ಸಭಾಧ್ಯಕ್ಷತೆಗೆ ಸಾಂಕೇತಿಕ ಸ್ಪರ್ಧೆ

೧೮ ಜೂನ್೧೯೫೨

ಸ್ವಾಮಿ, ಈಗತಾನೆ ತಾವು ಈ ಸಭೆಗೆ ಅಧ್ಯಕ್ಷರಾಗಿ ಆರಿಸಲ್ಪಟ್ಟಿದ್ದೀರಿ. ಅದಕ್ಕಾಗಿ ತಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ನಾನು ಈ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ನಿಲ್ಲಲು ಕಾರಣವೇನೆಂಬ ಬಗ್ಗೆ ಒಂದೆರಡು ಮಾತುಗಳನ್ನು ಆಡಬಯಸುತ್ತೇನೆ : ನನ್ನ ಸೋಲನ್ನು ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ನಾನು ನನ್ನ ಕರ್ತವ್ಯವನ್ನು ಸಲ್ಲಿಸಿದ್ದೇನೆಂಬ ತೃಪ್ತಿ ನನಗುಂಟಾಗಿದೆ. ಸಭೆಯು ಒಂದಕ್ಕಿಂತ ಹೆಚ್ಚಿನ ರಾಜಕೀಯ ಪಕ್ಷಗಳಿಂದ ಕೂಡಿದ್ದಾಗಿದೆ. ಮೊಟ್ಟ ಮೊದಲನೆಯ ಬಾರಿಗೆ ನೂತನ ರಾಜ್ಯಾಂಗ ವಿಧಿದ್ವಾರ ಸಭೆಯು ಸ್ಥಾಪಿಸಲ್ಪಟ್ಟಿದ್ದಾಗಿರುತ್ತದೆ. ಮೈಸೂರು ದೇಶದ ಪ್ರಜೆಗಳು ಮೊದಲನೆಯ ಬಾರಿಗೆ ಸದಸ್ಯರನ್ನು ವಯಸ್ಕರ ಮತದಾನ ಪದ್ಧತಿಯ ಮೇರೆಗೆ ಆರಿಸಿ, ಸಭೆಗೆ ಕಳುಹಿಸಿದ್ದಾರೆ. ಇನ್ನು ಮುಂದಕ್ಕೆ ಈ ಸಭೆಯು ಜವಾಬ್ದಾರಿಯಿಂದ, ನೂತನ ರಾಜ್ಯಾಂಗದ ವಿಧಿಗನುಸಾರವಾಗಿ ರಾಜ್ಯಸೂತ್ರಗಳನ್ನು ನಡೆಸಿಕೊಂಡು ಹೋಗಬೇಕಾಗಿದೆ. ಈ ಬಗ್ಗೆ ನಾವೆಲ್ಲರೂ ಒಂದು ಸತ್ಸಂಪ್ರದಾಯವನ್ನು ಬೆಳೆಸಿಕೊಂಡು ಬರಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಜಾಪ್ರಭುತ್ವಕ್ಕನುಗುಣವಾಗಿ ಪ್ರಜಾಭಿಪ್ರಾಯಕ್ಕೆ ಮನ್ನಣೆ ಕೊಡುವುದು ಅಗತ್ಯ. ವಿರೋಧ ಪಕ್ಷದ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಕೊಡಬೇಕು. ನನ್ನ ಸ್ಪರ್ಧೆ ಸಾಂಕೇತಿಕ ಹಾಗೂ ತಾತ್ವಿಕ.

ಮತ್ತೊಂದು ವಿಷಯವೇನೆಂದರೆ, ತಮಗೆ ತಮ್ಮ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುವುದರಲ್ಲಿ ಕೆಲವು ಸಂದರ್ಭಗಳಲ್ಲಿ ತಾವು ಪಕ್ಷಪಾತ ಭಾವನೆಯಿಂದ ವರ್ತಿಸಬಹುದೆಂಬ ಶಂಕೆಗೂ ಅವಕಾಶ ಉಂಟಾಗಬಹುದೋ ಏನೋ? ಆದರೆ, ಈ ಶಂಕೆಗೆ ಎಷ್ಟು ಮಾತ್ರ ಆಧಾರವಿದೆ ಅಥವಾ ಇಲ್ಲ ಎಂಬುದನ್ನು ಮುಂದಕ್ಕೆ ತಾವು ಪರಿಹರಿಸಬೇಕಾಗಿದೆ. ಕಾರಣ ತಾವು ನಾಲ್ಕೂವರೆ ವರ್ಷಗಳ ಕಾಲ ಮಂತ್ರಿಗಳಾಗಿದ್ದುಕೊಂಡು, ದೇಶಾಭ್ಯುದಯದ ಕೆಲಸ ಕಾರ್ಯಗಳನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದು, ಮೊನ್ನೆ ತಾನೇ ನಿವೃತ್ತಿ ಹೊಂದಿದ್ದೀರಿ. ತಾವು ಇಂದು ಈ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಆರಿಸಿ ಬಂದಿದ್ದೀರಿ. ತಮ್ಮ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಏಳಬಹುದಾದ ಸಂಶಯಗಳಿಗೆ ಅವಕಾಶವಿಲ್ಲದಂತೆ ತಾವು ನಡೆದುಕೊಳ್ಳುವಿರೆಂಬ ಭರವಸೆ ನನಗಿದೆ. ಅಂಥ ವಿಷಯಗಳನ್ನು ತಮ್ಮ ಮನಸ್ಸಿಗೆ ಅಂಟಿಸಿಕೊಳ್ಳದೆ ತಾವು ಸದಾ ಸತ್ಯವನ್ನೇ ಎತ್ತಿ ಹಿಡಿಯುತ್ತೀರೆಂದು ನಂಬಿದ್ದೇನೆ.

ಈ ಸಭೆಗೆ ಅಧ್ಯಕ್ಷರಾಗಿ ಆರಿಸಿ ಬರಲು ನನ್ನ ಹೆಸರನ್ನು ಸೂಚಿಸಿದ ಮತ್ತು ನನಗೆ ನೆರವು ನೀಡಿದ ನನ್ನ ಮಿತ್ರರಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕೊನೆಯದಾಗಿ ಇನ್ನೊಂದು ಮಾತನ್ನು ಹೇಳಬೇಕಾಗಿದೆ. ಈ ದಿನ ತಾವು ನಮ್ಮೆಲ್ಲರ ಸಹಕಾರವನ್ನು ಬಯಸುವವರಾಗಿದ್ದೀರಿ. ದೇಶದ ಮತ್ತು ಜನತೆಯ ಹಿತದೃಷ್ಟಿಯಿಂದ ತಮ್ಮ ಮೇಲೆ ಒಂದು ಗುರುತರವಾದ ಜವಾಬ್ದಾರಿ ಬಿದ್ದಿದೆ. ಅದನ್ನು ನಿರ್ವಹಿಸಲು ನಮ್ಮ ಸಹಕಾರ ಯಾವತ್ತೂ ತಮಗೆ ಇದ್ದೇ ಇರುತ್ತದೆಂಬ ಅಂಶವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿ ನಾನು ತಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೆನೆ. ಮೇಲಾಗಿ ತಾವು ನನಗಿಂತಲೂ ವಯೋವೃದ್ಧರು, ಹೆಚ್ಚಿನ ಅನುಭವಶಾಲಿಗಳು, ಮೇಧಾವಿಗಳು ಆಗಿರುವುದರಿಂದ ತಾವು ಈ ಸ್ಥಾನಕ್ಕೆ ಅತ್ಯಂತ ಅರ್ಹರಿದ್ದೀರಿ. ಅದಕ್ಕಾಗಿ ಮತ್ತೊಮ್ಮೆ ನಾನು ತಮ್ಮನ್ನು ಅಭಿನಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ರಾಜಧನ ರದ್ದತಿ

೩೦ ಜೂನ್೧೯೫೨

ದೇಶದಲ್ಲಿ ಮೊದಲನೆಯದು ಭೂಮಿಯ ಒಂದು ಸುಧಾರಣೆಯನ್ನು ಮಾಡತಕ್ಕದ್ದು. ಇವೊತ್ತು ತಾನೆ ವರದಿ ಬರುತ್ತಾ ಇದೆ. ವಿ. ಟಿ. ಕೃಷ್ಣಮಾಚಾರಿಯವರ ವರದಿ ಎಷ್ಟು ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದನ್ನು ದೇಶ ಕಾದು ಕಾಡಬೇಕು. ಅದು ಕ್ರಾಂತಿಕಾರಕ ಬದಲಾವಣೆ ಎಂದು ಹೇಳುತ್ತೇನೆ.

ಈ ಬಡ್ಜೆಟ್ಟಿನಲ್ಲಿ ಒಂದೂ ಅಂಕಿ ಸಂಖ್ಯೆ ಕೊಡದೇ ಇರುವುದರಿಂದ, ಹಚ್ಚು ಅಂಕಿ ಸಂಖ್ಯೆಗಳ ಮೇಲೆ ಟೀಕೆ ಇಲ್ಲ ಎಂದು ಮೊದಲೇ ಹೇಳಿಕೊಂಡಿದ್ದೇನೆ. ನಮ್ಮ ದೇಶದಲ್ಲಿರತಕ್ಕ ಒಂದು ಆರ್ಥಿಕ ಪರಿಸ್ಥಿತಿಯನ್ನು ನೋಡುವುದಾದರೆ ಇದು ಒಂದು ವಸಾಹತಾಗಿತ್ತು. ಇಲ್ಲಿ ಮೊದಲನೆಯದು ವ್ಯವಸಾಯ, ಎಡರನೆಯದು ಕೈಗಾರಿಕೆ. ಕೈಗಾರಿಕೆಯೂ ಸಹ ಪೂರ್ಣವಾಗಿ ಬೆಳವಣಿಗೆಯಾಗಿಲ್ಲ ಎಂಬುದು ನಮಗೆ ಗೊತ್ತು. ಜೊತೆಗೆ ಸಂಖ್ಯೆ ಇಲ್ಲ. ಇವೊತ್ತು ನಮ್ಮ ಮುಂದಿರತಕ್ಕ ಪ್ಲಾನ್‌ನಲ್ಲಿ ಮಿಕ್ಷೆಡ್‌ಎಕಾನೆಮಿ ಎಂದು ಹೇಳಿದ್ದಾರೆ. ಅದು ಎಷ್ಟು ಮಟ್ಟಿಗೆ ವ್ಯವಸಾಯವನ್ನು ಪ್ರಗತಿಯ ಹಾದಿಯಲ್ಲಿ ತೆಗೆದುಕೊಂಡು ಹೋಗುತ್ತದೆ ಎಂಬುದು ಅನುಮಾನಾಸ್ಪದವಾದದ್ದು. ಇನ್ನು ಯಾವ ಒಂದು ಕಾರ್ಯವನ್ನು ಕೈಗಾರಿಕೆಯನ್ನು, ಉದ್ಯಮವನ್ನು ಕೈಕೊಳ್ಳಬೇಕಾದರೂ ಬಂಡವಾಳ ಬೇಕು ಎಂದು ಹೇಳಿ ನಮ್ಮ ದೃಷ್ಟಿಯಿಂದ ಕ್ಯಾಪಿಟಲಿಸ್ಟನ್ನು ಇನಸೆನ್‌ಟೀವ್‌ ಆಗಿ ನೋಡುತ್ತೇವೆ. ಅದಕ್ಕೆ ಬದಲಾಗಿ ದೇಶದಲ್ಲಿರತಕ್ಕ ಒಂದು ಸಂಪತ್ತು ಎಂದರೆ ಮಾನವ ಸಂಪತ್ತು. ಅದಕ್ಕೇ ಲೇಬರ್ ಇನ್‌ಸೆನ್‌ಟೀವ್‌ ಆಗಬೇಕೆಂದು ಒಂದು ಸೂಚನೆ. ಈಗತಾನೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾ ನಮ್ಮ ಜನ ಎಷ್ಟುಮಟ್ಟಿಗೆ ಸಮರ್ಥರಾಗಿದ್ದಾರೆ, ದೇಶದಲ್ಲಿ ಕೈಗಾರಿಕೆಗಳು ಹೇಗೆ ಅಭಿವೃದ್ಧಿ ಹೊಂದಿವೆ ಎಂಬ ವಿಚಾರ ಹೇಳಿದರು. ಪ್ರಗತಿಯ ದಾರಿಯಲ್ಲಿ ಹೋಗಿರುವುದಕ್ಕೆ ಮಾನ್ಯುಮೆಂಟ್ಸ್‌ಆಗಿ ಊರು, ಊರಿನಲ್ಲಿರತ್ಕ ಮಲ್ಟಿಪರ್ಪಸ್‌ ಕೋ ಆಪರೇಟಿವ್‌ ಸೊಸೈಟಿಗಳು, ಗ್ರೋ ಮೋರ್ ಫುಡ್‌ಸ್ಕೀಮುಗಳು ಇವೇ ಸಾಕು, ಜನತೆ ತೀರ್ಮಾನ ಕೊಡಬಹುದು ಎಷ್ಟು ಯಶಸ್ವಿಯಾಗಿ ದೇಶದ ಹಣವನ್ನು ಪ್ರಗತಿದಾಯಕವಾಗಿ ಉದ್ಯಮಗಳಲ್ಲಿ ಹಾಕಿ ಜನರ ಬಡತನ ಹೋಗಲಾಡಿಸಿ, ಕೈಗಾರಿಕೋದ್ಯಮವನ್ನು ರೂಢಿಸಿದ್ದಾರೆ ಎಂಬುದು ಗೊತ್ತಾಗುತ್ತದೆ.

ಮಾನ್ಯ ಮುಖ್ಯ ಮಂತ್ರಿಗಳು ನಾನು ನನ್ನ ಜೀವನದಲ್ಲೇ ಮೊದಲನೆಯ ಸಲ ಇಂಥ ಒಂದು ಆಯವ್ಯಯ ಪಟ್ಟಿಯನ್ನು ಇಡುತ್ತಾ ಇದ್ದೇನೆ, ಅದು ನನ್ನ ದೃಷ್ಟಿಯಿಂದ ಮಹತ್ವದ್ದು ಎಂದು ಹೇಳಿಕೊಂಡು ಅಂದಾಜು ಪಟ್ಟಿಯನ್ನು ಮಂಡಿಸಿದರು. “ರಾಜ ಪ್ರಮುಖರ ಭಾಷಣದಲ್ಲಿ ಇಂಥಾ ವಿವರಗಳು ಎನೂ ಇರಬಾರದು. ಬರಿಯ ನೀತಿ, ತತ್ವಗಳನ್ನು ಮಾತ್ರ ಸ್ವಲ್ಪಮಟ್ಟಿಗೆ ವಿಮರ್ಶೆ ಮಾಡಿ ಅಷ್ಟಕ್ಕೆ ಬಿಡುತ್ತಾರೆ” ಎಂದು ಹೇಳಿ ತಮ್ಮ ಭಾಷಣದಲ್ಲಿ ಹೇಳಿದರು. ಹಾಗೆಯೇ ತಮ್ಮ ಭಾಷಣದಲ್ಲಿ ಹೆಚ್ಚು ವಿವರವಾಗಿ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಪ್ರಸ್ತಾಪಮಾಡುತ್ತಾ ಶತಮಾನಗಳ ಗುಲಾಮತನ ಮತ್ತು ಅವರ ಇತರ ವಿಚಾರಗಳೊಡನೆ ಹೋರಾಟ ಮಾಡಿದ್ದೇವೆ ಎಂದು ಹೇಳುತ್ತಾರೆ. ಇವೊತ್ತು ಡಾಮಿನೇಶನ್ಮತ್ತು ಎಕ್ಸ್ಪ್ಲಾಯಿಟೇಷನ್ಇವೆರಡರ ಶೋಷಣೆಯಿಂದಲೂ ಸಾಮಾನ್ಯ ಜನ ತಪ್ಪಿಸಿಕೊಳ್ಳುವುದಕ್ಕೆ ಆಗಿಲ್ಲ ಎಂಬುದನ್ನು ನೋಡಬೇಕು. ನಮ್ಮಲ್ಲಿ ಈಗ ಏಕನಾಯಕತ್ವ ಕೊನೆಗೊಂಡಿದ್ದರೂ ಕೂಡ ಇವೊತ್ತು ನಾವು ಬಡತನ ಮತ್ತು ಹಣದ ಕೊರತೆಯಿಂದ ತೊಳಲುತ್ತಿದ್ದರೂ ರಾಜಪ್ರರ ಮುಖರಿಗೆ ೨೪ ಲಕ್ಷ ರೂಪಾಯಿಗಳ ಮಾಶಾಸನವನ್ನು ಕೊಡುತ್ತಾ ಇದ್ದೇವೆ. ನನ್ನ ದೃಷ್ಟಿಯಲ್ಲಿ ಅದನ್ನೂ ಕೂಡ ನಿಲ್ಲಿಸಬೇಕಾದದ್ದು ದೇಶದ ಹಿತದೃಷ್ಟಿಯಿಂದ ಕ್ಷೇಮ ಎಂದು ಹೇಳುತ್ತಿದ್ದೇನೆ.

ಪ್ರಾಥಮಿಕ ಶಿಕ್ಷಣ

ಜುಲೈ ೧೯೫೨

ಈ ನಿರ್ಣಯದಲ್ಲಿ ಪ್ರಾಥಮಿಕ ಶಾಲೆಗಳ ಉಪಾಧ್ಯಯರ ಸಂಬಳವನ್ನು ೫೦ ರೂಪಾಯಿ ಆದರೂ ಮಾಡಬೇಕೆಂದಿದೆ. ಇಂದು ಪ್ರಾಥಮಿಕ ಶಾಲೆಯ ಉಪಾಧ್ಯಾಯರ ಪರಿಸ್ಥಿತಿ ಏನೆಂಬುದು ನಮ್ಮೆಲ್ಲರಿಗೂ ಚೆನ್ನಾಗಿ ಗೊತ್ತಿದೆ. ಬಹುಶಃ ಸರ್ಕಾರದ ಆಡಳಿತ ಯಂತ್ರದಲ್ಲಿ ಅವರು ಮಾತ್ರ ಬೇರೆ ರೀತಿಯ ದುಡಿಮೆಯಿಲ್ಲದೆ ಇರುವವರು ಎಂದು ಕಾಣುತ್ತದೆ. ಗುಂಪಿಗೆ ಸೇರಿದವರಿಗೆ, ಸ್ನೇಹಿತರು ಒಂದು ಲೋಟ ಕಾಫಿ ಕೊಡಿಸುವ ಅಸಂಭವ ಕೂಡ ಇಲ್ಲ. ಇವರು ದಿನವೆಲ್ಲ ಮಕ್ಕಳ ಹತ್ತಿರ ಕೆಲಸ ಮಾಡುತ್ತಾರೆ. ಅವರ ಜೇಬಿನಲ್ಲಿ ನಶ್ಯವಿದ್ದರೆ ಒಂದಾಣಿ ಉಳಿಸಿಕೊಂಡಿದ್ದರೆ, ಅವರೇ ದೊಡ್ಡ ಉಪಾಧ್ಯಾಯರಾಗುತ್ತಾರೆ.

ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ, ಈಗಾಗಲೇ ನಮಗೆ ಗೊತ್ತಿರುವಂತೆ ವಿದ್ಯಾಭ್ಯಾಸ ಕ್ರಮದಲ್ಲಿ ಅನೇಕ ನ್ಯೂನತೆಗಳಿವೆ. ಇವುಗಳನ್ನು ಪರಿವರ್ತನೆ ಮಾಡಬೇಕು. ರಾಷ್ಟ್ರ ನಿರ್ಮಾಣ ಮಾಡುವ ವಿದ್ಯಾಭ್ಯಾಸ ನಮ್ಮ ಮಕ್ಕಳಿಗೆ ಬೇಕೆಂದು ಕಳೆದ ಮೂವತ್ತು ನಲವತ್ತು ವರ್ಷಗಳಿಂದ ಅನುಭವಶಾಲಿಗಳೂ, ಮೇಧಾವಿಗಳೂ ತಜ್ಞರೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸ ಎಲ್ಲರಿಗೂ ದೊರಕಬೇಕು, ಅದು ಕಂಪಲ್ಸರಿ ಮತ್ತು ಯುನಿವರ್ಸ್ಲ್ಆಗಿರಬೇಕೆಂಬ ತತ್ವವನ್ನು ರಾಜ್ಯಾಂಗ ರಚನೆ ಮಾಡಿದವರು ಒಪ್ಪಿದ್ದಾರೆ. ಇದನ್ನು ಆದಷ್ಟು ಜಾಗ್ರತೆ ಜಾರಿಗೆ ತರಬೇಕೆಂಬ ಗುರಿಯನ್ನಿಟ್ಟುಕೊಂಡಿದ್ದಾರೆ. ನಾವು ಭವ್ಯ ರಾಷ್ಟ್ರವನ್ನು ಕಟ್ಟಬೇಕಾದರೆ ಇದೇ ಅಡಿಪಾಯವಾಗುತ್ತದೆ. ಇದೇ ನೆಲೆಗಟ್ಟಿದ್ದ ಹಾಗೆ. ಇದು ಎಷ್ಟು ಚೊಕ್ಕಟವಾಗಿ, ಗಟ್ಟಿಯಾಗಿದ್ದರೆ ಎಷ್ಟು ಆದರ್ಶಪೂರ್ಣವಾಗಿದ್ದರೆ ಇದರ ಮೇಲೆ ಕಟ್ಟುವ ರಾಷ್ಟ್ರ ಕೂಡ ಅಷ್ಟೇ ಭದ್ರವಾಗಿರುತ್ತದೆ. ಆದುದರಿಂದ ಈ ಹೊತ್ತು ನಮ್ಮ ಬಡ್ಜೆಟ್ಟಿನಲ್ಲಿ ಸುಮಾರು ಶೇಕಡ ೨೫ರಷ್ಟು ಹಣ ವಿದ್ಯಾಭ್ಯಾಸದ ಬಾಬಿಗೆ ಹೋಗಿದೆಯೆನ್ನುವುದು ನಮಗೆ ಗೊತ್ತಿದೆ. ಆದರೆ, ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಎಷ್ಟು ಮೊಬಲಗನ್ನು ಖರ್ಚು ಮಾಡಬೇಕಾಗಿತ್ತೋ ಅಷ್ಟು ಖರ್ಚು ಮಾಡುವುದಕ್ಕೆ ಆಗಿಲ್ಲ. ಈಗ ನಮ್ಮಲ್ಲಿ ಆ ನ್ಯೂನತೆ ಇದೆ. ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಅನೇಕ ನ್ಯೂನತೆಗಳಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಅನೇಕ ಮಹನೀಯರು ನಮಗೆ ಅವರ ವರದಿಯಲ್ಲಿ ತೋರಿಸದ್ದಾರೆ. ಅಂದ ಮೇಲೆ ಇದನ್ನು ಪರಿವರ್ತನೆ ಮಾಡುವಾಗ ಹಣದ ಪ್ರಶ್ನೆ ಬರುತ್ತದೆ; ಮಾರ್ಪಾಡು ಮಾಡಬೇಕೆಂದು ಒಪ್ಪಿಕೊಳ್ಳುತ್ತೇವೆ, ಆದರೆ ಸಾಕಷ್ಟು ಹಣವಿಲ್ಲವೆಂದು ಬಿಡುತ್ತೇವೆ. ಹೀಗಾದರೆ, ಈ ಪರಿವರ್ತನೆಯನ್ನು ಕಾರ್ಯ ರೂಪದಲ್ಲಿ ತರುವುದಿಲ್ಲವೆಂಬುದನ್ನು ಇದು ಸೂಚಿಸುತ್ತದೆ. ಪರಿವರ್ತನೆ ಮಾಡಬೇಕು, ಹಣವಿಲ್ಲವೆಂದರೆ ಇದನ್ನು ಬಿಟ್ಟ ಹಾಗಾಗುತ್ತದೆ. ಇದಕ್ಕೆ ಮಾರ್ಗಗಳನ್ನು ಕಂಡು ಹಿಡಿಯಬೇಕು. ಇದಕ್ಕೆ ಬೇಕಾದ ಹಣವನ್ನು ಎಲ್ಲಿಂದ ತರಬೇಕು. ಯಾವ ರೀತಿ ಸಾಧ್ಯ, ಉಪಾಧ್ಯಾಯರ ಆರ್ಥಿಕ ಅಂತಸ್ತನ್ನೂ ಜ್ಞಾನದ ಅಂತಸ್ತನ್ನೂ ಹೆಚ್ಚಿಸುವುದಕ್ಕೆ ಯಾವ ಕಾರ್ಯಕ್ರಮ ತೆಗೆದುಕೊಳ್ಳಬೇಕು ಎಂಬುದು ದೊಡ್ಡ ಪ್ರಶ್ನೆ.

ಪ್ರಾಥಮಿಕ ವಿದ್ಯಾಭ್ಯಾಸದ ವಿಷಯದಲ್ಲಿ ಮಾತನಾಡುತ್ತಾ ಮಾನ್ಯ ಸದಸ್ಯರೊಬ್ಬರು ಬಹಳ ಕಡಿಮೆ ವಿದ್ಯಾಭ್ಯಾಸ ಪಡೆದ ಜನರು ಬರಿಯ ಲೋಯರ್ ಸೆಕೆಂಡರಿ ಮಾಡಿಕೊಂಡಿರುವವರು ಮಕ್ಕಳಿಗೆ ವಿದ್ಯಭ್ಯಾಸ ಕೊಡುತ್ತೇವೆಂದು ಬರುತ್ತಾರೆ, ಅವರಿಂದ ನಾವು ನಿರೀಕ್ಷಿಸಿದಷ್ಟು ಜ್ಞಾನವನ್ನು ಮಕ್ಕಳಿಗೆ ಕೊಡುವುದಕ್ಕೆ ಸಾಧ್ಯವಿಲ್ಲವೆಂದು ಹೇಳಿದರು. ಇದು ನಿಜ. ನನಗೆ ತಿಳಿದ ಹಾಗೆ, ಪ್ರಾಥಮಿಕ ಪಾಠ ಶಾಲೆಯ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸುವವರಾರೆಂದರೆ, ಸ್ವಲ್ಪ ಮಾತ್ರ ಓದಿ ಜೀವನಕ್ಕೆ ಇನ್ನೇನೂ ಉಪಾಯವಿಲ್ಲದೆ ಹೊಟ್ಟೆ ಹೊರೆಯಲು ಇದನ್ನೇ ಅವಲಂಬಿಸಿರುವವರು. ಇಂಥವರೇ ಹೆಚ್ಚು ಸಂಖ್ಯೆಯಲ್ಲಿ ಕಾಣುತ್ತಾರೆ. ಇದು ಮುಂದುವರಿದ ದೇಶದ ಲಕ್ಷಣವಲ್ಲ.

ಇದು ಬಹುಮುಖ್ಯವಾದ ಮತ್ತು ತುರ್ತಾದ ಪ್ರಶ್ನೆಯಾದ್ದರಿಂದ ಇದಕ್ಕೆ ಸರ್ಕಾರದವರು ತೀವ್ರ ಗಮನ ಕೊಡಬೇಕೆಂಬುದು ನಮ್ಮ ಉದ್ದೇಶ. ಚಿಕ್ಕಂದಿನ ವಿದ್ಯೆ ಬಹಳ ಪ್ರಾಮುಖ್ಯವಾದುದು. ಅದಕ್ಕೆ “ಚಿಕ್ಕಂದಿನ ವಿದ್ಯೆ ಪೊರೆಗುಂ ಚೂಡಾರತ್ನ” ಎಂದು ಹೇಳುತ್ತಾರೆ. ನಮ್ಮಲ್ಲಿ three R’s ಎಂದು ಏನು ಹೇಳುತ್ತೇವೆಯೋ ಎಂದರೆ, Reading, Writing and Rithameitic ಇವುಗಳನ್ನು ನಮ್ಮ ಹಿರಿಯರು ಚೆನ್ನಾಗಿ ಓದಿದ್ದರು. ಈ ಮೂರರಲ್ಲಿಯೂ ಅವರು ಸಂಪೂರ್ಣ ಜ್ಞಾನವನ್ನು ಪಡೆಯುತ್ತಿದ್ದರು. ಆದರೆ ಈಗ ನಮ್ಮ ಕಾಲದಲ್ಲಿ ೨೧ರವರೆಗೆ ಕೂಡ ಮಗ್ಗಿ ಬರುವುದಿಲ್ಲ. ೧೯ರ ಎಂಟರೆಷ್ಟೆಂದರೆ ೧೯ನ್ನೂ ೮ನ್ನು ಗುಣಾಕಾರ ಲೆಕ್ಕ ಹಾಕಿಕೊಂಡು ಮಾಡುವ ಸ್ಥಿತಿ ಬಂದಿದೆ. ಇದು ಮೂಲದಲ್ಲಿರುವ ನ್ಯೂನತೆಯನ್ನು ತೋರಿಸುತ್ತದೆ. ಇದನ್ನು ಹೋಗಲಾಡಿಸಬೇಕಾದರೆ ಹಿಂದೆ ನಾವು ಕೇಳಿರುವಂತೆ ಗುರುಕುಲಾಶ್ರಮದಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಗುರುಗಳು ತಮ್ಮ ಆಶ್ರಮದಲ್ಲಿ ಶಿಷ್ಯರಿಗೆ ಪಾಠ ಯಾವ ರೀತಿ ಹೇಳಿಕೊಟ್ಟು ಶಿಷ್ಯರಲ್ಲಿ ಜ್ಞಾನವನ್ನು ಬೆಳೆಸುತ್ತಿದ್ದರೋ ಹಾಗೆ ಅಂಥಾ ಶಿಕ್ಷಣದ ಮೇಲೆ ಮಕ್ಕಳು ಜ್ಞಾನವನ್ನು ರೂಢಿಸಿಕೊಂಡು ಬರುವಂತೆ ಮಾಡಬೇಕು.

ಈ ದಿವಸದ ವಿದ್ಯಾಭ್ಯಾಸ ವಿದ್ಯಭ್ಯಾಸವೇ ಅಲ್ಲ. ಇದನ್ನು ರೂಢ ಮೂಲವಾಗಿ ಬದಲಾಯಿಸಬೇಕಾಗಿದೆ. ಆದರೆ, ಉಪಾಧ್ಯಾಯ ವೃತ್ತಿಯಲ್ಲಿರುವ ಅನೇಕರು ತಮ್ಮ ಒಂದು ಜೀವನೋಪಾಯಕ್ಕಾಗಿ ಈ ದಿವಸ ಈ ವೃತ್ತಿಯನ್ನು ಅವಲಂಬಿಸಿಕೊಂಡಿದ್ದಾರೆ. ಇದನ್ನೇ ರೂಢ ಮೂಲವಾಗಿ ಬದಲಾಯಿಸಬೇಕಾಗಿದ್ದರೆ ತಾವು ಈ ಉಪಧ್ಯಾಯ ವೃತ್ತಿಯಲ್ಲಿ ಇರತಕ್ಕವರಿಗೆಲ್ಲಾ ಪೆನಷನ್‌ ಕೊಡಬೇಕಾಗಿ ಬರುತ್ತದೆ. ಹೊಸದಾಗಿ ಉಪಧ್ಯಾಯರುಗಳನ್ನು ತರಬೇತು ಮಾಡಬೇಕಾಗುತ್ತದೆ. ಈಗೇನೋ ತಾವು ಈ ಉಪಾಧ್ಯಾಯರುಗಳಿಗೆ ವಿ.ಟಿ.ಸಿ. ಎಂದು ಒಂದು ಟ್ರೈನಿಂಗ್‌ ಕೊಡುತ್ತಿದ್ದೀರಿ. ಅವರೂ ಕೂಡ ತಮ್ಮ ಮನೆಗಳನ್ನು ಬಿಟ್ಟು ಬಂದು ಅಲ್ಲಿ ಅಭ್ಯಾಸ ಮಾಡುತ್ತಾರೆ ಅದರಂತೆ ತಾವು ಸಂಬಳ ಕೂಡ ಆ ಶಿಕ್ಷನ ಕಾಲದಲ್ಲಿ ಕೊಡತ್ತಿದ್ದೀರಿ, ಆದರೆ, ಈ ಟ್ರೈನಿಂಗನ್ನು ಅವರು ಪಾಸ್‌ ಮಾಡದಿದ್ದರೆ ಮುಂದಿನ ಬಡ್ತಿ ವಗೈರೆಗಳು ಸಿಕ್ಕುವುದಿಲ್ಲ ಎನ್ನುವ ಒಂದು ನಿರ್ಬಂಧಕ್ಕಾಗಿ ಓದತಕ್ಕವರಾಗಿರುತ್ತಾರೆ. ಇಂಥ ವಿದ್ಯೆಯಿಂದ ನಮ್ಮ ತರುಣರಿಗೇನು ಪ್ರಯೋಜನವಿಲ್ಲ. ಆದ್ದರಿಂದ ಇದನ್ನು ರೂಢ ಮೂಲವಾಗಿ ಬದಲಾಯಿಸಿ ನಮ್ಮ ವಿದ್ಯಾಭ್ಯಾಸವನ್ನು ಹೊಸದಾಗಿ ಮಾರ್ಪಾಡು ಮಾಡಬೇಕಾಗಿದೆ.

ಎಂಥವರು ಈ ಉಪಾಧ್ಯಾಯ ವೃತ್ತಿಗೆ ಬರಬೇಕೆಂದರೆ, ಮಕ್ಕಳ ಹಸುವಿನಂಥ ಮನಸ್ಸನ್ನು ಅರ್ಥ ಮಾಡಿಕೊಳ್ಳುವಂಥವರು, ಆ ಮಕ್ಕಳ ಕೋಮಲ ಬುದ್ಧಿ ವಿಕಾಸವಾಗುವಂತೆ, ಅವರನ್ನು ಹೆದರಿಸದೆ, ಚಿಕ್ಕ ಮಕ್ಕಳಿಗೆ ಅವರ ಮನಸ್ಸನ್ನರಿತುಕೊಂಡು ಪಾಠ ಹೇಳತಕ್ಕಂತ ಚೈತನ್ಯ ವಿರುವವರು : ಅಂದರೆ ಮನುಶ್ಯಾಸ್ತ್ರವನ್ನು ಬಲ್ಲಂಥ ಹೆಚ್ಚಿನ ಪ್ರಪಂಚಜ್ಞಾನ ಉಳ್ಳವರನ್ನೇ ನೇಮಕ ಮಾಡಿಕೊಳ್ಳಬೇಕು. ಇಂಥ ವಿವೇಕಶಾಲಿಗಳನ್ನು ಇಡದಿರುವುದರಿಂದಲೇ ಈಗ ಮಕ್ಕಳು ಪಾಠಶಾಲೆಗೆ ಹೋಗಬೇಕೆಂದರೆ ಹೆದರಿ ಕಳ್ಳಬೀಳುವುದು. ಅಷ್ಟೇ ಏಕೆ, ಮರವನ್ನೂ ಹತ್ತಿ ಕುಳಿತುಕೊಳ್ಳುವುದುಂಟು. ಅಂತೂ ಇಂದಿನ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಕ್ರಮವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಬೇಕಾದ ಕಾಲ ಬಂದಿದೆ ಆದರೆ ಇದಕ್ಕೆಲ್ಲಾ ಹಣಬೇಕು. “ಎಲ್ಲಿಂದ ತರಬೇಕಪ್ಪ ಇದಕ್ಕೆಲ್ಲ ಹಣವನ್ನು?”…… ಎಂದು ತಾವು ಕೇಳಬಹುದು ಇದಕ್ಕೆಲ್ಲಾ ಮುನಿಸಿಪಾಲಿಟಿ, ಪಂಚಾಯಿತಿ, ಮುಂತಾದವುಗಳಿಂದಲೇ ಹಣ ಬರಬೇಕಾಗಿದೆಯೇ ವಿನಾ, ಅಂದರೆ ಜನತೆಯಿಂದಲೇ ಬರಬೇಕಾಗಿದೆಯೇ ವಿನಾ, ಹಣ ಆಕಾಶದಿಂದೇನೂ ಬೀಳುವುದಿಲ್ಲ. ಈಗ ತಾವು ದೇಶಾದ್ಯಂತವೂ ಸಮಗ್ರವಾಗಿ ವಸೂಲಿ ಮಾಡುತ್ತಿರುವ ಕಂದಾಯದ ಕಾಲದಲ್ಲಿ ರೂಪಾಯಿ ಒಂದಕ್ಕೆ ಎರಡಾಣೆಗಳಂತೆ ಎಜುಕೇಷನ್‌ ಸೆಸ್‌ ಎಂಬುದಾಗಿ ವಸೂಲು ಮಾಡುತ್ತಿದ್ದೀರಿ. ಹೀಗೆ ಹಳ್ಳಿ ಜನರಿಂದ ಲಕ್ಷಾಂತರ ರೂಪಾಯಿಗಳನ್ನು ವಸೂಲು ಮಾಡಿಕೊಂಡಾಗ್ಯು ಅವರಿಗೆ ನ್ಯಾಯವಾದ ರೀತಿಯಲ್ಲಿ ಅಗತ್ಯವಾಗಿ ತಾವು ಕೊಡಬೆಕಾದ ಪ್ರಾಥಮಿಕ ಶಿಕ್ಷಣವನ್ನೇ ಒಂದು ಕ್ರಮದಲ್ಲಿ ಅವರಿಗೆ ದೊರೆಯುವಂತೆ ಏರ್ಪಾಡು ಮಾಡಿಲ್ಲ. ಆದ್ದರಿಂದ ಇದಕ್ಕಾಗಿ ತಾವು ಒಂದು ಕ್ರಮವಾದ ಯೋಜನೆಯನ್ನೇ ತಯಾರಿಸಬೇಕು.

ಯಾವ ಯಾವ ವಿದ್ಯಾಭ್ಯಾಸಕ್ಕೆ ಎಷ್ಟೆಷ್ಟು ಹಣವನ್ನು ವಿನಿಯೋಗಿಸಬೆಕು, ಯಾವ ಯಾವ ಬಾಬಿಗೆ ಎಷ್ಟೆಷ್ಟು ಹಣವನ್ನು ಖರ್ಚು ಮಾಡಬೆಕು ಎಂಬುದರ ಮೇಲೆ ನಿಂತಿರುವ ವಿಚಾರ ಇದು. ಆದರೆ ಈ ದಿವಸ ಈ ವಿದ್ಯಾಭ್ಯಾಸ ಕ್ರಮವನ್ನೇ ಬದಲಾವಣೆ ಮಾಡಬೇಕಾದರೆ ನಮ್ಮಲ್ಲಿ ಸಾಕಷ್ಟು ಹಣವಿಲ್ಲ. ಸಾಕಷ್ಟು ಪಾಠ ಶಾಲೆಗಳಿಲ್ಲ. ಓದತಕ್ಕ ಹುಡುಗರಿಗೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರುವವರಿಗೆ ಸ್ಥಾನಗಳೇ ದೊರೆಯುತ್ತಿಲ್ಲ.

ಈಗ ಇರತಕ್ಕ ವಿದ್ಯಾಭ್ಯಾಸದ ಪದ್ಧತಿಯಲ್ಲಿ ನ್ಯೂನತೆಗಳು ಜಾಸ್ತಿ ಇವೆ. ಈ ನ್ಯೂನತೆಗಳನ್ನೆಲ್ಲಾ ಸರಿಪಡಿಸುವಾಗ ಇರತಕ್ಕ ಸಿಬ್ಬಂದಿಗೆ ಒಂದೂ ಕಿರುಕುಳಕೊಡದ ರೀತಿಯಲ್ಲಿ ನಾವು ಇದನ್ನೇ ಬದಲಾವಣೆ ಮಾಡಬೆಕಾಗಿದೆ. ಈಗ ಇರತಕ್ಕ ಆರ್ಥಿಕ ದುಸ್ಥಿತಿಯಲ್ಲಿ ಈ ಅಧ್ಯಾಪಕ ವರ್ಗದವರನ್ನೇ ಈಗ ಎತ್ತಿ ಹಾಕಿದ ಪಕ್ಷಕ್ಕೆ ನಮ್ಮ ಮೇಲೆ ಇದರ ಪರಿಣಾಮ ಭೀಕರವಾಗುತ್ತದೆ. ಆದ್ದರಿಂದ ಮುಂದೆ ಉಪಾಧ್ಯಾಯರನ್ನು ಸೇರಿಸಿಕೊಳ್ಳತಕ್ಕ ಕಾಲದಲ್ಲಿ ಉತ್ತಮ ಮಟ್ಟದ ವಿದ್ಯಾವಂತರನ್ನೇ ಸೇರಿಸಿಕೊಳ್ಳುವಂಥ ಏರ್ಪಾಡು ಮಾಡಬೆಕು, ಎಂದು ಹೇಳಿ, ಈ ಖೋತಾ ಸೂಚನೆಯನ್ನು ಸಮರ್ಥಿಸುತ್ತೇನೆ.

ಲೆವಿ ವ್ಯವಸ್ಥೆ

೨೩ ಅಕ್ಟೋಬರ್ ೧೯೫೨

ಸ್ವಾಮಿ, ನಾವು ಆಹಾರ ನೀತಿಯ ವಿಷಯದಲ್ಲಿ, ಈಗಿರುವ ಆಹಾರ ವ್ಯವಸ್ಥೆಯನ್ನು ಮತ್ತು ಲೆವಿ ವ್ಯವಸ್ಥೆಯನ್ನು ಚರ್ಚಿಸಿ ಯಾವುದು ಸೂಕ್ತವೆಂಬುದನ್ನು ಹೇಳಬೇಕೆಂದು ಒಂದು ಸಮಸ್ಯೆ ಬಂದಿದೆ. ಈ ಸಮಸ್ಯೆಯನ್ನು ಚರ್ಚಿಸುತ್ತಿರುವುದು ಇದು ಎರಡನೆಯ ದಿವಸ. ಇದುವರೆಗೆ ನಡೆದ ಚರ್ಚೆಯಲ್ಲಿ ಅನೇಕ ಮಾನ್ಯ ಸದಸ್ಯರು ತಮ್ಮ ಸಲಹೆಗಳನ್ನು ಕೊಟ್ಟಿದ್ದಾರೆ. ವಿರೋಧ ಪಕ್ಷದವರು ತಮ್ಮ ಸಲಹೆಗಳನ್ನು ಕೊಡುವುದಕ್ಕೆ ಸರ್ಕಾರದವರು ಒಂದು ವರದಿಯನ್ನು ಸಭೆಯ ಮುಂದಿಡುತ್ತೇವೆಂದು ಹೇಳಿ ಅದನ್ನು ಸಕಾಲದಲ್ಲಿ ಕೊಡದೇ ಇದ್ದುದರಿಂದ ತಡವಾಗಿ ಮತ್ತೆ ಇದರ ಚರ್ಚೆಯನ್ನು ಮುಂದುವರಿಸಬೆಕಾಯಿತು. ಏನೇ ಇರಲಿ ಆಹಾರ ಸಮಸ್ಯೆ ಇಂದು ಬಹಳ ಮುಖ್ಯವಾದ ಸಮಸ್ಯೆ. ನಾನು ಸಮಸ್ಯೆಯನ್ನು ಒಂದು ಪಕ್ಷದ ದೃಷ್ಟಿಯಿಂದ ನೋಡದೆ ಹೋದರೂ ಒಂದು ವಿಷಯವನ್ನು ಹೇಳಬೆಕಾಗಿದೆ. ಕಳೆದ ಎಂಟು ಹತ್ತು ವರ್ಷಗಳ ಅನುಭವದಿಂದ ನೋಡಿದರೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಇಂಥ ಒಂದು ಜೀವಂತ ಸಮಸ್ಯೆಯ ಬಗ್ಗೆ ಒಂದು ದೃಢ ನಿರ್ಧಾರವನ್ನು ಕೈಗೊಳ್ಳದೆ, ಕ್ಷಣ ಕ್ಷಣಕ್ಕೂ ತನ್ನ ನೀತಿಯನ್ನು ವರ್ಷ ವರ್ಷವೂ ಬದಲಾಯಿಸಿಕೊಂಡು ಹೋಗುತ್ತಿರುವುದೇ ದೇಶದಲ್ಲಿ ವ್ಯವಸಾಯ ಮಾಡುವ ರೈತನ ಅಧೋಗತಿಗೂ, ಆಹಾರ ಕ್ಷೋಭೆಗೂ ಕಾರಣವೆಂದು ನಾವು ಈ ದಿವಸ ಹೇಳಬೇಕಾಗಿದೆ.

ಕೆ. ಹನುಮಂತಯ್ಯ : ಮಳೆ ಒಂದೇ ರೀತಿ ಸರಿಯಾಗಿ ಬರುವುದಿಲ್ಲ.

ಶ್ರೀ ಗೋಪಾಲಗೌಡ : ನಿಜ, ಮಳೆ ಸಕಾಲದಲ್ಲಿ ಬರುವುದಿಲ್ಲ. ಏನೇ ಇರಲಿ, ಪ್ರಜೆಗಳೆಲ್ಲಾ ಆಹಾರ ಮತ್ತು ಬಟ್ಟೆಯನ್ನೂ ಒದಗಿಸುವುದು ಎಲ್ಲ ನಾಗರಿಕ ಸರ್ಕಾರಗಳ ಜವಾಬ್ದಾರಿಯೆಂದು ಸಾಧ್ಯವಿಲ್ಲ. ಆದರೆ, ಈ ದಿವಸ ನಮ್ಮ ಮುಂದೆ ಸರ್ಕಾರದವರು ತರುತ್ತಿರುವ ಯಾವ ವಿಷಯದಲ್ಲೇ ಆಗಲಿ, ಅವರ ನೀತಿ ಎಂಥಾದ್ದು ಆಗಿರುತ್ತದೆ ಎಂಬುದನ್ನು ಒಂದೊಂದನ್ನಾಗಿ ಪರಿಶೀಲನೆ ಮಾಡುತ್ತಾ ಹೋದರೆ, ಈ ದಿವಸ ಕಂಟ್ರೋಲೆಂಬುದು ಇರಬೇಕೇ ಇರಬೇಡವೇ, ಹೆಂಡ ಇರಬೇಕೇ ಅಥವಾ ಇರಬಾರದೇ? ಸೇಲ್ಸ್‌ಟ್ಯಾಕ್ಸ್‌ ವಿಚಾರ ತೆಗೆದುಕೊಂಡರೆ ಸಿಂಗಲ್‌ ಪಾಯಿಂಟ್‌ ಟ್ಯಾಕ್ಸ್‌ ಇರಬೇಕೇ? ಇರಬಾರದೇ? ಎಂಬುದಾಗಿ. ಹೀಗೆ ಇಂಥ ವಿಷಯಗಳನ್ನೆಲ್ಲ ಒಂದು ಪಟ್ಟಿ ಮಾಡಿ ನೋಡುವುದಾದರೆ, ತಾನು ತುಳಿಯತಕ್ಕ ಪ್ರತಿಯೊಂದು ಹೆಜ್ಜೆಗೂ ಈ ಕಾಂಗ್ರೆಸ್‌ ಸರಕಾರದಲ್ಲಿ ಯಾವ ಒಂದು ವಿಷಯದಲ್ಲೂ ಒಂದು ನಿರ್ದಿಷ್ಟವಾದ ನೀತಿ ಇರುವುದಿಲ್ಲವೆಂದು ಹೇಳಬಹುದು. ಈ ಆಹಾರ ಕೊರತೆಯ ಸಮಸ್ಯೆಗೆ ಅನೇಕ ಅಸಂಬದ್ಧವಾದ ವಿಷಯಗಳನ್ನೆಲ್ಲಾ ಗುಂಟುಹಾಕಿ, ಈ ಸಮಸ್ಯೆಗೆ ನ್ಯಾಯವಾದ ಪರಿಹಾರಮಾರ್ಗವನ್ನು ಕಂಡುಹಿಡಿಯಲು ಸಾಧ್ಯವಿಲ್ಲದೆ, ಆಹಾರ ಮಂತ್ರಿಗಳು ಪ್ರತಿಯೊಂದು ವಿಷಯದಲ್ಲೂ ತೀರ ಅನುಮಾನಾಸ್ಪದವಾದಂಥ ನೀತಿಯ ಮೇಲೆ ನಡೆಯುತ್ತಿರುವುದನ್ನು ನೋಡಿದರೆ, ಇದು ಬೀಟಿಂಗ್‌ ಅರೌಂಡ್‌ ದಿ ಬುಷ್ ಎಂದು ಹೇಳುವಂತಿದೆ. ಇದು ತೀರ ನಿಂದಾಸ್ಪದ ವಿಚಾರ. ಇಲ್ಲಿಗೆ ಎಂಟು ಹತ್ತು ವರ್ಷಗಳಿಂದಲೂ ನಾವು ಏನೇನು ಕಷ್ಟಗಳನ್ನು ಅನುಭವಿಸುತ್ತಿದ್ದೇವೆಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಿರತಕ್ಕ ವಿಚಾರಗಳೇ ಆಗಿವೆ. ಈ ನಾನಾ ತೊಂದರೆಗಳಿಗೆಲ್ಲಾ ಮುಖ್ಯ ಕಾರಣಗಳಾವುವು ಎಂಬುದನ್ನು ಅಂಕಿ ಅಂಶಗಳ ಸಹಿತ ಕಂಡು ಹಿಡಿದು, ಇದನ್ನು ದಿನಕ್ರಮೇಣದಲ್ಲಿ ಕಡಿಮೆ ಮಾಡಬೇಕಾದದ್ದು ಆಡಳಿತ ನಡೆಸುತ್ತಿರುವವರ ಒಂದು ಮುಖ್ಯ ಜವಾಬ್ದಾರಿಯಾಗಿತ್ತು ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಆದರೆ ಇಂಥ ಗಂಡಾಂತರದ ಕಾಲದಲ್ಲಿ ಈ ಆಹಾರ ಕೊರತೆಯನ್ನು ಎದುರಿಸತಕ್ಕ ಸಂದರ್ಭದಲ್ಲಿ ಎಲ್ಲ ಪಾರ್ಟಿಗಳ ಸಹಕಾರವನ್ನು ಕೋರತಕ್ಕದ್ದು ನ್ಯಾಯವಾದ ವಿಷಯವೇನೋ ಹೌದು. ಆದರೆ, ಈ ಆಹಾರ ಕೊರತೆ ಹೇಗೆ ಸಂಭವಿಸಿತೆಂಬುದನ್ನು ಈ ದಿವಸ ವಿಚಾರ ಮಾಡಲು ನಾವು ಯಾವುದನ್ನು ಮುಖ್ಯವಾಗಿ ಗಮನಿಸಬೇಕಾಗಿತ್ತೋ ಅದನ್ನು ಕೈಬಿಟ್ಟುಕೊಂಡು, ಈ ಕೊರತೆಯ ಸಮಸ್ಯೆಯ ಜೊತೆಗೆ ಆಹಾರದ ಹಂಚಿಕೆ ವಿಷಯವನ್ನು ಮಿಶ್ರ ಮಾಡಿರುವುದರಿಂದ ಈ ಬಗ್ಗೆ ನಾವು ಯಾವ ಒಂದು ನಿರ್ದಿಷ್ಟವಾದ ತೀರ್ಮಾನಕ್ಕೂ ಬರಲಾರದೆ ಇದು ಇಲ್ಲಿಯವರೆಗೂ ಮುಂದುವರೆದುಕೊಂಡು ಬಂದಿರುತ್ತದೆ ಎಂಬುದಾಗಿ ಕಂಡುಬರುತ್ತಿದೆ. ಈ ಎರಡರ ಜೊತೆಗೆ ಹೆಚ್ಚು ಆಹಾರ ಬೆಳೆಯಬೇಕೆಂಬ ಮತ್ತೊಂದು ಅಂಶವನ್ನು ಸೇರಿಸಿರುವುದರಿಂದ, ಈ ಸಮಸ್ಯೆ ಇನ್ನೂ ಮತ್ತಷ್ಟು ತೊಡಕಾಗಿ ಹೋಗಿದೆ. ಆದರೆ, ನಾವು ಈ ದಿವಸ ಮುಖ್ಯವಾಗಿ ವಿಚಾರ ಮಾಡಬೇಕಾಗಿರತಕ್ಕದ್ದು ಆಹಾರ ಕೊರತೆಯನ್ನು ನೀಗಲು ನಾವು ಏನು ಒಂದು ನಿರ್ದಿಷ್ಟವಾದ ನೀತಿಯನ್ನು ಅನುಸರಿಸ ಬೇಕಾಗಿರುತ್ತದೆಯೆಂಬ ಬಗ್ಗೆ ಒಂದು ತೀರ್ಮಾನಕ್ಕೆ ಬರತಕ್ಕದ್ದು. ಇದಕ್ಕಾಗಿ ನಾವು ಇಲ್ಲಿಯವರೆಗೂ ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡುತ್ತಾ ಬಂದಿದ್ದೇವೆ. ಆದರೆ ಏನು ಪ್ರಯೋಜನವಾಗಿಲ್ಲ. ಇಷ್ಟೊಂದು ಆಪಾರ ಹಣವನ್ನು ಖರ್ಚು ಮಾಡಿದ್ದಾಗ್ಯೂ ರೈತಾಪಿ ಜನರಿಗೆ ಏನು ಉತ್ತೇಜನ ದೊರೆಯಬೇಕಾಗಿತ್ತೋ ಅದು ಅವರಿಗೆ ದೊರೆಯದೆ ಅವರಿಗೆ ಇದರಿಂದ ಏನೊಂದು ಉಪಕಾರವಾದಂತಾಗಲಿಲ್ಲ. ಈ ಒಂದು ಮುಖ್ಯ ಕಾರಣದಿಂದ ಆಹಾರ ಧ್ಯಾನ್ಯಗಳ ಬೆಳೆ ದಿನೇ ದಿನೇ ಹೆಚ್ಚಾಗುವುದಕ್ಕೆ ಬದಲಾಗಿ ದಿನೇ ದಿನೇ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಹಿಪ್ಪನೇರಳೆ ವ್ಯವಸಾಯವು ಈ ದಿವಸ ೨೨ ಸಾವಿರ ಎಕರೆಗಳವರೆಗೂ ಮುಂದುವರಿಸಲ್ಪಟ್ಟಿದೆ. ಕೊಳ್ಳೆಗಾಲದವರೆಗೂ ಬರೀ ಹಿಪ್ಪನೇರಳೆ ವ್ಯವಸಾಯವೇ ಮುಖ್ಯವಾದ ವ್ಯವಸಾಯವಾಗಿ ಹೋಗಿದೆ. ಅದೇ ರೀತಿ ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆಯ ಬೆಳೆಯೂ, ಚಿತ್ರದುರ್ಗ ಜಿಲ್ಲೆಯಲ್ಲಿ ನೆಲಗಡಲೇ ಕಾಯಿಯ ವ್ಯವಸಾಯವು ಅಧಿಕ ಪ್ರಮಾಣದಲ್ಲಿ ಮುಂದುವರಿಯುತ್ತಿರುವುದರಿಂದ ಆಹಾರ ಧಾನ್ಯಗಳ ಉತ್ಪತ್ತಿಯೂ ದಿನೇ ದಿನೇ ಕಡಿಮೆಯಾಗುತ್ತಿದೆ. ಹಣವೊಂದಿದ್ದರೆ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಯಾವ ೪ ಸಾಮಾನಾದರೂ ಸಿಕ್ಕಿಯೇ ಸಿಕ್ಕುತ್ತದೆಯೆಂಬ ಭರವಸೆ ಜನರಲ್ಲಿ ಉಂಟಾದ ಕಾರಣ ಅವರು ರಾಗಿ, ಜೋಳ ಇತ್ಯಾದಿ ಆಹಾರ ಧಾನ್ಯಗಳನ್ನು ಬೆಳೆಯುವುದಕ್ಕೆ ಬದಲಾಗಿ ಕಮರ್ಷಿಯಲ್‌ ಕ್ರಾಪ್ಸ್‌ಗಳನ್ನು ಬೆಳೆಯಲು ಪರಾರಂಭಿಸಿದ್ದಾರೆ.

ಈ ಕಾರಣದಿಂದಲೇ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ಕಮರ್ಷಿಯಲ್‌ ಬೆಳೆ ದಿನ ದಿನಕ್ಕೂ ಅಧಿಕವಾಗುತ್ತಾ ಬರುತ್ತಿದೆ. ಅದಕ್ಕಾಗಿ ನಾವು ಎಂದಿನವರೆಗೆ ಈ ಕಂಟ್ರೋಲುಗಳನ್ನು ಇಟ್ಟುಕೊಂಡಿರುತ್ತೇವೆಯೋ ಅಂದಿನ ತನಕವೂ ಈ ಬೆಳೆಗಳ ಮೇಲೆ ಒಂದು ಹತೋಟಿಯನ್ನು ಇಟ್ಟುಕೊಳ್ಳಲೇಬೇಕು. ಎಲ್ಲೆಲ್ಲಿ ಆಹಾರಧಾನ್ಯಗಳ ಬೆಳೆಯನ್ನು ಉದಾಸೀನಮಾಡಿ ಬೇರೆ ವಿಧವಾದ ಬೆಳೆಗಳನ್ನು ತೆಗೆಯುತ್ತಿದ್ದಾರೆಂಬ ಬಗ್ಗೆ ಸರ್ಕಾರದವರು ನಿಗಾ ಇಡಬೇಕು. ಹಾಗೆ ಮಾಡುವುದರ ಜೊತೆಗೆ ನಮಗೆ ಯಾವ ವಸ್ತುಗಳ ಅವಶ್ಯಕತೆ ಹೆಚ್ಚಾಗಿರುತ್ತದೋ ಅಂಥ ಬೆಳೆಗೆ ಹೆಚ್ಚಿಗೆ ಸೌಕರ್ಯಗಳನ್ನು ಕೊಡದೆ ವಿಶ್ವೇಶ್ವರಯ್ಯ ನಾಲಾ ಕೆಳಗೆ ಕಬ್ಬಿನ ಬೆಳೆಗೇ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟು ಸಕ್ಕರೆ ಉತ್ಪತ್ತಿ ಮಾಡುವುದಕ್ಕೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದಾರೆ.

ಈ ಆಹಾರಕ್ಕೆ ಸಂಬಂಧಪಟ್ಟ ಬೆಳೆಗಳನ್ನು ಹೆಚ್ಚು ಮಾಡಬೇಕಾದದ್ದು ನಮ್ಮ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಆದಾಗ್ಯೂ ಇದನ್ನು ಸರ್ಕಾರ ಮಾಡುತ್ತಿಲ್ಲವೆಂದು ನಾನು ಸ್ಪಷ್ಟವಾಗಿ ಹೇಳಬೇಕಾಗಿದೆ. ತಾವು ಇಲ್ಲಿಯತನಕ ಜಿ. ಎಂ. ಎಪ್‌ಯೋಜನೆಯ ಬಗ್ಗೆ ಮತ್ತು ಸಬ್‌ಸಿಡಿಗೆಂದು ಒದಗಿಸಲಾಗಿದ್ದ ಮೊಬಲಗು ರೈತನಿಗೆ ನೇರವಾಗಿ ಸೇರಿ ಖರ್ಚಾಗಿದ್ದ ಪಕ್ಷದಲ್ಲಿ ಇಂದು ಜಮೀನು ಹೀಗೆ ಹಾಳುಬಿದ್ದಿರಲು ಅವಕಾಶವೇ ಇರುತ್ತಿರಲಿಲ್ಲ. ಕಂದಾಯವನ್ನು ಕೊಟ್ಟಿದ್ದಾಗ್ಯೂ ಸಹ ಜಮೀನುಗಳು ಸಾಗುವಳಿಯಾಗದೆ ಹಾಗೆಯೇ ಪಾಳುಬಿದ್ದಿರುತ್ತದೆ.

ಹೀಗೆ ನ್ಯಾಯವಾಗಿರತಕ್ಕ ವಿಚಾರಗಳನ್ನೆಲ್ಲಾ ರೆಲೆವೆಂಟಲ್ಲವೆಂದು ಹೇಳುತ್ತ ಕೇವಲ ಇರ್ರೆಲೆವೆಂಟ್‌ ಆಗಿರತಕ್ಕ ಅಂಶಗಳಿಗೆ ಹೆಚ್ಚಿನ ನಿಗಾ ಕೊಡುತ್ತಿರುವುದರಿಂದ ಈ ಸಮಸ್ಯೆಯನ್ನು ಇಲ್ಲಿಯ ತನಕವೂ ಬಗೆಹರಿಸಲು ಸಾಧ್ಯವಾಗಿರುವುದಿಲ್ಲವೆಂದು ನಾನು ಹೇಳುತ್ತೇನೆ. ಮನಸ್ಸು ಬಿಚ್ಚಿ ಈ ವಿಷಯಗಳನ್ನೆಲ್ಲಾ ಇದ್ದಕ್ಕಿದ್ದ ಹಾಗೆಯೇ ಇಟ್ಟುಕೊಂಡಿದ್ದಾರೆಯೇ ಹೊರತು ಮತ್ತೇನೂ ಇಲ್ಲ. ಅವರು ಈ ಕಾರಣಕ್ಕಾಗಿ ೧೨ ಲಕ್ಷ ಪಲ್ಲ ಶೇಖರಣೆ ಮಾಡ ಬೇಕಾಗಿರುತ್ತೆಂದು ಹೇಳಿದ್ದರೂ, ಅದು ಸಾಲದೇ ಇರುವುದರಿಂದ ಬಹಳ ಮಟ್ಟಿಗೆ ೨೦ ಲಕ್ಷ ಪಲ್ಲಗಳನ್ನಾದರೂ ಶೇಖರಣೆ ಮಾಡಬೇಕಾಗಿದೆ. ಹೀಗೆ ಧಾನ್ಯಗಳನ್ನು ತರಿಸಿಕೊಂಡು ತಿನ್ನುವಂತಹ ಜನರು ಕೇವಲ ಬೆಂಗಳೂರು, ದಾವಣಗೆರೆ ಮತ್ತು ಕೆ. ಜಿ. ಎಫ್‌- ಈ ಮೂರು ಸ್ಥಳಗಳಲ್ಲೇ ಅಲ್ಲದೆ, ಇನ್ನೂ ಬೇರೆ ಕಡೆಗಳಲ್ಲಿ ಹೆಚ್ಚಾಗಿಯೇ ಇದ್ದಾರೆ. ನುರಾರು ಹಳ್ಳಿಗಳಲ್ಲಿ ಕೊಂಡುತಿನ್ನತಕ್ಕಂಥ ಜನಗಳಿದ್ದರೂ ಅವರಿಗೆ ಈ ಕಾಳನ್ನು ಸರಬರಾಜು ಮಾಡದೆ ಗುರಿಮಾಡಿದ್ದೀರಿ ಅವರಿಗೆ ಈ ಕಂಟ್ರೋಲ್‌ನಲ್ಲಿ ದವಸ ಸಿಕ್ಕುತ್ತಿಲ್ಲ. ಹೀಗೆಲ್ಲಾ ಆಗಿ ದಿವಸ ಕಂಟ್ರೋಲ್ಎಂಬುದು ಒಂದು ಭಯಾನಕ ಸ್ಥಿತಿಗೆ ಬಂದು ಪೋಲಿಸಿನವರು ಮನೆಗಳಿಗೆ ನುಗ್ಗಿ ಜನರು ತಿನ್ನಲಿಕ್ಕಾಗಿ ಬೆಳಿದಿಟ್ಟುಕೊಂಡಿದ್ದುದನ್ನೆಲ್ಲಾ ಅವರಿಗೆ ತಿನ್ನಲು ಬಿಡದಂತೆ ಅದನ್ನೆಲ್ಲಾ ಕಿತ್ತುಕೊಂಡುಹೋಗಿ ಬೇರೆ ಎಲ್ಲಿಯೋ ಇರತಕ್ಕವರಿಗೆ ಕೊಡುತ್ತಿದ್ದಾರಲ್ಲ ಎಂಬ ಒಂದು ಭಯಾನಕ ಕೂಗು ಕಳೆದ ೧೦ ವರ್ಷಗಳಿಂದಲೂ ಕೇಳಿಬರುತ್ತಿದೆಯೇ ವಿನಾ ಅದಕ್ಕೆ ಯಾವ ರೀತಿಯಲ್ಲೂ ಒಂದು ಸೂಕ್ತವಾದ ಪರಿಹಾರ ಮಾರ್ಗವನ್ನೂ ಕಂಡುಹಿಡಿಯಲು ಆಗಿಲ್ಲ.

ಅನೇಕ ಸದಸ್ಯರು ದರದ ವಿಷಯವಾಗಿ ಮಾತನಾಡುತ್ತ ಈಗ ತಾವು ಕೊಡುತ್ತಿರುವ ಧಾರಣೆಗಳು ಸರಿಯಾಗಿಲ್ಲವೆಂದು ತಿಳಿಸಿರುತ್ತಾರೆ. ಹೀಗೆ ಇದೇ ರೀತಿಯಾಗಿ ತಾವು ಅನುಸರಿಸುತ್ತಿರುವ ನೀತಿಯಲ್ಲಿ ಅನೇಕ ಲೋಪದೋಷಗಳು, ನ್ಯೂನತೆಗಳಿರುತ್ತವೆ. ಒಂದು ಮಗುವಿಗೆ ನೂರಾರು ಇಂಜಕ್ಷನ್‌ಗಳನ್ನು ಕೊಟ್ಟು, ಬಂದಿರತಕ್ಕ ಕಾಯಿಲೆಯನ್ನು ವಾಸಿಮಾಡಲಿಕ್ಕಾಗದೆ ಅದನ್ನು ಕೊನೆಗೆ ದಫನ್‌ ಮಾಡತಕ್ಕ ರೀತಿಯಲ್ಲಿ, ಈ ಸಮಸ್ಯೆಯನ್ನು ಕೂಡ ತಾವು ಇಲ್ಲಿಯತನಕವೂ ಒಂದು ಸುಧಾರಣೆಗೆ ತರಲಾಗದೆ ಇದನ್ನು ಈ ಮಟ್ಟಕ್ಕೆ ತಂದಿರುವುದಾಗಿದೆ. ಹೀಗೆ ಏನೊಂದು ಪ್ರಯೋಜನಕರವಾದ ಸುಧಾರಣೆಯನ್ನು ತಾರದೇ ಇದ್ದಾಗ್ಯೂ ಮುಖ್ಯಮಂತ್ರಿಗಳಾಗಿರತಕ್ಕವರು ಬೊಂಬಾಯಿಗೆ ಹೋಗಿ, ಅಲ್ಲಿ ‘ನಾನು ಬಹಳ ಪಾಪ್ಯುಲರ್ ಆಗಿಬಿಟ್ಟಿದ್ದೇನೆ’ ಎಂದು ಹೇಳಿಕೊಳ್ಳಲು ಅವಕಾಶವಾಯಿತು. ಅಲ್ಲಿಗೆ ಹೋಗಿದ್ದಾಗ “ನಾನು ಕಂಟ್ರೋಲನ್ನು ತೆಗೆದುಹಾಕಿದ್ದರಿಂದ ಬಹಳ ಪಾಪ್ಯುಲರ್ ಆಗಿಬಿಟ್ಟಿದ್ದೇನೆ” ಎಂದು ಹೇಳಿಕೊಂಡಿರುವುದು ಅಷ್ಟೇನು ಸೂಕ್ತವಾಗಿದ್ದಂತೆ ಕಂಡುಬರುತ್ತಿಲ್ಲ.

ಈ ದಿವಸ ಉದ್ಭವಿಸಿರತಕ್ಕ ಪರಿಸ್ಥಿತಿಯಲ್ಲಿ ಈ ಕಂಟ್ರೋಲ್‌ ಎಂಬುದು ಒಂದು ದೊಡ್ಡ ಪೆಡಂಭೂತವಾಗಿರುತ್ತದೆಯೆಂದು ದೇಶದಾದ್ಯಂತ ಜನರೆಲ್ಲರೂ ಏಕಕಂಠದಿಂದ ಪ್ರಚಾರಕಾರ್ಯಗಳನ್ನು ಮಾಡುತ್ತಿದ್ದರೂ, ನನಗೆ ಇಂದು ಈ ಕಂಟ್ರೋಲನ್ನು ತೆಗೆದು ಹಾಕಬೇಕೆಂದು ಹೇಳತಕ್ಕ ಮನಸ್ಸು ಇಲ್ಲ. ನನಗೆ ಒಂದು ಪ್ಲಾನ್ಡ್‌ ಎಕಾನಮಿಯಲ್ಲಿ ವಿಶ್ವಾಸವಿದೆ. ಈ ದಿವಸ ಈ ಕಂಟ್ರೋಲನ್ನು ತೆಗೆದುಹಾಕಿ ಜನರಿಗೆ ತಿನ್ನಲಿಕ್ಕೆ ಅನ್ನವಿಲ್ಲದೆ ಅವರುಗಳನ್ನೆಲ್ಲಾ ಭಿಕ್ಷುಕರ ಕಾಲೋನಿಗೆ ಸೇರಿಸಬೇಕೆಂದು ಹೇಳುವುದಕ್ಕೆ ನಾನು ತಯಾರಾಗಿಲ್ಲ. ಜನರಿಗೆ ಅತ್ಯಗತ್ಯವಾಗಿ ಅವಶ್ಯಕವಿರತಕ್ಕ ಅನ್ನ, ಬಟ್ಟೆ ಮತ್ತು ಒಂದು ವಸತಿ ಸೌಕರ್ಯ ಇಷ್ಟನ್ನು ಪ್ರತಿಯೊಬ್ಬ ದೇಶದ ಪ್ರಜೆಗೂ ಕಲ್ಪಿಸಿಕೊಡತಕ್ಕದ್ದು ಪ್ರತಿಯೊಂದು ನಾಗರಿಕ ಸರ್ಕಾರದ ಕರ್ತವ್ಯವಾಗಿರುತ್ತದೆ. ದೇಶದ ಆರ್ಥಿಕ ಸ್ಥಿತಿಯು ತೀರ ಹದಗೆಟ್ಟು ಹೋಗಿ ಜನರು ತಮ್ಮ ಜೀವನಕ್ಕೆ ಮಳೆ ಬೆಳೆಗಳೇ ಮುಖ್ಯ ಕಾರಣವೆಂದು ಒಂದು ಅಸಂಬದ್ಧ ನಂಬಿಕೆಗೆ ಗುರಿಯಾಗಿ, ತಿನ್ನಲಿಕ್ಕಿಲ್ಲದೆ ದೇಶದಲ್ಲಿ ಎಲ್ಲಿ ನೋಡಲಿ ಅಸಮಾಧಾನವೇ ಎದ್ದು ಕಾಣುತ್ತಿದೆ ಪರಿಸ್ಥಿತಿಯ ನಿಜಸ್ವರೂಪ ಹೀಗಿರುವಾಗ ಇದಕ್ಕೆ ಒಂದು ಸೋಗು ಹಾಕಿಕೊಂಡು ಜನರಿಗೆ ತಿನ್ನಲು ಸಾಕಷ್ಟು ಆಹಾರ ಸಾಮಗ್ರಿಗಳನ್ನು ಒದಗಿಸಲು ಸಾಮರ್ಥ್ಯವಿಲ್ಲದೆ ಈ ದಿವಸ ಈ ಕಂಟ್ರೋಲುಗಳನ್ನು ಸಡಿಲ ಮಾಡುತ್ತೇವೆಂದು ಹೇಳುತ್ತಿರುವುದನ್ನು ನೋಡಿದರೆ, ದೇಶದಲ್ಲಿ ಅತಿಜಾಗ್ರತೆಯಾಗಿ ಸಂಭವಿಸಲಿರುವ ದೊಡ್ಡ ಕ್ಷಾಮದ ಮಾರಿಗೆ ದೇಶದ ಜನತೆಯನ್ನು ಬಲಿಗೊಡಲು ಇದೊಂದು ಸನ್ನಾಹವೆಂದು ಕಂಡುಬರುತ್ತಿದೆ.