ್ಟರಲ್ಲಿ ಗೆ|| ಗುರುರಾಜ ಬಂದಿದ್ದ. ಬೇಳೆಗದ್ದೆ ಪಟ್ಟಯ್ಯಗೌಡರು ಮಡದಿ ಮಕ್ಕಳೊಂದಿಗೆ ಜೀಪಿನಲ್ಲಿ ಜೋಗಕ್ಕೆ ಹೊರಟು ಬಂದಿದ್ದರು. ಅವರನ್ನು ಭೇಟಿ ಮಾಡಿ ಕಳಿಸಿದೆ. ನಂತರ ಎಲ್ಲ ಗೆಳೆಯರು ಸೇರಿ ಕಾರ್ಯಕ್ರಮ ಕುರಿತು ಮಾತನಾಡಿದೆವು. ನಿನ್ನೆ ಮತ್ತು ಇಂದು ಕಾರ್ಯಕ್ರಮ ಕೆಟ್ಟ ಬಗ್ಗೆ ಅವರವರೇ ರೇಗಾಡಿ ಸುಮ್ಮನಾದರು. ಮುಂದಿನ ಕಾರ್ಯಕ್ರಮಗಳ ಬಗ್ಗೆ ಎಲ್ಲಾ ವ್ಯವಸ್ಥೆ ಮಾಡಬೇಕೆಂದು ಮಾತನಾಡಿದರು. ಇಂದು ಬಿಡುವು ದೊರೆಯಿತು. ಗೆ|| ಸದಾಶಿವರಾಯರು ಮತ್ತು ನಾನು ಊಟ ಮಾಡಿ ವಿಶ್ರಾಂತಿ ಪಡೆದೆವು. ಸಂಜೆ ಗೆ|| ಗುಂಡೂರಾವ್‌ ರೂಮಿಗೆ ಹೋಗಿದ್ದೆವು.

ಗೆ|| ಕೊ. ಲಿಂಗಪ್ಪನಿಂದ ಕಾಗದ ಬಂದಿತು. ಯುವಜನ ಸಭಾ ಸಮಿತಿ ಸೇರಿತ್ತು. ರಾಯರು ಬಂದಿದ್ದರು ಇತ್ಯಾದಿ.

ಮಾರ್ಚ್೧೧

ತಾಳಗುಪ್ಪ ಬಹಿರಂಗ ಸಭೆ. ಸಾಗರ.

ಊಟ ಮುಗಿಸಿಕೊಂಡು ಮಧ್ಯಾಹ್ನ ಬಸ್ಸಿನಲ್ಲಿ ತಾಳಗುಪ್ಪಕ್ಕೆ ಹೋದೆವು. ನಾನು ಮತ್ತು ಚೌಡಪ್ಪ ಒಂದು ಬಸ್ಸಿನಲ್ಲಿ ಮುಂದೆ ಹೋದೆವು. ಗೆ|| ತಿಮ್ಮಪ್ಪ ಸತ್ಯ ಮತ್ತು ಚಂದ್ರಶೇಖರ್ ಇನ್ನೊಂದರಲ್ಲಿ ಬಂದರು.

ಸಂತೆ ಮೈದಾನದಲ್ಲಿ ಸಭೆ ಸೇರಿತು. ಗೆ|| ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಗೆ|| ಚೌಡಪ್ಪ, ಬರ್ಮನಾಯ್ಕರು ಮಾತನಾಡಿದ ಮೇಲೆ ನಾನು ಮಾತನಾಡಿದೆ. ಗೇಣಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ರೈತರು ಅಂತಿಮ ಹೋರಾಟಕ್ಕೆ ಸಿದ್ಧರಾಗಬೇಕಾದೀತು ಎಂದು ತಿಳಿಸಲಾಯಿತು. ನಂತರ ತಿಮ್ಮಪ್ಪ, ಕುಮಟಾ ಇವರು ಮಾತನಾಡಿ ರೈತರನ್ನು ಅವರ ಕರ್ತವ್ಯದತ್ತ ಎಚ್ಚರಿಸಿದರು.

ಸಂಜೆ ಮತ್ತೊಂದು ಬಸ್‌ನಲ್ಲಿ ಎಲ್ಲರೂ ಸಾಗರಕ್ಕೆ ಹಿಂತಿರುಗಿದೆವು.

ಗೆ|| ಸದಾಶಿವರಾಯರು ಶ್ರೀ ಕೆ. ವಿ. ಸುಬ್ಬಣ್ಣನವರನ್ನು ಹೆಗ್ಗೋಡಿಗೆ ಹೋಗಿ ನೋಡಿಕೊಂಡು ಬಂದರು. ನಾಳೆ ಶಿವಮೊಗ್ಗಕ್ಕೆ ಹೋಗಿ ೧೫ ರಂದು ಬರುವುದಾಗಿ ಹೇಳಿದರು.

ಗೆ|| ಲಿಂಗಪ್ಪನವರಿಗೆ ಉತ್ತರ ಬರೆದೆ. ಸಾಧ್ಯವಾದರ ಹಬ್ಬಕ್ಕೆ ಊರಿಗೆ ಬನ್ನಿ ಎಂದು ಬರೆದಿದ್ದೇನೆ.

ಕೌನ್ಸಿಲ್‌ನಲ್ಲಿ ಮೊನ್ನೆ ಶ್ರೀ ಎಂ. ಪಿ. ಎಲ್‌. ಶಾಸ್ತ್ರಿಗಳು ರಾಣಿ ಭೇಟಿ ಕಾಲದಲ್ಲಿ ನಮ್ಮನ್ನು ಪೋಲೀಸರು ಬಂಧಿಸಿದ ಬಗ್ಗೆ ಕೇಳಿದ್ದಾರೆ. ಸುದ್ದಿ.

ಮಾರ್ಚ್೧೨

ಮೂರುಕೈ – ಗೋಡೇಕೊಪ್ಪ.

ಗೆ|| ಸದಾಶಿವರಾಯರು ಶಿವಮೊಗ್ಗಕ್ಕೆ ಹೋದರು. ಗೆ|| ಚಂದ್ರು ಕಾರಗಲ್ಲಿಗೆ, ಚೌಡಪ್ಪನವರು ಶಿವಮೊಗ್ಗಕ್ಕೆ ಹೊದರು.

ನಾನು ಊಟ ಮುಗಿಸಿ ಮೂರುಕೈಗೆ ಹೊರಡಲು ಸಿದ್ಧವಾದೆ. ಗೆ|| ತಿಮ್ಮಪ್ಪ, ಸತ್ಯ ನಾಲ್ಕು ಗಂಟೆಯಾದರೂ ಬರಲಿಲ್ಲ. ನಾನೇ ಬಸ್ಸು ನಿಲ್ದಾಣಕ್ಕೆ ನಡೆದು ಬಸ್ಸು ಹಿಡಿದು ಮೂರುಕೈಗೆ ಹೋದೆ. ಗೆ|| ಶಿವಪ್ಪ ಮತ್ತು ಇತರರು ಕಾದಿದ್ದರು. ಸಭೆ ಆರಂಭಿಸಿದೆವು. ಸ್ವಲ್ಪ ಹೊತ್ತಿನ ಮೇಲೆ ಗೆ|| ತಿಮ್ಮಪ್ಪ ಮತ್ತು ಸತ್ಯ ಕಾರಿನಲ್ಲಿ ಬಂದರು. ಸಭೆ ಮುಗಿಸಿಕೊಂಡು ಮತ್ತೊಂದು ಬಸ್ಸಿನಲ್ಲಿ ನಾನು ಸಾಗರಕ್ಕೆ ಬಂದೆ. ಅವರು ಕಾರಿನಲ್ಲಿ ಬಂದಿರಬೇಕು.

ಮಧ್ಯಾಹ್ನ ಜಡೆಯಿಂದ ಗೆ|| ಮುಡುಪಪ್ಪ ಬಂದಿದ್ದರು. ನಾಳೆ ಸಾಧ್ಯವಾದರೆ ಬಾಡದಬೈಲಿಗೆ ಬರುವುದಾಗಿ ಹೇಳಿ ಹೋದರು. ಅವರ ಚುನಾವಣಾ ಕೇಸು ಇನ್ನೂ ವಿಚಾರಣೆಯಾಗಿಲ್ಲವಂತೆ.

ಗೆ|| ಮುರಹರಿಯವರಿಗೊಂದು ಪತ್ರ ಬರೆದೆ.

ಮಾರ್ಚ್೧೩

ಬಾಡದಬೈಲು ಬಹಿರಂಗ ಸಭೆ ಸಾಗರ

ಬೆಳಿಗ್ಗೆ ಸೀತೂರು ಸುಬ್ಬನಾಯ್ಕರು ಬಂದರು. ನಂತರ ಗೆ|| ಚೌಡಪ್ಪನವರು ಬಂದರು. ಸ್ನಾನ ಮಾಡಿ ಗೆ|| ಬಿ. ವಿ. ಮೂರ್ತಿಯವರಿಗೆ ೧೯ ರಿಂದ ೨೪ ರ ತನಕ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರವಾಸ ಕಾರ್ಯಕ್ರಮ ಹಾಕಿಕೊಳ್ಳಿ ಎಂದು ಬರೆದೆ.

ಊಟ ಮುಗಿಸಿ ಕಾರಿನಲ್ಲಿ ಗೆ|| ಚೌಡಪ್ಪ, ತಿಮ್ಮಪ್ಪ, ಸತ್ಯ ಮತ್ತು ಸುಬ್ಬನಾಯ್ಕರೊಂದಿಗೆ ಮಧ್ಯಾಹ್ನ ಸಿದ್ಧಾಪುರಕ್ಕೆ ಹೋದೆವು. ಧೂಳು ಕೆಟ್ಟ ರಸ್ತೆ ಬಿಸಿಲು ಹಳೇಕಾರು ಅಂತೂ ಸಿದ್ದಾಪುರ ಸೇರಿದೆವು. ಕಾರು ಕೆಟ್ಟು ನಿಂತಿತು. ಬಾಡದಬೈಲಿನವರು ಬೇರೆ ವ್ಯಾನೊಂದನ್ನು ಸಿದ್ಧವಾಗಿಟ್ಟಿದ್ದರು. ತಾ. ಬೋ. ಸ. ಶ್ರೀ ಟಿ. ಡಿ. ಹೃಲೇಕಲ್‌, ಕಟಾರಿ ಸಣ್ಣನಾಯ್ಕರು ಮತ್ತು ನಾವು ಅದರಲ್ಲಿ ಹೊರಟು ಬಾಡದಬೈಲಿಗೆ ಹೋದೆವು. ಶ್ರೀ ವಿರುಪಾಕ್ಷಪ್ಪನವರು ಸ್ವಾಗತಿಸಿದರು. ಚಪ್ಪರ ಇತ್ಯಾದಿ ವ್ಯವಸ್ಥೆ ಮಾಡಿದ್ದರು. ರೈತರು ಮೂರು ತಾಲ್ಲೂಕುಗಳಿಂದ ಬಂದಿದ್ದರು. ಗೆ|| ಮರಿಯಪ್ಪ, ಬಸವಣ್ಣಪ್ಪ ಪಾಣಿ ಇವರೂ ಬಂದಿದ್ದರು. ಅಧ್ಯಕ್ಷನಾದ ನನ್ನ ಭಾಷಣವಲ್ಲದೆ, ಸ್ವಾಗತ ಭಾಷಣವೂ ಸೇರಿ ಎಂಟು ಜನರು ಭಾಷಣ ಮಾಡಿದರು. ಎಲ್ಲರೂ ರೈತರು ಜಾಗ್ರತರಾಗಬೇಕು, ಒಂದಾಗಬೇಕು. ತಮ್ಮ ಹಕ್ಕುಬಾಧ್ಯತೆಗೆ ಹೋರಡಬೇಕು. ಸಭೆ ೪ ಗಂ. ಕಾಲ ನಡೆಯಿತು. ಸಭೆ ಮುಗಿಸಿ ಬಾಡದಬೈಲಿನಿಂದ ಹೊರಟು ಸಿದ್ದಾಪುರಕ್ಕೆ ಬಂದು, ಹೋಟೇಲೊಂದರಲ್ಲಿ ಊಟ ಮುಗಿಸಿ, ನಮ್ಮ ಕಾರಿನಲ್ಲಿ ಹೊರಟು ೫ ಮೈಲಿ ಬಂದೆವು. ಮತ್ತೆ ರೋಗ ಬಂತು. ಲಾರಿಯೊಂದರಲ್ಲಿ ನಾನು ಸುಬ್ಬನಾಯ್ಕರು ಬಂದೆವು ಸಾಗರಕ್ಕೆ.

ಮಾರ್ಚ್೧೫

ಮಾಸೂರು.

ಎದ್ದು ಮುಖತೊಳೆದು, ಕಾಫಿ ಕುಡಿದು ಗೆ|| ಸುಬ್ಬನಾಯ್ಕರೊಂದಿಗೆ ಹೊರಟೆ. ದಾರಿಯಲ್ಲಿ ಆರಗದ ಡಾ|| ಗುರುಮೂರ್ತಿ ಭೇಟಿಯಾದರು. ೧೦.೩೦ ರ ಬಸ್ಸಿಗೆ ಹೊರಟು ಸಾಗರಕ್ಕೆ ಬಂದೆವು. ಗೆ|| ಸದಾಶಿವರಾಯರು ೮.೩೦ರ ಬಸ್ಸಿಗೆ ಹೊರಟು ಬಂದಿದ್ದರು. ಸ್ನಾನ ಮಾಡಿ ಎಲ್ಲರೂ ಊಟ ಮಾಡಿದೆವು. ಒಂದು ಕಾರನ್ನು ಸಿದ್ಧಪಡಿಸಿದರು. ಗೆ|| ಸದಾಶಿವರಾವ್‌, ಸುಬ್ಬನಾಯ್ಕರು, ನಾನು ಮಾಸೂರಿಗೆ ಹೊರಟೆವು. ಕೆಳದಿ ದಾಟುತ್ತಲೇ ಕಾರು ಮುರಿದುಬಿತ್ತು. ಬಿಸಿಲು ಧೂಳಿನಲ್ಲಿ ನಡೆದು ಮಾಸೂರನ್ನು ಸೇರಿದೆವು. ಜನ ಬಹಳ ಕಡಿಮೆ ಸೇರಿದ್ದರು. ಪಂಚಾಯಿತಿ ಮನೆಯಲ್ಲೇ ಸೇರಿದೆವು. ಗೆ|| ಚೌಡಪ್ಪನವರ ಸ್ವಾಗತ ಭಾಷಣ. ನನ್ನ ಭಾಷಣ, ಸುಬ್ಬನಾಯ್ಕರ, ಸದಾಶಿವರಾಯರ ಭಾಷಣ ಭಾಷಣ ರಾತ್ರಿ ಅಲ್ಲೇ ಗೆ|| ವೀರಭದ್ರಪ್ಪನವರಲ್ಲಿ ಊಟ ಮಾಡಿ, ಗಾಡಿಯಲ್ಲಿ ಕೆಳದಿಗೆ ಬಂದೆವು. ಮತ್ತೊಂದು ಕಾರು ಬಂದು ನಮ್ಮನ್ನು ಸಾಗರಕ್ಕೆ ಮುಟ್ಟಿಸಿತು.

ಮಲಗುವಾಗ ರಾತ್ರಿ ೨-೩ ಗಂಟೆ ಆಗಿರಬಹುದು. ಗೆ|| ಲಿಂಗಪ್ಪನ ಪತ್ರ ಬಂದಿದೆ. ೧೭ಕ್ಕೆ ಊರಿಗೆ ಬರುತ್ತೇನೆ ಎಂದು ಬರೆದಿದ್ದಾರೆ.

‘ಜಾಗೃತಿ’ಯಲ್ಲಿ ಗೆ|| ಮಹೇಶ್ವರಪ್ಪನವರು ಪಿ. ಎಸ್‌. ಪಿ. ಗೆ ಸೇರಿಲ್ಲವೆಂಬ ಸುದ್ದಿ ಪ್ರಕಟವಾಗಿದೆ. ನನ್ನ ತಾಳಗುಪ್ಪದ ಭಾಷಣವೂ ಬಂದಿದೆ. ಗೆ|| ಐಯಂಗಾರರು ಸಿಕ್ಕಿದ್ದರು.

ಮಾರ್ಚ್೧೬

ಸಾಗರ.

೪ ಕೋಟಿ ರೂ. ಖೋತಾ ಆಯವ್ಯಯ ಅಂದಾಜನ್ನು ನಿನ್ನೆ ಶ್ರೀ ಮರಿಯಪ್ಪನವರು ವಿಧಾನಸಭೆಯಲ್ಲಿ ಮಂಡಿಸಿದರಂತೆ.

ಇಂದಿಗೆ ಸಾಗರ ತಾಲ್ಲೂಕು ಪ್ರವಾಸ ಮುಗಿಯಿತು. ಅಸಮರ್ಪಕ ವ್ಯವಸ್ಥೆ. ನಿರುತ್ಸಾಹೀ ಕಾರ್ಯಕರ್ತರು ಇತ್ಯಾದಿ ಕಾರಣಗಳಿಂದಾಗಿ ಪ್ರವಾಸ ಯಶಸ್ವಿಯಾಗಲಿಲ್ಲ. ಇಂದು ಸಂಜೆ ಗೆ|| ಸದಾಶಿವರಾಯರ ಅಧ್ಯಕ್ಷತೆಯಲ್ಲಿ ನಗರಸಭಾ ಭವನದ ಎದುರು ಒಂದು ಬಹಿರಂಗ ಸಭೆ ನಡೆಸಲಾಯಿತು. ಗೆ|| ತಿಪ್ಪಪ್ಪ, ಚೌಡಪ್ಪ ಇವರುಗಳ ನಂತರ, ನಾನು ಹೊಸ ವರ್ಷದ ಆಯವ್ಯಯ ಕುರಿತು ಮಾತನಾಡಿದೆ. ಮುಳುಗಡೆ ಮತ್ತು ಗೇಣೀದಾರರ ಸಮಸ್ಯೆಯನ್ನೂ ಪ್ರಸ್ತಾಪಿಸಿದೆ. ಮೂಡುಗೋಡು ರೈತರ ವಿಷಯವಾಗಿಯೂ, ಕಾನೂನು ಕಾಯಿದೆಗಳ ಬಗೆಗೂ ಮಾತನಾಡಿದೆ. ನಂತರ ಗೆ|| ಸದಾಶಿವರಾಯರು ಮಾತನಾಡಿದರು. ಉಳುವವನೇ ಹೊಲದ ಒಡಯನಾಗಬೇಕೆಂಬ ತತ್ವ ಕಾರ್ಯಗತವಾಗಲು ರೈತರು ಹೋರಾಡಬೇಕೆಂದು ಕರೆಯಿತ್ತರು. ಸಭೆ ಕುಮುಟಾರ ವಂದನಾರ್ಪಣೆಯೊಂದಿಗೆ ಮುಗಿಯಿತು.

ಮಧ್ಯಾಹ್ನ ತಲಗಡ್ಡೆಯ ಶ್ರೀಕಂಠಿಗೌಡರು ಬಂದಿದ್ದರು. ಸಂಜೆ ಗೆ|| ಮಂಚಿದ್ಯಾವಪ್ಪನವರು ಬಂದರು.

ಗೆ|| ಭಕ್ತವತ್ಸಲನ ಪತ್ರ ಬಂದಿತು. ಅವನಿಗೊಂದು ಕಾರ್ಡನ್ನು, ಶಾರದಾಳಿಗೆ ಪತ್ರವೊಂದನ್ನು ಬರೆದೆ.

ನಾಳೆ ತೀರ್ಥಹಳ್ಳಿಗೆ ಗೆ|| ಸದಾಶಿವರಾಯರೊಂದಿಗೆ ಹೋಗುವುದು.

ಮಾರ್ಚ್೧೭

ಆರಗ – ಬಾವಿಕಟ್ಟೆಯವರಲ್ಲಿ ೮.೦೦ ಸಾಗರ ಗೆಳೆಯರಿಂದ ಜಮಾ.

ಎಂಟರ ಬಸ್ಸಿಗೆ ಹೊರಡುವುದಾಗಲಿಲ್ಲ. ಎದ್ದು ಕ್ಷೌರ ಮಾಡಿಕೊಂಡು ಸ್ನಾನ ಮುಗಿಸಿದೆ. ಅಷ್ಟರಲ್ಲಿ ಗೆಳೆಯ ಸದಾಶಿವರಾವ್‌, ಚಂದ್ರಶೇಖರ್ ಮತ್ತು ತಿಮ್ಮಪ್ಪ ಬಂದರು. ರಾಮಚಂದ್ರ ಭವನದಲ್ಲಿ ತಿಂಡಿ ತಿಂದು ಹಾಸಿಗೆ ತೆಗೆಸಿಕೊಂಡು ಬಸ್ಸು ನಿಲ್ದಾಣಕ್ಕೆ ಹೋದೆವು. ಹತ್ತು ಗಂಟೆಯ ಬಸ್ಸಿಗೆ ಗೆ|| ಸದಾಶಿವರಾಯರೊಡನೆ ಹೊರಟು, ನಾನು ಆರಗದಲ್ಲಿಳಿದೆ. ಅವರು ತೀರ್ಥಹಳ್ಳಿಗೆ ಹೋದರು. ಪೇಟೆಯಲ್ಲಿ ಶ್ರೀ ಕಳಸಣ್ಣನ ಅಂಗಡಿಯಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು ಮನೆಗೆ ಹೋದೆ. ಹಬ್ಬದ ವಾತಾವರಣ ಎಲ್ಲೆಲ್ಲೂ ಕಾಣುತ್ತಿತ್ತು. ಬೇವು ಬೆಲ್ಲದ ಸಿದ್ಧತೆಯಲ್ಲಿ ತೊಡಗಿದ್ದರು. ಕೆಲವರು ಮಾಸ್ತಿ ದೇವರ ಮನೆಯಲ್ಲಿ ಅಡಿಗೆ, ಪೂಜೆ ಸಿದ್ಧತೆ ಒಂದು ಕಡೆ ನಡೆದಿತ್ತು. ನಾನು ಪೂಜೆಗಾಗಿ ಕಾಯದೆ ಅನ್ನ ಸಾರು ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ಬೇವು ಬೆಲ್ಲ ತಿಂದು, ಪೇಟೆಯತ್ತ ಹೊರಟೆ.

ಪೇಟೆಯಲ್ಲಿ ತಿಮ್ಮಣ್ಣನ ಹೋಟೇಲಿನ ತನಕ ಹೋಗಿ ಒಮ್ಮೆ ಎಲ್ಲರನ್ನೂ ಮಾತನಾಡಿಸಿಕೊಂಡು ಗೆ|| ನಾರಾಯಣಮೂರ್ತಿಯವರಲ್ಲಿ ರಾತ್ರಿ ಊಟ ಮಾಡಿ ಮಲಗಿದೆ.

ಬಡತನಕ್ಕೆ ತವರು ಮನೆಯಾಗಿರುವ ಊರಿನಲ್ಲಿ ಹಬ್ಬ ಹೆಸರಿಗೆ ಮಾತ್ರವೆಂಬಂತೆ. ಕಪಟನಗು, ಸಡಗರ, ಬೆಲ್ಲಕ್ಕಿಂತ ಬೇವೇ ಇಂದು ಜೀವನದಲ್ಲಿ ತುಂಬಿದೆ.

ಸಂಸಾರಗಳು ಎಂದು ನಕ್ಕು ನಲಿಯುವಂತಾಗುವವೋ ಕಾಣೆ? ಉಗಾದಿ ಬರುತ್ತೆ ಹೋಗುತ್ತೆ. ಬಡತನ ಮಾತ್ರ ಬೆನ್ನಬಿಡದು!

ಮೇ

ಆರಗ ನಾರಾಣಮೂರ್ತಿ.

ಎದ್ದು ಸ್ನಾನಾದಿಗಳನ್ನು ಮುಗಿಸಿ ಪೇಟೆಗೆ ಬಂದೆ. ಗೆಳೆಯ ಭಟ್ಟರು, ಲಿಂಗಪ್ಪ, ಕೃಷ್ಣಪ್ಪನಲ್ಲಿ ಊಟ ಮಾಡಿ ಬಂದರು. ನಾನು ಪುರುಷೋತ್ತಮನೊಂದಿಗೆ ಅವರ ಮನೆಗೆ ಹೋಗಿ ಊಟ ಮಾಡಿದೆ. ಮಧ್ಯಾಹ್ನ ಶ್ರೀರಾಮಸಾಮುಕರ ಮನೆಗೆ ಹೋಗಿದ್ದು, ಅನಂತಮೂರ್ತಿಯವರ ತಾಯಿಯವರನ್ನು ಕಂಡುಬಂದೆ. ಸದ್ಯ ಬೇಗುವಳ್ಳಿಗೆ ಹೋಗುವುದಾಗಿ ತಿಳಿಸಿದರು.

ಸಂಜೆ ಭಟ್ಟರು ಶಿವಮೊಗ್ಗಕ್ಕೆ ಹೋದರು. ನಾನು ಮತ್ತು ಲಿಂಗಪ್ಪ ಆರಗಕ್ಕೆ ಹೋದೆವು. ಗೆ|| ಬಿ. ವಿ. ಮೂರ್ತಿ ಸಿಕ್ಕಿದ್ದರು. ಕೊಪ್ಪ ಹೋಗಿ ನಾಳೆ ಬರುವುದಾಗಿ ತಿಳಿಸಿದರು.

ರಾತ್ರಿ ಗೆಳೆಯರೊಂದಿಗೆ ಹಿರೇಗದ್ದೆಗೆ ಹೋಗಿ ಶ್ರೀ ವೆಂಟಪ್ಪನ ಮದುವೆ ಮನೆ ಊಟ ಮಾಡಿ ಗೆ|| ನಾರಾಯಣಮೂರ್ತಿಯವರಲ್ಲಿಗೆ ಬಂದು ಮಲಗಿದೆವು. ದಿಬ್ಬಣ ಬೆಳಗಿನ ಝಾವ ಹೊರಡಲಿದೆ. ಅಣ್ಣ, ಅವರ ಕುಟುಂಬದವರು ಮತ್ತು ತಾಯಿ ಅಲ್ಲೇ ಇದ್ದರು.

ಮೇ ೧೦

೫/- ರೂ. ಜಮಾ ಶ್ರೀ ಗುರುಮೂರ್ತಿಗಳಿಂದ.

ಸ್ನಾನಾದಿಗಳನ್ನು ಪೂರೈಸಿಕೊಂಡು ಹನ್ನೊಂದರ ಬಸ್ಸಿಗೆ ನಾನು ತೀರ್ಥಹಳ್ಳಿಗೆ ಬಂದೆ. ಗೆಳೆಯ ಲಿಂಗಪ್ಪ ಕೋಣಂದೂರಿಗೆ ಹೋದರು. ಬಾವಿಕೈನಲ್ಲಿ ನಾಳೆ ಆರಂಭವಾಗಿಲಿರು ಜಾನುವಾರು ಆಸ್ಪತ್ರೆ ಸಂಬಂಧ ಒಂದು ಸಂದೇಶವನ್ನು ಕೋಣಂದೂರಿನಲ್ಲಿ ಆರಂಭವಾಗಿರುವ ಪ್ರೌಢಶಾಲೆ ಮತ್ತು ಆಸ್ಪತ್ರೆಗಳಿಗೆ ಮತ್ತೊಂದು ಸಂದೇಶವನ್ನೂ ಬರೆದು ಗೆಳೆಯ ಲಿಂಗಪ್ಪನವರ ಹಸ್ತ ಕಳಿಸಿದೆ. ಈ ಮೂರೂ ಕಾರ್ಯಕ್ರಮಗಳನ್ನು ಶ್ರೀ ಕಡಿದಾಳರು ನೆರವೇರಿಸಲಿದ್ದಾರೆ ನಾಳೆ. ಕರೆ ಬಂದಿತ್ತಾದರೂ ನಾನು ಹೋಗದಿರಲು ನಿರ್ಧರಿಸಿದೆ.

ಮಧ್ಯಾಹ್ನ ಶ್ರೀ ಚಂದ್ರಶೇಖರ್ ರಲ್ಲಿ ಊಟ ಮಾಡಿದೆ. ಶ್ರೀ ತಿಪ್ಪೇಸ್ವಾಮಿಯವರಿಗೆ ಒಂದು ಪತ್ರ ಬರೆದೆ ಲಂಡನ್‌ಗೆ.

ಸಂಜೆ ಗೆ|| ಗುಂಡುರಾಯರೊಂದಿಗೆ ಸೇತುವೆಯತ್ತ ಹೋಗಿ ಬಂದೆ. ರಾತ್ರಿ ಬೆಟಮಕ್ಕಿಗೆ ಹೋಗಿ ತಂಗಿದೆ.

ಮೇ ೧೭

೧೫೦/- ಎಂ.ಓ. ೨೦ KGM ೪೮ ಸೋನೆಪುರಕ್ಕೆ

ಬೆಂಗಳೂರಿನಿಂದ ಮದ್ರಾಸಿಗೆ ರೈಲಿನಲ್ಲಿ.

ಬೆಳಿಗ್ಗೆ ಶಿವಮೊಗ್ಗದಿಂದ ರೂ. ೧೫೦ರ T. M. O ಬಂದಿತು. ಹೊರಡುವುದು ನಿಶ್ವಿತವಾದಂತಾಯಿತು.

ಶ್ರೀಮತಿ ಶಾಂತಿನಾಯಕ್ ಅವರನ್ನು ಫೋನ್ ಮೂಲಕ ಕಾಂಟಾಕ್ಟ್ ಮಾಡಲು ಪ್ರಯತ್ನಿಸಿದೆ. ಅವರ ಫೋನ್ ಸರಿಯಿಲ್ಲವೆಂದು ಕಾಣುತ್ತೆ. ಆಗಲಿಲ್ಲ.

ಮಧ್ಯಾಹ್ನ ಊಟ ಮಾಡಿ ಅಲಸೂರಿಗೆ ಹೋಗಿ ಬರಬೇಕೆಂದು ಬಸ್ ನಿಲ್ದಾಣಕ್ಕೆ ಹೋದೆ. ಸುಮಾರು ಒಂದು ಗಂಟೆ ಕಾದರೂ ಬಸ್ಸು ಬರಲಿಲ್ಲ. ವಿಚಾರಿಸಲಾಗಿ ೪೭ನೇ ಬಸ್ಸು ನಿಂತೇಯಿದೆ ಎಂದು ತಿಳಿದು ಮೆಜೆಸ್ಟಿಕ್ ಆಫೀಸಿಗೆ ಹೋದೆ. ದಾವಣಗೆರೆ ಸ್ನೇತರೊಬ್ಬರು ಇದ್ದರು. ಕಂಡಕ್ಟರುಯಿಲ್ಲ ಮುಂತಾಗಿ ಅಸಮಂಜಸ ಉತ್ತರ ಕೊಟ್ಟರು, ಅಲ್ಲಿದ್ದ ಗುಮಾಸ್ತರು ಮತ್ತು ಇತರ ನೌಕರರು. ನಾನು ರೇಗಿದೆ. ಎಲ್ಲರೂ ನನ್ನ ಮೇಲೆ ಬಿದ್ದರು. ಹೊರಕ್ಕೆ ತಳ್ಳುವಷ್ಟು ಮಾಡಿದರು. ಜನ ಗುಂಪು ಸೇರಿದರು. ಕಿಡಿಯಿಂದ ಮತ್ತೆ ಕೆಲವರು ಬಂದು ಸಮಾಧಾನ ಹೇಳಿದರು. ಕಿಡಿಯಲ್ಲಿ ಕುಳಿತಿದ್ದು ಹಾಗೇ ಶ್ರೀ ರೆಡ್ದಿಯವರಿಗೆ ನಡೆದ ಸಂಗತಿ ಫೋನ್ ಮಾಡಿ ಆಫೀಸಿಗೆ ಬಂದೆ.

ಮಧ್ಯಾಹ್ನವೇ ಟಿಕೆಟ್ ಕೊಂಡು ತಂದಿದ್ದರಿಂದ ರಾತ್ರಿ ಹೊರಡುವುದು ತೊಂದರೆಯಾಗಲಿಲ್ಲ. ಕೂಲಿಯವನಿಗೆ ಒಂದು ರೂ. ಕೊಟ್ಟು, ಮಲಗಲು ಸ್ಥಳ ಹಿಡಿದು ಹೊರಟದ್ದಾಯಿತು ಗೆಳೆಯರ ನೆರವಿನಿಂದ.

ಮೇ ೧೮

ಮದರಾಸಿನಿಂದ ಕಲ್ಕತ್ತಾ

ಬೆಳಿಗ್ಗೆ ಮದರಾಸನ್ನು ತಲ್ಪಿದೆ. ಟೆಲಿಫೋನ್ ಮೂಲಕ ಗೆಳೆಯ ಸಿ. ಜಿ. ಕೆ. ರೆಡ್ಡಿಯವರನ್ನು ಕಾಂಟಾಕ್ಟ್ ಮಾಡಲು ಪ್ರಯತ್ನಿಸಿದೆ. ಊರಿನಲ್ಲಿದ್ದಾರೆ, ಹೊರಗೆ ಹೋಗಿದ್ದಾರೆ ಎಂದು ತಿಳಿಯಿತು. ರಿಕ್ಷಾ ಮಾಡಿಕೊಂಡು ಹೊರಟೆ. ಈಚೆಗೆ ಅವರು ಮನೆ ಬದಲಾಯಿಸಿದ್ದಾರೆ. ಸಲೀಸಾಗಿ ರಟ್ ಲ್ಯಾಂಡ್ ಗೇಟ್‌ಗೇನೋ ಹೋದೆವು. ಆದರೆ ೬ನೇ ನಂ. ಮನೆಯನ್ನು ಹುಡಕಬೇಕಾದರೆ ೧೧ ಗಂಟೆಯಾಯಿತು. ಅಂತೂ ಮನೆ ಸಿಕ್ಕಿತು. ಸಿ. ಜಿ. ಕೆ. ಒಳಗೆ ಮಲಗಿದ್ದರು. ಎಬ್ಬಿಸಿದೆ. ಮನೆಯವರೆಲ್ಲಾ ಬೆಂಗಳೂರಿಗೆ ಹೋಗಿದ್ದಾರೆಂದು ತಿಳಿಸಿದರು. ಅವರೇ ಕಾಫಿ ಮಾಡಿದರು. ಕುಡಿದು ಮಾತನಾಡಿದೆವು. ಅವರು ಆಯಾಸದಿಂದ ನಿದ್ರೆಮಾಡಬೇಕೆಂದರು. ನಾನು ಸ್ನಾನಾದಿಗಳನ್ನು ಮುಗಿಸಿದೆ. ಮಧ್ಯಾಹ್ನ ಕಾಸ್ಮಾಪಾಲಿಟಿನ್ ಕ್ಲಬ್ಬಿಗೆ ಹೋಗಿ ಊಟಮಾಡಿ ಬಂದೆವು. ಮತ್ತೆ ವಿಶ್ರಾಂತಿ ತೆಗೆದುಕೊಂಡೆವು. ಕಾರಿನಲ್ಲಿ ಸಂಜೆ ರೈಲ್ವೆ ಸ್ಟೇಶನ್‌ಗೆ ಬಿಟ್ಟು ಅವರು ಯಾವುದೋ ಸಭೆಗೆಂದು ಹೋದರು.

ಮತ್ತೆ ಕೂಲಿಯವರ ನೆರವಿನಿಂದ ಮಲಗಲು ಮತ್ತು ಕುಳಿತುಕೊಳ್ಳಲು ಸ್ಥಳ ಮಾಡಿಕೊಂಡೆ. ಯಾತ್ರೆ ಹೋಗಿದ್ದ ನೇಪಾಳದ ಮುದುಕ ಮುದಕಿಯರ ತಂಡವೊಂದು ಮತ್ತೊಬ್ಬ ಬೆಂಗಳೂರಿನ ಸಂಸಾರ (ಡ್ರೈವರ್ ಕಲ್ಕತ್ತಾದಲ್ಲಿ) ಇವರೊಂದಿಗೆ ಮದರಾಸಿನಿಂದ ರಾತ್ರಿ ಪ್ರಯಾಣ ಮಾಡಿದೆ. ಕಲ್ಕತ್ತಾ ಮೇಲಿನಲ್ಲಿ ಹವಾ ಬಿಸಿಯಾಗಿದೆ. ಬೆವರು .

ಮೇ ೧೯

ಕಲ್ಕತ್ತಾ ಮೇಲ್. ಪ್ರಯಾಣ ಬಿಸಿಲು – ಉರಿ – ಶೆಖೆ – ನೀರು – ಕಾಫಿ – ಟೀ – ಲಸ್ಸಿ – ಕಲರ್-ಸೋಡಾ ಕೋಲಾ – ನೀರು ಎಷ್ಟು ಕುಡಿದರೂ ಬಾಯಾರಿಕೆ. ಪ್ರಯಾಣ ಹಗಲು ರಾತ್ರಿ ಹಾಗೇ ಸಾಗಿತು.

ನೇಪಾಳಿ ಯಾತ್ರಿಕರು ಇಂತಹದರಲ್ಲೂ ಏನನ್ನೂ ತಿನ್ನದೆ ಕುಡಿಯದೆ ಪ್ರಯಾಣ ಮಾಡಿದರೆಂದರೆ ಯಾರೂ ನಂಬಲಾರರು ಜಬ್ ಹೌಡಾಪಹುಂಚೇಂಗೇ ತಬ್ ಗಂಗಾಜೀ ಮೇ ಸ್ನಾನ್ ಕರೇಂಗೇ ಔರ್ ಜಲಪಾನ್ ಕರೇಂಗೇ? ಅವರ ಮೂಢ ನಂಬಿಕೆ ನಿಜಕ್ಕೂ ಭಯಾನಕವಾಗಿತ್ತು. ನಮ್ಮ ಡ್ರೈವರ್ ಆಗಾಗ ಅವರಿಗೆ ಸ್ವರ್ಗಪಹುಂಚೇಂಗೇ ಎಂದು ಹಾಸ್ಯ ಮಾಡುತ್ತಿದ್ದ.

ಮೇ ೨೦

ಕಲ್ಕತ್ತಾದಿಂದ ಸೋನ್ಪುರಕ್ಕೆ

ಹನ್ನೊಂದರ ಹೊತ್ತಿಗೆ ಹೌಡಾ ಸೇರಿತು ಮೇಲ್. ಎಲ್ಲರ ಮೈಯಲ್ಲೂ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ೨ನೇ ದರ್ಜೆ ವೇಟಿಂಗ್ ರೂಮ್‌ಗೆ ಹೋದೆ (ಹಿಂದೆ ಒಮ್ಮೆ ಇಲ್ಲೇ ಸಾಮಾನುಗಳನ್ನೆಲ್ಲಾಯಿಟ್ಟು ಕಲ್ಕತ್ತಾಗೆ ಹೋಗಿ ಬರುವಲ್ಲಿ ಒಂದು ಹ್ಯಾಂಡ್ ಬ್ಯಾಗ್ ಹೊಡೆದಿದ್ದರು). ಆ ಭಯವಿತ್ತು. ಅಲ್ಲೇ ಸ್ನಾನ ಮಾಡಿದೆ. ಪಕ್ಕದಲ್ಲೇ ಊಟ ಮಾಡಿ ಅಲ್ಲೇ ಮಲಗಿದೆ. ಊರಿಗೆ ಹೋಗುವ ಗೋಜಿಗೆ ಹೋಗಲಿಲ್ಲ. ಸಂಜೆಯ ತನಕ ಪ್ಲಾಟ್ ಫಾರಂನಲ್ಲೇ ಕಳೆದು ರಾತ್ರಿ ಹೊರಡುವ ಬರೌನಿ ಎಕ್ಸ್‌ಪ್ರೆಸ್ಸಿಗೆ ನುಗ್ಗಿ ಕುಳಿತುಕೊಂಡೆ. ರೈಲನ್ನು ಹತ್ತುವುದ ಎಂದರೆ ಅದ್ಭುತ ಸಾಹಸದ ಕೆಲಸ! ಪ್ರಾಣಾಪಾಯವೂಯಿಲ್ಲದಿಲ್ಲ. ಆದರಲ್ಲೂ ಕಲ್ಕತ್ತಾದಲ್ಲಿ ಒಬ್ಬ ಪ್ರಯಾಣ ಮಾಡುವವನ ಹಿಂದೆ ಹತ್ತು ಜನರಾದರೂ ಬೀಳ್ಕೊಡಲು ಬರುತ್ತಾರೆ! ನೂಕು ನುಗ್ಗಲು ಕೂಗು ಗದ್ದಲ ಹೊಡೆತ ಬಡಿತ ಎಲ್ಲ ನಡೆದು ಅಂತೂ ರೈಲು ಹೊರಟಿತು. ನಿಧಾನವಾಗಿ ಎಲ್ಲಾ ಸರಿಹೋಯಿತು. ನನಗೆ ಮಲಗಲು ಬಿಡಲಿಲ್ಲ. ನಾನು ಹಾಸಿದ್ದ ಹಾಸಿಗೆಯ ಮೇಲೆ ಸಾಮಾನುಗಳನ್ನು ಸೇರಿಸಿದರು. ರಾತ್ರಿಯೆಲ್ಲಾ ನಿಂತೇ ಪ್ರಯಾಣ ಮಾಡಿದ ಭೂಪರೂ ಇದ್ದ ಮೇಲೆ ನನಗೆ ಮಲಗವ ಚಿಂತೆ ಎಲ್ಲಿ? ರಾತ್ರಿ ಎಲ್ಲಾ ಕುಳಿತೇ ಸಾಗಿತ್ತು.

ಮೇ ೨೧

ಹಾಜೀಪುರ

ಮಧ್ಯಾಹ್ನದ ಹೊತ್ತಿಗೆ ಬರೌನಿ ಸೇರಿದೆವು. ಕೆಟ್ಟ ಜಂಕ್ಷನ್ ಪಾಯಿಖಾನೆ ನೊಣಗಳ ಹಿಂಡು ಇತ್ಯಾದಿ ಅಲ್ಲೇ ಪೂರಿ ಚಹಾ ಇತ್ಯಾದಿ ಕುಡಿದು ತಿಂದು ಮತ್ತೊಂದು ರೈಲನ್ನು ಹತ್ತಿದೆ. ಸೋನ್‌ಪುರವನ್ನು ಅಂತೂ ರೈಲು ತಲುಪಿತು. ಇಳಿದು ಅತ್ತ, ಇತ್ತ ನೋಡುತ್ತಿದ್ದೆ. ಇಬ್ಬರು ಗೆಳೆಯರು ನನ್ನನ್ನು ಗುರುತಿಸಿದರು. ಒಹೋ ನೀವು ಅಲ್ಲೇ ಹಾಜೀಪುರದಲ್ಲೇ ಇಳಿಯಬೇಕಾಗಿತ್ತು. ಅಲ್ಲೇ ಸಮ್ಮೇಳನ ಎಂದರು. ತುಂಬಾ ಹಸಿವು ದಣಿವು ಆಗಿತ್ತು. ಬಿಸಿಲಿನ ಬೇಗೆ ವರ್ಣಿಸಲು ಸಾಧ್ಯವಿರಲಿಲ್ಲ. ಲೀಚಿ ಮಾರುತ್ತಿದ್ದಳು ಒಬ್ಬಳು. ಎರಡಾಣೆ ಲೀಚಿ ತೆಗೆದುಕೊಂಡು ತಿನ್ನುತ್ತಾ ರಿಕ್ಷಾದಲ್ಲಿ ಕುಳಿತು ಹಾಜೀಪುರದತ್ತ ಹೊರಟೆ. ಗಂಡಕ್ ನದಿಯ ತೇಲು ಸೇತುವೆ ಹಾದು ಹಾಜೀಪುರಕ್ಕೆ ಬಂದೆ. ದಡದಲ್ಲಿಯೇ ಗೆಳೆಯರ ತಂಡ ಕಾಣಿಸಿತು. ಅಜನಾಲ್ವಿ, ಮುರಹರಿ ಎಲ್ಲರೂ ಕಂಡರು. ಗಂಡಕದ ದಂಡೆಯಲ್ಲೇ ನಮ್ಮವರು ಬೀಡು ಬಿಟ್ಟಿದ್ದರು. ಡೇರೆ ಹೊಡೆದು ನನಗೊಂದು ಡೇರೆ ತೋರಿಸಿದರು. ಹಾಸಿಗೆ ಒಗೆದು ಗಾಹೇ ಗಂಡಕ ನದಿಗೆ ಹೋಗಿ ಹಾರಿದೆ. ಎಥೇಚ್ಛ ಸ್ನಾನ ಮಾಡಿದೆ. ಬಟ್ಟೆ ಬದಲಾಯಿಸಿ ಕೊಂಡು ಅಲಕ್ಕಿ ಮೊಸರು ಪೇಡಾವೆಲ್ಲಾ ತಿಂದು ಚಹಾ ಕುಡಿದೆ. ಗೆಳೆಯರ ಜೊತೆಗೆ ಸೇರಿಕೊಂಡೆ.

ಮೇ ೨೨

ಹಾಜೀಪುರ

ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿದೆ. ಹತ್ತು ಗಂಟೆಗೆ ಸಮ್ಮೇಳನ ಮತ್ತೆ ಆರಂಭವಾಯಿತು. ಗದ್ದೆಯಲ್ಲಿ ದೊಡ್ಡದೊಂದು ಢೇರಾ ಹೊಡೆದು ಸಮ್ಮೇಳನಕ್ಕೆ ಸ್ಥಳ ಮಾಡಿದ್ದರು. ಉತ್ತರ ಪ್ರದೇಶ ಮತ್ತು ಬಿಹಾರದವರೇ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರು. ಡಾ. ಲೋಹಿಯಾರವರು ಬಂದಿರಲಿಲ್ಲ. ಬದ್ರೀನಾಥದಿಂದ ಹಿಂತುರುಗಿ ಲಕ್ನೋದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ತಿಳಿಯಿತು. ಸಮ್ಮೇಳನಕ್ಕೆ ಬರುವುದಿಲ್ಲ. ಹಾಗೇ ಅವರು ಕಲ್ಕತ್ತಾಕ್ಕೆ ಹೋಗುತ್ತಾರೆಂದು ಹೇಳಿದರು.

ಗೆಳೆಯ ಸಚ್ಚಿದಾನಂದ್‌ (ಇದೇ ಮುಜಫರ್ ಪುರ್ ಜಿಲ್ಲೆಯವರು) ಒಟ್ಟುಗೂಡಿದರು. ಇಲ್ಲಿ ಅವರ ತಂಗಿಯ ಮನೆಯಿದೆ. ಅವರ ಭಾವ ಡಿವಿಜನಲ್ ಎಂಜಿನಿಯರ್ ಆಗಿದ್ದಾರೆ. ಅವರ ಮನೆಗೆ ಮಧ್ಯಾಹ್ನ ಊಟಕ್ಕೆ ಹೋದೆವು. ರಾತ್ರಿಯೂ ಅಲ್ಲೇ ಊಟ ಮಾಡಿದೆ. ರಾತ್ರಿ ಅವರ ಭಾವನವರ ಪರಿಚಯವೂ ಆಯಿತು. ಒಳ್ಳೇ ಉತ್ಸಾಹೀ ತರುಣ. ಅವರ ಪತ್ನಿಯೂ ವಿದ್ಯಾವಂತ ಸುಸಂಸ್ಕೃತ ತರುಣಿ. ಅವರ ಅತಿಥಿಯಾಗುವ ಸುಯೋಗ ದೊರೆಯಿತು ಸಚ್ಚಿಯವರಿಂದ.

ಬಿಸಿಲಿನ ತಾಪ ಸಹಿಸಲಸದಳವಾಗಿದೆ.
ಸಮ್ಮೇಳನ ನಡೆದೇಯಿದೆ. ಚರ್ಚೆ ಚರ್ಚೆ

ಮೇ ೨೩

ಹಾಜೀಪುರ

ನಾನು ಪ್ರತಿನಿಧಿಯಾಗಿ ಬಂದಿರಲಿಲ್ಲ. ಪ್ರೇಕ್ಷಕನಾಗಿ ಬಂದಿದ್ದೆ. ಆದರೂ ಗೆಳೆಯರ ಒತ್ತಾಯಕ್ಕಾಗಿ ಗೋಂಡಾದಿಂದ ಪ್ರತಿನಿಧಿಯಾಗಿ ಆಯ್ಕೆ ಮಾಡಲು ಒಪ್ಪಿ ಪ್ರತಿನಿಧಿಯಾದೆ. ರಾಷ್ಟ್ರೀಯ ಸಮಿತಿಗೂ ಸ್ಪರ್ಧೆ ಮಾಡಲು ಒಪ್ಪಿಗೆಯಿತ್ತೆ. ಆಯ್ಕೆಯೂ ಆಯಿತು. ನಾನು ಕ್ಯಾನ್ವಾಸ್ ಮಾಡಲು ಹೋಗಲಿಲ್ಲ. ನಾನು ಎಂದೂ ಡಯಾಸ್ ಮೇಲೆ ಹೋಗಲೂ ಇಲ್ಲ. ಭಾಷಣವನ್ನು ಮಾಡಲಿಲ್ಲ. ಅನೇಕ ಪ್ರತಿನಿಧಿಗಳು ನಾನು ಬಂದಿಲ್ಲವೆಂದೇ ತಿಳಿದಿರಲಿಕ್ಕೂ ಸಾಕು.

ಗೆಳೆಯ ರಾಜನಾರಾಯಣ್ ಅಧ್ಯಕ್ಷರಾಗಿಯೂ, ಗೆಳೆಯ ರಬಿರಾಯ್ ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು . ಹೊಸ ರಾಷ್ಟ್ರೀಯ ಸಮಿತಿ ಆಯ್ಕೆಯಾಯಿತು. ಬೀಹಾರಕ್ಕೆ ಹೆಚ್ಚು ಪ್ರಾತಿನಿಧ್ಯ ಸಂದಿತು.

ಇಂದು ಎರಡೂ ಹೊತ್ತು ಗೆಳೆಯ ಸಚ್ಚಿಯವರಲ್ಲೇ ಊಟವಾಯಿತು. ಇಲ್ಲಿಂದ ಹೋಗುವ ತನಕ ಇಲ್ಲೇ ಊಟ ಮಾಡಬೇಕೆಂದು ಅವರೆಲ್ಲರ ಅಗ್ರಹ.

ರಾತ್ರಿ ಸಮ್ಮೇಳನ ಮುಕ್ತಾಯವಾಯಿತು.

ಮೇ ೨೪

ಹಾಜಿಪುರ ಪಾಟ್ಣಾ ಕಲ್ಕತ್ತಾಕ್ಕೆ ಪ್ರಯಾಣ.

ಬೆಳಿಗ್ಗೆ ಹಳೆಯ ಮತ್ತು ಹೊಸ ರಾಷ್ಟ್ರೀಯ ಸಮಿತಿ ಕೂಡಿ ತನ್ನ ಕಾರ್ಯಕಲಾಪಗಳನ್ನು ನಡೆಸಿತು. ಮಧ್ಯಾಹ್ನ ಊಟಕ್ಕೆ ಹೋಗಿ ಬರುವಾಗಲೇ ನಾನು ಈ ಸಂಜೆ ಹೊರಡುತ್ತೇನೆಂದು ಅನ್ನದಾತರಿಗೆ ಕೃತಜ್ಞಾಪೂರ್ವಕ ವಂದನೆಗಳನ್ನರ್ಪಿಸಿ ಹೊರಟು ಬಂದೆ. ಆದರೆ ಅವರ ಹೆಸರು ವಿಳಾಸಗಳನ್ನು ತೆಗೆದುಕೊಳ್ಳುದೆ ಹೊರಟು ಬಂದೆ. ಮೂರ್ಖತನ!

ಹೇಗೆ ಯಾವ ಮಾರ್ಗ ಎಷ್ಟು ಹೊತ್ತಿಗೆ ಎಂಬುದೇ ನಿರ್ಧಾರವಾಗದೇ ಬಹಳ ಹೊತ್ತು ಕಳೆಯಿತು. ಕಡೆಗೆ ತೀರ್ಮಾನಕ್ಕೆ ಬಂದೆವು. ಬಸ್ಸಿನಲ್ಲಿ ಪಹಲಿಘಾಟ್‌ಗೆ ಹೋಗಿ ಅಲ್ಲಿಂದ ಪಾಟ್ನಾಕ್ಕೆ ನಾವ್‌ನಲ್ಲಿ ಹೋಗುವುದು ಎಂದು ಗೆಳೆಯ ಮುರಹರಿ ರಬಿರಾಯ್ ಇತ್ಯಾದಿ ಎಲ್ಲಾ ಹೊರೆಟೆವೆ. ಗೆಳೆಯ ರಾಜನಾರಾಯಣ್ ಬದ್ರಿ ವಿಶಾಲ್ ಪಿಟ್ಟಿ ಇತ್ಯಾದಿಯವರೂ ಬಂದರು. ಪಾಟ್ಣಾ ಸೇರದೆ ಜಹಜಿನಲ್ಲಿ. ರಾತ್ರಿ ಹನ್ನೊಂದರ ಹೊತ್ತಿಗೆ ಮದ್ರಾಸಿನತನಕ ಟಿಕೆಟ್ ಸಿಕ್ಕಿತು. ಪಂಜಾಬ್ ಮೇಲ್‌ ಹಿಡಿದು ರಾತ್ರಿ ೧.೩೦ರ ಹೊತ್ತಿಗೆ ಕಲ್ಕತ್ತಾಕ್ಕೆ ಹೊರಟೆವು. ಗೆಳೆಯ ರಾಜನಾರಾಯಣ್ ಮತ್ತು ರಬಿರಾಯ್ ಜೊತೆಗೆ ಸ್ಲೀಪಿಂಗ್ ಕ್ಯಾರೇಜಿನಲ್ಲಿ ಮೂರು ಜಾಗ ಮಾಡಿಕೊಂಡಿದ್ದರಿಂದ ಪ್ರಯಾಣ ಸುಖವಾಯಿತು.

ಮೇ ೨೪

ಕಲ್ಕತ್ತಾದಲ್ಲಿ ಶ್ರೀ ಬಾಲಕೃಷ್ಣಗುಪ್ತರವರ ಮನೆಯಲ್ಲಿ.

ಬೆಳಿಗ್ಗೆ ಹನ್ನೊಂದರ ಹೊತ್ತಿಗೆ ಹೌಡಾ ಸೇರಿದೆವು. ವೇಟಿಂಗ್ ರೂಂನಲ್ಲೇ ಸ್ನಾನಾದಿಗಳನ್ನು ಪೂರೈಸಿ ಟ್ಯಾಕ್ಸಿ ಮಾಡಿಕೊಂಡು ಮೂವರೂ ಶ್ರೀ ಬಾಲಕೃಷ್ಣ ಗುಪ್ತರವರ ಮನೆಗೆ ಹೋದೆವು. (೧೦ ಕಾಲಿಕೃಷ್ಣ ಟ್ಯಾಗೋರ್ ಸ್ಟ್ರೀಟ್, ಕಲ್ಕತ್ತಾ ೮, ಮಾರ್ಬಲ್ ಹೌಸ್) ಅಷ್ಟರಲ್ಲಿ ಡಾ. ಲೋಹಿಯಾರವರು ಮಹಡಿಯಿಂದಿಳಿದು ಗುಪ್ತರ ಪುತ್ರಿಯೊಂದಿಗೆ ಬಾಗಿಲಿಗೆ ಬಂದರು. ನಾವು ಪ್ರಣಾಮ ಮಾಡಿದೆವು. ಉಳಿದುಕೊಳ್ಳಲು ಹೇಳಿ ಅವರು ಕಾರಿನಲ್ಲಿ ಹೊರಟು ಹೋದರು. ಸಂಜೆ ಮೊಹಮ್ಮದಾಲಿ ಪಾರ್ಕಿನಲ್ಲಿ ಬಹಿರಂಗ ಸಭೆ ಕರೆಯಲಾಗಿತ್ತು. ಅಲ್ಲಿಗೆ ಬರಲು ನಮಗೆ ಅಪ್ಪಣೆಯಾಯಿತು. ನಾನು ಇಂದು ಹೋಗಬಾರದೆಂದೂ ತಿಳಿಸಿದರು.

ಊಟ ಮಾಡಿದೆವು. ಶ್ರೀ ಬಾಲಕೃಷ್ಣ ಗುಪ್ತರು ಅವರ ಪತ್ನಿಯವರು ಉಣ ಬಡಿಸಿದರು. ಅಲ್ಲೇ ಸಂಜೆತನಕ ವಿಶ್ರಾಂತಿ ಪಡೆದೆವು. ಮನೆಯ ಒಳಗೆ ಬಹಳಷ್ಟು ತಂಪಾಗಿದೆ. ಬೇಕಷ್ಟು ಐಸ್ ಕೋಲ್ಡ್ ವಾಟರ್ ಸಿಕ್ಕುತ್ತೆ.

ಸಂಜೆ ಸಭೆಗೆ ಹೋದೆವು. ಗೆ|| ರಬಿರಾಯ್ ಸಂಜೆ ಪುರಿ ಎಕ್ಸ್‌ಪ್ರೆಸ್ಸಿಗೆ ಹೊರಟು ಹೋದರು. ಅವರನ್ನು ಕಳಿಸಿ ಬಂದೆ. ಸಭೆ ಮುಗಿದ ನಂತರ ಎಲ್ಲರೂ ಮನೆಗೆ ಬಂದೆವು. ಊಟ ಮಾಡಿ ಮಲಗಿದೆವು.