ಭೂ ಸೇನೆ

೨೩ ಮಾರ್ಚ್೧೯೫೫

ಪಬ್ಲಿಕ್‌ ವರ್ಕ್ಸ್ ಇಲಾಖೆಯ ಕೆಲಸಗಳನ್ನು ಮಾಡಲು ಸರ್ಕಾರದವರು ಒಂದು ಭೂ ಸೈನ್ಯವನ್ನು ಸಂಸ್ಥಾನದಲ್ಲಿ ರಚನೆ ಮಾಡಬೇಕು. ಏಕೆಂದರೆ ನಮ್ಮಲ್ಲಿ ಕೆಲಸಗಾರರ ಕೊರತೆ ಬಹಳವಾಗಿದೆ. ಲಕ್ಕವಳ್ಳಿಯಲ್ಲಿ ನೋಡಿದರೆ, ಅಲ್ಲಿ ಕೊಯಮತ್ತೂರು, ಸೇಲಂ ಮುಂತಾದ ಕಡೆಗಳಿಂದ ಬಂದು ಕೆಲಸ ಮಾಡುತ್ತಾರೆ. ಅವರಿಗೆ ನಿಲ್ಲುವುದಕ್ಕೆ ನೆಲೆಯಿರುವುದಿಲ್ಲ. ಕಾಲರಾ ಮುಂತಾದ ರೋಗಗಳಿಂದ ನರಳುತ್ತಾರೆ. ಮೈಸೂರು ದೇಶದವರು ಶರೀರ ಶ್ರಮಕ್ಕೆ ಅಷ್ಟಾಗಿ ಬೆಲೆಕೊಟ್ಟಂತೆ ಕಾಣಲಿಲ್ಲ. ಈ ಕೊರತೆಯನ್ನು ನೀಗಿಸುವುದಕ್ಕೆ ಭೂ ಸೇನೆಯನ್ನು ರಚನೆ ಮಾಡಿ ಎಲ್ಲೆಲ್ಲಿ ಪಬ್ಲಿಕ್‌ ವರ್ಕ್ಸ್‌ ಇಲಾಖೆಯ ಕೆಲಸಗಳು ನಡೆಯಬೇಕೋ ಅಲ್ಲಿ ಅವರಿಗೆ ಅವಕಾಶ ಕೊಡಬೇಕು. ಬುಲ್‌ಡೋಜರುಗಳು, ಟ್ರಾಕ್ಟರುಗಳನ್ನು ಉಪಯೋಗಿಸಿಕೊಂಡು ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನ ವ್ಯವಸಾಯಮಾಡಲು ಇವರನ್ನು ಉಪಯೋಗಿಸಿ ಕೊಂಡರೆ ಸಾಧ್ಯವಾಗುತ್ತದೆ. ಈ ಕಾರಣಗಳಿಂದ ಭೂ ಸೈನ್ಯದ ವಿಚಾರವನ್ನು ಪರಿಶೀಲಿಸಬೇಕೆಂದು ಕೇಳಿಕೊಳ್ಳತ್ತೇನೆ.

ನೇರ ಚುನಾವಣೆ

೧೨ ಏಪ್ರಿಲ್೧೯೫೫

ನೇರವಾದ ಚುನಾವಣೆಯನ್ನು ನಡೆಸಬೇಕೇ ಅಥವಾ ಅಪ್ರತ್ಯಕ್ಷವಾದ ಚುನಾವಣೆಯನ್ನು ನಡೆಸಬೇಕೇ ಎನ್ನುವುದರಲ್ಲಿ ಬಹಳವಾಗಿ ಭಿನ್ನಾಭಿಪ್ರಾಯ ಬಂತು… ಸರ್ವೋದಯ ದೃಷ್ಟಿಕೋನದಿಂದ ಇವೊತ್ತು ಚುನಾವಣೆಗಳನ್ನು ಜಾರಿಗೆ ತರುವುದು ಕಾರ್ಯತಃ ಕಷ್ಟವಾಗಿದೆ. ಅಂದರೆ ಆ ದಿಕ್ಕಿನಲ್ಲೇ ಹೋಗಬಾರದು ಎಂದು ನನ್ನ ಅಭಿಪ್ರಾಯವಲ್ಲ. ಆ ಆದರ್ಶ ಕಾರ್ಯತಃ ಜಾರಿಗೆ ಬರುವಾಗ, ನಿರ್ಮೋಹ ದೃಷ್ಟಿಯಿಂದ ಪಕ್ಷಾತೀತ ದೃಷ್ಟಿಯಿಂದ, ಸೇವಾ ಮನೋಭಾವದಿಂದ ನಮ್ಮವರು, ನಾವು ಇನ್ನು ಅಷ್ಟುಮಟ್ಟಿಗೆ ಮುಂದುವರಿದಿಲ್ಲ. ಆದ್ದರಿಂದ ಇವೊತ್ತು ಇನ್ನೂ ಕೆಲವು ನಿಯಮಗಳನ್ನು ಇಟ್ಟುಕೊಂಡು: ಈ ಚುನಾವಣೆಗೆ ಸಂಬಂಧಪಟ್ಟಂತೆ ಸಾಮಾನ್ಯವಾಗಿ ನಾಗರೀಕ ದೇಶಗಳಲ್ಲಿ ಅನುಸರಿಸಬೇಕಾದ ಕೆಲವು ಪದ್ಧತಿಗಳನ್ನು ಅನುಸರಿಸಲೇಬೇಕಾಗಿದೆ. ಬ್ಯಾಲೆಟ್‌ ಬಾಕ್ಸ್‌ ಇಟ್ಟುಕೊಳ್ಳುವುದು, ಪ್ರಚಾರ ಮಾಡುವುದು, ಯಾರ್ಯಾರು ಅರ್ಜಿ ಹಾಕುತ್ತಾರೆ ಎಂದು ಕೇಳುವುದು, ಅರ್ಜಿಯನ್ನು ಸೂಕ್ತವಾಗಿ ತಿರ್ಮಾನ ಮಾಡಿ, ಇಂತಹವರು ಚುನಾವಣೆಯಾಗಿ ಬಂದರು, ಇಂತಹವರು ಬರಲಿಲ್ಲ ಎಂದು ಹೇಳುವುದು ಇವೆಲ್ಲಾ ಆಗಲೇ ಬೇಕು. ಒಂದು ವೇಳೆ ತೀರ ಸೇವೆ ಮಾಡತಕ್ಕ ಬಹಳ ಒಳ್ಳೆಯ ಮನುಷ್ಯ ಸೋತುಹೋಗಬಹುದು. ಅಂದ ಮಾತ್ರಕ್ಕೆ ಒಳ್ಳೆಯ ಮನುಷ್ಯನನ್ನು ಸೋಲಿಸಿ, ಸೇವೆ ಮಾಡುವುದಕ್ಕೆ ಅನರ್ಹನಾಗಿರುವವನನ್ನು ಆರಿಸಿದ್ದೀರಿ ಎಂದು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಒಂದು ತತ್ವ ಒಪ್ಪಿಕೊಂಡ ಮೇಲೆ ಕೆಲವು ಅಡ್ಡಿ ಆತಂಕಗಳು ಅದರಲ್ಲಿದ್ದರೂ ಕೂಡ ಸಹಿಸಿಕೊಂಡು ಮುಂದೆ ಹೋಗಬೇಕಾಗುತ್ತದೆ, ಇದು ಪ್ರಜಾಪ್ರಭುತ್ವದಲ್ಲಿ ನಡೆಯುತ್ತ ಇರುವ ರೀತಿ. ಅಪ್ರತ್ಯಕ್ಷ ಚುನಾವಣೆ ನಡೆಯಬೇಕೆಂಬ ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇಲ್ಲ, ಎಂದರೆ ಪ್ರತ್ಯಕ್ಷವಾಗಿ ಚುನಾವಣೆ ನಡೆಯಬೇಕೆಂಬ ನಿಲುವು ಸಮಂಜಸವಾಗಿವೆ. ಮತ್ತು ಅದು ಪ್ರಜಾಪ್ರಭುತ್ವಕ್ಕೆ ಹೆಚ್ಚು ಕಳೆಯನ್ನು ಕೊಡುತ್ತದೆಯೇ ಹೊರತು: ಅಪ್ರತ್ಯಕ್ಷವಾಗಿ ಚುನಾವಣೆ ನಡೆದರೆ ಅದರಿಂದ ಆಗುವ ತೊಂದರೆ ನಮಗೆ ಬಹಳ ಹೆಚ್ಚು.

ಸಮಾನ ಸಂಬಳ

೨೬ ಏಪ್ರಿಲ್೧೯೫೫

ಅಧ್ಯಕ್ಷರೇ, ಈಗ ಸಭೆಯ ಮುಂದೆ ಚರ್ಚೆಗೆ ಬಂದಿರತಕ್ಕ ವಿಶೇಷ ನಿರ್ಣಯವನ್ನು ನಾನು ಸಮರ್ಥಿಸುತ್ತಾ ಒಂದೆರಡು ವಿಷಯಗಳನ್ನು ಹೇಳಬೇಕೆಂದಿದ್ದೇನೆ ಈಗಾಗಲೇ ಶ್ರೀ ಚೆನ್ನಬಸಪ್ಪನವರು ಸೂಕ್ಷ್ಮವಾಗಿ ಸಂಬಳ ಸಾರಿಗೆಗಳ ಮತ್ತು ಅಧಿಕಾರಿಗಳ ಚರಿತ್ರೆಯನ್ನು ನಮಗೆ ಕೊಟ್ಟಿದ್ದಾರೆ. ಐ.ಎ.ಎಸ್. ಮತ್ತು ಐ.ಪಿ.ಎಸ್ ಇವರ ಸಂಬಂಧದಲ್ಲಿ ಕೂಡ ಅವರು ಮಾತನಾಡಿದ್ದಾರೆ.

ಮುಖ್ಯವಾಗಿ ಕೆಳದರ್ಜೆಯ ನೌಕರರ ಸಂಬಳ ಸಾರಿಗೆಗಳನ್ನು ಹೆಚ್ಚಿಸುವ ವಿಷಯವಾಗಿ ದೇಶದಲ್ಲಿ ಅನೇಕ ವರ್ಷಗಳಿಂದ ಸಹಾನುಭೂತಿಯುತವಾದ ದೃಷ್ಟಿಕೋನ ಬೆಳೆದು ಬಂದಿದೆ ಎಂಬುದನ್ನು ನಾವು ಅರಿಯಬೇಕು. ಈಚೆಗೆ ನಮ್ಮ ಸಂಸ್ಥಾನದ ಮುಖ್ಯಮಂತ್ರಿಗಳೂ ಕೂಡ ವಿದ್ಯುಚ್ಛಕ್ತಿ ಕೆಲಸಗಾರರ ಹೋರಾಟ ನಡೆದ ಸಂದರ್ಭದಲ್ಲೇ, ನಾವು ಸಂಸ್ಥಾನದ ಎಲ್ಲಾ ನೌಕರರ ಸಂಬಳ ಸಾರಿಗೆಗಳನ್ನೂ ಕೂಲಂಕಷವಾಗಿ ಪರಿಶೀಲನೆ ಮಾಡಿ ಆ ಬಗ್ಗೆ ಸಲಹೆ ಕೊಡುವುದಕ್ಕೆ ಒಂದು ಸಮಿತಿಯನ್ನು ರಚಿಸುವವರಾಗಿದ್ದೇವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಲ್ಲದೆ ಈಚೆಗೆ ಈ ಸಂದರ್ಭದಲ್ಲಿ ಒಂದು ಸುಧಾರಣೆಯ ರೂಪದಲ್ಲಿ ಜಾರಿಗೆ ತಂದಿರುವ ಒಂದು ಕಾರ್ಯಕ್ರವೆಂದರೆ ದೊಡ್ಡ ಅಧಿಕಾರಿಗಳಿಗೆ ಕೊಡುತ್ತಿದ್ದಂತ ತುಟ್ಟಿಭತ್ಯವನ್ನು ಖೊತಾಮಾಡಿದ್ದು. ಆದರೆ ಈ ಕಾರ್ಯಕ್ರಮ ಪೂರ್ತಿಯಾಗಿ ಮುಂದುವರಿಯಲ್ಲಿಲ್ಲ. ಮಧ್ಯಕ್ಕೆ ನಿಂತುಹೋದುದು ಬಹಳ ವಿಶಾದಕರ. ಅದಕ್ಕಾಗಿ ಇವೊತ್ತು ಈ ಸಭೆಯ ಮುಂದೆ ತಮ್ಮ ಅಪ್ಪಣೆ ಪಡೆದು ಒಂದು ವಿಶೇಷ ನಿರ್ಣಯವನ್ನು ಸರ್ಕಾರದವರು ಪರೀಶಿಲನೆ ಮಾಡಬೇಕೆಂದು ಇಡುತ್ತಿದ್ದೇವೆ.

ಈಗಿರತಕ್ಕ ಸಂಬಳದ ರಚನೆಸುಮಾರು ೧೯ನೆಯ ಶತಮಾನದ ಕಾಲದಿಂದ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಮಧ್ಯೆ ಅಲ್ಲಿ ಇಲ್ಲಿ ಕೆಲವು ಸಮಿತಿಗಳ ಶಿಫಾರಸಿನ ಮೇಲೆ ಅಲ್ಪಸ್ವಲ್ಪ ಬದಲಾವಣೆಯಾಗಿದ್ದರೂ ಸ್ವರೂಪದಲ್ಲಿ ಮೂಲಭೂತವಾಗಿ ಯಾವ ಬದಲಾವಣೆಯೂ ಆಗಿಲ್ಲವೆಂದೇ ಹೇಳಬಹುದಾಗಿದೆ. ಇಂಡಿಯಾ ಸರ್ಕಾರದವರೂ ಕೂಡ ಈ ಬಗ್ಗೆ ಹಿಂದೆ ಅನೇಕ ಕಮಿಟಿಗಳನ್ನು ಸ್ಥಾಪನೆ ಮಾಡಿದರು. ೧೯೪೬ರಲ್ಲೇ ಶ್ರೀನಿವಾಸಾಚಾರ್ ರವರ ಕಮಿಟಿ ಬಂತು. ಆ ಸಂದರ್ಭದಲ್ಲಿ ಗೋರ್ ವಾಲ್ ರವರು ಕೆಲವು ಉಪಯುಕ್ತ ಸಲಹೆಗಳನ್ನು ಕೊಟ್ಟರು. ಈ ವರದಿಗಳೆಲ್ಲವನ್ನೂ ನಾವು ನೋಡಿರುವುದರಲ್ಲೇ ಕೇಂದ್ರ ಸರ್ಕಾರದ ಸಂಬಳ ಸಾರಿಗೆಗಳಿಗೂ ರಾಜ್ಯ ಸರ್ಕಾರಗಳ ಸಂಬಳ ಸಾರಿಗೆಗಳಿಗೂ ಬಹಳ ಅಂತರವಿರುವುದು ಕಂಡುಬರುತ್ತದೆ.

ನಾನು Basic living wages ಇಟ್ಟುಕೊಂಡು ಮಾತನಾಡುತ್ತಿದ್ದೇನೆ. ಆದ್ದರಿಂದ ಇವೊತ್ತು ಶ್ರೀ ಚನ್ನಬಸಪ್ಪನವರು ಸಲಹೆ ಮಾಡಿರುವ ಹಾಗೆ ಮಾನ್ಯ ಮಾಜಿ ದಿವಾನರುಗಳ ಪೆನ್ ಷನ್ ಗಳನ್ನು ಇಳಿಸುವುದರಿಂದ ೪೦,೦೦೦ ರೂಪಾಯಿಗಳನ್ನು ಉಳಿತಾಯ ಮಾಡಬಹುದು. ನಾನು ಶ್ರೀ ಮನ್ಮಹಾರಾಜರ ಪ್ರೀವಿಪರ್ಸನ್ನು ಕಡಿಮೆ ಮಾಡುವುದರಿಂದಲೂ ಹಣ ಉಳಿತಾಯ ಮಾಡಬಹುದೆಂದು ಹೇಳುತ್ತೇನೆ. ತಮಗೆ ಮನಸ್ಸಿದ್ದರೆ, ಏನು ಬೇಕಾದರೂ ಮಾಡಬಹುದು. Socialistic pattern of society ಯನ್ನು ಜಾರಿಗೆ ತರುವುದಾಗಿ ಉದ್ಘೋಷಣೆ ಮಾಡಿದ್ದಿರಿ, ಆ ದಿಕ್ಕಿನಲ್ಲಿ ಹೋಗುತ್ತೇವೆಂದು ಹೇಳಿದ್ದೀರಿ. ಆದ್ದರಿಂದ, ಮೊದಲೆಯದಾಗಿ ಈಗಿರುವ ಒಂದಕ್ಕೆ ೨೦೦ರಷ್ಟು ೨೫೦ ರಷ್ಟಿರುವ ಸಂಬಳಗಳ ಅಂತರವನ್ನು ಒಂದಕ್ಕೆ ಹತ್ತರಷ್ಟಾದರೂ ಇರುವಂತೆ ಮಾಡುವುದಕ್ಕೆ ಪ್ರಯತ್ನಪಡಿರಿ. ಕನಿಷ್ಠ ಸಂಬಳ ೧೦೦ ರೂಪಾಯಿ ಗರಿಷ್ಠ ಸಂಬಳ ೧,೦೦೦ ರೂಪಾಯಿಯೆಂಬುದು, ಈಗಿರತಕ್ಕ ಸಂಸ್ಥಾನದ ಮತ್ತು ಕೇಂದ್ರದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿದೆ ಎನ್ನಬಹುದು. ಆದ್ದರಿಂದ ಸರ್ಕಾರಾದವರು ಈ ರೀತಿ ಮಾಡಿ ಮೊದಲು ಒಂದು ಮಾದರಿ ಹಾಕಿಕೊಟ್ಟರೆ, ಬೇರೆ Sectionಗ ಳಲ್ಲಿಯೂ ಸಂಬಳ ಸಾರಿಗೆಗಳನ್ನು ಗೊತ್ತು ಮಾಡುವಾಗ, ಕಾರ್ಮಿಕರ ಜೀವನ ವೆಚ್ಚಕ್ಕೆ ಸರಿಯಾಗಿ ಸಂಬಳ ನಿಗದಿ ಮಾಡುವಾಗ ಇದನ್ನು ಮೂಲಭೂತವಾಗಿ ಇಟ್ಟುಕೊಂಡು ಮುಂದುವರಿಯುವುದಕ್ಕೆ ಬಹಳ ಅನುಕೂಲವಾಗುತ್ತದೆ; ಆದ್ದರಿಂದ ಸರ್ಕಾರದವರು ಹಣವನ್ನು ಹೆಚ್ಚಿಸಿಕೊಳ್ಳತಕ್ಕ ಬಗ್ಗೆ ಎಲ್ಲೆಲ್ಲಿ Economy measures ಜಾರಿಗೆ ತರಬಹುದೋ ಅಲ್ಲಿ ಜಾರಿಗೆ ತಂದು; ಸಂಸ್ಥಾನದ ಆಡಳಿತ ವರ್ಗದಲ್ಲಿರತಕ್ಕ ಅಸಂತೃಪ್ತಿಯನ್ನು ಹೋಗಲಾಡಿಸುವುದು ಮತ್ತು ಮಾನವೀಯತೆಯ ಹಾಗೂ ಧಾರ್ಮಿಕ ದೃಷ್ಟಿಯಿಂದ ಈ ಪರಿಸ್ಥಿತಿಯನ್ನು ತೊಡೆದು ಹಾಕುವುದು ಅತ್ಯಗತ್ಯ.

ವಿಶ್ವವಿದ್ಯಾನಿಲಯಗಳು

೧೦ ಅಕ್ಟೋಬರ್ ೧೯೫೫

ವಿಶ್ವವಿದ್ಯಾನಿಲಯಗಳ ಆಡಳಿತವನ್ನು ತೆಗೆದುಕೊಂಡರೆ ಇವುಗಳೆಲ್ಲಾ ಸಂಪೂರ್ಣವಾಗಿ ತಮ್ಮ ಒಳಾಡಳಿತದಲ್ಲಿ ಇರುತ್ತವೆ ಎಂದು ಹೇಳಿದರೆ ಇದರ ಬಗ್ಗೆ ಯಾರದೂ ಅಷ್ಟಾಗಿ ಭಿನ್ನಭಿಪ್ರಾಯವಿರಬಾರದು ಎಂದು ನಾನು ತಿಳಿದುಕೊಂಡಿದ್ದೇನೆ. ಈ ದಿವಸ ಈ ವಿಶ್ವವಿದ್ಯಾನಿಲಯದಲ್ಲಿ (ಮೈಸೂರು) ಕೆಲಸ ಮಾಡುತ್ತಿರುವ ಪ್ರೊಫೆಸರುಗಳನ್ನು ಮತ್ತು ಅಧ್ಯಾಪಕರುಗಳನ್ನೂ ತಾವು ಒಂದು ತಾಲ್ಲೂಕಾಫೀಸಿನ ಗುಮಾಸ್ತರನ್ನು ಕಾಣುವಂತೆ ಕಾಣುತ್ತಿದ್ದೀರಿ. ಇವರಿಗೆ ಒಬ್ಬ ಗುಮಾಸ್ತನಿಗಿರುವಷ್ಟು ಕೂಡ ಸ್ವಾತಂತ್ರ್ಯವಿಲ್ಲ. ಹಿಂದೆಯೂ ಹಾಗೇ ನಡೆಯುತ್ತಿತ್ತು. ಇಂದೂ ಹಾಗೇ ನಡೆಯುತ್ತಿದೆ. ಹಿಂದೆ ಯಾವ ರೀತಿ ಈ ಬೋಧಕರನ್ನು ಬಂದೀಖಾನೆಗೆ ಹಾಕಿದ್ದವರಂತೆ ಕಾಣುತ್ತಿದ್ದರೋ ಈಗಲೂ ಅದೇ ರೀತಿ ಕಾಣುವುದಾದರೆ ಮುಂದೆ ನಮಗೆ ಯಾವ ವಿಧದಲ್ಲೂ ಕ್ಷೇಮವಿರುವುದಿಲ್ಲ. ಬೆನಾರಸ್ ಯೂನಿವರ್ಸಿಟಿ, ಉಸ್ಮಾನಿಯಾ ಯೂನಿವರ್ಸಿಟಿ ಮತ್ತು ಧಾರವಾಡ ಇತ್ಯಾದಿ ಅನೇಕ ಕಡೆಗಳಲ್ಲಿ ಯೂನಿವರ್ಸಿಟಿಗಳಿವೆ. ಅಲ್ಲೆಲ್ಲ ಆ ಅಧ್ಯಾಪಕರಿಗೆ, ಉಪಾಧ್ಯಾಯರುಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಅವಕಾಶವಿದೆ. ಹಾಗೆ ಮಾಡುವುದರಿಂದ ದೇಶಕ್ಕೇನೂ ಗಂಡಂತರ ಆಗಲಾರದು. ಈ ವಿದ್ಯಾಭ್ಯಾಸದ ಫಲ ಸಂಪೂರ್ಣಾವಾಗಿ ದೊರೆಯಬೇಕಾಗಿದ್ದರೆ ಅದರಲ್ಲಿ ಯಾವ ರೀತಿ ಶಿಕ್ಷಣ ನಡೆಯಬೇಕೋ ಆ ರೀತಿ ಅದು ನಡೆಯಬೇಕು. ಇದೆಲ್ಲ ನಮ್ಮ ಆರ್ಥಿಕ ದೃಢತೆಯ ಮೇಲೆ ನಿಂತಿದೆ. ನಮ್ಮ ಹಣಕಾಸಿನ ಪರಿಸ್ಥಿತಿ ಎಷ್ಟರಮಟ್ಟಿಗೆ ಉತ್ತಮಗೊಂಡರೆ ನಾವು ಈ ವಿಚಾರದಲ್ಲಿ ಮುಂದುವರಿಯಬಹುದು. ಈ ವಿಶ್ವವಿದ್ಯಾನಿಯಗಳು ನಿತ್ಯ ಜೀವನಕ್ಕಾಗಿ ವಿದ್ಯಾರ್ಥಿಗಳನ್ನು ತಯಾರಿಸುವಂತೆ ಆಗಬಾರದು . ಈ ಆಡಳಿತದಲ್ಲಿ ಚುನಾಯಿತರಾಗಿ ಬರತಕ್ಕವರಿಗೆ ಹೆಚ್ಚಿನ ಅಧಿಕಾರ ಕೊಟ್ಟು ಸರಕಾರ ತನ್ನ ಕೈವಾಡವನ್ನು ಅದಷ್ಟು ಈ ವಿಚಾರದಲ್ಲಿ ಕಮ್ಮಿ ಮಾಡುವುದು ಅಗತ್ಯ. ನಿಜವಾದ ಸ್ಫೂರ್ತಿಯಿಂದ, ಉತ್ಸಾಹದಿಂದ ಪಾಠ ಮಾಡತಕ್ಕದ್ದು ಮಾಯವಾಗಿ ಹೋಗಿದೆ. ಇದರಿಂದ ಇಂದಿನ ವಿದ್ಯಾವಂತರ ಮಟ್ಟ ಕೂಡ ಕಡಿಮೆಯಾಗುವುದಕ್ಕೆ ಅವಕಾಶವಾಗಿದೆ. ಬಿ. ಎ ಮತ್ತು ಎಂ. ಎ ಪದವಿಗಳನ್ನು ಪಡೆದರೆ ಇಂತಿಷ್ಟು ದರ್ಜೆಯ ಕೆಲಸ ದೊರೆಯುತ್ತದೆ ಎನ್ನುವ ಮನೋಭಾವ ಈ ವಿಶ್ವವಿದ್ಯಾನಿಲಯದ ಶಿಕ್ಷಣದಲ್ಲಿ ಇರಬಾರದು. ವಿದ್ಯಾವಂತರಿಗೆ ಹೆಚ್ಚಿನ ಗೌರವ ದೊರೆಯುಂತ್ತಾರಬೇಕು. ಎಲ್ಲರಲ್ಲೂ ತಮ್ಮ ಜೀವನಕ್ಕೆ ಒಂದು ಅವಕಾಶ ದೊರಕಲಿಲ್ಲ ಎಂಬ ಕಡು ನಿರಾಶೆ ಕವಿದಿದೆ. ಈ ಭಾವನೆಯು ತೊಲಗಿ ಜ್ಞಾನಾರ್ಜನೆ ಮಾಡಿರತಕ್ಕವರ ದೃಷ್ಟಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕಡೆಗೆ ಓಡಬೇಕಾಗಿದೆ. ಆದರೆ, ಅನೇಕರು ಅನಿವಾರ್ಯದಿಂದ ತಮ್ಮ ಜೀವನೋಪಾಯವನ್ನು ಹಾಗೂ ಹೀಗೂ ಮಾಡಿ ನಡೆಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ವಿದ್ಯಾಭ್ಯಾಸ ಮಾಡುವುದಕ್ಕೆ ಬರುತ್ತಿದ್ದಾರೆ. ತಾವು ಮುಂದುವರಿದರೆ ಸಾಕೆಂಬ ಅಭಿಪ್ರಾಯ ಅವರಿಗಿರುತ್ತದೆ. ವಿಶ್ವವಿದ್ಯಾನಿಲಯದಿಂದ ಹೊರಗೆ ಬಂದವರ ದೃಷ್ಟಿ ಹೀಗಿರಬಾರದು. ಸಂಪತ್ತು ಇರತಕ್ಕವರು ಅವರ ಸಂಪತ್ತನ್ನು ಇಲ್ಲದವರಿಗೆ ದಾನಮಾಡಬೇಕು. ಅದೇ ರೀತಿ ವಿದ್ಯಾವಂತರಾಗಿರತಕ್ಕವರು ವಿದ್ಯೆ ಇಲ್ಲದವರಿಗೆ ತಮ್ಮ ವಿದ್ಯೆಯನ್ನು ದಾನ ಮಾಡಬೇಕು. . . . ವಿಶ್ವವಿದ್ಯಾನಿಲಯವನ್ನು ನೋಡುವ ದೃಷ್ಟಿಕೋನ ಬದಲಾವಣೆಯಾಗುವುದು ಅಗತ್ಯವಾಗಿದೆ. ಆ ಹೊರತು ನಮಗೆ ಸ್ಫೂರ್ತಿ ಬರುವುದಿಲ್ಲ ಮತ್ತು ಸ್ವತಂತ್ರವಾಗಿ ವಿಚಾರ ಮಾಡುವ ಶಕ್ತಿ ಕೂಡ ಬರುವುದಿಲ್ಲ.

ಕೋಲಾರದ ಚಿನ್ನದ ಗಣಿ

೧೭ ಆಕ್ಟೋಬರ್ ೧೯೫೫

ಮುಖ್ಯವಾಗಿ ನಾನು ಈ ನಿರ್ಣಯವನ್ನು ಸೂಚಿಸಿರುವಂತೆ, ಈ ಒಂದು ಮುಖ್ಯ ಕೈಗಾರಿಕೆಯನ್ನು ಸರ್ಕಾರ ತಾನು ಒಪ್ಪಿಕೊಂಡಿರುವ ಮಾದರಿಯ ಸಮಾಜವನ್ನು ಸ್ಥಾಪಿಸುವುದಕ್ಕೆ ಮೊದಲನೆಯ ಪ್ರಯತ್ನವಾಗಿ ಅಥವಾ ಹೆಜ್ಜೆಯಾಗಿ ರಾಷ್ಟ್ರೀಕರಣ ಮಾಡಬೇಕೆಂದು ನಾನು ಕೇಳಿಕೊಂಡಿದ್ದೇನೆ. ಚಿನ್ನದ ಗಣಿಗಳಿಗೆ ಸಂಬಂಧಪಟ್ಟದ್ದು ಈ ನಿರ್ಣಯ. ಚಿನ್ನ ನಮ್ಮ ಆರ್ಥಿಕ ಸ್ಥಿತಿಗೆ ಅಮೂಲ್ಯವಾದ ಆಧಾರ. ಇದರ ಮೇಲೆ ನಮ್ಮ ಅರ್ಥಿಕ ಸುಭದ್ರೆತೆ ನಿಂತಿದೆ. ಇದರಿಂದ ನಾವು ಒಂದು ದೇಶದ ಆರ್ಥಿಕ ಸುಭದ್ರತೆಯನ್ನು ಅಳೆಯುತ್ತೇವೆ ಎಂಬುದನ್ನು ನಾನು ಒತ್ತಿ ಹೇಳಬೇಕಾದುದಿಲ್ಲ. ಕಾರಣಾಂತರಗಳಿಂದ, ಐತಿಹಾಸಿಕ ಕಾರಣಗಳಿಂದ ಇಂದು ಕೋಲಾರದ ಚಿನ್ನದ ಗಣಿ ಜಾನ್ ಟೇಲರ್ ಕಂಪನಿಯ ವಶದಲ್ಲಿದೆ. ಇದು ಒಂದು ಬ್ರಿಟಿಷ್ ಕಂಪನಿಯಾಗಿದೆ. ಮೂಲ ಕೈಗಾರಿಕೆಯನ್ನು ಸುಮಾರು ಮೂರು ಶತಮಾನಗಳಿಂದ ಕಂಪೆನಿಯವರು ಶೋಷಣೆ ಮಾಡಿಕೊಂಡು ಬಂದಿದ್ದಾರೆ. ಮತ್ತು ಅವರು ಉದ್ಯಮದಲ್ಲಿ ತೊಡಗಿದ್ದಾರೆ. ಮೂಲ ಬಂಡವಾಳದ ಸುಮಾರು ೨೫ರಷ್ಟು ಲಾಭವನ್ನು ಕೂಡ ಪಡೆದುಕೊಂಡು ಬಂದಿದ್ದಾರೆ. ಈ ಕೈಗಾರಿಕೆಯಿಂದ ಮೈಸೂರು ಸರ್ಕಾರಕ್ಕೆ ಸ್ವಲ್ಪ ಮಟ್ಟಿಗೆ, ‘ರಾಯಲ್ಟಿ’ ರೂಪದಲ್ಲಿ ಮತ್ತು ಇತರ ರೂಪಗಳಲ್ಲಿ ಹಣ ಬರುತ್ತಿತ್ತು. ಈಚೆಗೆ ಕಳೆದ ಎರಡು ಮೂರು ವರ್ಷಗಳಿಂದ ಬರುತ್ತಿದ್ದ ಹಣ ಕಡಿಮೆಯಾಗುತ್ತಾ ಬಂದಿರುವುದನ್ನು ನಾವು ಹಿಂದೆ ಇದಕ್ಕೆ ಸಂಬಂಧಪಟ್ಟ ವರದಿಯನ್ನು ಚರ್ಚೆ ಮಾಡುವಾಗ ಕೂಲಂಕಷವಾಗಿ ವಿಮರ್ಶೆ ಮಾಡಿದ್ದೇವೆ. ಇದಕ್ಕೆ ಕಂಪನಿಯವರು ನಾನಾ ಕಾರಣಗಳನ್ನು ದೇಶದ ಮುಂದೆ, ಸರ್ಕಾರ ಮುಂದೆ ಇಟ್ಟಿದ್ದಾರೆ. ಇದರಲ್ಲಿ ಮುಖ್ಯವಾಗಿ ನಾವು ಪರಿಶೀಲನೆಗೆ ಅಥವಾ ಗಣನೆಗೆ ತೆಗೆದುಕೊಳ್ಳಬೇಕಾದ ಕೆಲವು ಮೂಲಭೂತ ಅಂಶಗಳಿವೆ. ಮೊದಲನೆಯದಾಗಿ, ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆದಿದೆ. ಪರದೇಶದ ಬಂಡವಾಳದಿಂದ ಪಡೆದುಕೊಂಡು ಹೋಗತಕ್ಕ ಕೈಗಾರಿಕೆಗಳ ಬಗ್ಗೆ ನಾವು ಒಂದು ನಿರ್ದಿಷ್ಟವಾದ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ. ಇದು ಬಹುಮುಖ್ಯವಾದ ಚಿನ್ನದ ಕೈಗಾರಿಕೆಯಾಗಿದೆ. ಅಲ್ಲದೆ ಇದು ಪರದೇಶದ ಕಂಪನಿಯಾಗಿದ್ದರೂ ಕೂಡ ತಾನು ಸರ್ಕಾರದೊಡನೆ ಯಾವ ಒಂದು ಒಪ್ಪಂದವನ್ನು ಮಾಡಿಕೊಂಡಿತ್ತೋ ಅದನ್ನು ಪರಿಪಾಲನೆ ಮಾಡದೇ ಹೋಯಿತು. ಹಿಂದೆಯೇ ಮುಖ್ಯಮಂತ್ರಿಗಳು ಹೇಳಿರುವ ಹಾಗೆ, ಆ ಕಂಪನಿ ಅದನ್ನು ಮರೆಯಿತು, ಆಚರಣೆಗೆ ತರಲಿಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಇಂಥಾ ಪರಿಸ್ಥಿತಿಯಲ್ಲಿ ಈ ಕಂಪನಿಯವರು ಮಂದುವರಿಸಿಕೊಂಡು ಹೋಗುವುದು ಯಾವ ರೀತಿಯಲ್ಲಿ ಲಾಭದಾಯಕವಲ್ಲ, ಸೂಕ್ತವಲ್ಲ, ದೇಶಕ್ಕೆ ಹಿತಕಾರಿ ಅಲ್ಲವೆಂಬುದನ್ನು ಮನಗಂಡಿದ್ದೇವೆ. ಈ ದಿನ ಈ ಗಣಿಗಳಿಗೆ ಸಂಬಂಧಪಟ್ಟ ವಿಷಯ, ಕೇಂದ್ರಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಕೇಂದ್ರದವರೂ ಕೂಡ ಈ ನಿಲುವನ್ನು, ನಿರ್ಧಾರವನ್ನು ಒಪ್ಪುತ್ತಾರೆಂಬ ಭರವಸೆ ನಮಗಿದೆ.

ಕರ್ನಾಟಕ ಏಕೀಕರಣ

೧೯ ನವೆಂಬರ್ ೧೯೫೫

(ಪ್ರಾಂತ್ಯ ಪುನರ್ವಿಂಗಡಣಾ – ಫಜಲಾಲಿ ಸಮಿತಿಯ ವರದಿಯ ಮೇಲಿ ಚರ್ಚೆ)

ಸ್ವಾಮಿ, ಭಾಷೆಯು ಒಂದು ಪ್ರಾಂತ್ಯದ ಅಥವಾ ರಾಷ್ಟ್ರದ ಏಳಿಗೆಗೆ ಮತ್ತು ಒಂದು ಜನತೆಯ ಅಭಿವೃದ್ಧಿಗೆ ಬಹು ಮುಖ್ಯವೆಂಬುದನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪಿದ್ದಾರೆ. ಮಹಾತ್ಮಾ ಗಾಂಧಿಯವರ ಹೆಸರನ್ನೇ ಅನೇಕರು ಅನೇಕ ಸಲ ಬಳಸಿದರು. ಆದರೆ, ಮಹಾತ್ಮಾ ಗಾಂಧಿಯವರು ಕೂಡ ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳ ರಚನೆಯಾಗಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆಂಬುದನ್ನು ಅವರಗ ಮನಕ್ಕೆ ನಾನು ತರುತ್ತೇನೆ. ಅಲ್ಲದೆ ಒಂದು ರಾಷ್ಟ್ರವಾಗಬೇಕಾದರೂ ಕೂಡ ಭಾಷಗೆ ಬಹಳವಾದ ಪ್ರಾಧಾನ್ಯತೆ ಇರಲೇಬೇಕು.

ಭಾಷೆಯ ವಿಷಯದಲ್ಲಿ ಇತ್ತೀಚೆಗೆ ಅಂದರೆ, ೧೯೪೭ನೆಯ ಇಸವಿಯ ಈಚೆಗೆ ಭಾಷಾವಾರು ಭಾವನೆ ರಾಷ್ಟ್ರೀಯ ಭಾವನೆಯನ್ನು ಕುಂಠಿತ ಗೊಳಿಸುತ್ತದೆ ಎಂಬ ಅಭಿಪ್ರಾಯ ಬಂದಿತು. ಅದಕ್ಕಾಗಿ ಕೈಬಿಟ್ಟಿದ್ದೇವೆ ಎಂದು ಶ್ರೀ ರಾಮಚಂದ್ರರಾಯರು ವಾದ ಮಾಡಿದರು. ಆ ವಾದ ಅಷ್ಟು ಸಮಂಜಸವಾದುದಲ್ಲ. ಏಕೆಂದರೆ ಭಾಷೆ ಆಡಳಿತದಲ್ಲಿ, ವಿದ್ಯೆಗೆ ಸಂಬಂಧಪಟ್ಟ ಹಾಗೆ ಜನಜೀವನದಲ್ಲಿ ನಿತ್ಯವೂ ಜೀವಂತವಾಗಿರುವ ವಸ್ತು. ಊಟಕ್ಕೆ ಹೇಗೆ ನಾಲಗೆ ಜೀವಂತವಾದ ಅಂಶವೋ ಹಾಗೆ ನಾಡಿಗೆ ತಾಯ್ನುಡಿ ಎನ್ನುವುದು ಅಷ್ಟೇ ಜೀವಂತವಾದ ಅಂಶ.

ಆಮೇಲೆ, ಶ್ರೀ ರಾಮಚಂದ್ರರಾಯರು ತಾವು ಇತಿಹಾಸದ ವಿದ್ಯಾರ್ಥಿ ಎಂದುಕೊಂಡರು. ಆದರೆ ನನಗಾದರೂ ಗೊತ್ತಾಗಲಿಲ್ಲ. ಅವರು ಚರಿತ್ರೆಯನ್ನು ಓದಿ ಕೂಡ ಏನು ಸಾರ್ಥಕವಾಯಿತು ಎಂದು, ಕನ್ನಡ ರಾಜ್ಯ ಎಲ್ಲಿತ್ತು? ಏನು? ಎಂದು ಅವರು ಕೇಳಿದರು. ಅವರು ಹಾಸನ ಜಿಲ್ಲೆಯಿಂದಲೇ ಬಂದವರು. ಹಾಸನ ಜಿಲ್ಲೆಯಲ್ಲಿಯೇ ಸಾಕಷ್ಟು ಇತಿಹಾಸ ಪ್ರಸಿದ್ಧವಾದ ಪ್ರದೇಶಗಳಿವೆ. ಹಳೇಬೀಡು, ಬೇಲೂರು, ಗೊಮ್ಮಟೇಶ್ವರಸ್ವಾಮಿ – ಇವೆಲ್ಲ ಇವೆ. ಹಾಗೆಯೇ ಕನ್ನಡದ ಒಬ್ಬ ಉದ್ದಾಮ ಹೆಸರಾಂತ ಕವಿಗಳಾದ ಶ್ರೀ ಕೆ. ವಿ. ಪುಟ್ಟಪ್ಪನವರು ಹೇಳಿರುವ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಉದಾಹರಿಸುವುದು ಉತ್ತಮ. ರಾಜಕಾರಣಿಗಳ ‘ಮೆಳ್ಳಗಣ್ಣನ್ನು ನಾನು ಕಾಣೆನೆ’ ಎಂದು ಹೇಳಿದ್ದಾರೆ. ಹೀಗಿರುವಾಗ ಸಾಹಿತ್ಯ ಭಾಷೆ ಮುಂತಾದವು ಜನತೆಯಲ್ಲಿ ಹೇಗೆ ಬೆಳೆದು ಬಂತು ಎಂದು ಕಾಣುವುದಿಲ್ಲ ಎಂದು ಹೇಳಿದರೆ ರಾಜಕಾರಣಿಗಳ ದೃಷ್ಟಿ ಯಾವ ರೀತಿ ಇದೆ ಎಂದು ಗೊತ್ತಾಗುತ್ತದೆ. ಆದ್ದರಿಂದ ಭಾಷೆಯ ವಿಷಯದಲ್ಲಿ ಅದೊಂದು ‘ಪ್ರೇತ’ ಎಂಬ ಭಾವನೆಯನ್ನು ಶ್ರೀ ರಾಮಚಂದ್ರರಾಯರು ವ್ಯಕ್ತಪಡಿಸಿದ್ದು ಬಹಳ ವಿಷಾದವಾದದ್ದು. ಈ ವಿಷಯದಲ್ಲಿ ಈ ಸಮಿತಿಯಲ್ಲಿ ಪ್ರಸ್ತಾಪ ಮಾಡಿರತಕ್ಕ ಪ್ಯಾರಾಗಳನ್ನು ಕೂಲಂಕುಷವಾಗಿ ಯೋಚನೆ ಮಾಡುವುದು ಒಳ್ಳೆಯದು. ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ೧೧೮ನೆಯ ಪ್ಯಾರಾದಿಂದ ಹಿಡಿದು ೧೬೪ನೆಯ ಪ್ಯಾರಾಗಳವರೆಗೂ ವಿವರಿಸಿದ್ದಾರೆ. ಮೊದಲೆನೇ ಭಾಷೆಯ ವಿಚಾರದಲ್ಲಿ ಸ್ಪಲ್ಪಮಟ್ಟಿಗೆ Qualified ಆಗಿ ಹೇಳಿದ್ದರೂ, ಮುಂದಕ್ಕೆ ಕಾಂಗ್ರೆಸ್ ಆ ತತ್ವವನ್ನು ಒಪ್ಪಿಕೊಂಡದ್ದನ್ನು ತಿಳಿಸಿದ್ದಾರೆ. ಅದೇ ಆಧಾರದ ಮೇಲೆ ಅಂಧ್ರ ಪ್ರಾಂತ್ಯ ರಚನೆಯಾಯಿತು. ಆಗಲೇ ಕರ್ನಾಟಕ ಪ್ರಾಂತ್ಯ ರಚನೆ ಅಗಬೇಕಿತ್ತು. ಆದರೆ ಕೆಲವು ಕಾರಣಗಳಿಗಾಗಿ ಬದಿಗೊತ್ತಿತೆಂದು ಹೇಳಿದೆ. ಇದನ್ನು ನೋಡಿದರೆ ಜನರ ಆಶೋತ್ತರಗಳನ್ನು ಈಡೇರಿಸುವುದರಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟರ ಮಟ್ಟಿಗೆ ಹಿಂದೆ ಬಿದ್ದಿದೆ ಎಂದುಗೊತ್ತಾಗುತ್ತದೆ.

ಈ ಪ್ರಕಾರ ಭಾಷೆಯನ್ನು ಪ್ರಾಧ್ಯಾನ್ಯವಾಗಿ ಇಟ್ಟುಕೊಳ್ಳಬೇಕೆಂದೂ ಭಾಷಾವಾರು ಮೋಹದ ಅತಿರೇಕಕ್ಕೆ ಹೋಗ ಕೂಡದೆಂಬುದನ್ನು ಎಲ್ಲರೂ ಹೇಳಿದ್ದಾರೆ. ಭಾಷೆಯ ವಿಷ್ಯಯವೇ ಅಲ್ಲ, ಯಾವುದೇ ವ್ಯಾಮೋಹದ ಅತಿರೇಕಕ್ಕೆ ಹೋದರೂ ತಪ್ಪಾಗುತ್ತದೆ. ದೇಶಾಭಿಮಾನವೇನೋ ಇರಬೇಕು. ಆದರೆ ದೇಶಾಭಿಮಾನ ಹೆಚ್ಚಾದರೆ ಅದು ದುರಭಿಮಾನವಾಗುತ್ತದೆ. ಯಾವ ಭಾವನೆಯೂ ಆತಿರೇಕಕ್ಕೆ ಹೋದರೂ ತಪ್ಪು, ಉದ್ಯೋಗ; ವ್ಯವಹಾರ; ಆಹಾರ ಎಲ್ಲಕ್ಕೂ ಇದು ಅನ್ವಯಿಸುತ್ತದೆ. ಭಾಷೆಗೆ ಮಾತ್ರ ಅನ್ವಯಿಸುವುದಿಲ್ಲ.

ಅಂತೂ, ಭಾಷೆಯ ಜನರ ಜೀವನಾಡಿ: ಅದನ್ನು ಭೂತ, ಪ್ರೇತ ಎಂದು ಹೇಳಿದರೆ, ಮನುಷ್ಯರೂ ಭೂತ ಪ್ರೇತಗಳೇ. ಭಾಷೆಯು ಐಕತ್ಯೆಯನ್ನು ಹೆಚ್ಚಿಸುತ್ತದೆಯೇ ಅಥವಾ ಪ್ರತ್ಯೇಕತೆಯನ್ನು ಹೆಚ್ಚಿಸುತ್ತದೆಯೇ? ದೇಶದ ಭದ್ರತೆ, ಐಕ್ಯತೆ ನಿಂತಿರುವುದು ಭಾಷೆಯ ಅಧಾರದ ಮೇಲೆ, ಭಾಷೆಯಲ್ಲಿ ಹೆಚ್ಚಿನ ಐಕ್ಯತೆಯನ್ನು ಕಾಣುತ್ತೇವೆ. ವಾಸ್ತವಾಗಿ ಈಗೀರತಕ್ಕ ಎಲ್ಲಾ ಪ್ರಾಂತ್ಯಗಳ ಭಾಷೆಯ ಅಧಾರದ ಮೇಲೆ ಕಟ್ಟಲ್ಪಟ್ಟವೆಯೆಂದು ಕಾಣಬಹುದು. ಆದ್ದರಿಂದ ಭಾಷೆಯ ವಿಷಯದಲ್ಲಿ ಶ್ರೀ ರಾಮಚಂದ್ರರಾಯರು ತಳೆದಿರತಕ್ಕ ಮನೋಭಾವ ತಪ್ಪೆಂದು ಮಾತ್ರ ಹೇಳಿ ನಾನು ಮುಂದುವರಿಸುತ್ತೇನೆ.

ಆಮೇಲೆ, ಅವರು ಸಣ್ಣ ಸಂಸ್ಥಾನಗಳಿರಬೇಕೆಂದು ಹೇಳಿ ಮೈಸೂರು ರಾಜ್ಯವನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ತಮ್ಮದೇ ಒಂದು ವಾದವನ್ನು ಮುಂದಿಟ್ಟರು. ಅಮೇರಿಕದ ಉದಾಹರಣೆಯನ್ನು ನಾನು ಕೊಡಲಿಚ್ಛಿಸುವುದಿಲ್ಲ. ಅದು Authoritative Dictatorship ಇರುವಂಥ ದೇಶವೆಂದು ಹೇಳಿಬಿಡಬಹುದು. ಆದರೂ ಆಸ್ಟೇಲಿಯಾ, ಮುಂತಾದ ಉದಾಹರಣೆಗಳನ್ನೂ ಕೊಟ್ಟರಲ್ಲಾ. ಆ ಸಂಬಂಧದಲ್ಲಿ ಅಲ್ಲಿನ ಜನಸಂಖ್ಯೆ ಎಷ್ಟಿದೆ, ಅವರಿಗಿರತಕ್ಕ ಹಣದ ಸೌಲಭ್ಯವೆಷ್ಟು ಎಂಬುದನ್ನು ಪ್ರಸ್ತಾಪಿಸಲಿಲ್ಲ. ಕೇವಲ ಮೈಸೂರಿನ ದೃಷ್ಟಿಯಿಂದ ಸಾಮಾನ್ಯ ನೀತಿ-ತತ್ವಗಳನ್ನು ಉಲ್ಲಂಘನೆ ಮಾಡಿ ಹೇಳುವುದು ಸರಿಯಲ್ಲ. ಅಲ್ಲಿ ೧೬ ಕೋಟಿ ಜನಸಂಖ್ಯೆ ಇದ್ದು ೫೦ ಪ್ರಾಂತ್ಯಗಳನ್ನು ೩೦-೩೦ ಲಕ್ಷಕ್ಕೆ ಒಂದರಂತೆ ಮಾಡಿದ್ದಾರೆಂದು, ಇಲ್ಲಿಯೂ ೩೬ ಕೋಟಿ ಜನರಿರುವಲ್ಲಿ ಅದೇ ರೀತಿ ೩೦ ಲಕ್ಷಕ್ಕೊಂದು ಮಾಡಬೇಕೆಂದರೆ ಸುಮಾರು ಎಷ್ಟು ಪ್ರಾಂತ್ಯಗಳನ್ನು ಮಾಡಬೇಕಾದೀತು ಎಷ್ಟು ಸೆಕ್ರೆಟರಿಯೇಟರುಗಳನ್ನು ಸ್ಥಾಪನೆ ಮಾಡಬೇಕಾದೀತು. ಎಷ್ಟು ಲೆಜಿರ್ಸ್ಟೇಚರುಗಳಾಗಲೇ ಬೇಕಾದಿತು. ಅವುಗಳ ಭವಿಷ್ಯವೇನು-ಇವುಗಳನ್ನೇಕೆ ಶ್ರೀ ರಾಮಚಂದ್ರರಾಯರು ಯೋಚನೆ ಮಾಡಲಿಲ್ಲವೋ ಕಾಣೆ? ಈ ಹೊತ್ತು ಈ ವರದಿಯಲ್ಲಿಯೂ ಕೂಡ . ಇಂಡಿಯಾ ದೇಶದ ಸ್ವಾತಂತ್ರ್ಯದ ಭದ್ರತೆಗೆ ದೊಡ್ಡ ದೊಡ್ಡ ಪ್ರಾಂತ್ಯಗಳೇ ಇರಬೇಕೆಂಬ ಅಂಶವನ್ನೇ ಕಾಣಿಸಿದ್ದಾರೆ. ಪ್ರಾಂತ್ಯಗಳು ಸಣ್ಣವಾಗಿರುವುದರಿಂದ ಅವುಗಳು ಯಾವ ದೊಡ್ಡ ಯೋಜನೆಗಳನ್ನು ಕಾರ್ಯಗತ ಮಾಡುವುದಕ್ಕೆ ಆಗುವುದಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಕ್ಕ ಮಟ್ಟಿಗೆ ದೊಡ್ಡದಾದ ಆಡಳಿತ ‘ಯೂನಿಟ್’ ಪ್ರದೇಶಗಳಿರಬೇಕೆಂಬ ವಾದವನ್ನು ಈಗ ಗಮನಿಸೋಣ. ಈ ವಾದವನ್ನು ಮಂಡಿಸುವವರು ಸಣ್ಣ ರಾಜ್ಯಗಳಿರಬೇಕು ಎನ್ನುವವರ ವಾದವನ್ನು ಎದುರಿಸುವುದಕ್ಕಾಗಿಯೂ ಮತ್ತು ಇತರ ಕೆಲವು ಪ್ರತ್ಯೇಕವಾದ ಕಾರಣಗಳಿಗಾಗಿಯೂ ತಮ್ಮ ವಾದವನ್ನು ಮಂಡಿಸುತ್ತಾರೆ, ದೊಡ್ಡ ರಾಜ್ಯವು ಸಾಮಾನ್ಯ ಹಣಾಕಾಸಿನ ದೃಷ್ಟಿಯಿಂದ ಹೆಚು ಸುಭದ್ರವಾಗಿರುತ್ತದೆ. ಅಲ್ಲದೆ, ದೇಶದ ಒಟ್ಟು ದೃಷ್ಟಿಯಿಂದ ಆಗಿಂದಾಗ್ಗೆ ರೂಪಿತವಾಗ ಬಹುದಾದ ಆರ್ಥಿಕ ಸಂಬಂಧದ ಸ್ಥೂಲವಾದ ಕಾರ್ಯನೀತಿಯನ್ನು ಅನುಸರಿಸಿಕೊಂಡು ಹೋಗಲು ಹೆಚ್ಚು ಶಕ್ತಿಯುಳ್ಳದ್ದಾಗಿರುತ್ತದೆ.

ದೊಡ್ದದಾದ ‘ಯೂನಿಟ್’ ಪ್ರದೇಶಗಳಿರಬೇಕೆನ್ನಲು ಇನ್ನೊಂದು ಕಾರಣವಿದೆ. ಅದೇನೆಂದರೆ ಆಡಳಿತಕ್ಕಾಗಿ ವೆಚ್ಚವಾಗುವ ಉತ್ಪತ್ತಿದಾಯಕವಲ್ಲದ ವೆಚ್ಚದಲ್ಲಿ ತಕ್ಕ ಮಟ್ಟಿಗೆ ಮಿಗುತಾಯವಾಗಬೇಕಾದರೆ ಇಂಥ ದೊಡ್ಡ ದೊಡ್ಡ ಯೂನಿಟ್ ಪ್ರದೇಶಗಳನ್ನು ಏರ್ಪಡಿಸುವುದರಿಂದ ಮಾತ್ರವೇ ಸಾಧ್ಯವಾಗುತ್ತದೆ. ದೇಶದ ವೆಚ್ಚದಲ್ಲಿ ಅಂಥ ಮಿಗುತಾಯಬೇಕಾಗಿರುವುದು ದೇಶದ ಪ್ರಸ್ತುತ ಸನ್ನಿವೇಶದಲ್ಲಿ ಕೇವಲ ಅವಶ್ಯಕವೆನಿಸಿದೆ.

ನ್ಯಾಯಾಲಯ ಮತ್ತ ಜನ ಭಾಷೆ

೧೯ ಮಾರ್ಚ್ ೧೯೫೬

ರಿಟ್ ವಿಚಾರದಲ್ಲಿ ಸ್ಥಾನಗಳನ್ನು ಭರ್ತಿ ಮಾಡದಿರುವುದರಿಂದ ತಡವಾಗಿದೆಯೆನ್ನುವ ಅಭಿಪ್ರಾಯವನ್ನು ಯಾರಾದರೂ ಹೇಳಿದರೆ ತಪ್ಪಾಗುವುದಿಲ. ಏಕೆಂದರೆ ಸಾಮಾನ್ಯವಾಗಿ ಒಂದು ಮೂಲಭೂತವಾದ ಹಕ್ಕಿಗೆ ತೀವ್ರವಾದ ಧಕ್ಕೆ ಬಂದಾಗ ಅಭಿಪ್ರಾಯ ಹೈಕೋರ್ಟಿಗೆ ರಿಟ್ ಹಾಕುತ್ತೇವೆ. ಅಂಥ ಸಂದರ್ಭದಲ್ಲಿ ಹೈಕೋರ್ಟು ತಡಮಾಡಿದರೆ ಆ ರಿಟ್ ಯಾವ ನ್ಯಾಯವನ್ನು ದೊರಕಿಸಿಕೊಡಲಾರದು. ಉದಾಹರಣೆ ಹೇಳಬೇಕೆಂದರೆ ಹಿಂದೆ ವಿದ್ಯಾರ್ಥಿಗಳನ್ನು ಸೆಲೆಕ್ಟ್ ಮಾಡಿದಾಗ ಯಾರೋ ಒಬ್ಬರು ಸೀಟು ಕೊಟ್ಟಿಲ್ಲ, ನನಗೆ ಅನ್ಯಾಯವಾಗಿದೆ ಎಂದು ರಿಟ್ ಹಾಕಿದರು. ಅದನ್ನು ಕಳೆದ ತಿಂಗಳಲ್ಲಿ ಫೈಸಲು ಮಾಡಿದ್ದಾರೆಂದು ಪತ್ರಿಕೆಯಲ್ಲಿ ಹಾಕಿದ್ದಾರೆ. ಇದನ್ನು ಯೋಚನೆ ಮಾಡಬೇಕು.

ಹೀಗಾದರೆ ಮೂಲಭೂತವಾದ ಹಕ್ಕಿಗೆ ಧಕ್ಕೆ ಬಂದ ಹಾಗಾಗುತ್ತದೆ. ರಿಟ್‌ವರ್ಷಗಟ್ಟಲೆ ತೀರ್ಮಾನವಾಗದಿದ್ದರೆ ಎಷ್ಟುಮಟ್ಟಿನ ನ್ಯಾಯ ದೊರಕುತ್ತದೆಂದು ಕೇಳಬೇಕಾಗಿದೆ. ಹೀಗೆ ನ್ಯಾಯ ದೊರಕಿಸುವುದರಲ್ಲಿ ಕೇಳಬೇಕಾಗಿದೆ.ತಡವಾದರೆ ಶ್ರೀ ಲಿಂಗಾರೆಡ್ಡಿಯವರು ಹೇಳಿದ ಹಾಗೆ ನ್ಯಾಯ ದೊರಕಿಸಿಲ್ಲವೆಂದು ಹೇಳಬಹುದು. ಅಪೀಲುಗಳ ವಿಚಾರವೂ ಅಷ್ಟೆ. ಅವು ಬಹು ದಿವಸಗಳವರೆಗೆ ತಡವಾಗುವುದೂ ಉಂಟು. ಕೆಲವು ಸಂದರ್ಭಗಳಲ್ಲಿ ಸಂಬಂಧಪಟ್ಟವರು ತೀರಿಹೋದ ಮೇಲೆ ಕೇಸು ಫೈಸಲಾಗುವುದೂ ಉಂಟು. ಈ ರೀತಿಯಾದರೆ ನ್ಯಾಯ ದೊರೆಯುವುದಿಲ್ಲ. ನಮ್ಮ ದೇಶದಲ್ಲಿ ಮೂಲಭೂತವಾದ ಒಂದು ತೊಡಕಿದೆ. ಈಗ ಬ್ರಿಟನ್ನಲ್ಲಿ ಏನೊಂದು ಪದ್ಧತಿಯಿದೆಯೋ ಅದನ್ನು ನಾವು ಒಪ್ಪಿದ್ದೇನೆ; ಅಲ್ಲಿರುವಂತೆಯೇ ಕಾನೂನಿದೆ ಭಾಷೆ ಬಹಳವಾಗಿ ತೊಡಕಿನದಾಗಿದೆಯೆಂದು ದಿವಸ ಯೋಚಿಸುತ್ತಿದ್ದೇವೆ. ಏಕೆಂದರೆ, ಮುಖ್ಯವಾಗಿ ಜಡ್ಜ್ಗಳಾಗಲಿ ಅಥವಾ ವಕೀಲರಾಗಲಿ ಎಲ್ಲರೂ ಕಾನೂನನ್ನು ಇಂಗ್ಲಿಷ್ಭಾಷೆಯಲ್ಲಿ ಕಲಿತವರಾಗಿರಬೇಕು ಮತ್ತು ಭಾಷೆಯನ್ನೇ ಮುಂದುವರೆಸುತ್ತಿದ್ದೇವೆ. ನಾನು ಸಾಮಾನ್ಯ ಮನುಷ್ಯನ ದೃಷ್ಟಿಯಿಂದ ಈ ಕಾನೂನನ್ನು ನೋಡಿದೆ. ನೋಡಿದಾಗ ಅನೇಕ ವೇಳೆ ಒಬ್ಬ ಮನುಷ್ಯ ಕೋರ್ಟಿನಲ್ಲಿ ಹಾಜರಿದ್ದರೂ ತನ್ನ ತಕ್ಸೀರು ವಿಷಯದಲ್ಲಿ ಏನು ಚರ್ಚೆಯಾಯಿತು, ತನ್ನ ಪರವಾಗಿ ಹೇಳಿದರೇ ಅಥವಾ ವಿರೋಧವಾಗಿ ಹೇಳಿದರೇ ಎಂದು ತಿಳಿಯದೆ ಸುಮ್ಮನಿರುತ್ತಾನೆ. ಇದೊಂದು ದೊಡ್ಡ ಅಡಚಣೆಯೆಂದು ತಿಳಿದಿದ್ದೇನೆ. ಈ ಒಂದು ಅಡಚಣೆಯನ್ನು ಬಗೆಹರಿಸುವುದಕ್ಕೆ ತೀವ್ರವಾದ ಪ್ರಯತ್ನ ನಡೆಯಬೇಕು

ಕಾಂಗ್ರೆಸ್ಸರಕಾರದಲ್ಲಿ ಸುಭಿಕ್ಷೆ

೧೬ ಮಾರ್ಚ್೧೯೫೬

ಇವೊತ್ತು ರೈತನಿಗೆ ಭೂಮಿಯನ್ನು ಹಂಚತಕ್ಕ ವ್ಯವಸ್ಥೆಯ ಯೋಜನೆಯನ್ನು ಕಾರ್ಯಗತ ಮಾಡುವುದಕ್ಕೆ ಕಾಂಗ್ರೆಸ್‌ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಎರಡನೆಯದಾಗಿ ಕಾರ್ಮಿಕರ ಜೀವನವನ್ನು ಉತ್ತಮಪಡಿಸುವುದಕ್ಕೆ ಈ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅಷ್ಟು ದೂರ ಹೋಗಬೇಕಾಗಿಲ್ಲ. ಮೈಸೂರು ಒಂದೇ ತೆಗೆದುಕೊಂಡರೆ ಅಗಸನ ಕತ್ತೆಯಂತೆ, ಅಥವಾ ತೆನಾಲಿ ರಾಮಕೃಷ್ಣನ ಕುದುರೆಯಂತೆ, ಈ ಸರ್ಕಾರಿ ಯಂತ್ರದಲ್ಲಿ ಸಿಕ್ಕಿಹಾಕಿಕೊಂಡಿರತಕ್ಕ ೧೮-೨೦ ರೂಪಾಯಿಗಳು ಪಡೆದು ನರಳುತ್ತಾ ಇರತಕ್ಕ, ಸರ್ಕಾರಿ ನೌಕರರಿಗೆ ಎಷ್ಟು ದಿವಸಗಳಿಂದ ಆಶ್ವಾಸನೆ ಕಾಂಗ್ರೆಸ್‌ಸರ್ಕಾರ್ದವರು ಕೊಟ್ಟಿದ್ದಾರೆಂಬುದನ್ನು ಎಲ್ಲರೂ ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು. ಚುನಾವಣೆಗೆಗಳಿಗೆ ಮೊದಲು ಹಿಂದಿದ್ದ ಸರ್ಕಾರದವರೂ ೫ ರೂಪಾಯಿಗಳ ಭಕ್ಷೀಸ್ ಕೊಟ್ಟಿದ್ದು ನೆನಪಿದೆ. ಈಗಿನ ಸರ್ಕಾರದವರೂ ಸಹ ಕೆಲವು ತಿಂಗಳ ಹಿಂದೆ ಒಂದು ಸಮಿತಿಯನ್ನು ರಚನೆ ಮಾಡಿ, ಒಂದು ನಾಟಕವಾಡಿ; ಇವೊತ್ತು ಬೇರೆ ಕಾರಣಗಳನ್ನು ಕೊಟ್ಟು ಅವರ ವರದಿಯನ್ನು ಕಾರ್ಯಗತ ಮಾಡುವುದಕ್ಕೆ ಸಾಧ್ಯವಿಲ್ಲವೆಂದರೆ ಅದು ಸಂಮಂಜಸವಾದ ಕಾರಣವಲ್ಲ. ನಮ್ಮ ಸಂಸ್ಥಾನ ಹಿಗ್ಗುತ್ತದೆ. ಬೇರೆ ಪ್ರಾಂತ್ಯಗಳು ಬಂದು ನಮ್ಮಲ್ಲಿ ಸೇರುತ್ತವೆ ಮತ್ತು ಕೇಂದ್ರದಿಂದ ಈ ರೀತಿ ಯಾವ ಯಾವ ಕಾರ್ಯಕ್ರಮವನ್ನೂ ಕೈಗೊಳ್ಳಕೂಡದು ಎಂದು ಬಂದಿದೆ ಎಂಬ ನೆಪವನ್ನು ಮುಂದೊಡ್ದಿ ನೌಕರರಿಗೆ ಆಗಾಧವಾದ ನಿರಾಸೆಯನ್ನು ಉಂಟುಮಾಡಿದ್ದಾರೆ. ನಿರಾಸೆ ಎಂದು ಮಾತ್ರವೆ ಹೇಳುವುದಕ್ಕಾಗುವುದಿಲ್ಲ. ಹುಣ್ಣಿನ ಮೆಲೆ ಬರೆ ಎಳೆದಂತಾಗಿದೆ ಎಂದು ಹೇಳುತ್ತೆನೆ. ಇದು ಕಾಂಗ್ರೆಸ್‌ಸರ್ಕಾರದ ನೀತಿ. ಇನ್ನು ಸುಮ್ಮನೆ ಪ್ರಜಾಪ್ರಭುತ್ವ, ಸುಭಿಕ್ಷ ಎಂದು ಹೇಳಿಕೊಂಡು ಅಷ್ಟು ಗೊಬ್ಬರ ಕೊಡುವುದು, ಅಷ್ಟು ಬೀಜಕೊಡುವುದು, ಈ ರೀತಿ ಮಾಡಿದ ಮಾತ್ರಕ್ಕೆ ಸುಭಿಕ್ಷೆ ಉಂಟಾಗಿದೆಯೇನು? ನಮ್ಮ ದೇಶದಲ್ಲಿ ಇವೊತ್ತು ಎಷ್ಟರಮಟ್ಟಿಗೆ ಸುಭಿಕ್ಷೆಯುಂಟಾಗಿದೆ ಎನ್ನುವುದಕ್ಕೆ ನೂರು ಮನೆಗಳಲ್ಲಿ ವಿಚಾರ ಮಾಡಿದರೆ ತಾವು ತಿಳಿದುಕೊಳ್ಳಬಹುದು.

ವಿಕೇಂದ್ರೀಕರಣ

ಏಪ್ರಿಲ್೧೯೫೬

ಅಧಿಕಾರ ವಿಕೇಂದ್ರೀಕರಣದ ವಿಷಯ. ಇದು ಬಹಳ ಮುಖ್ಯವಾದ ವಿಷಯ. ಆದರೆ ನಾವು ಈ ದಿವಸ ಈ ಪ್ರಾಂತ್ಯಗಳ ಪುನರ್ವಿಂಗಡಣೆಯನ್ನು ಮಾಡಬೇಕೆಂದು ಏಕೆ ಹೇಳುತ್ತಿದ್ದೇವೆಂದರೆ ಇದರಲ್ಲಿ ಒಂದು ದೊಡ್ಡ ಉದ್ದೇಶವೇನು ಅಡಗಿದೆಯೆಂದರೆ ಆಯಾ ಪ್ರದೇಶದ ಜನರು ಅವರವರ ಅನೂಕೂಲಕ್ಕೆ ತಕ್ಕ ಹಾಗೆ ಆಡಳಿತ ನಡೆಸುವುದಕ್ಕೂ ಮತ್ತು ಅವರ ಆಡಳಿತವನ್ನು ಒಂದು ಆರ್ಥಿಕ ಸುಭದ್ರತೆಯ ಮೇಲೆ ಅವರು ನಡೆಸಿಕೊಂಡು ಹೋಗುವುದಕ್ಕೂ ಅವರಿಗೆ ಅನುಕೂಲವಿರುವಂಥ ಒಂದೊಂದು ರಾಜ್ಯವನ್ನು ಏರ್ಪಾಡು ಮಾಡಬೇಕೆಂಬುದೇ ಇದರ ಮುಖ್ಯ ಉದ್ದೇಶ.

ಒಟ್ಟಿನಲ್ಲಿ ದೇಶದಲೆಲ್ಲಾ ಒಂದು ಸಮಗ್ರವಾದಂಥ ಭದ್ರತೆ-ಐಕ್ಯಮತ್ಯ ಮತ್ತು ದೇಶ ಬೆಳೆಯುವುದಕ್ಕೆ ಒಂದು ಸದವಕಾಶ ಇರುವಂತೆ ಮಾಡತಕ್ಕ ಹಾದಿಯಲ್ಲಿ ಹೆಚ್ಚು ಸಾಧಕ ಬಾಧಕಗಳು ಇಲ್ಲದ ಹಾಗೆ ರಾಜ್ಯಗಳ ನಿರ್ಮಾಣ ಮಾಡಬೇಕೆಂಬುದೇ ಸರ್ಕಾರದವರ ಮುಖ್ಯೋದ್ದೇಶ.

ಈ ಪ್ರಜಾಪ್ರಭುತ್ವ ಸಾರ್ಥಕವಾಗಬೇಕಾದರೆ, ಹೆಚ್ಚು ಹೆಚ್ಚಾಗಿ ಅಧಿಕಾರದ, ಹಣದ ಮತ್ತು ರಾಜಕೀಯಸತ್ತೆಯ ವಿಕೇಂದ್ರೀಕರಣ ಆಗಬೇಕು. ಆದರೆ ಯೋಜನೆಗಳನ್ನು ರಚನೆಮಾಡಿ ಕೈಗೊಳ್ಳುವ ಒಂದು ನೆಪದಲ್ಲಿ ಮತ್ತು ಭಾರತದ ಭದ್ರತೆಯ ನೆಪದಲ್ಲಿ ಹೆಚ್ಚು ಹೆಚ್ಚಾಗಿ ಅಧಿಕಾರಗಳು ಕೇಂದ್ರದ ಕೈ ಸೇರುತ್ತಾ ಇವೆ. ಹಣಕಾಸಿನ ವಿಷಯದಲ್ಲಿ ಮತ್ತು ರಾಜಕೀಯಸತ್ತಾತ್ಮಕ ಅಧಿಕಾರದ ವಿಚಾರದಲ್ಲಿ ಕೇಂದ್ರೀಕರಣ ಹೆಚ್ಚು ಹೆಚ್ಚಾಗಿ ಅಧಿಕಾರಗಳು ಕೇಂದ್ರದ ಕೈ ಸೇರುತ್ತಾ ಇವೆ. ಅದು ದಿನ ದಿನಕ್ಕೆ ಹೆಚ್ಚುತ್ತಾ ಇದೆ. ಇಂಥ ಒಂದು ಮನೋಭಾವ ಅಥವಾ ಇಂಥ ಒಂದು ಕಾರ್ಯಕ್ರಮಗಳು ದೇಶದ ಶಕ್ತಿಯನ್ನು ಕುಂದು ಮಾಡುವುದಲ್ಲದೆ ಪ್ರಜಾಪ್ರಭುತ್ವವನ್ನೇ ಅಲ್ಲಗಳೆಯತಕ್ಕ ಕಾರ್ಯಗಳಾಗಿವೆ. ನಾವು ಸ್ವರಾಜ್ಯವನ್ನು, ಸರ್ವೋದಯದ ರಾಜ್ಯವನ್ನು ಮತ್ತು ಕೋ-ಆಪರೇಟಿವ್‌ ಕಾಮನ್‌ವೆಲ್ತ್‌ ಅನ್ನುವ ದೊಡ್ಡ ದೊಡ್ಡ ಉದ್ದೇಶವನ್ನು ಮತ್ತು ಸಮಾಜವಾದದ ಮಾದರಿಯ ಸಮಾಜವನ್ನು ಗುರಿಯಾಗಿಟ್ಟು ಕೊಂಡಿದ್ದೇವೆ ಎಂದು ಸಾರುತ್ತ ಇರುವ ಜನರೇ ಪ್ರತಿ ದಿವಸ ಕ್ಷಣ ಕ್ಷಣದಲ್ಲೂ ಪ್ರಜಾಪ್ರಭುತ್ವಕ್ಕೆ ಮತ್ತು ಸಾಮಾನ್ಯ ಮನುಷ್ಯನಿಗೆ ದೊರೆಯಬಹುದಾದಂಥ, ಸಾಮಾನ್ಯ ಮನುಷ್ಯ ದಿನ ನಿತ್ಯದಲ್ಲಿ ಉಪಯೋಗಿಸಿಕೊಳ್ಳಬಹುದಾದಂಥ ಅಧಿಕಾರವನ್ನು ನಾವು ಕಿತ್ತುಕೊಳ್ಳುತ್ತಾ ಇದ್ದೇವೆ. ಒಂದು ಪಂಚಾಯಿತಿಗೆ ಆಗಲಿ, ಡಿಸ್ಟ್ರಿಕ್‌ ಬೋರ್ಡ್‌‌ಗಾಗಲಿ, ಇನ್ನಾವುದೇ ಒಂದು ಸಂಸ್ಥೆಗಾಗಲಿ ನಾಮಕರಣ ಮಾಡಿರತಕ್ಕ ಒಂದು ವೈಖರಿಯನ್ನು ನೋಡಿದರೂ ಕೂಡ ಆ ಮನೋಭಾವ ಎದ್ದು ಕಾಣುತ್ತಾ ಇದೆ. ಎಲ್ಲಿ ಜನತೆ ಅಧಿಕಾರವನ್ನು ತಾವೇ ನಿರ್ವಹಿಸಬಲ್ಲರೋ, ಎಲ್ಲಿ ತಮ್ಮ ಅಭಿವೃದ್ಧಿಯನ್ನು ತಾವೇ ಸಾಧಿಸಿಕೊಳ್ಳಬಲ್ಲರೋ ಅಲ್ಲಿ ಪ್ರಾಂತೀಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೈ ಹಾಕಿ ಅದನ್ನು ತನ್ನ ಕಡೆಗೆ ಎಳೆದುಕೊಳ್ಳತಕ್ಕಂಥ ಒಂದು ಮನೋಭಾವ ಎದ್ದು ಕಾಣುತ್ತಾ ಇದೆ. ಆ ಮನೋಭಾವ ಸಂಪೂರ್ಣವಾಗಿ ಹೋಗಬೇಕು. ಜನತೆಯನ್ನು ನಂಬದೇ ಇರತಕ್ಕ ಸರ್ಕಾರಗಳು ಯಾವ ರೀತಿ ಜನತೆಗೆ ನೀತಿಯನ್ನು ಹೇಳಲು ಅರ್ಹತೆಯನ್ನು ಪಡೆಯುತ್ತವೆ ಎಂಬ ಒಂದು ದೊಡ್ಡ ಪ್ರಶ್ನೆ ಈ ಸಂದರ್ಭದಲ್ಲಿ ಉದ್ಬವಿಸುತ್ತದೆ. ಆದ್ದರಿಂದ ಹೆಚ್ಚು ಹೆಚ್ಚಾಗಿ ಗ್ರಾಮ ಪಂಚಾಯಿತಿಗಳು, ಜಿಲ್ಲಾ ಬೋರ್ಡ್‌‌ಗಳು, ಸಮಿತಿಗಳು ಮತ್ತು ಪ್ರಾಂತೀಯ ಸರ್ಕಾರಗಳು ದೃಢವಾಗಿ ಅನಂತರದಲ್ಲಿ ಕೇಂದ್ರ ಸರ್ಕಾರ ಅವುಗಳೊಡನೆ ಕೋ-ಆರ್ಡಿನೇಟ್‌ಮಾಡಿ ಈ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ಏರ್ಪಾಡು ಮಾಡಬೇಕು. ಪರದೇಶದ ಧಾಳಿಯನ್ನು ತಡೆಯುವುದಕ್ಕೆ ಡಿಫೆನ್ಸ್‌ ಇಲಾಖೆಯನ್ನೂ ಮತ್ತು ಅದೇ ರೀತಿ ಮುಖ್ಯವಾಗಿ ಬೇಕಾಗತಕ್ಕ ಕಮ್ಯೂನಿಕೇಷನ್‌ಇತ್ಯಾದಿಗಳನ್ನೂ ಕೇಂದ್ರ ಸರ್ಕಾರದವರು ಇಟ್ಟುಕೊಳ್ಳಬಹುದು. ಬೇರೆ ಎಲ್ಲ ಕೆಲಸಗಳನ್ನೂ ಹೆಚ್ಚು ಹೆಚ್ಚಾಗಿ ಪ್ರಾಂತ್ಯಗಳಿಗೆ ಕೊಡುವುದು ಬಹಳ ಸೂಕ್ತ ಮತ್ತು ಅದರಿಂದ ಹೆಚ್ಚು ಶೀಘ್ರವಾಗಿ ಆಯಾ ಪ್ರದೇಶಗಳು ಅಭಿವೃದ್ಧಿಯಾಗುವುದಕ್ಕೆ ಪ್ರಯೋಜವಾಗುತ್ತದೆ. ಆದ್ದರಿಂದ ಇದರಲ್ಲಿ ಅಡಕವಾಗಿರತಕ್ಕ ನಾಮಕರಣ ಪದ್ಧತಿಯನ್ನು ಅದು ಯಾವುದೇ ಸಭೆಗೆ ಆಗಿರಲಿ, ಸಣ್ಣ ಸಮಿತಿಗೇ ಆಗಿರಲಿ, ಅದನ್ನು ನಾವು ವಿರೋಧ ಮಾಡಬೆಕಾಗಿದೆ.

ಅದನ್ನು ಕೈಬಿಡಬೇಕು ಮತ್ತು ಹೆಚ್ಚು ಹೆಚ್ಚಾಗಿ ಪ್ರಾಂತ್ಯಗಳಿಗೆ ಆರ್ಥಿಕ ವಿಷಯದಲ್ಲಿ ಮತ್ತು ಆಡಳಿತ ವಿಷಯದಲ್ಲಿ ಅಧಿಕಾರವನ್ನು ಕೊಡುತ್ತಾ ಬರಬೇಕು. ಆಗ ಮಾತ್ರ ಈ ಆಡಳಿತ ಪರಿಪೂರ್ಣವಾಗುತ್ತದೆ ಮತ್ತು ಹೆಚ್ಚು ಹೆಚ್ಚು ಪರಿಪೋಷಿತವಾಗಿ ಬೆಳೆಯುವುದಕ್ಕೆ ಸಹಾಯಕವಾಗುತ್ತದೆ. ಜನತೆ ಆಗ ಸರ್ಕಾರದಲ್ಲಿ ಹೆಚ್ಚು ಹೆಚ್ಚು ಭರವಸೆಯನ್ನೂ ನಂಬಿಕೆಯನ್ನೂ ಇಟ್ಟು ಸಹಕರಿಸುವುದಕ್ಕೆ ಅನುಕೂಲವಾಗುತ್ತದೆ. ಅಂಥ ವಿಧಿಗಳು ಈ ಮಸೂದೆಯಲ್ಲಿ ಅಡಕವಾಗುವ ರೀತಿಯಲ್ಲಿ ಈ ಕಾನೂನನ್ನು ಮಾಡಲು ನಾವು ಪ್ರಯತ್ನ ಪಡಬೇಕಾಗಿದೆ.