ಸ್ವಾಮಿ, ಈ ವಿಷಯಗಳನ್ನು ಸಭೆಯ ಗಮನಕ್ಕೆ ತರುವ ಉದ್ದೇಶವಾದರೂ ಇಷ್ಟೆ; ಈಗ ನಮಗೆ ಶೇಷಾದ್ರಿ ಸಮಿತಿಯವರು ಏನೇನು ವಿವರಗನ್ನು ಒದಗಿಸಿದ್ದಾರೋ ಇವುಗಳಲ್ಲದೆ ಮತ್ತೆ ಕೆಲವು ವಿವರಗಳನ್ನು ಸಂಗ್ರಹಿಸುವುದಕ್ಕೆ ಇವರಿಗೆ ಸಾಕಷ್ಟು ಅನುಕೂಲಗಳಿಲ್ಲದೆ ಕೈ ಬಿಟ್ಟಿದ್ದಾರೆ; ಇದರಲ್ಲಿ ಕೊಟ್ಟಿರುವುದೇ ಕೊನೆಯ ಮಾತು, ನೂರಕ್ಕೆ ನೂರು ಸರಿ ಎಂದು ಹೇಳುವುದಕ್ಕೆ ಆಗುವುದಿಲ್ಲ, ಏಕೆಂದರೆ, ಇವರು ಬರಿಯ ಅಂಕಿ – ಸಂಖ್ಯೆಗಳನ್ನು ಮಾತ್ರ ಕೊಟ್ಟಿಲ್ಲ; Compartive Statement ಮಾಡಿದ್ದಾರೆ. ಹೀಗೆ ಮಾಡುವಾಗ ಮೈಸೂರು ದೇಶದ ಆಯುರ್ವೇದ, ಯುನಾನಿ ಔಷಧಾಲಯಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ಅಲ್ಲಿ ಮಾತ್ರ ಇವುಗಳನ್ನು ಕೈಬಿಟ್ಟರೆ ಹೇಗೆ? ಅಲ್ಲಿಯೂ ಇದನ್ನು ಸೇರಿಸಬೇಕು.

ಬಿ. ವಿ. ನಾರಾಯಣ ರೆಡ್ಡಿ: Works Consulted ಎಂದಿದೆ ನೋಡಿ.

ಎಸ್‌. ಗೋಪಾಲಗೌಡ: ಕೆಲವು ಸಂದರ್ಭಗಳಲ್ಲಿ ವಿಷಯಗಳನ್ನು ಸಂಗ್ರಹ ಮಾಡುವುದಕ್ಕಾಗದೆ ಕೈಬಿಟ್ಟಿದ್ದಾರೆಂದು ಹೇಳಿದೆ. ಅವರು ನೋಡಿರುವುದನ್ನು ನಾನೂ ನೋಡಿದ್ದೇನೆ, ಮಾನ್ಯ ಸದಸ್ಯರೂ ನೋಡಿದ್ದಾರೆ. ಮಾನ್ಯ ಸದಸ್ಯರು ಯಾವುದನ್ನೂ ಅವರು ಕೈ ಬಿಟ್ಟಿದ್ದಾರೆ ಎಂಬುದನ್ನು ಗಮನಿಸಬೇಕು. ಸರಕಾರದ ವಿಷಯದಲ್ಲಿ ಸಮಿತಿಯವರು ಪೂರ್ಣ ವಿವರಗಳನ್ನು ಒದಗಿಸಿಲ್ಲ. ಮೈಸೂರಿಗಿಂತ ಅಲ್ಲಿ ಸಹಾಕಾರ ಬಹಳ ಪ್ರಗತಿ ಪಡೆದಿದೆ. ಅಲ್ಲದೆ ಅಲ್ಲಿನ ಆದಾಯ ವೆಚ್ಚಗಳನ್ನು ಲೆಕ್ಕ ಮಾಡುವಾಗ ಭಾರತ ಸರಕಾರದಿಂದ ಬರಬಹುದಾದ ಗ್ರಾಂಟು, ಸಹಾಗಳು, ಒಟ್ಟಿನ ಗಳಿಕೆಗಳು, ಸಂಸ್ಥಾನದ ನಿಧಿಯ ವಾಪಸಾತಿಗಳು, ಕೇಂದ್ರದ ಎಕ್ಸೈಜ್ ಗಳಿಕೆಯಲ್ಲಿ ಭಾಗ ಮುಂತಾದ ಆಂಶಗಳನ್ನು ಸಮಿತಿ ಆದಾಯದ ಕಡೆಗೆ ಸೇರಿಸಿಕೊಂಡಿಲ್ಲ, ಆಮೇಲೆ, ಸಾಮಾನ್ಯವಾಗಿ, ಒಂದು ಪ್ರಾಂತ್ಯದ ಆದಾಯ ವೆಚ್ಚವನ್ನು ಕಂಡುಕೊಳ್ಳುವುದಕ್ಕೆ ಕೊನೆಯ ಪಕ್ಷ ಮೂರು ವರ್ಷಗಳ ಅಂಕಿಅಂಶಗಳ ಸರಾಸರಿಯನ್ನು ಲೆಕ್ಕ ಹಾಕಬೇಕು. ಹಾಗಿಲ್ಲದೆ ಯಾವುದೋ ಒಂದು ವರ್ಷದ್ದನ್ನು ತೆಗೆದುಕೊಂಡರೆ, ಆ ವರ್ಷದಲ್ಲಿ ಉಳಿತಾಯಗಳಲ್ಲಿ ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು. ಹಿಂದಿನ ಮೂರು ವರ್ಷಗಳ ಲೆಕ್ಕವನ್ನು ತೆಗೆದುಕೊಂಡರೆ ಸರಿಯಾದ ಆಧಾರವಾಗಿರುತ್ತದೆ. ಹಿಂದೆ ಧಾರ್ ಸಮಿತಿ ಕೂಡ ಹೀಗೆ ಮಾಡಿದೆ. ಬಿಹಾರ, ಓರಿಸ್ಸಾ, ಪ್ರಾಂತ್ಯಗಳನ್ನು ನಿರ್ಮಾಣ ಮಾಡಿದಾಗ ಹಿಂದಿನ ವರ್ಷಗಳ ಅಂಕಿಗಳನ್ನು ತೆಗೆದುಕೊಂಡು ಲೆಕ್ಕಮಾಡಿದ್ದಾರೆ. ಇದನ್ನು ಕೆಲವು ಸಂದರ್ಭದಲ್ಲಿ ಈ ಸಮಿತಿಯವರು ಬಿಟ್ಟಿದ್ದಾರೆ. ಹೊರಗಿನ ಕನ್ನಡ ಪ್ರದೇಶದವರು ಪ್ರತಿಯೊಂದು ವಿಷಯದಲ್ಲಿಯೂ ಬಹಳ ಹಿಂದುಳಿದಿದ್ದಾರೆಂದು ಶ್ರೀ ಲಕ್ಕಪ್ಪನವರು ಹೇಳಿದರು. ಕೆಲವು ವಿಷಯಗಳಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು dispute ಮಾಡುವುದಕ್ಕೆ ಆಗುವುದಿಲ್ಲ. ನಾವು ಒಪ್ಪಿಕೊಳ್ಳಬೇಕು. ಇದರಲ್ಲಿ ಅವಮಾನವೂ ಇಲ್ಲ, ಗಂಡಾಂತರವೂ ಇಲ್ಲ, ತೊಂದರೆಯೂ ಆಗುವುದಿಲ್ಲ.

ಅಕ್ಷರಸ್ಥರ ಪ್ರಮಾಣವನ್ನು ಹೋಲಿಸಿದರೆ ಮೈಸೂರಿಗಿಂತ ಹೊರಗಡೆ ಹೆಚ್ಚಾಗಿದ್ದಾರೆ. ಆದರೆ ಹೈದರಾಬಾದಿನಲ್ಲಿ ಮಾತ್ರ .೮೪ರಷ್ಟು ಕಡಿಮೆ ಇದೆ. ಅಲ್ಲಿ ಜನರಲ್ಲಿ ವಿದ್ಯೆ ಕಡಿಮೆಯಿರುವುದಕ್ಕೆ ಸ್ಕೂಲುಗಳ ವ್ಯವಸ್ಥೆ ಇಲ್ಲ. ಇದ್ದರೂ ಉರ್ದು ಸ್ಕೂಲುಗಳು. ಇದರಿಂದ ಅನೇಕ ಸಂದರ್ಭದಲ್ಲಿ ಕನ್ನಡದ ಜನರಿಗೆ ವಿದ್ಯೆಯಿಲ್ಲ. ಬಿದರೆ, ರಾಯಚೂರು, ಗುಲ್ಬರ್ಗ ಜಿಲ್ಲೆಗಳು ವಿಷಯದಲ್ಲಿ ಹಿಂದುಳಿದಿವೆ. ಅದೇ ಮುಂಬಯಿಕರ್ನಾಟಕ ಮೈಸೂರಿಗಿಂತ ಮುಂದಿದೆ; ಅಲ್ಲಿ .೨೦ ರಷ್ಟು ಹೆಚ್ಚಿದ್ದಾರೆ. ಮೈಸೂರಿನಲ್ಲಿ ಶೇಕಡ ೨೦.೩೦ ದಕ್ಷಿಣ ಕನ್ನಡ ೨೩.೩೦ ಕೊಡಗಿನಲ್ಲಿ ೨೭.೨೦ ಇದ್ದಾರೆ.

ವಯಸ್ಸಿಗೆ ಬಂದ ಮಕ್ಕಳು ಯಾವ ರೀತಿಯ ಸ್ಕೂಲಿಗೆ ಹೋಗುತ್ತಾರೆಂಬುದನ್ನು ನೋಡಿದರೆ, ಮೈಸೂರಿನಲ್ಲಿ ಶೇಕಡ ೩೫, ಹೈದರಾಬಾದಿನಲ್ಲಿ ೨೦, ಮುಂಬಯಿ ಕರ್ನಾಟಕದಲ್ಲಿ ೩೬, ದಕ್ಷಿಣ ಕನ್ನಡದಲ್ಲಿ ೭೦. ಕೊಡಗಿನಲ್ಲಿ ೪೭ ಜನ ಹೋಗುತ್ತಿದ್ದಾರೆ ಆದುದರಿಂದ ಶಾಲೆಗೆ ಹೋಗುವ ಮಕ್ಕಳ ವಿಷಯದಲ್ಲಿಯೂ ಹೈದರಾಬಾದನ್ನು ಬಿಟ್ಟರೆ ಮಿಕ್ಕೆಲ್ಲ ಪ್ರದೇಶಗಳು ಬಹಳ ಮುಂದಿವೆ. ಹೀಗೆಯೇ ಕೃಷಿಗೆ ಯೋಗ್ಯವಾದ ಭೂಮಿ ಎಲ್ಲೆಲ್ಲಿ ಎಷ್ಟೆಷ್ಟಿವೆ ಎಂಬುದನ್ನು ನೋಡಬಹುದು. ಮೈಸೂರಿನಲ್ಲಿ ತಲೆಯೊಂದಕ್ಕೆ . ಎಕರೆ, ಹೈದರಾಬಾದಿನಲ್ಲಿ . ಎಕರೆ, ಮುಂಬಯಿ ಕರ್ನಾಟಕದಲ್ಲಿ . ಎಕರೆ, ದಕ್ಷಿಣ ಕನ್ನಡದಲ್ಲಿ .೩೧ ಎಕರೆ, (ಇಲ್ಲಿ ಜನ ಸಂಖ್ಯೆ ಹೆಚ್ಚು ಭೂಮಿ ಕಡಿಮೆ) ಕೊಡಗಿನಲ್ಲಿ . ಎಕರೆ, ಸಹಕಾರ ವಿಷಯದಲ್ಲಿಯೂ ಕೂಡ ಮೈಸೂರಿಗಿಂತ ಅವರು ಮುಂದಿದ್ದಾರೆ.ಮುಂಬಯಿ, ಮದರಾಸು, ಕೊಡಗು ಇವುಗಳಲ್ಲಿ ಷೇರು ಬಂಡಾವಾಳ, ಸಂಘಗಳ ಸಂಖ್ಯೆ ಚಾಲ್ತಿ ಬಂಡವಾಳ ಹೆಚ್ಚಾಗಿದೆ; ಸಮಿತಿಯ ವರದಿಯಂತೆ ಮುಂಬಯಿ, ಕರ್ನಾಟಕದಲ್ಲಿ ಸಂಘವೊಂದರ ಸರಾಸರಿ ಷೇರು ಬಂಡಾವಾಳ ,೫೦೦ ರೂಪಾಯಿ, ಮೈಸೂರಿನಲ್ಲಿ ,೩೦೦ ರೂಪಾಯಿ, ಚಾಲ್ತಿ ಬಂಡಾವಾಳ ಮುಂಬಯಿ ಕರ್ನಾಟಕದಲ್ಲಿ ೩೭,೦೦೦ ಮೈಸೂರಿನಲ್ಲಿ ೧೪,೦೦೦ ರೂಪಾಯಿ ಇದೆ.

ಆಮೇಲೆ ಆದಾಯ ವೆಚ್ಚಗಳನ್ನು ಅವರು ಕಂಡುಹಿಡಿಯುವಾಗ ಸಾಮಾನ್ಯವಾಗಿ ಜಿಲ್ಲಾವಾರು ಲೆಕ್ಕಗಳಿಗಾಗಿ ಹುಡುಕಿದ್ದಾರೆ. ಜಿಲ್ಲಾವಾರು ಲೆಕ್ಕಗಳಿಗಾಗಿ ಕೆಲವಿರುತ್ತವೆ, ಸಂಸ್ಥಾನದ ಒಟ್ಟು ಆದಾಯ ಲೆಕ್ಕಗಳೂ ಇರುತ್ತವೆ. ಉದಾಹರಣೆಗೆ, ಪಂಚಚಾರ್ಷಿಕ ಯೋಜನೆಯಲ್ಲಿ ಕೆಲವು ವಿಷಯಗಳಿಗೆ ಸಂಸ್ಥಾನಾದ್ಯಂತ ಹಂಚುವುದಕ್ಕೆ ಕೊಟ್ಟಿರುತ್ತವೆ. ಜಿಲ್ಲಾವಾರು ಕೊಟ್ಟಿರುವುದಿಲ್ಲ. ಇಂಥ ಸಂದರ್ಭದಲ್ಲಿ ಜಿಲ್ಲೆ ಜಿಲ್ಲೆಗೂ ಕರಾರುವಾಕ್ಕು ಲೆಕ್ಕ ಕೊಡುವುದು ಕಷ್ಟವಾಗುತ್ತದೆ. ಹೀಗೆ ದಕ್ಷಿಣ ಕನ್ನಡಕ್ಕೆ ಲೆಕ್ಕಹಾಕಿ ಅದು ಬಹಳ ಖೋತಾ ಪ್ರದೇಶವೆಂದು ಹೇಳಿದ್ದಾರೆ. ದಕ್ಷಿಣ ಕನ್ನಡಜಿ ಲ್ಲೆ ಖೋತಾ ಪ್ರದೇಶವಾಗುವುದಿಲ್ಲ.

ಇದರಲ್ಲಿ ಜಿಲ್ಲಾವಾರು ಲೆಕ್ಕಗಳನ್ನು ಕೊಡುವಾಗ, ಬಡ್ಡಿ ಅಂಶ, ರೈಲ್ವೆಯಿಂದ ಬಂದಿರುವ ಪ್ರತಿಫಲ, ಸ್ಯೂಪರಾನ್ಯುಯೇಷನ್ ಆದಾಯ, ಸ್ಟೇಷನರಿ ಮತ್ತು ಪ್ರಿಂಟಿಂಗ್ ಆದಾಯ, ರಸ್ತೆ ಮುಂತಾದ್ದರಿಂದ ಆದಾಯ ಸಾಮೂಹಿಕಾಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಹಾಯ; ಹೆಚ್ಚು ಆಹಾರ ಬೆಳೆಯಿರಿ ಇತ್ಯಾದಿ ವಿಷಯಗಳನ್ನು ಅವರು ಲೆಖ್ಖಕ್ಕೆ ತೆಗೆದುಕೊಂಡಿಲ್ಲ. ಮುಂಬಯಿ, ಕರ್ನಾಟಕದಲ್ಲಿ ಇವುಗಳಿಂದ ಒಟ್ಟು ಎರಡು ಕೋಟಿ ರೂಪಾಯಿ ಆದಾಯ ಬಂದಿದೆ. ಆ ಜಿಲ್ಲೆಗಳು ತಮ್ಮ ಪಾಲು ತರುವುದಲ್ಲವೇ ಎಂಬುದನ್ನು ನೋಡಬೇಕು. ಹೈದಾರಾಬಾದ್ ಕರ್ನಾಟಕ ಈಗಲೇ ಉಳಿತಾಯದ ಪ್ರಾಂತ್ಯವಾಗಿರುತ್ತದೆ ಮತ್ತು ಉಳಿತಾಯದ ಪ್ರಾಂತ್ಯವಾಗುತ್ತದೆ ಎಂಬುದನ್ನು ಕೂಡ ನಾವು ತಿಳಿದುಕೊಳ್ಳಬಹುದು. ಆಮೇಲೆ ಮಾರಾಟ ತೆರಿಗೆಯಿಂದ ಬರತಕ್ಕಂಥ ಆದಾಯವನ್ನು ಕೂಡ ಲೆಖ್ಖಕ್ಕೆ ತೆಗೆದುಕೊಳ್ಳಬೇಕು. ಹೈದರಾಬಾದಿನಲ್ಲಿ ಅನೇಕ ಘಟ್ಟದ ತೆರಿಗೆ ಇದೆ, Multi-point tax ವಿಧಿಸುತ್ತಿದ್ದಾರೆ. ಇದು ಹೈದಾರಾಬಾದಿನ ಆದಾಯದ ಜೊತೆಯಲ್ಲಿ ಸೇರಿಸಬೇಕು. ಮುಂಬಯಿನಲ್ಲಿ ಎರಡು ಕೋಟಿ ಆದಾಯ ತೆರಿಗೆ ಹಾಕಿದ್ದಾರೆ. ಅಲ್ಲಿ ಸುಮಾರು ೪೦-೪೫ ಲಕ್ಷ ರೂಪಾಯಿ ಮುಂಬಯಿನ ಒಟ್ಟು ಆದಾಯದಲ್ಲಿ ಬರಬೇಕಾಗಿದೆ. ಈ ಅಂಕಿ- ಅಂಶಗಳನ್ನು ನಾವು ಪ್ರರೀಕ್ಷೆ ಮಾಡಿ ನೋಡಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸಮಿತಿಯ ವರದಿ ಪ್ರಕಾರ, ನೇರವಾಗಿ ಬರುವ ಆದಾಯದಿಂದ ವೆಚ್ಚ ಕಳೆದರೆ, Minus . ಲಕ್ಷ ಎಂದು ಹೇಳಿದ್ದಾರೆ. ಆದರ ಬದಲು ನಾನು ಮೇಲೆ ಹೇಳಿದ ಲೆಖ್ಖಗನ್ನೆಲ್ಲಾ ತೆಗೆದುಕೊಂಡು ವಿವೇಚನೆ ಮಾಡಿ ನೋಡಿದರೆ .೪೯ ಲಕ್ಷ ಹೆಚ್ಚುವರಿ ಬರುತ್ತದೆ. That means it will become a surplus district.

ಆಮೇಲೆ ಮುಂಬಯಿನಲ್ಲಿ ಸರ್ಕಾರ ೧೯೫೫ ಮಾರ್ಚಿ ತಿಂಗಳಿಗೆ ಇಷ್ಟು ಬಡ್ಡಿ ಕೊಡಬೇಕಾಗುತ್ತದೆ ಎಂದು ಹೇಳುವಾಗ, ಮುಂಬಯಿ ಸರ್ಕಾರಕ್ಕೆ ಬಡ್ಡಿ ಬರತಕ್ಕಂಥ ಸಾಲಗಳು ಎಷ್ಟು ಇವೆ ಎಂಬುದನ್ನು ಕೈ ಬಿಟ್ಟಿದ್ದಾರೆ. ಆದ್ದರಿಂದ ಈ ಜಿಲ್ಲೆಗಳ ವಿಷಯದಲ್ಲಿಯೂ ಕೂಡ ೭೬.೪೬ ಕೋಟಿ ರೂಪಾಯಿಗಳ ಬಡ್ಡಿ ತೆರಬೇಕಾದ ಸಾಲಗಳು ಇವೆ. ಆದರೆ ಬಡ್ಡಿ ಬರುವ ಆಸ್ತಿ ಎಷ್ಟು ಇವೆ ಎಂದು ಕೇಳಲಿಲ್ಲ. ಬಡ್ಡಿ ಬರುವ ಆಸ್ತಿ ವಾಸ್ತವವಾಗಿ ೮೫.೧ ಕೋಟಿ ರೂಪಾಯಿಗಳಷ್ಟು ಇದೆ. ಹೀಗೆಯೇ ಪ್ರಾವಿಡೆಂಟ್‌ ಫಂಡಿನ ಮೊತ್ತವನ್ನು ಸಹ ನೋಡಬೇಕು. ಆದರೆ ರಿಸರ್ವ್‌ ಫಂಡಿನಲ್ಲಿ ಇಷ್ಟು ಹಣ ಇದೆಯೆಂದು ಹೇಳಲಿಲ್ಲ. ಪ್ರಾವಿಡೆಂಟ್‌ ಫಂಡಿನಲ್ಲಿ ೧೩.೪೦ ಕೋಟಿ ಎಂದು ಹೇಳಿ ರಿಜರ್ವ್‌ ಫಂಡಿನಲ್ಲಿದ್ದ ೩೨.೪೦ ಕೋಟಿಯಷ್ಟು ಹಣವನ್ನು ಅವರು ಕೈ ಬಿಟ್ಟಿದ್ದಾರೆ. ಹೈದರಾಬಾದಿನ ವಿಷಯದಲ್ಲಿ, ತುಂಗಭದ್ರಾ ಯೋಜನೆಗೆ, ರಾಜಬಂಡ ಡೈವರ್ಷನ್‌ಯೋಜನೆಗೆ ೧೭ ಕೋಟಿ ಮತ್ತು ಘಟಪ್ರಭಾ ಯೋಜನೆಗೆ ೧೭ ಕೋಟಿ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದವರು ಅನೇಕ ವಿಧವಾಗಿ ಈ ವಿಚಾರದಲ್ಲಿ ಸಹಾಯ ಮಾಡುತ್ತಿದ್ದಾರೆ.

ಇವೊತ್ತು ಕೂಡ ನಮ್ಮ ಸಂಸ್ಥಾನದಲ್ಲಿ ಮೊದಲನೆಯ ಪಂಚವಾರ್ಷಿಕ ಯೋಜನೆಗೆ ಸುಮಾರು ೧೪ ಕೋಟಿ ರೂಪಾಯಿ ಕಡಿಮೆ ಬಿದ್ದಿವೆ. ಅದನ್ನು ಯಾವ ರೀತಿ ಭರ್ತಿ ಮಾಡಬೇಕು ಎಂಬುದನ್ನು ದಾರಿಕಾಣದೆ ಇದ್ದೇವೆ ಮತ್ತು ಕೇಂದ್ರದ ಕಡೆ ನೋಡುತ್ತಿದ್ದೇವೆ. ಹಾಗೆಯೇ ಪಂಚವಾರ್ಷಿಕ ಯೋಜನೆಗಳನ್ನು ಕಾರ್ಯಗತ ಮಾಡುವಾಗ ಅನೇಕ ವೇಳೆ ನಾವು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿಗೆ ಅವಲಂಬಿಸಿ ಕೊಂಡಿರುತ್ತೇವೆ. ಇವೊತ್ತು ವಿಷಯಗಳನ್ನು ಪರಿಶೀಲನೆ ಮಾಡಿ ನೋಡಿದರೆ, ಕರ್ನಾಟಕ ಪ್ರಾಂತ್ಯ ನಿರ್ಮಾಣವಾದರೆ, ಹೊಸದಾಗಿ ಮೈಸೂರಿಗೆ ಬರತಕ್ಕಂಥ ಪ್ರದೇಶಗಳೂ ನಮಗೆ ಆದಾಯದ ವಿಷಯದಲ್ಲಿ ಕೊರತೆ ಪ್ರದೇಶಗಳಾಗುವುದಿಲ್ಲ ಎನ್ನುವುದನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬಹುದು. ಅದುದರಿಂದ ಒಂದು ಆರ್ಥಿಕ ದೃಷ್ಟಿಯಿಂದಲೂ ಕೂಡ ನಮಗೆ ಅವು ಹೊರೆಯಾಗುವುದಿಲ್ಲ ಎನ್ನುವುದನ್ನು ನಾವು ಚೆನ್ನಾಗಿ ಮನಗಾಣಬೇಕಾಗಿದೆ. ಇನ್ನು ಅಲ್ಲಿ ಪ್ರಾಕೃತಿಕ ಸಂಪತ್ತಿನ ಕೊರತೆ ಇದೆಯೆಂದು ಯಾರು ಹೇಳುವುದಕ್ಕೆ ಆಗುವುದಿಲ್ಲ . ಬಿಜಾಪುರದ ಕಪ್ಪು ಮಣ್ನು ಇಡೀ ನಮ್ಮ ದೇಶದಲ್ಲಿ ಹೆಸರುವಾಸಿಯಾಗಿದೆ, ಆದರೆ ಅಲ್ಲಿ ನೀರಿನ ಅಸರೆಯಿಲ್ಲವೇನೊ ನಿಜ. ಅದ್ದರಿಂದ ನೀರಿಗೆ ತಕ್ಕ ಏರ್ಪಾಡನ್ನು ಮಾತ್ರ ಮಾಡಬೇಕಾಗಿದೆ. ಬಿಜಾಪುರದಲ್ಲಿ ಬೆಳೆಯತಕ್ಕ ಗೋಧಿಯನ್ನು ಇನ್ನೆಲ್ಲೂ ಬೆಳೆಯಿಸುವುದು ಕಷ್ಟ.

ಆದ್ದರಿಂದ ಅಲ್ಲಿ ವಿವಿಧ ಸಂಪತ್ತು ಹೇರಳವಾಗಿದೆ. ಖನಿಜ ಸಂಪತ್ತು ಹೊರಗಡೆ ಇಂಡಿಯಾ ದೇಶದಲ್ಲಿ ಎಲ್ಲಿಯೂ ಇಲ್ಲದಷ್ಟು ದಕ್ಷಿಣ ಇಂಡಿಯಾದಲ್ಲಿ ಇದೆ. ಅದರಲ್ಲಿಯೂ ಹೆಚ್ಚಿನ ಭಾಗ ಇಲ್ಲಿ ಅಡಗಿದೆ ಎಂಬುದನ್ನು ಕಂಡುಕೊಳ್ಳಬಹುದು. ಯಾವುದಾದರೂ ಹೊರಗಡೆಯಿಂದ ಬರತಕ್ಕ ಪ್ರದೇಶಗಳನ್ನು ನಾವು ತಾತ್ಸಾರ ದೃಷ್ಟಿಯಿಂದ ನೋಡುವುದಕ್ಕೆ ಸಾಧ್ಯವಿಲ್ಲ. ಇನ್ನೊಂದು ಅಂಶವನ್ನು ನಾವು ಸಂದರ್ಭದಲ್ಲಿ ಮನಗಾಣಬಹುದಾಗಿದೆ. ಮಲೆನಾಡು ಪ್ರಕೃತಿದತ್ತವಾದ ನಾನಾ ಸಂಪತ್ತುಗಳಿಂದ ಕೂಡಿದೆ; ಪ್ರಕೃತಿ ದೇವಿಯು ಮನತೆರೆದು ರಾರಾಜಿಸುತ್ತಿರುವ ಕಾಡುಗಳಿಂದ ಕೂಡಿದೆ.

ಆದ್ದರಿಂದ ಈಗ ಏನಾಗಿದೆ ಎಂದರೆ, ಮಲೆನಾಡು ಉದ್ದಕ್ಕೂ ಎರಡು ಸಾವಿರ ಮೈಲಿಯವರೆಗೆ ಮಲೇರಿಯಾ ತವರೂರು ಮಾಡಿಕೊಂಡಿರುವುದರಿಂದ ಅಲ್ಲಿ ಜೀವನಕ್ಕೆ ಕಷ್ಟವಾಗಿದೆ. ಮೈಸೂರು ದೇಶದ ಮಲೆನಾಡು, ಹಾಸನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಮುಗಿದು ಹೋಗುವುದಿಲ್ಲ. ಮುಂಬಯಿನ ಸರಹದ್ದಿನಿಂದ ಪ್ರಾರಂಭವಾಗಿ, ಕೊನೆಯಲ್ಲಿ ಕಾಸರಗೋಡಿನಲ್ಲಿ ದಕ್ಷಿಣದ ತುದಿಯ ತನಕ ಹೋಗುತ್ತದೆ. ಈ ಅಂಶವನ್ನು ಗಣನೆಗೆ ತೆಗೆದುಕೊಂಡರೆ, ಮಲೆನಾಡಿನ ಬಹುಬಾಗ ಕರ್ನಾಟಕ ಪ್ರಾಂತ್ಯದಲ್ಲಿ ಸೇರತಕ್ಕದ್ದನ್ನು ನಾವು ಕಂಡುಕೊಳ್ಳಬಹುದು ಇಷ್ಟು ವಿಶಾಲವಾಗಿರತಕ್ಕ ಮಲೆನಾಡಿಗೆ ಒಂದು ಸಮಗ್ರ ಯೋಜನೆಯನ್ನು ನಾವು ರೂಪಿಸಿ, ಆಮೇಲೆ ಒಂದು ಕರ್ನಾಟಕ ಪ್ರಾಂತ್ಯವನ್ನು ಕೈಗೊಂಡದ್ದೇ ಆದರೆ, ಬಹು ದೊಡ್ಡ ಸಂಪತ್ತು ನಮ್ಮ ದೇಶದ ಅನುಕೂಲಕ್ಕೆ ಒದಗುತ್ತದೆ.

ಅದು ಕರ್ನಾಟಕಕ್ಕೆ ಮಾತ್ರವೇ ಸಹಕಾರಿ ಆಗಿರುವುದಿಲ್ಲ. ಇಡೀ ಇಂಡಿಯಾ ದೇಶಕ್ಕೆ ಒಂದು ದೊಡ್ಡ ಸಂಪತ್ತನ್ನು ಈ ಕರ್ನಾಟಕ ಪ್ರಾಂತ್ಯ ಮಾಡುವುದರ ಮುಖಾಂತರ ತಂದುಕೊಳ್ಳಬಹುದಾಗಿದೆ. ಇದಕ್ಕೆ ಅನೇಕ ಮಾರ್ಗಗಳಿವೆ. ಶ್ರೀ ಮಾಧವಾಚಾರ್ ಅವರು ಹೇಳಿದ ಹಾಗೆ ಸಣ್ಣ ಸಣ್ಣ ಝರಿಗಳಿಂದ ಸಣ್ಣ ಸಣ್ಣ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಕೇಂದ್ರಗಳನ್ನು ಸ್ಥಾಪಿಸಿ, ಲಕ್ಷೋಪಲಕ್ಷ ಕಿಲೋವಾಟ್ಸ ಪವರನ್ನು ಅಲ್ಲಿ ಅತ್ಯಂತ ಸುಲಭ ದರದಲ್ಲಿ ಪಡೆಯಬಹುದು. ಅಂಥ ಸಣ್ಣ ಯೋಜನೆಗಳು ತಮ್ಮ ಕಣ್ಣಿಗೆ ಕಾಣುತ್ತಾ ಇಲ್ಲ.

ಆದ್ದರಿಂದ ಈ ಮಲೆನಾಡಿನ ಒಂದು ಅಭಿವೃದ್ಧಿಯ ದೃಷ್ಟಿಯಿಂದಲೂ ಕೂಡ ಮಲೆನಾಡು ಪ್ರಾಂತ್ಯ ಒಂದೇ ಆಡಳಿತಕ್ಕೆ ಒಳಪಡತಕ್ಕದ್ದು ಬಹಳ ಸೂಕ್ತವಾಗಿದೆ ಎನ್ನುವುದನ್ನು ಕೂಡ ನಾವು ಇವೊತ್ತು ಕಂಡುಕೊಳ್ಳಬಹುದಾಗಿದೆ. ಇನ್ನು ಮಧ್ಯ ಪ್ರದೇಶವಾಗಿರುವ ನಮ್ಮ ಮೈಸೂರಿಗೆ ಸಮುದ್ರದ ಸಂಪರ್ಕ ದೊರೆತರೆ, ಭಟ್ಕಳ, ಮಲ್ಪೆ, ಮಂಗಳೂರು ಮತ್ತು ಇತರ ಬಂದರುಗಳ ಮುಖಾಂತರ ನಾವು ವ್ಯಾಪಾರ ಮಾಡುವುದಕ್ಕೆ ತೊಡಗಿದ್ದೇ ಆದರೆ, ಆಗ ಮೈಸೂರಿನ ಆದಾಯ ಮತ್ತು ಉದ್ಯೋಗ ಬಹುವಾಗಿ ಅಂದರೆ ೧೦ ರಷ್ಟೋ ೨೦ ರಷ್ಟೋ ನಾವು ರೂಢಿಸಿಕೊಳ್ಳುವ ರೀತಿಯಲ್ಲಿ ಹೆಚ್ಚಿ ಅದರಿಂದ ದೇಶದ ಸಂಪತ್ತು ಅಭಿವೃದ್ಧಿ ಆಗುವುದಕ್ಕೆ ಸಾಧ್ಯವಿದೆ. ಇವೊತ್ತು ಏನಾಗಿದೆ ಎಂದರೆ, ಪಶ್ಚಿಮ ಘಟ್ಟಗಳು ನಾವು ಸಮುದ್ರಕ್ಕೆ ಹೋಗದಂತೆ ತಡೆದು ನಿಲ್ಲಿಸಿವೆ. ನಮ್ಮ ದೃಷ್ಟಿಕೋನವೇ ಅಲ್ಲಿಯತನಕ ಹೋಗದೆ ನಿಂತು ಹೋಗಿದೆ.

ಇಲ್ಲಿ ಎಷ್ಟೋ ಜನರಿಗೆ ಮಲೆನಾಡು ಎಂದರೆ, ಅಲ್ಲಿಗೆ ಹೋಗುವುದಕ್ಕೆ ಭಯ. ಆದ್ದರಿಂದ ಅವರು ಯೋಚನೆ ಕೂಡ ಮಾಡುವುದಿಲ್ಲ. ಮಲೆನಾಡನ್ನು ದಾಟಿಹೋದಾಗ ಮುಂದೆ ನಮ್ಮ ಕಣ್ಣಿಗೆ ವಿಶಾಲವಾದ ಸಮುದ್ರ ಕಾಣುತ್ತದೆ. ಹಾಗದಾರೆ ಅವರೇ ಏತಕ್ಕೆ ಆ ಪ್ರದೇಶವನ್ನು ಅಭಿವೃದ್ಧಿ ಮಾಡಿಕೊಂಡು ಹೋಗಬಾರದು, ಎಂದು ಹೇಳಬಹುದು. ದಕ್ಷಿಣ ಕನ್ನಡ ಜೆಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರುತ್ತದೆ. ಮದ್ರಾಸ್ ಪೂರ್ವಕ್ಕೆ; ಆದರೆ ಇದು ಪಶ್ಚಿಮಕ್ಕೆ ಇದೆ. ಆದ್ದರಿಂದ ಈ ಜಿಲ್ಲೆಯನ್ನು ಯಾವ ರೀತಿಯಲ್ಲಾಗಲಿ ಮದ್ರಾಸ್‌ ಸರ್ಕಾರದವರು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

ದಕ್ಷಿಣ ಕನ್ನಡ ಜೆಲ್ಲೆಯನ್ನು ನೋಡಿದರೆ, ಪ್ರತಿಯೊಂದು ಕೆಲಸದಲ್ಲೂ ಅವರು ಶ್ರಮಪಟ್ಟು ಮುಂದುವರಿಯುತ್ತಿರುವುದು ಗೊತ್ತಾಗುತ್ತದೆ. ಸ್ಕೂಲುಗಳು, ಕಾಲೇಜುಗಳು, ಮುಂತಾದ ಸಂಸ್ಥೆಗಳನ್ನು ತೆಗೆದುಕೊಳ್ಳಿ, ಅವರು ತಾವೇ ಶ್ರಮಪಟ್ಟು ಅವನ್ನು ಸ್ಥಾಪನೆ ಮಾಡಿದ್ದಾರೆ. ಅವರು ಬಹಳ ಶ್ರಮಜೀವಿಗಳು. ಮೈಸೂರು ದೇಶದಲ್ಲಿ ಸೋಮಾರಿತನ ಇದೆ ಎಂದು ಹೇಳುವುದಿಲ್ಲ. ಆದರೆ ಇಲ್ಲಿಯ ಹವಾಗುಣಕ್ಕೆ ತಕ್ಕಂತೆ ಒಂದು ಆಲಸ್ಯ ಮನೋಭಾವ ಮನೆಮಾಡಿದೆ. ಇಲ್ಲಿ ಹೀಗೆ ಅಲಸ್ಯ ಮನೋಭಾವವು ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯವರು ಮಲೆನಾಡು ಪ್ಲಾಂಟೇಷನ್ಗಳಿಗೆ ಮತ್ತು ಆಡಿಕೆ ತೋಟಗಳಿಗೆ ಗದ್ದೆಯಲ್ಲಿ ಕೃಷಿ ಕೆಲಸಕ್ಕೆ ಅವರು ಬರಬೇಕು. ಇಲ್ಲಿ ಕೆಲಸಮಾಡಿ ಆಮೇಲೆ ವಾಪಸ್ಸು ಹೋಗುತ್ತಾರೆ. ಹಾಗೆಯೇ ಇನ್ನೊಂದು ಕಡೆ ಕಡಪ, ಕರ್ನೂಲ್ನಿಂದ ನಮ್ಮ ರಾಜ್ಯಕ್ಕೆ ಬರುತ್ತಾರೆ. ಮತ್ತೊಂದು ಕಡೆ ನೀಲಗಿರಿ ಕಡೆಯಿಂದ ಜನರು ಇಲ್ಲಿಗೆ ದುಡಿಯಲು ಬರುತ್ತಾರೆ.

ಡಿ. ದೇವರಾಜ ಆರಸ್ : ಕೆಲವು ಜನರು ಮಲೇನಾಡೇ ಒಂದು ಪ್ರಾಂತ್ಯ ಆಗಬೇಕೆಂದು ಹೇಳುತ್ತಿದ್ದಾರೆ. ಇದಕ್ಕೆ ಏನುಹೇಳುತ್ತೀರಿ?

ಎಸ್. ಗೋಪಾಲಗೌಡ: ಇವೊತ್ತು ನಾವು ಮೈಸೂರು ಎಂದು ಹೇಳುತಿದ್ದೇವೆಯೇ ಹೊರತು ನಾವು ಎಷ್ಟರಮಟ್ಟಿಗೆ ಕಾರ್ಯಪಟುತ್ವದಿಂದ ಕೂಡಿದ್ದೇವೆ ಎಂಬುದನ್ನು ನೋಡುತ್ತಿಲ್ಲ. ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಎಲ್ಲರೂ ಉದ್ಯೋಗಸ್ಥರು ಆಗಿದ್ದಾರೆ? ನಮ್ಮವರ ಸರಾಸರಿ ಆದಾಯವೆಷ್ಟು? ಜನರು ಎಷ್ಟರಮಟ್ಟಿಗೆ ಸುಖಿಗಳಾಗಿದ್ದಾರೆ ಎಂಬುದನ್ನೂ ಕೂಡ ನಾವು ನೋಡಬೇಕಾಗಿದೆ ಮತ್ತು ಇವರು ಅಷ್ಟು adventurous ಆಗಿದ್ದುಕೊಂಡು ಹೊರಗೆ ಹೋಗಿ ಯಾವ ಯಾವ ದೇಶವನ್ನು ದಿಗ್ವಿಜಯ ಮಾಡಿಕೊಂಡು ಬಂದಿದ್ದಾರೆಂಬುದನ್ನು ನಾವು ಪರಿಶೀಲನೆ ಮಾಡಬೇಕು. ಇವತ್ತು ನಾವು ಭದ್ರಜಲಾಶಯಕ್ಕೆ ಆಣೆಕಟ್ಟು ಕಟ್ಟುವಕಡೆ ಹೋದರೆ ಅಥವಾ ತುಂಗಾ ಜಲಾಶಯ ನಿರ್ಮಾಣ ಆಗುವ ಕಡೆ ಹೋಗಿ ನೋಡಿದರೆ ಮೈಸೂರು ದೇಶದವರು ಎಷ್ಟು ಜನ ಕೆಲಸಮಾಡಿ ದೇಶವನ್ನು ಕಟ್ಟುವುದಕ್ಕೆ ನಿಂತಿದ್ದಾರೆ, ಅದರಿಂದ ಉತ್ಪತ್ತಿಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ಕೂಡ ನಾವು ನೋಡಬಹುದು.

ಮೈಸೂರು ಎಂದು ತಾವು ಏನು ಕರೆಯುತ್ತಿದ್ದೀರೋ ಅದನ್ನು ಯಾವುದೇ ಒಂದು ವಿಚಾರದಲ್ಲೇಯಾಗಲಿ ಅಭಿವೃದ್ಧಿ ಮಾರ್ಗದಲ್ಲಿ ಮುಂದುವರೆಸಿಕೊಂಡು ಹೋಗುವುದಕ್ಕೆ ನಾವೆಲ್ಲರೂ ತೊಡಗಿದ್ದೇವೆಯೇ ಮತ್ತು ಅದಕ್ಕೆ ಬೇಕಾದ ಕಾರ್ಯಪಟುತ್ವ ನಮ್ಮಲ್ಲಿದೆಯೇ ಎಂಬುದನ್ನು ನೋಡಬೇಕು ನಾವು ಹೇಗೆ ಬೇರೆಯವರನ್ನು ಅವಲಂಬಿಸಕೊಂಡಿದ್ದೇವೆ, ಪರಾವಲಂಬಿಗಳಾಗಿದ್ದೇವೆ ಎಂಬುದನ್ನು ಕೂಡ ನಾವು ಮರೆಯಬಾರದು.

ಟಿ. ಎನ್‌. ಮೂಡಲಗಿರಿಗೌಡ : ಮಲೆನಾಡು ಪ್ರಾಂತದವರು ಬಹಳ ಅಸಮರ್ಥರಾಗಿದ್ದಾರೆ, ಆದ ಕಾರಣ ಹೊರಗಿನಿಂದ ಜನರು ಅಲ್ಲಿಯ ಸುಖ ಸಂಪತ್ತುಗಳನ್ನು ಬೆಳೆಯುವಂತೆ ಮಾಡಿದರು ಎಂದು ಹೇಳಿದ ಹಾಗಾಯಿತು. ಮೈಸೂರಿನವರು adventurous ಆಗಿಲ್ಲ. ಯಾವ ರೀತಿಯಲ್ಲೂ ಮುಂದುವರಿಯುವುದಕ್ಕೆ ಅಲ್ಲಿಯ ಜನರು ಸಾಮರ್ಥ್ಯವಂತರಲ್ಲ, ಬೇರೆಯವರು ಬಂದು ನಮ್ಮ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನೆರವೇರಿಸಬೆಕಾಗಿದೆ. ಅದರಿಂದ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದ ಹಾಗಾಯಿತು.

ಎಸ್‌. ಗೋಪಾಲಗೌಡ : ನಾನು ಇದನ್ನು ಏತಕ್ಕೆ ಹೇಳುತ್ತಿದ್ದೇನೆ ಎಂದರೆ ಮೈಸೂರಿನ ವೈಶಿಷ್ಟ್ಯವನ್ನು ಪ್ರತಿಪಾದಿಸಿಕೊಂಡು ಮೈಸೂರು ಬಹಳ ಸುಖ ಸಂಪತ್ತಿನಿಂದಲೂ ಸಮೃದ್ಧಿಯಿಂದಲೂ ತುಂಬಿ ತುಳುಕಾಡುತ್ತಿದೆ. ಎಲ್ಲವೂ ಸ್ವಪರಿಪೂರ್ಣತೆಯಿಂದ ಕೂಡಿದೆ ಎನ್ನುವ ವಾದಕ್ಕೆ ಪ್ರತಿವಾದವಾಗಿ ಬೇರೆಯವರನ್ನು ಈ ರೀತಿ ಮೈಸೂರಿನ ಜನತೆ ಅವಲಂಬಿಸಿ ಕೊಂಡಿರುವುದರಿಂದ ಮೈಸೂರು ತಾನೇ ತಾನಾಗಿ ತನ್ನತನವನ್ನು ಒಂದೊಂದನ್ನಾಗಿ ಕಳೆದುಕೊಳ್ಳುತ್ತಿದೆ, ಮೈಸೂರು ಕ್ಷಿಪ್ರದಲ್ಲಿಯೇ ಮೈಸೂರಾಗಿ ಇರುವುದಿಲ್ಲ – ಎಂಬುದನ್ನು ತೋರಿಸಿಕೊಡುವುದಕ್ಕೆ ಇದನ್ನು ಹೇಳುತ್ತಿದ್ದೇನೆ.

ಆದರೆ ನನ್ನ ವಾದದಿಂದ ನನ್ನನ್ನು ವಿರೋಧಿಸುವುದಕ್ಕೂ ಆಗುತ್ತದೆ ಎಂಬುದನ್ನು ಕೂಡ ಗಮನದಲ್ಲಿ ಇಟ್ಟುಕೊಂಡಿದ್ದೇನೆ. ಮಲೆನಾಡು ಏತಕ್ಕೆ ಹೀಗಿದೆ ಎಂದರೆ ಮಲೆನಾಡಿನ ಜನರಲ್ಲಿ ಕಾರ್ಯಪಟ್ಟುತ್ತವಿಲ್ಲ. ಅವರಲ್ಲಿ ಚಟುವಟಿಕೆಯಿಲ್ಲ. ಅವರಿಗೆ ಅಲ್ಲಿಯ ಸಾಧನಸಂಪತ್ತುಗಳನ್ನು ರೂಢಿಸಿಕೊಳ್ಳುವುದಕ್ಕೆ ತಕ್ಕ ಶಕ್ತಿ ಇಲ್ಲ; ಅದನ್ನು ಅವರು ಬಿಟ್ಟು ಬಿಡಬೇಕು ಬರೀ ಮೈಸೂರು ನಮ್ಮದು ಎಂದು ಹೇಳಿಕೊಂಡ ಮಾತ್ರಕ್ಕೆ ಮೈಸೂರಿನ ಜನರ ಹೊಟ್ಟೆ ತುಂಬುವುದಿಲ್ಲ. ಮೈಸೂರಿನಲ್ಲೆ ಜರೀ ಪೇಟ ವೈಶಿಷ್ಟ್ಯವಿದ್ದರೆ ಅದರಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ.

ಎಚ್‌. ಸಿದ್ಧವೀರಪ್ಪ (ಒಳಾಡತಿ ಮತ್ತು ಕೈಗಾರಿಕೆ ಶಾಖೆಗಳ ಮಂತ್ರಿಗಳು) – ಮನಃ ಶಾಂತಿ ಬರುತ್ತದೆ.

ಎಸ್‌. ಗೋಪಾಲಗೌಡ : ತಲೆ ಶಿರೋಭಾರವಾದಂತಾಯಿತು. ಈ ಮಹತ್ತರವಾದ ಸಮಸ್ಯೆಗಳು ಅಂದರೆ ೨ ಕೋಟಿ ಜನರ ಜನಜೀವನವನ್ನು ಅನೇಕಾನೇಕ ವರ್ಷಗಳವರೆಗೆ ನಡೆಸಿಕೊಂಡು ಹೋಗತಕ್ಕಂಥ ಸಮಸ್ಯೆ ಇದು. ಯಾವ ಯಾವ ಸಂಪತ್ತು ನಮ್ಮಲ್ಲಿದೆಯೋ ಅದನ್ನು ಹೇಗೆ ರೂಢಿಸಿಕೊಳ್ಳ ಬೇಕೆಂಬುದನ್ನು ನಾವು ವಿಶಾಲ ದೃಷ್ಟಿಯಿಂದ ಯೋಚನೆ ಮಾಡಬೇಕು.

ಉದ್ಯೋಗವನ್ನು ಹೆಚ್ಚಿಸಿಕೊಳ್ಳವ ದೃಷ್ಟಿಯಿಂದ, ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ, ಮಲೆನಾಡಿನ ಅಭಿವೃದ್ಧಿಗಾಗಿ ಒಂದು ಸಮಗ್ರ ಯೋಜನೆಯನ್ನು ಕಾರ್ಯಗತ ಮಾಡುವ ದೃಷ್ಟಿಯಿಂದ, ನಾವು ಒಂದು ಪ್ರಾಂತ್ಯವನ್ನು ರಚಿಸಿಕೊಳ್ಳುವುದು ಅತ್ಯಾವಶ್ಯಕ. ಅದು ಬಿಟ್ಟು ಮೈಸೂರಿಗೆ ಕೊಡಗೂ ಮತ್ತು ದಕ್ಷಿಣ ಕನ್ನಡ ಬೇಕಾದರೆ ಸೇರಲಿ : ಇತರ ಹೈದರಾಬಾದ್‌, ಮುಂಬಯಿ ಕರ್ನಾಟಕದವರು ಬೇರೆ ಪ್ರಾಂತ್ಯವನ್ನು ರಚಿಸಿಕೊಳ್ಳಲಿ – ಎನ್ನತಕ್ಕಂಥ ವಾದ ಬಹಳ ಘಾತಕವಾದ ವಾದ, ಅದರಿಂದ ಬಹಳ ತೊಂದರೆಯಾಗುತ್ತದೆ ಎಂದು ಹೇಳುತ್ತೇನೆ. ಇವೊತ್ತು ಯಾವುದೋ ಒಂದು ವಾದವನ್ನು ಕೆಲವು ಮೈಸೂರಿನ ಮಹನೀಯರು ನಮ್ಮ ಮುಂದೆ ಇಟ್ಟು ಇತರ ಕನ್ನಡ ಭಾಗಗಳು ಮುಖ್ಯವಾಗಿ ಮುಂಬಯಿ ಕರ್ನಾಟಕ ಭಾಗಗಳು ಮೈಸೂರಿಗೆ ಸೇರುವುದರಿಂದ ಬಹಳ ತೊಂದರೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಅದು ನಿರಾಧಾರವಾದುದು ಎಂಬುದನ್ನು ನಾನು ಸ್ಪಷ್ಟವಾಗಿ ಹೇಳಬೇಕಾಗಿದೆ.

ಉತ್ತರ ಕರ್ನಾಟಕ ಪ್ರಾಂತ್ಯಗಳು, ಮುಖ್ಯವಾಗಿ ಮುಂಬೈ ಕರ್ನಾಟಕ ಪ್ರಾಂತ್ಯಗಳು ಮೈಸೂರಿಗೆ ಸೇರುವುದರಿಂದ ಏನೂ ತೊಂದರೆ ಆಗುವುದಿಲ್ಲ. ಶ್ರೀಮಾನ್‌ಎಚ್‌. ಕೆ. ಶಿವರುದ್ರಪ್ಪನವರಂಥವರು ಮಾಡಿರುವ ಭಾಷಣದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ನಿರಾಧಾರವಾದುದೆಂದು ನಾನು ಸ್ಪಷ್ಟವಾಗಿ ಹೇಳಬೇಕಾಗಿದೆ. ಇದು ಹೇಗಿದೆಯೆಂದರೆ, ಕಂಬಳಿಯನ್ನು ನೋಡಿ ಕರಡಿಯೆಂದು ಓಡುವವನ ಲಕ್ಷಣವನ್ನು ತೋರಿಸುತ್ತದೆ. ಅಲ್ಲದೆ, ನಾವು ಸಮಾಜವನ್ನು ಪುರ್ನನಿರ್ಮಾಣ ಮಾಡತಕ್ಕದ್ದು ನೂತನ ಮೌಲ್ಯಗಳ ಮೇಲೆ ಆಗಬೇಕಾಗಿದೆ.

ಟಿ. ಎನ್‌. ಮೂಡಲಗಿರಿಗೌಡ: ಹಾಗಾದರೆ, ಮುಂಬೈ ಕನ್ನಡಿಗರು ಮತ್ತು ಹೈದರಾಬಾದು ಕನ್ನಡಿಗರು ಇನ್ನೂ ಕಂಬಳಿ ಹೊದ್ದುಕೊಂಡಿದ್ದಾರೆಯೇ!

ಎಸ್‌. ಗೋಪಾಲಗೌಡ: ಆ ರೀತಿಯಲ್ಲ. ಈ ರೀತಿಯಾಗಿ ನಾವು ಪ್ರತ್ಯೇಕ ಇಡೀ ರಾಷ್ಟ್ರವನ್ನು ನೂತನ ಮೌಲ್ಯಗಳ ಮೇಲೆ ಪುನನಿರ್ಮಾಣ ಮಾಡಬೇಕೆಂಬ ಗುರಿ ಇಟ್ಟುಕೊಂಡಿರುವಾಗ, ಈಗ ನಮ್ಮಲ್ಲಿ ಇರಬಹುದಾದ ಕೆಲವು ಪದ್ಧತಿಗಳನ್ನು ರೂಢಿಸಿಕೊಳ್ಳಬೇಕಾದ ಮತ್ತು ನಮ್ಮ ಆಚಾರಗಳನ್ನು ಹೊಸ ಸಮಾಜಕ್ಕೆ ಅಳವಡಿಸಿಕೊಳ್ಳಬೇಕಾದ ಸಂದರ್ಭ ಬರುತ್ತದೆ. ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಾದ ಸಂದರ್ಭ ಬರುತ್ತದೆ. ಯಾವಾಗ್ಯೂ ಹಳೆಯದಕ್ಕೂ ಹೊಸದಕ್ಕೂ ನಿರಂತರವಾದ ಹೊಡೆದಾಟ ಘರ್ಷಣೆಗಳು ಇದ್ದೇ ಇರುತ್ತವೆ. ಇದು ಒಂದು ಕ್ರಾಂತಿಗೆ ಒಂದು ಬದಲಾವಣೆಗೆ ಬದ್ಧವಾಗಿರತಕ್ಕದ್ದು. ಮನುಷ್ಯನ ಸಮಾಜ ಸಾಮಾನ್ಯವಾಗಿ ವಿಕಾಸಕ್ಕೆ ಕಾರಣವಾಗುತ್ತದೆ. ಅನೇಕ ಕಡೆ ಹೋಗಿ ಕ್ರಾಂತಿಯಾಗುವುದೂ ಉಂಟು. ಇವೆರಡನ್ನೂ ನಾವು ಮರೆಯಬಾರದು. ಆದ್ದರಿಂದ ಈ ವಿಷಯವನ್ನು ನಾವು ನೋಡುವಾಗ ಸಮಾಜದ ವಿಕಾಸವನ್ನು; ಅದರಲ್ಲಿ ಪ್ರತಿಕ್ಷಣದಲ್ಲೂ ಆಗುತ್ತಿರತಕ್ಕ ಮಾರ್ಪಾಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮುಂದುವರಿಯಬೇಕು. ಆದ್ದರಿಂದ ಈ ಹೊತ್ತು ಮೈಸೂರಿನಲ್ಲಿ ಕೆಲವು ಮಹನೀಯರು, ಇಂದು ನಾವು ಇದಕ್ಕೆ ಒಪ್ಪಿದರೆ, ಮುಂದೆ ಇದೇ ನಮಗೆ ತೊಂದರೆಯನ್ನು ಉಂಟುಮಾಡುತ್ತದೆಂದು ಹೇಳಿ ಮೈಸೂರು ಈಗಿರುವಂತೆಯೇ ಇರಲಿ, ಬೆಕಾದರೆ ಕೊಡಗು ಹೈದರಾಬಾದು ಸೇರಲಿ ಎಂದು ಹೇಳುವ ಅಭಿಪ್ರಾಯ ಸರಿಯಲ್ಲವೆಂದು ಹೇಳುತ್ತೇನೆ.

ಅಖಿಲ ಕರ್ನಾಟಕ ಪ್ರಾಂತ್ಯ ದಕ್ಷಿಣ ಇಂಡಿಯಾದಲ್ಲಿ ಅತ್ಯಂತ ಸಂಪತ್ಸಮೃದ್ಧಿಯಿಂದ ಕೂಡಿದ ಪ್ರಾಂತವಾಗುತ್ತದೆ. ಇದು ಬರೀ ಕರ್ನಾಟಕ ಪ್ರಾಂತ್ಯದಲ್ಲಿ ವಾಸಮಾಡತಕ್ಕ ಜನಕ್ಕೆ ಮಾತ್ರವಲ್ಲ. ಇಡೀ ಇಂಡಿಯಾ ದೇಶದ ಜನಕ್ಕೆ ಹೆಚ್ಚಿನ ಶಕ್ತಿಯನ್ನು ಕೊಡಬಹುದು. ನಾವು ಸುಖವಾಗಿ ಬೆಳೆದು ಬಂದರೆ, ನಮ್ಮ ನಿರುದ್ಯೋಗ ನಿವಾರಣೆಯಾದರೆ, ಎಲ್ಲರೂ ಸುಖವಾಗಿ ಬಾಳತಕ್ಕ ಪ್ರಾಂತ್ಯ ರಚನೆಮಾಡಿ ಒಂದು ವ್ಯವಸ್ಥಿತ ಆಡಳಿತದಲ್ಲಿ ನಾವು ಮುಂದುವರಿದರೆ, ಕರ್ನಾಟಕ ಪ್ರಾಂತ್ಯ ಭಾರತದ ಚೌಕಟ್ಟಿನಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಕೇಂದ್ರ ಸರ್ಕಾರದಲ್ಲೂ ಹೆಚ್ಚಿನ ಪ್ರಾತಿನಿಧ್ಯವನ್ನು ಕೂಡ ಪಡೆಯುತ್ತದೆ.

ಈಗ ತಾನೆ ಒಬ್ಬರು ಮಹನೀಯರು ವ್ಯಕ್ತಪಡಿಸಿರುವ ಹಾಗೆ ಉತ್ತರ ಪ್ರದೇಶವು ಪಾರ್ಲಿಮೆಂಟಿನಲ್ಲಿ ಹೆಚ್ಚಿನ ಪ್ರಭಾವನ್ನು ಬೀರುವಂತಿದೆ. ಒಬ್ಬರು ಇಬಬ್ಬರು ಹೋಗತಕ್ಕ ಪ್ರಾಂತ್ಯಗಳವರು ಕರ್ನಾಟಕದವರೆಂದು ಹೇಳಿಕೊಳ್ಳುವುದಕ್ಕೂ ಕಷ್ಟವಾಗುತ್ತದೆಂಬುದನ್ನು ನಾವು ಮನಗಂಡಿದ್ದೇವೆ. ಹೀಗಿರುವಾಗ ನಮ್ಮ ದೇಶದ ಎಲ್ಲೆಕಟ್ಟುಗಳನ್ನು ಬದಲಾವಣೆ ಮಾಡುತ್ತೇವೆ ಫಜ್ಲಾಲಿ ಕಮೀಷನ್ನಿನವರ ವರದಿಯನ್ನು ನಿರೀಕ್ಷಿಸುತ್ತದೇವೆ ಮತ್ತು ಎ. ಬಿ. ಸಿ. ಪ್ರಾಂತ್ಯಗಳೆಂಬ ವಿಂಗಡಣೆಗಳನ್ನೂ, ಇಂಡಿಯಾ ದೇಶದಲ್ಲಿ ಆಕಸ್ಮಿಕವಾಗಿ ಆಗಿರುವ ವಿಭಜನೆಗಳನ್ನು ಬದಲಾವಣೆ ಮಾಡುತ್ತೇವೆಂದು ಮುಂದೆ ಬಂದಿದ್ದಾರೆ. ಆದ್ದರಿಂದ ಈ ಸಂದರ್ಭವನ್ನು ಕಳೆದುಕೊಂಡರೆ ಈ ಮಹತ್ಕಾರ್ಯಕ್ಕೆ ಆತಂಕ ಮಾಡಿದರೆ, ಘಳಿಗೆ ಹೋದ ಮೇಲೆ ಇನ್ನೊಂದು ಸಾರಿ ಸುಸಂದರ್ಭಗಳು ಬರುವುದಿಲ್ಲ. ಯಾವಾಗಲು ಸುಸಂದರ್ಭಗಳು ಬರುವುದು ಕೆಲವೇ ಸಲ. ಈ ಸಮಸ್ಯೆ ಈ ಹೊತ್ತು ಮಹತ್ತರವಾಗಿ ಬಂದಿದೆ. ಮುಂದೆ ಮತ್ತೊಮ್ಮೆ ಬರುತ್ತದೆಂದು ಕಾದು ಕೂತರೆ ಬರುವುದಿಲ್ಲ. ಆದ್ದರಿಂದ ಇಂಥ ಘಳಿಗೆಯಲ್ಲಿ ನಾವು ಕೂಲಂಕಷವಾಗಿ ವಿಚಾರಮಾಡಿ ಖಚಿತವಾದ ಅಭಿಪ್ರಾಯವನ್ನು ಕೊಡಬೆಕು. ಆದ್ದರಿಂದ ನಾನು ಮಾನ್ಯ ಸದಸ್ಯರಲ್ಲಿ ವಿನಂತಿಸಿಕೊಳ್ಳುವುದಿಷ್ಟೇ. ನಮ್ಮ ಮೆಮೊರಾಂಡಮ್‌ನಲ್ಲಿ ನಾವು ಮೈಸೂರಿನಲ್ಲಿ ಇರಬಹುದಾದ ಕನ್ನಡೇತರ ಪ್ರದೇಶಗಳು ಏನಾಗಬೇಕೆಂಬ ಬಗ್ಗೆ ಹೇಳಿದ್ದೆವೆ. ನಮ್ಮ ಮಾನ್ಯ ಸ್ನೇಹಿತರಾದ ಶ್ರೀ ಬಿ. ವಿ. ನಾರಾಯಣ ರೆಡ್ಡಿಯವರು ಇಲ್ಲಿಲ್ಲ. ಅವರು ಈಗಲೂ ಕೂಡ ಆಗ್ರಹಪೂರ್ವಕವಾಗಿಯೇ ಮೈಸೂರಿನ ತೆಲಗು ಪ್ರದೇಶಗಳು ಆಂಧ್ರಕ್ಕೆ ಹೋಗಬೇಕು ಎಂದು ಹೇಳುತ್ತಿದ್ದಾರೆ.

ಮೈಸೂರಿಗೆ ಬೇರೆ ಕನ್ನಡ ಪ್ರದೇಶಗಳನ್ನು ಸೇರಿಸಿಕೊಳ್ಳುವುದಾದರೆ; ನಾವೂ ಈ ಪ್ರಾಂತ್ಯದಲ್ಲಿರಲು ಸಿದ್ಧರಾಗಿಲ್ಲವೆಂದು ಹೇಳಿದ್ದಾರೆ. ಅನೇಕ ವೇಳೆ ನಮ್ಮೊಡನೆ ಚರ್ಚೆ ಮಾಡುವಾಗಲೂ ತಾವು ಆಂಧ್ರ ಪ್ರಾಂತ್ಯಕ್ಕೆ ಹೋಗತಕ್ಕದೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ನಾವು ಈ ವಿಷಯದಲ್ಲಿ ನಮ್ಮ ಪಾರ್ಟಿಯ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿ ಬಿಟ್ಟಿದ್ದೇವೆ. ಆದರೂ, ಇನ್ನೂ ನಿಮ್ಮ ಅಭಿಪ್ರಾಯವೇ ಸ್ಪಷ್ಟವಾಗಿಲ್ಲ. ನೀವು “ಇಷ್ಟಪಟ್ಟರೆ” ಎಂದು ಹೇಳಿದ್ದೀರಿ. ಇದರಲ್ಲಿ ಅರ್ಥವಿಲ್ಲ. “ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳ ವಿಭಜನೆಯಾಗಬೇಕು ಎಂದು ಮಾತನಾಡುವಾಗ ನೀವು ಅದಕ್ಕೆ ಯಾವ ಯಾವ ಪ್ರಾಂತ್ಯಗಳು ಸೇರುತ್ತವೆ. ಎಂಬುದನ್ನೂ ಕೂಡ ಖಚಿತವಾಗಿ ಹೇಳಲೇಬೇಕು” ಎಂದು ನನ್ನ ಮಿತ್ರರಾದ ಶ್ರೀ ನಾರಾಯಣ ರೆಡ್ಡಿಯವರು ನನ್ನೊಡನೆ ಪದೇ ಪದೇ ಚರ್ಚೆ ಮಾಡುತ್ತಿರುತ್ತಾರೆ. ಆದರೆ ಅದನ್ನೂ ಕೂಡ ಹೇಳಿಬಿಡಬಹುದು. ಅದಕ್ಕೂ ನಾವೇನೂ ಹಿಂಜರಿಯಬೇಕಾಗಿಲ್ಲ.

ಎಲ್ಲ ಕನ್ನಡ ಭಾಗಗಳನ್ನೂ ಸೇರಿಸಿ ಒಂದು ಕನ್ನಡ ಪ್ರಾಂತ್ಯವನ್ನು ರಚನೆ ಮಾಡುವುದರಿಂದ ಈಗ ಕನ್ನಡ ಜನರ ಜೀವನ; ಇವರ ಭಾಷೆ, ಇವರ ಕಲೆ, ಇವರ ಸಂಸ್ಕೃತಿ, ಇವರ ವಿದ್ಯೆ ಇತ್ಯಾದಿಗಳೆಲ್ಲವೂ ಸುಲಭವಾಗಿ ಅಭಿವೃದ್ಧಿಯಾಗುತ್ತವೆಯೆಂದು ನಾವು ಹೇಳುತ್ತಿರುವಾಗ, ಈ ನಮ್ಮ ಜನರ ಭವಿಷ್ಯ ಕೂಡ ಅವರು ನಮ್ಮ ಮೈಸೂರಿನಲ್ಲೇ ಉಳಿದು ಬಿಟ್ಟರೆ, ಆ ಆಂಧ್ರದ ಜೊತೆಗೆ ಸೇರುವುದಕ್ಕಿಂತಲೂ ಹೆಚ್ಚಿನ ಒಂದು ಅನುಕೂಲವಿದೆ ಎಂದು ನಾವು ಅವರಿಗೆ ಹೇಳುವುದಾದರೆ ಆಗ ನಾವು ನಮ್ಮ ಆತ್ಮಕ್ಕೆ ಒಂದು ವಂಚನೆ ಮಾಡಿಕೊಂಡ ಹಾಗೆ ಆಗುತ್ತದೆ. ಆದರೆ ಅವರು ಈಗ ಸಭೆಯಲ್ಲಿಲ್ಲ. ಅವರಿದ್ದಿದ್ದರೆ ಬಹಳ ಚೆನ್ನಾಗಿತ್ತು.

ಈ ಅಂಕಿ-ಅಂಶಗಳ ಆಧಾರದ ಮೇಲೆ ಮಾತನಾಡುತ್ತಿರುವಾಗ ಆಂಧ್ರಕ್ಕೆ ಹತ್ತಿಕೊಂಡಿರತಕ್ಕಂತ ಮೈಸೂರು ಭಾಗಗಳು ಯಾವ ಯಾವವು ಇರುತ್ತವೆಯೋ, ಅಂಥವುಗಳನ್ನೆಲ್ಲಾ ಬಹುಶಃ ತೆಲಗು ರಾಜ್ಯಕ್ಕೆ ಬಿಟ್ಟು ಕೊಡಬೇಕಾದ್ದು ಅಗತ್ಯ. ಅಂಥ ಸಂಭವ ಬಂದರೆ ನಾವು ಬಿಟ್ಟು ಕೊಡಬೇಕಾಗಬಹುದು. ಆ ನಮ್ಮ ಕೋಲಾರದಲ್ಲಿರುವ ಚಿನ್ನದ ಗಣಿ ಹೋಗಿಡುತ್ತಲ್ಲ ಎಂದು ಕೇಳಿದರೆ ನಮಗೆ ಇತ್ತ ಆ ಭಟ್ಕಳ ಬಂದರು ಸೇರುತ್ತದೆ ಎಂದು ಹೇಳಬಹುದು. ಆದರೆ ಈ ದಿವಸ ನಮಗೆ ಸೇರಿರತಕ್ಕಂಥ ಆದಾಯ ಬರುವ ಪ್ರದೇಶ ಅವರಿಗೆ ಸೇರಬಹುದು. ಆಗ ನಮಗೂ ಸಹ ಅದೇ ರೀತಿ ಇಲ್ಲಿ ಕಳೆದುಕೊಂಡ ಆದಾಯಕ್ಕೆ ಪ್ರತಿಫಲವಾಗಿ ಆಗ ಇನ್ನೂ ಹೆಚ್ಚು ಆದಾಯ ನಮಗೆ ಸೇರುತ್ತದೆ. ಅವರಿಗೆ ಸೇರಬೇಕಾದ್ದನ್ನು ಅವರಿಗೂ ಬಿಡಬೇಕು. ಇಂಥ ಒಂದು ಸರಳವಾದ ವ್ಯವಸ್ಥೆ ಇರಲೇಬೇಕು.

ಈ ವಿಚಾರದಲ್ಲಿ ನನ್ನ ಸ್ಪಷ್ಟವಾದ ಅಭಿಪ್ರಾಯವೇನಿರುತ್ತದೆ ಎಂದರೆ ಹಾಗೆ ಅವರು ಆಂಧ್ರಕ್ಕೆ ಹೋತ್ತೇವೆಂದರೆ ಅದಕ್ಕೆ ನಮ್ಮ ಅಡ್ಡಿಯಿರಬಾರದು ಅದಕ್ಕೂ ಕೂಡ ನಾವು ಅವಕಾಶವನ್ನು ಕಲ್ಪಿಸಿಕೊಡಬೇಕು. ಆದರೆ, ಇದರಲ್ಲಿ ಏನು ಒಂದು ವಿಚಾರವಿದೆಯೆಂದರೆ “ನೀವು ಹೊರಟು ಹೋಗಿ” ಎಂಬುದಾಗಿ ಹೇಳತಕ್ಕದ್ದು ಅದು ಕರ್ಟಸಿಯಲ್ಲ – ಅನ್ನತಕ್ಕಂಥ ಒಂದು ಮನೋಭಾವನೆಯಿಂದ ನೀವು ಹೋಗಬೇಡಿ ಎಂದು ಹೇಳಬೇಕಾಗಿದೆ. ಆದರೆ ಈ ಒಂದು ಪ್ರಾದೇಶಿಕ ವಿಚಾರವಾಗಿ ಕರ್ನಾಟಕ ಪ್ರಾಂತ್ಯ ನಿರ್ಮಾಣ ಆಗಬಾರದು ಎಂದು ಹೇಳುವುದಕ್ಕೆ ಈ ಒಂದು ಕಾರಣ ಅಡ್ಡಿಯಾಗಬಾರದು ಎನ್ನುವುದಕ್ಕಾಗಿ ನಾನೀಗ ಇದನ್ನೆಲ್ಲಾ ಹೇಳಬೆಕಾಗಿ ಬಂತು. ಮೈಸೂರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಜಿಲ್ಲೆಗಳಿಗೂ, ಹೈದರಾಬಾದಿನಲ್ಲಿರತಕ್ಕಂಥ ಪ್ರಾಂತ್ಯ ಈ ಪ್ರದೇಶಗಳೆಲ್ಲಾ ಸೇರಿ ಒಂದು ಕನ್ನಡ ಪ್ರಾಂತ್ಯ ರಚನೆಯಾಗಬೇಕಾಗಿದೆ. ಇದಕ್ಕೆ ಸರ್ಕಾರ ಸಮ್ಮತಿಸಬೇಕು. ಈ ಅಂಶಗಳಿಗೆ ಅವರು ಅಡ್ಡಿಯಾಗಬಾರದು. ಏನೋ ಈ ಒಂದು ಅಡ್ಡಿಯಿದೆಯೆಂಬ ನೆಪದ ಮೇಲೆ ಈ ಮಹಾಕಾರ್ಯವನ್ನು ನೀವು ಆಗುಗೊಳಿಸದೆ ಹೋದರೆ, ಮುಂದೆ ಎರಡು ಕೋಟಿ ಜನಗಳ ಶ್ರೇಯಸ್ಸನ್ನು ಮೊಟಕು ಮಾಡಿದ ಹಾಗೆ ಆಗುತ್ತದೆ. ಮುಂದಿನ ಜನಾಂಗ ಇದರಿಂದ ಇನ್ನೂ ಹೆಚ್ಚಿನ ತೊಂದರೆ ಮತ್ತು ಅನೇಕ ಕಷ್ಟಗಳನ್ನೂ ನಾವೇ ಅವರಿಗೆ ತಂದೊಡ್ಡಿದ ಹಾಗೆ ಆಗುತ್ತದೆ. ಆದಕಾರಣ ಸರ್ವ ಮಾನ್ಯ ಸದಸ್ಯರುಗಳೂ ತಮ್ಮ ತಮ್ಮ ಅಭಿಪ್ರಾಯವನ್ನು ಈಗ ಸ್ಪಷ್ಟಪಡಿಸಬೇಕಾಗಿದೆ.

ನಾನಾಗಲೇ ತಿಳಿಸಿರುವ ಹಾಗೆ ಈ ಕರ್ನಾಟಕ ಪ್ರಾಂತ್ಯ ನಿರ್ಮಾಣದ ಬಗೆಗೆ ನಮ್ಮ ಪಕ್ಷದ ಧೋರಣೆ ಏನಿತ್ತೆಂಬ ಬಗ್ಗೆ ನಾವು ಈಗಾಗಲೇ ನಮ್ಮ ಸ್ಪಷ್ಟವಾದ ಅಭಿಪ್ರಾಯಗಳನ್ನೊಳಗೊಂಡಂಥ ಒಂದು ಮೆಮೊರಾಂಡಮನ್ನು ಒಪ್ಪಿಸಿದ್ದೇವೆ.

Choice ಎಂದು ಒಂದು ಪದವನ್ನು ಇದರಲ್ಲಿ ಸೇರಿಸಿದ್ದೇವೆ. ಹೀಗೆ ನಾವು ಈ Choice ಅಂತ ಒಂದು ಪದವನ್ನು ಹಾಕಿರುವುದರಿಂದ ನೀವು ಹಾಗೆ ಜನಗಳು ತಮ್ಮ ಸ್ವತಂತ್ರವಾದ ಒಂದು ಅಭಿಪ್ರಾಯ ಕೊಡುವಷ್ಟು ಮಟ್ಟಿಗೆ ಅವರನ್ನು ವಿದ್ಯಾವಂತರನ್ನಾಗಿ ಮಾಡಿದ್ದೀರಾ ಎಂದು ನನ್ನೊಡನೆ ಶ್ರೀ ನಾರಾಯಣ ರೆಡ್ಡಿಯವರು ಆಗಾಗ್ಗೆ ವಾದ ಮಾಡುತ್ತಿರುತ್ತಾರೆ. ಆದರೆ; ನಾವು ಅವರ ಇಷ್ಟಕ್ಕೆ ವಿರೋಧವಾಗಿ ಹೊರದೂಡುವುದಕ್ಕಾಗುವುದಿಲ್ಲ. ಆದರೆ ಯಾರ್ಯಾರು ಮೈಸೂರಿನವರೊಡನೆ ಇರುವುದಕ್ಕೆ ಇಷ್ಟಪಡುತ್ತಾರೋ ಅವರು ಇರಲಿ ಅನ್ನುವ ಉದ್ದೇಶದಿಂದ ನಾವು ಹಾಗೆ ಹೇಳಿರುತ್ತೇವೆ. ಈ ವಿಚಾರವಾಗಿ ಆ ಬೌಂಡರಿ ಕಮಿಷನ್ನಿನವರು ಯಾವ ರೀತಿ ಅಭಿಪ್ರಾಯಪಡುತ್ತಾರೋ ಮತ್ತು ಈ ದ್ವಿಭಾಷಾ ಪ್ರದೇಶಗಳ ಹಂಚಿಕೆಯನ್ನು ಯಾವ ರೀತಿ ಆಗಬೇಕೆಂದು ತಿಳಿಸುತ್ತಾರೋ ಅವರು ಯಾವ ಯಾವ ಭಾಗಗಳು ರಾಜ್ಯಕ್ಕೆ ಸೇರಬೇಕೆಂದು ಕೊನೆಯ ಘಳಿಗೆಯಲ್ಲಿ ತಮ್ಮ ಒಂದು ತೀರ್ಮಾನ ನೀಡುತ್ತಾರೋ ಅಂಥ ಒಂದು ತೀರ್ಮಾನಕ್ಕೆ ನಾವೆಲ್ಲರು ಬಾಧ್ಯರಾಗಿರೋಣ. ಅವರು ಯಾವ ಯಾವ ಪ್ರದೇಶ ಯಾವುದಕ್ಕೆ ಸೇರಬೇಕೆಂದು ತಿಳಿಸುತ್ತಾರೋ ಅದಕ್ಕೆ ನಮ್ಮ ಯಾವ ಭಿನ್ನಾಭಿಪ್ರಾಯವೂ ಇರಲಾರದು. ಅವರು ಹೈದರಾಬಾದು ಆ ಮಹಾರಾಷ್ಟ್ರಕ್ಕೆ ಹೋಗಬೇಕೆಂದರೆ ಆಗ ಸ್ವಲ್ಪ ಭಿನ್ನಾಭಿಪ್ರಾಯ ಬರಬಹುದು. ಆದರೆ ಅವರು ಕಾರ್ಯವನ್ನು ಹಳ್ಳಿಗಳ ಯೂನಿಟ್‌ ಮೇಲೆ ಅಥವಾ ತಾಲ್ಲೂಕುಗಳ ಯೂನಿಟ್‌ಮೇಲೆ ಇಲ್ಲವೇ ಜಿಲ್ಲೆಗಳ ಯೂನಿಟ್‌ಮೇಲೆ ಮಾಡುತ್ತಾರೆಯೇ ಹೇಗೆ ಅನ್ನತಕ್ಕ ವಿಚಾರದಲ್ಲಿ ಕೂಡ ಸ್ವಲ್ಪ ಭಿನ್ನಾಭಿಪ್ರಾಯ ಬರಬಹುದು. ಆಗ ಕೆಲವರು ತಾಲ್ಲೂಕು ಯೂನಿಟ್ಟುಗಳಿರಲೆಂದು ಇಷ್ಟಪಡಬಹುದು. ಅಂತೂ ಯಾರು ಹೇಗೆ ಇಷ್ಟಪಟ್ಟರೂ, ಈ ಪ್ರಶ್ನೆ ಆ ಬೌಂಡರಿ ಕಮಿಷನ್ನಿನವರ ತೀರ್ಮಾನದ ಪ್ರಕಾರ ನಿರ್ಧಿರಿಸಲ್ಪಡುತ್ತದೆ.

ಆದರೆ ನಾವೆಲ್ಲರೂ ಒಂದಾಗಿ ಸೇರಿ ಈ ಕಾರ್ಯವನ್ನು ಹೆಚ್ಚು ಕಷ್ಟವಿಲ್ಲದಂತೆ, ಇತರ ಯಾವ ಭಾವನೆಗಳಿಗೂ ಅಥವಾ ಉದ್ರೇಕಗಳಿಗೂ ಅವಕಾಶವಿಲ್ಲದಿರುವ ಹಾಗೆ, ಇತರರಿಗೆ ಅನಾನುಕೂಲವಾಗದಂತೆ ಜನರ ಅಭಿಪ್ರಾಯಗಳನ್ನು ರೂಪಿಸಿ, ಒಂದು ಸಮಾಧಾನವಾದ ರೀತಿಯಲ್ಲಿ ಬಗೆಹರಿಸತಕ್ಕ ಬಗ್ಗೆ ನಾವೆಲ್ಲರೂ ಈ ದಿವಸ ಶ್ರಮಿಸಬೇಕಾಗಿದೆ. ಈಗಾಗಲೇ ಆ ಫಜಲಾಲಿ ಸಮಿತಿಯವರು ಈ ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ಒಂದು ತೀರ್ಮಾನಕ್ಕೆ ಬರುವುದರಲ್ಲಿದ್ದಾರೆ. ಅವರು ಸರ್ಕಾರಕ್ಕೆ ಒಪ್ಪಿಸಬೇಕಾಗಿರುವ ವರದಿ ಪೂರೈಸುತ್ತಾ ಬಂದಿದೆ. ಅವರ ವರದಿಯನ್ನು ಬೇಗ ಕೊಡಬೇಕೆಂದು ಕೇಂದ್ರ ಸರ್ಕಾರ ಅವರನ್ನು ಒತ್ತಾಯಪಡಿಸುತ್ತಿದೆ. ಆದರೆ ಅದು ಇನ್ನೂ ಪೂರ್ತಿಯಾಗಿಲ್ಲ. ಇಷ್ಟರೊಳಗಾಗಿಯೇ ನಾವು ಈ ಬಗ್ಗೆ ನಮ್ಮ ಖಚಿತವಾದ ಅಭಿಪ್ರಾಯವನ್ನು ಅವರಿಗೆ ತಿಳಿಸಬೇಕಾಗಿತ್ತು. ಆದರೆ ಈ ದಿವಸ ಕೂಡ ಈ ವಿಚಾರವನ್ನು ಬರಿ ಚರ್ಚೆಯಲ್ಲೇ ಮುಗಿಸಿಬಿಡೋಣ ಅನ್ನತಕ್ಕಂಥ ಒಂದು ಮನೋಭಾವ ಸರ್ಕಾರಕ್ಕಿರುವ ಹಾಗೆ ಕಾಣಬರುತ್ತಿದೆ. ನಾವು ಮುಖ್ಯಮಂತ್ರಿಗಳು ಮಾಡಿರತಕ್ಕಂಥ ಭಾಷಣವನ್ನು ನೋಡಿದರೆ ಅವರು ‘ಜನಾಭಿಪ್ರಾಯದಂತೆ ನಾನು ವರ್ತಿಸುತ್ತೇನೆ. ಬೇರೆ ದೇಶದ ಜನರನ್ನೂ ನಾನು ಆಹ್ವಾನಿಸುತ್ತೇನೆ’ ಎಂದು ಹೇಳಿದ್ದಾರೆ. ಇದರಿಂದ ಅವರ ಅಭಿಪ್ರಾಯವೇನು ಇರುತ್ತದೆಯೆಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಅವರು ‘ನಾನು ಈ ಕರ್ನಾಟಕ ಪ್ರಾಂತ್ಯ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಬರುವುದಿಲ್ಲ’ ಎಂದು ಹೇಳಿದ್ದಾರೆ. ಅವರು ಇನ್ನು ಮುಂದೆಯೂ ಸಹ ಇದೇ ರೀತಿಯಾಗಿ ತಮ್ಮ ಒಂದು ಸ್ಪಷ್ಟವಾದ ಅಭಿಪ್ರಾಯವನ್ನು ಕೊಡುತ್ತಾರೆಂದು ನಾನು ಆಶಿಸುತ್ತೇನೆ.

ಈ ಸಂದರ್ಭದಲ್ಲಿ ಇನ್ನು ಕೆಲವು ವಿಷಯಗಳನ್ನು ಹೇಳಬೇಕಾಗಿತ್ತು. ಅದಕ್ಕೆಲ್ಲಾ ಕಾಲಾವಕಾಶವಿಲ್ಲ. ನಾನಿನ್ನೂ ನನ್ನ ಮಾನ್ಯ ಸ್ನೇಹಿತರಿಗೆ ಮಾತನಾಡಲು ಕಾಲಾವಕಾಶ ಮಾಡಿಕೊಡ ಬೇಕಾಗಿರುವುದರಿಂದ ನನ್ನ ಭಾಷಣವನ್ನು ಇನ್ನು ಒಂದೆರಡು ಮಾತುಗಳನ್ನು ಹೇಳಿ ಮುಗಿಸಿ ಬಿಡುತ್ತೇನೆ. ಕೆಲವು ಕಾಲದೊಳಗಾಗಿಯೇ ಸಮಗ್ರ ವಿಷಯಗಳನ್ನೂ ಚಿತ್ರಿಸುವುದಕ್ಕೆ ಈ ಭಾಷಾವಾರು ಪ್ರಾಂತ್ಯವಾದರೇನೇ ಸಾಧ್ಯ. ಸೂಕ್ಷ್ಮದಲ್ಲಿ ಹೇಳುವುದಾದರೆ ಈ ಕರ್ನಾಟಕ ಪ್ರಾಂತ್ಯ ರಚನೆಯಲ್ಲಿ ಕನ್ನಡನಾಡಿನ ಜನರ ಭವಿಷ್ಯವು ಬಹಳ ಉಜ್ವಲವಾಗಿರುತ್ತದೆ. ಇವರು ತಮ್ಮ ಅಭಿವೃದ್ಧಿಯನ್ನು ಆಗ ಬಹಳ ಬೇಗ ಸಾಧಿಸಿಕೊಳ್ಳಬಹುದು. ಹೀಗೆ ಭಾಷಾವಾರು ಪ್ರಾಂತ್ಯ ಸಾಧ್ಯ ಆಗಬೇಕಾದಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ಹೈದರಾಬಾದ್‌ ಇವುಗಳ ವಿಭಜನೆಯು ನಮ್ಮ ನೆರೆಹೊರೆಯಲ್ಲಿರುವುದರಿಂದ ಇವುಗಳೆಲ್ಲ ಸಹಕರಿಸಿ ನಡೆಯಬೇಕಾಗಿರುತ್ತೆಂಬುದು ಅಗತ್ಯ – ಎಂದು ನಾನು ಒತ್ತಿ ಹೇಳಬಯಸುತ್ತೇನೆ.

ಈ ಸಂಬಂಧವಾಗಿ ಈಗಾಗಲೇ ಆ ಫಜಲಾಲಿ ಸಮಿತಿಯವರು ಈ ಭಾಷಾವಾರು ಪ್ರಾಂತ್ಯಗಳ ರಚನೆಯ ಬಗ್ಗೆ ಜನರೆಲ್ಲರ ಆಶೋತ್ತರಗಳು ಯಾವ ರೀತಿ ಇರುತ್ತವೆ – ಎನ್ನತಕ್ಕ ಬಗ್ಗೆ ಅನೇಕ ರೀತಿಯಲ್ಲಿ ಅಭಿಪ್ರಾಯಗಳನ್ನು ಕ್ರೋಢೀಕರಿಸಿರುತ್ತಾರೆ. ಅದರ ಪ್ರಕಾರ ಈ ಪ್ರಾಂತ್ಯಗಳ ಪುನರ್ನಿರ್ಮಾಣವಾಗುವಂತೆ ನಾವು ಪ್ರಯತ್ನಗಳನ್ನು ನಡೆಸಿ ಅದು ಬೇಗ ಕಾರ್ಯರೂಪಕ್ಕೆ ಬರುವಂತೆ ಮಾಡಲು ಅವರಿಗೆ ನಮ್ಮೆಲ್ಲರ ಸಹಾಯ ಮತ್ತು ಬೆಂಬಲವನ್ನು ನೀಡಬೇಕಾಗಿದೆ.

೧೯೫೨ನೆಯ ಇಸವಿಯೊಳಗೆ ಈ ಕಾರ್ಯಸಾಧನೆಯಾಗಿ ಮುಂದಿನ ಮಹಾಚುನಾವಣೆಗಳು ನಡೆಯುವಲ್ಲಿ ಇಂದು ಹೊರಗಡೆ ಇರತಕ್ಕ ಎಲ್ಲಾ ಕನ್ನಡನಾಡಿನ ಪ್ರತಿನಿಧಿಗಳೂ ಈ ಸಭೆಗೆ ಬಂದು ಅವರು ನಮ್ಮೊಡನೆ ಸೇರುವಂತಾಗಲಿ, ಇದಕ್ಕೆ ನಮ್ಮೆಲ್ಲರ ಸೌಹಾರ್ದವಿರಲಿ, ಅವರನ್ನು ಆಹ್ವಾನಿಸೋಣ. ಅವರಿಗೆ ಈ ಸಂಬಂಧವಾಗಿ ಶುಭಾಶಯಗಳನ್ನೂ ಕೋರೋಣ ಅನ್ನುವುದಾಗಿ ಹೇಳಿ ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.