ತೆರಿಗೆ ಹೊರೆ

೧೩ ಮಾರ್ಚ್ ೧೯೫೪

ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಭಾಷಣವನ್ನು ಒಂದು ಪದ್ಯದಿಂದ ಆರಂಭ ಮಾಡಿದರು. ನಾನು ಅದೇ ರೀತಿ ಒಂದು ಪದ್ಯದಿಂದಲೇ ಪ್ರಾರಂಭ ಮಾಡಬಯಸುತ್ತೇನೆ. ಆದರೆ, ಮನಸ್ಸು ಮಾತ್ರ ಅಷ್ಟು ಹಗುರವಾಗಿಲ್ಲ. ಕಾಲದ ಮಿತಿ ಮೈಮೇಲೆ ಬಂದಾಗ ಅಂಥ ಹಗುರವಾದ ಮೂಡ್‌ನಲ್ಲಿರುವುದಕ್ಕೆ ಸಾಧ್ಯವಿಲ್ಲ. ಶ್ರೀಮಾನ್ ಹನುಮಂತಯ್ಯನವರು ತೆರಿಗೆ ಹೊರಿಸುವುದನ್ನು ಸಮರ್ಥಿಸುತ್ತಾ ‘ಸಾಲವನು ಕೊಂಬಾಗ ಹಾಲೋಗರುಂಡಂತೆ’ ಎಂಬ ಸರ್ವಜ್ಞನ ವಚನವನ್ನು ಉದಾಹರಿಸಿ ಸದಸ್ಯರನ್ನು ಮೂದಲಿಸಿ ಮಾತನಾಡಿದರು. ಅವರು ಹೇಳುವುದುದು ಯಾವ ರೀತಿಯೆಂದರೆ,

ಅಟ್ಟ ಏರಿದ ಮೇಲೆ ಏಣಿಯ ಹಂಗೇನು?
ಗದ್ದುಗೆಯನ್ನೇರಿದ ಮೇಲೆ ಜನರ ಹಂಗೇನು?
ನಾನು ಸರಕಾರ; ನೀ ಪ್ರಜೆ!
          ಕೊಡು ತೆರಿಗೆಇಲ್ಲದಿರೆ ನಡೆ ಸೆರೆಮನೆಗೆ
          ಎಂದನಾ ಮೈಸೂರ ಮುಖ್ಯಮಂತ್ರಿ

ಇನ್ನೂ ಹೀಗೆಯೇ ಬಹಳವಿದೆ. ಒಂದನ್ನು ಮಾತ್ರ ಹೇಳುತ್ತೇನೆ. ಈಗ ಜನರ ಪರಿತಾಪ ಯಾವ ರೀತಿಯಿದೆಯೆಂದರೆ,

            “ಉಣಲಿಲ್ಲ, ಉಡಲಿಲ್ಲ,
ದಂಡ ತೆರೆವುದು ಮಾತ್ರ ನಿಲ್ಲಲಿಲ್ಲ!
          ಬಿಡಲಾರೆ, ಬಿಡದಿರಲಾರೆ,
ಕಾಂಗ್ರೆಸ್ ಗಂಡನಾ ಎಂದು
          ಮರುಗಿತು ಮೈಸೂರು ಜನತೆ

ಇನ್ನೂ ಬೇಕಾದಷ್ಟು ಹೀಗೆಯೇ ಹೇಳಿ ಭಾಷಣ ಮಾಡಬಹುದು.

ನಿಜ, ಎಲ್ಲರೂ ತೆರಿಗೆ ಕೊಡಬೇಕು. ಆದರೆ ಯಾರು? ಯಾವಾಗ? ಜನತೆ ತನ್ನ ಉತ್ಪತ್ತಿಯಲ್ಲಿ ತನ್ನ ಅವಶ್ಯಕತೆಗಿಂತ ಜಾಸ್ತಿಯಾದ ಎಲ್ಲ ಭಾಗವನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಅದು ಜನತಾ ಸರಕಾರ. ಯಾರು ತಮ್ಮ ಅವಶ್ಯಕತೆಗಿಂತ ಹೆಚ್ಚಿಗೆ ಇಟ್ಟುಕೊಳ್ಳುತ್ತಾರೋ, ಅದು ಕಳ್ಳತನ, ಹೀಗೆ ಸಂಗ್ರಹಿಸಿ ಕೂಡಿಟ್ಟುಕೊಂಡ ವಸ್ತುವನ್ನು ಅಧಿಕಾರವನ್ನು, ಹಣವನ್ನು, ಬುದ್ಧಿಯನ್ನು ಅವರು ತಮ್ಮ ಸ್ವಂತ ಉಪಯೋಗಗಳಿಗಾಗಿ, ಸಮಾಜ ಶೋಷಣೆಗಾಗಿ ಉಪಯೋಗಿಸಬಾರದು ಇದು ಅನ್ಯಾಯ! ಇದು ಪಾಪ! ಅದು ನಡೆಯಬಾರದು. ಇದು ನ್ಯಾಯವಾಗಿ ಇರಬೇಕಾದ ತತ್ವ.

ಈಗ ಕಾಂಗ್ರೆಸ್ ಸರ್ಕಾರ ಅಥವಾ ಕಾಂಗ್ರೆಸ್ ಮಂತ್ರಿಗಳು ಜವಾಬ್ದಾರಿಯನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ. ಅಥವಾ ನಮಗೆ ಕಾಲಾವಾಕಾಶ ದೊರೆಯಲಿಲ್ಲ. ಈ ಪ್ರಯೋಗ ನಡೆಸಲಿಕ್ಕೆ ಎಂದು ಹೇಳಲು ಸಾಧ್ಯವಿಲ್ಲ. ಅವರ ರಾಜ್ಯ ಬಂದು ಏಳು ವರ್ಷಗಳಾದುವು. ಅವರ ಪಂಚವಾರ್ಷಿಕ ಯೋಜನೆ ನಮ್ಮ ದೇಶದಲ್ಲಿ ಪ್ರಾರಂಭವಾಗಿ ಈಗಾಗಲೇ ನಾಲ್ಕು ವರ್ಷಗಳಾದುವು. ಅವರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ದೇಶದ ಜನತೆಗೆ ಕೊಟ್ಟ ಆಶ್ವಾಸನೆಗಳೇನು? ಇದುವರೆಗೆ ಅವುಗಳನ್ನು ಎಷ್ಟರಮಟ್ಟಿಗೆ ಕಾರ್ಯಗತ ಮಾಡಿದ್ದಾರೆ ಎನ್ನುವುದನ್ನು ಇವೊತ್ತು ಜನತೆಯ ಅರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿಯು ತೋರಿಸಬಲ್ಲದು. ಜನತೆಗೆ ಇದು ಗೊತ್ತು. ಸರ್ಕಾರ ಎಷ್ಟರಮಟ್ಟಿಗೆ ಸಾಮಾನ್ಯರ ಜೀವನವನ್ನು ಸುಧಾರಿಸಿದೆ, ಜೀವನಮಟ್ಟವನ್ನು ಹೆಚ್ಚು ಮಾಡಿದೆ, ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದೆ ಎಂಬುದನ್ನು ಜನತೆ ಹೇಳಬಲ್ಲದು. ಈ ಹೊತ್ತು ತಿರುವಾಂಕೂರು – ಕೊಚ್ಚಿನ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಅದನ್ನು. ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿಗಳು, ಪ್ರಧಾನ ಮಂತ್ರಿ ಜವಹರಲಾಲ್ ನೆಹರೂರವರಿಂದ ಹಿಡಿದು ಮುಖ್ಯಮಂತ್ರಿಗಳಾದ ಹನುಮಂತಯ್ಯನವರಿಂದ ಹಿಡಿದು, ಈ ಅಸಂಖ್ಯಾತ ಸಂಖ್ಯೆಯಲಿರುವ ಕಾಂಗ್ರೆಸ್ ಮುಖಂಡರುಗಳೆಲ್ಲರೂ ಕೂಡ ದೇಶದ ಈ ಪರಿಸ್ಥಿತಿಯನ್ನು ಸ್ವಲ್ಪ ಆಳವಾಗಿ ಯೋಚನೆ ಮಾಡಬೇಕು. ರಾಜ್ಯಭಾರ ಮಾಡತಕ್ಕದ್ದು ಅಷ್ಟು ಹಗುರವಾದದ್ದಲ್ಲ. ಮಕ್ಕಳಾಟವಲ್ಲ!

ಲಕ್ಷಾಂತರ ಕೋಟ್ಯಾಂತರ ಜನರ ಜೀವನದೊಂದಿಗೆ ತಾವಿಂದು ಆಟವಾಡುತ್ತಿದ್ದೀರಿ! ಒಂದು ಕ್ಷಾಮ ಬಂದರೆ ಲಕ್ಷಾಂತರ ಜನ ಸ್ಮಶಾನ ಯಾತ್ರೆ ಮಾಡುತ್ತಾರೆ. ತಮಗೆ ಈ ಅರಿವೇ ಇಲ್ಲದೆ ಆಧಿಕಾರ ಸ್ಥಾನದಲ್ಲಿ ಜವಾಬ್ಧಾರಿಯನ್ನು ಅರ್ಥಮಾಡಿಕೊಳ್ಳದೇ ಇದ್ದರೆ ದೇಶದಲ್ಲಿ ಜನರು ದಂಗೆ ಏಳುತ್ತಾರೆ, ಕ್ರಾಂತಿಯಾಗುತ್ತದೆ. ಅಂತಹ ಸರ್ಕಾರಗಳು ಉರುಳುತ್ತವೆ ಎನ್ನುವುದನ್ನು ನಾವಿಂದು ನೋಡುತ್ತಿಲ್ಲವೇ? ದಿನ ನಿತ್ಯವೂ ಇದು ನಮಗೆ ಮನವರಿಕೆಯಾಗುತ್ತಿಲ್ಲವೇ? ಕಾಂಗ್ರೆಸ್ಸೇನೂ ವರಪ್ರಸಾದದಿಂದ ಹುಟ್ಟಿದ ದೈವೀ ಸಂಸ್ಥೆಯೇನಲ್ಲ. ಅದೇನು ಇಲ್ಲೇ ಶಾಶ್ವತವಾಗಿ ಇರತಕ್ಕ ಸಂಸ್ಥೆಯೇ? ಕಾಲಾನುಕ್ರಮದಲ್ಲಿ ಅಳಿಸಿಹೋಗತಕ್ಕ ಸಂಸ್ಥೆ ಅದೂ ಕೂಡ.

ವಿಧಾನ ಪರಿಷತ್

೧೮ ಮಾರ್ಚ್೧೯೫೪

ಈ ಸಂಸ್ಥಾನದಲ್ಲಿ ಈಗಿರುವ ವಿಧಾನ ಪರಿಷತ್ತನ್ನು ರದ್ದುಗೊಳಿಸುವುದು ಉಚಿತವಾದುದೆಂದು ನಾನು ಅಭಿಪ್ರಾಯಪಡುತ್ತೇನೆ. ನಾವು ಈ ವೈಧಾನಿಕ ಪ್ರಜಾತತ್ವವನ್ನು ಒಪ್ಪಿಕೊಂಡಿದ್ದೇವೆ ಮತ್ತು ರಾಜ್ಯಾಂಗದ ವಿಧಿಗಳಿಗೆ ಅನುಸಾರವಾಗಿ ರಾಜ್ಯವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ರಾಜ್ಯಾಂಗದ ವಿಧಿಗನುಸಾರವಾಗಿ ನಮ್ಮ ದೇಶದ ಕೆಲವು ಸಂಸ್ಥಾನಗಳಲ್ಲೂ, ಪ್ರಾಂತ್ಯಗಳಲ್ಲೂ ಎರಡು ಮನೆಗಳ ಅವಕಾಶವನ್ನು ಕಲ್ಪಿಸಿರುತ್ತಾರೆ. ಮೈಸೂರು ಸಂಸ್ಥಾನದಲ್ಲಿ ಮೊದಲಿನಿಂದಲೂ ಎರಡು ಮನೆಗಳನ್ನು ಅದನ್ನೇ ಈಗಲೂ ಮುಂದುವರಿಸಿಕೊಂಡು ಬಂದಿದೆ. ಆದರೆ ನಮ್ಮ ಅನುಭವದಲ್ಲಿ ಈಗ ಪ್ರಾಂತ್ಯಗಳಲ್ಲಿ ಮತ್ತು ಸಂಸ್ಥಾನಗಳಲ್ಲಿ ಇಂತಹ ಎರಡು ಮನೆಗಳ ಅವಶ್ಯಕತೆ ಇದೆ. ಕೇಂದ್ರಕ್ಕೆ ಒಂದು ಲೋಕಸಭೆ, ಇನ್ನೊಂದು ರಾಜ್ಯ ಪರಿಷತ್ತು. ಏಕೆಂದರೆ, ಅಲ್ಲಿ ಅನೇಕ ಪ್ರಾಂತ್ಯಗಳ ಮತ್ತು ಸಂಸ್ಥಾನಗಳ ಪ್ರತಿನಿಧಿಗಳು ಇರಬೇಕಾದ ಅವಶ್ಯಕತೆ ಇದೆ. ಇನ್ನು ಈ ಪ್ರಜಾತಂತ್ರ ಮೂಲವನ್ನು ಹುಡುಕುತ್ತಾ ಹೋದರೆ, ಇಂಗ್ಲೆಂಡಿನಲ್ಲಿ ಮೊದಲು ಹೌಸ್‌ ಆಫ್‌ ಲಾರ್ಡ್ಸ ಮಾತ್ರ ಇತ್ತು. ಆ ಮೇಲೆ ಹೌಸ್‌ ಆಫ್‌ ಕಾಮನ್ಸ್‌ ಬಂತು. ಈಗ ಕಾಮನ್ಸ್‌ಸಭೆಗೆ ವಿಶೇಷವಾಗಿ ಎಲ್ಲಾ ಆಧಿಕಾರವಿದೆ. ಆದರೂ ಸಹ ಹೌಸ್‌ ಆಫ್‌ ಲಾರ್ಡ್ಸ್‌ ಎಂಬುದು ಇನ್ನೂ ಇದೆ. ಇಲ್ಲಿ ನಮ್ಮ ರಾಜ್ಯಾಂಗ ವಿಧಿಗನುಸಾರವಾಗಿ ನಡೆಯುವುದಾಗಿದ್ದರೆ ಮೇಲ್ಮನೆಯ ಅವಶ್ಯಕತೆಯಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈಗ ಪ್ರಜಾಧಿಕಾರವನ್ನು ಪ್ರತಿಬಿಂಬಿಸುತ್ತಿರುವ ಕೆಳಮನೆಯೇ ಎಲ್ಲ ಅನುಕೂಲವನ್ನು ಒದಗಿಸಿ ಕೊಡುತ್ತಿರುವಾಗ, ಮೇಲ್ಮನೆ ಇರುವುದು ವೃಥಾ ಖರ್ಚಿನ ವ್ಯವಸ್ಥೆಯೆಂದು ತಿಳಿಸಲಿಚ್ಚಿಸುತ್ತೇನೆ. ಇದಕ್ಕಿಂತ ಹೆಚ್ಚಾಗಿ ಈ ವಿಚಾರವಾಗಿ ಏನನ್ನೂ ಸೂಚಿಸುವುದಕ್ಕೆ ಸಾಧ್ಯವಿಲ್ಲದೇ ಇರುವುದರಿಂದ ಈಗ ಅನಿವಾರ್ಯವಾಗಿ ಈ ವ್ಯವಸ್ಥೆಯನ್ನು ರೂಢಿಸಿಕೊಂಡು ಹೋಗಬೇಕಾಗಿದೆ. ಈಗಾಗಲೇ ನಮ್ಮ ಅನುಭವಕ್ಕೆ ಬಂದಿದೆ, ಮುಂಬಯಿ ಪ್ರಾಂತ್ಯದಲ್ಲಿ ಅಲ್ಲಿಯ ವಿಧಾನಸಭೆಯಲ್ಲಿ ವಿಧಾನ ಪರಿಷತ್ತು ರದ್ದಾಗಬೇಕೆಂದು ಒಂದು ನಿರ್ಣಯ ಅಂಗೀಕಾರವಾಗಿದೆ. ಕಾಂಗ್ರೆಸ್‌ಕಾರ್ಯಕಾರಿ ಸಮಿತಿಯೂ ಸಹ ಈ ವಿಷಯವನ್ನು ತೀರ್ಮಾನ ಮಾಡುವುದಕ್ಕೆ ಆಯಾ ಪ್ರಾಂತ್ಯಗಳಿಗೆ ಬಿಟ್ಟಿರುತ್ತಾರೆ. ಪ್ರಜಾ ಸೋಷಲಿಸ್ಟ್‌ಪಾರ್ಟಿಯೂ ಸಹ ಪ್ರಾಂತ್ಯ ಮತ್ತು ಸಂಸ್ಥಾನಗಳಲ್ಲಿ ಎರಡು ಮನೆಗಳ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಮೇಲುಮನೆ ಎಂಬುದು ಹಣಕಾಸಿನ ಮೇಲೆ ಯಾವ ಒಂದು ಅಧಿಕಾರವನ್ನೂ ಹೊಂದಿಲ್ಲ ಮತ್ತು ಸ್ವತಂತ್ರವಾಗಿಲ್ಲ; ಆದುದರಿಂದ ನಮ್ಮ ಸಂಸ್ಥಾನದಲ್ಲಿಯೂ ಸಹ ಈಗಿರತಕ್ಕ ವಿಧಾನ ಪರಿಷತ್ತನ್ನು ರದ್ದುಗೊಳಿಸುವುದರಿಂದ ರಾಜ್ಯಾಂಗ ರೀತಿಯಲ್ಲಾಗಲಿ ಅಥವಾ ಪ್ರಜೆಗಳಿಗೆ ಪ್ರಾತಿನಿಧ್ಯ ಒದಗಿಸಿ ಕೊಡುವ ರೀತಿಯಲ್ಲಾಗಲಿ ಹಾನಿಯಿಲ್ಲ; ಮೇಲಾಗಿ, ಇದನ್ನು ರದ್ದುಗೊಳಿಸುವುದರಿಂದ ಹಣಕಾಸಿನ ದೃಷ್ಟಿಯಿಂದಲೂ ಕಾರ್ಯದಕ್ಷತೆಯ ದೃಷ್ಟಿಯಿಂದಲು ಮತ್ತು ಹೆಚ್ಚು ತ್ವರಿತವಾಗಿ ಕೆಲಸ ಕಾರ್ಯ ನಡೆಯುವ ದೃಷ್ಟಿಯಿಂದಲು ಕ್ಷೇಮಕರವೆಂದು ಹೇಳಿ ನಾನು ಈ ಖೋತಾ ನಿರ್ಣಯವನ್ನು ಸಮರ್ಥಿಸುತ್ತೇನೆ.

ಜೈಲು ವ್ಯವಸ್ಥೆ

೨೦ ಮಾರ್ಚ್೧೯೫೪

ನನ್ನ ಅನುಭವದಲ್ಲಿ ಕಂಡುಬಂದ ಹಾಗೆ ನಮ್ಮ ಜೈಲುಗಳಲ್ಲಿ ಕೈದಿಗಳಿಗೆ ಕೊಡುವ ರಾಗಿ ಮುದ್ದೆ ಮತ್ತು ಇತರ ಆಹಾರವನ್ನು ಸಾಮಾನ್ಯವಾಗಿ ನಾಯಿಗಳೂ ತಿನ್ನುವುದಿಲ್ಲ. ಅವರು ತಮ್ಮ ಅಪರಾಧಕ್ಕೆ ಶಿಕ್ಷೆಯನ್ನು ಅನುಭವಿಸುವುದಕ್ಕೆ ಅಲ್ಲಿ ಸೇರಿರುತ್ತಾರೆ, ನಿಜ. ಆದರೂ ಕೂಡ ಮಾನವೀಯತೆಯ ದೃಷ್ಟಿಯಿಂದ ಯಾವುದೇ ಸರಕಾರ ಆಗಲಿ ಅವರನ್ನು ಆ ರೀತಿ ಕುನ್ನಿಗಳಿಗಿಂತ ಕಡೆಯಾಗಿ ನೋಡಿಕೊಳ್ಳುತ್ತಿರುವುದು ತೀರ ನಿರ್ದಯ, ನಿರ್ಲಕ್ಷ್ಯ ಮತ್ತು ಅಮಾನುಷತೆಯನ್ನು ತೋರಿಸುತ್ತದೆ. ಆದ್ದರಿಂದ ಅವರಿಗೆ ಕಾನೂನು ರೀತ್ಯಾ ಏನು ಕೊಡಬೆಕು ಎಂದಿದೆಯೋ ಅಷ್ಟನ್ನು ಪೂರ್ತಿ ಜೈಲಿನ ಅಧಿಕಾರಿಗಳು ಕೊಡುವಂತೆ ನೋಡಿಕೊಲ್ಳಬೇಕು. ಈ ರೀತಿ ಈಗ ನಡೆಯುತ್ತಾ ಇಲ್ಲ ಎಂದು ನಾನು ವಿಷಾದದಿಂದ ಹೇಳಬೇಕಾಗಿದೆ. ಈ ಆಹಾರವನ್ನು ಕೊಡುವುದರಲ್ಲಿ ಕಂಟ್ರಾಕ್ಟರುಗಳಾಗಲಿ ಅಥವಾ ಕಂಟ್ರಾಕ್ಟರುಗಳು ಮತ್ತು ಜೈಲು ಅಧಿಕಾರಿಗಳು ಸೇರಿಯೇ ಆಗಲಿ ಅವರ ಊಟವನ್ನು ಯಾರೂ ಕಸಿದು ತೆಗೆದುಕೊಳ್ಳಬಾರದು. ಅದು ಒಂದು ದೊಡ್ಡ ಅಪರಾಧವಾಗುವುದಲ್ಲದೆ ಪಾಪ ಎಂತಲೂ ಹೇಳಬಹುದು. ಅಂತೂ ಅವರಿಗಾಗಿ ಸರ್ಕಾರ ಏನು ಮಾಡಿಕೊಟ್ಟಿದೆಯೋ ಅದರಲ್ಲಿ ಏನೂ ತೆಗೆದುಕೊಳ್ಳಬಾರದು. ಆ ರೀತಿ ಆಗತಕ್ಕದ್ದನ್ನು ಸರ್ಕಾರದವರು ಪರಿಶೀಲನೆ ಮಾಡಿ ತಡೆಗಟ್ಟಬೇಕೆಂದು ಕೇಳುತ್ತೇನೆ.

ಎರಡನೆಯದಾಗಿ, ಈಗೇನೋ ಸದ್ಯಕ್ಕೆ ರಾಜಕೀಯ ಕೈದಿಗಳು ಹೆಚ್ಚು ಸಂಖ್ಯೆಯಲ್ಲಿ ಇಲ್ಲ! ಜೈಲುಗಳೇನೋ ಇವೆ. ಬಳ್ಳಾರಿಯಲ್ಲಿ ಒಂದು ಜೈಲು ಇದೆ. ಬೆಂಗಳೂರಿನಲ್ಲಿ ಒಂದು ದೊಡ್ಡ ಜೈಲು ಇದೆ. ನನ್ನ ಅನುಭವದಲ್ಲಿ ಬಂದ ಹಾಗೆ; ಕಾಂಗ್ರೆಸ್ಸರ್ಕಾರದಲ್ಲಿ ರಾಜಕೀಯ ಕೈದಿಗಳನ್ನುಹಂಡೆ ಕದ್ದವರು ಅಥವಾ ಮಂಡೆ ಒಡೆದವರು ಇವರೆಲ್ಲರಿಗಿಂತ ತೀರ ಕನಿಷ್ಟವಾಗಿ ಕಡೆಗಣಿಸಿ ನೋಡಿದ್ದು. ಕಾಗೋಡು ಹೋರಾಟ ನನ್ನ ಅನುಭವಕ್ಕೆ ಬಂತು. ಅದು ಹಾಗಾಗಬಾರದು. ಈಗ ಹಿಂದೆ ರಾಜಕೀಯ ಕೈದಿಗಳಾಗಿದ್ದವರೇ ಅಧಿಕಾರದಲ್ಲಿ ಇರುವುದರಿಂದ ಅಲ್ಲಿ ಏನೇನು ಕಷ್ಟವಿದೆ ಎಂಬುದರ ಅನುಭವ ಅವರಿಗೇ ತುಂಬ ಇದೆ. ಆದ್ದರಿಂದ ಒಂದು ವೇಳೆ ನಾನೇ ಆಗಲಿ ಬೇರೆ ರಾಜಕೀಯ ಪಕ್ಷದವರೇ ಆಗಲಿ ಜೈಲಿಗೆ ಹೋದರೆ ಅವರಿಗೆ ತಕ್ಷಣ ಸರಿಯಾದ ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂಬುದು ಮತ್ತೊಂದು ಅಂಶ.

ಆಮೇಲೆ ಕೊನೆಯದಾಗಿ, ಕೈದಿಗಳಿಂದ ಕೆಲಸ ತೆಗೆದುಕೊಳ್ಳುವುದು, ಕೆಲಸ ತೆಗೆದು ಕೊಳ್ಳಬೇಕಾದರೆ ಸಕ್ರಮ ಶಿಕ್ಷೆ ವಿಧಿಸುವುದರಿಂದ ಕೆಲಸ ತೆಗೆದುಕೊಳ್ಳಬೇಕು. ಇಲ್ಲಿ ಬಯಲೊಳಗೆ ಕೆಲಸ ನಡೆಯುತ್ತ ಇದೆ. ಈಗ ಅವರಿಗೇನೋ ಸ್ವಲ್ಪ ಸಂಬಳ ಕೊಡಬೆಕು, ಅದರಿಂದ ಅವರ ಮೇಲೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತೀರಿ; ಆದರೆ ಸರಿಯಾದ ರೀತಿಯಲ್ಲಿ ನೋಡುವ ಹಾಗೆ ಮಾಡಬೇಕು. ಅವರು ಕೆಲಸವನ್ನೇನೋ ಇತರ ಕೆಲಸಗಾರರು ಮಾಡಿದ ಹಾಗೆಯೇ ಮಾಡುತ್ತಾರೆ; ಅದರ ಜೊತೆಗೆ ಅವರಿಗೆ ವಿಪ್ಪಿಂಗ್‌ ಬೇರೆ ಇದೆ, ಕೈದಿಯಂತೆ ಕೆಲಸ ಮಾಡುವುದು ಬಹಳ ಒಂದು ರುದ್ರ ದೃಶ್ಯ. ಅದನ್ನು ಸ್ವಲ್ಪ ಪರಿಶೀಲನೆ ಮಾಡಿ ಕೆಲಸ ಮಾಡಿಸುವ ಕಾಲದಲ್ಲಿ ಅವರು ಅಲ್ಲಿಯೇ ಸತ್ತು ಹೋಗದೇ ಇರುವ ರೀತಿಯಲ್ಲಿ ಏರ್ಪಾಡು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಧರ್ಮ

ಏಪ್ರಿಲ್೧೯೫೪

ಧರ್ಮವು ಸರ್ವಕಾಲಕ್ಕೂ ಉಳಿಯತಕ್ಕದ್ದು. ಆದರೆ, ಮನುಷ್ಯ ತನ್ನ ಆಚರಣೆಯಲ್ಲಿ ಯಥಾನುಶಕ್ತಿ ಆಚರಿಸುತ್ತೇನೆ ಎಂದು ಹೇಳಿ ಕ್ರಮ ಕ್ರಮವಾಗಿ ಅದರ ಕಷ್ಟವಾದ ಭಾಗವನ್ನು ಬಿಡುತ್ತಾ ಬರುತ್ತಾನೆ; ಅದು ಅಷ್ಟರಮಟ್ಟಿಗೆ ಕಲುಷಿತವಾಗುತ್ತದೆ. ಯಾವತ್ತು ನಮ್ಮ ಪ್ರತಿನಿತ್ಯದ ಆಚಾರದಲ್ಲಿ ವಿಚಾರಶೂನ್ಯವಾಗುತ್ತಾ ಹೋಗುತ್ತದೆಯೋ ಅಂದಿನ ಆ ಆಚಾರ ಗೊಡ್ಡು ಆಚಾರವಾಗುತ್ತದೆ. ಅದರ ಹಿಂದೆ ಇರತಕ್ಕ ಭಾವನೆ ಮೂಢ ಭಾವನೆಯಾಗುತ್ತದೆ. ಹೀಗೆ ನಾವು ಅನೇಕ ವರ್ಷಗಳಿಂದ ಧರ್ಮದ ಆಚರಣೆಯಲ್ಲಿ ಅನೇಕ ಮುಖ್ಯವಾದ ಅಂಶಗಳನ್ನು ಕೈ ಬಿಡುತ್ತಾ ಬಂದು ಇವೊತ್ತು ನಮ್ಮ ನಡವಳಿಕೆಯಲ್ಲಿ ಒಂದು ಶುಷ್ಕತೆ, ತಿರುಳಿಲ್ಲದಿರುವಿಕೆ ಮತ್ತು ಮೌಢ್ಯದಿಂದ ತುಂಬಿರುವ ಭಾವಾರ್ಥವನ್ನು ಇಟ್ಟುಕೊಂಡಿರುವುದನ್ನು ನಾವು ನೋಡುತ್ತಾ ಇದ್ದೇವೆ. ವಿಚಾರ ರಹಿತವಾದ ಆಚಾರವನ್ನು ನಾವು ಅನುಸರಿಸುತ್ತಾ ಇದ್ದೇವೆ.

ನನ್ನ ದೃಷ್ಟಿ ಸಾಮಾನ್ಯವಾಗಿ ರಾಜಕೀಯ ದೃಷ್ಟಿ, ಸಮಾಜದಲ್ಲಿ ಹೆಚ್ಚಾಗಿ ಆರ್ಥಿಕ ಸಮಾನತೆ ಉಂಟಾಗಬೇಕು, ಸಮಾಜಿಕ ಸಮಾನತೆ, ಸ್ವಾತಂತ್ರ್ಯ ಇರಬೇಕು ಎಂಬುದನ್ನೇ ನಾನು ಹೆಚ್ಚು ಪ್ರಾಮುಖ್ಯವಾಗಿ ನೋಡತಕ್ಕವನು; ಅದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇನೆ ಮತ್ತು ಧರ್ಮ ಪ್ರತಿಯೊಬ್ಬ ಮನುಷ್ಯನ ವೈಯಕ್ತಿಕವಾದ ಒಂದು ಭಾವ ಎಂದು ಕೂಡ ನಾನು ತಿಳಿದುಕೊಂಡಿದ್ದೇನೆ. ಆದ್ದರಿಂದ ನಾನು ಒಂದು ಧರ್ಮಕ್ಕೆ ಉತ್ತೇಜನಕೊಟ್ಟು ಮತ್ತೊಂದು ಧರ್ಮವನ್ನು ಹಳಿಯಬೇಕಾಗಿಲ್ಲ. ಕೆಲಸ ಮಾಡಬೇಕೆಂಬ ಉದ್ದೇಶ ನನಗೆ ಇಲ್ಲ.

ಭೂಮಿ

೧೪ ಏಪ್ರಿಲ್೧೯೫೪

ನನ್ನ ಅಭಿಪ್ರಾಯದಲ್ಲಿ ಭೂಮಿ ಒಂದು ಆಸ್ತಿಯ ಪಟ್ಟಿಯಲ್ಲಿ ಸೇರಿರುವುದೂ ತಪ್ಪು. ಭೂಮಿಯನ್ನು ಆಸ್ತಿ ಪಟ್ಟಿಯಿಂದ ಬಂಧಮುಕ್ತ ಮಾಡಬೇಕು. ಅದು ಉತ್ಪತ್ತಿಯ ಸಾಧನವಾಗಿ ಇರುವುದರಿಂದ ಯಾರು ಭೂಮಿಯನ್ನು ಉಳುಮೆ ಮಾಡುತ್ತಾರೊ, ಯಾರು ಭೂಮಿಯ ಮೇಲೆ ಕೃಷಿ ಮಾಡಿ, ಕೆಲಸಮಾಡಿ ಅದರಿಂದ ಉತ್ಪನ್ನವನ್ನು ಮಾಡುತ್ತಾರೋ ಉತ್ಪನ್ನ ಅವರ ಸ್ವತ್ತು ಆಗಿರಬೇಕು; ಭೂಮಿಯು ಮಾರತಕ್ಕ ಕೊಳ್ಳತಕ್ಕಂಥ ಒಂದು ವಸ್ತುವಾಗಿರಬಾರದು; ಮನುಷ್ಯನ ಆಸ್ತಿತ್ವಕ್ಕೆ ಅದು ಬಲಿಯಾಗಬಾರದು ಎಂಬ ಒಂದು ನೀತಿಯನ್ನು ನಾವು ಇಟ್ಟುಕೊಳ್ಳುವುದು ಬಹಳ ಉಚಿತ ಎಂದು ಕಾಣುತ್ತದೆ. ನಮ್ಮ ದೇಶದಲ್ಲಿ ಈ ಭೂ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಇದುವರೆಗೂ ನಾವು ಕಂಡ ಹಾಗೆ ಮೂರು ಮಾರ್ಗಗಳನ್ನು ನೋಡಿದ್ದೇವೆ. ಒಂದು ಕಮ್ಯೂನಿಸ್ಟರ ತೆಲಂಗಾನ ಮಾರ್ಗ : ಇನ್ನೊಂದು ಕಾನೂನು ಮಾಡಿ ಭೂಮಿಯನ್ನು ಸಮಾನವಾಗಿ ಹಂಚಿಕೆಮಾಡತಕ್ಕ ಮಾರ್ಗ; ಮೂರನೆಯದು, ಇತ್ತೀಚೆಗೆ ವಿನೋಬಾ ಭಾವೆಯವರು ಆಚರಣೆಗೆ ತಂದಿರತಕ್ಕ ಭೂಮಿಯನ್ನು ಇದ್ದವರಿಂದ ದಾನವಾಗಿ ತೆಗೆದುಕೊಂಡು ಇಲ್ಲದವರಿಗೆ ಹಂಚಿಕೆಮಾಡತಕ್ಕ ಮಾರ್ಗ. ಈ ಮೂರು ಮಾರ್ಗಗಳನ್ನು ನಾವು ನೋಡಿದ್ದೇವೆ. ಇಂದು ಕಾನೂನು ಮಾರ್ಗ ಮತ್ತು ಹಿಂಸೆಯನ್ನು ಮಾಡಿ ಕ್ರಾಂತಿಯನ್ನೆಬ್ಬಿಸುವ ಮಾರ್ಗ ಇವೆರಡನ್ನೂ ಬಿಟ್ಟು ವಿನೋಬಾ ಭಾವೆಯವರು ಭೂಮಿಯ ಮಾಲೀಕರಿಂದ ತಮ್ಮ ಭೂಮಿಯ ಒಂದು ಭಾಗವನ್ನು ದಾನವಾಗಿ ಕೊಡಿ ಎಂದು ಕೇಳುತ್ತಾ ಇದ್ದಾರೆ. ಇದನ್ನೆಲ್ಲಾ ನಾವು ಯೋಚನೆ ಮಾಡಿ ನೋಡುವುದಾದರೆ, ಇವೊತ್ತು ಭೂಮಿಯ ಸಮಸ್ಯೆ ಹಿಂದಿಗಿಂತ ಉತ್ಕಟವಾಗಿದೆ ಎಂದು ವೇದ್ಯವಾಗುತ್ತದೆ. ಆದ್ದರಿಂದ ಮೈಸೂರು ಸಂಸ್ಥಾನದಲ್ಲಿ ಒಂದು ಪ್ರಗತಿಯನ್ನು ಸಾಧಿಸಬೇಕಾದರೆ ಬರೀ ಒಂದು ಟೆನೆನ್ಸಿ ಕಾನೂನು ಅಥವಾ ರದ್ದಿಯಾತಿ ಮಸೂದೆ ಮಾಡಿ ನಾವು ಸ್ವಸ್ಥವಾಗಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಅಥವಾ ಅಷ್ಟಕ್ಕೆ ಕೈ ಬಿಟ್ಟರೆ, ನಮ್ಮ ರೈತರ ಅಭಿವೃದ್ದಿ ಆಯಿತು ಅಥವಾ ಭೂಮಿಯ ಸಮಸ್ಯೆ ಪರಿಹಾರವಾಯಿತು ಎಂದು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕೆ ನಾವು ಸೂಚಿಸುವುದೇನೆಂದರೆ, ನಮ್ಮ ಸಂಸ್ಥಾನದಲ್ಲಿ ಯಾರಿಗೇ ಆಗಲಿ ಅವರ ಕುಟುಂಬಕ್ಕೆ ಅನುಸಾರವಾಗಿ ಎಷ್ಟು ಭೂಮಿಯನ್ನು ಅವರ ಸ್ವಂತ ಶ್ರಮದಿಂದ ಉಳುಮೆ ಮಾಡಬಹುದೋ ಅಷ್ಟು ಭೂಮಿಗಿಂತ ಹೆಚ್ಚಿಗೆ ಭೂಮಿ ಯಾರು ಇಟ್ಟುಕೊಳ್ಳತಕ್ಕದ್ದಲ್ಲ. ಅದೆಲ್ಲಾ ಸರ್ಕಾರಕ್ಕೆ ಸೇರಬೇಕು. ಭೂಮಿ ಸಮಾಜದ ಸ್ವತ್ತು ಆಗಿರಬೇಕು. ಭೂಮಿ ಮಾಡತಕ್ಕವನು ಆ ಭೂಮಿಯಿಂದ ಬರತಕ್ಕ ಉತ್ಪನ್ನವನ್ನು ಮಾತ್ರ ಪಡೆದು ಅದನ್ನು ಅನುಭವಿಸತಕ್ಕ ಒಂದು ವ್ಯವಸ್ಥೆ ಏರ್ಪಡಬೇಕು, ಎಂಬುದು ನನ್ನ ಅಭಿಪ್ರಾಯ. ಸ್ವಾಮಿ, ಇದಕ್ಕೆ ಹೆಚ್ಚಿನ ವಿರೋಧ ದೇಶದಲ್ಲಿ ಇದೆ ಎಂದು ನಾನು ತಿಳಿದುಕೊಂಡಿಲ್ಲ. ಆದರೆ ಸಾಮಾನ್ಯವಾಗಿ ಇಲ್ಲಿ ಆ ಸಮಸ್ಯೆಯೇ ಇಲ್ಲ.

ಭೂಮಿ ಮಾರತಕ್ಕ, ಕೊಳ್ಳತಕ್ಕ ವಸ್ತು ಆಗಬಾರದು. ಯಾರು ಕೃಷಿ ಮಾಡುತ್ತಾರೋ ಅವರಿಗೆ, ಎಷ್ಟು ಕೃಷಿ ಮಾಡುವುದಕ್ಕೆ ಸಾಮರ್ಥ್ಯವಿದೆಯೋ ಅಷ್ಟು ಮಾತ್ರ ಕೊಡಬೇಕು. ಯಾವೊತ್ತು ಕೃಷಿ ಮಾಡುವುದಕ್ಕೆ ಅವರಿಂದ ಸಾಧ್ಯವಾಗುವುದಿಲ್ಲವೋ ಅವೊತ್ತು ಆ ಭೂಮಿ ಅವರ ಕೈಯಲ್ಲಿರಬಾರದು, ಸರ್ಕಾರಕ್ಕೆ ಸೇರಬೇಕು. ಇತರರು ಯಾರು ಅಲ್ಲಿ ಕೃಷಿ ಮಾಡತಕ್ಕವರು ರೈತರು ಇರುತ್ತಾರೋ ಅವರಿಗೆ ಕೊಡಬೇಕು. ಹೀಗೆ ಭೂಮಿ ಕೃಷಿಗೆ ಯೋಗ್ಯವಾದ ಒಂದು ಸಾಧನವಾಗಿ ಉಳಿಯಬೇಕೇ ಹೊರತು ಮಾರಿಕೊಳ್ಳಲು ಇರತಕ್ಕ ಒಂದು ಆಸ್ತಿಯಾಗಿರಬಾರದು. ಆ ಕಾರಣದಿಂದಲೇ ಇವೊತ್ತು ನಾವು ಮುಖ್ಯವಾಗಿ ಮೈಸೂರು ಸಂಸ್ಥಾನದಲ್ಲಿ ಒಂದು ಸರ್ವೇ ನಡೆಸಬೇಕು: ಉಳುವುದಕ್ಕೆ ಯೋಗ್ಯವಾದ ಭೂಮಿ ಎಷ್ಟಿದೆ? ಹಿಡುವಳಿಯಲ್ಲಿರತಕ್ಕ ಭೂಮಿ ಎಷ್ಟು? ಭೂಮಿ ಇಲ್ಲದೇ ಇರತಕ್ಕವರ ಸಂಖ್ಯೆ ಎಷ್ಟು ಎಂಬ ಅಂಕಿ ಅಂಶಗಳನ್ನೆಲ್ಲಾ ಸಂಗ್ರಹಿಸಿ ಅನಂತರದಲ್ಲಿ ಒಂದು ಕಾನೂನನ್ನು ತರುವುದರಿಂದ ಭೂಮಿ ಒಂದೇ ಸಮಾನವಾಗಿ ಹಂಚಿಕೆಯಾಗಿ ಅದರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಆಗ ದೇಶದಲ್ಲಿ ಒಂದು ನೂತನ ಚೈತನ್ಯ ಉಂಟಾಗುತ್ತದೆ. ರೈತರು ಭೂಮಿಯನ್ನು ರೂಢಿಸಿಕೊಳ್ಳುವುದಕ್ಕೂ ಮತ್ತು ಅನೇಕ ವಿಧವಾದ ಸಾಮಾಜಿಕ ಅಭಿವೃದ್ಧಿ ಯೋಜನೆಗಳಲ್ಲಾಗಲಿ, ನೀರಾವರಿ ಕಾಮಗಾರಿಗಳ ಯೋಜನೆಗಳಲ್ಲಾಗಲಿ, ಇನ್ನಾವುದಾದರೂ ಕಾರ್ಯಕ್ರಮಗಳಲ್ಲಾಗಲಿ ರೈತರು ಮುಂದೆ ಬಂದು ಆಸಕ್ತಿಯಿಂದ ಭಾಗವಹಿಸುವುದಕ್ಕೂ ಅನುಕೂಲವಾಗುತ್ತದೆ. ಆದ್ದರಿಂದ ತಾನೇ ತಾನಾಗಿ ಅವರ ಜೀವನ ಉತ್ತಮಗೊಳ್ಳುತ್ತದೆ ಹೊರತು ಇಲ್ಲದೇ ಹೋದರೆ ನಾವು ದೇಶದ ಅಭಿವೃದ್ಧಿಗೆ ಯಾವ ಕಾರ್ಯಕ್ರಮವನ್ನು ಕೈಗೊಂಡರೂ ಕೂಡ ಯಶಸ್ವಿಯಾಗುವುದಿಲ್ಲ. ಬಹುಸಂಖ್ಯಾತ ರೈತರಿಗೆ ಎಲ್ಲಿಯತನಕ ಅವರ ಜೀವನಕ್ಕೆ ಆಧಾರವಾಗಿರತಕ್ಕ ಭೂಮಿ ಅವರ ಕೈಯಲ್ಲಿರುವುದಿಲ್ಲವೋ ಅಲ್ಲಿಯ ತನಕ ನಾವು ಯಾವ ರೀತಿಯ ಸಹಾಯ ಮಾಡುತ್ತೇವೆ ಎಂದರೂ ಕೂಡ ಅದು ಬರೀ ಮಾತಾಗುತ್ತದೆಯೇ ಹೊರತು ಕಾರ್ಯತಃ ಅವರಿಗೆ ಅನುಕೂಲವಾಗುವುದಿಲ್ಲ. ಆದ್ದರಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿ ಈ ಒಂದು ನಿರ್ಣಯವನ್ನು ತಾವೆಲ್ಲರೂ ಸಮರ್ಥಿಸಬೇಕು ಮತ್ತು ಸರ್ಕಾರದವರು ಕೂಡಲೇ ಭೂಮಿಯನ್ನು ಸಮಾನವಾಗಿ ಹಂಚುವುದಕ್ಕೆ ಒಂದು ಮಸೂದೆಯನ್ನು ಈ ಸಭೆಯ ಮುಂದೆ ಮಂಡಿಸಬೇಕೆಂದು ಕೇಳಿಕೊಂಡು ನನ್ನ ಈ ನಿರ್ಣಯವನ್ನು ಸಭೆಯ ಮುಂದೆ ಮಂಡಿಸುತ್ತೇನೆ.