ತೆರಿಗೆ ನೀತಿ

೨೪ ಅಕ್ಟೋಬರ್ ೧೯೫೨

ಇಂಥ ಒಂದು ಅಪ್ರೊಪಿಯೇಷನ್‌ ಬಿಲ್‌ ಮಂಡಿಸಲು ರಾಜ್ಯಾಂಗದಲ್ಲಿ ಅವಕಾಶ ಕೊಡಲ್ಪಟ್ಟಿದೆ. ಅದರಲ್ಲಿ ಇದಕ್ಕೆ ಏನು ಕಾರಣ ಕೊಟ್ಟಿದ್ದಾರೆಂದರೆ, ವರ್ಷ ವರ್ಷವೂ ಆಯವ್ಯವಯದ ಅಂದಾಜು ಮಾಡುವಾಗ, ಅಂದಾಜು ಮಾಡಿದ ಹಣಕ್ಕಿಂತ ಹೆಚ್ಚು ಖರ್ಚು ಮಾಡುವ ಸಂದರ್ಭಗಳು ಬಂದರೆ, ಅಥವಾ ಲೆಕ್ಕದಲ್ಲಿ ಹೆಚ್ಚು ಕಡಿಮೆಯಾಗಿ ಹಣ ಹೆಚ್ಚು ಕೊಡಬೆಕಾದ ಸಂದರ್ಭ ಬಂದರೆ, ಅಂಥ ಸಮಯದಲ್ಲಿ ಇಂಥ ಒಂದು ಮಸೂದೆಯನ್ನು ಶಾಸನಸಭೆಯ ಮುಂದಿಟ್ಟು ಅನುಮತಿ ಪಡೆಯಬೇಕಾದದ್ದು ನಿಯಮಬದ್ಧವಾದ ಕೆಲಸವೆಂದು ತಿಳಿಸಿದ್ದಾರೆ. ಆದಕಾರಣ ಈ ಹೊತ್ತು ಈ ಸಭೆಯ ಮುಂದೆ ಈ ಮಸೂದೆಯನ್ನಿಟ್ಟಿದ್ದಾರೆ. ಇದರಲ್ಲಿ ಒಂದು ಕೋಟಿ ಎಂಬತ್ತಾರು ಲಕ್ಷ ಚಿಲ್ಲರೆ ರೂಪಾಯಿಗಳಷ್ಟು ಹಣವನ್ನು ಸರ್ಕಾರದವರು ಕೇಳಿದ್ದಾರೆ.

ನಾನು ಕೆಲವು ವಿಷಯಗಳಲ್ಲಿ ನನ್ನ ಕೆಲವು ಸಲಹೆಗಳನ್ನು ಕೊಡುತ್ತೇನೆ. ಈ ಮಸೂದೆ ಬಂದಿರುವಾಗ ಈ ಹಣವನ್ನು ನಾವು ಕೊಡುವುದಕ್ಕಾಗುವುದಿಲ್ಲ ಎಂದು ಹೇಳುವ ಹಾಗಿಲ್ಲ. ಅಥವಾ ಶ್ರೀಮಾನ್‌ನಾಗಪ್ಪ ಶೆಟ್ಟರು ಹೇಳಿದ ಹಾಗೆ, ಹಂಪಿಗೆ ಇಟ್ಟಿರುವ ಹಣವನ್ನು ಅದಕ್ಕೇ ಇಡಿ, ಬೇರೆಯದಕ್ಕೆ ಹಾಕಬೇಡಿ ಎಂದು ಹೇಳುವುದಕ್ಕಾಗುವುದಿಲ್ಲ. ಈಗ ಬದಲಾವಣೆ ಮಾಡಿ ಅಥವಾ ಕೊಡುವುದಕ್ಕಾಗುವುದಿಲ್ಲ ಎಂದು ಹೇಳುವ ವ್ಯರ್ಥಾಲಾಪವನ್ನು ಮಾಡುವುದಕ್ಕೆ ಹೋಗುವುದಿಲ್ಲ. ಮುಖ್ಯವಾಗಿ ದೇಶದ ಹಣವನ್ನು ಖರ್ಚು ಮಾಡತಕ್ಕ ಬಗ್ಗೆ, ಮಾನ್ಯ ಗೆಳೆಯರಾದ ಶ್ರೀಮಾನ್ದೇವರಾಜ ಅರಸುರವರು ಮಾತನಾಡುತ್ತಾ ಕೆಲವು ಮೂಲಭೂತವಾದ ಅಂಶಗಳ ವಿಷಯ ಮಾತನಾಡಿದ್ದಾರೆ. ವಿರೋಧ ಪಕ್ಷದ ಸದಸ್ಯರ ಭಾಷಣಗಳಿಗೆ ಉತ್ತರವಾಗಿ ರೀತಿ ಹೇಳಿದ್ದಾರೆಂದು ನನ್ನ ಭಾವನೆ. ಕಂದಾಯ ಹಾಕಲೇಬಾರದು. ಸರ್ಕಾರದಲ್ಲಿ ಸರಿಯಾದ ವ್ಯವಸ್ಥೆ ಇರಬೇಕು, ಕಂದಾಯ ಹಾಕದೇ ಸರ್ಕಾರವನ್ನು ನಡೆಸಬೇಕು, ಖೋತಾ ಬಡ್ಜೆಟ್‌ಎಂಬುದನ್ನು ಅರ್ಥ ಮಾಡಿಕೊಂಡಿಲ್ಲ, ಖೋತಾ ಬಡ್ಜೆಟ್‌ ಅಂದ ತಕ್ಷಣ ಕೆಲವರಿಗೆ ವ್ಯಥೆ ಮತ್ತು ಭಯ ಉಂಟಾಗುತ್ತದೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ನಿಜ, ಖೋತಾ ಬಡ್ಜೆಟ್‌ ಇದ್ದರೆ ಸರ್ಕಾರ ಎಚ್ಚರಿಕೆಯಿಂದ ಹೋಗುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಆದರೆ ಖೋತ ಬಡ್ಜೆಟ್ಟೇ ಆಯವ್ಯಯದಲ್ಲಿ ಪ್ರಾಮುಖ್ಯವಾದುದು ಎಂದು ಹೇಳಿ ಯಾವಾಗಲೂ ಖೋತಾ ಬಡ್ಜೆಟ್‌ನ್ನೇ ಇಟ್ಟುಕೊಳ್ಳುತ್ತೇನೆ ಎನ್ನುವುದು ನ್ಯಾಯವಲ್ಲ.

ತೆರಿಗೆ ಹಾಕದೆ ಸರ್ಕಾರವನ್ನು ನಡೆಸಬೆಕೆಂಬುದು ವಿರೋಧ ಪಕ್ಷದ ಸದಸ್ಯರ ಅಭಿಪ್ರಾಯವಲ್ಲ. ಹಾಕುವಾಗ ಯಾವ ರೀತಿ ಹಾಕಬೇಕು, ಯಾವ ತೆರಿಗೆ ಸರ್ವಮಾನ್ಯ, ಯಾರ ಮೇಲೆ ಬೀಳುತ್ತದೆ ಎನ್ನುವುದು ಚರ್ಚೆ ಮಾಡತಕ್ಕ ವಿಷಯ. ದೇಶದ ಆರ್ಥಿಕ ಸ್ಥಿತಿಯನ್ನು ಜನಜೀವನದ ಮಟ್ಟವನ್ನೂ ಅರ್ಥ ಮಾಡಿಕೊಂಡು ಹಾಕಬೇಕು. ದೇಶಕ್ಕೆ ಎಷ್ಟು ಹಣ ಬೇಕೆಂಬುದರ ಮೇಲೂ ಅವಲಂಬಿಸಿರುತ್ತದೆ. ಈ ಹೊತ್ತೂ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ನೂಡುವುದಾದರೆ ಇನ್ನೂ ಹೆಚ್ಚು, ಹೆಚ್ಚು, ಆಹಾರಧಾನ್ಯ ಬೆಳೆಯಬೇಕು, ಕೈಗಾರಿಕೆಗಳನ್ನು ಸ್ಥಾಪಿಸಬೇಕು, ದೇಶಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಎಲ್ಲರಿಗೂ ಆಸೆ ಹುಟ್ಟುವುದು ಸಹಜ. ಆದರೆ ಇದಕ್ಕೆಲ್ಲಾ ಯಾವ ರೀತಿ ಹಣವನ್ನು ಪಡೆಯಬೇಕೆಂಬುದರ ಬಗ್ಗೆ ನಮ್ಮಲ್ಲಿ ಸ್ಪಷ್ಟವಾದ ಅಭಿಪ್ರಾಯ ಇನ್ನೂ ಮೂಡಿಬಂದಿಲ್ಲ. ಇತ್ತೀಚೆಗೆ ಪ್ಲಾನಿಂಗ್‌ ಕಮಿಷನ್ನಿನವರು ಕೂಡ, ಮೊದಲು ಪರದೇಶದ ಬಂಡವಾಳದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದವರು ಈಗ ಪರದೇಶದ ಬಂಡವಾಳ ಬಾರದೇಯಿದ್ದರೆ ನಮ್ಮ ದೇಶದಲ್ಲಿ ಈ ಯೋಜನೆಗಳಿಗೆ ಬಂಡವಾಳವನ್ನೊದಗಿಸಿ ಕೊಳ್ಳಬೇಕಾಗುತ್ತದೆ; ಸಾಧ್ಯವಾದರೆ ಅತ್ಯ ಬಿದ್ದರೆ, ತೆರಿಗೆಗಳನ್ನು ಕೂಡ ಹಾಕಬೇಕಾಗುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ, ನಿಜ. ತೆರಿಗೆಗಳನ್ನು ಹಾಕದೆ ಯಾವ ಕಾರ್ಯವನ್ನೂ ಸರ್ಕಾರ ಮಾಡುವುದಕ್ಕಾಗುವುದಿಲ್ಲ.

ಆದರೆ, ತೆರಿಗೆ ಹಾಕುವಾಗ, ಪ್ರಗತಿಪರವಾದ ಆರ್ಥಿಕ ಪದ್ಧತಿಯನ್ನು ದೇಶದಲ್ಲಿ ರೂಢಿಸಿಕೊಂಡು ಬರುವಾಗ, ಮೂಲಭೂತವಾಗಿ ಅನುಸರಿಸಬೇಕಾದ ಕೆಲವು ನಿಯಮಗಳಿವೆ; ಅವುಗಳನ್ನು ಅನುಸರಿಸಬೇಕು. ಇಂಥ ಹೆಜ್ಜೆಯನ್ನು ಇಡುವುದಕ್ಕೆ ದುರದೃಷ್ಟವಶಾತ್‌ ನಮ್ಮ ಕಾಂಗ್ರೆಸ್‌ ಸರ್ಕಾರಗಳು ಈ ಹೊತ್ತು ಸಿದ್ಧವಾಗಿಲ್ಲ. ಮಿಶ್ರ ಆರ್ಥಿಕ ಪದ್ಧತಿಯನ್ನು ನಡೆಸಿಕೊಂಡು ಹೋಗುವುದರಲ್ಲಿ ಕಾಲವನ್ನು ವ್ಯರ್ಥ ಮಾಡಿಕೊಂಡು ಬಂದಿವೆ. ಜಮೀನ್ದಾರಿ ಪದ್ಧತಿಯ ನಿರ್ಮೂಲನದ ಬಗ್ಗೆ ಎಷ್ಟು ಪರಿಹಾರ ಕೊಡಬೇಕೆಂಬುದರಲ್ಲಿ ಕಾಲ ವ್ಯಯವಾಗುತ್ತಿದೆ. ಇದರಿಂದಲೇ ಈ ಹೊತ್ತು ‘ಕ್ಯಾಪಿಟಲ್‌ಲೆವಿ’, ‘ಡೆತ್‌ಡ್ಯೂಟಿ’ ಹಾಕುವುದೇ ಆಗಲಿ, ಮೈಸೂರು ಬ್ಯಾಂಕು ಅಂಥ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವುದೇ ಆಗಲಿ, ಇಂಥ ಮೂಲಭೂತ ಬದಲಾವಣೆ ದೇಶದ ಆರ್ಥಿಕ ಸ್ಥಿತಿಯನ್ನು ಭದ್ರವಾಗಿ ಕಟ್ಟುವಂಥ ನೀತಿಯನ್ನ ಅನುಸರಿಸಿಕೊಂಡು ಬರುತ್ತಿಲ್ಲ. ಹೀಗಿರುವುದರಿಂದ ಯಾವುದೇ ಹಣ ಬೇಕಾದರೂ ಕೂಡ ಸೇಲ್ಸ್‌ಟ್ಯಾಕ್ಷಿನಂಥ ಸಾಮಾನ್ಯ ಜನತೆಯ ಮೇಲೆ ಬೀಳುವ, ಸಾರ್ವತ್ರಿಕವಾಗಿ ಕಿರುಕುಳ ಕೊಡುವ ಕೆಲವು ತೆರಿಗೆಗಳನ್ನು ಜಾರಿಗೆ ತರುವುದಾಗಿದೆ.

ಇದರಿಂದ ಏನಾಗುತ್ತದೆಂದರೆ, ಇವರಿಗೆ ಯಾವಾಗಲೂ ಹಣದ ಅಡಚಣೆ ಇದ್ದೇ ಇರುವುದರಿಂದ ಅವರಿಗೆ ಬೇಕಾಗತಕ್ಕ ಹಣಕ್ಕಾಗಿ ಯಾವುದೋ ಒಂದು ತೆರಿಗೆ ಹಾಕಿ ಬಿಡುತ್ತಾರೆ. ಈಗ ಅವರು ಹಾಕಿರತಕ್ಕ ಸೇಲ್ಸ್‌ಟ್ಯಾಕ್ಸ್‌ ಎಂಬ ತೆರಿಗೆ ಶ್ರೀಮಂತರು ಮೊದಲುಗೊಂಡು ಕೇವಲ ನಿರ್ಗತಿಕರಾಗಿರುವವರ ಮೇಲೆಲ್ಲಾ ಬೀಳುವಂಥದ್ದಾಗಿದೆ. ಹೀಗೆ ಇವರು ವಿವೇಚನೆ ಇಲ್ಲದೆ ಇರತಕ್ಕ ತೆರಿಗೆಗಳನ್ನು ಆಗಿಂದಾಗ್ಗೆ ಜಾರಿಗೆ ತರುತ್ತಲೇ ಇರುವುದರಿಂದ ದೇಶದಲ್ಲಿರತಕ್ಕ ಜನರ ಸ್ಥಿತಿಗತಿಗಳು ತೀರಾ ಕೆಟ್ಟು ಹೋಗಿವೆ.

ಮತ್ತೊಂದು ಕಡೆ ದೇಶದಲ್ಲಿ ಪಾನನಿರೋಧವನ್ನು ಜಾರಿಗೆ ತರುತ್ತೇವೆಂದು ಹೇಳಿ ಈ ಸೇಲ್ಸ್‌ಟ್ಯಾಕ್ಸನ್ನು ಜನರ ಮೇಲೆ ಹೇರಿದ ನಂತರ ಅದನ್ನು ದೇಶಾದ್ಯಂತವೂ ಜಾರಿಗೆ ತಾರದೇ ಹಾಗೆಯೇ ಕೈ ಬಿಟ್ಟಿದ್ದಾರೆ. ಅದರಿಂದ ಜನರಿಗೆ ಉಂಟಾಗುತ್ತಿರುವ ಕಿರುಕುಳಗಳನ್ನಂತೂ ಹೇಳತೀರದಾಗಿದೆ. ಹೀಗೆ ಒಂದು ಕಡೆ ಜನರಿಗೆ ತುಂಬ ಕಿರುಕುಳಗಳಾದುದಲ್ಲದೆ ಮತ್ತೊಂದು ಕಡೆ ಸರ್ಕಾರಕ್ಕೆ ಬರುತ್ತಿದ್ದಂಥ ಅಪಾರ ಆದಾಯಕ್ಕೂ ಕಲ್ಲುಬಿತ್ತು. ಹೀಗೆ ಯಾವ ಒಂದು ವಿಚಾರವನ್ನೇ ತೆಗೆದುಕೊಳ್ಳಲಿ, ಈ ಕಾಂಗ್ರೆಸ್‌ ಸರ್ಕಾರದಲ್ಲಿ ಒಂದು ನಿರ್ದಿಷ್ಟವಾದ ನೀತಿಯಿಲ್ಲವೆಂಬುದು ಎದ್ದು ಕಾಣುತ್ತದೆ. ಜನರ ತಾರತಮ್ಯ ನೋಡದೆ ಈ ಸರ್ಕಾರ ಕೆಲಸ ಮಾಡುತ್ತಿದೆ. ಸರ್ಕಾರದವರು ಯಾವ ತೆರಿಗೆಯನ್ನೇ ಹಾಕಲಿ, ಅದು ನಿರ್ಗತಿಕರು ಮತ್ತು ಬಡವರ ಮೇಲೆ ಬೀಳತಕ್ಕದ್ದಾಗಿರುತ್ತದೆಯೇ ಹೊರತು ಶ್ರೀಮಂತರ ಮೇಲೆ ಅಷ್ಟಾಗಿ ಬೀಳುತ್ತಿಲ್ಲ. ಕಾರಣವೇನಂದರೆ, ಶ್ರೀಮಂತರ ಮೇಲೆ ಬೀಳುವ ತೆರಿಗೆಗಳನ್ನು ಹಾಕಿದರೆ, ಅವರಿಗೆಲ್ಲಿ ಕೋಪ ಬಂದು ಸರ್ಕಾರವನ್ನು ಉರುಳಿಸಿಬಿಡುತ್ತಾರೋ ಎಂಬ ಒಂದು ದೊಡ್ಡ ಹೆದರಿಕೆಯಿಂದ ಅವರ ಮೇಲೆ ತೆರಿಗೆಗಳನ್ನು ಹಾಕಲು ಸರ್ಕಾರ ಹಿಂಜರಿಯುತ್ತಿರುವುದು ಕಂಡುಬರುತ್ತದೆ.

ಈ ಬಿಲ್ಲಿಗೆ ಸಂಬಂಧಪಟ್ಟ ಹಾಗೆ ಮಾತನಾಡುವಾಗ ಸರ್ಕಾರದ ಹಣ ಯಾವ ರೀತಿ ಖರ್ಚಾಗಿದೆ ಎಂಬ ಬಗ್ಗೆ ಕೆಲವು ಮಾತುಗಳನ್ನಾಡಬೇಕಾಗಿದೆ. ಮೊಟ್ಟ ಮೊದಲನೆಯದಾಗಿ, ಈ ದಿವಸ ದೊಡ್ಡ ಕಾಮಗಾರಿಗಳ ಕೆಲಸ ನಡೆಸುತ್ತಿರುವ ಪಿ. ಡಬ್ಲ್ಯು. ಡಿ. ಇಲಾಖೆಯನ್ನು ತೆಗೆದುಕೊಳ್ಳೋಣ.

ಈ ದಿವಸ ಈ ಇಲಾಖೆಯ ಮೂಲಕ ಸರ್ಕಾರ ನಡೆಸುತ್ತಿರುವಂಥ ಕಾಮಗಾರಿಗಳ ಬಗ್ಗೆ ಮೊದಲೊಂದು ಅಂದಾಜು ಎಸ್ಟಿಮೇಟನ್ನು ತಯಾರಿಸಿ ಕೆಲಸ ಪ್ರಾರಂಭವಾದ ಕೂಡಲೇ ‘ಅದಕ್ಕೆ ಹಣ ಖೋತಾ ಬಿತ್ತು. ಪುನಃ ಅದಕ್ಕೆ ಮತ್ತಷ್ಟು ಹಣ ಬೇಕು’ ಎಂದು ಮತ್ತೊಂದು ಬಿಲ್ಲನ್ನು ತರುತ್ತಾರೆ. ಲಕ್ಕವಳ್ಳಿಯಂಥಾ ಪ್ರಾಜೆಕ್ಟುಗಳ ಮೇಲೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದ್ದಾರೆ. ಆದರೆ, ಈ ದಿವಸ ಅದರಿಂದೇನಾಗಿದೆ? ಹಾಕಿದ್ದೆಲ್ಲಾ ಕೊಚ್ಚಿಕೊಂಡು ಹೋಯಿತು.

ಲಕ್ಕವಳ್ಳಿಯಂಥ ಪ್ರಾಜೆಕ್ಟ್‌ಗೆ ಈ ಸಂದರ್ಭದಲ್ಲಿ ಹೀಗೆಲ್ಲಾ ಇನ್ನೂ ಹೆಚ್ಚಿಗೆ ಹಣ ಖರ್ಚಾಗಿ ಹೋಗಿರಬಹುದು. ಆ ಬಗ್ಗೆ ನನಗೆ ಅಷ್ಟೊಂದು ವಿವರಗಳು ತಿಳಿಯದು. ಅಂತೂ ಈ ಬಾಬುಗಳ ಮೇಲೆ ಹಾಕಿರತಕ್ಕ ಬಂಡವಾಳದಲ್ಲಿ ಬಹುಭಾಗ ಸೋರಿ ಹೋಗಿರುತ್ತದೆಂದು ಗೊತ್ತಾಗುತ್ತದೆ. ಈ ಕೆಲಸಗಳನ್ನೆಲ್ಲಾ ಒಂದು ಹೆಚ್ಚಿನ ವ್ಯವಸ್ಥಿತ ರೀತಿಯಲ್ಲಿ ಅನುಸರಿಸುವಂಥ ಒಂದು ನೀತಿ ಇಲ್ಲದ್ದರಿಂದ ಅನೇಕ ದೊಡ್ಡ ಡ್ಯಾಂಗಳಲ್ಲಿ ಕೆಲವು ಇನ್ನು ಸ್ವಲ್ಪ ದಿವಸಗಳಲ್ಲೇ ಬಿದ್ದುಹೋಗಬಹುದು.

ಮೆಡಿಕಲ್‌ ಇಲಾಖೆಯ ಬಗ್ಗೆ ಒಂದು ಮಾತನ್ನು ಹೇಳಬೇಕಾಗಿದೆ. ನನ್ನ ಒಂದು ಸಲಹೆ ಏನೆಂದರೆ, ಪ್ರೈವೇಟ್‌ ಡಾಕ್ಟರುಗಳಾಗಲಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿರತಕ್ಕ ಡಾಕ್ಟರುಗಳೇ ಆಗಲಿ ರೋಗಿಗಳಿಗೆ ಕೊಡತಕ್ಕ ಚಿಕಿತ್ಸೆಯ ಬಗ್ಗೆಯೂ ಮತ್ತು ಅವರಿಗೆ ಪ್ರಯೋಗಿಸತಕ್ಕ ಇಜಕ್ಷನ್‌ಗಳ ಬಗ್ಗೆಯೂ ಯಾವ ಯಾವ ರೋಗಿಯ ಮೇಲೆ ಏನೇನು ಔಷಧಿಗಳ ಮತ್ತು ಇಜಕ್ಷನ್‌ಗಳ ಪ್ರಯೋಗ ನಡೆಸಲಾಯಿತೆಂಬುದರ ಬಗ್ಗೆ ನಿರ್ದಿಷ್ಟವಾಗಿ ಪ್ರತಿಯೊಬ್ಬ ರೋಗಿಗೂ ಒಂದೊಂದು ಆಲಾಯಿದ ಕೇಸ್‌ಷೀಟುಗಳನ್ನು ಇಡುವಂತೆ, ಒಂದು ಪದ್ಧತಿಯನ್ನು ಒತ್ತಾಯಪಡಿಸಬೇಕೆಂದು ಹೇಳುತ್ತೇನೆ ಮತ್ತು ಇಂಥ ಒಂದು ಪದ್ಧತಿಯನ್ನು ಒತ್ತಾಯ ಪಡಿಸುವುದರ ಜೊತೆಗೆ ಮತ್ತೊಂದು ಅಂಶವನ್ನು ಸಹ ನಾನು ಒತ್ತಾಯ ಪಡಿಸಬೇಕಾಗಿದೆ. ಅದೇನೆಂದರೆ, ಹಾಗೆ ಮೆಡಿಕಲ್‌ ಜನರು ಇಡತಕ್ಕ ಕೇಸ್‌ ಷೀಟುಗಳನ್ನು ಆ ರೋಗಿಗಳು ಸತ್ತು ಹೋದ ಮೇಲಾದರೂ ಆ ರೋಗಿಗೆ ಏನೇನು ಚಿಕಿತ್ಸೆಗಳನ್ನು ನಡೆಸಲಾಗಿತ್ತೆಂಬ ಬಗ್ಗೆ ನಮಗೆ ತಿಳಿದುಕೊಳ್ಳುವ ಒಂದು ಅವಕಾಶವಿರುವಂತೆ ಮಾಡಲಿಕ್ಕೋಸ್ಕರವಾಗಿ ಒಂದು ಲೆಕ್ಕವನ್ನಿಡಬೇಕೆಂದು ಮತ್ತು ಆ ಬಗೆಗೆ ಒಂದು ಮೆಡಿಕಲ್‌ ತಜ್ಞರನ್ನೊಳಗೊಂಡ ಒಂದು ಸಮಿತಿಯನ್ನೂ ಕೂಡ ರಚನೆ ಮಾಡಬೆಕಾದದ್ದು ಅತ್ಯಗತ್ಯವಾಗಿದೆಯೆಂದೂ ನನಗೆ ಹೊಳೆಯುತ್ತಿದೆ. ತಾವು ಈ ಆಸ್ಪತ್ರೆಗಳ ಬಗ್ಗೆ ಅಪಾರವಾಗಿ ದುಡ್ಡನ್ನು ಖರ್ಚು ಮಾಡಿದ್ದ ಮಾತ್ರಕ್ಕೆ ಕೆಲಸಕಾರ್ಯಗಳೆಲ್ಲವೂ ಸರಿಯಾಗಿಯೇ ಜರುಗತ್ತಿವೆಯೆಂದೂ ಮತ್ತು ಆ ಹಣವೆಲ್ಲ ಸದ್ವಿನಿಯೋಗ ಆಗುತ್ತಿದೆಯೆಂದೂ ಹೇಳುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಇಂಥ ಒಂದು ಸಮಿತಿಯ ನೇಮಕ ಅಗತ್ಯವಾಗಿದೆ. ಆದರೆ, ಕೆಲವು ಸ್ಥಳಗಳಿಗೆ ಹೋಗಿ ಖುದ್ದಾಗಿ ಪರಾಂಬರಿಕೆ ಮಾಡಿಕೊಂಡು ಬರಲು ನನಗೆ ಅವಕಾಶವಿಲ್ಲ. ಇತ್ತೀಚೆಗೆ ಕೇವಲ ಔಷಧಿ, ಪಟ್ಟಣಗಳಲ್ಲಿ ಬರುತ್ತಿರುವ ಔಷಧಿಗಳನ್ನೇ ನೋಡಿಕೊಂಡು ಅಂದರೆ, ಅನೇಕ ಕಂಪನಿಗಳು ಇತ್ತೀಚೆಗೆ ಹೆಚ್ಚಿಕೊಂಡಿರುತ್ತವೆ. ಅವರ ರೋಗ ಯಾವುದು ಎಂಬುದನ್ನೇ ತಿಳಿಯದೆ, ಅಂಥ ಕಂಪನಿಗಳ ಔಷಧಿಯನ್ನು ರೋಗಿಗಳ ಮೇಲೆ ಪ್ರಯೋಗಿಸಿ, ಅದರಿಂದ ಸ್ವಲ್ಪ ಕಾಯಿಲೆಯಿಂದ ನರಳುತ್ತಿರುವಂಥ ರೋಗಿಗಳೆಲ್ಲಾ ಬಹಳ ಉಲ್ಬಣಾವಸ್ಥೆಗೆ ಬಂದು ಸತ್ತುಹೋಗಿರುವ ನಿದರ್ಶನಗಳೂ ಇವೆ.

ದಿನಕ್ಕೊಂದರಂತೆ ಈಗ ಔಷಧಿ ಕಂಪನಿಗಳು ತಲೆಯೆತ್ತುತ್ತಿವೆ. ಅನೇಕ ಡಾಕ್ಟರುಗಳಿಗೆ ಏನು ಅನುಭವವೇ ಇಲ್ಲದೆ ಅವರು ಕೇವಲ ಬಾಟಲ್‌ಮೇಲಿರತಕ್ಕ ಲೇಬಲ್‌ ನೋಡಿಕೊಂಡು ಅದರಂತೆ ರೋಗಿಗಳಿಗೆ ಔಷಧಿ ಪ್ರಯೋಗ ನಡೆಸುತ್ತಿರುವುದು ನನಗೆ ಕಂಡುಬಂದಿದೆ. ಹೀಗೆ ಅತ್ತಲಾಗಿ ಈ ಡಾಕ್ಟರುಗಳಿಗೆ ಪೂರ್ಣವಾಗಿ ಔಷಧಿ ಪರೀಕ್ಷೆಯೂ ಗೊತ್ತಿಲ್ಲ, ರೋಗದ ಪರೀಕ್ಷೆಯೂ ಕೂಡ ತಿಳಿಯುವುದಿಲ್ಲ. ವಾಸ್ತವಾಂಶಗಳು ಹೀಗಿರುವುದರಿಂದ ನಾನು ಈ ಸಲಹೆಗಳನ್ನು ಈಗ ತಮ್ಮ ಮುಂದೆ ಇಟ್ಟಿರುತ್ತೇನೆ.

ಸಂಸ್ಕೃತಿ ಪ್ರಚಾರ

೧೧ ಮಾರ್ಚ್೧೯೫೨

ಸಂಸ್ಕೃತಿ ಪ್ರಚಾರಕ್ಕೆ ಅಡಿಗಲ್ಲು ಹಾಕುತ್ತ ಇದೇ ಸಂದರ್ಭದಲ್ಲಿ ನಮ್ಮ ವಿದ್ಯಾಭ್ಯಾಸದ ಬದಲಾವಣೆಯನ್ನು ಸಹ ಪ್ರಸ್ತಾಪಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಒಂದು ಕಡೆ ಭಾಷಣ ಮಾಡುತ್ತ, ‘ಮನಸುಷ್ಯನಿಗೆ ಬರಿ ವಸ್ತು ಪ್ರಪಂಚ ಒಂದರಲ್ಲೇ ಬದುಕಿದ್ದರೆ ಸಾಲದು, ಅಲ್ಲಿಗೆ ಎಲ್ಲ ಮುಕ್ತಾಯವಾದಂತಾಗಲಿಲ್ಲ; ಮನುಷ್ಯನಿಗೆ ಅನ್ನಮಯಕೋಶ, ಪ್ರಾಣಮಯಕೋಶ, ಜ್ಞಾನಮಯಕೋಶ ಇಷ್ಟಕ್ಕೆ ಮುಕ್ತಾಯವಾದರೆ ಸಾಲದು. ಅವನಿಗೆ ವಿಜ್ಞಾನಮಯಕೋಶ, ಆನಂದಮಯಕೋಶ ಇತ್ಯಾದಿಗಳೆಲ್ಲದರಲ್ಲೂ ವಿಹರಿಸುವಂಥ ಅವಕಾಶವಿರಬೆಕು’ ಎಂದು ಹೇಳಿದ್ದಾರೆ. ಮನುಷ್ಯನ ಜೀವನದಲ್ಲಿ ಮುಖ್ಯವಾದುದು ಪ್ರಾಣ. ಇದನ್ನು ಪೂರ್ಣ ದೃಷ್ಟಿಯಿಟ್ಟು ಯಾವ ಕಡೆಯಿಂದ ನೋಡಿದರೂ ಮನುಷ್ಯನ ಜೀವಾಧಾರಕ್ಕೆ ಅನ್ನಮಯಕೋಶ ಮುಖ್ಯ ಆಧಾರವಾದುದಾಗಿದೆ. ತುತ್ತಿನ ಚೀಲ ಬರಿದಾಗಿದ್ದರೆ ಪ್ರಾಣಪಕ್ಷಿಯು ಹಾರಿಹೋಗುತ್ತದೆ.

ಅನ್ನದ ಆಧಾರದ ಮೇಲೆ, ಪ್ರಾಣ, ಪ್ರಾಣದ ಆಧಾರದ ಮೇಲೆ ಜ್ಞಾನ, ಇವು ಮೂರರ ಮೇಲೆ ವಿಜ್ಞಾನ, ಅದರಿಂದ ಆನಂದ, ಇದು ಎಲ್ಲರಿಗೂ ತಿಳಿದಿರುವ ಮಾತು. ಆದರೆ ದೇಶದಲ್ಲಿ ಕ್ಷಾಮಡಾಮರಗಳಿದ್ದು ‘ಅನ್ನ’ ‘ಅನ್ನ’ ಎಂದು ಜನ ಬಳಲುತ್ತಿದ್ದರೆ, ‘ನೀವು ಭಾರತ ಓದಿ, ರಾಮಾಯಣ ಓದಿ, ಹರಿದಾಸರ ಕಥೆಗಳನ್ನು ಕೇಳಿ, ಶಿವಶರಣ ವಚನಗಳನ್ನು ಹಾಡಿ’ ಎನ್ನುವುದು ಎಷ್ಟು ಹಾಸ್ಯವಾಗಿ ಕಾಣುತ್ತದೆ. ಇದನ್ನು ನಾನು ನಿಜವಾಗಿಯೂ ಬಹಳ ವ್ಯಥೆಯಿಂದ ಹೇಳುತ್ತಿದ್ದೇನೆಂದು ತಿಳಿಯಿರಿ. ಇಂಥ ದುರದೃಷ್ಟ ನಮ್ಮ ದೇಶಕ್ಕೆ ಬಂತೇ? ಇಂಥ ಅನೀತಿಯ ಸರ್ಕಾರ ಇನ್ನೂ ಜೀವಂತವಾಗಿ ಇದೆಯೆ ಎಂಬ ಆರ್ಥನಾದ ಕೇಳಿಬರುತ್ತಿದೆ. ಇದರಿಂದಾಗಿ ನನಗೆ ಇದುವರೆಗೆ ಪ್ರಜಾಪ್ರಭುತ್ವದಲ್ಲಿ ಇದ್ದ ಅಲ್ಪ ಸ್ವಲ್ಪ ನಂಬಿಕೆಯೂ ಅಳಿದು ಹೋಗುತ್ತಾ ಬಂದಿದೆ.

ಈ ಹೊತ್ತು ಸಂಸ್ಕೃತಿಯನ್ನು ನಾವು ಪುನರುದ್ಧಾರ ಮಾಡುತ್ತೇವೆಂದು ಹೇಳಿಕೊಂಡು ಬೊಬ್ಬೆ ಹಾಕುತ್ತ ಊರು ಊರುಗಳಲ್ಲಿ ಹೋಗುತ್ತಿದ್ದರೆ, ಇದು ಕೇವಲ ಹೊಗಳುಭಟ್ಟರ ಕೂಟ, ಹೂವಿನ ಮಾಲೆಗಾಗಿ ಹೊಗಳಿಸಿಕೊಳ್ಳಬೆಕು ಎಂಬ ಆಕಾಂಕ್ಷೆಯಿಂದ ಅಲ್ಲಿ ಹೋಗಿ ಕೂರುತ್ತಿದ್ದೀರಿ ಎಂದು ಹೇಳದೆ ವಿಧಿಯಿಲ್ಲ. ಅಲ್ಲಿ ನಡೆಯುವುದನ್ನು ನೋಡಿದರೆ ನನಗೊಂದು ಪದ್ಯ ಸಮಯೋಚಿತವಾಗಿ ಜ್ಞಾಪಕಕ್ಕೆ ಬರುತ್ತದೆ; ಏನೆಂದರೆ

ಒಂಟೆಗಳ ಮದುವೆಯಲ್ಲಿ ಕತ್ತೆಗಳೆ ಗಾಯಕರು
            ತಮತಮಗೆ ಹೊಗಳಿಕೊಳ್ಳುವವರು ಏನ್ರೂಪಮೇನ್ಗಾನವೆಂದು

ಈ ಮಾನ್ಯ ಸಭೆಯ ಮುಂದೆ ನಾನು ಸಂಸ್ಕೃತಿ ಪ್ರಚಾರ ಮಾಡಬೇಕಾದ ಪ್ರಸಂಗ ಬಂದಿದೆಯಲ್ಲ ಅದಕ್ಕಾಗಿ ನಾನು ವಿಷಾದಪಡುತ್ತೇನೆ. ಈ ಹೊತ್ತು ದೇಶದಲ್ಲಿ ಅನ್ನವಿಲ್ಲದೆ, ಕವಿಯು ಹಾಡಿರುವಂತೆ, “ಅನ್ನದನ್ಯಾಯ ದಾವಾಗ್ನಿಯಲ್ಲಿ ಕರಗುತ್ತಿದೆ ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ.” ಅನ್ನ ಕೊಡಿ, ಬಟ್ಟೆ ಕೊಡಿ, ವಸತಿ ಮಾಡಿ ಕೊಡಿ ಎಂದು ಜನ ಪರಿತಪಿಸುತ್ತಿದ್ದಾರೆ; ಅದಕ್ಕೆ ಪ್ರತಿಯಾಗಿ ಸಂಸ್ಕೃತಿ ಪ್ರಚಾರ ಮಾಡ ಹೊರಟರೆ ಇನ್ನು ಇದಕ್ಕಿಂತ ವಿಕಟ ಅಟ್ಟಹಾಸ ಬೇರೆಯಿದೆಯೆ?

ಒಬ್ಬ ಸದಸ್ಯರು : ದಾಸರು! ದಾಸರು!

ಗೋಪಾಲಗೌಡ : ಹೌದು, ನಾನು ದಾಸನಾಗಿಯೇ ಇರುತ್ತೇನೆ – ಜನರಿಗೆ, ನಿಮಗಲ್ಲ. ಈ ವಿಷಯದಲ್ಲಿ ಇನ್ನೂ ಎಷ್ಟೋ ಹೇಳಬೇಕಾದದ್ದಿದೆ; ಅಂದ ಮಾತ್ರಕ್ಕೆ ಸಂಸ್ಕೃತಿ ನಮಗೆ ಬೇಡವೆಂದು ನಾನು ಹೇಳುತ್ತಿಲ್ಲ. ಅದಕ್ಕೆ ಇದು ಸಕಾಲವಲ್ಲ ಅಷ್ಟೆ. ಈಗ ಅಂಥದಕ್ಕೆ ಕೈಹಾಕುವುದು ವಿವೇಕದ ಮಾರ್ಗವಲ್ಲ. ಇದನ್ನು ಖಂಡಿಸುವುದಕ್ಕಾಗಿಯೇ ನಾನು ಈ ಭಾಷಣದ ಕಾಲವನ್ನು ಮೀಸಲಾಗಿಟ್ಟಿದ್ದೇನೆ. ಇಂಗ್ಲಿಷಿನಲ್ಲಿರುವ ಒಂದು ಗಾದೆಯನ್ನು ಇಲ್ಲಿ ಉದಾಹರಿಸುವುದಾದರೆ ‘ರೋಮ್‌ದೇಶ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ’ ಹಾಗಾಗಿದೆ ನಿಮ್ಮ ಸಂಸ್ಕೃತಿ ಪ್ರಚಾರ.

ಕೈಗಾರಿಕೆ

೨೬ ಮಾರ್ಚ್೧೯೫೨

ನಮ್ಮ ದೇಶದಲ್ಲಿ ಕೃಷಿಯೇ ಪ್ರಧಾನವಾದ ಉದ್ಯೋಗ. ಆದಕಾರಣ ನಾವು ಯಾವ ಕೈಗಾರಿಕೆಯನ್ನೇ ಪ್ರಾರಂಭಿಸಲಿ ಅದು ನಮ್ಮ ಬಹುಸಂಖ್ಯಾತ ಜನರ ಮುಖ್ಯ ವೃತ್ತಿಯಾದ ವ್ಯವಸಾಯಕ್ಕೆ ಹೊಂದಿಕೊಂಡು ಹೋಗುವಂತೆ ಇರಬೇಕು. ಅಂತಹ ಕೈಗಾರಿಕೆಗಳಿಗೆ ನಾವು ಪ್ರೋತ್ಸಾಹ ನೀಡುವುದು ಒಳ್ಳೆಯದೆಂದು ನಾನು ಸೂಚಿಸುತ್ತೇನೆ. ನಮ್ಮ ಮಾರ್ಕೆಟ್ಟಿನಲ್ಲಿ ನಮ್ಮ ಜನರು ಉತ್ಪತ್ತಿ ಮಾಡತಕ್ಕಂಥ ಕೈಗಾರಿಕೆ ಸಾಮಾನುಗಳನ್ನು ನಮ್ಮ ದೇಶದ ಜನರು ಮುಂದೆ ಬಂದು ಕೊಂಡು ಕೊಳ್ಳುವಂತಿರಬೇಕು. ಹೀಗೆ ನಾವು ಮೊದಲು ನಮ್ಮ ವ್ಯವಸಾಯದ ಭದ್ರತೆಯನ್ನು ನೋಡಿಕೊಂಡು, ಅವುಗಳಿಗೆ ತಕ್ಕಂಥ ಕೈಗಾರಿಕೆಗಳನ್ನೇ ನಾವು ಅವಲಂಬಿಸುವುದು ಒಳ್ಳೆಯದು. ಆದರೆ ಇಲ್ಲಿಯವರೆಗೂ ಹಾಗೆ ನಡೆದಿಲ್ಲ ಮೊದಲಿನಿಂದಲೂ ಕೇವಲ ಬಂಡವಾಳಶಾಹಿಗಳ ಮನೋಭಿಲಾಷೆಗೆ ತಕ್ಕಂತೆ ಕೇವಲ ಒಂದು ಲಾಭದ ದೃಷ್ಟಿಯನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಭೊಗವಸ್ತುಗಳಿಗೆ ಸಂಬಂಧಿಸಿದ ಕೈಗಾರಿಕೆಗಳನ್ನೇ ಅಭಿವೃದ್ಧಿಗೆ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಆದರೆ, ನಮಗೆ ಲಾಭದ ಮೇಲೆ ಹೆಚ್ಚಿನ ಗುರಿಯಿರಬೆಕಾಗಿದ್ದರೂ, ಕೇವಲ ದೊಡ್ಡ ದೊಡ್ಡ ಭಾರೀ ಕೈಗಾರಿಕೆಗಳನ್ನೇ ವ್ಯಾಪಸಿವುದರ ಜೊತೆಗೆ ನಾವು ಸಣ್ಣ ಕೈಗಾರಿಕೆಗಳನ್ನೂ ಹೆಚ್ಚು ಹೆಚ್ಚಾಗಿ ಕೈಗೊಳ್ಳಲೇ ಬೇಕಾಗಿರುತ್ತದೆ.

ಹೀಗೆ ಕೈಗೊಳ್ಳತಕ್ಕ ಸಣ್ಣ ಪುಟ್ಟ ಕೈಗಾರಿಕೆಗಳ ಸಾಧಾರಣ ಮೊತ್ತ ಹಾಕಿದರೆ ಸಾಕು. ಅಂಥ ಭಾರಿ ಬಂಡವಾಳವೇನೂ ಬೇಕಾಗಿಲ್ಲ. ಇಂಥ ಅಲ್ಪ ಸ್ವಲ್ಪ ಬಂಡವಾಳದ ಕೈಗಾರಿಕೆಗಳನ್ನೇ ಹಳ್ಳಿಯವರು ಕೂಡ ಅಪೇಕ್ಷೆ ಮಾಡುವುದು. ಹೀಗೆ ಮಾಡುವುದರಿಂದ ಈ ಕೈಗಾರಿಕೆಗಳೆಲ್ಲವು ಕೇವಲ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕೇಂದ್ರೀಕೃತವಾಗುವುದೂ ಕೂಡ ತಪ್ಪಿ, ಅವು ವಿಕೇಂದ್ರೀಕೃತವಾಗಲು ಸಹಾಯವಾಗುತ್ತದೆ. ಅದರಲ್ಲೂ ಇಂಥ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವಾಗ ನಾವು ಮುಖ್ಯವಾಗಿ ನಮ್ಮ ಗಮನವನ್ನು ಈ ಕೈಗಾರಿಕೆಗಳ ಕಡೆಗೆ ಕೊಡಬೇಕಾಗಿದೆ.

ಇನ್ನು ಈ ಗೃಹಕೈಗಾರಿಕೆಗಳ ವಿಚಾರ ತಿಳಿಸಬೇಕೆಂದರೆ ಇವು ಈಗಾಗಲೇ ಅನೇಕ ಜನರ ಕೈಬಿಟ್ಟು ಹೋಗಿವೆ. ನಮ್ಮಲ್ಲಿ ಗೃಹಕೈಗಾರಿಕೆಗೆ ಅತ್ಯಗತ್ಯವಾದ ಬೆತ್ತ, ಬಿದಿರು, ಬೆಂಡು, ಗಂಧ ಇತ್ಯಾದಿ ಕಚ್ಚಾಮಾಲುಗಳು ಹೇರಳವಾಗಿ ದೊರೆಯುತ್ತಿವೆ. ಓಲೇಗರಿ ನಮ್ಮಲ್ಲಿ ವಿಶೇಷವಾಗಿದೆ. ಚೈನಾ, ಜಪಾನ್‌ ದೇಶಗಳಲ್ಲಿ ತಯಾರಿಸುವಂಥ ಛತ್ರಿಗಳನ್ನು ನಾವು ಸಹ ಇಲ್ಲಿ ಈ ಓಲೆಗರಿಗಳಿಂದ ತಯಾರಿಸಬಹುದು. ನಮ್ಮ ಮಲೆನಾಡಿನಲ್ಲಿ ಈಗಲೂ ಈ ಓಲೇಗರಿಗಳ ಛತ್ರಿ ಚಾಲ್ತಿಯಲ್ಲಿರುತ್ತವೆ. ಹೀಗೆ ನಮ್ಮಲ್ಲಿ ಅನೇಕ ಗೃಹಕೈಗಾರಿಕೆಗಳಿಗೆ ಅತ್ಯವಶ್ಯಕವಾದ ಕಚ್ಚಾಮಾಲು ದೊರೆಯುತ್ತಿದ್ದರೂ ಜನರು ಅವುಗಳಿಂದ ಯಾವ ಉತ್ಪತ್ತಿಯನ್ನೂ ಪಡೆಯದೆ ಹಾಳಾಗುತ್ತಿದ್ದಾರೆ. ಇದಕ್ಕೆಲ್ಲಾ ಮೂಲಕಾರಣ ಜನರಿಗೆ ಉತ್ತೇಜನವಿಲ್ಲ; ನಮ್ಮ ದೇಶದ ಮಾಲುಗಳಿಗೆ ಮಾನ್ಯತೆ ಇಲ್ಲ. ಹೀಗಾಗಿ ನಮ್ಮ ದೇಶ ಮುಂದುವರಿಯಲು ಸಾಧ್ಯವಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬದಲ್ಲಿ ಗುಡಿಗಾರರು ಗಂಧದ ಮರದಲ್ಲಿ ಅನೇಕ ಸಾಮಾನುಗಳನ್ನು ಮತ್ತು ತೀರ್ಥಹಳ್ಳಿಯ ಕವಲೇದುರ್ಗದಲ್ಲಿ ಬಳಪದಕಲ್ಲಿನ ಗಡಿಗೆ ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಹೀಗೆ ಯಾವ ಯಾವ ಪ್ರದೇಶದಲ್ಲಿ ಕಚ್ಚಾ ಮಾಲು ಅಗ್ಗವಾಗಿ ದೊರೆಯುತ್ತವೆಯೋ ಅಂಥ ಕಡೆಗಳಲ್ಲಿ ಜನರು ಈಗಲೂ ಕೂಡ ಅವರಿಗೆ ಮೊದಲಿನಿಂದಲೂ ತಿಳಿದುಬಂದಿರತಕ್ಕಂಥ ಒಂದು ಕ್ರೂಡ್‌ರೀತಿಯಲ್ಲಿ ಕೆಲವು ಸಾಮಾನುಗಳನ್ನು ತಯಾರುಮಾಡುತ್ತಿದ್ದಾರೆ. ಆದರೆ ಈ ಕೈಗಾರಿಕೆಯನ್ನು ಇಂಪ್ರೂ ಮಾಡಬೇಕಾದರೆ ಅವರಿಗೆ ಬಂಡವಾಳ ಬೇಕು. ಇಂಥ ಸಂದರ್ಭದಲ್ಲಿ ಸರ್ಕಾರದವರು ಅವರಿಗೆ ಕೊಂಚಮಟ್ಟಿಗೆ ಬಂಡವಾಳವನ್ನು ಒದಗಿಸುವುದು ಒಳ್ಳೆಯದು.

ಭೂ ಸುಧಾರಣೆಇನಾಂ ರದ್ದಿಯಾತಿ ಕಾಯಿದೆ

ಏಪ್ರಿಲ್೧೯೫೨

ಮಾನ್ಯ ಅಧ್ಯಕ್ಷರೇ, ಈ ದಿನ ಸಭೆಯ ಮುಂದೆ ಮಾನ್ಯ ರೆವೆನ್ಯೂ ಮಂತ್ರಿಗಳು ಮಂಡಿಸಿರುವ The Mysore (Personal and Miscellaneous) Inam Bill, ೧೯೫೨, ಮಸೂದೆಯನ್ನು ನಾನು ತೀವ್ರವಾಗಿ ವಿರೋಧಿಸಬೇಕಾಗಿದೆ.

ಮಾನ್ಯ ಮಂತ್ರಿಗಳು ಈ ಮಸೂದೆಯನ್ನು ಸಭೆಯ ಮುಂದೆ ಮಂಡಿಸತಕ್ಕ ಕಾಲದಲ್ಲಿ ಭಾಷಣಮಾಡುತ್ತ ಇದೊಂದು ಬಹಳ ಮಹತ್ತರವಾದಂಥ ದಿನ ಎಂದು ಒಂದು ಅಂಶವನ್ನು ಪ್ರಸ್ತಾಪ ಮಾಡಿದ್ದಾರೆ. ಇಂಡಿಯನ್‌ನ್ಯಾಷನಲ್‌ಕಾಂಗ್ರೆಸ್ಸು ಸ್ವರಾಜ್ಯ ಪಡೆಯುವ ಮುನ್ನವೇ ಭೂಮಿಯನ್ನು ಉಳುವವನಿಗೂ ಮತ್ತು ಸರ್ಕಾರಕ್ಕೂ ಮಧ್ಯೆ ಇರತಕ್ಕ ಮಧ್ಯವರ್ತಿ ಜನಗಳು ಇರಬಾರದೆಂಬ ತತ್ವವನ್ನು ಒಪ್ಪಿಕೊಂಡಿತ್ತು. ಆ ಮಾರ್ಗದಲ್ಲಿ ಇಟ್ಟಿರತಕ್ಕ ಅನೇಕ ಹೆಜ್ಜೆಗಳಲ್ಲಿ ಈ ಬಿಲ್ಲನ್ನು ತಂದಿರತಕ್ಕದ್ದೂ ಕೂಡ ಒಂದು ಹೆಜ್ಜೆಯೇ ಆಗಿರುತ್ತದೆಯೆಂದು ಅಪ್ಪಣೆ ಕೊಡಿಸಿದ್ದಾರೆ. ಆದರೆ ಈ ಮಸೂದೆಯ ಬಗ್ಗೆ ಚರ್ಚೆಗಾರಂಭಿಸುವುದಕ್ಕೆ ಮುಂಚೆ ನಾನು ಕೆಲವು ವಿಷಯಗಳನ್ನು ಹೇಳಬೇಕಾಗಿದೆ.

ಡಾ. ಲೋಹಿಯಾರವರು ಕಾಂಗ್ರೆಸ್ಸು ಸರ್ಕಾರ ಭಾಷಾ ಸಮಸ್ಯೆಯ ಬಗ್ಗೆ ತಳೆದ ನೀತಿಯನ್ನು ಕುರಿತು ಬಹುಮುಖ್ಯವಾದ ಮಾತುಗಳನ್ನು ಹೇಳಿದ್ದಾರೆ. ಈ ಕಾನೂನು ಮುಖಾಂತರ ಕೆಲವು ಮೂಲಭೂತ ಸಮಸ್ಯೆಗಳನ್ನು ಬಿಡಿಸುವ ಬಗ್ಗೆ ಕಾಂಗ್ರೆಸ್ಸು ಯಾವ ರೀತಿಯ ಮನೋಭಾವವನ್ನು ತಾಳಿದೆಯೆಂದರೆ ‘ಕಾನೂನ್‌ ಕೆ ಜಂಗಲ್‌ ಮೆ ಫಸ್ಕರ್ ಉಸ್ಕೆ ಪೇಡ್‌ ಔರ್ ಪತ್ತೆ ಗಿನ್ನೆಲಗೆ…..’ ಎಂದು ಹೇಳುವ ಹಾಗೆ ಇದೆ ಎಂದರೆ ಕಾನೂನು ಎಂಬ ಕಾಡಿನೊಳಗೆ ನುಗ್ಗಿ ಕಾನೂನೆಂಬ ಮರದ ಕೊಂಬೆ, ಹರೆ, ಎಲೆ, ಇತ್ಯಾದಿಗಳನ್ನು ಲೆಕ್ಕ ಹಾಕುವುದಕ್ಕೆ ಹೊರಟಂತೆ ಇದೆ. ೧೯೪೭ನೆಯ ಇಸವಿ ಆಗಸ್ಟ್‌ ೧೫ನೆಯ ತಾರೀಖು ರಾತ್ರಿ ೧೨ ಘಂಟೆ ವೇಳೆಯಲ್ಲಿ ಏನು ಒಂದು Zero Hour ಬಂದಿತ್ತೋ ಅದು ಇಡೀ ಭಾರತದ ಇತಿಹಾಸದಲ್ಲೇ ಒಂದು ಮಹತ್ತರವಾದಂಥ ಕ್ಷಣವಾಗಿತ್ತು ಮತ್ತು ಒಂದು ಕ್ರಾಂತಿಕಾರಕ ಕ್ಷಣವೂ ಆಗಿತ್ತು. ಅಂಥ ಒಂದು ಮಹತ್ವಪೂರಿತವಾದಂತಹ ಕ್ಷಣವನ್ನು ಕಾಂಗ್ರೆಸ್‌ ಸರ್ಕಾರ ವ್ಯರ್ಥವಾಗಿ ಕಳೆದುಕೊಂಡಿತು. ಆ ಒಂದು ಕ್ಷಣದಲ್ಲಿ ಎಷ್ಟೋ ಮಹತ್ತರವಾದಂಥ ಬದಲಾವಣೆಗಳನ್ನು ಕಾನೂನು ಮುಖಾಂತರ ಮಾಡತಕ್ಕಂಥ ಅವಕಾಶವಿತ್ತು. ಅಂಥ ಮಹತ್ವ ಪೂರಿತವಾದ ಕ್ಷಣವಾಗಿತ್ತು ಅದು. ಅಂಥ ಒಂದು ದಿವಸ ನಮ್ಮ ಇಡೀ ಇತಿಹಾಸದಲ್ಲೇ ಎಂದೂ ಬಂದಿರಲಿಲ್ಲ. ಇನ್ನು ಮುಂದೆಯೂ ಕೂಡ ಬರುವುದಿಲ್ಲ. ಆದರೆ, ಅಂಥ ಒಂದು ಕ್ಷಣವನ್ನು ಕಳೆದುಕೊಂಡು ಈಗ ಇಂಥ ಒಂದು ವೇಳೆಯಲ್ಲಿ ಈ ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡಬೇಕೆಂದು ಹೊರಟಿರುವಾಗ ರಾಜ್ಯಾಂಗದ ಅನೇಕ ತೊಡಕುಗಳು ಬಂದಿರುತ್ತವೆ ಎಂದು ಹೇಳಿದ್ದಾರೆ.

ನಮ್ಮ ಸಂಸ್ಥಾನದಲ್ಲಿ ಈ ಭೂಸುಧಾರಣ ಸಮಸ್ಯೆ ಈಗ ಎರಡನೆಯಾವರ್ತಿ ಸಭೆಯ ಮುಂದೆ ಬಂದಿರುತ್ತದೆ. ಆದರೆ, ನಾನೀಗ ಆ ಟೆನೆನ್ಸಿ ಆಕ್ಟಿನ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳಿದರೆ ಸಾಕಾಗಿದೆ. ಇತರ ಪ್ರಾಂತ್ಯಗಳಾದ ಮದ್ರಾಸ್‌, ಬೊಂಬಾಯಿ ಇತ್ಯಾದಿ ಭಾಗಗಳಲ್ಲಿ ಜಾರಿಯಲ್ಲಿರತಕ್ಕ ಕಾನೂನನ್ನು ಹೋಲಿಸಿ ಈ ಕಾನೂನನ್ನೂ ನೋಡಿದರೆ ಇದು ಒಂದು ಕಾನೂನೇ ಅಲ್ಲ. ಇಂಥ ಒಂದು ಕಾನೂನನ್ನು ಮಾಡುವುದರಿಂದ ರೈತರ ಯಾವ ಹಿತರಕ್ಷಣೆಯನ್ನೂ ಮಾಡುವುದಕ್ಕಾಗುವುದಿಲ್ಲ. ಹೀಗೆ ಇಂಥ ಮಸೂದೆಯನ್ನು ತರುವುದರ ಅರ್ಥವೇನೆಂದರೆ ತಮಗೆ ರೈತರ ಹಿತರಕ್ಷಣೆ ಮಾಡಬೇಕೆಂಬ ಬಗ್ಗೆ ಒಂದು ಅಭಿಲಾಷೆ ಅಷ್ಟಾಗಿ ಇರುವುದಿಲ್ಲವೆಂಬುದು. ಈ ಮಸೂದೆ ಎರಡನೆಯ ಸಲ ಈಗ ಸಭೆಯ ಮುಂದೆ ಬಂದಿದೆ.

ಹಿಂದೆಯೇ ಒಮ್ಮೆ ಬಂದಿತ್ತು. ದುರದೃಷ್ಟವಶಾತ್‌ ಆಗಿದ್ದ ಅಸಂಬ್ಲಿಗೆ ತನ್ನ ಕಾಲ ಮೀರಿಹೋಗಿ ರದ್ದಾಗಿ ಹೊದದ್ದರಿಂದ ಆ ಬಿಲ್ಲೂ ಕೂಡ ಹಾಗೆಯೇ ರದ್ದಾಗಿ ಹೋಯಿತೆಂದು ಹೇಳಲಾಯಿತು. ನನಗನ್ನಿಸುತ್ತಿದೆ, ನಮ್ಮ ದೇಶದಲ್ಲಿ ಇನ್ನೂ ರೈತರ ರಾಜ್ಯ ಉದಯವಾಗಿಲ್ಲ ಎಂದು. ಒಂದು ಮಾತನ್ನು ಬಹಳ ವಿಷಾದದಿಂದ ಹೇಳಬೇಕಾಗಿದೆ. ನಿಮ್ಮಿಂದ ಅಂಥ ರೈತರ ರಾಜ್ಯ ನಮ್ಮ ದೇಶದಲ್ಲಿ ಉದಯವಾಗುವ ಸಂಭವ ಕೂಡ ಇಲ್ಲ ಎಂದು. ಇಂಥ ಒಂದು ಕಾನೂನನ್ನು ಬಹಳ ಹಿಂದೆಯೇ ತರಬೇಕಾಗಿತ್ತು. ಹಳೆಯ ಪದ್ಧತಿಗಳು ನಾಮಾವಶೇಷವಾಗಿ ಹೋದ ಹೊರತು ಅಂಥ ಒಂದು ಹೊಸ ರಾಜ್ಯ ಆಗುವುದಕ್ಕೆ ಈ ದಿವಸ ಅವಕಾಶವು ಇರುವುದಿಲ್ಲವೆಂದೂ ನಾನು ತಿಳಿಸಬೇಕಾಗಿದೆ. ಹಿಂದಿನ ಹಳೆಯ ಸಮಾಜ ಪದ್ಧತಿಗಳು ಅಳಿಯಬೇಕು; ಹೊಸ ಸಮಾಜ ನಿರ್ಮಾಣವಾಗಬೇಕು, ಎಂದು ವಾದಿಸತಕ್ಕ ತಾವು ಈ ದಿವಸ ಮಂಡಿಸಿರತಕ್ಕ ಈ ಮಸೂದೆಯಲ್ಲಿ ಹೇಳಿರುವುದನ್ನು ನೋಡಿದರೆ “ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ” ಎನ್ನುವ ಹಾಗಿದೆ. ಈ ರೀತಿಯ ಮನೋಭಾವ ಇರುವುದರಿಂದ ತಾವು ಯಾವ ಒಂದು ಪ್ರಗತಿದಾಯಕ ಮಾರ್ಗದಲ್ಲೂ ಹೋಗುವುದಕ್ಕೆ ಸಾದ್ಯವಿಲ್ಲ. ಇಂಥ ಒಂದು ಮನೋಭಾವವನ್ನು ಇಟ್ಟುಕೊಂಡು ತಾವು ಒಂದು ಹೊಸ ರಾಜ್ಯವನ್ನಾಗಲಿ ಅಥವಾ ಒಂದು ಹೊಸ ಸಮಾಜವನ್ನಾಗಲಿ ಕಟ್ಟುವುದಕ್ಕೆ ಖಂಡಿತ ಸಾಧ್ಯವಿಲ್ಲ. ಈ ಕಾಂಗ್ರೆಸ್‌ಸರ್ಕಾರದ ಮನೋಭಾವವೆಲ್ಲಾ ಆ ಪಟ್ಟ ಭದ್ರತೆಯ ಕಡೆಗೆ ಇರುವಷ್ಟು ಇತ್ತ ಕಡೆಗಿಲ್ಲ. ಆ ಪಟ್ಟಭದ್ರತೆಗೆ ಮೂಲಾಧಾರವಾದ ಒಂದು ಪಾರ್ಟಿಯ ಕೈಗೊಂಬೆಗಳಾಗಿ ತಾವು ಇದ್ದೀರಿ. ತಾವು ತಮ್ಮ ಹೆಚ್ಚಿನ ಒಂದು ಗಮನವನ್ನೆಲ್ಲಾ ಆ ಪಟ್ಟಭದ್ರ ಪಾರ್ಟಿಗಳ ಹಿತಚಿಂತನೆಗೆ ಇಡಬೇಕಾಗಿ ಇರುವುದರಿಂದಲೂ ಮತ್ತು ಆ ಪಟ್ಟಭದ್ರ ಪಕ್ಷದಲ್ಲೇ ಅನೇಕರಿಗೆ ಇಂಥ ಜೋಡಿ ಮತ್ತು ಇನಾಂತಿಗಳು ಹೆಚ್ಚಾಗಿ ಇರುವುದರಿಂದಲೂ ಈ ಕಾನೂನಿಗೆ ಅಷ್ಟೊಂದು ಹೆಚ್ಚಿನ ಬೆಂಬಲವಿದೆಯೆಂದು ಹೇಳುವುದಕ್ಕಾಗುವುದಿಲ್ಲ.

ನಮ್ಮ ದೇಶದಲ್ಲಿ ಪರಿಸ್ಥಿತಿ ಎಷ್ಟು ಬದಲಾವಣೆಯಾಗಿದೆ? ಈ ಬದಲಾವಣೆಯಾಗಿರತಕ್ಕ ಪರಿಸ್ಥಿತಿಗೆ ಆ ಹಳೆಯ ಪದ್ಧತಿಗಳನ್ನೂ ರೀತಿ ನೀತಿಗಳನ್ನೂ ಹೊಂದಿಸಿಕೊಳ್ಳುವುದಕ್ಕೆ ಸಾಧ್ಯವೇ, ಅವುಗಳನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವೇ ಮತ್ತು ಸಾಧುವೇ? ಎಂಬ ಮಾತು ಬಹಳ ಪ್ರಬಲವಾಗಿ ನಮ್ಮ ಮುಂದೆ ಒಂದು ಸಮಸ್ಯೆಯಾಗಿ ನಿಂತಿದೆ. ಮೊನ್ನೆ ಡಾ. ರಾಧಾಕೃಷ್ಣರವರು ಶೃಂಗೇರಿಗೆ ಹೋಗಿ ಬಂದು ಶಿವಮೊಗ್ಗದಲ್ಲಿ ಭಾಷಣ ಮಾಡುತ್ತಾ ಹೇಳಿದರು : “ಇತಿಹಾಸದಲ್ಲಿ ಎಷ್ಟೋ ವಿಷಯಗಳು ಕೈಬಿಟ್ಟು ಹೋಗಿರುತ್ತವೆ; ಅಂದ ಮಾತ್ರಕ್ಕೇ ಆ ವಿಷಯಗಳು, ಆ ಸಂಸ್ಥೆಗಳು ಇಲ್ಲವೇ ಇಲ್ಲವೆಂದು ಭಾವಿಸಬಾರದು” ಎಂಬ ಮಹತ್ತರವಾದ ಮಾತನ್ನು ಹೇಳಿದರು.

ಅದನ್ನು ಹೇಳಬೇಕಾದರೆ ಅವರ ಭಾಷಣವನ್ನು ಪೂರ್ತ ಓದಬೇಕಾಗುತ್ತದೆ. ಇದನ್ನೇಕೆ ಹೇಳಿದೆನೆಂದರೆ, ಎಷ್ಟೋ ಧರ್ಮಸಂಸ್ಥೆಗಳ, ಧರ್ಮ ಸ್ಥಳಗಳ ವಿಚಾರವನ್ನು ಅನೇಕ ವೇಳೆ ಚರಿತ್ರೆಯಲ್ಲಿ ಬರೆದಿಟ್ಟಿರುವುದಿಲ್ಲ ಮತ್ತು ಆ ಚರಿತ್ರೆಗೆ ತಮ್ಮ ನಿಲವನ್ನೂ ಹೇಳುವುದಿಲ್ಲ. ಅಂದ ಮಾತ್ರಕ್ಕೆ ಆ ಧಾರ್ಮಿಕ ಸಂಸ್ಥೆಗಳು ಅಥವಾ ಇನ್ನೊಂದು Spiritual Kingdom ಇಲ್ಲವೇ ಇಲ್ಲವೆಂದೂ ನಾವು ಹೇಳುವುದಕ್ಕಾಗವುದಿಲ್ಲ. ಈ ಒಂದು ಪರಿಸ್ಥಿತಿಯಲ್ಲಿ ನಮ್ಮ ಇಡೀ ಭೌತಿಕ-ಲೌಕಿಕ ಪ್ರಪಂಚವೇನಿದೆ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳದೆ ಹೋದರೆ ವ್ಯವಹಾರ ನಡೆಯುವುದಿಲ್ಲ. ಆದ್ದರಿಂದ Plain ಆಗಿ ಹೇಳುವುದಾದರೆ ಯಾವುದೋ ಒಂದು ಕಾರಣಕ್ಕಾಗಿ ಶೃಂಗೇರಿ ಜಹಗೀರಿಯನ್ನು ಉಳಿಸಿಕೊಳ್ಳಬೇಕೆಂದು ಹೊರಟು ಇಲ್ಲಿ Statement of objects and reasonsನಲ್ಲಿ ಒಂದು ಮಾತು ಹೇಳಿದ್ದೀರಿ.

ಪಾಪ! ಬಿಲ್ಲಿನವರು ಮಾಡಿದ್ದನ್ನು ಹಿಂದಕ್ಕೆ ಹಾಕಿ ಈಗ ಮತ್ತೊಂದು ಬಿಲ್ಲನ್ನು ತಂದಿದ್ದೀರಿ. ಇದರಲ್ಲಿ Constitutional ಆಗಿ ವಿರೋಧವಾಗಿಯೂ, ಪರಿಸ್ಥಿತಿಗೆ ವಿರೋಧವಾಗಿಯೂ ವರ್ತಿಸಿ ಹೋಗುವುದಕ್ಕೆ ಅವಶ್ಯಕತೆಯಾದರೂ ಏನಿತ್ತು ಎಂದು ಕೇಳುತ್ತೇನೆ. ಈ ಬಿಲ್ಲಿನಲ್ಲಿ ನಾವು Abolish ಮಾಡಿರುವುದಕ್ಕೆ ಹೊರಟಿರುವ ಭೂಮಿ ೩,೬೯,೮೫ ಎಕರೆಯಾಗಿರುತ್ತದೆ. ಉಳಿದಿರುವ ಭೂಮಿ ೪,೨೩,೧೦೩ ಎಕರೆಗಳು. ಆದ್ದರಿಂದ ಮಾನ್ಯ ಗೆಳೆಯರು ಹೇಳಿದ ಹಾಗೆ ಅರ್ಧಂಬರ್ಧ ಮಾಡಿದಂತಾಯಿತು. ಇಂಥ ಒಂದು Exemption ಕೊಡಬೇಕೆಂದು ಹೇಳಿರುವುದು ಈಗಿರುವ ಬಿಲ್ಲಿನಲ್ಲಿ ಎಲ್ಲ ಪದ್ಧತಿಗಳೂ ವಿನಾಯಿತಿಯನ್ನೇ ಕೊಟ್ಟಂತಾಯಿತು!

ಅಲ್ಲಿಗೆ ಪ್ರಗತಿಯ ಹಾದಿಯನ್ನು ತುಳಿಯುವುದಕ್ಕೆ ಸಾಧ್ಯವಿಲ್ಲದೆ, ಹಾಗೆಯೇ ಅಲ್ಲಿಯೇ ಈಗಿರುವ ಬಿದ್ದು ಹೋಗುತ್ತಿರುವ ಮನೆಗಳಿಗೇ ಗುಜ್ಜು ಕೊಟ್ಟುಕೊಂಡು ಹೋಗಬೇಕೆಂದು ಹೇಳಿ ಈ ರೀತಿ ಬಿಟ್ಟಿದೆಯೆಂದು ಕಾಣುತ್ತದೆ. ಅಂದರೆ ಪ್ರಗತಿ ಮಾರ್ಗವನ್ನು ಅನುಸರಿಸುವ ಮನಸ್ಸು ಕಾಂಗ್ರೆಸ್‌ ಸರ್ಕಾರಕ್ಕೆ ಇನ್ನೂ ಬಂದಿಲ್ಲವೆಂದು ಕಾಣುತ್ತದೆ.

ಇದರಲ್ಲಿ Compensation ವಿಷಯ ಬಹಳ ಮುಖ್ಯವಾದುದು. ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವುದಕ್ಕೆ ಕೂಡ ಸಾಧ್ಯವಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಇಂಥ ಸರ್ವಮಾನ್ಯಗಳನ್ನು ಈ ರೀತಿಯಲ್ಲಿ ಅನುಭವಿಸಿಕೊಂಡು ಬಂದಿರುತ್ತಾರೋ ಅವರನ್ನೇ ನಾವು ಜನತೆಗೂ ಸರ್ಕಾರಕ್ಕೂ ಪರಿಹಾರ ಕೊಡಬೇಕು ಎಂದು ಕೇಳುವ ಪರಿಸ್ಥಿತಿಯೂ ಬಂದಿದೆ. ಏನೆಂದರೆ, ತಮಗೇ ಗೊತ್ತಿರುವ ಹಾಗೆ ನಾವು ಕೈಗೊಂಡಿರುವ ಯೋಜನೆಗಳೇನಿವೆಯೋ ಅವಕ್ಕೆ ಹಣ ಬಹಳವಾಗಿ ಬೇಕಾಗಿದೆ; ಮತ್ತು ದೇಶದಲ್ಲಿ ಬಡಜನರೇನಿದ್ದಾರೋ ಅವರಿಗೆ ಯಾವ ತೆರಿಗೆಯನ್ನು ಕೊಡುವುದಕ್ಕೂ ಸಾಧ್ಯವಿಲ್ಲದ ಹಾಗಾಗಿದೆ. ಅವರುಗಳು ಹೆಚ್ಚು ಎಂದರೆ ತಮ್ಮ ಕೆಲಸವನ್ನು ತಮಗಾಗಿ ಕೊಡಬಲ್ಲರು, ದೇಶಕ್ಕಾಗಿ ದುಡಿಯಬಲ್ಲರು ಅಷ್ಟೆ; ಹಣದ ರೂಪದಲ್ಲಿ ಯಾವ ವರಮಾನವನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ. ಇಂದಿಗೆ ಈ ಒಂದು ಅಂಶವನ್ನು ಗಮನದಲ್ಲಿಟ್ಟುಕೊಂಡು Compensation ಕೊಡಬಹುದು. ಅಂದರೆ, ಯಾರು ಈ ಇನಾಂತಿಯಿಂದಲೇ ಜೀವನ ಮಾಡಿಕೊಂಡಿದ್ದಾರೋ, ಯಾರು ಈ ಇನಾಂತಿ ರದ್ದಾಗುವುದರಿಂದ ಜೀವನಕ್ಕೆ ಆಸ್ಪದವಿಲ್ಲದೆ ಭಿಕಾರಿಗಳಾಗತಕ್ಕ ಸ್ಥಿತಿಯಲ್ಲಿರುತ್ತಾರೋ ಅವರು ಬೇರೆ ಯಾವುದಾದರೂ ಉದ್ಯೋಗಗಳನ್ನು ಅವಲಂಬಿಸುವ ತನಕ ಕೆಲವು ರಿಯಾಯ್ತಿ ಪರಿಹಾರಗಳನ್ನು ಅವರಿಗೆ ಕೊಡಬಹುದು. ಅಷ್ಟು ಬಿಟ್ಟರೆ, ಬೆರೆ ವಿಧದಲ್ಲಿ ಚೆನ್ನಾಗಿರುವವರಿಗೂ ಪರಿಹಾರಕೊಡುವುದು – ಸಾರ್ವತ್ರಿಕವಾಗಿ ಪರಿಹಾರ ಕೊಡುವುದು ನ್ಯಾಯವಲ್ಲ. ಇದರಲ್ಲಿ ಸೂಚಿಸಿರುವ ಹಾಗೆ, “Maximum rate of compensation in 20 times the basic income” ಎಂಬಂತೆ ಕೊಟ್ಟರೆ, ಸುಮಾರು ೧೮೦ ಲಕ್ಷ ರೂಪಾಯಿಗಳನ್ನು ಕೊಡ ಬೇಕಾಗುತ್ತದೆಂದು ಹೇಳಬಹುದು. ರೀತಿಯಾಗಿ ಒಂದು ಪರಿಹಾರವನ್ನು ಕೊಡುವುದಕ್ಕೆ ನಮ್ಮ ದೇಶದ ಹಣಕಾಸಿನ ಪರಿಸ್ಥಿತಿ ಇವೊತ್ತು ಉತ್ತಮವಾಗಿಲ್ಲ. ಅಷ್ಟು ಕೊಡಬೇಕು ಅಂದರೆ ಅವರ ವಿಶಿಷ್ಟ ಹಕ್ಕನ್ನೂ ಕಿತ್ತುಕೊಳ್ಳುವ ಹಾಗೆ ಕಾಗದದಲ್ಲೋ ಅಥವಾ ತಾಮ್ರದಲ್ಲೋ ಒಂದು ಶಾಸನವನ್ನು ಬರೆದು ಅವರಿಗೆ ಕೊಡಬಹುದು. ಈ ರೀತಿಯಾಗಿ ದೇಶಕ್ಕೋಸ್ಕರ ತ್ಯಾಗ ಮಾಡಿರುವಂಥವರು, ದೇಶದ ಹಿತದೃಷ್ಟಿಯಿಂದ, ತಮ್ಮ ಅಣ್ಣತಮ್ಮಂದಿರ ಹಿತದೃಷ್ಟಿಯಿಂದ ಮಾಡಿದ ಈ ತ್ಯಾಗದ ಕುರುಹಾಗಿ ಇಂಥ ಒಂದು ಸರ್ಟಿಫಿಕೇಟನ್ನು ಅಥವಾ ಟೈಟಲನ್ನು ಕೊಟ್ಟು ಈ ಪದ್ಧತಿಯನ್ನು ಇಲ್ಲಿಗೆ ಮುಕ್ತಾಯ ಮಾಡಬಹುದು.

ಇನ್ನು ಈ ಬಿಲ್ಲಿನಲ್ಲಿ ಮಾಡಿರುವ ಭೂ ಸುಧಾರಣೆ, ಭೂ ಸುಧಾರಣೆಯ ಬಗ್ಗೆ ಮೊದಲನೆಯದಾಗಿ ಇವೊತ್ತಿನ ರೈತರು ಯಾರು ಭೂಮಿಯ ಮೇಲೆ ಉಳುತ್ತಿದ್ದಾರೋ ಅವರು ಯಾವ ಪದ್ಧತಿಯ ಅಡಿಯಲ್ಲೇ ಬರಲಿ, ಸರ್ಕಾರದ ಅಡಿಯಲ್ಲೇ ಇರಲಿ, ಜೋಡಿ – ಇನಾಂತಿಗಳ ಜೋಡಿದಾರರ ಅಥವಾ ಇನಾಂತಿದಾರರ ಅಡಿಯಲ್ಲೇ ಇರಲಿ ನೇರವಾಗಿ ಜಮೀನು ಹಿಡಿದು ಬೇಸಾಯ ಮಾಡುವ ರೈತರ ಸಂಖ್ಯೆಯಷ್ಟು ಮತ್ತು ಅವರು ಎಷ್ಟು ದಿವಸಗಳಿಂದ ರೈತಾಪಿ ಉದ್ಯೋಗ ಮಾಡಿಕೊಂಡು ಬಂದಿದ್ದಾರೆ ಎಂಬ ರೈತಾಪಿ ಸರ್ವೆ ಮಾಡಬೇಕು. ಅವರು ಯಾರು ಯಾರಿಗೆ ಗೇಣಿ, ಗುತ್ತಿಗೆ ಅಥವಾ ಇನ್ನಾವ ಬೇರೆ ಸಾಗುವಳಿ ಮಾಡುತ್ತಾರೆ, ಸರ್ಕಾರಕ್ಕೆ ಕೊಡುತ್ತಾರೆಯೇ? ಖಾಸಗೀ ಜನರಿಗೆ ಕೊಡುತ್ತಾರೆಯೇ? ಅಥವಾ ಧರ್ಮ ಸಂಸ್ಥೆಗಳಿಗೆ ಕೊಡುತ್ತಿದ್ದಾರೆಯೇ? ಅವರ ಜೀವನ ಪರಿಸ್ಥಿತಿ ಹೇಗಿದೆ? ಈ ರೀತಿಯಾಗಿ ಎಲ್ಲ ರೈತರ ಒಂದು ಸರ್ವೆ ಮಾಡಿಕೊಂಡರೆ ನಾವು ಮೊದಲನೆಯ ಹೆಜ್ಜೆ ಇಟ್ಟಂತಾಗುತ್ತದೆ. ಅನಂತರ ಅವರ ದೃಷ್ಟಿಯಿಂದಲೇ ಹೆಚ್ಚಾಗಿ ಎಲ್ಲ ಸಮಸ್ಯೆಗಳನ್ನೂ ನೋಡಬೆಕು. ಆ ಸಂದರ್ಭದಲ್ಲಿ ಇನಾಂದಾರರ, ಜೋಡಿದಾರರ ಅಥವಾ ಜಮೀನ್ದಾರರ ದೃಷ್ಟಿ ಮರೆಯಬೇಕಾಗಿಲ್ಲ. ಆದರೆ, ಮೊದಲು ರೈತರನ್ನು ತೆಗೆದುಕೊಂಡು ಪ್ರಾರಂಭ ಮಾಡಬೆಕಾಗುತ್ತದೆ. ಆಗ ಅವರ ಅನಾನುಕೂಲತೆಗಳನ್ನು ಪರಿಹಾರ ಮಾಡಿಕೊಂಡು, ಅನಂತರ ಒಬ್ಬನಿಗೆ ಎಷ್ಟು ಜಮೀನಿರಬೇಕು ಪರಮಾವಧಿಯೆಂದರೆ ಎಷ್ಟಿರಬೆಕು ಎಂಬುದನ್ನು ಗೊತ್ತುಮಾಡಿಕೊಳ್ಳಬೇಕು. ಅದಾದ ಮೇಲೆ ಭೂಮಿಯನ್ನು ಅದರಂತೆ ಪುನಃ ಹಂಚಿಕೆ ಮಾಡಬೇಕು. ಈ ಪ್ರಕಾರ ಒಂದು ನೀತಿಯನ್ನು ಅನುಸರಿಸಬೆಕು. ಅದಿಲ್ಲದೆ ಇವೊತ್ತಿನ ಹಾಗೆ ದರಖಾಸ್ತು ಕೇಳುವುದು, ಅದನ್ನು ವಿಲೇವಾರಿ ಮಾಡುವುದು. ತಕರಾರು ಕೇಳುವುದು, ವಾಪಸು ತೆಗೆದುಕೊಳ್ಳುವುದು; ಕೊನೆಗೆ ಎರಡು ಭಾಗ ಮಾಡಿ ಜಮೀನಿರುವವರಿಗೆ ಮತ್ತೆ ಜಮೀನು ಕೊಡುವುದು, ಈ ರೀತಿಯಾದ ಒಂದು ಕಾನೂನು ಮುಖಾಂತರ ಸಮಸ್ಯೆ ಪರಿಹಾರವಾಗುತ್ತದೆಂದು ತಿಳಿದುಕೊಂಡಿದ್ದೀರಾ? ಹಾಗೆ ಯೋಚನೆ ಮಾಡಿದ್ದರೆ ಕೊನೆಗೆ ಆ ಸಮಸ್ಯೆಯಲ್ಲಿ ನಾವೇ ಪರಿಹಾರವಾಗಿ ಹೋಗುತ್ತೇವೆ!

ಈ ರೀತಿಯಾಗಿ ನಾವಿದನ್ನು ಭೂ ಸುಧಾರಣೆಗೆ ಒಂದು ಹೆಜ್ಜೆ ಎಂದು ಕರೆದರೂ ಕೂಡ ರೈತರ ಹಿತದೃಷ್ಟಿಯಲ್ಲಿ ಒಂದು ಹೆಜ್ಜೆಯಲ್ಲ. ಆದರೂ ಸರ್ಕಾರ ಈ ಒಂದು ಹೆಜ್ಜೆಯಿಡುವುದಕ್ಕೂ ವಿಮುಖವಾಗಿ ಅಧೈರ್ಯ ಪರಿಸ್ಥಿಯಿಂದ ಮನಸ್ಸು ಮಾಡಿಲ್ಲ! ಇಂಥ ಮಂದಗಾಮಿ ನೀತಿಯಿಂದ ಯಾವೊತ್ತೂ ರೈತರ ಸಮಸ್ಯೆ ಪರಿಹಾರವಾಗುವುದಿಲ್ಲ. ನಿಜವಾಗಿ ಯಾವುದನ್ನು ಮೊದಲು ತಾವು ಅಪ್ಪಣೆ ಕೊಡಿಸಿದಿರಿ- ‘ನಾವು ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಒಪ್ಪಿಗೆ ಕೊಟ್ಟಿದ್ದೇವೆ’ ಎಂದು, ಅದನ್ನು ಕಾರ್ಯತಃ ಮಾಡಬೇಕಾದರೆ, ಒಂದು Comprehensive Bill ತರಬೇಕು. ಅದ್ದರಿಂದ ಭೂ ಸುಧಾರಣೆಗೆ ಸರಿಯಾದ ಬಿಲ್ಲನ್ನು ತರಬೇಕೆಂದು ಹೇಳಿ ನಾನು ಈ ಇನಾಂ ರದ್ದಿಯಾತಿ ಬಿಲ್ಲನ್ನು ವಿರೋಧಿಸುತ್ತೇನೆ.